”ಮದುವೆಗಳು ಸ್ವರ್ಗದಲ್ಲೇ ನಿರ್ಧರಿಸಲ್ಪಡುತ್ತವಂತೆ! ಅಲ್ಲದಿದ್ದರೆ ಎಂದೂ ಕೇಳರಿಯದ ಊರಿಂದ ಬಂದ ಬಕ್ಕ ತಲೆಯ ಹುಡುಗನೊಬ್ಬನ ಜಾತಕ ಹೀಗೆ ಪಟ್ಟಂತ ಕೂಡುವುದೆಂದರೇನು! ನಿಶ್ಚಿತಾರ್ಥ ಕೂಡಾ ಇಲ್ಲದೇ ಒಮ್ಮೆಗೇ ಮದುವೆ ಆಗಿಹೋಗುವುದೆಂದರೇನು! ನಾನು ಏನಾದರೂ ಉಪಾಯ ಹೂಡಿ ನಕಾರ ಹೊರಡಿಸುವ ಮುನ್ನ ಇನ್ನೊಬ್ಬರ ಮನೆಯ ಸೊತ್ತಾಗಿ ಹೋಗುವುದೆಂದರೇನು! ಉಸಿರು ತಿರುಗೋದರೊಳಗೆ ಇಂತಹ ಸಿಡಿಲು ಎರಗೋದಂದರೇನು!”
ಸದ್ದು ಮಾಡಿ ಹ್ಯಾಂಗ ಹೇಳಲಿ?’ ಲೇಖಕಿ ಮಧುರಾಣಿ ಬರೆಯುವ ಹೆಣ್ಣೊಬ್ಬಳ ಅಂತರಂಗದ ಪುಟಗಳ ಹನ್ನೊಂದನೆಯ ಕಂತು.

 

ಒಬ್ಬಳೇ ಕೂತು ಆಕಾಶ ನೋಡೋದು ನನ್ನ ಹಳೇ ದುರಭ್ಯಾಸ ಅಂತ ಮೊದಲೇ ಹೇಳಿದ್ದೆನಲ್ಲಾ.. ವರುಷಗಳು ಉರುಳಿದ ಮೇಲೂ ನನಗಾಗಿ, ನನ್ನದೇ ಆದ ಹವ್ಯಾಸವಾಗಿ ಉಳಿದ ಖಾಸಗೀ ಅನುಭವ ಇದೊಂದೇ. ನನ್ನ ತೀರದ ನೋವುಗಳ ಬುತ್ತಿಯನ್ನು ಆ ಹೊತ್ತು ಮಾತ್ರ ಬಿಚ್ಚಿಡುತ್ತಿದ್ದೆ. ಅವನೂ ಅಪರೂಪಕ್ಕೆ ಕಾಣುವನು. ಕಂಡಾಗ ನನ್ನೆಲ್ಲ ನೋವೂ ಕ್ಷಣಮಾತ್ರದಲ್ಲಿ ಹೀರಿ ಮರೆಸುವನು. ಸ್ನೇಹಿತರಿಲ್ಲದ ಕಹಿಯನ್ನೂ ಇಂಗಿಸುವನು. ಬರುಬರುತ್ತಾ ಇದೇ ನನ್ನ ಆಲಂಬವಾಗುವುದೆಂದು ಗೊತ್ತೇ ಇರಲಿಲ್ಲ. ಕಾಲಕ್ರಮೇಣ ನಾನು ಅವನ ಭಂಗಿ ನೋಡಿ ತಿಥಿಗಳನ್ನೇ ನಿರ್ಧರಿಸುತ್ತಿದ್ದೆ. ಇವನು ಷಷ್ಠಿಯ ಚಂದ್ರ, ಇದೋ ಇವನು ದ್ವಾದಶಿಯವನು.. ಇನ್ನು ಹುಣ್ಣಿಮೆ ಹೆಚ್ಚೇನೂ ದೂರ ಉಳಿದಿಲ್ಲ.. ಅಯ್ಯೋ ಇದಾಗಲೇ ಅಷ್ಟಮಿ, ಅಮಾವಾಸ್ಯೆ ಬಂದೇಬಿಟ್ಟಿತು… ಹೀಗೆ ಪಂಚಾಂಗ ನೋಡದೇ ನಿರ್ಧರಿಸತೊಡಗಿದೆ. ಆಗೆಲ್ಲಾ ಅಬಚಿ ರಾಗವಾಗಿ ಹಾಡುತ್ತಿದ್ದ ‘ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ..’ ಹಾಡು ತುಂಬಾ ನೆನಪಾಗುತ್ತಿತ್ತು. ಅಬಚಿಯ ನೆನಪು, ಚಂದ್ರ, ಅವನ ಸುತ್ತಾ ಚೆಲ್ಲಾಡಿ ನರ್ತಿಸುತ್ತಿದ್ದ ನಕ್ಷತ್ರಗಳು, ಖಾಲಿ ಬಿದ್ದು ಕೊಳೆತ ಮನಸು ಹೀಗೆ ಎಲ್ಲವೂ ಒಟ್ಟಿಗೇ ಸೇರಿ ನನ್ನ ಸುತ್ತಲೂ ಹಿತವಾದ ಪ್ರಭಾವಲಯವೊಂದು ಹುಟ್ಟುತ್ತಿತ್ತು. ಆಗ ತದ್ಭಾವಕ್ಕೆ ನಾಲ್ಕಾರು ಸಾಲಿನ ಕವಿತೆಗಳೂ ಹುಟ್ಟುತ್ತಿದ್ದವು. ಅವುಗಳನ್ನು ಓದಿ ಯಾರಾದರೂ ನಕ್ಕಾರು ಎಂದು ಬಹಳ ಕಷ್ಟದಿಂದ ಬಚ್ಚಿಟ್ಟಿದ್ದೆ.

ಒಮ್ಮೆ ಶ್ರೀಧರನ ಕೈಗೆ ಈ ಪುಸ್ತಕ ಸಿಕ್ಕು ಬಹಳವೇ ಛೇಡಿಸಿದ್ದ. ನಿನ್ನ ಕನಸುಗಳಲ್ಲಿ ಶಶಾಂಕನೇ ಇರಬೇಕು ಅಂತ ವ್ಯಂಗ್ಯವಾಡಿದ್ದ. ಶಶಾಂಕನನ್ನು ನಾವು UK ಎಂದೇ ಕರೆಯುತ್ತಿದ್ದೆವು. ಹಾಗಂದ್ರೇನು? ಅಂತ ಅವನು ಬಹಳ ಮುಗ್ಧವಾಗಿ ಕೇಳುತ್ತಿದ್ದ. ಆಗ ನಾವಿಬ್ಬರೂ ‘ನೀನು ಈ ಮನೆಯಲ್ಲಿ ನಮ್ಮ ಪಾಲಿನ ಉಷಾಕಿರಣ ಕಣೋ.. ಅದಕ್ಕೇ UK ಅಂತೀವಿ’ ಅಂತ ಸುಳ್ಳು ಹೇಳಿ ಅದರಲ್ಲೂ ಮಜಾ ತಗೊಂಡಿದ್ದೆವು. ವಾಸ್ತವದಲ್ಲಿ ಅದು ‘ಉತ್ತರಕುಮಾರ’ ಎಂದಾಗಿತ್ತು. ಅವನು ಅತ್ತೆ ಮಾವನಿಗೆ ಹೆದರುತ್ತಿದ್ದುದೂ, ಅದು ನಮಗೆ ಗೊತ್ತಾದರೆ ನಾನು ಅವನನ್ನು ಮದುವೆಯಾಗುವುದಿಲ್ಲ ಎಂದು ಸುಳ್ಳೇ ಧೈರ್ಯದ ಬಡಾಯಿಗಳನ್ನು ನಮ್ಮ ಮುಂದೆ ಕೊಚ್ಚುತ್ತಿದ್ದುದೂ ನಮಗೆ ಮಹಾಭಾರತದ ಉತ್ತರ ಪೌರುಷವನ್ನು ನೆನಪು ಮಾಡುತ್ತಿದ್ದವು.

