ಈ ನ್ಯೂರಾನ್‌ ಗಳು ಒಂದಕ್ಕೊಂದು ಸಂಪರ್ಕಿಸುವ ಜಾಗಗಳಲ್ಲಿ, ಅವುಗಳು ತಾಗುವುದಿಲ್ಲ. ಬದಲಿಗೆ, ಅವುಗಳ ಮಧ್ಯೆ ಅತ್ಯಂತ ಸಣ್ಣದಾದ ಸಿನಾಪ್ಟಿಕ್ ಕ್ಲೆಫ್ಟ್‌ ಗಳೆನ್ನುವ ಜಾಗವಿರುತ್ತದೆ. ಎಲೆಕ್ಟ್ರಿಕ್ ಸಿಗ್ನಲ್‌ ಗಳು ಹಾಯದಂತಹ ಈ ಜಾಗಗಳಲ್ಲಿ, ಒಂದು ನ್ಯೂರಾನ್ ಇನ್ನೊಂದು ನ್ಯೂರಾನ್‌ ಗೆ ತನ್ನ ಸಂದೇಶ ರವಾನೆ ಮಾಡುವುದು, ರಾಸಾಯನಿಕ ಕಣಗಳ ಮೂಲಕ. “ನ್ಯೂರೋಟ್ರಾನ್ಸ್‌ಮಿಟರ್ಸ್” ಎನ್ನುವ ಈ ರಾಸಾಯನಿಕ ಕಣಗಳಲ್ಲಿ ಹಲವಾರು ತರಹದ ವೈವಿಧ್ಯಗಳಿದ್ದು, ಇವುಗಳ ಪರಿಣಾಮದಲ್ಲಿ ಹೆಚ್ಚು-ಕಡಿಮೆಯಾದರೆ, ನಮಗೆ ವಿವಿಧ ಭಾವಗಳು, ಅನುಭವಗಳು ಮೂಡಲು ಕಾರಣವಾಗುತ್ತವೆ.
ಶೇಷಾದ್ರಿ ಗಂಜೂರು  ಬರೆಯುವ ಅಂಕಣ

 

ನನ್ನ ಬಳಿ ಹಳೆಯದೊಂದು ಫೋಟೋ ಇದೆ. ಅದರಲ್ಲಿ ಸಣ್ಣ ಹುಡುಗನೊಬ್ಬ ತನ್ನ ಅಜ್ಜಿಯ ಪಕ್ಕ ಕುಳಿತಿದ್ದಾನೆ. ಅವನ ಎರಡೂ ಕೈಗಳು ಅವನ ಮೊಣಕಾಲ ಮೇಲಿವೆ. ಅವನ ಕತ್ತು ಬಗ್ಗಿದ್ದರೂ, ತಲೆ ಬಗ್ಗಿಲ್ಲ. ಅವನ ಸಣ್ಣ ಭುಜಗಳು ಬಿಗಿದಿವೆ. ಮುಖದಲ್ಲಿ ನಗೆಯಾಗಲೀ-ಮುಗುಳ್ನಗೆಯಾಗಲೀ ಇಲ್ಲ. ಕ್ಯಾಮೆರಾದ ಕಡೆಗೆ ಅವನು ದಿಟ್ಟಿಸುತ್ತಿದ್ದಾನೆ. ಆ ಫೋಟೋ ನೋಡಿದಾಗೆಲ್ಲಾ, ಅವನು ನನ್ನೆಡೆಗೇ ತೀಕ್ಷ್ಣವಾಗಿ ನೋಡುತ್ತಿದ್ದಾನೆ ಎನ್ನಿಸುತ್ತದೆ.

ಆ ಫೋಟೋದಲ್ಲಿನ ಹುಡುಗ ಬೇರಾರೂ ಅಲ್ಲ. ಅವನು ನಾನೇ. ಸುಮಾರು ಐವತ್ತು ವರ್ಷಗಳ ಹಿಂದೆ ತೆಗೆದಂತಹ ಫೋಟೋ ಅದು. ಆ ದಿನದ, ಆ ಕ್ಷಣದ ಯಾವುದೇ ನೆನಪುಗಳೂ ನನಗಿಲ್ಲ. ನನ್ನ ಇಂದಿನ ದೇಹದ ಒಂದೇ ಒಂದು ಪರಮಾಣುವೂ ಅಂದಿನದಲ್ಲ. ಫೋಟೋದಲ್ಲಿನ ಆ ಹುಡುಗನ ದೇಹವಷ್ಟೇ ಬದಲಾಗಿಲ್ಲ; ನಾನು ಜಗತ್ತನ್ನು ನೋಡುವ, ಅನುಭವಿಸುವ ದೃಷ್ಟಿಕೋನವೇ ಬದಲಾಗಿದೆ. ಆದರೂ, ಆ ಫೋಟೋದಲ್ಲಿರುವುದು ನಾನೇ.

