ಭೂಮಿಯ ಗರ್ಭಕ್ಕಿಳಿದ ಬೀಜಗಳು ಮೊಳಕೆಯೊಡೆದು ಸಸಿಯಾಗಿ, ಹೂಬಿಟ್ಟು ನೂರಾರು ಕಾಯಿಗಳಾಗಿ, ಹಣ್ಣಾಗಿ, ತೆನೆಗಳಾಗಿ ಹಸಿದ ಹೊಟ್ಟೆಗಳನ್ನು ತಣಿಸುವುದು ಇದೆಯಲ್ಲ, ಇದಕ್ಕಿಂತ ಸೃಜನಾತ್ಮಕವಾದದ್ದು ಪ್ರಪಂಚದಲ್ಲಿ ಬೇರೆ ಯಾವುದೂ ನನ್ನ ಕಣ್ಣಿಗೆ ಕಾಣುವುದಿಲ್ಲ. ಈ ಮಣ್ಣಿನ ಅಂತಃಕರಣವಾದರೂ ಎಂತಹದ್ದು? ಭೌತಿಕವಾಗಿ ನಿರ್ಜೀವವಾಗಿರುವ ಮಣ್ಣು ಮತ್ತೊಂದು ನಿರ್ಜೀವ ಬೀಜಕ್ಕೆ ಉಸಿರು ನೀಡುವ ಪರಿ ನನ್ನಲ್ಲಿ ಸಹಜವಾಗಿ ಬೆರಗನ್ನುಂಟು ಮಾಡುತ್ತದೆ. ಶಾಲೆಯಲ್ಲಿ ವಿದ್ಯೆ ಪಡೆಯುವ ಕಾಲಕ್ಕೆ ನಾನೂ ನನ್ನ ಗೆಳೆಯರೂ ಹೊಲಗಳಲ್ಲಿಯೂ ಇಂತಹ ಅಚ್ಚರಿಗಳನ್ನು ಕಾಣುತ್ತಾ ಆ ಅಚ್ಚರಿಗಳ ಭಾಗವಾಗುತ್ತಾ ಬಂದಿದ್ದು ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ.
ಇಸ್ಮಾಯಿಲ್‌ ತಳಕಲ್‌ ಬರೆಯುವ “ತಳಕಲ್‌ ಡೈರಿ”ಯಲ್ಲಿ ಹೊಸ ಬರಹ

ಸೂರ್ಯ ಹುಟ್ಟಾಕಿಂತ ಮೊದಲ ಎದ್ದು ಇದ್ದಿಲು ಪುಡಿಯಿಂದ ಹಲ್ಲು ತಿಕ್ಕಿ ಬಾಯಿ ಮುಕ್ಕಳಿಸಿ ಮುಖಕ್ಕೆ ತಣ್ಣೀರು ಉಗ್ಗಿಕೊಂಡು ಒಳಗ ಬರೋದ್ರೊಳಗ ಅವ್ವ ಬಿಸಿ ಬಿಸಿ ಚಾ ಕಾಸಿಕೊಂಡು ಒಂದ್ ಕಪ್ಪಿನ್ಯಾಗ ಹಾಕಿ ತಂದು ಕೊಡ್ತಿದ್ಲು. ನಸುಕಿನ ಆ ಥಂಡ್ಯಾಗ ಅವ್ವ ಮಾಡಿ ಕೊಟ್ಟ ಬಿಸಿ ಚಾ ಕುಡಿದು ಮೈ ಬೆಚ್ಚಗ ಮಾಡ್ಕೊಂಡು ಗೆಳೆಯಾರ ಕೂಡಿ ಹೊಲದ ಕಡೆಗೆ ಹೊಂಟುಬಿಟ್ರ ಒಂಥರ ಹುರುಪು ಮೈಯಾಗ ಹೊಕ್ಕೊಂಡಿರುತ್ತಿತ್ತು. ಕಿವಿಗಳಿಗೆ ಸುತ್ತಿಕೊಂಡಿರುತ್ತಿದ್ದ ಟಿವಾಲು ನಮ್ಮನ್ನ ಗದ್ಗದ ನಡಗಿಸುತ್ತಿದ್ದ ಥಂಡಿಯನ್ನ ಮೈ ಹೊಕ್ಕೊಳಲಾರದಂಗ ತಡೀತಿದ್ರ ಕೈಯಾಗಿದ್ದ ಬೀಜ ಊರುವ ಕೋಲಿನಿಂದ ಕತ್ತಲನ್ನು ತಿವಿದು ತಿವಿದು ದೂರ ಸರಿಸುವವರಂಗ ದಢ ದಢ ಹೆಜ್ಜೆ ಹಾಕುತ್ತ ಹೊಲದ ಕಡೆಗೆ ನಡೆಯುತ್ತಿದ್ವಿ. ಆ ಕತ್ತಲದಾಗ ಬರಿಗಾಲಲ್ಲಿಯೇ ಸುಮಾರು ಒಂದು ತಾಸು ನಡೆದು ಹೊಲ ತಲುಪುವ ಸಮಯಕ್ಕ ಬೆಳಕು ನಿಧಾನಕ್ಕ ಹಣಕಿ ಹಾಕತೊಡಗುತ್ತಿತ್ತು. ಅದು ಹೊಳಿಹೊತ್ತಿನ ಹೊಲ. ತುಂಗಭದ್ರ ಡ್ಯಾಮಿನ ಹಿನ್ನೀರಿನ ದಡದಲ್ಲಿರುವ ಬಹಳಷ್ಟು ಹಳ್ಳಿಗಳಲ್ಲಿ ನಮ್ಮೂರೂ ಒಂದು.

ಆ ಹಿನ್ನೀರು ಮಾಡಿರುವ ವಿಶಾಲ ಬಯಲಿನಲ್ಲಿ ತುಂಗಭದ್ರ ನದಿಯ ನೀರು ಪ್ರತಿ ವರ್ಷ ಮೂರ್ನಾಲ್ಕು ತಿಂಗಳು ನಿಂತು ಹೋದಾಗ ಅಲ್ಲಿ ಮೊಣಕಾಲಿನವರೆಗೆ ಫಲವತ್ತಾದ ಮಣ್ಣಿನ ಹುದುಲು ನಿರ್ಮಾಣ ಆಗಿರತೈತಿ. ಅದೇ ಹೊಳಿಹೊತ್ತಿನ ಹೊಲ. ಅದು ಹಸಿಯಾಗಿರುವಾಗಲೇ ಅದಕ್ಕೆ ಹೊಂದಿಕೊಂಡೇ ಇರುವ ಹಳ್ಳಿಯ ರೈತರು ಬೇರೆ ಬೇರೆ ಬೆಳೆಗಳನ್ನು ಬೆಳೆಯುತ್ತಾರೆ. ಎಲ್ಲರೂ ಸಾಮಾನ್ಯವಾಗಿ ಅಲ್ಲಿ ಬೆಳೆಯುವುದು ಅಲಸಂದಿಯನ್ನು. ಆಗ ನಮ್ಮೂರಿನ ರೈತರಿಗೆ ಆ ಹೊಲಗಳಲ್ಲಿ ಅಲಸಂದಿ ಬೀಜಗಳನ್ನು ಊರಲು ಅಥವಾ ಬೇರೆ ಕೂಲಿ ಕೆಲಸಕ್ಕೆ ಸುಲಭಕ್ಕೆ ಸಿಗುತ್ತಿದ್ದದ್ದು ಸಾಲಿಗೆ ಹೋಗುತ್ತಿದ್ದ ನಾವೇ. ಸಾಲಿಗೆ ಸೂಟಿ ಇದ್ದಾಗಲೆಲ್ಲ ಹೊಲದಾಗ ದುಡಿಯಾಕಂತ ನಮ್ಮದೊಂದು ಗೆಳೆಯರ ಸಣ್ಣ ಗುಂಪು ಸದಾ ತಯಾರಾಗೆ ಇರುತ್ತಿತ್ತು. ಶನಿವಾರ, ಐತವಾರ ಅಥವಾ ಬೇರೆ ಸೂಟಿ ದಿನಗಳಲ್ಲಿ ಹೊಲದವರು ನಮ್ಮ ಗುಂಪಿನ ಒಬ್ಬ ಸದಸ್ಯನಿಗೆ ಹೇಳಿಬಿಡುತ್ತಿದ್ದರು. ಅವನೇ ಎಲ್ಲರ ಮನೆಗೂ ಹೋಗಿ ಇಂತಹವರ ಹೊಲದಲ್ಲಿ ಇಂತಹ ಕೆಲಸವಿದೆ ಎಂದು ವಿಷಯ ಮುಟ್ಟಿಸುತ್ತಿದ್ದ. ನಾವೆಲ್ಲರೂ ಬುತ್ತಿ ಕಟ್ಟಿಕೊಂಡು ಹತ್ತಿ ಬಿಡಿಸಲೋ, ಮೆಕ್ಕೆಜೋಳದ ತೆನೆ ಮುರಿಯಲೋ ಇಲ್ಲವೆ ಮೆಕ್ಕೆಜೋಳಕ್ಕೆ ಗೊಬ್ಬರ ಇಡಲೋ ಹೋಗಿಬಿಡುತ್ತಿದ್ದೆವು.

ಹೊಲಗಳಲ್ಲಿ ದುಡಿಯುವ ಈ ಎಲ್ಲಾ ಕೆಲಸಗಳಲ್ಲಿ ನನಗೆ ಭಾಳ ಇಷ್ಟವಾಗಿದ್ದಂದ್ರ ಹೊಳಿಹೊತ್ತಿನ ಹೊಲದಾಗ ಅಲಸಂದಿ ಬೀಜ ಊರುವುದು. ಟಿವಾಲಿನಿಂದ ಉಡಿಯನ್ನು ಕಟ್ಟಿಕೊಂಡು ಅದರಲ್ಲಿ ಅಲಸಂದಿ ಬೀಜಗಳನ್ನು ಹಾಕಿ ಕೈಯಲ್ಲಿದ್ದ ಕೋಲನ್ನು ಹಿಡಿದು ಫಲವತ್ತತೆಯ ಆಗರವಾಗಿದ್ದ ಆ ಹುದುಲಿನಲ್ಲಿ ಇಳಿದೆನೆಂದರೆ ಅದೆಂತದೋ ಖುಷಿ. ಮೊದಲು ಬಲಗೈಯಲ್ಲಿನ ಕೋಲಿನಿಂದ ಆ ಹುದುಲಿನಲ್ಲಿ ರಂದ್ರ ಮಾಡಿ ಅದರೊಳಗೆ ಎಡಗೈಯಿಂದ ಅಲಸಂದಿ ಬೀಜಗಳನ್ನು ಹಾಕಿ ಮತ್ತೆ ಕೋಲಿನಿಂದ ರಪ್ ಅಂತ ಬಡೆದು ಆ ರಂದ್ರವನ್ನು ಮುಚ್ಚಬೇಕಾಗಿತ್ತು. ಹಾಗೆ ರಪ್ ಅಂತ ಬಡಿದಾಗ ನಮ್ಮ ಮೈತುಂಬಾ ಸಿಡಿದಿರುತ್ತಿದ್ದ ರಾಡಿಯ ಆಧಾರದ ಮೇಲೆ ನಾವು ಎಷ್ಟು ಚಾಕಚಕ್ಯತೆಯಿಂದ ಕೆಲಸ ಮಾಡಿದೆವೆಂದು ಒಬ್ಬರಿಗೊಬ್ಬರು ಊಹಿಸಿಕೊಳ್ಳುತ್ತಿದ್ದೆವು. ಹೊಳಿಹೊತ್ತಿನಲ್ಲಿ ಹೀಗೆ ಅಲಸಂದಿ ಬೀಜ ಊರುವುದು ನನಗೆಂದೂ ತ್ರಾಸದಾಯಕವಾಗಿ ಅಥವಾ ಆಯಾಸವಾಗಿ ಕಂಡಿದ್ದೆ ಇಲ್ಲ. ಆ ಭೂಮಿ ಯಾವಾಗಲೂ ಹಸಿಯಾಗಿರುವುದು ಒಂದು ಕಾರಣವಾದರೆ ಹುದಿಲಿನಲ್ಲಿ ರಂದ್ರ ಮಾಡಿ ಬೀಜ ಹಾಕಿ ರಪ್ ಅಂತ ಬಡಿಯುವುದು ಒಂತರ ಆಟವಾಗಿಯೂ ಮಜವಾಗಿಯೂ ಕಾಣುತ್ತಿದ್ದದ್ದೂ ಒಂದು ಕಾರಣವಾಗಿತ್ತು. ನಮ್ಮ ನಮ್ಮ ಕೋಲಿನಿಂದ ಎಲ್ಲಿಯವರೆಗೆ ರಂದ್ರ ಮಾಡಿ ಬೀಜ ಹಾಕಲು ಸಾಧ್ಯವಿದೆಯೋ ಅಷ್ಟು ವಿಸ್ತಾರದವರೆಗಿನ ನಮ್ಮ ಪಾಲಿನ ಜಾಗದಲ್ಲಿ ಬೀಜ ಊರಿ ಉಡಿಯಲ್ಲಿಯ ಬೀಜಗಳನ್ನು ಖಾಲಿ ಮಾಡಿಬಿಟ್ಟರೆ ಅಂದಿನ ನಮ್ಮ ಕಾಯಕ ಮುಗಿದಂತೆ. ಬೀಜ ಖಾಲಿ ಮಾಡಿದವರು ಒಬ್ಬೊಬ್ಬರಾಗಿ ಮನೆಗೆ ಕಡೆಗೆ ಓಡತೊಡಗುತ್ತಿದ್ದರೆ ಇನ್ನೂ ಖಾಲಿಯಾಗದವರ ಕೋಲು ಇನ್ನಷ್ಟೂ ಚುರುಕುಗೊಂಡು ವೇಗವಾಗಿ ಆಡುತ್ತಿತ್ತು. ಎಲ್ಲರ ಬೀಜಗಳು ಖಾಲಿಯದ ನಂತರ ಎಲ್ಲರೂ ಜೊತೆಯಾಗಿಯೇ ಮನೆಗೆ ಹೋಗಬಹುದಿತ್ತಾದರೂ ಶಾಲೆಗೆ ತಡವಾಗಿ ಹೋದರೆ ಪಿ ಇ ಮಾಸ್ತರರ ಬಡಿಗೆಗೆ ಕೈನೀಡಿ ಅಂಗೈಗಳನ್ನು ಕೆಂಪಾಗಿಸಿಕೊಳ್ಳುತ್ತಿದ್ದ ಅನುಭವ ನಮ್ಮನ್ನು ಎಚ್ಚರಿಸಿ ಕಾಲಿಗೆ ಬುದ್ಧಿ ಹೇಳುವಂತೆ ಮಾಡುತ್ತಿದ್ದವು.

ಕಿವಿಗಳಿಗೆ ಸುತ್ತಿಕೊಂಡಿರುತ್ತಿದ್ದ ಟಿವಾಲು ನಮ್ಮನ್ನ ಗದ್ಗದ ನಡಗಿಸುತ್ತಿದ್ದ ಥಂಡಿಯನ್ನ ಮೈ ಹೊಕ್ಕೊಳಲಾರದಂಗ ತಡೀತಿದ್ರ ಕೈಯಾಗಿದ್ದ ಬೀಜ ಊರುವ ಕೋಲಿನಿಂದ ಕತ್ತಲನ್ನು ತಿವಿದು ತಿವಿದು ದೂರ ಸರಿಸುವವರಂಗ ದಢ ದಢ ಹೆಜ್ಜೆ ಹಾಕುತ್ತ ಹೊಲದ ಕಡೆಗೆ ನಡೆಯುತ್ತಿದ್ವಿ. ಆ ಕತ್ತಲದಾಗ ಬರಿಗಾಲಲ್ಲಿಯೇ ಸುಮಾರು ಒಂದು ತಾಸು ನಡೆದು ಹೊಲ ತಲುಪುವ ಸಮಯಕ್ಕ ಬೆಳಕು ನಿಧಾನಕ್ಕ ಹಣಕಿ ಹಾಕತೊಡಗುತ್ತಿತ್ತು.