ಮನೆಯಲ್ಲಿ ಎಲ್ಲರಿಗೂ ನಾನೂ ಶ್ರೀಧರನೂ ಅಡ್ಡ ನಾಮಾಂಕಿತಗಳನ್ನು ಇಟ್ಟಿದ್ದೆವು. ಇದು ನಮ್ಮ ಸಂವಹನಕ್ಕೆ ಅಗತ್ಯ ಬೇಕಾಗಿತ್ತು. ಅತ್ತೆಯನ್ನು MM ಎಂತಲೂ ಮಾವನನ್ನು AG ಎಂತಲೂ ಕರೆಯುತ್ತಿದ್ದೆವು. ಇವು ಮಹಿಷಾಸುರ ಮರ್ದಿನಿ ಹಾಗೂ ಅಮ್ಮಾವ್ರ ಗಂಡ ಎಂತಿದ್ದವು. ಅಮ್ಮನಿಗೆ HR ಎಂದಿತ್ತು. ಇದನ್ನು human resource ಎಂದು ನಂಬಿಸಲು ಹೆಚ್ಚೇನೂ ಸಮಯ ಹಿಡಿಯಲಿಲ್ಲ. ಆದರೆ ಇದರ ನಿಜಾರ್ಥ ಹೆಣ್ಣು ರಾಕ್ಷಸಿ ಎಂದಾಗಿತ್ತು. ಹೀಗೆ ಎಂಥಾ ನೋವಲ್ಲೂ ಇಬ್ಬರೂ ಹೊಟ್ಟೆ ಹುಣ್ಣಾಗುವಷ್ಟು ನಗುವ ಹಲವು ವಾಮಮಾರ್ಗಗಳಿಗೇನೂ ಬರವಿರಲಿಲ್ಲ. ಆದರೆ ಚಂದಿರನ ಪೂರ್ಣಾಕಾರ ಎಷ್ಟು ಕ್ಷಣಿಕವೋ ನಮ್ಮ ಸಂತಸದ ದಿನಗಳು ಕೂಡಾ ಅಷ್ಟೇ ಎಂದು ಯಾರಿಗೆ ತಾನೇ ಗೊತ್ತಿತ್ತು..?
***

ನಾನು ಕನಸಿನಲ್ಲಿ ನೋಡುತ್ತಿದ್ದೇನಾ ಅಥವಾ ನಿಜದಲ್ಲಿ ಇದೆಲ್ಲಾ ನಡೆಯುತ್ತಿದೆಯಾ ಗೊತ್ತಾಗಲೇ ಇಲ್ಲ. ನನಗೂ ಅಮ್ಮನ ಮನೆಯ ಮರ್ಯಾದೆಯನ್ನು ಇನ್ನು ಹೆಚ್ಚು ದಿನ ತೊಳೆಯುವ ಇರಾದೆ ಹೊರಟುಹೋದಂತಿತ್ತು. ತಾತನ ಸಾವು ಅಮ್ಮನನ್ನು ತುಸು ಹೆಚ್ಚೇ ಧೃತಿಗೆಡಿಸಿತ್ತು. ಎಲ್ಲೋ ಹೇಗೋ ಅವನೊಬ್ಬನು ಬದುಕಿದ್ದದ್ದು ನಮಗೆ ಇದ್ದ ಜಾಗದಲ್ಲೇ ಹೇಗೆ ಶ್ರೀರಕ್ಷೆಯಾಗಿತ್ತೋ ಅದು ಅವನು ಸತ್ತು ನಾವು ಬಿಸಿಲ ಝಳಕ್ಕೆ ಬೀದಿಗೆ ಬಂದ ಮೇಲೆಯೇ ಅರಿವಾಗಿತ್ತು. ಮಾವನ ಮನೆಯ ಪರಿಸ್ಥಿತಿ ಹದಗೆಡುತ್ತಿತ್ತು. ಮಾವ ಮಾತುಮಾತಿಗೂ ಸಿಡುಕುತ್ತಿದ್ದ. ತಿಂಗಳಿಗೊಮ್ಮೆ ತಾತನ ತಿಥಿಗೆಂದು ಎಲ್ಲರೂ ಸೇರಿದಾಗ ನಮ್ಮದೇ ದೊಡ್ಡ ವಿಚಾರವಾಗಿ ಅಮ್ಮನೂ ನಾನೂ ಅವಮಾನದಲ್ಲಿ ಬೆಂದು ಹಿಡಿಯಾಗುತ್ತಿದ್ದೆವು. ಶ್ರೀಧರನಂತೂ ಅಸಹಾಯಕತೆಯಿಂದ ಉರಿದುಹೋಗುತ್ತಿದ್ದ. ನಾನು ತಟಸ್ಥಳಾಗಿ ಹೋಗಿದ್ದೆ. ಏನಾದರೂ ಆಗಿಹೋಗಲಿ, ಅಮ್ಮ ತೃಪ್ತಳಾದರೆ ಸಾಕು ಎಂಬ ನಿರ್ಧಾರಕ್ಕೆ ಬಂದುಬಿಟ್ಟೆ. ತತ್ಪರಿಣಾಮವು ದೊಡ್ಡದೇ ಇತ್ತು.

