ಅಡಿಗೆ ಮನೆಗೆ ಹೊಂದಿಕೊಂಡ ದೊಡ್ಡ ಲಾಯಕ್ಕೆ ಕಂಬಿಕಿಟಕಿಗಳ ಗೋಡೆ. ಪುಟ್ಟದೊಂದು ಊಟದ ಟೇಬಲ್ಲು, ಒಂದು ಹೊಲಿಗೆ ಮಿಶಿನ್ನು. ಎಷ್ಟು ಪುಟಾಣಿ ಮಕ್ಕಳಿಗೂ ಎಟುಕಬಹುದಾದ ಕಿಟಕಿಕಂಬಿಗಳಿಂದ ನೋಡಿದರೆ ದೊಡ್ಡದಾದ ಅಂಗಳ. ಮಧ್ಯದಲ್ಲೊಂದು ಬಿಲ್ಪತ್ರೆ ಮರ. ಅದರ ಸುತ್ತ ಒಂದು ಸಾಲು ಮಾತ್ರ ಕಟ್ಟಿದ ಕಲ್ಲಿಟ್ಟಿಗೆಯ ಕಟ್ಟೆ. ಅಂಗಳದ ತುದಿಗೆ ದೊಡ್ಡ ಕಂಪೌಂಡು. ಹಳೆಯದೊಂದು ಬಾಗಿಲು. ಅದರಾಚೆ ಕೊಟ್ಟಿಗೆ. ಅದು ದಾಟಿದರೆ ಹಿಂದಿನ ಹಿತ್ತಲಿಗೆ ಬಾಗಿಲು. ಆ ಬಾಗಿಲು ತೆಗೆದ ಕೂಡಲೆ ಬಾಗಿನಿಂತಿರುತ್ತಿದ್ದ ಹೂತುಂಬಿದ ಹಳದಿ ಬಣ್ಣದ ಬೋಗನ್ ವಿಲ್ಲಾ ಬಳ್ಳಿ..

ಅಷ್ಟು ಚಂದದ ದೊಡ್ಡದಾದ ಅಂಗಳದಲ್ಲಿ ಬೀದಿಯ ಎಲ್ಲ ಮಕ್ಕಳೂ ಸೇರಿದ್ದಾರೆ.. ಎದುರು ಮನೆ ಶುಭಾ, ಮಂಗಳಾ, ಶೆಟ್ಟರ ಮನೆಯ ಚೇತು, ಶ್ವೇತ, ರವಿ, ವಾಸಂತಿ, ಬಿಜ್ಜು, ಶೀತಲ್, ಕೋಮಲ,ಅರು, ಬೇಬಿ, ನಾನು ಮತ್ತೆ ಇನ್ನೂ ಯಾರು ಯಾರೋ. ಎರಡು ಸಾಲು ಎದುರ ಬದುರಾ ಕೂತು ಆಡುತ್ತಿದ್ದ ಆ ಆಟದ ಹೆಸರು ಮಳೆ ಬಂತು ಗಿಳಿ ಬಂತು ಪೋ ಪೋ ಪೋ.. ಅದೇನೂಂತ ಕರೆಕ್ಟಾಗಿ ಇವತ್ತಿಗೆ ನೆನಪಿಲ್ಲ. ಒಂದು ಸಾಲಲ್ಲಿ ಒಬ್ಬರು ಕಣ್ಣು ಮುಚ್ಚಿಕೊಂಡು ಕೂತಿರಬೇಕು. ಎದುರು ಸಾಲಿನವರು ಯಾರೋ ಒಬ್ಬರು ಬಂದು ಕಣ್ಣು ಮುಚ್ಚಿ ಕೂತವರನ್ನ ಮುಟ್ಟಿ ಹೋಗುತ್ತಾರೆ. ಆಮೇಲೆ ಕಣ್ಣು ತೆರೆದು ಯಾರು ಮುಟ್ಟಿದ್ದು ಅಂತ ಹೇಳಬೇಕು. ಸರಿಯಾಗಿ ಹೇಳಿದರೆ ಮುಟ್ಟಿದವರು ಈ ಸಾಲು ಸೇರುತ್ತಾರೆ. ಇಲ್ಲದಿದ್ದರೆ ಕಣ್ಣು ಮುಚ್ಚಿದ್ದವರು ಎದುರು ಸಾಲು ಸೇರಬೇಕು. ಕೊನೆಗೆ ಯಾವ ಸಾಲಿನಲ್ಲಿ ಜಾಸ್ತಿ ಜನ ಇರುತ್ತಾರೋ ಆ ಸಾಲಿನವರು ಗೆದ್ದಂತೆ. ಹೀಗೆ ಕಣ್ಣು ಮುಚ್ಚಿ ಕೂತವರನ್ನ ಮುಟ್ಟಲು ಬರುವಾಗ ಎಲ್ಲರೂ ಕೂತು ಜೋರಾಗಿ ‘ಮಳೆ ಬಂತು ಗಿಳಿ ಬಂತು ಪೋ ಪೋ ಪೋ’ ಅಂತ ಕೂಗಿ ಕಬ್ಬರಿಯುತ್ತಿದ್ದಿವಿ. ಈ ಆಟ ಮುಗೀತಾ ಬರ್ತಾ ಇದ್ದಂಗೆ ಕಂಪೌಂಡಿನಾಚೆಗಿದ್ದ ನಮ್ಮನೆಯ ಕಿರುನೆಲ್ಲಿ ಮರಕ್ಕೆ ದಾಳಿ. ಜೇಬಲ್ಲೆಲ್ಲ ತುಂಬಿಕೊಂಡು ಒಬ್ಬರ ಮನೆಯಿಂದ ಇನ್ನೊಬ್ಬರ ಮನೆಗೆ ಅಂಟಿಕೊಂಡಂತಿದ್ದ ಕಂಪೌಂಡಿನ ಮೇಲೇ ನಡೆದುಕೊಂಡು ಹೋಗಿ ಇನ್ಯಾವುದೋ ಅಂಗಳದಲ್ಲಿ ಇಳಿದು.. ನಮ್ಮ ಭಾನುವಾರದ ಸಂಜೆಗಳೆಲ್ಲಾ ಹೀಗಿದ್ದರೆ ಅದಕ್ಕೆ ಅರು ಕಾರಣ. ನಮ್ಮೆಲ್ಲರಿಗಿಂತ ಎಷ್ಟೋ ದೊಡ್ಡವಳಿದ್ದರೂ ನಮ್ಮನ್ನೆಲ್ಲ ಸೇರಿಸಿ ಆಡುತ್ತಿದ್ದ ಅವಳ ಚೈತನ್ಯ ಮತ್ತು ಪ್ರೀತಿ ನೆನಪಾದರೆ ಮನಸ್ಸು ಹೂಬಿರಿದ ಮಲ್ಲಿಗೆ ಬನದಲ್ಲಿದ್ದಂತೆ ಆಹ್ಲಾದಗೊಳ್ಳುತ್ತದೆ.

ಕೆಲವು ಜೀವಗಳೇ ಹಾಗೆ ಬಿಸಿಲ ದಾರಿಯಲ್ಲಿ ನೆನಪಾದಾಗ ತಣ್ಣಗೆ ನೆರಳಿನಂತೆ, ಚಳಿಯ ಸಂಜೆಗಳಲ್ಲಿ ಬೆಚ್ಚಗಿನ ಅಪ್ಪುಗೆಯಂತೆ, ಮಳೆಯ ದಿನಗಳಲ್ಲಿ ಬಚ್ಚಲೊಲೆಯ ದೊಡ್ಡ ಬೆಂಕಿಯ ಹಿತವಾದ ಬಿಸಿಯಂತೆ ಭಾಸವಾಗಿ ನೆನಪಿಸಿಕೊಂಡ ಜೀವದ ಒಳಗೊಳಗೇ ಸೇರಿಕೊಂಡುಬಿಡುತ್ತಾರೆ.

