ತನಗೆ ಬೇಕಿಲ್ಲದ ದೇಶಗಳಿಂದ ಜನ ವಲಸೆ ಬರಬೇಕೆಂದರೆ ತಮಗಿರುವ ಕೌಶಲ್ಯಗಳು ದೇಶದ ಅಭಿವೃದ್ಧಿಗೆ ಬೇಕಿರುವ ಉದ್ಯೋಗಗಳಿಗೆ ಒಪ್ಪುವಂಥದ್ದೇ ಅನ್ನೋ ಪರೀಕ್ಷೆ ನಡೆದಾದ ಮೇಲೇ ವಲಸೆ ಬರುವಂತಾಯ್ತು. ಈಗ ಆಸ್ಟ್ರೇಲಿಯಾ ದೇಶಕ್ಕೆ ಬಂದು ನೆಲೆಯೂರುವುದು ಕಷ್ಟದ ಕ್ರಮ. ಹೆಚ್ಚಿನ ಓದು ನಂತರ ಇಲ್ಲೇ ಕೆಲಸ, ಕೌಶಲ್ಯ-ಆಧರಿತ ಉದ್ಯೋಗ ಲಭ್ಯತೆ, ರಕ್ತಸಂಬಂಧಿಗಳಿದ್ದರೆ, ಇಲ್ಲವೇ ಈ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಂಡವಾಳ ಹೂಡಿದರೆ, ಇಲ್ಲಿನ ಖಾಯಂ ವಾಸಿ, ಪ್ರಜೆಯನ್ನು ಮದುವೆಯಾಗಿ ಬಂದರೆ ಎನ್ನುವ ಕೆಲವೇ ಕೆಲವು ಕಾರಣಗಳನ್ನು ಆಧರಿಸಿ ಇಲ್ಲಿ ಖಾಯಂ ಇರಲು ಮಾನ್ಯತೆಯಿದೆ.
ಡಾ.ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ

 

ಕಳೆದ ಜೂನ್ ಏಳರ ಶುಕ್ರವಾರ ಸಂಜೆ ಈ ನಮ್ಮ ಬ್ರಿಸ್ಬನ್ ನಗರಿಯಲ್ಲಿ ಲುಮಿನಸ್ ಲ್ಯಾಂಟರ್ನ್ ಫೆಸ್ಟಿವಲ್ (Luminous Lantern Festival) ನಡೆಯಿತು. ನಾವು ಮುಂಚಿತವಾಗೇ ಫೆಸ್ಟಿವಲ್ ನಡೆಯುವ ನದಿ ಪಕ್ಕದ South Bank ತಲುಪಿದ್ದರಿಂದ ಭಾಗವಹಿಸುವ ತಂಡಗಳು ನಡೆಸುತ್ತಿದ್ದ ತಯ್ಯಾರಿ, ಅವರು ತಂದಿದ್ದ ವಿವಿಧ ಬಗೆಯ ಲ್ಯಾಂಟರ್ನ್ ಗಳನ್ನ ನೋಡಲು, ಅವರನ್ನು ಮಾತನಾಡಿಸಲು ಸಾಧ್ಯವಾಯಿತು. ಎಲ್ಲವೂ ಬಹಳ ಸರಳವಾಗಿ, ಅನೌಪಚಾರಿಕವಾಗಿದ್ದರಿಂದ ಅಲ್ಲಿ ಸುಂದರ ನಿರಾತಂಕ ವಾತಾವರಣವಿತ್ತು. ಬಗೆಬಗೆ ಬಣ್ಣದ ವೇಷ ಪೋಷಾಕುಗಳ ಜೊತೆ ಅವನ್ನು ಮೀರಿಸುವಂತೆ ಇದ್ದದ್ದು ತಂಡಗಳು ತಂದಿದ್ದ ಲ್ಯಾಂಟರ್ನ್ ವೈವಿಧ್ಯತೆ. ದೇವರು, ಪ್ರಾಣಿಗಳು, ಪಕ್ಷಿಗಳು, ಕಟ್ಟಡಗಳು, ದೀಪ, ಎಂಬಂತೆ ಏನೆಲ್ಲಾ ಚಿತ್ರವಿಚಿತ್ರ ಆಕಾರಗಳ ಲ್ಯಾಂಟರ್ನ್ ಗಳು. ಆಸ್ಟ್ರೇಲಿಯನ್ koala, ಕಾಂಗರೂ ಸೇರಿದಂತೆ ಭಾರತೀಯ ಆನೆ, ಚೀನಿಯರ ಸಿಂಹ, ಹ್ಯಾರಿ ಪಾಟರ್ ಪುಸ್ತಕಗಳಿಂದ ಇಳಿದುಬಂದ ಗೂಬೆ, ಮ್ಯಾಜಿಷಿಯನ್, ಬುದ್ಧ, ಗಣೇಶ, ಮಂಟಪಗಳು, ಡ್ರ್ಯಾಗನ್, rainbow serpent, ಇನ್ನೂ ಏನೇನೋ ಬೆಳಕು ಬುಟ್ಟಿಗಳು ಅಲ್ಲಿ ನಲಿದಾಡುತ್ತಿದ್ದವು.