ಬದುಕಿರುವವರೆಗೂ ನಾವಾಗದಿರಲು ಸಾಧ್ಯವಿರದ ವಿಷಯ ತತ್ವಜ್ಞಾನ ಅಥವಾ ಆಧ್ಯಾತ್ಮದ ವಿಷಯಗಳು. ಆದರೆ, ನಮ್ಮನ್ನು ನಾವಾಗಿಸುವುದು, ನಮ್ಮ ಅನುಭವಗಳು; ಅವುಗಳ ನೆನಪುಗಳು; ಅವು ನಮ್ಮ ಮಿದುಳಿನಲ್ಲಿ ನಿರ್ಮಿಸುವ ಕೋಟ್ಯಾಂತರ ಕೋಟಿ ನ್ಯೂರಾನ್ ಸಂಪರ್ಕಗಳು.

ಬಾಲ್ಯದ ಆ ಚಿತ್ರದಲ್ಲಿರುವ ನನ್ನ ಅಜ್ಜಿ ಈಗ ಇಲ್ಲ. ಆದರೆ, ಅವರು ನನ್ನ ಮಿದುಳಿನ ಸಿನಾಪ್ಸ್‌ ಗಳಲ್ಲಿ ಇಂದಿಗೂ ಇದ್ದಾರೆ. ನಾನೆಷ್ಟೇ ಬದಲಾದರೂ, ನನ್ನ ದೇಹದ ಪ್ರತಿಯೊಂದು ಪರಮಾಣುವೂ ಬದಲಾಗಿ, ಪ್ರತಿ ಕ್ಷಣವೂ ನಾನು ಹೊಸ-ಹೊಸ ಅವತಾರವೆತ್ತುತ್ತಿದ್ದರೂ, ನನ್ನ ಮಿದುಳಿನ ಸೂಕ್ಷಾತಿ-ಸೂಕ್ಷ್ಮ ಸಿನಾಪ್ಟಿಕ್ ಕ್ಲೆಪ್ಟ್‌ ಗಳಲ್ಲಿ, ನ್ಯೂರಾನ್ ನೆಟ್‌ವರ್ಕಿನಲ್ಲಿ ಅವರಿರುವವರೆಗೂ, ನಾನು ನಾನೇ.

******

(ಲೂಯಿಜಿ ಗಾಲ್ವಾನಿ)

ಲೂಯಿಜಿ ಗಾಲ್ವಾನಿ, ಹದಿನೆಂಟನೆಯ ಶತಮಾನದ ಇಟಲಿಯ ವೈದ್ಯ, ವಿಜ್ಞಾನಿ ಮತ್ತು ತತ್ವಶಾಸ್ತ್ರಜ್ಞ. ಅವನು ಮತ್ತು ಅವನ ಪತ್ನಿ ೧೭೮೦ರಲ್ಲಿ ಹೊಸದೊಂದು ವಿಷಯವನ್ನು ಕಂಡುಕೊಂಡರು – ಎಲೆಕ್ಟ್ರಿಕ್ ಕಿಡಿಯೊಂದು ತಾಗಿದರೆ, ಸತ್ತ ಕಪ್ಪೆಯ ಕಾಲುಗಳೂ ತುಡಿಯುತ್ತವೆ.

ಇವರ ಈ ಶೋಧನೆ, ಜೀವಶಾಸ್ತ್ರದಲ್ಲಿ ಭಾರೀ ಬೆಳವಣಿಗೆಗಳಿಗೆ ಕಾರಣವಾಯಿತು. ನಮ್ಮೆಲ್ಲಾ ದೈಹಿಕ ಅನುಭವಗಳು, ಪಂಚೇಂದ್ರಿಯಗಳ ಮೂಲಕ ಗ್ರಹಿಸುವ ಪ್ರತಿ ಸಂವೇದನೆಗಳು ನಮ್ಮ ದೇಹದಲ್ಲಿ ಎಲೆಕ್ಟ್ರಿಕ್ ಸಿಗ್ನಲ್‌ ಗಳ ರೂಪದಲ್ಲಿಯೇ ಪ್ರವಹಿಸುವುದು ನಂತರದ ಶತಮಾನಗಳಲ್ಲಿ ತಿಳಿದುಬಂತು. (ಇದು ಯಾವ ಹಂತಕ್ಕೆ ಮುಟ್ಟಿತೆಂದರೆ, ಮೇರಿ ಷೆಲ್ಲಿಯ ಫ್ರಾಂಕೆನ್‌ಸ್ಟೀನ್ ಕಥಾನಕದಲ್ಲಿ, ಎಲೆಕ್ಟ್ರಿಸಿಟಿಯೇ ಜೀವ ಧಾತು!)

ಇಪ್ಪತ್ತನೆಯ ಶತಮಾನದ ಆದಿಯ ವೇಳೆಗೆ, ರಮೋನ್ ಕಹಾಲ್ ಮತ್ತು ಇತರ ವಿಜ್ಞಾನಿಗಳು, ಮಿದುಳೆಂದರೆ, ಕೋಟ್ಯಾಂತರ ನ್ಯೂರಾನ್‌ ಗಳ ನೆಟ್‌ವರ್ಕ್ ಎಂತಲೂ, ಹಾಗೂ ನ್ಯೂರಾನ್‌ ಗಳ ಒಳಗೆ, ನಮ್ಮ ಅನುಭವದ ಸಂವೇದನೆಗಳು ಎಲೆಕ್ಟ್ರಿಕ್ ಸಿಗ್ನಲ್‌ ಗಳ ರೂಪದಲ್ಲಿ ಚಲಿಸುವುದು ನಿಜವಾದರೂ, ಒಂದು ನ್ಯೂರಾನ್ ಮತ್ತು ಇನ್ನೊಂದು ನ್ಯೂರಾನ್ ಮಧ್ಯೆ ಜಾಗವಿರುವುದರಿಂದ ಅಲ್ಲಿ ನಡೆಯುವ ಸಂವಹನ ಬಹುಮಟ್ಟಿಗೆ ರಾಸಾಯನಿಕ ಲಕ್ಷಣದ್ದೆಂದೂ ತೋರಿಸಿಕೊಟ್ಟರು.

ಸುಮಾರು ಹತ್ತು ಸಾವಿರ ಕೋಟಿ ನ್ಯೂರಾನ್‌ ಗಳಿರುವ ನಮ್ಮ ಮಿದುಳಿನಲ್ಲಿ, ಈ ನ್ಯೂರಾನ್‌ ಗಳು ಒಂದಕ್ಕೊಂದು ಹೊಸ ಸಂಪರ್ಕಗಳನ್ನು ನಿರ್ಮಿಸುತ್ತಲೇ ಇರುತ್ತವೆ, ಹಾಗೆಯೇ, ಕೆಲವೊಂದು ಹಳೆಯ ಸಂಪರ್ಕಗಳು ಬಲಯುತಗೊಳ್ಳುತ್ತಲೇ ಹೋದರೆ, ಇನ್ನುಳಿದ ಸಂಪರ್ಕಗಳ ಬಲ ಕಡಿಮೆಯಾಗುತ್ತಾ ಹೋಗುತ್ತದೆ.

ಈ ನ್ಯೂರಾನ್‌ ಗಳು ಒಂದಕ್ಕೊಂದು ಸಂಪರ್ಕಿಸುವ ಜಾಗಗಳಲ್ಲಿ, ಅವುಗಳು ತಾಗುವುದಿಲ್ಲ. ಬದಲಿಗೆ, ಅವುಗಳ ಮಧ್ಯೆ ಅತ್ಯಂತ ಸಣ್ಣದಾದ ಸಿನಾಪ್ಟಿಕ್ ಕ್ಲೆಫ್ಟ್‌ ಗಳೆನ್ನುವ ಜಾಗವಿರುತ್ತದೆ. ಎಲೆಕ್ಟ್ರಿಕ್ ಸಿಗ್ನಲ್‌ ಗಳು ಹಾಯದಂತಹ ಈ ಜಾಗಗಳಲ್ಲಿ, ಒಂದು ನ್ಯೂರಾನ್ ಇನ್ನೊಂದು ನ್ಯೂರಾನ್‌ ಗೆ ತನ್ನ ಸಂದೇಶ ರವಾನೆ ಮಾಡುವುದು, ರಾಸಾಯನಿಕ ಕಣಗಳ ಮೂಲಕ. “ನ್ಯೂರೋಟ್ರಾನ್ಸ್‌ಮಿಟರ್ಸ್” ಎನ್ನುವ ಈ ರಾಸಾಯನಿಕ ಕಣಗಳಲ್ಲಿ ಹಲವಾರು ತರಹದ ವೈವಿಧ್ಯಗಳಿದ್ದು, ಇವುಗಳ ಪರಿಣಾಮದಲ್ಲಿ ಹೆಚ್ಚು-ಕಡಿಮೆಯಾದರೆ, ನಮಗೆ ವಿವಿಧ ಭಾವಗಳು, ಅನುಭವಗಳು ಮೂಡಲು ಕಾರಣವಾಗುತ್ತವೆ.

