ಪ್ರಕೃತಿಯ ಮೊದಲ ಪಾಠಗಳನ್ನು ನಾನು ಕಲಿತದ್ದು ಆ ಹಕ್ಕಲಿನಲ್ಲಿ ಎಂದು ಹೇಳಿದರೆ ತಪ್ಪಾಗದು. ಹಾಗೆ ನೋಡಿದರೆ, ನಮ್ಮ ಹಳ್ಳಿಯ ಮನೆಯ ಪರಿಸರವೇ ಒಂದು ಒಳ್ಳೆಯ ಪಾಠಶಾಲೆ. ಮನೆ ಎದುರು ಗದ್ದೆ, ಮನೆ ಸುತ್ತಲೂ ಮರಗಳು, ಮನೆಯ ಛಾವಣಿಯ ಮೇಲೆ ಚಾಚಿಕೊಂಡ ಭಾರೀ ಗಾತ್ರದ ಹಲಸಿನ ಮರ, ಇಪ್ಪತ್ತು ಅಡಿ ದೂರದಲ್ಲಿರುವ ಬೃಹತ್ ಗಾತ್ರದ ಎರಡು ತಾಳೆ ಮರಗಳ ಒಣಗಿದ ಎಲೆಗಳು ಮಾಡುವ ಬರಬರ ಸದ್ದು, ಅಂಗಳದ ಅಂಚಿನ ಹೂಗಿಡಗಳು, ಬಳ್ಳಿಗಳು, ದಾಸವಾಳ, ಬೆಟ್ಟ ತಾವರೆ – ಪಟ್ಟಿ ಮಾಡುತ್ತಾ ಹೋದರೆ ಬೇಗನೆ ಮುಗಿಯದು. ಜತೆಗೆ ನಾವು ಶಾಲೆಗೆ ಹೋಗುತ್ತಿದ್ದ ದಾರಿಯೂ ಇನ್ನೊಂದು ಪಾಠಶಾಲೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಶಶಿಧರ ಹಾಲಾಡಿಯವರ “ನಾ ಸೆರೆಹಿಡಿದ ಕನ್ಯಾಸ್ತ್ರೀ” ಪ್ರಬಂಧ ಸಂಕಲನದ ಒಂದು ಬರಹ ನಿಮ್ಮ ಓದಿಗೆ

ಪ್ರತಿವರ್ಷ ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ವಿದ್ಯಾರ್ಥಿಗಳಿಗೆ ರಜಾ – ಮೊದಲು ಪರೀಕ್ಷೆಗೆ ಓದಲು ರಜಾ, ನಂತರ ಪರೀಕ್ಷೆ ಮುಗಿದ ನಂತರದ ರಜಾ! ಪ್ರಾಥಮಿಕ ಶಾಲೆಗಾದರೆ ಎಪ್ರಿಲ್ ೧೦ರಂದು ಫಲಿತಾಂಶ, ನಂತರ ರಜಾ. ಎಸ್.ಎಸ್. ಎಲ್.ಸಿ. ಮತ್ತು ನಂತರದ ತರಗತಿಗಳಿಗೆ, ಎಪ್ರಿಲ್‌ನಲ್ಲಿ ಪರೀಕ್ಷೆ ಬರೆದ ನಂತರ ರಜೆಗಳೇ ತಾನೆ! ರಣ ರಣ ಬಿಸಿಲಿಗೂ, ರಜೆಗಳಿಗೂ ಅದೇನೋ ಮಧುರ ನಂಟು!

(ಶಶಿಧರ ಹಾಲಾಡಿ)

