”ನಾನು ರಾಜಕಾರಣಕ್ಕೆ ಬಂದು ಬರವಣಿಗೆಯ ಕತ್ತು ಹಿಚುಕುತ್ತಿದ್ದೇವೇನೋ ಎಂದು ಆಗಾಗ ಅಳುಕಾಗುತ್ತಿತ್ತು. ಒಳಗಿನ ಅದಮ್ಯ ಹಂಬಲ ಮತ್ತೆ ಮತ್ತೆ ಕಣ್ತೆರೆದು ಬರೆಸಿತು. ಕವಿತೆ, ಕತೆ, ಕಾದಂಬರಿ, ಲೇಖನಗಳು ಬಂದವು. ಚಿಕ್ಕವಳಿದ್ದಾಗ ಅರಳಿದ ಈ ವ್ಯಾಮೋಹ ಇಂದಿನವರೆಗೂ ನನ್ನೊಳಗಿದೆ. ತಾರುಣ್ಯದಲ್ಲಿ ಬೆಳೆಸಿಕೊಂಡ ಪ್ರಖರ ವೈಚಾರಿಕ ಪ್ರಜ್ಞೆ ಇಂದಿಗೂ ಅಷ್ಟೇ ತೀವ್ರವಾಗಿದೆ. ಇದರ ಜೊತೆ ನನ್ನ ಲಂಬಾಣಿ ತಾಂಡಾದ ಬದುಕು ಮಸಕಾಗಿಲ್ಲ. ಅದು ನನ್ನ ಬರವಣಿಗೆಯಲ್ಲಿ ಮೂಡಿದೆ.”
ಲೇಖಕಿ ಬಿ.ಟಿ. ಲಲಿತಾ ನಾಯಕ್ ಬದುಕು ಮತ್ತು ಬರಹದ ಕೆಲವು ಹಾಳೆಗಳು.

 

ನಾನು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ತಂಗಲಿ ತಾಂಡಾದಲ್ಲಿ ಬೆಳೆದವಳು. ತುಂಬ ಅಲಕ್ಷಿತವಾದ ಲಂಬಾಣಿ ಜನಾಂಗದಲ್ಲಿ ಕುಡಿಯೊಡೆದು ನನ್ನ ಜಗತ್ತನ್ನು ಇಡಿಯ ಕರ್ನಾಟಕಕ್ಕೆ ವಿಸ್ತರಿಸಿಕೊಂಡ ಹೆಮ್ಮೆ ನನ್ನದು. ಇಂದು ಲೇಖಕಿಯಾಗಿ, ರಾಜಕಾರಣಿಯಾಗಿ, ಸಾಮಾಜಿಕ ಕಳಕಳಿಯುಳ್ಳ ಹೋರಾಟಗಾರ್ತಿಯಾಗಿ ಗುರುತಿಸಿಕೊಳ್ಳುತ್ತಿರುವ ನಾನು ಹುಟ್ಟಿದ ಪರಿಸರದಲ್ಲಿ ಕನ್ನಡವೇ ಇರಲಿಲ್ಲವೆಂದರೆ ನಿಮಗೆ ಆಶ್ಚರ್ಯವಾಗಬಹುದು! ತಾಂಡಾ ಎಂದರೆ ತಂಡತಂಡವಾಗಿ ಬದುಕುವ ಮನೆಗಳ ಗುಂಪು ನಮ್ಮದು, ಅಂತಹದೇ ಅರವತ್ತು ಮನೆಗಳ ಗುಂಪು. ನಾಗರೀಕ ಪ್ರಜ್ಞೆ ಯಾವ ದಿಕ್ಕಿನಲ್ಲಿ ವಿಕಾಸವಾಗುತ್ತಿದೆಯೆಂಬ ಅರಿವೇ ಇಲ್ಲದೆ, ಸುತ್ತಲಿನ ಸಂಪರ್ಕದ ಕೊಂಡಿಗಳೇ ಇಲ್ಲದಂತೆ ಬದುಕುತ್ತಿದ್ದ ಸಮುದಾಯ ನಮ್ಮದು. ಅಲ್ಲಿನ ಅನೇಕರಿಗೆ ಲಂಬಾಣಿ ಭಾಷೆಯ ಹೊರತಾಗಿ ಬೇರೆ ಭಾಷೆಯೇ ಗೊತ್ತಿರಲಿಲ್ಲ. ಹೀಗಾಗಿ ಹೊರಜಗತ್ತಿನ ಪಾಲಿಗೆ ನಾವು ‘ಅನ್ಯ’ವಾಗಿದ್ದೆವು ಅನಿಸುತ್ತದೆ. ಮೊದಲು ಅಲೆಮಾರಿಗಳಾಗಿದ್ದ ನಮ್ಮವರು ಕಾಡುಮೇಡು ಅಲೆಯುತ್ತಿದ್ದರು, ವ್ಯಾಪಾರ ಮಾಡುತ್ತಿದ್ದರು, ರಾಜಸ್ಥಾನದಿಂದ ಬಂದ ನಾವು ಗುಜರಾತ್, ಮಹಾರಾಷ್ಟ್ರ, ಆಂಧ್ರ, ಕರ್ನಾಟಕ ಹೀಗೆಲ್ಲ ದಕ್ಷಿಣದಲ್ಲಿ ಹರಡಿಕೊಂಡೆವು. ಯುದ್ಧಕ್ಕೂ ನಮಗೂ ನಂಟು, ಟಿಪ್ಪುವಿನ ಕಾಲದಲ್ಲಿ ಯುದ್ಧ ಸಮಯದಲ್ಲಿ ಕರ್ನಾಟಕಕ್ಕೆ ಬಂದೆವೆಂದು ಹೇಳುತ್ತಾರೆ. ಎಂಥ ಅಭೇದ್ಯವಾದ ಕಾಡನ್ನಾದರೂ ಹೊಕ್ಕು ಸೈನಿಕರಿಗೆ ಆಹಾರ ಒದಗಿಸುವ ಛಾತಿ ನಮ್ಮದು. ನಮ್ಮ ಸಮುದಾಯದ ಸ್ತ್ರೀಯರೂ ಅಷ್ಟೇ ಗಟ್ಟಿಗಿತ್ತಿಯರು. ಮೂರು ದಿನದ ಬಾಣಂತಿ ದೊಡ್ಡಕಟ್ಟಿಗೆ ಹೊರೆ ಹೊತ್ತುತಂದು, ಅದನ್ನು ಮಾರಿ, ರಾಗಿ ಕೊಂಡು ತಂದು, ಬೀಸಿ, ಅಡುಗೆ ಮಾಡಬಲ್ಲವಳಾಗಿದ್ದಳು ಎಂದು ಹೇಳುತ್ತಾರೆ. ದುಡಿದು ತಿನ್ನುವ, ಪ್ರತಿಕೂಲ ಸ್ಥಿತಿಯಲ್ಲೂ ಬದುಕುವ ಕಲೆ ನಮಗೆ ಕರಗತ. ನನ್ನೊಳಗೂ ಅದು ಸಹಜವಾಗಿ ಬಂದಿದೆಯೆನಿಸುತ್ತದೆ.

