ಜನ ಬೀದಿಯಲ್ಲಿ ಆಡಿಕೊಂಡರು:
“ಕಲ್ಯಾಣಸ್ವಾಮಿ ಧರ್ಮಿಷ್ಠ! ದುಷ್ಟ ಶಿಕ್ಷಕ-ಶಿಷ್ಟ ರಕ್ಷಕ!”
ಆದರೆ, ಹಲವು ಶತಮಾನಗಳವರೆಗೆ ತಿಂದು ಉಂಡರೂ ಮಿಗುವ ಸಿರಿವಂತಿಕೆಯಿದ್ದ ಕೆಲವರು ಮಾತ್ರ ಮುಚ್ಚಿದ ಬಾಗಿಲುಗಳ ಹಿಂದಿನಿಂದ ಗೊಣಗಿದರು:
“ಶುರುವಾಯಿತು ಕಾಟಕಾಯಿ. ಕುಂಪಣಿ ಸರಕಾರವೇ ಇದ್ದಿದ್ದರೆ ವಾಸಿಯಾಗಿತ್ತು.”
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು’ ಸರಣಿಯ ಹದಿನಾಲ್ಕನೆಯ ಕಥಾನಕ ಈ ಭಾನುವಾರದ ನಿಮ್ಮ ಓದಿಗಾಗಿ.

 

ವಿಟ್ಲದ ತುಂಡರಸನಿಗೆ ಭೇಟಿಗೆ ಬರಬೇಕೆಂದು ಸವಾರರಿಬ್ಬರೊಡನೆ ಕಲ್ಯಾಣಸ್ವಾಮಿ ಕರೆಯೋಲೆ ಕಳುಹಿದ…
ಕಪ್ಪ ಕಾಣಿಕೆಗಳೊಡನೆ ಧಾವಿಸಿ ಬಂದ ಆ ಅರಸನನ್ನು ಉದ್ದೇಶಿಸಿ ರಾಜ್ಯಪಾಲನೆಂದ :
“ನಾವು ಹೇಳಿಕಳಿಸೋವರೆಗೂ ಬರಬಾರದು ಅಂತ ಮಾಡಿದ್ದಿರೋ?”
ಮಾತಿಗಾಗಿ ತಡವರಿಸಿದ ವಿಟ್ಲದ ಅರಸು.
“ತಮ್ಮ ಮನೋಧರ್ಮ ತಿಳಿಯದೆ ಸಂಕೋಚವಾಯ್ತು.”
“ಈಗ ನಮ್ಮ ಮನೋಧರ್ಮ ತಿಳೀತೇನು? ನಮ್ಮ ಧ್ಯೇಯ ಏನೂಂತ ಅರ್ಥಮಾಡಿಕೊಂಡಿರೋ?”
“ಹೌದು”
“ಕುಂಪಣಿಯವರನ್ನು ಏನು ಮಾಡೋಣ?”
“ಯುದ್ಧವೇ ಸರಿ. ನಮ್ಮಲ್ಲಿ ಶಕ್ತಿ ಸಾಲದೆ ಈವರೆಗೂ ಸುಮ್ಮನಿದ್ದೆವು.”
“ನಮ್ಮ ಜತೆ ಬರುತ್ತೀರೇನು ಹಾಗಾದರೆ?”
ಉತ್ತರ ನಿಧಾನವಾಯಿತು.

