ಹೋದ ವರ್ಷದಿಂದ ಮೆಲ್ಬರ್ನಿನಲ್ಲಿ ಇಂಡಿಯದ ವಿದ್ಯಾರ್ಥಿಗಳ ಮೇಲೆ ಹೆಚ್ಚುತ್ತಿರುವ ಹಲ್ಲೆಗಳು ಸುದ್ದಿ ಮಾಡಿದೆ. ಇಂಡಿಯದಿಂದ ಬಂದು ಓದುತ್ತಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಹೆಚ್ಚಾಗುತ್ತಿರುವ ಹೊತ್ತಲ್ಲಿ ಇದು ಎಲ್ಲರ ತಲೆ ಕೆಡಿಸಿದೆ. ಇಂಡಿಯನ್ ವಿದ್ಯಾರ್ಥಿ ಸಂಘಗಳಿಂದ ಹಿಡಿದು ಯೂನಿವರ್ಸಿಟಿ, ಮೆಲ್ಬರ್ನಿನ ಪೋಲೀಸ್, ರಾಜ್ಯ ಸರ್ಕಾರ ಸೇರಿದಂತೆ ಆಸ್ಟ್ರೇಲಿಯದ ಸರ್ಕಾರದವರೆಗೆ ಎಲ್ಲರೂ ಇದರ ಬಗ್ಗೆ ಮಾತಾಡಿದ್ದಾರೆ. ತಮ ತಮಗೆ ಕಂಡಂತೆ, ಸರಿ ಹೊಂದುವಂತೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ.

ಅಂಕಿ-ಅಂಶಗಳ ಪ್ರಕಾರ ಇಂಡಿಯದ ವಿದ್ಯಾರ್ಥಿಗಳ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿರುವುದು ದಿಟ. ಆದರೆ ಅದು ಜನಾಂಗೀಯ ಹಲ್ಲೆ ಎಂದು ಹೇಳಲಾಗದು ಎಂದು ಹೇಳುತ್ತಲೇ ಪೋಲೀಸರು ಇಂಡಿಯ ರೆಫೆರನ್ಸ್ ಗ್ರೂಪ್ ಎಂಬುದನ್ನು ರಚಿಸಿದರು. ಅದರಲ್ಲಿ ಇಂಡಿಯನ್ ಸಮುದಾಯದ ಮುಖಂಡರನ್ನು ಒಟ್ಟುಗೂಡಿಸಿ ಅವರೊಡನೆ ಚರ್ಚಿಸಿದರು. ಇದರಿಂದ ಪೋಲೀಸರು ಹೊಸದೇನಾದರೂ ಕಲಿಯುವಂತಾದರೆ ಒಳ್ಳೆಯದಾಗುವುದೇನೋ ಹೌದು. ಆದರೆ ಇಂಡಿಯನ್ ಸಮುದಾದಯದ ಜತೆ ನಡೆದ ಸಂಗತಿಯೇ ಬೇರೆ.

