ಕೆಲವು ಮತ್ತೆ ಮತ್ತೆ ಕಾಡುವ ಊರುಗಳು. ನಾವು ನೋಡದಿದ್ದರೂ ನಮ್ಮೊಳಗೆ ಬೆಳೆದಿರುವಂಥದ್ದು. ಮತ್ತೆ ಕೆಲವು ಕಲ್ಪನೆಗಳು. ಕಲ್ಪನೆಗಳು ನಮ್ಮನ್ನು ಒಂದು ವಿಚಿತ್ರ ಭಾವದಲ್ಲಿ ಸಿಲುಕಿಸುತ್ತವೆ. ರಾಮಾಚಾರಿ ಮತ್ತು ಚಿತ್ರದುರ್ಗ…. ನೋಡಿ. ಅವಿನಾಭಾವ ಸಂಬಂಧಚಿತ್ರದುರ್ಗ ನೋಡದೆ ಇದ್ದರೂ.. ನಾಗರಹಾವು ಮೂಲಕ ನಾವು ಬಂಡೆ, ಬಿಸಿಲು, ನೆರಳಿನ ತಪ್ಪಲನ್ನು ತಪಿಸಿ ಅನುಭವಿಸುತ್ತೇವೆ. ರಾಮಾಚಾರಿ ಮತ್ತು ಚಿತ್ರದುರ್ಗವನ್ನು ಬೇರ್ಪಡಿಸಲು ಸಾಧ್ಯವೇ.. ನಾನು ಬೆಂಗಳೂರಿನ ರಾಮಾಚಾರಿ ಎಂದು ಯಾರಾದ್ರೂ ಹೇಳಿದರೆ.. ಕೂಡಲೇ.. ನಾವು ಅರ್ಥ ಮಾಡಿಕೊಳ್ಳುತ್ತೇವೆ.. ಆಗ ಗುಣ ಗ್ರಾಹಿ ಆಗುತ್ತೇವೆ.
ಬಿ.ಕೆ.ಸುಮತಿ ಬರೆದ ಲೇಖನ

 

ಊರು ಎನ್ನುವುದು ನಮಗೆ ಉಸಿರಿನಷ್ಟೇ ಮುಖ್ಯ. ಎಲ್ಲೇ ಇರಲಿ, ಹೇಗೆ ಇರಲಿ, ನಾವು ಆಡಿ-ಬೆಳೆದ ನಮ್ಮೂರು ನಮಗೆ ಎಂದೂ ಚೆಂದ.

“ನಿಮ್ಮೂರು ಯಾವುದು” ಎಂದು ಶುರುವಾಗುವ ಸಂಭಾಷಣೆ, ‘ನಮ್ಮೂರೇ ಚಂದ’ ಎಂದು ವಾದಕ್ಕೆ ಇಳಿಯುವುದನ್ನು ಕಾಣುತ್ತೇವೆ. ಕೇಳಿರುವ, ಆದರೆ ನಾವು ಕಾಣದಿರುವ ಊರುಗಳ ಬಗ್ಗೆ, ಒಂದು ಅಚ್ಚರಿ, ಕುತೂಹಲ ನಮ್ಮೊಳಗೆ ಸದಾ ಜಾಗೃತವಾಗಿರುತ್ತದೆ. ಊರು ಒಬ್ಬ ವ್ಯಕ್ತಿಯ ಜೀವನದಲ್ಲಿ ಎಷ್ಟು ಮುಖ್ಯ ಅಲ್ಲವೇ..

ಪ್ರತಿಯೊಬ್ಬರೂ ತಮ್ಮ ಬಾಲ್ಯದ ಊರು, ತನಗೆ ಜೀವನ ಕೊಟ್ಟ ಊರು, ಇವುಗಳನ್ನು ಮನದಾಳದ ಬೇರುಗಳಾಗಿ ಪೋಷಿಸಿ ನೀರೆರೆದಿರುತ್ತಾರೆ. ಊರಿನ ಹಂಗು ತೊರೆದವರು, ಊರನ್ನೇ ಉಸಿರಾಗಿಸಿಕೊಂಡವರು, ಊರನ್ನೇ ಬಂಡವಾಳ ಮಾಡಿಕೊಂಡು ಸರಕಾಗಿ ಸಿದವರು, ಕಾಣಿಸುತ್ತಾರೆ.

“ನೀನೊಬ್ಬನೇ ಬಾರೋ ಕರೆ ತರಬೇಡ, ಕಹಿ ನೆನಪನ್ನು”.. ಎಂದು ಹೇಳತ್ತೆ ಹೆಚ್.ಎಸ್. ವೆಂಕಟೇಶ ಮೂರ್ತಿ ಅವರ ಕವನ… ಜಾತಿ, ಕುಲ, ಊರು, ಕೇರಿ, ವಂಶಾವಳಿ ಬೇಡ.. ನೀನೊಬ್ಬ ಬೇಕು ಅಷ್ಟೇ. ಹೆಸರು, ಊರೂ ಕೂಡ ಬೇಡ.. ನಮ್ಮ ಬದುಕಿಗೆ ನಾವಿಕರು ನಾವೇ ಎಂಬ ಅರ್ಥದ್ದು.

ಊರು ಯಾವುದೇ ಇರಲಿ, ಅಲ್ಲಿ ಜನ, ಮನಸು, ಬಂಧನ, ಬಣ್ಣ, ಬೆವರು, ಇದೆ. ಹಾಗಾಗಿಯೇ ನಮಗೆ ಒಂದೊಂದು ಊರು ಒಂದೊಂದು ರೀತಿ ಆಕರ್ಷಿಸುತ್ತದೆ. ಸಾಹಿತ್ಯದಲ್ಲಿ ಕಂಡುಬರುವ ಊರು-ಕೇರಿಗಳು, ಅವುಗಳ ಜೊತೆ ನಮ್ಮ ನಂಟು. ಇವು ಕೂಡ ಒಂದು ವಿಚಿತ್ರ ಬಂಧ.

ಕೆಲವು ಮತ್ತೆ ಮತ್ತೆ ಕಾಡುವ ಊರುಗಳು. ನಾವು ನೋಡದಿದ್ದರೂ ನಮ್ಮೊಳಗೆ ಬೆಳೆದಿರುವಂಥದ್ದು. ಮತ್ತೆ ಕೆಲವು ಕಲ್ಪನೆಗಳು. ಈ ಕಲ್ಪನೆಗಳು ನಮ್ಮನ್ನು ಒಂದು ವಿಚಿತ್ರ ಭಾವದಲ್ಲಿ ಸಿಲುಕಿಸುತ್ತವೆ. ರಾಮಾಚಾರಿ ಮತ್ತು ಚಿತ್ರದುರ್ಗ…. ನೋಡಿ. ಅವಿನಾಭಾವ ಸಂಬಂಧ… ಚಿತ್ರದುರ್ಗ ನೋಡದೆ ಇದ್ದರೂ.. ನಾಗರಹಾವು ಮೂಲಕ ನಾವು ಬಂಡೆ, ಬಿಸಿಲು, ನೆರಳಿನ ತಪ್ಪಲನ್ನು ತಪಿಸಿ ಅನುಭವಿಸುತ್ತೇವೆ. ರಾಮಾಚಾರಿ ಮತ್ತು ಚಿತ್ರದುರ್ಗವನ್ನು ಬೇರ್ಪಡಿಸಲು ಸಾಧ್ಯವೇ..

(ಚಿತ್ರದುರ್ಗದ ಕೋಟೆ-ಕಲ್ಲು)

ನಾನು ಬೆಂಗಳೂರಿನ ರಾಮಾಚಾರಿ ಎಂದು ಯಾರಾದ್ರೂ ಹೇಳಿದರೆ.. ಕೂಡಲೇ.. ನಾವು ಅರ್ಥ ಮಾಡಿಕೊಳ್ಳುತ್ತೇವೆ.. ಆಗ ಗುಣ ಗ್ರಾಹಿ ಆಗುತ್ತೇವೆ. ಚಿತ್ರದುರ್ಗ ನೋಡಿರುವವರು ಗ್ರಹಿಸುವ ಶೈಲಿ ಬೇರೆ. ಬೆಂಗಳೂರು ಅಥವಾ ಧಾರವಾಡ ಮಂದಿ ಗ್ರಹಿಸುವ ಶೈಲಿ ಬೇರೆ. ತ. ರಾ. ಸು. ರಾಮಾಚಾರಿಯನ್ನು ಬೇರೆ ಯಾವುದಾದರೂ ಜಾಗದಲ್ಲಿ ಸೃಷ್ಟಿ ಮಾಡಲು ಆಗುತ್ತಿತ್ತೆ?

