ಇದ್ಯಾಕೆ ಹೀಗೆ ಎಂದು ಪ್ರಶ್ನಿಸಿಕೊಂಡರೆ ಆಸ್ಟ್ರೇಲಿಯಾದ ಪಾಳೆಗಾರಿಕೆ ಮತ್ತು ವಸಾಹತುಶಾಹಿ ಚರಿತ್ರೆ ಬಿಚ್ಚಿಕೊಳ್ಳುತ್ತದೆ. ನಡೆದು ಹೋದ ಕರಾಳ ಚಾರಿತ್ರಿಕ ಘಟನೆಗಳು, ಅಬೊರಿಜಿನಲ್ ಜನರ ಮಾರಣಹೋಮ, ಅವರನ್ನು ಗುಲಾಮಗಿರಿಗೆ ಒಳಪಡಿಸಿದ್ದು, ಅವರ ಮಕ್ಕಳನ್ನು ಕದ್ದು ಬಲವಂತವಾಗಿ ಅವರಿಗೆ ‘ಸಂಸ್ಕೃತಿ ಪಾಠ’ ಕಲಿಸಿದ್ದು, ಬಿಳಿಯರ ಆಳ್ವಿಕೆ, ಆಡಳಿತ, ‘ವೈಟ್ ಆಸ್ಟ್ರೇಲಿಯಾ’ ಕಾಯಿದೆ/ಕಾನೂನು ಪಾಲನೆ, ಸಮಾಜದಲ್ಲಿ ಆಳವಾಗಿ ಬೇರೂರಿರುವ ಜನಾಂಗಬೇಧ ಮತ್ತು ರೇಸಿಸಮ್ ಎಲ್ಲವೂ ಕಾರಣಗಳೇ. ಅವುಗಳ ಪರಿಣಾಮಗಳ ಸರಣಿ ಮುಂದುವರೆದಿದೆ.
ಡಾ. ವಿನತೆ ಶರ್ಮಾ ಬರೆಯುವ ‘ಆಸ್ಟ್ರೇಲಿಯಾ ಪತ್ರ’

ಯುಎನ್ಡುಮ ಹಿರಿಯ (ಎಲ್ಡರ್) ನೆಡ್ ಹಾರ್ಗ್ರೇವ್ಸ್ ಕೇಳುತ್ತಿದ್ದರು – “ನಮಗೆ ಯಾವಾಗ ನ್ಯಾಯ ಸಿಗುತ್ತದೆ? ಯಾವಾಗ?”
ಅವರು ಪ್ರಶ್ನೆ ಎತ್ತಿದಾಗ ಅವರನ್ನು ಸುತ್ತುವರೆದಿದ್ದ ಸಮುದಾಯದ ಜನರು ಅಳುತ್ತಿದ್ದರು. ಹೆಂಗಸರು ಮತ್ತೆಮತ್ತೆ ಕಣ್ಣೀರು ಒರೆಸಿಕೊಳ್ಳುತ್ತಿದ್ದರು. ಅವರ ಪ್ರಶ್ನೆ ನನ್ನಲ್ಲೂ ಪ್ರಶ್ನೆಗಳನ್ನು ಕೆದಕಿತ್ತು. ಅನೇಕ ದಿನಗಳಿಂದ ಪೊಲೀಸ್ ಕಾನ್ಸ್ಟೇಬಲ್ ಝಾಕರಿ ರೋಲ್ಫ್ ಕೋರ್ಟಿಗೆ ಹೋಗುವ ಸುದ್ದಿಯನ್ನು, ಆ ದೃಶ್ಯವನ್ನು ಟೀವಿ ಪರದೆಯ ಮೇಲೆ ನೋಡುತ್ತಿದ್ದ ನನಗೆ ಆ ಹಿರಿಯರ ದನಿಯಲ್ಲಿದ್ದ ನೋವು ತಾಕಿತ್ತು. ಆದರೇನು? ಕೋರ್ಟಿನಲ್ಲಿ ಝಾಕರಿ ರೋಲ್ಫ್ ಅಪರಾಧಿ ಅಲ್ಲ ಎಂದು ತೀರ್ಮಾನವಾಗಿತ್ತು. ಆತನ ವಕೀಲರು ಆ ದಿನ, ಆ ಕೇಸಿನಲ್ಲಿ ಯಾರೂ ಗೆದ್ದಿಲ್ಲ ಎಂದು ಹೇಳಿಕೆ ಕೊಟ್ಟರೆ, ಝಾಕರಿ ‘ಕೋರ್ಟಿನ ತೀರ್ಪು ತನಗೆ ಸಮಾಧಾನ ತಂದಿದೆ. ಆದರೆ ಇವತ್ತು ಕುಮಂಜಾಯಿ ವಾಕರ್ ಕುಟುಂಬ ಮತ್ತು ಆತನ ಸಮುದಾಯಕ್ಕೆ ನೋವಾಗಿದೆ. ಅವರಿಗೆ ಅವಕಾಶ ಕೊಟ್ಟು ನಡೆಯುತ್ತೀನಿ’ ಎಂದಿದ್ದರು. ಕುಮಂಜಾಯಿ ಕುಟುಂಬದವರ ಪರವಾಗಿ ಮಾತನಾಡಿದ ಅವನ ಸಂಬಂಧಿ ‘ಸತ್ತವನನ್ನು ಮತ್ತೆ ಸಾಯಿಸಿದ ಕೇಸು ಇದು. ಪೋಲೀಸರ ಕೈಯಲ್ಲಿ ಸತ್ತ ನಮ್ಮವನ ಮೇಲೆ ನಾನಾ ಆರೋಪಗಳನ್ನು ಹೊರಿಸಿ, ಅವನನ್ನು ಎಲ್ಲ ರೀತಿಯಲ್ಲೂ ಕೇಡಿಗ ಎಂದು ಬಣ್ಣಿಸಿ, ಅವನ ಸಾವಿಗೆ ಅವನೇ ಕಾರಣ ಎಂದು ದೂಷಿಸಿದ ಈ ನ್ಯಾಯದ ರೀತಿ ಅದೆಷ್ಟು ಅಸಹ್ಯಕರವಾದದು’ ಎಂದರು. ಅದನ್ನೆಲ್ಲ ಕೇಳಿ ಮತ್ತಷ್ಟು ಬೇಸರವಾಯ್ತು.

ಹತ್ತೊಂಬತ್ತು ವರ್ಷದ ಅಬೊರಿಜಿನಲ್ ಯುವಕ ಕುಮಂಜಾಯಿ ವಾಕರ್ ಆಸ್ಟ್ರೇಲಿಯದ ನೆತ್ತಿಯಲ್ಲಿರುವ ನಾರ್ತರ್ನ್ ಟೆರ್ರಿಟೋರಿಯಲ್ಲಿರುವ ಪ್ರಸಿದ್ಧ ಪ್ರವಾಸಿ ಸ್ಥಳ ಆಲಿಸ್ ಸ್ಪ್ರಿಂಗ್ ಬಳಿಯಿರುವ ಒಂದೂರಿನಲ್ಲಿ ವಾಸವಾಗಿದ್ದವನು. ಅವನ ಸಮುದಾಯದವರು ಅವನೊಬ್ಬ ಬಹು ಉತ್ಸಾಹಿ ತರುಣ, ತನ್ನ ಊರು-ನೆಲೆ-ಬೇರುಗಳು, ಜನ, ಸ್ನೇಹಿತರು, ಕುಟುಂಬ ಎಲ್ಲವನ್ನೂ ಬಹಳ ಪ್ರೀತಿಸುತ್ತಿದ್ದವನು, ಎಂದು ಹೇಳಿದ್ದಾರೆ. ನಾರ್ತರ್ನ್ ಟೆರ್ರಿಟೋರಿ ಎಂಬ ಕೇಂದ್ರ ಸರಕಾರದ ಆಡಳಿತದಲ್ಲಿರುವ ವಿಶಾಲ ಪ್ರದೇಶದ ಅನೇಕ ಊರುಗಳಲ್ಲಿ ನಾನಾರೀತಿಯ ಸಮಸ್ಯೆಗಳಿವೆ. ಅವುಗಳಿಗೆ ಇರುವ ಚಾರಿತ್ರಿಕ ಕಾರಣಗಳು, ರಾಜಕೀಯ ಹಿನ್ನೆಲೆ, ಸಮುದಾಯಗಳಲ್ಲಿರುವ ಛಿದ್ರತೆ, ಎಲ್ಲವೂ ಆಳವಾದ ಸಮಸ್ಯೆಗಳು. ಅವು ಹೆಚ್ಚಾಗುತ್ತಿವೆಯೇ ವಿನಃ ಕಡಿಮೆಯಾಗಿಲ್ಲ. ಅವುಗಳಿಗೆ ಕಾರಣ ಸರಕಾರದ ಧೋರಣೆ ಮತ್ತು ಕಾರ್ಯನೀತಿಗಳು ಎನ್ನುವ ಮಾತೇ ಇಂದಿಗೂ ನಿಂತಿದೆ. ಅಂತೆಯೆ ಅಲ್ಲಿರುವ ಅನೇಕ ಅಬೊರಿಜಿನಲ್ ಸಮುದಾಯಗಳಲ್ಲಿ ಬಹುಬಗೆಯ ಪಿಡುಗುಗಳು, ವ್ಯಸನಗಳು, ಹವ್ಯಾಸಗಳು ನೆಲೆಯಾಗಿವೆ. ಅವಕ್ಕೆ ಇಂಬು ಕೊಡುವಂತೆ ನಿರುದ್ಯೋಗ, ವಸತಿಹೀನರ ಸಂಖ್ಯೆ, ಆರೋಗ್ಯ ಸಮಸ್ಯೆಗಳು, ಇನ್ನೂ ಹೀಗೆ ನಡೆದಿವೆ. ಸಮುದಾಯದವರಿಗೆ ಸರಕಾರದಲ್ಲಿ ನಂಬಿಕೆಯಿಲ್ಲ, ತಮಗೆ ಯೋಗ್ಯತೆಯಿಲ್ಲ, ಸಂಸ್ಕೃತಿಯಿಲ್ಲ, ಸಾಮರ್ಥ್ಯವಿಲ್ಲ ಎಂದೆಲ್ಲ ಹೇಳಿ, ತಮ್ಮಿಂದ ಮಕ್ಕಳನ್ನು ಬೇರ್ಪಡಿಸುವ ಸರಕಾರವನ್ನು ಹೇಗೆ ನಂಬುವುದು; ತಮ್ಮ ಯುವಜನತೆಯನ್ನು ಕ್ಷುಲ್ಲಕ ಕಾರಣಗಳಿಗಾಗಿ ಬಂಧಿಸಿ ಜೈಲಿಗೆ ಕಳಿಸಿ ಅವರ ಜೀವನವನ್ನು ಮಣ್ಣುಪಾಲು ಮಾಡುವ ಸರಕಾರದ ಅಧಿಕಾರಿಗಳನ್ನು ಹತ್ತಿರಕ್ಕೆ ಸೇರಿಸದಷ್ಟು ಹೆದರಿಕೆ ಮತ್ತು ಹಿಂಜರಿಕೆ.

