ದುರ್ಗದಬೈಲ್ ಬಸ್-ಸ್ಟ್ಯಾಂಡ್. ಸಂಜೆ ಸುಮಾರು ಐದೂವರೆ. ವಿದ್ಯಾನಗರದ ಕಡೆ ಹೋಗುವ ಬಸ್ಸು ಹತ್ತಲು ಜನ ಇರುವೆಗಳಂತೆ ಹರಿದು ಬರುತ್ತಿದ್ದರು. ಒಂದಷ್ಟು ಜನ ಪಿಚಕ್ ಎಂದು ಗುಟ್ಕಾ ಉಗುಳುತ್ತ, ಕೆಲವರು ಕೈಯಲ್ಲಿ ತರಕಾರಿ, ಹಣ್ಣಿನ ಚೀಲ ಜೋಲಿಸುತ್ತ, ಮತ್ತೊಂದಿಷ್ಟು ಕಾಲೇಜು ತಪ್ಪಿಸಿ ಸಿನಿಮ ನೋಡಿ ಮರಳುತ್ತಿರುವ ಹುಡುಗರು, ಹುಡುಗಿಯರು ಅದೇ ತಾನೇ ನೋಡಿದ ಸಿನಿಮ ವಿಶ್ಲೇಷಿಸುತ್ತ, ಒಂದೆರಡು ಅಮ್ಮಂದಿರು ಮಕ್ಕಳ ರಟ್ಟೆ ಎಳೆಯುತ್ತ ಓಡುತ್ತಾ, ಬಸ್ಸಿನ ಪಕ್ಕ ಒಬ್ಬರದೊಬ್ಬ ಪಕ್ಕೆ ತಿವಿಯುತ್ತ ತಮ್ಮನು ಬಸ್ಸಿನೊಳಕ್ಕೆ ತುರುಕಿಕೊಳ್ಳಲು ಹವಣಿಸುತ್ತಿದ್ದರು. ಇವರೆಲ್ಲರ ಸಾಲಿನಲ್ಲಿ ಬಸ್ ಹತ್ತಲು ತೊಡಗಿದವಳು ಗುಲಾಬೋ. ಕಂಡಕ್ಟರನ ಧ್ವನಿ ಏರಿ ಬಂತು- “ಮಂದಿ ಹತ್ಲಿಕ್ಕತ್ತಾರ ಕಾಣ್ಸಂಗಿಲ್ಲೇನ, ಸೈಡಿಗ್ ಸರದ ನಿಂದರ… ಹಿಜಡಾ ನನ್ನ ಮಗನ..” ಬಸ್ ಹತ್ತುತ್ತಿರುವ ಒಂದಷ್ಟು ಜನ ಹಿಂತಿರುಗಿ ನೋಡಿ ಏನೂ ಆಗಿಲ್ಲವೆಂಬಂತೆ ಮುನ್ನಡೆದರೆ, ಮತ್ತೊಂದಿಷ್ಟು ಜನ ಕಿಸಪಿಸ ನಕ್ಕು ಹೊರಟರು. ಒಂದಷ್ಟು ಪಡ್ಡೆ ಹುಡುಗರು, ಕೈಚಪ್ಪಾಳೆ ತಟ್ಟಿ ಅಣಕಿಸುವುದೋ ಬೇಡವೋ, ಮತ್ತವಳ ಬಾಯಿಗೆ ಬಿದ್ದು ಮರ್ಯಾದಿ ತೆಗೆಸಿಕೊಳ್ಳುವುದೋ ಎಂದು ಅರೆಬರೆ ಕೀಟಲೆಯಲ್ಲಿ ಬಸ್ ಹತ್ತತೊಡಗಿದರು. “ನಾನೇನ್ ಮಂದಿ ಗತಿ ಕಾಣ್ಸನ್ಗಿಲ್ಲೇನ್”.. ಎಂದು ಕೇಳಬೇಕೆನಿಸಿದರೂ ಗುಲಾಬೋ, ಆ ಹೊಲಸು ಕಂಡಕ್ಟರನ ಬಾಯಿಗೇನು ಬೀಳುವುದು ಎಂದು ಸುಮ್ಮನಾದಳು.