ಇದೇ ರೀತಿಯ ರಜೆಗೂ ಮುಂಚೆ, ಪರೀಕ್ಷೆಗೆ ಓದಿಕೊಳ್ಳಲು ರಜಾ ಎಂದು ಎರಡರಿಂದ ನಾಲ್ಕು ವಾರ ರಜ ನೀಡಿದಾಗ, ನಮಗೆ ಮಕ್ಕಳಿಗೆ ಖುಷಿಯೋ ಖುಷಿ! ಓದಲಿಕ್ಕೋ, ಆಟವಾಡಲಿಕ್ಕೋ ಒಟ್ಟಿನಲ್ಲಿ ರಜಾ ತಾನೆ! ಆದರೆ, ನಮಗೆಲ್ಲಾ ಪರೀಕ್ಷೆಗೆ ಓದಲು ರಜಾ ಕೊಟ್ಟರು ಎಂದರೆ ಪೋಷಕರು ಒಂದು ಕಣ್ಣನ್ನು ನಮ್ಮ ಮೇಲೆಯೇ ಇಟ್ಟಿರುತ್ತಾರೆ. ಅಂತಹ ರಜಾದಿನಗಳಲ್ಲಿ, ನಾನು ಸರಿಯಾಗಿ ಓದುತ್ತಿದ್ದೆನೋ ಇಲ್ಲವೋ ಎಂದು ನನ್ನನ್ನು ಗಮನಿಸುತ್ತಿದ್ದವರೆಂದರೆ ನಮ್ಮ ಅಮ್ಮಮ್ಮ! ನನ್ನ ತಂಗಿಯರೂ ಸೇರಿದಂತೆ ನಮ್ಮ ಮನೆಯಲ್ಲಿ ಒಟ್ಟು ನಾಲ್ಕು ಜನ ವಿದ್ಯಾರ್ಥಿಗಳು – ಮನೆಯಲ್ಲಿ ನಮಗೆಲ್ಲಾ ಅಮ್ಮಮ್ಮನೇ ಹೆಡ್‌ಮೇಡಂ. ಪ್ರತಿ ದಿನ ಬೆಳಗ್ಗೆ ಐದು ಗಂಟೆಗೆ ಎದ್ದೇಳಿಸಿ, ಕಾಫಿ ಮಾಡಿಕೊಡುತ್ತಿದ್ದರು. ದಿನವಿಡೀ ಪರೀಕ್ಷೆಗೆ ಸರಿಯಾಗಿ ಸಿದ್ಧತೆ ಮಾಡುತ್ತಿದ್ದಾರಾ ಇಲ್ಲವಾ ಎಂದು, ನಾವು ಕುಳಿತ ಜಾಗದ ಸುತ್ತ ಮುತ್ತ ಅವರು ಆಗಾಗ ಠಳಾಯಿಸುತ್ತಿದ್ದರು. ಅದರಲ್ಲೂ ಎಸ್.ಎಸ್.ಎಲ್.ಸಿ., ಪಿಯುಸಿ ಪರೀಕ್ಷೆ ಎಂದರೆ ಇನ್ನಷ್ಟು ಪ್ರಾಮುಖ್ಯತೆಯನ್ನು ಅವರೇ ಆರೋಪಿಸಿಕೊಂಡು, ಮನೆಯ ಇಡೀ ವಾತಾವರಣಕ್ಕೆ ಪರೀಕ್ಷೆಗಳ ಬಿಗುವನ್ನು ತಂದಿಡುಬಿಡುತ್ತಿದ್ದರು.

ಸದುದ್ದೇಶದ್ದೇ ಆದರೂ, ಅವರ ಈ ಮೇಡಂಗಿರಿಯ ಬಿಸಿಯಿಂದ ಸ್ವಲ್ಪ ದೂರ ಇರಲು ನಾನು ಕಂಡುಕೊಂಡ ಉಪಾಯವೆಂದರೆ `ಓದಲಿಕ್ಕೆ ಹಕ್ಕಲಿಗೆ ಹೋಗುವುದು!’ ಬೆಳಗ್ಗೆ ತಿಂಡಿ ತಿಂದು, ಕೈಯಲ್ಲಿ ಒಂದು ಪುಸ್ತಕ ಹಿಡಿದು (ಇದು ಹೆಚ್ಚು ದಪ್ಪ ಇದ್ದಷ್ಟೂ ಅನುಮತಿ ಸಿಗುವುದು ಬೇಗ), ಮನೆ ಹಿಂದಿನ ದರೆಯ ದಾರಿಯನ್ನು ಹತ್ತಿ ಹಾಡಿಗೋ, ಹಕ್ಕಲಿಗೋ ಹೊರಡುವುದು ನನ್ನ ನೆಚ್ಚಿನ ಹವ್ಯಾಸ. `ಎಲ್ಲಿಗೆ ಹೊರಟಿತು ನಿನ್ನ ಸವಾರಿ?’ ಎಂದು ನಿಧಾನವಾಗಿ ನಡೆಯುತ್ತಾ ಗುಡ್ಡೆಯ ಕಡೆ ಹೊರಟ ನನ್ನನ್ನೇ ನೋಡುತ್ತಾ ಅವರು ಕೇಳುವುದುಂಟು. `ಓದಲಿಕ್ಕೆ ಹಕ್ಕಲಿಗೆ ಹೊರಟೆ. ನನಗೆ ಓದಲಿಕ್ಕೆ ಎಷ್ಟು ಪೋರ್ಷನ್ ಇದೆ, ಗೊತ್ತುಂಟಾ?’ ಎಂದು ಕೈಲಿದ್ದ ಪುಸ್ತಕವನ್ನು ತೋರಿಸಿ, ಅವರಿಗೇ ತಿರುಪ್ರಶ್ನೆ ಎಸೆದು, ಮನೆ ಹಿಂದಿನ ಹಕ್ಕಲಿಗೆ ಹೋಗುತ್ತಿದ್ದೆ.

