ನಮ್ಮ ಮುಂದೆ ದೊಡ್ಡ ದ್ವಂದ್ವವಿತ್ತು. ನೀತಿ ನಿರೂಪಣೆಯ ಸ್ವಾಯತ್ತತೆ ಮತ್ತು ಸಂಪನ್ಮೂಲದ ಹೆಚ್ಚಿನ ಪಾಲನ್ನು ರಾಜ್ಯಗಳು ಕೇಳುತ್ತಿದ್ದ ಹೊತ್ತಿನಲ್ಲಿ ಹೆಚ್ಚುವರಿ ಅನುದಾನ ನೀಡುವ ಆರ್ಥಿಕ ಬಲ ಕೇಂದ್ರ ಸರ್ಕಾರಕ್ಕಿರಲಿಲ್ಲ. ಸಂವಿಧಾನದ ಆಶಯ ಮತ್ತು ದಕ್ಷತೆಯ ದೃಷ್ಟಿಯಿಂದ ರಾಜ್ಯಗಳ ಪಾತ್ರ ಹೆಚ್ಚಾಗಬೇಕೆನ್ನುವುದರಲ್ಲಿ ಅನುಮಾನವಿರಲಿಲ್ಲ. ಒಟ್ಟಾರೆ ಬಟವಾಡೆಯಲ್ಲಿ ಹಣಕಾಸು ಆಯೋಗದ ಬಟವಾಡೆ ಮತ್ತು ಮಿಕ್ಕ ಬಟವಾಡೆಗಳು ಸೇರಿರುವ ಕಾಲಕ್ಕೆ ಅಧಿಕ ಆರ್ಥಿಕ ಹೊರೆಯಿಲ್ಲದೆ ನೀತಿ ರೂಪಿಸುವಲ್ಲಿ ರಾಜ್ಯಗಳ ಪಾತ್ರವನ್ನು ಹೆಚ್ಚಿಸುವ ವಿಧಾನವೊಂದನ್ನು ಕಂಡುಕೊಳ್ಳುವುದೇ ಸವಾಲಾಗಿತ್ತು.
ಎಂ.ಎಸ್. ಶ್ರೀರಾಮ್‌ ಅನುವಾದಿಸಿದ ವೈ.ವಿ. ರೆಡ್ಡಿಯವರ ಆತ್ಮಕಥನದ ಆಯ್ದ ಭಾಗದ ಮೂರನೆಯ ಕಂತು

 

‘ಕೇಂದ್ರ ಒಂದು ಪರಿಕಲ್ಪನೆಯಷ್ಟೇ. ಭಾರತದ ಪ್ರತಿ ಇಂಚನ್ನೂ ರಾಜ್ಯಗಳೇ ಆಳುತ್ತಿವೆ’ ಮುಖ್ಯಮಂತ್ರಿ ಎನ್‌.ಟಿ.ಆರ್. 1983ರಲ್ಲಿ ಗರ್ಜಿಸಿದ್ದರು. ಭಾರತ ರಾಜ್ಯಗಳ ಒಕ್ಕೂಟವೆಂದು ಅವರು ಒತ್ತಿ ಹೇಳಿದ್ದರು. ಕೇಂದ್ರ-ರಾಜ್ಯಗಳ ಮುಖಾಮುಖಿಯನ್ನು ಪ್ರಾರಂಭಿಸಿ 1989ರಲ್ಲಿ ಕಾಂಗ್ರೆಸ್ ಪಕ್ಷದಿಂದ ಅಧಿಕಾರ ದಕ್ಕಿಸಿಕೊಂಡ ರಾಷ್ಟ್ರೀಯ ಒಕ್ಕೂಟದ ರೂವಾರಿ ಕೂಡಾ ಅವರೇ. ಆಗ ಶುರುವಾದ ಸಮ್ಮಿಶ್ರ ಸರ್ಕಾರ ಯುಗ ಎರಡು ದಶಕ ಚಾಲ್ತಿಯಲ್ಲಿದ್ದು, ರಾಜ್ಯಗಳ ನಾಯಕರು ತಮ್ಮ ಶಕ್ತಿಪ್ರದರ್ಶಿಸುವುಕ್ಕೆ ಸಾಧ್ಯವಾಗಿತ್ತು. 2012ರ ವೇಳೆಗೆ ರಾಜಕೀಯ ವಿಕೇಂದ್ರೀಕರಣವಾದರೂ ಆರ್ಥಿಕ ಸಂಪನ್ಮೂಲ, ವಿತ್ತೀಯ ಸಂಬಂಧ, ಯೋಜನೆಗಳು, ಕೇಂದ್ರದ ಸುಪರ್ದಿನಲ್ಲಿತ್ತು. ರಾಷ್ಟ್ರೀಯ ಅಭಿವೃದ್ಧಿ ಮಂಡಲಿಯ ಪರಿಣಾಮ ಹೆಚ್ಚಿರಲಿಲ್ಲ. ಗೃಹ ಮಂತ್ರಾಲಯದ ಅಂತರ್ರಾಜ್ಯ ಸಮನ್ವಯ ಸಮಿತಿಗೆ ಜನ್ಮದೋಷವಿತ್ತು. ಸದರಿ ಸರ್ಕಾರದಲ್ಲಿ ರಾಜಕೀಯ ಶಕ್ತಿ ಮತ್ತು ಆಡಳಿತ ಯಂತ್ರಾಂಗ ಭಿನ್ನ ವ್ಯಕ್ತಿಗಳಲ್ಲಿತ್ತು. ರಾಜ್ಯ ಮತ್ತು ಕೇಂದ್ರದ ನಡುವಿನ ಹಣಕಾಸಿನ ಸಮನ್ವಯ ನೋಡುತ್ತಿದ್ದ ಯೋಜನಾ ಆಯೋಗ “ಕೇಂದ್ರ”ದಂತೆ ಕಾಣುತ್ತಿತ್ತು. ಕೇಂದ್ರ ಮತ್ತು ರಾಜ್ಯದ ಸಂಬಂಧದಲ್ಲಿ ಮರು ಸಮತೋಲನ ಬೇಕಿತ್ತು. ಈ ಸಂದರ್ಭದಲ್ಲಿ 14ನೇ ಹಣಕಾಸು ಆಯೋಗ ಏರ್ಪಾಟಾಯಿತು. ಅದರ ವರದಿ ಯಥಾಸ್ಥಿತಿಯನ್ನು ಮೂಲಭೂತವಾಗಿ ಅಲ್ಲಾಡಿಸಿತು.

ಸರ್ಕಾರದ ಅಧಿಕಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಲಾಗಿದೆ. ತೆರಿಗೆ ವಸೂಲಿಯ ಜವಾಬ್ದಾರಿಯನ್ನು ಸಂವಿಧಾನದ ಮೂಲಕ ರೂಪಿಸಲಾಗಿದೆ. ಕನಿಷ್ಠ ಐದು ವರ್ಷಗಳಿಗೊಮ್ಮೆಯಾದರೂ ರಾಷ್ಟ್ರಪತಿಗಳು ಹಣಕಾಸು ಆಯೋಗವನ್ನು ರಚಿಸಬೇಕೆಂದು ಸಂವಿಧಾನ ಸೂಚಿಸುತ್ತದೆ. ಈ ಆಯೋಗ ಕೇಂದ್ರ ಸರ್ಕಾರ ವಸೂಲು ಮಾಡಿದ ತೆರಿಗೆಯನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚುವ ವಿಧಾನವನ್ನು ಸೂಚಿಸುತ್ತದೆ. ಕೇಂದ್ರವು ರಾಜ್ಯಗಳಿಗೆ ಕೊಡುವ ಅನುದಾನವನ್ನು ಹೇಗೆ ಹಂಚಬೇಕೆನ್ನುವುದನ್ನು ಆಯೋಗ ಹೇಳುತ್ತದೆ. ಕೇಂದ್ರ ವಸೂಲು ಮಾಡಿದ ತೆರಿಗೆಗಳನ್ನು ಹಣಕಾಸು ಆಯೋಗದ ಸೂತ್ರಕ್ಕನುಸಾರವಾಗಿ ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು. ಆದರೆ, ಅಧಿಕ ಶುಲ್ಕ ಮತ್ತು ಸೆಸ್ಸನ್ನು ಹಂಚಿಕೊಳ್ಳಬೇಕಿಲ್ಲ. ಆಯೋಗದ ಕೆಲಸ ಎರಡು ವರ್ಷಗಳಷ್ಟಿರುತ್ತದೆ, ಇದಕ್ಕಾಗಿ ಅನೇಕ ಸಭೆಗಳನ್ನು ಕರೆದು, ಪ್ರತಿ ರಾಜ್ಯದೊಂದಿಗೂ ಮಾತಾಡಬೇಕು. ಅನೇಕ ಮಂತ್ರಾಲಯಗಳು ಮತ್ತು ಸ್ಥಳೀಯ ಪಾಲಿಕೆ ಮತ್ತು ಪಂಚಾಯ್ತಿಗಳ ಜೊತೆ ಚರ್ಚಿಸಬೇಕು. ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯಿಂದ ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಪಂಚಾಯ್ತಿಗಳ ಜೊತೆಗೂ ಚರ್ಚಿಸಿ ರಾಜ್ಯಗಳಿಗೆ ಸಲ್ಲುವ ಅನುದಾನಗಳಿಂದ ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಪಂಚಾಯ್ತಿಗಳಿಗೆ ನೀಡುವ ಸಂಪನ್ಮೂಲಗಳನ್ನು ನಿಗದಿಮಾಡುತ್ತದೆ. ಉತ್ತಮ ಅರ್ಥವ್ಯವಸ್ಥೆಗಾಗಿ ಬೇರೆ ವಿಷಯಗಳನ್ನೂ ಆಯೋಗದ ಸಲಹೆಗಳಲ್ಲಿ ಪ್ರಸ್ತಾಪಿಸಬಹುದು. ಪ್ರತಿ ಸಾರಿಯೂ ಆಯೋಗ ರಚಿಸುವಾಗ ರಾಷ್ಟ್ರಪತಿಗಳ ಆದೇಶದಲ್ಲಿ ಈ ವಿವರಗಳಿರುತ್ತವೆ. ಆ ಉಲ್ಲೇಖ ರಾಷ್ಟ್ರಪತಿಗಳು ಆಯೋಗದಿಂದ ಯಾವ ಸಲಹೆಗಳನ್ನು ಬಯಸುತ್ತಾರೆನ್ನುವುದನ್ನು ವಿವರಿಸುತ್ತದೆ. ಆಯೋಗದ ಸೂಚನೆಗಳಿಗೆ ಸರ್ಕಾರ ಬದ್ಧವಾಗಿರಬೇಕು.

ಸಾಮಾನ್ಯವಾಗಿ ಆಯೋಗದ ಸೂಚನೆಗಳು ಐದು ವರ್ಷಗಳ ಕಾಲ ಜಾರಿಯಲ್ಲಿರುತ್ತದೆ. ಮುಂದಿನ ಹಣಕಾಸು ಆಯೋಗದ ವರದಿ ಬಂದು ಅದನ್ನು ಒಪ್ಪುವವರೆಗೆ ಹಿಂದಿನ ಆಯೋಗದ ಸೂಚನೆಗಳು ಚಾಲ್ತಿಯಲ್ಲಿರುತ್ತವೆ. ಕಾನೂನಿನಂತೆ ಆಯೋಗದಲ್ಲಿ ಮೂಲತಃ ಐವರು ತಜ್ಞರಿರುತ್ತಾರೆ.

ಜುಲೈ 2012ರಲ್ಲಿ ವಿತ್ತಸಚಿವರಾದ ಗೋಪಾಲನ್ ನನಗೆ ಫೋನ್ ಮಾಡಿದರು. ‘ಹದಿನಾಲ್ಕನೇ ಹಣಕಾಸು ಆಯೋಗದ ಅಧ್ಯಕ್ಷರಾಗಲು ನಿಮ್ಮ ಒಪ್ಪಿಗೆ ಪಡೆಯಬೇಕೆಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ’ ಎಂದರು.

ದೆಹಲಿಯಲ್ಲಿ ಪ್ರಧಾನ ಮಂತ್ರಿಗಳನ್ನು ಭೇಟಿಮಾಡಿದೆ. ‘ಗೋಪಾಲನ್‌ ಗೆ ನಿಮ್ಮ ಒಪ್ಪಿಗೆ ತಿಳಿಸಿ’ ಅನ್ನುತ್ತಾ, ಆಯೋಗದ ಕೆಲಸದ ಬಗ್ಗೆ ಮಾತಾಡಿದರು. ಆಗಿನ ಮುಖ್ಯಮಂತ್ರಿಗಳಲ್ಲಿ ಮೂರ್ನಾಲ್ಕು ಜನ ತಾವೂ ಪ್ರಧಾನ ಮಂತ್ರಿಗಳಿಗೆ ಸಮಾನವೆನ್ನುವ ರೀತಿಯಲ್ಲಿ ವರ್ತಿಸಿ, ಕೇಂದ್ರದ ನಾಯಕತ್ವವನ್ನು ರಾಜಕೀಯವಾಗಿ ಪ್ರಶ್ನಿಸುತ್ತಿದ್ದರು. ಸೈದ್ಧಾಂತಿಕವಾಗಿ ಸಮಾಜವಾದ – ಬಂಡವಾಳಶಾಹಿ ಪದ್ಧತಿಯ ನಡುವಿನ ಆಯ್ಕೆಯ ಪ್ರಶ್ನೆಯಿರಲಿಲ್ಲ. ಎಡಪಕ್ಷವೋ – ವಿಪಕ್ಷವೋ ಅನ್ನುವ ಮೀಮಾಂಸೆಯೂ ಇರಲಿಲ್ಲ. ಮಹಾಲನೋಬಿಸ್ ಮಾದರಿಯೇ? ಬ್ರಹ್ಮಾನಂದ ಮಾದರಿಯೇ? ಅನ್ನುವ ಚರ್ಚೆಯೂ ಇರಲಿಲ್ಲ. ಅರ್ಥನೀತಿಯು ಈಗ ಬಿಹಾರ್ ಮಾದರಿಯೇ? ಗುಜರಾತ್ ಮಾದರಿಯೇ? ಅಥವಾ ತಮಿಳನಾಡು ಮಾದರಿಯೇ ಎಂದು ಚರ್ಚಿಸುವ ಕಾಲವಾಗಿತ್ತು.

ಆರ್ಥಿಕ ಬಿಕ್ಕಟ್ಟು ವಿಶ್ವವ್ಯಾಪ್ತಿಯಾಗಿ ಬೆಳೆದು, ವ್ಯಾಪಾರಗಳ ಮೇಲೆ ಪ್ರಭಾವವನ್ನು ಬೀರಿತ್ತು. ನಮ್ಮ ವಿತ್ತವ್ಯವಸ್ಥೆಯ ಬಗ್ಗೆ ಹಿಂದೆ ಅಂದುಕೊಂಡ ವಿಚಾರಗಳು ಈ ಕಾಲಕ್ಕಲ್ಲ ಅನ್ನುವ ಗ್ರಹಿಕೆಯೂ ಇತ್ತು. ವಿವಿಧ ವಿಚಾರಗಳಲ್ಲಿ ಅನಿಶ್ಚಿತತೆಯಿತ್ತು. ರಾಜ್ಯಗಳು ಶಿಸ್ತನ್ನು ಪಾಲಿಸುತ್ತಾ ತಮ್ಮ ಆರ್ಥಿಕ ಪರಿಸ್ಥಿತಿಗಳನ್ನು ಅಭಿವೃದ್ಧಿಯ ಮಾರ್ಗದಲ್ಲಿ ನಡೆಸುತ್ತಿದ್ದುವು. ಅದೇ ಸಮಯಕ್ಕೆ ಕೇಂದ್ರದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ.

‘ಈ ಹಿನ್ನೆಲೆಯಲ್ಲಿ ಕೇಂದ್ರ – ರಾಜ್ಯಗಳ ನಡುವಿನ ಸಂಬಂಧಗಳನ್ನು ಹೊಸ ಸಮತೋಲನಕ್ಕೆ ಒಯ್ಯುವುದು ಹದಿನಾಲ್ಕನೇ ಹಣಕಾಸು ಆಯೋಗದ ತುರ್ತು ಕರ್ತವ್ಯವಾಗಿತ್ತು. ಹಣಕಾಸು ಆಯೋಗದ ಅಧ್ಯಕ್ಷ ಎಲ್ಲ ರಾಜಕೀಯ ಪಕ್ಷಗಳು ಒಪ್ಪುವ ಮತ್ತು ಗೌರವಿಸುವ ವ್ಯಕ್ತಿಯಾಗಿರಬೇಕು.’ ಎಂದರು.

ಇದಾದ ಕೆಲದಿನಗಳಲ್ಲಿ ಚಿದಂಬರಂ ವಿತ್ತಮಂತ್ರಿಯಾದರು. ನಂತರ ಏನೂ ಸದ್ದಿರಲಿಲ್ಲ. ನವಂಬರಿನಲ್ಲಿ ಅವರು ಫೋನ್ ಮಾಡಿ ‘14ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ಅಧೀಕೃತವಾಗಿ ಆಹ್ವಾನಿಸುತ್ತಿದ್ದೇನೆ. ಹಣಕಾಸು ಆಯೋಗದ ಮಿಕ್ಕ ಸದಸ್ಯರ ಪಟ್ಟಿ, ಅದರ ವಿಧಿವಿಧಾನಗಳನ್ನು ಚರ್ಚಿಸಲು ಬನ್ನಿ’ ಎಂದರು. ಪ್ರಧಾನಮಂತ್ರಿಗಳ ಜೊತೆ ಮಾತುಕತೆಯಾಗಿದ್ದರಿಂದ, ‘ನೀವು ಹೇಗಂದರೆ ಹಾಗೆ.’ ಅಂತ ಒಂದು ಮಾತಲ್ಲಿ ಮುಗಿಸಿದೆ. ಜನವರಿ 2013ರಲ್ಲಿ ಆಯೋಗ ರಚನೆಯಾಯ್ತು. ಅವಧಿ ಅಕ್ಟೋಬರ್ 2014ರವರೆಗಿತ್ತು. 10ನೇ ಆಯೋಗದವರೆಗೂ ರಾಜಕೀಯ ನಾಯಕರು, ಮಾಜಿ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿದ್ದರು. ಒಬ್ಬ ನಿವೃತ್ತ ನ್ಯಾಯಾಧೀಶ, ಒಬ್ಬ ಮಾಜಿ ಮಹಾಲೆಕ್ಕಪರಿಶೋಧಕರೂ ಅಧ್ಯಕ್ಷರಾಗಿದ್ದರು.