ಇಂತೆಲ್ಲ ಇರುವ ವಾತಾವರಣದಲ್ಲಿ ಮತ್ತೊಬ್ಬ ಅಬೊರಿಜಿನಲ್ ಯುವಕನ ಸಾವಾಯಿತು ಎನ್ನುವುದು ಆಶ್ಚರ್ಯವೇನಿಲ್ಲ. ಆದರೆ ಪೊಲೀಸರ ಕೈಯಲ್ಲಿ ಸತ್ತ ಎನ್ನುವುದು ಪುನರಾವರ್ತನೆಯಾಗಿದೆ. ಈ ಬಾರಿ ಆ ಯುವಕನನ್ನು ಬಂಧಿಸಲು ಇಬ್ಬರು ಪೊಲೀಸರು ಹೋಗಿದ್ದು, ಆಗ ಅವನು ಕತ್ತರಿಯಿಂದ ಕಾನ್ಸ್ಟೇಬಲ್ ಝಾಕರಿ ರೋಲ್ಫ್ ಭುಜಕ್ಕೆ ಚುಚ್ಚಿದ್ದು, ಕೂಡಲೆ ಅವನನ್ನು ನಿಷ್ಕ್ರಿಯಗೊಳಿಸುವ ಯತ್ನದಲ್ಲಿ, ಅವನು ಕತ್ತರಿಯಿಂದ ತಮ್ಮಿಬ್ಬರನ್ನು ಚುಚ್ಚಿ ಕೊಂದುಬಿಡಬಹುದು ಎಂಬ ಭಯದಿಂದ ಝಾಕರಿ ಮೂರು ಬಾರಿ ಗುಂಡು ಹಾರಿಸಿ ಅವನು ಸತ್ತಿದ್ದು, ಅದು ಕೋರ್ಟ್ ಕೇಸ್ ಆಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಅವನ ಸಾವಿನ ಬಗ್ಗೆ ಪ್ರತಿಭಟನೆಗಳು ನಡೆದು, ನ್ಯಾಯಕ್ಕಾಗಿ ಅಬೊರಿಜಿನಲ್ ಜನರು ದನಿಯೆತ್ತಿದ್ದರು. ಇದೆಲ್ಲ ನಡೆದಿದ್ದು ನವೆಂಬರ್ ೨೦೧೯ರಲ್ಲಿ. ಆಗಿನಿಂದಲೂ ನಡೆದ ಕೇಸಿನ ತೀರ್ಪು ಹೋದ ವಾರ ಬಂತು. ಕಾನ್ಸ್ಟೇಬಲ್ ಝಾಕರಿ ರೋಲ್ಫ್ ಕೇಸು ಮತ್ತೊಂದು ಕಾರಣದಿಂದ ಎಲ್ಲರ ಗಮನ ಸೆಳೆದಿತ್ತು. ೧೯೯೧ ಕಾಯಿದೆಯ ನಂತರ ಟೆರ್ರಿಟೋರಿ ಪ್ರದೇಶದಲ್ಲಿ ಇದೇ ಮೊತ್ತಮೊದಲ ಬಾರಿಗೆ ಪೊಲೀಸರ ಕೈಯಲ್ಲಿ ಸತ್ತ ಅಬೊರಿಜಿನಲ್ ವ್ಯಕ್ತಿಯ ಸಾವಿನ ಬಗ್ಗೆ ತನಿಖೆ ನಡೆಸಲಾಗಿತ್ತು. ಆದರೆ, ೧೯೯೧ರ ನಂತರದ ವರ್ಷಗಳಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಅಬೊರಿಜಿನಲ್ ಜನರು ಪೋಲೀಸರ ಕೈಯಲ್ಲಿ ಸತ್ತಿದ್ದಾರೆ. ಅವರಲ್ಲಿ ಯುವಜನರೆ ಹೆಚ್ಚು ಎನ್ನುವುದು ಆತಂಕಕಾರಿ ವಿಷಯ.

ಕುಮಂಜಾಯಿ ಕುಟುಂಬದವರ ಪರವಾಗಿ ಮಾತನಾಡಿದ ಅವನ ಸಂಬಂಧಿ ‘ಸತ್ತವನನ್ನು ಮತ್ತೆ ಸಾಯಿಸಿದ ಕೇಸು ಇದು. ಪೋಲೀಸರ ಕೈಯಲ್ಲಿ ಸತ್ತ ನಮ್ಮವನ ಮೇಲೆ ನಾನಾ ಆರೋಪಗಳನ್ನು ಹೊರಿಸಿ, ಅವನನ್ನು ಎಲ್ಲ ರೀತಿಯಲ್ಲೂ ಕೇಡಿಗ ಎಂದು ಬಣ್ಣಿಸಿ, ಅವನ ಸಾವಿಗೆ ಅವನೇ ಕಾರಣ ಎಂದು ದೂಷಿಸಿದ ಈ ನ್ಯಾಯದ ರೀತಿ ಅದೆಷ್ಟು ಅಸಹ್ಯಕರವಾದದು’ ಎಂದರು.

