ಮಧ್ಯೆ ಬಾಯಿ ಹಾಕಿದ ತಮ್ಮೆಗೌಡರು ನೋಡಿ ನಿಂಗೆಗೌಡ್ರೆ ನನಗೆ ಸದ್ಯಕ್ಕೆ ಇವರ ಜಮೀನು ತೆಗೆದುಕೊಳ್ಳುವ ದರ್ದು ಇಲ್ಲ.. ನನಗಿರುವ ನಲವತ್ತು ಎಕರೇನೇ ನನಗೆ ವ್ಯವಸಾಯ ಮಾಡಲು ಆಗುತ್ತಿಲ್ಲ. ಕೂಲಿಯವರ ಕಾಟ ಬೇರೆ, ಈ ವರ್ಷದ ಅಡಿಕೆಯೂ ಸಹ ವ್ಯಾಪಾರ ಆಗಿಲ್ಲ. ನಾವು ಕಾಕನಿಗೆ ಆ ತೋಟ ಮಾರಿದ್ದೇ ನಮಗೆ ಹೆಚ್ಚಾಗಿ ವ್ಯವಸಾಯ ಮಾಡಲು ಸಾಧ್ಯವಾಗದೆ ಇರುವುದರಿಂದ. ಆದ್ದರಿಂದ ನೀವು ಬೇಗ ಏನು ಎತ್ತಾ? ಅಂತ ಮಾತನಾಡಿ ಮುಗಿಸಿ. ನನಗೆ ಮಧ್ಯಾಹ್ನ ಬೇರೆ ಪೇಟೆಗೆ ಹೋಗಬೇಕಿದೆ ಸಮಯವಿಲ್ಲ ಎಂದರು.
ನೌಶಾದ್ ಜನ್ನತ್ತ್ ಬರೆದ ʼಕಡಮ್ಮಕಲ್ಲು ಎಸ್ಟೇಟ್ʼ ಕಾದಂಬರಿಯ ಆಯ್ದ ಭಾಗ ನಿಮ್ಮ ಓದಿಗೆ

 

ಫಾತಿಮಾಳ ಕುಟುಂಬ

ಕೊಡಗು ಎಂಬುದು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಶಿಯಿಂದ ಮೈತುಂಬಿ ಕಾಡುಮೇಡು, ನದಿ, ತೊರೆ, ಝರಿಗಳಿಂದ ತುಂಬಿ ಸಂಪದ್ಭರಿತವಾಗಿ ಕಂಗೊಳಿಸುತ್ತಿರುವ ಒಂದು ಸುಂದರ ಪ್ರದೇಶ. ಈ ಪ್ರದೇಶದ ಉದ್ದಗಲಕ್ಕೂ ದಟ್ಟ ಅರಣ್ಯ, ಕಾಫಿ ತೋಟಗಳು, ಬೆಲೆಬಾಳುವ ಮರಗಳು, ಕಿತ್ತಳೆ, ಏಲಕ್ಕಿ, ಕರಿಮೆಣಸುಗಳನ್ನೊಳಗೊಂಡ ಬೆಟ್ಟಗುಡ್ಡಗಳಿಂದ ನೋಡುಗರ ಕಣ್ಮನ ಸೆಳೆಯುತ್ತದೆ. ಇದು ಇಷ್ಟೊಂದು ಸಂಪದ್ಭರಿತವಾಗಿರಲು ಕೊಡಗಿನ ಮೆರುಗಿನ ಮುಕುಟಮಣಿಯಂತಿರುವ ದಕ್ಷಿಣಗಂಗೆ ಎಂದೆ ಪ್ರಸಿದ್ಧಿಯಾಗಿರುವ ಕಾವೇರಿ ನದಿ ಭಾಗಮಂಡಲದ ತಲಕಾವೇರಿಯಲ್ಲಿ ಜನ್ಮತಾಳಿ ಕೊಡಗಿನ ಉದ್ದಗಲಕ್ಕೂ ಹರಿಯುತ್ತಿರುವುದು ಒಂದು ಮುಖ್ಯಕಾರಣವೇ.

ಕೊಡಗಿನಲ್ಲಿ ಹೆಚ್ಚಿನದಾಗಿ ಕಾಫಿತೋಟಗಳೆ ಕಂಡುಬರುವುದರಿಂದ ಕೊಡಗಿನ ಸುತ್ತಮುತ್ತಲ ಪ್ರದೇಶಗಳಿಂದ ಕೂಲಿಕಾರ್ಮಿಕರು ಬದುಕು ಕಟ್ಟಿಕೊಳ್ಳುವ ಸಲುವಾಗಿ ಈ ಪ್ರದೇಶಗಳಿಗೆ ಬಂದು ನೆಲೆಕಂಡುಕೊಳ್ಳುತ್ತಿದ್ದರು. ಹೀಗೆ ಬರುವವರಲ್ಲಿ ಹೆಚ್ಚಿನ ಅಂಶ ಕೊಡಗಿನ ಗಡಿಗೆ ಹೊಂದಿಕೊಂಡಂತಿರುವ ಕೇರಳ ಮೂಲದ ಕುಟುಂಬಗಳೇ ಆಗಿರುತ್ತಿದ್ದವು. ಬಂದವರಲ್ಲಿ ಹೆಚ್ಚಿನ ಭಾಗ ಸಾವಿರಾರು ಅಥವಾ ನೂರಾರು ಎಕರೆಗಳನ್ನು ಹೊಂದಿರುವ ಚೆಟ್ಟಿಯಾರ್‍ ಗಳ ಎಸ್ಟೇಟ್‍ ಗಳಿಗೆ ಹೋಗಿ ಸೇರಿಕೊಳ್ಳುತ್ತಿದ್ದರು. ದೊಡ್ಡ ದೊಡ್ಡ ಎಸ್ಟೇಟ್‍ ಗಳಲ್ಲಿ ಇವರಿಗೆ ಉಚಿತವಾಗಿ ವಸತಿ ಸೌಲಭ್ಯ ಸಿಗುತ್ತಿದ್ದವು. ಆದರೆ ಕೂಲಿ ಕನಿಷ್ಠವಾಗಿರುತ್ತಿತ್ತು. ಜೊತೆಗೆ ಇವರುಗಳಿಗೆ ಆ ತೋಟದಲ್ಲಿ ವಸತಿ ಸೌಲಭ್ಯ ಮತ್ತು ಇನ್ನಿತರೆ ತೋಟದ ಖಾಯಂ ಕೂಲಿ ಕಾರ್ಮಿಕರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ನೀಡುವುದರಿಂದ ಕೆಲವೊಂದು ನಿಬಂಧನೆಗಳಿಗೆ ಒಳಪಡಬೇಕಾಗಿತ್ತು. ನಿಬಂಧನೆಗಳು ಎಂದರೆ ಪದೇಪದೆ ಕೆಲಸಕ್ಕೆ ರಜೆ ಹಾಕುವುದಾಗಲಿ, ಕೂಲಿ ಹೆಚ್ಚು ಸಿಗುತ್ತದೆ ಎಂಬ ಕಾರಣಕ್ಕಾಗಿ ಬೇರೆ ತೋಟಗಳಿಗೆ ಹೋಗಿ ಕೆಲಸ ಮಾಡುವುದಾಗಲಿ ಮಾಡಬಾರದಿತ್ತು.

(ನೌಶಾದ್ ಜನ್ನತ್ತ್)

ಹೀಗೆ ವಲಸೆ ಬರುವವರಲ್ಲಿ ಇನ್ನೂ ಕೆಲವರು ಯಾವುದಾದರು ಗ್ರಾಮಗಳಲ್ಲಿ ಬಾಡಿಗೆಗೆ ಮನೆ ಪಡೆದು ವಾಸವಾಗಿ ಸುತ್ತಮುತ್ತಲಿನ ಕೊಡವರ ತೋಟಗಳಿಗೆ ಕೆಲಸಕ್ಕೆ ಹೋಗುತ್ತಿದ್ದರು. ಇವರು ಇಂತಹದೆ ನಿರ್ದಿಷ್ಟ ಕಡೆಗಳಿಗೆ ಕೆಲಸಕ್ಕೆ ಹೋಗಬೇಕೆಂದೇನೂ ಇರಲಿಲ್ಲ. ಅವರಿಗೆ ಎಲ್ಲಿ ಹೆಚ್ಚಿನ ಕೂಲಿ ಸಿಗುತ್ತದೋ ಅಲ್ಲಿಗೆ ಹೋಗಿ ಕೆಲಸ ಮಾಡಬಹುದಾಗಿತ್ತು. ಹೆಚ್ಚಾಗಿ ಹೇಳಬೇಕೆಂದರೆ ಕೂಲಿ ನಾಲಿ ಮಾಡಿ ಮನೆ ಬಾಡಿಗೆಯನ್ನು ಕಟ್ಟಬೇಕೆಂಬುದನ್ನು ಬಿಟ್ಟರೆ ಒಂದು ರೀತಿಯ ಸ್ವಾತಂತ್ರ್ಯವಿರುತ್ತಿತ್ತು. ಹೀಗೆ ಬದುಕು ಅರಸಿಕೊಂಡು ಬಂದವರಲ್ಲಿ ಕೇರಳ ಮೂಲದ ಮಹಮ್ಮದ್ ಹಾಗು ಫಾತಿಮಾ ಕುಟುಂಬವು ಒಂದು. 1965ನೇ ಇಸವಿಯ ಆಜುಬಾಜಿನಲ್ಲಿ ಕೇರಳದಲ್ಲಿ ತಮಗಿದ್ದ ಅಲ್ಪಸ್ವಲ್ಪ ಆಸ್ತಿಯನ್ನು ಮಾರಿ ಬದುಕು ಕಟ್ಟಿಕೊಳ್ಳುವ ಸಲುವಾಗಿ ಅತ್ತ ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಂತಿರುವ, ಇತ್ತ ಕೊಡಗಿನ ಗಡಿಭಾಗದಲ್ಲಿರುವ “ಕಡಮ್ಮಕಲ್ಲು” ಎಂಬ ಎಸ್ಟೇಟಿಗೆ ಬಂದು ನೆಲೆಕಂಡುಕೊಳ್ಳುತ್ತಾರೆ.

ಆ ಕಾಲದಲ್ಲಿ ಆ ಭಾಗದಲ್ಲಿ ಹೆಚ್ಚಿನದಾಗಿ ಗೌಡ ಕುಟುಂಬಗಳೇ ವಾಸವಾಗಿರುತ್ತಿದ್ದವು. ಅವರ ನಡುವೆ ನೋಡಲು ಕಟ್ಟುಮಸ್ತಾಗಿಯೂ ಒಳ್ಳೆಯ ಗುಣವನ್ನು ಹೊಂದಿದ್ದ ಮೊಹಮ್ಮದನು ಕಡಮ್ಮಕಲ್ಲು ಎಂಬ ಎಸ್ಟೇಟಿನಲ್ಲಿ ಕೂಲಿಕಾರ್ಮಿಕರನ್ನು ನೋಡಿಕೊಳ್ಳುವ ‘ಮೇಸ್ತ್ರಿ’ ಕೆಲಸಕ್ಕೆ ಸೇರಿಕೊಂಡು ಅಕ್ಕಪಕ್ಕದಲ್ಲಿರುವವರೊಂದಿಗೆ ಸೌಹಾರ್ದತೆಯನ್ನು ಸಂಪಾದಿಸಿಕೊಂಡು ಅನ್ಯೋನ್ಯತೆಯಿಂದ ಬಾಳತೊಡಗಿದನು.

