ಒಂದು ದಿನ ಲೋಹಿಯಾ ಪ್ರಕಾಶನದ ಚನ್ನಬಸವಣ್ಣ ಫೋನು ಮಾಡಿ, ‘ರಹಮತ್, ಅಬ್ಬಿಗೇರಿ ವಿರೂಪಾಕ್ಷಪ್ಪ ಹೋಗ್‌ಬಿಟ್ರು ಎಂದರು. ೮೬ ವರ್ಷದವರಾಗಿದ್ದು, ವಯೋಸಹಜ ಕಾಯಿಲೆಗಳಿಂದ ಕೆಲವು ದಿನಗಳಿಂದ ಮೆತ್ತಗಾಗಿದ್ದ ಅಬ್ಬಿಗೇರಿಯವರ ಮರಣ ಅನಿರೀಕ್ಷಿತವೇನಾಗಿರಲಿಲ್ಲ. ಕರ್ನಾಟಕದ ಸಮಾಜವಾದಿ ಚಳುವಳಿಯಲ್ಲಿ ಆದರ್ಶ ಮತ್ತು ಬವಣೆಯ ಹಾದಿ ತುಳಿದು ಬದುಕಿದ ಒಂದು ಪೀಳಿಗೆಯಿದೆ. ಅದರ ಕೊನೆಯ ಕೊಂಡಿಗಳಂತೆ ಧಾರವಾಡದ ನೀಲಗಂಗಯ್ಯ ಪೂಜಾರ, ಸೂಡಿಯ ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾಗರದ ಗಣಪತಿಯಪ್ಪ, ಭಗವತಿಕೆರೆಯ ಕಡಿದಾಳು ಶಾಮಣ್ಣ- ಮುಂತಾದವರು ಈಗಲೂ ನಮ್ಮ ಜತೆ ಇದ್ದಾರೆ. ಅವುಗಳಲ್ಲಿ ಒಂದು ಕೊಂಡಿ ಕಳಚಿತು ಎಂದುಕೊಂಡೆ.

ಅಬ್ಬಿಗೇರಿ ಅವರನ್ನು ನಾನು ಪ್ರಥಮತಃ ಕಂಡಿದ್ದು ಕನ್ನಡ ವಿಶ್ವವಿದ್ಯಾಲಯದಲ್ಲಿ. ಯಾವುದೋ ಕಾರ್ಯಕ್ರಮಕ್ಕೆಂದು ಬಂದಿದ್ದರು. ತೆಳ್ಳಗೆ ಉದ್ದಕ್ಕಿದ್ದ ಅವರು, ಕಚ್ಚೆಪಂಚೆಯುಟ್ಟು ಹಳತಾದ ಶುಭ್ರವಾದ ಜುಬ್ಬ ತೊಟ್ಟಿದ್ದರು. ಪಂಚೆಯೊಳಗಿನ ಅವರ ಬತ್ತಿದ ಕಾಲುಗಳು ಕೊಳವೆಗಳಂತೆ ಕಾಣುತ್ತಿದ್ದವು. ಹಿಮ್ಮಡಿ ಸವೆದ ಹವಾಯಿ ಚಪ್ಪಲಿ ಹಾಕಿದ್ದರು. ಹೊಲದ ಕೆಲಸವನ್ನು ಅರ್ಧಕ್ಕೇ ಬಿಟ್ಟುಬಂದ ರೈತನ ತರಹ ಇದ್ದರು. ಅವರು ಅಂದು ಆವೇಶಭರಿತರಾಗಿ ಚೆನ್ನಾಗಿ ಮಾತನಾಡಿದರು. ಅದರಲ್ಲಿ, ರಾಮಮನೋಹರ ಲೋಹಿಯಾ ಅವರು ಅವರಿದ್ದ ಸೂಡಿ ಗ್ರಾಮಕ್ಕೆ ಬಂದ ಭಾಷಣ ಮಾಡಿದ ಹಾಗೂ ಅವರ ಅಡುಗೆ ಮನೆಯಲ್ಲಿ ಕುಳಿತು ಊಟ ಮಾಡಿದ ಉಲ್ಲೇಖ ಬಂದಾಗಲಂತೂ ಅವರು ಭಾವುಕತೆಯಿಂದ ತನ್ಮಯರಾದರು. ಬಹುಶಃ ಈ ಘಟನೆಯನ್ನು ತಮ್ಮ ಜೀವಮಾನದ ಅತ್ಯಮೂಲ್ಯ ನಿಧಿಯಂತೆ ಅವರು ಕಾಪಿಟ್ಟುಕೊಂಡಿದ್ದರು ಅನಿಸುತ್ತದೆ. ನನ್ನ ಬಗ್ಗೆ ಪ್ರೀತಿಯಿಟ್ಟುಕೊಂಡಿದ್ದರು. ನಾನು ಅವರ ಜತೆ ಪತ್ರ ಸಂಪರ್ಕ ಇರಿಸಿಕೊಂಡಿದ್ದೆ. ಆದರೆ ಅವರನ್ನು ಅವರ ಮನೆಯಲ್ಲೇ ಭೇಟಿಮಾಡಿ ಚರ್ಚೆ ಮಾಡಬೇಕೆಂಬ ನನ್ನ ಆಸೆಮಾತ್ರ ಹಾಗೆಯೇ ಉಳಿದುಬಿಟ್ಟಿತು. ನಾನು ನನ್ನ ನೂರೆಂಟು ಉಪದ್ವ್ಯಾಪಗಳಲ್ಲಿ ಸೂಡಿಗೆ ಹೋಗಲು ತಳುವಿದೆ ಅನಿಸುತ್ತದೆ. ಎಷ್ಟೋ ಸಲ ನಮ್ಮ ಸುತ್ತಮುತ್ತ ಇರುವ ದೊಡ್ಡಮನುಷ್ಯರ ಮಹತ್ವ ಅವರು ಕಣ್ಮರೆಯಾದ ಮೇಲೆಯೇ ಗೊತ್ತಾಗುವುದು. ನಾನು ಭೇಟಿಮಾಡಬೇಕು ಎಂದು ವಿಳಂಬಿಸಿ ಅನೇಕರ ಭೇಟಿಯನ್ನು ಕಳೆದುಕೊಂಡೆ. ಕಾಲ ಕಾಯುವುದಿಲ್ಲ.

