ಅಬ್ಬಾಸ್ ಕಿಯರೋಸ್ತಮಿ ತನ್ನ ನೆಚ್ಚಿನ ಮನೋಭೂಮಿಕೆಗೆ ಹತ್ತಿರವಾದ ಮನುಷ್ಯನ ಅಂತರಂಗದಲ್ಲಿ ಹುದುಗಿರುವ ಭಾವನೆಗಳ ಏರಿಳಿತವನ್ನು ತೀರಾ ಸರಳವಾದ ನಿರೂಪಣಾ ವಿಧಾನದಿಂದ ಪ್ರಸ್ತುತಪಡಿಸುತ್ತಾನೆ. ಅವನ ಚಿತ್ರಗಳ ಪಾತ್ರಗಳ ಸೃಷ್ಟಿಕ್ರಿಯೆ ಹಲವು ಪದರುಗಳಲ್ಲಿ ಜರುಗುವುದು ಸಾಮಾನ್ಯ. ಇವುಗಳು ಅಷ್ಟಕ್ಕೆ ನಿಲ್ಲದೆ ತೀರ ಗಹನ ವಿಷಯಗಳನ್ನು ಅತ್ಯಂತ ಕಡಿಮೆ ಘಟನೆಗಳನ್ನು ಉಪಯೋಗಿಸಿ ಪ್ರಸ್ತುತಪಡಿಸುವುದು ಅವನ ಶೈಲಿಯಾಗಿದೆ. ಸರ್ಟಿಫೈಡ್‌ ಕಾಪಿ ಚಿತ್ರವೂ ಇದೇ ಶೈಲಿಯಲ್ಲಿ ಮೂಡಿಬಂದಿದೆ.
‘ಲೋಕ ಸಿನಿಮಾ ಟಾಕೀಸ್’ ನಲ್ಲಿ ಎ.ಎನ್. ಪ್ರಸನ್ನ ಬರಹ.

 

1960ರಲ್ಲಿ ಇರಾನ್‌ನಲ್ಲಿ ಪ್ರಾರಂಭವಾದ ʻಹೊಸ ಅಲೆʼಯ ಚಿತ್ರಗಳಿಂದ ಉಂಟಾದ ಪ್ರಭಾವದಿಂದ ಮಜಿದ್ ಮಜಿದಿ, ಫಾರೂಕ್‌ ಜದ್‌, ಸಿದ್ದಿಕ್ ಬರ್ಮಾಕ್ ಮುಂತಾದವರು ಹೊಸ ಪರಿಕಲ್ಪನೆಯ ಚಿತ್ರಗಳನ್ನು ನಿರ್ಮಿಸಿ ಜಗತ್ತಿನ ಚಿತ್ರೋತ್ಸವಗಳಲ್ಲಿ ತಮ್ಮ ಸ್ಥಾನವನ್ನು ಭದ್ರಗೊಳಿಸಿದರು. ಇವರೆಲ್ಲರಿಗಿಂತ ಭಿನ್ನ ದೃಷ್ಟಿಕೋನಗಳಿಂದ ಮತ್ತು ಅತ್ಯಲ್ಪ ಕಥನ ವಿಸ್ತಾರವಿರುವ ಅಸಾಂಪ್ರದಾಯಿಕ ನಿರೂಪಣಾ ವಿಧಾನಗಳನ್ನು ಅನುಸರಿಸಿದ ಅಬ್ಬಾಸ್ ಕಿಯರೋಸ್ತಮಿ ಬೇರೆಯಾಗಿಯೇ ಮಿನುಗಿದ ನಕ್ಷತ್ರ. ಎಪ್ಪತ್ತಾರು ವರ್ಷಗಳ ಬಾಳಿನಲ್ಲಿ ಅವರು ಗುರಿಯಿಟ್ಟು ಗಳಿಸಿದ ಗೆಲುವು ಅನೇಕ.

(ಅಬ್ಬಾಸ್‌ ಕಿಯರೋಸ್ತಮಿ)