ನಮ್ಮ ಆಯೋಗದಲ್ಲಿ ಪ್ರೋಫೆಸರ್ ಗೋವಿಂದ ರಾವು, ಪ್ರೋಫೆಸರ್ ಸುದೀಪ್ತೋ ಮಂಡಲ್, ಮತ್ತು ಪ್ರೋಫೆಸರ್ ಅಭಿಜಿತ್ ಸೇನ್ ಇದ್ದರು. ಮೂವರೂ ಆರ್ಥಿಕ ರಂಗದ ದಿಗ್ಗಜರು. ಐಎಎಸ್ ಅಧಿಕಾರಿಯಾದ ಸುಷ್ಮಾ ನಾಥ್ (ವಿತ್ತ ಕಾರ್ಯದರ್ಶಿ) ಕೂಡಾ ಸದಸ್ಯರಾಗಿದ್ದರು. ಆಯೋಗದ ಸಲಹೆಯ ಮೇರೆಗೆ ಡಾ.ಪಿನಾಕಿ ಚಕ್ರವರ್ತಿಯವರನ್ನು ಆರ್ಥಿಕ ಸಲಹೆಗಾರರಾಗಿ ಸರ್ಕಾರ ನೇಮಿಸಿತು. ಕೆಲಸಕ್ಕಿಳಿಯುವ ಮುನ್ನ ನಾವು ಒಮ್ಮೆ ಮಾತಾಡಿಕೊಂಡೆವು. ‘ನಾವು ಎಷ್ಟು ಮೌಲಿಕವಾದ ಸಲಹೆಗಳನ್ನು ನೀಡಿದರೂ ಎಲ್ಲರನ್ನೂ ಸಮಾನವಾಗಿ ಖುಷಿಪಡಿಸುವುದು ಆಗುವ ಕೆಲಸವಲ್ಲ. ಆದರೆ ಕೆಲವರಿಗೆ ಸಂತೋಷ, ಕೆಲವರಿಗೆ ದುಃಖ ಆಗದಿರುವಂತೆ ಅಸಮಾಧಾನವನ್ನು ಎಲ್ಲರಿಗೂ ಸಮಾನವಾಗಿ ಹಂಚೋಣ’ ಎಂದು ಲಘುವಾಗಿ ಹೇಳಿದೆ.

ಸರ್ಕಾರ ನಮಗೆ ನೀಡಿದ್ದ ಉಲ್ಲೇಖದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧಗಳು ರಾಜಕೀಯ ಮತ್ತು ಆರ್ಥಿಕವಾಗಿ ಹೇಗೆ ಮೂಲಭೂತವಾಗಿ ಬದಲಾಗುತ್ತಿವೆ ಎಂಬುದನ್ನು ಸೂಚಿಸಿತ್ತು. ಆಯೋಗದ ಕೆಲಸದ ಮೂಲಸ್ವರೂಪ ಬದಲಾಗಿರಲಿಲ್ಲ. ಆದರೆ, ನಾಲ್ಕು ವಿಚಾರಗಳು ಭಿನ್ನವಾಗಿದ್ದುವು. ಒಂದು: ಪಂಚವಾರ್ಷಿಕ ಯೋಜನೆ ಮತ್ತು ಕೇಂದ್ರೀಯ ಯೋಜನಾ ಕಾರ್ಯಕ್ರಮಗಳಿಗೆ ಎಷ್ಟು ಅನುದಾನವನ್ನು ಕಾಪಿಡಬೇಕು ಎನ್ನುವ ಉಲ್ಲೇಖವಿರಲಿಲ್ಲ. ಹೀಗಾಗಿ, ಯೋಜನೆಗಳ ಖರ್ಚು ನಮ್ಮ ಪರಿಗಣನೆಗೆ ಮೀರಿದ್ದೆಂದು ನಾವು ಬಿಟ್ಟುಕೊಡಬೇಕಿರಲಿಲ್ಲ. ಎರಡು: ಹಿಂದಿನ ಆಯೋಗಗಳು 1971ರ ಜನಸಂಖ್ಯೆಯನ್ನು ಪರಿಗಣಿಸಿ ವರದಿಯನ್ನು ರೂಪಿಸಬೇಕಿತ್ತು. ನಮ್ಮ ಉಲ್ಲೇಖದಲ್ಲಿ 1971ರ ಜನಸಂಖ್ಯೆಯ ಆಧಾರದ ಜೊತೆ ಜನಸಂಖ್ಯೆಯ ಬದಲಾವಣೆಯನ್ನೂ ನಾವು ಪರಿಗಣಿಸಬಹುದಾಗಿತ್ತು. ಮೂರು: ರಾಜ್ಯಗಳು ನಡೆಸುವ ಸಾರ್ವಜನಿಕ ಸಂಸ್ಥೆಗಳ ಮೇಲಾಗುವ ಖರ್ಚುಗಳನ್ನು ಪರಿಗಣಿಸಬೇಕೆನ್ನುವ ಮಾತು ಹಿಂದಿನ ಉಲ್ಲೇಖಗಳಲ್ಲಿತ್ತು. ಈ ಬಾರಿಯ ಉಲ್ಲೇಖದಿಂದ ಕೇಂದ್ರದ ಸಾರ್ವಜನಿಕ ಸಂಸ್ಥೆಗಳ ಬಗೆಗೂ ಆಯೋಗ ಟಿಪ್ಪಣಿ ಮಾಡಬಹುದಾಗಿತ್ತು. ನಾಲ್ಕು: ಆರ್ಥಿಕ ಜವಾಬ್ದಾರಿಯ ಕಾನೂನಿಗೆ ಮಾಡಬೇಕಾದ ಸುಧಾರಣೆಗಳನ್ನೂ ಸೂಚಿಸಬೇಕು.

ಯುಪಿಎ ಸರ್ಕಾರ ನೇಮಿಸಿದ ಮತ್ತು ಎನ್‌ ಡಿ ಎ ಸರ್ಕಾರ ಒಪ್ಪಿದ, ಹದಿನಾಲ್ಕನೇ ಹಣಕಾಸು ಆಯೋಗದ ಈ ಉಲ್ಲೇಖ ಪತ್ರ ಕೇಂದ್ರ ಮತ್ತು ರಾಜ್ಯಗಳ ಸಂಬಂಧವನ್ನು ಮೂಲಭೂತವಾಗಿ ಬದಲಾಯಿಸುವಂತಿತ್ತು. ರಾಜಕೀಯ ಸಂದರ್ಭ, ಪ್ರಗತಿಯ ಪರಿಭಾಷೆಯ ಚರ್ಚೆ ಅಭೂತಪೂರ್ವ ಆಯಾಮಗಳನ್ನು ಪಡೆಯುತ್ತಿರುವ ಪರಿಸ್ಥಿತಿಯಲ್ಲಿ ನಾವು ಕೆಲಸ ಪ್ರಾರಂಭಿಸಿದೆವು. ರಾಜ್ಯ ಸರ್ಕಾರಗಳು ತಮ್ಮ ಪ್ರಾಧಾನ್ಯತೆಯಂತೆ ಸಮರ್ಪಕ ಸಾಂಸ್ಥಿಕ ಮಾದರಿಗಳನ್ನು ಅಳವಡಿಸಿಕೊಂಡಿದ್ದರೆಂದು ನಮಗೆ ಗುಜರಾತ್, ಬಿಹಾರ್, ತಮಿಳನಾಡು ರಾಜ್ಯಗಳ ಜೊತೆಗಿನ ಚರ್ಚೆಯಲ್ಲಿ ತಿಳಿಯಿತು. ಸರ್ಕಾರ-ಮಾರುಕಟ್ಟೆಗಳ ಸಮತೋಲನದಲ್ಲಿ ಆಗಿರುವ ಬದಲಾವಣೆಯನ್ನು ಇದು ಗುರುತಿಸಿತ್ತು. ಕೇಂದ್ರ ಸರ್ಕಾರದ ತೆರಿಗೆಯ ಪಾಲಿಗಿಂತ ರಾಜ್ಯ ಮಟ್ಟದಲ್ಲಿ ಖಾಸಗಿ ಹೂಡಿಕೆಗಳು ಬರುವಂತೆ ರೂಪಗೊಳ್ಳುವ ನೀತಿಗಳು ಹೆಚ್ಚಿನ ಮಹತ್ವ ಹೊಂದಿದ್ದವು. ಸಾರ್ವಜನಿಕ ಸೇವೆಗಳನ್ನು ನೀಡಬೇಕಾದ ರೀತಿ ಮತ್ತು ಗುಣಮಟ್ಟದ ನಿರೀಕ್ಷೆಗಳೂ ಭಿನ್ನವಾಗಿದ್ದುವು. ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಕೇಂದ್ರ ರೂಪಿಸಿದ ಸೇವೆಗಳು ರಾಜ್ಯ ಮಟ್ಟದಲ್ಲಿ ಒಪ್ಪಿತವಾಗುತ್ತಿರಲಿಲ್ಲ.

ಜಾಗತೀಕರಣವಾದ ಹಿನ್ನೆಲೆಯಲ್ಲಿ ಕೇಂದ್ರ-ರಾಜ್ಯದ ಸಂಬಂಧಗಳ ಪುನರ್ವಿಮರ್ಶೆ ಆಗಬೇಕು. ಪರಿಸರಕ್ಕೆ ಸಂಬಂಧಿಸಿದ ವಿಷಯಗಳು ರಾಜ್ಯಗಳ ಜವಾಬ್ದಾರಿಯಾದರೂ ಅಂತಾರಾಷ್ಟ್ರೀಯ ಒಪ್ಪಂದಗಳಲ್ಲಿ ಕೇಂದ್ರವೇ ಭರವಸೆಗಳನ್ನು ಕೊಡಬೇಕಿತ್ತು. ಸಹಸ್ರಮಾನ ಅಭಿವೃದ್ಧಿ ಗುರಿಗಳನ್ನು ಕೇಂದ್ರವೇ ಒಪ್ಪಿದ್ದರೂ ಅವುಗಳ ಜವಾಬ್ದಾರಿ ರಾಜ್ಯ ಸರ್ಕಾರಗಳ ಮಡಿಲಿಗೆ ಬಿದ್ದಿದ್ದುವು. ಜಾಗತಿಕ ಮಟ್ಟದ ಬಿಕ್ಕಟ್ಟನ್ನು ನಿಭಾಯಿಸುವ ನೀತಿಗಳನ್ನು ರೂಪಿಸುವ ಅವಕಾಶ ಕೇಂದ್ರಕ್ಕೆ ಬೇಕಿತ್ತು. ವಿದೇಶಿ ಹೂಡಿಕೆಗಳು ನೇರವಾಗಿ ರಾಜ್ಯಗಳಿಗೂ ಬರುತ್ತಿದ್ದುದರಿಂದ, ಜಾಗತಿಕ ಆರ್ಥಿಕ ಏರಿಪೇರುಗಳ ಪರಿಣಾಮವನ್ನು ರಾಜ್ಯಗಳೂ ಎದುರಿಸಬೇಕಿತ್ತು. ಈ ವಿಷಯಗಳು ಹೊಸದಲ್ಲವಾದರೂ ಆಯೋಗದ ಗಮನವನ್ನು ಸೆಳೆದದ್ದು ನಿಜ.

2008ರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೆಲಸವನ್ನು ಪ್ರಾರಂಭಿಸಿದಾಗ ಒಟ್ಟಾರೆ ಆರ್ಥಿಕ ಪರಿಸ್ಥಿತಿ ಇನ್ನೂ ಅತಂತ್ರವಾಗಿಯೇ ಇತ್ತು. ಜಗತ್ತಿನ ಅರ್ಥವ್ಯವಸ್ಥೆ ಸ್ಥಿರತೆ ಮತ್ತು ಹೊಸ ಸಮತೋಲನವನ್ನು ಇನ್ನೂ ಕಂಡುಕೊಂಡಿರಲಿಲ್ಲ. ಕಷ್ಟಕಾಲ ಮುಗಿದಂತೆ ಕಂಡರೂ ಉತ್ಕರ್ಷದ ಚಿಹ್ನೆಗಳು ಕಾಣಲಿಲ್ಲ. ಕೇಂದ್ರ ಮತ್ತು ರಾಜ್ಯದ ವಿತ್ತೀಯ ಪರಿಸ್ಥಿತಿಯೂ ಭಿನ್ನವಾಗಿತ್ತು. ವಿತ್ತೀಯ ಜವಾಬ್ದಾರಿಯ ಕಾಯ್ದೆಯನ್ನು ಪಾಲಿಸುವುದು ಕೇಂದ್ರಕ್ಕೆ ಕಷ್ಟವಾಗಿತ್ತು. ಆದರೆ ರಾಜ್ಯ ಸರ್ಕಾರಗಳು ತಮ್ಮ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಂಡು ಸಶಕ್ತರಾಗಿರುವಂತೆ ಕಾಣುತ್ತಿತ್ತು. ಗಮ್ಮತ್ತಿನ ಮಾತೆಂದರೆ ಕೇಂದ್ರ ಸರ್ಕಾರದಡಿಯಿರುವ ಸಂವಿಧಾನಬದ್ಧ ಕಾರ್ಯಗಳಿಗಲ್ಲದೇ ರಾಜ್ಯ ಮತ್ತು ಸಮಾನಾಂತರ ಪಟ್ಟಿಯಲ್ಲಿರುವ ಕಾರ್ಯಕ್ರಮಗಳ ಮೇಲಾಗುತ್ತಿದ್ದ ಖರ್ಚಿನಿಂದ ಹಣಕಾಸಿನ ಪರಿಸ್ಥಿತಿ ಉಲ್ಬಣಗೊಂಡಿತ್ತು. ರಾಜ್ಯಗಳಿಗೆ ಕೊಡುವ ಅನುದಾನವನ್ನು ಹೆಚ್ಚಿಸುವುದಕ್ಕೆ ಕೇಂದ್ರದ ಹಣಕಾಸು ಪರಿಸ್ಥಿತಿ ಅಡ್ಡಗಾಲು ಹಾಕಿತ್ತು.

ನಮ್ಮ ಮುಂದೆ ದೊಡ್ಡ ದ್ವಂದ್ವವಿತ್ತು. ನೀತಿ ನಿರೂಪಣೆಯ ಸ್ವಾಯತ್ತತೆ ಮತ್ತು ಸಂಪನ್ಮೂಲದ ಹೆಚ್ಚಿನ ಪಾಲನ್ನು ರಾಜ್ಯಗಳು ಕೇಳುತ್ತಿದ್ದ ಹೊತ್ತಿನಲ್ಲಿ ಹೆಚ್ಚುವರಿ ಅನುದಾನ ನೀಡುವ ಆರ್ಥಿಕ ಬಲ ಕೇಂದ್ರ ಸರ್ಕಾರಕ್ಕಿರಲಿಲ್ಲ. ಸಂವಿಧಾನದ ಆಶಯ ಮತ್ತು ದಕ್ಷತೆಯ ದೃಷ್ಟಿಯಿಂದ ರಾಜ್ಯಗಳ ಪಾತ್ರ ಹೆಚ್ಚಾಗಬೇಕೆನ್ನುವುದರಲ್ಲಿ ಅನುಮಾನವಿರಲಿಲ್ಲ. ಒಟ್ಟಾರೆ ಬಟವಾಡೆಯಲ್ಲಿ ಹಣಕಾಸು ಆಯೋಗದ ಬಟವಾಡೆ ಮತ್ತು ಮಿಕ್ಕ ಬಟವಾಡೆಗಳು ಸೇರಿರುವ ಕಾಲಕ್ಕೆ ಅಧಿಕ ಆರ್ಥಿಕ ಹೊರೆಯಿಲ್ಲದೆ ನೀತಿ ರೂಪಿಸುವಲ್ಲಿ ರಾಜ್ಯಗಳ ಪಾತ್ರವನ್ನು ಹೆಚ್ಚಿಸುವ ವಿಧಾನವೊಂದನ್ನು ಕಂಡುಕೊಳ್ಳುವುದೇ ಸವಾಲಾಗಿತ್ತು.

