ಪ್ರೀತಿ ಮತ್ತು ಪ್ರಶ್ನೆ

1

ಆ ಚಲಿಸುವ ಗಾಳಿಯನು ತಡೆದು
ಅದರ ರೆಕ್ಕೆಗಳಿಗೆ ನಮ್ಮ ಹೃದಯದ
ಪ್ರೀತಿಯ ಪತಂಗಗಳನ್ನು ಕಟ್ಟಿ
ನಮ್ಮಿಂದ ಅಗಲಿ ಹೋದವರ ಊರಿ(ದೇಶ)ಗೆ ಕಳುಹಿಸುವೆ
ಮತ್ತೆ ಹೇಳುವೆ ಗಾಳಿಗೆ
ಅಲ್ಲಿಂದ ಅವರ ಹೃದಯಗಳಿಂದಲೂ
ಪ್ರೀತಿಯ ಅಪ್ಪುಗೆ ಹೊತ್ತು ತಾ ಎಂದು

2

ಈಗ..
ಸರಹದ್ದುಗಳ ಗೋಡೆಗಳನ್ನು
ಕೆಡವಿ, ಬಾಚಿ
ಒಂದು ಹೊಸದಾದ ಸ್ತಂಭವನ್ನು ಕಟ್ಟುವೆ
ಬಹುಶಃ ಆಕಾಶಕ್ಕೆ ಮುಟ್ಟುವ ಹಾಗೆ

ನಮ್ಮ ಸುತ್ತಲು ಹಬ್ಬಿಕೊಂಡಿರುವ
ಕತ್ತಲನ್ನು ಮುಷ್ಟಿಯಲಿ ಅದುಮಿ, ಹಿಡಿದು
ಹೊಸದೊಂದು ದೀಪ ಮುಡಿಸಿ
ಆ ಬೃಹದಾದ ಸ್ತಂಭದ ಮೇಲಿಟ್ಟು
ಮತ್ತೆ
ಹಗಲಲಿ ಸೂರ್ಯನ ಬೆಳಕನ್ನು ಕಿತ್ತು
ಇರುಳಲಿ ಚಂದ್ರ ತಾರೆಯರ ಜೋತ್ಸ್ನೆ ಕಿತ್ತು
ಅದರಲಿ ತುಂಬುವೆ
ನಮ್ಮ ನಮ್ಮ ನಡುವೆ ಎಂದೂ
ಕತ್ತಲು ಬಾರದಂತೆ

3

ಈ ಮಣ್ಣಿನಲಿ ಮೊಳೆಯುವ
ಬೀಜಗಳು ಈಗಲೂ ಕೇಳುತ್ತವೆ
ಆ ಎಲ್ಲಿ, ಮತ್ತೊಬ್ಬ ಜೊತೆಗಾರ
ನಾನು ಅನಾದಿಯಿಂದಲೂ
ಒಡೆದ ಎರಡು ಕಾಳಿನ ಭಾಗವೇ ಆಗಿರುವೆ
ಸೌಹಾರ್ದದ ಉಣಿಸಿಗೆ
ಒಂದು ಕಾಳನ್ನು ಉಳಿಸಿ ಏನು ಮಾಡುವೆ?
ನೀನೇನು ದಾಯದಿಯಾಗಿಲ್ಲ ತಾನೇ?

ನೂರುಲ್ಲಾ ತ್ಯಾಮಗೊಂಡ್ಲು ಬೆಂಗಳೂರು ಗ್ರಾಮೀಣ ಜಿಲ್ಲೆ ತ್ಯಾಮಗೊಂಡ್ಲುವಿನವರು
ನ್ಯಾಯಾಂಗ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ
“ಬೆಳಕಿನ ಬುಗ್ಗೆ” ಮತ್ತು “ನನ್ನಪ್ಪ ಒಂದು ಗ್ಯಾಲಕ್ಸಿ” ಇವರ ಪ್ರಕಟಿತ ಕವನ ಸಂಕಲನಗಳು.
ಕವಿತೆ, ಕಥೆ, ವಿಮರ್ಶೆಯಲ್ಲಿ ಆಸಕ್ತಿ.