ನಮ್ಮ ತಾಂಡಾದ ಸುತ್ತ ಮುತ್ತ ಕೊರಚರ ಹಟ್ಟಿ, ಮಾದಿಗರ ಹಟ್ಟಿ, ಬ್ರಾಹ್ಮಣರು, ಲಿಂಗಾಯಿತರು, ಮುಸ್ಲಿಮರ ಮನೆಗಳಿದ್ದವು. ನನ್ನ ಅಜ್ಜನಿಗೆ ಅಲ್ಪ-ಸ್ವಲ್ಪ ಅಕ್ಷರ ಜ್ಞಾನವೂ ಇತ್ತು. ಆತ ನಾಟಕದಲ್ಲಿ ಅಭಿನಯಿಸುತ್ತಿದ್ದ ಜೊತೆಗೆ ಆತ ಬಡಗಿ ಕೆಲಸ ಮಾಡುತ್ತಿದ್ದ. ಚಿಕ್ಕವಳಾದ ನನ್ನನ್ನು ಆತ ಹೆಗಲಮೇಲೆ ಕೂರಿಸಿಕೊಂಡು ಬಡಗಿ ಕೆಲಸಕ್ಕಾಗಿ ಊರಿನೊಳಗೆ ಹೋಗುತ್ತಿದ್ದ. ಹೀಗೆ ನನಗೆ ಊರಿನ ಎಲ್ಲ ಜಾತಿ, ಸಮುದಾಯಗಳ ಸಂಪರ್ಕವುಂಟಾಯಿತು. ಕನ್ನಡ ಜಗತ್ತಿನೊಳಗೆ ಪ್ರವೇಶ ದೊರೆಯಿತು. ನನ್ನಮ್ಮನಿಗೊಂದು ಬೆಳ್ಳಿರೂಪಾಯಿ ದೊರೆತಿದ್ದು ಇನ್ನೊಂದು ವಿಶೇಷ ಸಂದರ್ಭ. ಆ ಹಣದಲ್ಲಿ ಆಕೆ ಒಂದು ಪುಟ್ಟ ಅಂಗಡಿ ಹಾಕಿಕೊಂಡಿದ್ದಳು. ನಮ್ಮ ಮನೆ ‘ಅಂಗಡಿಮನೆ’ ಎಂದೇ ಗುರುತಾಯಿತು. ಕೊರಚ, ಕೊರಮ ಜನಾಂಗದವರಿಗೆಲ್ಲ ಈ ಅಂಗಡಿ ಮನೆಯ ಕದ ತೆರೆಯಿತು. ನಿಧಾನವಾಗಿ ಈ ಒಳ-ಹೊರ ಜಗತ್ತುಗಳು ಒಂದಾಗತೊಡಗಿದ್ದನ್ನು ಗಮನಿಸುತ್ತ ನನ್ನ ಭಾವ ಪ್ರಪಂಚ ಬೆಳೆಯುತ್ತಿತ್ತು.