ಮಕ್ಕಳು Alice in Wonderland ಓದುವಾಗ… ಎಚ್. ಎಸ್. ವೆಂಕಟೇಶಮೂರ್ತಿ ಕವನದ ಹಾಗೆ. ಶುಭ್ರಾತಿಶುಭ್ರ ಮನಸ್ಥಿತಿಯಲ್ಲಿ ಇರುತ್ತಾರೆ. ಹ್ಯಾರಿ ಪಾಟರ್ ಓದುವಾಗ ಅನುಭವಿಸುವ ರೋಮಾಂಚನ!.. ಅದು ಯಾವ ಊರಾದರೇನು.. ಭಾಷೆ ಯಾವುದಾದರೇನು..ಹಾಗೇ.. ಮಾಲ್ಗುಡಿ ಊರನ್ನು ಯಾರೂ ನೋಡಿಲ್ಲ. ಆದರೆ ಎಲ್ಲರೂ R K ನಾರಾಯಣ್ ತೋರಿಸಿದ ಊರನ್ನು ನೋಡಿದ್ದಾರೆ.. ಕಥೆಗೊಂದು ಊರೋ.. ಅಥವಾ ಊರಿಗೊಂದು ಕಥೆಯೋ..

ಊರುಭಂಗ ಮಾಡುವುದು ಕಷ್ಟ. ಯು. ಆರ್. ಅನಂತಮೂರ್ತಿ ಅವರ ಒಂದು ಕಾದಂಬರಿ ಭಾರತೀಪುರ. ಅವರು ಕಥೆ ಉದ್ದಕ್ಕೂ ಭಾರತೀಪುರ ಎಂದು ಹೇಳಿದರೂ.. ನಮಗೆ ಅದು ಕಲ್ಪಿತ ಊರು ಎನಿಸುವುದಿಲ್ಲ. ಅದು ಇದೇ ಊರು ಎಂದು ಗುರುತಿಸುತ್ತೇವೆ. ಎಷ್ಟು ವಿಚಿತ್ರ ಅಲ್ಲವೇ..

(Alice in Wonderland)

ಪ್ರತಿಯೊಬ್ಬರೂ ತಮ್ಮ ಬಾಲ್ಯದ ಊರು, ತನಗೆ ಜೀವನ ಕೊಟ್ಟ ಊರು, ಇವುಗಳನ್ನು ಮನದಾಳದ ಬೇರುಗಳಾಗಿ ಪೋಷಿಸಿ ನೀರೆರೆದಿರುತ್ತಾರೆ. ಊರಿನ ಹಂಗು ತೊರೆದವರು, ಊರನ್ನೇ ಉಸಿರಾಗಿಸಿಕೊಂಡವರು, ಊರನ್ನೇ ಬಂಡವಾಳ ಮಾಡಿಕೊಂಡು ಸರಕಾಗಿ ಸಿದವರು, ಕಾಣಿಸುತ್ತಾರೆ.

ಚಂದಮಾಮ ಕಥೆಗಳಲ್ಲಿ ಬರುವ ಮಗಧ, ಪಾಂಚಾಲ, ವಿದರ್ಭ, ಕಳಿಂಗ.. ಎಲ್ಲಾ ನಮ್ಮ ನಮ್ಮ ಊಹೆಯಂತೆ. ಕಥೆಗಾರನಿಗೆ ಊರಿನ ಹಂಗು ಇದೆಯೇ..?

