ಹಡಗು ಮುಂದೆ ಹೋದಂತೆ ದೋಣಿಯ ಹಾಗೆ ಓಲಾಡಲು ಶುರುವಿಟ್ಟುಕೊಂಡಿತು. ಕಡಲಿನ ಅಲೆಗಳಿಗೆ ಲಯಬದ್ಧವಾಗಿ ಚಲಿಸಿದರೂ ಒಮ್ಮೊಮ್ಮೆ ಮುಗ್ಗರಿಸಿದಂತೆ ಅನಿಸುತ್ತಿತ್ತು. ಯಾರೋ ಒಂದಿಬ್ಬರು ಅಚ್ಚರಿಯಾಗಿ ಆ ದೃಶ್ಯ ನೋಡುತ್ತಿದ್ದರೂ ಅವರೊಂದಿಗೆ ಚರ್ಚಿಸಲು ಭಾಷೆ ಅರಿಯದೆ ಇದಿನಬ್ಬ ತನ್ನ ಗತ ಬದುಕನ್ನು ಮೆಲುಕು ಹಾಕತೊಡಗಿದ. ತಾನು ಬದುಕಿನ ಯಾವ ಹಂತದಲ್ಲಿ ಇದ್ದೇನೆ ಎಂದು ಅರಿವಾಗುತ್ತಲೇ ದುಃಖ ಉಮ್ಮಳಿಸಿ ಬಂತು. ದುಃಖದಲ್ಲಿ ಅವನು ತಲೆಯಲ್ಲಿ ಹಾದು ಹೋದ ಯೋಚನೆಗಳೇನು ?
ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರುಕಾದಂಬರಿಯ ಐದನೇ ಅಧ್ಯಾಯ ಇಲ್ಲಿದೆ:

ಹೊಸ ತಮಿಳು ಮಾಲಿಕ ಕರೀಂ ಅವಸರಿಸಿದವನಂತೆ ಬೇಗಬೇಗನೆ ಹೊರಡಬೇಕೆಂದು ಒತ್ತಾಯಿಸುತ್ತಿದ್ದ. ಆತನಷ್ಟೇ ಆತುರ ತಂದುಕೊಂಡು ಇದಿನಬ್ಬ ಬೇಗಬೇಗನೆ ಹಿಂಬಾಲಿಸತೊಡಗಿದ.ಎದುರಿಗೆ ಕಡಲು ಅಕ್ಷಯವಾಗಿರುವ ನೀಲ ದಾರಿ. ಗಾಳಿ ಭೋರೆಂದು ಬೀಸುವಾಗ ಕಣ್ಣುಗಳಿಗೆಲ್ಲಾ ಹೊಯ್ಗೆ ರಾಚುತ್ತಿತ್ತು. ತಣ್ಣಗೆ ಮೈಯ್ಯೆಲ್ಲಾ ಚಳಿಯೇರುತ್ತಿತ್ತು. ಸ್ವಲ್ಪ ಹೊತ್ತು ನಡೆದರು. ಓರೆಕೋರೆ ತೆಂಗಿನ ಮರಗಳು ಗಾಳಿಗೆ ಮುರಿದೇ ಬೀಳುವಷ್ಟು ಬಾಗುತ್ತಿದ್ದವು. ಕಡಲಿನ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದವು. ದೂರದ ಕಡಲ ಬದಿಯಲ್ಲಿ ಒಂದಷ್ಟು ಭೀಮಾಕಾರದ ಕಪ್ಪು ಹಲಗೆಗಳಂತಹ ಆಕೃತಿಗಳು ತೇಲುತ್ತಿರುವಂತೆ ಕಾಣುತ್ತಿತ್ತು. ಒಮ್ಮೆಲೇ ಮದವೇರಿದ ಕಾಡಾನೆಯಂತಹ ‘ಬುರ್ರ್ರೋಂ..’ ಎಂಬ ಘೀಳಿಡುವ ಸದ್ದು ಕೇಳಿ ಬಂತು. ಅಪರಿಚಿತ ಧ್ವನಿಗೆ ಇದಿನಬ್ಬ ಒಮ್ಮೆ ಬೆಚ್ಚಿಬಿದ್ದ. ಹತ್ತಿರವಾದಂತೆ ಈಚಲು ಮರದಂತೆ ಎತ್ತರಕ್ಕೆ ಚಾಚಿರುವ ಯಂತ್ರಗಳು ದೊಡ್ಡ ದೊಡ್ಡ ಮರಗಳನ್ನೆತ್ತಿ ಬಕಾಸುರನಿಗೆ ಉಣಿಸುವಂತೆ ಹಡಗಿಗೆ ತುಂಬಿಸಿ ಕೊಡುತ್ತಿದ್ದವು. ಇನ್ನಷ್ಟು ಹತ್ತಿರವಾದಂತೆ ಕಡಲು ನೀಲಿ ಚೆಲ್ಲಿದ ಅಕ್ಷಯ ಬಯಲು ಭೂಮಿಯಂತೆ ಭಾಸವಾಗುತ್ತಿತ್ತು.

ಇದಿನಬ್ಬನಿಗೆ ಕಡಲಿನ ಮೊದಲ ಭೇಟಿ. ಇನ್ನೂ ಮೀಸೆ ಚಿಗುರದ ಅನಕ್ಷರಸ್ಥ ಹುಡುಗನಿಗೆ ವಿಪರೀತ ಕುತೂಹಲ. ಕಡಲ ಸೌಂದರ್ಯ ನೋಡಿದ ಖುಷಿಗೆ ರೆಕ್ಕೆ ಬಿಚ್ಚಿ ಹಾರಾಡುವುದಕ್ಕೂ ಸುಲಭವಿರಲಿಲ್ಲ. ಕೀಟಲೆ, ಚೇಷ್ಟೆಗಳಿಗೆ ಎಡೆಯಿಲ್ಲ. ಇದಿನಬ್ಬ ಬೇಡಿ ತೊಡದ ಬಂಧಿತ ಕೂಲಿಯಾಳು. ಮತ್ತೊಮ್ಮೆ “ಭುರ್ರ್ರೋಂ” ಶಬ್ದ ಕಿವಿಗಡಚಿಕ್ಕಿತು. ಅವಸರವಸರವಾಗಿ ಮಾಲಿಕ ಮುಂದೆ ಸಾಗುತ್ತಿದ್ದ. ಕಡಲ ಒಡಲಲ್ಲಿ ದ್ವೀಪಗಳಂತೆ ಕಾಣುತ್ತಿದ್ದ ಹತ್ತಾರು ಹಡಗುಗಳು ಒಂದೇ ಕಡೆ ಠಿಕಾಣಿ ಹೂಡಿದ್ದವು. ಬಹುಶಃ ಅವರಿಗೆ ಹೋಗಲಿಕ್ಕಿರುವ ಹಡಗು ಈಗ ತೆರಳುತ್ತದೆಯೆಂದೂ “ಭುರ್ರೋ” ಎಂಬ ಸದ್ದು ಅದಕ್ಕಿರುವ ಸೂಚನೆ ಇರಬಹುದು ಎಂದು ಇದಿನಬ್ಬ ಅಂದಾಜು ಮಾಡಿಕೊಂಡ. ಹಡಗು ಹತ್ತುವುದಕ್ಕೆ ಜನರು ಹರಕೆಯ ಪ್ರಸಾದ ಪಡೆಯುವವರಂತೆ ಸಾಲು ಸಾಲಾಗಿ ನಿಂತಿದ್ದರು. ಒಬ್ಬೊಬ್ಬರ ಕೈಯಲ್ಲೂ ಮಣಭಾರದ ಮೂಟೆಗಳು. ಮಾಲಿಕ ಇನ್ನಷ್ಟು ಅವಸರಿಸಿದ. ಅವರೀಗ ಹಡಗಿಗೆ ಹತ್ತಿರವಾದರು.

