ಮುಂಭಾಗದ ಕಂಬದ ಒಳಬದಿಗೆ ಕುಂಭಗಳಿಂದ ಹೊರಟ ಶಿಲಾಲತೆಗಳೂ, ಬಾಗಿಲ ಎದುರಾಗಿ ಶೈವ ದ್ವಾರಪಾಲಕರ ದೊಡ್ಡಶಿಲ್ಪಗಳೂ ಕಂಡುಬರುತ್ತವೆ. ಮಂಟಪದ ಒಳಗಿನ ಕಂಬಗಳ ಮೇಲಿನ ಉಬ್ಬುಶಿಲ್ಪಗಳಲ್ಲಿ ಗಣಪತಿ, ಮಹಿಷಮರ್ದಿನಿ, ಕೈಮುಗಿದು ನಿಂತ ನಂದೀಶ್ವರ ಹಾಗೂ ಭೈರವರ ಶಿಲ್ಪಗಳು ಆಕರ್ಷಕವಾಗಿವೆ. ಯಕ್ಷನು ಹೊತ್ತಂತೆ ವಿನ್ಯಾಸಗೊಂಡಿರುವ ಕಂಬವೊಂದರ ಮೇಲೆ ಶಿವನಿಗೆ ತನ್ನ ಕಣ್ಣನ್ನು ಸಮರ್ಪಿಸುತ್ತಿರುವ ಕಣ್ಣಪ್ಪನ ಶಿಲ್ಪವನ್ನೂ, ಕಂಬದ ಮೇಲುಭಾಗದಲ್ಲಿ ಕಣ್ಣಪ್ಪನನ್ನು ಅನುಗ್ರಹಿಸಲು ಪ್ರಕಟಗೊಂಡಿರುವ ಶಿವಪಾರ್ವತಿಯರ ಶಿಲ್ಪವನ್ನೂ ಕೆತ್ತಿರುವ ಪರಿ ಗಮನಸೆಳೆಯುತ್ತದೆ.  ಮಂಟಪದ ಒಳ ಅಂಚಿನ ಕಂಬದ ಮೇಲೆ ಭಿಕ್ಷಾಟನಮೂರ್ತಿ ಹಾಗೂ ಚಂದ್ರಶೇಖರ ಶಿವನ ಬಿಂಬಗಳನ್ನು ಕೆತ್ತಿರುವ ಪರಿಯೂ ಸೊಗಸಾಗಿದೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಮೂವತ್ತಾರನೆಯ ಕಂತು

ಬೆಂಗಳೂರು-ಶಿವಮೊಗ್ಗ ಹೆದ್ದಾರಿಯಲ್ಲಿ ತುಮಕೂರಿನಿಂದ ಮುಂದಕ್ಕೆ ಕೆ.ಬಿ.ಕ್ರಾಸ್ ಎದುರಾಗುತ್ತದೆ. ಇಲ್ಲಿ ಬಲಕ್ಕೆ ಚಿಕ್ಕನಾಯಕನಹಳ್ಳಿಯ ರಸ್ತೆಯಲ್ಲಿ ತುಸುದೂರ ಸಾಗಿದರೆ ಪಂಕಜನಹಳ್ಳಿಯತ್ತ ಹೊರಳುವ ದಾರಿ ಸಿಗುವುದು. ಈ ಗ್ರಾಮದಲ್ಲಿ ವಿಜಯನಗರ ಕಾಲದ ಸುಂದರವಾದ ನಿರ್ಮಾಣವೊಂದಿದೆ- ಮಲ್ಲಿಕಾರ್ಜುನ ದೇವಾಲಯ.