ಹೊಸ ಊರಿನಲ್ಲಿ ಹೊಸ ಜೀವನವನ್ನು ಪ್ರಾರಂಭ ಮಾಡಿದ್ದ ಮೊಹಮ್ಮದ್ ಹಾಗು ಫಾತಿಮಾ ದಂಪತಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗುವಾಯಿತು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಾ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಓದಿಸತೊಡಗಿದರು. ಮಕ್ಕಳು ಬೆಳೆದು ಮಗಳು ಏಳನೇ ತರಗತಿ ಮಗ ಮತ್ತು ಮೂರನೇ ತರಗತಿ ತಲುಪುವ ವೇಳೆಗೆ ಜೀವನವನ್ನು ಸ್ವಲ್ಪ ಸುಧಾರಿಸಿಕೊಂಡಿದ್ದ ಕುಟುಂಬ, ಕೂಲಿನಾಲಿ ಮಾಡಿ ಉಳಿಸಿಕೊಂಡಿದ್ದ ಹಣದಲ್ಲಿ ಪಕ್ಕದಲ್ಲೇ ಇದ್ದ ಊರಿನ ಹಿರಿಯರಾದ ನಿಂಗೆಗೌಡರ ಸಹಾಯದಿಂದ ಐದು ಎಕರೆ ಜಮೀನನ್ನು ತಮ್ಮೆಗೌಡರಿಂದ ಖರೀದಿ ಮಾಡಿದರು. ಫಲವತ್ತಾಗಿದ್ದ ಜಮೀನಿನ ಪಕ್ಕದಲ್ಲೇ ಹರಿಯುತ್ತಿದ್ದ ನೀರಿನ ತೋಡಿನಿಂದಾಗಿ ಸಂಪದ್ಭರಿತವಾಗಿತ್ತು. ಜೊತೆಗೆ ತೆಂಗು ಮತ್ತು ಅಡಿಕೆಗಳಿಂದ ಮೈ ತುಂಬಿ ನಿಂತಿತ್ತು. ಆ ಕಾಲಕ್ಕೆ ಒಂದು ಎಸ್ಟೇಟಿನಲ್ಲಿ ಮೇಸ್ತ್ರಿ ಕೆಲಸವೂ ಜೊತೆಗೆ ತನ್ನ ತೆಂಗಿನ ತೋಟದಿಂದ ತೆಂಗು ಮತ್ತು ಅಡಿಕೆ ಮಾರಿ ಬರುತ್ತಿದ್ದ ಒಂದಷ್ಟು ಆದಾಯದಿಂದ ಆ ಕುಟುಂಬ ಸಂತೋಷದ ಜೀವನವನ್ನು ಸಾಗಿಸುತ್ತಿತ್ತು. ಜೊತೆಗೆ ಕಿರಿಯ ವಯಸ್ಸಿಗೆ ಮದುವೆಯಾಗಿದ್ದ ಫಾತಿಮಾ ಎರಡು ಮಕ್ಕಳನ್ನು ಹೆತ್ತು ಗಂಡ ಮತ್ತು ಮಕ್ಕಳೊಂದಿಗೆ ತನ್ನ ಜೀವನವನ್ನು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸುತ್ತಿದ್ದರು.

ಕೆಲವು ವರ್ಷಗಳ ನಂತರ ಅನಾರೋಗ್ಯಕ್ಕೆ ತುತ್ತಾದ ಮಹಮ್ಮದ್ ಕೆಲಕಾಲ ಹಾಸಿಗೆ ಹಿಡಿದು, ಕೊನೆಯುಸಿರೆಳೆಯುತ್ತಾನೆ. ಆದರೆ ಮನೆಯಾಯ್ತು, ತನ್ನ ಕುಟುಂಬವಾಯ್ತು ಎಂದು ಜೀವನ ಸಾಗಿಸಿದ್ದ ಫಾತಿಮಾಳಿಗೆ ಬರಸಿಡಿಲಿನಂತೆ ಎರಗಿದ ಈ ಆಘಾತದಿಂದ ಚೇತರಿಸಿಕೊಳ್ಳಲು ತುಂಬಾ ಕಷ್ಟವಾಯಿತು. ಫಾತಿಮಾಳಿಗೆ ಇನ್ನೂ ಮೂವತ್ತರ ಆಜುಬಾಜು. ವಯಸ್ಸಿಗೆ ಬರುತ್ತಿರುವ ಮಗಳು ಬೇರೆ, ಕುಟುಂಬದ ನಿರ್ವಹಣೆಯ ನೊಗವನ್ನೂ ಎಳೆಯಬೇಕು, ಹೊರಗಡೆ ಹೋಗಿ ದುಡಿದು ಅಭ್ಯಾಸವಿರಲಿಲ್ಲ. ಆ ಕ್ಷಣಕ್ಕೆ ಅವಳಿಗೆ ಆಕಾಶವೇ ತಲೆಮೇಲೆ ಕಳಚಿಬಿದ್ದಂತಾಗಿತ್ತು.

ಕಣ್ಣು ಬಿಟ್ಟರೆ ಮೇಲೆ ಆಕಾಶ, ಕೆಳಗೆ ಭೂಮಿ, ಕಣ್ಣ ಮುಂದೆ ಎರಡು ಮಕ್ಕಳು. ತನಗೆ ಬಂದ ಈ ದುಃಸ್ಥಿತಿಯನ್ನು ನೆನೆದು ಕಣ್ಣೀರಿಡತೊಡಗಿದಳು. ಒಂದು ದಿನ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ಎಂಬ ಯೋಚನೆಯನ್ನು ಮಾಡಿಬಿಡುತ್ತಾಳೆ. ಆದರೆ ಮಕ್ಕಳ ಮುಖ ನೋಡಿದಾಗ ಆ ದುಸ್ಸಾಹಸಕ್ಕೆ ಅವಳಿಗೆ ಧೈರ್ಯ ಬರಲಿಲ್ಲ, ಹೀಗಿರುವಾಗ ಒಂದು ದಿನ ತನ್ನ ಮಕ್ಕಳನ್ನು ಕರೆದುಕೊಂಡು ಯಾರಿಗೂ ಹೇಳದೆ ಕೇರಳದ ತನ್ನ ತಾಯಿಯ ಮನೆಗೆ ಹೊರಟುಬಿಡುತ್ತಾಳೆ. ಊರಿಗೆ ತಲುಪಿದ ನಂತರ ತಾಯಿಯೊಂದಿಗೆ ತನಗೆ ಬಂದೊದಗಿರುವ ದುಃಸ್ಥಿತಿಯ ಬಗ್ಗೆ ಹೇಳಿಕೊಂಡು ಕಣ್ಣೀರಿಡುವ ಸಂದರ್ಭ ತಾಯಿ ಹೇಳುತ್ತಾಳೆ, ʼನೀನು ಎದೆಗುಂದಬೇಡ ಮಗಳೇ. ನಾನು ಗಂಡನಿಲ್ಲದೆ ಇಷ್ಟು ವರ್ಷ ಬದುಕಿಲ್ಲವಾ! (ಫಾತಿಮಾ ಮತ್ತು ಅವಳ ಅಣ್ಣ ಸಣ್ಣವರಿರುವಾಗಲೆ ಅವರ ತಂದೆ ತೀರಿಕೊಂಡಿದ್ದರು) ನಿನ್ನನ್ನು ಮತ್ತು ನಿನ್ನ ಅಣ್ಣನನ್ನು ನಾನು ಬೆಳೆಸಿಲ್ಲವಾ! ಧೈರ್ಯ ಕಳೆದುಕೊಳ್ಳಬೇಡ. ಕೊಡಗಿನ ಒಂದು ಚೆಟ್ಟಿಯಾರರ ತೋಟದಲ್ಲಿ ನಿನ್ನ ಅಣ್ಣ ಮೇಸ್ತ್ರಿ ಕೆಲಸ ಮಾಡುತ್ತಿದ್ದಾನೆ. ಅವನಿಗೆ ಆ ತೋಟದ ಮ್ಯಾನೇಜರನೊಂದಿಗೆ ಉತ್ತಮ ಬಾಂಧವ್ಯ ಇದೆ. ನಾನು ಅವನ ಬಳಿ ಮಾತನಾಡಿ ನಿನ್ನ ಮತ್ತು ನಿನ್ನ ಮಕ್ಕಳ ಜೀವನಕ್ಕಾಗಿ ಏನಾದರೂ ಸಹಾಯ ಮಾಡಲು ಕೇಳಿಕೊಂಡು ಅಲ್ಲಿ ಹೋಗಿ ನೆಲೆಸುವ, ನಿನ್ನ ಜೊತೆಗೆ ನಾನು ಬರುತ್ತೇನೆ. ಇಬ್ಬರೂ ಅಲ್ಲಿಗೆ ಹೋಗಿ ಕೂಲಿ ನಾಲಿ ಮಾಡಿ ನಿನ್ನ ಮಕ್ಕಳನ್ನು ಸಾಕುವ, ಧೈರ್ಯ ಕಳೆದುಕೊಳ್ಳಬೇಡ, ಸಾಯುವ ಮಾತನಾಡಬೇಡ’ ಎಂದು ಆತ್ಮಸ್ಥೈರ್ಯವನ್ನು ತುಂಬುತ್ತಾಳೆ.

ಜೊತೆಗೆ ನಿನಗೆ ವಯಸ್ಸು ಇನ್ನೂ ಮೂವತ್ತು ತುಂಬಿಲ್ಲ, ಸಾಲದ್ದಕ್ಕೆ ತೆಕ್ಕೆಯಲ್ಲಿ ವಯಸ್ಸಿಗೆ ಬಂದಿರುವ ಮಗಳು ಬೇರೆ. ಈ ಕಾಲದಲ್ಲಿ ಗಂಡಿನ ಆಸರೆ ಇಲ್ಲದೆ ಬದುಕುವುದು ತುಂಬಾ ಕಷ್ಟ. ಆದ್ದರಿಂದ ನಿನ್ನ ಮತ್ತು ಮಕ್ಕಳ ರಕ್ಷಣೆಗಾಗಿಯಾದರು ನೀನೊಂದು ಮದುವೆ ಆಗಬೇಕೆಂದು ಹೇಳಿದಳು. (ಆ ಕಾಲದಲ್ಲಿ ಮುಸ್ಲಿಂ ಸಮುದಾಯದಲ್ಲಿ ಗಂಡಸರು ಮೂರು ನಾಲ್ಕು ಮದುವೆಯಾಗುತ್ತಿದ್ದರು, ಅವನವನ ಆರ್ಥಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಮತ್ತು ಕಿರಿಯ ವಯಸ್ಸಿಗೆ ಗಂಡನನ್ನು ಕಳೆದುಕೊಂಡ ಹೆಣ್ಣು ಮಕ್ಕಳಿಗೆ ಅವಳ ರಕ್ಷಣೆಗಾಗಿ ಇನ್ನೊಂದು ಮದುವೆ ಮಾಡಿಸುತ್ತಿದ್ದರು) ಇನ್ನೊಬ್ಬ ಪುರುಷನನ್ನು ಮತ್ತು ಎರಡನೆಯ ಮದುವೆಯನ್ನು ತನ್ನ ಕನಸ್ಸಿನಲ್ಲಿಯೂ ನೆನೆಸಿಕೊಳ್ಳದ ಫಾತಿಮಾಳಿಗೆ ತಾಯಿಯ ಆ ಮಾತನ್ನು ಕೇಳಿ ಒಂದು ಬಾರಿ ಎದೆ ಒಡೆದು ಹೋದಂತಾಯಿತು. ಆ ಕಾಲದಲ್ಲೆಲ್ಲಾ ಈಗಿನ ರೀತಿಯಲ್ಲಿ ಪ್ರೀತಿ, ಪ್ರೇಮ, ಪ್ರಣಯ, ಅನೈತಿಕ ಸಂಬಂಧಗಳು ಅಲ್ಲೋ ಇಲ್ಲೋ ಎಂಬಂತೆ ಅಪರೂಪಕ್ಕೊಮ್ಮೆ ಕಾಣಸಿಗುತ್ತಿತ್ತು. ಜೊತೆಗೆ ಅಂಥವರನ್ನು ಕಂಡರೆ ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಅವರು ಮಾಡಬಾರದ ಯಾವುದೋ ತಪ್ಪು ಮಾಡಿದ ಹಾಗೆ ಸಮಾಜ ನಡೆಸಿಕೊಳ್ಳುತ್ತಿತ್ತು. ಜೊತೆಗೆ ಮುಸ್ಲಿಂ ಸಮುದಾಯದಲ್ಲಿ ಇಂತಹ ವಿಚಾರಗಳ ಬಗ್ಗೆ ಚಿಂತಿಸುವ ಸ್ವಾತಂತ್ರ್ಯವನ್ನೂ ಹೆಣ್ಣುಮಕ್ಕಳಿಗೆ ಕೊಡಲಾಗುತ್ತಿರಲಿಲ್ಲ. ತನ್ನ ಜೀವನದಲ್ಲಿ ಪರ ಪುರುಷನ ಬಗ್ಗೆ ಒಮ್ಮೆಯೂ ಯೋಚಿಸದ ಫಾತಿಮಾಳಿಗೆ ತಾಯಿಯ ಈ ಮಾತು ಕೇಳಿ ಆಕಾಶವೇ ತಲೆಯಮೇಲೆ ಕಳಚಿಬಿದ್ದಂತಾಗಿತ್ತು.