ಉದಾಹರಣೆಗೆ, ಸೆರಟೋನಿನ್ ಪರಿಮಾಣದಲ್ಲಿ ಹೆಚ್ಚು ಕಡಿಮೆಯಾದರೆ, ಅದರಿಂದ ನಿದ್ದೆ, ಹಸಿವುಗಳಲ್ಲಿ ಏರುಪೇರಾಗುತ್ತದೆ. ಹಾಗೆಯೇ, ಇದರ ಕೊರತೆ ಇದ್ದವರಲ್ಲಿ, ಮಾನಸಿಕ ಖಿನ್ನತೆಯೂ ಕಾಣಬರಬಹುದು. ಡೋಪಾಮಿನ್ ಎನ್ನುವ ಇನ್ನೊಂದು ರಾಸಾನಿಕ, ಪ್ರೇರಕ ಶಕ್ತಿಯನ್ನು ನಿಯಂತ್ರಿಸುತ್ತದೆ. ಇದು ಹೆಚ್ಚಾದರೆ, ನಮ್ಮನ್ನು ಆನಂದ-ತುಂದಿಲರನ್ನಾಗಿಸಬಹುದು ಹಾಗೂ ವಾಸ್ತವತೆಯಿಂದ ದೂರಕ್ಕೂ ಕೊಂಡೊಯ್ಯಬಹುದು. ಅಸಿಟೈಲ್‌ಕೋಲಿನ್ ಎಂಬ ಇನ್ನೊಂದು ರಾಸಾಯನಿಕ ನಮ್ಮ ನೆನಪಿನ ಶಕ್ತಿ ಮತ್ತು ಕಲಿಕೆಗಳ ಮೇಲೆ ಪರಿಣಾಮ ಬೀರುತ್ತದೆ.

ಒಂದು ಅಂದಾಜಿನ ಪ್ರಕಾರ, ನಮ್ಮ ಮಿದುಳಿನಲ್ಲಿ ೧೦ ಟ್ರಿಲಿಯನ್‌ ಗಳಿಂದ ನೂರು ಟ್ರಿಲಿಯನ್ ಸಿನಾಪ್ಸ್‌ ಗಳಿವೆ (ಒಂದು ಟ್ರಿಲಿಯನ್ ಎಂದರೆ, ೧೦೦೦,೦೦೦,೦೦೦,೦೦೦! ನಮ್ಮ ಮಿಲ್ಕಿವೇ ಗೆಲಾಕ್ಸಿಯಲ್ಲಿ ಅಷ್ಟೊಂದು ನಕ್ಷತ್ರಗಳೇ ಇಲ್ಲ!!) ಕೂದಲೆಳೆಯ ಐದುಸಾವಿರದ ಒಂದು ಭಾಗದಷ್ಟಿರುವ ಈ ಸಿನಾಪ್ಟಿಕ್ ಕ್ಲೆಫ್ಟ್‌ ಗಳಲ್ಲಿ ನಮ್ಮೆಲ್ಲಾ, ನೋವು, ನಲಿವು, ಅನುಭವ, ಕಲಿಕೆ, ನೆನಪುಗಳು ಅಡಗಿವೆ. ಇವೇ ನಮ್ಮನ್ನು ನಾವಾಗಿಸುವವುಗಳು.

******

(ಡಾ.ಕ್ಯಾಂಡೆಲ್)

ನಮ್ಮ ನೆನಪುಗಳು ಮತ್ತು ನ್ಯೂರಾನ್‌ ಗಳ ಸಿನಾಪ್ಟಿಕ್ ಕ್ಲೆಫ್ಟ್‌ ಗಳ ಸಂಬಂಧವನ್ನು ವೈಜ್ಞಾನಿಕ ಪ್ರಯೋಗಗಳ ಮೂಲಕ ತೋರಿಸಿಕೊಟ್ಟವರು ಅಮೆರಿಕನ್ ವೈದ್ಯ ಮತ್ತು ವಿಜ್ಞಾನಿ ಎರಿಕ್ ಕ್ಯಾಂಡೆಲ್. ಅವರ ಈ ಸಂಶೋಧನೆಗೆ ೨೦೦೦ನೇ ಇಸವಿಯಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು.

ನ್ಯೂರಾನ್‌ ಗಳ ಮೇಲೆ ಪ್ರಯೋಗ ಮಾಡುವುದು ಸುಲಭದ ವಿಷಯವಲ್ಲ. ಮೊಟ್ಟ ಮೊದಲಿಗೆ, ಅವುಗಳ ಗಾತ್ರ ತೀರಾ ಸೂಕ್ಷ್ಮ. ಅದರ ಜೊತೆಗೆ, ಅವು ಒಂದಕ್ಕೊಂದು ಗಾಢವಾಗಿ ಬೆಸೆದುಕೊಂಡಿರುವುದರಿಂದ ಅವುಗಳನ್ನು ಪ್ರತ್ಯೇಕಿಸಿ ಗಮನಿಸುವುದು ಇನ್ನೂ ಕಷ್ಟ. ಹೀಗಾಗಿ, ಬಹುಪಾಲು ನ್ಯೂರೋಸೈಂಟಿಸ್ಟ್‌ ಗಳು ತಮ್ಮ ಪ್ರಯೋಗಗಳಿಗೆ ನ್ಯೂರಾನ್‌ ಗಳ ಸಂಖ್ಯೆ ಕಡಿಮೆ ಇರುವ ಮತ್ತು ನ್ಯೂರಾನ್‌ ಗಳ ಗಾತ್ರ ದೊಡ್ಡದಿರುವ ಪ್ರಾಣಿಗಳನ್ನು ಬಳಸುತ್ತಾರೆ.

ಡಾ.ಕ್ಯಾಂಡೆಲ್ ತಮ್ಮ ಪ್ರಯೋಗಗಳಿಗೆ ಬಳಸಿದ್ದು ಅಪ್ಲಿಸಿಯಾ ಎಂಬ ಶಂಖದ ಹುಳದ ರೀತಿಯ ಪ್ರಾಣಿ. ಒಂದು ಅಡಿ ಉದ್ದದ ವರೆಗೂ ಬೆಳೆಯುವ ಈ ಪ್ರಾಣಿಗಳನ್ನು “ಸಮುದ್ರದ ಮೊಲ” ಎಂದೂ ಕರೆಯುವುದುಂಟು. ಈ ಪ್ರಾಣಿಗಳ ಉಸಿರಾಟದ ಅಂಗಗಳು (ಗಿಲ್ ಮತ್ತು ಸೈಫನ್) ದೇಹದ ಹೊರಭಾಗದಲ್ಲಿದ್ದು, ಅಪಾಯದ ಸಂದರ್ಭಗಳಲ್ಲಿ ಅಪ್ಲಿಸಿಯಾಗಳು ಅವನ್ನು ಒಳಗೆಳೆದುಕೊಳ್ಳುತ್ತವೆ. ಅಷ್ಟೇ, ಅಲ್ಲ, ಅಪಾಯವನ್ನು ಗ್ರಹಿಸಿದಾಗ, ಇಂಕ್ ತರಹದ ಬಣ್ಣದ ದ್ರವವನ್ನು ಈ ಅಪ್ಲಿಸಿಯಾಗಳು ಹೊರಚೆಲ್ಲುತ್ತವೆ.

ಈ ಅಪ್ಲಿಸಿಯಾಗಳಲ್ಲಿ, ನ್ಯೂರಾನ್‌ ಗಳ ಸಂಖ್ಯೆ ಸುಮಾರು, ೨೦,೦೦೦ ಮಾತ್ರ ಇದ್ದು, ಒಂದೊಂದು ನ್ಯೂರಾನ್ ಗಾತ್ರ, ಮಾನವರ ನ್ಯೂರಾನ್‌ ಗಳ ಗಾತ್ರಕ್ಕೆ ಹೋಲಿಸಿದರೆ, ಎಷ್ಟೋ ಪಟ್ಟು ಹೆಚ್ಚಿರುತ್ತದೆ. ಹೀಗಾಗಿ, ಅವುಗಳಲ್ಲಿನ ಬದಲಾವಣೆಗಳನ್ನು ಗಮನಿಸುವುದು ವಿಜ್ಞಾನಿಗಳಿಗೆ ಕಷ್ಟವಾದರೂ ಅಸಾಧ್ಯವೇನಲ್ಲ.

ಇಂತಹ ಅಪ್ಲಿಸಿಯಾಗಳಿಗೆ ಕಲಿಕೆ ಸಾಧ್ಯವೇ? ಆ ಕಲಿಕೆಗಳನ್ನು ಅವು ನೆನಪಿನಲ್ಲಿಟ್ಟುಕೊಳ್ಳುತ್ತವೆಯೇ? ಇಂತಹ ನೆನಪುಗಳು ಅವುಗಳ ನ್ಯೂರಾನ್‌ ಗಳಲ್ಲಿ ಮತ್ತು ನ್ಯೂರಾನ್ ನೆಟ್‌ವರ್ಕ್‌ ಗಳಲ್ಲಿ ಬದಲಾವಣೆಯನ್ನು ಉಂಟುಮಾಡುತ್ತವೆಯೇ? ಈ ಬದಲಾವಣೆಗಳಾದರೂ ಎಂತಹುದು?

ಡಾ.ಕ್ಯಾಂಡೆಲ್ ಅವರ ಅಧ್ಯಯನ ಇಂತಹ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ.

******

(ಐವಾನ್ ಪಾವ್ಲೋವ್)

ರಷ್ಯನ್ ವಿಜ್ಞಾನಿ ಐವಾನ್ ಪಾವ್ಲೋವ್ ದೇಹದ ಜೀರ್ಣಕ್ರಿಯೆಗಳ ಕುರಿತಾದ ತನ್ನ ಅಧ್ಯಯನಕ್ಕೆ ೧೯೦೪ರಲ್ಲಿ ನೊಬೆಲ್ ಪ್ರಶಸ್ತಿ ಪಡೆದವನು. ಆದರೆ, ಇಂದು ಆತನ ಹೆಸರು ಬಹುಮಟ್ಟಿಗೆ ಚರ್ಚಿತವಾಗುವುದು, ಅವನು ನೊಬೆಲ್ ಪ್ರಶಸ್ತಿ ಪಡೆದ ನಂತರ ಅಕಸ್ಮಾತ್ತಾಗಿ ಕಂಡುಕೊಂಡ ವಿಚಾರವೊಂದರ ಕುರಿತು.

ಜೀರ್ಣಕ್ರಿಯೆಗಳ ವಿಷಯದಲ್ಲಿ ಅಧ್ಯಯನ ನಡೆಸುತ್ತಿದ್ದ ಪಾವ್ಲೋವ್, ತನ್ನ ಪ್ರಯೋಗಾಲಯದಲ್ಲಿ ಹಲವಾರು ನಾಯಿಗಳನ್ನು ಇಟ್ಟುಕೊಂಡಿದ್ದ. ಆ ನಾಯಿಗಳ ಬಾಯಲ್ಲಿ ಒಣಗಿಸಿದ ಮಾಂಸದ ಪೌಡರ್ ಹಾಕಿ, ಆಗ ಅವು ಸ್ರವಿಸುವ ಲಾಲಾರಸವನ್ನು ಶೇಖರಿಸುವುದು ಪಾವ್ಲೋವ್‌ ನ ಒಬ್ಬ ಸಹಾಯಕನ ಕೆಲಸವಾಗಿತ್ತು. (ಆ ಲಾಲಾರಸ ಆಹಾರದ ಪಚನದಲ್ಲಿ ಹೇಗೆ ಸಹಾಯಕವಾಗುವುದೆಂಬುದು ಪಾವ್ಲೋವ್‌ ನ ಅಧ್ಯಯನದ ವಿಷಯವಾಗಿತ್ತು)

ತನ್ನ ಪ್ರಯೋಗಾಲಯದ ನಾಯಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಪಾವ್ಲೋವ್ ಒಂದು ಕುತೂಹಲದ ವಿಷಯವನ್ನು ಗುರುತಿಸಿದ. ಅವನ ಪ್ರಯೋಗ ಪ್ರಾರಂಭವಾದ ಕೆಲವೇ ದಿನಗಳಲ್ಲಿ, ಆ ನಾಯಿಗಳು, ಪಾವ್ಲೋವ್‌ ನ ಸಹಾಯಕ ಪ್ರಯೋಗಾಲಯಕ್ಕೆ ಆಗಮಿಸುತ್ತಿದ್ದಂತೆಯೇ – ಮಾಂಸದ ಪೌಡರ್ ಉಣಬಡಿಸುವ ಮುನ್ನವೇ – ಜೊಲ್ಲು ಸುರಿಸಲಾರಂಭಿಸಿದ್ದವು. ಅವುಗಳ ಮನದಲ್ಲಿ ಆ ಸಹಾಯಕನ ಆಗಮನ ಮತ್ತು ಮಾಂಸದ ಊಟದ ಲಿಂಕ್ ಒಂದು ಮೂಡಿತ್ತು. ನಾಯಿಗಳು ತಮ್ಮ ಮನದಲ್ಲಿ ತಾವೇ ಸ್ವತಃ ಮೂಡಿಸಿಕೊಂಡಿದ್ದ ಈ ಬಂಧವನ್ನು ಮತ್ತಷ್ಟು ಖಚಿತ ಪಡಿಸಿಕೊಳ್ಳಲು, ಪಾವ್ಲೋವ್ ಇನ್ನಷ್ಟು ಪ್ರಯೋಗಗಳನ್ನು ಮಾಡಿದ. ಉದಾಹರಣೆಗೆ, ಆ ಸಹಾಯಕ ಪ್ರಯೋಗಾಲಯಕ್ಕೆ ಆಗಮಿಸುವ ಕೆಲ ಸೆಕೆಂಡುಗಳ ಮುನ್ನ ಒಂದು ಗಂಟೆ ಬಾರಿಸುವುದು. ಕೆಲವೇ ದಿನಗಳಲ್ಲಿ, ಆ ನಾಯಿಗಳು ಪ್ರಯೋಗಾಲಯದ ಗಂಟೆ ಬಾರಿಸಿದರೆ ಸಾಕು, ಜೊಲ್ಲು ಸುರಿಸಲಾರಂಭಿಸಿದವು.

ಸುತ್ತಲಿನ ಪ್ರಪಂಚದಲ್ಲಿನ ಸಂಜ್ಞೆಗಳು ಪ್ರಾಣಿಗಳ ನಡವಳಿಕೆಗಳನ್ನು ಬದಲಿಸುವ ಈ ವಿಚಾರವನ್ನು ಅಧ್ಯಯನ ನಡೆಸಲು ಪಾವ್ಲೋವ್ ತನ್ನುಳಿದ ಬಾಳನ್ನು ಮುಡುಪಾಗಿಟ್ಟ. ಹಲವಾರು ದಶಕಗಳ ಕಾಲ ಈ ವಿಷಯದ ಕೂಲಂಕುಷ ಅಧ್ಯಯನ ನಡೆಸಿದ. “ಕ್ಲಾಸಿಕಲ್ ಕಂಡೀಷನಿಂಗ್” ಎಂದು ಇಂದು ಕರೆಯಲ್ಪಡುವ ಇಂತಹ ನಡವಳಿಕೆಗಳಲ್ಲಿನ ಬದಲಾವಣೆಗಳನ್ನು ನಾವು ಕೇವಲ ನಾಯಿಗಳಲ್ಲಷ್ಟೇ ಅಲ್ಲ, ಮನುಷ್ಯರೂ ಸೇರಿದಂತೆ ಹಲವಾರು ಪ್ರಾಣಿಗಳಲ್ಲಿ ಗಮನಿಸಬಹುದು.