ಅಬ್ಬಿಗೇರಿಯವರು ಮೂಲತಃ ಆದರ್ಶವಾದಿ ಭಾವುಕ ವ್ಯಕ್ತಿಯೆಂದು ನನಗೆ ಅನಿಸುತ್ತದೆ. ಈ ಆದರ್ಶವಾದಿ ಭಾವುಕತೆ ಅವರಿಗೆ ಬಂದಿದ್ದು ಅವರ ಸ್ವಾತಂತ್ರ್ಯ ಹೋರಾಟದಿಂದ; ಇನ್ನೂ ಶಾಲೆಯ ಹುಡುಗನಿದ್ದಾಗಲೇ (೧೯೪೨) ಅವರು ಪಿಕೆಟಿಂಗ್ ಮಾಡಿ ಜೈಲಿಗೆ ಹೋದರು. ಬಳಿಕ ಲೋಹಿಯಾ ಅವರ ಗಾಢ ಪ್ರಭಾವದಿಂದ ಅವರ ಆದರ್ಶವಾದ ಮತ್ತಷ್ಟು ಬಲಗೊಂಡಿತು. ಇದಕ್ಕೆ ಅವರ ಶಿಕ್ಷಕ ವೃತ್ತಿಯೂ ಪೂರಕವಾಗಿದ್ದಿರಬಹುದು. ಇದನ್ನು ಅವರ ಕೊಂಚ ರೊಮ್ಯಾಂಟಿಕ್ ಎನ್ನಬಹುದಾದ ಮನೋಭಾವವು ಢಾಳಾಗಿ ಕಾಣುವ ಬರೆಹದಲ್ಲಿ ವ್ಯಕ್ತವಾಗುತ್ತದೆ. ಇದಕ್ಕೆ ತಕ್ಕಂತೆ ಅಬ್ಬಿಗೇರಿಯವರು ಆದರ್ಶವೆಂದು ಭಾವಿಸಿದ್ದ ಅವರ ಗೆಳೆಯರೂ ಆದರ್ಶವಾದಿ ಹೋರಾಟಗಾರರೇ ಆಗಿದ್ದರು. ಅಬ್ಬಿಗೇರಿಯವರು ಗೌರವಿಸುತ್ತಿದ್ದ ಚಳುವಳಿಗಾರರೂ ರಾಜಕೀಯ ನೇತಾರರೂ ಆದ ಅಂದಾನಪ್ಪ ದೊಡ್ಡಮೇಟಿಯವರು ಮೂಲತಃ ಸಾಂಸ್ಕೃತಿಕ ವ್ಯಕ್ತಿತ್ವ ಇದ್ದವರು; ಅಬ್ಬಿಗೇರಿಯವರ ಮಿತ್ರರಾದ ಬಸವರಾಜ ಕಟ್ಟೀಮನಿ ಮೂಲತಃ ಬರೆಹಗಾರರಾಗಿದ್ದರೂ ರಾಜಕೀಯ ಚಟುವಟಿಕೆಯಲ್ಲಿ ಆಸಕ್ತರಾಗಿದ್ದವರು. ಹೀಗಾಗಿ ಅಬ್ಬಿಗೇರಿಯವರ ವ್ಯಕ್ತಿತ್ವದಲ್ಲಿದ್ದ ಹೋರಾಟದ ಕೆಚ್ಚು ಆದರ್ಶದ ಭಾವುಕತೆ ಸಾಹಿತ್ಯಾಭಿರುಚಿಗಳು ಪರಸ್ಪರ ಪೂರಕವಾಗಿದ್ದವು.

ಅಬ್ಬಿಗೇರಿಯವರ ಚಳುವಳಿಗಾರ ವ್ಯಕ್ತಿತ್ವಕ್ಕೆ ಒತ್ತುಕೊಟ್ಟು ಅವರೊಬ್ಬ ಬರೆಹಗಾರರಾಗಿದ್ದರು ಎಂಬುದನ್ನೇ ಎಲ್ಲರೂ ಮರೆತಂತೆ ಕಾಣುತ್ತದೆ. ಅವರು ತಮ್ಮ ಬರೆಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸದೇ ಇರುವುದೂ ಇದಕ್ಕೆ ಒಂದು ಕಾರಣ. ಅಬ್ಬಿಗೇರಿಯವರ ಭಾವುಕ ಆದರ್ಶವಾದಿ ಗುಣವು ಅವರ ಬರೆಹಗಳಲ್ಲಿ ಎದ್ದುಕಾಣುತ್ತದೆ. ಅದರಲ್ಲೂ ಅವರ ತಮ್ಮ ಗೆಳೆಯರಿಗೂ ಶಿಷ್ಯರಿಗೂ ಬರೆಯುತ್ತಿದ್ದ ಸುದೀರ್ಘ ಪತ್ರಗಳಲ್ಲಿ ಇದನ್ನು ನೋಡಬಹುದು. ತಮ್ಮ ಪ್ರಿಯ ಮಿತ್ರ ಬಸವರಾಜ ಜ್ಯೋತಿ ಅವರಿಗೆ, ೧೪ನೇ ಜೂನ್ ೧೯೫೫ ರಂದು ಬರೆದ ಒಂದು ಭಾಗ ಹೀಗಿದೆ:

“ಅಂದು ನಿಮ್ಮನ್ನು ಅಗಲುವಾಗ ನನ್ನೆದೆಯಲ್ಲಿ ಉಂಟಾದ ಭಾವ ಕಲಮಲ! ಅದನ್ನು ನೆನೆದಾಗ ನಾನು ಈಗಲೂ ಭಾವಪರವಶನಾಗಿ ಕೂಡುತ್ತೇನೆ. ನನ್ನ ಗಾಯಗೊಂಡ ಎದೆಯನ್ನು ನಿಮ್ಮ ಸೀಯಾಳದ ನುಡಿಗಳಿಂದ ಸಂತವಿಸಿದ ಆ ಮರುಕದ ವಾಣಿ, ಎದೆಯ ಗೆಳೆಯನಂತೆ ನೆಚ್ಚುನಂಬಿಕೆ ತೋರಿ ನನಗೆ ಧೈರ್ಯ ನೀಡಿದ ಒಲುವೆ-ನಲುಮೆಗಳು, ನನ್ನ ಬದುಕಿಗೆ ಶುಭ-ಯಶಗಳನ್ನು ಕೋರಿದ ಆ ಸಹೋದರ ಭಾವ… ಎದೆಭಾರವಾಗಿತ್ತು. ಆದರೂ ನಾನು ಇನ್ನೊಮ್ಮೆ ನೋಡಬೇಕೆಂದು ರೈಲಿನ ಕಟಕಿಯಿಂದ ಕತ್ತುಚಾಚಿದೆ. ಇಳಿಗಟ್ಟೆಯ ಆ ತುದಿಗೆ ನೀವಿನ್ನೂ ನಿಂತಿದ್ದಿರಿ. ಮುಖದಲ್ಲಿ ವಿಷಣ್ಣಭಾವ ಮೂಡಿತ್ತು. ಆ ಮುಖದಲ್ಲಿ ಎರಡು ಅರಳಿದ ಕಣ್ಣುಗಳು ಮಾತ್ರ ಎವೆಯಿಕ್ಕದೆ ಹೊಳೆಯುತ್ತಿದ್ದವು. ಎಂಥ ಪ್ರೇಮಾನುಭೂತಿಯ ಕಾಂತಿ ಸೂಸುತ್ತಿತ್ತು ಆ ಕಂಗಳಲ್ಲಿ! ಕಣ್ಣು ಆತ್ಮದ ಕಿಟಕಿಯಂತೆ. ಸತ್ಯವಾಗಿಯೂ ಅಂದು ಮಿತ್ರನೊಬ್ಬನ ಆತ್ಮವು ಆತನ ಕಂಗಳಲ್ಲಿ ಪಜ್ಜಳಿಸುವುದನ್ನು ಕಂಡೆ. ಇನ್ನೂ ಕಾಣಬೇಕೆಂದೆ. ಗಾಡಿ ಭರಾಟೆಯಿಂದ ಓಡಹತ್ತಿತು

