ಬೇರೆಲ್ಲಾ ಪಂದ್ಯಗಳಂತೆ ಈ ಸ್ಪರ್ಧೆಯ ಕುರಿತಾಗಿ ಅನೇಕ ರೋಚಕ ಕಥೆಗಳೂ, ಸಾವುನೋವುಗಳೂ, ಸಾಧನೆಗಳೂ ಅಡಗಿವೆ. ೧೯೯೮ರ ಪಂದ್ಯದ ಸಮಯದಲ್ಲಿ ಸಂಭವಿಸಿದ ಅಸಾಧಾರಣ ತೀವ್ರ ಗಾಳಿಯಿಂದಾಗಿ ಐದು ದೋಣಿಗಳು ಮುಳುಗಿ, ಆರು ಜನ ಸತ್ತರಂತೆ. ಈ ದುರಂತದ ಕಾರಣದಿಂದ ಸ್ಪರ್ಧೆಯ ನಿಯಮಾವಳಿಗಳನ್ನ ಮತ್ತಷ್ಟು ಕಠಿಣಗೊಳಿಸಿದರಂತೆ. ಈ ವಿಷಯವನ್ನು ನನ್ನ ಗೆಳತಿಯ ಗಂಡ ವಿವರಿಸುತ್ತಿದ್ದಾಗ ನನ್ನ ತಾಯಿ ಅದೇ ವರ್ಷ ಆಗಸ್ಟ್ ತಿಂಗಳಲ್ಲಿ ನಡೆದ ಹಿಮಾಲಯದ ಪರ್ವತ ಕುಸಿತದಲ್ಲಿ ಮಡಿದಿದ್ದನ್ನು ಅವರಿಗೆ ಹೇಳಿದೆ. ಅವರು ಆಶ್ಚರ್ಯಪಡುತ್ತಾ, ಆ ವರ್ಷ ಆಸ್ಟ್ರೇಲಿಯಾದಲ್ಲಿ ಹಲವಾರು ಕಡೆ ಹವಾಮಾನ ವೈಪರಿತ್ಯಗಳು, ದುರಂತಗಳು ಸಂಭವಿಸಿದ್ದನ್ನು ಹೇಳಿದರು.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ

 

ಸಧ್ಯದ ಕೊರೊನ ವೈರಸ್-ಬಾಧಿತ ಜೀವನ ಎರಡು ಮುಖಗಳನ್ನು ಪ್ರತಿಬಿಂಬಿಸುತ್ತಿದೆ. ಅಥವಾ ಹಾಗೆನ್ನಿಸುತ್ತಿದೆ. ಒಂದು, ಸ್ವಲ್ಪಮಟ್ಟಿಗಾದರೂ ನಿತ್ಯಜೀವನದಲ್ಲಿ ಮೌನ ಮತ್ತು ನಿಶ್ಯಬ್ದ ಪ್ರವೇಶಿಸಿದೆ. ಮನೆಯಲ್ಲೇ ಇರಿ ಎಂಬ ಆಜ್ಞೆಯನ್ನು ಪಾಲಿಸುತ್ತಾ ನಾವೆಲ್ಲಾ ಮೌನದ ಕ್ಷಣಗಳನ್ನು ಆಸ್ವಾದಿಸುತ್ತಾ ನಿಧಾನವಾಗಿ ಒಂಥರಹದ ಭ್ರಮಾಲೋಕಕ್ಕೆ ಕಾಲಿಡುತ್ತಿದ್ದೇವೇನೋ.

ಎರಡನೆಯದು, ಕಾಡುವ, ಹೆದರಿಸುವ, ಕಂಗೆಡಿಸುವ ಮೌನವನ್ನು ಮುರಿಯಲು ಏನೆಲ್ಲಾ ಕಸರತ್ತುಗಳನ್ನು ಹುಟ್ಟುಹಾಕುತ್ತಿದ್ದೀವಿ. ಆಸ್ಟ್ರೇಲಿಯಾದಲ್ಲಿ ಈಗ ಸರ್ಕಾರದ ಸೂಚನೆಯಂತೆ ಜಿಮ್, ಆಟದ ಮೈದಾನಗಳನ್ನೂ ಕೂಡ ಮುಚ್ಚಿದ್ದಾರೆ. ಆದರೆ ಹೊರಾಂಗಣ ಪರಿಸರದಲ್ಲಿ ಜನ ಓಡಾಡುವುದಕ್ಕೆ, ವ್ಯಾಯಾಮ ಮಾಡುವುದಕ್ಕೆ, ತಾಜಾ ಗಾಳಿ ಹೀರುವುದಕ್ಕೆ ಬೇಕಾದಷ್ಟು ಹಸಿರು ತುಂಬಿದೆ. ಪ್ರಕೃತಿಯಂತೂ ಮನುಷ್ಯರಿಗೆ ರಜಾಚೀಟಿ ಕೊಟ್ಟಿಲ್ಲ, ನಮ್ಮ ಪುಣ್ಯ!

