ಇಬ್ಬರು ಗೆಳೆಯರು ಸುಂದರೇಶ್ ಮುಂದೆ ಶ್ರೀರಾಂ ಹಿಂದೆ ರಸ್ತೆ ದಾಟುತ್ತಿರಬೇಕಾದರೆ ನಡುವಯಸ್ಸಿನ ಹೆಂಗಸೊಬ್ಬಳು ಬಂದು ಲಪ್ಪೆಂದು ಬಿಗಿಯಾಗಿ ಸುಂದರೇಶ್ ಕೈ ಹಿಡಿದಳು. ಇಬ್ಬರು ಗೆಳೆಯರು ಅನಿರೀಕ್ಷಿತ ನಡವಳಿಕೆಯಿಂದ ತತ್ತರಿಸಿದರು. ಆಗ ಶ್ರೀರಾಂ ಅಕ್ಷರಶಃ ಅವಳ ಕೈ ಕಿತ್ತು ಹಾಕಿ ನೋಡಿದರೆ ಸುಂದರೇಶ್ ಮುಖವೆಲ್ಲ ಕೆಂಪೇರಿ ಬೆವರುತ್ತಿದ್ದರಂತೆ. ಅಲ್ಲದೆ ಸರ ಸರನೆ ರಸ್ತೆ ದಾಟುತ್ತಿದ್ದಾರೆ ! ಇದಕ್ಕೂ ಮೀರಿ “ನನ್ನ ಮರೆತು ಬಿಟ್ರಾ ಅಣ್ಣಾ” ಎಂದು ಬೊಬ್ಬಿಡುತ್ತಾ ಓಡೋಡಿ ಬಂದು ಅವಳು ಸಮೀಪಿಸುತ್ತಿದ್ದಾಳೆ. ಇದೇನೋ ವಿಚಿತ್ರ ಪ್ರಸಂಗವಿರಬೇಕೆಂದು ಅರಿತ ಶ್ರೀರಾಂ ಶೀಘ್ರ ಕಾರ್ಯೋನ್ಮುಖರಾದರು.
ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ರಾಜೇಶ್ವರಿ ತೇಜಸ್ವಿ ಬರಹ.

 

ಶ್ರೀಯುತರಾದ ಪೂರ್ಣಚಂದ್ರ ತೇಜಸ್ವಿ, ಬಿ.ಎನ್.ಶ್ರೀರಾಂ, ಎನ್.ಡಿ. ಸುಂದರೇಶ್ ಮತ್ತು ಕಡಿದಾಳು ಶಾಮಣ್ಣ ಈ ನಾಲ್ವರು ಆಪ್ತ ಗೆಳೆಯರು ಕನ್ನಡಿಗರೆಲ್ಲರಿಗೂ ಚಿರಪರಿಚಿತರು. ಸುಂದರೇಶ್ ಮತ್ತು ಶಾಮಣ್ಣ ಮಲೆನಾಡಿನ ತೀರ್ಥಹಳ್ಳಿಯ ನಂಬ್ಳ, ಕಡಿದಾಳಿನವರಾದರೆ, ಶ್ರೀರಾಂ ಬಯಲು ಸೀಮೆ ಬೆಂಗಳೂರಿನ ಬ್ಯಾತದವರೆಂದೇ ಖ್ಯಾತರು, ಮತ್ತು ದೂರದೃಷ್ಠಿಯುಳ್ಳವರಾಗಿ ಗೆಳೆಯರಿಗೆಲ್ಲ ಅಂದು ಸಲಹೆಗಾರರಾಗಿ ಇದ್ದಂತೆಯೇ ಇಂದೂ ಇದ್ದಾರೆ. ಈ ನಾಲ್ವರೂ ಒಟ್ಟಿಗೇ ಸೇರಿ ರುಚಿ ರುಚಿ ತಿನಿಸು ಆಸ್ವಾಧಿಸುವಲ್ಲಿ ಒಬ್ಬರಿಗಿಂತ ಒಬ್ಬರು ಎತ್ತಿದ ಕೈ. ಹಾಗೆಯೇ ಒಟ್ಟಿಗೆ ಸೇರಿ ಚಿಂತನ ಶೀಲರಾಗಿದ್ದರು. ಅದರಂತೆ ‘ಪ್ರಗತಿ ಪರ ಪ್ರಯತ್ನದ ಫಲವಾಗಿ’ ಲಹರಿ ಬುದ್ಧಿ ಪ್ರಚಾರಯೋಜನೆಯನ್ನು ೧೯೬೪ ರಲ್ಲಿಯೇ ಶುರು ಮಾಡಿದ್ದರು. ಸುಂದರೇಶರು ವಾರ್ತಾ ಪತ್ರಿಕೆಯಲ್ಲಿ ಬರುತ್ತಿದ್ದ ಸಮಾಜದ ಒಳಿತು ಕೆಡುಕುಗಳ ಬಗ್ಗೆ ವಾಚಕರವಾಣಿಯಲ್ಲಿ ಖಾರವಾಗಿ ಪ್ರತಿಕ್ರಿಯಿಸುತ್ತಿದ್ದರು. ಇವರು ಜಮೀನ್ದಾರರ ಮಗನಿಗೆ ಸಿಕ್ಕುವ ಎಲ್ಲ ಸುಖಃ ಸಂತೋಷಗಳಿಗೆ ಒಡ್ಡಿಕೊಂಡಿದ್ದರಾದರೂ ಅದರ ಆಚೆಗೆ ಬಂದವರು. ಶ್ರೀ ಕೆ.ರಾಮದಾಸರು ನಿರಾಶ್ರಿತರಾಗಿ ಮೈಸೂರಿನಲ್ಲಿ ಸಿಕ್ಕಾಗ ಆಶ್ರಯ ಕೊಟ್ಟು ದಾರಿ ತೋರಿದವರು ಇವರೇ. ಇವರು ಸೊಗಸುಗಾರರು, ಯಾವಾಗಲೂ ಠಾಕು ಠೀಕಾದ ವೇಷಭೂಷಣಿಗರು. ತಲೆಗೆ (ಆಗ ನೆತ್ತಿ ಮೇಲೆ ಕೂದಲಿತ್ತು) ಸುಗಂಧದೆಣ್ಣೆ ಪೂಸಿಕೊಂಡು ಕಾಲೇಜಿನ ದಿನಗಳಲ್ಲಿ ತಿರುಗಾಡಿದವರು. ನಾನೇ ನೋಡಿದ್ದು ಇವರು ಸ್ನಾನವಾದ ಕೂಡಲೆ ತಲೆ ಬಾಚಿ ಆ ಟವಲ್ಲಿನ ಅಂಚಿನ ಕುಚ್ಚಿನಲ್ಲಿ ಬಾಚಣಿಗೆಯನ್ನು ಸ್ವಚ್ಛ ಮಾಡೇ ಇಡುತ್ತಿದ್ದರು. ಅಷ್ಟು ಶಿಸ್ತಿನವರು. ನವಿರಾಗಿ ನಾಲಗೆಯಿಂದ ತುಟಿ ಸವರಿಕೊಳ್ಳುತ್ತಿರುತ್ತಿದ್ದರು. ಹೀಗಾಗಿಯೇ ತೇಜಸ್ವಿಯು, “ನೀನೊಬ್ಬ ಬೊಂಬಾಯಿ ಸೂಳೆ ಕಣೋ” ಎಂದು ಹಾಸ್ಯ ಮಿಶ್ರಿತ ಬೈಗುಳ ಕೊಡುತ್ತಿದ್ದರು.