ಹಡಗು ಪೂರ್ತಿ ಸರಕುಗಳಿಂದ ತುಂಬಿ ಹೋಗಿತ್ತು. ಹಡಗಿನ ವಿಶಾಲತೆಯು ಎಷ್ಟು ತುಂಬಿದರೂ ಅರ್ಧಹೊಟ್ಟೆಯಂತೆಯೇ ಅನುಭವವಾಗುತ್ತಿತ್ತು. ಆ ಹೊತ್ತಿಗೆ ಇದಿನಬ್ಬ ಮತ್ತು ಮಾಲಿಕ ಇಬ್ಬರೂ ಹಡಗಿಗೆ ಹತ್ತಿದ್ದರು. ಜನರ ತಿಕ್ಕಾಟ ಮಿತಿಮೀರಿತ್ತು. ಪರಿಣಾಮ ಹಡಗಿನ ದ್ವಾರದಲ್ಲಿ ನೂಕುನುಗ್ಗಲು ವಿಪರೀತವಾಗಿತ್ತು. ಅಷ್ಟರಲ್ಲಿ ದ್ವಾರ ಪಾಲಕನಂತೆ ಹಡಗಿನ ಪ್ರವೇಶ ದ್ವಾರದಲ್ಲಿ ನಿಂತಿದ್ದವ ಉಚ್ಛ ಧ್ವನಿಯಲ್ಲಿ ಕೂಗಿ ಹೇಳತೊಡಗಿದ.

“ಎಲ್ಲರೂ ಬೇಗ ಬೇಗ ಬನ್ನಿ ಸಮಯವಾಗುತ್ತಿದೆ… ”

ಜನರ ಗುಂಪು ತಿಮಿಂಗಿಲಕ್ಕೆ ಆಹಾರವಾಗುವಂತೆ ಸರಣಿ ಸರಣಿಯಾಗಿ ಧಾವಿಸುತ್ತಲೇ ಇತ್ತು. ಈಗ ಹಡಗಿನ ಮುಕ್ಕಾಲು ಭಾಗ ಸರಕು ಸರಂಜಾಮುಗಳೇ ತುಂಬಿದ್ದರೂ, ಉಳಿದ ಭಾಗದಲ್ಲೆಲ್ಲಾ ಜನರೇ ತುಂಬಿ ಹೋದರು. ಕೊನೆಯ ಬಾರಿಗೆ ಹೊಟ್ಟೆ ತುಂಬಿದ ಕತ್ತೆಯಂತೆ ಹಡಗಿನ ಕೊನೆಯ ಶಿಳ್ಳೆಯೂ ಮೊಳಗಿತು. ನಿಲ್ದಾಣ ಬಿಡುವ ವೇಳೆಗೆ ತಡವಾಗಿ ಬಸ್ಸಿಗೇರುವ ನಿರ್ವಾಹಕನಂತೆ ಸಾಹಸಗೈಯ್ಯುವ ಪ್ರಯಾಣಿಕರಿಗೂ ಕಡಿಮೆ ಇರಲಿಲ್ಲ. ಹಡಗು ಚಲಿಸಿ ಇನ್ನೇನು ಬಾಗಿಲು ಮುಚ್ಚುತ್ತಿರುವಾಗ ದಡದಿಂದ ಯಾರೋ ಒಬ್ಬ ಲಾಂಗ್ ಜಂಪ್ ಸ್ಪರ್ಧಿಯಂತೆ ಛಂಗನೆ ಹಾರಿದ್ದ. ಆತ ಹಾರುವಷ್ಟಕ್ಕೆ ಬಾಗಿಲು ಮುಚ್ಚಿತು. ಆತ ಹಡಗಿಗೂ ತಲುಪಲಿಲ್ಲ. ಇನ್ನೇನಾದನೆಂದು ತುದಿಗಾಲಲ್ಲಿ ನಿಂತು ಇದಿನಬ್ಬ ಇಣುಕಿದ. ಆ ಹೊತ್ತಿಗೆ ಬಾಗಿಲು ಸಂಪೂರ್ಣ ಮುಚ್ಚಿತ್ತು. ಆತ ನೀರಿಗೆ ಬಿದ್ದನೋ, ಮುಳುಗಿದನೋ, ಈಜಿದನೋ ಎಂಬ ಭೀತಿ ಮತ್ತು ಗೊಂದಲದ ಪ್ರಶ್ನೆಗಳು ಇದಿನಬ್ಬನ ಗಂಟಲಲ್ಲೇ ಹೆಪ್ಪುಗಟ್ಟಿದವು. ಬಹುಶಃ ಹಡಗಿನಲ್ಲಿ ಇಂತಹ ಘಟನೆಗಳು ಮಾಮೂಲು ಎಂದೋ ಏನೋ ಯಾರೊಬ್ಬರೂ ಕುತೂಹಲಗೊಂಡಂತೆ ಕಾಣಲಿಲ್ಲ. ಇದಿನಬ್ಬ ಅರ್ಥವಾಗದ ಹೊಸ ಭಾಷೆಯಲ್ಲಿ ಗುಂಪುಗಟ್ಟಿದ್ದ ಜನರ ಕರಕರನೆ ಮಾತಾಡುವ ಗದ್ದಲದ ನಡುವೆ ಸುಮ್ಮನೆ ವಿರುದ್ಧ ದಿಕ್ಕಿಗೆ ನೋಡುತ್ತ ನಿಂತ. ಹಡಗು ಮುಂದೆ ಹೋದಂತೆ ದೋಣಿಯ ಹಾಗೆ ಓಲಾಡಲು ಶುರುವಿಟ್ಟುಕೊಂಡಿತು. ಕಡಲಿನ ಅಲೆಗಳಿಗೆ ಲಯಬದ್ಧವಾಗಿ ಚಲಿಸಿದರೂ ಒಮ್ಮೊಮ್ಮೆ ಮುಗ್ಗರಿಸಿದಂತೆ ಅನಿಸುತ್ತಿತ್ತು.