ದುಃಖದಿಂದ ಫಾತಿಮಾ ತನ್ನ ತಾಯಿಯ ಬಳಿ ‘ಇನ್ನೊಂದು ಮದುವೆಯಾಗುವುದಕ್ಕಿಂತ ನನ್ನ ಮಕ್ಕಳನ್ನು ಕೊಂದು ನಾನೂ ಸಾಯುವುದೇ ಮೇಲುʼ ಎಂದಳು. ಇನ್ನೆಂದೂ ನನ್ನ ಬಳಿ ಮದುವೆಯ ವಿಚಾರ ತೆಗೆಯಬೇಡ ಎಂದು ತಾಯಿಯಿಂದ ಆಣೆ ಪಡೆದು, ನಾನು ಬದುಕಿರುವವರೆಗೂ ನನ್ನ ಮಕ್ಕಳಿಗಾಗಿ ಬದುಕುತ್ತೇನೆಯೆ ಹೊರತು ಇನ್ನೊಂದು ಮದುವೆ ಮಾಡಿಕೊಳ್ಳುವುದಿಲ್ಲವೆಂದು ಶಪಥಮಾಡುತ್ತಾಳೆ. ಮಕ್ಕಳಿಗಾಗಿ ಜೀವನವನ್ನು ಮತ್ತು ತನ್ನ ಯೌವ್ವನವನ್ನು ಮುಡಿಪಾಗಿಡುವ ತನ್ನ ಮಗಳ ನಿರ್ಧಾರವನ್ನು ಕೇಳಿ ಮಗಳ ಮೇಲೆ ತಾಯಿಗೆ ಹೆಮ್ಮೆ ಅನಿಸುತ್ತದೆ. ಆದರೆ ತನ್ನ ಮಗಳ ಭವಿಷ್ಯವನ್ನು ನೆನೆದು ಮನಸಿನಲ್ಲಿ ಆತಂಕವೂ ಮಡುಗಟ್ಟತೊಡಗಿತು.

ತನ್ನ ಮಗನಿದ್ದ ಊರಿಗೆ (ಮಡಿಕೇರಿಗೆ) ಹೋಗುವ ಮೊದಲು ಮಗಳಿದ್ದ ಹಳ್ಳಿಗೆ ಹೋಗಿ ಅವರಿಗೆ ಇದ್ದ ಐದು ಎಕರೆ ತೋಟ ಮತ್ತು ಗದ್ದೆಯನ್ನು ಮಾರಿ, ಆ ಹಣದಲ್ಲಿ ಮಗಳಿಗೆ ಆ ಊರಿನಲ್ಲಿ ಒಂದು ಮನೆ ಖರೀದಿಸಿ ಅಲ್ಲಿ ನೆಲೆಸಬೇಕೆಂದು ನಿರ್ಧಾರವನ್ನು ಕೈಗೊಂಡರು. ಆದರೆ ಫಾತಿಮಾ ತಾಯಿಯ ಮನೆಗೆ ಹೋಗಿ ಒಂದು ವರ್ಷಕಳೆದು ಮತ್ತೆ ಮಕ್ಕಳೊಂದಿಗೆ ಊರಿಗೆ ಮರಳುವಾಗ ಅವರಿದ್ದ ಊರಿನ ಚಿತ್ರಣವೇ ಬದಲಾಗಿತ್ತು. ಕಾರಣ ಕೂಲಿನಾಲಿ ಮಾಡಿ ಹಣ ಸಂಪಾದಿಸಿ ಜಮೀನು ಖರೀದಿಸಿದ್ದ ಕುಟುಂಬದ ಮುಖ್ಯಸ್ಥ ಅನಾರೋಗ್ಯಪೀಡಿತನಾಗಿ ಪ್ರಾಣ ಕಳೆದುಕೊಂಡಾಗ, ಹಿಂದುಮುಂದು ಇಲ್ಲದ ಅವನ ಪತ್ನಿ ಭಯಭೀತಳಾಗಿ ತನ್ನ ಮಕ್ಕಳನ್ನು ಕಟ್ಟಿಕೊಂಡು ಯಾರಿಗೂ ಹೇಳದೆ ರಾತ್ರೋರಾತ್ರಿ ಮನೆ ಖಾಲಿ ಮಾಡಿಕೊಂಡು ಹೋದಾಗ, ಸುತ್ತಮುತ್ತಲಿನವರು ಮತ್ತು ಊರಿನ ಪ್ರಮುಖರು ಆ ಕುಟುಂಬ ಊರು ಬಿಟ್ಟು ಹೋಯ್ತೆಂದು ಭಾವಿಸಿದ್ದರು. ಹಲವು ದಿನಗಳ ನಂತರವೂ ಕಾಕನ ಕುಟುಂಬ ಮರಳಿ ಊರಿಗೆ ಬರದಿದ್ದಾಗ ಊರಿನವರು ಇನ್ನೆಂದೂ ಕಾಕನ ಕುಟುಂಬ ಮರಳಿ ಬರಲಾರರು ಎಂದು ಲೆಕ್ಕಹಾಕಿಕೊಂಡು ಪುಂಡ ಪೋಕರಿಗಳು ತೋಟದಲ್ಲಿದ್ದ ತೆಂಗು ಅಡಿಕೆಯನ್ನು ಕದ್ದು ಮಾರಾಟ ಮಾಡಲು ಶುರುಮಾಡಿದರು. ಜೊತೆಗೆ ಕಾಕನ ಅಧೀನದಲ್ಲಿದ್ದ ಆ ತೋಟವನ್ನು ಕಬಳಿಸಲು ಹಲವರು ಹೊಂಚು ಹಾಕಿ ಕುಳಿತಿದ್ದರು.

ಈ ಸಂದರ್ಭದಲ್ಲಿ ಮತ್ತೆ ಊರಿಗೆ ಬಂದ ಕುಟುಂಬ ಇದ್ಯಾವುದರ ಪರಿವೇ ಇಲ್ಲದೆ ವಾಸಿಸತೊಡಗಿತ್ತು. ಆದರೆ ಊರಿನವರು ಫಾತಿಮಾಳ ಕುಟುಂಬವನ್ನು ನೋಡುವ ಶೈಲಿಯೇ ಬದಲಾಗಿತ್ತು. ಹೇಗಾದರು ಮಾಡಿ ಇವರನ್ನು ಊರಿನಿಂದ ಹೊರಗಟ್ಟಿ ಆಸ್ತಿಯನ್ನು ಲಪಟಾಯಿಸುವ ಸಂಚನ್ನು ಹಲವರು ರೂಪಿಸಿಕೊಂಡಿದ್ದರು. ಊರಿನವರ ವರ್ತನೆಯನ್ನು ಅರ್ಥಮಾಡಿಕೊಳ್ಳಲು ಫಾತಿಮಾ ಮತ್ತು ಅವಳ ತಾಯಿಗೆ ಹೆಚ್ಚು ಸಮಯ ಬೇಕಾಗಿರಲಿಲ್ಲ. ಸುತ್ತಮುತ್ತಲಿನವರ ಬದಲಾದ ಸ್ವಭಾವದಿಂದ ನೊಂದ ಫಾತಿಮಾ ಮತ್ತು ಕುಟುಂಬ ಆದಷ್ಟು ಬೇಗ ಆಸ್ತಿ ಮಾರಿ ಅಣ್ಣನ ಊರಿಗೆ ಹೋಗಿ, ನೆಲೆಸುವ ಯೋಚನೆಯನ್ನು ಮಾಡುತ್ತಾರೆ.

ಕೇರಳದಿಂದ ಬದುಕು ಕಟ್ಟಿಕೊಳ್ಳುವ ಸಲುವಾಗಿ ಕಡಮ್ಮಕಲ್ಲು ಎಸ್ಟೇಟಿಗೆ ಬಂದಿದ್ದ ಮಹಮ್ಮದನು ನಿಂಗೆಗೌಡರ ಸಹಾಯದಿಂದ ತಮ್ಮೆಗೌಡರ ಬಳಿಯಿಂದ ಆ ತೋಟವನ್ನು ಖರೀದಿ ಮಾಡಿದ್ದ. ಶ್ರಮಜೀವಿಯಾಗಿದ್ದ ಮಹಮ್ಮದನು ತಮಗಿದ್ದ ತೋಟ, ಗದ್ದೆಯನ್ನು ಹದಮಾಡಿ ಉತ್ತಮವಾದ ವ್ಯವಸಾಯಮಾಡಿ ಒಳ್ಳೆಯ ಬೆಳೆ ಬೆಳೆಯುವ ತೋಟವನ್ನಾಗಿ ಮಾರ್ಪಡಿಸಿದ್ದ.

ತೋಟವನ್ನು ಮಾರಬೇಕೆಂದು ಯೋಚನೆಮಾಡಿದ್ದ ಫಾತಿಮಾ ಮತ್ತು ಅವಳ ತಾಯಿ ಮೊದಲು ಆ ತೋಟ ಕೊಡಿಸಲು ಸಹಾಯ ಮಾಡಿದ ನಿಂಗೆಗೌಡರ ಸಹಾಯ ಪಡೆಯಲು ನಿರ್ಧಾರ ಮಾಡಿ, ನೇರ ನಿಂಗೆಗೌಡರ ಬಳಿ ಹೋಗಿ ಫಾತಿಮಾಳ ತಾಯಿ ಹೇಳುತ್ತಾರೆ. ಗೌಡ್ರೇ, ನನ್ನ ಮಗಳ ಗಂಡ ತೀರಿ ಹೋಗಿದ್ದು ಅವಳಿಗೆ ಮತ್ತು ಮಕ್ಕಳಿಗೆ ಈ ಊರಿನಲ್ಲಿ ಒಂಟಿಯಾಗಿ ಬದುಕಲು ಸಾಧ್ಯವಿಲ್ಲ. ಆದ್ದರಿಂದ ನಾನು, ಫಾತಿಮಾ ಮತ್ತು ಮಕ್ಕಳನ್ನು ಕರೆದುಕೊಂಡು ನನ್ನ ಮಗ ಮಡಿಕೇರಿ ಭಾಗದಲ್ಲಿ ಒಂದು ತೋಟದಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದಾನೆ. ನಾವು ಅಲ್ಲಿಗೆ ಹೋಗಿ ನೆಲೆಸಲು ಯೋಚಿಸಿರುವುದರಿಂದ ಈ ತೋಟವನ್ನು ಮಾರಬೇಕೆಂದಿದ್ದೇವೆ. ಆದ್ದರಿಂದ ನೀವೇ ಕೊಡಿಸಿದ ಆ ತೋಟವನ್ನು ಒಂದು ಒಳ್ಳೆಯ ಬೆಲೆಗೆ ನೀವೇ ಮಾರಾಟ ಮಾಡಿಸಿಕೊಡಬೇಕೆಂದು ಕೇಳಿಕೊಳ್ಳುತ್ತಾರೆ. ಈ ಅವಕಾಶವನ್ನೇ ಕಾಯುತ್ತಿದ್ದ ನಿಂಗೆಗೌಡರು ‘ಅಯ್ಯೋ ಉಮ್ಮಾ ಕಾಕನ ಕುಟುಂಬಕ್ಕೆ ಈ ಪರಿಸ್ಥಿತಿ ಬರಬಾರದಾಗಿತ್ತು. ಎಲ್ಲವೂ ಹಣೆ ಬರಹ…..’ ಎಂದು ಬೇಸರ ವ್ಯಕ್ತಪಡಿಸಿದರು. ಜೊತೆಗೆ ಅಂದು ತಮ್ಮೆಗೌಡರು ನಿಮ್ಮ ಅದೃಷ್ಟಕ್ಕೆ ಮತ್ತು ಮಹಮ್ಮದನ ಒಳ್ಳೆ ಗುಣಕ್ಕೆ ಅವನಿಗೆ ಆ ಜಾಗ (ತೋಟ) ಮಾರಿದ್ದರು. ಸುತ್ತಮುತ್ತಲು ಗೌಡರ ತೋಟವೇ ಇರುವುದರಿಂದ ಬೇರೆ ಹೊರಗಿನವರು ಯಾರೂ ಬಂದು ಅಲ್ಲಿ ತೋಟ ಖರೀದಿ ಮಾಡುವುದಿಲ್ಲ. ಆದ್ದರಿಂದ ದೊಡ್ಡ ಮನಸ್ಸು ಮಾಡಿ ತಮ್ಮೆಗೌಡರೇ ಖರೀದಿಸಬೇಕು ಅಲ್ಲವಾ? ಎಂದು ಅವರ ಬಳಿ ಪ್ರಶ್ನೆ ಮಾಡುವ ರೀತಿಯಲ್ಲಿ ಹೇಳಿ ಬಾಯಲ್ಲಿ ಜಗಿಯುತ್ತಿದ್ದ ಎಲೆ ಅಡಿಕೆ ರಸವನ್ನು ಕ್ಯಾ…..ಥೂ…. ಎಂದು ಉಗಿದು ಮೆಲ್ಲನೆ ಫಾತಿಮ ಮತ್ತು ಅವಳ ತಾಯಿ ಕಡೆಗೆ ವಾರೆ ನೋಟ ಬೀರಿದರು. ಜೊತೆಗೆ ಯಾರಾದರೂ ಬಂದು ಖರೀದಿಸಿದರೆ ಗೌಡರು ಸುಮ್ಮನೆ ಇರುತ್ತಾರ! ಗೌಡರು ಗಲಾಟೆ ಮಾಡಬಹುದು ಅಲ್ವಾ? ಎಂದರು. ಅಷ್ಟರಲ್ಲಾಗಲೇ ಫಾತಿಮಾ ಮತ್ತು ಅವಳ ತಾಯಿಗೆ ತೋಟವನ್ನು ಮಾರಿ ಮಡಿಕೇರಿಗೆ ಹೋಗುವುದು ನಾವಂದುಕೊಂಡಷ್ಟು ಸುಲಭವಲ್ಲ ಎಂದು ಮನದಟ್ಟಾಗಿತ್ತು.

