ಒಂದು ವೇಳೆ ನಮ್ಮನ್ನಾಳುವ ಅಧಿಕಾರಗಳು ಆಡಳಿತಗಳು ಕಾಲಕಾಲಕ್ಕೆ ನಮ್ಮ ಬಳಿ ಬಂದು ಯಾವುದರ ಬಗ್ಗೆ ಹೆದರಬೇಕು ಯಾವ ಗಂಡಾಂತರದ ಬಗ್ಗೆ ಬೆಚ್ಚಬೇಕು ಎಂದು ತಿಳಿಸಿದ್ದು ಮಾತ್ರವೇ ನಮ್ಮ ಸಮಸ್ಯೆಗಳು ಭಯಗಳು ಎಂದು ನೀವು ಭಾವಿಸುವವರಾದರೆ ಅಟ್ಲಾಂಟಿಕ್ ಸಾಗರದ ಆ ಬದಿಯಲ್ಲಿರುವ ಅಮೆರಿಕದಿಂದ ಶುರುವಾಗಿ ಅದೇ ಸಾಗರದ ಇನ್ನೊಂದು ತಟದಲ್ಲಿರುವ ಬ್ರಿಟನ್ನಿನ ನಗರಗಳಲ್ಲಿ ಪ್ರತಿಧ್ವನಿಸುತ್ತಿರುವ ಕೂಗುಗಳನ್ನು ಅರ್ಥಹೀನತೆಯ ಭಾವೋದ್ರೇಕದ ಪರಮಾವಧಿ ಎಂದು ಅಲಕ್ಷಿಸುತ್ತಿದ್ದೀರಿ. ಮತ್ತೆ ದಶಕಗಳ ಶತಮಾನಗಳ ತಮ್ಮ ಧ್ವನಿಯನ್ನು ಇನ್ನೊಮ್ಮೆ ಗಟ್ಟಿಯಾಗಿ ದಾಖಲಿಸಲು ನಿಜವಾದ ಪರಿವರ್ತನೆಯನ್ನು ಆಗ್ರಹಿಸಲು ಇದೇ ಸಂದರ್ಭ ಎಂದು ನಂಬುವವರಾದರೆ ಈ ಚಳವಳಿ ಹೀಗೆ ಮತ್ತು ಈಗ ನಡೆಯುವುದೇ ಸರಿ ಎನ್ನುವ ತೀರ್ಮಾನದಲ್ಲಿದ್ದೀರಿ.
ಯೋಗೀಂದ್ರ ಮರವಂತೆ ಬರೆಯುವ ಇಂಗ್ಲೆಂಡ್ ಲೆಟರ್

 

ಈ ಜಗತ್ತು ವಿಭಜಿಸಲ್ಪಟ್ಟಿರುವುದು ಬರೇ ದೇಶ ಸಾಮ್ರಾಜ್ಯಗಳ, ಭೂಮಿ ಸಮುದ್ರಗಳ, ಕಾಡು ನಾಡುಗಳ ಗಡಿ ಬೇಲಿ ತೀರಗಳಂತಹ ರೇಖೆಗಳಿಂದ ಮಾತ್ರ ಅಲ್ಲ ಎನ್ನುವುದೂ ಒಂದು ನಿತ್ಯದ ಅನುಭವ. ಭೂಮಿಯ ಮೇಲಿರುವ ಎಲ್ಲ ಸೀಮೆ ಗೆರೆಗಳನ್ನು ಅಳಿಸಿಹಾಕಿದರೂ ಸಂಸ್ಕೃತಿ ಪರಂಪರೆ ಸಂಪ್ರದಾಯ ಇತಿಹಾಸ ಪುರಾಣ ಆಚರಣೆಗಳಂತಹ ಮಹಾಭಾರದ ಶಬ್ದಗಳಿಂದ ಹಿಡಿದು ದೈನಿಕದ ಅತ್ಯಂತ ಸಾಮಾನ್ಯವಾದ ನಡೆ ನುಡಿ ಉಡುಪು ಜೀವನಶೈಲಿ ನಂಬಿಕೆ ಅಪನಂಬಿಕೆ ಯೋಚನಾಕ್ರಮ ಇತ್ಯಾದಿಗಳ ತನಕವೂ ನಾವು ಒಬ್ಬರಿನ್ನೊಬ್ಬರಿಗಿಂತ ವಿಭಿನ್ನರು; ಮತ್ತೆ ನಮ್ಮೊಳಗಿನ ಅಂತಹ ಭಿನ್ನತೆಗಳು ಹುಟ್ಟಿಸುವ ಕ್ರಿಯೆ ಪ್ರತಿಕ್ರಿಯೆಗಳನ್ನು ಪ್ರದರ್ಶಿಸುತ್ತಲೇ ಇನ್ನೊಬ್ಬರ ಮೇಲೆ ಸಾಧ್ಯ ಆದರೆ ಹೇರುತ್ತಲೇ ಬದುಕುವವರು.

ಇಡೀ ಪ್ರಪಂಚದಲ್ಲಿ ಅಥವಾ ನಾವುನಾವು ಬದುಕುವ ನಮ್ಮ ಕಲ್ಪನೆಯ ಮಿತಿಯ ಜಗತ್ತಿನಲ್ಲಿ ಎಷ್ಟು ವಿಂಗಡಣೆಗಳು ವಿಭಾಗಗಳು ಇವೆಯೋ, ಅವೆಲ್ಲ ಅಂದಾಜಿಗೆ ನಿಲುಕದ್ದು. ಇಷ್ಟೆಲ್ಲಾ ಬಗೆಯ ವಿಭಜನೆಗಳಲ್ಲಿ ಬಹುಶಃ ಕರಾಳವಾದದ್ದು ಅಥವಾ ತನ್ನ ಸುತ್ತಮುತ್ತಲ ಮೇಲೆ ತೀವ್ರ ಪರಿಣಾಮ ಬೀರುವಂತಹದ್ದು ನಮ್ಮ ಮನಸ್ಸಿನೊಳಗೆ ಖಾಯಂ ಆಗಿ ನೆಲೆ ಕಂಡುಕೊಳ್ಳುವ ನಾವು-ಅವರು, ನಮ್ಮದು-ಅವರದು ಶ್ರೇಷ್ಠ -ಕನಿಷ್ಠ ಮೇಲು-ಕೀಳು ಎನ್ನುವಂತಹ ವಿಭಜನೆಗಳು. ಇವು ಕಣ್ಣಿಗೆ ಕಾಣದವು ಊಹೆಗೆ ನಿಲುಕದವು ಯಾವುದೇ ಬಾಹ್ಯ ಒತ್ತಡ ಬೋಧನೆ ಪ್ರಭಾವಗಳಿಗೂ ಸುಲಭದಲ್ಲಿ ಬಗ್ಗದೆ ಅಚಲವಾಗಿ ತಲೆತಲಾಂತರದಿಂದ ನಿಂತವು.