ಅಬ್ಬಾಸ್‌ ಕಿಯರೋಸ್ತಮಿ ಟೆಹ್ರಾನ್‌ ನಲ್ಲಿ ಪಾಂಟಿಂಗ್‌ ಮತ್ತು ಗ್ರಾಫಿಕ್ಸ್ ಅಭ್ಯಾಸ ಮಾಡಿ ಸ್ವಲ್ಪ ಕಾಲದ ನಂತರ ಮೊದಲ ʻಮುಸಾಫಿರ್‌ʼ ಚಿತ್ರವನ್ನು 1974 ರಲ್ಲಿ ಪ್ರಸ್ತುತಪಡಿಸಿದ. ಟೆಹ್ರಾನ್‌ನಲ್ಲಿ ನಡೆಯುವ ಸಾಕರ್‌ ಮ್ಯಾಚ್‌ ನೋಡಬೇಕೆಂದು ಪ್ರಯತ್ನಿಸಿ ಸಫಲನಾಗುವ ಹಳ್ಳಿಯ ಹುಡುಗನೊಬ್ಬನ ಸಂಕಷ್ಟಗಳನ್ನು ನಿರೂಪಿಸುತ್ತಾನೆ. 1987ರಲ್ಲಿ ಪ್ರಾರಂಭಿಸಿದ ಕೋಕರ್‌ ಟ್ರೈಯಾಲಜಿ ಚಿತ್ರಗಳಾದ ʻವೇರ್‌ ಈಸ್‌ ಮೈ ಫ್ರೆಂಡ್ಸ್‌ ಹೋಮ್‌ʼ, ʻಅಂಡ್‌ ಲೈಫ್‌ ಗೋಸ್‌ ಆನ್‌ʼ(1992) ಮತ್ತು ʻಥ್ರೂ ದ ಆಲೈವ್‌ ಟ್ರೀಸ್‌ʼ (1994) ಚಿತ್ರಗಳಲ್ಲಿಯೂ ಮಕ್ಕಳದೇ ಪ್ರಧಾನ ಭೂಮಿಕೆ. ಈ ಚಿತ್ರಗಳಲ್ಲಿ ಮೊದಲನೆಯದರಿಂದಲೇ ವಿಶ್ವ ಖ್ಯಾತಿ ಗಳಿಸಿದ ತರುವಾಯ ಖ್ಯಾತ ನಟನೊಬ್ಬನನ್ನು ಬಲ್ಲೆನೆಂದು ಶ್ರೀಮಂತನೊಬ್ಬನನ್ನು ಮರಳು ಮಾಡಲು ಪ್ರಯತ್ನಿಸುವ ವ್ಯಕ್ತಿಯ ಕಥನವುಳ್ಳ ʻಕ್ಲೋಸ್‌ ಅಪ್‌ʼ (1995) ನಿರ್ಮಿಸಿದ. ಇದರಲ್ಲಿ ಹೆಸರಾಂತ ನಿರ್ದೇಶಕ ಮೊಹಿಸಿನ್‌ ಮಕ್ಬಲ್‌ಬಫ್‌ ನಟಿಸಿದ್ದು ವಿಶೇಷ. ಚಿತ್ರದಲ್ಲಿ ಪ್ರಚಲಿತವಾದ ಸ್ಥಳೀಯ ರಾಜಕೀಯ ಮತ್ತು ಸಾಮಾಜಿಕ ವಿಷಯಗಳನ್ನು ತೆರೆದಿಡುವ ಪ್ರಯತ್ನವಿದೆ. ಅನಂತರದ ʻಟೇಸ್ಟ್‌ ಆಫ್‌ ಚೆರಿʼ (1997 ಆತ್ಮಹತ್ಯೆ ಮಾಡಿಕೊಂಡ ತರುವಾಯ ಹೂಳುವುದಕ್ಕೆ ಸಹಾಯ ಮಾಡುವ ವ್ಯಕ್ತಿಯನ್ನು ಹುಡುಕಾಡುತ್ತ ಅಲೆದಾಡುವ ಮನುಷ್ಯನ ವಿಶಿಷ್ಟ ಚಿತ್ರ. ಈ ಚಿತ್ರ ಕಾನ್‌ ಚಿತ್ರೋತ್ಸವದಲ್ಲಿ ಶಾಹಿ ಇಮಾಮುರ ಅವರ ʻದ ಈಲ್‌ʼ ಚಿತ್ರದೊಂದಿಗೆ ಪ್ರಶಸ್ತಿ ಹಂಚಿಕೊಳ್ಳುವ ಹಿರಿಮೆಗೆ ಪಾತ್ರವಾಯಿತು. ಅವನ 1999ರ ʻದ ವಿಂಡ್‌ ವಿಲ್‌ ಕ್ಯಾರಿ ಅಸ್‌ʼ ಚಿತ್ರ ಇರಾನಿನ ಕುರ್ದಿಸ್ತಾನ್‌ ನಲ್ಲಿ ಜೊತೆಗಾರರೊಂದಿಗೆ ತನ್ನದೇ ಅದ ಕಾರಣಗಳಿಗಾಗಿ ಅಲೆದಾಡುವ ಎಂಜಿನಿಯರ್‌ನ ಕಥನವಿದೆ. ಈ ಚಿತ್ರದಲ್ಲಿ ಆ ಪ್ರದೇಶದ ಜನರ ಆಚಾರ, ವಿಚಾರ, ನಂಬಿಕೆ, ವಿಧ್ಯುಕ್ತ ಕ್ರಿಯೆಗಳು ಮುಂತಾದವುಗಳನ್ನು ಸ್ಥಳೀಯರ ಕುತೂಹಲ ಹಾಗೂ ವಿರೋಧದೊಂದಿಗೆ ಪರಿಶೋಧಿಸಲು ತೊಡಗುವ ಚಿತ್ರ. ಅಸಾಂಪ್ರದಾಯಿಕ ನಿರೂಪಣಾ ವಿಧಾನ ಅವನ ಚಿತ್ರಗಳ ವಿಶೇಷ. ಚಿತ್ರಗಳ ನಿರೂಪಣೆಯಲ್ಲಿ ಅವನ ಒಲವು ಇತರ ಬಗೆಯ ಚಿತ್ರಿಕೆಗಳಿಗಿಂತ‌ ಸಮೀಪ ಚಿತ್ರಿಕೆ (ಕ್ಲೋಸ್‌ ಅಪ್)ಗಳ ಬಳಕೆ ಹೆಚ್ಚಾಗಿರುವುದನ್ನು ಕಾಣುತ್ತೇವೆ. ಪ್ರೇಕ್ಷಕನ ಗ್ರಹಿಕೆಗೆ ಹಾಗೂ ಸೂಕ್ಷ್ಮತೆಗೆ ಸವಾಲು ಒಡ್ಡುವಂಥ ಚಿತ್ರಗಳಿಂದ ಅವನ ಸೃಷ್ಟ್ಯಾತ್ಮಕ ಶಕ್ತಿಯ ಪರಿಚಯವಾಗುತ್ತದೆ.

