ಒಂದು ಕಾಲಕ್ಕೆ ಅಜ್ಜಿ ಮನೆಗೆ ಹೋಗುವುದೆಂದರೆ ಸ್ವರ್ಗ ಸಿಕ್ಕಂತಾಗುತ್ತಿತ್ತು. ಅಪ್ಪನ ಪರಾಕ್ರಮ ಒಂದೆರಡಲ್ಲ! ಆಗ ಕಾಲು ನಡಿಗೆಯ ದಾರಿ. ಅದೇ ಸುಖ. ತೋಟ ತುಡಿಕೆಯ ಹಣ್ಣು ಹಂಪಲು ತಿಂದು ಹೊಳೆ ದಂಡೆಯಲ್ಲಿ ಸಾಗುವಾಗ ದಣಿವೇ ಇರಲಿಲ್ಲ. ಆ ಹೆಗಲಿನ ರೇಡಿಯೊ ಏನೇನೊ ಹಾಡಿ ಮಾತಾಡುತಿತ್ತು. ಅದರತ್ತ ನನಗೆ ಗಮನವಿರಲಿಲ್ಲ. ಅಪ್ಪನಿಗೆ ಅದೊಂದು ದೊಡ್ಡಸ್ತಿಕೆಯ ತೋರಿಕೆ. ಅಲ್ಲಲ್ಲಿ ಸಿಗುತ್ತಿದ್ದ ಊರುಗಳಲ್ಲಿ ಜನ ನಮ್ಮನ್ನು ಬೆರಗಾಗಿ ನೋಡುತ್ತಿದ್ದರು. ಆ ಕಾಲಕ್ಕೆ ರೇಡಿಯೊ ಶ್ರೀಮಂತಿಕೆಯ ಸಂಕೇತವಾಗಿತ್ತು.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ನಾಲ್ಕನೆಯ ಕಂತು

 

‘ಯೀ ಹಾಳಾದ ಊರ ಬಿಟ್ಟು ಎಲ್ಲಿಯಾದರೂ ಕಣ್ಣಿಗೆ ಮರೆಯಾದ ಪೇಟೆ ಸೇರಿಕೊ’ ಎಂದು ಅನೇಕರು ಆಗ್ರಹಿಸುತ್ತಿದ್ದರು. ಅದರಲ್ಲಿ ಅರ್ಥಗಳಿದ್ದವು. ನನಗೆ ಭಯವೋಭಯ. ಎಲ್ಲಿ ಹೋಗುವುದೆಂದು ಗೊಂದಲ. ದಿಕ್ಕಿಲ್ಲದ ತಬ್ಬಲಿ. ಅಪ್ಪ ಹೊಡೆದೊಡೆದು ಮುಖ ಊದಿಸಿದ್ದ. ರಪ್ ಎಂದು ನುಲಿದು ಬಚ್ಚಲಿಗೆ ಎಸೆದಿದ್ದ. ತಲೆಗೆ ಪೆಟ್ಟಾಗಿತ್ತು. ತುಟಿ ಹರಿದಿತ್ತು. ಕಪೋಲ ಊದಿ ನೀಲಿಗಟ್ಟಿತ್ತು. ಸಂತೆಗೆ ಹೋದೆ. ಅಲ್ಲಿ ನನ್ನ ತಾಯ ತಾಯಿ ಪ್ರತಿ ವಾರವೂ ಕೋಳಿ ವ್ಯಾಪಾರಕ್ಕೆ ಬರುತ್ತಿದ್ದಳು. ತರಾವರಿ ಕಾಳುಗಳನ್ನೂ ಮಾರುತ್ತಿದ್ದಳು. ಅವಳ ನಾಲ್ಕು ಜನ ಗಂಡು ಮಕ್ಕಳ ಲೋಕವೇ ಬೇರೆ ಇತ್ತು. ಅಜ್ಜಿ ನನ್ನ ಮೇಲೆ ಒಂದು ಕಾಲಕ್ಕೆ ಅಪಾರ ಪ್ರೀತಿ ತೋರುತ್ತಿದ್ದಳು. ನಾನೀಗ ಆಕೆಗೆ ಬೇಡವಾಗಿದ್ದೆ. ಅದೆಲ್ಲ ರಗಳೆ. ನನ್ನ ಮಗಳ ಸಾವಿಗೆ ನೀನೇ ಕಾರಣ ಎಂದು ತಿರಸ್ಕರಿಸಿದ್ದಳು. ಮುಂದೆ ಆ ಗೋಳನ್ನು ಹೇಳುವೆ. ಅಜ್ಜಿಯ ಮೇಲಿನ ನನ್ನ ವಿಶ್ವಾಸ ಅಚಲವಾಗಿತ್ತು.

