ನಾವು ನಾಲ್ಕಾರು ಜನ ಕೂಡಿಕೊಂಡು ಆ ಬಿದಿರಿನ ದೊಡ್ಡ ಗೊಂಬೆಯನ್ನು ಮಾಡಲು ಪ್ರಾರಂಭಿಸಿದ್ದು ಶಿಬಿರ ಶುರುವಾಗುವ ನಾಲ್ಕು ದಿನಗಳ ಮೊದಲಷ್ಟೇ. ಅದನ್ನು ತಯ್ಯಾರು ಮಾಡಲು ನಾವು ಆಯ್ಕೆ ಮಾಡಿಕೊಂಡಿದ್ದ ಜಾಗ, ಸಂಸ್ಕೃತಿ ಶಿಬಿರ ನಡೆಯುವ ನೀನಾಸಮ್ ನ ಸಭಾಭವನದಲ್ಲಿ. ನಮ್ಮ ಆ ಗೊಂಬೆ ಕಟ್ಟುವ ಉಮೇದಿಯ ಕೆಲಸದಲ್ಲಿ ನಿದ್ರೆ ನಮ್ಮನ್ನು ತೊರೆದೇ ಹೋಗಿತ್ತು. ಶಿಬಿರ ಶುರುವಾಗುವ ಹಿಂದಿನ ದಿನ ಸಂಜೆ, ಶಿಬಿರದ ವೇದಿಕೆ ತಯ್ಯಾರು ಮಾಡುವಬಳಗದವರು ಬಂದು, ನಮ್ಮ ಗೊಂಬೆಯನ್ನು ಸಂಭಾಂಗಣದ ಹೊರಗೆ ಆ ಕೂಡಲೇ ತೆಗೆದುಕೊಂಡು ಹೋಗಿ, ವೇದಿಕೆ ನಿರ್ಮಿಸಲು ಆ ಜಾಗವನ್ನು ತೆರವು ಮಾಡಿಕೊಡಲು ತಿಳಿಸಿದರು. ನಮ್ಮ ದಡ್ಡ ತಲೆಗಳಿಗೆ ಆಗಲೇ ಗೊತ್ತಾಗಿದ್ದು, ಆ ಗೊಂಬೆಯನ್ನು ಹೊರಗೆ ಒಯ್ಯಲು ಅಸಾಧ್ಯ ಎಂದು!
ರಂಗಕರ್ಮಿ ಚನ್ನಕೇಶವ ಬರೆಯುವ ನೀನಾಸಂ ರಂಗಪುರಾಣ

 

ಪ್ರತೀ ವರ್ಷ ನೀನಾಸಮ್ ತಿರುಗಾಟದ ತಾಲೀಮುಗಳೆಲ್ಲಾ ಮುಗಿದ ನಂತರ – ಅಲ್ಲಿ ವರ್ಷವರ್ಷವೂ ಅಕ್ಟೋಬರ್ ತಿಂಗಳಲ್ಲಿ ನಡೆಯುವ `ಸಂಸ್ಕೃತಿ ಶಿಬಿರ’ದಲ್ಲಿ ತಿರುಗಾಟ ನಾಟಕಗಳ ಮೊದಲ ಪ್ರದರ್ಶನಗಳು ನಡೆಯುತ್ತವೆ. ಈ ಶಿಬಿರದಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಬೇರೆಬೇರೆ ಕಡೆಗಳಿಂದ ಮಾತ್ರವಲ್ಲದೇ, ಹೊರ ರಾಜ್ಯಗಳಿಂದಲೂ ಶಿಬಿರಾರ್ಥಿಗಳು ಬರುತ್ತಾರೆ. ಅಷ್ಟಲ್ಲದೇ, ಶಿವಮೊಗ್ಗ ಜಿಲ್ಲೆಯ ಹಲವಾರು ಹಳ್ಳಿ-ಮನೆಗಳಿಂದಲೂ ಆಸಕ್ತರು ಬಂದು, ಆ ಶಿಬಿರದಲ್ಲಿ ತಿರುಗಾಟ ನಾಟಕಗಳ ಮೊದಲ ಪ್ರದರ್ಶನಕ್ಕೆ ಹೆಗ್ಗೋಡಿನ `ಶಿವರಾಮ ಕಾರಂತ ರಂಗಮಂದಿರ’ದ ಪ್ರೇಕ್ಷಾಂಗಣವು ತುಂಬಿ ತುಳುಕುತ್ತಿರುತ್ತದೆ.

ಹಿಂದೆಲ್ಲಾ ಸಂಸ್ಕೃತಿ ಶಿಬಿರವು ಎಂಟು ದಿನಗಳವರೆಗೆ ನಡೆಯುತ್ತಿತ್ತು. ಈಗ ಐದು ದಿನಗಳವರೆಗೆ ಮಾತ್ರ ನಡೆಯುತ್ತದೆ. ಎಂಟು ದಿನಗಳ ಆಗಿನ ಶಿಬಿರಗಳಲ್ಲಿ ಶಿಬಿರಾರ್ಥಿಗಳಾಗಿ ಬರುವ ಕೆಲವರು, ತಿರುಗಾಟದ ಮೂರು ನಾಟಕಗಳ ಪ್ರದರ್ಶನ ಮುಗಿದ ನಂತರ ಊರಿಗೆ ಹೊರಟುಬಿಡುತ್ತಿದ್ದರು. ಇದರರ್ಥ, ತಿರುಗಾಟದ ನಾಟಕಗಳ ಮೊದಲ ಪ್ರದರ್ಶನಗಳನ್ನು ಹೆಗ್ಗೋಡಿನಲ್ಲೇ ನೋಡಲೆಂದೇ ಎಷ್ಟೋ ಜನ ನಾಟಕಾಂಕ್ಷಿಗಳು, ನೀನಾಸಮ್ ರಂಗಶಿಕ್ಷಣ ಕೇಂದ್ರದ ಹಿರಿಯ ವಿದ್ಯಾರ್ಥಿಗಳೂ ದೂರದೂರುಗಳಿಂದ ಹೆಗ್ಗೋಡಿಗೆ ಬಂದಿಳಿಯುತ್ತಿದ್ದರು.

ತಿರುಗಾಟದ ನಟರಿಗೆ ಶಿಬಿರ ಶುರುವಾಗುವ ಒಂದು ವಾರದ ಹಿಂದಿನಿಂದಲೇ ಮೊದಲ ಪ್ರದರ್ಶನಗಳ ಟೆನ್ಷನ್ ಶುರುವಾಗಿರುತ್ತದೆ. ನಿರ್ದೇಶಕರಿಗಂತೂ ಇನ್ನೂ ಸಿಕ್ಕಾಪಟ್ಟೆ. ಮೊದಲ ಪ್ರದರ್ಶನದ ಮಾರನೆಯ ದಿನ, ಹಿಂದಿನ ದಿನದ ನಾಟಕ ಪ್ರಯೋಗವನ್ನು ಕುರಿತು, ಶಿಬಿರದ ಮೊದಲ ಗೋಷ್ಠಿಯಲ್ಲಿ ಶಿಬಿರಾರ್ಥಿಗಳ, ತಜ್ಞರ ಅಭಿಪ್ರಾಯ-ಭಿನ್ನಾಭಿಪ್ರಾಯಗಳ ಮಂಡನೆಗಳಿರುತ್ತವೆ. ತೀರ್ವತರವಾದ ಹೊಗಳಿಕೆ-ತೆಗಳಿಕೆ, ವಾದ-ವಿವಾದಗಳೂ ಇರುತ್ತವೆ. ಪ್ರದರ್ಶನ ದಿನದ ಹಿಂದಿನ ರಾತ್ರಿಯಿಂದಲೇ, ಆ ಪ್ರದರ್ಶನದ ಕುರಿತು ಎಲ್ಲೆಂದರಲ್ಲಿ ಚರ್ಚೆ ನಡೆದಿರುತ್ತದೆ. ಆ ಇಡೀ ನೀನಾಸಮ್ ಆವರಣದಲ್ಲಿ ರಂಗಭೂಮಿಯ ಕಲಾವಿದರು, ನಾಟಕಕಾರರು, ಸಿನೆಮಾ ನಿರ್ದೇಶಕರು, ಸಾಹಿತಿಗಳು, ತತ್ವಜ್ಞಾನಿಗಳು, ವಿದ್ಯಾರ್ಥಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಕವಿಗಳೂ, ಕಲಾ-ಸಾಹಿತ್ಯಾಕಾಂಕ್ಷಿಗಳೂ – ಇಂಥವರೆಲ್ಲಾ ತುಂಬಿ, ವಾತಾವರಣ ಕಳೆಗಟ್ಟಿರುತ್ತದೆ.

ಬಿಡುವಿನ ವೇಳೆಯಲ್ಲಿ ಆಸಕ್ತರೆಲ್ಲಾ ಕ್ಯಾಂಪಸ್ ನಲ್ಲಿ ಅಲ್ಲಲ್ಲೇ ತಮ್ಮದೇ ಆದ ಗುಂಪುಗಳನ್ನು ರಚಿಸಿಕೊಂಡು ಬೇರೆಬೇರೆ ವಿಷಯದ ಕುರಿತು ಚರ್ಚೆ-ಸಂವಾದ ನಡೆಸುತ್ತಿರುತ್ತಾರೆ. ನಾಟಕದ ಪ್ರಯೋಗ, ನಟ-ನಟಿಯರ ಅಭಿನಯದ ಕುರಿತೂ ಮಾತಾಡುತ್ತಾರೆ ಕೆಲವರು ತಮ್ಮತಮ್ಮ ಗುಂಪುಗಳಲ್ಲಿ ಹಾಡುಗಳನ್ನು ಹಾಡುತ್ತಾ ಅಲ್ಲಿಯ ಇಡೀ ರಂಗಪ್ರಕೃತಿಯ ಸೊಬಗನ್ನು ಹೀರಿಕೊಳ್ಳುವ – ಅದಕ್ಕೆ ತೆರೆದುಕೊಳ್ಳುವ ಪ್ರಯತ್ನವನ್ನು ಮಾಡುತ್ತಿರುತ್ತಾರೆ. ಈ ಎಲ್ಲಾ ಅನೇಕ ಕಾರಣಗಳಿಂದಾಗಿ ತಿರುಗಾಟದ ನಟರಿಗೆ ಆ ಮೊದಲ ಪ್ರದರ್ಶನಗಳು ಬಹಳ ಪ್ರತಿಷ್ಠೆಯುಳ್ಳವಾಗಿವೆ. ಅವರೆಲ್ಲಾ ತಮ್ಮ ಸರ್ವಶಕ್ತಿಯನ್ನು, ಪ್ರಯತ್ನವನ್ನು ವ್ಯಯಿಸಿ ತಮ್ಮ ಪಾತ್ರದ ತಯಾರಿ ನಡೆಸುತ್ತಾರೆ. ಅಂತೆಯೇ ಪ್ರದರ್ಶನವನ್ನೂ ಸಾಮಾನ್ಯವಾಗಿ ತಪ್ಪದೇ ಉತ್ತಮವಾಗಿಯೇ ನೀಡುತ್ತಾರೆ. ನಾಟಕ ಎಂತಿದ್ದರೇನು? ನಟರು ಮಾತ್ರ, ಆ ಪ್ರೇಕ್ಷಕ ಬಳಗದ ಮೆಚ್ಚುಗೆಯನ್ನು ಗಳಿಸಿಯೇತೀರುತ್ತಾರೆ.

ಶಿಬಿರದ ಮೊದಲ ದಿನ ತಿರುಗಾಟದ ಎಲ್ಲಾ ನಟ-ತಂತ್ರಜ್ಞರೂ ಪ್ರಾಸ್ತಾವಿಕ ಭಾಷಣವನ್ನು ಕೇಳಲು ಹೋಗುತ್ತಾರೆ. ತಮ್ಮ ಕೊನೆಗಾಲದವರೆಗೆ ಪ್ರಾಸ್ತಾವಿಕ ಭಾಷಣವನ್ನು ಯು.ಆರ್. ಅನಂತಮೂರ್ತಿಯವರೇ ಮಾಡುತ್ತಿದ್ದರು. ಅವರ ಕಾಲಾನಂತರದಲ್ಲಿ ಬೇರೆಬೇರೆ ಗಣ್ಯ, ಆಹ್ವಾನಿತರು ಪ್ರಾಸ್ತಾವಿಕ ಭಾಷಣ, ಇಲ್ಲವೇ ಸ್ವಾಗತ ಭಾಷಣ ಮಾಡುತ್ತಾರೆ. ಪ್ರಾಸ್ತಾವಿಕ ಭಾಷಣದ ನಂತರ ನಟರಿಗೆ ಸಂಜೆಯ ಪ್ರದರ್ಶನದ ತಯಾರಿಯಿರುವುದರಿಂದ, ಅವರು ಅದರಲ್ಲಿ ತೊಡಗಿಕೊಳ್ಳುತ್ತಾರೆ.

ಸಾಮಾನ್ಯವಾಗಿ ಶಿಬಿರದ ದಿನಗಳಂದು ನಮ್ಮ ನಟ-ನಟಿಯರು ಸ್ವಲ್ಪ ಹೊಸತೆನ್ನುವ ಬಟ್ಟೆಗಳನ್ನೇ ತೊಟ್ಟು, ಬಂದಿರುವ ಎಲ್ಲಾ ಅಥಿತಿ-ಅಭ್ಯರ್ಥಿಗಳ ಕಣ್ಣುಗಳಿಗೆ ಕಾಣುವಂತೆ ಓಡಾಡುತ್ತಿರುತ್ತಾರೆ. ಬಂದಿರುವ ಅಥಿತಿ-ಅಭ್ಯರ್ಥಿಗಳು, ಕೆಲವು ಹಿರಿಯ ನಟಿ-ನಟರನ್ನು ಗುರುತಿಸಿ ಅವರೊಡನೆ
ಮಾತಾಡುವುದುಂಟು. ಈ ಹಿಂದೆ ಅವರು ಮಾಡಿದ್ದ ಯಾವುದೋ ನಾಟಕದ ಯಾವುದೋ ಪಾತ್ರವನ್ನು ನೆನಪು ಮಾಡಿಕೊಂಡು ಪ್ರಶಂಸೆ ಮಾಡುವುದೂ ಉಂಟು. ಇಂಥವು ಕಿರಿಯ ನಟ-ನಟಿಯರನ್ನು ಉದ್ದೀಪಿಸಿ, ತಾವೂ ಹಾಗಾಗಬೇಕೆಂದು ಪ್ರೇರೇಪಿಸುವುದುಂಟು. ಹಾಗಾಗಿ ಕೆಲವು ನಟರು, ವಿಶೇಷವಾಗಿ ನಟಿಯರು ಈ ಸಂಸ್ಕೃತಿ ಶಿಬಿರಕ್ಕಾಗಿಯೇ ಹೊಸ ಬಟ್ಟೆಗಳನ್ನು ಹೊಲೆಸಿಕೊಳ್ಳುವುದುಂಟು. ಸಹಜವಾಗಿ ಬಂದವರೆದುರು ಕೊಂಚ ಮಿಂಚುವುದಕ್ಕಾಗಿ. ಮತ್ತಿದು ಅಲ್ಲಿ ನಟರಾದವರಿಗೆ ಸರಳ-ಸುಂದರವಾದ ಸಾಧಾರಣ ಪ್ರಕ್ರಿಯೆ. ರಂಗಭೂಮಿಯ ಕಲಾವಿದರಿಗೆ ಅಷ್ಟಾದರೂ ಪ್ರಾಮುಖ್ಯತೆ ಇರಬಾರದೇ. ಒಟ್ಟಾರೆ, ಹೆಗ್ಗೋಡು ಸುತ್ತಮುತ್ತ ನೆಲೆಸಿರುವ ಗ್ರಾಮಸ್ತರನ್ನು, ಹಿರಿಯ ವಿದ್ಯಾರ್ಥಿಗಳನ್ನು, ಆ ವರ್ಷದ ತಿರುಗಾಟದ ನಟ-ನಟಿಯರನ್ನೂ ಮತ್ತು ಅದೇ ವರ್ಷದ ವಿದ್ಯಾರ್ಥಿಗಳನ್ನೂ – ಬಂದಿರುವ ಅತಿಥಿ-ಅಭ್ಯಾಗತರು ಸುಲಭವಾಗಿ ಯಾರುಯಾರೆಂದು ಅವರ ದೇಹ-ಭಾಷೆಗಳಿಂದಲೇ ಸುಲಭವಾಗಿ ಗುರುತಿಸಬಹುದು. ಹಾಗಿರುತ್ತದೆ ಶಿಬಿರದ ದಿನಗಳು.

***

ಹೀಗಿರುವಾಗ ನಾನು ವಿದ್ಯಾರ್ಥಿಯಾಗಿದ್ದಾಗ – ತಿರುಗಾಟದ `ಮೀಡಿಯಾ’ ನಾಟಕದಲ್ಲಿ ಪಾತ್ರ ಮಾಡುತ್ತಿದ್ದ ಭವಾನಿಯೂ, ಮರಿಯಮ್ಮನಹಳ್ಳಿಯ ಹನುಮಕ್ಕನೂ ಅಲ್ಲದೇ ಸಕಲೇಶಪುರದ ರತ್ನ – ಇವರೆಲ್ಲಾ, ಹೆಗ್ಗೋಡಿನ ಸೊಸೈಟಿಯಲ್ಲಿ ದೊರೆಯುವ `ಚೀಟಿಸೀರೆ’ಯಲ್ಲಿ ತರಾವರಿ ಚೂಡಿದಾರ, ಪ್ಯಾರಲಲ್ ಮುಂತಾದವುಗಳನ್ನು ಹೊಲೆಸಿಕೊಂಡಿದ್ದರು. ಸಾಮಾನ್ಯವಾಗಿ ಅವರ ಎಲ್ಲ ವಸ್ತ್ರಗಳೂ ನೋಡಲಿಕ್ಕೆ ಒಂದೇ ಬಣ್ಣಗಳಲ್ಲಿದ್ದವು. ಯಾಕೆಂದರೆ ಸೊಸೈಟಿ ಸೀರೆಯಲ್ಲಿ ಸಿಗುತ್ತಿದ್ದದ್ದು ಮೂರ್ನಾಲ್ಕು ಬಣ್ಣಗಳಷ್ಟೇ. ಮತ್ತೆ ಅವೆಲ್ಲವೂ ಅತೀ ಸಮೀಪದ ಬಣ್ಣಗಳಾಗಿದ್ದುವು. ಈ ಚೀಟಿಸೀರೆಗಳು ಹತ್ತಿಯಿಂದ ಮಾಡಿದ್ದವು. ಮತ್ತು ಹೆಚ್ಚು ಗಾಢ ಬಣ್ಣಗಳಿಲ್ಲದೇ ತೆಳು ಬಣ್ಣಗಳಿಂದಾಗಿ ಸರಳವಾಗಿರುತ್ತಿದ್ದವು. ಈ ಸೀರೆಗಳಿಗೆ ಯಾಕೆ `ಚೀಟಿಸೀರೆ’ ಎನ್ನುತ್ತಿದ್ದರೆನ್ನುವುದು ನನಗೆ ಗೊತ್ತಿಲ್ಲ. ಆದರೆ ತಿಳಿಯುವ ಕುತೂಹಲವಿದೆ. ಯಾಕೆಂದರೆ ನನ್ನ ಬಾಲ್ಯದಲ್ಲಿ, ನನ್ನವ್ವನೂ ಈ ಚೀಟಿಸೀರೆಗಳ ಉಲ್ಲೇಖವನ್ನು ಆಗಾಗ ಮಾಡುತ್ತಿದ್ದದ್ದು ನೆನಪಿದೆ. `ಚೀಟಿಸೀರೆ ಉಟ್ಕೊಂಡು ಜೀವನ ನಡೆಸ್ತಿದ್ದೀನಿ’ ಅಂತೆಲ್ಲಾ ಆಕೆ ಹೇಳುತ್ತಿದ್ದದ್ದು ನೆನಪಿದೆ.

ಇದು ಆಗ ಬಡವರಿಗಾಗಿ ಇದ್ದ ಒಂದು ಯೋಜನೆಯಿರಬಹುದು ಅನ್ನಿಸುತ್ತದೆ. ಚೀಟಿ ವ್ಯವಹಾರಕ್ಕೂ ಇದಕ್ಕೂ ಏನಾದರೂ ಸಂಬಂಧವಿದೆಯೋ ಏನೋ, ಯಾರನ್ನಾದರೂ ಕೇಳಿ ತಿಳಿದುಕೊಳ್ಳಬೇಕು. ನಿರ್ದೇಶಕ ಜಂಬೆಯವರು ಹಲವಾರು ನಾಟಕಗಳಿಗೆ ಇಂತಹ ಸೀರೆಗಳನ್ನೇ ಬಳಸಿ ವಸ್ತ್ರ ವಿನ್ಯಾಸ ಮಾಡುತ್ತಿದ್ದರು. ಅಷ್ಟೇ ಅಲ್ಲ ಅಂಥದ್ದೇ ಸೀರೆಗಳನ್ನು ನೀನಾಸಮ್ ನಲ್ಲಿ, ಅತಿಥಿಗೃಹದ ಮಂಚದ ಮೇಲಿನ ಬೆಡ್ ಗಳಿಗೆ ಹಾಸುಗಳಾಗಿಯೂ ಬಳಸುತ್ತಿದ್ದರು. ಸೀರೆಯಲ್ಲಿ, ಕೌದಿ, ಹಾಸಿಗೆಯೊದಿಕೆ ಮಾಡುವುದು ಹೊಸತೇನಲ್ಲ ಬಿಡಿ. ನಾನು ತಿರುಗಾಟದಲ್ಲಿದ್ದಾಗ, ನನ್ನ ಗೆಳೆಯ ಜಹಾಂಗೀರ – ಅವನ ಅಜ್ಜಿ, ಹಳೆಯ ಸೀರೆಯಲ್ಲಿ ತನ್ನ ಕೈಯ್ಯಾರೆ ಹೊಲೆದುಕೊಟ್ಟ ಹಾಸಿಹೊದೆಯುವ ಎರಡು ಕೌದಿಗಳನ್ನು ನನಗೆ ಕೊಟ್ಟಿದ್ದ. ಅದಿರಲಿ ಬಿಡಿ. ಮುಂದಿನದೇ ಮುಖ್ಯಕತೆ.

ಹೆಗ್ಗೋಡು ಸುತ್ತಮುತ್ತ ನೆಲೆಸಿರುವ ಗ್ರಾಮಸ್ತರನ್ನು, ಹಿರಿಯ ವಿದ್ಯಾರ್ಥಿಗಳನ್ನು, ಆ ವರ್ಷದ ತಿರುಗಾಟದ ನಟ-ನಟಿಯರನ್ನೂ ಮತ್ತು ಅದೇ ವರ್ಷದ ವಿದ್ಯಾರ್ಥಿಗಳನ್ನೂ – ಬಂದಿರುವ ಅತಿಥಿ-ಅಭ್ಯಾಗತರು ಸುಲಭವಾಗಿ ಯಾರುಯಾರೆಂದು ಅವರ ದೇಹ-ಭಾಷೆಗಳಿಂದಲೇ ಸುಲಭವಾಗಿ ಗುರುತಿಸಬಹುದು. ಹಾಗಿರುತ್ತದೆ ಶಿಬಿರದ ದಿನಗಳು.

ಎಂಟು ದಿನದ ನೀನಾಸಮ್ ಸಂಸ್ಕೃತಿ ಶಿಬಿರದಲ್ಲಿ – ವಿಧ್ಯಾರ್ಥಿಗಳಾದ ನಾವೂ, ಅಧ್ಯಾಪಕ ವರ್ಗದವರು, ಸಿಬ್ಬಂದಿಯವರೂ ಸೇರಿದಂತೆ ಹೆಗ್ಗೋಡು ಸುತ್ತಮುತ್ತಲಿನ ಅನೇಕ ಗ್ರಾಮಸ್ಥರುಗಳಿಗೆ ಹತ್ತು-ಹಲವಾರು ಕೆಲಸಗಳಿರುತ್ತವೆ. ಕೆಲವರಿಗೆ ವೇದಿಕೆಯ ಕೆಲಸವೂ, ಮತ್ತೂ ಕೆಲವರಿಗೆ ಅತಿಥಿಗಳಿಗೆ ಮಂಚ, ಹಾಸಿಗೆ, ನೀರಿನ ಸೌಕರ್ಯ, ಊಟ, ವಾಹನ, ಆವರಣದ ಸ್ವಚ್ಚತೆ – ಹೀಗೆ ಪಟ್ಟಿ ಮಾಡುತ್ತಾ ಹೋದರೆ ಮುಗಿಯದು. ಊರವರೂ, ವಿಧ್ಯಾರ್ಥಿಗಳೂ ಇವನ್ನು ಹಂಚಿಕೊಂಡು ಕೆಲಸ ಮಾಡುತ್ತಾರೆ. ಇಡಿಯ ಆ ವಾರವನ್ನು ವಿವಿಧ ರೀತಿಗಳಲ್ಲಿ ಅಲಂಕಾರ ಮಾಡುವ ಜವಾಬ್ಧಾರಿಯು ರಂಗಶಿಕ್ಷಣ ಕೇಂದ್ರದ ಕೆಲವು ವಿಧ್ಯಾರ್ಥಿಗಳದ್ದಾಗಿರುತ್ತದೆ. ಮತ್ತೆ ಇವೆಲ್ಲಾ ಅಲ್ಲಿ ಸಿಗುವ ಮತ್ತು ಬಳಸಿದ ವಸ್ತುಗಳಿಂದಲೇ ಮಾಡುವುದು. ಅದರಲ್ಲೂ ವಿದ್ಯಾರ್ಥಿಗಳು ತಮಗೆ ಸಮಾನರಾದವರ ಗುಂಪನ್ನು ರಚಿಸಿಕೊಂಡು ಇದನ್ನು ಮಾಡುವುದುಂಟು. ಕೆಲವೊಮ್ಮೆ ಅಲ್ಲಿಯ ಶಿಕ್ಷಕರು – ನಮಗೆ ಶಿಕ್ಷೆಯೆಂಬಂತೆ ʻಅಸಮಾನʼರನ್ನು ಒಗ್ಗೂಡಿಸುವ ಸಲುವಾಗಿ `ಆಗದಿರುವವರನ್ನು’ ತಂಡಗಳಿಗೆ ಸೇರಿಸುವುದೂ ಉಂಟು. ಆದರೆ ಅದು ಅಷ್ಟೇನೂ ಉಪಯೋಗವಾಗದು. ಆಗದವರು ತಮಗೆ ಬೇಕಾದ ಕೆಲಸಗಳನ್ನು ಮಾಡಿಯೇ ತೀರುತ್ತಾರೆ. ಅಲ್ಲಿ ಆ ಸಮಯದಲ್ಲಿ ಕೇಳಲಿಕ್ಕೆ ಯಾರೂ ಇರುವುದಿಲ್ಲ.