ಸುಂದರೇಶ್ ಒಂದು ದಿವಸ ಆಕಸ್ಮಿಕವಾಗಿ ಸಂಕಟಕ್ಕೆ ಸಿಲುಕಿ ಕೊಂಡರು. ಶ್ರೀರಾಂರ ಹೆಗ್ಗಳಿಕೆ ಏನಪ್ಪಾಂದ್ರೆ ಕೆಲವರನ್ನು ನೋಡನೋಡುತ್ತಿದ್ದಂತೆ ಅವರ ಜಾತಕ ಲಕ್ಷಣ ಹೇಳುವುದು. ತೇಜಸ್ವಿಗೆ ಯಾವಾಗಲೂ ಇದರ ಬಗ್ಗೆ ಮೆಚ್ಚುಗೆಯಿತ್ತು. ಲಕ್ಷಣವಂತೆಯಂತೆ ಕಂಡ ಹೆಂಗಸನ್ನು ಕೂಡಲೇ ಅವಲಕ್ಷಣದ ಸೂಚನೆ ಕೊಟ್ಟು ಬಿಡುತ್ತಿದ್ದರಂತೆ. ಯಾರನ್ನು ನೋಡಿದರೂ (ಹೆಂಗಸರು) ಹೀಗೆಳೆಯುವುದೇ ಎಂದು ಇವರನ್ನು ಗೆಳೆಯರು ಚುಡಾಯಿಸುತ್ತಿದ್ದರು. ಒಂದು ಸಂಜೆ ಗೀತಾ ಬುಕ್ ಸ್ಟಾಲ್ ಎದುರು ಹಳೆ ಬಸ್ ಸ್ಟಾಂಡ್ ಹತ್ತಿರ (ಈಗ ಅಲ್ಲಿನ ಬಿಲ್ಡಿಂಗ್ ಎಲ್ಲವೂ ಬದಲಾಗಿದೆ) ವಿಷ್ಣು ಭವನದಲ್ಲಿ ಸೊಗಸಾದ ಮಸಾಲೆ ದೋಸೆ ತಿಂದು ಈ ಇಬ್ಬರು ಗೆಳೆಯರು ಸುಂದರೇಶ್ ಮುಂದೆ ಶ್ರೀರಾಂ ಹಿಂದೆ ರಸ್ತೆ ದಾಟುತ್ತಿರಬೇಕಾದರೆ ನಡುವಯಸ್ಸಿನ ಹೆಂಗಸೊಬ್ಬಳು ಬಂದು ಲಪ್ಪೆಂದು ಬಿಗಿಯಾಗಿ ಸುಂದರೇಶ್ ಕೈ ಹಿಡಿದಳು. ಇಬ್ಬರು ಗೆಳೆಯರು ಅನಿರೀಕ್ಷಿತ ನಡವಳಿಕೆಯಿಂದ ತತ್ತರಿಸಿದರು. ಆಗ ಶ್ರೀರಾಂ ಅಕ್ಷರಶಃ ಅವಳ ಕೈ ಕಿತ್ತು ಹಾಕಿ ನೋಡಿದರೆ ಸುಂದರೇಶ್ ಮುಖವೆಲ್ಲ ಕೆಂಪೇರಿ ಬೆವರುತ್ತಿದ್ದರಂತೆ. ಅಲ್ಲದೆ ಸರ ಸರನೆ ರಸ್ತೆ ದಾಟುತ್ತಿದ್ದಾರೆ ! ಇದಕ್ಕೂ ಮೀರಿ “ನನ್ನ ಮರೆತು ಬಿಟ್ರಾ ಅಣ್ಣಾ” ಎಂದು ಬೊಬ್ಬಿಡುತ್ತಾ ಓಡೋಡಿ ಬಂದು ಅವಳು ಸಮೀಪಿಸುತ್ತಿದ್ದಾಳೆ. ಇದೇನೋ ವಿಚಿತ್ರ ಪ್ರಸಂಗವಿರಬೇಕೆಂದು ಅರಿತ ಶ್ರೀರಾಂ ಶೀಘ್ರ ಕಾರ್ಯೋನ್ಮುಖರಾದರು. ಅಲ್ಲೆ ಇದ್ದ ಮೈಸೂರು ಪ್ರಸಿದ್ದಿಯ ಟಾಂಗಾದಲ್ಲಿ ಸುಂದರೇಶನನ್ನು ಕೂರಿಸಿ ಸಾಗಹಾಕಿದರು. ಇವಳಾರವಳೆಂದು ಕುತೂಹಲದಿಂದ ನೋಡಿದರೆ ಇವಳೂ ನಾಪತ್ತೆ. ಕೂಡಲೇ ಬೇರೊಂದು ಟಾಂಗಾ ಹತ್ತಿ ಸುಂದರೇಶರ ಕ್ಷೇಮ ವಿಚಾರಿಸಲು ಹಾಸ್ಟಲ್ಲಿಗೆ ಹೋದರೆ ಅಲ್ಲಿ ಇಲ್ಲ. (ಸುಂದರೇಶ್ ಗಾಬರಿಯಾಗಿ ಓರಿಯಂಟಲ್ ಲೈಬ್ರರಿ ಹತ್ತಿರನೇ ಇಳಿದು ಕೊಂಡರಂತೆ, ಅವಳು ಹಾಸ್ಟಲಿಗೂ ವಕ್ಕರಿಸಿದರೆ ಅಂತೇನೋ!) ವಾರದ ಹಿಂದೆ ಉಳಿದುಕೊಂಡಿದ್ದ ರೂಮಿನಲ್ಲಿ ವಿಚಾರಿಸಿದರೆ ಅಲ್ಲೂ ಇಲ್ಲ. ರಾತ್ರಿಯಲ್ಲ ತಡಕಾಡಿದರೂ ಸುಂದರೇಶ ಸಿಗಲಿಲ್ಲ. ಗಾಬರಿ ಇನ್ನೂ ಹೆಚ್ಚಾಯಿತು. ಇದೇನೋ ನಿಗೂಢವಾದದ್ದೆಂದು ಕಂಗಾಲು, ಸುಂದರೇಶರವರು ನೂರಡಿ ರಸ್ತೆಯಲ್ಲಿನ ಒಂದು ಪ್ರಖ್ಯಾತ ಹೋಟೆಲಿನಲ್ಲಿ ಗಟ್ಟಿ ಚಟ್ನಿ ಇಡ್ಲಿ ಕೊಡುತ್ತಾನೆಂದು ಪ್ರತಿದಿನ ಖಾತರಿಯಾಗಿ ಅಲ್ಲಿಗೆ ತಿಂಡಿ ತಿನ್ನಲು ಬರುತ್ತಿದ್ದರೆಂದು ಹೋಗಿ ನೋಡಲಾಗಿ ಅಲ್ಲೂ ಬಂದಿಲ್ಲ. ಏನಾಗಿರಬಹುದೆಂದು ಕಣ್ಣು ಮುಚ್ಚಿ ಊಹಿಸಲೂ ಸಾಧ್ಯವಾಗಲಿಲ್ಲವಂತೆ ಶ್ರೀರಾಂಗೆ. ಚಿಂತಾಕ್ರಾಂತರಾಗಿ ಎರಡು ದಿನ ಪೂರ್ತಿ ತಿರುಗಾಡಿದ ನಂತರ ನೂರಡಿ ರಸ್ತೆಯಲ್ಲೆ ಸುಂದರೇಶ್ ಸಿಕ್ಕಿ ನಿಟ್ಟುಸಿರು ಬಿಟ್ಟರಂತೆ.

