ಇಲ್ಲಿನ ತಾಯಿ ಏಕೆ ಮುಖ್ಯವಾಗುತ್ತಾಳೆಂದರೆ, ಇವಳು ತನ್ನ ಬಾಲ್ಯವನ್ನಾಗಲೀ, ತಾರುಣ್ಯವನ್ನಾಗಲೀ ಅನುಭವಿಸಿ ಕಂಡವಳಲ್ಲ. ಜಗತ್ತನ್ನು ಬೆರಗಿನಿಂದ ಕಂಡು ಅರಿತವಳಲ್ಲ. ನಲವತ್ತು ವರ್ಷ ವಯಸ್ಸಿಗೇ ತನ್ನನ್ನು ತಾನು ಮುದುಕಿ ಎಂದುಕೊಂಡುಬಿಟ್ಟವಳು. ತನ್ನ ನಲವತ್ತು ವರ್ಷ ವಯಸ್ಸನ್ನು ದಾಟಿದ ಮೇಲೆ ಬದುಕನ್ನು ಅರ್ಥ ಮಾಡಿಕೊಂಡವಳು. ಆಗ ಅವಳು ತನ್ನ ಬದುಕಿನಲ್ಲಿ ತಾನು ಏನನ್ನು ಕಳೆದುಕೊಂಡಿದ್ದಳೋ ಅದನ್ನು ಹುಡುಕಿಕೊಂಡು ಹೊರಡುತ್ತಾಳೆ. ಈ ಮಟ್ಟಿಗೆ ಇದೊಂದು ಕ್ರಾತಿಕಾರಿ ಬೆಳವಣಿಗೆ. ಕೊನೆಯಲ್ಲಿ ಕಾರ್ಮಿಕ ದಂಗೆಯಲ್ಲಿ ಭಾಗವಹಿಸಿದ್ದರ ಪರಿಣಾಮವಾಗಿ ಅವಳು ಸಾಯಬೇಕಾಗಿ ಬಂದಾಗ ಅವಳಾಡುವ ಮಾತು, ನಿಜಕ್ಕೂ ಅವಳು ತಾನೇ ಏರಿದ ಪ್ರಭುದ್ಧತೆಯ ಮಟ್ಟವನ್ನು ತೋರಿಸುತ್ತದೆ.
ಆಶಾ ಜಗದೀಶ್ ಅಂಕಣ

 

ಚೆಂದದ ಮುದ್ದಾದ ಚೂಟಿ ಮಗುವನ್ನು ಯಾರು ಬೇಕಾದರೂ ಪ್ರೀತಿಸುತ್ತಾರೆ. ಆದರೆ ಕುರೂಪಿಯಾಗಿರುವ, ಕರ್ರಗೆ, ಗೊಣ್ಣೆ ಸುರಿಸಿಕೊಂಡು ಓಡಾಡುವ ಮಗುವನ್ನೂ ಚಿನ್ನ, ರನ್ನ, ಬಂಗಾರ, ಅಂತ ಮುದ್ದಿಸುವವಳು ತಾಯಿ…. ಮಗು ಎಲ್ಲ ರೀತಿಯಲ್ಲೂ ಆರೋಗ್ಯವಾಗಿ ಲಕ್ಷಣವಾಗಿ ಇರುವಾಗ ಎಲ್ಲರೂ ಆ ಮಗುವನ್ನು ಎತ್ತಿಕೊಳ್ಳುತ್ತಾರೆ, ಆದರೆ ಆ ಮಗುವಿಗೇನಾದರೂ ಊನವಾದಾಗ ಹಿಂದಿಗಿಂತಲೂ ಹತ್ತು ಪಟ್ಟು ಹೆಚ್ಚು ಪ್ರೀತಿಸಿ ಎತ್ತಿಕೊಳ್ಳುವವಳು ತಾಯಿ…

ನಮ್ಮ ಮನೆಯ ಮುಂದಿನ ಮನೆಯಲ್ಲಿ ಒಂದು ಬುದ್ಧಿಮಾಂದ್ಯ ಹೆಣ್ಣು ಮಗು ಇತ್ತು. ಮುದ್ದಾದ ಹುಡುಗಿ ಅದು. ಆದರೆ ಅದು ಸಹಜವಾದ ಮಗು ಅಲ್ಲ ಎನ್ನುವ ಕೊರಗು ಆ ಮನೆಯವರದ್ದು. ಅವಳ ತಾಯಿ ಮಾತ್ರ ಎಂದೂ ಆ ವಿಷಯ ಮಾತಾಡಿ ವ್ಯಥೆಪಟ್ಟಿದ್ದಿಲ್ಲ. ಪ್ರತಿ ನಿತ್ಯ ಹನ್ನೆರೆಡು ಹದಿಮೂರು ವರ್ಷದ ಆ ಹುಡುಗಿಗೆ ಪುಟ್ಟ ಮಗುವಿನ ಹಾಗೆ ತುತ್ತು ಮಾಡಿ ಬಾಯಿಗಿಟ್ಟು ಉಣಿಸುತ್ತಾಳೆ, ತಿನಿಸುತ್ತಾಳೆ, ದಿನನಿತ್ಯ ಎಣ್ಣೆ ಎರೆಯುತ್ತಾಳೆ, ಶೌಚ ಮಾಡಿಸುತ್ತಾಳೆ, ಹಾಸಿಗೆಯಲ್ಲಿ ಉಚ್ಚೆ ಹೊಯ್ದರೂ ಸ್ವಲ್ಪವೂ ಬೇಸರಿಸಿಕೊಳ್ಳದೆ ಅದೆಲ್ಲವನ್ನೂ ಸ್ವಚ್ಛ ಮಾಡುತ್ತಾಳೆ, ಸ್ನಾನ ಮಾಡಿಸುತ್ತಾಳೆ, ಸ್ನೋ ಪೌಡರ್ ಬಿಂದಿ ಎಲ್ಲವೂ ವಿಶೇಷವೇ… ಚಂದ ಚಂದದ ಹೊಸ ಬಟ್ಟೆ ತೊಡಿಸುತ್ತಾಳೆ, ಅವಳ ದಟ್ಟ ಕಪ್ಪು ನೀಳ ಕೇಶರಾಶಿಯನ್ನು ಆರೈಕೆ ಮಾಡುವುದೇ ಆ ಅಮ್ಮನಿಗೊಂದು ಸಂಭ್ರಮ… ತನ್ನ ವಡವೆ, ರೇಶಿಮೆ ಸೀರೆ ಎಲ್ಲವನ್ನು ಅವಳಿಗಿಟ್ಟು ಚಂದ ನೋಡುತ್ತಾಳೆ…. ಇತ್ತೀಚೆಗೆ ಮಗಳಿಗೆ ಮೊಗ್ಗಿನ ಜಡೆ ಹಾಕಿ ತೆಗೆಸಿದ ದೊಡ್ಡದಾದ ಫೋಟೋ ಒಂದು ಹಾಲಿನಲ್ಲಿ ರಾರಾಜಿಸಿತ್ತಿದೆ. ಆ ತಾಯಿಯೆಂದೂ ತನ್ನ ಮಗಳನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು ಎಲ್ಲಿಗಾದರೂ ಹೋಗಿದ್ದನ್ನು ನೋಡಿಯೇ ಇಲ್ಲ. ತಾನು ಎಲ್ಲಿಗೇ ಹೋದರೂ ತನ್ನ ಮಗಳನ್ನು ಸಿಂಗರಿಸಿಕೊಂಡು ಜೊತೆಯಲ್ಲೇ ಕರೆದೊಯ್ಯುತ್ತಾಳೆ… ಕಳ್ಳ ಕಾಮುಕರ ಕೈಗೆ ತನ್ನ ಮುದ್ದು ಮುಗ್ಧ ಮಗಳು ಸಿಗದಂತೆ ನೋಡಿಕೊಳ್ಳಬೇಕೆನ್ನುವ ಎಚ್ಚರಿಕೆಯೂ ಇದೆ.. ಇತ್ತೀಚೆಗೆ ಮಗಳು ಋತುಮತಿಯಾದ ನಂತರವಂತೂ ಅವಳ ಸುರಕ್ಷತಾ ಭಾವ ಮತ್ತೂ ಬಿಗಿಯಾಗಿದೆ. ತನ್ನ ಪಹರೆಯಿಲ್ಲದೆ ಅವಳೆಲ್ಲಿಗೂ ಹೋಗುವಂತಿಲ್ಲ, ಯಾವ ಗಂಡಸೂ ಸಲುಗೆಯಿಂದ ಒಳಬರುವಂತಿಲ್ಲ. ಇನ್ನು ಅವಳೊಂದಿಗೆ ಯಾವನಾದರೂ ಹಲ್ಕಿರಿದು ಮಾತನಾಡುವುದು ಕಣ್ಣಿಗೆ ಬಿದ್ದರೆ ಇವಳು ರಣಚಂಡಿ…