ಗಿಜಿಗುಟ್ಟುವ ಸಂತೆ. ತರಾವರಿ ವ್ಯಾಪಾರದ ಸದ್ದು. ಅವರ ಸಂತೆ ಅವರ ಪಾಡಾಗಿತ್ತು. ಗಾಡಿ ಕಟ್ಟಿಕೊಂಡು ಬಂದವರು ಮರದ ನೆರಳಲ್ಲಿ ಖರೀದಿ ಮುಗಿಸಿ ವಿಹರಿಸುತ್ತಿದ್ದರು. ಬೀದಿ ಉದಕ್ಕೂ ಅದೇ ಕಾರಾಸೇವು, ಕಡ್ಲೆಪುರೀ, ಬೆಂಡು ಬತ್ತಾಸು, ಕಜ್ಜಾಯ, ಚಿಕ್ಕಿನುಂಡೇ… ಬಣ್ಣದ ಶರಬತ್ತುಗಳು, ಬಲೂನಿನ ಸಾಲುಗಳು… ಅವು ಯಾವುವೂ ನನ್ನನ್ನು ವಿಚಲಿತಗೊಳಿಸಲಿಲ್ಲ. ಅವು ಯಾವೂ ನನಗೆ ಸಿಗುವುದಿಲ್ಲ ಎಂಬುದು ಖಚಿತವಿತ್ತು. ಆಸೆಯೇ ಸುಳಿಯುತ್ತಿರಲಿಲ್ಲ. ಅಪ್ಪನ ಏಟಿನ ಬಾದೆಯಿಂದ ಕುಂಟುತ್ತ ಸಂತೆಗೆ ಬಹಳ ದೂರದಿಂದ ಜೀವ ಹಿಡಿದು ನಡೆದು ಬಂದಿದ್ದೆ. ಯಾರಾದರೂ ನೋಡಿ, ನಿನ್ನ ಮಗ ಸಂತೆಯಲ್ಲಿದ್ದ ಎಂದು ತಿಳಿಸಿದರೆ ಏನಾಗುವುದೊ ಎಂದು ಆತಂಕವಾಯಿತು. ಮೇಕೆ ಕುರಿ ಮಾರುವರ ಬಳಿ ಹೆಚ್ಚು ಜಂಗುಳಿ ಇರಲಿಲ್ಲ. ಏನೋ ಅಪಮಾನ ಸಂಕಟ ಕಳವಳ ಬೆವರುತ್ತಿದ್ದೆ.

ಕುರಿವಾಹನದವರು ಸಸ್ತಾ ಬೆಲೆಗೆ ಖರೀದಿಸಿ ಕುರಿಗಳ ತುಂಬಿಕೊಳ್ಳುತ್ತಿದ್ದರು. ಬರ್ತಿ ಏನೊ ಎಂದು ಕರೆದ. ಇಲ್ಲಾ ಎಂದು ತಲೆ ಆಡಿಸಿದೆ. ಅವನ ಜೊತೆ ಇದೇ ಕುರಿಗಳ ಜೊತೆ ಪಯಣ ಮಾಡಿ ಪೇಟೆ ಸೇರಬಹುದಲ್ಲಾ ಎನಿಸಿತು. ಅವನು ಕಟುಕ ಎಂಬುದು ಗೊತ್ತಿತ್ತು. ಕುರಿ ಉಣ್ಣೆಯ ಟೊಪ್ಪಿ ಧರಿಸಿದ್ದ. ದೊಗಳೆ ಪಯಿಜಾಮ, ಹತ್ತಿರ ಕರೆದು ಊದಿದ್ದ ಮುಖವ ದಿಟ್ಟಿಸಿ, ನೀಲಿ ಕಪೋಲದ ಮೇಲೆ ಮೆಲ್ಲಗೆ ಸವರಿ; ‘ಅಯ್ಯೋ, ಯಾವ ಪಾಪಿಯೊ ನಿನಗೆ ಈ ಪರಿ ಬಡಿದವನು’ ಎಂದು ಲೊಚಗುಟ್ಟಿದ. ಹಾಗೆ ಯಾರೊ ಒಬ್ಬ ಅಪರಿಚಿತ ಕಟುಕ ಸಂತೆಯ ಕುರಿ ವ್ಯಾಪಾರದಲ್ಲಿ ಕೇಳಿದಾಗ ಪಳಪಳನೆ ಕಣ್ಣೀರು ಜಾರಿಬಿದ್ದವು.

ವ್ಯಾಪಾರ ಸಾಕು ಬಾರಣ್ಣಾ ಎಂದು ಡ್ರೈವರ್ ಕರೆಯುತ್ತಿದ್ದ. ಬಾರೊ ಎಂದು ಕೊನೆಯದಾಗಿ ಕರೆದ. ಅವನು ಎಳೆದು ಕುರಿಗಳ ಜೊತೆ ದೂಡಿ ಬಾಗಿಲು ಹಾಕಿಕೊಂಡು ಹೊರಟಿದ್ದರೆ ನಾನೇನೂ ಮಾಡುತ್ತಿರಲಿಲ್ಲ. ಅತ್ತ ಇತ್ತ ತೂಗಾಡುತ್ತಿದ್ದೆ. ಆ ಸಾಬಿ ಬಿಟ್ಟುಹೋಗಿದ್ದ. ಹೊತ್ತು ಇಳಿಯುತ್ತಿತ್ತು. ದೊಡ್ಡ ಸಂತೆ ಸುತ್ತೇಳು ಹಳ್ಳಿಗಳಿಗೆಲ್ಲ. ಅಜ್ಜಿ ಮುಂದೆ ನಿಲ್ಲಲು ಏನೋ ತೊಡಕು. ಅವಳ ಸಂತೆಯ ಮಾಮೂಲ ಜಾಗದ ಬಳಿ ಹೋದೆ. ಮರೆಯಲ್ಲಿ ನಿಂತು ಗಮನಿಸಿದೆ. ಪ್ರೀತಿಯಿಂದ ಸಾಕಿ ತಂದು ಮಾರುತ್ತಿದ್ದ ಅವಳ ಕೋಳಿಗಳು ಕಾಲುಕಟ್ಟಿಸಿಕೊಂಡು ಬಿಕರಿಯಾಗದೆ ಬಿದ್ದಿದ್ದವು. ಅದೇ ಬಡಕಲು ಗಾಡಿ ಮೂಕಿಯನ್ನು ನೆಲಕ್ಕೆ ಊರಿ ನಿಂತಿತ್ತು. ಸಂತೆ ಮುಗಿಯುತ್ತಿದೆ ಎಂದು ಅಜ್ಜಿ ಕೋಳಿಗಳನ್ನು ಕಡಿಮೆ ಬೆಲೆಗೆ ಕೂಗುತ್ತಿದ್ದಳು. ಕೊಟ್ಟಷ್ಟು ಕೊಡಿ ಎನ್ನುತ್ತಿದ್ದಳು. ನಿಗಧಿಯಾದ ಬೆಲೆ ಏನೂ ಇಲ್ಲ. ಅವಳು ಯಾವತ್ತೂ ಲಾಭವನ್ನು ಕಂಡವಳೇ ಅಲ್ಲಾ. ನಷ್ಟದ ಬಾಬತ್ತೇ ಅವಳ ಬಾಳುವೆಯಾಗಿತ್ತು.

