ನಿರ್ಗತಿಕರಿಗೆ, ಅಸಹಾಯಕರಿಗೆ, ಹಿಂದುಳಿದವರಿಗೆ, ಅವಕಾಶವಂಚಿತರಿಗೆ ಸರಿ ಸಮಾನವಾದ ಹಕ್ಕು ಸಿಗಲೆಂದು ಹೋರಾಡಿದ ಅಂಬೇಡ್ಕರ್, ಅವರೇ ರಚಿಸಿದ ಸಂವಿಧಾನವನ್ನು ದುರುಪಯೋಗಪಡಿಸಿಕೊಂಡ ರಾಜಕಾರಣಿಗಳಿಂದ ಇವತ್ತಿಗೂ ಬಹು ದೊಡ್ಡ ವರ್ಗ ನಿರ್ಗತಿಕರಾಗಿ, ಅಸಹಾಯಕರಾಗಿ, ಅವಕಾಶವಂಚಿತರಾಗಿ ಬದುಕುತ್ತಿದ್ದಾರೆ. ಇದಕ್ಕೆಲ್ಲಾ ಮೂಲ ಕಾರಣವಾಗಿ ಬಂಡೆಯಂತೆ ಕುಳಿತಿರುವುದು ಲಂಚವೆನ್ನುವ ಭೂತ. ಜೈ ಭೀಮ್ ನಲ್ಲೂ ಕಾಣಬರುವುದು ಹಣದ ದಾಹ, ಅದರಿಂದಲೆ ಮುಂದುವರಿದು ನಿರ್ಗತಿಕರ ಮೇಲಿನ ದೌರ್ಜನ್ಯ ಕಾಣಬರುತ್ತದೆ.
ಪ್ರಶಾಂತ್‌ ಬೀಚಿ ಅಂಕಣ

 

ದೀಪಾವಳಿ ಹಬ್ಬದ ಸಡಗರವನ್ನು ಭಾರತೀಯರೆಲ್ಲಾ ಆಚರಿಸುವ ಕಾರಣವೇನೆಂದರೆ, ಅದು ವಿಜಯೋತ್ಸವದ ಸಂಕೇತ. ಕೆಡುಕಿನ ಮೇಲೆ ಒಳಿತಿನ ಜಯ, ಕೆಟ್ಟವರ ಮೇಲೆ ಒಳ್ಳೆಯವರ ಜಯ, ರಾಕ್ಷಸರ ಮೇಲೆ ದೇವತೆಗಳ ಜಯ. ಸಮಾಜದ ಪ್ರಕಾರ ಜಯ ಯಾವತ್ತಿಗೂ ನ್ಯಾಯಕ್ಕೆ ಆಗುತ್ತದೆ. ಅದರ ನೆಪದಿಂದ ದೀಪಾವಳಿಯಂತಹ ವಿಜಯೋತ್ಸವದ ಆಚರಣೆ ಪ್ರತೀ ವರ್ಷ ನಡೆಸುತ್ತೇವೆ. ಆದರೆ ನಿಜವಾಗಿಯೂ ಸಮಾಜದಲ್ಲಿ ನ್ಯಾಯ ಇದೆಯಾ? ಸಮಾನತೆ ಇದೆಯಾ? ಜನ ಸಾಮಾನ್ಯರಲ್ಲಿ ನೆಮ್ಮದಿ ಇದೆಯಾ? ಇಂತಹ ಯೋಚನೆ ಎಲ್ಲರಲ್ಲೂ ಬರುವುದು ಸಹಜ, ಅದರಲ್ಲೂ ಜೈ ಭೀಮ್ ನಂತಹ ಚಲನಚಿತ್ರ ನೋಡಿದಾಗ ಮನಃ ಕಲುಕದೆ ಇರದು.