ನಾವು ಹೋಗುವ sailing ಕ್ಲಬ್ ಕೂಡ ಸದ್ಯಕ್ಕೆ ಗುಡ್ ಬೈ ಹೇಳಿದೆ. ಆದರೆ, sailing ತರಬೇತಿಯನ್ನು ನಡೆಸುವ ನೈಸರ್ಗಿಕ ಸರೋವರ ಎಂದಿನಂತೆ ಇಂದೂ ನಗುನಗುತ್ತಿದೆ. ಸ್ವಂತ ದೋಣಿಗಳಿರುವವರು ಎಚ್ಚರಿಕೆ ವಹಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಬೇರೆಲ್ಲಾ ಸರ್ಕಾರಿ ಸೂಚನೆಗಳನ್ನು ಪಾಲಿಸುತ್ತಾ ಸರೋವರದ ಲಭ್ಯತೆಯನ್ನು ಪಡೆದುಕೊಳ್ಳಬಹುದು ಎಂದು ಕ್ಲಬ್ ಹೇಳಿದೆ. Sailing ಇಷ್ಟಪಡುವ ನಾವು ತರಬೇತಿ ರದ್ದಾಗಿದ್ದಕ್ಕೆ ಬೇಸರಿಸಿಕೊಂಡಿದ್ದೀವಿ. ಬೇಸರದ ಭಾವನೆಯಲ್ಲಿದ್ದಾಗ ನೆನೆಪಾಗಿದ್ದು ಸಿಡ್ನಿ ಟು ಹೋಬಾರ್ಟ್ ಹಾಯಿದೋಣಿ ಸ್ಪರ್ಧೆ (Sydney Hobart Yacht Race).

ಇದರ ಬಗ್ಗೆ ಹೋದ ವರ್ಷವೇ ಬರೆಯಬೇಕೆಂದಿದ್ದೆ. ಕಳೆದ ೨೦೧೯ ರಲ್ಲಿ ಈ ಸ್ಪರ್ಧೆಗೆ ಎಪ್ಪತೈದನೇ ವರ್ಷ ತುಂಬಿತು. ಆದರೆ ಅದೇ ಡಿಸೆಂಬರ್ ಕೊನೆಯಲ್ಲಿ ನಾವು ಕ್ಯಾಂಪಿಂಗ್ ನಲ್ಲಿದ್ದೆವು. ಹಾಗಾಗಿ ಎಪ್ಪತೈದನೆಯ ಸ್ಪರ್ಧೆಯ ಪ್ರಸಾರವನ್ನ ನೋಡಲಾಗಲಿಲ್ಲ. ಲೇಖನ ಹುಟ್ಟಲಿಲ್ಲ. ಈಗ ಅದು ಮೈತಳೆದಿದೆ. ಕೊರೊನ ವಿಷಯ ತಮ್ಮನ್ನು ಅತಿಯಾಗಿ ಆಕ್ರಮಿಸಲು ಬಿಡದೆ, ಅದನ್ನು ಮಿದುಳಿನಿಂದ ಹೊರಗಟ್ಟಲು ಜನರು ನಾನಾವಿಧದ ಉಪಾಯಗಳನ್ನ ಅನುಸರಿಸುತ್ತಿರುವ ಈ ದಿನಗಳಲ್ಲಿ ನನಗೆ ಸಿಡ್ನಿ ಟು ಹೋಬಾರ್ಟ್ ದೋಣಿ ಸ್ಪರ್ಧೆ ನೆನಪಿಗೆ ಬಂದದ್ದು, ಬರೆಯುತ್ತಿರುವುದು ಹಾಯೆನಿಸಿದೆ. ಒಂದರ್ಥದಲ್ಲಿ ಯೋಚಿಸಿದರೆ ಶಾರೀರಿಕವಾಗಿ ನೀರಿನ ಮೇಲಿಲ್ಲದಿದ್ದರೂ ಮಾನಸಿಕವಾಗಿ ನೀಲಿ ತೆರೆಗಳನ್ನು ಧ್ಯಾನಿಸುತ್ತಿರುವುದು ಒಳ್ಳೆಯ ವರವಾಗಿದೆ!!