ಆಯೋಗದ ಕೆಲಸವನ್ನು ಮೂರು ಘಟ್ಟಗಳಲ್ಲಿ ಕೈಗೊಂಡೆವು. ಅಧ್ಯಯನ-ಚಿಂತನೆಯ ಮೂಲಕ ನಿಭಾಯಿಸಬೇಕಾದ ಸವಾಲುಗಳನ್ನು ಗುರುತಿಸುವುದು ಮೊದಲ ಘಟ್ಟ. ರಾಜ್ಯ ಸರ್ಕಾರ, ನಾಯಕರು ಮತ್ತು ಕೇಂದ್ರೀಯ ಇಲಾಖೆಗಳನ್ನು ಸಂದರ್ಶಿಸಿ ಅವರ ಮಾತನ್ನು ಆಲಿಸಿ ಅರ್ಥಮಾಡಿಕೊಳ್ಳುವುದು ಎರಡನೆಯ ಘಟ್ಟ. ಮೇಲಿನೆರಡೂ ಪ್ರಕ್ರಿಯೆಗಳು ನೀಡುವ ಒಳನೋಟಗಳ ಆಧಾರದ ಮೇಲೆ ಆಗಬೇಕಾದ ಸೂತ್ರೀಕರಣವನ್ನು ಚರ್ಚಿಸಿ ಒಮ್ಮತಕ್ಕೆ ಬರುವುದು ಮೂರನೇ ಘಟ್ಟ. ಹಿಂದಿನ ಆಯೋಗಗಳಂತೆ ನಾವೂ ಹೊಸ ಅಧ್ಯಯನಗಳನ್ನು ಮಾಡಿಸಿ ತಜ್ಞರ ಅಭಿಪ್ರಾಯಗಳನ್ನು ಸ್ವೀಕರಿಸಲು ನಿರ್ಧರಿಸಿದೆವು. ದಕ್ಷಿಣ ಆಫ್ರಿಕಾ, ಚೀನಾ ಮತ್ತು ಇಂಡೋನೇಶಿಯಾದಂತಹ ಪ್ರಮುಖ ದೇಶಗಳ ಅನುಭವಗಳನ್ನು ಗ್ರಹಿಸುವುದೂ ಮುಖ್ಯವಾಗಿತ್ತು. ಕೇಂದ್ರ–ರಾಜ್ಯಗಳ ನಡುವಿನ ಆರ್ಥಿಕ ಸಂಬಂಧಗಳ ಬಗ್ಗೆ 1970 ಮತ್ತು 80ರಲ್ಲಿ ಮಾಡಿದ ಅಧ್ಯಯನದಿಂದ ಒಂದು ಮಟ್ಟದ ತಿಳಿವಳಿಕೆಯಿತ್ತು. 90ರ ಆರ್ಥಿಕ ಸುಧಾರಣೆಯ ಹಿನ್ನೆಲೆಯಲ್ಲಿ ಕೇಂದ್ರ-ರಾಜ್ಯಗಳ ನಡುವಣ ಸಮತೋಲನ ಬದಲಾಗಿತ್ತು. ಬಹುಸ್ತರದ ಯೋಜನೆಯ ಹಿನ್ನೆಲೆಯಲ್ಲಿ ವಿವಿಧ ಕೋನಗಳಿಂದ ನೋಡಿದಾಗ ರಾಜ್ಯದ ವ್ಯಾಪ್ತಿಯನ್ನು ವಿಸ್ತರಿಸಿ, ಕೇಂದ್ರದ ಮೇಲಿನ ಅವಲಂಬನೆ ಕಮ್ಮಿ ಮಾಡಬೇಕೆನ್ನಿಸಿತ್ತು. ಆರೋಗ್ಯಕರವಾದ ಪೈಪೋಟಿಯಿಂದ ರಾಜ್ಯಗಳ ಪ್ರಗತಿ ಎಂದು ನಾನು ನಂಬಿದ್ದೆ.

ಯೋಗದ ಮುಂದೆ ಎಷ್ಟೋ ಪ್ರಶ್ನೆಗಳು.

ಕೇಂದ್ರ ಮತ್ತು ರಾಜ್ಯಗಳ ಅವಶ್ಯಕತೆಗಳು ಭಿನ್ನ. ಅದಕ್ಕೆ ಅವಶ್ಯ ನಿಧಿಗಳಿವೆಯಾ? ಈ ಬಗ್ಗೆ ಹಿಂದಿನ ಅಧ್ಯಯನದ ವರದಿಗಳು ನಮಗೆ ಉಪಯುಕ್ತವೇ? ರಾಷ್ಟ್ರೀಯ ಅಭಿವೃದ್ಧಿ ಮಂಡಳಿ, ಯೋಜನಾ ಆಯೋಗಗಳು ಕೇಂದ್ರ – ರಾಜ್ಯಗಳ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತದಾ? ವಿದ್ಯೆ, ವೈದ್ಯಕೀಯ, ಉದ್ಯೋಗಗಳ ಯೋಜನೆಗಳನ್ನು ತಯಾರಿಸುವ ಪರಿಜ್ಞಾನ ರಾಜ್ಯಗಳಲ್ಲಿವೆಯೇ ಅಥವಾ ಕೇಂದ್ರದಲ್ಲಿಯೇ? ಕಾಡು, ಸ್ಪೆಕ್ಟ್ರಂ ಹರಾಜು, ಕಲ್ಲಿದ್ದಲ ಗಣಿಗಳ ಹಂಚುವಿಕೆಯ ವಿಷಯದಲ್ಲಿ ಕೇಂದ್ರದ ಉಪಕ್ರಮಗಳು ರಾಜ್ಯಗಳನ್ನು ಹೇಗೆ ಪ್ರಭಾವಿಸಬಹುದು? ಯಾವುದಕ್ಕೆಷ್ಟು ಮೀಸಲಿಡಬೇಕೆಂದು ಆಯೋಗ ನಿರ್ಧರಿಸಲು ಕ್ರಮವೇನು? ಹೀಗೆ ಮೂಲಭೂತ ಪ್ರಶ್ನೆಗಳಿದ್ದುವು. ಮೊದಲು ನಾವು ಚರ್ಚೆ ಕೈಗೊಂಡೆವು. ಸಮಾನಾಂತರವಾಗಿ ಹಣಕಾಸು, ವಿತ್ತೀಯ, ಜನಸಂಖ್ಯೆಯ ಮಾಹಿತಿಯನ್ನು ರಾಜ್ಯಸರ್ಕಾರಗಳು, ಕೇಂದ್ರ, ಮತ್ತು ಮಹಾಲೆಕ್ಕಪರಿಶೋಧಕರಿಂದ ಸಂಗ್ರಹಿಸಿದೆವು. ನಮ್ಮ ಸಚಿವಾಲಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದರೆ ನಾವು ಚರ್ಚೆಯನ್ನು ಮುಂದುವರೆಸಿದ್ದೆವು.

ಆಯೋಗದಲ್ಲಿ ನಮಗೆ ಇಂಗ್ಲೀಷು ಮತ್ತು ಹಿಂದಿಯಲ್ಲಿ ವ್ಯವಹರಿಸುವ ಸವಲತ್ತಿತ್ತು. ಅನೇಕ ರಾಜ್ಯಗಳಿಗೆ ಭಿನ್ನ ಅಧಿಕೃತ ಭಾಷೆಗಳಿದ್ದುವು. ರಾಜಕೀಯ ನಾಯಕರು ಮತ್ತು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಭಾಷೆಯಲ್ಲಿ ಸ್ಪಂದಿಸುತ್ತಿದ್ದರು. ನಮ್ಮಲ್ಲಿ ಹದಿನಾಲ್ಕು ರಾಷ್ಟ್ರೀಯ ಭಾಷೆಗಳಿದ್ದರೂ, ರಾಜ್ಯಗಳ ಮಟ್ಟದಲ್ಲಿ 36 ಅಧಿಕೃತ ಭಾಷೆಗಳಿವೆ. ನಾಲ್ಕಕ್ಕಿಂತ ಹೆಚ್ಚು ಅಧಿಕೃತ ಭಾಷೆಗಳು ಜಮ್ಮು-ಕಶ್ಮೀರ, ಮೇಘಾಲಯ ಮತ್ತು ಸಿಕ್ಕಿಂಗಳಲ್ಲಿವೆ. ಕೆಲವು ರಾಜ್ಯಗಳು ಪ್ರಪಂಚದ ಅರ್ಧದಷ್ಟು ದೇಶಗಳಿಗಿಂತ ಹೆಚ್ಚಿನ ಜನಸಂಖ್ಯೆ ಮತ್ತು ವಿಸ್ತೀರ್ಣವನ್ನು ಹೊಂದಿವೆ. ಪ್ರಗತಿಯ ಅಸಮಾನತೆ, ಭೌಗೋಳಿಕ, ಧಾರ್ಮಿಕ, ಸಾಮಾಜಿಕ ವೈವಿಧ್ಯತೆ, ಸಾಂಸ್ಕೃತಿಕ ಮತ್ತು ಮನೋಧರ್ಮದ ವಿಭಿನ್ನತೆ, ಎಲ್ಲವನ್ನೂ ನಾವು ಗುರುತಿಸಿದ್ದೆವಾಗಲಿ ಭಾಷೆಯ ಕಷ್ಟವನ್ನು ನಿರೀಕ್ಷಿಸಿರಲಿಲ್ಲ.

ಆಯೋಗದ ಕೆಲಸದಲ್ಲಿ ಅತ್ಯಂತ ಕಷ್ಟದ್ದು ರಾಜ್ಯಗಳ ಯಾತ್ರೆಯಾಗಿತ್ತು. ಹೋಗಬೇಕಿರುವ ರಾಜ್ಯದ ಆರ್ಥಿಕ ಸ್ಥಿತಿಗತಿಯನ್ನು ಮೊದಲೇ ಪರಿಶೀಲಿಸಿ, ಮುಖ್ಯಲೆಕ್ಕಪರಿಶೋಧಕರ ಭೇಟಿಯ ನಂತರ ರಾಜ್ಯಕ್ಕೆ ಹೋಗುತ್ತಿದ್ದೆವು. 28 ಭಿನ್ನ ರಾಜ್ಯಗಳಿಗೆ ಭೇಟಿ ಕೊಡಬೇಕಿತ್ತು. ನಡುವೆ ಆಂಧ್ರಪ್ರದೇಶದ ವಿಭಜನೆಯಿಂದ, ಈ ಸಂಖ್ಯೆ 29ಕ್ಕೇರಿತು. ಪ್ರತಿ ರಾಜ್ಯದಲ್ಲೂ ಕನಿಷ್ಟ ಎರಡು ದಿನಗಳನ್ನು ಕಳೆದೆವು. ಪ್ರತಿ ರಾಜಧಾನಿಯಲ್ಲಿ ಕನಿಷ್ಟ ನಾಲ್ಕು ಸಭೆಗಳನ್ನು ಕೈಗೊಂಡೆವು. ರಾಜ್ಯ ಸರ್ಕಾರ, ರಾಜಕೀಯ ಪಕ್ಷಗಳು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ವ್ಯಾಪಾರೋದ್ಯಮ ಹೀಗೆ ಎಲ್ಲರೊಂದಿಗೂ ಚರ್ಚಿಸಿದೆವು. ರಾಜ್ಯಸರ್ಕಾರ ಮತ್ತು ಮುಖ್ಯಮಂತ್ರಿಗಳ ಜೊತೆಗಿನ ಸಭೆ ಅತ್ಯಂತ ಮಹತ್ವದ್ದಾಗಿತ್ತು. ಅಲ್ಲಿ ಮಂತ್ರಿಮಂಡಲದ ಸದಸ್ಯರು, ಉನ್ನತಾಧಿಕಾರಿಗಳೂ ಇರುತ್ತಿದ್ದರು. ನಮ್ಮ ಉಲ್ಲೇಖವನ್ನು ಮೀರಿದ ಹಲವು ವಿಷಯಗಳು ಇಲ್ಲಿ ಬರುತ್ತಿತ್ತು. ಆ ಕಾಳಜಿಗಳನ್ನೂ ಆಲಿಸಿದೆವು. ಅತಾರ್ಕಿಕ ಮತ್ತು ಅಸಮಂಜಸ ಬೇಡಿಕೆಗಳನ್ನೂ ಎದುರಿಸಬೇಕಿತ್ತು. ಆದರೆ ಆ ವಿಷಯಗಳ ಬಗ್ಗೆ ನಾವು ನಿಲುವನ್ನು ವ್ಯಕ್ತಪಡಿಸಿ ವಾದಿಸಲು ಸಾಧ್ಯವಿದ್ದಿಲ್ಲ. ತಾಳ್ಮೆಯಿಂದ ಕೇಳಿಸಿಕೊಂಡೆವು. ಕಾಟಾಚಾರಕ್ಕೆ ನಾವು ಆ ಮಾತನ್ನು ಕೇಳದೇ, ನಿಜಕ್ಕೂ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವತ್ತ ಶ್ರದ್ಧೆ ತೋರಿಸಿದೆವು.

ಮುಖ್ಯಮಂತ್ರಿಗಳ ಬೇಡಿಕೆಗಳು ಬೇಡಿಕೆಗಳಾಗಿರದೇ ರಾಜ್ಯದ ಜನತೆಗೆ ಕೊಡುತ್ತಿದ್ದ ಸಂದೇಶದಂತಿತ್ತು. ಸಮರ್ಪಕ, ನ್ಯಾಯಸಮ್ಮತ ಬೇಡಿಕೆಯ ಪ್ರಶ್ನೆಯಿರಲಿಲ್ಲ. ನಾವು ಈ ವಿಚಾರಗಳನ್ನು ಆಲಿಸಿದೆವು ಮಾತ್ರ. ಸ್ಪಷ್ಟೀಕರಣಗಳನ್ನು ನಮ್ಮ ಅಧಿಕಾರಿಗಳ ಮೂಲಕ ಪ್ರತ್ಯೇಕವಾಗಿ ಕೇಳುತ್ತಿದ್ದೆವು.

ಮೂಲಭೂತ ವಿಷಯಗಳಲ್ಲದೇ ಪ್ರಾಸಂಗಿಕ ಮತ್ತು ಹೆಚ್ಚುವರಿ ವಿಷಯಗಳನ್ನೂ ಪರಿಶೀಲಿಸಿದೆವು. ನಮ್ಮ ಕೆಲಸದ ಸಮಗ್ರತೆಗೆ ಅಥವಾ ಒಕ್ಕೂಟ ವ್ಯವಸ್ಥೆಗೆ ಹಣಕಾಸಿನ ಸಂಬಂಧವಿದ್ದರೆ ಮಾತ್ರ ನಮ್ಮ ಉಲ್ಲೇಖದ ‘ಇತರೆ ವಿಚಾರಗಳ’ ಬಗ್ಗೆ ಟಿಪ್ಪಣಿ ಮಾಡಬೇಕೆಂದು ನಿರ್ಧರಿಸಿದೆವು. ಇತರೆಡೆ ಸಮಗ್ರವಾಗಿ ಚರ್ಚಿತವಾಗಿರುವ ವಿಷಯಗಳ ಬಗ್ಗೆ ತಜ್ಞರ ಅಭಿಪ್ರಾಯಕ್ಕೆ ಒಪ್ಪಿಗೆಯನ್ನು ಸೂಚಿಸುವುದೆಂದು ನಿರ್ಧರಿಸಿದೆವು. ಉಲ್ಲೇಖದ ವಿಚಾರಗಳಿಗೆ ಬದ್ಧರಾಗಿರುವುದು ನಮ್ಮ ಆದ್ಯತೆಯಾಗಿತ್ತು. ಕೇಂದ್ರ-ರಾಜ್ಯಗಳಿಗೆ ನ್ಯಾಯವೊದಗಿಸಿ ಸಮಗ್ರ ನಿಲುವು ಕೈಗೊಳ್ಳುವುದು ನಮ್ಮ ಆಶಯವಾಗಿತ್ತು.

ನಾವು ಕೆಲವು ಮಹತ್ವದ ವಿಚಾರಗಳನ್ನು ಕೈಗೆತ್ತಿಕೊಂಡೆವು. ಒಂದು: ಆಗ ಪ್ರತಿಪಾದಿಸಿದ್ದ ಜಿ.ಎಸ್‌.ಟಿ. ಆ ಬಗ್ಗೆ ರಾಜ್ಯಗಳ ನಿಲುವು ಮತ್ತು ರಾಜಕೀಯ ಸಂವೇದನೆಯನ್ನು ಪರಿಗಣಿಸಿ, ಎಷ್ಟು ಆಳ-ವಿಸ್ತಾರಕ್ಕೆ ಹೋಗುತ್ತೇವೆನ್ನುವುದನ್ನು ನಿರ್ಧರಿಸಬೇಕಿತ್ತು. ಎರಡು: ಸಹಸ್ರಮಾನ ಅಭಿವೃದ್ಧಿ ಗುರಿ, ಪರಿಸರ ಇತರ ವಿಷಯಗಳ ಬಗ್ಗೆ ನಾವು ಅಂತಾರಾಷ್ಟ್ರೀಯ ಸ್ತರದಲ್ಲಿರುವ ಒಪ್ಪಂದಗಳ ಪ್ರಭಾವ ಕೇಂದ್ರ-ರಾಜ್ಯಗಳ ಆರ್ಥಿಕ ಸಂಬಂಧದಲ್ಲಿ ಬೀರುವ ಪರಿಣಾಮವನ್ನು ಅಂದಾಜು ಮಾಡಬೇಕಿತ್ತು. ಮೂರು: ಹಣಕಾಸು ಆಯೋಗದ ಜವಾಬ್ದಾರಿ ಕೇಂದ್ರದಿಂದ ರಾಜ್ಯಗಳಿಗೆ ಹಸ್ತಾಂತರವಾಗುವ ಎಲ್ಲ ದೇಣಿಗೆಗೂ ವರ್ತಿಸಬೇಕೇ, ಅದು ಸ್ಥಾಯಿ ಆಯೋಗವಾಗಬೇಕೇ ಎಂಬ ಪ್ರಶ್ನೆಗಳು.

ರಾಜಕೀಯ ಪಕ್ಷಗಳ ಸಭೆಗಳಲ್ಲಿ ಮೂರು ಅಂಶಗಳು ಕಂಡುವು. ಒಂದು: (ಮುಖ್ಯವಾಗಿ ವಾಮ ಪಕ್ಷಗಳಲ್ಲಿ) ಸೈದ್ಧಾಂತಿಕ ನಿಲುವು, ಎರಡು: ರಾಜ್ಯ ಮಟ್ಟದ ರಾಜಕೀಯ ಸಮೀಕರಣ. ಮೂರು: ಪಕ್ಷಗಳಿಗೂ ಮುಖ್ಯಮಂತ್ರಿಗಳಿಗೂ ಇದ್ದ ಸಂಬಂಧಗಳು. ಒಂದು ರಾಜ್ಯದಲ್ಲಿ ವಿರೋಧ ಪಕ್ಷಗಳು ನಮ್ಮ ಸಭೆಗೆ ಬರಲಿಲ್ಲ. ಮತ್ತೊಂದರಲ್ಲಿ ಕಿತ್ತಾಡಿದರು. ಹಲವೆಡೆ ರಾಜ್ಯಗಳಲ್ಲಿ ಪಕ್ಷಗಳು ತಮ್ಮ ಸರ್ಕಾರವನ್ನು ಟೀಕಿಸಿದುವು. ಹೆಚ್ಚಿನ ಸಭೆಗಳಲ್ಲಿ –ಕೇಂದ್ರದ ತೆರಿಗೆಯನ್ನು ರಾಜ್ಯಕ್ಕೆ ವಿತರಿಸುವ ವಿಷಯದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ಏಕಮತವಿತ್ತು. ಹಲವೆಡೆ ರಾಜಕೀಯ ಪಕ್ಷಗಳು ಕಿತ್ತಾಡಬಹುದೆಂದು ಊಹಿಸಿದರೂ, ಸರ್ಕಾರಕ್ಕೆ ಹೆಚ್ಚು ಬೆಂಬಲವಿರುವುದನ್ನು ಆಶ್ಚರ್ಯದಿಂದ ಕಂಡೆವು. ಇದನ್ನು ಒಬ್ಬ ಮುಖ್ಯಮಂತ್ರಿಯಲ್ಲಿ ಎತ್ತಿದೆ. ಆತ, ಆಯೋಗಕ್ಕೆ ನೀಡುವ ಮನವಿ ಪತ್ರವನ್ನು ಮಿಕ್ಕ ಪಕ್ಷಗಳ ಜೊತೆ ಚರ್ಚಿಸಿ, ಅವರ ಸಹಕಾರವನ್ನು ಕೋರಿರುವುದಾಗಿ ಹೇಳಿದರು.

ಸ್ಥಳೀಯ ಸಂಸ್ಥೆಗಳ ಸಭೆಗಳು ನಮಗೆ ಒಳನೋಟಗಳನ್ನು ನೀಡಿದುವು. ಪಂಚಾಯ್ತಿ ಮತ್ತು ನಗರಪಾಲಿಕೆಗಳ ಮುಖ್ಯಸ್ಥರ ಮಸ್ತಕದಲ್ಲಿ ಏನು ಬೇಕೆಂದು ಸ್ಪಷ್ಟ ಅಭಿಪ್ರಾಯವಿತ್ತು. ಆ ರಾಜಕಾರಣಿಗಳು ಜನಸಂಪರ್ಕದಲ್ಲಿದ್ದರು, ಜನರ ಆಶಯಗಳನ್ನು ಚೆನ್ನಾಗಿ ವ್ಯಕ್ತಪಡಿಸಿದ್ದರು. ಆಯಾ ರಾಜ್ಯಗಳ ಅಧಿಕೃತ ಭಾಷೆಯಬಲ್ಲವರು ಮಾತಾಡಿದರು. ಹಲವೆಡೆ ನಾವು ಭಾಷಾಂತರಕ್ಕೆ ಶರಣಾದೆವು. ಮಿಕ್ಕ ಸ್ತರದ ನಾಯಕರಿಗಿಂತ ಹೆಚ್ಚು ತೀಕ್ಷ್ಣವಾಗಿ, ಭಾವುಕರಾಗಿ, ಜ್ಞಾನಿಗಳಾಗಿ, ದೃಢವಾಗಿ, ಸ್ಪಷ್ಟವಾಗಿ ಬೇಡಿಕೆಗಳನ್ನು ಪ್ರಸ್ತುತ ಪಡಿಸಿದರು. ಬಿಹಾರ ಬಂಗಾಲದ ಸ್ಥಳೀಯ ಸಂಸ್ಥೆಗಳ ಬೇಡಿಕೆಗಳು ಸಹಜವಾಗಿ ಮುಂಬೈನ ಬೇಡಿಕೆಗಿಂತ ಭಿನ್ನವಾಗಿತ್ತು. ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳು ಪ್ರಬಲವಾಗಿದ್ದ ಸಂಪ್ರದಾಯವೇ ಇತ್ತು. ಒಂದು ರಾಜ್ಯದ ಮುಖ್ಯಮಂತ್ರಿ – ನಮ್ಮ ರಾಜ್ಯವೇ ಒಂದು ನಗರಪಾಲಿಕೆಯಷ್ಟು ಗಾತ್ರದ್ದು ಇದರಲ್ಲಿ ಎಂಥ ವಿಕೇಂದ್ರೀಕರಣ ಸಾಧ್ಯ? ಎಂದು ನಮ್ಮನ್ನೇ ಕೇಳಿದರು.

ಆಯೋಗದ ಚರ್ಚೆಗಳ ಪರಿ

ಕೇಂದ್ರ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಗುರುತಿಸಿ ಅದನ್ನು ಕೇಂದ್ರ ಮತ್ತು ರಾಜ್ಯಗಳಿಗೆ ಮೀಸಲಾಗಿಡುವ ವಿಷಯ ಚರ್ಚಿಸಿದೆವು. ಇದು ಸಂವಿಧಾನದ ಕಲಮು ಮತ್ತು ಆಶಯಗಳನ್ನು ಅರ್ಥೈಸಿ ನಿರ್ಧಾರ ಮತ್ತು ಕ್ರಮ ಕೈಗೊಳ್ಳಲು ಸರಿಯಾದ ಸ್ತರವನ್ನು ನಿರ್ದೇಶಿಸಿತ್ತು. ನಮ್ಮ ಚರ್ಚೆಗಳು ಮೂಲಭೂತ ವಿಷಯಗಳ ಮೇಲೆ ಕೇಂದ್ರೀಕೃತವಾಗಿದ್ದುವು: ಸಾರ್ವಜನಿಕ, ಖಾಸಗೀ ಮತ್ತು ಅರ್ಹತಾಮಾನ್ಯ ವಸ್ತು-ಸೇವೆಗಳೇನೆಂದು ನಿರ್ದೇಶಿಸಿ ವಿಂಗಡಿಸುವ ಕೆಲಸ; ಬೇಡಿಕೆಗೆ ತಕ್ಕಂತಹ ಸಮತಾವಾದದ ಸೂತ್ರದ ಮೇಲಿನ ವಿತರಣೆ; ಮತ್ತು ರಾಜ್ಯಗಳ ವೈವಿಧ್ಯತೆಯನ್ನು ಗುರುತಿಸುವ ವಿನ್ಯಾಸ ಕ್ರಮ. ಈ ರೂಪಕಲ್ಪನೆಯನ್ನು ನಮ್ಮಲ್ಲಿತ್ತಾದರೂ ನಮ್ಮ ಪ್ರಗತಿಗೆ ಸಹಾಯಕವಾಗಲಿಲ್ಲ. ಹೀಗಾಗಿ – ಕೆಲವರಿಂದ ಆಕ್ಷೇಪಣೆ ಬಂದಾಗ್ಯೂ – ನಮ್ಮ ನಂಬಿಕೆಯಾಧಾರದ ಮೇಲೆ ವರ್ಗೀಕರಣವನ್ನು ಮಾಡುವ ಬಗ್ಗೆ ಟಿಪ್ಪಣಿಯನ್ನು ಕೊಡುವುದೆಂದು ತೀರ್ಮಾನಿಸಿದೆವು.

ಉತ್ತಮ ಅರ್ಥವ್ಯವಸ್ಥೆಗಾಗಿ ಬೇರೆ ವಿಷಯಗಳನ್ನೂ ಆಯೋಗದ ಸಲಹೆಗಳಲ್ಲಿ ಪ್ರಸ್ತಾಪಿಸಬಹುದು. ಪ್ರತಿ ಸಾರಿಯೂ ಆಯೋಗ ರಚಿಸುವಾಗ ರಾಷ್ಟ್ರಪತಿಗಳ ಆದೇಶದಲ್ಲಿ ಈ ವಿವರಗಳಿರುತ್ತವೆ. ಆ ಉಲ್ಲೇಖ ರಾಷ್ಟ್ರಪತಿಗಳು ಆಯೋಗದಿಂದ ಯಾವ ಸಲಹೆಗಳನ್ನು ಬಯಸುತ್ತಾರೆನ್ನುವುದನ್ನು ವಿವರಿಸುತ್ತದೆ.

ಹೀಗೆ ಟಿಪ್ಪಣಿಗಳನ್ನು ನಾವು ಒಂದು ಪಟ್ಟಿಯಲ್ಲಿ ನಮೂದು ಮಾಡಿದೆವು. ಗಮ್ಮತ್ತಿನ ವಿಷಯವೆಂದರೆ – ಸಾಮಾನ್ಯ ಟಿಪ್ಪಣಿಯಲ್ಲಿ ಕೇಂದ್ರದ ಪರವಿದ್ದವರು, ಯೋಜನೆಗಳನ್ನು ಜಾರಿಮಾಡುವ ಕ್ರಮದಲ್ಲಿ ರಾಜ್ಯಗಳ ಪರವಾಗಿ ವಾದಿಸಿದ್ದರು. ರಾಜ್ಯಪರ ಸಾಮಾನ್ಯ ಟಿಪ್ಪಣಿ ಮಾಡಿದವರ ಯೋಜನೆಗಳು ಕೇಂದ್ರದ ಪರವಾಗಿತ್ತು. ಈ ಪ್ರಕ್ರಿಯೆ ನಮ್ಮ ಆಲೋಚನಾ ಕ್ರಮಕ್ಕೆ ಪ್ರಮುಖ ಘಟನೆಯಾಯಿತು. ಅಲ್ಲಿಯವರೆಗೂ ಆಯೋಗದಲ್ಲಿ ಕೇಂದ್ರೀಕರಣ ವಿಕೇಂದ್ರೀಕರಣದ ನಡುವೆ ಮತ್ತು ಆದ್ಯತೆಗಳನ್ನು ಗುರುತಿಸಿ ಸೂಚನೆಗಳನ್ನು ಕೊಡಬೇಕೋ ಅಥವಾ ಜ್ಞಾನಿಗಳೂ, ಆಯೋಗದ ಸದಸ್ಯರೂ ಆದ ನಾವು, ನಮ್ಮ ಗಮನವನ್ನು ತೆರಿಗೆಯನ್ನು ಉಪಯೋಗಿಸುವ ಪ್ರಕ್ರಿಯೆಯ ಬಗ್ಗೆ ಟಿಪ್ಪಣಿ ಮಾಡಬೇಕೋ ಎಂಬುದರ ಬಗ್ಗೆ ಹಂಚಿಹೋಗಿದ್ದೆವು. ಆದರೆ ಟಿಪ್ಪಣಿ ಕಾರ್ಯದ ನಂತರ, ಸಂಸ್ಥಾಗತ ಚೌಕಟ್ಟು ಮತ್ತು ಆ ಚೌಕಟ್ಟಿನಲ್ಲಿ ಕೊಡಬಹುದಾದ ಪ್ರೇರಕ ಅಂಶಗಳ ಮೇಲೆ ಒತ್ತು ನೀಡಿದರೆ, ಅದೇ ವಿತ್ತೀಯ ಸಂಘ ಪರಿಕಲ್ಪನೆಯ ಉಪಕ್ರಮವೆನ್ನಿಸಿತು. ಜನ ಅಂದುಕೊಂಡಷ್ಟು ನಾವು ಜ್ಞಾನಿಗಳಲ್ಲವೆಂದು ಮನವರಿಕೆಯಾಯಿತು!

ಅಂತಾರಾಷ್ಟ್ರೀಯ ಪರಿಸ್ಥಿತಿಗಳ ಅಸ್ಪಷ್ಟತೆ ಮತ್ತು ಸ್ಥಳೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿತ್ತೀಯ ಖೋತಾ ಏರುಪೇರು ಮಾಡುವ ಸ್ವಾತಂತ್ರ್ಯ, ಅದರಿಂದ ಕೇಂದ್ರದ ವಿತ್ತೀಯ ಜವಾಬ್ದಾರಿ, ತೆರಿಗೆಗಳನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಲು ನೇರ ವಿಭಜನೆಯಂತಹ ಸಂಕೀರ್ಣ ವಿಷಯಗಳ ಬಗ್ಗೆ ದೀರ್ಘ ಮತ್ತು ಆಕ್ರೋಶಭರಿತ ಚರ್ಚೆಗಳಾದುವು. ಇದು ಸಹಜವೇ. ಇದಕ್ಕೆ ಸಂಬಂಧಿಸಿದ ಕಾನೂನಿನಲ್ಲಿ ಹೊಂದಾಣಿಕೆಗೆ ಅವಕಾಶವಿರಬೇಕೇ ಎನ್ನುವುದನ್ನು ಪರಿಗಣಿಸಿದೆವು. ಈ ವಿಷಯವಾಗಿ ಜಗತ್ತಿನಲ್ಲಿನ ಉತ್ತಮ ಪ್ರಯೋಗಗಳನ್ನು ಪರಿಶೀಲಿಸಿ ನಮ್ಮಲ್ಲಿ ಅಳವಡಿಸುವ ಸಾಧ್ಯತೆಯನ್ನು ಪರಿಶೀಲಿಸಿದೆವು. ರಾಜ್ಯಗಳಿಗೆ ಮೀಸಲಿಡುವ ಸಂಪನ್ಮೂಲವನ್ನು ವಿವಿಧ ರಾಜ್ಯಗಳಿಗೆ ಹಂಚುವುದಕ್ಕಿರುವ ಸಮತಲ ವಿಭಜನೆಯ ಸೂತ್ರವೇ ಸಂಕೀರ್ಣವಾದದ್ದು. ಹಿಂದುಳಿದ ಪ್ರದೇಶಗಳ ಅಭಿವೃದ್ಧಿ, ಅರ್ಥವ್ಯವಸ್ಥೆಯನ್ನು ಚೆನ್ನಾಗಿ ನಿರ್ವಹಿಸಿದ ರಾಜ್ಯಗಳಿಗೆ ಪುರಸ್ಕಾರ, ಒಳ್ಳೆಯ ನೀತಿ ಪಾಲಿಸಲು ಪ್ರೋತ್ಸಾಹ ಎಲ್ಲ ವೈರುಧ್ಯಗಳನ್ನೂ ಪರಿಗಣಿಸಿ ಒಂದು ಸಮತೋಲನಕ್ಕೆ ನಾವು ಬರಬೇಕು. ಪ್ರತಿಯೊಂದು ನೀತಿಯಲ್ಲೂ ಆಗುವ ಪರಿಣಾಮವನ್ನು ನಾವು ಲೆಕ್ಕಮಾಡಿನೋಡಿದೆವು. ಒಂದು ಸಮಸ್ಯೆಗೆ ಸಮಾಧಾನ ಸಿಕ್ಕರೆ ಅದರಿಂದಲೇ ಮತ್ತೊಂದು ಉದ್ಭವಿಸುತ್ತಿತ್ತು.

ನಮ್ಮ ಸದಸ್ಯರಲ್ಲೊಬ್ಬರು ಸಾಮಾಜಿಕ ಕ್ಷೇತ್ರದ ಖರ್ಚುಗಳಿಗೆ ಸಾಕಷ್ಟು ಆದ್ಯತೆ ನೀಡದೇ ಸರಿಯಾದ ಸಂಕೇತವನ್ನು ನೀಡುತ್ತಿಲ್ಲವೆಂದು ವೀರಾವೇಶದಿಂದ ವಾದಿಸಿದರೂ ತಮ್ಮ ಭಿನ್ನಮತವನ್ನು ದಾಖಲಿಸಲಿಲ್ಲ. ಸಾಮಾಜಿಕ ಆದ್ಯತೆಗಳ ಬಗ್ಗೆ ನಾವು ನಿಲುವನ್ನು ತೆಗೆದುಕೊಳ್ಳಬಾರದೆನ್ನುವುದೇ ಹೆಚ್ಚಿನ ಸದಸ್ಯರ ಅಭಿಮತವಾಗಿತ್ತು.

ಕೇಂದ್ರದ ವಿತ್ತೀಯ ಜವಾಬ್ದಾರಿ ನಿಯಮಗಳು, ಸಂದರ್ಭಾನುಸಾರವಾಗಿ ಬೇಕಾಗುವ ನಿಲುವು-ನಮ್ಯತೆಗೆ ಇರುವ ಪರ-ವಿರೋಧಗಳ ಚರ್ಚೆ ಆಯಿತು. ರಾಜ್ಯಗಳ ಮಟ್ಟದಲ್ಲಿ ವಿತ್ತೀಯ ಜವಾಬ್ದಾರಿಯ ಪಾಲನೆ ಚೆನ್ನಾಗಿ ಆಗಿದ್ದರಿಂದ ಮುಂದಿನ ಹಾದಿಯನ್ನು ಸಾಲದ ಭಾರ, ವಿತ್ತೀಯ ಸಮತೋಲನ, ಮತ್ತು ಆರ್ಥಿಕ ಸುಸ್ಥಿರತೆಯನ್ನು ಪರಿಗಣಿಸಿ ಕಂಡುಕೊಳ್ಳಬೇಕಿತ್ತು. ರಾಜ್ಯಗಳ ವಿತ್ತೀಯ ಸ್ಥಿತಿ ಕೈತಪ್ಪಿಹೋಗದಂತೆ ಕೇಂದ್ರ ಪರಿಶೀಲಿಸಿ ಕಾಯುತ್ತದೆ. ಆದರೆ ಕೇಂದ್ರದ ವಿತ್ತೀಯ ಸ್ಥಿತಿಯನ್ನು ಕಾಯುವವರು ಯಾರು? ಅದಕ್ಕೆ ಕಾನೂನು ಬಿಟ್ಟರೆ ಬೇರೆ ವ್ಯವಸ್ಥೆಯಿಲ್ಲ. ಅದೇ ಕಾಲಕ್ಕೆ, ಪ್ರತಿ ರಾಜ್ಯದ ವಿತ್ತೀಯ ಸ್ಥಿತಿ ಮತ್ತು ಅದಕ್ಕೆ ಕಾರಣಗಳು ಭಿನ್ನವಾದ್ದರಿಂದ ಎಲ್ಲರಿಗೂ ವಿತ್ತೀಯ ಜವಾಬ್ದಾರಿಯ ಸಮಾನಾಂತರ ಗುರಿಯನ್ನು ನೀಡುವುದೂ ಸಮರ್ಪಕವಾಗಿರಲಿಲ್ಲ. ವಿತ್ತೀಯ ಸುಸ್ಥಿರತೆಯಿರುವ ರಾಜ್ಯಗಳಿಗೆ ಹೆಚ್ಚು ಋಣಪಡೆವ ಅವಕಾಶವನ್ನು ಕೊಡಬೇಕೆಂದು ನಿರ್ಧರಿಸಿದೆವು. ರಾಜ್ಯದ ಉತ್ಪಾದಕತೆಗೂ ಋಣಕ್ಕೂ, ಆಯ ಮತ್ತು ಬಡ್ಡಿ ಬಾಧ್ಯತೆಯ ಅನುಪಾತಕ್ಕೆ ಕೊಂಡಿ ಹಾಕಿ ಹೆಚ್ಚಿನ ಋಣ ಪಡೆವ ಅವಕಾಶವನ್ನು ಮಾಡಿಕೊಟ್ಟೆವು.