ಇಂದಿಗೂ ಆಸ್ಟ್ರೇಲಿಯಾದಲ್ಲಿ ಜೈಲಿನಲ್ಲಿರುವ ಅಬೊರಿಜಿನಲ್ ಯುವಜನತೆಯ ಪ್ರಮಾಣ ಅತ್ಯಧಿಕವಾದದ್ದು ಎನ್ನುವುದು ಬಹು ಚರ್ಚಿತ ವಿಷಯ. ಈ ಕೇಸು ಹಳೆ ಮತ್ತು ಹೊಸ ಆಲೋಚನೆಗಳನ್ನು ಹುಟ್ಟಿಸಿದೆ. ದೊಡ್ಡ ತಿಮಿಂಗಿಲ ಪೊಲೀಸ್ ವ್ಯವಸ್ಥೆಯಲ್ಲಿ ಸಣ್ಣ ಮೀನು ಕಾನ್ಸ್ಟೇಬಲ್ ರೋಲ್ಫ್ ಪ್ರಯೋಗಪಶುವಾದನೆ? ಅವನೊಂದಿಗಿದ್ದ, ಕೋರ್ಟಿಗೆ ಹೋಗುತ್ತಿದ್ದ ಇತರ ಅಧಿಕಾರಿಗಳ ಹೆಸರುಗಳು ಏಕೆ ವಿವಾದಕ್ಕೀಡಾಗಲಿಲ್ಲ?

ಇದ್ಯಾಕೆ ಹೀಗೆ ಎಂದು ಪ್ರಶ್ನಿಸಿಕೊಂಡರೆ ಆಸ್ಟ್ರೇಲಿಯಾದ ಪಾಳೆಗಾರಿಕೆ ಮತ್ತು ವಸಾಹತುಶಾಹಿ ಚರಿತ್ರೆ ಬಿಚ್ಚಿಕೊಳ್ಳುತ್ತದೆ. ನಡೆದು ಹೋದ ಕರಾಳ ಚಾರಿತ್ರಿಕ ಘಟನೆಗಳು, ಅಬೊರಿಜಿನಲ್ ಜನರ ಮಾರಣಹೋಮ, ಅವರನ್ನು ಗುಲಾಮಗಿರಿಗೆ ಒಳಪಡಿಸಿದ್ದು, ಅವರ ಮಕ್ಕಳನ್ನು ಕದ್ದು ಬಲವಂತವಾಗಿ ಅವರಿಗೆ ‘ಸಂಸ್ಕೃತಿ ಪಾಠ’ ಕಲಿಸಿದ್ದು, ಬಿಳಿಯರ ಆಳ್ವಿಕೆ, ಆಡಳಿತ, ‘ವೈಟ್ ಆಸ್ಟ್ರೇಲಿಯಾ’ ಕಾಯಿದೆ/ಕಾನೂನು ಪಾಲನೆ, ಸಮಾಜದಲ್ಲಿ ಆಳವಾಗಿ ಬೇರೂರಿರುವ ಜನಾಂಗಬೇಧ ಮತ್ತು ರೇಸಿಸಮ್ ಎಲ್ಲವೂ ಕಾರಣಗಳೇ. ಅವುಗಳ ಪರಿಣಾಮಗಳ ಸರಣಿ ಮುಂದುವರೆದಿದೆ.