ಹಲವು ದಿನಗಳ ಹಿಂದೆಯಷ್ಟೇ ಈ ಸುಂದರೇಶ್ ಗಟ್ಟಿ ಚಟ್ನಿ ಇಡ್ಲಿ ತಿಂದು ಬೆಳಗಿನ ನಾಷ್ಟಾ ಮಾಡಿ ಹೊರಗೆ ಬಂದಾಗ ಶಿವಮೊಗ್ಗದವನಾದ ನಾರಾಯಣಮೂರ್ತಿಯೆಂಬ ಪೊಲೀಸ್ ಪೇದೆಯೊಬ್ಬ ತನ್ನ ಹೆಂಡತಿ ಎಂದು ತನ್ನ ಪಕ್ಕದಲ್ಲಿದ್ದವಳನ್ನು ಪರಿಚಯಿಸಿದನು. ಒಂದೇ ಊರಿನವರೆಂಬ ಸಲುಗೆ ಸಂತೋಷದಿಂದ ಸಲಾಂ ಮಾಡಿ ಮಾತುಕತೆಯಾಡಿ ಬೀಳ್ಕೊಟ್ಟಿದ್ದರಂತೆ ಸುಂದರೇಶ್. ವಾರ ಕಳೆಯುವಷ್ಟರಲ್ಲಿ ಸುಂದರೇಶ್ ಎಂದಿನಂತೆ ತಿಂಡಿ ತಿಂದು ಆಚೆ ಬಂದಾಗ ಅದೇ ಹೆಂಗಸು ಮೂರ್ಛೆ ಹೋದಂತಾದಳು. ಏನು ಬವಣೆಯೂ ಏನೋ ಎಂದು ಜೇಬಿನಲ್ಲಿದ್ದಷ್ಟು ಹಣ ಕೊಟ್ಟು ಸಹಾಯ ಮಾಡಿದರು. ಇನ್ನೊಂದು ವಾರ ಕಳೆಯುವಷ್ಟರಲ್ಲೇ ರಸ್ತೆ ದಾಟುವಾಗ ನಡೆದದ್ದು ಸ್ಪಷ್ಟವಾಗಿ ತಾನು ಬ್ಲಾಕ್ ಮೇಲಿಗೆ ಒಳಗಾಗುತ್ತಿರುವ ಲಕ್ಷಣಗಳ ಅರಿವಾಯಿತು. ಕೂಡಲೇ ಪೊಲೀಸ್ ಠಾಣೆಗೆ ಹೋದರು. ಅಲ್ಲಿ ಮತ್ತೊಬ್ಬ ಶಿವಮೊಗ್ಗದವರಾದ ಪೊಲೀಸ್ ಇನ್ಸ್‌ಪೆಕ್ಟರ್ ಕೂತಿದ್ದರು. ಅವರಿಗೆ ಈ ಪೇದೆಯ ಮರ್ಜಿಯಲ್ಲ ಗೊತ್ತಿದ್ದರಿಂದ ಕೂಡಲೇ ಕಾರ್ಯಪ್ರವೃತ್ತರಾಗಿ ಮೈಸೂರನ್ನೆಲ್ಲಾ ಜಾಲಾಡಿ ಆ ಪೇದೆಯನ್ನೂ ಹೆಂಡತಿಯೆಂಬ ಹೆಂಗಸನ್ನು ಪತ್ತೆ ಮಾಡಿಸಿದರಂತೆ. ಹೀಗೆ ತೊಂದರೆ ಹಿಂಸೆ ಕೊಡುವುದಿಲ್ಲವೆಂದು ಅವರಿಬ್ಬರ ಹತ್ತಿರ ಮುಚ್ಚಳಿಕೆ ಬರೆಸಿಕೊಂಡು ತಮ್ಮ ಹಾಸ್ಟೆಲ್ ರೂಮಿಗೆ ಹಿಂತಿರುಗಿದಾಗ ಸರಿರಾತ್ರಿ ಒಂದು ಘಂಟೆ ಕಳೆದಿತ್ತಂತೆ. ಈ ಎಲ್ಲ ವಿವರಣೆ ಹೇಳಿ ನಿರುಮ್ಮಳರಾದರಂತೆ ಸುಂದರೇಶ್.