ಹತ್ತೊಂಭತ್ತು ವರ್ಷಗಳ ಹಿಂದೆ ನಾನು ಮೊಟ್ಟಮೊದಲ ಬಾರಿ ಟಿವಿ ಪರದೆಯ ಮೇಲೆ ಈ ಹಾಯಿದೋಣಿ ಸ್ಪರ್ಧೆಯ ಪ್ರಸಾರವನ್ನು ನೋಡಿದಾಗ ಮೈನವಿರೆದ್ದಿತ್ತು. ಬೆನ್ನುಹುರಿ ನೆಟ್ಟಗಾಗಿ ರೋಮಾಂಚನವೆಂಬ ಪದಕ್ಕೆ ಇನ್ನೊಂದು ಹೊಸ ಅರ್ಥ ಸಿಕ್ಕಿತ್ತು. ವಿಸ್ತಾರವಾದ, ಹೊಳೆಹೊಳೆಯುವ, ನೀಲಿಬಣ್ಣದ ಕಡಲ ಬೆನ್ನೇರಿ, ಮಾಂತ್ರಿಕ ತೆರೆಗಳ ತೇರನ್ನೇರಿ ಉಘೇ ಎಂದು ಹೊರಟ ಬೆಳ್ಳಿಚುಕ್ಕೆ ಹಾಯಿದೋಣಿಗಳ (yacht) ಮೆರವಣಿಗೆಯನ್ನು ವೀಕ್ಷಿಸುತ್ತಿದ್ದ ಕಣ್ಣಪಾಪೆ ಸಿಡಿಯುವಷ್ಟು ಕಣ್ಣು ಅಗಲವಾಗಿತ್ತು. ಬಿಟ್ಟ ಬಾಯಿ ಹಾಗೆ ತೆರೆದಿತ್ತು. ಒಳನಾಡು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದ ನನಗೆ ಕಡಲಿನ ಪರಿಚಯ ಅಷ್ಟಕ್ಕಷ್ಟೇ ಸೀಮಿತವಾಗಿತ್ತು. ಕಡು ಚಳಿ ತುಂಬಿದ ದೇಶ ಕೆನಡಾಗೆ ಹೊರಡಲು ತಯಾರಿ ಮಾಡಿಕೊಂಡಿದ್ದವಳನ್ನ ಆಸ್ಟ್ರೇಲಿಯಾ ಅದೇನೊ ಮಾಯಮಂತ್ರ ಮಾಡಿ ತನ್ನಲ್ಲಿಗೆ ಬರಮಾಡಿಕೊಂಡು ತನ್ನೊಳಗೆ ಸೇರಿಸಿಕೊಂಡುಬಿಟ್ಟಿತ್ತು. ಸಂಪೂರ್ಣ ಅಪರಿಚಿತ, ಕಡಲತೀರದ ಚಿಕ್ಕಪಟ್ಟಣವಾದ ವಲೊಂಗಾಂಗಿನಲ್ಲಿ ರಾತ್ರೋರಾತ್ರಿ ಬಂದಿಳಿದು ಹೊಸಜೀವನ ಆರಂಭಿಸಿದಾಗ ಮರುದಿನ ಬೆಳಗ್ಗೆ ಕಡಲಿನ ಅಪರಿಚಿತ ವಾಸನೆ ಮೂಗಿಗೆ ಬಡಿದು ಅಲ್ಲಿಂದ ಮುಂದೆ ಪೂರ್ವದಿಕ್ಕಿನ ಪೂರ್ತಿ ಅವರಿಸಿದ್ದ ಆ ನೀಲಿರಾಶಿಯ ಪರಿಚಯವಾಗಲೇಬೇಕಿತ್ತು. ಇದ್ದಕ್ಕಿದ್ದಂತೆ ನನ್ನನ್ನು ಕೇಳದೆಯೇ, ಊಹಿಸದಿದ್ದ ರೀತಿಯ ರೋಮಾಂಚನ ಜೀವನದಲ್ಲಿ ನುಸುಳಿ ಕಣ್ಣು ಮಿಟುಕಿಸಿತ್ತು. ಕಡಲಿನ ಜೊತೆ ನನ್ನ ಹೊಸಪ್ರೀತಿ ಶುರುವಾಗಿತ್ತು.

ಆ ವರ್ಷ ಕ್ರಿಸ್ಮಸ್ ಹಬ್ಬದ ಮರುದಿನ ಅಂದರೆ ಪ್ರತಿವರ್ಷವೂ ಡಿಸೆಂಬರ್ ಇಪ್ಪತ್ತಾರರಂದು ಆರಂಭವಾಗುವ ಈ ವಿಶಿಷ್ಟ ಹಾಯಿದೋಣಿ ಸ್ಪರ್ಧೆಯನ್ನು ವೀಕ್ಷಿಸಿದಾಗ ಅದು ನನ್ನ ಜೀವನದ ಹೊಸ ಪ್ರೇಮಕಾವ್ಯವೇನೋ ಅನ್ನಿಸಿದ ಉತ್ಪ್ರೇಕ್ಷೆಯ ಕ್ಷಣವೂ ಹುಟ್ಟಿತ್ತು. ನನ್ನ ಉತ್ಸಾಹವನ್ನು ಗಮನಿಸಿ, ಅಭಿಮಾನಿಸಿ, ನನ್ನ ಆಸ್ಟ್ರೇಲಿಯನ್ ಗೆಳತಿಯ ಗಂಡ ಅದಕ್ಕೆ ಇಂಬು ಕೊಟ್ಟು ನೀರೆರೆದು ಕಣ್ಣಿಗೆ ಕಟ್ಟುವಂತೆ ಸ್ಪರ್ಧೆಯ ಇತಿಹಾಸವನ್ನು ವಿವರಿಸಿದ್ದರು. ನಮ್ಮಿಬ್ಬರ ಗುರು-ಶಿಷ್ಯ ಸ್ಟೈಲ್ ನೋಡಿ ನನ್ನ ಗೆಳತಿ ಬಿದ್ದೂಬಿದ್ದೂ ನಕ್ಕಿದ್ದರು.

ಸ್ಪರ್ಧೆಯ ಆರಂಭಕ್ಕೆ ಇರುವ ಹಿನ್ನೆಲೆ ಕುತೂಹಲಕಾರಿಯಾಗಿದ್ದು. ಪೀಟರ್ ಲ್ಯೂಕ್ ಎಂಬಾತ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಒಂದು ಕ್ಲಬ್ ಆರಂಭಿಸಿ ತಮ್ಮ ಹಾಯಿದೋಣಿ ವಿಹಾರವನ್ನು ಯೋಜಿಸಿದ್ದನಂತೆ. ಆ ಸಮಯದಲ್ಲಿ ಅವನಿಗೆ ವಿಹಾರಕ್ಕಿಂತಲೂ ಸ್ಪರ್ಧೆಯಾದರೆ ಹೆಚ್ಚಿನ ಜನರು ಪಾಲ್ಗೊಳ್ಳುವಂತಾಗುತ್ತದೆ, ಎಲ್ಲರ ಉತ್ಸಾಹದ ಮಜಲು ಬೇರೆಯಾಗುತ್ತದೆ, ಎನ್ನುವ ಉಪದೇಶ ಸಿಕ್ಕಿತಂತೆ. ಹಾಗೆಂದು ಉಪದೇಶ ಮಾಡಿದ್ದು ಬ್ರಿಟಿಷ್ ನೌಕಾಪಡೆಯಲ್ಲಿ ಕ್ಯಾಪ್ಟನ್ ಆಗಿದ್ದ ಜಾನ್ ಇಲ್ಲಿಂಗ್ವರ್ತ್. ಹೇಳಿಕೇಳಿ, ಬ್ರಿಟಿಷರು ಮತ್ತು ಯೂರೋಪಿಯನ್ನರು ನೌಕಾಪಡೆ ಕಲೆ ಮತ್ತು ವಿದ್ಯೆಗಳಲ್ಲಿ ನಿಷ್ಣಾತರು. ಜಾನ್ ಮಾತು ಕೇಳಿ ಪ್ರಭಾವಿತನಾದ ಪೀಟರ್ ಮತ್ತು ತಂಡ ಸಾಕಷ್ಟು ಶ್ರಮಪಟ್ಟು ಹೊಸ ಯೋಜನೆಗೆ ಜೀವ ತುಂಬಿದರು. ನ್ಯೂ ಸೌತ್ ವೇಲ್ಸ್ ರಾಜ್ಯದ ರಾಜಧಾನಿಯಾದ ಸಿಡ್ನಿ ನಗರದ ಸಮುದ್ರ ತೀರದಿಂದ ಹೊರಟು ದೇಶದ ಕೆಳಗಡೆ ಇರುವ ಟ್ಯಾಸ್ಮೆನಿಯಾ ರಾಜ್ಯದ ರಾಜಧಾನಿಯಾದ ಹೋಬಾರ್ಟ್ ನಗರದ ಸಮುದ್ರತೀರವನ್ನು ತಲುಪುವ ಸ್ಪರ್ಧೆಯನ್ನು ರೂಪಿಸಿದರು. ಮೊದಲ ಸ್ಪರ್ಧೆ ಜರುಗಿದ್ದು ೧೯೪೫ ರಲ್ಲಿ. ಬರುಬರುತ್ತಾ ದೇಶವಿದೇಶೀಯರಿಂದ ಮೆಚ್ಚುಗೆ ಪಡೆದು ಸ್ಪರ್ಧೆಗೆ ಇನ್ನೂ ಹೆಚ್ಚು ಕಳೆಕಟ್ಟಿ ಈಗ ಪ್ರಪಂಚದ ಅತ್ಯಂತ ಸುಪ್ರಸಿದ್ಧ ಮೂರು ಸಮುದ್ರ ಹಾಯಿದೋಣಿ ಪಂದ್ಯಗಳಲ್ಲಿ ಒಂದೆನಿಸಿದೆ.

ಭಾರಿ ಶ್ರೀಮಂತರಿಗೆ ಮಾತ್ರ ಸಾಧ್ಯವೆನಿಸಿದ ಈ ಪಂದ್ಯಕ್ಕೆ ಬಲು ಪ್ರತಿಷ್ಠೆ ಮತ್ತು ಗೌರವಗಳಿವೆ. ಪಂದ್ಯವನ್ನು ಪ್ರವೇಶಿಸುವ ಪ್ರತಿ ಹಾಯಿದೋಣಿಯ ತಂಡದ ಸದಸ್ಯರಾಗಲು (crew) ಭಾರಿ ಪೈಪೋಟಿಯಿದೆ. ತಂಡವನ್ನು ಸೇರಲು ಕಟ್ಟುನಿಟ್ಟಿನ ನಿಯಮಗಳು, ನಿರ್ದೇಶನ, ಅರ್ಹತಾಪಟ್ಟಿ ಮತ್ತು ನಿರೀಕ್ಷೆಗಳಿವೆ. ಸ್ಪರ್ಧೆ ಗೆದ್ದು Tattersall’s ಕಪ್ಪನ್ನು ತಮ್ಮದಾಗಿಸಿಕೊಳ್ಳುವ ನಿರೀಕ್ಷೆಗಿಂತಲೂ ಪ್ರತಿ ದೋಣಿಯ ಕ್ಯಾಪ್ಟನ್ ಮತ್ತು ಅವರ ತಂಡದವರು ಅಷ್ಟೇಕೆ ಪಂದ್ಯವನ್ನು ವೀಕ್ಷಿಸುವ ಸಾವಿರಾರು ಸಾರ್ವಜನಿಕರ ದೃಷ್ಟಿಯೆಲ್ಲ ಇರುವುದು ಯಾವ ದೋಣಿ ಅಂತಿಮ ವಿಜಯದ ಗೆರೆಯನ್ನು ದಾಟುತ್ತದೆ ಅನ್ನುವುದರ ಕಡೆಗೇ. ಏಕೆಂದರೆ, ಸಮುದ್ರದ ನೀಲಿಯನ್ನು ಸೀಳಿಕೊಂಡು ಅಲೆಗಳಲ್ಲಿ ತನ್ನದೇ ಬೆಳ್ಳಿಗೆರೆ ಎಳೆಯುತ್ತಾ ಬಳುಕುತ್ತಾ, ತೇಲಾಡುತ್ತಾ, ಓಲಾಡುತ್ತಾ ಹರಿದುಬರುವ ದೋಣಿ ವಿಜಯದ ಗೆರೆಯನ್ನು ಮುಟ್ಟುತ್ತದಲ್ಲಾ – ಅದುವೇ ಅತ್ಯಂತ ರೋಮಾಂಚನಕಾರಿ ಕ್ಷಣ. Tattersall’s Cup ಪಡೆಯಲು ಇರುವ ಅರ್ಹತೆಯೇ ಬೇರೆ. ದೋಣಿಯ ಉದ್ದಗಲ, ಭಾರ, ಅದರ ಹಾಯಿ ಎಲ್ಲವನ್ನೂ ಪರಿಶೀಲಿಸಿ ಅಂಕಿಅಂಶಗಳನ್ನು ಕೂಡಿಕಳೆದು ಆ ಕಪ್ಪನ್ನು ನೀಡಲಾಗುತ್ತದೆ.