***

೧೯೯೭ರ ಆ ವರ್ಷ, ನಾವು ಕೆಲವು ಆಸಕ್ತರು ಸೇರಿ ನಮ್ಮದೇ ಒಂದು ತಂಡ ಮಾಡಿಕೊಂಡು ನೀನಾಸಮ್ ಕಛೇರಿಯ ಎದುರಿನ ಕೂಡುರಸ್ತೆಯಲ್ಲಿ ನಿಲ್ಲಿಸಲು ಇಪ್ಪತೈದು ಅಡಿ ಎತ್ತರದ ಬಿದಿರಿನ ಗೊಂಬೆಯೊಂದನ್ನು, ಯಾರಿಗೂ ಹೆಚ್ಚು ಕಾಣದ ಜಾಗದಲ್ಲಿ ಕಟ್ಟುವ ಕೆಲಸದಲ್ಲಿದ್ದೆವು. ಶಿಬಿರದ ಹಿಂದಿನ ರಾತ್ರಿ ಯಾರಿಗೂ ಗೊತ್ತಾಗದ ಹಾಗೆ ಅದನ್ನು ನಿಲ್ಲಿಸಿ ಬೆಳಿಗ್ಗೆ ಎಲ್ಲರನ್ನೂ ಚಕಿತಗೊಳಿಸುವುದು ನಮ್ಮ ಉದ್ದೇಶವಾಗಿದ್ದರೂ ಸತತ ಮಳೆಯಿಂದಾಗಿ ಅದರ ಕೆಲಸ ಪೂರ್ತಿ ಮುಗಿದಿರಲಿಲ್ಲ. ಶಿಬಿರದ ಆರಂಭದ ಹಿಂದಿನ ದಿನ ಸಂಜೆಯೊಳಗೆ, ನಾವು ಆ ಗೊಂಬೆ ಕಟ್ಟುವ ಕೆಲಸ ಮಾಡುವ ಜಾಗ ಸಾಕಷ್ಟು ಸುದ್ದಿಗೆ ಒಳಗಾಗಿತ್ತು. ಕೆಲವು ನೀನಾಸಮ್ ಕಾರ್ಯಕರ್ತರು ಬಂದು ನಾವು ಮಾಡುತ್ತಿದ್ದ ಕೆಲಸವನ್ನು ನೋಡಿಕೊಂಡು ಹೋಗಲು ಶುರುಮಾಡಿದ್ದರು. ಅವರು ಹಾಗೆ ಬರಲು ಮತ್ತೊಂದು ಬಲವಾದ ಕಾರಣವೆಂದರೆ – ಶಿಬಿರದ ಇತರ ಅಗತ್ಯದ ಎಷ್ಟೊಂದು ಕೆಲಸಗಳನ್ನು ಊರವರ ಜೊತೆಯಲ್ಲಿ ಸೇರಿಕೊಂಡು ವಿಧ್ಯಾರ್ಥಿಗಳಾದ ನಾವೂ ಮಾಡಬೇಕಾಗಿತ್ತು. ಆದರೆ ಜಂಬೆಯವರು ನಾನು ಹಾಗೂ ನನ್ನ ಕೆಲವು ಸ್ನೇಹಿತರಿಗೆ ಅಲಂಕಾರದ ಕೆಲಸವನ್ನು ಸಂಪೂರ್ಣವಾಗಿ ವಹಿಸಿದ್ದರು. ಹಾಗಾಗಿ ನಾನೂ ನನ್ನ ಹತ್ತಿರದ ಗೆಳೆಯರು ಧೈರ್ಯವಾಗಿದ್ದವು.

ಈ ಬಿದಿರಿನ ತಟ್ಟೀರಾಯನನ್ನು ಮಾಡುವುದಲ್ಲದೇ ನೀನಾಸಮ್ ಕಛೇರಿಯ ಮುಂದೆ ʻಮಧುಬನಿʼ ಶೈಲಿಯ ರಾಧೆ-ಕೃಷ್ಣರನ್ನೂ ಬರೆಯುವ ಕೆಲಸವನ್ನೂ ನಾವು ಮಾಡುತ್ತಿದ್ದೆವು. ಸುಬ್ಬಣ್ಣನವರ ಒತ್ತಾಸೆಯಿಂದಾಗಿ ಆ ಚಿತ್ರಗಳು ಈಗಲೂ ನೀನಾಸಮ್ ಕಛೇರಿಯ ಗೋಡೆಗಳ ಮೇಲಿದೆ. ಮತ್ತದನ್ನು ಪ್ರತಿವರ್ಷವೂ ಬೇರೆಬೇರೆ ಕಲಾವಿದರು ತಿದ್ದಿ-ತೀಡಿ, ಅದರ ಕತೃಗಳೇ ಯಾರೆನ್ನುವುದನ್ನು ಗೊತ್ತಿಲ್ಲದಂತೆ ಮಾಡಿರುವುದೂ ನೀನಾಸಮ್ ಆಶಯದ ಉದ್ದೇಶವೇ ಆಗಿದೆ. ಮಂಚ-ಹಾಸಿಗೆ, ಡಯಾಸುಗಳನ್ನು ಹೊರುವ ಕೆಲಸದಿಂದ ತಪ್ಪಿಸಿಕೊಳ್ಳುವ ಸಲುವಾಗಿ ನನ್ನ ಕೆಲವು ಸಹಪಾಟಿಗಳು ನಮ್ಮ ಗೊಂಬೆ ತಯಾರಿಗೆ ಸಹಾಯ ಮಾಡುವ ನೆಪದಲ್ಲಿ, ಹಿಂದಿನ ದಿನ ನಮ್ಮ ಜೊತೆ ಸೇರಿಕೊಂಡಿದ್ದರು. ಹಾಗಾಗಿ ವೇದಿಕೆ ಮತ್ತಿತರ ಕೆಲಸಗಳನ್ನು ಮಾಡಲು ಜನಗಳ ಕೊರತೆಯೆದ್ದು ನಮ್ಮನ್ನು ಹುಡುಕಿಕೊಂಡು ಕಾರ್ಯಕರ್ತರು ಪದೇಪದೇ ಬರುತ್ತಿದ್ದರು. ನಮಗೆ, ಅವರು ಎಲ್ಲಿ ನಮ್ಮನ್ನು ಬೇರೆ ಕೆಲಸಗಳನ್ನು ಮಾಡಲು ಕರೆದೊಯ್ಯುತ್ತಾರೋ ಎಂಬ ಭಯ ಬೇರೆ. ಬಂದವರೆಲ್ಲಾ ನಾವು ಮಾಡುತ್ತಿದ್ದ ಕೆಲಸವನ್ನು ಮೇಲ್ನೋಟಕ್ಕೆ ಮೆಚ್ಚಿಕೊಳ್ಳುತ್ತಿದ್ದರಾದರೂ `ಶ್ಶೇ… ಇಷ್ಟು ಜೋರು ಮಳೇಲಿ ನಿಮ್ಮ ತಟ್ಟೀರಾಯ ನಿಲ್ತದೇನ್ರೀ? ಅಲ್ಲಾ, ಯಂತಕ್ಕೆ ಇಷ್ಟೆಲ್ಲಾ ದೊಡ್ಡದ್ ಮಾಡ್ಕ್ಯಂಡ್ರಿ?’ ಎಂದು ಸಹಾನುಭೂತಿಯನ್ನೂ ತೋರಿಸಿ, ಜೊತೆಗೆ `ಅಲ್ಲಿ ಬೇರೆ ಕೆಲಸ ಉಂಟು, ಒಂದು ನಾಕು ಜನ ಬನ್ನಿ’ ಎಂದು ಕರೆಯಲು ಮಾತ್ರ ಮರೆಯುತ್ತಿರಲಿಲ್ಲ. ಆಗ ಏನೇನೋ ಕಾರಣಗಳು ನಮ್ಮನ್ನು ಬಚಾವು ಮಾಡುತ್ತಿದ್ದವು. ಕೊನೆ ಘಳಿಗೆಯಲ್ಲಿ ನಮ್ಮ ಜೊತೆ ಸೇರಿಕೊಂಡ ಕೆಲವರು ಅವರ ಜೊತೆಗೆ ಹೋದ ಹಾಗೇ ಮಾಡಿ, ಮತ್ತೇನೋ ಪ್ಲಾನ್ ಮಾಡಿ ವಾಪಸ್ಸು ಬಂದು ನಮ್ಮ ಜೊತೆ ಸೇರಿಬಿಡುತ್ತಿದ್ದರು. ಅಂತೂ ಹಲವಾರು ಅಡ್ಡಿ-ಆತಂಕಗಳಲ್ಲೇ ನಾವು ಕೆಲಸ ಮುಗಿಸುವ ಆತುರದಲ್ಲಿದ್ದೆವು.

***

ಅದೇ ವೇಳೆಯಲ್ಲಿಯೇ ಆಗಿನ ನೀನಾಸಮ್ನ ಬ್ಯಾಕ್ ಸ್ಟೇಜ್ ತ್ರಿಮೂರ್ತಿಗಳೆಂದೇ ಪ್ರಸಿದ್ಧರಾಗಿದ್ದ ಪುರುಷಣ್ಣ(ಪುರುಶೋತ್ತಮ ತಲವಾಟ), ಗುರುವಣ್ಣ(ಗುರುಮೂರ್ತಿ ವರದಾಮೂಲ) ಮತ್ತು ದೇವರುಭಟ್ಟ(ದೇವರು ಆರ್. ಭಟ್ಟ) – ಈ ಮೂವರೂ ನಮ್ಮ ಬೆರ್ಚಪ್ಪನೆಂಬ `ಅವತಾರ ಪುರುಷ’ನನ್ನು
ನೋಡಲು ಬಂದದ್ದು. ಐಡಿಯಾಗಳನ್ನು ಕೊಡಲೆಂದೇ ಬಹಳ ಪ್ರಸಿದ್ಧರಾಗಿದ್ದ, ಆ ತ್ರಿಮೂರ್ತಿಗಳಲ್ಲೊಬ್ಬರಾದ ದೇವರು ಆರ್. ಭಟ್ಟ ಅವರು – `ಈ ಬಿದಿರಿನ ತಟ್ಟೀರಾಯನ ಮ್ಯಾಗೆ ಯಂತ ಮುಚ್ತೀರಿ?’ ಅಂದರು.