ಇಪ್ಪತ್ತು ಅಡಿ ಎತ್ತರದ ದರೆಯ ಏರು ದಾರಿಯನ್ನು ಏರಿ ಸಾಗಿದರೆ, ಐದು ನಿಮಿಷದಲ್ಲಿ ಹಕ್ಕಲು ಸಿಗುತ್ತದೆ. ಅದು ಇತ್ತ ದಟ್ಟ ಹಾಡಿಯೂ ಅಲ್ಲ, ಅತ್ತ ಹಕ್ಕಲೂ ಅಲ್ಲ ಎನ್ನಬಹುದು. ಅಲ್ಲಿದ್ದದ್ದು ಸಣ್ಣ ಗಾತ್ರದ ಮರಗಳು ಮಾತ್ರ. ಆ ಜಾಗವು ನಮ್ಮದೇ ಕುಮ್ಕಿ ಜಾಗವಾದ್ದರಿಂದ, ಪ್ರತಿ ಇಪ್ಪತ್ತು ಅಥವಾ ಮೂವತ್ತು ವರ್ಷಗಳಿಗೊಮ್ಮೆ ಅಲ್ಲಿನ ಮರಗಳನ್ನು ಕಡಿಸಿ, ಮಾರುತ್ತಿದ್ದರು. ಗದ್ದೆ, ಗುಡ್ಡ, ಕಾಡುಗಳ ನಡುವೆ ತಾತ್ಕಾಲಿಕ ರಸ್ತೆ ನಿರ್ಮಿಸಿ, ಲಾರಿ ತಂದು `ಹಾಡಿ ಕಡಿಯುವ ಕಂಟ್ರಾಕ್ಟರು’ಗಳು ಮರಗಳನ್ನು ಪೇಟೆಗೆ ಸಾಗಿಸುತ್ತಿದ್ದರು. ನಮ್ಮೂರಿನ ಕೃಷಿಕರಿಗೆ ಅದೊಂದು ಪ್ರಮುಖ ಆದಾಯ. ಈ ರೀತಿ ಎರಡು ಅಥವಾ ಮೂರು ದಶಕಗಳಿಗೊಮ್ಮೆ ಹಾಡಿ ಮಾರಿದಾಗ ಸಿಗುವ ದುಡ್ಡಿನಲ್ಲಿ, ಮದುವೆ ಮಾಡುವುದೋ, ಮನೆ ಕಟ್ಟುವುದೋ, ಬಾವಿ ತೋಡುವುದನ್ನೋ ಮಾಡುತ್ತಿದ್ದರು. ಈ ರೀತಿ ಆಗಾಗ ಅಲ್ಲಿನ ಮರಗಳನ್ನು ಕಡಿದು ಮಾರುತ್ತಿದ್ದುರಿಂದಾಗಿ, ಆ ಜಾಗದಲ್ಲಿ ದೊಡ್ಡ ಗಾತ್ರದ, ಎತ್ತರದ ಮರಗಳು ಬೆಳೆಯುವ ಅವಕಾಶವೇ ಇರಲಿಲ್ಲ. ಆದ್ದರಿಂದ ಅದೊಂದು ಖಾಯಂ ಹಕ್ಕಲು.