ಇವಳಲ್ಲದೆ ಇನ್ಯಾರನ್ನು ತಾಯಿ ಎನ್ನಬೇಕು… ಅಮ್ಮ ಎನ್ನುವವಳೇ ಹಾಗೆ; ಅಣುವಾದ ಮಗುವೊಂದು ಗರ್ಭದಲ್ಲಿ ಬಂದು ನೆಲೆ ನಿಂತಂದಿನಿಂದಲೂ ಅವಳ ನಿರೀಕ್ಷೆಗಳು ಹುಟ್ಟಿಕೊಳ್ಳತೊಡಗಿತ್ತವೆ. ಅವಳೆಲ್ಲ ಆಸೆ ಆಕಾಂಕ್ಷೆ ಕನಸು ಎಲ್ಲವೂ ಆ ಮುದ್ದು ಹೆಜ್ಜೆಗಳ ಹಸು ಕಂದನಿಗೇ ಮೀಸಲು… ಅದೆಷ್ಟು ತೀವ್ರವಾಗಿ ಮಗುವಿಗಾಗಿಯೇ ಬದುಕತೊಡಗುತ್ತಾಳೆಂದರೆ ತನ್ನದೆನ್ನುವ ಖಾಸಗೀ ಬದುಕು ಅವಳಿಗಂತ ಇರುವುದೇ ಇಲ್ಲ. ಹಾಗಾಗಿಯೇ ಇರಬೇಕು ನಾವು ನಮ್ಮ ಅಮ್ಮಂದಿರನ್ನು ಹಾಗೇ ನೋಡಲಿಕ್ಕೆ ಬಯಸುತ್ತೇವೆ. ಅಮ್ಮ ನಮಗೆ ಏನಾದರೂ ಎಷ್ಟಾದರೂ ಬೆಲೆ ಬಾಳುವಂಥದ್ದನ್ನು ಕೊಡಬಹುದು. ಆದರೆ ನಾವು ಏನಾದರೂ ಕೊಡಬೇಕಾದಾಗ ಅದರ ಬೆಲೆಯನ್ನು ಅಳೆಯತೊಡಗುತ್ತೇವೆ, ಅವಳಿಗೇನು ವಯಸ್ಸಾದವಳು ಎಂದು ಕಡೆಗಣಿಸತೊಡಗುತ್ತೇವೆ. ಆದರೆ ತಾಯಿ ಅದ್ಯಾವುದನ್ನೂ ಲೆಕ್ಕಿಸುವುದಿಲ್ಲ. ಸಾಯುವ ಕೊನೆ ಕ್ಷಣದವರೆಗೂ ಮಕ್ಕಳಿಗಾಗಿಯೇ ಬದುಕುತ್ತಾಳೆ… ಅವಳಿಗಂತ ಒಂದು ಖಾಸಗಿ ಬದುಕು ಬೇಕು ಎನ್ನುವ ವಿಚಾರ ಬಹುಶಃ ಅವಳಿಗೆ ಬರುವುದೇ ಇಲ್ಲ ಅಥವಾ ತೀರಾ ತಡವಾಗಿ ಬರುತ್ತದೇನೋ. ಅಷ್ಟೊತ್ತಿಗೆ ಮಕ್ಕಳು ಬಲಿತು ಅವಳಿಗಂತ ಒಂದು ಸಣ್ಣ ಜಾಗವನ್ನೂ ಬಿಡದೆ ಆಕ್ರಮಿಸಿಕೊಂಡುಬಿಟ್ಟಿರುತ್ತವೆ. ಒಂದು ವೇಳೆ ತನ್ನ ಅರವತ್ತರ ನಂತರದ ಬದುಕಲ್ಲಿ ಆಕೆ ಏನಾದರೂ ತನಗಂತ ಅತಿ ಖಾಸಗಿ ಜಾಗ (ಸ್ಪೇಸ್) ಬೇಕೆಂದುಕೊಂಡು ಬಿಟ್ಟರೆ; ಮುಗೀತು ಜಗಳ-ದಂಬಿ, ಇಲ್ಲ ವೃದ್ಧಾಶ್ರಮ…. ಕೆಲವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕಾಂಕ್ರೀಟ್ ಕಾಡಿನ ಗೋಂಡಾರಣ್ಯದ ಬೀದಿಯಲ್ಲಿ ಆ ಮುದಿ ಜೀವವನ್ನು ತಬ್ಬಲಿ ಮಾಡಿ ಬಂದುಬಿಡುತ್ತಾರೆ…. ಅದೆಷ್ಟೋ ತಾಯಂದಿರು ಹೀಗೆ ತಬ್ಬಲಿಯಾಗಿ ಬೀದಿಗೆ ಬಿದ್ದು ದುಡಿಯಲಾಗದ ವಯಸ್ಸಿನಲ್ಲಿ ತಿರಿದು ತಿನ್ನುವುದನ್ನು ನೋಡುವಾಗ ಅವಳು ಹೀಗೆ ಈ ಸ್ಥಿತಿಗೆ ಬರಲಿಕ್ಕಾಗಿ ಆ ಮಕ್ಕಳನ್ನು ಹೆತ್ತು ಹೊತ್ತು ಸಾಕಿ ಸಲಹಿ ಬೆಳೆಸಬೇಕಿತ್ತಾ ಅನಿಸಿಬಿಡುತ್ತದೆ.