ಇಂತಹ ಯಾವುದೊ ಒಂದು ಬಗೆಯ ಮಾನಸಿಕ ವಿಭಜನೆಯಿಂದಾದರೂ ತಪ್ಪಿಸಿಕೊಂಡು ಬದುಕಿದವರು ಇದ್ದಾರೋ ಇಲ್ಲವೋ ಗೊತ್ತಿಲ್ಲ, ಸತ್ತ ನಂತರವಾದರೂ ಇವು ಅಳಿಯುತ್ತವೋ ಉಳಿಯುತ್ತವೋ, ಹಿಂತಿರುಗಿ ಬಂದು ಯಾರೂ ಹೇಳಿಲ್ಲ. ಹೇಗೆ ಎಲ್ಲಿಂದ ನೋಡಿದರೂ ಇದು ವಿಭಜಿತ ಜಗತ್ತು. ಇಂತಹ ವಿಭಜಿತ ಜಗತ್ತಿನಲ್ಲಿ ಒಂದು ಜನಾಂಗ ಇನ್ನೊಂದು ಜನಾಂಗವನ್ನು ಕನಿಷ್ಠ ಅಲ್ಪ ಎಂದು ನೋಡುತ್ತಾ ಬಂದ ಪರಂಪರೆಗೆ ಮತ್ತೊಮ್ಮೆ ಸಾಕ್ಷಿಯಾಗುವಂತಹ ಘಟನೆ ಇತ್ತೀಚಿಗೆ ಅಮೆರಿಕದಲ್ಲಿ ನಡೆಯಿತು ಮತ್ತೆ ಅದರ ಪರಿಣಾಮಗಳು ಪ್ರತಿಕ್ರಿಯೆಗಳು ಬ್ರಿಟನ್ನಿಗೂ ಕ್ಷಿಪ್ರವಾಗಿ ಹರಿದುಬಂದವು .

ಆ ಘಟನೆಯ ಬಗ್ಗೆ ಏನು ಹೇಳಹೊರಟರೂ “ಒಂದು ವೇಳೆ..” ಎಂದೇ ಆರಂಭಿಸಬೇಕಾಗಿದೆ. “ಒಂದು ವೇಳೆ…” ಎನ್ನುವ ಪದಪುಂಜಗಳ ಬಳಕೆಯೇ ನಮ್ಮ ಇಕ್ಕಟ್ಟು, ಇಬ್ಬಂದಿತನ ವಿಭಜನೆ ವಿಭಿನ್ನತೆಗಳನ್ನು ಅಭಿವ್ಯಕ್ತಿಗೊಳಿಸಲೇ ಹುಟ್ಟಿಕೊಂಡದ್ದಿರಬೇಕು.

ಒಂದು ವೇಳೆ, ಈಗ ಸುದ್ದಿಯಲ್ಲಿರುವ ಸಾಂಕ್ರಾಮಿಕ ಕ್ರಿಮಿಗೆ ನೀವು ಜಾಸ್ತಿ ಬೆದರಿದವರಾದರೆ ಅಥವಾ ಅದು ಹಬ್ಬಿಸಿದ ರೋಗ ನಿಮ್ಮ ಬದುಕಿನ ಸದ್ಯದ ಅತಂತ್ರತೆ ಅವ್ಯವಸ್ಥೆಗಳಿಗೆ ಮೂಲಕಾರಣ ಎಂದು ತಿಳಿಯುವವರಾದರೆ ಇದೀಗ ಮನೆಯೊಳಗೇ ಕೂತಿದ್ದೀರಿ. ಕೋವಿಡ್ ತಗ್ಗಲಿ ಲಾಕ್ ಡೌನ್ ಮುಗಿಯಲಿ ಎಂದು ಕಾದಿದ್ದೀರಿ. ಮತ್ತೆ ನಮ್ಮ ವಿಜ್ಞಾನ ವೈದ್ಯಶಾಸ್ತ್ರ ತಿಳಿದ ಈಗಿನ ಹಿಂದಿನ ವೈರಾಣುಗಳಿಗಿಂತ ಭೀಕರವೂ ಪ್ರಬಲವೂ ದೀರ್ಘಾಯುಷಿಯೂ ಆಗಿರುವ, ಆಮೇಲೆ ಕೆಲವು ಆಯ್ದ ಪಗಂಡ ಸಂತತಿಗಳನ್ನು ಮಾತ್ರ ಹುಡುಕಿ ವ್ಯವಸ್ಥಿತವಾಗಿ ನಿತ್ಯವೂ ಯಾವುದೊ ಒಂದು ಬಗೆಯಲ್ಲಿ ಕಾಡುವ ಆಪತ್ತು ವ್ಯಾಧಿಯ ಕುರಿತು ಆಕ್ರೋಶ ಭಾವಾವೇಶ ತುಂಬಿಕೊಂಡವರಾಗಿದ್ದರೆ ಬ್ರಿಟನ್ನಿನ ಪ್ರಮುಖ ನಗರಗಳಾದ ಲಂಡನ್, ಮ್ಯಾಂಚೆಸ್ಟರ್, ಬರ್ಮಿಂಗ್ ಹ್ಯಾಮ್, ಲಿವರ್ಪೂಲ್, ಎಡಿನ್ಬರ್ ಕಾರ್ಡಿಫ್ ಶೆಫೀಲ್ಡ್ ಬ್ರಿಸ್ಟಲ್ ಗಳ ಆಯಕಟ್ಟಿನ ಬೀದಿಯಲ್ಲೋ ಚೌಕದಲ್ಲೋ ಕಿಕ್ಕಿರಿದು ತುಂಬಿ ಗಟ್ಟಿ ಧ್ವನಿಯ ಘೋಷಣೆ ಕೂಗಿದ್ದೀರಿ. ಒಂದು ವೇಳೆ ನೀವು ದೂರದ ಅಮೆರಿಕದ ಕಪ್ಪು ಪ್ರಜೆಯನ್ನು ಅಥವಾ ಬಿಳಿಯನಲ್ಲದ ವ್ಯಕ್ತಿಯನ್ನು ಉಸಿರುಗಟ್ಟಿಸಿ ಹೊಸಕಿಹಾಕಿದ್ದು ನಿತ್ಯವೂ ಒಂದಷ್ಟು ಜೀವಗಳು ಹುಟ್ಟಿ ಇನ್ನೊಂದಿಷ್ಟು ಜೀವರುಗಳು ಅನಿವಾರ್ಯವಾಗಿಯೋ ಆಕಸ್ಮಿಕವಾಗಿಯೋ ಶವವಾಗುವ ಜೀವನಚಕ್ರದ ಅಪರಿಚಿತ ದುರಾದೃಷ್ಟಕರ ಸಾವು ಎಂದು ವಾದಿಸುವವರಾದರೆ ಕೋವಿಡ್ ಹಬ್ಬುವ ಕಾಲದಲ್ಲೂ ಭೀತಿಬಿಟ್ಟು ಬೀದಿಗಿಳಿದು ಪ್ರತಿಭಟಿಸುವುದನ್ನು ರೋಗ ಹಬ್ಬುವ ಸಾಧ್ಯತೆ ಹೆಚ್ಚಿಸುತ್ತಿರುವುದನ್ನು ಬೇಜವಾಬ್ದಾರಿತನ ಎಂದು ಶಪಿಸುತ್ತಲೋ ಮೂದಲಿಸುತ್ತಲೋ ಇದ್ದೀರಿ.