ಕಾರ್ಯಕ್ರಮದ ಮುಖ್ಯಭಾಗ ಲ್ಯಾಂಟರ್ನ್ ಗಳ ಪೆರೇಡ್. ಅದು ಆರಂಭವಾಗುವ ಬಹುಮುಂಚೆಯೇ ಜನ ಬಂದು ಸೇರುತ್ತಿದ್ದರು. ಶುಕ್ರವಾರ ಕೆಲಸದ ದಿನವನ್ನು ಬೇಗ ಮುಗಿಸಿ ಸೌತ್ ಬ್ಯಾಂಕ್ (South Bank) ತಲುಪಿ ಕಾರ್ಯಕ್ರಮದ ಮತ್ತೊಂದು ವಿಶೇಷವಾದ multicultural ತಿಂಡಿತಿನಿಸುಗಳನ್ನು ಚಪ್ಪರಿಸುವುದು. ಹಾಗಾಗಿ ಸಂಜೆ ಐದು ಗಂಟೆಯಿಂದಲೇ ಆಫ್ರಿಕನ್, ವಿಯೆಟ್ನಮೀಸ್, ಚೈನೀಸ್, ಟರ್ಕಿಷ್ ಮಿಡ್ಲ್ ಈಸ್ಟರ್ನ್ ಆಹಾರ ಮಳಿಗೆಗಳ ಮುಂದೆ ಜನರ ಉದ್ದುದ್ದ ಸಾಲು. ಪಕ್ಕದಲ್ಲೇ ಹೆಚ್ಚು ಜನರಿಲ್ಲದ ಬರ್ಗರ್, ಚಿಪ್ಸ್, ಮುಂತಾದವುಗಳೂ ಇದ್ದವು. ಎಷ್ಟಾದರೂ ಅದು multicultural ಕಾರ್ಯಕ್ರಮವಲ್ಲವೇ! ಹಬ್ಬವನ್ನು ಆಯೋಜಿಸಿ, ಪ್ರಚಾರಕೊಟ್ಟು ನಡೆಸುತ್ತಿರುವುದು Multicultural Development Australia ಸಂಸ್ಥೆ. ಇದರ ಕಾರ್ಯಕ್ರಮಕ್ಕೆ ಸರ್ಕಾರದ ಸಹಾಯವಲ್ಲದೆ ಸಮುದಾಯ ಸಂಸ್ಥೆಗಳ ಮತ್ತು ಕಾರ್ಪೊರೇಟ್ ಪ್ರಾಯೋಜಿತರ ಬೆಂಬಲವೂ ಸಿಕ್ಕುತ್ತಿದೆ.