ಆಸ್ಟ್ರೇಲಿಯಾದಲ್ಲಿ ನನ್ನನ್ನು ಅಬೊರಿಜಿನಲ್ ವ್ಯಕ್ತಿ ಎಂದುಕೊಳ್ಳುವ, ಹಾಗೆಂದೆ ಕರೆಯುವ ಜನರು ಆಗಾಗ ಸಿಗುತ್ತಾರೆ. ಅವರ ಅಂತಹ ಊಹೆ ಮತ್ತು ಅಂದುಕೊಳ್ಳುವಿಕೆಯಿಂದಲೇ ಅವರ ಮನೋಭಾವ ಮತ್ತು ಧೋರಣೆ ಬದಲಾಗುತ್ತದೆ. ಇದ್ದಕ್ಕಿದ್ದಂತೆ ಅವರಲ್ಲಿ ತಾವು ಹೆಚ್ಚಿನವರು, ಶ್ರೇಷ್ಠರು, ಇವಳು ಕೆಳಗಿನವಳು, ಇವಳನ್ನು ತುಚ್ಛವಾಗಿ ನಡೆಸಿಕೊಳ್ಳಬಹುದು ಎಂಬುದೊಂದು ಅಧಿಕಾರದ ಬಲ ಕಂಡುಬಂದು ಅವರ ವರ್ತನೆಯಲ್ಲಿ ಬದಲಾವಣೆಯಾಗುವುದನ್ನು ಕಾಣುತ್ತೀನಿ. ಅವರ ಮಾತಿನಲ್ಲಿ, ಹಾವಭಾವದಲ್ಲಿ, ದೈಹಿಕ ಸಂವಹನದಲ್ಲಿ, ಮುಖದಲ್ಲಿ ಅದೊಂದು ದರ್ಪ, ಅಧಿಕಾರ, ಅಹಂಕಾರ ಕಾಣುತ್ತದೆ. ಇದನ್ನು ಯೂನಿವರ್ಸಿಟಿಯಲ್ಲೂ ಕಂಡಿದ್ದೀನಿ, ಅಂಗಡಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲೂ ಕಂಡಿದ್ದೀನಿ.

ಈ ರಾಣಿರಾಜ್ಯಕ್ಕೆ ಬಂದು ನೆಲೆಸಿದ ಎರಡನೇ ವರ್ಷದಲ್ಲಿ ಒಂದು ಬೆಳಗ್ಗೆ ಕೆಲಸಕ್ಕೆ ಹೋಗಲು ಧಾವಂತದಿಂದ ಮಗುವನ್ನು ಕರೆದುಕೊಂಡು, ಬ್ಯಾಗುಗಳನ್ನು ಹಿಡಿದುಕೊಂಡು ಬಸ್ ಹಿಡಿಯಲು ಓಡಿದ್ದೆ. ಕಂಕುಳಲ್ಲಿ ಮಗ, ಎರಡೂ ಭುಜಗಳಲ್ಲಿ ತೂಗಾಡುತ್ತಿದ ಬ್ಯಾಗುಗಳು, ಓಡುತ್ತಾ ಬೀಳದಂತೆ ನೋಡಿಕೊಂಡು ಬಸ್ಸಿನ ಬಾಗಿಲ ಬಳಿ ಇನ್ನೇನು ಬರುವಷ್ಟರಲ್ಲಿ ಆಟೋಮ್ಯಾಟಿಕ್ ಬಾಗಿಲುಗಳು ಮುಚ್ಚಿದವು. ಬಾಗಿಲ ಮುಂದೆ ‘ಪ್ಲೀಸ್ ತೆಗೆಯಿರಿ’ ಎಂದಾಗ ಡ್ರೈವರ್ ಕುಹಕ ನಗು ನಕ್ಕು ಬಸ್ ಚಲಾಯಿಸಿದ. ಕಣ್ಣಲ್ಲಿ ನೀರು ಬಂದಿತ್ತು. ಬಸ್ ಸ್ಟಾಪಿನಲ್ಲಿದ್ದ ಜನರು ನೋಡುತ್ತಿದ್ದರು. ಒಬ್ಬಾಕೆ ಮುಂದೆ ಬಂದು ‘ಅವನು