ಬಿಳಿ ಹೂಹೂವಿನ ಕಂದುಕೆಂಪು ಬಣ್ಣದ ಸೀರೆ, ಕಾಲಲ್ಲಿ ಆಧುನಿಕ ಮಾದರಿಯ ಅಗ್ಗದ ಚಪ್ಪಲಿ, ತಲೆಗೆ ಎಣ್ಣೆ ಹಾಕಿ ಎಳೆದು ಕಟ್ಟಿದ ಕಪ್ಪುಕೂದಲಿಗೊಂದು ರಬ್ಬರ್ ಬ್ಯಾಂಡ್, ಅಬ್ಬಲಿಗೆ ಮಾಲೆ. ನುಣ್ಣನೆಯ ಮುಖದಲ್ಲಿ ಸರಿಯಾಗಿ ಗಮನಿಸಿದರೆ ಕಾಣುವ ಗಡ್ಡ ಹೆರೆದ ಹಸಿರು ಛಾಯೆ, ಸ್ವಲ್ಪ ಎತ್ತರೆವೆ ಎನ್ನಿಸುವ ನಿಲುವು. ಹಿಂದಿನಿಂದ ಇವಳನ್ನು ನೋಡಿದವರು, ಅವಳನ್ನು ದಾಟಿದಾಗ ಹಿಂತಿರುಗಿ ನೋಡದೆ ಹೋಗುತ್ತಿರಲಿಲ್ಲ. ಹಾಗೆ ನೋಡಿದವರೂ ಮುಜುಗರಪಟ್ಟೊ, ಮುಖ ತಿರುಗಿಸಿಯೋ, ಇಲ್ಲ ಅಣಕಿಸಿಯೋ ಹೋಗುವುದು ಅವಳಿಗೂ ರೂಢಿ. ಅಂತೂ ವಿದ್ಯಾನಗರ ಬಸ್ಸು ನೋಡನೋಡುತ್ತಿದ್ದಂತೆ ತುಂಬತೊಡಗಿತು. ಕುಳಿತುಕೊಳ್ಳುವ ಜಾಗ ಎಲ್ಲ ತುಂಬಿ ಒಂದಷ್ಟು ಜನ ಕಂಬ ಹಿಡಿದು ನಿಲ್ಲತೊಡಗಿದ್ದರು ಬೇರೆ. ಆದರೂ ಗುಲಾಬೋಗೆ ಹತ್ತಲು ಇನ್ನೂ ಕಂಡಕ್ಟರ್ ಬಿಟ್ಟಿರಲಿಲ್ಲ. ಡ್ರೈವರ್ ಇಂಜಿನ್ ಗುರುಗುಡಿಸತೊಡಗಿದ್ದನು. ಅಷ್ಟರಲ್ಲಿ, ಒಂದಷ್ಟು ದೂರದಲ್ಲಿ, ನಾಲ್ಕೈದು ಗುಲಾಬೋಗಳ ಗುಂಪು ಬಸ್ಸಿನೆಡೆಗೆ ಧಾವಿಸುತ್ತ ಬರುತ್ತಿತ್ತು. ಅವರಲ್ಲಿ ಯಾರೋ ಒಬ್ಬ(ಳು) ಕೂಗಿದ(ಳು)- “ಲೇ.. ಅ ಬಸ್ ನಿಂದರಸ” ಬಸ್ಸಿನೊಳಗಿದ್ದವರಿಗೇನೋ ಚಡಪಡಿಕೆ. ಇನ್ನೆಷ್ಟು ತುಂಬ್ತೀರ್ರೀ ಸರ.. ಲಗೂನ್ ಬಸ್ ಬಿಡ್ರೆಲಾ.. ಎಂದು ಹಿಂದಿನಿಂದ ಒಬ್ಬ ಮಹಾಶಯ ಕೂಗಿದರು. ಈ ಗುಲಾಬೋ ಬಸ್ಸಿನ ಮೊದಲ ಮೆಟ್ಟಿಲ ಮೇಲೆ ಕಾಲಿಟ್ಟು ಹತ್ತಿ ಇನ್ನೇನು ಡ್ರೈವರನಿಗೆ ಕೈ ಮಾಡಬೇಕು ಎನ್ನುವಷ್ಟರಲ್ಲಿ, ಸೀಟಿ ಊದಿದ ಕಂಡಕ್ಟರ್.. ರೈಟ್ ರೈಟ್.. ಕಾದಿದ್ದವನಂತೆ ಬಸ್ ಎಕ್ಸಲರೇಟರ ಒತ್ತಿದ ಡ್ರೈವರ್. ಮೆಟ್ಟಿಲ ಮೇಲೆ ಒಂದು ಕಾಲು, ನೆಲದಿಂದ ಸ್ವಲ್ಪವೇ ಬಿಟ್ಟ ಇನ್ನೊಂದು ಕಾಲು, ಆಯತಪ್ಪಿ ಬಿದ್ದಳು ಗುಲಾಬೋ, ದೂರದಿಂದ ಓಡೋಡಿ ಬಂದ ಆ ಗುಲಾಬೋ ಗೆಳೆಯ/ತಿಯರ ತಂಡ ಇವಳನ್ನು ಬಸ್ ಅಡಿಗಾಗುವುದನ್ನು ತಪ್ಪಿಸಿ ಎಳೆದು ಕೂಗಿದ್ದು, ಬಸ್ ನ ಎಂಜಿನ್ ಶಬ್ದದಲ್ಲಿ ಅಸ್ಪಷ್ಟವಾಗಿ ಕೇಳಿಸಿತ್ತು.. “ಮಂದಿ ಹತ್ತೂದ ಕಾಣ್ಸಂಗಿಲ್ಲೇನ.. ಕಣ್ಣ ಕಿತ್ತ್ ಕುಂಡಿ ಅಡಿಗ ಇಟ್ಟೀಯೇನಲೇ.. ಮಗನ…..” ಇನ್ನೂ ನಡೆಯುತ್ತಿದ್ದ ಬೈಗುಳದ ಸುರಿಮಳೆಗೆ ಕಿವಿಗೊಡದೆ ಮುಂದುವರಿದಿತ್ತು ಬಸ್ಸು ವಿದ್ಯಾನಗರದ ದಾರಿ ಹಿಡಿದು.