ಎಷ್ಟು ವಿಚಿತ್ರ ಅಲ್ಲವಾ… ಯಾವ ತಾಯಿಯಾದರೂ ಹೀಗೆ ತನ್ನ ಕಂದನನ್ನು ಒಂಟಿಯಾಗಿ ಹಿಂತಿರುಗಿ ನೋಡದೆ ಬಿಟ್ಟು ಹೋಗಿಬಿಡಲು ಸಾಧ್ಯವಾ… ತನ್ನ ಪ್ರಾಣ ಹೋದರೂ ಅವಳಂತಹ ಕೆಲಸ ಮಾಡುವುದಿಲ್ಲ… ತಾನು ಹಸಿದಿದ್ದರೂ ಮಗುವಿನ ಹೊಟ್ಟೆ ತುಂಬಿಸುತ್ತಾಳೆ ತಾಯಿ, ತಾನೆಂತಹ ಬಡತನದಲ್ಲಿದ್ದರೂ ತನ್ನ ಮಗುವಿಗೆ ಜಗತ್ತಿನ ಎಲ್ಲ ಸುಖವನ್ನು ತಂದು ಕೊಡಲು ಜೀವ ತೇಯುತ್ತಾಳೆ ತಾಯಿ. ತನಗೆ ಸಿಗದಿರುವ ಎಲ್ಲ ಸುಖವೂ ತನ್ನ ಮಕ್ಕಳಿಗೆ ಸಿಗಬೇಕೆಂದು ಬಯಸುತ್ತಾಳೆ ತಾಯಿ… ನಾವು ಒಪ್ಪಲಿ ಬಿಡಲಿ ನಾವು ಇಂದೇನಾಗಿದ್ದೇವೋ ಅದರ ಶ್ರೇಯಸ್ಸು ತಾಯಿಗೇ ಸಲ್ಲುತ್ತದೆ…. ನಾವು ಸ್ವಸಾಮರ್ಥ್ಯದಿಂದಲೇ ಮೇಲೆ ಬಂದಿರಬಹುದು, ಆದರೆ ಆ ಸಾಮರ್ಥ್ಯದ ಅಂತಃಶಕ್ತಿ ತಾಯಿಯಾಗಿರುತ್ತಾಳೆ. ನಾವೆಷ್ಟೇ ಕೆಟ್ಟವರಾಗಿರಲಿ ಒಳಮನೆಯಲ್ಲಿ ಕೂರಿಸಿಕೊಂಡು ಶಿಕ್ಷೆ ಅಥವಾ ತನ್ನ ಕಣ್ಣೀರನ್ನು ಪ್ರಯೋಗಿಸಿಯಾದರೂ ದಾರಿಗೆ ತರುತ್ತಾಳೆ. ಆದರೆ ತಪ್ಪಿಯೂ ಹೊರಗಿನವರ ಮುಂದೆ ತನ್ನ ಮಕ್ಕಳನ್ನು ಹಳಿಯುವುದಿಲ್ಲ. ಬೇರೆಯವರ ಮುಂದೆ ನನ್ನ ಮಕ್ಕಳಂತ ಮಕ್ಕಳೇ ಇಲ್ಲ ಎಂದೇ ತೋರಿಸಿಕೊಳ್ಳುತ್ತಾಳೆ. ಅವಳಿಗೆ ಗೊತ್ತು ಪ್ರತಿಯೊಂದು ತಪ್ಪಿಗೂ ಸಮಾಜ ಯಥಾರ್ಥ ಶಿಕ್ಷೆಯನ್ನು ವಿಧಿಸಿಯೇ ವಿಧಿಸುತ್ತದೇ ವಿನಃ ಕ್ಷಮೆ ಸಿಗುವುದು ದುರ್ಲಭ. ಅದಕ್ಕೆ ತಾಯಿ ತನ್ನ ಮಗುವಿನ ಬಾಲಿಶ ತಪ್ಪುಗಳನ್ನು ಇತರರಿಂದ ಮುಚ್ಚಿಟ್ಟು ತಾನು ಹೆತ್ತ ಕೂಸಿಗೆ ತಾನೇ ಶಿಕ್ಷೆ ಕೊಟ್ಟು ಮುದ್ದುಗರೆಯುತ್ತಾಳೆ.

ಇಂತಹ ತಾಯಿಯ ಬಗ್ಗೆ ಎಷ್ಟೇ ಹೇಳಿದರೂ ಅವಳ ತ್ಯಾಗವನ್ನು ಬಣ್ಣಿಸಿ ಮುಗಿಸುವುದು ಸಾಧ್ಯವೇ ಇಲ್ಲ. ತಾಯಿಯ ಬಗ್ಗೆ ಬರೆಯದ ಯಾವ ಬರಹಗಾರರೂ ಇರಲಿಕ್ಕೆ ಸಾಧ್ಯವಿಲ್ಲವೇನೋ. ಹೆಣ್ಣು ತಾಯಿಯನ್ನು ಗ್ರಹಿಸುವ ರೀತಿಗೂ, ಗಂಡು ತಾಯಿಯನ್ನು ಗ್ರಹಿಸುವ ರೀತಿಗೂ ಬಹಳಷ್ಟು ವ್ಯತ್ಯಾಸವಿದೆ. ಗಂಡು ತಾಯಿಯನ್ನು ಅವಳ ಪ್ರೀತಿ ಮಮತೆ ತ್ಯಾಗದ ಅನುಭೂತಿಯಿಂದ ತಿಳಿದು ಅರ್ಥಮಾಡಿಕೊಳ್ಳುತ್ತಾನೆ. ಅರ್ಥವಾದ ನಂತರ ಅವಳಿಗೆ ಸಂಪೂರ್ಣ ಶರಣಾಗಿಬಿಡುತ್ತಾನೆ. ಅದೇ ಹೆಣ್ಣು, ತಾಯಿಯನ್ನು ತನ್ನ ಅನುಭವದ ಮೂಲಕ ಅರ್ಥೈಸಿಕೊಳ್ಳುತ್ತಾಳೆ. ಹಾಗಾಗಿ ತಾಯಿ ದೈಹಿಕವಾಗಿ ಮಾನಸಿಕವಾಗಿ ಏನೆಲ್ಲ ಕ್ಷೋಭೆಗೊಳಗಾಗಿರಬಹುದು ಎನ್ನುವುದನ್ನು ಬಹಳ ಜೀವಂತವಾಗಿ ಅರ್ಥಮಾಡಿಕೊಳ್ಳುತ್ತಾಳೆ, ಆವಾಹಿಸಿಕೊಳ್ಳುತ್ತಾಳೆ. ಕೊನೆಗೆ ತಾಯಿಯ ತದ್ರೂಪೇ ಆಗುತ್ತಾಳೆ. ಅದಕ್ಕೇ ಏನೋ “ನೂಲಿನಂತೆ ಸೀರೆ ತಾಯಿಯಂತೆ ಮಗಳು” ಎನ್ನುವುದು. ಹೆಣ್ಣಿಗೆ ತಾಯಿಯಂತ ಅಂತರಂಗದ ಗೆಳತಿ ಇನ್ನೊಬ್ಬರಿರಲಿಕ್ಕೆ ಸಾಧ್ಯವೇ ಇಲ್ಲ.