ಈ ಪ್ರಸಂಗವನ್ನೇ ಆಧರಿಸಿ ತೇಜಸ್ವಿ ನಾಟಕ ರಚಿಸಲು ಸಿದ್ದರಾಗಿದ್ದರಂತೆ ಕೂಡ. ಕನ್ನಡಿಗರ ದುರದೃಷ್ಟದಿಂದ ಬರೆಯಲಿಲ್ಲವೆನ್ನುತ್ತಾರೆ ಶ್ರೀರಾಂರವರು.

‘ಚಿತ್ರಕೂಟದಲ್ಲಿ’ ನಮ್ಮ ಮದುವೆ ಸಿದ್ದತೆ ನಡೆಯುತ್ತಿದ್ದಾಗ ಈ ಆಪ್ತ ಗೆಳೆಯರು ಜಗ್ಗಿ ಜಗ್ಗಿ ಜಗ್ಗಿಸಿದ ಸಂಭ್ರಮಿಸಿದ ಕ್ಷಣಗಳ ನೆನಪಿನಾಳದಿಂದ ತೆಗೆದದ್ದು ಇವು.

ಕನಸಿನಮನೆಯ ಮುದ್ದುನಾಯಿಗಳು

ಕಾಡಿನ ಮಧ್ಯೆ ನಮ್ಮ ಕನಸಿನ ಮನೆ ಇರುವುದು. ಈ ಮನೆಯ ಕನಸಿನ ರಾಜಕುಮಾರ ಬೈ ಇಷ್ಟು ಬೇಗ ಹೇಳಬೇಕಿತ್ತೆ? ಬಿಡಿಸಲಾಗದ ಕಗ್ಗಂಟು ಇದೇ. ಈ ರಹಸ್ಯನೂ ತಗೊಂಡೇ ಹೋಗಿದ್ದಾರೆ. ನಾನೆಲ್ಲಿ ಹುಡುಕಿಕೊಂಡು ಬರಲಿ ಇವರನ್ನು?