ಅದೊಂದು ನಿಜಕ್ಕೂ ಯಕ್ಷ ಪ್ರಶ್ನೆಯಾದರೂ, ನಾವೇನೋ ಬೇರೆ ಲೆಕ್ಕಾಚಾರ ಮಾಡಿಕೊಂಡಿದ್ದೆವು. ಆದರೆ ಮುಚ್ಚುವುದು ನಮ್ಮ ಉದ್ದೇಶವಾಗಿರಲಿಲ್ಲ. ನಾವು
– `ಏನೂ ಇಲ್ಲ, ಬರೀ ಸೊಪ್ಪು, ತೆಂಗಿನ ಗರಿ ಅಷ್ಟೆ’ ಅಂದೆವು.

`ಅದ್ಯಾಕೆ ಬರೀ ಗರಿ ಹಾಕ್ತೀರಿ ಮಾರಾಯ್ರೆ?’

`ಮತ್ತೆ!?’

`ತೋ… ನಿಮ್ಮ, ಇಶ್ಟ್ ಚೆಂದಕ್ಕೆ ತಟ್ಟಿರಾಯನ್ನ ಮಾಡ್ಕ್ಯಂಡು ಸೊಪ್ಪ್ ಹಾಕ್ತೀನಿ ಅಂತೀರಲ್ರೀ?’

ನಮಗೆ ಇದು ಅವರ ಹೊಗಳಿಕೆಯೋ, ತೆಗಳಿಕೆಯೋ ಗೊತ್ತಾಗಲಿಲ್ಲ. ದೇವರು ಭಟ್ಟರ ಮನದಾಳದಲ್ಲೇನಿದೆ ಅನ್ನುವುದನ್ನು ನಾವು ನಮ್ಮ ಮನಸ್ಸಿನಲ್ಲೇ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆವಾದರೂ, ಅವರು ಅದನ್ನು ಬಿಟ್ಟುಕೊಡದಷ್ಟು ಜಾಣರಾಗಿದ್ದರು. ಅವರು ಆ ದಿನದ ತಮ್ಮ ಕಲಾಸೇವೆಯನ್ನು ನಮ್ಮ ಬೆರ್ಚಪ್ಪನಿಗೆ ಸಲ್ಲಿಸುವುದು ಹೇಗೆಂದು ಚಿಂತಿಸುತ್ತಾ, ತಮ್ಮ ತಂತ್ರಜ್ಞಾನವನ್ನು ಧಾರೆಯೆರೆಯಲೇಬೇಕೆಂದು ತೀರ್ಮಾನಿಸಿದ್ದರೆಂದು ತೋರುತ್ತದೆ. ನಮಗೋ ಈಗ ಇರುವುದಕ್ಕಿಂತ ಮತ್ತೇನೂ ಹೆಚ್ಚಿನ ಕೆಲಸ ಮಾಡಿಕೊಳ್ಳದೆ, ಅದೇ ರಾತ್ರಿಯಲ್ಲಿ ಮುಗಿಸುವುದು ಅತೀ ಮುಖ್ಯವಾಗಿತ್ತು. ದೇವರು ಭಟ್ಟರ ಪಕ್ಕದಲ್ಲಿ ಇದ್ದ,  `ಡೈಲಾ ಕಿಂಗ್’ ಎಂದೇ ಹೆಸರಾದ, ಆ ವರ್ಷದ ಸಂಸ್ಕೃತಿ ಶಿಬಿರದ ಡೆಕೋರೇಶನ್ ಇನ್ಚಾರ್ಜ್ ಆಗಿದ್ದ ಗುರುವಣ್ಣನ ಕಡೆಗೆ ತಿರುಗಿದ ದೇವರು –

`ಏ ಗುರು, ನಿಂದೇ ಅಲ್ಲದನ ಡೆಕೋರೇಶನ್ ಇಂಚಾರ್ಜು? ಈ ಉಡ್ರುಗೆ ಆ ಸೊಸೈಟಿಲಿ ನಾಕು ಸೀರೆ ತಂದ್ ಕೊಡ… ಪಾಪ. ಇಷ್ಟು ಚಂದ್ ಮಾಡಿದ್ದ ಅವಂಗೆಲ್ಲಾ ಸೇರ್ಕ್ಯಂಡು, ಹೆಲ್ಪ್ ಮಾಡ… ಹೇ…’ ಎಂದು ಉಚಿತ ಸಲಹೆ, ಉತ್ಸಾಹವನ್ನೂ ಕೊಟ್ಟರು.

***

ಕಲಾಕೃತಿಗಳನ್ನು ಮಾಡಬೇಕೆಂದುಕೊಂಡ ನಮಗೆ, ಜಂಬೆಯವರು `ಕಸದಲ್ಲಿಯೇ ರಸ ಮಾಡಬೇಕು’ ಎಂದು ಕಂಪಲ್ಸರಿ ಹೇಳಿಬಿಟ್ಟಿದ್ದರು. ಹಾಗಾಗಿ ನಾವು ಇರುವ ಹಳೆ-ಪಳೇ ಸಾಮಾನಿನಲ್ಲೇ ಆ ದೊಡ್ಡ ಗೊಂಬೆ ಮಾಡುವ ಕೆಲಸಕ್ಕೆ ಕೈ ಹಚ್ಚಿದ್ದೆವು. ಕೆರೆಕೈ ಸತ್ಯಣ್ಣ ಎನ್ನುವವರು ನಮ್ಮ ಆಸಕ್ತಿಯನ್ನು ಗುರುತಿಸಿ, ಒಂದಷ್ಟು ಹೊಸ ಬಿದಿರುಗಳನ್ನು ತರಿಸಿಕೊಟ್ಟಿದ್ದರು. ನೀನಾಸಮ್ ಕಚೇರಿಯ ಗೋಡೆಯ ಮೇಲಿನ ರಾಧಾ-ಕೃಷ್ಣರ ಚಿತ್ರದ ಪೇಯಿಂಟಿಂಗ್ ನ ಡ್ರಾಯಿಂಗ್ ನೋಡಿ ಮೆಚ್ಚಿದ ಜಂಬೆ-ಸುಬ್ಬಣ್ಣನವರು ಸಾಗರದಿಂದ ಹೊಸ ಬಣ್ಣಗಳನ್ನೂ ನಮಗಾಗಿ ತರಿಸಿಕೊಟ್ಟಿದ್ದರು. ಆ ಹದಿನೈದು ದಿನಗಳಲ್ಲಿ ನಾವು ಕೆಲವರು ರಾತ್ರಿ-ಹಗಲುಗಳಲ್ಲೂ ನಿದ್ದೆ ಮಾಡಿದ್ದೇ ಇಲ್ಲ.

ಈಗ ಈ ಬೆರ್ಚಪ್ಪನ ಮುಂದೆ ನಿಂತ ಈ ತ್ರಿಮೂರ್ತಿಗಳಲ್ಲಿ ಒಬ್ಬರಾದ, ದೇವರು ಆರ್. ಭಟ್ಟರ `ಉಚಿತ ಸಲಹೆ’ಯನ್ನು ಕೇಳಿ ನಾವು ಸ್ವಲ್ಪ ಗಾಭರಿಯಾದೆವು. ಸುಮಾರು ಇಪ್ಪತ್ತೈದು ಅಡಿಗಳೆತ್ತರದ ಬಿದುರಿನ ಆ ಗೊಂಬೆಗೆ ಹೊಸ ಬಟ್ಟೆಯನ್ನು ಹೊದಿಸುವ ವಿಚಾರವಂತೂ ನಮಗೆ ಇರಲೇ ಇಲ್ಲ. ಅದು ದೂರದ ಮಾತಾಗಿತ್ತು. ಮೇಕಪ್ ತೊಳೆಯಲು ಕೊಡುತ್ತಿದ್ದ ಸೋಪನ್ನು ಕದ್ದು ಬಳಸುತ್ತಿದ್ದ ನಮಗೆ ಸೀರೆಕೊಳ್ಳುವ ವಿಚಾರವೆಂತು ಬರಬೇಕು? ಆದರೆ ಈಗ ಈ ತ್ರಿಮೂರ್ತಿಗಳು ಯಾವುದೇ ಜಂಜಡವಿಲ್ಲದೇ `ಸೀರೆಗಳನ್ನು ತಂದು ಕೊಡುತ್ತೇವೆ, ತಟ್ಟೀರಾಯನಿಗೆ ಅಲಂಕರಿಸಿ’ ಎನ್ನುತ್ತಿರುವಾಗ ಬೇಡವೆನ್ನುವುದಾದರೂ ಹೇಗೆ? ಆದರೂ ನಾವು ಗೊಂದಲದಲ್ಲಿದ್ದೆವು. ಯಾಕೆಂದರೆ ಅಕಸ್ಮಾತ್ ಜಂಬೆಯವರಿಗೆ ಈ ವಿಷಯ ಏನಾದರೂ ಗೊತ್ತಾಗಿ, ನಮ್ಮ ಗೊಂಬೆಯನ್ನು ಯಾವುದೋ ಕಸ ಎಸೆಯುವ ಜಾಗದಲ್ಲಿ ಕೂರಿಸುವಂತಾಗುವುದು ನಮಗೆ ಖಂಡಿತಾ ಇಷ್ಟವಿರಲಿಲ್ಲ. ಅದನ್ನು ನೀನಾಸಮ್ ಕಚೇರಿ, ಶಿವರಾಮಕಾರಂತ ರಂಗಮಂದಿರದ ಎದುರಿನಲ್ಲೇ ಪ್ರತಿಷ್ಠಾಪನೆ ಮಾಡಬೇಕೆನ್ನುವುದು ನಮ್ಮ ಆಶಯವಾಗಿತ್ತು. ಅದಕ್ಕೆ ಜಂಬೆಯವರೂ ಒಪ್ಪಿಗೆ ಕೊಟ್ಟಾಗಿತ್ತು. ಆದರೆ ಈಗ ವರದಾಮೂಲದ ಗುರುಮೂರ್ತಿಯವರು ತಮ್ಮ ಅಧಿಕಾರವನ್ನು ಉಪಯೋಗಿಸಿ ನಾಲ್ಕು ಸೀರೆಗಳನ್ನು ಕೊಡಿಸಬೇಕೆಂದೂ, ಆ ಬೆರ್ಚಪ್ಪನನ್ನು ನಾವು ಅವರು ಕೊಡಿಸಿದ ಸೀರೆಗಳಿಂದ ಅಲಂಕರಿಸಬೇಕೆಂದೂ, ಆ ತ್ರಿಸದಸ್ಯ ನ್ಯಾಯಪೀಠ ತೀರ್ಪನ್ನು ಕೊಟ್ಟಾಗಿತ್ತು.