ಮೂಲ ತಮಿಳಿನಲ್ಲಿ ಇರುವ ಚಲನಚಿತ್ರ, ಭಾರತದ ಪ್ರಮುಖ ಭಾಷೆಗಳಿಗೆ ಡಬ್ ಮಾಡಿರುವುದು ಪ್ರತಿಯೊಬ್ಬ ಭಾರತೀಯನಿಗೂ ಮನಃ ಮುಟ್ಟುವಂತೆ ಮಾಡಿದೆ. ನ್ಯಾಯಮೂರ್ತಿ ಕೆ ಚಂದ್ರುರವರ ಜೀವನದಿಂದ ಉತ್ತೇಜನಗೊಂಡು ಮೂಡಿಬಂದಿರುವ ಚಿತ್ರ ನೈಜತೆಗೆ ಕನ್ನಡಿ ಹಿಡಿದಂತೆ ತೆರೆಕಂಡಿದೆ. ಭಾರತದಲ್ಲಿ ಇಂದಿಗೂ ಅಧಿಕಾರ ಶಾಹಿಯ ಕರಾಳ ಛಾಯೆ ಎಲ್ಲಾ ಕಡೆ ಕಾಣಬರುತ್ತದೆ, ಅದರಲ್ಲೂ ಪೊಲೀಸ್ ಎನ್ನುವ ದರ್ಪದ ರಾಕ್ಷಸರು ಇಂದಿಗೂ ಜನಸಾಮಾನ್ಯರಿಗೆ ನಡುಕ ಹುಟ್ಟಿಸುವ ವರ್ಗ.

ಮೊದ ಮೊದಲು ಚಲನಚಿತ್ರದ ಹೆಸರು ಕೇಳಿದಾಗ ಡಾ. ಬಿ ಆರ್ ಅಂಬೇಡ್ಕರ್ ಬಗ್ಗೆ ಇರುವ ಚಿತ್ರ ಎಂದು ಊಹಿಸಿದ್ದೆ. ಮಕ್ಕಳಿಗೆ ಅದನ್ನು ತೋರಿಸಿ ಅಂಬೇಡ್ಕರ್ ಬಗ್ಗೆ ತಿಳಿಸಬೇಕೆಂದು ಆಸೆ ಪಟ್ಟಿದ್ದೆ. ಯಾವಾಗ ಇದು ಅಂಬೇಡ್ಕರ್ ಜೀವನ ಚರಿತ್ರೆ ಅಲ್ಲ ಎಂದು ತಿಳಿಯಿತೋ, ಮನೆಯಲ್ಲಿ ಹಿರಿಯರು ಮಾತ್ರ ನೋಡಿದೆವು. ಕೆಲವು ತುಣುಕುಗಳಲ್ಲಿ ರೋಷ ಉಕ್ಕಿದರೆ, ಹಲವಾರು ಸನ್ನಿವೇಷಗಳಲ್ಲಿ ಕರಳು ಕಿವುಚಿದಂತಾಗಿ ಕಣ್ಣೀರು ಹರಿಯದಿದ್ದರೆ ಆತ ಮನುಷ್ಯನೆ ಅಲ್ಲವೆನ್ನಬಹುದು. ಅನುಕೂಲಸ್ಥರಿಗೆ ಮತ್ತು ಹಣವಂತರಿಗೆ ಈ ಸಿನೇಮ ಒಂದು ಕಟ್ಟು ಕಥೆ ಅನಿಸಬಹುದು, ಈಗಿನ ಕಾಲದಲ್ಲಿ ಹೀಗಿಲ್ಲ ಎಂದೆನಿಸಲೂಬಹುದು. ಹಣ ಕೊಡದೆ ಪೊಲೀಸರಿಂದ ಕೆಲಸ ಮಾಡಿಸಿಕೊಳ್ಳಲು ಹೋದಾಗ ನೈಜತೆ ಅರಿವಿಗೆ ಬರುತ್ತದೆ.

ಈ ಚಲನಚಿತ್ರದ ಒಂದು ತುಣುಕಿನಲ್ಲಿ, ನಾಯಕ ನಟ ಕಾಡು ಜನರ ಮಾತುಗಳನ್ನು ಕೇಳಲು ಐ ಜಿ ಯನ್ನು ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಒಬ್ಬೊಬ್ಬರಾಗಿ ಕಾಡು ಜನರು ತಮ್ಮ ಮೇಲೆ ಆದ ದೌರ್ಜನ್ಯವನ್ನು ಹೇಳಿಕೊಳ್ಳುತ್ತಾರೆ. ಕೊನೆಯಲ್ಲಿ ಒಬ್ಬ ಹುಡುಗ ತನ್ನ ತಂದೆಯನ್ನು ಪೊಲೀಸರು ಸುಳ್ಳು ಕೇಸಿನ ಮೇಲೆ ಕಳ್ಳತನದ ಆರೋಪ ಹೊರಿಸಿ ಕರೆದುಕೊಂಡು ಹೋದ ವಿಷಯ ತಿಳಿಸುತ್ತಾನೆ. ಮುಂದುವರೆಸುತ್ತಾ, ಆ ನಂತರ ಶಾಲೆಯಲ್ಲಿ ಯಾವುದೇ ಮಕ್ಕಳ ವಸ್ತು ಕಳೆದರೂ ನನ್ನನ್ನೆ ಅನುಮಾನಿಸಿ ನೋಡುತ್ತಾರೆ ಎಂದಾಗ ಬಿಕ್ಕಳಿಸಿ ಬರುವ ಉಸಿರನ್ನು ತಡೆಯಲಾಗುವುದಿಲ್ಲ. ಚಿಕ್ಕ ಚಿಕ್ಕ ಮಕ್ಕಳ ಮೇಲೆ ಬೀರುವ ಇಂತಹ ಪರಿಣಾಮಗಳಿಂದಲೆ ಉತ್ತಮ ಪ್ರಜೆಗಳು ಸೃಷ್ಟಿಯಾಗದೆ ದೇಶ ದುರ್ಗತಿಗೆ ಸಾಗುತ್ತದೆ.

ನಿರ್ಗತಿಕರಿಗೆ, ಅಸಹಾಯಕರಿಗೆ, ಹಿಂದುಳಿದವರಿಗೆ, ಅವಕಾಶವಂಚಿತರಿಗೆ ಸರಿ ಸಮಾನವಾದ ಹಕ್ಕು ಸಿಗಲೆಂದು ಹೋರಾಡಿದ ಅಂಬೇಡ್ಕರ್, ಅವರೇ ರಚಿಸಿದ ಸಂವಿಧಾನವನ್ನು ದುರುಪಯೋಗಪಡಿಸಿಕೊಂಡ ರಾಜಕಾರಣಿಗಳಿಂದ ಇವತ್ತಿಗೂ ಬಹು ದೊಡ್ಡ ವರ್ಗ ನಿರ್ಗತಿಕರಾಗಿ, ಅಸಹಾಯಕರಾಗಿ, ಅವಕಾಶವಂಚಿತರಾಗಿ ಬದುಕುತ್ತಿದ್ದಾರೆ. ಇದಕ್ಕೆಲ್ಲಾ ಮೂಲ ಕಾರಣವಾಗಿ ಬಂಡೆಯಂತೆ ಕುಳಿತಿರುವುದು ಲಂಚವೆನ್ನುವ ಭೂತ. ಜೈ ಭೀಮ್ ನಲ್ಲೂ ಕಾಣಬರುವುದು ಹಣದ ದಾಹ, ಅದರಿಂದಲೆ ಮುಂದುವರಿದು ನಿರ್ಗತಿಕರ ಮೇಲಿನ ದೌರ್ಜನ್ಯ ಕಾಣಬರುತ್ತದೆ.

ಈಗಿನ ಕಾಲದಲ್ಲಿ ಹೀಗೆಲ್ಲ ಇಲ್ಲಾ ಎನ್ನುವವರಿಗೆ ಸ್ವತಃ ನನ್ನದೆ ಅನುಭವವನ್ನು ತಿಳಿಸುತ್ತೇನೆ. ಕೇವಲ ಮೂರು ವರ್ಷಗಳ ಹಿಂದಿನ ವಿಷಯ, ನಡೆದದ್ದು ಬೆಂಗಳೂರೆಂಬ ಮಹಾನ್ ನಗರದ ಪ್ರತಿಷ್ಟಿತ ಜೆ ಪಿ ನಗರದ ಬಡಾವಣೆಯಲ್ಲಿ.