ಅವಳ ಮುಂದೆ ನಿಲ್ಲಲು ಎಷ್ಟೊಂದು ಹಿಂಜರಿತವಾಗುತ್ತಿತ್ತು ಎಂದರೆ, ಹಿಂತಿರುಗಿ ಹೊರಟು ಹೋಗುವ ಎನಿಸಿತ್ತು. ಮರೆಯಲ್ಲಿ ನಿಂತು ಅಜ್ಜಿಯನ್ನೇ ಗಮನಿಸುತ್ತಿದ್ದೆ. ಅವಳು ಮುನಿದರೆ ಮಾರಿಯಾಗಿ ಬಿಡುತ್ತಿದ್ದಳು. ಗಂಡಸರ ಮುಡಿ ಹಿಡಿದು ಕಾರ ಆಡಿಸಿಬಿಡುತ್ತಿದ್ದಳು. ಒಂದು ಕಾಲಕ್ಕೆ ಅಜ್ಜಿ ಮನೆಗೆ ಹೋಗುವುದೆಂದರೆ ಸ್ವರ್ಗ ಸಿಕ್ಕಂತಾಗುತ್ತಿತ್ತು. ಅಪ್ಪನ ಪರಾಕ್ರಮ ಒಂದೆರಡಲ್ಲ! ಆಗ ಕಾಲು ನಡಿಗೆಯ ದಾರಿ. ಅದೇ ಸುಖ. ತೋಟ ತುಡಿಕೆಯ ಹಣ್ಣು ಹಂಪಲು ತಿಂದು ಹೊಳೆ ದಂಡೆಯಲ್ಲಿ ಸಾಗುವಾಗ ದಣಿವೇ ಇರಲಿಲ್ಲ. ಆ ಹೆಗಲಿನ ರೇಡಿಯೊ ಏನೇನೊ ಹಾಡಿ ಮಾತಾಡುತಿತ್ತು. ಅದರತ್ತ ನನಗೆ ಗಮನವಿರಲಿಲ್ಲ. ಅಪ್ಪನಿಗೆ ಅದೊಂದು ದೊಡ್ಡಸ್ತಿಕೆಯ ತೋರಿಕೆ. ಅಲ್ಲಲ್ಲಿ ಸಿಗುತ್ತಿದ್ದ ಊರುಗಳಲ್ಲಿ ಜನ ನಮ್ಮನ್ನು ಬೆರಗಾಗಿ ನೋಡುತ್ತಿದ್ದರು. ಆ ಕಾಲಕ್ಕೆ ರೇಡಿಯೊ ಶ್ರೀಮಂತಿಕೆಯ ಸಂಕೇತವಾಗಿತ್ತು. ಅಪ್ಪ ಫುಲ್ ಸೌಂಡ್ ಕೊಟ್ಟು ಮೀಸೆ ಮೇಲೆ ಬೆರಳಾಡಿಸಿಕೊಳ್ಳುತ್ತಿದ್ದ. ಹಾಗೆ ಅಜ್ಜಿ ಮನೆಗೆ ಹೋದಾಗಲೋ, ಎಂತಹ ಪ್ರೀತಿ ಅಕ್ಕರೆ ಗೌರವ! ಈಗ ಅವಾವೂ ಇರಲಿಲ್ಲ. ಕುಂಟುತ್ತ ಅವಳ ಮುಂದೆ ನಿಂತಿದ್ದೆ. ಅಜ್ಜಿ ಕಂಡೂ ಕಾಣದಂತೆ ಉಪೇಕ್ಷಿಸಿದಳು. ನನ್ನ ಮಗಳ ಸಾವಿಗೆ ಕಾರಣನಾದ ಅವನ ಕತ್ತು ಮುರಿವೆ ಎಂದು ಹಿಂದೆ ಅತ್ತೆಯರ ಜೊತೆ ಅಜ್ಜಿ ಹೇಳಿದ್ದನ್ನು ಮರೆತಿದ್ದೆ. ನೆನೆದು ಬೆವೆತೆ. ಮರುಕ ತೋರಲಿ ಎಂದು ನರಳುತ್ತ ನೋವು ತೋರಿದೆ. ನಿನ್ನ ಮೊಮ್ಮಗನೇನಮ್ಮಾ ಎಂದು ಗಿರಾಕಿ ಒಬ್ಬರು ಕೇಳಿದರು. ‘ಇಲ್ಲಾ ಅಂತಾ ಯೆಂಗನನಪ್ಪಾ’ ಎಂದಳು ಅಜ್ಜಿ. ಅವಳ ಅಷ್ಟೇ ಮಾತು ಸಾಕಾಗಿತ್ತು. ಸಂತೆಯ ಜನ ನಮ್ಮತ್ತ ನೋಡಿ ಬಂದು ಕೋಳಿ ಖರೀದಿಗೆ ಮನಸ್ಸು ಮಾಡುವಂತೆ ನಾನು ಇಡೀ ಸಂತೆಯೇ ಮೊಳಗುವಂತೆ ಕೂಗಾಡಿದೆ. ಬಂದರು, ನೋಡಿದರು, ವ್ಯಾಪಾರ ಮಾಡಿದರು. ಹೊತ್ತು ಕಂತುತ್ತಿತ್ತು. ವಿಚಿತ್ರ ವ್ಯಾಕುಲತೆ ಅಜ್ಜಿಯ ಗಂಟಲಲ್ಲಿ ಏರಿಳಿಯುತಿತ್ತು. ಅವಳ ಸಂಕಟ ಅರ್ಥವಾಗುತಿತ್ತು. ವ್ಯಾಪಾರ ಸಾಕೆನಿಸಿತ್ತು. ಇವನನ್ನು ಏನು ಮಾಡಲಿ ಎಂದು ಅಜ್ಜಿ ಯೋಚಿಸುತ್ತಿದ್ದಳೇನೊ. ಇಳಿ ಬಿಸಿಲ ಕಂದು ಬೆಳಕಲ್ಲಿ ಅಜ್ಜಿಯ ಹಣೆಬರವನ್ನು ತೊಳೆವಂತೆ ಬೆವರ ಹನಿಗಳು ಅಂಟಿಕೊಂಡಿದ್ದವು.