“ನನಗೆ ವಯಸ್ಸಾಯ್ತು…”
“ಈ ಯುವಕರನ್ನು ನೋಡಿದೀರೇನು?” ಎಂದ ಕಲ್ಯಾಣಸ್ವಾಮಿ. ವೃದ್ಧ ಸೋಮಯ್ಯನೆಡೆಗೆ ಬೊಟ್ಟು ಮಾಡುತ್ತ, ನಸುನಕ್ಕು.
ತನಗಿಂತಲೂ ಹಿರಿಯನಾಗಿದ್ದ ಸೋಮಯ್ಯನನ್ನು ಕಂಡು ವಿಟ್ಲದ ಅರಸನ ಮುಖ ಕಪ್ಪಿಟ್ಟಿತು. ವೃಥಾ ಮಾತು ಬೆಳೆಸುವುದರಲ್ಲಿ ಅರ್ಥವಿಲ್ಲವೆಂದು, ಕಲ್ಯಾಣಸ್ವಾಮಿ ಹೇಳಿದ:
“ಹೋಗಲಿ ಬಿಡಿ. ವಿಟ್ಲದಿಂದ ಆಯುಧ ಸಮೇತರಾಗಿ ಯೋಧರನ್ನು ಕಳಿಸ್ಕೊಡಿ.”
ಬದುಕಿದೆನೆಂದು ಸರಾಗವಾಗಿ ಉಸಿರು ಬಿಡುತ್ತ ಆ ತುಂಡರಸನೆಂದ:
“ತಮ್ಮ ದಂಡನ್ನು ಸೇರಬೇಕೂಂತ ಜನರು ಆಗಲೆ ಮಾತಾಡ್ತಾ ಇದ್ದರು.”
“ಹಾಗೋ? ಒಳ್ಳೇದು. ನೀವು ಕೊಡಗು ರಾಜರ ಸ್ನೇಹಿತರೆಂತಲೇ ಭಾವಿಸ್ತೀನಿ. ಕಡಮೆಯೆಂದರೆ ನೂರು ಜನ ಸೈನಿಕರಾದರೂ ವಿಟ್ಲದಿಂದ ಬರಬೇಕು.”
“ನೂರೈವತ್ತು ಜನರನ್ನು ಕಳಿಸ್ತೇನೆ.”
ಸಾಯುವವರು ಬೇರೆಯವರ ಮಕ್ಕಳೆಂದಾದರೆ ನೂರೈವತ್ತೇನು, ಇನ್ನೂರೇನು – ಎಂದು ಮನಸಿನೊಳಗೇ ನಗುತ್ತ, ಕಲ್ಯಾಣಸ್ವಾಮಿ ಹೇಳಿದ:
“ಆಗಲಿ, ಇವತ್ತು ನಮ್ಮಲ್ಲೇ ನೀವು ಆತಿಥ್ಯ ಸ್ವೀಕರಿಸ್ಬೇಕು.”
ಅರಸು ಪುನಃ ಹಿಂದುಮುಂದು ನೋಡಿದ:
“ಕ್ಷಮಿಸಬೇಕು. ನಾವು-ತಾವು-”
“ನಿಮಗೆ ತೊಂದರೆಯಾಗುವ ಹಾಗಿದ್ದರೆ ಬೇಡ. ಬನ್ನಿ. ಶಿಬಿರವನ್ನು ನೋಡಿ ಊರಿಗೆ ಹೋಗುವಿರಂತೆ.”

…. ಹಗಲು ಪತ್ತೆಹಚ್ಚಿದ್ದ ಅರ್ಥಧಾರಿಗಳನ್ನು ಸೈನಿಕರು ಕರೆದುತಂದು, ರಾತ್ರೆ ಶಿಬಿರದಲ್ಲಿ ಯಕ್ಷಗಾನ ಕೂಟವೇರ್ಪಡಿಸಿದರು. ಯಕ್ಷಗಾನ ಪ್ರಿಯನಾಗಿದ್ದ ರಾಮಗೌಡನೇ ಆ ಕೂಟದ ಮೇಲ್ವಿಚಾರಣೆಯನ್ನು ನೋಡಿದ. ಮೆದುಳು ಮುಂದಿನ ಯೋಜನೆಯಲ್ಲೆ ನಿರತವಾಗಿದ್ದರೂ ಸೈನಿಕರ ಜತೆ ಕಲ್ಯಾಣಸ್ವಾಮಿಯೂ ಬಂದು ಕುಳಿತು ಅರ್ಥಧಾರಿಗಳ ವಾಗ್ಯುದ್ಧದ ಸುಖ ಅನುಭವಿಸಿದ.

ಕೂಟ ನಡೆಯುತ್ತಿದ್ದಂತೆ ಕಾವಲುಗಾರನೊಬ್ಬ ಬಂದು ರಾಮಗೌಡ ಕಿವಿಯಲ್ಲಿ ಪಿಸುನುಡಿದ :
“ಯಾವನೋ ಒಬ್ಬ ಸವಾರ ಬಂದವನೆ. ಸ್ವಾಮಿಯವರನ್ನು ತಕ್ಷಣ ಕಾಣ್ಬೇಕಂತೆ.”
ಎದ್ದು ಹೋದ ರಾಮಗೌಡ, ಕೆಲ ನಿಮಿಷಗಳಲ್ಲೆ ಮರಳಿ ಬಂದು ಕಲ್ಯಾಣಸ್ವಾಮಿಯನ್ನು ಕರೆದೊಯ್ದ.
ಬಂದಿದ್ದ ಸವಾರ, ಸುಬ್ರಾಯ ಹೆಗ್ಗಡೆಯ ದೂತ.

ಸವಾರನಿಗೆ ಕೇಳಿಸದಂತೆ ರಾಮಗೌಡನೊಡನೆ ಪಿಸುಧ್ವನಿಯಲ್ಲಿ ಕಲ್ಯಾಣಸ್ವಾಮಿ ವಿಚಾರಿಸಿದ :
“ಯಾರು ಈ ಹೆಗ್ಗಡೆ!”
“ಹೆಗ್ಗಡೆ? ಓ ತಿಳಿಯಿತು! ಕುಂಬಳೆಯ ಸಮೀಪ ಉತ್ತರಕ್ಕೆ ತೆಂಕುಂಬಳೆ ಅಂತ ಒಂದು ಗ್ರಾಮ ಇದೆ. ಅದರ ಪಾಳೆಯಗಾರ ಸುಬ್ರಾಯ ಹೆಗ್ಗಡೆ. ಹೆಸರು ಕೇಳಿದ್ದು ನೆನಪಿದೆ.”
“ಪಾಳೆಯಗಾರ ಅಂದಿರಾ?”
“ಹೂಂ. ವಿಜಯನಗರದ ಅರಸರು ಕೋಟೆಗಳ ರಕ್ಷಣೆಗೇಂತ ಇವರ ಹಿಂದಿನವರನ್ನು ಇಲ್ಲಿಗೆ ಕಳಿಸಿದರಂತೆ. ಇವರೆಲ್ಲಾ ಕೋಟೆಯವರು – ರಾಜಕ್ಷತ್ರಿಯ ವಂಶದವರು.”
“ವೀರರು ತಾನೆ?”
“ಹೌದು.”
ಕಲ್ಯಾಣಸ್ವಾಮಿ ಓಲೆಯನ್ನು ರಾಮಗೌಡನ ಕೈಗಿತ್ತ.