ನಮ್ಮ ಮನೆಯ ಪಕ್ಕದಲ್ಲೇ ಒಂದು ಸಣ್ಣ ಹಳ್ಳ ಹರಿಯುತ್ತೆ. ಇದು ಹುಟ್ಟುವುದೇ ನಮ್ಮ ತೋಟದಲ್ಲಿ. ಇದರ ಜುಳುಜುಳು ಹರಿವ ನಿನಾದ ನಮ್ಮ ಕಿವಿಗೆ ಬೀಳಬೇಕೆಂದೇ ತಗ್ಗಿನಲ್ಲಿ ಹಳ್ಳದ ಪಕ್ಕದಲ್ಲಿ ಮನೆ ಕಟ್ಟಿಕೊಂಡೆವು. ಅಣ್ಣ (ಕುವೆಂಪು) ಇಲ್ಲಿಗೆ ಬಂದಾಗ ಈ ಸದ್ದು ಕೇಳಿಸಿಕೊಂಡು ಸಂತೋಷಪಡುತ್ತಿದ್ದರು. ಮನೆಯ ಹಾಲಿನ ನಾಲ್ಕು ಗೋಡೆಗೂ ದೊಡ್ಡದೊಡ್ಡ ಗಾಜಿನ ಕಿಟಕಿಗಳಿಂದ ಕನ್ನಡಿ ಹಾಲು ಆಗಿತ್ತು. ಅಲ್ಲಿ ಕುಳಿತು ಎದುರು ಪಶ್ಚಿಮಕ್ಕೆ ಗುಡ್ಡಕಾಡು ನೋಡುವುದಕ್ಕೆ ಬಹಳ ಸೊಗಸಾಗಿತ್ತು. ಈಗ ಆ ಕಡೆಯ ಮರಗಳೂ, ಬಿದಿರುಗಳೂ ದೊಡ್ಡದಾಗಿ ಬೆಳೆದು ಗುಡ್ಡ ಮರೆಯಾಗಿದೆ. ಆದರೆ ಗುಡ್ಡದ ತಳದಲ್ಲೇ ಇದೆಯೆಂಬಂತೆ ಅಲ್ಲೊಂದು ದೊಡ್ಡಕೆರೆ. ಮೂವತ್ತು ವರ್ಷದ ಹಿಂದೆ ನಾವೇ ನಿರ್ಮಿಸಿದ್ದು. ಈ ಕೆರೆ ನಿರಂತರ ಆಕರ್ಷಿಸುತ್ತೆ ನಮ್ಮನ್ನೂ, ಮಕ್ಕಳನ್ನೂ. ಕೆರೆಯ ತುಂಬ ಮೀನುಗಳು. ಮಂಡಕ್ಕಿ ಹಾಕಿದರೆ ಹತ್ತಿರಕ್ಕೆ ಬರುತ್ತವೆ. ಈ ಮೀನುಗಳನ್ನು ಹಿಡಿದು ಮೊಮ್ಮಗಳ ಕೈಲಿ ಮುಟ್ಟಿಸಿ ಮತ್ತೆ ಕೆರೆಗೆ ಬಿಡುತ್ತಿದ್ದರು. ಅಡುಗೆ ಮಾಡಲು ಎಂದೂ ಇವನ್ನು ಹಿಡಿಯುತ್ತಿರಲಿಲ್ಲ. ಈ ಕೆರೆಯಲ್ಲಿ ಎರಡು ನವಿಲು ಬಣ್ಣದ ಕೊರಳಿದ್ದ ಬಾತು ಕೋಳಿಗಳನ್ನು ಸಾಕಿದ್ದೆವು. ಪ್ರಕೃತಿ ಹೇಗೆ ಕಲಿಸುತ್ತೋ ಇವಕ್ಕೆ. ಇವೆರಡೂ ಜೋಡಿಯಾಗಿ ಒಂದೇ ಅಂತರದಲ್ಲಿ ಈಜುತ್ತಿದ್ದವೆಲ್ಲ. ಅದು ಹೇಗೆ. ಅವನ್ನು ನೋಡುತಿದ್ದರೆ ಕಣ್ಣಿಗೆ ಹಬ್ಬ.

ನಮ್ಮ ನಾಯಿ `ಕಿವಿ` ಕನ್ನಡ ಜಗತ್ತಿಗೇ ಪರಿಚಯ. ಅನೇಕ ವರುಷಗಳ ನನ್ನ ಅದರ ಗೆಳೆತನ ಅಲ್ಲಿ ಯಾರಿಗೂ ಸುಲಭವಾಗಿ ಅರ್ಥವಾಗದಂಥದಾಗಿತ್ತು. ಬೇಟೆಯಾಡುವುದರಲ್ಲಿ ಅದೊಂದು ನಿಸ್ಸೀಮ ನಾಯಿಯಾಗಿತ್ತು. ನನ್ನೊಡನೆ ಪುಟ್ಟ ಮರಿಯಾದಾಗಿನಿಂದ ಬೆಳೆದು ಬಂದು ಅದಕ್ಕೆ ನಡವಳಿಕೆಯ ಅರಿವು ಚೆನ್ನಾಗಿ ಪರಿಚಯವಿತ್ತು. ಹೆಚ್ಚು ಕಡಿಮೆ ಮಾತನ್ನು ಅಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವಷ್ಟು ಕುಶಾಗ್ರಬುದ್ಧಿ ಬೆಳೆದಿತ್ತು. ನಮ್ಮ ಮನೆಯಲ್ಲಿ ಅದನ್ನು ಪ್ರಾಣಿ ಎಂದು ಯಾರೂ ಪರಿಗಣಿಸಿಯೇ ಇರಲಿಲ್ಲ ತೇಜಸ್ವಿ ಕರ್ವಾಲೋದಲ್ಲಿ `ಕಿವಿ` ಬಗ್ಗೆ ಹೇಳಿರುವ ಮಾತಿದು.