ನಾನು ಚಿಕ್ಕಂದಿನಲ್ಲಿ ಅಪ್ಪನ ಮಗಳಾಗಿದ್ದೆ. ಅದೇನೋ ಅಪ್ಪನೆಂದರೇ ಹೆಚ್ಚು ಪ್ರೀತಿ. ಹೆಚ್ಚು ಕಡಿಮೆ ಮದುವೆಯಾಗುವವರೆಗೂ ಹಾಗೇ ಇದ್ದೆ. ಆದರೆ ಮದುವೆಯ ನಂತರವೇ ಅಮ್ಮ ನನಗೆ ಹೆಚ್ಚು ಅರ್ಥವಾದದ್ದು. ಹೆಣ್ಣಿನ ಬದುಕಲ್ಲಿ ತಾಯಿಯ ಪಾತ್ರ ಬಹು ದೊಡ್ಡದು. ಅವಳು ತಾಯಿಯೂ ಹೌದು, ನಮ್ಮದೇ ಪ್ರತಿರೂಪವೂ ಹೌದು. ಇವತ್ತು ನನಗೇನೇ ಸಮಸ್ಯೆ ಬಂದರೂ ನನ್ನ ಜಾಗದಲ್ಲಿ ಅಮ್ಮ ಇದ್ದಿದ್ದರೆ ಏನು ಮಾಡುತ್ತಿದ್ದಳು ಅಂತ ಯೋಚಿಸಿಬಿಟ್ಟರೆ ಸಾಕು ನಾನೇನು ಮಾಡಬೇಕು ಎಂದು ಹೊಳೆದುಬಿಡುತ್ತದೆ. ಇಲ್ಲವಾ ಅವಳಿಗೊಂದು ಕಾಲ್ ಮಾಡಿದರೆ ನಮಗೆ ಬೇಕಾದ ಎಲ್ಲ ಉತ್ತರವೂ ಅವಳಲ್ಲಿರುತ್ತದೆ. ಎಂಥ ಕಷ್ಟವೇ ಬಂದರೂ ಎದುರಿಸುವ ಛಾತಿ-ಚೈತನ್ಯ ತುಂಬುತ್ತಾಳೆ ಅಮ್ಮ.

ಇಲ್ಲಿಯವರೆಗೂ ಅಮ್ಮನ ಬಗ್ಗೆ ಬಂದಿರುವ ಎಲ್ಲ ಕವಿತೆಗಳಲ್ಲೂ ಗಂಡು ಬರೆದ ಕವಿತೆಗಳೇ ಹೆಚ್ಚು ಯಶಸ್ವಿಯಾಗಿವೆ ಅನಿಸುತ್ತದೆ. ಕಾರಣ..?! ಬಹಶಃ “ಅವನ” ಔದಾರ್ಯವನ್ನು ಗಣಿಸಬೇಕೆನ್ನುವ ಅವನ ನಿರೀಕ್ಷೆ ಇದ್ದಿರಬಹುದು, ಅವನು ಗೌರವಿಸುತ್ತಿದ್ದಾನಲ್ಲ ಸಧ್ಯ ಎನ್ನುವ ಇವಳ ಸಮಾಧಾನವಾಗಿರಬಹುದು, ಗಂಡು ಹೆಣ್ಣಿನಷ್ಟು ಭಾವುಕನಲ್ಲದ ಕಾರಣ ಅವನ ಕವಿತೆಗಳು ಒಂದು ಮಟ್ಟಿಗಿನ ಸಂತುಲತೆಯಲ್ಲಿ ಅಭಿವ್ಯಕ್ತಗೊಂಡಿರುವುದೂ ಕಾರಣವಿರಬಹುದು, ತಾಯಿ ಮತ್ತು ಮಗಳು ಒಂದು ನಾಣ್ಯದ ಎರೆಡು ಮುಖಗಳಾದ್ದರಿಂದ ಅವಳು ಅವಳನ್ನು ಹೊಗಳುವುದೆಂದರೆ ತನ್ನನ್ನು ತಾನು ಬಣ್ಣಿಸಿಕೊಳ್ಳುವುದು ಎನಿಸಿಬಿಡುತ್ತದೇನೋ… ಅವಳ ಕವಿತೆಗಳ ತಾಯಿ ಬಹಳ ಆಳ ಮತ್ತು ಸೂಕ್ಷ್ಮ. ಅದು ತೀರಾ ಭಾವುಕ ಅಥವಾ ಬಹಳ ಮಂದಿಯ ಗ್ರಹಿಕೆಗೆ ನಿಲುಕದೆ ಹೋಗಿರಬಹುದು… ಅಂತಲೂ ಅನಿಸುತ್ತದೆ.

(Caroline L Masefield)

ಆರೀಫ್ ರಾಜಾರ “ಹೊಲಿಗೆ ಯಂತ್ರದ ಅಮ್ಮಿ” ಯ ತಾಯಿ ತನ್ನೆಲ್ಲ ಕಷ್ಟ ದುಃಖ ದುಮ್ಮಾನಗಳ ನಡುವೆಯೂ ತಾನೇ ದುಡಿದು ಗಂಡ ಮನೆ ಮಕ್ಕಳನ್ನು ಜೋಪಾನ ಮಾಡಿದವಳು. ಲಂಕೇಶರ ಅವ್ವ ಬನದ ಕರಡಿಯಂತವಳು. ತೆಂಗಿನ ಕಾಯಿಯ ಹೊರ ಚಿಪ್ಪನ್ನು ಒಡೆದರೆ ಒಳಗೆ ಸಿಹಿ ಕೊಬ್ಬರಿ, ತಂಪಾದ ಎಳನೀರು ಸಿಗುವಂತೆ ಲಂಕೇಶರ ಅವ್ವ ಅಂತಃಕರಣದ ಗಟ್ಟಿಗಿತ್ತಿ. ಲಂಕೇಶರ ಅವ್ವ ೧ & ೨ ಕವಿತೆಗಳೆರೆಡೂ ತಾಯಿಯ ಬಗ್ಗೆ ಬಂದ ಕವಿತೆಗಳಲ್ಲಿ ಮೈಲುಗಲ್ಲುಗಳೆಂದೇ ಹೇಳಬೇಕು. ಈ ಎಲ್ಲ ಕವಿತೆಗಳೂ ಸಹ ಸತ್ಯವನ್ನು ಎತ್ತಿ ಹಿಡಿಯುವ ಎಲ್ಲರೊಳಗೂ ಒಂದಾಗಬಲ್ಲ ತಮ್ಮ ಸಾರ್ವಕಾಲಿಕತೆಯಿಂದಾಗಿ ಅಮರವಾಗಿವೆ ಅಂತಲೂ ಅನಿಸುತ್ತದೆ.

ಅಮ್ಮನ ಬಗ್ಗೆ ಓದಿದ ಬಹಳ ಚಂದದ ಕವಿತೆಗಳಲ್ಲಿ John Masefield ರವರ CLM ಕವಿತೆಯೂ ಒಂದು. ಈ ಕವಿತೆಯಲ್ಲಿ ತಾಯಿಯ ತ್ಯಾಗವನ್ನು ಎತ್ತಿಹಿಡಿಯುವ ಮತ್ತು ತಾಯಿಗಾಗಿ ನಾನೇನು ಮಾಡಿದ್ದೇನೆ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳುವ ಕವಿಯ ರೀತಿ ಬಹಳ ಚಂದ ನಿರೂಪಣೆಗೊಂಡಿದೆ.