ನಾನು ಬೆಂಗಳೂರಿನ ಒಂದು ಐ ಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೆ. ಇಮ್ಮಿಗ್ರೇಷನ್ ಗೆ ಸಂಬಂಧಿಸಿದಂತೆ ಹಿಂದಿನ ಹತ್ತು ವರ್ಷಗಳ ಪೊಲೀಸ್ ಕ್ಲಿಯರೆನ್ಸ್ ಮಾಡಿಸಬೇಕಿತ್ತು. ಕೆಲವು ವರುಷಗಳ ಹಿಂದೆ ನಾನು ತಾನ್ಜಾನಿಯಾದಲ್ಲಿ ಇದ್ದುದರಿಂದ ಅಲ್ಲಿಗೆ ನನ್ನ ಬೆರಳಚ್ಚುಗಳನ್ನು ಕಳುಹಿಸಿ, ಅಲ್ಲಿನ ಪೊಲೀಸ್ ಕ್ಲಿಯರನ್ಸ್ ಪಡೆಯಬೇಕಿತ್ತು. ಬೆಂಗಳೂರಿನ ಪೊಲೀಸ್ ಸ್ಟೇಷನ್ ನಲ್ಲಿ ನನ್ನ ಬೆರಳಚ್ಚನ್ನು ಪಡೆದು, ಅದನ್ನು ತಾನ್ಜಾನಿಯಾಗೆ ಪೋಸ್ಟ್ ನಲ್ಲಿ ಕಳುಹಿಸಿದರೆ, ಅವರು ನನಗೆ ಕ್ಲಿಯರನ್ಸ್ ಕೊಡುತ್ತಾರೆ. ಇದೆಲ್ಲಾ ನನಗೆ ಎರಡು ತಿಂಗಳಲ್ಲಿ ಮುಗಿಸಿಕೊಳ್ಳಬೇಕು. ಕೆಲಸ ಬಹಳ ನೇರ ಮತ್ತು ಸುಲಭ. ಸಮಯ ಹಿಡಿಯುವ ಕೆಲಸ ಎಂದರೆ ಪೋಸ್ಟ್ ದು. ಹೋಗಲು ಹತ್ತು ದಿನ ಮತ್ತು ಅಲ್ಲಿಂದ ಬರಲು ಹತ್ತು ದಿನ. ಬೆಂಗಳೂರಿನಲ್ಲಿ ನನ್ನ ಬೆರಳಚ್ಚು ತೆಗೆದು, ಅದರ ಮೇಲೆ ಅಲ್ಲಿನ ಇನ್ಸ್‌ಪೆಕ್ಟರ್ ಸಹಿ. ಇದಕ್ಕೆ ಒಂದು ಅಥವ ಎರಡು ದಿನ. ತಾನ್ಜಾನಿಯಾದಲ್ಲಿ ಮೂರರಿಂದ ನಾಲ್ಕು ದಿನ. ಎಲ್ಲಾ ಸೇರಿದರೂ ಒಂದು ತಿಂಗಳಲ್ಲಿ ಮುಗಿಯುವ ಕೆಲಸ.

ಭಾರತದಲ್ಲಿ ಇಂದಿಗೂ ಅಧಿಕಾರ ಶಾಹಿಯ ಕರಾಳ ಛಾಯೆ ಎಲ್ಲಾ ಕಡೆ ಕಾಣಬರುತ್ತದೆ, ಅದರಲ್ಲೂ ಪೊಲೀಸ್ ಎನ್ನುವ ದರ್ಪದ ರಾಕ್ಷಸರು ಇಂದಿಗೂ ಜನಸಾಮಾನ್ಯರಿಗೆ ನಡುಕ ಹುಟ್ಟಿಸುವ ವರ್ಗ.