ಅಬ್ಬಾಸ್ ಕಿಯರೋಸ್ತಮಿ ತನ್ನ ನೆಚ್ಚಿನ ಮನೋಭೂಮಿಕೆಗೆ ಹತ್ತಿರವಾದ ಮನುಷ್ಯನ ಅಂತರಂಗದಲ್ಲಿ ಹುದುಗಿರುವ ಭಾವನೆಗಳ ಏರಿಳಿತವನ್ನು ತೀರಾ ಸರಳವಾದ ನಿರೂಪಣಾ ವಿಧಾನದಿಂದ ಪ್ರಸ್ತುತಪಡಿಸುತ್ತಾನೆ. ಅವನ ಚಿತ್ರಗಳ ಪಾತ್ರಗಳ ಸೃಷ್ಟಿಕ್ರಿಯೆ ಹಲವು ಪದರುಗಳಲ್ಲಿ ಜರುಗುವುದು ಸಾಮಾನ್ಯ. ಇವುಗಳು ಅಷ್ಟಕ್ಕೆ ನಿಲ್ಲದೆ ತೀರ ಗಹನ ವಿಷಯಗಳನ್ನು ಅತ್ಯಂತ ಕಡಿಮೆ ಘಟನೆಗಳನ್ನು ಉಪಯೋಗಿಸಿ ಪ್ರಸ್ತುತಪಡಿಸುವುದು ಕೂಡ ಜೊತೆಯಲ್ಲಿಯೇ ಇರುತ್ತದೆ. ಹಲವಾರು ಚಿತ್ರಗಳಲ್ಲಿ ಪ್ರಯೋಗಿಸಿ ಸಿದ್ಧಪಡಿಸಿಕೊಂಡ ನಿರೂಪಣಾ ವಿಧಾನವನ್ನೆ ಕಾನ್‌ ಚಿತ್ರೋತ್ಸವದಲ್ಲಿ ‘ಅವಾರ್ಡ್‌ ಆಫ್‌ ದ ಯೂಥ್’ ಪ್ರಶಸ್ತಿ ಪಡೆದ  ಅವನ ʻಸರ್ಟಿಫೈಡ್ ಕಾಪಿʼ ಚಿತ್ರದಲ್ಲಿಯೂ ನೋಡುತ್ತೇವೆ.

ʻಸರ್ಟಿಫೈಡ್‌ ಕಾಪಿʼ ಚಿತ್ರದ ನಿರ್ಮಾಣ ಇಟಲಿಯಲ್ಲಿ ಜರುಗಿದೆ. ಗಂಡು-ಹೆಣ್ಣಿನ ಸಂಬಂಧದಲ್ಲಿ ಸತ್ಯ ಯಾವುದು ಮಿಥ್ಯೆ ಯಾವುದು ಇವುಗಳನ್ನು ಕುರಿತಂತೆ ಚಿತ್ರವಿದೆ. ನಿರ್ದೇಶಕ ಈ ವಿಷಯವನ್ನು ನಿರೂಪಿಸಲು ಅವರಿಬ್ಬರೂ ಪ್ರಯಾಣಿಸುತ್ತಲೇ ಪರಸ್ಪರರನ್ನು ಪರಿಶೋಧಿಸುವ ವಿಧಾನವನ್ನು ಬಳಸಿದ್ದಾನೆ. ಚಿತ್ರದ ವಿಶೇಷತೆ ಈ ಪ್ರಮುಖ ವಿಷಯವನ್ನು ಅಂತ್ಯಗೊಳಿಸುವ ರೀತಿಯಲ್ಲಿದೆ.