ತಾಂಡಾದ ಜಗುಲಿಯಲ್ಲಿ ಮಹಾಭಾರತ: ನಮ್ಮ ಮನೆಯಲ್ಲಿ ಅದು ಹೇಗೋ ಒಂದು ಮಹಾಭಾರತದ ಪುಸ್ತಕವಿತ್ತು. ನಮ್ಮ ಸೋಗೆ ಮನೆಯ ಜಗುಲಿಯಲ್ಲಿ ಈಚಲ ಜಾಡೆ ಹಾಸಿರುತ್ತಿತ್ತು. ನಮ್ಮಮ್ಮ ರಾಗಿ ಕೊಟ್ಟು ಕೊರಚರು ಹೆಣೆದ ಆ ಚಾಪೆ ಪಡೆಯುತ್ತಿದ್ದಳು. ಅದೇ ನಮಗೊಂದು ಲಗ್ಝುರಿ. ನನ್ನಪ್ಪನೂ ಕೂಲಿ ಮಠದಲ್ಲಿ ಅಕ್ಷರ ಕಲಿತಿದ್ದ. ಅವರೆಲ್ಲ ಮಹಾಭಾರತವನ್ನು ಓದಲು ತೊಡಗಿದರೆ ಅದನ್ನು ಕೇಳಲು ತಾಂಡಾದ ಜನರೊಂದಿಗೆ ಇತರರೂ ನೆರೆದಿರುತ್ತಿದ್ದರು. ‘ಅಲ್ಲಾ ಕಣಣ್ಣಾ ಜೂಜ್ಯಾಕೆ ಆಡೋಕೆ ಹೋದಾರು? ಛೆಛೇ’ ಎಂದೆಲ್ಲ ಉದ್ಘರಿಸುತ್ತ ಕತೆಯಲ್ಲಿ ಇಡೀ ಪರಿಸರ ಕರಗುತ್ತಿತ್ತು, ಮರುಗುತ್ತಿತ್ತು. ಅಜ್ಜ ಮೂರು-ನಾಲ್ಕನೇ ಕ್ಲಾಸಿನಲ್ಲಿದ್ದ ನನ್ನನ್ನು “ಬಿಯಾ ನೀ ಓದು” ಅನ್ನೋರು. ನಾನು ಸ್ಪಷ್ಟವಾಗಿ ನಿರರ್ಗಳವಾಗಿ ಕನ್ನಡ ಓದುವೆ. ಅಲ್ಲಿ ನೆರೆದವರೆಲ್ಲ “ನಿನ್ಗಿಂತಾ ಮಗಾನೆ ಪಾಡು” ಅನ್ನೋರು. ಇದು ನನ್ನ ಕಥನ ಕುತೂಹಲವನ್ನೂ, ಆತ್ಮವಿಶ್ವಾಸವನ್ನೂ ಹೆಚ್ಚಿಸಿತು. ಇಂಥ ಕಾಲದಲ್ಲಿಯೇ ಪ್ರಜಾವಾಣಿ ಪತ್ರಿಕೆ ನನ್ನ ಕಣ್ಣಿಗೆ ಬಿತ್ತು. ರಾಜಕೀಯ ವಿಷಯಗಳನ್ನೆಲ್ಲ ಹೀಗೆ ಓದಿ ಹೇಳುತ್ತಿದ್ದೆ. ನನ್ನೊಳಗೆ ಹಾಗೆ ರಾಜಕೀಯ ಪ್ರಜ್ಞೆ ಬೆಳೆಯಿತು. ಮುಂದೆ ಮೂಗೂರಿನಲ್ಲಿ ದಫೇದಾರರಾಗಿದ್ದ ನನ್ನ ಮಾವ ಕರೆದುಕೊಂಡು ಹೋಗಿ ಓದಿಸಿದರು. ಅಲ್ಲಿ ಚಂದಮಾಮನ ಕಥೆಗಳ ದೊಡ್ಡ ಕಲ್ಪನಾಲೋಕ ತೆರೆದುಕೊಂಡಿತು. ಕತೆ ಕಟ್ಟುವುದು, ಕತೆ ಹೇಳುವುದು ನನಗೆ ಬಲು ಪ್ರಿಯವಾದ ವಿಷಯವಾಗಿತ್ತು. ನಂತರ ಹೈಸ್ಕೂಲಿಗೆ ಹಾಸ್ಟೆಲ್ ಸೇರಿದೆ. ಆದರೆ ಅಮ್ಮನಿಗೆ ಇನ್ನೊಂದು ಮಗುವಾದಾಗ ಮಗುವಾಡಿಸುವ ನೆಪಮಾಡಿ ನಾನು ಮತ್ತೆ ಹಾಸ್ಟೆಲ್ಗೆ ಹೋಗಲೇ ಇಲ್ಲ! ವಿದ್ಯಾಭ್ಯಾಸದ ಮಹತ್ವ ಆಗ ನನಗೆ ಗೊತ್ತಾಗಲೇಇಲ್ಲ. ಆದರೆ ನನ್ನಣ್ಣ ತಂದುಕೊಡುತ್ತಿದ್ದ ಕತೆ, ಕಾದಂಬರಿಗಳು, ನಾನು ತೆಗೆದುಕೊಂಡ ಹಿಂದಿ ಪರೀಕ್ಷೆಗಳು, ನನ್ನೊಳಗೆ ಹೊಸ ಅರಿವನ್ನು ತುಂಬುತ್ತಿದ್ದವು. ಹೊಲಿಗೆ ತರಬೇತಿ ಪಡೆದೆ. ಅಂಗಡಿ ನೋಡಿಕೊಳ್ಳುತ್ತಿದ್ದೆ. ಬಿಡುವಿಲ್ಲದ ಕೆಲಸದ ನಡುವೆ ತಾಂಡಾದ ಬದುಕನ್ನು ಹತ್ತಿರದಿಂದ ನೋಡುತ್ತಿದ್ದೆ, ಬಿಡುವಲ್ಲಿ ನಾಟಕಗಳನ್ನು ನೋಡುತ್ತಿದ್ದೆ. ನಾವು ಬಡವರೇ ಆದರೂ, ನನ್ನಅಜ್ಜ, ಅಪ್ಪಅಕ್ಷರ ಪ್ರಪಂಚಕ್ಕೆ ಪರಿಚಿತರಾಗಿದ್ದು ನನಗೆ ಸೀಮಿತ ವಲಯದಿಂದ ಹೊರಬರಲು ಒಂದು ಅವಕಾಶ ದೊರೆಯುವಂತೆ ಮಾಡಿತು.

ಅರಿವು ಅರಳುವ ಕಾಲ: ನನ್ನ ಮಗಳು ಕಲಿತವಳು ಎಂಬ ಹೆಮ್ಮೆ ನನ್ನ ಮನೆಯವರಿಗಿತ್ತು. ಓದಿದ ಸರ್ಕಾರಿ ನೌಕರಿಯಲ್ಲಿರುವ ವರನನ್ನೇ ಅವರು ಶೋಧಿಸಿ ತಂದರು. ಹೊಸಪೇಟೆಯಲ್ಲಿ ಪಿ.ಡಬ್ಲೂ.ಡಿ ಇಲಾಖೆಯಲ್ಲಿ ಕ್ಲರ್ಕ್ ಆಗಿದ್ದ ಮಧುಗಿರಿಯ ಚಾಮ್ಲಾ ನಾಯಕ್ ನನ್ನ ಕೈ ಹಿಡಿದರು. ಇದಕ್ಕೂ ಮೊದಲೇ ನನಗೆ ಸಂಭಾಷಣೆ ರೂಪದ ನಾಟಕಗಳನ್ನು ಬರೆದು ಬಚ್ಚಿಡುವ ಹುಚ್ಚಿತ್ತು! ನನ್ನ ಟ್ರಂಕಿನಲ್ಲಿ ಅವಿತ ಬರವಣಿಗೆ ನನ್ನವರ ಕಣ್ಣಿಗೆ ಬಿದ್ದು ಮೆಚ್ಚುಗೆ ಪಡೆಯಿತು. ಇದನ್ನು ಆಕಾಶವಾಣಿಗೆ ಕಳಿಸೋಣ ಎಂದು ಅವರು ಹೇಳಿದರು. ಹೀಗೆ ಬರೆದದ್ದನ್ನು ಕಳಿಸಬಹುದು ಎಂದು ನನಗೆ ಮೊಟ್ಟ ಮೊದಲು ಅರಿವಾದದ್ದೇ ಆಗ. ಧಾರವಾಡ ಆಕಾಶವಾಣಿಗೆ ನನ್ನ ನಾಟಕಗಳು ಆಯ್ಕೆಯಾದವು. ಚೆನ್ನಾಗಿ ಬರೀತೀರಿ, ಸಮಕಾಲೀನ ಸಮಸ್ಯೆಗಳ ಬಗ್ಗೆ ಬರೀತೀರಿ ಅಂತೆಲ್ಲ ಪ್ರೋತ್ಸಾಹ ದೊರೆಯಿತು. ತಾಂಡಾದಲ್ಲಿ ಹೆಚ್ಚು ಹೆಚ್ಚು ಮಕ್ಕಳನ್ನು ಹೆತ್ತು ಬಡತನದಲ್ಲಿ ನಲಗುವ ಬದುಕನ್ನು ನೋಡಿದ್ದೆನಲ್ಲ! ಅದನ್ನೇ ಬರೆದಿದ್ದೆ. ನಾನು ಬರೆದಿದ್ದು ‘ಫ್ಯಾಮಿಲಿ ಪ್ಲಾನಿಂಗ್’ ನಂತಹ ಅರಿವು ಮೂಡಿಸುವ ನಾಟಕ ಎಂದು ನನಗೆ ಗೊತ್ತಿರಲಿಲ್ಲ. ನಿಧಾನಕ್ಕೆಅರಿವು ಅರಳುತ್ತ ಬರವಣಿಗೆಯೂ ಕೈ ಹಿಡಿಯಿತು.