Caroline L Masefield (CLM) John masefield ರ ತಾಯಿ. ಕವಿ ಆರು ವರ್ಷದವರಿದ್ದಾಗ ತಾಯಿಯನ್ನು ಕಳೆದುಕೊಂಡಿರುತ್ತಾರೆ (ತಂದೆಯನ್ನು ಕಳೆದುಕೊಂಡಾಗಿಗಿಂತಲೂ ತಾಯಿಯನ್ನು ಕಳೆದುಕೊಂಡಾಗ “ತಾಯಿ ಇಲ್ಲದ ತಬ್ಬಲಿ” ಎನ್ನುವ ಮಾತುಗಳು ಬಹಳಷ್ಟು ಕೇಳಿಬರುತ್ತವೆ…). ಅವರಿಗೆ ಬುದ್ಧಿ ಬಂದಾಗ ತಾಯಿಯಾಗಿ ಹಂಬಲಿಸುತ್ತಾರೆ. ತಾಯಿಯ ತ್ಯಾಗದ ಬಗ್ಗೆ ಅಚ್ಚರಿ ಪಡುತ್ತಲೇ ಅವಳ ತ್ಯಾಗಕ್ಕೆ, ಬಲಿದಾನಕ್ಕೆ ಪ್ರತಿಯಾಗಿ ನಾನೇನು ಮಾಡಿರುವೆ ಎಂದು ಪ್ರಶ್ನಿಸಿಕೊಳ್ಳುತ್ತಾರೆ….

What have I done to keep in mind
My debt to her and womenkind?
What woman’s happier life repays
Her for those months of wretched days?
For all my mouth less body leeched
Ere births releasing hell was reached

What have I done or tried or said
In thanks to that clear woman dead?
Men triumph over women still
Men trample women’s rights at will
And man’s lust roves the world untamed

O grave, keep shut lest I be shamed

ಕವಿತೆಯ ಕೊನೆಯ ಚರಣಗಳಲ್ಲಿ ಕವಿ ತಮಗೆ ತಾವು ಎದುರಾದರೂ ಎದುರಿಸಿ ನಿಲ್ಲಲಾರದೆ ಮುಖಮುಚ್ಚಿಕೊಂಡು ಹೊರಡುವುದು ಅವರ ಆತ್ಮದ ಪ್ರಾಮಾಣಿಕತೆಗೆ ಸಾಕ್ಷಿ. ಆದರೆ ಹೆಣ್ಣು ಇರುವುದೇ ಭೋಗಕ್ಕಾಗಿ, ಸಂತಾನಕ್ಕಾಗಿ ಪುರುಷನ ಉಪಯೋಗಕ್ಕಾಗಿ ಎಂದು ಭಂಡತನದಿಂದ ವರ್ತಿಸುವವರಿಗೆ ಇಲ್ಲೊಂದು ಪಾಠವಿದೆ. ಸೃಷ್ಟಿ ಕ್ರಿಯೆಯಲ್ಲಿ ಗಂಡು ಹೆಣ್ಣು ಇಬ್ಬರೂ ಸಮಾನ ಪಾತ್ರಧಾರಿಗಳು. ಆದರೆ ಸೃಷ್ಟಿಯೇ ಹಾಗಿದೆ. ಬೀಜದ ಸಂತಾನ ಮುಂದುವರಿಸುವ ಭಾಗ ಮೃದುವಾಗಿರುತ್ತದೆ, ಮತ್ತು ಅದರ ಹೊರ ಕವಚ ಗಟ್ಟಿ ಮತ್ತು ಒರಟಾಗಿರುತ್ತದೆ. ಮತ್ತೆ ಇವೆರೆಡೂ ಒಟ್ಟಾಗಿರಬೇಕೆಂಬುದೇ ಸೃಷ್ಟಿಯ ಇಚ್ಛೆ. ಇದನ್ನು ಮೀರಿ ನಡೆಯಲು ನಾವ್ಯಾರು…?! ಗಂಡು ಹೆಣ್ಣು ಸಹ ಇದರಂತೆಯೇ.. ಇಬ್ಬರೂ ಸಮಾನರು, ಅವರವರ ಘನತೆಯನ್ನು ಗೌರವಿಸಬೇಕು ನಾವು. ಅದನ್ನು ಬಿಟ್ಟು ಬಲಹೀನರನ್ನು ಶೋಷಿಸುವುದು ಯಾವ ಹೆಚ್ಚುಗಾರಿಕೆ…?! ಇಬ್ಬರಲ್ಲೂ ಪ್ರತ್ಯೇಕ ಆದರೆ ಸಮಾನ ಶಕ್ತಿಗಳಿವೆ. ಸ್ನಾಯುಬಲವನ್ನೇ ಮುಂದು ಮಾಡಿಕೊಂಡು ಹೊರಡುವುದು ಸಿಪ್ಪೆಯೇ ಹಣ್ಣನ್ನು ತಿಂದಂತಾಗುವುದಿಲ್ಲವೇ…

ಹಾಗಾಗಿಯೇ ಇರಬೇಕು ನಾವು ನಮ್ಮ ಅಮ್ಮಂದಿರನ್ನು ಹಾಗೇ ನೋಡಲಿಕ್ಕೆ ಬಯಸುತ್ತೇವೆ. ಅಮ್ಮ ನಮಗೆ ಏನಾದರೂ ಎಷ್ಟಾದರೂ ಬೆಲೆ ಬಾಳುವಂಥದ್ದನ್ನು ಕೊಡಬಹುದು. ಆದರೆ ನಾವು ಏನಾದರೂ ಕೊಡಬೇಕಾದಾಗ ಅದರ ಬೆಲೆಯನ್ನು ಅಳೆಯತೊಡಗುತ್ತೇವೆ, ಅವಳಿಗೇನು ವಯಸ್ಸಾದವಳು ಎಂದು ಕಡೆಗಣಿಸತೊಡಗುತ್ತೇವೆ.