ಹಗಲು ಪತ್ತೆಹಚ್ಚಿದ್ದ ಅರ್ಥಧಾರಿಗಳನ್ನು ಸೈನಿಕರು ಕರೆದುತಂದು, ರಾತ್ರೆ ಶಿಬಿರದಲ್ಲಿ ಯಕ್ಷಗಾನ ಕೂಟವೇರ್ಪಡಿಸಿದರು. ಯಕ್ಷಗಾನ ಪ್ರಿಯನಾಗಿದ್ದ ರಾಮಗೌಡನೇ ಆ ಕೂಟದ ಮೇಲ್ವಿಚಾರಣೆಯನ್ನು ನೋಡಿದ.

“ಓದಿ ನೋಡಿ. ತಾನು ಕುಂಪಣಿಯವರ ವಿರೋಧಿ ಅಂತಲೂ ತನ್ನ ದಂಡಿನೊಡನೆ ಮಂಜೇಶ್ವರದ ಹಾದಿಯಾಗಿ ನಮ್ಮನ್ನು ಸೇರ್ಕೊಳ್ತೇನೆ ಅಂತಲೂ ಬರೆದಿದ್ದಾನೆ. ಇವನ ಉದ್ದೇಶ ಏನಿದ್ದೀತು?”
ರಾಮಗೌಡ ಓಲೆಯನ್ನು ಓದಿದ. ಹುಬ್ಬುಗಂಟಿಕ್ಕಿದ. ಸಡಿಲಿಸಿದ. ದೂರದಲ್ಲಿ ನಿಂತಿದ್ದ ದೂತನ ಕಡೆಗೊಮ್ಮೆ ನೋಡಿ, ತನ್ನ ಅಭಿಪ್ರಾಯವನ್ನಿತ್ತ.
“ಇಂಥದೇ ಉದ್ದೇಶ ಅಂತ ಹೇಳೋದು ಕಠಿಣ. ಆದರೆ ಸಹಾಯ ಮಾತ್ರ ನಮಗೆ ಬೇಕೇ ಬೇಕು. ತಾನಾಗಿ ಬರ್ತೇನೆ ಅಂದವನನ್ನು ಬಿಡೋದೆ?”
“ಅದು ನಿಜ. ಸ್ನೇಹಿತ ಅಂತಲೇ ಆತನನ್ನು ಸ್ವೀಕರಿಸೋಣ. ಆದರೆ ನಮ್ಮ ಹೆಸರಲ್ಲಿ ಕೊಲೆ ಸುಲಿಗೆ ಆಗಬಾರದು, ಅವನಿಗೆ ಉತ್ತರ ಬರೆಯೋಣ. ನಾವು ಶರತ ಹಾಕಿದ್ದೇವೆ ಅಂತ ಆತ ಭಾವಿಸಬಾರದು; ಉಪದೇಶ ಅಂತಲೂ ತಿಳೀಬಾರದು. ಹಾಗೆ ಸೂಚ್ಯವಾಗಿರ್ಬೇಕು ಒಕ್ಕಣೆ.”
“ಸರಿ”
“ನಂಜಯ್ಯನವರನ್ನು ಕರೀರಿ ಹಾಗಾದರೆ.”

….ಬಂದಿದ್ದ ದೂತ ಶಿಬಿರದ ಭೋಜನ ಶಾಲೆಯಲ್ಲಿ ಊಟ ಮಾಡಿದ. ಕಲ್ಯಾಣಸ್ವಾಮಿಯ ಸೈನಿಕರೊಡನೆ ಬೆರೆತ. ಯಕ್ಷಗಾನ ನಡೆಯುತ್ತಿದ್ದ ಕಡೆ ಕುಳಿತು ತೂಕಡಿಸಿದ. ಪ್ರಯಾಣದಿಂದ ಬಳಲಿದ್ದ ಆ ಮನುಷ್ಯ ತನ್ನ ಕುದುರೆಯನ್ನು ಕಟ್ಟಿಹಾಕಿದ್ದ ಕಡೆಗೊಮ್ಮೆ ದೃಷ್ಟಿ ಬೀರಿ, ಬಯಲಲ್ಲೇ ನಿದ್ದೆ ಹೋದ.