ಗಂಡು ಹೆಣ್ಣು ಪರಸ್ಪರರನ್ನು ಅರಿತುಕೊಳ್ಳುವ ಪ್ರಯಾಣಿಸುತ್ತಾ ಸಂಭಾಷಣೆಯೊಂದಿಗೆ ಕೊಳ್ಳುವ ಪ್ರಯತ್ನದ ಚಿತ್ರ ರಿಚರ್ಡ್ ಲಿಂಕ್ಲೇಟರ್‌ ನ ʻಬಿಫೋರ್ ಸನ್‌ ರೈಸ್ʼ ಚಿತ್ರದಲ್ಲಿಯೂ ಕಾಣುತ್ತೇವೆ. ʻಸರ್ಟಿಫೈಡ್ ಕಾಪಿʼ ಲಿಂಕ್ಲೇಟರ್ನ ಚಿತ್ರದಷ್ಟು ಸರಳವಾಗಿಲ್ಲ. ʻಬಿಫೋರ್ ಸನ್ ರೈಸ್ʼ ಚಿತ್ರದಲ್ಲಿ ಗಂಡು-ಹೆಣ್ಣುಗಳ ಮಾತಿನ ಅರ್ಥದಲ್ಲಿ ನಿಗೂಢತೆಯ ಬೆರಕೆ ಇಲ್ಲ. ಸಂಭಾಷಣೆಯ ವಿಚಾರದಲ್ಲಾಗಲಿ, ಅಭಿನಯದ ವಿವಿಧ ರೂಪಗಳಲ್ಲಾಗಲಿ, ಅಂಗ ವಿನ್ಯಾಸದ ಪ್ರಭೇದಗಳಲ್ಲಾಗಲಿ ಎಲ್ಲವೂ ಒಂದಕ್ಕೊಂದು ಹೊಂದಿಕೊಂಡಿವೆ.. ಆದರೆ ʻಸರ್ಟಿಫೈಡ್ ಕಾಪಿʼ ಹಾಗಾಗುವುದಿಲ್ಲ. ಲಿಂಕ್ಲೇಟರ್ನ ಚಿತ್ರದಂತೆ ಗಂಡು-ಹೆಣ್ಣು ಪಯಣಸುತ್ತಲೇ ಮುಖ್ಯಾಂಶಗಳನ್ನು ತೆರೆದಿಡುವುದನ್ನು ಕಾಣಬಹುದಾರೂ ಇಲ್ಲಿ ಮಾತು, ಭಾವಚಲನೆ, ಅಭಿನಯ ಮುಂತಾದವುಗಳಲ್ಲಿ ಸ್ಪಷ್ಟತೆಯಿಂದ ನಿಗೂಢತೆಗೆ ಜರುಗುತ್ತದೆ. ಈ ಅಂಶ ಪ್ರಾರಂಭದಲ್ಲಿ ಅಷ್ಟು ಪ್ರಬಲವಾಗಿ ಕಾಣಿಸಿಕೊಳ್ಳದಿದ್ದರೂ ಸುಮಾರು ಅರ್ಧ ಚಿತ್ರದ ನಂತರ ಬಲಗೊಳ್ಳುತ್ತಾ ಹೋಗುತ್ತದೆ. ಅದು ಇನ್ನಷ್ಟು ಮತ್ತಷ್ಟು ಪದರಗಳನ್ನು ಸೇರಿಸಿಕೊಳ್ಳುತ್ತಾ ಮುಂದುವರೆಯುತ್ತದೆ. ಈ ಎಲ್ಲಾ ವಿಶೇಷತೆಗಳು ಅಬ್ಬಾಸ್ ಕಿಯರೋಸ್ತಮಿ ಸತ್ಯ ಮತ್ತು ಮಿಥ್ಯೆ ಇವುಗಳನ್ನು ಬಳಸುತ್ತ, ಸತ್ಯ ಯಾವುದು, ಮಿಥ್ಯೆ ಯಾವುದು ಎನ್ನುವುದರ ಪರಿಶೋಧನೆಗೆ ತೊಡಗಿಕೊಳ್ಳುವುದರಿಂದಲೇ ಎಲ್ಲ ಬಗೆಯ ನಿಗೂಢತೆ ಉಂಟಾಗುತ್ತದೆ. ಕಿಯರೋಸ್ತಮಿ ತನ್ನ ಆಶಯವನ್ನು ಸಂಪೂರ್ಣವಾಗಿ ಪೂರ್ಣಗೊಳಿಸುತ್ತಾನೆ. ʻಸರ್ಟಿಫೈಡ್ ಕಾಪಿʼ ಚಿತ್ರ ಆಂಟೋನಿಯೋನಿಯ ಚಿತ್ರಗಳನ್ನು ನೆನಪಿಗೆ ಬರುವಂತೆ ಮಾಡುತ್ತದೆ.