ಅಜ್ಜ ಮೂರು-ನಾಲ್ಕನೇ ಕ್ಲಾಸಿನಲ್ಲಿದ್ದ ನನ್ನನ್ನು “ಬಿಯಾ ನೀ ಓದು” ಅನ್ನೋರು. ನಾನು ಸ್ಪಷ್ಟವಾಗಿ ನಿರರ್ಗಳವಾಗಿ ಕನ್ನಡ ಓದುವೆ. ಅಲ್ಲಿ ನೆರೆದವರೆಲ್ಲ “ನಿನ್ಗಿಂತಾ ಮಗಾನೆ ಪಾಡು” ಅನ್ನೋರು. ಇದು ನನ್ನ ಕಥನ ಕುತೂಹಲವನ್ನೂ, ಆತ್ಮವಿಶ್ವಾಸವನ್ನೂ ಹೆಚ್ಚಿಸಿತು. ಇಂಥ ಕಾಲದಲ್ಲಿಯೇ ಪ್ರಜಾವಾಣಿ ಪತ್ರಿಕೆ ನನ್ನ ಕಣ್ಣಿಗೆ ಬಿತ್ತು. ರಾಜಕೀಯ ವಿಷಯಗಳನ್ನೆಲ್ಲ ಹೀಗೆ ಓದಿ ಹೇಳುತ್ತಿದ್ದೆ. ನನ್ನೊಳಗೆ ಹಾಗೆ ರಾಜಕೀಯ ಪ್ರಜ್ಞೆ ಬೆಳೆಯಿತು.

ರಾಯಚೂರಿನ ಇನ್ ಗ್ರೀಡ್ ಸಂಸ್ಥೆಗಾಗಿ ಕೆಲಸ ಮಾಡತೊಡಗಿದೆ. ಅದು ಹಳ್ಳಿಗರಿಗೆ ತಿಳುವಳಿಕೆ ಹೇಳುವ, ಮಾರ್ಗದರ್ಶನ ಮಾಡುವ ಕೆಲಸ. ನಾಲ್ಕಾಣಿ ಭಕ್ಷೀಸು ಸಿಗುತ್ತಿತ್ತು. ಈ ರೀತಿ ಸಮಾಜ ಸೇವೆಯಲ್ಲಿ ಇರುವ ಆತ್ಮತೃಪ್ತಿಯ ಅನುಭವವೊಂದು ದಕ್ಕಿತು. ಇದಕ್ಕೆ ಪತಿಯ ಬೆಂಬಲವೂ ದೊರೆಯಿತು. ಮಹಿಳಾ ಪರ ಮಾತುಗಳು, ಮಹಿಳಾ ಸ್ವಾತಂತ್ರ್ಯ, ಶೋಷಣೆ, ಪ್ರತಿಭಟನೆ ಇಂತಹ ಪರಿಭಾಷೆಗಳು ಹಾಗೂ ಅದರ ಹಿಂದಿನ ಯೋಚನಾ ಕ್ರಮಗಳು ನನ್ನನ್ನು ಪ್ರಭಾವಿಸತೊಡಗಿದವು. ನನಗರಿವಿಲ್ಲದೇ ನನ್ನೊಳಗೆ ದಿಟ್ಟ, ಧೀರ, ಜಾಗೃತ ಮನಸ್ಸಿನ ಮಹಿಳೆಯೊಬ್ಬಳು ಅರಳ ತೊಡಗಿದ್ದಳು, ಇದೇ ಸಂದರ್ಭದಲ್ಲಿ ನನ್ನ ‘ನೆಲೆ – ಬೆಲೆ’ ಕಾದಂಬರಿ ಬರೆದೆ. ಪತಿ ಒಮ್ಮೆ ಯಾಕೋ ಸಿಟ್ಟಿನಲ್ಲಿ ನೀನು ‘ಮೂರುಕಾಸಿನ ಹೆಣ್ಣು’ ಎಂದು ಬೈದರು. ಅದೇ ಹೆಸರಿನಲ್ಲಿ ಒಂದು ಲೇಖನ ಬರೆದೆ. ಪತಿ ನನ್ನ ಗೆಳೆಯರಿಗೆಲ್ಲ ಅದನ್ನು ತೋರಿಸಿ ಸಂಭ್ರಮಿಸಿದರು! ನಮ್ಮ ಜಗಳ ನಮ್ಮ ಸಂಬಂಧವನ್ನು ಜಾಳುಗೊಳಿಸುವಷ್ಟು ಎಂದೂ ಬೆಳೆಯಲಿಲ್ಲ. ನಾನು ಪತಿಯ ಬೆಂಬಲವನ್ನು ಮರೆಯಲಾರೆ.

ಲಂಬಾಣಿ ಮಹಿಳೆಯರು ಹಾಗೂ ಹಾರುವ ಇಂದಿರಾ : ಮಹಾರಾಷ್ಟ್ರದ ಪುಸದ್ ಎಂಬ ಊರಿನಲ್ಲಿ ನಮ್ಮಜನ ‘ಲಂಬಾಣಿ ಸಮಾವೇಶ’ ಏರ್ಪಡಿಸಿ ಇಂದಿರಾಗಾಂಧಿಯವರನ್ನು ಕರೆದಿದ್ದರು. ಆ ಸಮುದಾಯದ ಲೇಖಕಿಯಾದ ನನ್ನನ್ನೂ ಆಹ್ವಾನಿಸಿದ್ದರು. ಲಂಬಾಣಿ ಹೆಣ್ಣುಮಕ್ಕಳ ಕಷ್ಟಗಳನ್ನೆಲ್ಲ ವಿವರಿಸಿದ ಅರ್ಜಿಯೊಂದನ್ನು ಇಂದಿರಾ ಅವರಿಗೆ ಕೊಡಬೇಕಿತ್ತು. ‘ನೀನು ಓದಿದ್ದೀಯಲ್ಲ ಅರ್ಜಿ ನೀನೇ ಕೊಡು’ ಎಂದು ಎಲ್ಲಾ ಫುಸಲಾಯಿಸಿದರು. ನಾನು ತೆಗೆದುಕೊಂಡೇನೋ ಹೋದೆ. ಆದರೆ, ಇಂದಿರಾ ಅಷ್ಟರಲ್ಲಿ ಹೆಲಿಕ್ಯಾಪ್ಟರ್ ನಲ್ಲಿ ಹಾರಿಹೋದರು. ‘ಲಂಬಾಣಿ ಮಹಿಳೆಯರು ಹಾಗೂ ಹಾರುವ ಇಂದಿರಾ’ ಎಂಬ ಲೇಖನ ಬರೆದು ಲಂಕೇಶ್ ಪತ್ರಿಕೆಗೆ ಕಳಿಸಿದೆ. ಆ ಮೂಲಕ ಲಂಕೇಶ್ ಪತ್ರಿಕೆಯ ವರದಿಗಾರ್ತಿಯೂ, ಅಂಕಣಕಾರ್ತಿಯೂ ಆಗುವ ಅವಕಾಶ ದೊರೆಯಿತು. ಲಂಕೇಶ್ ಪತ್ರಿಕೆಗೆ ಸತತ ಆರು ವರ್ಷಗಳ ಕಾಲ ಬರೆದೆ. ಸಮುದಾಯ ಸಂಘಟನೆ, ಬಂಡಾಯ ಸಂಘಟನೆಗಳಲ್ಲಿ ಗುರುತಿಸಿಕೊಂಡೆ. ಮಕ್ಕಳು, ಮನೆಗೆಲಸ, ಜೊತೆಗೆ ಜೀವನ ನಿರ್ವಹಣೆಗಾಗಿ ಹೊಲಿಗೆ ಇವೆಲ್ಲದರ ನಡುವೆ ಛಲದಿಂದ ಬರೆದೆ. ಲೇಖಕಿಯಾಗಿ ಹೊರಹೊಮ್ಮಿದೆ. ಇದೇ ಸಮಯದಲ್ಲಿ ನಜೀರ್ ಸಾಬ್ ಹಾಗೂ ರಾಮಕೃಷ್ಣ ಹೆಗಡೆಯವರು ರಾಜಕಾರಣಕ್ಕೆ ಆಹ್ವಾನವನ್ನಿತ್ತರು ನಾನೇಕೊ ಹಿಂಜರಿದೆ. ಲಂಬಾಣಿ ಜನಾಂಗದ ಲೇಖಕಿ, ಪತ್ರಕರ್ತೆ ಎಂಬ ಕಾರಣಕ್ಕೆ ನಾನು ಎಂ.ಎಲ್.ಸಿ ಆದೆ. “ಜನರಿಗಾಗಿ ಕೆಲಸ ಮಾಡಬಹುದು” ಎಂಬ ಮಾತು ನನ್ನನ್ನು ರಾಜಕಾರಣದ ಕಣದಲ್ಲಿ ಇಳಿಸಿತು.

ಸರಿಯಾಗಿ ರಾಜಕಾರಣ ಮಾಡು ಎಂದರು ಲಂಕೇಶ್: ಲಂಕೇಶ್ ಪತ್ರಿಕೆ ನನ್ನನು ಬರೆಸಿ, ಬೆಳೆಸಿತು. ಅನ್ಯಾಯದ ವಿರುದ್ಧ ದನಿಯೆತ್ತಲು ಕಲಿಸಿತ್ತು. ರಾಜಕಾರಣಕ್ಕಿಳಿಯುವಾಗ ಲಂಕೇಶರ ಸಲಹೆ ಕೇಳಿದೆ. “ಕಳ್ರು, ತಮ್ಮ ವಿರುದ್ಧ ಬರೆಯೋರನ್ನೆಲ್ಲ ಸೆಳಕೋತಾರೆ” ಅಂತ ಗೊಣಗಿದರು. ಆಮೇಲೆ ನೀನು ಭ್ರಷ್ಟಳಾಗಬೇಡ. ಸರಿಯಾಗಿ ರಾಜಕಾರಣ ಮಾಡು ಅಂದರು! 1995ರಲ್ಲಿ ದೇವದುರ್ಗ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದೆ ಎಂ.ಎಲ್.ಸಿ ಆದಾಗ ಜನಪರ ಕೆಲಸ ಮಾಡಿ ಜನಾದರ ಗಳಿಸಿದ್ದು ನೆರವಾಯಿತು. ಐದು ವರ್ಷದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಪ್ರಾಜೆಕ್ಟ್ ಮುಗಿಸಿಕೊಡಬೇಕೆಂದು ಷರತ್ತಿನ ಮೇಲೆ ಜನ ಗೆಲ್ಲಿಸಿದರು. “ಈಕೆ ಲಲಿತಾ ನಾಯಕ್ ಅಲ್ಲ, ಶರಣಮ್ಮ ಈಕಿ ನಮಗೆ ನೀರಾವರಿ ಮಾಡಿಕೊಡ್ತಾಳೆ” ಎಂಬ ಜನರ ನಿರೀಕ್ಷೆಯನ್ನು ಸುಳ್ಳು ಮಾಡಲಿಲ್ಲ ನಾನು. ಎಂ.ಎಲ್.ಸಿ ಆದ ನನಗೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾಗುವ ಬಹುದೊಡ್ಡ ಅವಕಾಶ ದೊರೆಯಿತು. ನನ್ನ ಬುದುಕು ಕೆಲಸದ ಒತ್ತಡದಿಂದ ತುಂಬಿತು. ಆಡಳಿತದ ಭಾಷೆ, ಅಧಿಕಾರದ ನಿರ್ವಹಣೆ ಎಲ್ಲ ನನಗೆ ಹೊಸದು. ಸಾರ್ವಜನಿಕ ಜವಾಬ್ದಾರಿಯ ದೊಡ್ಡ ಅವಕಾಶ. ಅದನ್ನು ನಿಭಾಯಿಸಲು ದೊಡ್ಡ ಸಿದ್ಧತೆಯೂ ಬೇಕಾಗಿತ್ತು. ಸಲಹೆ ಕೇಳಬಹುದಿತ್ತು. ಆದರೆ ಕೊನೆಗೆ ಎಲ್ಲವನ್ನೂ ನಾನೇ ನಿಭಾಯಿಸಿ ಗೆಲ್ಲಬೇಕಿತ್ತು.

ಸ್ವಯಂ ಸಿದ್ಧಳಾಗುವ ಹೋರಾಟದ ಬದುಕು : ಹೌದು, ನನ್ನ ಒಳಗಿನ ಹೋರಾಟ ನನಗಷ್ಟೇ ಗೊತ್ತು. ರಾಜಕಾರಣದ ಪಟ್ಟುಗಳು, ತಂತ್ರಗಳು, ಮಹಿಳೆಯರಿಗೆ ಹೊಸದು. ಅದರಲ್ಲೂ ನಾನೊಂದು ಚಿಕ್ಕ ಅಲಕ್ಷಿತ ಸಮುದಾಯದಿಂದ ಬಂದು ಅರಿವು ಕಟ್ಟಿಕೊಂಡವಳು. ನಾನು ಎಂದೂ ಎದೆಗುಂದಲಿಲ್ಲ. ಸ್ವಯಂ ಸಿದ್ಧಳಾಗುವುದನ್ನು ಕಲಿತೆ, ನಿಭಾಯಿಸಲು ಕಲಿತೆ, ರಾಜಕಾರಣ ನನಗೆ ಜನಸೇವೆ ಮಾಡುವ ಸಾಧನವಾಗಿತ್ತೇ ಹೊರತು ಹಣಮಾಡುವ ಅವಕಾಶವಾಗಿರಲಿಲ್ಲ. ನನ್ನ ವಿರುದ್ಧ ಷಡ್ಯಂತ್ರಗಳು ಹೆಣೆಯಲ್ಪಟ್ಟುವು. “ಈಕೆ ದುಡ್ಡು ಮಾಡಲ್ಲ ರಾಜಕಾರಣಕ್ಕೆ ನಾಲಾಯಕ್” ಎಂದು ಭಾವಿಸಿದ ಕೆಲವರು ನನ್ನ ರಾಜಕೀಯ ಬದುಕನ್ನು ಮುಗಿಸಲು ತಂತ್ರ ರೂಪಿಸಿದರು. ಆ ಸನ್ನಿವೇಶಗಳೆಲ್ಲ ಕರ್ನಾಟಕದ ರಾಜಕೀಯ ಬಲ್ಲವರಿಗೆ ತಿಳಿದೇ ಇದೆ. ನಾನು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತಹ ಸನ್ನಿವೇಶವನ್ನು ಸೃಷ್ಟಿಸಲಾಯಿತು. ನಾನು ಮಂತ್ರಿಸ್ಥಾನಕ್ಕೆ ರಾಜಿನಾಮೆಯಿತ್ತೆ. ಇದು ಸ್ತ್ರೀಯರು ರಾಜಕೀಯಕ್ಕೆ ಬಂದಾಗ ಎದುರಿಸಬೇಕಾದ ತಲ್ಲಣಗಳ ಕತೆ. ಇರಲಿ ನಾನು ರಾಜಕಾರಣದಿಂದ ಹೊರ ನಡೆಯಲಿಲ್ಲ. ಇಷ್ಟೆಲ್ಲ ಜಂಜಾಟಗಳ ನಡುವೆಯೂ ಬರವಣಿಗೆಯ ಸೆಳೆತ ಅಳಿದಿರಲಿಲ್ಲ. ನಾನು ರಾಜಕಾರಣಕ್ಕೆ ಬಂದು ಬರವಣಿಗೆಯ ಕತ್ತು ಹಿಚುಕುತ್ತಿದ್ದೇವೇನೋ ಎಂದು ಆಗಾಗ ಅಳುಕಾಗುತ್ತಿತ್ತು. ಒಳಗಿನ ಅದಮ್ಯ ಹಂಬಲ ಮತ್ತೆ ಮತ್ತೆ ಕಣ್ತೆರೆದು ಬರೆಸಿತು. ಕವಿತೆ, ಕತೆ, ಕಾದಂಬರಿ, ಲೇಖನಗಳು ಬಂದವು. ಚಿಕ್ಕವಳಿದ್ದಾಗ ಅರಳಿದ ಈ ವ್ಯಾಮೋಹ ಇಂದಿನವರೆಗೂ ನನ್ನೊಳಗಿದೆ. ತಾರುಣ್ಯದಲ್ಲಿ ಬೆಳೆಸಿಕೊಂಡ ಪ್ರಖರ ವೈಚಾರಿಕ ಪ್ರಜ್ಞೆ ಇಂದಿಗೂ ಅಷ್ಟೇ ತೀವ್ರವಾಗಿದೆ. ಇದರ ಜೊತೆ ನನ್ನ ಲಂಬಾಣಿ ತಾಂಡಾದ ಬದುಕು ಮಸಕಾಗಿಲ್ಲ. ಅದು ನನ್ನ ಬರವಣಿಗೆಯಲ್ಲಿ ಮೂಡಿದೆ ನನ್ನ ‘ಗತಿ’ ಕಾದಂಬರಿಯಲ್ಲಿ ಲಂಬಾಣಿ ಮಹಿಳೆಯರ ಕಷ್ಟಕಾರ್ಪಣ್ಯಗಳು ಹಾಗೂ ಅದನ್ನು ದಿಟ್ಟವಾಗಿ ಎದುರಿಸಿ ಬದುಕು ಕಟ್ಟಿಕೊಳ್ಳುವ ಅವರ ಅಂತಃಶಕ್ತಿಯನ್ನು ಚಿತ್ರಿಸಿದ್ದೇನೆ. ನನ್ನ ಕವಿತೆಗಳಲ್ಲೂ ಅದು ಕಾಣುತ್ತದೆ.