ಅಬ್ಬಿಗೇರಿಯವರಲ್ಲಿ ತಾವು ಇಷ್ಟಪಟ್ಟ ವ್ಯಕ್ತಿಯಲ್ಲಿ ಯಾವ ಕೊರತೆಯನ್ನು ಕಾಣದ, ಒಮ್ಮೆ ಅವರಿಗೆ ತಮ್ಮನ್ನು ಒಪ್ಪಿಸಿಕೊಂಡರೆ ಜೀವಮಾನವಿಡೀ ಅವರನ್ನು ಆರಾಧಿಸುವ ಒಂದು ಗುಣವಿತ್ತು. ಇದು ಬಹುಶಃ ಎಲ್ಲ ಆದರ್ಶವಾದಿಗಳಲ್ಲೂ ಇರುವ ಒಂದು ಬಗೆಯ ವ್ಯಕ್ತಿಯಾರಾಧನೆಯ ಗುಣವೆಂದು ತೋರುತ್ತದೆ. ತಮ್ಮ ಪ್ರಿಯ ವ್ಯಕ್ತಿತ್ವವನ್ನು ಅಬ್ಬಿಗೇರಿಯವರು ಹಲವು ವಿಶೇಷಣಗಳಿಂದ ಮನಃತುಂಬಿ ಕೊಂಡಾಡುತ್ತಿದ್ದರು. ಅಂದಾನಪ್ಪ ದೊಡ್ಡಮೇಟಿಯವರ ವರ್ಣನೆ ಹೀಗಿದೆ:

“ದೊಡ್ಡಮೇಟಿಯವರ ವ್ಯಕ್ತಿತ್ವ ತುಂಬ ವರ್ಣಮಯ. ಅವರು ರಾಜಕೀಯದಲ್ಲಿ ಪರಿಶುದ್ಧತೆ ಪ್ರಾಮಾಣಿಕತೆ ಪ್ರವರ್ತಕರು. ಲೋಕಸಂಗ್ರಹದಲ್ಲಿ ತ್ಯಾಗವೀರರು. ದೇಶದ ಸ್ವಾತಂತ್ರ್ಯ ಸಮರದಲ್ಲಿ ಅಗ್ರಯೋಧರು. ದೇಶಸೇವಾ ಪರಿಣತಮತಿಗಳು. ಶ್ರೀಮಂತನಾದರೂ ಗಾಂಧೀಜಿಯ ಧರ್ಮದರ್ಶಿತ್ವದ ಆದರ್ಶಗಳಿಗೆ ತಕ್ಕಂತೆ ಬಾಳಿ ಬಡವರ ಬಂಧು ಎನ್ನಿಸಿಕೊಂಡವರು. ಕೃತಿ ಧೀರತೆಯಲ್ಲಿ ಕರ್ಣ, ಜನತೆಯ ಹೃದಯವನ್ನು ಗೆದ್ದುಕೊಳ್ಳುವಲ್ಲಿ ಅಜಾತಶತ್ರು, ದಾನಮಾಡುವಲ್ಲಿ ಬಲಿ ಚಕ್ರವರ್ತಿ, ಭಣಿತೆಯಲ್ಲಿ ಡೆಮೋಸ್ತೆನೀಸ್, ಸಮರ್ಪಣಭಾವದಲ್ಲಿ ರಂತಿದೇವ. ಹುಸ್ನಬಾನೂ.

ದೇವರಾಜ ಅರಸು ತೀರಿಕೊಂಡಾಗ ಅಬ್ಬಿಗೇರಿಯವರು ಬರೆದ ಶ್ರದ್ಧಾಂಜಲಿ ಕವನವೂ ಇದೇ ಪರಿಯ ವಿಶೇಷಣಗಳಿಂದ ತುಂಬಿಹೋಗಿದೆ. ಅಬ್ಬಿಗೇರಿಯವರಿಗೆ ಕನ್ನಡ ಕಾವ್ಯಪರಂಪರೆಯ ಆಳವಾದ ಅಧ್ಯಯನವಿತ್ತು. ಆ ಅಧ್ಯಯನದಿಂದ ಪಡೆದ ಪರಿಭಾಷೆ ಮತ್ತು ರೂಪಕಗಳನ್ನು ಅವರ ಬರೆಹದಲ್ಲಿ ಕಾಣಬಹುದು. ಅವರು ಬಹಳ ಇಷ್ಟಪಡುತ್ತಿದ್ದ ಅನಕೃ ಅವರ ಭಾಷಣದ  ವರ್ಣನೆ ಹೀಗಿದೆ: “ರಸೋಜ್ವಲ ಶೈಲಿಯ ಭಾವರಂಗಿಯಾದ ವಾಣಿ, ಧೀಂಕಿಡುವ ಪ್ರವಾಹದಂಥ ಭಾಷೆ. ಡಿಡುಗಿನ ದಾಟಿಯ ಓಜಸ್ವಿಭಾಷಣ. ಧೋಧೋ ಧಂಡಿಯಾಗಿ ಮಳೆ ಸುರಿದಂತಿತ್ತು. ಸಭೆಯಲ್ಲಿ ಮಂತ್ರಮುಗ್ಧ. ನನ್ನ ಬಾಲಮನಸ್ಸಿಗೆ ಅದೊಂದು ಮೃತಪಾನ. ಇನ್ನೂ ಸವಿಯ ಬೇಕೆಂಬ ಹಂಬಲ. ಇಲ್ಲಿ ಒಂದು ಬಗೆಯ ಆಡಂಬರವೆನಿಸುವ ಶಬ್ದಗಳಿದ್ದರೂ ಅವು ಅವರ ವ್ಯಕ್ತಿತ್ವದ ಕೃತಕತೆಯನ್ನಲ್ಲ, ಸಹಜ ಸರಲ ಸ್ವಭಾವವನ್ನು ಸಂಕೇತಿಸುತ್ತಿದ್ದವು.