ಇದಿನಬ್ಬ ಬೇಡಿ ತೊಡದ ಬಂಧಿತ ಕೂಲಿಯಾಳು. ಮತ್ತೊಮ್ಮೆ “ಭುರ್ರ್ರೋಂ” ಶಬ್ದ ಕಿವಿಗಡಚಿಕ್ಕಿತು. ಅವಸರವಸರವಾಗಿ ಮಾಲಿಕ ಮುಂದೆ ಸಾಗುತ್ತಿದ್ದ. ಕಡಲ ಒಡಲಲ್ಲಿ ದ್ವೀಪಗಳಂತೆ ಕಾಣುತ್ತಿದ್ದ ಹತ್ತಾರು ಹಡಗುಗಳು ಒಂದೇ ಕಡೆ ಠಿಕಾಣಿ ಹೂಡಿದ್ದವು.

ಯಾರೋ ಒಂದಿಬ್ಬರು ಅಚ್ಚರಿಯಾಗಿ ಆ ದೃಶ್ಯ ನೋಡುತ್ತಿದ್ದರೂ ಅವರೊಂದಿಗೆ ಚರ್ಚಿಸಲು ಭಾಷೆ ಅರಿಯದೆ ಇದಿನಬ್ಬ ತನ್ನ ಗತ ಬದುಕನ್ನು ಮೆಲುಕು ಹಾಕತೊಡಗಿದ. ತಾನು ಬದುಕಿನ ಯಾವ ಹಂತದಲ್ಲಿ ಇದ್ದೇನೆ ಎಂದು ಅರಿವಾಗುತ್ತಲೇ; ಗಲೀಜು ತುಂಬಿದ ಹಡಗಿನಲ್ಲಿ ಪ್ರಯಾಣಿಕರ ಗಿಜಿಗಿಜಿಗಳ ನಡುವೆ ನಿಂತೇ ಇದ್ದ ಇದಿನಬ್ಬನಿಗೆ ಒಂದು ಕ್ಷಣ ಮನೆಯವರ ನೆನಪಾಯಿತು. ಅಮ್ಮನ ನೆನಪಾಗಿ ಗಂಟಲು ಕಟ್ಟಿತು. ತಾನು ಈ ತನಕ ಕಂಡೇ ಇರದ ಕಡಲಿನ ವಿಸ್ತಾರ ಒಡಲೊಳಗೆ ಇನ್ನೇನು ಪ್ರವೇಶಿಸುತ್ತಿದ್ದಂತೆ, ನೆಲ ಬಿಟ್ಟು ಬರಿಯ ನೀರೇ ತುಂಬಿದ ಸಮುದ್ರದ ಮೇಲೆ ಕೇಳಿ ಮಾತ್ರ ಗೊತ್ತಿದ್ದ ಹಡಗೆಂಬ ಭಾರೀ ದೋಣಿಯಲ್ಲಿ ಕುಳಿತು ಪಯಣ ಆರಂಭಿಸಿದಾಗ ಮನೆಯವರ ನೆನಪು ಬಹಳವಾಗಿ ಕಾಡಿತು. ದೊಡ್ಡಮ್ಮ ನೆನಪಾದರು. ಇದಿನಬ್ಬ ಕಣ್ಣೀರೊರೆಸಿಕೊಂಡ.