ತನ್ನ ಮಕ್ಕಳಂತೆಯೇ ಸಾಕಿ ಸಲಹಿದ್ದ ತೆಂಗು ಮತ್ತು ಅಡಿಕೆ ಮರಗಳನ್ನು ಇನ್ನೊಬ್ಬರಿಗೆ ಕೈ ಮುಗಿದು ಮಾರುವಂತಹ ಪರಿಸ್ಥಿತಿ ಬರುತ್ತದೆ ಎಂದು ಕನಸು ಮನಸಿನಲ್ಲಿಯೂ ಯೋಚಿಸದ ಫಾತಿಮಾಳಿಗೆ ಕಣ್ಣಿನಲ್ಲಿ ತನಗರಿವಿಲ್ಲದಂತೆ ನೀರು ಜಿನುಗತೊಡಗಿತು. ಕಣ್ಣೀರನ್ನು ಒರೆಸಿಕೊಳ್ಳುತ್ತಾ ತಮ್ಮೆಗೌಡರ ಬಳಿ ಹೇಳಿ, ನೀವೇ ಏನಾದರು ಒಂದು ದಾರಿ ಮಾಡಕೊಡಬೇಕು ಧಣಿ ಎಂದು ಫಾತಿಮಾ ಮತ್ತು ಅವಳ ತಾಯಿ ಕೈ ಮುಗಿದು ನಿಂಗೆಗೌಡರ ಬಳಿ ಕೇಳಿಕೊಂಡರು.

ಈ ಮೊದಲೇ ಆಸ್ತಿಯನ್ನು ಮತ್ತೆ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಹವಣಿಸುತ್ತಿದ್ದ ತಮ್ಮೆಗೌಡ ಪೂರ್ವ ನಿಯೋಜಿತವಾಗಿ ಆಸ್ತಿಯನ್ನು ಲಪಟಾಯಿಸಲು ನಿಂಗೆಗೌಡರ ಬಳಿ ಚರ್ಚಿಸಿದ್ದರು. ಹೀಗಿರುವಾಗ ಫಾತಿಮಾ ಮತ್ತು ಅವಳ ತಾಯಿ ನಿಂಗೆಗೌಡರ ಬಳಿ ಬಂದು ನಮ್ಮ ಆಸ್ತಿಯನ್ನು ಮಾರಿಸಿಕೊಡಿ ಎಂದು ಫಾತಿಮಾ ಮತ್ತು ಅವಳ ತಾಯಿ ಕೇಳಿಕೊಂಡಾಗ ‘ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ’ ಎನ್ನುವಂತಾಗಿತ್ತು ನಿಂಗೆಗೌಡರ ಅವಸ್ಥೆ. ಆ ಮಾತು ಕೇಳಿದ ಗೌಡರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಗೌಡರು, ಫಾತಿಮಾ ಮತ್ತು ಅವಳ ತಾಯಿಯ ಬಳಿ ನಾನು ಒಮ್ಮೆ ತಮ್ಮೆಗೌಡರ ಬಳಿ ಮಾತನಾಡುತ್ತೇನೆ. ನಿಮ್ಮ ಅದೃಷ್ಟಕ್ಕೆ ಅವರು ಒಲವು ತೋರಿಸಿದರೆ ಮತ್ತೆ ಚಿಂತಿಸುವ ಎಂದು ಹೇಳಿ ಅವರನ್ನು ಅಲ್ಲಿಂದ ಸಾಗ ಹಾಕಿದರು.

ಅಲ್ಲಿಂದ ನೇರಹೋಗಿ ತಮ್ಮೆಗೌಡರ ಬಳಿ, ಧಣಿ… ನೀವಂದುಕೊಂಡಹಾಗೆ ಅದೃಷ್ಟಲಕ್ಷ್ಮಿ ತಮ್ಮನ್ನು ಹುಡುಕಿಕೊಂಡು ಬಂದಿದ್ದಾಳೆ ಎಂದು ವಿಷಯವನ್ನು ಮುಟ್ಟಿಸಿದರು. ತಮ್ಮೆಗೌಡರಿಗೂ ನಿಂಗೆಗೌಡರ ಮಾತು ಕೇಳಿ ಸಂತೋಷವಾಯಿತು. ಜೊತೆಗೆ ಒಂದು ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಆ ತೆಂಗಿನ ತೋಟವನ್ನು ಹಣ ಕೊಟ್ಟು ಖರೀದಿಸುವ ಮನಸ್ಸಿಲ್ಲದ ತಮ್ಮೆಗೌಡರು ಹೇಳುತ್ತಾರೆ, ನಾನು ಕಾಕನ ಕುಟುಂಬ ಮರಳಿ ಊರಿಗೆ ಬರುವುದಿಲ್ಲಾ ಎಂದುಕೊಂಡು ನಾವೇ ಮೊದಲು ಮಾರಿದ್ದ ಆ ತೋಟವನ್ನು ಹೇಗಾದರೂ ಮಾಡಿ ಕಬಳಿಸಬೇಕು ಎಂದು ನಿಮ್ಮ ಬಳಿ ಹೇಳಿದ್ದೆ. ಆದರೆ ಕಾಕನ ಕುಟುಂಬ ಮತ್ತೆ ಮರಳಿ ಊರಿಗೆ ಬಂದಿದೆಯಲ್ಲಾ…. ಎಂದು ಹಣ ಕೊಡದೆ ಆ ತೋಟವನ್ನು ಕಬಳಿಸುವ ತನ್ನ ಮನದಿಂಗಿತವನ್ನು ವ್ಯಕ್ತಪಡಿಸಿದರು.

ತಮ್ಮೆಗೌಡರ ಮನದ ಇಂಗಿತವನ್ನು ಅರ್ಥಮಾಡಿಕೊಂಡ ನಿಂಗೆಗೌಡರು ನೀವೇನೂ ಚಿಂತೆ ಮಾಡಬೇಡಿ ಅವರಿಗೆ ಏನಾದರು ಕೊಟ್ಟು ಇಲ್ಲಿಂದ ಕಳುಹಿಸುವಾ, ನೀವು ನನ್ನನ್ನು ನೋಡಿಕೊಂಡರೆ ಸಾಕು ಎಂಬ ಕರಾರಿನೊಂದಿಗೆ ಹಣವಿಲ್ಲದೆ ಆಸ್ತಿ ಕಬಳಿಸುವ ಷಡ್ಯಂತ್ರವನ್ನು ಇಬ್ಬರೂ ಸೇರಿ ರೂಪಿಸತೊಡಗಿದರು. ಜೊತೆಗೆ ಆಸ್ತಿ ಮಾರಾಟದ ವಿಚಾರ ಬೇರೆಯವರ ಕಿವಿಗೆ ಬೀಳುವ ಮುಂಚೆಯೇ ತಮ್ಮದಾಗಿಸಿಕೊಳ್ಳುವ ಇಂಗಿತವನ್ನು ತಮ್ಮೆಗೌಡರು ವ್ಯಕ್ತಪಡಿಸಿದರು. ನೀವು ಆ ವಿಚಾರವಾಗಿ ತಲೆಕೆಡಿಸಿಕೊಳ್ಳಬೇಡಿ, ನಾನೆಲ್ಲಾ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿ ನಿಂಗೆಗೌಡ ಮನೆಯತ್ತ ಹೆಜ್ಜೆ ಹಾಕಿದರು.

ಈ ಘಟನೆ ನಡೆದು ಒಂದು ವಾರ ಕಳೆದರೂ ನಿಂಗೆಗೌಡರ ಕಡೆಯಿಂದ ಯಾವುದೇ ಕರೆ ಬಾರದೆ ಇದ್ದುದರಿಂದ ಪುನಃ ಒಂದು ಮುಂಜಾನೆ ಫಾತಿಮಾ ಮತ್ತು ತಾಯಿ ಗೌಡರ ಮನೆಗೆ ಭೇಟಿಕೊಡುತ್ತಾರೆ. ತಾಯಿ ಮಗಳು ಬರುವುದನ್ನು ದೂರದಿಂದಲೇ ಕಿಟಕಿಯಿಂದ ಗಮನಿಸಿದ ಗೌಡರು ಮಡದಿಗೆ ನಾನು ಊರಿನಲ್ಲಿಲ್ಲ, ಸಂಜೆ ಐದು ಗಂಟೆಗೆ ಬರಲು ಹೇಳಿ ಕಳುಹಿಸಲು ತಿಳಿಸುತ್ತಾರೆ. ಗೌಡರ ಅಣತಿಯಂತೆ ಅವರ ಪತ್ನಿ, ಏನ್ ಸಮಾಚಾರ ಫಾತಿಮಾ? ಇಷ್ಟು ದೂರ ಬಂದಿದ್ದು ಎಂದು ಕೇಳುತ್ತಾ…. ಮನೆಯಿಂದ ಹೊರಬರುತ್ತಾಳೆ. ಮಾತು ಮುಂದುವರೆಸಿ…. ಗೌಡ್ರು ಹೇಳ್ತಿದ್ರು ನೀವು ಎಲ್ಲವನ್ನು ಮಾರಿ ಮಡಿಕೇರಿಗೆ ಹೋಗುತ್ತಿದ್ದಿರಾ ಎಂದು ಅದನ್ನು ಕೇಳಿ ಮನಸ್ಸಿಗೆ ತುಂಬಾ ಬೇಸರವಾಯಿತು ಎಂದು ಒಂದೇ ಉಸಿರಿನಲ್ಲಿ ಹೇಳುತ್ತಾಳೆ. ಪಾಪ.. ಕಾಕ ಕಷ್ಟಪಟ್ಟು ಎಲ್ಲಾ ಸಂಪಾದನೆ ಮಾಡಿದ. ಆದರೆ ಅವನು ತೀರಿಕೊಂಡ ನಂತರ ತೋಟ ನೋಡಿಕೊಳ್ಳಲು ಜನವಿಲ್ಲದೆ ಇರುವುದರಿಂದ ಎಲ್ಲಾ ಮಾರಿ ಹೋಗುತ್ತಿರುವುದಾಗಿಯೂ ನೆನೆಸಿಕೊಂಡು ಗೌಡರು ಬೇಜಾರು ಮಾಡಿಕೊಳ್ಳುತ್ತಿದ್ದರು ಎಂದು ಹೇಳುತ್ತಾಳೆ.

ಅಷ್ಟರಲ್ಲಿ ಫಾತಿಮಾಳ ತಾಯಿ ಗೌಡರು ಮನೆಯಲ್ಲಿ ಇಲ್ಲವಾ? ಎಂದು ಕೇಳುತ್ತಾಳೆ. ನಿಂಗೆಗೌಡರ ಪತ್ನಿ, ಗೌಡರು ಬೆಳಗ್ಗಿನ ಜಾವ ಐದು ಗಂಟೆಗೆ ಎದ್ದು ಪೇಟೆಗೆ ಹೋಗಿದ್ದಾರೆ. ನೀವು ಬರುವ ವಿಚಾರ ಮೊದಲೆ ತಿಳಿದಿದ್ದರೆ ಮನೆಯಲ್ಲಿಯೇ ಇರುತ್ತಿದ್ದರೇನೋ ಎನ್ನುತ್ತಾ ಮೂಗಿನ ಮೇಲೆ ಕೈಯಿಟ್ಟಳು. ಜೊತೆಗೆ ಒಂದು ಕೆಲಸ ಮಾಡಿ ಸಂಜೆ ಐದು ಗಂಟೆಗೆ ಬನ್ನಿ ಅಷ್ಟೊತ್ತಿಗೆ ಅವರು ಬಂದಿರುತ್ತಾರೆ. ಹಾಗು ಅವರು ಬಂದಾಗ ನೀವು ಬಂದ ವಿಷಯ ತಿಳಿಸಿ ಬೇರೆಲ್ಲೂ ಹೋಗದ ಹಾಗೆ ಮನೆಯಲ್ಲಿಯೇ ಇರಲು ತಿಳಿಸುತ್ತೇನೆ ಎಂದಳು.