ಅಬ್ಬಿಗೇರಿಯವರಲ್ಲಿ ಮುಖ್ಯವಾಗಿ ಕಾಣುವುದು ಸ್ಥಳೀಯತೆಯಲ್ಲಿ ಬೇರುಬಿಟ್ಟ ರಾಜಕೀಯ ಪ್ರಜ್ಞೆ. ಸಮಾಜವಾದಿ ಚಳುವಳಿಯ ನೀಲಗಂಗಯ್ಯ ಪೂಜಾರ, ವಡನಾಳು ಗಣಪತಿಯಪ್ಪ ಮುಂತಾದವರು ಸಹ, ಸ್ಥಳೀಯ ಸಮಸ್ಯೆಗಳನ್ನು ಕೈಗೆತ್ತಿಕೊಂಡು, ತಾವು ವಾಸಿಸುವ ಊರು ಅಥವಾ ಪ್ರದೇಶವನ್ನೇ ಒಂದು ಪ್ರಯೋಗಶಾಲೆ ಮಾಡಿಕೊಂಡು ಕೆಲಸ ಮಾಡಿದವರು. ಅಬ್ಬಿಗೇರಿಯವರು ಬರೆದ ಬಹುತೇಕ ವ್ಯಕ್ತಿಚಿತ್ರಗಳು (ಉದಾ.ಗೆ, ಅಂದಾನಪ್ಪ ದೊಡ್ಡಮೇಟ್ಪಿ) ಕೂಡ ಇಂತಹ ಸ್ಥಳೀಯತೆಯಲ್ಲಿ ಬೇರುಬಿಟ್ಟ ರಾಜ್ಯನಾಯಕರನ್ನೇ ಕುರಿತು ಇವೆ. ಆದರೆ ಅವರ ಈ ಸ್ಥಳೀಯ ಪ್ರಜ್ಞೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಜ್ಞೆಯ ಸಾಂಗತ್ಯವೂ ಇತ್ತು. ಜಾಗತಿಕ ಪ್ರಜ್ಞೆಯಿಲ್ಲದ ಸ್ಥಳೀಯ ಪ್ರಜ್ಞೆ ಕೂಪಮಂಡೂಕವಾಗುತ್ತದೆ. ಸ್ಥಳೀಯತೆಯಿಲ್ಲದ ಅಂತರರಾಷ್ಟ್ರೀಯ ಪ್ರಜ್ಞೆ ಅಮೂರ್ತವಾಗಿ ಬೀಸುವ ಗಾಳಿಯಾಗಿರುತ್ತದೆ. ಗದಗ ಜಿಲ್ಲೆ ರೋಣತಾಲೂಕಿನ ಪುಟ್ಟಹಳ್ಳಿಯಾದ ಸೂಡಿಯಲ್ಲಿ ತಮ್ಮ ಜೀವಮಾನವನ್ನೆಲ್ಲ ಕಳೆದರೂ, ಅಬ್ಬಿಗೇರಿಯವರು ಜಗತ್ತಿನ ಅನೇಕ ಘಟನೆಗಳಿಗೆ ಮಿಡಿಯುತ್ತಿದ್ದರು. ಇದಕ್ಕೆ ಸಾಕ್ಷಿಯೆಂದರೆ, ಬೆಲ್ಜಿಯಂ ಸಾಮ್ರಾಜ್ಯಶಾಹಿಗೆ ಎದುರಾಗಿ ಹೋರಾಡಿದ ಕೊಲೆಯಾದ ಕಾಂಗೋ ಬುಡಕಟ್ಟಿನ ನೇತಾರ ಲುಮಾಂಬ ಅವರ ಕೊಲೆಗೆ ಸೂಡಿಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಿದ್ದು.

ಕಾಂಗ್ರೆಸ್ಸಿನವರು, ಸಮಾಜವಾದಿಗಳು, ಕಮ್ಯುನಿಸ್ಟರು- ೫೦ರ ದಶಕದ ನಂತರದ ದಿನಮಾನಗಳಲ್ಲಿ, ರಾಜಕೀಯವಾಗಿ ಸೈದ್ಧಾಂತಿಕವಾಗಿ ಪರಸ್ಪರ ಎದುರಾಳಿಗಳಾಗಿ ಸಾಕಷ್ಟು ಕಾದಾಡಿದರು. ಆದರೆ ಅಬ್ಬಿಗೇರಿಯವರು ದೇವರಾಜ ಅರಸು ಅವರ ಬಗ್ಗೆ ಅವರು ಬರೆದ ಚರಮಗೀತೆ, ನಂಬೂದಿರಿಪಾಡರ ಜತೆಗಿಟ್ಟುಕೊಂಡಿದ್ದ ಪತ್ರವ್ಯವಹಾರ, ಕಾಂಗ್ರೆಸ್ಸಿನ ಹೋರಾಟಗಾರ ರಾಜಕಾರಣಿ ನೆಲ್ಲೂರ ಶಿವಪ್ಪ, ದೊಡ್ಡಮೇಟಿ ಅಂದಾನಪ್ಪ ಅವರ ಬಗ್ಗೆ ಇರಿಸಿಕೊಂಡಿದ್ದ ಆದರ, ಲೋಹಿಯಾ ಅವರ ಮೇಲಿದ್ದ ಅಸೀಮ ಪ್ರೀತಿ ಮತ್ತು ಆರಾಧನೆ- ಇವನ್ನೆಲ್ಲ ಗಮನಿಸಿದರೆ, ಅವರು ನಿರ್ದಿಷ್ಟ ಪಕ್ಷ ಇಲ್ಲವೇ ಪಂಥಕ್ಕೆ ಕಟ್ಟುಬಿದ್ದವರಲ್ಲ. ಬದಲಿಗೆ ಪಕ್ಷ ಮತ್ತು ಸಿದ್ಧಾಂತಗಳ ಆಚೆಗೆ ಹೋಗಿ, ತಮಗೆ ಪ್ರಿಯವಾದ ಎಲ್ಲವನ್ನು ಎಲ್ಲರನ್ನು ಮನಃಪೂರ್ವಕವಾಗಿ ಪ್ರೀತಿಸುತ್ತಿದ್ದ ಉದಾರತೆಯಿದ್ದವರು ಎಂದು ತಿಳಿಯುವುದು. ಈ ಬಗೆಯ ಉದಾರವ್ಯಕ್ತಿತ್ವವಿದ್ದ ಕಾರಣದಿಂದಲೇ, ಅಬ್ಬಿಗೇರಿಯವರು ಕ್ವಿಟ್ ಇಂಡಿಯಾ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿ, ಭೂಸುಧಾರಣಾ ಚಳುವಳಿ, ಕೋಮುವಾದ ವಿರೋಧಿ ಚಳುವಳಿ, ಮೀಸಲಾತಿಪರ ಚಳುವಳಿ, ಹೀಗೆ ತಮಗೆ ಉಚಿತವೆಂದು ಕಂಡ ಎಲ್ಲ ಬಗೆಯ ಜನಪರ ಹೋರಾಟಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಸಾಧ್ಯವಾಯಿತು.

ಪ್ರಖರ ಚಿಂತಕರಾಗಿದ್ದ ಅಬ್ಬಿಗೇರಿಯವರು ಮಹಾ ಅಧ್ಯಯನಶೀಲರು. ಅವರಿಗೆ ಇಂಗ್ಲೀಶ್ ಮರಾಠೀ ಬಂಗಾಳಿ ಭಾಷೆಗಳು ಬರುತ್ತಿದ್ದವು. ಅವರಲ್ಲಿ ದೊಡ್ಡದೊಂದು ಗ್ರಂಥಸಂಗ್ರಹವೇ ಇತ್ತು. ರಾಷ್ಟ್ರಮಟ್ಟದ ಅನೇಕ ಚಿಂತನಶೀಲ ಪತ್ರಿಕೆಗಳನ್ನು ಅವರು ಚಂದಾಮಾಡಿ ತರಿಸಿಕೊಳ್ಳುತ್ತಿದ್ದರು. ಜಗತ್ತಿನ ಶ್ರೇಷ್ಠಲೇಖಕರ ಸಾಹಿತ್ಯವನ್ನು ಓದುತ್ತಿದ್ದರು. ಅವರ ದಿನಚರಿಯಲ್ಲಿ ಮೇಡಂ ಬಾವರಿಯ ಕಾದಂಬರಿಯನ್ನು ಓದಿ ಮುಗಿಸಿದ ಬಳಿಕ ಬರೆದ ಟಿಪ್ಪಣಿಯೊಂದು ಇದ್ದು ಅದು ಹೀಗಿದೆ:

“ಗುಸ್ಟಾವ್ ಫ್ಲಾಬೋನ ಮೇಡಂ ಬೊವೆರಿ ಓದಿ ಮುಗಿಸಿದೆ. ಹೆಣ್ಣಿನ ಹೃದಯ ಗೂಢ ಗಂಭೀರ ಭಾವನೆ -ಸಂವೇದನೆಗಳನ್ನು ಫ್ಲಾಬೋ ಚಿತ್ರಿಸಿದ ಕಲಾವಂತಿಕೆಯು ಸಾಹಿತ್ಯ ಪ್ರಪಂಚದಲ್ಲಿಯೇ ಅಪ್ರತಿಮವಾದುದು. ಐಂದ್ರಜಾಲಿಕ ಸನ್ನಿವೇಶಗಳನ್ನು ಕಲ್ಪಿಸಿ ರೋಮಾಂಚಕ ಕತೆ ಹೇಳಹೊರಟು ವಾಸ್ತವತೆಗೆ ಅಪಚಾರ ಬಗೆಯುವ ದಾರಿ ಈ ಕೃತಿಕಾರನದಲ್ಲ. ಇಲ್ಲಿ ವಾಸ್ತವತೆಯು ಕಲೆಯ ಮೂಸೆಯಲ್ಲಿ ಎರಕಗೊಂಡು ಇಳಿದಿದೆ. ಕೃತಿಕಾರನ ಅಪಾರ ಭಾವಜ್ಞತೆಯಿಂದಾಗಿ ಇಲ್ಲಿಯ ನಗ್ನ ವಾಸ್ತವತೆಗೆ ದಿವ್ಯಶೋಭೆ ಬಂದಿದೆ. ಪಾತ್ರ ಪೋಷಣೆಗಾಗಿ ಆಶ್ರಯಿಸಿದ ಸನ್ನಿವೇಶಗಳ ಚಿತ್ರಣವಂತೂ ಬಹಳ ಚೇತೋಹಾರಿಯಾಗಿದೆ. ಮೇಡಂ ಬೊವೆರಿ ಒಂದು ರಹಸ್ಯಮಯ ಜೀವ. ಅವಳ ಬದುಕಿನಲ್ಲಿ ನಿತ್ಯ ವಿನೋತನ ವಸಂತ ಬೇಕು. ಸುಮಗಳ ಪರಿಮಳ ಹೊತ್ತು ಬೀಸುವ ಸಮೀರಣ, ಮಧುಗಾನದ ತಾನ ಎಳೆಯುವ ದುಂಬಿಗಳ ಝೇಂಕಾರ, ಪಾರಾವತಗಳ ಉದಯರಾಗ, ಕಳಕಂಠದ ಕೂಜನ- ಇತ್ಯಾದಿ ಸೃಷ್ಟಿಯ ಶಂಗಾರ ಲೀಲೆಗಳು ಅವಳ ರಸಪ್ರಕೃತಿಯನ್ನು ಚೇತಿಸಲು ಮೀಸಲಾಗಿರಬೇಕು. ಆದರೆ ಚಾರ್ಲ್ಸನ ಕೈಹಿಡಿದ ಅವಳ ಆತ್ಮದ ಹಸಿವೆ-ನೀರಡಿಕೆಗಳು ಹಿಂಗಲಿಲ್ಲ. ಚಿರವಿರಹಿಯಾದ ಈ ಪ್ರೇಮಯೋಗಿನಿಯ ಕೊನೆ! ಎದೆಕರಗಿ ಹೋಗುತ್ತದೆ. ಅಸಹ್ಯವಾದ ದುರಂತ. ಅಂತರಾಳದ ಮಿಡಿತ, ಕರುಳಿನ ಕಲಮಲ, ಕಂಬನಿ.. ಆರ್ಸೆನಿಕ್ ನಂಜು ನುಂಗಿ ಅವಳು ಪ್ರಜ್ಞಾಶೂನ್ಯಳಾಗಿರುವಾಗಿನ ಸನ್ನಿವೇಶವನ್ನು ಎಂದಿಗೂ ಮರೆಯಲಾಗದು. ಶಿ ಹರ್ಡ್ ನನ್; ಬಟ್ ದಿ ಇಂಟರ್ ಮಿಟೆಂಟ್ ಲ್ಯಾಮೆಂಟೇಶನ್ಸ್ ಆಫ್ ದಿಸ್ ಪೂರ್ ಹಾರ್ಟ್, ಸ್ವೀಟ್ ಅಂಡ್ ಇಂಡಿಸ್ಟಿಂಕ್ಟ್ ಲೈಕ್ ದಿ ವೇವ್ಸ್ ಆಫ್ ಸಿಂಫೊನಿಯ ಡೈಯಿಂಗ್ ಅವೇ ಎಂಥ ಮಾತು! ಅದಿನ್ನೂ ಕಿವಿಗಳಲ್ಲಿ ಗುಂಜರಿಸುತ್ತಿದೆ

ಅಬ್ಬಿಗೇರಿಯವರ ಗದ್ಯಬರೆಹವನ್ನು ನೋಡಿದರೆ, ಅದು ಪ್ರಾಚೀನ ಕನ್ನಡ ಕಾವ್ಯಗಳ ಹಾಗೂ ಬೇಂದ್ರೆ ಕುವೆಂಪು ಅನಕೃ ಮುಂತಾದವರ ಬರೆಹಗಳಿಂದ  ರೂಪುಪಡೆದಿದೆ ಎಂದು ಅನಿಸುವುದು. ಅಬ್ಬಿಗೇರಿಯವರು ಅನೇಕ ಲೇಖನಗಳನ್ನು ಬರೆದಿರುವರು. ಅವುಗಳಲ್ಲಿ ನನಗೆ ಪ್ರಿಯವಾದ ಲೇಖನವೆಂದರೆ ‘ಮುಳ್ಳಿನ ಪೊದೆಯಲ್ಲಿ ಗುಲಾಬಿ. ಹಳ್ಳಿಗಳಲ್ಲಿ ಅಡ್ಡಾಡಿ ಜನರನ್ನು ಸೇರಿಸಿ ಅವರಿಗೆ ರಾಜಕೀಯ ತಿಳುವಳಿಕೆ ಕೊಡಬೇಕು ಎಂದು ಬ್ಬಿಗೇರಿಯವರು ಊರೂರು ತಿರುಗಲು ಹೋದಾಗ ಆದ ಅನುಭವ ಇಲ್ಲಿದೆ. ಇದರಲ್ಲಿ ಅವರು ಆದರ್ಶ ಮತ್ತು ವಾಸ್ತವತೆಯನ್ನು ಮುಖಾಮುಖಿ ಮಾಡಿನೋಡುವ ನಿಷ್ಠುರತೆ ಮತ್ತು ಪ್ರಾಮಾಣಿಕತೆಯಿದೆ. ದಿನನಿತ್ಯದ ಕಷ್ಟಗಳಲ್ಲಿ ಬೇಯುವ ಹಳ್ಳಿಯ ಜನ, ತಮ್ಮನ್ನು ಬದಲಿಸಲೆಂದು ದಿಢೀರ್ ಆಗಮಿಸುವ ಈ ಚಳುವಳಿಗಾರರ ಆದರ್ಶವಾದಿ ಬೋಧನೆಯನ್ನು ತಿರಸ್ಕರಿಸುತ್ತಾರೆ. ಬಂದವರಿಗೆ ಊಟ ಕೂಡ ಕೊಡುವುದಿಲ್ಲ. ಇದರಿಂದ ಅಬ್ಬಿಗೇರಿ ಮತ್ತವರ ಸಂಗಾತಿಗಳು ಕಂಗೆಡುತ್ತಾರೆ. ಆದರೆ ಜನರ ಜತೆ ಸಂವಾದ ಮಾಡುವ ಛಲವನ್ನು ಕೈಬಿಡುವುದಿಲ್ಲ.  ಹಸಿದುಕೊಂಡೇ ಮುಂದಿನ ಹಳ್ಳಿಗೆ ಹೋಗುತ್ತಾರೆ. ಜನರನ್ನು ದೂಷಿಸುವುದಿಲ್ಲ. ಜನರೇಕೆ ಉದಾಸೀನರಾಗಿದ್ದಾರೆ ಸಿನಿಕರಾಗಿದ್ದಾರೆ ಎಂದು ಚಿಂತಿಸುತ್ತಾರೆ. ಆತ್ಮವಿಮರ್ಶೆಗೆ ತೊಡಗುತ್ತಾರೆ.