ರಿಚರ್ಡ್ ಥೇಲರ್ ಮತ್ತು ಕಾಸ್ ಸನ್ಸ್ಟೀನ್ ತಮ್ಮ ಪುಸ್ತಕ ದ ನಡ್ಜ್ ನಲ್ಲಿ ಪ್ರತಿಪಾದಿಸಿದ – “ಬೇರೇನೂ ಆಯ್ಕೆಯಿಲ್ಲದಾಗ” ತತ್ವವನ್ನು ಪ್ರತಿಪಾದಿಸಿದೆವು. ಈ ತತ್ವದಂತೆ ನೀತಿ ರೂಪಕಲ್ಪನೆಯಲ್ಲಿ ಹೊಸ ವಿಚಾರ ಬರದಿದ್ದಾಗ – ನಮ್ಮ ಪ್ರತಿಪಾದನೆಯ ಸೂತ್ರವೇ ಜಾರಿಗೊಳ್ಳುತ್ತದೆ – ಏನೂ ತೋಚದಿದ್ದರೆ ನಾವು ಹೇಳಿದ್ದೇ ಸರಿಯೆನ್ನುವುದು ಇದರ ಸಾರ. ರಾಜ್ಯ ಸರ್ಕಾರಗಳು ತಮ್ಮ ಪಾಲಿಕೆ-ಪಂಚಾಯ್ತಿಗಳಿಗೆ ಸಂಪನ್ಮೂಲಗಳನ್ನು ಹೇಗೆ ಹಂಚಬೇಕು ಎನ್ನುವುದನ್ನು ನಮ್ಮ ಆಯೋಗ ಸೂಚಿಸಬೇಕೋ ಅಥವಾ ರಾಜ್ಯಗಳಿಗೆ ಬಿಟ್ಟು ಕೊಡಬೇಕೋ ಅನ್ನುವ ಬಗ್ಗೆ ತೀವ್ರ ಚರ್ಚೆಯಾಯಿತು. ಕಡೆಗೆ ನಮ್ಮ ವತಿಯಿಂದ ಒಂದು ಸೂತ್ರವನ್ನು ಪ್ರತಿಪಾದಿಸಿ, ರಾಜ್ಯಮಟ್ಟದ ಹಣಕಾಸು ಆಯೋಗಕ್ಕೆ ನಮ್ಮ ಸೂಚನೆಗಳನ್ನು ಅತಿಕ್ರಮಿಸುವ ಅವಕಾಶ ಕೊಟ್ಟೆವು. ಸ್ಥಳೀಯ ಪಾಲಿಕೆ-ಪಂಚಾಯ್ತಿಗಳ ವಿಷಯದಲ್ಲಿ ನಮಗೆ ಅನೇಕ ಸಂಕೀರ್ಣ ವಿಷಯಗಳು ಎದುರಾದುವು. ಸಂವಿಧಾನಬದ್ಧ ಸಂಸ್ಥೆಗಳಾಗಿದ್ದ ಇವುಗಳಲ್ಲಿ ವಿರೋಧಾಭಾಸಗಳು, ಹಿಂದಿನ ಪೂರ್ವನಿರ್ದೇಶನಗಳೂ, ಭಿನ್ನ ಅನುಭವಗಳೂ ಇದ್ದುವು. ಸ್ಥಳೀಯ ಸಂಸ್ಥೆಗಳಗೆ ಹೆಚ್ಚಿನ ಸ್ವಾಯತ್ತತೆ ಮತ್ತು ಅಧಿಕಾರ ಕೊಡುವತ್ತ ನಮ್ಮ ಒಲವಿದ್ದರೂ ಅದನ್ನು ಸಮರ್ಥಿಸಿಕೊಳ್ಳಬಹುದಾದ ಸುಲಭ ಸರಳ ಮಾರ್ಗವನ್ನು ನಾವು ಕಂಡುಕೊಳ್ಳಬೇಕಿತ್ತು.

ನಮ್ಮ ವರದಿಯ ಕರಡಿನ ಬಗೆಗೆ ಅನೇಕ ಚರ್ಚೆಗಳಾದುವು. ಏಪ್ರಿಲ್ 2014ರ ವೇಳೆಗೆ ವರದಿಯ ರೂಪುರೇಷೆ ತಯಾರಾಗಿತ್ತು. ವರದಿಯ ಅಧ್ಯಾಯಗಳನ್ನು ಬರೆಯುವ ಪ್ರಕ್ರಿಯೆಯಲ್ಲಿ ಅನೇಕರ ಪ್ರತಿಭೆಯು ಕೆಲಸಮಾಡಿತು. ನವಂಬರ್ ವೇಳೆಗೆ ಪ್ರತಿ ಅಧ್ಯಾಯದ ಕರಡನ್ನು ಸಚಿವರು ಎಲ್ಲ ಸದಸ್ಯರಿಗೂ ಕೊಟ್ಟರು. ಡಿಸೆಂಬರ್ 5ಕ್ಕೆ ಎಲ್ಲರೂ ವರದಿಯ ಮೇಲೆ ಹಸ್ತಾಕ್ಷರ ಹಾಕುವುದೆಂದು ತೀರ್ಮಾನಿಸಿದೆವು. ಅದರಂತೆ ಏರ್ಪಾಟುಗಳಾದುವು. ಡಿಸೆಂಬರ್ ನಾಲ್ಕಕ್ಕೆ ಒಬ್ಬ ಸದಸ್ಯ ಕೊಟ್ಟ ಭಿನ್ನಮತಪತ್ರದೊಂದಿಗೆ ಆ ದಿನಾಂಕದಂದೇ ವರದಿಯ ಮೇಲೆ ಎಲ್ಲರೂ ಹಸ್ತಾಕ್ಷರ ಹಾಕಿದೆವು.

ನಮ್ಮ ವರದಿಯಲ್ಲಿ ಹೊಸದೇನಿತ್ತು? ನಾವು ಕೇಂದ್ರ-ರಾಜ್ಯಗಳಿಗೆ ನೀತಿಗತ ಸಲಹೆಗಳನ್ನು ಕೊಡಲಿಲ್ಲ. ಕೇಂದ್ರ ನೀಡುವ ವಿವೇಚನಾಯುಕ್ತ ದೇಣಿಗೆಯನ್ನು ಕಮ್ಮಿ ಮಾಡಿ ಸರಕಾರದ ಪ್ರತಿ ಸ್ತರದಲ್ಲೂ ಸಂವಿಧಾನಬದ್ಧ ಕಾರ್ಯನಿರ್ವಹಣೆಗಿರುವ ವಿತ್ತೀಯ ಅವಕಾಶವನ್ನು ಹೆಚ್ಚಿಸಿದೆವು. ಹಾಗೇ ರಾಷ್ಟ್ರವ್ಯಾಪಿ ಪ್ರಭಾವವಿದ್ದ ಕಾರ್ಯಕ್ರಮಗಳಲ್ಲಿ ಕೇಂದ್ರದ ಮಹತ್ವವನ್ನೂ ಗುರುತಿಸಿದೆವು. ನಮ್ಮ ಒಕ್ಕೂಟವ್ಯವಸ್ಥೆಯ ಚೌಕಟ್ಟು ಎಲ್ಲರಿಗೂ ಏಕ ಪರಿಹಾರವಾಗಿ ಪರಿಣಮಿಸದಂತೆ ನೋಡಿಕೊಂಡೆವು. ರಾಜ್ಯಗಳ ಆಡಳಿತದ ಗುಣಮಟ್ಟದಲ್ಲಿ ಹೆಚ್ಚುಕಮ್ಮಿ ಇರಬಹುದಾದರೂ, ಕೇಂದ್ರಕ್ಕೆ ಸಂವಿಧಾನ ಗುರುತಿಸಿದಕ್ಕಿಂತ ಹೆಚ್ಚಿನ ಅರ್ಹತೆ, ಜ್ಞಾನ, ಪ್ರಾಮಾಣಿಕತೆ ಇಲ್ಲವೆಂದು ಭಾವಿಸಿದೆವು. ರಾಜ್ಯಗಳ ವರ್ಗೀಕರಣದಲ್ಲಿ ವಿಶೇಷ ದರ್ಜೆಯನ್ನು ಪರಿಗಣಿಸಲಿಲ್ಲ. ಈಶಾನ್ಯ ರಾಜ್ಯಗಳ ನಡುವಿನ ಮೂಲಸೌಕರ್ಯದ ಅಗತ್ಯಕ್ಕಾಗಿ ಹೊಸ ಸಂಸ್ಥಾಗತ ಏರ್ಪಾಟನ್ನು ಸೂಚಿಸಿದೆವು.

ಕೇಂದ್ರ ಮತ್ತು ರಾಜ್ಯದ ನಡುವಿನ ವಿತ್ತೀಯ ಸಂಬಂಧಗಳು ಹೇಗಿರಬಹುದೆನ್ನುವುದಕ್ಕೆ ಈ ವರದಿ ಹೊಸ ಆಲೋಚನಾ ಚೌಕಟ್ಟನ್ನು ಒದಗಿಸಿತೆಂದು ನಂಬಿದ್ದೇನೆ. ಕೇಂದ್ರ, ರಾಜ್ಯ, ಸ್ಥಳೀಯ ಹೀಗೆ ಸರ್ಕಾರದ ಪ್ರತಿ ಸ್ತರದಲ್ಲೂ ಏಕ ರೀತಿಯ ಜವಾಬ್ದಾರಿ ಇರಬೇಕೆನ್ನುವುದು ನಮ್ಮ ಆಶಯವಾಗಿತ್ತು. ಅದೇ ಕಾಲಕ್ಕೆ ಬಹುಸ್ತರದ ಜವಾಬ್ದಾರಿಯಿದ್ದಲ್ಲಿ ಅದನ್ನು ಗುರುತಿಸಿ ನಿಭಾಯಿಸುವ ಚೌಕಟ್ಟನ್ನು ರೂಪಿಸಬೇಕಿತ್ತು. ಯಾರ ಅಧಿಕಾರ ವ್ಯಾಪ್ತಿ ಮತ್ತು ಜವಾಬ್ದಾರಿ ಎಲ್ಲಿದೆ, ಯಾವ ಜವಾಬ್ದಾರಿಗಳು ಬಹುಸ್ತರದಲ್ಲಿದೆ ಎನ್ನುವುದನ್ನು ಗುರುತಿಸಿವುದು ಕೇಂದ್ರ-ರಾಜ್ಯ ಸರಕಾರಗಳ ಉತ್ತಮ ಸತ್ಸಂಬಂಧಕ್ಕೆ ಸಹಕಾರಿ. ಸಂವಿಧಾನದಲ್ಲಿನ ನಿರ್ದೇಶನ ತತ್ವಗಳು, ರಾಷ್ಟ್ರೀಯ ಆದ್ಯತೆಗಳು ಕೇಂದ್ರಕ್ಕೂ-ರಾಜ್ಯಗಳಿಗೂ ಸಮಾನವಾಗಿ ಅನ್ವಯಿಸುವ ವಿಷಯಗಳಾಗಿವೆ. ವಿಶ್ವದಾದ್ಯಂತ ಸ್ಥಳೀಯ ಮತ್ತು ಪ್ರಾಂತದ ಸ್ತರದಲ್ಲಿ ಸರಕಾರ ಕೈಗೊಳ್ಳುವ ವ್ಯಯದಲ್ಲಿ ಋಣ ಮತ್ತು ಆಡಳಿತಾತ್ಮಕ ಖರ್ಚುಗಳು ಹೆಚ್ಚುತ್ತಿರುವುದನ್ನು ಕಂಡಿದ್ದೇವೆ. ಈ ಪ್ರವೃತ್ತಿಯನ್ನು ವಿಶ್ಲೇಷಿಸಿ ನಮಗೆ ಅನ್ವಯವಾಗುವ ನೀತಿಯನ್ನು ರೂಪಿಸಬೇಕು. ಅರ್ಧವ್ಯವಸ್ಥೆಯ ಜಾಗತೀಕರಣ ಮತ್ತು ಜಗತ್ತಿಗೆ ಕೊಟ್ಟ ಭರವಸೆಗಳನ್ನು ನಿಭಾಯಿಸುವುದರಲ್ಲಿ ಕೇಂದ್ರದ ಮೇಲೆ ಹೆಚ್ಚಿನ ಹೊಣೆಯಿರುತ್ತದೆ. ಇದರ ಪ್ರಭಾವ ಕೇಂದ್ರ-ರಾಜ್ಯಗಳ ಸಂಬಂಧದ ಮೇಲೂ ಇರುತ್ತದೆ.

ಜಾಗತೀಕರಣದ ಹೊಸ ವಿತ್ತೀಯ ವಾಸ್ತವದಿಂದಾಗಿ ಕೇಂದ್ರದ ಪಾತ್ರವು ಹಿಗ್ಗಬಹುದು. ಆದರೆ ಸಂವಿಧಾನದ ಆಶಯ ಮತ್ತು ಶಾಸನಬದ್ಧವಾಗಿ ರಾಜ್ಯ ಮತ್ತು ಸ್ಥಳೀಯ ಸರಕಾರಕ್ಕೆ ಕೊಡಮಾಡಿರುವ ವಿತ್ತೀಯ ಸ್ವಾಯತ್ತತೆಯನ್ನು ಅತಿಕ್ರಮಿಸಲು ಅದು ಸಕಾರಣವಲ್ಲ.
ವಿಭಜನೆಯ ಗೋಜಲು…

ಆಂಧ್ರಪ್ರದೇಶಕ್ಕೆ ಹೋದಾಗ ಕಿರಣ್ ಕುಮಾರ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದರು. ಆಗ ರಾಜಕೀಯ ಭಿನ್ನಾಭಿಪ್ರಾಯಗಳು ತೀವ್ರವಾಗಿದ್ದರಿಂದ ಸಭೆಗಳಲ್ಲಿ ಆಂಧ್ರ–ತೆಲಂಗಾಣಾ ನಾಯಕರು ಇಷ್ಟ ಬಂದಂತೆ ವಾದಿಸಿದರು. ವಿಭಜನೆಯಾದಾಗ ತಮಗೆ ಅನ್ಯಾಯವಾಯಿತೆಂದು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ಹೇಳಿದರೆ, ಮುಂದೇನಾಗಬೇಕೆಂದು ವಿಸ್ತೃತವಾದ ಯೋಚನೆಯನ್ನು ತೆಲಂಗಾಣಾ ಸಿಎಂ ಕೆಸಿಆರ್ ಮಂಡಿಸಿದರು. ಸಂವಿಧಾನದಲ್ಲಿ ರಾಜ್ಯಗಳನ್ನು ಪುನರ್ರಚಿಸುವ ಅಧಿಕಾರ ಕೇಂದ್ರಕ್ಕಿದೆ. ಅದಕ್ಕೆ ಹಣಕಾಸು ಆಯೋಗ ಅಡ್ಡಿಯಾಗುವುದಿಲ್ಲ. ನಮ್ಮ ಆಯೋಗ ರಚಿಸಿದಾಗ ಆಂಧ್ರಪ್ರದೇಶ ಒಂದಾಗಿತ್ತು. ಪ್ರತ್ಯೇಕ ತೆಲಂಗಾಣ ಹೋರಾಟವಾಗಿತ್ತು. ಹೀಗಾಗಿ ಆಂಧ್ರಪ್ರದೇಶವನ್ನು ಒಂದೇ ರಾಜ್ಯವಾಗಿ ಪರಿಗಣಿಸಿದ್ದೆವು. 2013 ಸೆಪ್ಟೆಂಬರು 11–14 ತಾರೀಖುಗಳ ನಡುವೆ ಐಕ್ಯ ಆಂಧ್ರಪ್ರದೇಶದ ಜೊತೆ ಚರ್ಚೆ ನಡೆಸಿದೆವು. ನಾವು ವರದಿ ಸಮರ್ಪಿಸುವಷ್ಟರಲ್ಲಿ ರಾಜ್ಯದ ವಿಭಜನೆಯಾಯ್ತು. ಹೊಸ ರಾಜ್ಯಗಳನ್ನು ಬಿಡಿಯಾಗಿ ಪರಿಗಣಿಸಿ ಕಾನೂನು-ನಿಯಮಾನುಸಾರ ಭಿನ್ನ ವರದಿಗಳನ್ನು ಕೊಡಬೇಕೆಂದು ರಾಷ್ಟ್ರಪತಿಗಳು ಹೇಳಿದರು. ಹೀಗೆ ನಾವು ಮತ್ತೆ ಕೆಲಸ ಪ್ರಾರಂಭಿಸಿದೆವು. ಕಡೆಯ ವರದಿ ಕೊಡಲು ನಮ್ಮ ಸಮಯವನ್ನು ಮೂರು ತಿಂಗಳು ವಿಸ್ತರಿಸಲಾಯಿತು.

ಆರ್ಥಿಕ ವಿಷಯಗಳನ್ನು ಆಯೋಗಕ್ಕೆ ನಿವೇದಿಸುವ ಮಾತು ವಿಭಜನೆಯ ಕಾಯ್ದೆಯಲ್ಲಿದೆಯೆಂದು ಪತ್ರಿಕೆಗಳಲ್ಲಿ ಬಂತು. ಅದು ಸರಿಯಲ್ಲ ಎನ್ನಿಸಿತು. ಮೊದಲಿಗಿಂತ ಹೆಚ್ಚು ವಿಚಾರಗಳನ್ನು ಆಯೋಗ ಪರಿಶೀಲಿಸುವ ಆದೇಶ ಕೇಂದ್ರ ಮಂತ್ರಿಮಂಡಲದ ಮೂಲಕ ರಾಷ್ಟ್ರಪತಿಗಳಿಗೆ ತಲುಪಿ, ಅಲ್ಲಿಂದ ನೇರವಾಗಿ ಆಯೋಗಕ್ಕೆ ಬರಬೇಕು. ಆಂಧ್ರಪ್ರದೇಶ ವಿಭಜನೆಯ ಕಾನೂನಿನಲ್ಲಿ ಹಣಕಾಸು ಆಯೋಗದ ಪ್ರಸ್ತಾಪ ಮಾಡುವುದು ಸರಿಯಲ್ಲ, ಸಂಪ್ರದಾಯವೂ ಅಲ್ಲ. ಇದರಿಂದ ಇತರ ರಾಜ್ಯಗಳಿಗೆ ಅನ್ಯಾಯ ಆಗುವುದೋ ಎನ್ನುವ ಭಯವೂ ಉಂಟಾಗುತ್ತದೆ. ಇತ್ತ ಆಂಧ್ರದ ಪ್ರಜೆಗಳಲ್ಲಿ ಏನೋ ವಿಶೇಷವಾದದ್ದು ಲಭಿಸುತ್ತದೆ ಎನ್ನುವ ಆಸೆಯೂ ಬೆಳೆಯುತ್ತದೆ.