ʻಸರ್ಟಿಫೈಡ್ ಕಾಪಿʼ ಯ ಕಥನದ ನಿರೂಪಣೆ ನೇರ ಹಾಗೂ ಸರಳ. ಚಿತ್ರ ತೆರೆದುಕೊಳ್ಳುವುದು ಲೇಖಕ ಜೇಮ್ಸ್ ಮಿಲ್ಲರ್‌ ತಾನು ಮೂಲ ಕಲಾಕೃತಿ ಮತ್ತು ಅದರ ಪ್ರತಿಕೃತಿಯ ಮೌಲ್ಯದ ಬಗ್ಗೆ ಬರೆದ ಪುಸ್ತಕದ ಬಿಡುಗಡೆಯ ಸಂದರ್ಭದ ದೃಶ್ಯದಿಂದ. ಪ್ರಾರಂಭದಲ್ಲಿ ವೇದಿಕೆಯಲ್ಲಿ ಪುಸ್ತಕವೊಂದೇ. ಯಾರೂ ಇರದೆ ಪುಸ್ತಕದ ಆ ಹೆಸರಿನ ಪ್ರಾಮುಖ್ಯತೆಯನ್ನು ಬಿಂಬಿಸುತ್ತದೆ. ವ್ಯವಸ್ಥಾಪಕರೊಬ್ಬರು ಅತಿಥಿಗಳು ಬರುವುದು ಕೊಂಚ ತಡವಾಗಿದೆ ಎಂದಷ್ಟೇ ಹೇಳುತ್ತಾರೆ. ಪುಸ್ತಕದ ಬಿಡುಗಡೆಗೆ ಸಂಬಂಧಿಸಿದಂತೆ ವೇದಿಕೆಯಲ್ಲಿ ಬೇರೆ ಯಾರೂ ಇಲ್ಲದಿರುವುದೂ ಗಮನ ಸೆಳೆಯುತ್ತದೆ. ಮಧ್ಯ ವಯಸ್ಸಿನ, ಸಾಕಷ್ಟು ಬಿಳಿಗೂದಲಿನ, ಸಪೂರನಾದ ಜೇಮ್ಸ್ ಬಂದು ಮಾತನಾಡಲು ಪ್ರಾರಂಭಿಸುತ್ತಿದ್ದಂತೆ ಮುಂಭಾಗದ ಮೊದಲ ಸಾಲಿನಲ್ಲಿ ನಡು ವಯಸ್ಸಿನ. ಚುರುಕುಗಣ್ಣಿನ ಎಲ್ಲೆ ಬಂದು ಕುಳಿತುಕೊಳ್ಳುತ್ತಾಳೆ. ಇಬ್ಬರ ಉಡುಗೆಯಲ್ಲಿ ವಿಶೇಷವೇನಿರುವುದಿಲ್ಲ. ಅವಳ ಜೊತೆಗೆ ಬಂದಿರುವ ಹತ್ತು ಹನ್ನೆರಡು ವರ್ಷದ ಹುಡುಗನೊಬ್ಬ ಕಿರಿಕಿರಿ ಮಾಡುವುದು ನಡೆದಿರುತ್ತದೆ. ಅವಳು ಪಕ್ಕದ ಸೀಟಿನಲ್ಲಿ ಇದ್ದವರಿಗೆ ತನ್ನ ಗುರುತಿನ ಚೀಟಿ ಕೊಟ್ಟು ಜೇಮ್ಸ್ ಗೆ ತಲುಪಿಸುವಂತೆ ಪಿಸುಮಾತಿನಲ್ಲಿ ಹೇಳಿ ಹೋಗುತ್ತಾಳೆ.

ಚಿತ್ರಗಳ ನಿರೂಪಣೆಯಲ್ಲಿ ಅವನ ಒಲವು ಇತರ ಬಗೆಯ ಚಿತ್ರಿಕೆಗಳಿಗಿಂತ‌ ಸಮೀಪ ಚಿತ್ರಿಕೆ (ಕ್ಲೋಸ್‌ ಅಪ್)ಗಳ ಬಳಕೆ ಹೆಚ್ಚಾಗಿರುವುದನ್ನು ಕಾಣುತ್ತೇವೆ. ಪ್ರೇಕ್ಷಕನ ಗ್ರಹಿಕೆಗೆ ಹಾಗೂ ಸೂಕ್ಷ್ಮತೆಗೆ ಸವಾಲು ಒಡ್ಡುವಂಥ ಚಿತ್ರಗಳಿಂದ ಅವನ ಸೃಷ್ಟ್ಯಾತ್ಮಕ ಶಕ್ತಿಯ ಪರಿಚಯವಾಗುತ್ತದೆ.