ಭೂಮಿಯ ಗರ್ಭಕ್ಕಿಳಿದ ಬೀಜಗಳು ಮೊಳಕೆಯೊಡೆದು ಸಸಿಯಾಗಿ, ಹೂಬಿಟ್ಟು ನೂರಾರು ಕಾಯಿಗಳಾಗಿ, ಹಣ್ಣಾಗಿ, ತೆನೆಗಳಾಗಿ ಹಸಿದ ಹೊಟ್ಟೆಗಳನ್ನು ತಣಿಸುವುದು ಇದೆಯಲ್ಲ, ಇದಕ್ಕಿಂತ ಸೃಜನಾತ್ಮಕವಾದದ್ದು ಪ್ರಪಂಚದಲ್ಲಿ ಬೇರೆ ಯಾವುದೂ ನನ್ನ ಕಣ್ಣಿಗೆ ಕಾಣುವುದಿಲ್ಲ. ಈ ಮಣ್ಣಿನ ಅಂತಃಕರಣವಾದರೂ ಎಂತಹದ್ದು? ಭೌತಿಕವಾಗಿ ನಿರ್ಜೀವವಾಗಿರುವ ಮಣ್ಣು ಮತ್ತೊಂದು ನಿರ್ಜೀವ ಬೀಜಕ್ಕೆ ಉಸಿರು ನೀಡುವ ಪರಿ ನನ್ನಲ್ಲಿ ಸಹಜವಾಗಿ ಬೆರಗನ್ನುಂಟು ಮಾಡುತ್ತದೆ. ಶಾಲೆಯಲ್ಲಿ ವಿದ್ಯೆ ಪಡೆಯುವ ಕಾಲಕ್ಕೆ ನಾನೂ ನನ್ನ ಗೆಳೆಯರೂ ಹೊಲಗಳಲ್ಲಿಯೂ ಇಂತಹ ಅಚ್ಚರಿಗಳನ್ನು ಕಾಣುತ್ತಾ ಆ ಅಚ್ಚರಿಗಳ ಭಾಗವಾಗುತ್ತಾ ಬಂದಿದ್ದು ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ.

ನಮ್ಮೂರು ಹೊಳಿಹೊತ್ತಿನ ಹೊಲಗಳಿಂದಷ್ಟೆ ಅಲ್ಲ ಮಸಾರಿ ಹೊಲ, ಎರಿ ಹೊಲಗಳಿಂದಲೂ ಆವೃತವಾದ ಹಳ್ಳಿ. ಮಸಾರಿ ಹೊಲಗಳಲ್ಲಿಯ ಹತ್ತಿ ಬಿಡಿಸಲು, ಮೆಕ್ಕೆ ಜೋಳದ ತೆನೆ ಮುರಿಯಲು, ಮೆಕ್ಕೆ ಜೋಳಕ್ಕೆ ಗೊಬ್ಬರ ಇಡಲೂ ಹೋಗಿ ಬರುತ್ತಿದ್ದದ್ದುಂಟು. ಒಟ್ಟಿನಲ್ಲಿ ಸೂಟಿ ಬಂತೆಂದರೆ ಹೊಲಗಳಲ್ಲಿಳಿದು ಮಣ್ಣಿನೊಂದಿಗೆ ಬೆರೆತು ಮೈ ಬಗ್ಗಿಸಿ ದುಡಿಯುವುದೇ ನಮಗೆ ಮನರಂಜನೆಯೂ, ಹೊಟ್ಟೆ ಹೊರೆಯಲು ಕಾಯಕವೂ ಆಗಿದ್ದ ದಿನಗಳವು. ಒಂದರ್ಥದಲ್ಲಿ ಪುಸ್ತಕದ ಮಾನಸಿಕ ಶ್ರಮಕ್ಕಿಂತ ಭೂಮಿಯೊಂದಿಗಿನ ದೈಹಿಕ ಶ್ರಮವೇ ನಮಗೆ ಪ್ರಿಯವಾಗಿತ್ತು. ನಮಗೆ ಆಗ ಹೋಮ್‌ವರ್ಕ್, ಟ್ಯೂಷನ್ ಅಂದರೇನೆ ಸರಿಯಾಗಿ ಗೊತ್ತಿರಲಿಲ್ಲ. ಬೇಸಿಗೆ ರಜೆಗಳಲ್ಲಿ ಕೋಚಿಂಗ್ ಕ್ಲಾಸ್‌ಗಳಂತೂ ದೂರದ ಮಾತು. ಮುಂಜಾನೆ ಶಾಲೆ ಪ್ರಾರಂಭವಾಗುವತನಕ ಆಟ, ಮನೆಗಳಲ್ಲಿಯ ಕೆಲಸಗಳನ್ನು ಮಾಡುವುದು ಇಲ್ಲವೆ ಕಡ್ಲಿ(ಶೇಂಗಾ) ಕಾಯಿ ಹರಿಯುವುದು, ಮೆಕ್ಕೆ ಜೋಳದ ತೆನೆ ಸುಲಿಯುವುದು. ಶಾಲೆ ಪ್ರಾರಂಭವಾಗುತ್ತಲೇ ಪಾಟಿಚೀಲ ಹಾಕಿಕೊಂಡು ಓಡುವುದು. ನಮಗೆ ಯಾವುದೇ ಮಾನಸಿಕ ಒತ್ತಡವಿರಲಿಲ್ಲ. ಗುರುಗಳು ಬಯ್ದರೆ, ಹೊಡೆದರೆ ಪ್ರಸಾದದಂತೆ ಸ್ವೀಕರಿಸುವುದೊಂದೆ ಗೊತ್ತಿತ್ತು.

ಈಗಿನ ಮಕ್ಕಳು ಬಹಳ ಸೂಕ್ಷ್ಮವೋ ಅಥವಾ ನಾವೇ ಅಂತಹ ವ್ಯವಸ್ಥೆ ನಿರ್ಮಾಣವಾಗಲು ಕಾರಣರಾದೆವೋ. ತಂದೆ ತಾಯಿಯೋ, ಶಿಕ್ಷಕರೋ ಬೈದಿದ್ದಕ್ಕೆ, ಗದರಿದ್ದಕ್ಕೆ ಒಂದು ಪೆಟ್ಟು ಕೊಟ್ಟಿದ್ದಕ್ಕೆ ಏನೇನೋ ಅನಾಹುತ ಮಾಡಿಕೊಳ್ಳುತ್ತಿರುವುದಕ್ಕೆ ಮಣ್ಣಿನೊಂದಿಗಿನ ನಂಟು ಅವರಿಂದ ಬಹಳ ದೂರವಾದದ್ದೆ ಕಾರಣವೆಂದು ನಂಬುತ್ತೇನೆ. ನಿಸರ್ಗದೊಂದಿಗಿನ ಕಲಿಕೆ ಹೋಗಿ ನೆಟ್‌ವರ್ಕಿನ ಕಲಿಕೆಯಾಗಿದ್ದು ಇಂದಿನ ಮಕ್ಕಳ ಮಾನಸಿಕ ಸ್ಥಿತಿ ಕುಸಿಯುವುದಕ್ಕೆ ಕಾರಣವಾಗಿರಬಹುದು. ಮಕ್ಕಳ ಮಾನಸಿಕ ಶ್ರಮಕ್ಕೆ ಒತ್ತು ಕೊಟ್ಟಂತೆ ಈಗಿನ ಯಾವ ತಂದೆ ತಾಯಿಗಳು ತಮ್ಮ ಮಕ್ಕಳ ದೈಹಿಕ ಶ್ರಮಗಳಿಗೂ ಕಾಳಜಿ ವಹಿಸುತ್ತಾರೆ? ಈಗಲೇ ಕೆಲವೊಂದು ಬೆಳೆಗಳನ್ನು, ಹಣ್ಣು ತರಕಾರಿಗಳನ್ನು ಪಿಪಿಟಿ ತಯಾರಿಸಿ ಪ್ರೊಜೆಕ್ಟರ್‌ನಲ್ಲಿ ಮಕ್ಕಳಿಗೆ ತೋರಿಸುವ ಸ್ಥಿತಿ ಬಂದಿದೆ. ಅವುಗಳು ಎಲ್ಲಿ ಬೆಳೆಯುತ್ತವೆ ಎನ್ನುವುದೂ ಕೆಲವೊಮ್ಮೆ ಗೊತ್ತಿರುವುದಿಲ್ಲ. ಮುಂದೊಂದು ದಿನ ಅವುಗಳ ಪಳಯುಳಕೆಗಳನ್ನು ಹಿಡಿದು ಮಕ್ಕಳಿಗೆ ವಿವರಿಬೇಕಾದ ಸ್ಥಿತಿ ಬರಬಹುದೇನೋ. ಮಣ್ಣಿನೊಂದಿಗಿನ ಅಚ್ಚರಿಯನ್ನು, ನಿಸರ್ಗದಲ್ಲಿಯ ಬೆರಗನ್ನು ಮಕ್ಕಳೆ ಸ್ವತಃ ಅರಿಯುವಂತಹ ಪ್ರಮೇಯಗಳನ್ನು ನಾವೇ ಸೃಷ್ಟಿಸಿಕೊಟ್ಟರೆ ಅವರೊಂದಿಗೆ ನಾವೂ ಕಲಿಯಬಹುದು.

ಹೊಲಗಳಲ್ಲಿ ದುಡಿದು ಗೆಳೆಯರೊಂದಿಗೆ ಮನೆಯ ದಾರಿ ಹಿಡಿದಾಗ ತುಂಗಭದ್ರಾ ನದಿಯ ಚಿಕ್ಕ ಚಿಕ್ಕ ಕಾಲುವೆಗಳ ನೀರು ಕಣ್ಣಿಗೆ ಬಿದ್ದಿದ್ದೆ ತಡ ಅಂಗಿಯನ್ನು ಕಿತ್ತೆಸೆದು ನೀರೊಳಗೆ ಡುಮುಕಿ ಹೊಡೆದುಬಿಟ್ಟರೆ ಅಂದಿನ ದಣಿವೆಲ್ಲ ಕಾಲುವೆಗುಂಟ ಹರಿದು ಹೋಗಿರುತ್ತಿತ್ತು. ಒಂಚೂರು ರಭಸವಾಗಿ ಹರಿಯುತ್ತಿದ್ದ ನೀರಿಗೆ ಎದುರಾಗಿ ಈಜಲು ಪ್ರಯತ್ನಿಸಿದಾಗ ನೀರು ನಮ್ಮನ್ನು ಸೆಳೆದುಕೊಂಡು ಹೋಗಿ ಎಂತಹದ್ದೋ ಪಾಠ ಹೇಳಿಕೊಡುತ್ತಿತ್ತು. ಹರಿಗೋಲು ಹಾಕಿಕೊಂಡು ನದಿಯ ಮಧ್ಯೆ ಹೋಗಿ ಮೀನು ಹಿಡಿಯುವವನಿಗೆ ಗಾಳ ಹೇಗೆ ಹಾಕಬೇಕು ಬಲೆಯನ್ನು ಹೇಗೆ ಬೀಸಬೇಕೆಂಬುದನ್ನು ಹೇಳಿಕೊಡಬೇಕಾಗಿಲ್ಲ. ಮೀನು ಹಿಡಿಯಲೇಬೇಕೆನ್ನುವ ಒಳ ತುಡಿತ ಅವನಿಗೆ ಎಲ್ಲವನ್ನೂ ಕಲಿಸುತ್ತದೆ.