ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.  ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ನಕ್ಷತ್ರ ಬರೆದ ದಿನದ ಕವಿತೆ.

ನನ್ನ ಮುದ್ದು ಮತಿಭ್ರಮಣೆಗೆ
ನೀನೇ ಏನಾದರೂ ಕೊಡಬೇಕಷ್ಟೇ
ಏನಿಲ್ಲದಿದ್ದರೂ ಯಾರೋ
ಚುಂಬಿಸಿದ ತುಟಿಯನ್ನಾದರೂ!

ಗೊತ್ತು ನನಗೆ
ಎಲ್ಲಾ ಮುಗಿಸಿದ ಹೊತ್ತು
ಆ ದ್ವೀಪದಲ್ಲಿ ಬೇಕಂತಲೇ
ಬೆನ್ನು ಮಾತ್ರ ಒದ್ದೆಯಾಗುವಂತೆ
ಮಲಗಿ ಮೇಲೆ ನೋಡುವುದು
ಮತ್ತು ಈ ತಡರಾತ್ರಿಯಲ್ಲಿ
ನಿನ್ನ ನೋಡಿ ತಡೆಯಲಾರದೆ
ನಿನ್ನ ಕಣ್ಣಲ್ಲೇ ನನಗೆ ಮುಕ್ತಿ
ದೊರೆಯುವುದು

ಹೊಸ ಬೆಳಕಿಗೆ ನೀನು
ಕಾಲುದಾರಿ ಅಡ್ಡಹಾದಿಯಲ್ಲಿ
ಹೇಳದೆ ನಡೆವಾಗ, ನಿನ್ನ ಬಗಲಲ್ಲಿ
ಜೋಳಿಗೆಯಂತೆ ಸುಸ್ತಾಗಿ
ಜೋಲಾಡಿಕೊಳ್ಳುತ್ತೇನೆ
ತುಂಬಿಸಿಕೊಂಡಷ್ಟು
ಹೆಗಲು ಭಾರವಾದರೆ
ನಾನು ಹಗುರಾಗುವುದು
ನೀನು ತಬ್ಬಿಬ್ಬುಗೊಳಿಸುವ ರೀತಿಗೆ