ನಾನು ಮಿಡ್ಲ್ ಸ್ಕೂಲಿನಲ್ಲಿದ್ದಾಗ, ರಂಗಪ್ಪ ಎಂಬ ಮಾಸ್ತರರಿದ್ದರು. ಅವರು, ಕಚ್ಚೆ ಪಂಚೆ ಉಟ್ಟು ಚರ್ಮದ ಪಾದರಕ್ಷೆ ತೊಟ್ಟಿರುತ್ತಿದ್ದರು. ಅವರ ಕೈನಲ್ಲಿ ಬೆತ್ತವೊಂದು ಸದಾ ರಾರಾಜಿಸುತ್ತಿತ್ತು. ಅದನ್ನು ಪ್ರಯೋಗಿಸಲೂ ಅವರೇನೂ ಹಿಂಜರಿಯುತ್ತಿರಲಿಲ್ಲ. ಹೀಗಾಗಿ, ಶಾಲೆಯ ಮಕ್ಕಳಲ್ಲಿ ಅವರ ಬಗೆಗೆ ಭಯ ಇತ್ತು. ಅವರು, ಶಾಲೆಯ ಕೊಠಡಿ ಪ್ರವೇಶವಾಗುವ ಮುನ್ನವೇ, ಅವರ ಕಚ್ಚೆ ಪಂಚೆ ಮತ್ತು ಪಾದರಕ್ಷೆಗಳು ಮಾಡುತ್ತಿದ್ದ “ಚರ-ಚರ” ಸದ್ದು ನಮಗೆಲ್ಲರಿಗೂ ಕೇಳುತ್ತಿತ್ತು. ಈ ಶಬ್ದ ಕೇಳಿತೆಂದರೆ, ಅಲ್ಲಿಯವರೆಗೂ ಸಂತೆಯಂತಿರುತ್ತಿದ್ದ ಶಾಲೆಯ ಕೊಠಡಿ ಒಮ್ಮೆಲೆ ಸ್ಮಶಾನವಾಗುತ್ತಿತ್ತು. ಎಷ್ಟೋ ಬಾರಿ, ಆ “ಚರ-ಚರ” ಸದ್ದು ರಂಗಪ್ಪ ಮಾಸ್ತರು ಇನ್ನಾರದೋ ಕೊಠಡಿಗೆ ಹೋಗುತ್ತಿದ್ದರೂ!

ಈ ರೀತಿ ಒಂದಕ್ಕೊಂದು ಸಂಬಂಧವನ್ನು ಮನದಲ್ಲಿ ನಿರ್ಮಿಸಿಕೊಳ್ಳುವುದೇ “ಕಲಿಕೆ”ಗಳು. ಅವು ನಮ್ಮ ಮನದಲ್ಲಿ ನೆಲೆಯೂರುವ “ನೆನಪು”ಗಳೂ ಸಹ. (ಕೆಲವೊಮ್ಮೆ ಇಂತಹ ಲಿಂಕ್‌ ಗಳು ನಮ್ಮಲ್ಲಿ ಎಷ್ಟೊಂದು ಆಳವಾಗಿ ಬೇರೂರಿರುತ್ತೆಂದರೆ, ನಮ್ಮೆಷ್ಟೋ ಭಯ, ಆಕ್ರೋಶ, ದ್ವೇಷ, ಉದ್ವಿಗ್ನತೆಗಳ ಹಿಂದೆ ಇಂತಹ ಆಯಾಚಿತವಾಗಿ “ಕಲಿತ” ವಿಚಾರಗಳಿರುತ್ತವೆ. ಭಾರತ, ಅಮೆರಿಕಾ ಸೇರಿದಂತೆ ಎಷ್ಟೋ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೂ, ಇಂದು, ಪ್ರಜೆಗಳು, ಪ್ರಭಾವಶಾಲಿ ರಾಜಕಾರಣಿಗಳ “ಕಂಡೀಷನಿಂಗ್”ಗೆ ಸಿಲುಕಿ ಪಾವ್ಲೋವ್‌ ನ ನಾಯಿಗಳಂತಾಗಿದ್ದಾರೆ. ಅಲ್ಡಸ್ ಹಕ್ಸ್‌ಲೀಯ “ಬ್ರೇವ್ ನ್ಯೂ ವರ್ಲ್ಡ್” ಇಂತಹ “ಡಿಸ್ಟೋಪಿಯಾ”ವನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.)