ಮತ್ತೆ ಪ್ರಬಲ ಜನಾಂಗ ಎನ್ನುವ ಕಲ್ಪನೆ ಮೂಡಿಸುವ ಹೆಮ್ಮೆ, ಮೂಲವಾಸಿಗಳು ಎನ್ನುವ ನಂಬಿಕೆ ನೀಡುವ ಹಕ್ಕು, ಅಧಿಕಾರ ಬಲಗಳು ನೀಡುವ ಧಾರ್ಷ್ಟ್ಯ ಅಥವಾ ಅದೃಷ್ಟ ಅನುಕೂಲಗಳ ಆಶ್ರಯದಲ್ಲಿ ಖಾಯಂ ಇರುವಾಗ ಅವೆರಡೂ ಇಲ್ಲದವರ ಬದುಕಿನ ಬಗೆಗೆ ಇರುವ ಅಜ್ಞಾನ ತಾತ್ಸಾರ ನಿರಾಸಕ್ತಿಗಳು ಕೊನೆಗೆ ಈ ಎಲ್ಲ ಸೇರಿ ಕೆಲವು ಪ್ರಕಾರದ ಜೀವಗಳ ಬಗೆಗೆ ಮೂಡಿಸುವ ತಾರತಮ್ಯ ಬೇಧ ಪಕ್ಷಪಾತಗಳ ಸಣ್ಣ ಅನುಭವ ಇರುವವರಾಗಿದ್ದರೆ ಇದೀಗ ಪ್ರತಿಭಟನೆಗೆ ಇಳಿದವರ ಬಗೆಗೆ ಮಾನಸಿಕ ಸಹಮತದಲ್ಲೋ ಸಹಾನುಭೂತಿಯಲ್ಲೋ ಇದ್ದೀರಿ. ಒಂದು ವೇಳೆ ನಮ್ಮನ್ನಾಳುವ ಅಧಿಕಾರಗಳು ಆಡಳಿತಗಳು ಕಾಲಕಾಲಕ್ಕೆ ನಮ್ಮ ಬಳಿ ಬಂದು ಯಾವುದರ ಬಗ್ಗೆ ಹೆದರಬೇಕು ಯಾವ ಗಂಡಾಂತರದ ಬಗ್ಗೆ ಬೆಚ್ಚಬೇಕು ಎಂದು ತಿಳಿಸಿದ್ದು ಮಾತ್ರವೇ ನಮ್ಮ ಸಮಸ್ಯೆಗಳು ಭಯಗಳು ಎಂದು ನೀವು ಭಾವಿಸುವವರಾದರೆ ಅಟ್ಲಾಂಟಿಕ್ ಸಾಗರದ ಆ ಬದಿಯಲ್ಲಿರುವ ಅಮೆರಿಕದಿಂದ ಶುರುವಾಗಿ ಅದೇ ಸಾಗರದ ಇನ್ನೊಂದು ತಟದಲ್ಲಿರುವ ಬ್ರಿಟನ್ನಿನ ನಗರಗಳಲ್ಲಿ ಪ್ರತಿಧ್ವನಿಸುತ್ತಿರುವ ಕೂಗುಗಳನ್ನು ಅರ್ಥಹೀನತೆಯ ಭಾವೋದ್ರೇಕದ ಪರಮಾವಧಿ ಎಂದು ಅಲಕ್ಷಿಸುತ್ತಿದ್ದೀರಿ. ಮತ್ತೆ ದಶಕಗಳ ಶತಮಾನಗಳ ತಮ್ಮ ಧ್ವನಿಯನ್ನು ಇನ್ನೊಮ್ಮೆ ಗಟ್ಟಿಯಾಗಿ ದಾಖಲಿಸಲು ನಿಜವಾದ ಪರಿವರ್ತನೆಯನ್ನು ಆಗ್ರಹಿಸಲು ಇದೇ ಸಂದರ್ಭ ಎಂದು ನಂಬುವವರಾದರೆ ಈ ಚಳವಳಿ ಹೀಗೆ ಮತ್ತು ಈಗ ನಡೆಯುವುದೇ ಸರಿ ಎನ್ನುವ ತೀರ್ಮಾನದಲ್ಲಿದ್ದೀರಿ.

ಇನ್ನು ಈ ಎರಡು ಬಗೆಯ ಅಭಿಪ್ರಾಯಗಳಿಂದಲೂ ದೂರದವರಾಗಿ ಇಷ್ಟಕ್ಕೆಲ್ಲ ಉತ್ತರಿಸಬೇಕಾದವರೇ ನೀವಾಗಿರುವ ಗುರುತರ ಹೊಣೆ ನಿಮ್ಮ ಮೇಲಿದ್ದರೆ ಬಹುತೇಕ ಶಾಂತಿಯುತವಾದ ಚಳವಳಿಯ ಎಡೆಯಲ್ಲಿ ನಡೆಯುವ ಲೂಟಿ ದೊಂಬಿಗಳನ್ನು ಹೆಚ್ಚು ಉಲ್ಲೇಖಿಸಿ ಉತ್ತರದಾಯಿತ್ವದ ದಾರಿ ತಪ್ಪಿಸುವ ಪ್ರಯತ್ನದಲ್ಲಿ ಬೆವರೊರೆಸಿಕೊಳ್ಳುತ್ತಿದ್ದೀರಿ ಅಥವಾ ಈ ಚಳವಳಿಯ ತೀವ್ರ ಆಶಯ ಪ್ರತಿಭಟನೆಗಳ ಒಳಪ್ರವಾಹವನ್ನು ಆಲಿಸುತ್ತ ನೀವು ಭಾಗವಾಗಿರುವ ಆಡಳಿತ ಅಧಿಕಾರದ ಪ್ರಭಾವದಲ್ಲಿರುವ ವ್ಯವಸ್ಥೆಗಳನ್ನು ಹೇಗೆ ಹೀಗೆ ಬದಲಿಸಬಹುದು ಎನ್ನುವ ಚಿಂತನೆಯಲ್ಲಿ ಇದ್ದೀರಿ.

ಹೀಗೆ ಮನಸಿನೊಳಗಿನ ವಿಭಜನೆಯ ಕಾರಣದಿಂದ ನಡೆದ ನಡೆಯುವ ಕೃತ್ಯದ ಸುತ್ತಲಿನ ಕ್ರಿಯೆ ಪ್ರತಿಕ್ರಿಯೆಗಳ ಯಾವ ಮಗ್ಗುಲಲ್ಲಿ ನಿಂತು ಯೋಚಿಸುವವರು ಬೆಂಬಲಿಸುವವರು ವಿರೋಧಿಸುವವರು ನಾವಾದರೂ ಆ ಎಲ್ಲ ಯೋಚನೆಗಳ ದಿಕ್ಕನ್ನು ಕೆಲವು ಕ್ಷಣಗಳ ಮಟ್ಟಿಗಾದರೂ ಬದಲಿಸುವಂತೆ ಮೊನ್ನಿನ ಭಾನುವಾರ ಬ್ರಿಟನ್ನಿನ ನೈಋತ್ಯ ಕರಾವಳಿಯ ನಮ್ಮೂರು ಬ್ರಿಸ್ಟಲ್ ಅಲ್ಲಿ ಒಂದು ಶತಮಾನಕ್ಕಿಂತ ದೀರ್ಘ ಕಾಲ ಅಲುಗಾಡದೇ ನಿಂತಿದ್ದ ಕಂಚಿನ ಪ್ರತಿಮೆಯ ಕೊರಳಿಗೆ ಹಗ್ಗದ ಪಾಶ ಬಿಗಿದು ಕೆಡೆದು ಉರುಳಿಸಿಕೊಂಡು ಹೋಗಿ ಅಲ್ಲೇ ಪಕ್ಕದ ಕಾಲುವೆಯಲ್ಲಿ ಮುಳುಗಿಸಿದ ಪ್ರಸಂಗ ನಡೆಯಿತು. ಸೂಕ್ಷ್ಮ ನಯ ನಾಜೂಕು ಔಪಚಾರಿಕ ಉದ್ರೇಕರಹಿತ ನಡವಳಿಕೆಗಳೇ ಹೆಚ್ಚಾಗಿ ತುಂಬಿರುವ ಊರು ದೇಶದಲ್ಲಿ ಸಣ್ಣ ಕೆಮ್ಮಿನ ದೊಡ್ಡ ಚಪ್ಪಾಳೆಯ ಸದ್ದುಗಳಿಗೂ ಹುಬ್ಬೇರುವಿಕೆ ಸಿಗುವ ಸಮಾಜದಲ್ಲಿ ನಡೆದ “ಮೂರ್ತಿ ಭಂಜನ” ವ್ಯಾಪಕ ಆಸಕ್ತಿ ಚರ್ಚೆಗೆ ಕಾರಣವಾಯಿತು.