ನಮಗೆ ಒಳಗೊಳಗೇ ಭಯವಾದರೂ, ಸೀರೆ ತೊಟ್ಟು ಚಂದವಾಗಿ ಕಾಣಬಹುದಾದ ನಮ್ಮ ಸುಮಾರು ಇಪ್ಪತೈದು ಅಡಿಯ ಬೆದುರು ಬೊಂಬೆಯನ್ನು ಕಣ್ದುಂಬಿಕೊಂಡು ಸಂತೋಷಪಟ್ಟೆವು. ಸೊಸೈಟಿಗೆ ಅವರೊಡನೆ ನಾವೂ ಹೋಗಿ ಅವುಗಳನ್ನು ತಂದು ಯಾರಿಗೂ ಕಾಣದಂತೆ ಜೋಪಾನವಾಗಿರಿಸಿದೆವು. ಆ ಹಬ್ಬದ ಗೌಜಿನಲ್ಲಿ ಅದನ್ನು ಬೇರೆ ಯಾರಾದರು ಮತ್ಯಾವುದಾದರೂ ಕೆಲಸಕ್ಕೆ ಕೊಂಡೊಯ್ದುಬಿಟ್ಟರೆ ಎಂಬ ಭಯ ಬೇರೆ. ಯಾಕೆಂದರೆ ಆಗ ಅಥಿತಿಗಳಿಗೆ ಬೆಡ್ ಸ್ಪ್ರೆಡ್ ಗೆ ಕೂಡಾ ಅದೇ ಸೊಸೈಟಿ ಸೀರೆಗಳನ್ನೇ ಕತ್ತರಿಸಿ ಬಳಸಲಾಗುತ್ತಿತ್ತಲ್ಲಾ!

ನಾವು ನಾಲ್ಕಾರು ಜನ ಕೂಡಿಕೊಂಡು ಆ ಬಿದಿರಿನ ದೊಡ್ಡ ಗೊಂಬೆಯನ್ನು ಮಾಡಲು ಪ್ರಾರಂಭಿಸಿದ್ದು ಶಿಬಿರ ಶುರುವಾಗುವ ನಾಲ್ಕು ದಿನಗಳ ಮೊದಲಷ್ಟೇ. ಅದನ್ನು ತಯ್ಯಾರು ಮಾಡಲು ನಾವು ಆಯ್ಕೆ ಮಾಡಿಕೊಂಡಿದ್ದ ಜಾಗ, ಸಂಸ್ಕೃತಿ ಶಿಬಿರ ನಡೆಯುವ ನೀನಾಸಮ್ ನ ಸಭಾಭವನದಲ್ಲಿ. ನಮ್ಮ ಆ ಗೊಂಬೆ ಕಟ್ಟುವ ಉಮೇದಿಯ ಕೆಲಸದಲ್ಲಿ ನಿದ್ರೆ ನಮ್ಮನ್ನು ತೊರೆದೇ ಹೋಗಿತ್ತು. ಶಿಬಿರ ಶುರುವಾಗುವ ಹಿಂದಿನ ದಿನ ಸಂಜೆ, ಶಿಬಿರದ ವೇದಿಕೆ ತಯ್ಯಾರು ಮಾಡುವಬಳಗದವರು ಬಂದು, ನಮ್ಮ ಗೊಂಬೆಯನ್ನು ಸಂಭಾಂಗಣದ ಹೊರಗೆ ಆ ಕೂಡಲೇ ತೆಗೆದುಕೊಂಡು ಹೋಗಿ, ವೇದಿಕೆ ನಿರ್ಮಿಸಲು ಆ ಜಾಗವನ್ನು ತೆರವು ಮಾಡಿಕೊಡಲು ತಿಳಿಸಿದರು. ನಮ್ಮ ದಡ್ಡ ತಲೆಗಳಿಗೆ ಆಗಲೇ ಗೊತ್ತಾಗಿದ್ದು, ಆ ಗೊಂಬೆಯನ್ನು ಹೊರಗೆ ಒಯ್ಯಲು ಅಸಾಧ್ಯ ಎಂದು! ನಮ್ಮ ಸಭಾಂಗಣದ ಒಳಭಾಗವೇನೋ ಸಾಕಷ್ಟು ಎತ್ತರವಾಗಿತ್ತು, ಹಾಗಾಗಿ ಗೊಂಬೆಯನ್ನು ಅಗತ್ಯಕ್ಕಿಂತಾ ಎತ್ತರ ಮಾಡಿಬಿಟ್ಟಿದ್ದೆವು. ಆದರೆ ಬಾಗಿಲು ಎತ್ತರವಾಗಿದ್ದರಲ್ಲವೇ ಹೊರಗೆ ಕೊಂಡೊಯ್ಯುವುದು!

ಸರಿ, ಆಗಾಗಲೇ ನಮ್ಮ ಎರಡು ರಾತ್ರಿ ಎರಡು ಹಗಲುಗಳನ್ನು ನುಂಗಿ ಕುಳಿತಿದ್ದ ಆ ಬಿದಿರಿನ ಭೂತವನ್ನು ತಲೆವರೆಗೆ, ಸೊಂಟದವರೆಗೆ, ಸೊಂಟದ ಕೆಳಗಿನ ಭಾಗ ಎಂದು ಮೂರು ಭಾಗಗಳನ್ನಾಗಿ ಕತ್ತರಿಸಿಕೊಂಡು ಅದನ್ನು ಆಮೇಲೆ ಜೋಡಿಸುವುದೆಂದು ತೀರ್ಮಾನಿಸಿ, ಹಾಗೇಯೇ ಅದನ್ನು ಕತ್ತರಿಸಿ ಸಭಾಂಗಣದ ಹೊರಗೆ ತಂದದ್ದಾಯಿತು. ಆದರೆ ಆ ತಟ್ಟಿರಾಯನ ಮುಂದೆ ಮಳೆರಾಯ ಚಿಕ್ಕವನೇ? ಅವನು ಬಿಡಬೇಕಲ್ಲ! ನಮ್ಮ ತಟ್ಟೀರಾಯನನ್ನು ಬಿದಿರಿನಿಂದ ಕಟ್ಟಲಾಗಿದ್ದರಿಂದ ಅವನಿಗೆ ಏನೂ ತೊಂದರೆ ಇರಲಿಲ್ಲ. ಆದರೆ ನಾವೂ ಮೂಳೆಮಾಂಸದ ತಡಿಕೆಗಳ ಮಾನವರೇ ಅಲ್ಲವೇ? ಒಳಾಂಗಣದಿಂದ ಬಯಲಿಗೆ ಬಂದು, ಆ ಬಿಡುವಿಲ್ಲದ ಜಡೀ ಮಳೆಯಲ್ಲಿಯೇ ಬಿದಿರು ಕಟ್ಟುವ ಕೆಲಸ ಆರಂಭಿಸಿದೆವು.