ಹಡಗಿನ ಓಲಾಟಕ್ಕೆ ಹೊಟ್ಟೆ ತೊಳೆಸಿ ಬರತೊಡಗಿತ್ತು. ಯಾವುದೋ ಮೂಲೆಯಿಂದ “ವ್ಯಾಕ್” ಎಂಬ ಶಬ್ದ ಕೇಳಿ ಬಂತು. ಅಷ್ಟರಲ್ಲೇ ಅಂಟು ರೋಗದಂತೆ ದಶ ದಿಕ್ಕುಗಳಿಂದಲೂ ವಾಂತಿಯಾಗುವ ಧ್ವನಿ ಕೇಳಿ ಬರಲಾರಂಭಿಸಿತು. ಒಬ್ಬೊಬ್ಬರೂ ಉರುಳಿಗೆ ಸಿಕ್ಕಿದ ಹಂದಿಯಂತೆ ವಿಶಿಷ್ಟ ಸದ್ದಿನೊಂದಿಗೆ ವಾಂತಿಯನ್ನು ಪ್ರತಿನಿಧಿಸತೊಡಗಿದರು. ಆ ವಾತಾವರಣ ಊಹಿಸಿಕೊಂಡರೂ ಯಾರಿಗೂ ವಾಂತಿಯಾಗಬಹುದಿತ್ತು. ವಾಂತಿಯ ಅಸಹ್ಯ ವಾಸನೆ ಇಡೀ ಹಡಗನ್ನೇ ಆವರಿಸಿತ್ತು. ಕೆಳಸ್ತರದಲ್ಲಿ ಇಂಜಿನ್ನಿನ ವಿಪರೀತ ಹಬೆ ಮತ್ತು ಇಂಧನದ ಕಮಟು ಹೊಟ್ಟೆಯೊಳಗೆಲ್ಲಾ ವಿಚಿತ್ರ ಕ್ರಿಯೆಗೆ ಶುರುವಿಡುತ್ತಿತ್ತು. ವಾಂತಿಯ ಸದ್ದು ಅವ್ಯಾಹತವಾಗಿತ್ತು. ಸುಮಾರು ಗಂಟೆಗಳ ತರುವಾಯ ಪ್ರಯಾಣಿಕರು ತಣ್ಣಗಾದರು. ಜನರು ವಾಂತಿ ಮಾಡಿ ಸುಸ್ತಾಗಿದ್ದರು. ಒಮ್ಮೆ ವಾಂತಿ ಮಾಡಿ ಶಾಂತವಾಗಿ ನಿದ್ದೆ ಹೋಗಿ ಮತ್ತೆ ಎದ್ದು ಪುನಃ “ವ್ಯಾಕ್ ವ್ಯಾಕ್” ಎಂದು ವಾಂತಿ ಮಾಡಲು ಶುರುವಿಡುತ್ತಿದ್ದರು. ಅಸಹ್ಯ ಪರಿಸ್ಥಿತಿಗೆ ಹೊಂದಿಕೊಳ್ಳಲು ಕಷ್ಟವಾದಾಗ ಇದಿನಬ್ಬನಿಗೆ ತನ್ನ ಮನೆಯೇ ಎಷ್ಟೋ ವಾಸಿಯೆಂದು ಕಣ್ಣಂಚಿನಲ್ಲಿ ನೀರಿಳಿಯತೊಡಗಿತು. ಉಸಿರಾಡಲೂ ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಯಿತು. ಇದಿನಬ್ಬನ ಮಾಲಿಕ ಮೇಲಂತಸ್ತಿಗೆ ವರ್ಗಾಯಿಸುವಂತೆ ಹಡಗಿನ ಅಧಿಕಾರಿಗೆ ಅರ್ಜಿ ಕೊಟ್ಟ. ಆತ ಕಾರ್ಡ್ ಬೋರ್ಡು ಮತ್ತು ಎರಡು ಚೀಟಿ ಹಿಡಿದುಕೊಂಡು ಏನೋ ಗೀಚುತ್ತಾ ಕ್ಯಾಬಿನ್ಗೆ ಹೊರಟ. ಸುಮಾರು ಹೊತ್ತು ಕಳೆಯಿತು. ಇದಿನಬ್ಬನಿಗೆ ಹೊಟ್ಟೆ ತೊಳೆಸಿ ಬರತೊಡಗಿತ್ತು. ಇಡೀ ಹಡಗೇ ವಾಂತಿಯ ವಾಸನೆಯಿಂದ ತುಂಬಿ ಹೋಗಿತ್ತು. ಅಲ್ಲೇ ಹತ್ತಿರವಿದ್ದ ನೀರಿನ ಪಿಪಾಯಿಯಿಂದ ನೀರು ಕುಡಿದ. ಕುಡಿದ ನೀರನ್ನು ಹೊಟ್ಟೆಯು ಹೊರ ಹಾಕಲು ಪ್ರಯತ್ನ ನಡೆಸುತ್ತಲೇ ಇತ್ತು. ಅಷ್ಟರಲ್ಲಿ “ವ್ಯಾಕ್”ಎಂಬ ಶಬ್ದ ಇದಿನಬ್ಬನಿಗೆ ಬಹಳ ಹತ್ತಿರದಿಂದಲೇ ಕೇಳಿಸಿದಂತಾಯಿತು. ದುರದೃಷ್ಟವಶಾತ್ ಅವನು ಕುಳಿತಿದ್ದ ಸ್ಥಳಕ್ಕೆ ಸರಿಯಾಗಿ ಮೇಲಿನ ಆಸನದಿಂದ ವಾಂತಿಯ ಅಭಿಷೇಕವಾಗಿತ್ತು. ಉಪ್ಪರಿಗೆಯಿಂದ ವಾಂತಿಯಾದ್ದರಿಂದ ಇದಿನಬ್ಬನ ತಲೆ ಮುಖ ಪೂರ್ತಿ ವಾಂತಿಯಿಂದಲೇ ಮುಚ್ಚಿ ಹೋಗಿತ್ತು. ಈ ಅಸಹ್ಯ ವಾಸನೆಯನ್ನು ಸಹಿಸಲಾರದೆ ಇದಿನಬ್ಬನೂ ವಾಂತಿ ಮಾಡಿಯೇ ಬಿಟ್ಟ. ಇಡೀ ಮೈ ಕೈ ವಾಂತಿಯಿಂದಲೇ ತುಂಬಿ ಹೋಯ್ತು.

ಮಾಲಿಕ ಹತ್ತಿರ ಕುಳಿತುಕೊಂಡವನು ದೂರ ಸರಿಯುತ್ತ ತೊಳೆದು ಬರುವಂತೆ ಸನ್ನೆ ಮಾಡಿದ. ಇದಿನಬ್ಬ ಮುಖ ಕೈ ಕಾಲುಗಳನ್ನೆಲ್ಲಾ ಚೆನ್ನಾಗಿ ತೊಳೆದುಕೊಂಡ. ಅಸಹ್ಯ ವಾಂತಿಯ ವಾಸನೆ ಮಾತ್ರ ಮೂಗಿಗೆ ಕಟ್ಟಿಕೊಂಡಂತೆ ಭಾಸವಾಗುತ್ತಿತ್ತು. ವಾಂತಿ ಮಾಡಿ ಮಾಡಿ ಸುಸ್ತಾದ ಜನರು ಇದ್ದಲ್ಲಿಯೇ ನಿದ್ದೆ ಹೋಗಿದ್ದರು. ಇದಿನಬ್ಬ ಕದಲದೆ ನಿಂತಿದ್ದ, ಅವನ ಮಾಲಿಕ ಕರೀಂ ಅಲ್ಲೇ ಒಂದೆಡೆ ಕುಳಿತು ಕ್ಯಾಬಿನ್ ಗೆ ಕಣ್ಣು ನೆಟ್ಟಿದ್ದ.