ಹಳ್ಳಿಯ ರಸ್ತೆಯ ಬದಿಯಲ್ಲೇ ದೇವಾಲಯ. ಸುತ್ತ ಮರಗಳ ತಂಪು ನೆರಳು. ವಿಶಾಲವಾದ ಆವರಣದೊಳಗೆ ಸುಸ್ಥಿತಿಯಲ್ಲಿರುವ ದೇಗುಲಸಂಕೀರ್ಣ. ಪ್ರವೇಶಮಂಟಪದ ಹೊರಗೋಡೆಯ ಮೇಲೆ ಸುತ್ತಲೂ ಬಗೆಬಗೆಯ ಚಟುವಟಿಕೆಗಳಲ್ಲಿ ತೊಡಗಿಕೊಂಡ ಆನೆಗಳ ಉಬ್ಬುಕೆತ್ತನೆ ಗಮನಸೆಳೆಯುತ್ತದೆ. ಸೊಂಡಿಲೆತ್ತಿ ಮುನ್ನುಗ್ಗುತ್ತಿರುವ ಮದಿಸಿದ ಆನೆ, ಅದನ್ನು ಸಂತೈಸಲೆತ್ನಿಸುತ್ತಿರುವ ಮಾವುತ, ಮಾವುತರಿಂದ ಪ್ರೇರಿತವಾಗಿ ಹೋರಾಟಕ್ಕೆ ಮುಂದಾದ ಎರಡು ಸಲಗಗಳು, ಟಗರುಗಳ ಕಾಳಗ ಮೊದಲಾದವನ್ನು ಈ ಗೋಡೆಯ ಮೇಲೆ ಸೊಗಸಾಗಿ ಚಿತ್ರಿಸಿದೆ.

ಮುಂಬಾಗಿಲೆಡೆಯಲ್ಲಿ ಸೂರ್ಯನ ಉಬ್ಬುಶಿಲ್ಪವನ್ನು ಕೆತ್ತಿದೆ. ಅಲ್ಲೇ ಇರಿಸಿದ ಶಿಲ್ಪಫಲಕವೊಂದರಲ್ಲಿ ಇಬ್ಬರು ಪತ್ನಿಯರೊಡಗೂಡಿರುವ ಆಯುಧಧಾರಿ ಪುರುಷನನ್ನು ಚಿತ್ರಿಸಿದ್ದು ಬಹುಶಃ ಸ್ಥಳೀಯ ಮಾಂಡಳಿಕನೋ ದೇವಾಲಯ ನಿರ್ಮಾತೃವೋ ಇರಬಹುದು.

ಮುಂಭಾಗದ ಕಂಬದ ಒಳಬದಿಗೆ ಕುಂಭಗಳಿಂದ ಹೊರಟ ಶಿಲಾಲತೆಗಳೂ, ಬಾಗಿಲ ಎದುರಾಗಿ ಶೈವ ದ್ವಾರಪಾಲಕರ ದೊಡ್ಡಶಿಲ್ಪಗಳೂ ಕಂಡುಬರುತ್ತವೆ. ಮಂಟಪದ ಒಳಗಿನ ಕಂಬಗಳ ಮೇಲಿನ ಉಬ್ಬುಶಿಲ್ಪಗಳಲ್ಲಿ ಗಣಪತಿ, ಮಹಿಷಮರ್ದಿನಿ, ಕೈಮುಗಿದು ನಿಂತ ನಂದೀಶ್ವರ ಹಾಗೂ ಭೈರವರ ಶಿಲ್ಪಗಳು ಆಕರ್ಷಕವಾಗಿವೆ. ಯಕ್ಷನು ಹೊತ್ತಂತೆ ವಿನ್ಯಾಸಗೊಂಡಿರುವ ಕಂಬವೊಂದರ ಮೇಲೆ ಶಿವನಿಗೆ ತನ್ನ ಕಣ್ಣನ್ನು ಸಮರ್ಪಿಸುತ್ತಿರುವ ಕಣ್ಣಪ್ಪನ ಶಿಲ್ಪವನ್ನೂ, ಕಂಬದ ಮೇಲುಭಾಗದಲ್ಲಿ ಕಣ್ಣಪ್ಪನನ್ನು ಅನುಗ್ರಹಿಸಲು ಪ್ರಕಟಗೊಂಡಿರುವ ಶಿವಪಾರ್ವತಿಯರ ಶಿಲ್ಪವನ್ನೂ ಕೆತ್ತಿರುವ ಪರಿ ಗಮನಸೆಳೆಯುತ್ತದೆ.  ಮಂಟಪದ ಒಳ ಅಂಚಿನ ಕಂಬದ ಮೇಲೆ ಭಿಕ್ಷಾಟನಮೂರ್ತಿ ಹಾಗೂ ಚಂದ್ರಶೇಖರ ಶಿವನ ಬಿಂಬಗಳನ್ನು ಕೆತ್ತಿರುವ ಪರಿಯೂ ಸೊಗಸಾಗಿದೆ.