ಎರಡೂ ರೀತ್ಯಾ ಇದು ಸರಿಯಲ್ಲ. ನನಗೆ ಮತ್ತೊಂದು ಭಯವಿತ್ತು – ಆಂಧ್ರಪ್ರದೇಶಕ್ಕೆ ಸೇರಿದವನಾಗಿ, ಹಣಕಾಸು ಆಯೋಗದ ಅಧ್ಯಕ್ಷನಾಗಿರುವಾಗ ಅಸಾಧಾರಣ ವಿಷಯಗಳನ್ನು ಅಂಗೀಕರಿಸಿದರೆ ಇತರರು ಅಪಾರ್ಥ ಮಾಡಿಕೊಳ್ಳಲು ಎಡೆಮಾಡಿಕೊಡುತ್ತದೆ ಅನ್ನಿಸಿತ್ತು. ಹೀಗಾಗಿ ಈ ಸುದ್ದಿಯನ್ನು ಕಂಡಾಗ ಅತ್ಯುನ್ನತ ಸ್ತರದಲ್ಲಿ ನನ್ನ ಕಾಳಜಿಯನ್ನು ಚರ್ಚಿಸಿದೆ. ‘ಹಿಂದಿನ ವಿಧಾನಕ್ಕೆ ಬದ್ಧರಾಗಿ ನೀವು ಮಾಡಬೇಕಾದ್ದನ್ನ ನೀವು ಮಾಡಿ, ಹೊಸದಾಗಿ, ಅಧಿಕವಾಗಿ ಏನೂ ಮಾಡುವ ಅವಶ್ಯಕತೆಯಿಲ್ಲ’ ಎಂಬ ಭರವಸೆ ಸಿಕ್ಕಿತು. ವಿಭಜನೆಯ ಕಾನೂನನ್ನೂ ಆ ಭರವಸೆಗನುಗುಣವಾಗಿಯೇ ರೂಪಿಸಿದರು. 2014 ಸೆಪ್ಟೆಂಬರಿನಲ್ಲಿ ಆಂಧ್ರಪ್ರದೇಶದ ಸರ್ಕಾರದೊಂದಿಗೆ ತಿರುಪತಿಯಲ್ಲಿ, ತೆಲಂಗಾಣ ಸರ್ಕಾರದೊಂದಿಗೆ ಹೈದರಾಬಾದಿನಲ್ಲಿ ಮತ್ತೆ ಸಮಾವೇಶಗೊಂಡು ಅವರವರ ಅವಶ್ಯಕತೆ, ಆಲೋಚನೆಗಳನ್ನು ಸ್ಪಷ್ಟವಾಗಿ ತಿಳಿದುಕೊಂಡೆವು.

ಸಾಧಾರಣವಾಗಿ ರಾಜ್ಯಗಳು ಹಿಂದಿನ ಐದು ವರ್ಷಗಳ ತಮ್ಮ ಆಯವ್ಯಯದ ವಿವರಗಳನ್ನೂ ಭವಿಷ್ಯತ್ತಿನ ಅವಶ್ಯಕತೆಗಳನ್ನೂ ಹಣಕಾಸು ಆಯೋಗಕ್ಕೆ ನಿವೇದಿಸುತ್ತವೆ. ಹೊಸದಾಗಿ ಏರ್ಪಾಟಾದ ಎರಡೂ ರಾಜ್ಯಗಳಿಗೆ ಐಕ್ಯವಾಗಿ ಲೆಕ್ಕಪತ್ರಗಳಿತ್ತೇ ವಿನಃ ಹಿಂದಿನ ಲೆಕ್ಕಪತ್ರಗಳು ಬಿಡಿಯಾಗಿರಲಿಲ್ಲ. ಆ ಬುನಾದಿಯಿಲ್ಲದೇ ಭವಿಷ್ಯತ್ತಿನ ಅವಶ್ಯಕತೆಗಳನ್ನು ಲೆಕ್ಕಕಟ್ಟುವುದು ಕಷ್ಟವಾಯಿತು. ರಾಜಕೀಯ ವರ್ಗಗಳು ಯಾವುದನ್ನೂ ಒಪ್ಪುವುದಿಲ್ಲ, ಗಟ್ಟಿಯಾಗಿ ಅಭ್ಯಂತರವನ್ನೂ ಹೇಳುವುದಿಲ್ಲ. ಹೀಗಾಗಿ ಆಯೋಗ ಎರಡು ಹೊಸ ರಾಜ್ಯಗಳನ್ನು ಮಿಕ್ಕ ರಾಜ್ಯಗಳ ಜೊತೆ ಹೋಲಿಸಿ ಒಂದು ಸೂತ್ರದಂತೆ ಬಟವಾಡೆ ಮಾಡುವ ವರದಿಯನ್ನು ಕೊಡಲು ಶ್ರಮವಹಿಸಬೇಕಾಯಿತು. ವಿಭಜನೆಯ ಕಾಯಿದೆಯಲ್ಲಿ ಹಣಕಾಸು ಆಯೋಗದ ಪ್ರಸ್ತಾಪವಿದ್ದದ್ದರಿಂದ – ಎರಡೂ ರಾಜ್ಯದ ಜನ ಪ್ರತ್ಯೇಕವಾಗಿ ಕೆಲವು ಪ್ರಯೋಜನಗಳನ್ನು ಆಯೋಗ ನೀಡುತ್ತದೆ ಎನ್ನುವ ಭಾವನೆಗೆ ಬಿದ್ದರು. ಆ ಸಮಯಕ್ಕೆ ಆಂಧ್ರಪ್ರದೇಶಕ್ಕೆ ಪ್ರತ್ಯೇಕ ಸವಲತ್ತು ಕೊಡುವುದರ ಚರ್ಚೆ ಪ್ರಾರಂಭವಾಗಿತ್ತು. ವಿಭಜನೆಯ ಕಾಲಕ್ಕೆ ಆಂಧ್ರಪ್ರದೇಶಕ್ಕೆ ಪ್ರತ್ಯೇಕ ದರ್ಜೆ ಕೊಡುತ್ತೇವೆಂದು ಪ್ರಧಾನಿಗಳು ಹೇಳಿದ್ದರು.

1960ರ ದಶಕದಂತ್ಯದಲ್ಲಿ ವಿಭಿನ್ನ ಪರಿಸ್ಥಿತಿಯಲ್ಲಿದ್ದ ರಾಜ್ಯಗಳಿಗೆ ಕೇಂದ್ರದ ಸಹಾಯ ಒದಗಿಸಿಕೊಡಲು ಪ್ರತ್ಯೇಕ ದರ್ಜೆಯಿತ್ತು. ಪರ್ವತ ಶ್ರೇಣಿಯ ನಡುವಿರುವ, ಕಡಿಮೆ ಜನಸಾಂದ್ರತೆಯ, ಸರಹದ್ದಿನಲ್ಲಿರುವ, ಆರ್ಥಿಕವಾಗಿ ಹಿಂದುಳಿದಂತಹ ಲಕ್ಷಣಗಳಿದ್ದರೇನೇ ಪ್ರತ್ಯೇಕ ದರ್ಜೆ ಕೊಡಲಾಗುತ್ತಿತ್ತು. ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡು ರಾಜ್ಯಕ್ಕೆ ಪ್ರತ್ಯೇಕ ದರ್ಜೆಯನ್ನು ಕೊಡಲು ಯೋಜನಾ ಆಯೋಗ ಪ್ರತಿಪಾದಿಸಿ, ರಾಷ್ಟ್ರೀಯ ಅಭಿವೃದ್ಧಿ ಮಂಡಲಿ ಅಂಗೀಕರಿಸಿದರೆ ಕೇಂದ್ರ ಸರಕಾರ ಅಧಿಕೃತವಾಗಿ ಪ್ರಕಟಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಹಣಕಾಸು ಆಯೋಗದ ಪಾತ್ರವಿಲ್ಲ. ಪ್ರತ್ಯೇಕ ದರ್ಜೆ ಆಯೋಗದ ವ್ಯಾಪ್ತಿಯಲ್ಲಿಲ್ಲದ ಮಾತು. ಇದನ್ನು ಅತಿಕ್ರಮಿಸಿ ಮುಂದೆ ಹೋಗಬೇಕಾದ ಅವಶ್ಯಕತೆ, ಅವಕಾಶ, ಅಧಿಕಾರ – ಯಾವುದೂ ಆಯೋಗಕ್ಕೆ ಇರಲಿಲ್ಲ. ಆದರೂ ವಿಭಜನೆಯಿಂದ ಆಂಧ್ರಪ್ರದೇಶ ರಾಜ್ಯಕ್ಕೆ ಆದಾಯ ಕಮ್ಮಿ, ಖರ್ಚು ಹೆಚ್ಚಾಗುತ್ತದೆಂದು ನಮ್ಮ ಲೆಕ್ಕದಲ್ಲಿ ತಿಳಿದುಬಂತು. ಆ ಖೋತಾ ತುಂಬಲು 22 ಸಾವಿರ ಕೋಟಿ ರೂಪಾಯಿನ ದೇಣಿಗೆಯನ್ನು ಆಯೋಗ ನೀಡಿತು. ಕೇರಳ, ಪಶ್ಚಿಮ ಬಂಗಾಲ ರಾಜ್ಯಗಳಿಗೂ ಈ ರೀತಿಯ ದೇಣಿಗೆಯನ್ನು ಕೊಟ್ಟೆವು.

ವಿಳಂಬ

ಕೇಂದ್ರ-ರಾಜ್ಯಗಳು 2015–16ರ ಆಯವ್ಯಯಪತ್ರವನ್ನು ಮಂಡಿಸುವ ಮೊದಲೇ ನಮ್ಮ ಆಯೋಗದ ವರದಿಯನ್ನು ಕೊಡಬೇಕೆಂದು ತಿರ್ಮಾನಿಸಿದೆವು. ಅದು ಕಷ್ಟದ ಪ್ರಕ್ರಿಯೆಯಾಗಿತ್ತು. ಅದನ್ನು ಸಕಾಲದಲ್ಲಿ, ಸರಿಯಾಗಿ ಮಾಡಲು ತುಂಬಾ ಶ್ರಮಪಟ್ಟೆವು. 2014 ಮೇ 26ರಂದು ಮೋದಿ ಪದವಿಸ್ವೀಕಾರ ಮಾಡಿದರು. ವಿತ್ತ ಮಂತ್ರಿಯಾಗಿ ಜೇಟ್ಲಿ ಬಂದರು. ಸಂಪ್ರದಾಯದಂತೆ ಅವರ ಸಮಯವನ್ನು ಕೋರಿ ಭೇಟಿಯಾದೆವು. ಭೇಟಿಗೆ ಮುನ್ನ ವಿತ್ತಮಂತ್ರಿಗಳ ಮಾತನ್ನು ಆಲಿಸಿ ನಮ್ಮ ವಿಚಾರಗಳನ್ನು ತಡೆಹಿಡಿದೆವು. ಇತ್ತ ವರದಿಯ ಮಂಡನೆಯ ತಯಾರಿಯನ್ನೂ ನಡೆಸಿದ್ದೆವು. ಜೇಟ್ಲಿ ಏನೂ ಮಾತನಾಡದೇ ನಮ್ಮ ಮಾತನ್ನು ಆಲಿಸಲು ನಿರ್ಧರಿಸಿರುವುದಾಗಿ ಹೇಳಿದರು! ಹೀಗೆ ಪರಸ್ಪರ ಆಲಿಸುತ್ತಾ ಯಾವುದೇ ಪ್ರಮಖ ವಿಚಾರವನ್ನೂ ಚರ್ಚಿಸದೇ ಸಭೆಯನ್ನು ಬರ್ಖಾಸ್ತು ಮಾಡಿದೆವು. ಸಹಜವಾಗಿಯೇ ವಾತಾವರಣ ತಿಳಿಯಾಗಿತ್ತು. ಎಲ್ಲರೂ ಎಲ್ಲ ಸಾಧ್ಯತೆಗಳನ್ನೂ ತೆರೆದಿಟ್ಟಿದ್ದೆವು!

ಹೊಸ ಸರಕಾರ ಬಂದಕೂಡಲೇ ಸಂಪ್ರದಾಯದಂತೆ ಯೋಜನಾ ಆಯೋಗದ ಉಪಾಧ್ಯಕ್ಷರು ಮತ್ತು ಪ್ರೊಫೆಸರ್ ಸೇನ್ ಸೇರಿ ಎಲ್ಲ ಸದಸ್ಯರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಯೋಜನಾ ಆಯೋಗದ ಸದಸ್ಯರಾಗಿ ನಮ್ಮ ಆಯೋಗದಲ್ಲಿ ಅಲ್ಪಾವಧಿ ಸದಸ್ಯರಾಗಿದ್ದ ಫ್ರೊಫೆಸರ್ ಸೇನ್ ನಮ್ಮ ಆಯೋಗದಿಂದಲೂ ರಾಜೀನಾಮೆ ಕೊಡುವುದು ನಿರೀಕ್ಷಿತವಾಗಿತ್ತು. ಇದು ಹಿಂದಿನಿಂದ ನಡೆದ ಈ ರಿವಾಜಿನಲ್ಲಿ ಯಾವುದೇ ಭಿನ್ನತೆಯಿರಲಿಲ್ಲ. ಈ ಬಗ್ಗೆ ಸೇನ್ ನನ್ನ ಜೊತೆ ಮಾತನಾಡಿದರು. ಆತ ಆಯೋಗದಲ್ಲಿ ಮುಂದುವರೆದರೆ ತುಂಬಾ ಒಳ್ಳೆಯದೆಂದೂ, ನಮಗೆ ಆತನ ಸಲಹೆಯ ಲಾಭ ಸಿಗುತ್ತೆಂದೂ ಹೇಳಿದೆ. ಸೇನ್ ಆಯೋಗದಲ್ಲಿ ಮುಂದುವರೆದದ್ದು ನಮ್ಮ ಚರ್ಚೆ ಮತ್ತು ರಾಜ್ಯಗಳೊಂದಿಗಿನ ಸಂವಹನದಲ್ಲಿ ಪ್ರಯೋಜನಕಾರಿಯಾಗಿತ್ತು. ಸರಕಾರ ಬದಲಾಗಿದ್ದರಿಂದ ವಿತ್ತ ಮಂತ್ರಾಲಯದೆದುರು ವಿಚಾರಗಳನ್ನು ಮಂಡಿಸಲು ಉತ್ಸುಕರಾಗಿದ್ದೆವು. ರಾಷ್ಟ್ರೀಯ ಅರ್ಥವ್ಯವಸ್ಥೆಯ ವಿತ್ತೀಯ ಚೌಕಟ್ಟನ್ನು ಮಂತ್ರಾಲಯ ಯಾವರೀತಿಯಲ್ಲಿ ನೋಡುತ್ತದೆನ್ನುವುದನ್ನು ಅರಿಯುವುದು ಆಯೋಗಕ್ಕೆ ತುಂಬಾ ಮುಖ್ಯವಾಗಿತ್ತು.

ನಮ್ಮ ವರದಿಯ ಸೂಚನೆಗಳನ್ನು ಒಪ್ಪಿ ಜಾರಿ ಮಾಡುವುದರಲ್ಲಿ ಸರ್ಕಾರದ ವಿಳಂಬದ ಬಗ್ಗೆ ಬೇಸರ, ಅಸಮಾಧಾನಗಳನ್ನು ನಿವೇದಿಸಲೇ ಬೇಕು. 2014 ಡಿಸೆಂಬರಿಗೆ ವರದಿಯನ್ನು ಸಂಪ್ರದಾಯದಂತೆ ರಾಷ್ಟ್ರಪತಿಗಳಿಗೆ ಸಮರ್ಪಿಸಿ, ವಿತ್ತಮಂತ್ರಿಗಳನ್ನು ಭೇಟಿಮಾಡಿದೆವು. ಬರಲಿರುವ ಆಯವ್ಯಯ ಪತ್ರದ ತಯಾರಿಯ ಸಮಯವನ್ನು ಗಮನದಲ್ಲಿಟ್ಟು, ಕೇಂದ್ರ–ರಾಜ್ಯಗಳು ಹೊಸ ವಿತರಣಾ ಸೂತ್ರಕ್ಕೆ ತಯಾರಿ ನಡೆಸುವ ಸಲುವಾಗಿ ಗಡುವಿಗಿಂತ ಮೊದಲೇ ವರದಿಯನ್ನು ಕೊಡಲು ವಹಿಸಿದ ಶ್ರಮದ ಬಗ್ಗೆ ವಿವರಿಸಿದೆ. ವರದಿಯ ಸೂಚನೆಗಳ ಬಗ್ಗೆ, ತಕ್ಷಣ ಕ್ರಮ ಕೈಗೊಳ್ಳಲು ಬೇಕಾದ ಹಿಂದಿ ಅನುವಾದ, ಸಂಸತ್ತಿನಲ್ಲಿ ವಿತರಿಸಲು ಎರಡೂ ಭಾಷೆಗಳಲ್ಲಿ ವರದಿಯ ಸಾಕಷ್ಟು ಪ್ರತಿಗಳಿರುವಂತೆ ನೋಡಿಕೊಂಡಿದ್ದವು. ನಮ್ಮ ವರದಿಯ ಬಗ್ಗೆ ನಿಲುವು ತೆಗೆದುಕೊಳ್ಳಬೇಕೆಂದು ವಿನಂತಿಸಿದೆ. ಇದಕ್ಕೆ ಮಹತ್ವದ ಕಾರಣವಿತ್ತು. ನಮ್ಮ ಸೂಚನೆಗಳು ದೂರಗಾಮಿ ಪ್ರಭಾವವನ್ನು ಉಂಟುಮಾಡಬಹುದಿತ್ತು. ಕೇಂದ್ರ ಮತ್ತು ರಾಜ್ಯಗಳು ಈ ವರದಿಯ ಆಧಾರದ ಆಯವ್ಯಯ ಪತ್ರಗಳನ್ನು ಮೇಲೆ ತಯಾರಿಸಲು ಸಮಯ ಬೇಕಿತ್ತು. ಬೇಗನೇ ಆರಂಭವಾಗಲಿದ್ದ ಕೇಂದ್ರ-ರಾಜ್ಯಗಳ ಆಯವ್ಯಯ ಪತ್ರ ಮಂಡನೆಯ ಪ್ರಕ್ರಿಯೆಗೆ ಮೊದಲು, ತುರ್ತಾಗಿ ನಮ್ಮ ವರದಿಯನ್ನು ಅಧಿವೇಶನದಲ್ಲಿದ್ದ ಸಂಸತ್ತಿನಲ್ಲಿ ಪ್ರಸ್ತುತಪಡಿಸಬೇಕೆಂದು ಸೂಚಿಸಿದೆ.