ತಾಯಿಯ ಚಿತ್ರಣದಿಂದಾಗೇ ನನ್ನನ್ನು ತೀವ್ರವಾಗಿ ಕಾಡಿದ ಒಂದಷ್ಟು ಕತೆಗಳೂ ಇವೆ. ಚಿತ್ರ ಮುದ್ಗಲ್ ರ “ಹಸಿವು” (ಅನುವಾದಿತ ಕತೆ), ಬಾನು ಮುಷ್ತಾಕರ “ಕರಿ ನಾಗರಗಳು”, ದೀಪ್ತಿ ಭದ್ರಾವತಿಯವರ “ಕ್ಲೈಮ್ಯಾಕ್ಸ್ “…. ಮುಂತಾದವು. ಫಿಕ್ಷನ್ ಅಲ್ಲದ ನೈಜ ಚಿತ್ರಣದ ಪುಸ್ತಕವೊಂದನ್ನು ಇತ್ತೀಚೆಗೆ ಓದಿದೆ. ನಿಜಕ್ಕೂ ಇದೊಂದು ಭಾವಗೀತೆಯಂತಹ ಪುಸ್ತಕ. ಮಂಜುನಾಥ ಚಾಂದ್ ರ “ಅಮ್ಮ ಕೊಟ್ಟ ಜಾಜಿ ದಂಡೆ (ಇದು ಬರಿಯ ಘಮವಲ್ಲ)” ಎನ್ನುವ ಈ ಪುಸ್ತಕ ಅಮ್ಮನ ಸುತ್ತಲೂ ಗಿರಗಿಟ್ಲೆ ಸುತ್ತುವ ಮಕ್ಕಳ ಮನೋಲೋಕದ ಅನಾವರಣ. ಬಹಳ ನವಿರಾದ ಭಾವಗಳನ್ನು ಹೊತ್ತ ಸಣ್ಣಗೆ ಮಿಡುಕುತ್ತಲೇ ಉಳಿವ ಪುಸ್ತಕವಿದು. ಮಂಜುನಾಥರು ಈ ಪುಸ್ತಕದಲ್ಲಿ ತಮ್ಮ ತಾಯಿಯವರನ್ನು ಅಕ್ಷರಗಳಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ. ತಾಯಿಯ ಬಗ್ಗೆ ಬಹಳಷ್ಟು ವೈವಿಧ್ಯಮಯ ಗೀತೆಗಳು, ಪದ್ಯಗಳು ಈಗಾಗಲೇ ಬಂದಿವೆ. ಆದರೆ ಗದ್ಯದಲ್ಲಿ ತಾಯಿಯನ್ನು ತಂದಿರುವ ರೀತಿಯಿಂದಾಗಿ ಇದೊಂದು ಹೊಸ ಪ್ರಯತ್ನವೇ ಅನಿಸುತ್ತದೆ. ಅದರಲ್ಲು ಮಂಜುನಾಥರು ಗಂಡು ಮಗುವಾಗಿ ತಾಯಿಯನ್ನು ಕಾಣುವ ನೋಟ, ಅವಳ ಮೇಲಿನ ಅವರ ಬೇಷರತ್ ಪ್ರೀತಿ… ಉಫ್ ಬಹಳ ಸುಂದರ..

(ಮಂಜುನಾಥ ಚಾಂದ್)

ಅವರ ತಾಯಿ ತಮ್ಮ ಮುಟ್ಟಿನ ದಿನಗಳಲ್ಲಿ ಹೊರಗಿರಬೇಕಾಗಿ ಬರುತ್ತಿದ್ದಾಗ ಅಂಗಳಕ್ಕೆ ಕೆಮ್ಮಣ್ಣನ್ನು ಕಲಸಿ, ಬಳಿದು, ನದಿಯ/ಸಮುದ್ರದ ನುಣುಪು ಕಲ್ಲಿನಿಂದ ಉಜ್ಜಿ ಉಜ್ಜಿ ಅಂಗಳವನ್ನು ಒಪ್ಪಗೊಳಿಸುತ್ತಿದ್ದರಂತೆ. ಅದನ್ನು ವಿವರಿಸುತ್ತಾ…

“ಅಮ್ಮ ತನ್ನ ನೋವಿನ ದಿನಗಳಲ್ಲಿ ರೂಪಿಸಿದ ಈ ಅಂಗಳಕ್ಕೆ ಯಾವ ಹೆಸರಿಡಲಿ?”

ಎಂದು ಕೇಳುತ್ತಾರೆ…. ಆಗ ಹನಿಯೊಂದು ಅಪ್ಪಣೆ ಇಲ್ಲದೆ ಉರುಳಿಬಿಡುತ್ತದೆ. ಹೆಣ್ಣು ತನ್ನ ದೈಹಿಕ ತಾಪತ್ರಯಗಳೊಂದಿಗೇ ಸಹಜವಾಗಿ ಬದುಕುವುದನ್ನು ಅದೆಷ್ಟು ಸಲೀಸಾಗಿ ಕಲಿತುಬಿಡುತ್ತಾಳೆ… ಎಷ್ಟೋ ಬಾರಿ ತಾಯಂದಿರೇ ತಮ್ಮ ಹೆಣ್ಣುಮಕ್ಕಳೊಂದಿಗೆ ಮುಕ್ತವಾಗಿ ಬೆರೆತು ತಿಳುವಳಿಕೆ ಹೇಳಿದಿದ್ದಾಗಲೂ ಹೆಣ್ಣು ಪ್ರಕೃತಿಯನ್ನು ಅರಿತು ನಡೆಯುವುದು ಸೋಜಿಗವೇ…

ಈ ಒಂದು ಪುಟ್ಟ ಕೃತಿ ತನ್ನ ಪ್ರತಿ ಅಧ್ಯಾಯಗಳಲ್ಲೂ ಭಾವಸಮುದ್ರವನ್ನು ಹೊತ್ತು ನಿಂತಿರಬೇಕು ಬಹುಶಃ… ಓದುವಾಗ ಪದೇ ಪದೇ ಮೈ ಝುಂ ಎನ್ನುತ್ತಿತ್ತು… ದೇಹದ ರೋಮ ರೋಮಗಳೂ ನಿಗುರಿ ನಿಂತಂತಾಗುತ್ತಿತ್ತು… ಈ ಕೃತಿಯನ್ನು ಮಂಜುನಾಥರ ತಾಯಿ ಓದಿರುವರಾ, ತಮ್ಮ ಪುಟ್ಟ ಕಂದ ತಮ್ಮನ್ನು ಹೀಗೆಲ್ಲಾ ಅರ್ಥಮಾಡಿಕೊಂಡಿದ್ದಾನಾ ಎಂದು ತಿಳಿದು ಮಾತು ಮರೆತು ಮೂಕರಾಗಿರುವರಾ… ಅಂತೆಲ್ಲ ಅನಿಸುತ್ತಲೇ ತಾಯಾದವಳಿಗೆ ಸಾರ್ಥಕವೆನ್ನಿಸುವ ಕ್ಷಣಗಳಿವು ಅನ್ನಿಸಿಬಿಟ್ಟಿತು. ಆದರೆ ಅವರ ತಾಯಿ ಈಗ ನಮ್ಮೊಂದಿಗೆ ಇಲ್ಲ, ಅವರಿದನ್ನು ಓದಲು ಸಾಧ್ಯವಿಲ್ಲ ಎಂದು ತಿಳಿದಾಗ ಮನಸು ಮುದುಡಿಹೋಯಿತು.