ಒಂದರ್ಥದಲ್ಲಿ ಯೋಚಿಸಿದರೆ ಶಾರೀರಿಕವಾಗಿ ನೀರಿನ ಮೇಲಿಲ್ಲದಿದ್ದರೂ ಮಾನಸಿಕವಾಗಿ ನೀಲಿ ತೆರೆಗಳನ್ನು ಧ್ಯಾನಿಸುತ್ತಿರುವುದು ಒಳ್ಳೆಯ ವರವಾಗಿದೆ!!

Sailing ನಲ್ಲಿ ಸಂಪೂರ್ಣ ತರಬೇತಿ ಪಡೆಯಲು ಸಾಕಷ್ಟು ವರ್ಷಗಳು ಹಿಡಿಯುತ್ತವೆ. ಅದರಲ್ಲೂ ನಾವು ತರಬೇತಿ ಪಡೆದಿದ್ದು ಸಿಹಿನೀರಿನ ಪರಿಸರದಲ್ಲಾ ಅಥವಾ ಸಮುದ್ರದಲ್ಲೊ ಎನ್ನುವುದು ಕೂಡಾ ಬಹಳ ಮುಖ್ಯವಾದ ಅಂಶ. ಸಮುದ್ರ ಪರಿಸರದಲ್ಲಿ ಸೇಲಿಂಗ್ ಕಲಿಯಲು, ಹಂತಹಂತವಾಗಿ ತರಬೇತಿ ಪಡೆದು ಕಡೆಗೆ Sailor ಎಂದು ಗುರುತಿಸುವ ಅಂತಾರಾಷ್ಟ್ರೀಯ ಮಟ್ಟದ ಅರ್ಹತಾ ಪತ್ರವನ್ನು ಪಡೆಯುವುದಕ್ಕೆ ಬಹಳ ಕಠಿಣ ಪರಿಶ್ರಮ, ಸಮಯ, ಹಣಕಾಸಿನ ವೆಚ್ಚ ತಗಲುತ್ತದೆ. ಇದರ ಬಗ್ಗೆ ಹಲವಾರು ರೀತಿಯ ಆಕ್ಷೇಪಣೆಗಳೂ, ವಾದಗಳೂ ಕೂಡ ಇವೆ. ಹೇಗೆಂದರೆ, ಪಾಶ್ಚಾತ್ಯದೇಶಗಳಲ್ಲಿ ಪರ್ವತಾರೋಹಣ ಮಾಡಲು ಅದನ್ನು ಒಂದು ವಿದ್ಯೆಯನ್ನಾಗಿ, ಕಲೆಯನ್ನಾಗಿ ಸ್ವೀಕರಿಸಿ ಅದನ್ನು ಕಲಿತು ತರಬೇತಿ ಪಡೆಯುತ್ತಾರೆ. ಇದು ಒಂದು ವಿಧಾನವಾದರೆ, ಇನ್ನೊಂದು ವಿಧಾನ ಅದನ್ನು ಸ್ವಾಭಾವಿಕವಾಗಿ, ಖರ್ಚುವೆಚ್ಚವಿಲ್ಲದೆ, ಆಡಂಬರವಿಲ್ಲದ ಅನೌಪಚಾರಿಕ ಕಲಿಕೆ. ಹಿಮಾಲಯದ ತಪ್ಪಲಲ್ಲಿ ವಾಸಿಸುವವರು ಹೀಗೇ ಕಲಿಯುತ್ತಾರೇನೋ.