ಮಧ್ಯಾಹ್ನದ ಬಿಸಿಲಾಗಲಿ ಬೆಳಕಾಗಲೀ ಕೆಳಂತಸ್ತಿಗೆ ತಲುಪಿರಲಿಲ್ಲ.ಅಡ್ಡ ಹಲಗೆಗಳು ಇದ್ದದ್ದರಿಂದ ಇಳಿದು ಬರಲು ಇರಿಸಿದ ಏಣಿಗೆ ತೆಗೆದಿರಿಸಿದ ಜಾಗದಲ್ಲಿ ಸ್ವಲ್ಪ ಬೆಳಕು ಬೀಳುತ್ತಿತ್ತು. ಮಂದ ಮಂದವಾಗಿ ಬೀರುವ ಲಾಟೀನು ಲೈಟು ಬಿಟ್ಟರೆ ಕೆಳಂತಸ್ತು ಗಾಢ ಕತ್ತಲು.
“ಹಲೋ, ಆಪ್ ಇದರ್ ಆಯಿಯೇ” ಮೇಲಿನಿಂದ ಕೂಗಿದ್ದು ಕೇಳಿತು. ಕರೀಂ ಸದ್ದು ಬಂದ ಕಡೆಗೆ ಹೊರಟ. ಕೂಗಿದಾತ ಚೀಟಿಯಲ್ಲಿ ಬರೆದು ತೋರಿಸಿ ತಮಿಳನಿಗೆ ಹಿಂದಿ ಅರ್ಥಮಾಡಿಸುವ ಪ್ರಯತ್ನ ಮಾಡುತ್ತಿದ್ದ. ಆದರೆ ಆತ ಹೇಳುವುದು ಕರೀಂಗೆ, ಕರೀಂ ಹೇಳುವುದು ಆತನಿಗಾಗಲೀ ಅರ್ಥವಾಗುತ್ತಲೇ ಇರಲಿಲ್ಲ. ಕೊನೆಗೆ ಆತ ತನ್ನನ್ನು ಹಿಂಬಾಲಿಸುವಂತೆ ಹೇಳಿ ಏಣಿ ಏರತೊಡಗಿದ. ಮಾಲಕ ಒಮ್ಮೆ ತಿರುಗಿ ಇದಿನಬ್ಬನನ್ನೂ ಹಿಂಬಾಲಿಸುವಂತೆ ಸೂಚಿಸಿದ್ದೇ ತಡ ಚಂಗನೆ ಹಾರಿ ಖುಷಿಯಿಂದ ಬೇಗಬೇಗನೇ ಇದಿನಬ್ಬ ಏಣಿ ಏರತೊಡಗಿದ್ದ.
ಮೇಲೇರಿದಂತೆ ಪ್ರಶಾಂತ ಗಾಳಿ ಬೀಸುತ್ತಿತ್ತು. ಕಡಲು ಶುಭ್ರವಾಗಿ ಕಾಣುತ್ತಿತ್ತು. ಎತ್ತ ನೋಡಿದರೂ ನೀರೇ ನೀರು. ಕಡಲ ಮೇಲೆ ತೇಲುವ ಸಣ್ಣ ಕಸದಂತೆ ಆ ಬೃಹತ್ ಹಡಗು ಗೋಚರಿಸುತ್ತಿತ್ತು. ಮುಂದೆ ಸಾಗಿದ ಹಡಗಿನ ಸಿಬ್ಬಂದಿ ಸ್ವಲ್ಪ ಉತ್ತಮ ವ್ಯವಸ್ಥೆ ಇರುವ ಸ್ಥಳವನ್ನು ತೋರಿಸಿದ. ಗಾಳಿ ಬೆಳಕು ಸಾಕಷ್ಟಿತ್ತು. ಶುಭ್ರವಾದ ಪರಿಸರ ಮುದ ನೀಡತೊಡಗಿತ್ತು. ಮಾಲಿಕ ಜೋಳಿಗೆಯಿಂದ ನಮಾಜಿನ ಚಾಪೆ ಹಾಸಿ ಅಂಗಸ್ನಾನ ಮಾಡಿ ಪ್ರಾರ್ಥನೆಗೆ ನಿಂತ. ಸುಮ್ಮನೆ ಕಡಲು ದಿಟ್ಟಿಸುತ್ತಿದ್ದ ಇದಿನಬ್ಬನಿಗೆ ಪ್ರಾರ್ಥನೆಗೆ ಮಾಡಲು ನಿಂತ ಮಾಲಿಕನನ್ನು ಕಾಣುತ್ತಿದ್ದಂತೆ ಕಣ್ಣೀರು ಬಂತು. ಮನೆಯಲ್ಲಿ ದೊಡ್ಡವರು ನಮಾಜು ಮಾಡುತ್ತಿದ್ದರು. ಶುಕ್ರವಾರ ರಾತ್ರಿ ಎಲ್ಲರೂ ಒಟ್ಟಾಗಿ ಕುಳಿತು ಚಿಮಣಿ ಬೆಳಕಿನಲ್ಲಿ ಖುರ್ ಆನ್ ಪಠಿಸಿ ಕೀರ್ತನೆಗಳನ್ನು ಹಾಡುತ್ತಿದ್ದರು. ಕೆಲವೊಮ್ಮೆ ಮೌಲೂದ್ ಪಾರಾಯಣ ಇರುತ್ತಿತ್ತು. ಎಲ್ಲ ಮುಗಿದ ಮೇಲೆ ಸಿಗುವ ಸೀರಣಿಯ ನೆನಪಾಯಿತು. ಶುಕ್ರವಾರ ಬೆಳಿಗ್ಗೆ ವಿಶೇಷ ಸ್ನಾನ ಮಾಡಿ ಗಂಡಸರು ಮಸೀದಿಗೆ ಹೋಗುತ್ತಿದ್ದರು. ‘ಮುಂದಿನ ವರ್ಷ ನೀನೂ ಮಸೀದಿಗೆ ಹೋಗಬಹುದು’ ಎಂದು ಅವತ್ತು ಉಮ್ಮ ಹೇಳಿದ್ದನ್ನು ಇದಿನಬ್ಬ ನೆನಪಿಸಿಕೊಂಡು ಇನ್ನೂ ಅತ್ತ.

ನಮಾಝ್ ಮುಗಿಸಿದ ಮಾಲಿಕ ಅಳುತ್ತಿದ್ದ ಇದಿನಬ್ಬನನ್ನು ಹತ್ತಿರ ಕರೆದ.

“ನಿನಗೆ ಪ್ರಾರ್ಥನೆ ಮಾಡುವುದು ಗೊತ್ತಿದೆಯಾ ”

ಅಲ್ಪ ಸ್ವಲ್ಪ ಅರ್ಥವಾದ್ದರಿಂದ ಇಲ್ಲವೆಂದು ಇದಿನಬ್ಬ ತಲೆಯಲ್ಲಾಡಿಸಿದ. ಅಲ್ಲಿಂದ ಹಡಗಿನ ಡೆಕ್ಕಿನಲ್ಲೇ ಇದಿನಬ್ಬನಿಗೆ ಧಾರ್ಮಿಕ ಪಠಣ ಆರಂಭಗೊಂಡಿತು. ಮಾಲಿಕ ಐದು ದಿವಸಗಳ ಯಾತ್ರೆಯಲ್ಲಿ ತನಗೆ ತಿಳಿದಿರುವಷ್ಟು ಧಾರ್ಮಿಕ ವಿಧಿ ವಿಧಾನಗಳನ್ನು ತಮಿಳು ಭಾಷೆಯನ್ನೂ ಕಲಿಸಿದ್ದ. ಹಡಗು ಕಡಲುಗಳನ್ನು ಹಿಂದಿಕ್ಕಿದಂತೆ ದಿನಗಳು ಉರುಳಿದವು. ಐದನೇ ದಿನಕ್ಕೆ ಹಡಗು ಮದರಾಸು ತಲುಪಿತು.