ಆ ರೆಫೆರನ್ಸ್ ಗುಂಪಿನೊಡನೆ ನಡೆದ ಸಂವಾದದ ನಂತರ ಪೋಲೀಸರು ಹೇಳಿದ ಮಾತುಗಳು ನಗೆಪಾಟಲಾಗಿದ್ದವು. “ಇಂಡಿಯದ ವಿದ್ಯಾರ್ಥಿಗಳು ಟ್ರೈನು ಬಸ್ಸುಗಳಲ್ಲಿ ತಮ್ಮ ಭಾಷೆಯಲ್ಲಿ ಜೋರಾಗಿ ಮಾತಾಡ ಕೂಡದು, ಐಪಾಡದ್, ಲ್ಯಾಪ್‌ಟಾಪ್‌, ಮೋಬೈಲಿನಂತಹ “ಶ್ರೀಮಂತ ಸರಕು”ಗಳನ್ನು ತೋರಿಸಿಕೊಂಡು ಓಡಾಡದಿದ್ದರೆ ಒಳ್ಳೆಯದು” ಹೀಗಲ್ಲಾ ಮಾತುಗಳನ್ನು ಆಡಿದರು. ಹಲ್ಲೆಗೊಳಗಾದವರ ನಡತೆಯನ್ನೇ ತಿದ್ದುವ ಪೋಲೀಸರ ಮಾತುಗಳನ್ನು ಪತ್ರಿಕೆಗಳು ಎತ್ತಾಡಿ ಇದೆಂತಹ ಹುಚ್ಚು ಎಂದು ಗೇಲಿ ಮಾಡಿದರು. ಈ ಮಾತುಗಳನ್ನು ಕಾಕೇಷಿಯನ್ ಮಂದಿಗಾಗಲಿ ಇನ್ನಾವುದೇ ಸಮುದಾಯದ ಮಂದಿಗಾಗಲಿ ಹೇಳಿದ್ದರೆ ದೊಡ್ಡ ರಾದ್ಧಾಂತವಾಗುತ್ತಿತ್ತೇನೋ. ಆಸ್ಟ್ರೇಲಿಯದಲ್ಲಿ ಹಲ್ಲೆಗೆ ಒಳಗಾದವರನ್ನೇ ತಿದ್ದಲು ಹೊರಡುವುದು ಒಂದು ಹಳೆಯ ಖಯಾಲಿ. ಅದನ್ನು ಹೊಸ ಹೊಸ ಹೆಸರಲ್ಲಿ, ಹೊಸ ಹೊಸ ರೂಪದಲ್ಲಿ ಮಾಡುತ್ತಲೇ ಇದ್ದಾರೆ. ಅಬಾರಿಜಿನಿಗಳ ಸಮುದಾಯದಿಂದ ಹಿಡಿದು ವಲಸೆ ಬರುತ್ತಿರುವ ಎಲ್ಲ ಸಮುದಾಯಗಳೊಂದಿಗೂ ಇದನ್ನು ಮಾಡಿದ್ದಾರೆ. ಈ ಹೊಸ ಪ್ರಯತ್ನ ಪಡೆಯುತ್ತಿರುವ ರೂಪ ನೋಡಿ ದಡಬಡಿಸಿದ ಪೋಲೀಸರು ತಟ್ಟನೆ ಇದು ಇಂಡಿಯನ್ ಸಮುದಾಯದ ಮುಖಂಡರ ಅಭಿಪ್ರಾಯವೇ ಹೊರತು ತಮ್ಮದಲ್ಲ ಎಂದು ಹೇಳಿಬಿಟ್ಟರು. ಇದು ಹೌದಾದರೆ, ಆ ಸಮುದಾಯದ ಮುಖಂಡರು ಇನ್ನೆಂತವರು ಇರಬಹುದು ಎಂದು ಬಿಡಿಸಿ ಹೇಳಬೇಕಾಗಿಲ್ಲ.

ಇಂಡಿಯದ ಪತ್ರಿಕೆಗಳಲ್ಲಿ ಇದರ ಬಗ್ಗೆ ಸುದ್ದಿ ಬರತೊಡಗಿದ್ದು ಯೂನಿವರ್ಸಿಟಿಗೆ ಹಾಗು ಸರ್ಕಾರಕ್ಕೆ ಮತ್ತೂ ಪೀಕಲಾಟಕ್ಕೆ ಇಟ್ಟುಕೊಂಡಿತು. ತಾವು ಕೈಗೊಂಡ ಕೆಲಸ ಹಾಗು ಮಾಡಿರುವ ಬದಲಾವಣೆಗಳ ಬಗ್ಗೆ ಒತ್ತಿ ಒತ್ತಿ ಹೇಳಲಾರಂಭಿಸಿದರು. ಇದೆಲ್ಲಾ ಮಾತುಕತೆ ನಡೆದಿರುವಾಗ ಅಲ್ಲಲ್ಲಿ ಹಲ್ಲೆಗಳು ನಡೆದೇ ಇತ್ತು. ಈ ವಾರವಷ್ಟೇ ಟ್ರೈನಿನಲ್ಲಿ ಇಂಡಿಯದ ಹುಡುಗನೊಬ್ಬನ ಹತ್ತಿರ ಸಿಗರೇಟು, ಕೇಳಿ ಅವನು ಇಲ್ಲ ಎಂದಾಗ ನಾಕಾರು ಪುಂಡರು ಅವನಿಗೆ ಹೊಡೆದಿದ್ದಾರೆ. ಹೊಡಿಸಿಕೊಂಡ ಹುಡುಗನ ಪ್ರಕಾರ ಎಷ್ಟೇ ಬೇಡಿಕೊಂಡರೂ ಸುತ್ತಮುತ್ತಲಿದ್ದ ಯಾರೂ ಸಹಾಯಕ್ಕೆ ಬರಲಿಲ್ಲವಂತೆ. ಪುಂಡರು ಓಡಿ ಹೋದ ಮೇಲೆ ಇವನನ್ನು ಆಸ್ಪತ್ರೆಗೆ ಕರೆದೊಯ್ದರು. ಈತನೇನೋ ಪೋಲೀಸಿಗೆ ದೂರಿತ್ತ. ಹಲವರು ತಮ್ಮ ವೀಸಾಕ್ಕೆ ತೊಂದರೆ ಆದೀತು ಎಂದು ಅದೂ ಮಾಡುವುದಿಲ್ಲ. ಪೋಲೀಸರ ಕೆಲಸ ಮತ್ತಷ್ಟು ಕಠಿಣವಾಗುತ್ತಾ ಹೋಗುತ್ತದೆ.

ಒಂದು ಮುಕ್ತ ಸಮಾಜದಲ್ಲಿ ಯಾರಾದರೂ ಎಷ್ಟು ಹೊತ್ತಿಗಾದರೂ ದಿಗಿಲಿಲ್ಲದೆ ಓಡಾಡುವಂತಿರಬೇಕು. ಹಾಗೆಂದ ಮಾತ್ರಕ್ಕೆ ಕೆಡುಕುಗಳು ಇರುವುದೇ ಇಲ್ಲ ಎಂದಲ್ಲ. ಆದರೆ ಅದರ ಭಯದಲ್ಲೇ ಓಡಾಡುವಂತಿರಬಾರದು ಅಷ್ಟೆ. ಈ ಇಂಡಿಯನ್ ವಿದ್ಯಾರ್ಥಿಗಳ ಸಂದರ್ಭದಲ್ಲಿ, ಓದಲು ಬಂದವರು ಪಾರ್ಟ್‌-ಟೈಮ್ ಕೆಲಸ ಮಾಡಿಕೊಂಡಿರುವುದು ಸರ್ವೇ ಸಾಮಾನ್ಯ. ಹಗಲು ಕಾಲೇಜಿಗೆ ಹೋಗುವುದರಿಂದ, ಕೆಲಸಗಳು ಕಡಿಮೆಯಾಗುತ್ತಿರುವುದರಿಂದ ಇರುಳು ಕೆಲಸಗಳಿಗೆ ಹೋಗುವುದೂ ಸಾಮಾನ್ಯ. ಅಂತಹವರು ಯಾವ ಸಮುದಾಯದವರೇ ಆಗಿರಲಿ, ಅವರ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕಾದ ಪೋಲೀಸರು ಅದನ್ನು ಬಿಟ್ಟು ಸಮುದಾಯದ ಜತೆ ಸಂವಾದ ಎಂದೆಲ್ಲಾ ಹೊತ್ತು ಸವಲತ್ತು ದಂಡ ಮಾಡುತ್ತಿರುವುದು ನಾಟಕವಾಗಿಯೇ ಕಾಣುತ್ತದೆ.