ಮೊದಲನೆ ದಿನ ನಾನು ಜೆ ಪಿ ನಗರದ ಪೊಲೀಸ್ ಠಾಣೆಗೆ ಹೋದೆ. ಬೆರಳಚ್ಚು ತೆಗೆಯಲು ಅರ್ಜಿ ಕೊಡಬೇಕಾದ ಪಿ ಸಿ ಇರಲಿಲ್ಲ. ಬೆಳಗ್ಗೆ ಒಂಬತ್ತು ಗಂಟೆಯಿಂದ ಮಧ್ಯಾನ್ಹ ಒಂದು ಗಂಟೆಯ ತನಕ ಕಾದರೂ ಬರಲಿಲ್ಲ. ಅಲ್ಲೆ ಇದ್ದ ಇನ್ನೊಬ್ಬ ಪಿ ಸಿ ಹೇಳಿದ, ಮಧ್ಯಾನ್ಹದ ಮೇಲೆ ಅವರು ಪಾಸ್‍ಪೋರ್ಟ್ ವೆರಿಫಿಕೇಷನ್‌ಗೆ ಹೋಗುತ್ತಾರೆ, ನಾಳೆ ಬನ್ನಿ ಎಂದು.

ಎರಡನೆ ದಿನ ಮತ್ತೆ ಒಂಬತ್ತು ಗಂಟೆಗೆ ಹೋದೆ, ಹನ್ನೊಂದು ಗಂಟೆಗೆ ಬಂದವನೆ ಅಲ್ಲಿದ್ದವರಿಗೆಲ್ಲ ಬಾಯಿಗೆ ಬಂದತೆ ಮಾತನಾಡಿದ. ಒಬ್ಬೊಬ್ಬರನ್ನು ಕರೆದು, ಬ್ಯಾಂಕ್ ಲೆಟರ್ ಇಲ್ಲ, ಇದರಲ್ಲಿ ಸಹಿ ಸರಿಯಾಗಿ ಕಾಣುತ್ತಿಲ್ಲ, ಸೀಲ್ ಎರಡನೆ ಪೇಜ್ ನಲ್ಲಿ ಇಲ್ಲ, ಎಂದು ಏನೇನೋ ಕಾರಣ ಹೇಳಿ ಪ್ರತಿಯೊಬ್ಬರನ್ನೂ ವಾಪಸ್ ಕಳಿಸುತ್ತಿದ್ದ. ನಾನು ಹೋದಾಗ ಸಿಡುಕುತ್ತಲೆ ಕೇಳಿ, ಒಂದು ಅರ್ಜಿ ಬರೆದುಕೊಂಡು ನಾಳೆ ಬನ್ನಿ ಎಂದು ಹೇಳಿದ. ಆ ದಿನ ಕೊಡುತ್ತೇನೆ ಎಂದರೂ ಒಪ್ಪಲಿಲ್ಲ, ನಾನು ಹೇಳಿದಂತೆ ಕೇಳಿ, ಸುಮ್ಮನೆ ಅರ್ಜೆಂಟ್ ಮಾಡಿದರೆ ಇನ್ನೂ ತಡವಾಗುತ್ತದೆ ಎಂದು ಹೆದರಿಸಿದ.

ಮೂರನೆ ದಿನ ನಾನು ಅರ್ಜಿ ತೆಗೆದುಕೊಂಡು ಹೋದಾಗ ಹತ್ತು ಗಂಟೆ, ಅವನು ಇರಲಿಲ್ಲ. ಇನ್ನೂ ಬಂದಿಲ್ಲವೆಂದು ಕಾದು ಕೂತರೂ ಮಧ್ಯಾನ್ಹದವರೆಗೂ ಬರಲಿಲ್ಲ. ಮತ್ತೆ ಮುಂದಕ್ಕೆ.

