ಕಪ್ಪು ಕ್ಯಾನ್ವಾಸಿನಲಿ ಮೂಡುವ ಬೆಳಕಿನ ಹಕ್ಕಿ

ಅವನೆಂದರೆ ಅವನೇ,
ಈ ಒಡಲ ರಿಕ್ತ ಭಾಷೆಗೆ ಬೆನ್ನು ಕೊಟ್ಟ ಗಳಿಗೆ
ಏಸೊಂದು ಪಕ್ಷಿಗಳ ರೆಕ್ಕೆಗಳುದುರಿ
ಅನಾಥವಾದವು ಮತ್ತೆ ಮಣ್ಣು

ಹಸಿ ಮಣ್ಣ ಗೋಡೆಯಲಿ ಗೀಚಿದ
ನವಿಲ ಕಣ್ಣು-
ಸೂರ್ಯನ ಅಘೋಷಿತ ನೆರಳು
ರೆಪ್ಪೆಗಳಲಿ ತಣ್ಣನೆ ಕೊರೆತ

ಇಲ್ಲೀಗ ದಾರಿಗಳೇ ವಂಚಿತ-
ನಿರ್ವಚಿಸುವ ಅಲೆಗಳಿಗೆ ಸಿಕ್ಕಿ
ತಡವರಿಸುವ ಕಾಲ್ಬೆರಳುಗಳ
ನೂರೊಂದು ಕಥೆಗಳ ವೇದನೆ

ಸಂಜೆಯ ನೀಲಾಕಾಶ
ತೆವಳಿ ಹೋದ ಚಂದ್ರ ಚುಕ್ಕಿ
ಕರುಳ ಕಿಬ್ಬಲಿ ಸಿಕ್ಕಿಕೊಂಡಂತೆ
ಮುರಿದು ಹೋದ ರೊಟ್ಟಿ ತುಂಡು

ಉಸಿರು ಕಟ್ಟಿಕೊಂಡ ತುಟಿಗಳಂಚಲಿ
ಜೀವಧ್ವನಿಯ ಆಲಾಪ
ಒಂದು ಬೇಗುದಿಯ ಮೊಳಕೆ
ಎದೆಯ ಗೂಡಲಿ ಜೀವ ಹಿಡಿದು ತೊಳಲುತಿದೆ

ನಿತ್ಯವು ಎದೆಗೆ ಆಲಂಗಿಸುವ
ಈ ದುರ್ಬರ ರಾತ್ರಿಗಳಲಿ ಕನಸುಗಳ ಕಾದಾಟ
ಕಪ್ಪು ಕ್ಯಾನ್ವಾಸಿನಲಿ ಮೂಡುವ ಬೆಳಕಿನ ಹಕ್ಕಿ
ಒಂದು ಮುದದ ಹಾರಾಟ

ನೂರುಲ್ಲಾ ತ್ಯಾಮಗೊಂಡ್ಲು ಬೆಂಗಳೂರು ಗ್ರಾಮೀಣ ಜಿಲ್ಲೆ ತ್ಯಾಮಗೊಂಡ್ಲುವಿನವರು
ನ್ಯಾಯಾಂಗ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ
“ಬೆಳಕಿನ ಬುಗ್ಗೆ” ಮತ್ತು “ನನ್ನಪ್ಪ ಒಂದು ಗ್ಯಾಲಕ್ಸಿ” ಇವರ ಪ್ರಕಟಿತ ಕವನ ಸಂಕಲನಗಳು.
ಕವಿತೆ, ಕಥೆ, ವಿಮರ್ಶೆಯಲ್ಲಿ ಆಸಕ್ತಿ.