ಬೆಳಗಿನ ಜಾವ ಕೊಂಬು ವಾದ್ಯ ಇತರ ಸೈನಿಕರೊಡನೆ ಆತನನ್ನೂ ಎಬ್ಬಿಸಿತು, ದಂಡನಾಯಕದ್ವಯರ ನೇತೃತ್ವದಲ್ಲಿ ಕವಾಯಿತು ನಡೆದುದನ್ನು ಆತ ನೋಡಿದ. ಬಳಿಕ, ದಳಪತಿಗಳಾದ ಕುಡಿಯ ಸೋದರರ ಜತೆಯಲ್ಲಿ ಉಪಾಹಾರ ಸ್ವೀಕರಿಸಿ, ‘ವೀರದಳಪತಿ ಸುಬ್ರಾಯ ಹೆಗ್ಗಡೆ’ಯವರಿಗೆಂದು ರಾಜ್ಯಪಾಲ ಕಲ್ಯಾಣಸ್ವಾಮಿ ಬರೆದುಕೊಟ್ಟ ಉತ್ತರದೊಡನೆ ಆ ದೂತ ತೆಂಕುಂಬಳೆಯ ಕಡೆಗೆ ಸಾಗಿದ.

….ಪುತ್ತೂರಿನಲ್ಲಿ ಮತ್ತೂ ಒಂದು ದಿನ ಇದ್ದರೆ ಸಾಕೆಂಬುದು ಸೇನಾಧಿಕಾರಿಗಳ ಅಭಿಪ್ರಾಯವಾಗಿತ್ತು.

ಅದನ್ನು ಬಲಪಡಿಸುವಂತೆ ನಡೆಯಿತೊಂದು ಘಟನೆ. ಊರಿನ ಒಂದು ಮೂಲೆಯಿಂದ ಕೆಲವರು ಬಂದು, ಕಲ್ಯಾಣಸ್ವಾಮಿಯ ಎದುರು ಕಿವಿಯೊಡೆಯುವಂತೆ ಆರ್ತನಾದ ಮಾಡಿದರು. ತಿರುತಿರುಗಿ ಅಭಯದ ಆಶ್ವಾಸನೆಯನ್ನು ಕೊಟ್ಟ ಬಳಿಕವಷ್ಟೇ ಅವರು ಬಾಯಿ ತೆರೆದುದು.

ನಡೆದುದಿಷ್ಟೆ. ಕಲ್ಯಾಣಪ್ಪನ ದಂಡಿನವರೆಂದು ಹೇಳಿ ಕೆಲವರು ಮನೆಗಳಿಗೆ ನುಗ್ಗಿ ಲೂಟಿ ಮಾಡಿದ್ದರು. ಸ್ತ್ರೀಯರ ಕಿವಿ ಮೂಗು ಕತ್ತುಗಳಲ್ಲಿದ್ದ ಆಭರಣಗಳನ್ನು ಅಪಹರಿಸಿದ್ದರು.
ಕನಲಿದ ರುದ್ರನಾದ ಕಲ್ಯಾಣಸ್ವಾಮಿ. ಆತ ಆಜ್ಞಾಪಿಸಿದ:

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

“ದಂಡನಾಯಕರೆ, ಈಗಿಂದೀಗ ಶಿಬಿರದಲ್ಲಿ ತನಿಖೆ ನಡಸಿ! ಅಪರಾಧಿಗಳ ಪತ್ತೆಯಾಗಲಿ!”
ಅವರನ್ನು ಗುರುತು ಹಿಡಿಯಲೆಂದು ದೌರ್ಜನ್ಯಕ್ಕೆ ತುತ್ತಾಗಿದ್ದವರ ಮನೆಗಳ ಜನರೇ ಬಂದರು. ಕೊಂಬಿನ ಕರೆಗೆ ಓಗೊಟ್ಟು ಸೈನಿಕರೆಲ್ಲ ಶಿಬಿರಕ್ಕೆ ಧಾವಿಸಿದರು. ಆದರೆ, ಕಳುವಿನ ವಸ್ತು ಒಡವೆ ಶಿಬಿರದಲ್ಲಿರಲಿಲ್ಲ. ಒಂದೂವರೆ ಸಾವಿರಕ್ಕೂ ಮಿಕ್ಕಿದ ಸಂಖ್ಯೆಯ ಆ ಸೈನಿಕ ವೃಂದದಲ್ಲಿ, ದೌರ್ಜನ್ಯವೆಸಗಿದವರು ಪತ್ತೆಯಾಗಲಿಲ್ಲ.

