ಕರುಳ ಬಳ್ಳಿಯ ನಾದ
ನೀರೆರೆದ ಬಳ್ಳಿ
ಇಬ್ಬನಿಯ ಮಾಲೆ ತೊಟ್ಟು
ನಳನಳಿಸುವಾಗ
ಹನಿಯ ಸಾಲುಗಳಲೊಂದು
ಕಂಬನಿ ಕೈ ಬೀಸಿ ಕರೆಯುತ್ತದೆ;
ನನ್ನದೇ ಬಿಂಬ
ಸ್ಪರ್ಶಿಸಲನುವಾದಾಗ
ಕೆಂಡದುಂಡೆಯ ಭಾವ
ಇಬ್ಬನಿಯೊಳಗಿನ ಕಾವು
ಭಾವ-ಅನುಭಾವದ ಸಾವು!
ಹಸಿರೆಲೆಯಂಚಿನ ಸೊಗಸು
ತೊಟ್ಟಿಲೊಳಗಿನ ಕೂಸು
ಏನೆಲ್ಲಾ ಕನಸು
ನೆಲ ಮುತ್ತಿಕ್ಕಿದಾಗ
ದರ್ಪಣಕ್ಕೆನಿತು ದರ್ಪ;
ಛಿದ್ರ ತುಣುಕುಗಳಲಿ ಕಂಡ
ಬಿತ್ತ ಬಿತ್ತವನದಲ್ಲ
ಹನಿಗಳಲಿ ಕಂಡ ಚಿತ್ತ
ಹೆತ್ತವನದೂ ಅಲ್ಲ
ನಿಗೂಢ!
ಬೇರು ಪರಾಗಗಳ ನಡುವೆ
ಎಷ್ಟೊಂದು ಅಂತರ
ಉದುರಿದ ಪಕಳೆ
ತರಗೆಲೆಯನಪ್ಪಿದಾಗ
ಎದೆಬಡಿತದ ಸದ್ದು
ಮಣ್ಣ ಕಣದಲಿ ಲೀನ;
ಜೀವದೊಳಗಿನ ಭಾವ
ಸೆಲೆ ನೆಲೆಯ ಮರೆತು
ಬಲೆಯೊಳಡಗಿದಾಗ
ಕಣ್ಣಂಚಿನ ಹನಿಗೆ
ಎಲ್ಲವೂ ಶೂನ್ಯ!
ನಿತ್ಯ ಸಾಗದು ಭಾವ
ಮಿಥ್ಯೆ ಕಾಣದು ಜೀವ
ಸುತ್ತಣ ಬೇಲಿಗಳನಟ್ಟಿ
ಭವ್ಯತೆಗೊಲಿಯುವಾಗ
ನೆಲ ತೊರೆವ ಕಾತರ;
ಕರುಳ ಸವಿಗಾನವೋ
ಕೊರಳ ದುಮ್ಮಾನವೋ
ಎದೆಯಾಳದ ನೋವಿಗೆ
ನೆನಪುಗಳೇ ಸುನಾದ!
ಹೆಜ್ಜೆ ಗುರುತುಗಳೊಡನೆ
ಕಿರುಬೆರಳಿನ ಸ್ಪರ್ಶ
ಎತ್ತ ಸಾಗಿತೋ ಮನಸು
ಮತ್ತೊಂದು ಕೊಂಡಿ;
ನೆನಪುಗಳ ಸರಪಣಿಯೋ
ಕರುಳ ಸಂಕೋಲೆಯೋ
ಇಂಪು ಸೂಸುವ ಕೊರಳಲಿ
ಕಂಬನಿ ಕುಳಿತಾಗ
ಹಸಿರ ನಡುವಿನ ಗಾನ
ಚರಮವಾಕ್ಯ!