ಇಲ್ಲಿ ಮನೆ ಸುತ್ತ ಕಾಡಿರುವುದರಿಂದ ತರತರದ ಹಕ್ಕಿಗಳ ಉಲಿವು ನಿರಂತರ. ಬೆಳಿಗ್ಗೆ ಆರು ಗಂಟೆಗೇ ನನ್ನ ಲಾನ್ನಲ್ಲಿ ಕಳೆ ಕೀಳಲು ಶುರುಮಾಡಿದಾಗ ನನಗೆ ಕಿವಗಡಚಿಕ್ಕುವ ಸದ್ದು ಈ ಹಕ್ಕಿಗಳದ್ದು. ನಮ್ಮ ಸಹನಾಡಿಗಳಾಗಿ ಈ ಹಕ್ಕಿಗಳು ಇದ್ದರೂ `ಕಿವಿ` ಹೋದ ಮೇಲೆ ಸ್ಪಾನಿಯಲ್ ಜಾತಿ ನಾಯಿಯೇ ನಮ್ಮ ಒಡನಾಡಿಯಾಗಬೇಕೆನ್ನಿಸಿತು. ನಮ್ಮ ಮಕ್ಕಳು ಸುಸ್ಮಿತ ಮತ್ತು ಈಶಾನ್ಯೆ ಬೆಂಗಳೂರಿನಲ್ಲಿ ಕಾಕರ್ ಸ್ಪಾನಿಯಲ್ ನಾಯಿ ಮರಿಯೊಂದನ್ನು ಪತ್ತೆ ಹಚ್ಚಿದರು. ಕೊಂಡು ತಂದುಕೊಟ್ಟರು. ನಾಯಿಮರಿಗಳನ್ನು ಸಾಕುವಾಗ ಮಕ್ಕಳಂತೆಯೇ ನೋಡಿಕೊಳ್ಳಬೇಕು. ಆಗಲೇ ಪ್ರಾಣಿಗಳ ಬಗ್ಗೆ ಮಮತೆಯುಂಟಾಗುವುದು ಮತ್ತು ನಾಯಿಗಳೂ ನಮ್ಮ ಬದುಕಿನಲ್ಲಿ ಬೆಸೆಯುತ್ತವೆ. ಈ ನಾಯಿ ಮರಿಗೆ `ಮರಿ` ಎಂದು ಹೆಸರಿಟ್ಟರು ಇವರು. ಈ `ಮರಿ` ಬರುವ ಹೊತ್ತಿಗೆ ಇವರು ಶಿಕಾರಿಗೆ ಹೋಗುವುದನ್ನು ಸಂಪೂರ್ಣವಾಗಿ ತ್ಯಜಿಸಿದ್ದರು. ಹಾಗಾಗಿ ಇದು ಬೆಳೆದಿದ್ದೆ ಬೇರೆಯ ತೆರನಾಗಿ. ಒಂದು ರೀತಿಯ ಪೆಟ್ ಡಾಗ್. ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಿ ಮರಿಯಾಗಿತ್ತು. ಇವರೊಟ್ಟಿಗೆ ತಿರುಗಾಡಲಿಕ್ಕೆ ಸದಾ ಜೊತೆಯಲ್ಲಿ ಹೋಗುತ್ತಿತ್ತು.

ನಮ್ಮ ತೋಟದ ಪ್ರತಿಯೊಂದು ಕಾಫಿಗಿಡಗಳಿಗೂ ಇವರ ಸ್ಪರ್ಷವಿತ್ತೆಂದೇ ಹೇಳಬಹುದು. ಆರೈಕೆ ಮತ್ತು ಕೆಲಸದ ಬಗೆಗಿನ ನಿಗ ಎಲ್ಲವನ್ನೂ ಪೂರ್ಣವಾಗಿ ನಡೆಸುತ್ತಿದ್ದರು. ನಮ್ಮಲ್ಲಿ ಮಾರ್ಚ ತಿಂಗಳ ಸಮಯದಲ್ಲಿ ತೋಟಕ್ಕೆ ಸ್ಪ್ರಿಂಕ್‌ಲರ್ ಹಾಕುತ್ತಾರೆ. ಇವರು `ಮರಿ` ಜೊತೆ ಸ್ಪ್ರಿಂಕ್‌ಲರ್ ಜೋಡಿಸಿಲು ಹೋಗಿದ್ದಾಗ ನಮ್ಮ ಬೇಲಿ ಪಕ್ಕದ ದೊಡ್ಡ ಬಯಲಿನಲ್ಲಿ ಒಂದು ಕ್ರಿಕೆಟ್ ಮ್ಯಾಚು ನೆಡೆಯುತ್ತಿತ್ತು. ಮೂಡಿಗೆರೆ ಟೌನ್‌ರವರು ಅನೇಕ ಟೀಂಗಳನ್ನು ಕಟ್ಟಿಕೊಂಡು ಬಂದು ಇಲ್ಲಿ ಕ್ರಿಕೆಟ್ ಟೂರ್ನಮೆಂಟ್ ಭಾರೀ ಜೋರಾಗಿ ನಡೆಸುತ್ತಾರೆ. ಸಿಕ್ಸರ್ ಎತ್ತಿದಾಗ, ಬೌಂಡ್ರಿ ಹೊಡೆದಾಗ ಮೈಕಿನಲ್ಲಿ ಕೂಗಾಟವೂ ಜೋರು. ಮನೆವರೆಗೂ ಕೇಳಿಸುತ್ತಿತ್ತು. ಇವರು `ಮರಿ` ಜೊತೆ ಹೋಗಿದ್ದಾಗ `ಮರಿ` ಕ್ರಿಕೆಟ್ ಮೈದಾನಕ್ಕೆ ಹೋಗಿ ಯಾರೋ ಬೌಂಡ್ರಿಗೆ ಅಟ್ಟಿದ್ದ ಚೆಂಡನ್ನು ಫೀಲ್ಡರ್‌ಗಿಂತ ಮುಂಚೆ ಓಡಿಹೋಗಿ ಕಚ್ಚಿಕೊಂಡು ಕಾಡೊಳಗೆ ಚೆಂಡು ಬಚ್ಚಿಟ್ಟು, ಇವರ ಹತ್ತಿರ ಬಂದಿತು. ಮರಿಯ ಬಾಯಲ್ಲಿ ಚೆಂಡನ್ನು ನೋಡಿದ ಪ್ಲೇಯರ್‌ಗಳು `ಮರಿ` ಚೆಂಡು ಕಚ್ಚಿಕೊಂಡು ಹೋಯಿತೆಂದು ಅಟ್ಟಿಸಿಕೊಂಡು ಇವರ ಹತ್ತಿರ ಬಂದರು. ಚೆಂಡು ಎಷ್ಟು ಹುಡುಕಿದರೂ ಸಿಕ್ಕಲಿಲ್ಲ. ಚೆಂಡಿನ ದುಡ್ಡು ಮೂವತ್ತಾರು ರೂಪಾಯಿ ಕೊಟ್ಟು ಕಳಿಸಿದರು.