ಇಲ್ಲಿ ನಡೆಯುತ್ತಿರುವ ಚಳವಳಿಯ ಮಟ್ಟಿಗೆ ಇದು ಸಾಂಕೇತಿಕವಾದರೂ ಕ್ರಾಂತಿಕಾರಕ ಹೆಜ್ಜೆ ಎಂದು ಚಳವಳಿಯಲ್ಲಿ ಕ್ರಿಯಾತ್ಮಕವಾಗಿ ಅಲ್ಲದಿದ್ದರೆ ಮಾನಸಿಕವಾಗಿ ಭಾಗವಹಿಸುವ ಗುಂಪಿನ ಅಭಿಪ್ರಾಯವಾದರೆ ಇನ್ನು ಕೆಲವು ಚಳವಳಿಗಾರರಿಗೆ, ಪ್ರತಿಭಟನೆಗೆ ಕೆಟ್ಟ ಹೆಸರು ತರಬಲ್ಲ ಪುಂಡಾಟಿಕೆ ಇದು ಅಂತಲೂ ಅನಿಸಿತು. ಪ್ರತಿಮೆಯನ್ನು ಈ ಮಾದರಿಯಲ್ಲಿಯೇ ತೆಗೆಯಬೇಕಿತ್ತೇ? ಬಾರದೇ? ಎನ್ನುವ ಚರ್ಚೆಗಳಾಗಿ ಪರವಿರೋಧಗಳಾಗಿ ತರ್ಕಿಸುವುದಕ್ಕೆ ಕಾರಣವಾಯಿತು. “ಕಪ್ಪು ಜನರ ಜೀವ ಮುಖ್ಯ” ಎನ್ನುವ ಶಿರೋನಾಮೆಯಲ್ಲಿ ಅಮೆರಿಕದಲ್ಲಿ ಹುಟ್ಟಿದ ಚಳವಳಿ ಬ್ರಿಟನ್ನಿನಲ್ಲಿ ಮಾರ್ದನಿಸುವಾಗ ಇಲ್ಲಿನ ಐತಿಹಾಸಿಕ, ವ್ಯವಸ್ಥಿತ ವರ್ಣಬೇಧ ಅಥವಾ ಜನಾಂಗೀಯ ದ್ವೇಷಗಳ ವಿರುದ್ಧದ ಹೋರಾಟವಾಗಿ ರೂಪಾಂತರಗೊಂಡಿದ್ದು “ನಿರಪರಾಧಿಯಲ್ಲದ ಬ್ರಿಟನ್” ಎನ್ನುವ ಫಲಕಗಳು ಪ್ರದರ್ಶಿಸಲ್ಪಟ್ಟಿದ್ದು ಅಚ್ಚರಿಯ ವಿಷಯವಲ್ಲ. ಅಮೆರಿಕದಂತೆ ಪೊಲೀಸರ ಕ್ರೌರ್ಯ ಬ್ರಿಟನ್ನಿನ ಯಾವ ಸಮುದಾಯವನ್ನೂ ಚಳವಳಿಗೆ ಪ್ರೇರೇಪಿಸಲಿಕ್ಕಿಲ್ಲ.

ಇಲ್ಲಿನ ಆರಕ್ಷಕರು ಹಿಡಿಯಬೇಕಾದ ಕಳ್ಳರನ್ನು ಪುಂಡರನ್ನು ಹಿಡಿಯಲಿಲ್ಲ, ಕೊಲೆ ಕೇಸುಗಳ ಮೂಲ ಹುಡುಕಲಿಲ್ಲ, ಸಾಕಷ್ಟು ಪೋಲೀಸರು ಸೇವೆಗೆ ಲಭ್ಯ ಇಲ್ಲ, ಇಲಾಖೆಗೆ ಅನುದಾನ ಸಾಕಷ್ಟಿಲ್ಲ… ಇತ್ಯಾದಿಯಾಗಿ ನೀವು ಇವರನ್ನು ಮೂದಲಿಸಬಹುದಾದರೂ “ಕ್ರೌರ್ಯ” ಇಲ್ಲಿನ ಪೊಲೀಸರಿಗೆ ಸಾರ್ವತ್ರಿಕವಾಗಿ ಹೊಂದಬಹುದಾದ ಶಬ್ದವಿಶೇಷಣ ಅಲ್ಲ. ಹಾಗಂತ ಎಲ್ಲಿಂದಲೋ ಬಂದು ಈ ದೇಶದಲ್ಲಿ ಕಾಲಿಟ್ಟ ಕ್ಷಣದಿಂದ ನಮ್ಮನ್ನು ಆವರಿಸುವ ಸ್ವೀಕರಣ, ಒಳಗೊಳ್ಳುವಿಕೆ, ಸಾಮಾಜಿಕ ಸಾಮರಸ್ಯ, ಸಹಿಷ್ಣುತೆಗಳ ಮರೆಯಲ್ಲಿ, ಕಪ್ಪು ಅಥವಾ ಕಂದು ಮೈಬಣ್ಣದ ವಲಸಿಗರ ಅನುಭವಕ್ಕೆ ಬರುವ ಒಂದು ಸಾಮಾನ್ಯ ವಿಷಯವನ್ನು ನಿರ್ಲಕ್ಷಿಸುವುದೂ ಸಾಧ್ಯ ಇಲ್ಲ.

ಯಾವುದೊ ಒಂದು ಬಗೆಯ ಮಾನಸಿಕ ವಿಭಜನೆಯಿಂದಾದರೂ ತಪ್ಪಿಸಿಕೊಂಡು ಬದುಕಿದವರು ಇದ್ದಾರೋ ಇಲ್ಲವೋ ಗೊತ್ತಿಲ್ಲ, ಸತ್ತ ನಂತರವಾದರೂ ಇವು ಅಳಿಯುತ್ತವೋ ಉಳಿಯುತ್ತವೋ, ಹಿಂತಿರುಗಿ ಬಂದು ಯಾರೂ ಹೇಳಿಲ್ಲ. ಹೇಗೆ ಎಲ್ಲಿಂದ ನೋಡಿದರೂ ಇದು ವಿಭಜಿತ ಜಗತ್ತು.