ಮುನ್ನುಡಿಯಲ್ಲಿ “ಇದು ಅನಕೃ ಮತ್ತು ರುಜುತ್ವದ ನಡುವಿನ ಅಂತರ ನಶಿಸುತ್ತಿರುವ ಕಾಲ. ಮಾತು ಮತ್ತು ಅನುಭವ ಎರೆಡೂ ಲಾಭದತ್ತ ತುಡಿಯುತ್ತಿರುವ ಹೊತ್ತಲ್ಲಿ ಅಂತರಂಗದ ಅನಿಸಿಕೆಗಳು ಕೂಡ ಲಾಭದಾಯಕ ಉದ್ಯಮದಂತೆ ಕಾಣುತ್ತಾ ಸೃಜನಶೀಲತೆಯೂ ವ್ಯಾಪಾರದಂತೆ ಭಾಸವಾಗುವ ದಿನಗಳಿವು. ಇವೆಲ್ಲದರ ನಡುವೆ ಮಂಜುನಾಥ್ ಚಾಂದ್ ಅತ್ಯಂತ ಪ್ರಮಾಣಿಕವಾದ ಅನುಭವಗಳನ್ನು ಯಾವ ಆಡಂಭರವೂ ಇಲ್ಲದೇ ಬರೆಯುತ್ತಾ ಹೋಗಿದ್ದಾರೆ…” ಎನ್ನುವ ಜೋಗಿಯವರ ಮಾತುಗಳು ಅಕ್ಷರಶಃ ಸತ್ಯ…

ಹರಿಯುವ ತೊರೆಯ ತಟದಲ್ಲಿ
ಅರಳಿದ ಕಮಲ ನೀನು
ಹೂವಿನೆಸಳಿನ ಗಂಧ ನೀನು
ನಿನ್ನ ಅಂತರಂಗದ ಕಂಪಿನಲ್ಲಿ
ನಾನು ಮಗುವಾಗಬೇಕು ಸದಾ
ಅಳಸಿ ಹೋದ ಚಿತ್ರಗಳಿಗೆಲ್ಲ
ಜೀವ ತುಂಬಬೇಕು
(ಮತ್ತೆ ಮಗುವಾಗಬೇಕು…
-ಮಂಜುನಾಥ ಚಾಂದ್)

ಎನ್ನುವ ಮಂಜುನಾಥರ ಆಸೆ ಒಮ್ಮೆ ನಿಜವಾಗಿಬಿಡಲಿ ಎಂದು ನನ್ನ ಮನಸ್ಸೂ ಹಾರೈಸುತ್ತಿದೆ….

(ಮ್ಯಾಕ್ಸಿಮ್ ಗಾರ್ಕಿ (Maxim Gorky)

ಮ್ಯಾಕ್ಸಿಮ್ ಗಾರ್ಕಿ (Maxim Gorky) ಯವರ “ತಾಯಿ” (Mother) (ನಿರಂಜನರ ಅನುವಾದ) ಯನ್ನು ಓದುವಾಗ ಒಂದಷ್ಟು ಭಾವನಾತ್ಮಕ ಅಂಶಗಳನ್ನು ತಲೆಯಲ್ಲಿ ತುಂಬಿಕೊಂಡೆ ಓದಲು ಶುರು ಮಾಡಿದ್ದೆ. ಆದರೆ ಅಲ್ಲಿನ ತಾಯಿ ತನ್ನನ್ನು ತಾನು ಹುಡುಕಿಕೊಳ್ಳುವ, ಕ್ರಾಂತಿಕಾರಿ ಮನೋಭಾವವನ್ನು ಬೆಳೆಸಿಕೊಳ್ಳುವ, ಮಗನ ಬೆನ್ನೆಲುಬಾಗಿ ನಿಲ್ಲುವ ಧೀಮಂತ ತಾಯಿ. ಈ ಕಾದಂಬರಿಯನ್ನು ಓದುವ ಯಾರಿಗಾದರೂ ಅವಳ ಬಗ್ಗೆ ಅಬ್ಬಾ ಎನಿಸದಿರದು. ಆದರೆ ಮೆಲೋಡ್ರಾಮಾ ಅನ್ನಿಸುವ ಅತಿ ಭಾವುಕತೆಗಿಂತಲೂ ಸಮತೂಕದ ಸಮಚಿತ್ತದ ವ್ಯಕ್ತಿತ್ವ ಹಲವಾರು ಕ್ಲಿಷ್ಟಕರ ಸಮಸ್ಯೆಗಳಿಂದ ಹೊರಬರಲು ಅನುಕೂಲಕರವಾಗಿರುತ್ತದೆ. ಅಂತಹ ಸಮತೂಕದ ವ್ಯಕ್ತಿತ್ವ ಇಲ್ಲಿನ ತಾಯಿಯದು.

ಹಾಗಂತ ಈ ಕಾದಂಬರಿ ಅಷ್ಟನ್ನು ಮಾತ್ರ ಹೇಳುತ್ತದಾ… “ತಾಯಿ ಕಾದಂಬರಿ ಕಾರ್ಮಿಕ ವರ್ಗದ ಜೀವನ, ನಿರಂಕುಶ ಪ್ರಭುತ್ವ ಮತ್ತು ಬೂರ್ಷ್ವಾಸೀಯ ವಿರುದ್ಧ ಅದರ ಹೋರಾಟ, ಅದರ ಕ್ರಾಂತಿಕಾರೀ ಜಾಗೃತಿಯ ಬೆಳವಣಿಗೆ, ಕಾರ್ಮಿಕರ ಮಧ್ಯದಿಂದಲೇ ನಾಯಕರು, ಮುಖಂಡರು ಕಾಣಿಸಿಕೊಂಡುದು… ಆ ಹೋರಾಟದ ಸಮಯದಲ್ಲಿ ಮಾನವನಲ್ಲಾಗುವ ಒಳ ಬದಲಾವಣೆಗಳ ಪ್ರಕ್ರಿಯೆ, ಅದರ ಶುದ್ಧೀಕರಣ ಜ್ವಾಲೆಯಲ್ಲಿ ಮಾನವ ದ್ವಿತೀಯ ಜನ್ಮ ಪಡೆಯುವುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ” ಎನ್ನುವ ನಿರಂಜನರ ಮಾತುಗಳಂತೇ ಬಹಳಷ್ಟು ಕೋನಗಳಿಂದ ಅವಲೋಕಿಸಬೇಕಾದ ಅರ್ಥೈಸಿಕೊಳ್ಳಬೇಕಾದ ಸಂಕೀರ್ಣ ಕೃತಿ ಇದು.

ಆದರೆ ಇಲ್ಲಿನ ತಾಯಿ ಏಕೆ ಮುಖ್ಯವಾಗುತ್ತಾಳೆಂದರೆ, ಇವಳು ತನ್ನ ಬಾಲ್ಯವನ್ನಾಗಲೀ, ತಾರುಣ್ಯವನ್ನಾಗಲೀ ಅನುಭವಿಸಿ ಕಂಡವಳಲ್ಲ. ಜಗತ್ತನ್ನು ಬೆರಗಿನಿಂದ ಕಂಡು ಅರಿತವಳಲ್ಲ. ನಲವತ್ತು ವರ್ಷ ವಯಸ್ಸಿಗೇ ತನ್ನನ್ನು ತಾನು ಮುದುಕಿ ಎಂದುಕೊಂಡುಬಿಟ್ಟವಳು. ತನ್ನ ನಲವತ್ತು ವರ್ಷ ವಯಸ್ಸನ್ನು ದಾಟಿದ ಮೇಲೆ ಬದುಕನ್ನು ಅರ್ಥ ಮಾಡಿಕೊಂಡವಳು. ಆಗ ಅವಳು ತನ್ನ ಬದುಕಿನಲ್ಲಿ ತಾನು ಏನನ್ನು ಕಳೆದುಕೊಂಡಿದ್ದಳೋ ಅದನ್ನು ಹುಡುಕಿಕೊಂಡು ಹೊರಡುತ್ತಾಳೆ. ಈ ಮಟ್ಟಿಗೆ ಇದೊಂದು ಕ್ರಾತಿಕಾರಿ ಬೆಳವಣಿಗೆ. ಕೊನೆಯಲ್ಲಿ ಕಾರ್ಮಿಕ ದಂಗೆಯಲ್ಲಿ ಭಾಗವಹಿಸಿದ್ದರ ಪರಿಣಾಮವಾಗಿ ಅವಳು ಸಾಯಬೇಕಾಗಿ ಬಂದಾಗ ಅವಳಾಡುವ ಮಾತು, ನಿಜಕ್ಕೂ ಅವಳು ತಾನೇ ಏರಿದ ಪ್ರಭುದ್ಧತೆಯ ಮಟ್ಟವನ್ನು ತೋರಿಸುತ್ತದೆ, ಅವಳು ಬದುಕನ್ನು ಗ್ರಹಿಸಿದ ರೀತಿಗೆ ಹೆಮ್ಮೆಯಾಗುತ್ತದೆ….

