“ಮಳೆಗಾಲವಲ್ಲದ ದಿನಗಳಲ್ಲೂ ಆ ಬೇರಿನೆಡೆಯಲ್ಲಿರುವ ಒರತೆ ಕಲ್ಲಮೇಲಿಂದ ಹಾದು ಸಣ್ಣ ಜೋಗವನ್ನು ನಿರ್ಮಿಸುತ್ತದೆ. ಅದರ ಎಡಕ್ಕೆ ಬೇರೊಂದಿಷ್ಟು ನೀರು ಮಳೆಯ ರೂಪದಲ್ಲೇ ಹರಿದು ಒಂದುಗೂಡಿ ರಭಸವಾಗಿ ಮುನ್ನುಗ್ಗುತ್ತದೆ. ನೀರು ಬೀಳುವ ರಭಸಕ್ಕೆ ಅಲ್ಲಿ ಸಣ್ಣ ಕೊರಕಲು ನಿರ್ಮಿತವಾಗಿದೆ. ಶಾಂತ ಪರಿಸರ. ಮೇಲ್ಭಾಗಕ್ಕೆ ಬಿದಿರಿನ ಮರಗಳು ಗಾಳಿಗೆ ಬಾಗುತ್ತ ಸಣ್ಣಗೆ ಕೀರಲುಗುಟ್ಟುತ್ತಲೇ ಇರುತ್ತವೆ. ನೀರಿನ ಜುಳು ಜುಳು ನಿನಾದಕ್ಕೆ ಸುಂದರ ಸಣ್ಣ ಜಲಪಾತ ಸಾಕ್ಷಿಯಾಗುತ್ತದೆ.” 
ಮುನವ್ವರ್ ಜೋಗಿಬೆಟ್ಟು ಬರೆಯುವ ಪರಿಸರದ ಕಥೆಗಳು.

ನಮ್ಮ ಮನೆಯ ಪರಿಸರದಲ್ಲಿ ಹೇರಳವಾಗಿ ವಿವಿಧ ಮಾವಿನ ಮರಗಳಿದ್ದವು. ವರ್ಷಂಪ್ರತಿ ಅವುಗಳ ತುಂಬಾ ಹಣ್ಣುಗಳಾಗುತ್ತಿದ್ದವು. ಅದನ್ನು ತಿನ್ನಲು ಬರುವ ಹಕ್ಕಿಗಳು, ಅಳಿಲು, ಬಾವಲಿ ಮುಂತಾದ ಪ್ರಾಣಿ ಪಕ್ಷಿಗಳ ಗದ್ದಲವೆಂದರೆ ಮಾವಿನ ಮರದ ಜೀವಂತಿಕೆ. ನಮ್ಮ ಸುಪರ್ದಿಗೆ ಸೇರಿದ್ದು ನಾಲ್ಕು ಮರಗಳು. ಪ್ರತಿಯೊಂದು ಕಾಡು ಮಾವಿನ ಮರಕ್ಕೂ ಅದರ ಹಣ್ಣಿನ ರುಚಿ ಬಣ್ಣ ಗುಣ ಆಕಾರಕ್ಕೆ ಅನುಗುಣವಾಗಿ ಒಂದೊಂದು ಹೆಸರುಗಳನ್ನು ಇಟ್ಟಿದ್ದೆವು. ಏನೇ ಹೆಸರಿರಲಿ ಅವುಗಳನ್ನು ನೋಡಿದ ಕೂಡಲೇ ಊರವರೆಲ್ಲರೂ ಗುರ್ತಿಸಿ ಬಿಡುವಷ್ಟು ಹೆಸರು ಮತ್ತು ವಿಶೇಷತೆಗಳಿಂದ ಅವು ಪ್ರಸಿದ್ಧವಾಗಿದ್ದವು. ಆಕಾರದಲ್ಲಿ ಚಪ್ಪಟೆ ಚೂಪಾಗಿದ್ದರೆ “ಬಾಳೆ ಮಾವು”, ಸಣ್ಣದಿದ್ದು ಉರುಟಾಗಿದ್ದರೆ “ದ್ರಾಕ್ಷಿ ಮಾವು”, ತುಂಬಾ ಸಿಹಿಯಾಗಿದ್ದರೆ “ಸಕ್ಕರೆ ಮಾವು”. ನಮ್ಮ ಮನೆಯ ಹಿತ್ತಲಲ್ಲಿ ಪೂರ್ವಕ್ಕೆ ಬೊಂಬಾಯಿ ಮಾವು , ಪಶ್ಚಿಮಕ್ಕೆ “ಕಾಟ್ ಮಾವು”, ಉತ್ತರಕ್ಕೆ “ಕಸಿ ಮಾವು”, ದಕ್ಷಿಣಕ್ಕೆ “ಬಾಳೆ ಮಾವು”. ಇತರ ಎಲ್ಲಾ ಹೆಸರುಗಳಿಗೆ ಹೆಸರಿನದೇ ಅರ್ಥವಿತ್ತಾದರೂ ‘ಬೊಂಬಾಯಿ ಮಾವು’ ಎಂದು ಕರೆಯುವುದರಲ್ಲಿ ಯಾವ ಸಂಬಂಧವೂ ಕಾಣುತ್ತಿರಲಿಲ್ಲ. ಎತ್ತಣ ಮುಂಬೈ, ಎತ್ತಣ ಜೋಗಿಬೆಟ್ಟು. ಹಾಗೆಯೇ ಕೆಳಕ್ಕೆ ಹೋದರೆ, “ಮಂಗಳೂರು ಮಾವು”. ಇನ್ನೂ ಸ್ವಲ್ಪ ಮುಂದುವರಿದರೆ “ಮೆಣಸು ಮಾವು”. ಮತ್ತೂ ಮುಂದಕ್ಕೆ ಹೋದರೆ ಅಲ್ಲೊಂದು “ಚೆಗೆರಿ ಮಾವು” ಹೆಸರಿನ ಮರ ಇತ್ತು. ಅದರ ಹಣ್ಣನ್ನು ತಿನ್ನುವಾಗ ಹಣ್ಣಿನ ನಾರು ಹಲ್ಲುಗಳೆಡೆಯಲ್ಲಿ ತೆಂಗಿನ ಕಾಯಿ ನಾರಿನಂತೆ ಸಿಕ್ಕಿಕೊಳ್ಳುವುದರಿಂದಲೇ ಈ ಹೆಸರು.

ಪರಿಸರದ ಕತೆಗಳ ಸರಣಿಯಲ್ಲಿ ಈ ಹಿಂದೆ ನಾನು ಹೇಳಿದ್ದ ನಮ್ಮ ಮನೆಯ ಹತ್ತಿರದ ಕೆರೆಯನ್ನು ದಾಟಿ ಮುಂದುವರಿಯುವಾಗ “ಟೂಟೆಕ್ಸ್ ಮಾವು” ಎಂಬ ಹೆಸರಿನ ಮಾವಿನ ಮರವೊಂದಿದೆ. ‘ಟುಟೆಕ್ಸ್ ಮಾವು’ ಹೆಸರಿಗೂ ಹಣ್ಣಿಗೂ ಸಂಬಂಧವೇ ಇರದು. ಈ ಹೆಸರು ಯಾಕೆ ಬಂತೆಂದು ಯಾರಿಗೂ ತಿಳಿಯದು. ಇತರ ಮಾವಿಗೆ ಹೋಲಿಸಿದರೆ ಇದರ ರುಚಿ ಸ್ವಲ್ಪ ಒಗರು. ಸರಿಯಾಗಿ ತೊಟ್ಟು ಕತ್ತರಿಸಿ ತಿನ್ನುವವನಿಗೆ ಅದ್ಭುತ ಸಿಹಿ. ಎಷ್ಟೋ ಬಾರಿ ಆ ಮಾವಿನ ಮರದಡಿಗೆ ಮಾವು ಹೆರಕಲು ಹೋದವರಿಗೆ ಏನೇನೋ ಅನುಭವವಾದದ್ದುಂಟು. ಕೆಲವರಿಗೆ ಹೆಬ್ಬಾವು ಕಂಡಿದ್ದು, ಇನ್ನು ಕೆಲವರಿಗೆ ನರಿಯೋ, ತೋಳವೋ ನೋಡಿದ್ದು ಇಂತದ್ದೇ ಕಥೆಗಳು ಸದಾ ಕೇಳುತ್ತಲೇ ಇದ್ದವು. ಮಾವು ಹೆರಕಲು ಹೋದ ನಾವು ಹಲವು ಬಾರಿ ಅಣಬೆ ನೋಡಿ, ಹೆಕ್ಕಿ ತಂದು ರುಚಿಯಾದ ಸಾರು ಮಾಡುತ್ತಿದ್ದುದು ರೂಢಿ. ಸೂರ್ಯನ ಬೆಳಕನ್ನು ಸರಿಯಾಗಿ ಭೂಮಿಗೆ ಬಿಡಲೊಪ್ಪದ ಆ ದೈತ್ಯ ಹೆಮ್ಮರ ತನ್ನ ನೆರಳಲ್ಲಿ ಅದೆಷ್ಟು ಅಣಬೆಗಳಿಗೆ ಬದುಕು ನೀಡುತ್ತಿತ್ತೋ!

ಇನ್ನುಳಿದ ಎಲ್ಲಾ ಮಾವಿನ ಮರಗಳು ನನ್ನಜ್ಜನ (ಈಗ ಮಾರಲಾಗಿದೆ) ಸುಪರ್ದಿಗೆ ಬರುವಂತದ್ದು. ಅಲ್ಲೆಲ್ಲ ಮರಗಿಡಗಳು ಅಡ್ಡಾದಿಡ್ಡಿ ಬೆಳೆದು ಕಾಡಾಗಿತ್ತು. ಅಜ್ಜ ಇರುವ ದಿನಗಳಲ್ಲಿ ಕಾಡನ್ನು ಆಗೊಮ್ಮೆ ಈಗೊಮ್ಮೆ ಸೋವುತ್ತಿದ್ದರಿಂದ ಕಾಡು ಮಿತಿ ಮೀರಿ ಬೆಳೆಯುತ್ತಿರಲಿಲ್ಲ. ಅಸ್ತವ್ಯಸ್ತವಾಗಿ ಬೆಳೆದ ಕಾಡನ್ನು ಸ್ವಲ್ಪ ಭಾಗ ಕಡಿದು ಅಲ್ಲಿ ಕಟ್ಟಿಗೆ ರಾಶಿ ಹಾಕಿ ಬೆಂಕಿ ಕೊಟ್ಟರೆ ಸೂಟು ಮಣ್ಣಿಗಾಗಿ ಬೆಂಕಿ ಹಾಕಿದ್ದ ಬೂದಿ ಮುಗಿಲೆತ್ತರಕ್ಕೆ ಹೋಗುವುದನ್ನು ಯಾರಾದರೂ ಹೊಸಬರು ನೋಡಿದರೆ ಅಲ್ಲೆಲ್ಲೋ ರಾಕೆಟ್ ಉಡಾವಣೆಯಾಗಿದೆ ಅಂದುಕೊಳ್ಳಬೇಕು.

ಸಣ್ಣವನಿರುವಾಗ, ಅಕ್ಕಂದಿರು ಮನೆಯ ಹತ್ತಿರದ ತೊರೆಯಲ್ಲಿ ನೀರು ಇಲ್ಲದಿದ್ದಾಗ ಹಿಂದೆ ಹೇಳಿದ್ದ ತೊರೆಗೆ ಬರುತ್ತಿದ್ದರು. ಅವರೆಲ್ಲಾ ಕಷ್ಟಪಟ್ಟು ಬಟ್ಟೆ ಒಗೆಯುವಾಗ ನಾನು ಚಿಕ್ಕಪ್ಪನ ಮಗ ಸೇರಿ ಕಾಡು ಹತ್ತುತ್ತಿದ್ದೆವು. ಅಲ್ಲೊಂದು ನೆಲ್ಲಿಕಾಯಿಯ ಮರ. ಇತರ ನೆಲ್ಲಿಕಾಯಿಗಳು ಕಹಿಯಾಗಿ ಸಣ್ಣಗಿದ್ದರೂ ಅದು ಮಾತ್ರ ಗಾತ್ರದಲ್ಲಿ ದೊಡ್ಡದಿದ್ದು, ಸ್ವಲ್ಪಮಟ್ಟಿಗೆ ಪೇಟೆಯಲ್ಲಿ ಸಿಗುವ ಕಸಿ ನೆಲ್ಲಿಕಾಯಿಗೆ ಹೋಲುತ್ತಿದ್ದುದು ನಮಗೆ ಅದ್ಭುತ! ಅಷ್ಟಕ್ಕೂ ಆ ಕಗ್ಗಾಡಿಗೆ ಯಾರು ತಾನೇ ಕಸಿ ಬೀಜ ತಂದು ಹಾಕುತ್ತಾರೆ. ಅದಕ್ಕೂ ನಾವು ಹೆಸರಿಡುವುದನ್ನು ಬಿಟ್ಟಿಲ್ಲ. ಇತರ ನೆಲ್ಲಿಕಾಯಿಗಳಿಗೆ ಹೋಲಿಸಿದರೆ ಗುಂಡಗೆ ದೊಡ್ಡದಾಗಿದ್ದ ಅದಕ್ಕೆ ‘ರಾಜ ನೆಲ್ಲಿಕಾಯಿ’ ಎನ್ನುತ್ತಿದ್ದೆವು. ಈಗಲೂ ಅದೇ ಕಾಡಲ್ಲಿ “ರಾಜ ನೆಲ್ಲಿಕಾಯಿ” ಇದೆಯಂತೆ, ಪುರುಸೊತ್ತಾದರೆ ಒಮ್ಮೆ ಹೋಗಿ ನೋಡಿ ಬರೋಣ.