ವೈಯಕ್ತಿಕ ನೆಲೆಯಲ್ಲಿ ಇಲ್ಲಿನ ಜನರು ಯಾರಿಗೂ ಹಾನಿ ಮಾಡಬಯಸದಿರುವವರಾದರೂ ಇಲ್ಲಿನ ವ್ಯವಸ್ಥೆಗಳಲ್ಲಿ ಅನುಭವಕ್ಕೆ ಬರುವ ಭೇದ ಬಹು ಜನಪ್ರಿಯ. ಕಚೇರಿ, ಆಸ್ಪತ್ರೆ, ಶಾಲೆ ಅಥವಾ ಇನ್ಯಾವುದೋ ಸಂಸ್ಥೆ ವ್ಯವಸ್ಥೆಗಳಲ್ಲಿ ಅಥವಾ ಎಲ್ಲೆಲ್ಲೂ ಬಹಳ ನಾಜೂಕಿನ ಒಂದು ನಿರಾಕರಣೆ ಅಥವಾ ತಾರತಮ್ಯ ಈ ದೇಶಕ್ಕೆ ವಲಸಿಗರು ಬರಲು ಶುರು ಆದ ಕಾಲದಿಂದಲೂ ಪಾರುಪತ್ಯ ಮಾಡಿಕೊಂಡಿದೆ. ಇಲ್ಲಿನ ಬಿಳಿಯರಿಗಿಂತ ನಾವು ಭಿನ್ನ ಅಥವಾ ಇಲ್ಲಿನ ವ್ಯವಸ್ಥೆಗಳಲ್ಲಿ ಅವರಷ್ಟು ನಾವು ಸಮಾನರಲ್ಲ ಎನ್ನುವುದು ಪ್ರತಿನಿತ್ಯದ ಅನಿಸಿಕೆ ಅಲ್ಲದಿದ್ದರೂ ಬಿಳಿಯರಲ್ಲದ ಪ್ರತಿಯೊಬ್ಬರೂ ಇಲ್ಲಿ ಕಳೆಯುವ ತಮ್ಮ ಬದುಕಿನ ಕೆಲವು ದಿನಗಳಲ್ಲಿ ಕೆಲವು ಹಂತಗಳಲ್ಲಿ ಖಂಡಿತ ಅನುಭವಿಸಿರುವ ವಿಷಯ.

ಈ ಭೇದದ ತೀವ್ರತೆ ಹಾಗು ಪರಿಣಾಮಗಳು ಬೇರೆಬೇರೆ ಸಾಮಾಜಿಕ ನೆಲೆಗಳಲ್ಲಿ ವಿಭಿನ್ನ ಔದ್ಯೋಗಿಕ ವಾತಾವರಣಗಳಲ್ಲಿ ಹಾಗು ವಿವಿಧ ವಲಸೆ ಸಮುದಾಯಗಳಲ್ಲಿ ತುಸು ಬೇರೆ ಬೇರೆಯಾಗಿ ಇವೆ. ಹಾಗಂತ ವರ್ಣಭೇದವನ್ನು ಇಲ್ಲಿನವರೇ ಗುರುತಿಸಿ ಇದರಿಂದ ಬಿಳಿಯೇತರರನ್ನು ಕಾಪಾಡಲು ಎಲ್ಲ ಸಾರ್ವಜನಿಕ ಸಾಮಾಜಿಕ ವ್ಯವಸ್ಥೆಗಳಲ್ಲಿ ಕಾನೂನು ನಿಯಮಗಳ ರಕ್ಷಣೆ ನಿರ್ಮಿಸಿದ್ದರೂ ಅವೆಲ್ಲ ಕಾನೂನಗಳ ನಡುವಿನ ಸಣ್ಣ ಅವಕಾಶದಲ್ಲಿ ಇಲ್ಲೊಂದು ವರ್ಣಭೇದದ ಮನೋಭಾವ ಉಸಿರಾಡಿಕೊಂಡು ಹಾಯಾಗಿರುತ್ತದೆ. ಬೇರೆಬೇರೆ ಊರು ದೇಶಗಳಲ್ಲಿ ಹಣ ಬಲ ಭಾಷೆ ಜಾತಿ ಮತ ನಂಬಿಕೆ ಇತ್ಯಾದಿಗಳ ಆಧಾರದಲ್ಲಿ ಬೇರುಬಿಟ್ಟಿರುವ ಹಲವು ಬಗೆಯ ತಾರತಮ್ಯ ವೈಷಮ್ಯ ಭೇದಗಳಿವೆ. ಕೆಲವೊಮ್ಮೆ ಅವೆಲ್ಲ ಭೇದಗಳಿಗೆ ಹೋಲಿಸಬಹುದಾದ ಮತ್ತೆ ಕೆಲವೊಮ್ಮೆ ಜಗತ್ತಿನ ಯಾವ ಬಗೆಯ ತಾರತಮ್ಯಕ್ಕಿಂತಲೂ ಭೀಕರವೂ ಎನಿಸುವ ಸುಧೀರ್ಘ ಕಾಲದ ವಿರೋಧವನ್ನು ಎದುರಿಸಿಯೂ ಇನ್ನೂ ಜೀವಂತವಾಗಿರುವ ವರ್ಣರಂಜಿತ ರಕ್ತಸಿಕ್ತ ಅಮಾನವೀಯ ಚರಿತ್ರೆಯನ್ನು ಹೊಂದಿದರೂ ಕಾಲಕಾಲಕ್ಕೆ ಮತ್ತೆ ಖಳನಾಗಿ ವಿಜೃಂಭಿಸುವ, ಜಗತ್ತಿನ ಬಹುದೊಡ್ಡ ಜನಾಂಗವನ್ನು ತಮಗೆ ಅಸಮಾನರಾಗಿ ಕಾಣುವ ಗುಣಲಕ್ಷಣಗಳನ್ನು ಹೊಂದಿ ಚರ್ಮದ ರಂಗಿನ ಮೇಲೆ ಮನುಷ್ಯರನ್ನು ವಿಭಜಿಸುವ ಪಿಡುಗು ವ್ಯಾಧಿ ಮನೋಸ್ಥಿತಿ ಇದಾಗಿದೆ.