ಬೆಳಗಿನ ಜಾವ ಕೊಂಬು ವಾದ್ಯ ಇತರ ಸೈನಿಕರೊಡನೆ ಆತನನ್ನೂ ಎಬ್ಬಿಸಿತು, ದಂಡನಾಯಕದ್ವಯರ ನೇತೃತ್ವದಲ್ಲಿ ಕವಾಯಿತು ನಡೆದುದನ್ನು ಆತ ನೋಡಿದ. ಬಳಿಕ, ದಳಪತಿಗಳಾದ ಕುಡಿಯ ಸೋದರರ ಜತೆಯಲ್ಲಿ ಉಪಾಹಾರ ಸ್ವೀಕರಿಸಿ, ‘ವೀರದಳಪತಿ ಸುಬ್ರಾಯ ಹೆಗ್ಗಡೆ’ಯವರಿಗೆಂದು ರಾಜ್ಯಪಾಲ ಕಲ್ಯಾಣಸ್ವಾಮಿ ಬರೆದುಕೊಟ್ಟ ಉತ್ತರದೊಡನೆ ಆ ದೂತ ತೆಂಕುಂಬಳೆಯ ಕಡೆಗೆ ಸಾಗಿದ.

“ಇದು ಸುಳ್ಳು ಆರೋಪ!” ಎಂದ ಕರಿಯಪ್ಪ ಕಿಡಿಕಿಡಿಯಾಗಿ.
ಆದರೆ ಗೋಳಾಡುತ್ತಿದ್ದವರ ಪ್ರಾಮಾಣಿಕತೆಯನ್ನು ಶಂಕಿಸಲು ಇತರರು ಇಷ್ಟಪಡಲಿಲ್ಲ.
ಸೋಮಯ್ಯನೆಂದ:
“ಇದ್ದೀತು ಬಿಡಪ್ಪ, ಊರಿದ್ದಲ್ಲಿ ಹೊಲಗೇರಿ.”
ಕಲ್ಯಾಣಸ್ವಾಮಿ ಇದರಿಂದ ಬಲು ನೊಂದು ಹೇಳಿದ:
“ಆ ಪಾಪಿಗಳು ಸಿಕ್ಕರೆ ಕಡಾಯಿಯಲ್ಲಿ ಎಣ್ಣೆ ಕುದಿಸಿ ಅದ್ದಬೇಕು ರಾಮಗೌಡರೆ!… ಈಗ ಈ ಜನರಿಗೆಲ್ಲಾ ತಲಾ ಐವತ್ತು ವರಹ ಕೊಡುವಂತೆ ಅಣ್ಣಿಗೌಡರಿಗೆ ತಿಳಿಸಿ.”
ಆ ವಿಚಾರಣೆ, ರಾಜ್ಯಪಾಲ ಪರಿಹಾರದ್ರವ್ಯವನ್ನಿತ್ತುದು, ಊರವರ ದೃಷ್ಟಿಯಲ್ಲಿ ಬಂಡಾಯಗಾರರ ದಂಡಿನ ಬೆಲೆ ಹೆಚ್ಚುವಂತೆ ಮಾಡಿದುವು.

ಜನ ಬೀದಿಯಲ್ಲಿ ಆಡಿಕೊಂಡರು:
“ಕಲ್ಯಾಣಸ್ವಾಮಿ ಧರ್ಮಿಷ್ಠ! ದುಷ್ಟ ಶಿಕ್ಷಕ-ಶಿಷ್ಟ ರಕ್ಷಕ!”
ಆದರೆ, ಹಲವು ಶತಮಾನಗಳವರೆಗೆ ತಿಂದು ಉಂಡರೂ ಮಿಗುವ ಸಿರಿವಂತಿಕೆಯಿದ್ದ ಕೆಲವರು ಮಾತ್ರ ಮುಚ್ಚಿದ ಬಾಗಿಲುಗಳ ಹಿಂದಿನಿಂದ ಗೊಣಗಿದರು:
“ಶುರುವಾಯಿತು ಕಾಟಕಾಯಿ. ಕುಂಪಣಿ ಸರಕಾರವೇ ಇದ್ದಿದ್ದರೆ ವಾಸಿಯಾಗಿತ್ತು.”
….ಆ ರಾತ್ರೆ ಕಳೆದು ಬೆಳಗಾದ ಬಳಿಕ ದೀವಟಿಗೆಯ, ‘ಕೊತ್ತಳಿಗೆ ಭಟರ’, ದಂಡು ಮುಂದಕ್ಕೆ ಹೊರಟಿತು. ಇಬ್ಬಿಬ್ಬರಂತೆ ಸಾಲುಗಟ್ಟಿದ್ದರೂ ಬಲು ದೀರ್ಘವಾಗಿದ್ದ ಸೇನೆ. ಕುದುರೆಗಳಲ್ಲದೆ, ಬೊಕ್ಕಸವನ್ನೂ ಸಾಮಗ್ರಿಗಳನ್ನೂ ಹೊತ್ತಿದ್ದ ಹೋರಿಗಳು ಬೇರೆ. ಜತೆಯಲ್ಲೆ, ಕೈದಿಗಳಾಗಿದ್ದ ದೇವಪ್ಪಯ್ಯ ಮತ್ತಿಬ್ಬರು ಸಿಪಾಯಿಗಳು. ಉತ್ಸಾಹಕ್ಕಂತೂ ಯಾವ ಅಭಾವವೂ ಇರಲಿಲ್ಲ.
“ಹ್ಯಾಗಿದೆ ನದಿ?” ಎಂದು ಕಲ್ಯಾಣಸ್ವಾಮಿ, ರಾಮಗೌಡನತ್ತ ನೋಡಿ ಕೇಳಿದ.
ದಂಡನಾಯಕ ಗೌಡನ ಮುಖದಲ್ಲಿ ಗೆಲುವಿತ್ತು.