ಫಾತಿಮಾ ಮತ್ತು ಅವಳ ತಾಯಿ ಬಂದ ದಾರಿಗೆ ಸುಂಕವಿಲ್ಲದಂತೆ ಮೋರೆ ಸಪ್ಪೆ ಮಾಡಿಕೊಂಡು ಮನೆಯತ್ತ ಹೆಜ್ಜೆ ಹಾಕಿದರು. ಇದನ್ನೆಲ್ಲಾ ಅಡುಗೆ ಕೋಣೆಯಲ್ಲಿ ಅವಿತು ಕುಳಿತು ಕೇಳುತ್ತಿದ್ದ ನಿಂಗೆಗೌಡರು ಅವರು ಹೋದ ನಂತರದಲ್ಲಿ ಮಡದಿಯ ಬಳಿಬಂದು ಬಾಯಿಯ ಬದಿಯಲ್ಲಿ ಸೋರುತ್ತಿದ್ದ ಎಲೆ ಅಡಿಕೆಯ ರಸವನ್ನು ಸೀಟುತ್ತಾ, ಅವರನ್ನು ಸಂಜೆ ಬರಲು ಹೇಳು ಅಂದರೆ ಪುರಾಣ ಊದುತ್ತಾ ನಿಂತಿದ್ದೆಯಲ್ಲ ಎಂದು ಗದರಿದರು.

ಜೊತೆಗೆ ಇನ್ನು ತಡಮಾಡುವುದು ಸರಿಯಲ್ಲ ‘ಕಬ್ಬಿಣ ಕಾಯ್ದಾಗಲೇ ತಟ್ಟಿ ಬಿಡಬೇಕು’ ಎಂದು ಮನಸ್ಸಿನಲ್ಲೇ ಯೋಚಿಸುತ್ತಾ ತಮ್ಮೆಗೌಡರಿಗೆ ವಿಷಯ ಮುಟ್ಟಿಸಿದರು. ಜೊತೆಗೆ ಮೊದಲು ತಮಗೆ ಆಸ್ತಿ ಖರೀದಿಸಲು ಯಾವುದೇ ಆಸಕ್ತಿ ಇಲ್ಲದಿರುವುದಾಗಿಯೂ ಮತ್ತು ಫಾತಿಮಾಳ ಮಕ್ಕಳು ಸಣ್ಣವರಿರುವುದರಿಂದ ಅವರು ಬೆಳೆದು ದೊಡ್ಡವರಾದ ಮೇಲೆ ಆಸ್ತಿ ವಿಚಾರವಾಗಿ ತಕರಾರು ಶುರುಮಾಡಿದರೆ ಏನು ಮಾಡುವುದು ಅಂತ ಹೇಳಿ, ಆ ಆಸ್ತಿ ಮೇಲೆ ತನಗೆ ಯಾವುದೇ ವ್ಯಾಮೋಹ ಇಲ್ಲದ ರೀತಿ ಬಿಂಬಿಸುವ ರೀತಿಯಲ್ಲಿ ಅವರ ಮುಂದೆ ನಡೆದುಕೊಳ್ಳುವ ಎಂದು ಮಾತನಾಡಿ ತೀರ್ಮಾನಿಸಿಕೊಳ್ಳುತ್ತಾರೆ. ಜೊತೆಗೆ ವ್ಯವಹಾರ ಕುದುರಿದರೆ ನಿಂಗೆಗೌಡರಿಗೆ ಐದು ಸಾವಿರ ರುಪಾಯಿಗಳನ್ನು ತಮ್ಮೆಗೌಡರು ನೀಡುವುದಾಗಿಯೂ ಒಪ್ಪಂದಮಾಡಿಕೊಳ್ಳುತ್ತಾರೆ.

ನಿಂಗೆಗೌಡರ ಪತ್ನಿ ಕೊಟ್ಟ ಸಮಯದಂತೆ ಫಾತಿಮಾ ಮತ್ತು ಅವಳ ತಾಯಿ ಸರಿಯಾಗಿ ಐದು ಗಂಟೆಗೆ ಗೌಡರ ಮನೆಯ ಗೇಟಿನ ಮುಂದೆ ಮಕ್ಕಳನ್ನು ಕರೆದುಕೊಂಡು ಬಂದು ನಿಂತಿದ್ದರು. ನಿಂಗೆಗೌಡರು ಹೊರಗಿನ ಜಗುಲಿಯಲ್ಲಿ ಪಂಚೆಯುಟ್ಟು ಸೆಖೆಗೆ ಮೇಲಂಗಿ ಧರಿಸದೆ ಎಲೆ ಅಡಿಕೆ ಜಗಿಯುತ್ತಾ ಇವರ ಬರುವಿಕೆಯನ್ನೇ ಕಾಯುತ್ತಾ ಕುಳಿತಿದ್ದರು. ಆದರೂ ಇವರನ್ನು ನೋಡಿದ ತಕ್ಷಣ ಏನು ‘ಉಮ್ಮಾ’ ಏನು ಸಮಾಚಾರ ಬೆಳಗ್ಗೆ ಬಂದಿದ್ರಂತೆ ಲಕ್ಷ್ಮಿ ಹೇಳಿದಳು ಎನ್ನುತ್ತಾ ತುಟಿ ಒರೆಸಿಕೊಂಡರು. ಫಾತಿಮಾಳ ತಾಯಿ ಅದೇ ‘ಗೌಡ್ರೆ’ ತೋಟ ಮಾರುವ ವಿಚಾರ ನಿಮಗೆ ತಿಳಿಸಿದ್ದೆನಲ್ಲಾ ಏನಾದರು ಆಯಿತಾ? ಎಂದು ಕೇಳುವ ಅಂತ ಬಂದೆ ಅಂದರು. ಓ… ಅದಾ ವಿಷಯಾ! ನೀವು ಮಾತನಾಡಿದ ಮೇಲೆ ನಾನು ಹಲವಾರು ಜನರ ಬಳಿ ವಿಚಾರಿಸಿದೆ. ಊರಿನಲ್ಲಿರುವ ಯಾರಿಗೂ ಆ ತೋಟ ತೆಗೆದುಕೊಳ್ಳಲು ಮನಸ್ಸಿಲ್ಲ. ಜೊತೆಗೆ ಹೊರಗಡೆಯಿಂದ ಯಾರೂ ಬಂದು ಈ ಹಳ್ಳಿಯಲ್ಲಿ ತೋಟ ಖರೀದಿ ಮಾಡಲ್ಲ. ಉಳಿದಿರುವುದು ನಮಗೆ ಒಂದೇ ದಾರಿ ಅದು ತಮ್ಮೆಗೌಡರು… ಹಾಗೆ ನಾನು ಅವರ ಬಳಿ ಮಾತನಾಡಿದೆ. ಅವರು ಸದ್ಯಕ್ಕೆ ‘ಬೇಡ ಮಾರಾಯ’ ಎಂದರು. ನಾನು ಅದಕ್ಕೆ ಅವರಿಗೆ ನಿಮ್ಮ ಕಷ್ಟವನ್ನೆಲ್ಲಾ ವಿವರಿಸಿ ಪಾಪ ಒಂಟಿ ಹೆಣ್ಣು ತೋಟಗೀಟ ಎಲ್ಲ ಕಟ್ಟಿಕೊಂಡು ಬದುಕು ಮಾಡುವುದು ಅವಳಿಗೆ ಬಹಳ ಕಷ್ಟ, ನಮ್ಮಂಥ ಗಂಡಸರಿಗೇ ತೋಟ ನೋಡಿಕೊಳ್ಳಲು ಆಗುತ್ತಿಲ್ಲ. ಇನ್ನು ಆ ಹೆಣ್ಣು ಹೆಂಗಸಿನ ಕಥೆ ಏನು? ಎಂದು ವಿವರಿಸಿದ್ದಾಗಿಯೂ ತಿಳಿಸಿದರು. ಅಷ್ಟರಲ್ಲಾಗಲೇ ಫಾತಿಮಾ ಮತ್ತು ತಾಯಿಯ ಮುಖ ಅಂಗೈಯಗಲ ಬಾಡಿ ಹೋಗಿತ್ತು.

ಮಾತು ಮುಂದುವರೆಸಿದ ನಿಂಗೆಗೌಡರು…. ‘ಅದು ನಾವು ಮಾರಾಟ ಮಾಡಿದ ತೋಟವೇ ಹಾಗು ಸುತ್ತಮುತ್ತಾ ನಮ್ಮದೇ ತೋಟ ಇರುವುದರಿಂದ ಯೋಚನೆ ಮಾಡುವುದಾಗಿಯೂ ಹೇಳಿದರಲ್ಲದೇ… ಇವಾಗೆಲ್ಲ ತೋಟದ ಕೆಲಸವನ್ನು ಕೂಲಿಕೊಟ್ಟು ಮಾಡಿಸಿ ಏನೂ ಉಳಿಯುವುದಿಲ್ಲ. ಜೊತೆಗೆ ಫಾತಿಮಾಳ ಮಕ್ಕಳೆಲ್ಲಾ ಸಣ್ಣವರು ಇರುವುದರಿಂದ ದೊಡ್ಡವರಾದ ಮೇಲೆ ಬಂದು ತಕರಾರು ಮಾಡಿದರೆ ಕಷ್ಟ’ ಎಂದು ತಮ್ಮೆಗೌಡರು ಹೇಳುತ್ತಿದ್ದರು ಎಂದು ನಿಂಗೆಗೌಡ ಹೇಳಿದರು. ಅಷ್ಟರಲ್ಲಾಗಲೇ ಹೋದ ಜೀವ ಬಂದಂತಾಗಿದ್ದ ಫಾತಿಮಾ ಮತ್ತು ಅವಳ ತಾಯಿಗೆ ‘ಒಮ್ಮೆ ತೋಟ ಕೊಟ್ಟು ಅಣ್ಣನಿದ್ದ ಊರಿಗೆ ಸೇರಿದರೆ ಸಾಕು’ ಎಂದು ಮನಸ್ಸಿನಲ್ಲಿ ಅಂದುಕೊಳ್ಳತೊಡಗಿದರು.

ಫಾತಿಮಾಳ ತಾಯಿ, ಇಲ್ಲ ಗೌಡ್ರೆ ನಾನು ಮತ್ತು ನನ್ನ ಮಕ್ಕಳು ಯಾವುದೇ ಕಾಲಕ್ಕೂ ಅಂತಹ ನಂಬಿಕೆ ದ್ರೋಹದ ಕೆಲಸ ಮಾಡುವುದಿಲ್ಲ ನಮ್ಮನ್ನು ನಂಬಿ ವ್ಯಾಪಾರ ಮಾಡಿಸಿ ಕೊಡಿ ಎಂದು ಕೈ ಮುಗಿದರು. ಆ ವೇಳೆಗಾಗಲೆ ಫಾತಿಮಾಳ ಆಸ್ತಿಯನ್ನು ತಮ್ಮೆಗೌಡರಿಗೆ ಮಾರಿಸಿದಷ್ಟೇ ಸಂತೋಷದಲ್ಲಿ ನಿಂಗೆಗೌಡರ ಮನಸ್ಸು ಕುಣಿದಾಡಲು ಶುರುಮಾಡಿತ್ತು, ಆದರೆ ಅದನ್ನು ತೋರಿಸಿಕೊಳ್ಳದೆ ಸುಮ್ಮನಿದ್ದರು.

ಮನೆಯಾಯ್ತು, ತನ್ನ ಕುಟುಂಬವಾಯ್ತು ಎಂದು ಜೀವನ ಸಾಗಿಸಿದ್ದ ಫಾತಿಮಾಳಿಗೆ ಬರಸಿಡಿಲಿನಂತೆ ಎರಗಿದ ಈ ಆಘಾತದಿಂದ ಚೇತರಿಸಿಕೊಳ್ಳಲು ತುಂಬಾ ಕಷ್ಟವಾಯಿತು. ಫಾತಿಮಾಳಿಗೆ ಇನ್ನೂ ಮೂವತ್ತರ ಆಜುಬಾಜು. ವಯಸ್ಸಿಗೆ ಬರುತ್ತಿರುವ ಮಗಳು ಬೇರೆ, ಕುಟುಂಬದ ನಿರ್ವಹಣೆಯ ನೊಗವನ್ನೂ ಎಳೆಯಬೇಕು, ಹೊರಗಡೆ ಹೋಗಿ ದುಡಿದು ಅಭ್ಯಾಸವಿರಲಿಲ್ಲ.