ಅಪ್ಪನ ಏಟಿನ ಬಾದೆಯಿಂದ ಕುಂಟುತ್ತ ಸಂತೆಗೆ ಬಹಳ ದೂರದಿಂದ ಜೀವ ಹಿಡಿದು ನಡೆದು ಬಂದಿದ್ದೆ. ಯಾರಾದರೂ ನೋಡಿ, ನಿನ್ನ ಮಗ ಸಂತೆಯಲ್ಲಿದ್ದ ಎಂದು ತಿಳಿಸಿದರೆ ಏನಾಗುವುದೊ ಎಂದು ಆತಂಕವಾಯಿತು. ಮೇಕೆ ಕುರಿ ಮಾರುವರ ಬಳಿ ಹೆಚ್ಚು ಜಂಗುಳಿ ಇರಲಿಲ್ಲ. ಏನೋ ಅಪಮಾನ ಸಂಕಟ ಕಳವಳ ಬೆವರುತ್ತಿದ್ದೆ.

ಅಜ್ಜಿ ಒಮ್ಮೆಯಾದರೂ, ಯಾಕೆ ಕುಂಟುವೇ, ಯಾರೊ ಹೊಡೆದವರು ಎಂದು ಕೇಳಲಿಲ್ಲ. ದುಃಖ ನನ್ನ ಗಂಟಲನ್ನು ತಿವಿಯುತಿತ್ತು. ಅವರಪ್ಪನೇ ಹೊಡೆದಿರುತ್ತಾನೆ ಎಂದು ಅಜ್ಜಿ ತಿಳಿದಂತಿತ್ತು. ಅಜ್ಜಿಯ ಜೊತೆ ಬಂಡಿಯಲ್ಲಿ ಕೂತು ಊರು ತಲುಪಬಹುದು ಎಂದು ಕಲ್ಪಿಸುತ್ತಿದ್ದೆ. ಅಜ್ಜಿ ಒಂದಿಷ್ಟಾದರೂ ಕರುಣೆಯಿಂದ ನನ್ನತ್ತ ನೋಡಿರಲಿಲ್ಲ. ಏನೋ ಚಡಪಡಿಕೆ. ದಿಟ್ಟಿಸಿ ಕೊನೆಗೆ ನೋಡಿದಳು. ‘ಬರಬಾರದಿತ್ತು! ಬಂದುಬಿಟ್ಟೆ… ನಡೀ; ನಿನ್ನ ದಾರಿ ನಿನಗೆ ತೋರುವೆ’ ಎಂದು ಕೈ ಹಿಡಿದು ಸಂತೆ ಬೀದಿಗೆ ಎಳೆ ತಂದಳು. ತಿನ್ನಲು ತರಾವರಿ ತಿನಿಸುಗಳು. ‘ತೆಗೆದುಕೊ; ನಿನಗೇನೇನು ಬೇಕೊ ಎಲ್ಲಾ ತಕೋ; ಯೆದುರ್ಕೋ ಬ್ಯಾಡಾ ತಿನ್ನು ತಿನ್ನು’ ಎಂದು ಸಕ್ಕರೆ ಮಿಠಾಯಿಯ ಅವಳೇ ಬಾಯಿಗೆ ತುರುಕಿದಳು. ಬಾಯಲ್ಲಿ ನೀರೂರಿದರೂ ಎದೆಯಲ್ಲೇನೊ ಡವಡವ ನಗಾರಿ ಬಾರಿಸಿದಂತೆ ಸದ್ದು. ‘ಬ್ಯಾಡ ಬ್ಯಾಡ ಅವ್ವಾ’ ಎಂದು ಹಿಂಜರಿದೆ. ಕಣ್ಣು ಮೆಡರಿಸಿದಳು. ಸಂತೆಯಲ್ಲಿ ಸಿಗುವ ತಿಂಡಿ ಪದಾರ್ಥಗಳನೆಲ್ಲ ಬಲವಂತವಾಗಿ ಕೊಡಿಸಿದಳು. ಅವನ್ನೆಲ್ಲ ಬುತ್ತಿಕಟ್ಟಿ ಕೈಗಿತ್ತಳು. ‘ಮತ್ತೇನು ಬೇಕು ಕೇಳೂ; ಕೊಡಿಸುವೆ’ ಎಂದು ನಿರ್ಣಾಯಕ ದನಿಯಲ್ಲಿ ಕೇಳಿದಳು. ಅಲ್ಲೇ ಪಕ್ಕದಲ್ಲಿ ಪಾಶಾಣ ಮಾರುತ್ತಿದ್ದವನು ಅಜ್ಜಿಯ ಗಮನ ಸೆಳೆದ. ಇಲಿ ಹೆಗ್ಗಣಗಳಿಗೆ ಅಜ್ಜಿ ಆಗಾಗ ಪಾಶಾಣ ಖರೀದಿಸುತ್ತಿದ್ದಳು. ತೆಗೆದುಕೊಳ್ಳುವುದೊ ಬೇಡವೊ ಎಂದು ಪಾಶಾಣದವನ ಜೊತೆ ಏನೋ ತಗ್ಗಿದ ದನಿಯಲ್ಲಿ ಮಾತಾಡುತ್ತಿದ್ದಳು. ಬೇಡ ಬೇಡ ಎಂಬಂತೆ ನನ್ನತ್ತ ನೋಡಿ ಪಾಶಾಣದವನು ತಲೆ ಆಡಿಸುತ್ತಿದ್ದ. ಹೊತ್ತು ಮುಳುಗಿತ್ತು ಸಂತೆಯ ಜನ ಕರಗುತ್ತಿತ್ತು.