ವರ್ಣಭೇದದ ಮಟ್ಟಿಗೆ ಐವತ್ತು ಎಪ್ಪತ್ತೈದು ವರ್ಷಗಳ ಹಿಂದಿನ ಕಾಲದ ಮುಕ್ತ ಅಂಗೀಕಾರ ಈಗ ಇಲ್ಲದಿದ್ದರೂ ಬ್ರಿಟಿಷ್ ಸಮಾಜದಲ್ಲಿ ಇದು ಇಂದಿಗೂ ಆಳವಾದ ಬೇರನ್ನು ಹಾಗು ಸೂಕ್ಷ್ಮವಾದ ಇರುವಿಕೆಯನ್ನು ಪಡೆದಿದೆ. ಹಾಗಾಗಿಯೇ ಕೋವಿಡ್ ವೈರಾಣು ಬ್ರಿಟನ್ನನ್ನು ಹಬ್ಬಿ ಹಿಂಸಿಸುವ ಕಾಲದಲ್ಲೂ ಮನೆಯಲ್ಲಿಯೋ ಅಥವಾ ಒಬ್ಬರಿನ್ನೊಬ್ಬರಿಂದ ದೂರ ಇದ್ದೋ ವ್ಯವಹರಿಸಬೇಕಾದ ಸಂದರ್ಭದಲ್ಲೂ ಆ ಎಲ್ಲ ಎಚ್ಚರಿಕೆ ನಿಯಮಗಳನ್ನು ಮುರಿದು ಇಲ್ಲೂ ಚಳವಳಿ ನಡೆದಿದೆ. ಉದ್ಯೋಗಾವಕಾಶ, ಕಚೇರಿಯಲ್ಲಿನ ವೃದ್ಧಿ ಭಡ್ತಿ, ಆರೋಗ್ಯ ಆರೈಕೆ ವ್ಯವಸ್ಥೆಯಿಂದ ದೊರೆಯುವ ಶುಶ್ರೂಷೆ ಸಹಾಯ, ಶಾಲಾ ಕಾಲೇಜು ಸಹಪಾಠಿಗಳ ಗೆಳೆತನ, ಅಂಗಡಿಯಲ್ಲಿ ಭೇಟಿಯಾದ ಅಪರಿಚಿತ ಆಂಗ್ಲರ ಜೊತೆಗಿನ ಹರಟೆ ಹೀಗೆ ಇಲ್ಲಿನ ಜೀವನದ ನಾನಾ ಮುಖಗಳಲ್ಲಿ ಜನಾಂಗಭೇದ ಕೆಲವೊಮ್ಮೆ ಬರೇ ಚುಚ್ಚುಮಾತಾಗಿ ಮತ್ತೆ ಕೆಲವೊಮ್ಮೆ ಆಚರಣೆಯಾಗಿ ಇನ್ನು ಕೆಲವು ಬಾರಿ ಪ್ರತಿಪಾದನೆಯಾಗಿ ಮತ್ತೆ ಕೆಲವೊಮ್ಮೆ ತಿರಸ್ಕಾರವಾಗಿ ಎದುರಿಗೆ ಬಂದು ಯಾವ ಮುಲಾಜಿಲ್ಲದೆ ಎದೆಸೆಟೆದು ನಿಲ್ಲುವ ಹಲವು ಉದಾಹರಣೆಗಳು ಘಟನೆಗಳು ಅನುಭೂತಿಗಳು ಅವ್ಯಾಹತವಾಗಿ ದೊರೆಯುತ್ತಲೇ ಇರುತ್ತವೆ.

ಇಂತಹ “ಸಿಸ್ಟೆಮಿಕ್ ರೇಸಿಸಂ” ಅಥವಾ ವ್ಯವಸ್ಥಿತ ತಾರತಮ್ಯವನ್ನು ಶತಮಾನಗಳಿಂದ ವಸಾಹತುಗಳಲ್ಲಿ ಆಮೇಲೆ ಬ್ರಿಟನ್ನಿನಲ್ಲಿ ವಿವಿಧ ನೆಲೆಯಲ್ಲಿ ಎದುರಿಸುತ್ತಿರುವ ಕಪ್ಪು ಜನರು ಅವರ ಮೇಲೆ ಸಹನಾಭೂತಿ ಇರುವ ಇತರ ಜನರು ಅಮೆರಿಕದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಸಹಜವಾಗಿ ಭಾವನಾತ್ಮಕವಾಗಿ ಬೆಸೆದುಕೊಂಡರು ಕೂಡಿಕೊಂಡರು. ಬ್ರಿಟನ್ನಿನ ಬೇರೆ ಬೇರೆ ನಗರಗಳಲ್ಲಿ ಸುಮಾರು ಒಂದೂವರೆ ಲಕ್ಷ ಜನರು ಕೋವಿಡ್ ಕಾಲದ ಸಾಮಾಜಿಕ ಅಂತರದ ಭೀತಿ ನಿರ್ಬಂಧಗಳನ್ನು ಧಿಕ್ಕರಿಸಿ ನೆರೆದದ್ದು ಈ ವಿಷಯದ ಬಗೆಗಿನ ಪ್ರಚೋದನೆ ಪ್ರೇರಣೆಯನ್ನು ತಿಳಿಸುತ್ತದೆ.

ಬ್ರಿಟನ್ನಿನ ಹಲವು ನಗರಗಳಲ್ಲಿ ಅನುರಣಿಸಿದ ಚಳವಳಿಯ ಒಂದು ಆಯಾಮ ಪ್ರತಿಮೆಯನ್ನು ಕೆಡಹುವ ಮೂಲಕ ಬ್ರಿಸ್ಟಲಿನಲ್ಲಿ ನಡೆಯಿತು.1700ನೆಯ ಇಸವಿಯ ಆಸುಪಾಸಿನಲ್ಲಿ ಬ್ರಿಸ್ಟಲಿನ ತುಂಬೆಲ್ಲ ಹಲವು ದಾನ ಧರ್ಮ ದತ್ತಿಗಳನ್ನು ಮಾಡಿದ್ದ ನೀಡಿದ್ದ ಎಡ್ವರ್ಡ್ ಕೋಲ್ಸ್ಟನ್ (Edward Colston) ನೆನಪಿಗೆ 1895ರಲ್ಲಿ ನಿಲ್ಲಿಸಿದ ಪ್ರತಿಮೆ ಅದಾಗಿತ್ತು. ಚಳವಳಿಯ ಕೇಂದ್ರ ಸ್ಥಾನದಲ್ಲಿರುವ ಕಪ್ಪು ಜನರು ಒಂದು ಕಾಲದಲ್ಲಿ ವ್ಯಾಪಾರದ ವಸ್ತುವಾಗಿದ್ದರು ಎನ್ನುವುದು ನಾವು ಓದಿ ಕೇಳಿ ತಿಳಿದ ತಲ್ಲಣದ ವಿಚಾರ. ಆ ವ್ಯಾಪಾರದಲ್ಲಿ ಬ್ರಿಸ್ಟಲ್ ನ ಬಂದರಿನ, ಇಲ್ಲಿನ ವ್ಯಾಪಾರಸ್ಥರ ದೊಡ್ಡದಾದ ಭಾಗವಹಿಸುವಿಕೆ ಇತ್ತು. ಆಫ್ರಿಕದಿಂದ ಜನರನ್ನು ಹಡುಗಿನಲ್ಲಿ ತುಂಬಿಸಿ ಸಾಗಿಸಿ ಮಾರಿ ಅಪಾರ ಹಣ ಆಸ್ತಿ ಕ್ರೋಢೀಕರಿಸಿದವರಲ್ಲಿ ಈಗ ಬೀಳಿಸಿದ “ಪ್ರತಿಮಾಪುರುಷ”ನೂ ಒಬ್ಬ. ಹೀಗೆ ಗುಲಾಮರ ವ್ಯವಹಾರದಲ್ಲಿ ತಾನು ಗಳಿಸಿದ ಸಂಪತ್ತಿನಿಂದ ದಾನ ಮಾಡಿ ದೇಣಿಗೆ ನೀಡಿದ ಕಾರಣಗಳಿಂದ ಬ್ರಿಸ್ಟಲ್ ಅಲ್ಲಿ ಇವನ ಹೆಸರಿನ ರಸ್ತೆಗಳು ಶಾಲೆಗ ಸಭಾಂಗಣ ಇವೆ. ತನ್ನ ಪ್ರಾಂತ್ಯದ ಜನರಿಂದ ಮೂರು ಶತನಮಾನಗಳ ಹಿಂದೆ ಮನ್ನಣೆ ಹಾಗು ಸ್ಮರಣೆ ಪಡೆದ ಕೋಲ್ಸ್ಟನ್ ಬಗೆಗೆ ಅವನ ಇತಿಹಾಸದ ಕಾರಣದಿಂದ 1990ರಿಂದಲೂ ಪ್ರತಿರೋಧ ಇತ್ತು ಹಾಗು ಈ ಪ್ರತಿಮೆಯ ನಿಲುವುಗಳನ್ನು ಅಲ್ಲಗಳೆಯುವ ದಾರಿಗಳೂ ಈಗಾಗಲೇ ಚರ್ಚೆಯಲ್ಲಿದ್ದವು.