***

ಮಧ್ಯಮವರ್ಗದ ಕುಟುಂಬ. ಅಪ್ಪ ಕಾಲೇಜು ಪ್ರೊಫೆಸರ್, ಅಮ್ಮ ಗೃಹಿಣಿ. ಇಬ್ಬರು ಮಕ್ಕಳು. ಎಷ್ಟು ಚೆನ್ನಾಗಿತ್ತಲ್ಲ ಬಾಲ್ಯ! ಬೆಳೆದಿದ್ದು, ಓದಿದ್ದು ಎಲ್ಲ ಇಲ್ಲೇ. ಪ್ರತಿಯೊಂದು ಓಣಿಯೂ ಎಷ್ಟೊಂದು ಆಪ್ತ! ಆದರೆ ಎಲ್ಲಿ ಹೋದರೂ ಈಗ ಇರುಸುಮುರುಸು, ಎಲ್ಲ ತನ್ನನ್ನೇ ನೋಡುತ್ತಿದ್ದಾರೋ ಎಂಬಂತೆ ಭ್ರಮೆ. ಮನೆಯಲ್ಲಿ ಹೇಳುವುದಾದರೂ ಹೇಗೆ. ಪುಣ್ಯಕ್ಕೆ ತಂಗಿಯ ಮದುವೆಯಾಗಿದೆ, ಇಲದಿದ್ದರೆ ನಡೆಯುವ ರಾದ್ಧಾಂತ ಊಹಿಸಿಕೊಳ್ಳಲೂ ಅಸಾಧ್ಯ. ಅಮ್ಮನಿಗೆ ಹೃದಯಾಘಾತವೇ ಆಗಿಬಿಡುವುದೇ? ಅಮ್ಮನ ಶ್ರಾವಣ ಶುಕ್ರವಾರದ ಅರಿಶಿಣ ಕುಂಕುಮ ಗೆಳತಿಯರೆಲ್ಲ ಅವಳನ್ನು ಬಹಿಷ್ಕರಿಸಿಬಿಡುವರೋ ಏನೋ. ಅಪ್ಪ ಹೇಳುವ ಮೊದಲನೇ ವಾಕ್ಯವನ್ನು ಊಹಿಸಿಕೊಳುವುದು ಕಷ್ಟವೇನಲ್ಲ. “ನಿನ್ನನ್ನು ನಾವು ಮುಂದೆ ಓದಲಿ ಎಂದು ಕಷ್ಟಪಟ್ಟು ದುಡಿದ ದುಡ್ಡೆಲ್ಲ ಸುರಿದು ಅಮೆರಿಕಾಕ್ಕೆ ಕಳುಹಿಸಿದ್ದೆ ತಪ್ಪಾಗಿ ಹೋಯಿತು….” ಇದರಲ್ಲಿ ಅಮೆರಿಕದ್ದೇನು ತಪ್ಪು? ಇಲ್ಲಿ ಯಾರನ್ನೋ ಮದುವೆಯಾಗಿ, ಮೋಸದ ಬದಕು ಬದಕುವುದಕ್ಕಿಂತ ನನ್ನನ್ನು ನಾನು ಕಂಡುಕೊಂಡಿದ್ದರಲ್ಲಿ ಏನು ತಪ್ಪು? ಹೇಗೆ ವಿವರಿಸುವುದು? ಅಮ್ಮ ಬೇರೆ ಬಂದಿಳಿಯುವುದಕ್ಕೆ ಪುರುಸೊತ್ತಿಲ್ಲ.. ಫೋಟೋಗಳ ಫೈಲ್ ಹಿಡಿದು ಕೂತುಬಿಟ್ಟಿದ್ದಾರೆ. ಯಾವ ಹುಡುಗಿಯರು ಅಂತ ಆರಿಸಿಕೊಡು, ನೋಡಿಕೊಂಡು ಬರೋಣ. ಹೀಗೆ ಏನೇನೋ.. ತಲೆ ಸಿಡಿದಂತಾಗಿ ಏನೂ ಕೇಳಿಸಿರಲಿಲ್ಲ. ಮನೆಯಲ್ಲಿ ಉಸಿರುಕಟ್ಟಿದಂತಾಗಿ, ಹೊರಗೆ ಸುತ್ತಾಡಿಕೊಂಡು ಬಂದರಾಯಿತು ಎಂದು ಹೊರಟಾಗ, ಅಪ್ಪ ಖುಷಿಯಲಿ ಕಾರ್ ಕೀ ಕೊಟ್ಟಿದ್ದರು. ಕಾರ್ ಕೊಳ್ಳಿ ಎಂದು ಮುಂಚೆಯೇ ದುಡ್ಡು ಕಳಿಸಿದ್ದರೂ ಕೊಂಡಿರಲಿಲ್ಲ. ಈಗ ಮಗ ಅಮೆರಿಕದಿಂದ ಬರುತ್ತಾನೆಂದು ಒಂದು ಹೊಸ ಮಾರುತಿ ಜೆನ್ ಮನೆಗೆ ಬಂದಿದೆ. ಆದರೂ ಇಲ್ಲೆಲ್ಲಾ ಬಸ್ ನಲ್ಲಿ, ರಿಕ್ಷಾದಲ್ಲಿ ಎಲ್ಲ ಓಡಾಡಿ ಎಷ್ಟು ದಿನವಾಯಿತು ಎಂದುಕೊಂಡು ಬಸ್ಸಿಗೆ ಬಂದಿದ್ದ ಸಮರ್ಥನ ತಲೆ ತುಂಬಾ ಪರಿಸ್ಥಿತಿಯನ್ನು ಎದುರಿಸುವ, ಬಯಲುಗೊಳಿಸುವ ದಾರಿಕಾಣದ ಯೋಚನೆಗಳೇ. ಬಸ್ಸಿನ ಹಿಂದಿನ ಬಾಗಿಲಿನ ಹತ್ತಿರ ನಿಂತಿದ್ದವನಿಗೆ, ಹೊರಗೆ ನಡೆದ ಪ್ರಹಸನಕ್ಕೂ ತನಗೂ ಹೆಚ್ಚಿನ ವ್ಯತ್ಯಾಸವಿಲ್ಲ, ಆ ಅವಮಾನ ತನ್ನದೇನೋ ಎನ್ನಿಸತೊಡಗಿತು. ಈ ಮಂದಿಯಲ್ಲದ ಮಂದಿಯ ಗುಂಪಿಗೆ ತಾನೂ ಎಳೆಎಳೆಯಾಗಿ ಇಳಿದುಹೋಗಿದ್ದು ತಿಳಿದರೂ ತಿಳಿಯದಂತೆ ಇದ್ದುಬಿಟ್ಟಿದ್ದ. ತಾನು ಸಾಮಾನ್ಯ ಮಂದಿಯಂತೆ ಇವರಿಗೆಲ್ಲ ಕಾಣುವುದು ಸಾಧ್ಯವೇ?

“ಕಾಮರ್ಸ್ ಕಾಲಜ್ ಯಾರದೀರ್ರೀ?” ಕಂಡಕ್ಟರನ ಕೂಗಿಗೆ ಎಚ್ಚರವಾದಂತಾಗಿ ದಡದಡನೆ ಇಳಿದ. ಇಳಿದ ಮೇಲೆ ಹೊಳೆಯಲಿಲ್ಲ ತಾನಿಲ್ಲಿ ಇಳಿದಿದ್ದೇಕೆಂದು. ಎದುರಿನ ಜ್ಯೂಸ್ ಅಂಗಡಿಗೆ ಹೋಗಿ ಸುಮ್ಮನೆ ಕುಳಿತ. ಮತ್ತೆ ನೆನಪುಗಳು… ಇಂಜಿನಿಯರಿಂಗ್ ಕಾಲೇಜಿನ ಆ ದಿನಗಳು. ಇಂಜಿನಿಯರಿಂಗಿನಲ್ಲಿ ಹುಡುಗಿಯರು ಕಡಿಮೆ ಎಂದು.. ಗೆಳೆಯರ ಬಳಗವೆಲ್ಲ ಬಂದು ಈ ಜ್ಯೂಸ್ ಅಂಗಡಿಯಲ್ಲಿ ಜಮಾಯಿಸುತ್ತಿತ್ತು. ಎದುರಿನ ಕಾಮರ್ಸ್ ಕಾಲೇಜಿನ ಹುಡುಗೀರು, ಪಕ್ಕದ ಮೆಡಿಕಲ್ ಕಾಲೇಜಿನ ಭಾವೀ ವೈದ್ಯೆಯರು ಸಾಕಷ್ಟು ಕಾಣಸಿಗುವುದೇ ಜ್ಯೂಸ್ ಅಂಗಡಿಯವನಿಗೆ ಭರ್ಜರಿ ವ್ಯಾಪಾರ. ಗುಂಪಿನಲ್ಲಿ ಗೋವಿಂದ ಎಂಬಂತೆ ತಾನೂ ಕುಳಿತುಕೊಳ್ಳುತ್ತಿದ್ದ ಆ ಮೂಲೆ ತನ್ನನ್ನು ನೋಡಿ ಅಣಕಿಸುತ್ತಿದೆಯೇ? ಆ ಮೂಲೆಗೆ ಆಗಲೇ ತಿಳಿದಿತ್ತೆ ಯಾರನ್ನೂ ಚುಡಾಯಿಸದಿರುವ ತನ್ನ ಸಭ್ಯತೆಯ ಹಿಂದಿನ ಅರ್ಥ? ಅಥವಾ ತಾನು ನಿಜಕ್ಕೂ ಸಭ್ಯನೆ ಆಗಿದ್ದು ಹಾಗೆ ನಡೆದುಕೊಂಡೆನೆ? ಸುಮ್ಮನೆ ಒಂದು ಲಿಂಬುಸೋಡಾ ಕುಡಿದು ರಸ್ತೆಗುಂಟ ಕಾಲೆಳೆಯತೊಡಗಿದ. ದಿಕ್ಕು ಸ್ಪಷ್ಟವಾಗಿದ್ದರೂ ದಾರಿ ಗೊತ್ತಿಲ್ಲದಂತೆ ಬೀಳುತ್ತಿತ್ತು ಹೆಜ್ಜೆ.

ತಲೆತುಂಬ ಬರೀ ನೆನಪುಗಳು ಆಪ್ತವೆನಿಸಿದರೂ ಅಸ್ಥಿರವಾಗಿಸುವ ನೆನಪುಗಳು. ಈಗ ಸರಿಸುಮಾರು ಎರಡು ವರ್ಷಕ್ಕೆ ಬಂತೇನೋ. ಎಂಎಸ್ ಮಾಡುವಾಗಿನ ಸಮಯ. ಅಲ್ಲಿನ ಹೇಳುಕೇಳುವರಿಲ್ಲದ ವಾತಾವರಣ. ಆದರೂ ಮನಸ್ಸಿಗೇನೋ ಕಳವಳ. ತನ್ನಷ್ಟಕ್ಕೆ ಕೀಳರಿಮೆ. ಯಾಕೆ ಎಂದು ತನಗೇ ತಿಳಿದಿರಲಿಲ್ಲ. ಗೆಳೆಯರ ದೊಡ್ಡ ತಂಡವೇ ವಾರವೆಲ್ಲ ಮಾತಾಡಿಕೊಂಡು ವೀಕೆಂಡಿಗೆ ಪ್ಲಾನ್ ಹಾಕುತ್ತ ಕ್ಲಬ್ಬಿಗೆ ಹೋದದ್ದು. ಕಣ್ಣು ಬಾಯಿ ಬಿಟ್ಟುಕೊಂಡು ರಂಗದ ಮೇಲೆ ಕಳಚುತ್ತ ಕುಣಿಯುತ್ತಿರುವ ಸುಂದರಿಯರನ್ನು ನೋಡಿ ಅವರೆಲ್ಲ ಏನೋ ಸಾಧಿಸಿದವರ ವಿಜಯಘೋಶದಲ್ಲಿದ್ದರೆ ತಾನು ಬೋರಾಗಿ ಹೊರನಡೆದು ಒಂದು ಸುತ್ತು ಡೌನ್ಟೌನ್ ಸುತ್ತಿ ಬಂದಿದ್ದೆ. ಹಾಗೆ ಆರಂಭವಾದ ತನ್ನ ಮೇಲೆ ತನಗೆ ಬಂದ ಸಂಶಯ ಸಂಪೂರ್ಣ ತಿಳಿಯಾಗಿದ್ದು ಆ ಮಬ್ಬುಗತ್ತಲಿನ ಬಾರೊಂದರಲ್ಲಿ. ನನ್ನೆಲ್ಲ ಗುಟ್ಟುಗಳೂ ಗೊತ್ತು ಎಂಬಂತೆ ನೀಲಿಕಂಗಳ ಅವನು ನೇರ ಬಂದು ಕೈಹಿಡಿದುಕೊಂಡಾಗ ಇರುಸುಮುರುಸಾದರೂ ಹಿತವೆನಿಸಿತ್ತು. ಇಲ್ಲಿಯವರೆಗೆ ಅರಸುತ್ತಿದ್ದ ಮಿಂಚಿನ ಸುಖವೊಂದು ಮೊದಲಬಾರಿಗೆ ಎದುರಲ್ಲಿ ನಿಂತಿತ್ತು. ಅಲ್ಲಿಂದ ಆರಂಭಿಸಿದ ಸಮರ್ಥ, ರಿಚರ್ಡನ ಪ್ರೇಮಸಂಬಂಧಕ್ಕೆ ಈಗ ಸರಿಸುಮಾರು ಎರಡು ವರ್ಷ. ಮೊದಮೊದಲು ಗೆಳೆಯರ ಬಳಗದ ಕಣ್ತಪ್ಪಿಸಿ ಅವನನ್ನು ಭೇಟಿಯಾಗಲು ಹೋಗುತ್ತಿದ್ದವ ಗ್ರಾಜುಯೇಟ್ ಆಗುವಷ್ಟರಲ್ಲಿ ಇಬ್ಬರೂ ಸೇರಿ ಮನೆ ಬಾಡಿಗೆ ಹಿಡಿದಿದ್ದರು. ಒತ್ತಿಗಿರಲು ಆರಂಭಿಸಿದ ಒಂದು ವರ್ಷಕ್ಕೆ ಥ್ಯಾಂಕ್ಸ್ ಗಿವಿಂಗ್ ಊಟಕ್ಕೆಂದು ರಿಚರ್ಡ್ ಕರೆದುಕೊಂಡು ಹೋದಾಗ ಅವನ ಮನೆಯಲ್ಲೇ ಎಷ್ಟೊಂದು ರಾಮಾಯಣವಾಗಿ ಹೋಗಿತ್ತು. ಅಂಥಾದ್ದರಲ್ಲಿ ಇಲ್ಲಿ, ಇನ್ನು ನಾನು ಹೇಗೆ ಹೇಳಲಿ… “ನಾನೊಬ್ಬ ಗೇ”, ಎಂದು?

ರಿಚರ್ಡ್ ಒಬ್ಬ ಕ್ಯಾಥೊಲಿಕ್ ಮನೆಯಿಂದ ಬಂದ ಹುಡುಗ. ಪ್ರತಿ ಭಾನುವಾರ ತಪ್ಪದೆ ಚರ್ಚಿಗೆ ಹೋಗುವ ಪರಿಪಾಠವಿಲ್ಲದಿದ್ದರೂ ಆಗಲೋ ಈಗಲೋ, ಕ್ರಿಸ್ಮಸ್ ಈಸ್ಟರ್ ಎಂದು ಹೋಗುವ ಜನ. ಮಕ್ಕಳನ್ನು ಮುಕ್ತವಾಗಿಯೇ ಬೆಳೆಸಿದವರು ಮಿಸ್ಟರ್ ಅಂಡ್ ಮಿಸೆಸ್ ಜೆಫ್ರಿ. ಹಿರಿಯಣ್ಣ ಲಾಯರ್. ಎರಡನೆಯವ ಸೈನ್ಯ ಸೇರಿ ಇರಾಕಿನಲ್ಲಿದ್ದಾನೆ ಈಗ. ಹಿರಿಯಣ್ಣ ಒಬ್ಬಳು ಟೈವಾನೀಸ್ ಹುಡುಗಿಯನ್ನು ಮದುವೆಯಾಗಿದ್ದಾನೆ. ಎರಡನೆಯವನಿಗಿನ್ನೂ ಮದುವೆಯಾಗಿಲ್ಲ, ಆದರೆ ಪ್ರತಿ ಸಾರಿ ಮನೆಗೆ ಬರುವಾಗ ಹೊಸ ಒಬ್ಬಳು ಹುಡುಗಿಯನ್ನು ಗರ್ಲ್ ಫ್ರೆಂಡ್ ಎಂದು ಪರಿಚಯಿಸುತ್ತಾನೆ. ರಿಚರ್ಡ್ ಪ್ಲಾಸ್ಟಿಕ್ ಇಂಜಿನಿಯರಿಂಗ್ ಮಾಡಿ ಈಗ ಪ್ರಸಿದ್ಧ ಕಾರು ಕಂಪನಿಯೊಂದರಲ್ಲಿದ್ದಾನೆ. ಯಾವತ್ತೂ ಮನೆಗೆ ಫ್ರೆಂಡ್ ಎಂದು ಯಾರನ್ನೂ ಕರೆತಂದವನಲ್ಲ. ಈ ಎಲ್ಲವನ್ನೂ ನಾರ್ಮ್ ಎನ್ನುವಂತೆ ಒಪ್ಪಿಕೊಂಡಿರುವ ಮಿಸ್ಟರ್ ಅಂಡ್ ಮಿಸೆಸ್ ಜೆಫ್ರಿಯ ಅಂದಿನ ಪ್ರತಿಕ್ರಿಯೆ ರಿಚರ್ಡ್ಗೆ ಆಶ್ಚರ್ಯ ತಂದಿತ್ತು. ಬಹುಮುಂಚೆಯೇ ತನ್ನ ಒಲವು ಎತ್ತ ಎಂಬುದನ್ನು ಕಂಡುಕೊಂಡಿದ್ದವನಿಗೆ ಮನೆಯಲ್ಲಿ ವಿವರಿಸುವುದು ಇದುವರೆವಿಗೂ ಸಾಧ್ಯವಿರಲಿಲ್ಲ. ಸತ್ಯ ಇನ್ನಾದರೂ ಹೊರಬರಲೇಬೇಕು ಎಂದುಕೊಂಡು ಥ್ಯಾಂಕ್ಸ್ ಗಿವಿಂಗಿಗೆ ಸಮರ್ಥನನ್ನು ಕರೆದುಕೊಂಡು ಹೋಗಿದ್ದ. ತನ್ನನ್ನು ಮನೆಯವರೆಲ್ಲ ಜಮಾಯಿಸಿರುವಾಗ ಕರೆದುಕೊಂಡು ಹೋಗಿದ್ದು ಬೇಡಿತ್ತೇನೋ. ಊಟ ಮುಗಿಯುವವರೆಗೂ ಮಿಸೆಸ್ ಜೆಫ್ರಿ ಕೋಣೆ ಹೊಕ್ಕವರು ಹೊರಬರಲೇ ಇಲ್ಲ. ಎಲ್ಲ ಒಂದೂ ಮಾತಾಡದೆ ಒಬ್ಬರು ಇನ್ನೊಬ್ಬರ ಕಣ್ತಪ್ಪಿಸಿ ಉಂಡರು. ಇನ್ನೇನು ಹೊರಡಬೇಕು ಎನ್ನುವಾಗ ಇಳಿದುಬಂದು, ಎಲ್ಲರೂ ದಯವಿಟ್ಟು ಫ್ಯಾಮಿಲಿ ರೂಮಿನಲ್ಲಿ ಹೋಗಿ ಕುಳಿತಿರಿ ಎಂದು ಅಪ್ಪಣೆಯಿತ್ತರು. ಹಾಗೆ ಹೇಳಿದರೆ ಅದು ಮನೆಯವರೆಲ್ಲರಿಗೂ ಗೊತ್ತು, ಫ್ಯಾಮಿಲಿ ಮೀಟಿಂಗ್ ಎಂದು. ತಾನು ಊಟದ ಕೋಣೆಯಲ್ಲಿ ಕುಳಿತೆ ಇದ್ದೆ ಮಿಸೆಸ್ ಜೆಫ್ರಿ ಬಂದು ನೀನೂ ಬಾ ಎಂದು ಕರೆಯುವವರೆಗೆ. ಅಲ್ಲಿ ಆರಂಭವಾದ ಮಾತು, ಜಗಳ, ಜಟಾಪಟಿ, ಅಳು, ಸಿಟ್ಟು ಕೊನೆಗೂ ಎಲ್ಲರೂ ಎಲ್ಲರನ್ನು ಅಪ್ಪಿಕೊಳ್ಳುವುದರಲ್ಲಿ ಮುಗಿದಿತ್ತು. ನಿಮ್ಮ ನಿಮ್ಮ ಹಣೆಬರಹ ಏನೋ, ದೇವರು ಹರಸಲಿ ಎಂದು ಹೇಳಿ ಮತ್ತೆ ಕೋಣೆಹೊಕ್ಕಿದ್ದರು. ರಿಚರ್ಡ್ನಿಗೆ ಮಹಾಭಾರವೊಂದು ಇಳಿದಿದ್ದರ ಅನುಭವವಾಗಿತ್ತು. ಎಲ್ಲ ಸರಿಯಾಗುತ್ತೆ ಬಾ ನಾವಿನ್ನು ಹೊರಡೋಣ ಎಂದು ತನ್ನನ್ನು ದಬ್ಬಿಕೊಂಡೆ ಹೊರನಡೆದಿದ್ದ.