ಮಾತು ಮುಂದುವರೆಸುತ್ತಾ ನಿಂಗೆಗೌಡರು… ನೋಡಿ ಉಮ್ಮಾ ನಿಮ್ಮಗಳ ಮತ್ತು ಮೊಹಮ್ಮದನ ಮೇಲೆ ನಮಗಿದ್ದ ನಂಬಿಕೆ ಮತ್ತು ಪ್ರೀತಿಗೆ ನನಗೆ ಒಂದು ರೂಪಾಯಿ ಲಾಭ ಇಲ್ಲದಿದ್ದರು ನಾನು ವ್ಯವಹಾರ ಮಾಡಿಸಿ ಕೊಡುತ್ತೇನೆ. ಗೌಡರು ಕೊಡುವ ದುಡ್ಡನ್ನು ತೆಗೆದುಕೊಂಡು ಹೋಗಿ ಎಲ್ಲಾದರು ಚೆನ್ನಾಗಿ ಬಾಳಿ ಎನ್ನುತ್ತಾ ಯಾವುದೋ ದೊಡ್ಡ ಸಮಾಜಸೇವೆ ಮಾಡಿದ ರೀತಿಯಲ್ಲಿ ಹಾವಭಾವ ತೋರಿಸತೊಡಗಿದರು. ಮುಂದಿನ ಭಾನುವಾರ ನಮ್ಮ ಮನೆಗೆ ತಮ್ಮೆಗೌಡರನ್ನು ಕರೆಸುತ್ತೇನೆ ನೀವೂ ಬಂದುಬಿಡಿ, ಮಾತುಕತೆ ಮುಗಿದರೆ ಸೋಮವಾರವೇ ಪೇಟೆಗೆ ಹೋಗಿ ವಕೀಲರ ಬಳಿ ಅಗ್ರಿಮೆಂಟ್ ಪೇಪರ್ ಮಾಡಿಸಿ ವ್ಯವಹಾರ ಮುಗಿಸುವ ಎನ್ನುತ್ತಾರೆ.

ಅಮ್ಮ ಮಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಫಾತಿಮಾಳಿಗೆ ಒಮ್ಮೆ ತೋಟವನ್ನು ಮಾರಿ ಅಣ್ಣನಿದ್ದ ಊರಿಗೆ ಹೋಗಿ ಕೂಲಿನಾಲಿ ಮಾಡಿ ಮಕ್ಕಳನ್ನು ಸಾಕಿ ಬೆಳೆಸಿ ಅವರಿಗೆ ಒಂದು ಬದುಕು ಕಟ್ಟಿಕೊಟ್ಟರೆ ಸಾಕು ಎಂದು ಮನಸ್ಸು ತುಡಿಯುತ್ತಿತ್ತು. ಅಂದು ರಾತ್ರಿ ಸಂತೋಷದಿಂದ ಅವಳಿಗೆ ನಿದ್ರೆಯೇ ಬರುತ್ತಿರಲಿಲ್ಲ….

ವಯಸ್ಸಿನ್ನು ಮೂವತ್ತು ದಾಟದಿದ್ದರು, ನೋಡಲು ಸುಂದರಿಯಾಗಿದ್ದರೂ ಅವಳ ಮನಸ್ಸು ಎಂದಿಗೂ ಯೌವ್ವನದ ಅಲೆಗೆ ಕೊಚ್ಚಿ ಹೋಗಲಿಲ್ಲ, ಮನಸ್ಸು ಸ್ಥಿಮಿತ ಕಳೆದುಕೊಳ್ಳಲಿಲ್ಲ. ಅವಳಂದು ಮನಸ್ಸು ಮಾಡಿದ್ದರೆ ಮಕ್ಕಳನ್ನು ತಾಯಿಯ ಮಗ್ಗುಲಲ್ಲಿ ಹಾಕಿ ಯಾರಾದರೊಬ್ಬ ಮಧ್ಯವಯಸ್ಕನನ್ನು ಮದುವೆಯಾಗಿ ತನ್ನ ಬದುಕನ್ನು ಕಟ್ಟಿಕೊಳ್ಳಬಹುದಿತ್ತು. ಆದರೆ ಅವಳ ‘ತಾಯಿ ಮನಸ್ಸು’ ಮತ್ತು ‘ಗಂಡನ ಮೇಲಿಟ್ಟಿದ್ದ ಪ್ರೀತಿ’ ಎಷ್ಟು ನಿಷ್ಕಲ್ಮಶವಾಗಿತ್ತೆಂದರೆ ಪ್ರತಿಕ್ಷಣವೂ ತನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದಳೇ ಹೊರತು ತನ್ನ ವಯಸ್ಸು ಮತ್ತು ಯೌವ್ವನ ಹಾಗೂ ಆಕಾಂಕ್ಷೆಗಳ ಬಗ್ಗೆ ತಪ್ಪಿಯೂ ಯೋಚಿಸುತ್ತಿರಲಿಲ್ಲ.

ಫಾತಿಮಾಳ ದೊಡ್ಡ ಮಗಳು ಆಯಿಷಾ ಪ್ರೌಢಾವಸ್ಥೆಯ ಹೊಸ್ತಿಲಲ್ಲಿ ನಿಂತಿದ್ದರಿಂದ ಅವಳಿಗೆ ತನ್ನ ತಂದೆಯ ಸಾವಿನ ಅರಿವು ಸ್ವಲ್ಪಮಟ್ಟಿಗೆ ಇತ್ತು. ಆದರೆ ಸಣ್ಣ ಮಗನಿಗೆ ತಂದೆಯ ಸಾವಿನ ಅರಿವು ಕಿಂಚಿತ್ತೂ ಇರಲಿಲ್ಲ. ಅವನು ತಂದೆಯ ನೆನಪು ಬಂದಾಗಲೆಲ್ಲಾ ಫಾತಿಮಾಳ ಬಳಿ ಕೇಳುತ್ತಿದ್ದ ಉಮ್ಮಾ ಬಾಪ ಎಲ್ಲಿ? ಯಾವಾಗ ಬರುತ್ತಾರೆ? ಎಂದು. ಅಂತಹ ಸಂದರ್ಭದಲ್ಲಿ ಉಮ್ಮಳಿಸಿ ಬರುತ್ತಿದ್ದ ನೋವನ್ನು ತೋರಿಸಿಕೊಳ್ಳದೆ ಮಗನನ್ನು ಎದೆಗೊತ್ತಿ.. ಬಾಪ ದೇವರ ಬಳಿ ಹೋಗಿದ್ದಾರೆ. ಸ್ವಲ್ಪದಿನದಲ್ಲೆ ಬರುತ್ತಾರೆ ಎಂದು ಅವನನ್ನು ಸಮಾಧಾನಪಡಿಸಿ ಮನಸ್ಸಿನಲ್ಲೇ ಅಳುತ್ತಿದ್ದಳು.

ಆ ಕಾಲದಲ್ಲಿಯೇ ಫಾತಿಮಾ ದಂಪತಿ ಮಕ್ಕಳನ್ನು ಓದಿಸಿ ಸಮಾಜಕ್ಕೆ ಮಾದರಿ ಮಾಡಬೇಕೆಂದು ಕನಸು ಕಂಡಿದ್ದವರು. ಆದರೆ ವಿಧಿ ಆಟವೇ ಬೇರೆ ಇತ್ತು. ಜೊತೆಗೆ ವಯಸ್ಸಿಗೆ ಬಂದ ಮಗಳು ಮನೆ ತುಂಬ ಓಡಾಡುವುದನ್ನು ನೋಡಿದಾಗಲೆಲ್ಲಾ ಫಾತಿಮಾಳ ಮನಸಿಗೆ ಈ ಸ್ಥಳ ಅಷ್ಟು ಸುರಕ್ಷಿತವಲ್ಲಾ. ಆದಷ್ಟು ಬೇಗ ತೋಟವನ್ನು ಮಾರಿ ಮಕ್ಕಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸೇರಿಕೊಳ್ಳಬೇಕೆಂದು ಹಪಹಪಿಸುತ್ತಿತ್ತು. ಹೀಗೆ ದಿನ ದೂಡುತ್ತಿದ್ದಾಗ ನಿಂಗೆಗೌಡರು ತಿಳಿಸಿದ ಅವರ ಕನಸಿನ ಭಾನುವಾರ ಬಂದೇ ಬಿಟ್ಟಿತ್ತು.

ಅಂದು ರಾತ್ರಿ ಇಡೀ ಫಾತಿಮಾಳ ಕಣ್ಣಿಗೆ ನಿದ್ರೆಯೇ ಸುಳಿಯಲಿಲ್ಲ ಅವರಿವರ ಬಳಿ ತನ್ನ ತೋಟ ಆ ಕಾಲಕ್ಕೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಬೆಳೆಬಾಳುತ್ತದೆ ಎಂದು ಕೇಳಿ ತಿಳಿದುಕೊಂಡಿದ್ದಳು. ತೋಟ ಮಾರಿ ಬರುವ ಆ ಹಣದಲ್ಲಿ ಅಣ್ಣನ ಮನೆಯ ಬಳಿ ಒಂದು ಸಣ್ಣ ಮನೆಯನ್ನು ಖರೀದಿಸಿ ತೋಟದಲ್ಲಿ ಕೆಲಸ ಮಾಡಿ ಮಕ್ಕಳನ್ನು ಸಾಕಬೇಕೆಂಬುದು ಮಾತ್ರ ಅವಳ ಮನಸ್ಸಿನಲ್ಲಿ ಓಡಾಡುತ್ತಿತ್ತು. ಬೆಳಗ್ಗೆ ಲಘುಬಗೆಯಿಂದ ಎದ್ದವಳೇ ಸ್ನಾನ ಮಾಡಿ ಮಕ್ಕಳಿಗೆ ಮತ್ತು ಅಮ್ಮನಿಗೆ ತಿಂಡಿಮಾಡಿಕೊಟ್ಟು ಮಕ್ಕಳನ್ನು ಹೊರಡಿಸಿ ಮದುವೆಗೆ ಹೋಗುವ ರೀತಿಯಲ್ಲಿ ಅಣಿಯಾಗುತ್ತಿದ್ದಳು. ಹಲವು ದಿನಗಳ ನಂತರ ಫಾತಿಮಾಳ ಮುಖದಲ್ಲಿ ಮೂಡಿದ ಮಂದಹಾಸವನ್ನು ಗಮನಿಸಿದ ಅವಳ ತಾಯಿ ಮನದಲ್ಲೇ ಸಂತೋಷ ಪಡುತ್ತಿದ್ದಳು.

ಸುಮಾರು ಹತ್ತು ಗಂಟೆಯ ವೇಳೆಗೆ ಎಲ್ಲರೂ ಹೊರಟು ನಿಂಗೆಗೌಡರ ಮನೆಯ ಮುಂದಿನ ಗೇಟಿನ ಬಳಿ ಬಂದಿದ್ದರು. ಹಿತ್ತಲಲ್ಲಿ ಹಸುವಿಗೆ ಮೇವು ಹಾಕುತ್ತಿದ್ದ ನಿಂಗೆಗೌಡರ ಪತ್ನಿ ಲಕ್ಷ್ಮಿ ಇವರ ಬಳಿ ಸೆರಗಿನಲ್ಲಿ ಕೈ ಒರೆಸುತ್ತ ನಗುಮುಖದಿಂದ ಬಂದು ಗೌಡರು ಸ್ನಾನ ಮಾಡುತ್ತಿದ್ದಾರೆ, ಬರುತ್ತಾರೆ ಕುಳಿತುಕೊಳ್ಳಿ ಎಂದಳು. ಗೇಟಿನ ಒಳಗೆ ಬಂದ ಫಾತಿಮಾ ಮತ್ತು ಕುಟುಂಬ ಮನಸ್ಸಿನಲ್ಲಿ ಊರಿಗೆ ಹೋಗುವ ಕನಸು ಕಾಣುತ್ತಾ ಗೌಡರ ಮನೆಯ ಜಗುಲಿಯ ಮೇಲೆ ಕುಳಿತುಕೊಂಡಿತು.