ಕಳೆದ ಹನ್ನೊಂದು ವರ್ಷಗಳಿಂದ ನಡೆದು ಬಂದಿರುವ ಲುಮಿನಸ್ ಲ್ಯಾಂಟರ್ನ್ ಫೆಸ್ಟಿವಲ್ ಈ ವರ್ಷ ಹನ್ನೆರಡನೇ ಹೆಜ್ಜೆಯನ್ನಿಟ್ಟಿದೆ. ಬ್ರಿಸ್ಬನ್ ನಗರದಲ್ಲಿ ಬಹುಸಂಸ್ಕೃತಿ ಜನಸಂಖ್ಯೆ ಹೆಚ್ಚುತ್ತಿರುವಂತೆಯೇ ಈ ಹಬ್ಬದ ಗಾತ್ರ ಮತ್ತು ಜನಪ್ರಿಯತೆ ಕೂಡ ಹೆಚ್ಚುತ್ತಿದೆ. ಆರಂಭದ ವರ್ಷಗಳಲ್ಲಿ ಹಬ್ಬದ ಮೂಲ ಉದ್ದೇಶ ಇದ್ದದ್ದು ನಿರಾಶ್ರಿತರನ್ನು ನಗರಕ್ಕೆ ಮತ್ತು ರಾಣಿರಾಜ್ಯಕ್ಕೆ ಸ್ವಾಗತಿಸುವುದು. ಹಲೋ, ಬನ್ನಿ, ನಿಮಗೆ ಸುಸ್ವಾಗತ, ಎಂದು ಬೆಳಕಿನ ಮೂಲಕ ಹೇಳಿ, ಅವರು ನೆಲೆಯೂರಿ ಈ ನಗರವನ್ನು, ಕ್ವೀನ್ಸ್ ಲ್ಯಾಂಡ್ ರಾಜ್ಯವನ್ನು ತಮ್ಮ ಮನೆಯೆಂದು ಕರೆಯಲು ಅವರಿಗೆ ಪ್ರೋತ್ಸಾಹ ನೀಡುವುದು. ಅವರಲ್ಲಿನ ಅತಂತ್ರತೆಯನ್ನು ಕಡಿಮೆ ಮಾಡಿ, ಸ್ನೇಹ ಮತ್ತು ಸಹಾಯ ಹಸ್ತವನ್ನು ಚಾಚಿ ಅವರು ನಗುನಗುತ್ತಾ ಬದುಕಲು ಉತ್ತೇಜನ ಕೊಡುವುದು. ನಂತರದ ದಿನಗಳಲ್ಲಿ ಹಬ್ಬದ ಗಾತ್ರ ಹಿಗ್ಗಿ ಅದು ಬಹುಸಂಸ್ಕೃತಿ ಸಮುದಾಯಗಳನ್ನು ಒಳಗೊಂಡಿದೆ. ಅಂದರೆ ಇಲ್ಲಿ ಬದುಕಿ ಬಾಳುತ್ತಿರುವ ಬೇರೆ ಭಾಷೆ, ಸಂಸ್ಕೃತಿಗಳ ಜನರೆಲ್ಲರಿಗೂ ನೀವು ನಮ್ಮ ಸಮಾಜದ ಬಹುಮುಖ್ಯರು, ನಿಮ್ಮ ಸಂಸ್ಕೃತಿಗಳನ್ನು ನಾವು ಗೌರವಿಸಿ ಆದರಿಸುತ್ತೇವೆ, ಅದನ್ನು ಸಂಭ್ರಮಿಸುತ್ತೇವೆ ಎಂದು ಹೇಳುವ ಪರಿ.

ಒಬ್ಬ ವ್ಯಕ್ತಿ, ಒಂದು ಕುಟುಂಬ ತಮ್ಮ ಮನೆ, ನೆರೆಹೊರೆ, ಬಂಧುಬಳಗ, ಶಾಲೆ, ಉದ್ಯೋಗ, ಸಮುದಾಯ, ಕಟ್ಟಕಡೆಗೆ ತಮ್ಮ ರಾಷ್ಟ್ರವನ್ನೇ ತ್ಯಜಿಸಿ ಹೊರಡಬೇಕೆಂದರೆ ಒಂದು ಅದನ್ನು ಇಚ್ಚಾಪೂರ್ವಕವಾಗಿಯೇ, ತನ್ನ ಮುಂದಿನ ಭವಿಷ್ಯವನ್ನು ಉತ್ತಮಪಡಿಸಿಕೊಳ್ಳಲು ತನ್ನದೇ ಸ್ವಂತ ಆಯ್ಕೆಯಿಂದ ನಿರ್ಧಾರ ಮಾಡಿರಬೇಕು. ಇಲ್ಲವೆಂದಾದರೆ ತಮ್ಮಿಚ್ಛೆಯ ವಿರುದ್ಧವಾಗಿ, ಬಲವಂತದಿಂದ, ಪರಿಸ್ಥಿತಿ ತೀರಾ ಹದಗೆಟ್ಟು ಬೇರೆ ದಾರಿಯೇ ಇಲ್ಲ ಎಂದುಕೊಂಡು