ಫ್ಯೂಡಲ್ ಮನಸ್ಥಿತಿಯಿಂದ ಈ ನಮ್ಮ ಮುಖಂಡರು ಇನ್ನೂ ಹೊರಬಂದೇ ಇಲ್ಲವೇನೋ ಅನಿಸುತ್ತದೆ. ನಮ್ಮ ಸಮುದಾಯದ ಹುಡುಗರು ತಮ್ಮ ನುಡಿಯಲ್ಲಿ ಜೋರಾಗಿ ಮಾತಾಡಬಾರದು, ತಗ್ಗಿಬಗ್ಗಿ ನಡೆಯಬೇಕು ಎಂದು ಹೇಳುವುದು ಮುಜುಗರ ಹುಟ್ಟಿಸುವ ಸಂಗತಿಯಲ್ಲವೆ? ಆಸ್ಟ್ರೇಲಿಯಕ್ಕೆ ಬಂದು ನೆಲೆಸಿರುವವರು ಎರಡನೇ ದರ್ಜೆಯ ಪ್ರಜೆಗಳಂತೆ ನಡೆದುಕೊಳ್ಳಬೇಕೆ? ಅವರ ಮಾತುಗಳು “ಗೌಡರ ಮುಂದೆ ತಗ್ಗಿ ಬಗ್ಗಿ ನಡಿ, ಎದೆ ನಿಮಿರಿಸಿ ನಡೆಯಬೇಡ” ಎಂದು ದಾಸ್ಯವನ್ನು ಉಪದೇಶಿಸುವಂತಿದೆ. ಆ ಮಾತುಗಳ ಮೂಲಕ ನಮ್ಮ ಈ ಮುಖಂಡರು ತಮ್ಮ ನೈತಿಕ ದಿವಾಳಿತನವನ್ನು ಮತ್ತೆ ಬಯಲು ಮಾಡಿಕೊಂಡಿದ್ದಾರೆ. ನಮ್ಮ ಹುಡುಗರನ್ನು ಕಾಪಾಡುವುದು ಪೋಲೀಸರ ಕೆಲಸ. ಅದನ್ನು ಅವರು ಪೂರೈಸಿಲ್ಲ. ಅದು ಪೋಲೀಸರ ಜವಾಬ್ದಾರಿ ಎಂದು ಹೇಳುವ ಎದೆಗಾರಿಕೆ ತೋರಿಸಿಲ್ಲ.

ಈ ಹಿಂದೆ ಭಯೋತ್ಪಾದಕ ಎಂದು ಆಪಾದಿತನಾದ ಡಾ. ಹನೀಫ್‌ನ ವಿಷಯದಲ್ಲೂ ಹೀಗೆಯೇ ಆಗಿತ್ತು. ಆಸ್ಟ್ರೇಲಿಯಾದ ಅಗಲಕ್ಕೂ ಆತನೊಡನೆ ಪೋಲೀಸರು ಮಾಡುತ್ತಿರುವುದು ತಪ್ಪು ಎಂಬ ಹುಯಿಲೆದ್ದಿತು. ಆತನನ್ನು ಆಧಾರವಿಲ್ಲದೆ ಹಿಂಸಿಸುತ್ತಿದ್ದೀರ ಎಂದು ಎಲ್ಲರೂ ಬೊಬ್ಬೆ ಹೊಡೆಯುತ್ತಿದ್ದರು. ಆರೋಪಿ ಯಾರೇ ಆಗಿದ್ದರೂ ಒಂದು ಸಮಾಜ ತನ್ನ ಪೋಲೀಸ್ ಪಡೆ ಮತ್ತು ನ್ಯಾಯಾಲಯದ ನಡವಳಿಕೆಯ ಬಗ್ಗೆ ನಿರ್ಲಕ್ಷ್ಯ ತಾಳುವುದು ಅಪಾಯಕಾರಿ. ಅದು ಅಲ್ಲಿ ಕೆಲಸ ಮಾಡುತ್ತಿದ್ದ ಕಾಳಜಿ. ಆದರೆ ಇಂಡಿಯದ ಸಂಘಗಳ ಸಂಯುಕ್ತ ಕೂಟದವರು ಮಾತ್ರ ಆತನನ್ನು ಪೋಲೀಸರು ನಡೆಸಿಕೊಂಡ ಬಗ್ಗೆ ಯಾವುದೇ ಆತಂಕ ತೋರಿಸಲಿಲ್ಲ. ಬದಲಿಗೆ “ರೇಡಿಯೋ, ಟೀವಿ, ಪತ್ರಿಕೆಗಳು ಹನೀಫನನ್ನು ಇಂಡಿಯನ್ ಡಾಕ್ಟರ್ ಎಂದು ಕರೆಯಕೂಡದು” ಎಂದು ಗೊಣಗಿ ಸುಮ್ಮನಾಗಿದ್ದರು. ಅಷ್ಟೆ!