ಈ ಪಂದ್ಯದಲ್ಲಿ ಭಾಗವಹಿಸುವ ಹಾಯಿದೋಣಿಗಳ ತಂಡಕ್ಕೆ ಸೇರಿಕೊಳ್ಳಲು ಪ್ರತಿಯೊಬ್ಬ sailor ಗೂ ಸರಿಯಾದ ಅರ್ಹತಾ ಪತ್ರವಿರಬೇಕು, ಇಂತಿಷ್ಟು ವರ್ಷಗಳ ಅನುಭವವಿರಬೇಕು. ಏಕೆಂದರೆ, ಸ್ಪರ್ಧೆ ನಡೆಯುವುದು Tasman ಸಮುದ್ರದಲ್ಲಾದರೂ ಪಂದ್ಯದ ಹಾದಿಯಿರುವುದು ಪೆಸಿಫಿಕ್ ಸಾಗರದ ಭಾಗವಾದ Bass Strait ನೀರು. ಆಸ್ಟ್ರೇಲಿಯನ್ ಬೇಸಗೆಯಲ್ಲಿ ಈ ಜಲಸಂಧಿಯಲ್ಲಿ ನಡೆಯುವ ಕಡಲಿನ ಚೇಷ್ಟೆಗಳೇ ಬೇರೆ ತರಹದ್ದು. ಅದರ ಅನುಭವ ಸಿಡ್ನಿ ನಗರದ ಕೆಳಗಡೆ ಇರುವ ವಲೊಂಗೊಂಗ್ ಪ್ರದೇಶದಲ್ಲಿ ವರ್ಷಗಟ್ಟಲೆ ವಾಸಿಸಿದ ನನಗೆ ಚೆನ್ನಾಗಿಯೇ ಆಗಿದೆ. ಎರಡು ದಿನ ಬೇಸಗೆಯ ಬಿಸಿಯಿದ್ದರೆ ಮೂರುದಿನ ಪೆಸಿಫಿಕ್ ಸಾಗರದಿಂದ ಅಪ್ಪಳಿಸುವ ಚಳಿಗಾಳಿ ಮತ್ತು ವಾತಾವರಣದಲ್ಲಿನ ಕುಸಿತ. ಒಮ್ಮೊಮ್ಮೆ ಬೇಸಿಗೆಯ ಡಿಸೆಂಬರಿನಲ್ಲಿ ನಾವೆಲ್ಲಾ ಸ್ವೆಟರ್ ಹಾಕಿಕೊಳ್ಳುವ ಸಂದರ್ಭ ಬರುತ್ತಿತ್ತು. ಈ ಕಾಲದಲ್ಲಿ ಪೆಸಿಫಿಕ್ ಸಾಗರದಲ್ಲಿ ತೀವ್ರ ಗತಿಯ ಮಾರುತವುಂಟಾಗಿ ಕಡಲಿನ ಮನಃಸ್ಥಿತಿಯಲ್ಲಿ ಚಂಚಲವುಂಟಾಗುತ್ತದೆ. ಜಲಸಂಧಿಯಲ್ಲಿ ಕಡಲ ಅಲೆಗಳು ಗಿರಕಿ ಹೊಡೆಯುತ್ತವೆ. ಅದರಲ್ಲೂ Flinders ದ್ವೀಪವನ್ನು ತಲುಪುವ ಮುಂಚೆ ವಾತಾವರಣದ ವಾಯುಮಾನ ಕುಸಿತ, ಶೀತ ಗಾಳಿ, ಗಿರಕಿ ಹೊಡೆಯುವ ಕಡಲು, ಭಾರಿ ಅಲೆಗಳ ಅಪ್ಪಳಿಕೆ ಕಟ್ಟಿಟ್ಟದ್ದು. ಇಂತಹ ಪರಿಸ್ಥಿತಿಯಲ್ಲೇ ಈ ಸ್ಪರ್ಧೆ ನಡೆಯುವುದು, ಮುಂದುವರೆಯುವುದು.

ಭಾಗವಹಿಸಿದ ನಾವಿಕರೆಲ್ಲರ ಮನಃಸ್ಥಿತಿಗೆ ಇದೊಂದು ಮಹಾನ್ ಸತ್ವಪರೀಕ್ಷೆ. ಹಾಗಾಗಿ ಸ್ವಲ್ಪಮಟ್ಟಿಗೆ ಪ್ರತಿಯೊಬ್ಬನಾವಿಕ ಕೂಡ ಎದೆ ಗಟ್ಟಿಮಾಡಿಕೊಂಡೇ ಪಂದ್ಯಕ್ಕಿಳಿಯಬೇಕು. ಅದನ್ನು ವೀಕ್ಷಿಸುವವರ ಎದೆಯೂ ಹೊಡೆದುಕೊಳ್ಳುತ್ತಿರುತ್ತದೆ. ಪ್ರತಿವರ್ಷವೂ ಅನೇಕ ನಾವಿಕರು ಮತ್ತು ಹಲವಾರು ಹಾಯಿದೋಣಿಗಳು ಪಂದ್ಯದ ನಡುವಿನಲ್ಲೇ ಅದಕ್ಕೆ ಗುಡ್ ಬೈ ಹೇಳುತ್ತಾರೆ.