ಅಬಚಿಯ ನೆನಪು, ಚಂದ್ರ, ಅವನ ಸುತ್ತಾ ಚೆಲ್ಲಾಡಿ ನರ್ತಿಸುತ್ತಿದ್ದ ನಕ್ಷತ್ರಗಳು, ಖಾಲಿ ಬಿದ್ದು ಕೊಳೆತ ಮನಸು ಹೀಗೆ ಎಲ್ಲವೂ ಒಟ್ಟಿಗೇ ಸೇರಿ ನನ್ನ ಸುತ್ತಲೂ ಹಿತವಾದ ಪ್ರಭಾವಲಯವೊಂದು ಹುಟ್ಟುತ್ತಿತ್ತು. ಆಗ ತದ್ಭಾವಕ್ಕೆ ನಾಲ್ಕಾರು ಸಾಲಿನ ಕವಿತೆಗಳೂ ಹುಟ್ಟುತ್ತಿದ್ದವು.

ಮದುವೆಗಳು ಸ್ವರ್ಗದಲ್ಲೇ ನಿರ್ಧರಿಸಲ್ಪಡುತ್ತವಂತೆ! ಅಲ್ಲದಿದ್ದರೆ ಎಂದೂ ಕೇಳರಿಯದ ಊರಿಂದ ಬಂದ ಬಕ್ಕ ತಲೆಯ ಹುಡುಗನೊಬ್ಬನ ಜಾತಕ ಹೀಗೆ ಪಟ್ಟಂತ ಕೂಡುವುದೆಂದರೇನು! ನಿಶ್ಚಿತಾರ್ಥ ಕೂಡಾ ಇಲ್ಲದೇ ಒಮ್ಮೆಗೇ ಮದುವೆ ಆಗಿಹೋಗುವುದೆಂದರೇನು! ನಾನು ಏನಾದರೂ ಉಪಾಯ ಹೂಡಿ ನಕಾರ ಹೊರಡಿಸುವ ಮುನ್ನ ಇನ್ನೊಬ್ಬರ ಮನೆಯ ಸೊತ್ತಾಗಿ ಹೋಗುವುದೆಂದರೇನು! ಉಸಿರು ತಿರುಗೋದರೊಳಗೆ ಇಂತಹ ಸಿಡಿಲು ಎರಗೋದಂದರೇನು!

* * *
ಅದೇಕೋ ಅಮ್ಮ ತೃಪ್ತಳಾಗಿದ್ದಳು. ನಗುನಗುತ್ತಾ ಹುರುಪಿನಿಂದ ಓಡಾಡುತ್ತಿದ್ದಳು. ಅತ್ತೆ-ಮಾವಂದಿರಿಗೆ ಒಂದು ದೊಡ್ಡ ನಿಟ್ಟುಸಿರು ಹೊರಬಿದ್ದಿತ್ತು. ಆದರೂ ಈ ಮದುವೆ ವಿರೋಧಿಸಿ ನನ್ನ ಮನಸಿನಲ್ಲಾಗುತ್ತಿದ್ದ ಹೋರಾಟಕ್ಕೆ ಉತ್ತರವಿರಲಿಲ್ಲ. ಯಾಕೋ ಅಬಚಿಯ ನೆನಪು ಕೊಲ್ಲುತ್ತಿತ್ತು. ಅವಳು ಮದುವೆಗೆ ಬಂದವಳು ಅಮ್ಮನ ಬಳಿ, “ಅಮ್ಮಾ ನಂಗ್ಯಾಕೋ ಇದು ಸರಿ ಬರ್ತಿಲ್ಲ. ಹುಡುಗ ನಮ್ಮ ಕೂಸಿನಷ್ಟು ಮುಗ್ಧನಲ್ಲ ಅನಿಸ್ತಿದೆ. ಅದೂ ಅಲ್ಲದೇ ಕಾಲೇಜು ಮಧ್ಯದಲ್ಲಿ ಬಿಡಿಸಿ ಮದುವೆ ಮಾಡೋದು ಸರೀನಾ? ಅವನೂ ಅಂಥಾ ವಿದ್ಯಾವಂತನೇನಲ್ಲ. ನಾಳೆ ಏನಾದರೂ ಎಡವಟ್ಟಾದರೆ ಇವಳ ಗತಿಯೇನು? ಯೋಚ್ಸಿದೀಯಾ? ಜಾತಕ ಕೂಡಿದರೆ ಆಯ್ತು ಅನ್ನೋಕೆ ಇದು ನಮ್ಮ ಕಾಲವಲ್ಲ.” ಅಂದದ್ದು ಕೇಳಿಸಿತ್ತು. ಅಪ್ಪ ಬರಲಿಲ್ಲ. ಅವರು ಮದುವೆಯನ್ನು ದೂರದಿಂದಲೇ ವಿರೋಧಿಸುತ್ತಿದ್ದರು ಎಂಬ ವಿಷಯ ನನಗೆ ತಡವಾಗಿ ತಿಳಿಯಿತು. ನನಗಾಗಿಯಾದರೂ ಅವರು ಬರಬಹುದಿತ್ತು ಎನ್ನಿಸಿ ಬರದೇ ಹೋದ ಮೇಲೆ ನನ್ನವರ ಪಟ್ಟಿಯಲ್ಲಿ ಅವರ ಹೆಸರು ಯಾಕಿರಬೇಕೆಂಬ ಜಿಜ್ಞಾಸೆ ಕಾಡಹತ್ತಿ ಅಪ್ಪನ ಮೇಲೆ ದ್ವೇಷದ ಕಿಡಿಯೊಂದು ಮೆಲ್ಲಗೆ ಹೊತ್ತಿಕೊಂಡಿತು.

ತಿಂಗಳಿಗೊಮ್ಮೆ ತಾತನ ತಿಥಿಗೆಂದು ಎಲ್ಲರೂ ಸೇರಿದಾಗ ನಮ್ಮದೇ ದೊಡ್ಡ ವಿಚಾರವಾಗಿ ಅಮ್ಮನೂ ನಾನೂ ಅವಮಾನದಲ್ಲಿ ಬೆಂದು ಹಿಡಿಯಾಗುತ್ತಿದ್ದೆವು. ಶ್ರೀಧರನಂತೂ ಅಸಹಾಯಕತೆಯಿಂದ ಉರಿದುಹೋಗುತ್ತಿದ್ದ. ನಾನು ತಟಸ್ಥಳಾಗಿ ಹೋಗಿದ್ದೆ. ಏನಾದರೂ ಆಗಿಹೋಗಲಿ, ಅಮ್ಮ ತೃಪ್ತಳಾದರೆ ಸಾಕು ಎಂಬ ನಿರ್ಧಾರಕ್ಕೆ ಬಂದುಬಿಟ್ಟೆ.