ಪ್ರವೇಶಮಂಟಪಕ್ಕೂ ದೇಗುಲದ ಮುಖಮಂಟಪಕ್ಕೂ ನಡುವೆ ಗೋಪುರಹೊತ್ತ ಚಿಕ್ಕ ತೆರೆದ ಮಂಟಪ. ನಾಲ್ಕು ಕಂಬಗಳ ಈ ಕಿರುಮಂಟಪದಲ್ಲಿ ಶಿವನಿಗೆ ಅಭಿಮುಖವಾಗಿ ಕುಳಿತ ನಂದಿ. ನಮ್ಮ ನಾಡಿನ ಅತ್ಯಾಕರ್ಷಕ ನಂದಿಶಿಲ್ಪಗಳಲ್ಲಿ ಇದೂ ಒಂದೆಂಬುದರಲ್ಲಿ ಅತಿಶಯೋಕ್ತಿಯಿಲ್ಲ. ಎಡಮುಂಗಾಲೂರಿ, ಕಿವಿನಿಮಿರಿಸಿ, ಹಸನ್ಮುಖನಾಗಿ ಕುಳಿತ ನಂದಿ. ಕೊರಳ ಗಂಟೆ, ಕಿರುಗೆಜ್ಜೆಗಳ ಸರಮಾಲೆ, ಶಿರೋಭೂಷಣಗಳ ಅಲಂಕಾರ ಮುದ್ದಾದ ವಿಗ್ರಹಕ್ಕೆ ಒಪ್ಪವಿಟ್ಟಂತೆ ಶೋಭಿಸುತ್ತದೆ. ಕೊಂಬಿಗೆ ಕಟ್ಟಿದ ಕುಚ್ಚುಗಳೂ ಮಾಲೆಯನ್ನು ಕಟ್ಟಿದ ಸೊಬಗಿನ ಗಂಟೂ ಕಾಲ್ಗೆಜ್ಜೆಗಳೂ ವಿಗ್ರಹದ ಅಂದವನ್ನು ಹೆಚ್ಚಿಸಿವೆ. ಗಾರೆಯ ಗೋಪುರದ ಮೇಲೆ ಶಿವನೇ ಕುಳಿತಿದ್ದಾನೆಂದ ಮೇಲೆ ನಂದಿಯ ವೈಭವವನ್ನು ಹೇಳುವುದೇನು?

ದೇಗುಲದಲ್ಲಿ ಇರಿಸಿರುವ ಶಾಸನದ ಕಾಲ 1529. ಇದು ಕೃಷ್ಣದೇವರಾಯನ ಆಳ್ವಿಕೆಯ ಕೊನೆಯ ವರ್ಷ. ಆತನ ಆಳ್ವಿಕೆಯ ಕಾಲದಲ್ಲೇ ದೇಗುಲದ ನಿರ್ಮಾಣವಾಗಿರುವುದೆಂದು ಶಾಸನದಲ್ಲಿ ಹೇಳಿರುವುದರಿಂದ ಹದಿನಾರನೇ ಶತಮಾನದ ಪ್ರಾರಂಭದಲ್ಲಿ ಈ ಗುಡಿಯನ್ನು ಕಟ್ಟಿರಬಹುದು. ವಿಜಯನಗರ ಸಾಮ್ರಾಜ್ಯದ ಅಧೀನ ಅಧಿಕಾರಿಯಾದ ಬಾನವಾಡಿಯ ಚೆಂನಿಸೆಟ್ಟಿಯೆಂಬಾತನು ಕೃಷ್ಣದೇವರಾಯನಿಗೆ ಸರ್ವಾಭ್ಯುದಯವಾಗಲೆಂಬ ಮಹದುದ್ದೇಶದಿಂದ ಈ ದೇಗುಲದ ನಿರ್ವಹಣೆಗೆ ದಾನ ನೀಡಿರುವುದನ್ನು ಈ ಶಾಸನ ವರ್ಣಿಸುತ್ತದೆ. ಗರ್ಭಗುಡಿಯಲ್ಲಿ ಮಲ್ಲಿಕಾರ್ಜುನನೆಂಬ ಹೆಸರಿನ ಶಿವಲಿಂಗವಿದೆ.