ಬೇರೆಲ್ಲಾ ಪಂದ್ಯಗಳಂತೆ ಈ ಸ್ಪರ್ಧೆಯ ಕುರಿತಾಗಿ ಅನೇಕ ರೋಚಕ ಕಥೆಗಳೂ, ಸಾವುನೋವುಗಳೂ, ಸಾಧನೆಗಳೂ ಅಡಗಿವೆ. ೧೯೯೮ರ ಪಂದ್ಯದ ಸಮಯದಲ್ಲಿ ಸಂಭವಿಸಿದ ಅಸಾಧಾರಣ ತೀವ್ರ ಗಾಳಿಯಿಂದಾಗಿ ಐದು ದೋಣಿಗಳು ಮುಳುಗಿ, ಆರು ಜನ ಸತ್ತರಂತೆ. ಈ ದುರಂತದ ಕಾರಣದಿಂದ ಸ್ಪರ್ಧೆಯ ನಿಯಮಾವಳಿಗಳನ್ನ ಮತ್ತಷ್ಟು ಕಠಿಣಗೊಳಿಸಿದರಂತೆ. ಈ ವಿಷಯವನ್ನು ನನ್ನ ಗೆಳತಿಯ ಗಂಡ ವಿವರಿಸುತ್ತಿದ್ದಾಗ ನನ್ನ ತಾಯಿ ಅದೇ ವರ್ಷ ಆಗಸ್ಟ್ ತಿಂಗಳಲ್ಲಿ ನಡೆದ ಹಿಮಾಲಯದ ಪರ್ವತ ಕುಸಿತದಲ್ಲಿ ಮಡಿದಿದ್ದನ್ನು ಅವರಿಗೆ ಹೇಳಿದೆ. ಅವರು ಆಶ್ಚರ್ಯಪಡುತ್ತಾ, ಆ ವರ್ಷ ಆಸ್ಟ್ರೇಲಿಯಾದಲ್ಲಿ ಹಲವಾರು ಕಡೆ ಹವಾಮಾನ ವೈಪರಿತ್ಯಗಳು, ದುರಂತಗಳು ಸಂಭವಿಸಿದ್ದನ್ನು ಹೇಳಿದರು. ಮತ್ತದೇ ರೀತಿ ೨೦೦೪ ರಲ್ಲೂ ತೀವ್ರಗಾಳಿ ಉಂಟಾಗಿ ಹಾಯಿದೋಣಿ ಸ್ಪರ್ಧೆಗೆ ಆತಂಕ ತಂದು ಅನೇಕ ದೋಣಿಗಳು ಹಿನ್ನಡೆದರೂ ಕೂಡ ಯಾವುದೇ ಸಾವುನೋವು ಉಂಟಾಗಿರಲಿಲ್ಲವಂತೆ.

ಈ ಹಾಯಿದೋಣಿ ಸ್ಪರ್ಧೆಯಲ್ಲಿ ಹೆಂಗಸರ ಭಾಗವಹಿಸುವಿಕೆ ಚೆನ್ನಾಗಿದೆಯಾದರೂ ಹೆಚ್ಚಿನ ಕಡೆ ಕಾಣಿಸುವ ಲಿಂಗ ತಾರತಮ್ಯತೆ ಇಲ್ಲೂ ಇದೆ ಎಂಬ ಆಪಾದನೆಗಳಿವೆ. ಖುಷಿ ಕೊಡುವ ವಿಷಯವೆಂದರೆ ೨೦೦೫ ರಲ್ಲಿ Adrienne Cahalan ಮತ್ತು ೨೦೧೧ ರಲ್ಲಿ Jessica Watson ಪಾಲ್ಗೊಂಡು ಪಂದ್ಯದಲ್ಲಿ ಹೆಂಗಸರು ಭಾಗವಹಿಸುವುದನ್ನು ಪ್ರೋತ್ಸಾಹಿಸಿದರು. ಈ ಇಬ್ಬರೂ ದೋಣಿಯಲ್ಲಿ ಕೂತು ಪ್ರಪಂಚವನ್ನು ಸುತ್ತಿ ಬಂದ ಹೆಗ್ಗಳಿಕೆಗೆ ಪಾತ್ರರಾದವರು. ಜೆಸ್ಸಿಕಾ ತನ್ನ ಕೇವಲ ಹದಿನಾರು ವರ್ಷ ವಯಸ್ಸಿನಲ್ಲೇ ಯಾರ ಸಹಾಯವೂ ಇಲ್ಲದೆ, ಒಬ್ಬಂಟಿಯಾಗಿ ತನ್ನ ಪುಟ್ಟ ಹಾಯಿದೋಣಿಯನ್ನು ನಡೆಸುತ್ತಾ ಪ್ರಪಂಚವನ್ನು ಪ್ರದಕ್ಷಿಣೆ ಹಾಕಿಬಂದ ಸಾಧಕಿ. ಇತ್ತೀಚೆಗೆ, ೨೦೧೮ರಲ್ಲಿ ಸ್ಟೇಸಿ ಜ್ಯಾಕ್ಸನ್ ಮತ್ತವರ ಪೂರ್ತಿ ಮಹಿಳಾ ತಂಡ ಈ ಸ್ಪರ್ಧೆಯನ್ನು ಯಶಸ್ವಿಯಾಗಿ ಮುಗಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

(Adrienne Cahalan)