ಅಬ್ಬಿಗೇರಿಯವರ ಆದರ್ಶವಾದಿ ಭಾವುಕತೆಯ ಇನ್ನೊಂದು ಮುಖವೆಂದರೆ, ಸದಾ ಉರಿಯುವ ನೈತಿಕಪ್ರಜ್ಞೆ. ಕೆಟ್ಟದನ್ನು ಕಂಡು ತಟ್ಟನೆ ಸಿಡಿಯುವ ಗುಣ; ತಮ್ಮ ಮಿತಿಯಲ್ಲೇ ಕೆಡುಕನ್ನು ಮುಖಾಮುಖಿ ಮಾಡುವ ಕ್ರಿಯಾಶೀಲತೆ. ಅನೇಕರು ತಮ್ಮ ಯೌವನದ ದಿನಗಳಲ್ಲಿ ರಾಜಿರಹಿತ ಹೋರಾಟ ಮಾಡುವ ಆದರ್ಶಗಳಿಂದ ತುಳುಕಾಡುತ್ತಾರೆ. ಆದರೆ ಬದಲಾದ ಸನ್ನಿವೇಶಗಳು ಅವರನ್ನು ಅನೇಕ ಬಗೆಯ ರಾಜಿಗಳಿಗೆ ಕೆಲವೊಮ್ಮೆ ಅನೈತಿಕ ಆಯ್ಕೆಗಳಿಗೆ ಕರೆದೊಯ್ಯುತ್ತವೆ; ಕೆಲವೊಮ್ಮೆ ಹಳೆಯ ಆದರ್ಶಗಳನ್ನು ನೆನೆದು ಹಳಹಳಿಸುತ್ತ ವರ್ತಮಾನವನ್ನು ಟೀಕಿಸುವ ಸಿನಿಕತೆ ಮತ್ತು ಹತಾಶೆಗಳಿಗೆ ಕರೆದೊಯ್ಯುತ್ತವೆ. ಅಬ್ಬಿಗೇರಿಯವರಲ್ಲಿ ಈಚಿನ ಕರ್ನಾಟಕ ಮತ್ತು ಭಾರತದ ವಿದ್ಯಮಾನಗಳನ್ನು ಕಂಡು ಒಂದು ಬಗೆಯ ಹತಾಶೆಯ ಭಾವ ಬಂದಿತ್ತು. ಆದರೆ ಕ್ರಿಯಾಶೀಲತೆ ತಮ್ಮ ತಲೆಮಾರಿಗೆ ಮುಗಿದುಹೋಯಿತು ಎಂಬ ಸಿನಿಕತೆ ಅವರನ್ನು ಸೋಂಕಲಿಲ್ಲ. ಅವರು ತಮ್ಮ ಕಿರಿಯ ಮಿತ್ರ ಗಜೇಂದ್ರಗಡದ ಕೆಂಚರೆಡ್ಡಿಯವರಿಗೆ ಬರೆದ ಪತ್ರವೊಂದರಲ್ಲಿ, ಅವರು ತಮ್ಮನ್ನು ಈಚೆಗೆ ಭೇಟಿಯಾದ ವಿದ್ಯಾರ್ಥಿಗಳನ್ನು ಮತ್ತೊಮ್ಮೆ ಕಳಿಸುವಂತೆ ಕೋರುತ್ತಾರೆ. ಈ ದೇಶದ ತರುಣ ಜತೆ ಚರ್ಚೆ ಮಾಡುವ ಉದ್ದೇಶ ತಮಗಿದೆ ಎಂದು ಬರೆಯುತ್ತಾರೆ. ಅವರಿಗೆ ಹೊಸ ತಲೆಮಾರಿನ ಚೈತನ್ಯದಲ್ಲಿ ಬಹಳ ಭರವಸೆಯಿತ್ತು. ಚರಿತ್ರೆಯ ನಿರಂತರತೆಯಲ್ಲಿ ಅಪಾರ ನಂಬಿಕೆಯಿತ್ತು. ಆದ್ದರಿಂದಲೇ ‘ಕೊಂಡಿ ಕಳಚಿದ ರೂಪಕದಲ್ಲಿ ಅವರ ಸಾವನ್ನು ಬಣ್ಣಿಸುವುದು ಉಚಿತವಲ್ಲ ಅನಿಸುತ್ತ್ತಿದೆ.