ಅಜ್ಜ ಇರುವಾಗ ಅದೇ ಕಾಡಲ್ಲಿ ದಾರಿಗಳಿದ್ದವು. ಕಾಡಿನ ದಾರಿಯಲ್ಲಿ ನೇರವಾಗಿ ಹೋದರೆ ಅದು ಕೊನೆಗೊಳ್ಳುವುದು ಗದ್ದೆ ಬದುವಿನಲ್ಲಿ. ಮತ್ತೂ ಮುಂದುವರಿದರೆ ಪ್ರಕೃತಿಯ ವೈಭವವನ್ನು ಕಾಣಬಹುದಿತ್ತು. ತೇಜಸ್ವಿಯವರ ಪರಿಸರ ಕಥೆಗಳಲ್ಲಿ ಬರುವ ನದಿ ತಟದಂತೆ ಅಲ್ಲಿ ಒಂದು ಸಣ್ಣ ತೊರೆ. ನಮ್ಮ ಪೂರ್ವಜರು ಆ ತೊರೆಗೆ ಇಟ್ಟ ಹೆಸರು ‘ಮೊದಲಡಿ’. ನನಗೆ ಅಳಿಲು ಚೀಂಗುಟ್ಟಿದಾಗ, ಆನೆ ಹಿಂದಿನಿಂದ ಬಂದ ಕಥೆ ಎಲ್ಲಾ ಓದುವಾಗ ಈ ಸಣ್ಣ ಮೊದಲಡಿಯ ತೊರೆ ನೆನಪಿಗೆ ಬರುತ್ತದೆ. “ಮೊದಲಡಿ” ಅಂದರೆ “ಮೊದಲು+ ಅಡಿ”. ಬ್ಯಾರಿ ಭಾಷೆಯಲ್ಲಿ ಮೊದಲು ಅಂದರೆ ಬುಡ, ಅಡಿ ಎಂದರೆ ತಳ ಭಾಗ, ಕೊನೆ. ಯಾಕೆ ಈ ಹೆಸರು ಬಂತೆಂದು ಯಾವಾಗಲೂ ತಕರಾರು ತೆಗೆಯುತ್ತಿದ್ದವನಿಗೆ ಉಮ್ಮ ಸಮಜಾಯಿಷಿ ಕೊಡುತ್ತಾರೆ. ಮರದ ಬುಡ ಅಂದರೆ ಅಲ್ಲೊಂದು ಅತ್ತಿ ಮರವಿತ್ತು. ಅತ್ತಿಮರವೆಂದರೆ ಅಂತರ್ಜಲವನ್ನು ಹಿಡಿದಿಟ್ಟುಕೊಳ್ಳಬಲ್ಲ ಅದ್ಭುತ ಶಕ್ತಿಯುಳ್ಳ ಮರ. ಬೇರುಗಳನ್ನು ಕಡಿದರೆ ಶುದ್ಧ ಜಲವನ್ನು ಒಸರ ಬಲ್ಲದಂತೆ. ಹಾಗೆಯೇ ಮೊದಲಡಿಯಲ್ಲೂ ಒಂದು ಅತ್ತಿ ಮರವಿತ್ತು. ಯಾವುದೋ ಕಾರಣಕ್ಕೆ ಕಡಿದಿದ್ದರೂ ಅದರ ಕಾಂಡ ಸಾಯದೆ ಹಾಗೆಯೇ ಉಳಿದಿತ್ತು. ಬೇರುಗಳೆಡೆಯಲ್ಲಿ ನೀರು ಜಿನುಗಿ ಒರತೆಯಾಗಿ ಸಣ್ಣ ಬಂಡೆ ಮೇಲಿಂದ ಕೆಳಗಿಳಿಯುತ್ತದೆ. ಅದು ಅಲ್ಲಿನ ಪ್ರಕೃತಿ ವೈಭವ. ಮಳೆಗಾಲವಲ್ಲದ ದಿನಗಳಲ್ಲೂ ಆ ಬೇರಿನೆಡೆಯಲ್ಲಿರುವ ಒರತೆ ಕಲ್ಲಮೇಲಿಂದ ಹಾದು ಸಣ್ಣ ಜೋಗವನ್ನು ನಿರ್ಮಿಸುತ್ತದೆ. ಅದರ ಎಡಕ್ಕೆ ಬೇರೊಂದಿಷ್ಟು ನೀರು ಮಳೆಯ ರೂಪದಲ್ಲೇ ಹರಿದು ಒಂದುಗೂಡಿ ರಭಸವಾಗಿ ಮುನ್ನುಗ್ಗುತ್ತದೆ. ನೀರು ಬೀಳುವ ರಭಸಕ್ಕೆ ಅಲ್ಲಿ ಸಣ್ಣ ಕೊರಕಲು ನಿರ್ಮಿತವಾಗಿದೆ. ಶಾಂತ ಪರಿಸರ. ಮೇಲ್ಭಾಗಕ್ಕೆ ಬಿದಿರಿನ ಮರಗಳು ಗಾಳಿಗೆ ಬಾಗುತ್ತ ಸಣ್ಣಗೆ ಕೀರಲುಗುಟ್ಟುತ್ತಲೇ ಇರುತ್ತವೆ. ನೀರಿನ ಜುಳು ಜುಳು ನಿನಾದಕ್ಕೆ ಸುಂದರ ಸಣ್ಣ ಜಲಪಾತ ಸಾಕ್ಷಿಯಾಗುತ್ತದೆ. ಬೇರಿನಿಂದ ಒಸರುವ ನೀರ ಮೇಲೆ ಸ್ವಲ್ಪ ಜೌಗು ಪ್ರದೇಶ. ಇನ್ನೂ ಮೇಲ್ಭಾಗಕ್ಕೆ ಹಾಳು ಬಿದ್ದ ಗದ್ದೆ. ಆ ಗದ್ದೆ ಯಾವಾಗಲೂ ನೀರಿನಿಂದಾವೃತವಾಗಿರುತ್ತದೆ. ಮಳೆಗಾಲದಲ್ಲಿ ಹಸಿರ ಹುಲ್ಲಿನ ನಡುವೆ ನೀರು ನಿಂತರೆ ಸಣ್ಣ ಸಣ್ಣ ಮೀನುಗಳು ಕಾಣುತ್ತದೆ. ಉಮ್ಮ ನಮ್ಮ ಜೊತೆಗಿದ್ದರೆ ಒಂದೆರಡು ಬಾರಿ ಹನಿಗಣ್ಣಾಗುತ್ತಾರೆ. ಕೇಳಿದರೆ ಹಳೆಯ ನೆನಪುಗಳು, ಬಾಲ್ಯದ ಸೊಗಡು ಎಂಬೆಲ್ಲಾ ಉತ್ತರಗಳು. ಅಷ್ಟೂ ನೆನಪಿನ ತಿಜೋರಿಯ ತಗಡು ಬಾಗಿಲಿಗೆ ತಂಗಾಳಿ ಬೀಸುವಾಗ ತಲ್ಲಣಗೊಳ್ಳದಿರುತ್ತದೆಯೇ.

ಮಳೆಗಾಲದಲ್ಲಿ ರಭಸವಾಗಿ ಬೀಳುವ ನೀರಿಗೆ ಕರೆಂಟು ಉತ್ಪತ್ತಿ ಮಾಡುವುದು ಶಾಲಾ ದಿನಗಳಲ್ಲಿ ಕೇಳಿ ತಿಳಿದದ್ದರಿಂದ ನಾನೂ ಸಣ್ಣ ಪ್ರಯತ್ನ ಮಾಡಿದ್ದೆ. ರಟ್ಟಿನ ಸಣ್ಣ ಚಕ್ರಕ್ಕೆ ಆರು ಬ್ಲೇಡುಗಳನ್ನು ಚುಚ್ಚಿಟ್ಟು ನೀರಿಗೆ ಹಿಡಿದು ಸುಮ್ಮನೆ ತಿರುಗಲು ಬಿಡುತ್ತಿದ್ದೆ. ಅದರಿಂದ ಹೇಗೆ ವಿದ್ಯುತ್ ಉತ್ಪತ್ತಿಯಾಗುತ್ತದೆ ಎಂಬ ಪ್ರಾಥಮಿಕ ಜ್ಞಾನವಿಲ್ಲದ ನನಗೆ ಸುಮ್ಮನೆ ಚಕ್ರ ತಿರುಗುವುದನ್ನು ನೋಡಿ ಖುಷಿ ಪಡುತ್ತಿದ್ದೆ.