ವಿಮರ್ಶಕ ಎಚ್. ಎಸ್. ರಾಘವೇಂದ್ರರಾವ್ ಹೇಳಿದರು.. “ಹಾಗೇನಿಲ್ಲ.. ಕಥೆಯನ್ನು ಎಲ್ಲಿ ಕುಳಿತರಲ್ಲಿ ಕಲ್ಪಿಸುವ ಹಾಗೇ ಇರಬೇಕು. ಊರು ಮತ್ತು ಪಾತ್ರ ಮಾನವೀಯ ಸಂಬಂಧಗಳ ನೆಲೆಗಟ್ಟಿನಲ್ಲಿ ಇದ್ದರೆ, ಸಂಬಂಧ ಸ್ರವಿಸುವ ರಸ ಮುಖ್ಯವೇ ಹೊರತು ಎಲ್ಲಿ ನಡೆಯಿತು ಎಂಬುದಲ್ಲ. ಆದರೆ ಇತಿಹಾಸ ಪ್ರಚೋದಿತ ಕೃತಿಗಳಿಗೆ ಊರು ಮುಖ್ಯ” ಎಂದರು.

ನೇಮಿಚಂದ್ರ ಅವರ ‘ಪೆರುವಿನ ಕಣಿವೆಯಲ್ಲಿ’, ಮಾಸ್ತಿ ಅವರ ‘ಚಿಕ್ಕ ವೀರ ರಾಜೇಂದ್ರ’, ಕೆ ವಿ. ಅಯ್ಯರ್ ಅವರ ‘ಶಾಂತಲೆ’, ‘ಕಿತ್ತೂರು ರಾಣಿ ಚೆನ್ನಮ್ಮ’ ಮುಂತಾದವು, ಊರೇ ಪ್ರಧಾನವಾದವು ಎಂಬಂತದ್ದು.. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’, ‘ಕಾರಂತರ ಮೂಕಜ್ಜಿಯ ಕನಸು’, ಅಥವಾ ‘ಮರಳಿ ಮಣ್ಣಿಗೆ’, ತೇಜಸ್ವಿ ಅವರ ‘ಕರ್ವಾಲೋ’ … ಇವುಗಳಲ್ಲಿ ನಾವು ಏನನ್ನು ಕಲ್ಪಿಸುತ್ತೇವೆ? ಯಾರನ್ನು ನೋಡುತ್ತೇವೆ? ಒಂದು ಕಥೆಗೆ ನಿರ್ದಿಷ್ಟ ಊರು ಗುರುತಿಸುವುದು ಲೇಖಕ. ಓದುಗನಿಗೆ ಅದು ಎಷ್ಟು ಮುಖ್ಯ?

ನನ್ನ ಕಥೆ ಮೂಡಿಗೆರೆಯಲ್ಲಿ ಮಾತ್ರ ನಡೆಯುತ್ತದೆ ಎಂದು ತೇಜಸ್ವಿ ಹೇಳಿದರೆ ಅದರ ಸಾರ್ವಭೂಮಿಕಾ ವಲಯ, ಮಿತಿಗೆ ಒಳಪಡುತ್ತದೆ. ಭೈರಪ್ಪ ಅವರ ಸಕಲೇಶಪುರ, ಸಮೀಪದ ಹೆಸರು ಹೊತ್ತ ಹಳ್ಳಿಗಳು ನಮ್ಮ ಮನದಲ್ಲಿ ಹೇಗೆ ಅರಳುತ್ತವೆ?

“ನನ್ನ ಕಾದಂಬರಿಯ ಭಾವ ಪ್ರಪಂಚಕ್ಕೆ ಸೇರಿದ ಹನೆಹಳ್ಳಿ, ದಾದರ್, ಮುಂಬೈ, ವಡಾಲ, ಗಿರ್ಗಾಂವ್, ಮೊದಲಾದ ದಿವ್ಯ ಹೆಸರು ಹೊತ್ತ ಭೂ ಪ್ರದೇಶ ಇಂದು ವಾಸ್ತವ ಜಗತ್ತಿನಲ್ಲಿ ನೋಡಲು ಸಿಗುವುದು ಒಂದು ಅತ್ಯದ್ಭುತ ಆಕಸ್ಮಿಕ” ಎನ್ನುತ್ತಾರೆ ಯಶವಂತ ಚಿತ್ತಾಲರು.. ಚಿಂತನೆ ವಿಸ್ತಾರಗೊಳ್ಳುತ್ತ ಸಾಗುತ್ತದೆ. ಊರು ಮನುಷ್ಯನ ಹಾಗೇ. ಇತಿ ಮಿತಿ ಹೊತ್ತು ನಮ್ಮನ್ನು ನಡೆಸುತ್ತದೆ.