ಹಿಂದೊಮ್ಮೆ ನಾವು ಇಂಗ್ಲೆಂಡಿನಲ್ಲಿ ವಾಸಿಸುತ್ತಿದ್ದಾಗ ನಮ್ಮ ಪಕ್ಕದ ಮನೆಯವರ ಉತ್ತೇಜನದಿಂದ ಸ್ಥಳೀಯ ಸೇಲಿಂಗ್ ಕ್ಲಬ್ಬಿಗೆ ಸೇರಿ ನಾನು ಮತ್ತು ಮಗರಾಯ ತರಬೇತಿ ಆರಂಭಿಸಿದೆವು. ಮೊದಲ ತರಗತಿಯಲ್ಲಿ ಸೇಲಿಂಗ್ ದೋಣಿಯೆಂದರೆ ಏನು, ಯಾಂತ್ರಿಕ ಸಹಾಯವಿಲ್ಲದೆ ನಾವು ಅದನ್ನು ಸಂಪೂರ್ಣವಾಗಿ ನಮ್ಮ ಕೌಶಲ್ಯದಿಂದಲೇ ಹೇಗೆ ನಡೆಸಬೇಕಾಗುತ್ತದೆ ಎಂದು ತರಬೇತಿದಾರರು ಮಾತನಾಡಿ ಕೆಲ ಟೆಕ್ನಿಕಲ್ ವಿಷಯಗಳನ್ನು ವಿವರಿಸಿದರು. ಅದಾಗಲೇ ಇಂಗ್ಲೆಂಡಿನಲ್ಲಿ ಚಳಿ ಶುರುವಾಗಿತ್ತು. ನನಗ್ಯಾಕೆ Wet Suit ಹಾಕಿಕೊಂಡು ಚಳಿಗಾಲ ಪೂರ್ತಿ ಮೈಕೈ ಕೊರೆಯುವ ನೀರಿನಲ್ಲಿ ಸೇಲಿಂಗ್ ಕಲೆ ಕರಗತ ಮಾಡಿಕೊಳ್ಳುವ ಕನಸು ಬಿತ್ತೋ, ಎಂದು ನನ್ನನ್ನೇ ಪ್ರಶ್ನಿಸಿಕೊಂಡು, ಛೇ ಛೇ, ಅದು ಕನಸಾಗೇ ಉಳಿಯಲಿ ಬಿಡು ಎಂದು ಸಮಾಧಾನ ಮಾಡಿಕೊಂಡೆ. ಇದೆಲ್ಲವನ್ನೂ ಮಗನಲ್ಲಿ ಹೇಳಿಕೊಳ್ಳದೆ, ‘ನೀನು ಮೊದಲು ಕಲಿಯೋ ಮಾರಾಯ, ಆಮೇಲೆ ನನ್ನ ಸರದಿ’ ಎಂದು ಪುಸಲಾಯಿಸಿ ಅವನನ್ನು ನೀರಿಗಿಳಿಸಿದೆ. ಪ್ರತಿ ವಾರವೂ ಅವನ ದೋಣಿ ನೀರಿಗಿಳಿದ ನಂತರ ದಡದಲ್ಲಿ ನಿಂತು ಅವನಿಗೆ ಕೈಬೀಸುತ್ತಾ, ಫೋಟೋಗಳನ್ನ ತೆಗೆಯುತ್ತಾ, ಆಗಾಗ ಅವನಿಗೆ ಫ್ಲ್ಯಾಸ್ಕಿನಲ್ಲಿ ತುಂಬಿಸಿದ್ದ ಹಾಟ್ ಚಾಕಲೇಟ್ ಕೊಡುತ್ತಾ ಅವನ ಕೈಗಳನ್ನು ಉಜ್ಜಿ ಶಾಖ ಕೊಡುತ್ತಾ ನಾವಿಬ್ಬರೂ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದೆವು.

ಅವನು ಸೇಲಿಂಗ್ ಕಲಿತು Crew member ಕೂಡ ಆಗಿ, ತಾನೇ ಸ್ವತಃ ಒಬ್ಬಂಟಿಯಾಗಿ ಸಮುದ್ರದಲ್ಲಿ ದೋಣಿ ಇಳಿಸಿ ಸೇಲಿಂಗ್ ಮಾಡಿದಾಗ ಎದೆ ಉಬ್ಬಿ ಬಂದಿತ್ತು. ವರ್ಷಗಳ ನಂತರ ಇಂದು ಅವನು ಚಿಕ್ಕವರಿಗೆ ಸೇಲಿಂಗ್ ಹೇಳಿಕೊಡುವಾಗ ಭಲಾ ಎನಿಸುತ್ತದೆ. ಹೋದ ವರ್ಷ ನಾವು ಹೊಸದಾಗಿ ಸೇರಿಕೊಂಡ ಸೇಲಿಂಗ್ ಕ್ಲಬ್ ತಂಡಕ್ಕೆ ‘ನಾವ್ಯಾಕೆ ದೊಡ್ಡವರೂ ಕೂಡ ಸೇಲಿಂಗ್ ಕಲಿಯಬಾರದು, ಅದಕ್ಕೆ ಅನುವು ಮಾಡಿಕೊಡುತ್ತೀರಾ,’ ಎಂದು ಕೇಳಿದರೆ ಅಲ್ಲಿನ ತರಬೇತಿದಾರು ‘ಹೌದಲ್ಲ, ಯಾಕಾಗಬಾರದು?’ ಎಂದರು. ಇಂಗ್ಲೆಂಡಿನ ಚಳಿಯಲ್ಲಿ ಬಿದ್ದಿದ್ದ ಕನಸೊಂದು ಆಸ್ಟ್ರೇಲಿಯಾದ ರಾಣಿರಾಜ್ಯದ ಬಿಸಿಲಿನಲ್ಲಿ ನನಸಾಗುವ ಸೂಚನೆಗಳಿವೆ. ನೀರಿನ ಅಲೆಗಳ ಮೇಲೆ ಸಾಗುತ್ತಾ ‘ಜಲಲ ಜಲಲ ಜಲಧಾರೆ’ ಹಾಡನ್ನು ಗುನುಗುವ ಕಾಲ ಹತ್ತಿರವಾಗುತ್ತಿದೆ ಎನ್ನಿಸುತ್ತಿದೆ.