ಮಳೆಗಾಲವಲ್ಲದ ದಿನಗಳಲ್ಲೂ ಆ ಬೇರಿನೆಡೆಯಲ್ಲಿರುವ ಒರತೆ ಕಲ್ಲಮೇಲಿಂದ ಹಾದು ಸಣ್ಣ ಜೋಗವನ್ನು ನಿರ್ಮಿಸುತ್ತದೆ. ಅದರ ಎಡಕ್ಕೆ ಬೇರೊಂದಿಷ್ಟು ನೀರು ಮಳೆಯ ರೂಪದಲ್ಲೇ ಹರಿದು ಒಂದುಗೂಡಿ ರಭಸವಾಗಿ ಮುನ್ನುಗ್ಗುತ್ತದೆ. ನೀರು ಬೀಳುವ ರಭಸಕ್ಕೆ ಅಲ್ಲಿ ಸಣ್ಣ ಕೊರಕಲು ನಿರ್ಮಿತವಾಗಿದೆ.

ಒಂದು ದಿನ ನಾವು ಆ ಜಲಪಾತದ ಮೂಲ ಹುಡುಕಲೆಂದೇ ಹೊರಟು ಬಿಟ್ಟೆವು. ಇಳಿಜಾರಿನ ಬಂಡೆಯ ಮೇಲೆ ಕಾಲಿಟ್ಟರೆ ಜರ್ರನೇ ಜಾರಿ ಬೀಳುವ ಭಯ. ಮಳೆಗಾಲವಾದ್ದರಿಂದ ಬಂಡೆಗಳಲ್ಲಿ ವಿಪರೀತ ಪಾಚಿ ಬೆಳೆದು ಬಿಟ್ಟಿತ್ತು. ನೀರು ಹರಿಯುವ ಕೊರಕಲಲ್ಲೇ ದಾರಿ ಮಾಡಿಕೊಂಡು ಹೊರಡುವುದು ಹೆಚ್ಚು ಅಪಾಯಕಾರಿಯೆಂಬುವುದು ನಮಗೆ ಗೊತ್ತಿತ್ತು. ಸಾಕಷ್ಟು ಪ್ರಯತ್ನ ಪಟ್ಟೆವು. ಆ ದಾರಿಯ ಕತ್ತಲು, ರಭಸವಾಗಿ ನುಗ್ಗುವ ನೀರು, ಕಾಲು ನೆಟ್ಟಗೆ ಊರಲು ಪಾಚಿ ಸುರ್ರನೆ ಜಾರಿಸಿ ಬಿಡುತ್ತಿದ್ದವು. ಕೊನೆಗೆ ಮಾವನ ಮಗ ಇರ್ಷಾದ್ ನೊಂದಿಗೆ ಹೋಗುವುದು ತೀರ್ಮಾನವಾಯಿತು. ನಾವು ನೀರು ಬರುವ ದಾರಿ ಇದೆ ಎಂದು ಗುರ್ತಿಸುವುದಕ್ಕೆ ನೀರು ಹರಿವ ಸದ್ದನ್ನೇ ಆಲಿಸುತ್ತಾ ಜಲಪಾತದ ಮೇಲ್ಭಾಗದ ಕಾಡಿನಲ್ಲೇ ನಡೆಯತೊಡಗಿದೆವು. ಹಾವು, ಜಿಂಕೆ, ಕಾಡು ಹಂದಿ, ನರಿಗಳು ಆ ದಾರಿಯಿಂದ ನಿತ್ಯವೂ ಚಲಿಸುತ್ತವಾದರೂ ಅವುಗಳು ಹೋದ ದಾರಿಯ ಗುರುತುಗಳೇನೂ ಕಾಣುತ್ತಿರಲಿಲ್ಲ. ಅಥವಾ ಅದರ ಕುರಿತು ನಮಗೆ ತಿಳಿದಿರಲಿಲ್ಲ ಎನ್ನಬಹುದು. ಮನುಷ್ಯ ಒಮ್ಮೆ ನಡೆದರೆ ಸಾಕು. ದಾರಿಯಾಗಿ ಬಿಡುತ್ತದೆ, ಮತ್ತೆ ಅಲ್ಲಿ ಹುಲ್ಲೂ ಚಿಗುರದಷ್ಟು ಮಣ್ಣಿನ ತಳ ಕಾಣಿಸುವಂತೆ ದಾರಿಯಾಗಿ ಬಿಡುತ್ತದೆ. ಹೀಗೆಲ್ಲಾ ಯೋಚಿಸುವಾಗ ವಿಷ ಜಂತುಗಳಿಂತಲೂ ಅಪಾಯಕಾರಿ ನಾವು. ಅವುಗಳು ಕಡಿದರೆ ಸಾಯುತ್ತೇವೆಂಬ ಹೆದರಿಕೆ ಮಾತ್ರ ಬಿಟ್ಟರೆ ನಾವು ನಡೆದಲ್ಲೆಲ್ಲೂ ಹುಲ್ಲೂ ಹುಟ್ಟದು.