ಸಮುದಾಯ ಸಂಘಟನೆ, ಬಂಡಾಯ ಸಂಘಟನೆಗಳಲ್ಲಿ ಗುರುತಿಸಿಕೊಂಡೆ. ಮಕ್ಕಳು, ಮನೆಗೆಲಸ, ಜೊತೆಗೆ ಜೀವನ ನಿರ್ವಹಣೆಗಾಗಿ ಹೊಲಿಗೆ ಇವೆಲ್ಲದರ ನಡುವೆ ಛಲದಿಂದ ಬರೆದೆ. ಲೇಖಕಿಯಾಗಿ ಹೊರಹೊಮ್ಮಿದೆ. ಇದೇ ಸಮಯದಲ್ಲಿ ನಜೀರ್ ಸಾಬ್ ಹಾಗೂ ರಾಮಕೃಷ್ಣ ಹೆಗಡೆಯವರು ರಾಜಕಾರಣಕ್ಕೆ ಆಹ್ವಾನವನ್ನಿತ್ತರು ನಾನೇಕೊ ಹಿಂಜರಿದೆ.

ನಮ್ಮ ಸಂಸ್ಕೃತಿಯ ಬಗ್ಗೆ ಕೇಳಿದ್ದೀರಿ. ನಮ್ಮದೊಂದು ವಿಶಿಷ್ಟ ಸಂಸ್ಕೃತಿ. ಮೂಲತಃ ಬೆಂಕಿ, ಮರಗಳನ್ನು ಪೂಜಿಸುತ್ತೇವೆ. ಮರದ ಬುಡದಲ್ಲಿ ತೊಳಜಾ ಮಂತ್ರಾಲ್ ಅನ್ನು ಸ್ಥಾಪಿಸಿರುತ್ತೇವೆ. ಹಸುಗಳು ಈದ ಗಿಣ್ಣವನ್ನು ಅದಕ್ಕೆ ಅರ್ಪಿಸುತ್ತೇವೆ. ಕುರಿ-ಕೋಳಿ ಬಲಿಯೂ ಇದೆ. ಅಲೆಮಾರಿತನ, ಪಶುಪಾಲನೆ ನಮ್ಮ ವೃತ್ತಿಯಾದುದರಿಂದ ಇರಬಹುದು ನಮ್ಮಲ್ಲಿ ಜಂಗಿ -ಭಂಗಿರಾಮರ ಕತೆಯಿದೆ. ಅವರು ಸಾವಿರ ದನಗಳನ್ನು ಸಾಗಿಸಿಕೊಂಡು ಬಂದರಂತೆ. ಪೂಜಾರಿಗೆ ನಮ್ಮಲ್ಲಿ ‘ಭಗತ್’ ಎನ್ನುತ್ತಾರೆ. ಅವನ ಮೇಲೆ ದೇವರು ಬರುತ್ತದೆ. ನಮ್ಮಅಜ್ಜಿಯೂ ಸರದ ಹವಳವನ್ನು ತಿರುಗಿಸಿ ಶಕುನ ಹೇಳುತ್ತಿದ್ದಳು. ಇನ್ನೂ ಸೇವಾಲಾಲ್ ಎಂಬ ಸಂತನ ಮಠ ಊರಿಗೊಂದು ಇರುತ್ತದೆ. ಬಿಳಿ ಹಸಿರು ಬಣ್ಣಗಳ ಧ್ವಜ ಅದರ ಮೇಲೆ ಹಾರುತ್ತಿರುತ್ತದೆ. ಸೇವಾಲಾಲ್ ಮಹಾರಾಷ್ಟ್ರದ ಸಂತ. ಪವಾಡ ಮಾಡಿ ದೇವರಾದವನು. ಅವನ ಜೊತೆ ಇರುವ ದೇವತೆ ಮರಿಯಮ್ಮ , ಅವಳಿಗೆ ಮಾಂಸಬಲಿ ಇದೆ.