ಅಜ್ಜ ಏನೋ ಕಥೆಯ ಭರದಲ್ಲಿ ಕೈ ಕೊಡುವಾಗ ಕೈ ತಾಗಿ ಚಿಮಿಣಿ ನಂದಿತು. ಅಷ್ಟರಲ್ಲಿ ಹೊರಗಿನಿಂದ ಯಾರೋ ಬಂದಂತಾಯಿತು. ಕತ್ತಲಲ್ಲಿ ಬಂದವರು ಬಾಗಿಲು ಬಡಿದರು. ಉಮ್ಮ ಬೆಂಕಿ ಪೊಟ್ಟಣ ಹುಡಕಿ ಒಳಹೋದರು. ಅಬ್ಬ ಕತ್ತಲಲ್ಲಿ ತಡಕಾಡುತ್ತಾ ಬಾಗಿಲು ತೆರೆದರು. ” ಓಹ್ ನೀವಾ… ಬಂದು ಕುಳಿತ್ಕೊಳ್ಳಿ, ಒಂದು ದೀರ್ಘ ಕಥೆ ಅಮ್ಮರ್ತೆ ಅಜ್ಜನದ್ದು” ಎಂದು ಅಬ್ಬ ಪೀಠಿಕೆ ಹಾಕಿದಾಗ‌, “ಹಾ ಒಳ್ಳೆಯದಾಯಿತು ಬಿಡಿ, ನಾನೂ ಕೇಳಿಸಿಕೊಳ್ಳುತ್ತೇನೆ” ಎಂದವರೇ ಒಳ ಬಂದು ಕುಳಿತರು. ಅವರ ಪರಿಚಯದ ಧ್ವನಿ ಕೇಳಿಸಿಕೊಂಡಾಗಲೇ ಅದು ಚಿಕ್ಕಪ್ಪನೆಂಬ ಊಹೆ ಸುಳ್ಳಾಗಲಿಲ್ಲ‌. ಅಷ್ಟರಲ್ಲಿ ಬೆಂಕಿಪೊಟ್ಟಣ ಬಂತು ಉಮ್ಮ ಕಡ್ಡಿ ಗೀರಿದಾಗ ಚಿಮಿಣಿ ಪ್ರಕಾಶಿಸಿತು. ಈಗ ಚಿಕ್ಕಪ್ಪನ ಮೊಗ ಜ್ವಾಜಲ್ಯಮಾನವಾಗಿ ಹೊಳೆಯಲಾರಂಭಿಸಿತು‌. ನೀಳ ಗಡ್ಡ ತಲೆಗೊಂದು ಬಿಳಿ ರುಮಾಲು ಸುತ್ತಿದ ಮುಖ ಧಾರ್ಮಿಕ ಜ್ಞಾನದ ಆಳತೆಯನ್ನು ಪ್ರತಿನಿಧಿಸುತ್ತಿತ್ತು. ಅವರು ದೂರದ ಮಡಿಕೇರಿಯವರು. ಇಲ್ಲಿ ಮಸೀದಿಗೆ ಬಂದ ಬಳಿಕ ನಮ್ಮೂರಿನದ್ದೇ ಹುಡುಗಿಯನ್ನು ಮದುವೆಯಾಗುವುದಾಗಿ ತೀರ್ಮಾನವಾಗಿ ನನ್ನ ತಾಯಿಯ ತಂಗಿಯನ್ನು ವರಿಸಿದ್ದರು. ಧಾರ್ಮಿಕ ಮತ್ತು ಲೌಖಿಕವಾಗಿ ಅಪಾರ ಪಾಂಡಿತ್ಯ ಹೊಂದಿದ್ದ ಅವರು ಮಳಯಾಳಂನಲ್ಲಿ ನಿರರ್ಗಳ ವಾಗ್ಮಿ‌. ಈ ಗೌಜಿಯ ನಡುವೆ ಅಜ್ಜ ಕಥೆ ಎಲ್ಲಿ ಮರೆತು ಬಿಡುತ್ತಾರೇನೋ ಅಂಥ ಹೆದರಿ ನಾನು ನನ್ನ ಕುತೂಹಲ ಮುಂದಿಟ್ಟೆ. “ಅಲ್ಲಜ್ಜಾ ಈ ಮದ್ರಾಸ್ ಅಂದ್ರೆ ಎಲ್ಲಿ ಬರುತ್ತೆ?”

“ಮಗೂ, ಈ ಮದರಾಸು ಎಂದರೆ ಈಗಿನ ಚೆನ್ನೈ. ಕಂಪೆನಿ ಸರ್ಕಾರದ ಬ್ರಿಟಿಷರಿಗೆ ಮದರಾಸು ಪ್ರಮುಖ ಕೇಂದ್ರವಾಗಿತ್ತು. ಮಂಗಳೂರಿನಿಂದ ಮದರಾಸಿಗೆ ಭೂಸಾರಿಗೆ ಇಲ್ಲದ ಕಾಲ ಅದು. ಜಲಸಾರಿಗೆಯೇ ಅಂದು ಪ್ರಧಾನವಾಗಿತ್ತು. ಭಾರತದ ಇತರ ಕಡೆಗಳಂತೆ ಮದರಾಸಿನಲ್ಲೂ ಗುಲಾಮಗಿರಿ ಜೋರಾಗಿತ್ತು.”

ಅಬ್ಬ ವಾಲುವ ಚಿಮಿಣಿ ಬೆಳಕನ್ನು ನೋಡುತ್ತಾ ಅಜ್ಜನ ಕಡೆಗೊಮ್ಮೆ ನೋಡಿ ಮಾತನಾಡತೊಡಗಿದರು.