ಅಷ್ಟರಲ್ಲಿ ತಮ್ಮೆಗೌಡರು ಕೂಡ ಬಿಳಿಯ ವಸ್ತ್ರಧಾರಿಯಾಗಿ ಬಾಯಲ್ಲಿ ಒಂದಿಷ್ಟು ಎಲೆ ಅಡಿಕೆ ಜಗಿಯುತ್ತಾ ತಮ್ಮ ಸೈಕಲಿನಲ್ಲಿ ನಿಂಗೆಗೌಡರ ಮನೆಯ ಬಳಿ ತಲುಪಿದರು. ಸೈಕಲಿನ ಸ್ಟಾಂಡ್ ಹಾಕಿದ ತಕ್ಷಣ ಫಾತಿಮಾ ಮತ್ತು ಕುಟುಂಬದವರ ದರ್ಶನವಾಯಿತು. ಫಾತಿಮರವರು ಬರುವ ಮುಂಚೆಯೇ ನಿಂಗೆಗೌಡರ ಮನೆಗೆ ಆಗಮಿಸಿ ವ್ಯವಹಾರದ ವಿಚಾರವಾಗಿ ಮಾತನಾಡಬೇಕೆಂದಿದ್ದ ತಮ್ಮೆಗೌಡರಿಗೆ ಸ್ವಲ್ಪ ಇರುಸುಮುರುಸಾಯಿತು. ಆದರೆ ಆ ಭಾನುವಾರದ ಬೆಳಗ್ಗೆಯನ್ನೇ ಕನಸು ಕಾಣುತ್ತಿದ್ದ ಫಾತಿಮಾ, ಗೌಡರು ಬರುವ ಮುಂಚೆಯೇ ನಿಂಗೆಗೌಡರ ಮನೆಯ ಜಗುಲಿಯಲ್ಲಿ ಕುಳಿತು ನಗುಮೊಗದಿಂದ ಕಾಯುತ್ತಿದ್ದರು. ಇವರನ್ನು ನೋಡಿ ಒಂದೆರೆಡು ನಿಮಿಷ ತಮ್ಮೆಗೌಡರು ಒಳ ಹೋಗಬೇಕೋ ಅಥವಾ ಅಲ್ಲೇ ನಿಲ್ಲಬೇಕೋ ಎಂದು ಯೋಚಿಸುತ್ತಾ ನಿಂತಿರುವಾಗಲೇ ನಿಂಗೆಗೌಡರು ಸ್ನಾನಮುಗಿಸಿ ಹೊರಬರುತ್ತಾರೆ. ಜೊತೆಗೆ ಗೇಟಿನ ಬಳಿಯೇ ನಿಂತಿದ್ದ ಗೌಡರನ್ನು ನೋಡುತ್ತಾ ಬನ್ನಿ ಧಣಿಗಳೇ ಒಳಗೆ.. ಅದ್ಯಾಕೆ ಅಲ್ಲಿಯೇ ನಿಂತು ಬಿಟ್ಟಿದ್ದೀರಾ? ಎಂದು ಕರೆದರು. ಇಲ್ಲ ಗೌಡ್ರೆ ಇವಾಗ ತಾನೆ ಬಂದೆ ಎಂದು ನಗುತ್ತಾ ಗೇಟನ್ನು ಸರಿಸಿ ಒಳ ಬಂದರು ತಮ್ಮೆಗೌಡರು. ಗೌಡರ ಆಗಮನವಾಗುತ್ತಿದ್ದಂತೆ ಜಗುಲಿಯಲ್ಲಿ ಕೂತಿದ್ದ ಫಾತಿಮಾ ಮತ್ತು ಕುಟುಂಬ ನಮ್ಮ ಪಾಲಿನ ದೇವರೇ ಪ್ರತ್ಯಕ್ಷರಾದರು ಎನ್ನುವ ಮಟ್ಟಿಗೆ ಎದ್ದು ವಿನಯದಿಂದ ನಮಸ್ಕರಿಸಿದರು.

ಹುಂ…. ಹುಂ….. ಎನ್ನುತ್ತಾ ತಮ್ಮೆಗೌಡ್ರು ಒಳ ಬಂದರು. ‘ಏ ಲಕ್ಷ್ಮಿ ಏನು ಮಾಡ್ತಿದ್ದೀಯಾ ಧಣಿಗಳಿಗೆ ಕೂರಲು ಒಂದು ಚೇರು ತಾ…..’ ಎಂದು ಹೆಂಡತಿಗೆ ಏರುಧ್ವನಿಯಲ್ಲಿ ಹೇಳಿದರು ನಿಂಗೆಗೌಡರು, ಅಷ್ಟರಲ್ಲಿ ಕಬ್ಬಿಣದ ಮಡಚುವ ಚೇರೊಂದನ್ನು ತಂದ ನಿಂಗೆಗೌಡರ ಪತ್ನಿ, ತಮ್ಮೆಗೌಡರನ್ನು ಉದ್ದೇಶಿಸಿ ನಮಸ್ಕಾರ ಧಣಿಗಳೆ. ಏನು ಇತ್ತಕಡೆ ಎಲ್ಲ ಬರುವುದೇ ಇಲ್ಲ ಎಂದಳು. ತಮ್ಮೆಗೌಡರು, ಎಲ್ಲಿ ಲಕ್ಷ್ಮಮ್ಮ ಮನೆ ವ್ಯವಹಾರ ತೋಟದ ಕೆಲಸ ನೋಡಲು ಸಮಯ ಸಾಲೋದಿಲ್ಲ. ಜೊತೆಗೆ ಕೂಲಿಯವರು ಬೇರೆ ನಾನು ಇದ್ರೇನೇ ಕೆಲಸ ಮಾಡೋದು. ಹೆಂಗೆ ಬಿಟ್ಟು ಬರಲಿ ಹೇಳಿ ಎಂದರು. ಅಷ್ಟೊತ್ತಿಗೆ ನಿಂಗೆಗೌಡರು ಪತ್ನಿಯನ್ನು ಗದರುತ್ತಾ….. ಇಲ್ಲೇ ಮಾತಾಡಿಕೊಂಡು ನಿಲ್ಲುತ್ತಿಯೋ ಅಥವಾ ಧಣಿಗಳಿಗೆ ಕಾಫಿಗೀಫಿ ತರ್ತಿಯೋ ಎಂದು ಮಡದಿಯ ಬಳಿ ಕೇಳುತ್ತಾರೆ. ಆಯ್ತು ತರ್ತೀನಿ ಅದಕ್ಯಾಕೆ ಅಂಗೆ ರೇಗ್ತೀರಾ? ಅಂತ ಹೇಳಿ ಸೆರಗು ಎಳಕೊಂಡು ಲಕ್ಷ್ಮಿ ಒಳಗೆ ಹೋದಳು.

ಮಾತಿಗಿಳಿದ ನಿಂಗೆಗೌಡರು ನೋಡಿ ಉಮ್ಮಾ ನೀವು ಬಂದು ನಿಮ್ಮ ಕಷ್ಟ ಹೇಳಿಕೊಂಡಿದ್ದಕ್ಕೆ ನಾನು ಗೌಡರ ಕೈಕಾಲು ಹಿಡಿದು ಒಪ್ಪಿಸಿ ಕರೆದುಕೊಂಡು ಬಂದಿದ್ದೇನೆ. ಕೊಡುವವರು ನೀವು, ತೆಗೆದುಕೊಳ್ಳುವವರು ಗೌಡರು ಮಧ್ಯದಲ್ಲಿ ನಂದೇನು ಇಲ್ಲ.. ನೀವಿಬ್ಬರು ಮುಖಾಮುಖಿ ಮಾತನಾಡಿ ಮುಗಿಸಿ ಎಂದು ನಗುತ್ತಾ ಗೌಡರ ಕಡೆ ನೋಡಿದರು.

ಅದಕ್ಕೆ ಫಾತಿಮಾಳ ತಾಯಿ ಅಯ್ಯೋ ಗೌಡ್ರೆ ನಮ್ಮ ಪರವಾಗಿ ಮಾತನಾಡಲು ಇಲ್ಲಿ ಯಾರೂ ಇಲ್ಲ ನೀವೇ ಇರುವುದು, ನೀವೇ ಮಾತನಾಡಿ, ನೀವು ಹೇಗೆ ಮಾತನಾಡಿದರು ನಮಗೆ ಒಳ್ಳೆಯದೇ ಮಾಡುತ್ತೀರೆಂಬ ನಂಬಿಕೆ ನಮಗೆ ಇದೆ ಎಂದು ಹೇಳುತ್ತಾಳೆ.

ಮಧ್ಯೆ ಬಾಯಿ ಹಾಕಿದ ತಮ್ಮೆಗೌಡರು ನೋಡಿ ನಿಂಗೆಗೌಡ್ರೆ ನನಗೆ ಸದ್ಯಕ್ಕೆ ಇವರ ಜಮೀನು ತೆಗೆದುಕೊಳ್ಳುವ ದರ್ದು ಇಲ್ಲ.. ನನಗಿರುವ ನಲವತ್ತು ಎಕರೇನೇ ನನಗೆ ವ್ಯವಸಾಯ ಮಾಡಲು ಆಗುತ್ತಿಲ್ಲ. ಕೂಲಿಯವರ ಕಾಟ ಬೇರೆ, ಈ ವರ್ಷದ ಅಡಿಕೆಯೂ ಸಹ ವ್ಯಾಪಾರ ಆಗಿಲ್ಲ. ನಾವು ಕಾಕನಿಗೆ ಆ ತೋಟ ಮಾರಿದ್ದೇ ನಮಗೆ ಹೆಚ್ಚಾಗಿ ವ್ಯವಸಾಯ ಮಾಡಲು ಸಾಧ್ಯವಾಗದೆ ಇರುವುದರಿಂದ. ಆದ್ದರಿಂದ ನೀವು ಬೇಗ ಏನು ಎತ್ತಾ? ಅಂತ ಮಾತನಾಡಿ ಮುಗಿಸಿ. ನನಗೆ ಮಧ್ಯಾಹ್ನ ಬೇರೆ ಪೇಟೆಗೆ ಹೋಗಬೇಕಿದೆ ಸಮಯವಿಲ್ಲ ಎಂದರು.

ನಿಂಗೆಗೌಡರು ಆಯ್ತು ಧಣಿ. ಕಾಕ ಹೋದಮೇಲೆ ಫಾತಿಮಾ ಮತ್ತು ಕುಟುಂಬ ಬಾರಿ ತೊಂದರೆಯಲ್ಲಿದೆ. ಪಾಪ! ಅವರಿಗೆ ಈ ತೋಟಗೀಟ ಎಲ್ಲ ಆಗಿ ಬರುವುದಿಲ್ಲ. ಬೇಗ ಮಾತನಾಡಿ ಮುಗಿಸಿ ಬಿಡುವ ಎನ್ನುತ್ತಾ…. ನೀನು ಏನು ಹೇಳ್ತಿಯಾ ಫಾತಿಮಾ? ಎಂದು ಫಾತಿಮಾಳನ್ನು ದಿಟ್ಟಿಸುತ್ತಾ ಕೇಳಿದರು. ಫಾತಿಮಾ ಆಯ್ತು ಧಣಿ. ನೀವು ಹೇಗೆ ಹೇಳುತ್ತೀರಾ ಹಾಗೆಯೇ ಮಾಡುವ ಎಂದು ತಲೆಯಾಡಿಸಿದರು.

ನಿಂಗೆಗೌಡರು.. ಇನ್ನೇನು ಧಣಿಗಳೆ ನೀವೇ ಒಂದು ಬೆಲೆ ನಿಗದಿಮಾಡಿಬಿಡಿ. ನಾಳೆಯೇ ಪೇಟೆಗೆ ಹೋಗಿ ವಕೀಲರನ್ನು ಕಂಡು ಎಲ್ಲಾ ಪೇಪರ್ ವ್ಯವಸ್ಥೆ ಮಾಡಿಕೊಂಡು ಬರೆಸಿಕೊಂಡು ಬರುವ ಎಂದರು. ತಮ್ಮೆಗೌಡರು ಮಾತು ಮುಂದುವರೆಸಿ ನೋಡಿ ಗೌಡರೇ ಇವಾಗ ಹಣಕ್ಕೆಲ್ಲ ಭಾರೀ ತೊಂದರೆ ಇದೆ. ನಾವು ತೋಟ ತೆಗೆದುಕೊಂಡರು, ಇಲ್ಲದಿದ್ದರು ಇವರು ಇಲ್ಲಿಂದ ಹೋಗಿಯೇ ಹೋಗುತ್ತಾರೆ. ಆದ್ದರಿಂದ ಏನಾದರೊಂದು ಕೊಟ್ಟುಬಿಡುವ ಅವರಿಗೆ, ಪಾಪ ಎಲ್ಲಾದರು ಹೋಗಿ ಬದುಕಿಕೊಳ್ಳಲಿ ಎಂದು ನಗುತ್ತಾ ಫಾತಿಮಾಳ ಕುಟುಂಬಕ್ಕೆ ಸಹಾಯಮಾಡುವ ರೀತಿಯಲ್ಲಿ ಹೇಳಿದರು. ಅಷ್ಟರಲ್ಲಾಗಲೇ ಫಾತಿಮಾಳ ತಾಯಿಗೆ ಗೌಡರ ಮನಸಿನ ಇಂಗಿತ ಅರ್ಥವಾಗಿತ್ತು. ಆದರೂ ಅವರ ಮುಂದಿನ ಮಾತಿಗಾಗಿ ಕಾಯುತ್ತಿದ್ದರು. ನಿಂಗೆಗೌಡರು ಅದೇ ಧಣಿಗಳೇ ನೀವೊಂದು ಬೆಲೆ ಹೇಳಿಬಿಟ್ಟರೆ ಪಾಪ ಅವರಿಗೆ ಸಂತೋಷವಾಗುತ್ತದೆ ಮುಂದಿನ ಕಾರ್ಯವನ್ನು ನಾನು ನೋಡಿಕೊಳ್ಳುತ್ತೇನೆ ಎಂದರು.