ಸಾತ್ ಭವಾನಿ, ಸಾತ್ ಸತಿಯಾ : ನಮ್ಮಲ್ಲಿ ಸ್ತ್ರೀ ದೇವತೆಗಳ ಆರಾಧನೆ ವಿಶೇಷ. ಏಳು ಸತಿಯರನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಇವರನ್ನು ಏಳು ಭವಾನಿಯರು ಎನ್ನುತ್ತಾರೆ. ‘ ತುಳಜಾ ಭವಾನಿ’ ಪರಂಪರೆಯ ಪ್ರಭಾವ ಇದೆಯಾ? ಗೊತ್ತಿಲ್ಲ. ಇವರೆಲ್ಲ ಸತಿ ಹೋಗಿ ದೇವಿಯರಾದವರು. ಭೀಮಾ ಸತಿ ಹಾಗೂ ಆಕೆಯ ಪತಿ ತೀತಾ ರಾಜನ ಕತೆ ಹೇಳುತ್ತಾರೆ. ಗಂಡನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಆಕೆ ಚಿತೆಯೇರಿದಳಂತೆ. ಅವಳ ಪೂಜೆಯನ್ನು ಹಬ್ಬದಂತೆ ಆಚರಿಸುತ್ತಾರೆ. ಅದಕ್ಕೆ ‘ಒಳಂಗ್’ ಎನ್ನುತ್ತಾರೆ. ರಾತ್ರಿಯಿಡೀ ಅವಳು ಅನುಭವಿಸಿದ ಕಷ್ಟ-ಕಾರ್ಪಣ್ಯಗಳ ಕತೆ ಹೇಳುತ್ತಾ ಸ್ತ್ರೀಯರು ಅಳುವುದು ಕೂಡ ಈ ಆಚರಣೆಯ ಭಾಗ. ಇನ್ನೂ ವೈಧಿಕ ಸಂಸ್ಕೃತಿಯ ಪ್ರಭಾವವೂ ನಮ್ಮಲ್ಲಿ ಬೆರೆತಿದೆ. ನಮ್ಮನ್ನು ತಿರುಪತಿಯ ಬಾಲಾಜಿಯ ಒಕ್ಕಲು ಎಂದು ಕರೆದುಕೊಳ್ಳುವವರಿದ್ದಾರೆ. ಬಾಲಾಜಿ ‘ಭೋಗ್’ ಎಂಬ ಆಚರಣೆಯಿದೆ. ಅಂದು ಮಣ್ಣಿನ ಒಲೆ ಮಾಡಿ ಗಂಧದ ಸೌದೆ ತಂದು ಅನ್ನ ಬೆಲ್ಲದ ಸಿಹಿ ಮಾಡುತ್ತಾರೆ, ಹನುಮಾನ್ ರೊಟ್ಟಿ ಅಂತ ಮಾಡುತ್ತಾರೆ, ಮನೆ ಮುಂದೆ ಕೂತು ಎಲ್ಲರೂ ಒಟ್ಟಿಗೆ ಉಣ್ಣುತ್ತಾರೆ.

ಹಮ್ ಬಂಜಾರೆ ಹಮ್ ಬಾಮಣೇರಿ: ನಮ್ಮಲ್ಲಿ ನಾಯಕ್ ಎಂದರೆ ಆತ ತಾಂಡಾದ ಲೀಡರ್, ಕಾರಭಾರಿ ನ್ಯಾಯ ಕೊಡುತ್ತಾನೆ. ಡಾವೊ ಎಂದರೆ ತಾಂಡದ ಯಜಮಾನ. ಇವರು ನ್ಯಾಯ ನಿರ್ಣಯಿಸುತ್ತಾರೆ, ತಪ್ಪುದಂಡ ಹಾಕುತ್ತಾರೆ, ಜಾತಿ ಸಂಕರವಾಗದಂತೆ ತಡೆಯುತ್ತಾರೆ, ನಾಲಿಗೆ ಸುಡುವ ಶಿಕ್ಷೆ ಅಂಥವರಿಗಿದೆ. ಅನೇಕ ಜನಪದ ಕತೆ-ಕಾವ್ಯಗಳು ಈ ನಿಟ್ಟಿನಲ್ಲಿ ಪ್ರಚಲಿತದಲ್ಲಿವೆ. ಸಾವೂ ಬ್ರಾಹ್ಮಣ್ ಎಂಬಾತ ಮಗಳು ಮದುವೆಗೆ ಮುಂಚೆಯೇ ಮೈನೆರೆದಾಗ ಅವಳನ್ನು ಕಾಡಿಗೆ ಬಿಟ್ಟುಬಿಡುತ್ತಾನೆ. ಆಗ ಈ ಬುಡಕಟ್ಟುಜನ ಅವಳನ್ನು ಕರೆತರುತ್ತಾರೆ. “ಹಮ್ ಬಂಜಾರೆ ಹಮ್ ಬಾಮಣೇರಿ” ಎಂಬ ಹಾಡಿನ ಹಿನ್ನೆಲೆಯಿದು. ಈ ಅಲೆಮಾರಿ ಬದುಕು ಹಾದುಬಂದ ಸಾಂಸ್ಕೃತಿಕ ಸಂಘರ್ಷ ಹಾಗೂ ಕೊಡುಕೊಳ್ಳುವಿಕೆ ಸಂಕೀರ್ಣವಾದುದು. ಕೊನೆಯದಾಗಿ ಹೇಳಬೇಕೆಂದರೆ ಇವರು ಯೋಧರು, ಕಷ್ಟ ಸಹಿಷ್ಣುತೆ ಇವರ ರಕ್ತದಲ್ಲಿ ಬಂದ ಗುಣ. ಸ್ತ್ರೀಯರೂ ಇದಕ್ಕೆ ಹೊರತಲ್ಲ, ನಾನು ಕೂಡ ಬದುಕಲ್ಲಿ ಎಂದೂ ಸೋಲಿನ ಬಗ್ಗೆ ಭಯಪಡಲಿಲ್ಲ, ಹೋರಾಡುವ ಗುಣ ಬಿಡಲಿಲ್ಲ, ಇಂದಿಗೂ ಅನ್ಯಾಯ ಒಪ್ಪಿಕೊಳ್ಳುವುದಿಲ್ಲ, ಬರವಣಿಗೆ ನನ್ನ ಬೆಳೆಸಿತು, ಅದೇ ರಾಜಕಾರಣಕ್ಕೆ ಕರೆತಂದಿತು. ಇದೆಲ್ಲದರ ಹಿಂದೆ ನನ್ನೊಳಗೊಂದು ಕೆಚ್ಚು ಇತ್ತು ಇಂದಿಗೂ ಇದೆ.

 

(ನಿರೂಪಣೆ : ಡಾ. ಗೀತಾವಸಂತ್)

(ಡಾ.ಗೀತಾ ವಸಂತ ಸಂಪಾದಿಸಿದ ‘ಆಧುನಿಕ ಕನ್ನಡ ಸಾಹಿತ್ಯದಲ್ಲಿ ಅಲಕ್ಷಿತ ಲೋಕದ ಸಂಕಥನ’ ಪುಸ್ತಕದಿಂದ ಆಯ್ದ ಬರಹ. ಪ್ರಕಾಶಕರು: ತುಮಕೂರು ವಿಶ್ವವಿದ್ಯಾನಿಲಯ)