ನಕ್ಕದ್ದನ್ನು ನಾನೂ ನೋಡಿದೆ. ನೀನು ಓಡೋಡಿ ಬರುವುದನ್ನು ಅವನು ಕನ್ನಡಿಯಲ್ಲಿ ಗಮನಿಸಿರುತ್ತಾನೆ. ಕೆಲವು ಸೆಕೆಂಡುಗಳ ಕಾಲವಷ್ಟೇ ಕಾಯಲಿದ್ದದ್ದು. ಮಗುವಿರುವುದನ್ನು ಗಮನಿಸಿ ಅವನು ಮಾನವೀಯತೆ ತೋರಿಸಬೇಕಿತ್ತು. ನನಗೂ ಬೇಜಾರಾಯ್ತು. ಸುಮ್ಮನಿರಬೇಡ, ಪೊಲೀಸ್ ಕಂಪ್ಲೇಂಟ್ ಕೊಡು’ ಎಂದಳು. ನಾನು ವಿವರಗಳೊಂದಿಗೆ ಪೊಲೀಸ್ ಕಂಪ್ಲೇಂಟ್ ಕೊಟ್ಟೆ. ಕೆಲದಿನಗಳ ನಂತರ ಫೋನ್ ಬಂತು- ‘ನಿನ್ನ ದೂರಿಗೆ ಆಧಾರವಿರಲಿಲ್ಲ. ಡ್ರೈವರ್ ತನ್ನ ಸಮಯಕ್ಕೆ ಸರಿಯಾಗಿ ಬಸ್ ಚಲಾಯಿಸಿದ್ದು ದಾಖಲಾಗಿದೆ. ತಾಯಿ-ಮಕ್ಕಳಿದ್ದರೆ ಅವರಿಗೆ ಡ್ರೈವರ್ ಕಾಯಬೇಕು, ಸಹಾಯ ಮಾಡಬೇಕು ಎನ್ನುವುದು ಕಾನೂನಿನಲ್ಲಿಲ್ಲ’. ಆದರೆ ಆ ಡ್ರೈವರನ ಕುಹಕ ನಗೆಯನ್ನು ಯಾರು, ಹೇಗೆ ಪ್ರಶ್ನಿಸುತ್ತಾರೆ? ಅದೇ ಬಸ್ ಡ್ರೈವರುಗಳು ಬಿಳಿಯ ತಾಯಂದಿರಿಗೆ, ಮಕ್ಕಳಿಗೆ ಸಹಾಯ ಮಾಡಿದ್ದನ್ನು ನಾನೆ ಕಂಡಿದ್ದೆನಲ್ಲ, ಅದನ್ನು ಹೇಗೆ ಆಧಾರಸಹಿತ ವಾದಿಸುವುದು? ನನ್ನ ಪಕ್ಕದ ಮನೆಯವನು ನನಗೆ ಗದರಿದ್ದನ್ನು, ಅವನ ಮನೆಯವರು ನನ್ನನ್ನು ‘ಬ್ಲಾಕ್ ವುಮನ್’ ಎಂದು ಕರೆಯುವುದನ್ನು, ನನ್ನ ಮಕ್ಕಳನ್ನು ಹೀಯಾಳಿಸಿದ್ದನ್ನು ನಾನು ಫೋಟೋ ಹಿಡಿಯಬೇಕಿತ್ತೆ? ವಿಡಿಯೋ ರೆಕಾರ್ಡ್ ಮಾಡಬೇಕಿತ್ತೆ? ಹೌದೆನ್ನುತ್ತಾರೆ ಈ ದೇಶದ ಮಾನವ ಹಕ್ಕುಗಳ ಸಂಸ್ಥೆ. ಇಂತಹ ವ್ಯಕ್ತಿ-ಕೇಂದ್ರ ಆಧಾರ-ಸಹಿತ ಜೀವನ ದೃಷ್ಟಿಗೂ, ಸಮುದಾಯ ಸಮಷ್ಟಿ ಜೀವನಕ್ಕೂ ಇರುವ ಅಜಗಜಾಂತರ ವ್ಯತ್ಯಾಸವೇ ಬಿಳಿಯರಲ್ಲದ ಜನರಿಗೆ ಅದರಲ್ಲೂ ಅಬೊರಿಜಿನಲ್ ಜನರ ಪ್ರಾಣಕ್ಕೆ ಮುಳುವಾಗಿದೆಯೇ?