ನೋಡಲು ಸುಮಾರಾಗಿದ್ದ ಕಟ್ಟುಮಸ್ತಾಗಿದ್ದ ಎಣ್ಣೆಗೆಂಪಿನ ಬಕ್ಕ ತಲೆಯ ತಾಯಿ-ತಂದೆಯಿಲ್ಲದ ಆ ಹುಡುಗನನ್ನು ನಾನು ಸರಿಯಾಗಿ ನೋಡಿದ್ದೇ ಮದುವೆಯ ದಿನ. ಅಮ್ಮನಿಗೆ ನನ್ನ ಮದುವೆ ಹಳೇ ಕಾಲದಂತೆ ಮದುವೆಗೆ ಮುನ್ನ ವರನೊಂದಿಗೆ ಯಾವ ಸಂಪರ್ಕವಿಲ್ಲದೇ ಅವಳ ಮನೆತನಕ್ಕೆ ಯಾವ ಅಗೌರವದ ಅಂಟಿಲ್ಲದೇ ನಡೆಯಬೇಕಿತ್ತು. ಮೊದಲೇ ಒಂದು ನಿಶ್ಚತಾರ್ಥ ಮುರಿದವಳು ನಾನು. ಹೆಡೆಮುರಿಗೆಯಾದರೂ ಕಟ್ಟಿ ಮದುವೆ ಮಾಡಿಸಲು ಅಮ್ಮ ತಯಾರಿದ್ದಳು. ಆ ಪುಣ್ಯಾತ್ಮನಾದರೋ ಅದು ಹೇಗೆ ಏನೂ ನೋಡದೇ ಕೇಳದೇ ಹೇಳದೇ ಒಪ್ಪಿಕೊಂಡನೋ ಭಗವಂತನೇ ಬಲ್ಲ. ತಮ್ಮನಂತೂ ಇನ್ನು ತನ್ನ ಅಸ್ಥಿತ್ವವೇ ಉಳಿದಿಲ್ಲವೆಂಬಂತೆ ಅವನ ಚಿಗುರು ಮೀಸೆಯಡಿ ಮಾತ್ರ ಕೋಪ ತೋರುತ್ತಾ ಮಾತು ಬಿಟ್ಟು ವಿರೋಧಿಸತೊಡಗಿದ. ನಾನೂ ಅವನೂ ಕಣ್ಣಲ್ಲೇ ನೋವು ಹಂಚಿಕೊಳ್ಳುತ್ತಾ ಯಾರಿಗೂ ಕಾಣದೇ ಕಣ್ಣೀರು ಹಾಕುತ್ತಾ ಮಾತು ಭಾವನೆಗಳು ಎಲ್ಲವನ್ನೂ ನುಂಗಿಬಿಟ್ಟೆವು. ಅಂದಿನ ವಾಲಗದ ಸದ್ದು ಕರ್ಕಶವಾಗಿ ನನ್ನ ಕಿವಿಗಳಲ್ಲಿ ಮರಣಮೃದಂಗದಂತೆ ಅನುರಣಿಸುತ್ತಾ ಹಾಗೇ ಉಳಿದುಹೋಯಿತು.

* * *
ಆರು ತಿಂಗಳು ಹೇಗೆ ಕಳೆದೆನೆಂಬ ಪರಿವೆಯೇ ಇಲ್ಲದೇ ಕಳೆದುಬಿಟ್ಟಿದ್ದೆ. ಮೊದಲಿನ ಉತ್ಸಾಹವಿರಲಿಲ್ಲ. ನಮ್ಮೂರಿಗೆ ದೂರದಲ್ಲಿ ಒಂದು ಹಂದಿಗೂಡಿನಂತಹ ಮನೆಯಲ್ಲಿ ನನ್ನ ಸಂಸಾರ ನಡೆದಿತ್ತು. ಬೆಳಗೆಲ್ಲಾ ಕೂಲಿ ಆಳಿನಂತೆ ಮನೆಗೆಲಸ.. ರಾತ್ರಿ ನಿತ್ಯ ಅತ್ಯಾಚಾರಕ್ಕೆ ದೇಹವನ್ನು ಅಣಿಗೊಳಿಸುವುದು.. ಒಂದು ನರಕದಂತಹ ನೀಳ ರಾತ್ರಿ.. ಮತ್ತೊಂದು ಯಾಕಾದರೂ ಬಂತೋ ಎಂಬಂತಹ ಬೆಳಗು… ಒಟ್ಟಾರೆ ಬದುಕಿದ್ದೆನೆಂಬ ಪುರಾವೆಯೆಂದರೆ ಉಸಿರು ಮಾತ್ರ ಎಂಬಂತಾಗಿತ್ತು. ಮದುವೆಯಾದ ದಿನದಿಂದಲೂ ಮನೆ ಬಿಟ್ಟು ಎಲ್ಲೂ ಹೋಗಲಿಲ್ಲ. ತವರಿಗೆ ಹೋಗಲು ಹಠ ಹಿಡಿಯುವುದರಲ್ಲಿ ಅರ್ಥವೇ ಇದ್ದಂತೆ ಕಾಣಲಿಲ್ಲ. ಒಂದೆರಡು ಬಾರಿ ಅಮ್ಮನೂ ಮಾವನೂ ಬಂದು ಕುಂಕುಮ ಕೊಟ್ಟು ಹೋಗಿದ್ದರು. ಮನೆಗೆ ಬಾ ಎಂದರೆ ಎಲ್ಲಿ ಅದೇ ನೆಪವಾಗಿ ಊರಿಗೆ ಬಂದು ಯಾರೊಡನೆಯೋ ಓಡಿಹೋಗುವೆನೋ ಎಂಬ ಭಯಕ್ಕೆ ಅಮ್ಮ ಬಾಯಿ ಮಾತಿಗೂ ಬಾ ಎನ್ನಲಿಲ್ಲ. ನಾನೂ ಬರುವ ಇರಾದೆಯನ್ನೂ ತೋರಲಿಲ್ಲ. ಶ್ರೀಧರನು ಮಾತ್ರ ತಿಂಗಳಿಗೊಮ್ಮೆ ಬಂದು ನನ್ನ ನೋಡಿಕೊಂಡು ಹೋಗುತ್ತಿದ್ದ.

ಇನ್ನೂ ಓದುತ್ತಿದ್ದ ಅವನು ಬಸ್ ಚಾರ್ಜು ಹಾಗೂ ಇನ್ನಿತರೇ ಖರ್ಚಿಗೆ ದುಡ್ಡು ಹೇಗೆ ಹೊಂದಿಸುತ್ತಿದ್ದನೋ ನನಗಂತೂ ಕೇಳಲು ನೈತಿಕ ಬಲವೇ ಇರಲಿಲ್ಲ. ಪ್ರತಿ ಸಾರಿಯೂ ಅವನು ಹೊರಡುವ ಮೊದಲು ನಾನು ಕಣ್ಣೀರಾಗುತ್ತಿದ್ದೆ. ನನ್ನ ಮುಖ ನೋಡಲು ಧೈರ್ಯವಿಲ್ಲದೇ ಅವನು ತಲೆತಗ್ಗಿಸಿ ನಡೆದುಬಿಡುತ್ತಿದ್ದ. ಮೂಕ ಸಂವೇದನೆಯ ತಂತುವೊಂದು ನಮ್ಮಿಬ್ಬರ ನಡುವೆ ಅತೀತವಾದ ಸಂಪರ್ಕವೊಂದನ್ನು ಕಟ್ಟಿತ್ತು. ಮೊದಲ ಗೌರಿ ಹಬ್ಬಕ್ಕೆ ಅವನು ಕೂಡಿಟ್ಟ ದುಡ್ಡಲ್ಲಿ ಒಂದು ಹಳದಿ ಬಣ್ಣದ ಚೂಡಿದಾರವೊಂದನ್ನು ತಂದುಕೊಟ್ಟು, “ಅದ್ಯಾಕೆ ಹಬ್ಬಕ್ಕೆ ಸೀರೇನೇ ಉಡಬೇಕೇ ನೀನು? ಡ್ರೆಸ್ ಹಾಕ್ಕೋ..” ಅಂದಿದ್ದ. ಎಲ್ಲರೂ ಸೇರಿ ಕಟ್ಟಿಹಾಕಿದ ಬದುಕಿಗೆ ಶತಾಯಗತಾಯ ಮುಕ್ತಿ ಕೊಡಿಸಿ ನ್ಯಾಯ ಒದಗಿಸುವ ಹಠ ತೊಟ್ಟವನಂತೆ ಅವನು ನಡೆದುಕೊಳ್ಳುವ ರೀತಿ ನೋಡಿ ಅವನ ಮೇಲೆ ಮಮತೆಯೂ ಕರುಣೆಯೂ ಮೂಡಿತ್ತು.