***

ನಡೆಯುತ್ತಾ ನಡೆಯುತ್ತಾ ಸಮರ್ಥ ಈಗಾಗಲೇ ಉಣಕಲ್ ಕೆರೆಯವರೆಗೆ ನಡೆದಿದ್ದ. ನಿನ್ನ ಇಕ್ಕಟ್ಟಿಗೆ ತಾನೂ ಏನೂ ಮಾಡಲಾರೆ ಎಂಬಂತೆ ಸೂರ್ಯನೂ ಆಗಷ್ಟೇ ನುಣುಚಿಕೊಂಡಿದ್ದ. ಇವನ ವ್ಯಗ್ರತೆಗೆ ಸಾಕ್ಷಿಯೆಂಬಂತೆ ಆಗಸವೂ ಕೆಂಪಾಗಿ ನೀರೆಲ್ಲ ಕೇಸರಿಯಾಗಿ ಹೊಳೆಯುತ್ತಿತ್ತು. ದೂರದಲ್ಲಿ ಮೋಟರ್ ಬೋಟುಗಳಲ್ಲಿ ಒತ್ತಿಕುಳಿತು ನಗುತ್ತಿರುವ ಜೋಡಿಗಳು, ಪಕ್ಕದಲ್ಲೇ ಹುಲ್ಲಿನ ಮೇಲೆ ಆಡುತ್ತಿರುವ ಮಕ್ಕಳು, ಹರಟುತ್ತಿರುವ ಅಮ್ಮಂದಿರು, ದಂಡೆಯ ಮೇಲೆ ನೀರಲ್ಲಿ ಕಾಲಿಳಿದುಬಿಟ್ಟು ಅಂತ್ಯಾಕ್ಷರಿ ಆಡುತ್ತಿರುವ ಹುಡುಗಿಯರ ಗುಂಪು, ಅವರ ಹಿಂದೆ ಹಾದುಹೋಗುವ ಅಕಸ್ಮಾತ್ತಾಗಿ ಯಾರೊಡನೆಯಾದರೂ ದೃಷ್ಟಿ ಸಂಧಿಸುವುದೋ ಎಂಬಂತೆ ಕನವರಿಸುತ್ತ ಈಗಾಗಲೇ ೩ ರೌಂಡು ಹೊಡೆದಿರುವ ಹುಡುಗರದೊಂದು ಗುಂಪು, ಎಲ್ಲರೂ ಅನ್ಯಲೋಕದ ಜೀವಿಗಳಂತೆ ತೋರುತ್ತಿದ್ದರು ಸಮರ್ಥನಿಗೆ. ಬಾನಕೆಂಪು ಕಪ್ಪಾಗುತ್ತ ಸುತ್ತಲ ಜಗತ್ತೆಲ್ಲ ಕೆರೆಯ ಅಂಚಿಂದ ಕರಗತೊಡಗಿತ್ತು. ಮನೆಗೆ ಬಸ್ಸು ಹಿಡಿಯಬೇಕಲ್ಲ ಎಂದುಕೊಳ್ಳುತ್ತ ಎದ್ದವನಿಗೆ ಕಂಡಿದ್ದು ದಂಡೆಗೆ ಬಂದ ಮೋಟಾರು ಬೋಟಿನಿಂದ ಇಳಿಯುತ್ತಿದ್ದವರು- ಗುಲಾಬೋ, ಮತ್ತು ಗೆಳತಿ(ಯ)ರು. ಅವರೆಲ್ಲ ಏನಾದರೂ ಮರೆತೇವೆ, ಬಿಟ್ಟೆವೆ ಬೋಟಿನಲ್ಲಿ, ಎಂದು ಖಚಿತಪಡಿಸಿಕೊಳ್ಳುತ್ತಾ ಬರುತ್ತಿದ್ದರು. ಮುಳುಗಿದ ಸೂರ್ಯನ ಅಳಿದುಳಿದ ಕಿರಣಗಳಲ್ಲಿ ಕಂಡ ಸ್ಪಷ್ಟ ಆಕೃತಿಗಳು. ಕೆರೆಗೆ ಬೆನ್ನು ತಿರುಗಿಸಿ ಹೆಜ್ಜೆಯಿಡುತ್ತಿದ್ದ ಮಂದಿಗುಂಪಿನ ನೆರಳು ಗುಲಾಬೋ ನೆರಳಿಗಿಂತ ಭಿನ್ನವಾಗೇನೂ ಇರಲಿಲ್ಲ. ನಿಧಾನ ಎದ್ದು ನಿಂತು ತನ್ನದೇ ನೆರಳನ್ನು ಮುಟ್ಟಿ ಮುಟ್ಟಿ ನೋಡಿಕೊಂಡ ಸಮರ್ಥ.

ನಡೆದು ಹೋಗಿ ಗುಲಾಬೋಳನ್ನು ಗಟ್ಟಿಯಾಗಿ ತಬ್ಬಿಕೊಂಡು “ನೀನೂ ಮಂದೀನSSS, ನಾನೂ ಮಂದೀನ ಆದರ ಈ ಮಂದಿಯಲ್ಲದ ಮಂದಿಗ್ ಅದು ತಿಳಿಯೂದಿಲ್ಲಾ….” ಎಂದು ಹೇಳಿ ಹಿಂತಿರುಗಿ ನೋಡದೆ ಬಿರಬಿರನೆ ಹೆಜ್ಜೆಯಿಡತೊಡಗಿದ.