ದಟ್ಟ ಕಾಡು ಕಲ್ಲು ಬಂಡೆಗಳ ಕಾರಣದಿಂದ ಆಚೆಗಿನ ನೀರಿನ ಹರಿವಿನ ದಿಕ್ಕು ತಿಳಿಯಲಿಲ್ಲ. ಒಟ್ಟಾರೆ ನೈಲ್ ನದಿಯ ಹುಟ್ಟು ಹುಡುಕಲು ಹೊರಟವರಂತೆ ಕೈಯಲ್ಲೊಂದು ಕತ್ತಿಯೂ ಇಲ್ಲದೆ, ಸಣ್ಣ ಎರಡು ಕೋಲು ಹಿಡಿದು ಹೊರಟೆವು. ಸ್ವಲ್ಪ ಮೇಲೆ ಹತ್ತಿದಂತೆ ಕಾಡು ತನ್ನ ಗಮ್ಯತೆಯನ್ನು ತೆರೆದಿಟ್ಟಂತೆ ಇತ್ತು. ನೀರು ಬರುವ ಝರಿ ಕಾಣಸಿಕ್ಕಿತು. ಅದು ಹರಿಯುತ್ತಿರುವ ವಿರುದ್ಧ ದಿಕ್ಕಿಗೆ ಕಾಲು ಹಾಕಿದೆವು. ನಡೆದಂತೆ ಝರಿಯ ಇಕ್ಕೆಲದಲ್ಲೂ ಅದ್ಭುತ ಕಾಣ್ಕೆ. ಕಾಡು ಹಣ್ಣುಗಳು ವಿಶೇಷವಾಗಿ ಹಣ್ಣು ಬಿಟ್ಟಿದ್ದವು. ಕುಂಟಾಲು, ತಬ್ಳುಕ್ಕು, ಪುನಾರ ಪುಳಿಯಂತಹ ಹಣ್ಣಿನ ಮರಗಳು ಬಾಗಿ ನೀರ ಕಡೆಗೆ ವಾಲುತ್ತಿದ್ದವು. ನೀರಿನ ರಭಸ ಅಷ್ಟಿರಲಿಲ್ಲ. ಸ್ವಲ್ಪ ನಡೆಯುವಷ್ಟಕ್ಕೆ ನೀರು ಇಬ್ಬಾಗವಾಗಿತ್ತು. ಒಂದು ಗುಡ್ಡದ ನೆತ್ತಿಯಿಂದ ಬರುತ್ತಿತ್ತು. ಇನ್ನೊಂದು ನೇರವಾದ ದಾರಿಯಲ್ಲಿ ಇತ್ತು. ನಾವು ಗುಡ್ಡದ ದಾರಿ ಹಿಡಿಯದೆ ನೇರ ದಾರಿ ಹಿಡಿದೆವು. ಸ್ವಲ್ಪ ದೂರ ಕ್ರಮಿಸಿದಂತೆ ದಟ್ಟನೆ ಹಸಿರು ಹುಲ್ಲಿನಂತೆ ಸುರಂಗ ಮಾರ್ಗ ಮತ್ತು ಸಣ್ಣ ತಿರುವು. ಈ ಬಾರಿ ನೀರಿನಲ್ಲೇ ತೆರಳುವುದು ಸುಲಭವಿರಲಿಲ್ಲ. ಹೆದರಿಕೆ ಹುಟ್ಟಿಸುವಂತಿತ್ತು. ನೀರು ಬಿಟ್ಟು ಝರಿಯ ಎಡಕ್ಕೆ ತಿರುಗಿ ಮತ್ತೆ ಮುಂದುವರಿದೆವು. ಏನಾಶ್ಚರ್ಯ! ಅಕ್ಕಂದಿರು ಬಟ್ಟೆ ತೊಳೆಯುತ್ತಿದ್ದ ತೊರೆಗೆ ಅದೇ ನೀರು ಸೇರುತ್ತಿತ್ತು. ಅದರ ಮೂಲ ಈ ಹಿಂದೆಯೇ ಹುಡುಕಿದ್ದರಿಂದ ಮತ್ತೆ ಕುತೂಹಲ ಉಳಿಯಲಿಲ್ಲ. ಆದರೆ ಬೆಟ್ಟದ ಮೇಲಿನಿಂದ ಕವಲಾಗಿ ಬರುವ ನೀರು ಎಲ್ಲಿಂದ? ಹುಚ್ಚು ಕೂತೂಹಲಕ್ಕೆ ಮಣೆ ಹಾಕಲು ಒಂದು ದಿನ ಹೊರಡುವುದು ತೀರ್ಮಾನವಾಯ್ತು. ಅದೇನಾಯ್ತೋ ಗೊತ್ತಿಲ್ಲ, ನಮಗಿಬ್ಬರಿಗೆ ಆ ದಿನ ಬಿಡುವೇ ಸಿಗಲಿಲ್ಲ. ಆ ನೀರು ಎಲ್ಲಿಂದ ಶುರುವಾಗುತ್ತದೆ ಎಂದು ಯೋಚಿಸುತ್ತ ತಲೆ ಕೆರೆದುಕೊಂಡೆವು ಹೊರತು ಅದನ್ನು ಹುಡುಕಿ ಹೋಗುವುದಕ್ಕಾಗಲಿಲ್ಲ.

ಎಷ್ಟೋ ದಿನಗಳ ನಂತರ ಒಮ್ಮೆ ಕವೊಲೆಡೆದ ನೀರಿನ ಮೂಲ ಕಂಡು ಹಿಡಿದೆ. ಅದರ ಮೂಲ ನಮ್ಮೂರ ನವಿಲುಪಾದೆಯ ಹತ್ತಿರದ ಸಣ್ಣ ಒರತೆ. ಅಲ್ಲಿಂದ ಹೊರಟು, ರಸ್ತೆಯೊಂದರ ತಿರುವಿನಲ್ಲಿ ರಸ್ತೆ ಬದಿಯ ನೀರು ಸೇರಿ ಒಂದಾಗಿ ಸಾಗಿ ಜಲಪಾತವನ್ನು ಸೇರುತ್ತದೆ. ಆ ಜಲಪಾತವು ಮುಂದೆ ಸಾಗಿ ಒಂದು ದೂರ ‘ಗಣಕನ ಗುಂಡಿಗೆ’ ಸೇರುತ್ತದೆ ಎಂದು ಕೇಳಿದ ನೆನಪು. ಅಜ್ಜ ಹೇಳಿದ್ದು ಬಿಟ್ಟರೆ ಆ ಗುಂಡಿಯನ್ನು ನೋಡಲು ನಾವೆಂದೂ ಹೋದದ್ದಿಲ್ಲ. ಗಣಕನ ಗುಂಡಿಯು ನದಿಗೆ ಸೇರುವಲ್ಲಿನ ಮಹಾ ಗುಳಿಯಂತೆ. ಎಷ್ಟೋ ಜನರು ಪ್ರಾಣ ಕಳೆದುಕೊಂಡದ್ದನ್ನೇ ಹೇಳುತ್ತಾ, ಅದನ್ನು “ಪಿಶಾಚಿ ಗುಂಡಿ” ಎಂಬ ಹೆಸರಿಟ್ಟು ಬಹಳ ಹಿಂದಿನಿಂದಲೂ ಹೆದರಿಸುತ್ತಿದ್ದಾರೆ. ಗುಂಡಿಗೆಯನ್ನು ಗಟ್ಟಿ ಮಾಡಿಕೊಂಡು ಒಂದು ಬಾರಿ ಗಣಕನ ಗುಂಡಿಯನ್ನು ನೋಡಿ ಬರಬೇಕು ಎಂಬ ಉದ್ದೇಶ ಇದೆ, ನೀವೂ ಇರುತ್ತೀರಿ ತಾನೆ!