“ತಕ್ಕಮಟ್ಟಿಗಿದೆ. ಇನ್ನೂ ಸಾಲದು. ಪಾಣೆಮೊಗರು-ನಂದಾವರ ದಾಟೋಣ, ಆಮೇಲೆ ಹೇಳ್ತೀನಿ.”
ಪಾಣೆಮೊಗರಿನ ಸಂತೆಕಟ್ಟೆಯ ಮೈದಾನದಲ್ಲಿ ಯುಗಾದಿಯ ದಿನ ದಂಡು ಬೀಡುಬಿಟ್ಟಿತು.
“ಸುಳ್ಯದಿಂದ ಇವತ್ತು ಹೊರಡಬೇಕೂಂತ ಗೊತ್ತಾಗಿದ್ದ ದಿನ” ಎಂದ ರಾಮಗೌಡ, ಕಲ್ಯಾಣಸ್ವಾಮಿಯೊಡನೆ.
ನೆನಪಿದೆ ಎಂಬಂತೆ ಕಲ್ಯಾಣಸ್ವಾಮಿ ನಸುನಕ್ಕ.
……..
ಊರವರ ನೆರವು ಅಲ್ಲಿಯೂ ಕಡಿಮೆಯಾಗಲಿಲ್ಲ.
… ಹಬ್ಬದ ಊಟದ ಹೊತ್ತಿಗೆ ಶಿಬಿರದ ಕಾವಲಿನವರು ದಂಡನಾಯಕರೊಡನೆ ಬಂದು ಕಾತರದ ಧ್ವನಿಯಲ್ಲಿ ಸುದ್ದಿ ಮುಟ್ಟಿಸಿದರು:
“ಯಾವುದೋ ಕಾಲಾಳು ದಂಡು ಬರೋದು ಕಾಣಿಸ್ತಿದೆ.”
ರಾಮಗೌಡ ಹುಬ್ಬು ಗಂಟಿಕ್ಕಿದ.


“ದಂಡು?”
“ಹೂಂ. ಪುತ್ತೂರಿನ ಕಡೆಯಿಂದ.”
“ಪುತ್ತೂರಿನ ಕಡೆಯಿಂದ?”
ಅದು ಸಾಧ್ಯವೇ ಇರಲಿಲ್ಲ. ಆದರೂ ರಾಮಗೌಡ ಆಜ್ಞಾಪಿಸಿದ:
“ಕೊಂಬು ಊದಿ! ಸೈನಿಕರು ಸಿದ್ಧರಾಗಿ!”
ಊಟಕ್ಕೆಂದು ಹೊರಟವರು ಹೋರಾಟಕ್ಕೆಂದು ಸೊಂಟ ಬಿಗಿದರು.
ನಂಜಯ್ಯನೆಡೆಗೆ ತಿರುಗಿ ಕಲ್ಯಾಣಸ್ವಾಮಿ ಹೇಳಿದ:
“ನಮ್ಮನ್ನು ಸೇರೋದಕ್ಕೆ ಕೊಡಗಿನಿಂದ ಜನ ಬರ್ತಿರಬಹುದು ಅಂತೀನಿ.”
“ಇರಬೌದು, ನೋಡಾನ” ಎಂದ ನಂಜಯ್ಯ.
ಕಲ್ಯಾಣಸ್ವಾಮಿಯ ಊಹೆ ಸರಿಯಾಗಿತ್ತು. ಬಂದಿದ್ದವರು ಘಟ್ಟದ ಕೆಳಗಿನ ಚೆಂಬು, ಪೆರಾಜೆಗಳ ರೈತ ಯೋಧರು. ಜತೆಯಲ್ಲೆ, ವೀರರಾಜಪೇಟೆ ನಾಡಿನ ಪಾಡಿ ನಾಲ್ಕುನಾಡಿನ ಕದನ ಕಲಿಗಳು.
ಕಲ್ಯಾಣಸ್ವಾಮಿಯೆಂದ:
“ಇನ್ನೊಂದು ಉಪನದಿ ಗೌಡರೆ!”