ಈತನ ಮೂರ್ತಿಯ ಪಕ್ಕದಲ್ಲಿಯೇ ಅವನ ಕರಾಳ ಚರಿತ್ರೆಯ ವಿಷಯಗಳನ್ನೂ ತಿಳಿಸುವ ಫಲಕ ನಿಲ್ಲಿಸುವುದು ಅಥವಾ ಪ್ರತಿಮೆಯನ್ನು ಸಾರ್ವಜನಿಕ ಸ್ಥಳದಿಂದ ತೆಗೆದು ಸಂಗ್ರಹಾಲಯಕ್ಕೆ ವರ್ಗಾಯಿಸಿ ಅಲ್ಲಿ ಆತನ ಪ್ರತಿಮೆಯ ಜೊತೆಗೇ ವ್ಯಕ್ತಿತ್ವದ ಎಲ್ಲ ಮುಖಗಳನ್ನು ತಿಳಿಸುವ ವ್ಯವಸ್ಥೆ ಮಾಡುವುದು ಇತ್ಯಾದಿ. ಇವನ ಹೆಸರಿನಲ್ಲಿರುವ ಸಭಾಂಗಣ ಸದ್ಯದಲ್ಲೇ ಬೇರೆ ಹೆಸರಿನಿಂದ ಮರುನಾಮಕರಣ ಪಡೆಯುವ ಯೋಜನೆಯೂ ಇತ್ತು. ಬ್ರಿಸ್ಟಲ್ ನ ನಗರಸಭೆಯ ಅಧಿಕಾರ ವ್ಯಾಪ್ತಿಯ ಈ ಕೆಲಸಗಳಿಗೆ ಅನುಮೋದನೆ ಸಿಕ್ಕಿದ್ದರೂ ಈ ದೇಶದ ಜಡ ಆಡಳಿತಶಾಹಿಯ ನಿಧಾನವಾದ ಪ್ರಕ್ರಿಯೆಯಲ್ಲಿ ಇವ್ಯಾವುವೂ ಕಾರ್ಯರೂಪಕ್ಕೆ ಬಂದಿರಲಿಲ್ಲ.

ಒಂದಾನೊಂದು ಕಾಲದಲ್ಲಿ ಜಗತ್ತಿನ ಹಲವೆಡೆ ತನ್ನ ಸಂಪೂರ್ಣ ವಿವೇಚನೆಯಲ್ಲಿಯೇ ಮಾಡಿಮುಗಿಸಿದ ದೌರ್ಜನ್ಯ ದ್ರೋಹ ಮನುಷ್ಯರ ವ್ಯಾಪಾರಗಳ ಬಗೆಗೆ ಈ ಕಾಲದ ಆಂಗ್ಲರು ಯಾವ ಸಮರ್ಥನೆಗೆ ಇಳಿಯದವರಾದರೂ ಇವರು ಇತಿಹಾಸವನ್ನು ಇದ್ದ ಹಾಗೆ ಪ್ರೀತಿಸುವವರು. ಅದು ಮಧುರವಿರಲಿ ಅಸಹ್ಯ ಎನಿಸಲಿ ಹೆಮ್ಮೆಯದಿರಲಿ ಕಳಂಕಕಾರಿ ಇರಲಿ ಅದಕ್ಕೊಂದು ನೆನಪು ಸ್ಮರಣೆ ನೀಡಿ ತಣ್ಣಗಿರುವವರು. ಎಂದೋ ಬದುಕಿ ಸತ್ತು ಈಗಿನ ಬಹುತೇಕ ಜನರ ಅರಿವಿನಲ್ಲಿ ವಿಶೇಷ ಜಾಗ ಪಡೆಯದ ಸ್ಮಾರಕವನ್ನು ಹೀಗೆ ಕೆಡಹಿದ್ದರಿಂದ ತಮ್ಮ ಸಮುದಾಯದ ಸಂದೇಶ ಮುಟ್ಟುವವರನ್ನು ಮುಟ್ಟೀತೇ ಅಥವಾ ಚಳವಳಿಗೆ ನಿರೀಕ್ಷಿತ ಫಲ ಸಿಕ್ಕೀತೆ ಎನ್ನುವ ವಿಮರ್ಶೆಗಳು ಇದೀಗ ಹರಿದಾಡುತ್ತಿರುವಾಗಲೇ, ಯುಕೆಯ ಬೇರೆ ನಗರಗಳಲ್ಲಿ ನಿಲ್ಲಿಸಿರುವ, ಆಂಗ್ಲರು ಮುಜುಗರ ಪಡುವ ಹಿನ್ನೆಲೆ ಉಳ್ಳ ಸ್ಮಾರಕಗಳನ್ನು ತೆಗೆಯಬೇಕೆನ್ನುವ ಬೇಡಿಕೆಗಳೂ ಬಲವಾಗುತ್ತಿವೆ.

ಲಂಡನ್ ನ ಮ್ಯೂಸಿಯಂ ಎದುರಿಗಿದ್ದ ರಾಬರ್ಟ್ ಮಿಲಿಗನ್ ಎನ್ನುವ ಗುಲಾಮರ ವ್ಯಾಪಾರಿಯಾಗಿದ್ದವನ ಪ್ರತಿಮೆಯನ್ನು ಮ್ಯೂಸಿಯಂನ ಟ್ರಸ್ಟ್ ನವರೇ ಈಗ ಕೆಳಗಿಳಿಸಿದ್ದಾರೆ. ಬ್ರಿಸ್ಟಲ್ ನ ಬಂದರಿನಲ್ಲಿ ಹಡಗುಗಳು ಮೂರು ಶತಮಾನಗಳ ಹಿಂದೆ ಕಪ್ಪು ಗುಲಾಮರನ್ನು ತುಂಬಿಕೊಂಡು ತಂದು ನಿಲ್ಲಿಸಿ ಸರಬರಾಜಿಗೆ ಸಿದ್ಧವಾಗುತ್ತಿದ್ದ ಜಾಗದಲ್ಲೇ ಕೋಲ್ಸ್ಟನ್ ನ ಪ್ರತಿಮೆಯನ್ನು ಮುಳುಗಿಸಿ ಕಹಿನೆನಪನ್ನು ಅಳಿಸುವ ಹೂಳುವ ಯತ್ನದ ಬೆನ್ನಲ್ಲೇ ರಾಬರ್ಟ್ ಮಿಲಿಗನ್ ನ ಪ್ರತಿಮೆಯನ್ನು ಸಾರ್ವಜನಿಕ ಸ್ಥಳದಿಂದ ಸ್ವಯಂ ಪ್ರೇರಿತರಾಗಿ ತೆಗೆದಿರುವುದು ತಮ್ಮ ಈಗಿನ ಹೋರಾಟಕ್ಕೆ ಸಿಕ್ಕ ಸಣ್ಣ ಆಲಿಸುವಿಕೆ ಆಸಕ್ತಿ ಎಂದು ಪ್ರತಿಭಟಿಸುವವರು ಭಾವಿಸುತ್ತಾರೆ. ಪ್ರತಿಭಟನೆಯ ಜೊತೆಯಲ್ಲಿ ನಡೆದ ಕೆಲವು ಹಿಂಸಾತ್ಮಕ ನಡೆಗಳ ಕೋಲ್ಸ್ಟನ್ ಪ್ರತಿಮೆಯನ್ನು ಹೀಗೆ ಕೆಡಹಿದುದುರ ಬಗೆಗೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿರುವ ಇಲ್ಲಿನ ಸರಕಾರ ಅದರ ಮಂತ್ರಿಗಳು, ಚಳವಳಿಯ ಉದ್ದೇಶದ ಬಗೆಗೆ ಅರಿವು ಸಹಾನುಭೂತಿ ವ್ಯಕ್ತಪಡಿಸುತ್ತ, ತಮ್ಮ ದೇಶದಲ್ಲಿ ಈಗಲೂ ಅಸ್ತಿತ್ವದಲ್ಲಿರುವ “ರೇಸಿಸ್ಟ್” ಮನೋಭಾವನ್ನು ತೊಲಗಿಸಲು ಚಳವಳಿಗಾರರ ಜೊತೆಗೆ ಕೆಲಸ ಮಾಡುವ ಭರವಸೆಯನ್ನೂ ನೀಡಿರುವುದು ಪ್ರತಿಭಟನೆಯ ಆಶಯಕ್ಕೆ ಸಿಕ್ಕ ಸಿಂಧುತ್ವ ಸ್ವೀಕೃತಿಯೂ ಹೌದು.