ಪರಿತಪಿಸುತ್ತಾ ಹಾಗೆ ಮಾಡಿರಬೇಕು. ಈ ಎರಡನೆಯ ಸನ್ನಿವೇಶದಲ್ಲಿ ಭಯ, ಹತಾಶೆ, ಅಸಹಾಯಕತೆ ಮತ್ತು ಪರಿಸ್ಥಿತಿಯ ಅರಾಜಕತೆ ವ್ಯಕ್ತಿಯನ್ನೂ, ಕುಟುಂಬವನ್ನು ದಿಕ್ಕಾಪಾಲು ಮಾಡಿರುತ್ತದೆ. ಜೀವವನ್ನು ಕಾಪಾಡಿಕೊಳ್ಳಲು, ಊಟ, ಬಟ್ಟೆ ಮತ್ತು ತಲೆಮೇಲೆ ಸೂರು ಅರಸುತ್ತಾ ಅತಂತ್ರರಾಗಿ ಅಂತಹ ಜನರು ತಮ್ಮ ದೇಶವನ್ನು ಬಿಟ್ಟು ಬದುಕಲೊಂದು ನೆಲೆ ಕೊಡಿ ಎಂದು ಕೇಳುತ್ತಾ ಬೇರೆ ರಾಷ್ಟ್ರಗಳ ಗಡಿಗಳ ಬಾಗಿಲನ್ನು ತಟ್ಟುತ್ತಾರೆ. ಕೆಲವು ಬಾಗಿಲುಗಳು ತಕ್ಷಣಕ್ಕೇ ತೆರೆಯುತ್ತವೆ. ಇನ್ನು ಕೆಲವು ಮೀನಮೇಷ ಎಣಿಸುತ್ತಾ ಜಾಗರೂಕವಾಗುತ್ತವೆ. ಎಲ್ಲಾ ದೇಶಗಳಿಗೂ ಅವರದ್ದೇ ಮನೆಮನೆ ಕಥೆ, ವ್ಯಥೆ ಸಾಕಷ್ಟು ಇದ್ದು ಅದನ್ನು ತಾನೂ ಉಂಡು ತಮ್ಮ ಸುತ್ತಾ ಹರಡಿಬಿಡುವಷ್ಟು ಇರಬೇಕಾದರೆ ಈ ಅಪರಿಚಿತ ಅಬ್ಬೆಪಾರಿಗಳನ್ನು ಮಾತನಾಡಿಸುವ ವ್ಯವಧಾನ ಎಷ್ಟರಮಟ್ಟಿಗಿದೆ?

ತಮ್ಮ ನಾಡಿನಲ್ಲಿ ನಡೆಯುವ ನಿರಂತರ ಹಿಂಸೆ, ಯುದ್ಧಗಳಿಂದ ತಪ್ಪಿಸಿಕೊಳ್ಳಲು ಜೀವಭಯದಿಂದ ನಾಡನ್ನೇ ತೊರೆದುಬಿಟ್ಟ ನಿರಾಶ್ರಿತರಿಗೆ ಸಹಾಯಹಸ್ತ ಚಾಚಲು ವಿಶ್ವಸಂಸ್ಥೆ ಟೊಂಕಕಟ್ಟಿ ನಿಂತಿದೆ. ಅದು ಮುಂಚೂಣಿಯಲ್ಲಿ ನಿಂತು ಮಾಡುತ್ತಿರುವ ಸತತ ಪ್ರಯತ್ನಗಳಿಂದ ಲಕ್ಷಾಂತರ ನಿರಾಶ್ರಿತರಿಗೆ ನಿಲ್ಲಲು ನೆಲೆ, ಅನ್ನ-ಬಟ್ಟೆ, ಉಚಿತ ವ್ಯೆದ್ಯಕೀಯ ಸೌಲಭ್ಯ, ಮಕ್ಕಳಿಗೆ ಉಚಿತ ಶಾಲಾಶಿಕ್ಷಣ ಲಭ್ಯವಾಗಿದೆ. ಆ ನಿರಾಶ್ರಿತರು ತಮಗೆ ಬಾಗಿಲು ತೆರೆದು ಒಳ ಬರಮಾಡಿಕೊಂಡ ನಾಡನ್ನು, ತಾವು ನೆಲೆ ನಿಂತ ನಾಡನ್ನು ಇದು ನಮ್ಮದು ಎಂದು ಕರೆಯಲು, ಅಭಿಮಾನಪಡಲು ಇಂದು ಸಾಧ್ಯವಾಗಿದೆ. ಜೂನ್ ತಿಂಗಳ ೨೦ನೇ ತಾರೀಕನ್ನು ವಿಶ್ವಸಂಸ್ಥೆ (ಯುನೈಟೆಡ್ ನೇಷನ್ಸ್) World Refugee Day ಎಂದು ಗುರುತಿಸಿದೆ. ಈ ವರ್ಷ ಆಯ್ಕೆ ಮಾಡಿರುವ ವಿಷಯ #StepWithRefugees.