ಈ ಮರಿಗೆ ಮೂಡಿಗೆರೆಯಲ್ಲಿ ಏರ್ಪಡಿಸಿದ್ದ ಡಾಗ್ ಷೋಗೆ ಇವರಿಗೆ ಇಷ್ಟವಿಲ್ಲದಿದ್ದರೂ ನಮ್ಮ ಈಶಾನ್ಯೆ ಸಹಾಯದಿಂದ ಕರೆದೊಯ್ದಿದ್ದೆ. ಮೊದಲ ಬಹುಮಾನ ಪಡೆಯಿತು. ಈ `ಮರಿ` ಹನ್ನೆರಡು ವರುಷ ನಮಗೆ ಕಂಪನಿಕೊಟ್ಟು ತೀರಿಕೊಂಡಿತು. ಮತ್ತೆ ನಮ್ಮಿಬ್ಬರು ಮಕ್ಕಳು ಬೆಂಗಳೂರನೆಲ್ಲ ಜಾಲಾಡಿ ಯಾರೋ ಪಶುವೈದ್ಯರ ಮುಖಾಂತರ ಮರಿಯಂತದ್ದೇ ನಾಯಿಮರಿಯನ್ನು ಕೊಂಡು ತಂದು ಕೊಟ್ಟರು. ಈ ನಾಯಿ ಮರಿ ಯಾರೋ ಎಕ್ಸ್ ಸರ್ವಿಸ್‌ನವರ ಮನೆಯಿಂದ ಇನ್ನೇನು ಬೊಂಬಾಯಿಗೆ ವಿಮಾನದಲ್ಲಿ ಜಿಗಿಯಲು ಸಿದ್ಧವಾಗುತ್ತಿತ್ತು. ನಮ್ಮ ಮನೆಯ ಜೂನಿಯರ್ ಮರಿಯಾಯಿತು. ಬಹಳ ಮುದ್ದಾದ ಮರಿ. ಎಂತಹವರಿಗೂ ಇದರ ಜೊತೆ ಆಡಬೇಕೆನ್ನುವ ಆಸೆ ಹುಟ್ಟಿಸುತ್ತಿತ್ತು. ಹೊರಗಿನ ಮಕ್ಕಳು ಇದನ್ನು ನೋಡಲೆಂದೇ ಬರುತ್ತಿದ್ದರು. ತುಂಬಾ ಕಟ್ಟುಮಸ್ತಾಗಿ ಬೆಳೆಯಿತು. ಎಲ್ಲರ ಅಚ್ಚುಮಚ್ಚಿನ ಮರಿಯಾಯಿತು. ಇದೂ ನಮ್ಮ ಮಾತನ್ನು ಅಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದು ಕಲಿಯಿತು. ಆದರೆ ಕೆಟ್ಟ ಚಾಳಿಯೊಂದನ್ನು ಬೆಳೆಸಿಕೊಂಡಿತು. ಯಾವಾಗಲೂ ತೋಟದಾಚೆಗೆ ಹೋಗಲು ಯತ್ನಿಸುತ್ತಿತ್ತು. ಈ ಜಾತಿ ನಾಯಿಗಳೆ ಹಾಗೆಂದು ಎಲ್ಲೊ ಒಂದು ಕಡೆ ಓದಿದ ನೆನಪು. ಒಂದು ದಿವಸ ಈ ಮರಿ ಪತ್ತೆನೇ ಇಲ್ಲ. ಎಲ್ಲಿ ಹುಡುಕಿದರೂ ಸಿಕ್ತಿಲ್ಲ. ಕೊನೆಗೆ ಸುದ್ದಿ ಬಂತು. ನಮ್ಮ ತೋಟದಿಂದ ತುಸುದೂರದಲ್ಲಿ ದಾರಿ ಮಧ್ಯೆ ನಿಂತಿತ್ತಂತೆ. ಒಂದು ಅಂಬಾಸಿಡರ್ ಕಾರಿನವರು ನಿಲ್ಲಿಸಿ ಬಾಗಿಲು ತೆಗೆದು ಹತ್ತು ಬಾ ಎನ್ನಲು ಹತ್ತಿಕೊಂಡು ಹೋಯಿತಂತೆ. ಅವರ ತೋಟದ ಮನೆಗೆ ಇವರು ಹೋಗಿ ಸ್ಕೂಟರ್ ಹತ್ತು ಬಾ ಎಂದರು. ಹತ್ತಿತು. ಕರೆದುಕೊಂಡು ಬಂದರು.