‘ಅವ್ವಾ; ಕತ್ಲಾಯ್ತಾದೇ… ವೂರಿಗೆ ವೋಗುವ ನಡಿಯವ್ವಾ’ ಎಂದು ಅಧೀರತೆಯಲ್ಲಿ ಕಂಪಿಸಿದೆ. ಅಜ್ಜಿ ಮಾತಾಡಲಿಲ್ಲ. ಸಂತೆ ಬಿಕೊ ಎನ್ನುತ್ತಿತ್ತು. ಎಷ್ಟೊಂದು ಸದ್ದು ಸಡಗರ ವ್ಯಾಪಾರ… ಎಷ್ಟೊಂದು ಖಾಲಿ ಖಾಲಿ ಮೌನ… ಅಜ್ಜಿ ಕೈಯನ್ನು ಬಿಗಿಯಾಗಿ ಹಿಡಿದೇ ಇದ್ದಳು. ದಾರಿ ಪಕ್ಕದ ಮರದ ಕೆಳಗೆ ಬಹಳ ಹೊತ್ತಿನ ತನಕ ಹಾಗೇ ಕೂರಿಸಿಕೊಂಡಿದ್ದಳು. ಜೋರಾಗಿ ಉಸಿರು ಬಿಡಲೂ ಭಯವಾಗುತ್ತಿತ್ತು.

‘ಎದೇಳು… ನಡೀ… ನಿನಗೊಂದು ದಾರಿ ತೋರ್ಬೇಕೂ’ ಎಂದು ಅಜ್ಜಿ ರಭಸವಾಗಿ ತೋಳು ಹಿಡಿದೆಳೆದು ದರದರ ಎಳೆದೊಯ್ಯುವಂತೆ ಕತ್ತಲ ದಾರಿಗೆ ಬಂದಳು. ‘ಅವ್ವಾ, ಬಿಟ್‌ಬುಡವ್ವಾ… ಯಲ್ಲಾರ ವೋಗಿ ಬದಿಕತಿನಿ’ ಎಂದೆ. ಕುತ್ತಿಗೆಯ ಹಿಚುಕಿದಳು. ದಿಮೀರನೆ ಬೆನ್ನ ಮೇಲೆ ಗುದ್ದಿದಳು. ಉಸಿರು ಸಿಲುಕಿದಂತಾಯಿತು. ‘ಯಾಕವ್ವಾ’ ಎಂದು ಕೇಳುವಂತಿರಲಿಲ್ಲ. ನನ್ನ ರಟ್ಟೆಯಲ್ಲಿ ಶಕ್ತಿ ಇರಲಿಲ್ಲ. ಬಿದ್ದು ಹೊರಳಾಡಿದೆ. ಕತ್ತು ಮುರಿದು ಬಿಡುತ್ತಾಳೆ ಎನಿಸಿತು. ಮೈಗೆ ಎಣ್ಣೆ ಹಚ್ಚಿ, ಬಿಸಿ ನೀರು ಕಾಯಿಸಿ, ಸ್ನಾನ ಮಾಡಿಸಿ ತೊಟ್ಟಿಲು ತೂಗಿದ್ದವಳಲ್ಲವೇ; ಇವಳೇ ನನ್ನ ಕೊಂದು ಬಿಡಲಿ ಎಂದು ಸಾಯಲು ಮುಂದಾದೆ. ಮುಷ್ಠಿ ಹಿಡಿದು ಗುದ್ದಿದಳು. ಅದೇ ಕಪೋಲದ ನೀಲಿಗಟ್ಟಿದ್ದ ಕಣ್ಣ ತುದಿ ಜಜ್ಜಿದಂತೆ ಏಟಾಯಿತು. ಹಾsss ಎಂದು ಕಿರುಚಿದೆ. ಏನು ನಾಟಕವೊ ಏನೊ! ಎದುರು ದಾರಿಯಿಂದ ಲಾಟೀನು ಹಚ್ಚಿದ್ದ ಎತ್ತಿನ ಬಂಡಿ ಬಂದಿತ್ತು. ಆ ಬಂಡಿಯವನು ಅಜ್ಜಿಗೆ ಗೊತ್ತಿದ್ದವನೇ! ನೋಡಿದ. ಏನೂ ಮಾತಾಡಲಿಲ್ಲ. ಬಿಡಿಸಿದ. ಅವನಿಗೆ ಎಲ್ಲ ಗೊತ್ತಿತ್ತು.