“ಅವರು ನನ್ನ ಆತ್ಮವನ್ನ -ಜೀವಂತ ಆತ್ಮವನ್ನ-ಕೊಲ್ಲಲಾರರು!”

“ರಕ್ತಸಾಗರ ಕೂಡಾ ಸತ್ಯವನ್ನು ಮುಳುಗಿಸಲಾರದು!”

ಎನ್ನುವ ಅವಳ ಕೊನೆಯ ಮಾತುಗಳು ಅಣುರಣಿಸುತ್ತಲೇ ನಮ್ಮ ಸುಪ್ತ ಜಾಗೃತಿಯಲ್ಲಿ ಅನಂತ ರಿಂಗಣಿಸುತ್ತ ಹೊರಡುತ್ತವೆ…

ತೀರಾ ಇತ್ತೀಚೆಗೆ ಸುಶೀಲಾ ಚಿಂತಾಮಣಿಯವರ “ಅಮ್ಮಾ ನೀ ಏಕೆ ಮದುವೆಯಾದೆ” ಎನ್ನುವ ಕಾದಂಬರಿಯೊಂದನ್ನು ಓದಿದೆ. ಈ ಕಾದಂಬರಿಯ ಶೀರ್ಷಿಕೆ ಕೇಳಿದಾಗಲೇ ದಿಗ್ಭ್ರಮೆಯಾಗಿತ್ತು ನನಗೆ. ಪುರುಷ ಪ್ರಾಬಲ್ಯದ ವ್ಯವಸ್ಥೆಯಲ್ಲಿ ತಾಯಿಯ ಬಗ್ಗೆ ಅವಳ ಸ್ಥಿತಿಯ ಬಗ್ಗೆ ನಿಜಕ್ಕೂ ಒಂದು ಕಾಳಜಿ, ಸಣ್ಣ ಮರುಕವಿರುವ ಬಹುಪಾಲು ಮಂದಿಯನ್ನು ಕಾಡುವ ಪ್ರಶ್ನೆಯಿರಬಹುದಾ ಇದು… ಎಂದು ಬಹಳಷ್ಟು ಸಾರಿ ನನ್ನನ್ನು ನಾನು ಹೀಗೆ ಕೇಳಿಕೊಂಡದ್ದಿದೆ. (ಇನ್ನೂ ಬದಲಾಗದ ಮನಸ್ಥಿತಿಗಳ ನಡುವೆ ನಾನೂ ನನ್ನ ತಾಯಿಗಿಂತ ಹೆಚ್ಚೇನೂ ಭಿನ್ನವಾಗಿಲ್ಲ ಎಂಬುದೂ ಸಹ ಯಾವಾಗಲೂ ನನ್ನನ್ನು ಕಾಡುತ್ತಿರುತ್ತದೆ)

ಸರಸಿಯ ಮಗಳು ಸಾನ್ವಿ ತನ್ನ ತಾಯಿಯನ್ನು ಕೇಳುವ ಈ ಪ್ರಶ್ನೆಯಿಂದ ಶುರುವಾಗುವ ಈ ಕಾದಂಬರಿ ಮದುವೆ, ದಾಂಪತ್ಯದ ಹಿನ್ನಲೆಯಲ್ಲಿ ಸಂಬಂಧಗಳ ಒಳಹೊರಗನ್ನು ಒರೆಗೆ ಹಚ್ಚುತ್ತದೆ. ಸಂಸಾರದ ಚೌಕಟ್ಟಿನಲ್ಲಿ ಹೆಣ್ಣನ್ನು ಬಲಿಪಶುವಾಗಿಸಲು ಹೆಣಗುವ ವ್ಯವಸ್ಥೆ ಮತ್ತು ಹೆಣ್ಣಾದವಳು ಅನುಭವದಿಂದ ಕಂಡುಕೊಳ್ಳುವ ಸತ್ಯ ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕು. ಮತ್ತು ಇಲ್ಲಿನ ತಾಯಿ ಯಾವ ಸಂಬಂಧಗಳನ್ನೂ ತಳ್ಳಿ ಹಾಕುವುದಿಲ್ಲ, ಅದರಿಂದ ಹೊರಜಿಗಿಯುವುದೇ ಇದಕ್ಕೆಲ್ಲ ಪರಿಹಾರ ಎಂದೂ ತಿಳಿಯುವುದಿಲ್ಲ, ಪುರುಷ ದ್ವೇಶಿ ಅಲ್ಲವೇ ಅಲ್ಲ ಅನ್ನುವುದು ನಿಜಕ್ಕೂ ಭರವಸೆ ಹುಟ್ಟಿಸುತ್ತದೆ. ಇದು ಬದುಕಿಗೆ ಮುಖಮಾಡುವ ಅಪ್ಪಟ ಹೆಣ್ಣೊಬ್ಬಳ ಪರಿ ಅನಿಸಿತು.

ಏನೆಲ್ಲಾ ಹೇಳಿದೆ ಅನಿಸುತ್ತಿದೆ. ಅದೆ ವೇಳೆ ಏನೂ ಹೇಳಿಲ್ಲ ಅಂತಲೂ ಅನಿಸುತ್ತಿದೆ. ತಾಯಿಯ ಬಗ್ಗೆ ಎಷ್ಟೇ ಹೇಳಿದರೂ ಅದೆಲ್ಲ ಅಪೂರ್ಣವೇ… ಪೂರ್ಣಗೊಳಿಸಿದೆ ಎನ್ನುವ ಒಬ್ಬರನ್ನೂ ಜಗತ್ತಿನ್ನುವರೆಗೂ ಕಂಡಿಲ್ಲ ಬಹುಶಃ… ಪೂರ್ಣಗೊಳಿಸಿ ಬದಿಗೆ ಸರಿಸುವ ಮನಸಾದರೂ ಯಾರಿಗೆ ಆಗುತ್ತದೆ… ಅದೇ ಅವಳು… ವಿನಾ ಕಾರಣ ಹೃದಯದಿಂದ ಹೊರಟ ಕಣ್ಣೀರು…. ಅದಕ್ಕೆ ಹೆಸರಿಲ್ಲ….