ಹೀಗಾಗಿಯೇ ಇವರ ಕಣ್ಣ ಮುಂದೆಯೇ ಇರುವಂತೆ ನೋಡಿಕೊಳ್ಳುತ್ತಿದ್ದರು. ಸ್ಕೂಟರ್ ಸ್ಟಾರ್ಟ್ ಮಾಡಿದ ಸದ್ದು ಕೇಳಿದ ಕೂಡಲೇ ಬರುವಂತೆ ಅಭ್ಯಾಸ ಮಾಡಿದ್ದರು. ಎಲ್ಲೇ ಇದ್ದರೂ ಯಾರಿಗಾದರೂ ಡಿಕ್ಕಿಕೊಟ್ಟರೂ ಮನುಷ್ಯರಿರಬಹುದು ಮರದ ತುಂಡಿರಬಹುದು ಒಂದೇ ಉಸಿರಿನಲ್ಲಿ ಓಡಿ ಬಂದು ಇವರನ್ನು ಸೇರಿಕೊಳ್ಳುತ್ತಿತ್ತು.

ಸಂಜೆ ಹೊತ್ತು ನನ್ನ ಜೊತೆಯಲ್ಲೇ ಮನೆ ಒಳಗೇ ಓಡಾಡಿಕೊಂಡಿರುತ್ತಿತ್ತು. ನಾನು ನಮ್ಮ ಹಾಸಿಗೆ ಮಾಡುವಾಗ ಮಲಗುವ ಕೋಣೆ ಒಳಗೆ ಬರದೆ ಬಾಗಿಲ ಪರದೆ ಮಧ್ಯೆ ಮುಖ ತೂರಿಸಿ ಪಿಳಿಪಿಳಿ ಕಣ್ಣು ಬಿಡುತ್ತಾ ನಾನು ಅತ್ತಿತ್ತ ಸರಿದಾಗ ಅದೂ ಮುಖ ಸರಿದಾಡಿಸುತ್ತಿತ್ತು. ಆಮೇಲೆ ಮಹಡಿ ಮೇಲೆ ಕಂಪ್ಯೂಟರ್ ಮುಂದೆ ಕೂತಿರುತ್ತಿದ್ದ ಇವರ ಪಕ್ಕದಲ್ಲಿ ಮೂಲಗಿಸುತ್ತಾ ಕುಳಿತಿರುತ್ತಿತ್ತು.

ಮೂರು ವರ್ಷದ್ದು ಮರಿ ತುಂಬ ಚೆನ್ನಗಾಯ್ತು. ಒಂದು ದಿನ ಎಷ್ಟು ಕರೆದರೂ ಬರಲೇ ಇಲ್ಲ. ಇವರು ಉದ್ವೇಗಗೊಂಡರು. ತಕ್ಷಣ ರಸ್ತೆಗೆ ಹೋಗಿರಬೇಕೆಂದೆಣಿಸಿ ಸ್ಕೂಟರ್ ಹತ್ತಿ ಹುಡುಕಿಕೊಂಡು ರಸ್ತೆಗೆ ಹೋದರು. ಈ ಮರಿ ತೋಟದ ಮೂಲೆಯಲ್ಲಿತ್ತೆಂದು ತೋರುತ್ತೆ. ಇವರನ್ನು ತಲುಪಬೇಕೆನ್ನುವ ಒಂದೇ ಉತ್ಕಟೆಯಲ್ಲಿ ಯಾವುದನ್ನೂ ಲೆಕ್ಕಿಸಿದೆ ರಸ್ತೆಗೆ ಮುನ್ನುಗಿತು. ಆಗ ಒಂದು ಲಾರಿ ಡಿಕ್ಕಿ ಹೊಡೆದು ಹೋಯಿತು. ಇವರು ಮರಿಯನ್ನು ಕೈಯಲ್ಲಿ ಎತ್ತಿಕೊಂಡರು. ಅಲ್ಲೇ ಕೊನೆ ಉಸಿರೆಳೆಯಿತು. ಮನೆಗೆ ತಂದರು. ನಮ್ಮ ರೈಟ್ರು ಶಿವ, ನಾನು ಅತ್ತೂ ಅತ್ತೂ ಸಾಕಾಯಿತು. ಇವರೇ ನಮ್ಮನ್ನು ಸಮಾಧಾನಮಾಡಬೇಕಾಯಿತು.

ಮರುದಿನ ನವೆಂಬರ್ ಫಸ್ಟ್, ಮೈಸೂರಿಗೆ ಹೋಗುವವರಿದ್ದೆವು. ಎಷ್ಟೋ ದೂರ ದಾರಿ ಸವೆಸಿದ್ದಾಗ ಅದು ಹೇಗೋ ಏನೋ ನಮ್ಮಿಬ್ಬರಿಗೂ ಒಂದೇ ಸಲ ಮರಿಯ ನೆನಪಾಯಿತು. ಇವರು ಕಾರು ಡ್ರೈವ್ ಮಾಡಕ್ಕಾಗ್ತಿಲ್ಲೆಂದು ಕಾರು ನಿಲ್ಲಿಸಿದರು. ನಾನು ಅಳುತ್ತಿದ್ದೆ.

ಮೈಸೂರಿನಿಂದ ಹಿಂತಿರುಗಿದಾಗ ತಿಳಿಯಿತು. ಎರಡು ಬಾತುಕೋಳಿಯನ್ನೂ ಯಾರೋ ಕದ್ದಿದ್ದರು. ನಮ್ಮ ಮಕ್ಕಳು ಮತ್ತೊಂದು ಮರಿ ತಂದುಕೊಡಲು ಸಿದ್ಧರಾದರು. ನಮಗೆ ವಯಸ್ಸಾಯಿತು. ನೋಡಿಕೊಳ್ಳುವುದು ಕಷ್ಟ. ಬೇಡೆಂದರು ಇವರು. ಲೋಕಲ್ ನಾಯಿಗಳನ್ನೇ ಸಾಕಿದ್ದೇವೆ ಈಗ.