(ನಿರಂಜನರ ‘ಕಲ್ಯಾಣಸ್ವಾಮಿ’ ಕಾದಂಬರಿಯ ಆಯ್ದ ಪುಟಗಳು. 1956)

 
ಡಾ. ಬಿ. ಜನಾರ್ದನ ಭಟ್ ಟಿಪ್ಪಣಿ

ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಬಳಿಯ ಕುಳಕುಂದದ ಶಿವರಾಯರು (1924 – 1992) ‘ನಿರಂಜನ’ ಎಂಬ ಹೆಸರಿನಲ್ಲಿ ಬರೆದು ಪ್ರಸಿದ್ಧರಾಗಿದ್ದಾರೆ. ಅವರು ವೃತ್ತಿಯಲ್ಲಿ ಪತ್ರಕರ್ತರಾಗಿದ್ದರು. ಕತೆ, ಕಾದಂಬರಿ, ಗ್ರಂಥ ಸಂಪಾದನೆ ಮುಂತಾದ ಹಲವು ಕ್ಷೇತ್ರಗಳಲ್ಲಿ ಮೇರು ಸಾಧನೆ ಮಾಡಿದ ಕನ್ನಡದ ಒಬ್ಬ ಅಮರ ಸಾಹಿತಿಯಾದ ನಿರಂಜನರು 9 ಸಣ್ಣಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ, ಹಲವಾರು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.

ಎಡಪಂಥೀಯ ಚಿಂತಕರೂ, ಬರಹಗಾರರೂ ಆಗಿದ್ದ ನಿರಂಜನರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವರ್ಗಹೋರಾಟದ ಎಳೆಯೊಂದು ಇದ್ದುದನ್ನು ಗುರುತಿಸುವ, ಮತ್ತು ಕಮ್ಯುನಿಸ್ಟ್ ಚಿಂತನೆಯ ಹೋರಾಟಗಾರರೂ ಪಾಲುಗೊಂಡಿದ್ದುದನ್ನು ದಾಖಲಿಸಿರುವ ಬರಹಗಾರರಲ್ಲೊಬ್ಬರು. ಇನ್ನೊಬ್ಬರು ವ್ಯಾಸರಾಯ ಬಲ್ಲಾಳರು. ಮುಂದೆ ನಿರಂಜನರ ‘ಚಿರಸ್ಮರಣೆ’ ಕಾದಂಬರಿಯ ಕೆಲವು ಪುಟಗಳನ್ನೂ, ವ್ಯಾಸರಾಯ ಬಲ್ಲಾಳರ ‘ಹೆಜ್ಜೆ’ ಕಾದಂಬರಿಯ ಕೆಲವು ಪುಟಗಳನ್ನೂ ಬ್ರಿಟಿಷರ ಸಾಮ್ರಾಜ್ಯಶಾಹಿ ಆಡಳಿತದ ವಿರುದ್ಧ ನಡೆಯುತ್ತಿದ್ದ ಅಖಿಲಭಾರತ ವ್ಯಾಪ್ತಿಯ ಸ್ವಾತಂತ್ರ್ಯ ಹೋರಾಟದ ಕಾಲದ ಪರಿಸ್ಥಿತಿಗಳನ್ನು ಗಮನಿಸುವ ಸಾಹಿತ್ಯ ಕೃತಿಗಳ ಸಾಲಿನಲ್ಲಿ ಓದಬಹುದು. (1837 ರ ಕಲ್ಯಾಣಸ್ವಾಮಿಯ ಕಾಲದಲ್ಲಿ ಮಂಗಳೂರಿನಲ್ಲಿದ್ದುದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. 1857 ರ ಮೊದಲನೆಯ ಸ್ವಾತಂತ್ರ್ಯ ಸಂಗ್ರಾಮದ ನಂತರವಷ್ಟೇ ಬ್ರಿಟಿಷ್ ಸರಕಾರ ನಮ್ಮ ದೇಶವನ್ನು ನೇರವಾಗಿ ತನ್ನ ಆಳ್ವಿಕೆಗೆ ಒಳಪಡಿಸಿತು.)

ನಿರಂಜನರು ಈ ಕಾದಂಬರಿಯನ್ನು ಬರೆಯುವ ಸಮಯದಲ್ಲಿ ಮಾಹಿತಿ ಸಂಗ್ರಹಿಸುತ್ತಾ, ಗೋವಿಂದ ಪೈಗಳ ಸೂಚನೆಯಂತೆ ಆಲೆಟ್ಟಿ ರಾಮಣ್ಣ ಶಗ್ರಿತ್ತಾಯರ ಯಕ್ಷಗಾನ ಪ್ರಸಂಗವನ್ನು ಕೂಡ ಕೇಳಿ ಅದನ್ನು ಓದಿದ್ದರು. (ಮಾತ್ರವಲ್ಲ, ಅದು ಮುಂದೆ ಮುದ್ರಣರೂಪಕ್ಕೆ ಬಂದಾಗ ನಿರಂಜನರೇ ಅದಕ್ಕೆ ಮುನ್ನುಡಿಯನ್ನೂ ಬರೆದರು.)