ಮೂರು ದಿನ ಕೆಲಸಕ್ಕೆ ಹೋಗದ ನಾನು, ನಾಲ್ಕನೆ ದಿನ ಹೆಂಡತಿಯನ್ನು ಕರೆದುಕೊಂಡು ಹೋದೆ. ಆಕೆಯನ್ನು ಅಲ್ಲಿ ಪಿ ಸಿ ಗೆ ಕಾಯಲು ಬಿಟ್ಟು ಕೆಲಸಕ್ಕೆ ಹೋದೆ. ಮಧ್ಯಾನ್ಹ ಮೂರು ಗಂಟೆಯಾದರೂ ಆತ ಬಂದಿಲ್ಲ, ನನ್ನ ಹೆಂಡತಿ ಊಟವೂ ಮಾಡದೆ ಕಾದು, ಮಕ್ಕಳು ಶಾಲೆಯಿಂದ ಬರುತ್ತಾರೆ ಎಂದು ಹಿಂತಿರುಗಿದ್ದಳು.

ನಾಲ್ಕನೆ ದಿನ ಆತ ಸಿಕ್ಕ, ಅರ್ಜಿಯನ್ನು ಸರಿಯಾಗಿ ಬರೆದಿಲ್ಲ, ಎಂದು ವಾಪಸ್ ಕಳುಹಿಸಿದ, ಹೀಗೆ ಇಪ್ಪತ್ತು ದಿನ ಓಡಾಡಿಸಿದ. ಅಲ್ಲಿ ಬರುತ್ತಿದ್ದ ಒಬ್ಬೊಬ್ಬರ ಕಷ್ಟ ಹೇಳತೀರದು. ವಯಸ್ಸಾಗಿದ್ದ ದಂಪತಿಗಳು ತಮ್ಮ ಮಕ್ಕಳನ್ನು ನೋಡಲು ಬೇರೆ ದೇಶಕ್ಕೆ ಹೋಗಬೇಕೆಂದು ಯಾವುದೋ ಕಾಗದಕ್ಕೆ ಅಲೆದು ಅಲೆದು ಸಾಕಾಗಿದ್ದರು. ಅವರನ್ನು ಒಮ್ಮೆ ಕರೆದು, “ಎಷ್ಟು ದಿನ ಹಿಂಗೆ ಬಂದು ಬಂದು ಹೋಗುತ್ತೀರಿ? ಎಲ್ಲವೂ ನಾನೆ ಹೇಳಬೇಕೆ? ನಿಮ್ಮ ಮಕ್ಕಳಿಗೆ ಫೋನ್ ಮಾಡಿ ಕೇಳಿ, ಹೇಗೆ ಇದನ್ನು ಮಾಡಿಸಿಕೊಳ್ಳಬೇಕು ಎಂದು. ಹಾಗೆ ಮಾಡಿದರೆ, ಎರಡು ದಿನದಲ್ಲೆ ಎಲ್ಲವೂ ಆಗುತ್ತದೆ.” ಎಂದು ಸಿಡುಕಿ ಹೋದ. ಅವನ ಹಿಂದೆಯೆ ಹೋದ ಅಜ್ಜನನ್ನು ಪಕ್ಕದ ರಸ್ತೆಯಲ್ಲಿದ್ದ ಟೀ ಅಂಗಡಿ ಹತ್ತಿರ ಮಾತನಾಡಿಸಿ ಸಾವಿರ ರೂಪಾಯಿ ಪಡೆದುಕೊಂಡ. ಕೇವಲ ಒಂದು ಕಾಗದವನ್ನು ನೀಡಲು ಹದಿನೈದು ದಿನ ಓಡಾಡಿಸಿದ್ದ ಆ ಲೋಫರ್.