ವರದಿಯನ್ನು ಜಾರಿಮಾಡುವ ಉತ್ಸುಕತೆಯನ್ನು ತೋರಿ, ಕೆಲವೇ ದಿನಗಳಲ್ಲಿ ಈ ಬಗ್ಗೆ ಕ್ರಮಕೈಗೊಳ್ಳಬಹುದು ಎಂದೂ ಅನ್ನಿಸಿತ್ತು. ಕೆಲದಿನಗಳಲ್ಲಿ ಪ್ರಧಾನಿ ಮೋದಿಯವರನ್ನೂ ಭೇಟಿಯಾದೆ. ನಮ್ಮ ವರದಿಯ ಮೂಲಭೂತ ತತ್ವ, ವಾದಸರಣಿಯನ್ನು ಆತನಲ್ಲಿ ಮಂಡಿಸಿದೆ. ಪ್ರಧಾನಿಗೆ ಈ ಬಗ್ಗೆ ಪೂರ್ಣ ವಿವರ, ತರ್ಕದ ಅರಿವಿತ್ತು. ತಮ್ಮ ಪ್ರತಿಕ್ರಿಯೆಯನ್ನು ಪ್ರಧಾನಿ ವ್ಯಕ್ತವಾಗಿ ಯಾ ಸೂಚ್ಯವಾಗಿ ತಿಳಿಸಲಿಲ್ಲ.

ಹೇಳಿದ್ದು – ಮಾಡಿದ್ದು

ಕೇಂದ್ರ – ರಾಜ್ಯಗಳ ನಡುವೆ ತೆರಿಗೆಯ ಹಂಚಿಕೆ, ರಾಜ್ಯಗಳ ನಡುವಿನ ಹಂಚಿಕೆ, ದೇಣಿಯಂತಹ ಮುಖ್ಯವಾದ ಪ್ರಸ್ತಾವನೆಗಳನ್ನು ಸರ್ಕಾರ ಒಪ್ಪಿತು. ಮಿಕ್ಕವುಗಳನ್ನು ಪರಿಶೀಲಿಸುವುದಾಗಿ ಘೋಷಿಸಿತು. 2015 ಫೆಬ್ರವರಿಯಲ್ಲಿ ‘ಕ್ರಮ ಕೈಗೊಂಡ ವರದಿ’ಯನ್ನು ಸಂಸತ್ತಿನಲ್ಲಿ ಮಂಡಿಸಿತ್ತು. 14ನೇ ಹಣಕಾಸು ಆಯೋಗದ ಪ್ರಸ್ತಾವನೆಗಳು ಭಿನ್ನವಾಗಿವೆ ಎಂದು ಮೇಧಾವಿಗಳು ಮೆಚ್ಚಿದರು. ನಮ್ಮ ವರದಿಯಿಂದ ಮೂಲಭೂತ ಬದಲಾವಣೆಗಳಾಗಿವೆ ಎಂದೂ ಹೇಳಿದರು. ಮುಖ್ಯವಾಗಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ನೇರ ವಿಭಜನೆಯನ್ನು ಪ್ರಶ್ನಿಸಿದ್ದೆವು. ಕೇಂದ್ರ ವಸೂಲು ಮಾಡಿದ ತೆರಿಗೆಯಲ್ಲಿ ರಾಜ್ಯಗಳಿಗೆ ನೀಡುತ್ತಿದ್ದ ಪರಿಮಾಣವನ್ನು ಶೇಕಡಾ 32ರಿಂದ 42ಕ್ಕೆ ಹೆಚ್ಚಿಸಿದ ಶ್ರೇಯಸ್ಸು ನಮಗೆ ಸಂದಿತ್ತು. (13ನೇ ಹಣಕಾಸು ಆಯೋಗ ಶೇಕಡಾ 30.5ರಿಂದ 32ಕ್ಕೆ ಹೆಚ್ಚಿಸಿತ್ತು, 12ನೇ ಆಯೋಗ ಶೇಕಡಾ 28.0ರಿಂದ 30.5ಕ್ಕೆ ಹೆಚ್ಚಿಸಿತ್ತು). ಈ ಹೆಚ್ಚಳದ ಜೊತೆ ಬೇಷರತ್ತಾಗಿ ರಾಜ್ಯಗಳಿಗೆ ಕೊಡುವ ಧನರಾಶಿಯೂ ಹೆಚ್ಚಾಗಿದೆ. ನಮ್ಮ ವರದಿಯಿಂದಾಗಿ ಕೇಂದ್ರದಿಂದ ರಾಜ್ಯಗಳಿಗೆ ವಿತರಣೆಯಾಗುವ ಶೇಕಡಾ 70ರಷ್ಟು ಧನರಾಶಿಗೆ ಯಾವುದೇ ಬಂಧನವಿಲ್ಲ. ಹಿಂದೆ ಇದು ಶೇಕಡಾ 50ರಷ್ಟಿತ್ತು.

ನಮ್ಮ ಸೂಚನೆಯಿಂದಾಗಿ ಹೆಚ್ಚು ಆರ್ಥಿಕ ಸಂಪನ್ಮೂಲ ಕೊಡಮಾಡಿದ್ದಲ್ಲದೇ ರಾಜ್ಯಗಳು ತಮ್ಮದೇ ಕಾರ್ಯಕ್ರಮ ರೂಪಿಸುವುದಕ್ಕೆ ಅಭೂತಪೂರ್ವ ವಿತ್ತೀಯ ಸವಲತ್ತನ್ನು ಕೊಡಮಾಡಿತ್ತು. ಇದರಿಂದಾಗಿ – ರಾಜಕೀಯ ಕಾರಣಗಳಿಂದ ರಾಜ್ಯಗಳ ನಿರ್ಧಾರಗಳಲ್ಲಿ ಮೂಗುತೂರಿಸುವ ಅವಕಾಶ ಕೇಂದ್ರಕ್ಕೆ ಕಮ್ಮಿಯಾಯಿತು! ರಾಜ್ಯಾಂಗದ 73, 74ನೇ ತಿದ್ದುಪಡಿಯ ಮೂಲಕ ಪಂಚಾಯ್ತಿ, ಜಿಲ್ಲಾ ಪರಿಷತ್, ನಗರ ಪಾಲಿಕೆಗಳಿಗೆ ಸುಮಾರು ಮೂರು ಲಕ್ಷಕೋಟಿ ರೂಪಾಯಿಗಳು ಸಂದವು. ಇದು ಕೇಂದ್ರದ ತೆರಿಗೆಯಲ್ಲಿ ಶೇಕಡಾ 3.5ರಷ್ಟಿತ್ತು! ಹೀಗೆ ರಾಜ್ಯಗಳ ಆರ್ಥಿಕ ವ್ಯವಹಾರಗಳು ಮೂಲಭೂತವಾಗಿ ಬದಲಾದುವು. ಆರ್ಥಿಕ ವಿಷಯದಲ್ಲಿ ರಾಜ್ಯಗಳು ಹೆಚ್ಚು ಜವಾಬ್ದಾರಿಯಿಂದ ವರ್ತಿಸುವ ಸಮಯವೂ ಬಂತು. ಸಾಧಾರಣವಾಗಿ ಹಣಕಾಸು ಆಯೋಗಗಳು ದೇಣಿಗೆ ನೀಡುತ್ತ ಷರತ್ತುಗಳನ್ನು ವಿಧಿಸುತ್ತವೆ. ಆದರೆ ನಾವು ಬೇಷರತ್ತಾಗಿ ತನ್ನ ತೀರ್ಪನ್ನು ಕೊಟ್ಟಿದ್ದೆವು.

ನಾವು ಹೇಳಿದ್ದು – ಇನ್ನೂ ಮಾಡದಿರುವುದು.

ಅಂದುಕೊಂಡ ಆದರೆ ಮಾಡಲಾಗದ ವಿಷಯವೂ ಇದೆ. ವ್ಯಕ್ತಿಗಳ ಆದಾಯ ತೆರಿಗೆಯ ಮೇಲೆ ಅಧಿಕ ತೆರಿಗೆಯನ್ನು ವಿಧಿಸಿದರೆ ಒಂದು ಪರಿಮಿತಿವರೆಗೆ ಅದನ್ನು ರಾಜ್ಯಗಳಿಗೆ ಹಂಚುವ ಧನರಾಶಿಯಲ್ಲಿ ಲೆಕ್ಕಕಟ್ಟಬೇಕೆಂದು ಯೋಚಿಸಿದ್ದೆ. ಆದರೆ ಅದು ಆಗಲಿಲ್ಲ. ನಮ್ಮ ಕೆಲವು ಸಲಹೆಗಳನ್ನು ಸರ್ಕಾರ ಇನ್ನೂ ಪರಿಶೀಲಿಸುತ್ತಲೇ ಇದೆ! ಮೂಲಭೂತವಾದ ಕೆಲ ಸಲಹೆಗಳನ್ನು ಪರಿಗಣಿಸಲಿಲ್ಲ ಎನ್ನುವ ಬೇಸರವಿದೆ. ಆ ದಿಕ್ಕಿನಲ್ಲಿ ಒಂದೂ ಹೆಜ್ಜೆ ಮುಂದಿಟ್ಟಂತಿಲ್ಲ.

ಮೊದಲು: ಕೇಂದ್ರದ ಆಯವ್ಯಯಪತ್ರ ಮಂಡಿಸುವುದಕ್ಕೆ ಮುನ್ನ – ಅದರಲ್ಲೇನಿದೆಯೋ ಪರಿಶೀಲಿಸಿ ಸಂಸತ್ ಸದಸ್ಯರಿಗೆ ಸರಳವಾಗಿ, ವಿವರವಾಗಿ ತಿಳಿಸುವ ತಜ್ಞರ ಸಮಿತಿ (ಫಿಸ್ಕಲ್ ಕೌನ್ಸಿಲ್) ಕೇಂದ್ರ ಸರ್ಕಾರದಲ್ಲಿರಬೇಕು, ಅದು ಸಂಸತ್ತಿಗೆ ವರದಿ ನೀಡಬೇಕೆಂದು ಸೂಚಿಸಿದೆವು. ಬಹಳೆಡೆ ಈ ಏರ್ಪಾಟಿದೆ. ಇದರಿಂದ ಸಂಸತ್ತಿನಲ್ಲಿ ಆಯವ್ಯಯಪತ್ರದ ಬಗ್ಗೆ ಅರ್ಥವತ್ತಾದ ಚರ್ಚೆಯಾಗುತ್ತದೆ. ಆದರೆ ಇಂದಿಗೂ ತಜ್ಞರ ಸಮಿತಿಯನ್ನು ಏರ್ಪಡಿಸಿಲ್ಲ.

ಎರಡು: ಸಾರ್ವಜನಿಕ ಕ್ಷೇತ್ರದ ಉದ್ಯಮಗಳಿಗೂ ಸರ್ಕಾರಕ್ಕೂ ಇರುವ ಸಂಬಂಧದ ಬಗ್ಗೆ. ಸಾರ್ವಜನಿಕ ಸಂಸ್ಥೆಗಳು ಸರ್ಕಾರದ ಬೊಕ್ಕಸದಿಂದ ಹೂಡಿಕೆ ಅಥವಾ ಸಾಲ ಕೇಳುವ ಮುನ್ನ ತಮ್ಮ ನಿಕ್ಷೇಪ ನಿಧಿಗಳನ್ನುಪಯೋಗಿಸಬೇಕು. ಈ ಸಂಸ್ಥೆಗಳಲ್ಲಿ ಲೋಪಗಳಿದ್ದು. ಅವು ನಷ್ಟದ ಪಾಲಾಗಿವೆ. ಅವುಗಳನ್ನು ಮುಂದುವರೆಸಿದರೆ, ತೆರಿಗೆಯ ಹಣವನ್ನು ಹಾಳುಮಾಡಿದಂತೆ. ಅವುಗಳಲ್ಲಿ ಕೇಂದ್ರದ ಹೂಡಿಕೆ, ಪಾತ್ರವನ್ನು ಪರಾಮರ್ಶಿಸಿ ಅಲ್ಲಿಂದ ಹೊರಬೀಳಬೇಕು ಎಂದು ಸೂಚಿಸಿದ್ದೆವು. ಯಾವ ಬ್ಯಾಂಕುಗಳಿಗೆ ದೊಡ್ಡ ಮೊತ್ತದ ಸಾಲದ ಪ್ರತಿಪಾದನೆಗಳು ಬರುತ್ತದೋ ಜನರಿಗೆ ತಿಳಿಯಬೇಕು. ಭಾರೀ ಸಾಲಗಳನ್ನು ಪಡೆದು ಪಾವತಿಸದೇ ಕೆಲವರು ಓಡಾಡುತ್ತಿದ್ದರೆ, ಬ್ಯಾಂಕುಗಳು ನಷ್ಟಕ್ಕೆ ಬಿದ್ದರೆ, ಅದು ಜನಸಾಮಾನ್ಯರ ಹಣವೇ ತಾನೇ. ಆ ವಿಷಯದಲ್ಲಿ ಸರ್ಕಾರ ಜವಾಬ್ದಾರಿಯಿಂದ ವ್ಯವಹರಿಸಬೇಕು. ಕೇಂದ್ರ ಸರ್ಕಾರ ಆರ್ಥಿಕ ಸಂಸ್ಥೆಗಳ ಸ್ವಾಮ್ಯ ಹೊಂದಿರುವುದರಿಂದ ಆಗುವ ವಿತ್ತೀಯ ಪರಿಣಾಮ ಪರಿಶೀಲಿಸಲು ಒಂದು ಆಯೋಗವನ್ನು ನಿಯಮಿಸಬೇಕೆಂದು ಸೂಚಿಸಿದೆವು. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿದಂತೆ ತಲೆಯಾಡಿಸಿತಾಗಲೀ ಏನೂ ಮಾಡಲಿಲ್ಲ.

ಒಟ್ಟಾರೆ ತೆರಿಗೆಯ ಹಣವನ್ನು ಅದಕ್ಷತೆಯಿಂದ ಪೋಲಾಗುವುದನ್ನು ತಪ್ಪಿಸುವ ಉದ್ದೇಶ ನಮಗಿತ್ತು. ನೀರು ಮತ್ತು ವಿದ್ಯುತ್ ಸರಬರಾಜಿನ ವಿತರಣೆಗೆ ಸಾರ್ವತ್ರಿಕವಾಗಿ ಮೀಟರನ್ನು ಅಳವಡಿಸಬೇಕೆಂದು ಸೂಚಿಸಿದೆವು. ಲೆಕ್ಕಕಟ್ಟಲು ಸಾಧ್ಯವಿಲ್ಲದ್ದರ ನಿರ್ವಹಣೆ ಕಷ್ಟವೆನ್ನುವುದು ನಮ್ಮ ನಂಬಿಕೆ. ಉಚಿತ ನೀರು ಅಥವಾ ವಿದ್ಯುತ್ ಸರಬರಾಜಿನ ಬಗ್ಗೆ ನಾನು ನಿಲುವನ್ನು ತೆಗೆದುಕೊಳ್ಳಲಿಲ್ಲ. ನಿಜಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಲ ಎಷ್ಟು? ಆರ್‌ಬಿಐ, ಮತ್ತು ಸರ್ಕಾರ ಸೇರಿ ತೆಗೆದ ಸಾಲ ಎಷ್ಟು? ಎಲ್ಲವೂ ಜನರಿಗೆ ತಿಳಿಯುವಂತೆ ಈ ಲೆಕ್ಕವನ್ನು ಬಹಿರಂಗಪಡಿಸಬೇಕೆಂದು ಸೂಚಿಸಿದೆವು. ಆಗಲಿಲ್ಲ. ಸಂಪನ್ಮೂಲಗಳು – ಆಯದ ಹಂಚಿಕೆಯಲ್ಲಿ ರಾಜ್ಯಗಳ ನಡುವೆ ಸಮನ್ವಯಕ್ಕಾಗಿ ಒಂದು ತಜ್ಞರ ಸಮಿತಿ ಇರಬೇಕೆಂದೆವು. ಅದೂ ಆಗಲಿಲ್ಲ.