ನಂತರದ ದೃಶ್ಯದಲ್ಲಿಯೇ ಜೇಮ್ಸ್ ಅವಳು ತಿಳಿಸಿದ ವಿಳಾಸದಲ್ಲಿ ಇರುತ್ತಾನೆ. ಅದೊಂದು ವಿವಿಧ ಕಲಾಕೃತಿಗಳನ್ನು ಇಟ್ಟಿರುವ ಸ್ಥಳ. ಎಲ್ಲೆ ಬಂದು ಭೇಟಿಯಾದಾಗ ಪರಸ್ಪರ ಇಬ್ಬರೂ ಮೊದಲ ಬಾರಿಗೆ ಪರಿಚಿತರಾದಂತೆ ವರ್ತಿಸುತ್ತಾರೆ. ಅಭಿನಯ ಮುತ್ತು ಹಂಚಿಕೊಳ್ಳುವ ಮಾತು, ವರ್ತನೆಗಳಲ್ಲಿ ತೀರಾ ಸಾಮಾನ್ಯ ಹಾಗೂ ಸಹಜವೆನಿಸುವ ಬಗೆಯಲ್ಲಿರುತ್ತದೆ. ಲೋಕಾಭಿರಾಮದ ಮಾತು ಮುಗಿದ ಮೇಲೆ ಎಲ್ಲೆ ಹೇಳಿದಂತೆ ಹತ್ತಿರದ ಟಸ್ಕನಿ ವಿಲೇಜಿನಲ್ಲಿ ಇರುವ ಕಲಾಕೃತಿಗಳನ್ನು ನೋಡುವ ಉದ್ದೇಶದಿಂದ ಕಾರಿನಲ್ಲಿ ಕುಳಿತು ಹೊರಡುತ್ತಾರೆ. ಮಾತು ಜೇಮ್ಸ್ ಬರೆದ ಪುಸ್ತಕದ ಬಗ್ಗೆ ತಿರುಗಿ ಅವಳು ಆವೇಳೆಗಾಗಲೇ ತಂದಿದ್ದ ಪುಸ್ತಕದ ಪ್ರತಿಗಳಿಗೆ ಸಹಿ ಮಾಡಲು ತೊಡಗುತ್ತಾನೆ. ಜೊತೆಯಲ್ಲಿಯೇ ಮೂಲ ಮತ್ತು ಪ್ರತಿ – ಇವುಗಳನ್ನು ಕುರಿತಂತೆ ಅಭಿಪ್ರಾಯ ವಿನಿಮಯವಾಗುತ್ತದೆ. ಮಾತುಗಳ ಪ್ರಮಾಣ ಪ್ರಾರಂಭದಲ್ಲಿ ಜೇಮ್ಸ್‌ನದು ಕೊಂಚ ಅಧಿಕ ಎನಿಸಿದರೂ ಬರಬರುತ್ತಾ ಅವಳ ಮಾತುಗಳು ಮೇಲುಗೈ ಪಡೆದಿದೆ ಎನಿಸುತ್ತದೆ. ಇಬ್ಬರ ಮಾತುಗಳು ವೈಯಕ್ತಿವಾದ ಸ್ವಭಾವ, ಧೋರಣೆ ಅಥವ ಇನ್ನು ಯಾವುದೇ ಅಂತರಂಗದ ವಿಷಯ ಹಾಗೂ ಭಾವನೆಗಳನ್ನು ಒಳಗೊಳ್ಳುವ ಸೂಚನೆ ಕಾಣುವುದಿಲ್ಲ. ಇವೆಲ್ಲದರಿಂದ ಸುಮಾರು ಚಿತ್ರದ ಕಾಲು ಭಾಗಕ್ಕಿಂತ ಹೆಚ್ಚಿನ ಸಮಯದ ತನಕ ಅವರಿಬ್ಬರ ನಡುವೆ ನಡೆಯುವ ಮಾತುಗಳು ವರ್ತನೆಗಳು ಆಗಷ್ಟೇ ಪರಿಚಿತರಾದ ವ್ಯಕ್ತಿಗಳು ನಡೆದುಕೊಳ್ಳುವ ರೀತಿಯಲ್ಲಿರುತ್ತವೆ. ಜೇಮ್ಸ್ ಮತ್ತು ಎಲ್ಲೆ ತೋರಿಸಲು ಉದ್ದೇಶಿದ್ದ ಟಸ್ಕನಿ ವಿಲೇಜ್ ತಲುಪುತ್ತಾರೆ. ಇಲ್ಲಿತ ತನಕ ಅವರಿಬ್ಬರು ಸಮಾನ ಅಭಿರುಚಿಯ ಪರಿಚಿತ ವ್ಯಕ್ತಿಗಳಷ್ಟೆ ಎನ್ನಿಸುತ್ತದೆ.

ಟಸ್ಕನಿ ವಿಲೇಜ್‌ ಶೇಷತೆಯನ್ನು ಹೊಂದಿರುವಂತೆ ತೋರುತ್ತದೆ. ಅಲ್ಲಿ ಪ್ರದರ್ಶನಕ್ಕಿಟ್ಟಿರುವ ವಿವಿಧ ಬಗೆಯ ಆಕೃತಿಗಳು, ಗೋಡೆಗಳ ಮೇಲಿನ ಕಲಾಕೃತಿಗಳನ್ನು ನೋಡಲು ಗುಂಪು ಗುಂಪಾಗಿ ಓಡಾಡುತ್ತಿರುವ ಜನರೊಂದು ಭಾಗವಾದರೆ, ಮದುವೆಯ ಉಡುಗೆ-ತೊಡುಗೆಗಳಲ್ಲಿ ನಿಂತು, ಕುಳಿತು ಫೋಟೋ ತೆಗೆಸಿಕೊಳ್ಳುವ ಯುವ ಗಂಡು-ಹೆಣ್ಣುಗಳು ಕಾಣುತ್ತಾರೆ. ಅವರ ನಡುವೆಯೇ ಮಾತನಾಡುತ್ತ, ಹೆಜ್ಜೆ ಹಾಕುತ್ತ ಓಡಾಡುವ ಜೇಮ್ಸ್‌ ಮತ್ತು ಎಲ್ಲೆ ಮೋನಾಲಿಸಾ ಚಿತ್ರದೆದುರು ನಿಲ್ಲುತ್ತಾರೆ. ಅದರ ಪೂರ್ವೋತ್ತರಗಳನ್ನು ಮಾತನಾಡುತ್ತ ಎಲ್ಲೆ ಮೂಲ ಮತ್ತು ಪ್ರತಿ – ಇವುಗಳನ್ನು ಕುರಿತು ತಿಳಿಸುತ್ತಾಳೆ.