“ಅದಕ್ಕೊಂದು ಚಾರಿತ್ರಿಕ ಹಿನ್ನೆಲೆ ಇದೆ. ಸುಮಾರು ಕ್ರಿ.ಶ 1688 ರ ಆಸುಪಾಸಿನಲ್ಲಿ ಭಾರತದ ದಕ್ಷಿಣ ಪ್ರಾಂತ್ಯಗಳಲ್ಲಿ ಮುಸ್ಲಿಂ ಶಿಯಾ ಧಾರ್ಮಿಕ ಸಂಹಿತೆಗಳಲ್ಲಿ ಬದುಕುತ್ತಿದ್ದ ರಾಜರುಗಳು ಹೇರಳವಾಗಿದ್ದರು. ಧಾರ್ಮಿಕವಾಗಿ ಅವರು ಸಾಂಪ್ರದಾಯಿಕ ಮುಸ್ಲಿಮರಲ್ಲದ ಕಾರಣ ಸುನ್ನೀ ಸಮುದಾಯಕ್ಕೆ ಮರಳುವಂತೆ ಉತ್ತರದ ಮೊಘಲರು ಕರೆಕೊಡುತ್ತಿದ್ದರಂತೆ. ”

ಅಷ್ಟರಲ್ಲೇ ಚಿಕ್ಕಪ್ಪ ಗಂಭಿರವಾಗಿ ಪ್ರತಿಕ್ರಿಯಿಸುತ್ತಾ

“ಹೌದು, ಆ ದಿನಗಳಲ್ಲಿ ಸೈದ್ಧಾಂತಿಕವಾಗಿ ಚರ್ಚಿಸಲು ಮುಸ್ಲಿಂ ಪಂಡಿತರನ್ನು ದಕ್ಷಿಣಕ್ಕೂ ಅವರು ಕಳುಹಿಸಿದ್ದರು. ಅದರ ವಿಚಾರವಾಗಿ ಧಾರ್ಮಿಕ ಪುಸ್ತಕಗಳಲ್ಲೂ ಉಲ್ಲೇಖಗಳಿವೆ. ಆದರೆ ಈ ಚರ್ಚೆಗಳು ಯಾವುದಕ್ಕೂ ಶಿಯಾ ರಾಜರುಗಳು ಸೊಪ್ಪು ಹಾಕಿರಲಿಲ್ಲ. ಮೊಘಲರು ಮತ್ತು ಡೆಕ್ಕನ್ ಶಿಯಾ ರಾಜರುಗಳ ಮಧ್ಯೆ ತಲೆದೋರಿದ್ದ ಈ ಒಡಕಿನ ಬಗ್ಗೆ ಬ್ರಿಟಿಷರಿಗೆ ಚೆನ್ನಾಗಿ ಅರಿವಿತ್ತು ಕೂಡಾ. ಈ ಅವಕಾಶವನ್ನು ಸಾಧಿಸಿ ಅವರು ಫಾಕ್ಟರಿ, ಎಸ್ಟೇಟ್, ಬೃಹತ್ ಪ್ರಮಾಣದ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಿ ಅಕ್ರಮವಾಗಿ ಗುಲಾಮರನ್ನು ತಂದು ದುಡಿಸುತ್ತಿದ್ದರಂತೆ. ಮತ್ತೆ ಈ ಮೊಘಲರ ವಿರುದ್ಧ ಸಮರ ಸಾರಲು ಕತ್ತಿ ಮಸೆಯುತ್ತಿದ್ದರು ಕೂಡಾ. ಆಗ ಮದರಾಸಿನಲ್ಲಿ ನಡೆಯುತ್ತಿದ್ದ ಗುಲಾಮಗಿರಿಯ ದಂಧೆ ಕಂಡು ಆಗಿನ ಮೊಘಲ್ ಅರಸ ಔರಂಗಜೇಬರಿಗೆ ತಿಳಿದು ಮಾನವ ಕಳ್ಳ ಸಾಗಾಟದ ವಿರುದ್ಧ ದಂಡೆತ್ತಿ ಹೋಗುವ ಎಚ್ಚರಿಕೆ ನೀಡಿದ್ದರಂತೆ. ಇದರ ಭವಿಷ್ಯದ ನಷ್ಟವನ್ನರಿತ ಬ್ರಿಟಿಷರು ತಂತ್ರಪೂರ್ವಕವಾಗಿ 500 ನಾಣ್ಯಗಳನ್ನು ಮೊಘಲರಿಗೆ ಕಪ್ಪ ನೀಡುವುದಾಗಿಯೂ, ದಂಧೆ ನಿಲ್ಲಿಸುವುದಾಗಿಯೂ ಪತ್ರ ಬರೆದರು. ಹಾಗೆ ಮದರಾಸಿನಲ್ಲಿ ಗುಲಾಮಗಿರಿಗೆ ಕಡಿವಾಣ ಬಿತ್ತು. ಕ್ರಮೇಣ ಮೊಘಲರ ಅಧಿಕಾರ ದುರ್ಬಲಗೊಳ್ಳುತ್ತಿದ್ದಂತೆ ಮದರಾಸಿನಲ್ಲಿ ಮತ್ತೆ ಮಾನವ ಕಳ್ಳ ಸಾಗಾಟ ಮತ್ತೆ ಶುರುವಿಟ್ಟಿತು. ಕ್ಷಮಿಸಿ, ನಾನು ತುಂಬಾ ಮಾತನಾಡಿದೆನಿರಬೇಕು. ನೀವು ಕಥೆ ಮುಂದುವರಿಸಿ” ಎಂದು ಚಿಕ್ಕಪ್ಪ ಅಜ್ಜನಿಗೆ ಕಥೆ ಮುಂದುವರಿಸಲು ಅನುವು ಮಾಡಿಕೊಟ್ಟರು.

ಕಥೆಯ ಕೊನೆ ಮೊದಲು ಸ್ಥೂಲವಾಗಿ ಚಿಕ್ಕಪ್ಪನಿಗೆ ವಿವರಿಸಿಕೊಟ್ಟ ಅಜ್ಜ ಮತ್ತೆ ಕಥೆಗೆ ಮರಳಿದರು.