ಇಂತಹ ಕಲಿಕೆ-ನೆನಪುಗಳು, ನಮ್ಮ ಮಿದುಳಿನ ನ್ಯೂರಾನ್‌ ಗಳಲ್ಲಿ ಎಂತಹ ಬದಲಾವಣೆಗಳನ್ನು ಮಾಡುತ್ತವೆ? ಡಾ.ಕ್ಯಾಂಡೆಲ್ ಅವರ ಶಂಖದ ಹುಳುಗಳು ಈ ಪ್ರಶ್ನೆಗೆ ಉತ್ತರ ನೀಡುತ್ತಿವೆ.

******

ಮೊದಲೇ ಹೇಳಿದಂತೆ, ಅಪ್ಲಿಸಿಯಾಗಳು, ಅಪಾಯದ ಸಂದರ್ಭಗಳಲ್ಲಿ ತಮ್ಮ ಉಸಿರಾಟದ ಅಂಗಗಳನ್ನು ಒಳಕ್ಕೆ ಸೆಳೆದುಕೊಳ್ಳುತ್ತವೆ. ಅಂತಹ “ಅಪಾಯದ ಸಂದರ್ಭ”ವನ್ನು ನಾವು ಪ್ರಯೋಗಶಾಲೆಗಳಲ್ಲಿ ಕೃತಕವಾಗಿ ನಿರ್ಮಿಸಬಹುದು. ಉದಾಹರಣೆಗೆ, ಅದರ ಬಾಲಕ್ಕೆ ಸಣ್ಣದೊಂದು ಎಲೆಕ್ಟ್ರಿಕ್ ಷಾಕ್ ನೀಡಿದರೂ ಸಾಕು. ಷಾಕ್ ನೀಡುವ ಮುನ್ನ, ಪಾವ್ಲೋವ್‌ ನ ಗಂಟೆಗಳಂತೆ, ಮತ್ತೊಂದು ಸಂಜ್ಞೆ ನೀಡಿದರೆ? ಅವು ತಮ್ಮ ಉಸಿರಾಟದ ಅಂಗಗಳನ್ನು ಕೇವಲ ಈ ಸಂಜ್ಞೆಗಳಿಂದಷ್ಟೇ ಒಳಕ್ಕೆಳೆಯುತ್ತವೇ? ಆ ಸಂಜ್ಞೆಗೂ, ಎಲೆಕ್ಟ್ರಿಕ್ ಷಾಕ್‌ ಗೂ ಸಂಬಂಧವನ್ನು ಈ ಅಪ್ಲಿಸಿಯಾಗಳು ಕಲಿಯಬಹುದೇ? ಹಾಗೆ ಕಲಿತಲ್ಲಿ, ಅವುಗಳ ನ್ಯೂರಾನ್‌ ಗಳಲ್ಲಿ ಬದಲಾವಣೆಗಳು ಉಂಟಾಗುತ್ತವೆಯೇ?

ಡಾ.ಕ್ಯಾಂಡೆಲ್ ಅವರ ಅಧ್ಯಯನ, ಪರಿಸರದಲ್ಲಿನ ಸಂಜ್ಞೆಗಳು ನ್ಯೂರಾನ್‌ ಗಳ ಕನೆಕ್ಷನ್‌ ಗಳಲ್ಲಿ ಬದಲಾವಣೆ ಉಂಟುಮಾಡುವುದನ್ನು ತೋರಿಸಿಕೊಟ್ಟಿದೆ. ಅಷ್ಟೇ ಅಲ್ಲ, ಸಂಜ್ಞೆ ಮತ್ತು ಷಾಕ್‌ ಗಳ ಸಂಬಂಧವನ್ನು ಅಪ್ಲಿಸಿಯಾಗಳು ಹೆಚ್ಚು-ಹೆಚ್ಚು ಅನುಭವಿಸಿದಷ್ಟೂ, ನ್ಯೂರಾನ್‌ ಗಳ ಈ ಕನೆಕ್ಷನ್‌ ಗಳು ಮತ್ತಷ್ಟು ದಟ್ಟವಾಗುವುದನ್ನೂ ತೋರುತ್ತದೆ. (“Practice Makes Perfect” ಎಂಬ ಇಗ್ಲೀಷ್ ನಾಣ್ಣುಡಿ ಸತ್ಯವೆಂಬುದನ್ನೂ ದಿಟ ಮಾಡಿದೆ)


ನ್ಯೂರಾನ್‌ ಗಳ ಕನೆಕ್ಷನ್‌ ಗಳಲ್ಲಿ ಆಗುವ ಈ ಬದಲಾವಣೆಗಳೇ ನಮ್ಮ ನೆನಪುಗಳು. ಈ ಬದಲಾವಣೆಗಳ ಮೂಲಕವೇ ನಮ್ಮ ಮಿದುಳು ನಮ್ಮೆಲ್ಲಾ ಅನುಭವಗಳನ್ನು ದಾಖಲಿಸುತ್ತದೆ. ನೆನಪೆಂದರೆ ಬದಲಾವಣೆಯೇ. ಬದಲಾಗದೇ ನೆನಪಿಲ್ಲ.