ಟೀಕಾಪ್ರಹಾರಗಳು

ಆಟದ ನಿಯಮ ಬದಲಾದರೆ ಕೆಲವರಿಗೆ ಹಿಡಿಸುತ್ತದೆ, ಕೆಲವರಿಗಿಲ್ಲ. ನೇರ ವಿಭಜನೆಯಲ್ಲಿ ಕೇಂದ್ರದ ಪಾಲು ಕಮ್ಮಿ ಮಾಡಿ ಕೇಂದ್ರೀಯ ಯೋಜನೆಗಳಿಗೆ ಕತ್ತರಿ ಹಾಕಿದೆವು. ಹಾಗೇ ರಾಜ್ಯಗಳಿಗೆ ವಿಶೇಷ ದರ್ಜೆಯನ್ನು ಪರಿಗಣಿಸದೇ ಇದ್ದದ್ದರಿಂದ ಪರಿಣಾಮಗಳಾದುವು. ಸರ್ಕಾರವು ಆಯೋಗದ ಸೂತ್ರವನ್ನು ಮೀರಿ ವಿಶೇಷ ಅನುದಾನಗಳನ್ನು ಹೇಗೆ ಕೊಡಮಾಡುವ ದಾರಿ ಕಾಣದೇ ವಿಶೇಷ ಸವಲತ್ತಿನ ರಾಜ್ಯಗಳ ಆರ್ಥಿಕತೆಗೆ ಪೆಟ್ಟು ಬೀಳುವುದರಲ್ಲಿತ್ತು. ಯೋಜನಾಬದ್ಧ, ಯೋಜನೇತರ ಎಂಬ ವಿಭಜನೆ ತೆಗೆದು ಒಟ್ಟಾರೆ ಖರ್ಚುನ್ನು ಪರಿಗಣಿಸಿ ಯೋಜನಾಬದ್ಧ ಖರ್ಚುಗಳಿಗೆ ಕೊಡಬಹುದಾದ ಅನುದಾನದ ಪ್ರಕ್ರಿಯೆಯನ್ನು ನಿಲ್ಲಿಸಿತು. ಇದರಿಂದಾಗಿ ಅಷ್ಟೂ ಖರ್ಚುಗಳು ನಮ್ಮ ಪರಿಧಿಗೆ ಸೇರಿ ಆಯವ್ಯಯ ಪತ್ರದ ಪ್ರಕಾರ ಹಂಚಿಕೆಯನ್ನು ಮಾಡುವ ಸಾಧ್ಯತೆ ಉಂಟಾಯಿತು. ದಶಕಗಳಿಂದ ತ್ರಿಶಂಕು ಸ್ಥಿತಿಯಲ್ಲಿದ್ದ ವಿಷಯಕ್ಕೆ ನಾವು ಮಂಗಳ ಹಾಡಿದೆವು. ಒಂದು ರೀತಿಯಲ್ಲಿ ಇದು ಹಣಕಾಸು ಆಯೋಗದ ಉಲ್ಲೇಖವನ್ನು ಮೀರಿ, ನೀತಿರೂಪಕಲ್ಪನೆಯ ಕ್ಷೇತ್ರದಲ್ಲಿ ಮಾಡಿದ್ದ ಅತಿಕ್ರಮಣವಾಗಿತ್ತು. 14ನೇ ಹಣಕಾಸು ಆಯೋಗದ ಪ್ರಸ್ತಾವನೆಗಳ ಬಗ್ಗೆ ಅಭ್ಯಂತರ, ಟೀಕೆಗಳೂ ಬಂದುವು. ಮುಖ್ಯವಾಗಿ ಕೇಂದ್ರದ ಯೋಜನೆಗಳನ್ನು ರೂಪಿಸುವ ಅವಕಾಶ ಕಮ್ಮಿಯಾದದ್ದು ಕೆಲವರಿಗೆ ಹಿಡಿಸಲಿಲ್ಲ.

ಯೋಜನೆಗಳ ರೂಪಕಲ್ಪನೆ, ಆರ್ಥಿಕ ಸಂಪನ್ಮೂಲದ ಹಂಚಿಕೆಯ ವಿಷಯವನ್ನು ಇತ್ಯರ್ಥಮಾಡಲು ರಾಜ್ಯಕ್ಕಿಂತ ಹೆಚ್ಚಿನ ಸಾಮರ್ಥ್ಯ ಕೇಂದ್ರಕ್ಕಿದೆಯೇ? ರಾಜ್ಯಾಂಗದಲ್ಲಾಗಲೀ, ಅಧ್ಯಯನದಿಂದಾಗಲೀ ಇದನ್ನು ನಿರೂಪಿಸಲಾಗಿದೆಯೇ? ರಾಜ್ಯದ ಅಧಿಕಾರಿಗಳೇ ಕೇಂದ್ರದಲ್ಲೂ ಇದ್ದಾರೆ. ಅವರಿಗೆ ಬೇರೆ ಶಿಕ್ಷಣ, ತಾಂತ್ರಿಕ ಜ್ಞಾನವಿಲ್ಲ. ಈ ವಾದ ಹಲವರಲ್ಲಿ ದ್ವಂದ್ವ ಉಂಟುಮಾಡಿತು. ‘ಯೋಜನೆಗಳನ್ನು ರಾಜ್ಯಗಳು ನಿರ್ವಹಿಸುವ ರೀತಿ ಸರಿಯಿರುವುದಿಲ್ಲ, ಸಂಕ್ಷೇಮ ಯೋಜನೆಗಳನ್ನು ಕೇಂದ್ರವೇ ನಿರ್ವಹಿಸಬೇಕೆನ್ನುವ ಅಭಿಪ್ರಾಯದ ವಿರುದ್ಧ ಮಾತಾಡಿದ್ದು ಜನರನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಿತು. ಕೇಂದ್ರೀಯ ಯೋಜನೆಗಳ ನಿರ್ವಹಣೆ ಚೆನ್ನಾಗಿರುತ್ತೆ, ರಾಜ್ಯದ ಯೋಜನೆಗಳು ಕೀಳುಮಟ್ಟದ್ದೆಂದು ಹೇಗೆ ಹೇಳುವುದು?

ಯೋಜನಾ-ಯೋಜನೇತರ ಎಂದು ಬಿಡಿಯಾಗಿ ಏನೂ ಇಲ್ಲವೆಂದು ನಾವು ಹೇಳಿದ್ದರಿಂದ ಆಯೋಗದ ಮಾಜಿ ಸದಸ್ಯರಿಗೆ ಕೋಪ ಬಂತು. ‘ಹಣಕಾಸು ಆಯೋಗ ತನ್ನ ಮಿತಿಮೀರಿ, ನೀತಿಯ ವಿಷಯಕ್ಕೆ ಕೈಹಾಕುತ್ತಿದೆ’ ಅಂದರು. ಸ್ಥಳೀಯ ಸಂಸ್ಥೆಗಳಿಗೆ ಕೊಟ್ಟ ಅನುದಾನ ಮೂರು ಕಾರಣಗಳಿಗಾಗಿ ಟೀಕೆಗೆ ಒಳಗಾಯಿತು: ವಿಕೇಂದ್ರೀಕರಣದ ಸಾಧನೆಯ ಮೇಲೆ ಅಧಿಕ ಬಟವಾಡೆಯ ಸೂತ್ರವನ್ನು 13ನೇ ಹಣಕಾಸು ಆಯೋಗ ಸೂಚಿಸಿತ್ತು. ನಾವು ರಾಜ್ಯ ಹಣಕಾಸು ಆಯೋಗಗಳ ವರದಿಯಂತೆ ಒಡಗೂಡಿಸುವ ಆರ್ಥಿಕ ಸಂಪನ್ಮೂಲಕ್ಕಿಂತ ಹೆಚ್ಚು ಬಟವಾಡೆಯನ್ನು ಸೂಚಿಸಲಿಲ್ಲ. ಕೇಂದ್ರದ ಅನುದಾನಗಳು ಬೇಷರತ್ತಾಗಿ ತಲುಪುವಂತೆ ಸೂಚಿಸಿದ್ದು ಮೊದಲ ಟೀಕೆ. ನಮ್ಮ ಅನುದಾನಗಳು ಕೇವಲ ಗ್ರಾಮ ಪಂಚಾಯ್ತಿಗಳನ್ನು ಉಲ್ಲೇಖಿಸಿತ್ತೇ ಹೊರತು ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿಗಳ ಬಗ್ಗೆ ಏನೂ ಹೇಳಿರಲಿಲ್ಲ ಎನ್ನುವುದು ಎರಡನೆಯ ಟೀಕೆಯಿತ್ತು. ಕೇಂದ್ರೀಯ ತೆರಿಗೆಯಿಂದ ಸ್ಥಳೀಯ ಸಂಸ್ಥೆಗೆ ಬಿಡಿಯಾಗಿ ಅನುದಾನಗಳನ್ನು ಮೀಸಲಿಟ್ಟಿರಲಿಲ್ಲ ಆದ್ದರಿಂದ ಅವುಗಳ ವಿತ್ತೀಯ ಸುಸ್ಥಿರತೆಗೆ ಗಮನ ಕೊಡಲಿಲ್ಲ ಎನ್ನುವುದು ಮೂರನೆಯ ಟೀಕೆ.

ಉತ್ತಮ ಹಣಕಾಸು ನಿರ್ವಹಣೆಗೆ ಕೊಡುತ್ತಿದ್ದ ವಿಶೇಷ ಅನುದಾನವನ್ನು ನಿಲ್ಲಿಸಿದ್ದೂ ಟೀಕೆಗೊಳಗಾಯಿತು. ಒಟ್ಟಾರೆ ಬಟವಾಡೆಗೆ ರಾಜ್ಯಗಳ ಖರ್ಚನ್ನು ಮೂಲವಾಗಿಟ್ಟುಕೊಂಡದ್ದರಿಂದ, ಜಾಗರೂಕ, ಜವಾಬ್ದಾರಿಯುತ ರಾಜ್ಯಗಳಿಗಿಂತ ಬೇಜವಾಬ್ದಾರಿಯ ರಾಜ್ಯಗಳಿಗೆ ಹೆಚ್ಚಿನ ಪ್ರಯೋಜನವಾಗಿದೆಯೆನ್ನುವ ಟೀಕೆಯೂ ಇತ್ತು. ನಮ್ಮ ಆಯೋಗದ ಮತ್ತೊಂದು ವಿಚಾರ ಹೀಗಿತ್ತು – ಅಂದಿನವರೆಗೂ 1971ರ ಜನಸಂಖ್ಯೆಯನ್ನು ಆಧಾರವಾಗಿಟ್ಟು ಆಯೋಗಗಳು ಎಲ್ಲ ಲೆಕ್ಕಕಟ್ಟುತ್ತಿದ್ದರು. ನಾವು 2011ರ ಜನಸಂಖ್ಯೆಗೂ ಪ್ರಾಧಾನ್ಯತೆ ಕೊಟ್ಟು ವಿವಿಧ ಪ್ರಾಂತಗಳ ಅವಶ್ಯಕತೆಗಳನ್ನು ವಾಸ್ತವಕ್ಕೆ ಹತ್ತಿರವಾಗಿಸಿದೆವು.

‘ಜನಸಂಖ್ಯೆಯನ್ನು ಹದ್ದುಬಸ್ತಿನಲ್ಲಿಟ್ಟು, ಅಭಿವೃದ್ಧಿಯನ್ನ ಸಾಧಿಸಿದ ನಮಗೆ ನಿಧಿಗಳನ್ನು ಕಮ್ಮಿ ಮಾಡಿ ದಂಡಿಸಿದಿರಿ’ ಅಂತ ತಮಿಳನಾಡು ಕೂಗಾಡಿತು.

‘ನಮಗಿದು ದೊಡ್ಡ ಆಘಾತ. ನಾವು ಹಿಂದುಳಿದಿದ್ದೇವೆ. ಆದರೂ ನಮಗೆ ಆಯವ್ಯಯ ಖೋತಾದ ದೇಣಿಗೆ ಬಂದಿಲ್ಲ. ನಮಗಿಂತ ಉತ್ತಮವಾಗಿರುವ ಆಂಧ್ರಪ್ರದೇಶ, ಕೇರಳ, ಪಶ್ಚಿಮಬಂಗಾಳಗಳಿಗೆ ಮಾತ್ರ ಕೊಟ್ಟರು’ ಅಂತ ಆಕ್ರೋಶ ವ್ಯಕ್ತಪಡಿಸಿತು ಬಿಹಾರ್.

‘ತೆಲಂಗಾಣಾದಲ್ಲಿ ಖರ್ಚು ಕಡಿಮೆ, ಉಳಿಕೆ ಜಾಸ್ತಿ ಅಂತ ಆಯೋಗದ ಲೆಕ್ಕ ನಿರೂಪಿಸುತ್ತಿದೆ. ನೋಡಿದಿರಾ, ಹಿಂದೆ ನಮ್ಮ ದುಡ್ಡನ್ನು ಆಂಧ್ರ ಹೇಗೆ ನುಂಗುತ್ತಿತ್ತೋ? ಹಿರಿಯರ ಒಪ್ಪಂದವನ್ನು ಉಲ್ಲಂಘಿಸಿದ್ದು ತಿಳಿಯುತ್ತಿದೆ, ಇದಕ್ಕಿಂತ ದೊಡ್ಡ ಪುರಾವೆ ಬೇರೇನು ಬೇಕು’ ಅಂದಿತು ತೆಲಂಗಾಣಾ. ‘ವಿಭಜನೆಯಿಂದ ನಷ್ಟವಾಗಿದೆ. ನಮಗೆ ಯಾವುದೇ ಪರಿಹಾರವೂ, ನ್ಯಾಯವೂ ಸಿಕ್ಕಿಲ್ಲ’ ಅಂದಿತು ಆಂಧ್ರಪ್ರದೇಶ.

‘ಆಂಧ್ರಪ್ರದೇಶ ವಿಭಜನೆಯಾಗದಿದ್ದರೆ ಅವರಿಗೆ ಯಾವುದೇ ದೇಣಿಗೆ ಇರುತ್ತಿರಲಿಲ್ಲ. ಆಗ ಆ ಹಣ ಎಲ್ಲರಿಗೂ ಸಲ್ಲುತ್ತಿತ್ತು. ತೆಲುಗರು ಕಿತ್ತಾಡಿ ಲಾಭಪಡೆದರು. ಅವರ ಕಿತ್ತಾಟದಿಂದ ನಮಗೆ ನಷ್ಟವಾಯಿತು’ ಅಂತ ಮಿಕ್ಕ ರಾಜ್ಯಗಳು ಆಕ್ರೋಶ ವ್ಯಕ್ತ ಪಡಿಸಿದುವು.
‘ತೆರಿಗೆಯಲ್ಲಿ ನಮಗೆ ಭಾಗದಲ್ಲಿ ಶೇಕಡಾ ಹತ್ತರ ಕತ್ತರಿಬಿತ್ತು. ಹಿಂದಿನ ಯೋಜನೆಗಳಿಗೆ ಹಣ ಬೇಕೆಂದು ರಾಜ್ಯಗಳು ಕೇಳುತ್ತಿವೆ. ಪ್ರತ್ಯೇಕ ನಿಧಿಗಳನ್ನು ಕೊಡಲು ಎಡೆಯೇ ಇಲ್ಲದಾಗಿದೆ. ನಮ್ಮ ಆರ್ಥಿಕ ಪರಿಸ್ಥಿತಿ ಏನಾಗಬೇಕು’ ಅಂತ ಕೇಂದ್ರ ಸರಕಾರ ಗೋಳಿಟ್ಟಿತು.
ಒಟ್ಟಾರೆ ಹದಿನಾಲ್ಕನೇ ಹಣಕಾಸು ಆಯೋಗ ಎಲ್ಲರಿಗೂ ಸಮಾನವಾದ ಅಸಂತೃಪ್ತಿಯನ್ನು ಹಂಚಿಟ್ಟಿತು!

‘ನನ್ನ ನಂಬಿಕೆ ಹುಸಿಯಾಗಲಿಲ್ಲ’

ಹೈದರಾಬಾದಿಗೆ ಹೋಗುವ ಮುನ್ನ ರಾಷ್ಟ್ರಪತಿಗಳನ್ನು ಭೇಟಿ ಮಾಡಿದೆ. ಆಯೋಗ ಏರ್ಪಾಟಾಗುವುದಕ್ಕೆ ಮೊದಲು ವಿತ್ತಮಂತ್ರಿಯಾಗಿದ್ದ ಪ್ರಣಬ್ ಮುಖರ್ಜಿ ವರದಿ ಸಮರ್ಪಣೆಯ ಕಾಲಕ್ಕೆ ರಾಷ್ಟ್ರಪತಿಯಾಗಿದ್ದರು. ಹದಿನಾಲ್ಕನೆಯ ಹಣಕಾಸು ಆಯೋಗದ ಅಧ್ಯಕ್ಷನಾಗಿ ನಾನೇ ಇರಬೇಕೆಂದು ಎಷ್ಟು ಪಟ್ಟು ಹಿಡಿದರೆಂದು ಹೇಳಿ ‘ನನ್ನ ನಂಬಿಕೆಯನ್ನು ಉಳಿಸಿದಿರಿ’ ಅಂದರು. ಹಣಕಾಸು ಆಯೋಗವನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ, ಆ ಬಗ್ಗೆ ಕೈಗೊಂಡ ಕ್ರಮಗಳ ವರದಿಯನ್ನೂ ಸಂಸತ್ತಿನಲ್ಲಿ ಮಂಡಿಸುತ್ತಾರೆ. ಆತ ವರದಿಯ ಅನೇಕ ಅಂಶಗಳ ವಿವರಗಳನ್ನು ಚರ್ಚಿಸಿದರು. ವರದಿಯನ್ನು ರಾಷ್ಟ್ರಪತಿಗಳು ಕೂಲಂಕಷವಾಗಿ ಓದಿದ್ದರೆನ್ನುವುದು ಅವರ ಮಾತಿನಿಂದ ತಿಳಿಯಿತು.


ಸಾರ್ವಜನಿಕ ಜೀವನದಲ್ಲಿ ಮೂರು ದಶಕಗಳ ಕಾಲ ಆರಕ್ಕೂ ಹೆಚ್ಚಿನ ಹಣಕಾಸು ಆಯೋಗಗಳ ಜೊತೆ ವ್ಯವಹರಿಸಿದ್ದ ಮುಖರ್ಜಿ ತಮ್ಮ ಅನುಭವಸಾರವನ್ನು ನನ್ನ ಮುಂದಿಟ್ಟರು. ಬೀಳ್ಕೊಟ್ಟು ಬರುತ್ತಿರುವಾಗ ‘ಅಭಿನಂದನೆಗಳು, ನೀವು ಬಹಳ ಮೂಲಭೂತವಾದ ವಿಷಯಗಳ ಬಗ್ಗೆ ಶ್ರದ್ಧೆ ವಹಿಸಿದ್ದೀರಿ..’ ಅಂದರು ಕಿರುನಗೆಯೊಂದಿಗೆ.