ಉಳಿದದ್ದು ಅರ್ಧ ಕವಿತೆ 

ಇಲ್ಲಿ ಎಲ್ಲ ಕ್ರೋಧತೆಗಳು ಹುತ್ತಗಟ್ಟಿವೆ
ಬಾಗಿಲವರೆಗೂ ಧಾವಿಸಿದ ಆಕ್ರೋಶಗಳು
ಬೀದಿಯಲಿ ಗಸ್ತು ಹೂಡಿವೆ

ನಗರದ ನಡುರಸ್ತೆಯಲಿ
ತೆವಳುವ ಇರುವೆ ಎದೆಗೂಡಿನ ಶಬ್ದ ಕೇಳಲಾಗದು ಇನ್ನು
ಅದರ ಅಂಗಾಲಿಗೆ ತಗುಲಿದ ನೆತ್ತರ ಅಳಲಿಗೆ
ರೆಕ್ಕೆಗಳಚಿದ ಸಮೀರನ ತಣ್ಣನೆ ಕೊರೆತ

ಬದುಕು ಉರಿದು ಹೋದ ಅರ್ಧ ಸಿಗರೇಟಿನ ಕಿಟ್ಟಂತೆ
ಇನ್ನರ್ಧ ಕವಿತೆಗಳಲ್ಲದ ಕವಿತೆಗಳಲಿ
ಅವಿತು ಜೀವ ಚೈತನ್ಯದ ಹಾಡು ಹಾಡಿದಂತೆ

ಏನಾದರೇನಂತೆ
ಅರಾಜಕತೆಯ ದಿನಗಳಲಿ ನಾಲಿಗೆ ಉದ್ದ ಸ್ವಾಮಿ
ಮುರಿದು ಹೋದ ಕೊಂಬೆ ಮೇಲಿನ ಹಕ್ಕಿಯ
ಜೀವಸ್ವರ ಕೇಳಲು ಕಿವಿಗಳು ಎಲ್ಲಿ

ಕವಿಯ ಎಲ್ಲ ಭಾವಗಳು ಅಭಾವಗಳಲ್ಲೇ
ಜೀವ ಕಳೆದುಕೊಳ್ಳುತ್ತಿವೆ
ಉಳಿದದ್ದು ಅರ್ಧ ಕವಿತೆ ಮಾತ್ರ
ಮತ್ತೆ ಬದುಕು ಅಷ್ಟೇ…

ನೂರುಲ್ಲಾ ತ್ಯಾಮಗೊಂಡ್ಲು ಬೆಂಗಳೂರು ಗ್ರಾಮೀಣ ಜಿಲ್ಲೆ ತ್ಯಾಮಗೊಂಡ್ಲುವಿನವರು
ನ್ಯಾಯಾಂಗ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ
“ಬೆಳಕಿನ ಬುಗ್ಗೆ” ಮತ್ತು “ನನ್ನಪ್ಪ ಒಂದು ಗ್ಯಾಲಕ್ಸಿ” ಇವರ ಪ್ರಕಟಿತ ಕವನ ಸಂಕಲನಗಳು.
ಕವಿತೆ, ಕಥೆ, ವಿಮರ್ಶೆಯಲ್ಲಿ ಆಸಕ್ತಿ.