ನಮ್ಮದೇ ಹಳವಂಡಗಳು, ತುಡಿತಗಳು, ಸುತ್ತಲ ಸಮಾಜದ ಕೊಳೆತುನಾರುತ್ತಿರುವ ಕೆರೆಹೊಂಡಗಳು, ಪ್ರಗತಿಯದಾರಿಗೆ ಮೆಟ್ಟಿಲಾಗಲು ಉರುಳಿಬೀಳುವ ಮರಗಳು, ರಿಯಲ್ ಎಸ್ಟೇಟಿನ ಅಮಾನುಷ ಗತಿ, ಎಲ್ಲರೂ ಆಸೆಪಟ್ಟು ಕೊಂಡುಕೊಳ್ಳುವ ವಾಹನಗಳಿಂದ ಚೆಲ್ಲುವ ಮಾಲಿನ್ಯ, ಬೆಲೆಯೇರಿಕೆಯ ಹಾವುಏಣಿಗಳ ನಡುವೆ ತಿಂಗಳ ಕೊನೆಗೆ ಎಲ್ಲಕ್ಕೂ ಪರದಾಡುವ ಮಧ್ಯಮ ವರ್ಗದ ನನ್ನದೇ ಜನ, ತಿಂಗಳ ಮೊದಲಿಂದಲೂ ಪರದಾಡುತ್ತಲೇ ಬದುಕುವ ಉಳಿದವರು, ಯಾರದೋ ಜಗಳಕ್ಕೆ ಇನ್ಯಾರದೋ ಕೋಪಕ್ಕೆ ಅನ್ಯಾಯವಾಗಿ ಬಲಿಯಾಗುವ ನಮ್ಮ ರೈತ, ಒಂದು ಬಲಿ ಬಿದ್ದ ಕೂಡಲೇ ಕಿಟಾರನೆ ಕಿರುಚುತ್ತಾ ಮೈಕು ಕ್ಯಾಮೆರಾ ಹಿಡಿದು ಅವರ ಕಣ್ಣ ಹನಿ, ಬೆನ್ನ ಬಾಗು, ಹರಿದ ಪಂಚೆಯ ತೂತನ್ನೂ ದೊಡ್ಡ ದೊಡ್ಡ ಭೂತಗನ್ನಡಿಯಂತ ಎಲ್.ಸಿ.ಡಿ ಟೀವಿಗಳಲ್ಲಿ ಪ್ರಸಾರ ಮಾಡುತ್ತಾ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಚಾನೆಲ್ಲುಗಳು, ಪುಟ್ಟ ಬಾಲೆಯ ಕೊಲೆಯನ್ನು ರಾಷ್ಟೀಯ ಸುದ್ದಿಯಾಗಿ ದಿನದಿನದ ಪ್ರೈಂ ಟೈಂಗಳಲ್ಲಿ ನಮಗೆ ತಿನಿಸುತ್ತಾ, ಅವರ ಖಾಸಗಿ ಬದುಕನ್ನು ನಮ್ಮ ಊಟಕ್ಕೆ ಉಪ್ಪಿನಕಾಯಂತೆ ರುಚಿಕರವಾಗಿ ಬಡಿಸುತ್ತಿದ್ದರೆ, ರಾಜಕೀಯದ ಮಂದಿ ಪಕ್ಷಾತೀತವಾಗಿ ತಮ್ಮ ತಮ್ಮ ಬುಡ ಗಟ್ಟಿ ಮಾಡುಕೊಳ್ಳುವುದನ್ನು ಲಜ್ಜಾಸ್ಪದವಾಗಿ ನಮ್ಮ ವಿದಾನಸಭೆ, ಸಂಸತ್ತುಗಳಲ್ಲಿ ಪ್ರದರ್ಶಿಸುತ್ತಿದ್ದರೆ, ಅಲ್ಲಿ ಗಡಿಯಲ್ಲಿ ಚಳಿಯಲ್ಲಿ ಕಾಯುವ ಸೈನಿಕರು,ಇಲ್ಲಿ ಆಸ್ಪತ್ರೆಗಳಲ್ಲಿ ಸಿಡುಕುತ್ತಿದ್ದರೂ ರಸಿಕೆ ಬಂದ ಗಾಯಗಳನ್ನು ಒರೆಸುತ್ತಾ ಪ್ಯಾನ್ ಕೊಡುವ ನರ್ಸ್ ಗಳು, ತುಂಬಿ ಸುರಿಯುವ ಮಳೆಯಲ್ಲಿ ಸೀರೆ ಮೇಲೆತ್ತಿ ,ಕೊಡೆ ಹಿಡಿದು ಹಳ್ಳಿದಾರಿಯ ಪುಟ್ಟಶಾಲೆಗೆ ಹೋಗುವ ಟೀಚರ್ರು, ಎಲ್ಲ ರಾಜಕೀಯಗಳ ಬೇಲಿಯಾಚೆಯ ಹೊಲದಲ್ಲಿ ಹಿಂದಿನ ವರ್ಷದ ಕಷ್ಟ ಮರೆತು ಈ ವರ್ಷದ ಅನ್ನಕ್ಕೆ ಬೀಜ ಬಿತ್ತುವ ರೈತಾಪಿ ಸಮುದಾಯ, ಎಲ್ಲ ನೆನಪಾಗಿ ಯಾಕೋ ಮನಸ್ಸು ಕಲಸಿ ಹೋಗಿದೆ. ಯಾಕೆ ಯಾವಾಗಲೂ ಬಗ್ಗಿದವರಿಗೇ ಗುದ್ದು? ಕಷ್ಟಪಡುವವರು ಕಷ್ಟಪಡುತ್ತಲೇ ಇರುತ್ತಾರೆ, ಯಾವ ಸಾಮಾಜಿಕ ಬದ್ಧತೆ ಇಲ್ಲದ ಪ್ರಾಮಾಣಿಕತೆ ಇಲ್ಲದ ವರ್ಗ ಇವರನ್ನು ಸವಾರಿ ಮಾಡುತ್ತಲೇ ಇರುತ್ತದೆ?

ನಾಲ್ಕೈದು ದಿನಗಳಿಂದ ಒಂದು ಬಗೆಯ ಸೂನಾ ಸೂನಾ ಮನಸ್ಸು. ಮಾಡಲೇಬೇಕಿರುವ ಆಫೀಸಿನ ಕೆಲಸ ಮುಗಿಸಿ, ಹೇಗೆ ಹೇಗೋ ಅಕ್ಕಿ ಬೇಳೆ ಬೇಯಿಸಿಕೊಂಡು ದಿನಗಳನ್ನು ತಳ್ಳಿದೆ. ಇವತ್ತು ಎಲ್ಲ ಭಾರದ ಕ್ಷಣಗಳ ಮೋಡ ಕಟ್ಟಿ ಕಣ್ಣಂಚಲ್ಲಿ ಹನಿಯಾಗಿ ಬಂತು. ಹನಿಮೂಡಿದ ಕ್ಷಣಗಳ ನೆನಪಲ್ಲಿ ಬಂದವಳು ಅರು. ಅವಳ ಚೈತನ್ಯಪೂರ್ಣ ನೆನಪು, ಒಳ್ಳೆಯತನ, ಇನ್ನೂ ಎಷ್ಟೋ ಜೀವಗಳ ನೆನಪು, ಮತ್ತು ಒಳ್ಳೆಯತನಗಳ ಪ್ರವಾಹದಲ್ಲಿ ಸವಾರಿ ಹೊರಡಿಸಿತು. ಎಲ್ಲ ಬೇಸರಗಳ ನಡುವೆ ಒಂದು ಭರವಸೆ, ಅಲ್ಲಲ್ಲಿ ಒಳ್ಳೆಯವರು ಆಗಿ ಹೋಗಿದ್ದಾರೆ, ಇನ್ನೂ ಬದುಕಿದ್ದಾರೆ, ಮುಂದೂ ಇರುತ್ತಾರೆ, ಎಲ್ಲ ನೋವುಗಳಿಗೆ ಒಂದು ತಂಪು ಸ್ಪರ್ಶವಾಗಿ, ಸಹಿಸಿಕೊಳ್ಳುವ ಶಕ್ತಿಯ ಕೇಂದ್ರವಾಗಿ, ಸಾಂತ್ವನದ ಮಡಿಲಾಗಿ ಇರುತ್ತಾರೆ.

ಅಲ್ಲವಾ? ನಿಮಗೇನೆನಿಸುತ್ತದೆ?