ಬ್ರಿಟಿಷ್ ಸಮಾಜದಲ್ಲಿ ಅತ್ಯಂತ ಆಳವಾಗಿ ಹುದುಗಿರುವ ಜನಾಂಗಭೇದ ಕೆಲವು ದಿನಗಳ ಪ್ರತಿಭಟನೆ ಅಥವಾ ಕೆಲವು ಪ್ರತಿಮೆಗಳ ಉಚ್ಚಾಟನೆಯಿಂದ ಬಹಳ ಏನೂ ಬದಲಾಗಲಿಕ್ಕಿಲ್ಲ. ಆದರೂ ಪ್ರತಿಭಟನೆ ಘೋಷಣೆಗಳಂತಹ ಸಾತ್ವಿಕ ಹೋರಾಟದ ಪ್ರಯತ್ನಗಳು ಹಾಗು ಪ್ರತಿಮೆಗಳನ್ನು ಉರುಳಿಸುವ ಅಥವಾ ಇಳಿಸಲು ಒತ್ತಾಯಿಸುವ ತೀವ್ರ ತರಹದ ಪ್ರತಿಕ್ರಿಯೆಗಳು ಜೊತೆಯಾಗಿ ಶತಮಾನಗಳ ಇತಿಹಾಸದ ಗಾಢವಾದ ಮಾನಸಿಕ ವಿಭಜನೆಯೊಂದರ ಇದರ ವಿರುದ್ಧ ಸೆಣಸಾಡುವ ಎಚ್ಚರ ಹುಟ್ಟಿಸುವ ಕೆಲಸದಲ್ಲಿ ಸದ್ಯಕ್ಕೆ ನಿರತವಾಗಿವೆ. ಜೊತೆಗೆ ಇಂತಹ ಮಾರ್ಗಗಳಲ್ಲಿ ಯಾವುದು ಸಶಕ್ತವಾದ ಹೋರಾಟ ಯಾವುದು ಪುಂಡಾಟಿಕೆಯ ಪ್ರದರ್ಶನ ಎನ್ನುವ ವಾದಗಳೂ ಮುಂದುವರಿಯುತ್ತಲೇ ಇವೆ.

ಪ್ರತಿಭಟನೆ ಹೇಗಿರಬೇಕು ಹೇಗಿರಬಾರದೆಂದು ತರ್ಕಿಸುತ್ತ ಹಿಂದಿನ ಈಗಿನ ಸೋತ ಅಭಿಯಾನಗಳ ಗೆದ್ದ ಚಳವಳಿಗಳ ಅವಲೋಕನಗಳೂ ನಡೆಯುತ್ತಿವೆ. ಆಂಗ್ಲರು ಕಪ್ಪುಜನರ ನಡುವಿನ ಚಾರಿತ್ರಿಕ ಘಟನಾವಳಿಗಳು ಮೈಲಿಗಲ್ಲುಗಳು ಪತ್ರಿಕೆಗಳಲ್ಲಿ ಬರಹಗಳಾಗಿ, “ನೀವು ತಿಳಿಯದ ಆಂಗ್ಲರ ಕಪ್ಪು ಚರಿತ್ರೆ” ಯಂತಹ ತಲೆಬರಹಗಳಡಿಯಲ್ಲಿ ಪ್ರಕಟಗೊಳ್ಳುತ್ತಿವೆ. ಜನಪ್ರತಿನಿಧಿಗಳು ಸಂಸದರು, ಕಪ್ಪು ಜನರ ನೇತೃತ್ವದಲ್ಲಿ ಶಾಲಾಪಠ್ಯದ ಪುನರಾಮರ್ಶೆ ಆಗಬೇಕು ಪಠ್ಯಕ್ರಮದಲ್ಲಿ ಆಂಗ್ಲ ಇತಿಹಾಸದ ಎಲ್ಲ ಮುಖಗಳೂ ಅನಾವರಣಗೊಳ್ಳಬೇಕು ಎಂದೂ ಸಲಹೆ ಮಾಡಿದ್ದಾರೆ.

ಒಂದು ಅನಿರೀಕ್ಷಿತ ಹಠಾತ್ ಚಳವಳಿಯ ಬೆನ್ನಲ್ಲಿ ಬೀಸುತ್ತಿರುವ ಬದಲಾವಣೆಯ ಭರವಸೆಯ ಗಾಳಿ ದೀರ್ಘಾಯುಷಿ ಆಗಿ ಉಳಿಯುವುದು, ಪ್ರತಿಭಟನೆಯ ಕಾವು ಹರಡಿಸಿದ ಬಿಸಿ ಮುಂದೂ ಇಲ್ಲಿನ ಸಮಾಜವನ್ನು ವ್ಯವಸ್ಥೆಗಳನ್ನು ಅಪರಾಧಿ ಪ್ರಜ್ಞೆಗೋ ವಿಮರ್ಶೆಗೋ ಒಡ್ಡುವುದು ಖಚಿತ ಇಲ್ಲ. ಪರಿವರ್ತನೆಯ ಮಾತುಗಳು ಭರವಸೆಗಳು ಸದ್ಯಕ್ಕೆ ಕೇಳಿ ಬರುತ್ತಿದ್ದರೂ ಯುನೈಟೆಡ್ ಕಿಂಗ್ಡಮ್ ನ ಒಳಗೆ ಹೊರಗೆ ಅಥವಾ ನಾವು ತಿಳಿದ ದೇಶ ಪ್ರಾಂತ್ಯಗಳಲ್ಲಿ ಗಡಿಗಳನ್ನು ಮೀರಿ ಅಸಮಾನತೆಗಳು ತಾರತಮ್ಯಗಳು ಹಸಿಯಾಗಿ ಹುಲುಸಾಗಿ ಹಬ್ಬಿಕೊಂಡಿವೆ. ನೆಲದ ಮೇಲೆ ಎಳೆದ ಗಡಿ ಗೆರೆಗಳಿಗಿಂತಲೂ ಆಳವಾಗಿ ಗಟ್ಟಿಯಾಗಿ ಮನಸಿನೊಳಗೆ ಸೀಮೆ ವಿಂಗಡಣೆ ವಿಭಜನೆಗಳನ್ನು ಮಾಡಿಕೊಂಡು ಜೀವಿಸಿಕೊಂಡಿವೆ.