ಅನಂತರ ಅವರು ಕಾಫಿ ಕುಡಿಯಲು ಅಲ್ಲೊಂದು ಕಡೆ ಹೋದಾಗ ಕಾಫಿ ತಂದು ಕೊಟ್ಟ ಮಹಿಳೆ ಜೇಮ್ಸ್‌ ಅಲ್ಲಿರದಾಗ ಅವರಿಬ್ಬರನ್ನು ಗಂಡ-ಹೆಂಡತಿ ಎಂದು ಭಾವಿಸಿ ಮಾತಿಗೆ ತೊಡಗುತ್ತಾಳೆ. ಎಲ್ಲೆ ಅದನ್ನು ಒಪ್ಪಿಕೊಂಡಂತೆ ಅವಳಿಗೆ ಉತ್ತರಿಸುತ್ತಾಳಲ್ಲದೆ ಅವನು ರೂಢಿಸಿಕೊಂಡ ಕೆಲವು ಅಭ್ಯಾಸಗಳನ್ನು ಅನ್ಯಮಾರ್ಗವಿಲ್ಲದೆ ಸ್ವೀಕರಿಕೊಂಡಿರುವ ಬಗೆಯಲ್ಲಿ ಪ್ರತಿಕ್ರಿಯಿಸುತ್ತಾಳೆ. ಮೂಲತಃ ಎಲ್ಲೆಯದು ಫ್ರೆಂಚ್‌ ಆದರೂ ಇಂಗ್ಲಿಷ್‌ ಭಾಷೆ ಗೊತ್ತು ಹಾಗೆಯೇ ಇಟಲಿಯದು ಕೂಡ ಎನ್ನುತ್ತಾಳೆ.

ಆನಂತರವೇ ಒಂದಾದ ಮೇಲೊಂದು ಸಣ್ಣ ಪ್ರಸಂಗಗಳು ಜರುಗುತ್ತವೆ. ಮದುವೆಯಾಗಿ ಅಲ್ಲಿಗೆ ಬಂದ ಜೋಡಿ ಅವರನ್ನು ಗಂಡ ಹೆಂಡತಿ ಎಂದು ತಿಳಿದುಕೊಂಡಿದ್ದಾರೆ ಎಂದು ಜೂಲಿಯೆಟ್ ಜೇಮ್ಸ್‌ಗೆ ನಸುನಗುವುನಿಂದ, ಸ್ವೀಕೃತಭಾವದಿಂದ ತಿಳಿಸುತ್ತಾಳೆ. ನಿರಾಕರಿಸುವುದಂತೂ ಇಲ್ಲವೇ ಇಲ್ಲ. ಅಷ್ಟಲ್ಲದೆ ತಾವಿಬ್ಬರು ಮದುವೆಯಾಗಿ ಹದಿನೈದು ವರ್ಷಗಳಾಗಿದೆಯೆಂದೂ ಮತ್ತು ಅಂದು ಅದರ ಆನಿವರ್ಸರಿಯೆಂದೂ ಹೇಳಿರುವುದಾಗಿ ತಿಳಿಸುತ್ತಾಳೆ. ಅವನಿಗಾದರೂ ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸುವಷ್ಟು ವಿಶೇಷವೆಂದು ತೋರುವುದಿಲ್ಲ. ಅವರನ್ನು ಗಂಡ-ಹೆಂಡತಿ ಎನ್ನುವ ಸಂಬಂಧದ ನಿಗೂಢತೆಯ ಮೊದಲ ಹಂತ. ಅನಂತರ ಆ ಯುವಜೋಡಿ ತಮ್ಮೊಡನೆ ಫೋಟೋ ಕೊಳ್ಳಲು ಅಪೇಕ್ಷೆ ಪಡುತ್ತಾರೆ. ಜೇಮ್ಸ್ ಬಲವಂತದಿಂದ ಸಹಕರಿಸುತ್ತಾನೆ.

ಅವಳು ಅವನೊಂದಿಗೆ ಓಡಾಡುವ ಸ್ಥಳಗಳೆಲ್ಲ ಅವಳಿಗೆ ಪರಿಚಿತವೆಂದು ತೋರುವ ಹಾಗೆ ವರ್ತಿಸುತ್ತಾಳೆ. ಅಲ್ಲೊಂದು ಕಡೆ ಗಂಡಸಿನ ಭುಜಕ್ಕೆ ಒರಗಿಕೊಂಡು ನಿಂತ ಹೆಣ್ಣಿನ ಪ್ರತಿಮೆಯ ಬಗ್ಗೆ ಮಾತನಾಡುತ್ತ, ಮೂಲ, ಪ್ರತಿ ಇತ್ಯಾದಿಗಳ ಬಗ್ಗೆ ಇಬ್ಬರ ಅಭಿಪ್ರಾಯಗಳು ಬೇರೆ ಬೇರೆ ಎಂದು ವಾದಿಸುವಳಲ್ಲದೆ ಕೃತಿಯೊಂದನ್ನು ಪರಿಭಾವಿಸುವುದು ಅದನ್ನು ನೋಡುವ ವ್ಯಕ್ತಿಯ ವೈಯಕ್ತಿಕ ವಿಷಯವಾಗಿರುತ್ತದೆ ಎನ್ನುತ್ತಾಳೆ. ಇದನ್ನು ಸಮರ್ಥಿಸಿಕೊಳ್ಳಲು ಅಲ್ಲಿದ್ದ ಇನ್ನೊಂದು ವಯಸ್ಸಾದ ಜೋಡಿಯ ನೆರವನ್ನೂ ಪಡೆಯುತ್ತಾಳೆ.