‘ಕೈ ಮಾಡಬಾರದಿತ್ತು; ಮಾಡ್ಬುಟ್ಟೆ… ಎಲ್ಲಾನು ಮೇಲಿರೊನು ತೂಗ್ತನೆ! ವೋಗು, ವಂಟೋಗು’ ಎಂದು ಅಜ್ಜಿ ಬಂಡಿಯವನ ಜೊತೆ ಹೊರಟು ಹೋಗಿದ್ದಳು. ಕತ್ತಲು ನನ್ನ ಸಂತೈಸುತ್ತಿತ್ತು. ಕಣ್ಣ ನದಿ ತೊರೆಯಾಗಿ ಹರಿದು ಅಲ್ಲೆಲ್ಲ ದಟ್ಟ ಪೊದೆಗಳಿದ್ದವು. ಈಚಲು ತೋಪಿತ್ತು. ಚಿನ್ನದ ಬಣ್ಣದ ಹಣ್ಣಿನ ಗುಚ್ಚಗಳಿಂದ ಹಸಿವು ನೀಗಿಸಿಕೊಂಡು ಅಲ್ಲೇ ಮರೆಯಾಗಿ ಒಂದು ವಾರ ಕಳೆದೆ. ಅಲ್ಲಿ ಜನ ಸಂಚಾರವಿರಲಿಲ್ಲ. ನೋವು ಇನ್ನೂ ಉಳಿದಿರಲಿಲ್ಲ. ಅಷ್ಟಾದರೂ ಅಜ್ಜಿಯ ನೆನಪು ಕಾಡುತ್ತಿತ್ತು. ಹೊಳೆ ದಂಡೆಯ ತಡಿಯಲ್ಲಿ ಲಕ್ಕಿಗಿಡಗಳು ಹುಲುಸಾಗಿ ಹಬ್ಬಿದ್ದವು. ಜೊತೆಯಲ್ಲೇ ಲಾಳದ ಕಡ್ಡಿಗಳೂ ವ್ಯಾಪಿಸಿದ್ದವು. ಗೀಜಗನ ಹಕ್ಕಿಗಳು ಅಲ್ಲಿದ್ದ ಗೊಬ್ಬಳಿ ಮರಕ್ಕೆ ಗೂಡು ಕಟ್ಟಿಕೊಂಡಿದ್ದವು. ಅವುಗಳನ್ನೇ ನೋಡುತ್ತ ಮೈಮರೆತಿದ್ದೆ. ಹಿಂದಿನಿಂದ ಯಾರೊ ಬಂದು ಗಬಕ್ಕನೆ ಕ್ಕತ್ತನ್ನು ಬಲವಾಗಿ ಹಿಡಿದಿದ್ದರು. ಕತ್ತನ್ನು ಹಿಂದಕ್ಕೆ ತಿರುಗಿಸಲು ಆಗಲಿಲ್ಲ. ಅವನ ದೈತ್ಯ ಪಾದ ಕಾಣಿಸಿತು. ಹಿಡಿತ ಸಡಿಲಿಸಿದಂತೆ ನೋಡಿದೆ. ಆತ ಮಂಗಾಡಳ್ಳಿಯ ಹುಚ್ಚ. ಹಿಂದಿನಿಂದ ನಾನು ಯಾರು ಎಂಬುದು ಅವನಿಗೆ ಗೊತ್ತಿರಲಿಲ್ಲ. ಕೈ ಬಿಟ್ಟು ನಗಾಡಿದ, ಜೀವ ಬಂದಂತಾಗಿತ್ತು. ಅವನು ಅಪ್ಪನ ನಿಗೂಢ ದೋಸ್ತ್. ಅವನನ್ನು ಜನ ಹುಚ್ಚ ಎನ್ನುತ್ತಿದ್ದರು. ಅವನ ಹೆಸರು ಕೇಳಿದರೆ ಹೆದರುತ್ತಿದ್ದರು. ಅವರು ಕೊಲೆಪಾತಕ ಎಂದು ಎಲ್ಲರೂ ಹೇಳುತ್ತಿದ್ದರು. ತಲೆ ಮರೆಸಿಕೊಂಡು ರಕ್ಷಣೆಗೆ ಆತ ನಟ್ಟಿರುಳಲ್ಲಿ ಅಪ್ಪನ ಬಳಿ ಬರುತ್ತಿದ್ದ. ಇಬ್ಬರೂ ಕತ್ತಲೆಯಲ್ಲಿ ಮಾಯವಾಗುತ್ತಿದ್ದರು. ನನ್ನ ತಾತನಿಗೆ ಬಾಯಿ ಇರಲಿಲ್ಲ. ಮುಚ್ಚಿಸಿಬಿಟ್ಟಿದ್ದರು. ಆ ಮಂಗಾಡಳ್ಳಿಯವನು ಯಾವ ಜಾತಿಯವನೊ ಏನೊ ಗೊತ್ತಿರಲಿಲ್ಲ. ಸದಾ ನಿಶೆಯಲ್ಲಿರುತ್ತಿದ್ದ. ಬಲಾಢ್ಯ. ಹತ್ತು ಕಟ್ಟುಮಸ್ತಾದ ಗಂಡಸರನ್ನು ಒಬ್ಬನೇ ಬಡಿದು ಬಿಸಾಡಬಲ್ಲವನಾಗಿದ್ದ. ಹರಿತವಾದ ಕತ್ತಿ ಅವನ ಸೊಂಟದಲ್ಲಿ ಯಾವತ್ತೂ ಇರುತ್ತಿತ್ತು. ಒಂದೆರಡು ಬಾರಿ ತಲೆ ಸವರಿ ಮಾತಾಡಿಸಿದ್ದ. ಅವನ ಬಗ್ಗೆ ಅನೇಕ ಕತೆಗಳಿದ್ದವು. ಒಮ್ಮೆ ರಕ್ತಸಿಕ್ತವಾದ ಒಡವೆಗಳ ತಂದು ನನ್ನ ಅಪ್ಪನ ಕೈಗೆ ಇತ್ತಿದ್ದ. ‘ಇವನ್ನು ತಂಗಿಗೆ ಕೊಡು ಹಾಕ್ಕೊಳ್ಳಲಿ’ ಎಂದು ಒತ್ತಾಯಿಸಿದ್ದ. ‘ಗೊತ್ತಾಗಿ ಬಿಡುತ್ತದೇ… ಬೇಡಾ; ಪೇಟೆಯಲ್ಲಿ ಮಾರಿಬಿಡುವಾ’ ಎಂದಿದ್ದ ಅಪ್ಪ. ಆ ಕೊಲೆಗಾರ ನನ್ನ ತಾಯಿಯನ್ನು ‘ತಂಗೀ’ ಎಂದು ಕರೆಯುತ್ತಿದ್ದ. ತಾಯಿ ಬೆದರುತ್ತಿದ್ದಳು. ಕೊಲೆಪಾತಕಿಯ ಜೊತೆ ಅಪ್ಪ ಬಹಳ ಸಲಿಗೆಯಿಂದಿದ್ದ. ಭಾಗಶಃ ಹಲವು ಕೃತ್ಯಗಳನ್ನು ಇಬ್ಬರೂ ಸೇರಿ ಎಸಗುತ್ತಿದ್ದರು. ಜನ ಗುಸು ಗುಸು ಮಾತಾಡುತ್ತಿದ್ದರು. ಅಪ್ಪನ ತಂಟೆಗೆ ಯಾರೂ ಬರುತ್ತಿರಲಿಲ್ಲ.