ಯಾರೋ ಪುಣ್ಯಾತ್ಮರು ನೀನಾಸಮ್ ತಿರುಗಾಟದ ಬಸ್ಸು ನಿಲ್ಲಿಸುವ ಗೋಡೋನಿನ ಜಾಗ ಖಾಲಿ ಇರುವುದಾಗಿಯೂ, ಅಲ್ಲಿ ನಮ್ಮ ಕೆಲಸವನ್ನು ಮುಂದುವರಿಸಬಹುದೆಂದೂ, ಒಂದು ಐಡಿಯಾ ನೀಡಿದರು. ಆ ಗೋಡೊನು ಇರುವುದು ನೀನಾಸಮ್ ಕಛೇರಿಯ ಪಕ್ಕಕ್ಕೆ. ನಾವು ಗೊಂಬೆ ನಿಲ್ಲಿಸಬೇಕೆಂದಿದ್ದ ಕೂಡುರಸ್ತೆಗೆ ಅದು ಎದುರಾಗಿದ್ದರಿಂದ ಅಂದೇ ರಾತ್ರಿ ಅದನ್ನು ನಿಲ್ಲಿಸಬಹುದೆಂಬ ಆಸೆಯಿಂದ ನಾವು ಅಲ್ಲಿಗೆ ಸ್ಥಳಾಂತರಗೊಂಡೆವು. ಆದರೆ ಆ ಜಾಗ ಕಛೇರಿಯ ಪಕ್ಕದಲ್ಲೇ ಇದ್ದುದ್ದರಿಂದ ಐಡಿಯಾ ನೀಡಲು ಹತ್ತಾರು ಜನರು ಪದೇಪದೆ ಬರುತ್ತಲೇ ಇದ್ದರು.

`ಇದು ಇವತ್ತು ಮಾಡಿ ಪೂರೈಸದಲ್ಲ ಬಿಡಿ’ ಎಂದು ಗೌಡರೂ,

`ನಿಮಗೆ ಬೇರೆ ಯಂತ ಕೆಲಸ ಇರಲಿಲ್ಲೇನ್ರೀ?’ ಎಂದೂ ಮತ್ತೊಬ್ಬರೂ,

`ಇದೆಂತೊ ಮಳ್ಳಾಟ ಇವರದ್ದು’ ಎಂದು ಹಲವರೂ,

`ಆ ಚನ್ನಕೇಶವನಿಗೆ ಎಂತ….. ಮಳ್ಳನಾ… ಮಾರಾಯ, ಆ ತಟ್ಟೀರಾಯನ ಇವತ್ತೇ ಮಾಡಿ ಪೂರೈಸೊಕ್ಕಾಗ್ತದ್ಯಾ? ಎಂಟು ಜನಾನ ಕೂಡ್ಯಾಕಂಡಿದ್ದಪಾ.
ಅತ್ಲಾಗ್ ನೀರು ತುಂಬಲ್ ಜನ ಇಲ್ಲೆ’

– ಹೀಗೆಲ್ಲಾ ಕಮೆಂಟ್ಸ್ ಬರುತ್ತಿರುವುದನ್ನು ಕೇಳಿದ ನಮಗೆ, ಇನ್ನೇನು ಜಂಬೆಯವರು ಬಂದು ನಮ್ಮ ಕೆಲಸವನ್ನು ನಿಲ್ಲಿಸಿ ಬೇರೆ ಕೆಲಸಕ್ಕೆ ಹಚ್ಚುತ್ತಾರೆ ಎಂದು
ಗಾಭರಿಯಾಗಿದ್ದೆವು.

***

ಗ್ರಹಚಾರ ಎನ್ನುವುದು ಯಾವುದೋ ರೂಪದಲ್ಲಿ ಒದ್ದುಕೊಂಡು ಬಂದರೆ ಏನು ಮಾಡೋದು ಹೇಳಿ? ನಮಗೆ ಗ್ರಹಚಾರ ಅಂಗಡಿಯವನ ರೂಪದಲ್ಲಿ ಬಂದಿತ್ತು. ಆ ನಮ್ಮ ತಿರುಗಾಟದ ಬಸ್ಸು ನಿಲ್ಲುವ ತಾಣವನ್ನು ಒಬ್ಬ ಸಾಗರದ ಅಂಗಡಿಯವನಿಗೆ ಎಂಟು ದಿನಕ್ಕಾಗಿ, ಬೀಡಿ-ಸಿಗರೇಟು, ಬಜ್ಜಿ-ಚುರುಮುರಿ ಅಂಗಡಿ ಇಡಲು ಗುತ್ತಿಗೆ ಕೊಟ್ಟುಬಿಟ್ಟಿದ್ದರು. ಆ ಗುತ್ತಿಗೆ ಅಂಗಡಿ ಮಹಾರಾಯರು ಆಟೋದಿಂದ ಇಳಿದವರೇ ನಮ್ಮ ಅಂಗಡಿ ಎತ್ತುವಂತೆ ವದರಿದರು. ಮತ್ತೊಮ್ಮೆ ನಾವು ಬೀದಿಪಾಲಾದೆವು. ನಮ್ಮ ಕಷ್ಟವನ್ನು ಯಾರ ಬಳಿಯೂ ಹೇಳಿಕೊಳ್ಳುವಂತಿರಲಿಲ್ಲ. ಯಾರಿಗಾದರೂ ಹೇಳಿಕೊಂಡರೆ ಅವರು ʻಕೆಲಸ ನಿಲ್ಲಿಸಿ ಬನ್ನಿ, ಬೇರೆ ಕೆಲಸ ಇದೆʼ ಎಂದೇ ಹೇಳುತ್ತಿದ್ದರು. ಹಾಗೆ ಅವರ ಸಲಹೆಯನ್ನು ಸ್ವೀಕರಿಸಿ ಈಗಿನ ಸಾಹಸವನ್ನು ನಿಲ್ಲಿಸುವ ಪ್ರಮೇಯವೇ ನಮಗೆ ಇರಲಿಲ್ಲ.

ಆಗಲೇ ಸಿಕ್ಕಾಪಟ್ಟೆ ಗಾಳಿಸುದ್ದಿಗೆ ತುತ್ತಾಗಿದ್ದ ನಾವು, ಖಂಡಿತಾ ನಾಳೆ ಯಾರಿಗೂ ಮುಖ ತೋರಿಸುವಂತಿರಲಿಲ್ಲ. ಅಲ್ಲದೆ, ಇದಕ್ಕಾಗಿಯೇ ತ್ರಿಮೂರ್ತಿಗಳಕೃಪೆಯಿಂದ ನಾಲ್ಕು ಹೊಸ ಸೊಸೈಟಿ ಸೀರೆ ತಂದಿರುವುದು, ಅದನ್ನು ಬಳಸದೇ ಇರುವುದು ಜಂಬೆಯವರಿಗೆ ಗೊತ್ತಾದರೆ ಏನು ಗತಿ ಎಂದೇ ನಾವು ಭಯಭೀತರಾಗಿದ್ದೆವು. ಏನೇನೋ ಆಗಿ ಎಂಟು ಜನರಿದ್ದ ನಮ್ಮ ತಂಡದಲ್ಲಿ ಪರಿಸ್ಥಿತಿಗನುಸಾರ ಕೊನೆಗೆ ನಾಲ್ಕು ಜನರು ಮಾತ್ರ ಉಳಿದಿದ್ದೆವು. ನಮ್ಮ ದುರಂತ ಅಂತ್ಯವನ್ನು ಮನಸ್ಸಿನಲ್ಲೇ ಅರಿತು ಕೆಲವು ಗೆಳೆಯರು, `ತಟ್ಟೀರಾಯನ ಜೊತೆಗಿದ್ದು ಬೈಸಿಕೊಳ್ಳುವುದಕ್ಕಿಂತಾ ಡಯಾಸು ಹೊರುವುದೇ ಲೇಸು’ ಎಂದು ಮನಗಂಡು ನಮ್ಮ ಜೊತೆ ತೊರೆದು ಜಾಗ ಖಾಲಿ ಮಾಡಿದ್ದರು. ಉಳಿದಿದ್ದವರು ನಾವು ನಾಲ್ವರು.

ನಿದ್ರೆಯನ್ನೇ ಮಾಡದೆ ನಾವು ನಾಲ್ಕು ಜನರು ಆ ಗೊಂಬೆಯನ್ನು ಆ ಬಿಡದೆ ಸುರಿಯುವ ಮಳೆಯಲ್ಲೇ ಹರಸಾಹಸ ಮಾಡಿ ಅಂತೂ ಇಂತೂ, ಹೇಗೋ ಎತ್ತಿನಿಲ್ಲಿಸಿದೆವು. ಆ ನಿಲ್ಲಿಸಿದ ಕಥೆಯೇ ಇನ್ನೊಂದು ದೊಡ್ಡ ಕಥನವಾಗುತ್ತದೆ ಬಿಡಿ. ಸೊಸೈಟಿಯಿಂದ ತಂದ ಒಂದೇ ಬಣ್ಣದ ನಾಲ್ಕು ಸೀರೆಗಳನ್ನು ಆ ಗೊಂಬೆಗೆ ಹೇಗೋ ಒಟ್ಟು, ಮಳೆಯಲ್ಲಿ ನೆನೆಯುತ್ತಲೇ ಸುತ್ತಿದೆವು. ಆ ಗುಡುಗು, ಸಿಡಿಲು, ಎತ್ತರದ ಏಣಿ. ಚೂರು ಆಯ ತಪ್ಪಿದರೆ ಸೊಂಟ-ಕೈ-ಕಾಲುಗಳೆಲ್ಲಾ ಮುರಿಯಬಹುದಾದ ಪ್ರಸಂಗ. ನನ್ನೊಡನೆ ಜೊತೆಗೆ ಇರುವವರು ಮೂವರೇ. ಆಗಾಗ ಬರುವ ಅತಿಥಿ-ಅಭ್ಯಾಗತರು. ಬೆಳಗಿನ ಒಳಗೆ ನಮ್ಮ ಕೆಲಸ ಮುಗಿಯಲೇಬೇಕಾಗಿರುವ ತುರ್ತು ಬೇರೆ. ಏನಾಯ್ತೋ ಹೇಗಾಯ್ತೋ. ಅಂತೂ ಗೊಂಬೆ ನಿಂತಿತ್ತು. ಆ ಗೊಂಬೆಯಿಂದ ಏಣಿ ತೆಗೆದು ಕೆಳಗಿಳಿವಾಗ ಕೆಲವರು ಟೀ-ಕಾಫಿ-ವಾಕಿಂಗ್ ಹುಡುಕಿ ಹೊರಟಿದ್ದರು.