ನಮಗೆ ಒಂದು ತಿಂಗಳು ಓಡಾಡಿಸಿ ನಂತರ ಒಂದು ದಿನ ನನ್ನ ಹೆಂಡತಿಗೆ ಹೇಳಿದ್ದಾನೆ, “ಎಷ್ಟು ದಿನ ಅಂತ ಹಿಂಗೆ ಓಡಾಡುತ್ತೀರ, ನಿಮ್ಮ ಮನೆಯವರು ಏನೂ ಕೇಳುವುದೇ ಇಲ್ಲ. ನಾವು ಹೆಂಗೆ ತಿಳಿಸಬೇಕು, ಅವರಿಗೆ ಅರ್ಥವಾಗಬೇಕು.”
ಲಂಚ ಕೊಡದೆ ನ್ಯಾಯವಾದ ರೀತಿಯಲ್ಲೆ ಕೆಲಸ ಮಾಡಿಸಿಕೊಳ್ಳಬೇಕು ಎನ್ನುವ ಹಟ ನನ್ನದು. ಮಾರನೆ ದಿನ ನಾನು ಹೋದಾಗ. “ಏನ್ರೀ, ಇದೆಲ್ಲ ಸುಮ್ನೆ ಆಗುತ್ತಾ, ನಾನು ಪ್ರಿಂಟ್ ತೆಗೆಯಲು ದುಡ್ಡು ಹಾಕಿ ಪೇಪರ್ ತೆಗೆದುಕೊಂಡು ಬರುತ್ತೇನೆ, ನಿಮಗಾಗಿ ಎಷ್ಟೆಲ್ಲಾ ಮಾಡಿದರೂ ನೀವು ಏನೂ ಮಾಡುವುದಿಲ್ಲ, ಕೆಲಸ ಹೆಂಗೆ ಆಗಬೇಕು. ಒಂದು ವಾರ ರಜ ಹಾಕಿ ಸುಮ್ನೆ ಸಂಬಳ ಕಳೆದುಕೊಳ್ಳುವ ಬದಲು, ಬೇಗ ಕೆಲಸ ಮಾಡಿಸಿಕೊಳ್ಳಿ. ಎಲ್ಲವೂ ನಾವೆ ಹೇಳುವುದಕ್ಕೆ ಆಗುವುದಿಲ್ಲ.” ಎಂದ.

ಅವನ ನಡುವಳಿಕೆ ಗೊತ್ತಾಗಿ, ನಾನು ಅಗತ್ಯವಿರುವ ಕಡೆ ಫೋನ್ ಮಾಡಿ ದೂರು ಕೊಟ್ಟೆ, ಆಗಲೂ ಅವನು ಸಹಕರಿಸಲಿಲ್ಲ, ಅದರಲ್ಲೆ ಎರಡು ತಿಂಗಳು ಮುಗಿಸಿದ. ಕೊನೆಗೆ ಮನೆಯ ಹತ್ತಿರ ಬಂದು, ನಾನಿಲ್ಲದಾಗ ಹಣ ಪಡೆದು ಕೆಲಸ ಮಾಡಿಕೊಟ್ಟ. ಸಮಯ ಮೀರಿದ್ದರಿಂದ ನಮಗೆ ಅವಕಾಶ ತಪ್ಪಿಹೋಯಿತು. ಜೀವನದ ಒಂದು ಒಳ್ಳೆಯ ಅವಕಾಶ ದರಿದ್ರ ಪಿ ಸಿ ಯಿಂದ ಕೈ ತಪ್ಪಿದರೂ, ಮತ್ತದೇ ಅವಕಾಶ ಮರುಕಳಿಸಿ ತಡವಾಗಿ ಸಿದ್ಧಿಸಿತು.

ಓದಿರುವ, ಶಕ್ತರಿರುವರಿಗೆ ತೊಂದರೆ ಕೊಡುವ ಪೊಲೀಸರು, ಅಶಕ್ತರಿಗೆ ಮತ್ತು ತಿಳಿಯದವರಿಗೆ ಎಷ್ಟು ದೌರ್ಜನ್ಯ ಮಾಡಬಹುದು?
ಹಣಕ್ಕಾಗಿ ಪೀಡಿಸುವ ಸರ್ಕಾರಿ ನೌಕರರು, ದೌರ್ಜನ್ಯ ಮಾಡುವ ರಕ್ಕಸ ಪೊಲೀಸರನ್ನು ನಾಶಮಾಡಿದರೆ ಅದರ ಸಡಗರವನ್ನು ನಿಜವಾದ ದೀಪಾವಳಿಯ ರೂಪದಲ್ಲಿ ಆಚರಿಸಬಹುದು.
ಜೈ ಭೀಮ್.