ಬ್ರಿಸ್ಬನ್ ನಗರದಲ್ಲಿ ಬಹುಸಂಸ್ಕೃತಿ ಜನಸಂಖ್ಯೆ ಹೆಚ್ಚುತ್ತಿರುವಂತೆಯೇ ಈ ಹಬ್ಬದ ಗಾತ್ರ ಮತ್ತು ಜನಪ್ರಿಯತೆ ಕೂಡ ಹೆಚ್ಚುತ್ತಿದೆ. ಆರಂಭದ ವರ್ಷಗಳಲ್ಲಿ ಹಬ್ಬದ ಮೂಲ ಉದ್ದೇಶ ಇದ್ದದ್ದು ನಿರಾಶ್ರಿತರನ್ನು ನಗರಕ್ಕೆ ಮತ್ತು ರಾಣಿರಾಜ್ಯಕ್ಕೆ ಸ್ವಾಗತಿಸುವುದು. ಹಲೋ, ಬನ್ನಿ, ನಿಮಗೆ ಸುಸ್ವಾಗತ, ಎಂದು ಬೆಳಕಿನ ಮೂಲಕ ಹೇಳಿ, ಅವರು ನೆಲೆಯೂರಿ ಈ ನಗರವನ್ನು, ಕ್ವೀನ್ಸ್ ಲ್ಯಾಂಡ್ ರಾಜ್ಯವನ್ನು ತಮ್ಮ ಮನೆಯೆಂದು ಕರೆಯಲು ಅವರಿಗೆ ಪ್ರೋತ್ಸಾಹ ನೀಡುವುದು.

ಲುಮಿನಸ್ ಲ್ಯಾಂಟರ್ನ್ ಫೆಸ್ಟಿವಲ್ ನಲ್ಲಿ ತಾವಾಗೇ, ಸ್ವಯಿಚ್ಛೆಯಿಂದ, ತಮ್ಮದೇ ಕಾರಣಗಳಿಗಾಗಿ ತಮ್ಮ ದೇಶವನ್ನ ಬಿಟ್ಟು ಆಸ್ಟ್ರೇಲಿಯಾಗೆ ಬಂದು ನೆಲೆಸಿದ ಜನರು ಮತ್ತು ರೆಫ್ಯೂಜಿಗಳು, ಈ ಇಬ್ಬರೂ ಇದ್ದರು. ನಮ್ಮ ಭಾರತೀಯ ಭಾಷಾ ಸಮುದಾಯದವರು, ನೆರೆಹೊರೆಯ ಬಾಂಗ್ಲಾ, ನೇಪಾಳಿ, ಸಿಂಹಳದವರು, ಭೂತಾನಿನವರು, ಬರ್ಮೀಯರು ಲ್ಯಾಂಟರ್ನ್ ಗಳನ್ನ ಹಿಡಿದು ನಡೆದರು. ದೂರ ಗಡಿಗಳಿಂದ, ಅಲ್ಲಿನ ಅತಂತ್ರ ಪರಿಸ್ಥಿತಿಯಿಂದ ಜೀವಸಹಿತವಾಗಿ ಪಾರಾಗಿ ಇಲ್ಲಿಗೆ ಬಂದು ಕಣ್ಣು ಬಿಡುತ್ತಿರುವ, ಇಂಗ್ಲಿಷ್ ಭಾಷೆ ಅಷ್ಟಾಗಿ ಬಾರದ ಮಧ್ಯಪ್ರಾಚ್ಯ ರಾಷ್ಟ್ರಗಳವರು, ಆಫ್ರಿಕನ್ನರು ಇದ್ದರು. ಬಲು ಸಂತೋಷದಿಂದ ಬೆಳಕುಬುಟ್ಟಿಗಳನ್ನು ಹಿಡಿದು ನಡೆದರು. “ಯಾಹ್, ಐ ಆಮ್ ಸೋ ಹ್ಯಾಪಿ,” ಅಂದಳು ಒಬ್ಬ ಹೆಂಗಸು. ಅವಳು ಸಿರಿಯಾ ದೇಶದಿಂದ ಇಲ್ಲಿಗೆ ನಿರಾಶ್ರಿತಳಾಗಿ ಬಂದಿದ್ದಾಳೆ. ‘ಇಂತಹ ದೇವಲೋಕ, ಆಸ್ಟ್ರೇಲಿಯಾ ದೇಶದಲ್ಲಿ ನಾವಿದ್ದೇವೆ ಅನ್ನೋದನ್ನ ಇನ್ನೂ ನಂಬುವುದಕ್ಕಾಗುತ್ತಿಲ್ಲ,’ ಎಂದ ಒಬ್ಬ ಆಫ್ರಿಕನ್ ಯುವಕ.