ಪೆರಾರ್ದೆ ತಿಂಗಳ ಕೊನೆಗೆ ಇದಿನಬ್ಬ ಹತ್ತಿದ್ದ ಹಡಗು ಮದರಾಸು ಬಂದರು ಹತ್ತಿರವಾಯಿತು‌. ತೀರದಲ್ಲಿರುವ ಉದ್ದುದ್ದ ತೆಂಗುಗಳು ಜಪಾನೀಯರ ನಮನದಂತೆ ಬಗ್ಗಿ ಸ್ವಾಗತ ಕೋರುತ್ತಿದ್ದವು. ಬಿಸಿಲಧಗೆ ಜೋರಿತ್ತು. ಹಡಗು ಗಕ್ಕನೆ ಹಿಡಿದು ನಿಲ್ಲಿಸಿದಂತೆ ದಡದ ಬಳಿ ನಿಶ್ಚಲವಾಯಿತು. ಪ್ರಯಾಣಿಕರು ಇಳಿಯತೊಡಗಿದರು. ಇಡೀ ಹಡಗಿನಲ್ಲಿದ್ದ ಸರಕುಗಳಿಗಿಂತ ಅವುಗಳನ್ನು ಹೊರಲು ಹೊರಗೆ ನಿಂತ ಕೂಲಿಯವರೇ ಹೆಚ್ಚಿದ್ದರು. ಅಲ್ಲಿ ಎತ್ತರಕ್ಕೆ ಆಗಸವನ್ನು ಮುತ್ತುವಂತಿದ್ದ ಮರದ ಕಂಬ, ಸಾಲದಕ್ಕೆ ಅದರಲ್ಲೊಂದು ದೊಡ್ಡ ರಾಟೆಗೆ ಸೆಣಬಿನ ಹಗ್ಗ ಜೋಡಿಸಿದ್ದರು. ‘ಐಸಾ ಐಸಾ’ ಎನ್ನುತ್ತಾ ಐದಾರು ಆಜಾನುಬಾಹುಗಳು ಅದರ ಕೀಲಿ ತಿರುಗಿಸಿದರೆ ಮರದ ದಿಮ್ಮಿ, ಭೀಮಾಕಾರದ ವಸ್ತುಗಳನ್ನು ಸರಾಗವಾಗಿ ಎತ್ತುತ್ತಿತ್ತು. ರಾಟೆಗೆ ಸಿಕ್ಕಿಸಿದ ಹಗ್ಗದ ಇನ್ನೊಂದು ತುದಿಯಲ್ಲಿ ಬೃಹತ್ ಕಬ್ಬಿಣದ ಕೊಂಡಿಯನ್ನೂ ಇರಿಸಲಾಗುತ್ತಿತ್ತು. ಆಗಾಗ ಯಂತ್ರಗಳು ಭಾರೀ ಸದ್ದು ಮಾಡುವಾಗ ಎಂತವರೂ ಬೆಚ್ಚಿ ಬೀಳುತ್ತಿದ್ದರು. ಹಡಗಿನಿಂದ ಇಳಿದು ದಾರಿ ಮಾಡಿಕೊಂಡು ಮಾಲಿಕ, ಇದಿನಬ್ಬನನ್ನು ಕರೆದುಕೊಂಡು ಬಂದರಿನ ತಪಾಸಣಾ ಅಧಿಕಾರಿಯ ಮುಂದೆ ಏನೋ ಬರೆದಿದ್ದ ಚೀಟಿ ತೋರಿಸಿದಾಗ ಇದಿನಬ್ಬನನ್ನು ಅಡಿಯಿಂದ ಮುಡಿಯವರೆಗೂ ನೋಡಿದವನೇ ‘ಹ್ಞೂಂ’ ಎಂದು ಮುಂದೆ ಸಾಗುವಂತೆ ಸನ್ನೆ ಮಾಡಿದ. ಜೀಪಿಗೆ ಕಟ್ಟಿದ್ದ ಕೈಗಾಡಿಯಂತೆ ಇದಿನಬ್ಬ ಮಾಲಿಕನ ನೆರಳನ್ನು ಹಿಂಬಾಲಿಸುತ್ತಿದ್ದ. ಎರಡೂ ಕೈಗಳಲ್ಲೂ ಕಟ್ಟುಗಳನ್ನು ಹಿಡಿದು ನಡೆಯುವ ಹುಡಗನ ಪಾದಗಳು ಭಾರದಿಂದ ಮರಳಲ್ಲಿ ಹೂತು ಹೂತು ಬರುತ್ತಿದ್ದವು. ಮರಳ ದಾರಿ ಬಿಟ್ಟು ಸ್ವಲ್ಪ ನಡೆದಾಗ ಪ್ರಶಾಂತ ರಸ್ತೆ. ಒಂದಷ್ಟು ಎತ್ತಿನ ಗಾಡಿಗಳು. ದೊಡ್ಡ ಪಟ್ಟಣವೇ ಎದುರಾಯಿತು. ಇಡೀ ಪಟ್ಟಣ ಪೂರಾ ಬೆಸ್ತರ ಮೀನು ವ್ಯಪಾರದ ಚೌಕಾಸಿಯಿಂದ ಗಿಜಿಗುಡುತ್ತಿತ್ತು. ಮೀನಿನ ಅಸಹ್ಯ ಕಮಟು ಇಡೀ ಬಂದರನ್ನೇ ವ್ಯಾಪಿಸಿತ್ತು. ಸಾಲದ್ದಕ್ಕೆ ಕಾಗೆಗಳ “ಕ್ರಾ..ಕ್ರಾ” ಕರ್ಕಶ ತುಂಬಿ ಹೋಗಿತ್ತು. ತುಂಬಿನಿಂತ ಪಟ್ಟಣದ ಜನರ ಮಧ್ಯೆ ಹುಳಗಳು ತೆವಳುವಂತೆ ದಾರಿ ಮಾಡುತ್ತಾ ಡಾಂಬರ್ ರಸ್ತೆಗೆ ತಲುಪುವಷ್ಟರಲ್ಲಿ ಬಿಸಿಲು ನೆತ್ತಿಯನ್ನು ಸುಡುತ್ತಿತ್ತು. ಅಸಾಧ್ಯ ಬಿಸಿಲ ಝಳಕ್ಕೆ ಇದಿನಬ್ಬ ಸಂಪೂರ್ಣ ಬೆವತೇ ಹೋಗಿದ್ದ. ಕಪ್ಪಗಿನ ಶರೀರ ಕೆಂಪಗೆ ಕೆಂಡದಂತೆ ಹೊಳೆಯುತ್ತಿತ್ತು. ಸ್ವಲ್ಪ ದೂರ ನಡೆದು ಒಂದು ಕಡೆ ನಿಂತರು. ಕೊಂಚ ಹೊತ್ತಿನಲ್ಲಿ ಎತ್ತಿನ ಗಾಡಿಯೊಂದು ಬರುವ ಸದ್ದು ಕೇಳತೊಡಗಿತು. ಗಾಡಿ ಹತ್ತಿರವಾದಂತೆ ಮಾಲಿಕ ಕೈ ತೋರಿಸಿದ. ಗಾಡಿ ತುಂಬಾ ಪ್ರಯಾಣಿಕರೇ ತುಂಬಿದ್ದರು. “ಉಂಗಲ್ಕ್ ಎಂಗೇ ಪೋನಂ”

ಗಾಡಿಯವನು ವಿಚಾರಿಸಿದ.

(ಈ ಕಾದಂಬರಿಯ ಮುಂದಿನ ಕಂತು, ಮುಂದಿನ ಭಾನುವಾರ ಪ್ರಕಟವಾಗಲಿದೆ)