ನ್ಯಾಯದ ಕತೆ ಪಕ್ಕಕ್ಕಿರಲಿ; ಪ್ರಶ್ನೆಗಳನ್ನು ಕೇಳಲೂ ಆಧಾರವಿರಬೇಕು. ಅಬೊರಿಜಿನಲ್ ಎಂದು ಒಂದು ಊಹೆ, ಸಂದೇಹ ಬಂದರೆ ಸಾಕು, ಆ ಕ್ಷಣದಲ್ಲೇ ಜೀವನವು ಒಂದು ಕೋರ್ಟ್ ಮಾರ್ಷಿಯಲ್ ಆಗಿಬಿಡುವ ಸಂದರ್ಭಗಳು ಹೇರಳವಾಗಿವೆ ಎಂದುಕೊಂಡಾಗ ಎದೆಯಾಳದಿಂದ ನಿಟ್ಟುಸಿರು ಹುಟ್ಟುತ್ತದೆ. ಪ್ರಮಾಣಪತ್ರ, ಸಾಕ್ಷಿ ಪುರಾವೆಗಳಿದ್ದರೆ ಮಾತ್ರ ನ್ಯಾಯ ದೊರೆಯುವ ಈ ಕಾಲದಲ್ಲಿ ನಾವು ಮಾನವೀಯತೆ, ಪರಸ್ಪರ ಗೌರವ, ಸಹಕಾರಗಳನ್ನು ಪುನರುಚ್ಚರಿಸಬೇಕಿದೆ.

ದಶಕಗಳಿಂದ ಅಬೊರಿಜಿನಲ್ ಜನರ ಸ್ವಾಯತ್ತತೆಗಾಗಿ ಸತತ ಪ್ರಯತ್ನ ನಡೆದಿದೆ. ಆದರೆ, ಅವರ ಸಣ್ಣ ಜನಸಂಖ್ಯೆ, ಪ್ರಬಲ ಬಿಳಿಯರ ಸಮಾಜ ಮತ್ತು ಸರಕಾರಗಳಿಂದ ಅವರ ದನಿಗೆ ವಿರೋಧ, ಪ್ರತಿರೋಧವಿದೆಯೆ ಹೊರತು ಅವರ ಸಮುದಾಯಗಳೊಡನೆ ಕೂತು ಪರಸ್ಪರ ಗೌರವದಿಂದ ಸಂವಾದವನ್ನು ನಡೆಸುವುದು ವಿರಳ. ಈ ಹಿನ್ನೆಲೆಯಲ್ಲಿ ಸಾಕಷ್ಟು ಕೆಲಸ ನಡೆದಿದ್ದು, ಈಗೀಗ ಅಬೊರಿಜಿನಲ್ ವೃತ್ತಿಪರರು ತಮ್ಮ ಸಮುದಾಯಗಳ ಏಳಿಗೆಯನ್ನು ಗುರಿಯಾಗಿಸಿಕೊಂಡು ಕೆಲಸಮಾಡುತ್ತಿದ್ದಾರೆ. ಆದರೂ, ಅರೋಗ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ, ಶಿಕ್ಷಕರು, ನ್ಯಾಯವಾದಿಗಳು, ಮನೋವೈದ್ಯರು, ವೃತ್ತಿಪರ ಸಾಮಾಜಿಕ ಕೆಲಸಗಾರರು, ವಕೀಲರು ಎಂಬಂತೆ ಇವರುಗಳ ಸಂಖ್ಯೆ ಹೆಚ್ಚಾಗಬೇಕು. ಸಮುದಾಯಕ್ಕೆ ಸಂಬಂಧಪಟ್ಟ ವಿಚಾರ, ವಿಷಯಗಳನ್ನು ಅವರ ಜನ, ಹಿರಿಯರು, ಜನಪ್ರತಿನಿಧಿಗಳೇ ತೀರ್ಮಾನಿಸುವಂತಾಗಬೇಕು. ಆ ದಾರಿ ಇನ್ನೂ ದೂರವಿದೆ. ಅಂತರ ಕಡಿಮೆಯಾಗಬೇಕಾದರೆ ಪ್ರಬಲರ ಸಮಾಜ ಬದಲಾಗಬೇಕು.