ನಿರಂಜನರು ಈ ಕೃತಿ ರಚನೆಯ ಹಿಂದಿನ ಶ್ರಮ ಮತ್ತು ಚಿಂತನೆಗಳನ್ನು ಕುರಿತು, ‘ಇತಿಹಾಸ ಮತ್ತು ಸೃಷ್ಟಿ ಸಾಹಿತ್ಯ’ ಎಂಬ ಹಿನ್ನುಡಿಯನ್ನು ಬರೆದಿದ್ದಾರೆ. ಅದರಲ್ಲಿ ಅವರು ಕಲ್ಯಾಣಸ್ವಾಮಿಯ ಬಗ್ಗೆ ಹೀಗೆ ಹೇಳುತ್ತಾರೆ:
“ಕಲ್ಯಾಣಪ್ಪ ಪುಂಡನೆಂಬುದಕ್ಕೆ ಯಾವ ಆಧಾರವೂ ಇಲ್ಲ. ಆತ ಜನರನ್ನು ದೋಚಿದನೆಂದು ಯಾರೂ ಹೇಳುವುದಿಲ್ಲ. ಆತ ಯುದ್ಧ ಸಾರಿದುದು ಇಂಗ್ಲಿಷರ ವಿರುದ್ಧ. ಆತನ ಕಣ್ಣಿದ್ದುದು ಅವರ ಸೈನ್ಯದ ಮೇಲೆ, ಖಜಾನೆಯ ಮೇಲೆ. ತಮಗೆ ಕಂಟಕರಾಗಿದ್ದವರನ್ನು ನರಪಿಶಾಚಿಗಳೆಂದು, ಸಾಮ್ರಾಜ್ಯವಾದಿಗಳೆಂದು ಚಿತ್ರಿಸಿರುವುದು ಹೊಸವಿಷಯವಲ್ಲವಷ್ಟೆ? ಅಂತಹ ‘ನರಪಿಶಾಚಿ’ ಕೊಡಗಿನ ಕಲ್ಯಾಣಪ್ಪ!”

ಕಲ್ಯಾಣಪ್ಪನ ಹೋರಾಟದ ಪರವಾಗಿದ್ದ (ನಾವು ಊಹಿಸಬಹುದಾದಹಾಗೆ) ಯಕ್ಷಗಾನ ಪ್ರಸಂಗವೊಂದು ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಅಚಾಗಿತ್ತಂತೆ. ಅದರ ಕುರಿತಾದ ಈ ಮಾಹಿತಿ ಕುತೂಹಲಕರವಾಗಿದೆ: (ನಿರಂಜನ: 1956)

“1841 ನೆಯ ಇದವಿಯಲ್ಲಿ ಹುಟ್ಟಿದ ಮಂಗಳೂರಿನ ಬಾಸೆಲ್ ಮಿಶ್ಶನ್ ಛಾಪಖಾನೆಯಲ್ಲಿ ‘ಕಲ್ಯಾಣಪ್ಪನ ಪ್ರಸಂಗ’ ಎಂದು ಒಂದು ಯಕ್ಷಗಾನ ಪ್ರಸಂಗವು ಅಚ್ಚಾಗಿತ್ತು. ಅದನ್ನು ಕೂಡಲೇ ಇಂಗ್ಲಿಷ್ ಸರಕಾರವು ಕಂಡುಹಿಡಿದು ಅದರ ಪ್ರತಿಗಳನ್ನೆಲ್ಲ ಸುಟ್ಟುಹಾಕಿಸಿತಂತೆ.” (ಗೋವಿಂದಪೈಯವರು ನಿರಂಜನರಿಗೆ ಬರೆದ ಒಂದು ಪತ್ರದಿಂದ). “ಬರಿಯ ಕಳ್ಳನ ಕಥೆ ಎಂದಾದರೆ ಪ್ರತಿಗಳನ್ನು ಸುಟ್ಟುಹಾಕುವ ಅಗತ್ಯ ಇಂಗ್ಲಿಷ್ ಸರಕಾರಕ್ಕೆ ಖಂಡಿತವಾಗಿಯೂ ಇರುತ್ತಿರಲಿಲ್ಲ” ಎಂದು ನಿರಂಜನರು ಅಭಿಪ್ರಾಯಪಟ್ಟಿದ್ದಾರೆ.

ಬೇರೆ ಅಧ್ಯಯನಕಾರರು ದಾಖಲಿಸಿರುವಂತೆ ಹೀಗೆ ಸುಟ್ಟುಹಾಕಿಸಿದ್ದಲ್ಲದೆ, ಇದನ್ನು ಮುದ್ರಿಸಿದ್ದಕ್ಕಾಗಿ ಬಾಸೆಲ್ ಮಿಷನಿನವರಿಗೆ ಬ್ರಿಟಿಷರು ನೋಟೀಸೂ ಕೊಟ್ಟಿದ್ದರಂತೆ; ‘ನಿಮಗೆ ನೀಡಿದ ಜಾಗವನ್ನು ಯಾಕೆ ಹಿಂದೆ ಪಡೆಯಬಾರದು?’ ಎಂಬಂತಹ ಬೆದರಿಕೆಯನ್ನೂ ಹಾಕಲಾಗಿತ್ತಂತೆ.