ಅಂತಹ ಪಾತಕಿ ಸಮೀಪದಿಂದ ನನ್ನ ಕೆನ್ನೆ ಮೇಲೆ ಬೆರಳಾಡಿಸಿ ಗಮನಿಸಿ ಏನು ಏಟಾಗಿತ್ತ ಎಂದು ಕೇಳಿದ್ದ. ಬಿದ್ದಿಬಿಟ್ಟಿದ್ದೆ ಎಂದೆ. ಎಲ್ಲಿ ಎಂದು ಪಿಸುದನಿಯಲ್ಲಿ ಕೇಳಿದ. ಅವನ ಅಡಗು ತಾಣಗಳಲ್ಲಿ ಆ ಜಾಗವೂ ಒಂದಾಗಿತ್ತೇನೊ! ಅಪ್ಪನ ಬಳಿ ಬರುವುದು ಕಡಿಮೆ ಆಗಿತ್ತು. ಕೊಲೆ ಕೇಸಲ್ಲಿ ಮಂಗಾಡಳ್ಳಿಯ ಆ ಹುಚ್ಚನನ್ನೂ ಅಪ್ಪನನ್ನೂ ಪೊಲೀಸರು ಹಿಡಿದು ಚನ್ನಾಗಿ ಚಚ್ಚಿಹಾಕಿದ್ದರು. ಅಪ್ಪನೇ ಕೃತ್ಯದ ಮುಖ್ಯ ಸಾಕ್ಷಿ ಆಗಿದ್ದ. ಅದೆಲ್ಲ ದೊಡ್ಡವರ ಬಾಯಲ್ಲಿ ಹೇಗೇಗೊ ರೂಪ ಪಡೆದಿತ್ತು. ಸದ್ಯ ಅವನಿಂದ ತಪ್ಪಿಸಿಕೊಳ್ಳಬೇಕಾಗಿತ್ತು. ಅವನು ಇಲ್ಲಿದ್ದಾನೆಂದು ಹೇಳಿದರೂ ಊರವರು ಬಂದು ಸುಟ್ಟುಬಿಡುತ್ತಿದ್ದರು. ಮಂಗಾಡಳ್ಳಿಯಲ್ಲಿ ಒಂದು ಮಠವಿತ್ತು. ಅಲ್ಲೊಬ್ಬಳು ಚೆಲುವೆ ಇದ್ದಳು. ನಾನೂ ಕಂಡಿದ್ದೆ ಅವಳ. ಅಯ್ನೋರ ಮಗಳು. ಅವಳನ್ನು ಕೆಡಿಸಿ ಕೊಂದು ಹೊಳೆದಂಡೆಯ ಮರಳಲ್ಲಿ ಹೂತುಬಿಟ್ಟಿದ್ದ. ಇವನದೇ ಕೃತ್ಯ ಎಂಬುದು ಎಲ್ಲರಿಗೂ ಗೊತ್ತಾಗಿ; ತಾವೇ ಒಟ್ಟಾಗಿ ಅವನನ್ನು ಮುಗಿಸಿಬಿಡುವ ಎಂದು ಜನ ಕಾಯುತ್ತಿದ್ದರು. ಅದು ಅವನಿಗೂ ಗೊತ್ತಾಗಿ ವ್ಯಗ್ರನಾಗಿದ್ದ. ಎಲ್ಲೊ ಒಮ್ಮೆ ಜನರ ಕೈಗೆ ಸಿಲುಕಿ ಹೊಡೆತ ತಿಂದು ತಪ್ಪಿಸಿಕೊಂಡು ಗಾಯಗೊಂಡಿದ್ದ. ತುಂಬಾ ಹಸಿದಿದ್ದ. ಏನಾದರೂ ತಿನ್ನಲು ತಂದುಕೊಡು ಎಂದು ಹತ್ತು ರೂಪಾಯಿಯ ನೋಟನ್ನು ಕೈಗಿತ್ತಿದ್ದ. ಆ ಕಾಲದಲ್ಲಿ ಹಳ್ಳಿಗಾಡಿನ ಬಿಡಿಗಾಸಿನ ವ್ಯಾಪರದ ಹೊಟೇಲುಗಳಲ್ಲಿ ಚಿಲ್ಲರೆ ಸಿಗುತ್ತಿರಲಿಲ್ಲ. ಅಷ್ಟು ದೊಡ್ಡ ನೋಟನ್ನು ಕೈಯಲ್ಲಿ ಹಿಡಿದುಕೊಳ್ಳುವುದೇ ಭಯವಾಗಿತ್ತು. ಯಾರು ಕಳಿಸಿದರೋ; ಎಲ್ಲಿಂದ ಬಂದೆಯೊ ಎಂದು ಹೊಟೇಲಿನವರು ಕೇಳಿಯೇ ಕೇಳುತ್ತಿದ್ದರು. ತರಲಾಗದು ಎಂದು ಬಾಯಿಗೆ ಬಂದ ಮಾತ ನುಂಗಿಕೊಂಡೆ. ಯಾರಿಗೆ ಎಂದು ಕೇಳಿದರೆ ಏನು ಹೇಳಲೀ… ಎಂದು ಕೇಳಿದೆ. ಆತ ಜಾಗೃತನಾದ ಬೇಡ ಬಿಡು ಎಂದ. ಎಲಚಿ ಹಣ್ಣುಗಳ ಆಯ್ದು ತಂದುಕೊಟ್ಟೆ. ಕಣ್ಣು ಮುಚ್ಚಿ ಸವಿದ. ತೆಗೆದುಕೊ ಈ ದುಡ್ಡೆಲ್ಲವನ್ನೂ ಎಂದು ಜೇಬಿಂದ ತೆಗೆದು ಮುಂದಿಟ್ಟ.

ನೋಟುಗಳಿಗೆ ನೆತ್ತರು ಅಂಟಿದಂತಿತ್ತು, ಮುಟ್ಟಲಿಲ್ಲಾ… ಬೇಡ ಬೇಡಾ ಎಂದೆ. ನನ್ನ ಜೇಬಿಗೆ ತುರುಕಿದ. ನನಗೆ ಯಾಕೆ ಬೇಕು ದುಡ್ಡು ಎಂದೆ. ಅವನೂ ಅದನ್ನೇ ಕೇಳಿದ. ದುಡ್ಡಿನಿಂದ ನಾನು ಬದುಕುಳಿಯಲಾರೆ ಎಂದೆನಿಸಿತ್ತೇನೊ. ಅಲ್ಲಿಂದ ಬಿಟ್ಟುಹೋಗಲು ಆತ ನನ್ನನ್ನು ಬಿಡಲಿಲ್ಲ. ರಾತ್ರಿ ವೇಳೆ ಜಾಗ ಬದಲಿಸುತ್ತಿದ್ದ. ಅವನ ಹಿಕ್ಕಳದಲ್ಲಿ ಸಿಕ್ಕಿಹಾಕಿಕೊಂಡಂತಾಗಿ ಮೂರುದಿನ ಕಳೆದಿದ್ದೆ. ಮಗ್ಗುಲಲ್ಲೆ ಮಲಗಿಸಿಕೊಂಡು ತಲೆ ಸವರುತ್ತಿದ್ದ. ಕಿರಿಕಿರಿ ಆಗುತ್ತಿತ್ತು. ಎಲ್ಲಿ ಕತ್ತು ಮುರಿದುಬಿಡುವನೊ ಎಂದು ಭಯವಾಗುತ್ತಿತ್ತು. ಇವನನ್ನು ಕಳಿಸಿಬಿಟ್ಟರೆ ತನ್ನ ಜಾಡು ಪತ್ತೆ ಆಗಿಬಿಡುತ್ತದೆಂಬ ಆತಂಕ ಅವನ ಮಾತಲ್ಲಿ ವ್ಯಕ್ತವಾಗುತ್ತಿತ್ತು. ಯಾರಿಗೂ ಹೇಳುವುದಿಲ್ಲ ಬಿಟ್ಟುಬಿಡಣ್ಣಾ ಎಂದು ಗೋಗರೆದೆ. ‘ಬಿಟ್ಟುಬಿಡುತ್ತೇನೆ. ನಿಮ್ಮಪ್ಪನನ್ನು ಇಲ್ಲಿಗೆ ಕರೆತರುವೆಯಾ… ಯಾರಿಗೂ ಗೊತ್ತಾಗಬಾರದು’ ಎಂದು ಆ ಪಾತಕಿ ಕೇಳುವಾಗ ಮನುಷ್ಯರ ಗತಿ ನನಗೆ ಅರ್ಥವಾಗಿರಲಿಲ್ಲ.

ಕಳಿಸಿಬಿಟ್ಟಿದ್ದ. ಆ ಪರಿಯಲ್ಲಿ ಹೊಡೆದು ಓಡಿಸಿದ್ದ ಅಪ್ಪನನ್ನು ಈಗ ಮತ್ತೆ ಬೆಟ್ಟಿ ಆಗಿ ಪಾತಕಿಯ ವಿಷಯವನ್ನು ತಿಳಿಸುವುದು ಹೇಗೆಂದು ತೊಳಲಾಡಿದೆ. ಮನಸ್ಸು ಒಪ್ಪಲಿಲ್ಲ. ಎಷ್ಟೇ ಆಗಲಿ; ಅಪ್ಪನನ್ನು ಆತ ಪ್ರಾಣ ಮಿತ್ರ ಎನ್ನುತ್ತಿದ್ದನಲ್ಲವೇ; ಏನೋ ಕೋರಿಕೊಳ್ಳುವುದು ಇರಬಹುದು; ಅಪ್ಪನಿಗೆ ವಿಷಯ ತಿಳಿಸುವ ಎಂದು ಮತ್ತೆ ಜಾರಿ ಅದೇ ನರಕದ ಮನೆಗೆ ಬಂದೆ. ಯಾರೂ ವಿಚಾರಿಸಲಿಲ್ಲ. ಎಲ್ಲೊ ಇಲ್ಲೆ ಎಂಜಲು ಎತ್ತಲು ಹೋಗಿದ್ದನೇನೊ ಎಂದು ಉಪೇಕ್ಷಿಸಿದರು. ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗುವುದು, ಕಣ್ಮರೆಯಾಗುವುದು ನನಗೆ ಮಾಮೂಲಾಗಿಬಿಟ್ಟಿತ್ತು. ಮತ್ತೆ ಬಂದು ವಕ್ಕರಿಸಿದನೇ ಎಂದು ಅಪ್ಪ ಸಿಟ್ಟಿನಿಂದ ನೋಡಿದ. ಮೆಲ್ಲಗೆ ಪಾತಕಿಯ ವಿಷಯವನ್ನು ಹೇಳಿದೆ. ಅಪ್ಪ ಕಣ್ಣರಳಿಸಿದ. ಪಾತಕಿಗೆ ಪಾತಕಿಯ ಯಾವ ಸಂಬಂಧಗಳಿರುತ್ತವೋ!