ಹೊಟೇಲೊಂದಕ್ಕೆ ಹೋದಾಗ ಅವಳು ಸಿಂಗರಿಸಿಕೊಂಡು ನಿನ್ನ ಹೆಂಡತಿಯನ್ನು ನೋಡು ಎಂದು ಹೇಳಿ ಅವನಲ್ಲಿ ಉಲ್ಲಾಸಗೊಳಿಸಲು ಪ್ರಯತ್ನಿಸುತ್ತಾಳೆ. ಈ ಪ್ರಸಂಗದಲ್ಲಿಯೂ ಅವಳು ಅವನ ಹೆಂಡತಿ ಎನ್ನುವುದನ್ನು ಸ್ಥಿರಪಡಿಸುತ್ತಾಳೆ – ಅದು ನಿಜ ಎನ್ನಿಸುವಂತೆ. ಅವಳು ಮದುವೆಯ ದಿನಾಚರಣೆಯ ಬಗ್ಗೆ ಮತ್ತೆ ತಿಳಿಸುತ್ತಾಳೆ. ಆದರವನಿಗೆ ಅಷ್ಟು ಗಮನವಿರುವುದಿಲ್ಲ. ಅವಳು ಪಾತ್ರವೆನ್ನುವಂತೆ ಭಾವಿಸುತ್ತಾನೆ. ಅವಳೊಂದಿಗೆ ಸಿಟ್ಟಿಗೇಳುತ್ತಾನೆ. ಅನಂತರ ಮತ್ತೆ ಸಾವಧಾನದ ಭಾವ ಇಬ್ಬರಲ್ಲೂ ಮೂಡುವುದಕ್ಕೆ ಅವಳದೇ ಮೊದಲ ಹೆಜ್ಜೆ.

ಅನಂತರದ ಮುಖ್ಯ ಪ್ರಸಂಗವೆಂದರೆ ತಾವು ಮೊದಲ ವರ್ಷದ ಮದುವೆಯ ದಿನಾಚರಣೆಗೆ ಎಲ್ಲೆ ಬಂದದ್ದು, ಅಲ್ಲಿಯದೇ ರೂಮೊಂದರಲ್ಲಿ ತಂಗಿದ್ದನ್ನು ಬಿಡಿ, ಬಿಡಿಸಿ ಹೇಳಿ ತೋರಿಸುತ್ತ ಅತ್ತಿತ್ತ ಅವನನ್ನೂ ಓಡಾಡುವಂತೆ ಮಾಡುತ್ತಾಳೆ, ಹಿಂದಿನ ಹಲಕೆಲವನ್ನು ನೆನಪಿಸುತ್ತಾಳೆ. ಆದರೆ ಅವನಿಗೊಂದೂ ನೆನಪಿಗೆ ಬಂದಂತೆ ವರ್ತಿಸುವುದಿಲ್ಲ. ಪ್ರತಿಯೊಂದು ಹೊಸತೆನಿಸುತ್ತದೆ. ತಾವು ಗಂಡ-ಹೆಂಡಿರು ಎನ್ನುವುದನ್ನು ಸ್ವೀಕರಿಸಿದಂತೆ ತೋರುವುದಿಲ್ಲ.

ಅಬ್ಬಾಸ್‌ ಕಿಯರೋಸ್ತಮಿ ಈ ಕಥನದ ಮೂಲಕ ಅವರಿಬ್ಬರ ಸಂಬಂಧದಲ್ಲಿ ನಿಜವಾದದ್ದು ಯಾವುದು, ಸುಳ್ಳಾದದ್ದು ಯಾವುದು ಎನ್ನುವುದರ ನಿಗೂಢತೆಯನ್ನು ಕಾಪಾಡಿಕೊಂಡು ಬರಲು ಸಮರ್ಥನೆನಿಸಿದ್ದಾನೆ. ತನ್ನ ಆಶಯವನ್ನು ನೆರವೇರಿಸಿಕೊಳ್ಳುವ ಸಲುವಾಗಿ ಒಂದು ಹಂತದಲ್ಲಿ ಅವಳನ್ನು ತಾನು ಬರೆಯಲಿರುವ ಕಾದಂಬರಿಯ ಪಾತ್ರವೆನ್ನುವ ಹಾಗೆ ನಡೆದುಕೊಳ್ಳುತ್ತಾನೆ ಎನ್ನುವುದೂ ನಿಜವೆ.

ಇಡೀ ಚಿತ್ರದಲ್ಲಿ ಪಾತ್ರವಹಿಸಿರುವ ಎರಡೂ ಪಾತ್ರಗಳು ಮುಖ್ಯವಾಗಿ ಎಲ್ಲೆ ಪಾತ್ರದ ಜೂಲಿಎಟ್‌ ಬಿನೋಕೆ ಅಭಿನಯವಂತೂ ಕಾನ್‌ ಚಿತ್ರೋತ್ಸವದಲ್ಲಿ ಅತ್ಯುತ್ತಮ ಅಭಿನೇತ್ರಿ ಪ್ರಶಸ್ತಿಗೆ ಪಾತ್ರವಾದದ್ದು ಅತ್ಯಂತ ಸಮರ್ಥನೀಯ. ಹಾಗೆಯೇ ಜೇಮ್ಸ್‌ ಮಿಲ್ಲರ್‌ ಪಾತ್ರದ ವಿಲಿಯಂ ಶಿಮೆಲ್‌ ಅಭಿನಯ ಕೂಡ.