ದೇವಾಲಯದ ಆವರಣದಲ್ಲಿ ಇನ್ನೆರಡು ಗುಡಿಗಳಿವೆ. ವೀರಭದ್ರನ ಗುಡಿ ಚಿಕ್ಕದು. ವಿಗ್ರಹದ ಕೆತ್ತನೆ ಸುಸ್ಪಷ್ಟವಾಗಿದೆ. ಆರುಭುಜಗಳಲ್ಲಿ ವಿವಿಧ ಆಯುಧಗಳನ್ನು ಹಿಡಿದು, ಎತ್ತರದ ಪಾದುಕೆಗಳನ್ನು ಧರಿಸಿದ ವೀರಭದ್ರನ ಕಾಲೆಡೆಗೆ ದಕ್ಷ ಹಾಗೂ ದೇವಿಯರಿದ್ದಾರೆ. ಬಲಭಾಗದ ಪಾರ್ವತೀದೇವಾಲಯ ಮುಖಮಂಟಪವನ್ನು ಹೊಂದಿದೆ. ಚತುರ್ಭುಜಳಾದ ದೇವಿ ವರದಹಸ್ತೆಯಾಗಿ ಕಂಡುಬರುತ್ತಾಳೆ. ಒಳಗುಡಿಯ ಕಂಬಗಳ ಮೇಲೆ ಸ್ಥಾನಕಶಿವ, ನಂದೀಶ್ವರ, ಋಷಿ ಮೊದಲಾದವನ್ನು ಚಿತ್ರಿಸಿದೆ. ಶಿವದೇವಾಲಯದ ಕಂಬಗಳು ಉಬ್ಬುಶಿಲ್ಪಗಳಿಲ್ಲದೆ, ಸರಳ ಕೆತ್ತನೆಯಿಂದ ವಿನ್ಯಾಸಗೊಂಡಿದ್ದರೆ, ಪಾರ್ವತಿಯ ಗುಡಿಯ ಕಂಬಗಳ ಮೇಲೆ ಹಲವು ಉಬ್ಬುಶಿಲ್ಪಗಳಿವೆ. ಯಕ್ಷಯಕ್ಷಿಯರು, ಋಷಿ, ವೃಷಭ, ಶಿವಲಿಂಗಕ್ಕೆ ಹಾಲುಣಿಸುತ್ತಿರುವ ಹಸು, ಮೊದಲಾದವು ವಿಜಯನಗರದ ಉಬ್ಬುಶಿಲ್ಪಗಳನ್ನು ನೆನಪಿಸುವಂತಿವೆ.

ಇದೇ ಮಂಟಪದಲ್ಲಿ ಕೋತಿ, ಸಿಂಹ, ಸರ್ಪಗಳಲ್ಲದೆ ದೊಡ್ಡಹಲ್ಲಿಯೊಂದನ್ನೂ ಚಿತ್ರಿಸಿರುವುದು ವಿಶೇಷ. ಪಂಕಜನಹಳ್ಳಿಯ ರಸ್ತೆಯಲ್ಲಿ ಮುಂಬರಿದರೆ ಶೆಟ್ಟಿಕೆರೆಯ ಯೋಗನಾರಾಯಣ ದೇವಾಲಯವನ್ನೂ ನೋಡಿಕೊಂಡು ಚಿಕ್ಕನಾಯಕನಹಳ್ಳಿಯತ್ತ ಸಾಗಬಹುದು.