ಬಂಧನಕ್ಕಿದೆ ಯುಗಯುಗಗಳ ರುಜುವಾತು

1

ರಕ್ಷೆಯೋ ಬಂಧನವೋ
ಬಂಧನದಿಂದ ರಕ್ಷೆಯೋ

2

ಬಂಧನವಿಲ್ಲಿ ಬಂಧವಲ್ಲದ ರಕ್ಷೆ
ಕಲಿದ ಕಲಿಯ ಬಂಧನದಲಿ
ದೈತ್ಯ ಶ್ರೀರಕ್ಷೆ
ರಕ್ಷಿಸಿದ ಚೂಡಾಮಣಿಗೆ
ರಾಜ ರಮಣನ ವಿಮೋಹ ಬಂಧ
ರಜಕನ ವಾಕ್ ಶರಗಳ ಶಿಕ್ಷೆ
ಲೋಕ ಕಾಣದ ಕೂಸುಗಳಿಗೆ ಆಶ್ರಮದ ರಕ್ಷೆ
ಮೋಹ ಬಂಧ ಸೆಳೆದು ಪಿತೃ ಪಾಲನೆಯ ರಕ್ಷೆ
ಅಮಾಯಕ ಪಾವಿತ್ರ್ಯಕ್ಕೆ ಬಾಯ್ದೆರೆದ ಬಂಧದ ರಕ್ಷೆ

3

ಬಂಧೀಖಾನೆಯ ಬಂದೋಬಸ್ತಿಗೆ
ಕಡಲಾಚೆ ನಲುನಾಡಿನ ರಕ್ಷೆ
ಹರಿ ಹರಿದು
ರಕ್ಕಸ ಪಾತಕಿಗಳ ಬಡಿ ಬಡಿದು
ತನ್ನಾತ್ಮ ರಕ್ಷೆ
ಯುದ್ಧ ಗೆದ್ದರೂ ಪರಿವಾರ ಗೆಲ್ಲಲಾಗದ ಶಿಕ್ಷೆ
ರಕ್ಷಿಪ ಜಗನ್ನಾಥಗೆ ಇರದ ನಿಯಾಮಕ ರಕ್ಷೆ
ಹೊಡೆಹೊಡದು ಬಾಂದವ್ಯ ಕಡಿದು
ಕುಲನಾಶನ ಶಿಕ್ಷೆ
ಒಬ್ಬಂಟಿ ಚಕ್ರಿಗೂ ಸೇಡ
ಸುರುಸುರುಳಿ ಬಂಧ ಮೋಕ್ಷ

4

ಕಾಡಿ ಕೆಣಕುವ ಬಂಧಗಳು ನೂರಾರು
ಆಗೊಮ್ಮೆ ಈಗೊಮ್ಮೆ ರಕ್ಷೆಯ ಭಕ್ಷೀಸು
ಹೆಜ್ಜೆ ಹೆಜ್ಜೆಗೂ ರಕ್ಷೆ- ಬಂಧಗಳ ಕಾದಾಟ

5

ತ್ರೇತ, ದ್ವಾಪರಗಳೆರಡೂ
ಬಂದು ನಿಂತಿಹವು ಹೆಣ್ಣ ಹೊಸ್ತಿಲಲ್ಲಿ
ಒಳಗೂ ಹೊರಗೂ
ಬಿರಿಯಲೊಲ್ಲದು ಭೂಮಿ ಮಗಳ ಭಾರ ಹೊತ್ತು
ಸುಡು ಸುಡು ಬೇಗೆಯುರಿ
ದೇಹ ದಹಿಸಿ ಶೀಲ ಉಳಿಸಿ
ಇತಿಹಾಸವ ಬರೆಯಿಸಿ
ದಂಡು ದಾಳಿಗಳ ಕಾಮ ಪಿಪಾಸೆಗೆ
ಗರತಿ ಗಂಧವ ತೇಯಿಸಿ
ರಕ್ಷಕನ ನೆತ್ತರಲ್ಲಿ
ಹೆಣ್ಣು ಹೊಳೆ ಹರಿದಿದೆ
ರಕ್ಷೆ ರಿಕ್ತವಾಗಿದೆ

6

ಬಂಧನದಲ್ಲಿ ರಕ್ಷೆಯೋ
ರಕ್ಷೆಯಲ್ಲಿ ಬಂಧನವೋ
ಅದಲು ಬದಲು ಸೂತ್ರ
ಒಲವ ರಕ್ಷೆಯುಳಿಸಲು
ಬಂಧವೆಲ್ಲ ಹರಿಯಲಿ.

 

ನೂತನ ದೋಶೆಟ್ಟಿ
ಕಾರ್ಯಕ್ರಮ ನಿರ್ವಾಹಕರು
ಆಕಾಶವಾಣಿ