ಆ ಗೊಂಬೆಯೋ ಅದು ದಾರಿಯ ಮೇಲೆ ಬಂದ ಎಲ್ಲರಿಗೂ ಎದ್ದು ಕಾಣುತ್ತಾ ಗಮನ ಸೆಳೆಯುತ್ತಿತ್ತು. ಪುಣ್ಯಕ್ಕೆ ಆಗಿನ್ನೂ ಮೊಬೈಲ್ ಫೋನುಗಳು ಇರಲಿಲ್ಲ. ಇಲ್ಲದಿದ್ದರೆ ಎಷ್ಟೋಂದು ಫೋಟೋಗಳು ಈಗ ಇಂಟರ್ನೆಟ್ನಲ್ಲಿ ಸಿಗುತ್ತಿತ್ತೇನೋ.

ಮಳೆ ನಿಂತು ಹಳುವಾಗಿ ಸೂರ್ಯನ ಕಿರಣಗಳು ನಮ್ಮ ತಟ್ಟೀರಾಯನನ್ನು ತಾಗುತ್ತಿದ್ದವು. ನಾವಿನ್ನೂ ಮಲಗಿರಲೇ ಇಲ್ಲ. ನೀನಾಸಮ್ ಕಛೇರಿಯ ಗೋಡೆಯ ಮೇಲೆ ಬರೆದಿದ್ದ ʻಮಿಥಿಲೆಯʼ ರಾಧಾಕೃಷ್ಣರ ಚಿತ್ರಕ್ಕೆ ಕಣ್ಣು ಬರೆಯುವುದು ಬಾಕಿಯಿತ್ತು. ಅದನ್ನೂ ಮುಗಿಸಿದೆವು. ನಾವೆಲ್ಲರೂ ನೀನಾಸಮ್ ಕಛೇರಿಯ ಎದುರು ಹಾಕಿದ್ದ ಹೊಸ ಅಡಕೆಯ ದಬ್ಬೆ ಮೇಲೆ ಕುಳಿತು, ಆ ಎತ್ತರದ ಒಂಟಿ ಕಣ್ಣಿನ ಗೊಂಬೆಯನ್ನು ದಂಗಾಗಿ ನೋಡುತ್ತಿದ್ದೆವು. ರಾತ್ರಿಯಲ್ಲಾದ ಕೆಲವರ ಪಾಲಿನ ಪ್ರಳಯ, ಬೆಳಗ್ಗೆ ಕೆಲವರ ಪಾಲಿನ ಸೌಂದರ್ಯವಾಗುತ್ತದೆಯಲ್ಲ ಎನ್ನಿಸುತ್ತಿತ್ತು. ಆ ಗೊಂಬೆಗೆ ಒಂದು ಕಣ್ಣು ತೂತಾಗಿಹೋಗಿತ್ತು. ಗೊಂಬೆಯ ಆ ಕಣ್ಣು, ಗೊಂಬೆಯನ್ನು ಎತ್ತಿ ನಿಲ್ಲಿಸುವಾಗ ನಮ್ಮ ಸಹಪಾಠಿ ನರೇಶ ಮಯ್ಯನ ತಲೆಯೊಳಗೆ ತೂರಿಕೊಂಡು ತೂತಾಗಿತ್ತು. ಏನಾದರಾಗಲೀ ಹೆತ್ತದ್ದು ಯಾವತ್ತೂ ಸುಂದರ, ಆಪ್ತ. ನಾವೇ ದಂಗಾಗಿ ನೋಡುತ್ತಿದ್ದೆವು, ನಮಗೇ ಹೆಮ್ಮೆ ಎನಿಸುತ್ತಿತ್ತು.

ಆಫೀಸಿನ ಹೊಸ ಅಡಿಕೆ ದಬ್ಬೆಯ ಮೇಲೆ ಕುಳಿತಿದ್ದ ನಿದ್ದೆ ಕಾಣದ ನಮ್ಮ ಕಣ್ಣುಗಳಿಗೆ ಈಗ ಕೇವಲ ಗೊಂಬೆ ಮತ್ತು ಆ ಗೊಂಬೆಯನ್ನು ಸುತ್ತಿವರಿದ ಹೊಸ ಸೀರೆಗಳಷ್ಟೇ ಕಾಣುತ್ತಿದ್ದವು. ಜೊತೆಗೆ ಆ ಗೊಂಬೆಯನ್ನು ನೋಡಿ ಆನಂದಿಸುತ್ತಿದ್ದ ಶಿಬಿರಾರ್ಥಿಗಳು. ಸಂಸ್ಕೃತಿ ಶಿಬಿರದಲ್ಲಿ ಧರಿಸಲು ನಮಗಿಲ್ಲದ ಹೊಸಬಟ್ಟೆಯನ್ನು ನಮ್ಮ ಸೃಷ್ಟಿಯ ಆ ಬೆರ್ಚಪ್ಪ ಧರಿಸಿ ನಿಂತಿತ್ತಲ್ಲಾ! ಅದೇ ಸಂತೋಷ ನಮಗೆ. ಟೀ ಕುಡಿಯುವವರನ್ನು ನೋಡುತ್ತಾ ನಾವೇ ಟೀ ಕುಡಿದ ಸಂಭ್ರಮದಲ್ಲಿದ್ದವು. ನಮ್ಮನ್ನು ಬಗೆದು ಸೀಳಿದರೂ. ಐದು ಪೈಸೆ ಇರಲಿಲ್ಲ ನಮ್ಮ ಬಳಿ.

***

ಒಂಬತ್ತು ಗಂಟೆ ಹೊತ್ತಿಗೆ ಹಾಸ್ಟೆಲ್ ನಿಂದ ಹೊಸ ಬಟ್ಟೆ ಧರಿಸಿ ಬಂದ ತಿರುಗಾಟದ ನಟಿಯರಾದ ಭವಾನಿ, ಹನುಮಕ್ಕ ಮತ್ತು ರತ್ನ ಇವರು ನಮ್ಮ ಗೊಂಬೆಯನ್ನು ನೋಡಿ ಬೆಪ್ಪಾದರು. ನಿಜವಾಗಿ ಅವರು ದಂಗಾದದ್ದು ಗೊಂಬೆಯನ್ನು ನೋಡಿಯಲ್ಲ. ಗೊಂಬೆಗೆ ತೊಡಿಸಿದ್ದ ಸೀರೆಯನ್ನು ನೋಡಿ. ಅವರು ಉಟ್ಟಿದ್ದ ಬಟ್ಟೆಯೂ, ಗೊಂಬೆಯು ತೊಟ್ಟಿದ್ದ ಬಟ್ಟೆಯೂ ಎರಡೂ ಒಂದೇ ಬಣ್ಣ ಮತ್ತು ಜಾತಿಯವಾಗಿ ಮಿಂಚುತ್ತಿದ್ದವು. ಆ ಹುಡುಗಿಯರನ್ನೇನಾದರೂ ಆ ತಟ್ಟಿರಾಯನ ಪಕ್ಕದಲ್ಲಿ ನಿಲ್ಲಿಸಿದ್ದರೆ ಅವರು ಅವನ ಮರಿಗಳಂತೆ ಕಾಣುತ್ತಿದ್ದರು. ನಾವಾದರೂ ಏನು ಮಾಡುವುದು? ಸೊಸೈಟಿಯಲ್ಲಿದ್ದದ್ದು ಒಂದೇ ಬಣ್ಣದ ಸೀರೆಗಳು!

ನಾಲ್ಕಾರು ಜನ ತಮ್ಮನ್ನು ನೋಡಿ, ಆ ಗೊಂಬೆಯ ಜೊತೆ ಕಂಪ್ಯಾರೆಟಿವ್ ಸ್ಟಡಿ ಮಾಡಲು ಅವಕಾಶವನ್ನು ನೀಡಬಾರದೆಂದು, ತಕ್ಷಣವೇ ನಮ್ಮ ಹಿರಿಯ ನಟಿಯರು ತಮ್ಮ ರೂಂಗೆ ಹೋಗಿ ಬಟ್ಟೆ ಬದಲಿಸಿಕೊಂಡು ಬಂದರೆಂದು ಕಾಣುತ್ತದೆ. ನಮಗಂತೂ ಇದ್ಯಾವುದರ ಪರಿವೆಯೇ ಇಲ್ಲದೆ ಸಂಸ್ಕೃತಿ ಶಿಬಿರದ ಸೆಮಿನಾರ್ ನಲ್ಲಿ ನೆಮ್ಮದಿಯಿಂದ ಒಂದು ವಾರದ ನಿದ್ರೆ ಮಾಡಲು ಅನುಕೂಲವಾಗುವ ಯಾವುದಾದರೊಂದು ಭಾಷಣಕ್ಕಾಗಿ ಕಣ್ಣು ಮಿಟುಕಿಸುತ್ತಾ ಕಾಯುತ್ತಿದ್ದೆವು.