ಇತ್ತೀಚಿನ ವರ್ಷಗಳಲ್ಲಿ ಮತ್ತೆ ತಮ್ಮ ತಮ್ಮ ಕಾರಣಗಳಿಗಾಗಿ ಈ ದೇಶಕ್ಕೆ ವಲಸೆ ಬಂದು ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಸೊಗಸಾಗಿ ಬೇರುಬಿಟ್ಟಿರುವ ದಕ್ಷಿಣ ಅಮೆರಿಕ ದೇಶಗಳವರು, ಯುರೋಪಿಯನ್ನರು ಕೂಡ ಇದ್ದರು. ಇವರಿಗೂ ಇಂಗ್ಲಿಷ್ ಭಾಷೆಗೂ ಇರುವ ನಂಟು ಅಷ್ಟಕ್ಕಷ್ಟೇ. ಆದರೂ ಕೂಡ ಇವರ ಸಂಖ್ಯೆ ಹೆಚ್ಚುತ್ತಲೇ ಇದೆ. ನಗರದ ಮುಖ್ಯ ಭಾಗಗಳಿಗೆ ಹೋದರೆ ಭಾಷೆಗಳ ಸಂತೆಯಲ್ಲಿರುವಂತೆ ಭಾಸವಾಗಿ ಖುಷಿಯಾಗುತ್ತದೆ. ಹಿಂದೊಮ್ಮೆ ಇಂಗ್ಲಿಷ್ ಅಲ್ಲದ ಬೇರೆ ಭಾಷೆ ಕಿವಿಗೆ ಬಿದ್ದರೆ ಮುಖ ಸೊಟ್ಟ ಮಾಡಿ ನಮ್ಮನ್ನು ಅನಾಗರೀಕರನ್ನಾಗಿ ನೋಡುತ್ತಿದ್ದ ಬಿಳಿಯರು ಸದ್ಯ ಈಗ ಮುಖವನ್ನ ಆ ಕಡೆ ತಿರುಗಿಸುತ್ತಾರೆ ಅಷ್ಟೇ.

ಆಸ್ಟ್ರೇಲಿಯಾದಲ್ಲಿ ವಲಸೆ ಎನ್ನುವುದು ತುಂಬಾ ದೊಡ್ಡ ವಿಷಯ. ಕಾಲಕ್ರಮೇಣ ದೇಶದ ಅಭಿವೃದ್ಧಿ ಅಂದಾಜಿಗೆ ತಕ್ಕಂತೆ ರೂಪುಗೊಂಡ ಮೇಲೆ ವೀಸಾ ಕ್ರಮ ಕಟ್ಟುನಿಟ್ಟಾಯ್ತು. ತನಗೆ ಬೇಕಿಲ್ಲದ ದೇಶಗಳಿಂದ ಜನ ವಲಸೆ ಬರಬೇಕೆಂದರೆ ತಮಗಿರುವ ಕೌಶಲ್ಯಗಳು ದೇಶದ ಅಭಿವೃದ್ಧಿಗೆ ಬೇಕಿರುವ ಉದ್ಯೋಗಗಳಿಗೆ ಒಪ್ಪುವಂಥದ್ದೇ ಅನ್ನೋ ಪರೀಕ್ಷೆ ನಡೆದಾದ ಮೇಲೇ ವಲಸೆ ಬರುವಂತಾಯ್ತು. ಈಗ ಆಸ್ಟ್ರೇಲಿಯಾ ದೇಶಕ್ಕೆ ಬಂದು ನೆಲೆಯೂರುವುದು ಕಷ್ಟದ ಕ್ರಮ. ಹೆಚ್ಚಿನ ಓದು ನಂತರ ಇಲ್ಲೇ ಕೆಲಸ, ಕೌಶಲ್ಯ-ಆಧರಿತ ಉದ್ಯೋಗ ಲಭ್ಯತೆ, ರಕ್ತಸಂಬಂಧಿಗಳಿದ್ದರೆ, ಇಲ್ಲವೇ ಈ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಂಡವಾಳ ಹೂಡಿದರೆ, ಇಲ್ಲಿನ ಖಾಯಂ ವಾಸಿ, ಪ್ರಜೆಯನ್ನು ಮದುವೆಯಾಗಿ ಬಂದರೆ ಎನ್ನುವ ಕೆಲವೇ ಕೆಲವು ಕಾರಣಗಳನ್ನು ಆಧರಿಸಿ ಇಲ್ಲಿ ಖಾಯಂ ಇರಲು ಮಾನ್ಯತೆಯಿದೆ. ಇವಲ್ಲದೆ, ನಿರಾಶ್ರಿತರು ಮತ್ತು ಆಶ್ರಯಕ್ಕಾಗಿ ಮೊರೆಯಿಟ್ಟವರಿಗೆ, ವಿಶ್ವ ಸಂಸ್ಥೆಯ ಸೂಚನೆ ಮೇರೆಗೆ, ಮಾನವತಾ ದೃಷ್ಟಿಯಿಂದ ವಿಶೇಷ ವೀಸಾವನ್ನು ಕೊಡಲಾಗುತ್ತದೆ.

ಇಷ್ಟೆಲ್ಲಾ ಯಾಕೆ ಹೇಳಿದೆ ಎಂದರೆ ಎರಡು ದಶಕಗಳ ಹಿಂದೆ ಬೇರೆ ದೇಶಗಳ ಜನರು ಬೋಟ್ ಹತ್ತಿ ಆಸ್ಟ್ರೇಲಿಯಾದ ಉತ್ತರ ಗಡಿಗೆ ಬರಲಾರಂಭಿಸಿದರು. ಆಗ ಸರಕಾರಕ್ಕೆ ಇವರನ್ನು ಏನು ಮಾಡಬೇಕು ಎನ್ನುವುದು ದೊಡ್ಡ ಪ್ರಶ್ನೆಯಾಗಿ ಸಮಸ್ಯೆಯಾಯಿತು. ಯಾವುದೇ ಪರವಾನಗಿಯಿಲ್ಲದೆ ಬಾಗಿಲು ತಲುಪಿದ ಅವರನ್ನು ದೇಶದೊಳಗೆ ಬಿಟ್ಟುಕೊಂಡು ಉತ್ತರದ ಗಡಿಯಲ್ಲೇ ತಾತ್ಕಾಲಿಕ ಡೆಟೆನ್ಷನ್ ಕೇಂದ್ರಗಳನ್ನು ತೆರೆದು ಅಲ್ಲಿಡಲಾಯ್ತು. ಅತ್ತ ಜೇಲೂ ಅಲ್ಲ, ಇತ್ತ ನಾಗರಿಕ ಸೇವಾ ಕೇಂದ್ರವೂ ಅಲ್ಲ, ಎಡಬಿಡಂಗಿ ಕೇಂದ್ರವದು. ಅಲ್ಲೇ ಊಟ ತಿಂಡಿ, ಬಟ್ಟೆ, ಮಲಗಲು ಜಾಗ, ಓಡಾಡಲು ಜಾಗ, ವೈದ್ಯರು, ಮಕ್ಕಳಿಗೆ ಶಾಲಾ ಪಾಠ ಅಭ್ಯಾಸ, ಎಲ್ಲವೂ ನಡೆಯಿತು. ಅವರು ಇಲ್ಲಿಗೆ ಬಂದ ಕಾರಣವನ್ನು ಕೂಲಂಕುಷವಾಗಿ ಪರೀಕ್ಷಿಸಿದ ನಂತರವೇ ಮುಂದಿನ ಕತೆ. ಅದರಲ್ಲಿ ಪಾಸಾದರೆ ದೇಶದೊಳಗೆ ಎಂಟ್ರಿ, ಇಲ್ಲವೇ ಜಾಗ ಖಾಲಿ ಮಾಡಿಸಿ ಅವರನ್ನು ಅವರ ದೇಶಕ್ಕೆ ಅಟ್ಟುವುದು. ಈ ವಿಷಯ ಅವತ್ತಿನಿಂದ ಇವತ್ತಿನವರೆಗೂ, ಶಾಲೆಗಳಿಂದ ಹಿಡಿದು ಸರಕಾರದವರು ದಿನನಿತ್ಯವೂ ಮಾತನಾಡುವ ಬಹುಚರ್ಚಿತ ವಿಷಯ. ಈಗಂತೂ ಡೆಟೆನ್ಷನ್ ಕೇಂದ್ರವನ್ನು ಉತ್ತರದ ಗಡಿಯಿಂದ ತೆಗೆದುಹಾಕಿ ನೆರೆ ದೇಶದಲ್ಲಿ ಸ್ಥಾಪಿಸಿದ್ದಾರೆ. ಇಲ್ಲಿ ನಮ್ಮ ಬ್ರಿಸ್ಬನ್ ನಲ್ಲಿ ಒಂದಷ್ಟು ಜನ ‘ವೀ ಹೇಟ್ ಬೋಟ್ ಪೀಪಲ್’ ಅಂತಾರೆ. ನನ್ನನ್ನ ನೋಡಿ ‘ನೀನು ಬೋಟ್ ಹತ್ತಿ ಬಂದೆಯಾ,’ ಅಂತ ಅಂದಿದ್ದಾರೆ. ‘ಗೋ ಬ್ಯಾಕ್ ಟು ವೇರ್ ಯು ಕೇಮ್ ಫ್ರಮ್,’ ಅಂತಾ ಪಕ್ಕದ ಮನೆಯವನು, ಅವನ ಸ್ನೇಹಿತರು ಕೂಗಿದ್ದಾರೆ.

ಇನ್ನೊಂದಷ್ಟು ಜನ, ಯೂರೋಪಿಯನ್ನರನ್ನ ನೋಡಿ ನಾವು ಕಲಿಯಬೇಕು. ಅವರ ಧಾರಾಳತನ ನಮಗೆ ಮಾದರಿಯಾಗಬೇಕು, ಅನ್ನುತ್ತಾರೆ. ನನ್ನ ಆಪ್ತ ಸ್ನೇಹಿತರೊಬ್ಬರು ಡೆಟೆನ್ಷನ್ ಕೇಂದ್ರವನ್ನು ಕಿತ್ತೊಗೆಯಿರಿ, ಆ ಎಲ್ಲಾ ಬಂಧಿತರನ್ನು ದೇಶದೊಳಗೆ ಕರೆತನ್ನಿ, ಅವರೂ ಕೂಡ ನಮ್ಮಂತೆಯೇ, ನಮ್ಮವರೂ ಕೂಡ ಹಿಂದೆ ಹಾಗೆ ಬೋಟ್ ಹತ್ತಿ ಬಂದವರೇ ಎಂದು ಚಳವಳಿ ನಡೆಸುತ್ತಾರೆ.

ಈ ಎಲ್ಲಾ ಗೊಂದಲಮಯ ವಾತಾವರಣದಲ್ಲೂ ಅಂದು ನೋಡಿದ ಬೆಳಕುಬುಟ್ಟಿಗಳ ಹಬ್ಬದಲ್ಲಿ ಬಣ್ಣ ಬಣ್ಣದ ಲ್ಯಾಂಟರ್ನ್ ಹಿಡಿದುಕೊಂಡು ನಡೆದ ನಿರಾಶ್ರಿತರು ಮತ್ತು ವಲಸೆಗಾರರ ಮುಖಗಳಲ್ಲಿ ನಗು, ಸಂತೋಷ ಅರಳಿತ್ತು. ನಾವು ಆಸ್ಟ್ರೇಲಿಯಾದಲ್ಲಿ ಬದುಕುತ್ತಿದ್ದೀವಿ, ಇದು ನಮ್ಮ ಮನೆ ಅಂತ ಹೇಳೋ ಜನರಲ್ಲಿ ಒಂದೊಮ್ಮೆ ನಿರಾಶ್ರಿತರಾಗಿದ್ದವರೆ ಹೆಚ್ಚು ಕಂಡುಬಂದಿದ್ದರು. ಸಮಾಜ ಬೆಳವಣಿಗೆಯ ಒಳ್ಳೆಯ ಸೂಚನೆಯಿದು ಅನ್ನಿಸಿತು.