ಏನಮ್ಮ ಸರಿಯಲ್ವಾ? ಎಂದು ಫಾತಿಮಾಳತ್ತ ತಿರುಗಿ ಕೇಳಿದರು, ಇಲ್ಲೇನೊ ಷಡ್ಯಂತ್ರ ನಡೆಯುತ್ತಿದೆ ಎಂಬ ವಾಸನೆ ಮೂಗಿಗೆ ಬಡಿದಿದ್ದ ಫಾತಿಮಾಳ ತಾಯಿ ಮತ್ತು ಫಾತಿಮಾ ಏನೂ ಮಾತಾಡದೆ ಮೌನವಾಗಿ ಕುಳಿತಿದ್ದರು.

ತಮ್ಮೆಗೌಡರು ಮಾತು ಮುಂದುವರೆಸಿ.. ಹಾಗಾದರೆ ನೀವು ಹೇಳಿದ್ದಕ್ಕಾಗಿ ಒಂದು ಮಾತು ಹೇಳುತ್ತೇನೆ, ಅವರಿಗೂ ಪಾಪ ನಷ್ಟವಾಗುವುದು ಬೇಡ. ನಾನೊಂದು ‘ಹತ್ತು ಸಾವಿರ’ ಕೊಟ್ಟು ಬಿಡುತ್ತೇನೆ ಪಾಪ, ಅವರು ಎಲ್ಲಾದರು ಹೋಗಿ ಬದುಕಿಕೊಳ್ಳಲಿ ಎಂದರು.

ಈ ಮಾತನ್ನು ಕೇಳಿದ ತಕ್ಷಣ ಫಾತಿಮಾಳ ತಾಯಿ ಒಂದು ಕ್ಷಣ ದಂಗಾಗಿ ಮೂರ್ಛೆಯೇ ಹೋಗಿಬಿಟ್ಟಳು. ನಿಂಗಣ್ಣ ‘ಏ ಲಕ್ಷ್ಮೀ ಬೇಗ ನೀರುತಾ.. ಈ ಮುದುಕಿ ಸತ್ತುಗಿತ್ತು ಹೋಗಿಬಿಟ್ಟಳೇನೋ’ ಎಂದು ಅರಚಿದರು. ಅಷ್ಟರೊಳಗೆ ಪಕ್ಕದಲ್ಲಿದ್ದ ಫಾತಿಮಾ ಉಮ್ಮಾ.. ಏನಾಯಿತು ಎಂದು ಅಳಲು ಶುರುಮಾಡಿದಳು. ಜೊತೆಗೆ ಮಕ್ಕಳು ಧ್ವನಿಗೂಡಿಸಿ ನಿಂಗೆಗೌಡರ ಮನೆ ಒಂದು ಕ್ಷಣಕ್ಕೆ ಸಾವಿನ ಮನೆಯ ರೀತಿಯಲ್ಲಿ ಮಾರ್ಪಟ್ಟಿತು.

ನಿಂಗೆಗೌಡರು ಅರಚಿದ ಧ್ವನಿಗೆ ಅಡುಗೆ ಕೋಣೆಯಲ್ಲಿ ಟೀ ಮಾಡುತ್ತಿದ್ದ ಗೌಡರ ಪತ್ನಿ ಲಕ್ಷ್ಮಿ ಚೊಂಬಿನಲ್ಲಿ ನೀರನ್ನು ತೆಗೆದುಕೊಂಡು ಬಂದು ‘ಉಮ್ಮಾ ಏನಾಯಿತು’ ನಿಮಗೆ ಎನ್ನುತ್ತಾ ಫಾತಿಮಾಳ ತಾಯಿಯ ಮುಖಕ್ಕೆ ನೀರೆರೆಚಿದರು. ತಮ್ಮೆಗೌಡರನ್ನು ಹಿತ್ತಲಿಗೆ ಕರೆದುಕೊಂಡು ಹೋದ ನಿಂಗೆಗೌಡರು ಎಂಥಾ ಕೆಲಸ ಮಾಡಿಬಿಟ್ಟಿರಿ ಧಣಿ ಅನ್ಯಾಯವಾಗಿ ಆ ಹೆಂಗಸನ್ನು ಕೊಂದುಬಿಟ್ಟಿರಲ್ಲ ಎಂದರು.. ಅದಕ್ಕೆ ತಮ್ಮೆಗೌಡರು ‘ನೀನೆಂತದು ಮಾರಾಯ’ ಹೇಳುವುದು ನಾನು ನ್ಯಾಯವಾದ ಬೆಲೆಯೇ ಹೇಳಿರುವುದು, ಅದಕ್ಕೆ ಈ ಮುದುಕಿಗೆ ಈ ರೀತಿ ಆಗುತ್ತದೆ ಎಂದು ಯಾರಿಗೆ ಗೊತ್ತುಂಟು ಎಂದು ಹೆದರಿದ ಧ್ವನಿಯಲ್ಲಿ ಹೇಳಿದರು.

ಮಾತು ಮುಂದುವರೆಸಿದ ತಮ್ಮೆಗೌಡರು ಹೋಗಿ ನೋಡಿ ಆ ಮುದುಕಿ ಏನಾದಳು ಎಂದು ನಿಂಗೆಗೌಡರಿಗೆ ಹೇಳಿದರು. ಅಷ್ಟರಲ್ಲಿ ಹಿತ್ತಲಿಗೆ ಬಂದ ಲಕ್ಷ್ಮಿ ನೀವಿಬ್ಬರು ಸೇರಿ ಆ ಉಮ್ಮನನ್ನು ಸಾಯಿಸಿ ಬಿಡುತ್ತಿದ್ರಲ್ಲಾ…. ಎಂದಳು. ಅದಕ್ಕೆ ನಿಂಗೆಗೌಡರು ಏನಾಯ್ತೀಗಾ? ಎಂದರು.

ಲಕ್ಷ್ಮಿ ‘ಏನಿಲ್ಲಾ ಮೂರ್ಛೆಹೋಗಿದ್ದಳು ಮುಖಕ್ಕೆ ನೀರು ಚಿಮುಕಿಸಿದಾಗ ಎಚ್ಚರವಾಯಿತು. ನೀರು ಕೊಟ್ಟಿದ್ದೇನೆ. ಎಂದಳು. ನಿಂಗೆಗೌಡರು ಸರಿ ನೀನು ಹೋಗಲ್ಲಿಗೆ ಈಗ ಬರುತ್ತೇನೆ ಎಂದು ಪತ್ನಿಯನ್ನು ಒಳ ಕಳುಹಿಸಿದರು.

ನಿಂಗೆಗೌಡರು ಮತ್ತೆ ಮಾತು ಮುಂದುವರೆಸುತ್ತಾ ಅಲ್ಲ ಧಣಿಗಳೆ ಒಂದು ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಆ ಜಮೀನನ್ನು ನೀವು ಅಷ್ಟಕ್ಕೆ ಕೇಳುವುದಾ? ಇದ್ಯಾವ ನ್ಯಾಯ? ಎಂದರು. ಅದಕ್ಕೆ ತಮ್ಮೆಗೌಡರು, ಸುಮ್ಮನಿರಿ ಗೌಡರೇ ನಿಮಗೆ ಗೊತ್ತಾಗಲ್ಲ ‘ಅವಕ್ಕೆ ದುಡ್ಡಿನ ಬೆಲೆ ಗೊತ್ತಿಲ್ಲ’ ಅಷ್ಟೆಲ್ಲಾ ದುಡ್ಡು ಕೊಟ್ಟು ನಾವು ಖರೀದಿಸಿದರೆ ನಮಗೆ ಬೆಲೆ ಇರುವುದಿಲ್ಲ ಎಂದರು.

ನಿಂಗೆಗೌಡರು ‘ಅಲ್ಲ ಧಣಿಗಳೇ ನೀವು ಕೊನೆಯದಾಗಿ ಎಷ್ಟು ಕೊಡುತ್ತೀರಾ? ಎಂದು ಹೇಳಿ. ವ್ಯವಹಾರ ಆಗುತ್ತೋ ಇಲ್ಲವೋ ನೋಡಿಯೇ ಬಿಡೋಣ’ ಎಂದರು. ತಮ್ಮೆಗೌಡರು ನೋಡಿ ನಿಂಗಣ್ಣ. ನನಗೆ ಹತ್ತು ಸಾವಿರಕ್ಕೆ ಕೊಟ್ಟರೆ ನಾನು ತೆಗೆದುಕೊಳ್ಳುತ್ತೇನೆ. ಅದರಲ್ಲಿ ನಿಮಗೆ ಬೇರೆ ಐದು ಸಾವಿರ ಕೊಡಬೇಕು. ಜೊತೆಗೆ ಆಧಾರ ಮಾಡಿಸಿಕೊಳ್ಳಲು ವಕೀಲರಿಗೆ ಬೇರೆ ಕೊಡಬೇಕು. ಎಲ್ಲಾ ಸೇರಿದರೆ ನನಗೆ ದೊಡ್ಡ ಹೊರೆಯಾಗಿ ಬಿಡುತ್ತದೆ ಅಂದರು. ನಿಂಗೆಗೌಡರಿಗೆ ಐದು ಸಾವಿರ ತನಗೆ ಕೊಡುತ್ತೇನೆ ಎಂಬ ಮಾತು ಕಿವಿಗೆ ಬಿದ್ದೊಡನೆ ಕಿವಿ ನಿಮಿರಿ, ಕಣ್ಣು ಅಗಲವಾಯ್ತು, ತುಟಿಯಂಚಲ್ಲಿ ಸುರಿಯುತ್ತಿದ್ದ ಅಡಿಕೆ ರಸವನ್ನು ಸೀಟುತ್ತಾ ಅಲ್ಲ ಧಣಿಗಳೆ… ವ್ಯಾಪಾರ ಕುದುರಿದ ಮೇಲೆ ನನಗೆ ಕೊಡುವ ಹಣಕ್ಕೆ ತಕರಾರು ಆಗುವುದಿಲ್ಲವಲ್ಲ ಎಂದು ನಗುತ್ತಾ ಕೇಳಿದರು. ತಮ್ಮೆಗೌಡರು, ಎಂಥಮಾತು ಅಂತ ಹೇಳಿ ಬಿಟ್ರಿ ಗೌಡ್ರೇ.. ನಿಮಗೆ ಹಾಗೆ ಮಾಡಲು ಸಾಧ್ಯವಾ? ನೀವು ಎಷ್ಟಾದರು ನಮ್ಮ ಜನ ಅಲ್ಲವಾ, ನಿಮಗೆ ಮೋಸ ಮಾಡಿದರೆ ನಮ್ಮನ್ನು ಆ ‘ಕೊರಗಜ್ಜ’ ಸುಮ್ಮನೆ ಬಿಡುತ್ತಾನ ಎಂದರು. ನಿಂಗೆಗೌಡರು, ಅಂಗಾದರೆ ಬನ್ನಿ ಕೊನೆಯದಾಗಿ ಒಮ್ಮೆ ಕೇಳಿಬಿಡುವ ವಹಿವಾಟು ಆಗುತ್ತದಾ ಇಲ್ಲವಾ ಎಂದು ತೀರ್ಮಾನಿಸಿಯೇ ಬಿಡುವ ಎನ್ನುತ್ತಾ ಫಾತಿಮಾಳ ಕುಟುಂಬ ಕೂತಿದ್ದ ಜಗಲಿಯ ಬಳಿ ತಮ್ಮೆಗೌಡರನ್ನು ಕರೆದುಕೊಂಡು ಹೋದರು.


(ಕೃತಿ: ಕಡಮ್ಮಕಲ್ಲು ಎಸ್ಟೇಟ್ (ಕಾದಂಬರಿ), ಲೇಖಕರು: ನೌಶಾದ್ ಜನ್ನತ್ತ್, ಪ್ರಕಾಶನ: ನಮ್ಮ ಕೊಡಗು, ಬೆಲೆ:100/-)