ಜಯಂತ ಕಾಯ್ಕಿಣಿ ಅವರ ಮುಂಬೈ ಕಥೆಗಳನ್ನು ಓದಿ ಆ ಪ್ರದೇಶ ನೋಡಲು ಹುಡುಕಿ ಹೋದವರು ಇದ್ದಾರೆ. ಒಮ್ಮೆ ಮುಂಬೈ ನೋಡಬೇಕು ಎಂದು ಕನವರಿಸುತ್ತಾ ಅದನ್ನು ಕಲ್ಪನೆಗೆ ಅಳವಡಿಸಿಕೊಂಡವರಿದ್ದಾರೆ..” ಇದೇ ಇದೇ ಅವರು ಹೇಳಿದ್ದು” ಎಂದು ಆನಂದಿಸಿದವರು ಇದ್ದಾರೆ. ಮುಂಬೈ ಬಿಟ್ಟು ಈ ಕಥೆ ಊಹಿಸಲು ಸಾಧ್ಯವೇ..? ಮುಲುಂಡಿಯ ಲಾಲ್ ಬಹಾದ್ದೂರ್ ರಸ್ತೆ, ಬೆಂಗಳೂರಿನ ಗಾಯನ ಸಮಾಜ ರಸ್ತೆ ಆಗುತ್ತದೆಯೇ? ಶಿವಾಜಿ ಪ್ರತಿಮೆ ಕೆಂಪೇಗೌಡನ ಪ್ರತಿಮೆ ಎಂದು ಊಹಿಸಲು ಆಗುತ್ತದೆಯೇ..

(ಪೆರು)

“ನಮಗೆ ಪಾತ್ರ ಮುಖ್ಯ, ಭಾವ ಮುಖ್ಯ” ಎಂದರು ಯುವ ಕವಯತ್ರಿ ನಾಗಶ್ರೀ. “ಸಂವೇದನೆ ಮುಖ್ಯ ಆದಾಗ ಸ್ಥಳ ಬೇಕಾಗಿಲ್ಲ, ಅದು ಸೃಷ್ಟಿಕರ್ತನ ಕಥನ.. ಆತನ ಪ್ರಾದೇಶಿಕ ಅಗತ್ಯ ” ಎನ್ನುವುದು ಮತ್ತೋರ್ವ ಕತೆಗಾರ್ತಿಯ ಅನಿಸಿಕೆ.

“ಊರೇ ಏಕೆ.. ಕಥೆಗಳಲ್ಲಿ ಬರುವ ಆಸ್ಪತ್ರೆ, ರಂಗಮಂದಿರ, theater ಎಲ್ಲವನ್ನೂ ನಾವು ನೋಡಿರುವಂಥದ್ದಕ್ಕೆ ಕಲ್ಪಿಸು ತ್ತೇವೆ. ಬೆಟ್ಟ, ಗುಡ್ಡ, ನದಿ ಕೂಡ. ಸೌಂದರ್ಯ ಎಂದಾಗ ಅವರವರ ಕಣ್ಣಿಗೆ ಎನ್ನುತ್ತೇವಲ್ಲ, ಹಾಗೇ..” ಅಂದವರು ಓದುಗ ನಾಗರಾಜ್.

ಕಥೆಯು ಊರಿನ ಒಳಗೋ.. ಊರು ಕಥೆಯ ಒಳಗೊ. ಊರು ಕಥೆಗಳೆರಡೂ ನಮ್ಮೊಳಗೋ. ನಾವು ಲೇಖಕನ ಒಳಗೋ, ಲೇಖಕ ನಮ್ಮೊಳಗೋ.. ಲೇಖಕ ನಾವು ಎರಡೂ ಊರೊಳಗೋ… ನಿಮ್ಮೂರೆ ನಮ್ಮೂರು, ನಿಮ್ಮೋರೆ ನಮ್ಮೋರು.. ಎಂಬ ಆಪ್ತ ಮನಸು, ಚಿತ್ರ ಚೈತ್ರ ಮೂಡಿಸಲಿ. ವಿಶ್ವವೇ ನಮ್ಮೂರಾಗಲಿ. ನಮ್ಮೂರೇ ವಿಶ್ವವಾಗಲಿ.