ಆ ಹಕ್ಕಲಿನ ಕೆಳ ಭಾಗದಲ್ಲಿ, ಅಂದರೆ, ಆ ಕುಮ್ಕಿ ಜಾಗಕ್ಕೆ ತಾಗಿಕೊಂಡ ಗದ್ದೆಯ ಹತ್ತಿರ ನಾಲ್ಕಾರು ಗೋವೆ ಮರಗಳಿದ್ದವು. ಇಳಿಜಾರು ಗುಡ್ಡದಲ್ಲಿ ಆ ಹಕ್ಕಲು ಬೆಳೆದಿತ್ತು. ಹಕ್ಕಲಿನ ಮಧ್ಯಭಾಗದಲ್ಲಿ ಮುರಿನ ಮರ, ಸಳ್ಳೆ ಮರ, ನೇರಳೆ ಮರ, ದೂಪದ ಮರ, ಮುಳ್ಳುಹರಳಿನ ಮರ, ಕೆಲವು ಕಿರಾಲು ಬೋಗಿ ಮರಗಳಿದ್ದವು. ಹಕ್ಕಲಿನ ಎತ್ತರದ ಭಾಗದಲ್ಲಿ ಕಂಕುಳು ಮರ, ಹಿರಾಲು ಬೋಗಿ ಮತ್ತಿತರ ಮರಗಳು, ಹಲವು ಮುಳ್ಳುಗಿಡಗಳು, ಬಳ್ಳಿಗಳು ಬೆಳೆದಿದ್ದು, ಅವುಗಳ ನಡುವೆ ಒಂದು ಬಾಗಾಳು ಮರವಿತ್ತು.

ಅಲ್ಲೆಲ್ಲಾ ಮಧ್ಯಮ ಗಾತ್ರದ ಮರಗಳು ಒತ್ತೊತ್ತಾಗಿ ಬೆಳೆದಿದ್ದರಿಂದಾಗಿ, ಸುತ್ತಲೂ ನೆರಳು, ನಡು ಮಧ್ಯಾಹ್ನವಾದರೂ ಸೂರ್ಯ ಕಿರಣಗಳು ನೆಲಕ್ಕೆ ಬೀಳುತ್ತಿರಲಿಲ್ಲ. ಇವುಗಳ ಪೈಕಿ ನನಗೆ ಇಷ್ಟವೆಂದರೆ ಬಾಗಾಳು ಮರ. ಇಪ್ಪತ್ತು ಅಡಿ ಎತ್ತರದ ಆ ಮರದ ತುಂಬಾ ಹಸಿರು ಎಲೆಗಳು; ಅದರ ಕೊಂಬೆಗಳು ಅಡ್ಡಡ್ಡ ಬೆಳೆದಿದ್ದರಿಂದ ಕುಳಿತುಕೊಳ್ಳಲು ಅನುಕೂಲ. ಬೆಳಗ್ಗೆ ತಿಂಡಿ ತಿಂದು ಹೊರಟವನೇ ಆ ಮರ ಹತ್ತಿ ಕುಳಿತುಕೊಂಡು, ಪುಸ್ತಕ ಬಿಡಿಸುತ್ತಿದ್ದೆ. ಮಧ್ಯಾಹ್ನದ ಊಟದ ತನಕ ಆ ಬಾಗಾಳು ಮರವೇ ನನ್ನ ರೀಡಿಂಗ್ ಡೆಸ್ಕ್, ರೀಡಿಂಗ್ ರೂಂ ಎಲ್ಲವೂ.

ಇತ್ತ ಪುಸ್ತಕದ ಹಾಳೆಗಳನ್ನು ತಿರುವುತ್ತಾ, ಪ್ರಶ್ನೋತ್ತರಗಳನ್ನು ಮನನ ಮಾಡುತ್ತಿರುವಾಗ, ಅತ್ತಲಿಂದ ತಣ್ಣಗೆ ಗಾಳಿ ಬೀಸುತ್ತಿತ್ತು. ಆ ನಡುವೆ ಹಕ್ಕಿಗಳು ಹಾರಿ ಬರುತ್ತಿದ್ದವು. ಹಕ್ಕಿಗಳ ಆ `ಮಿಕ್ಸ್ಡ್ ಹಂಟಿಂಗ್’ ಪಾರ್ಟಿಯಲ್ಲಿ ನಾಲ್ಕಾರು ಪ್ರಭೇದದ ಹಕ್ಕಿಗಳು ಮಿಡತೆಗಳ ಬೇಟೆಯಾಡುತ್ತಿದ್ದವು. ತರಲೆ ಹಕ್ಕಿಗಳು ಹಕ್ಕಿಗಳು ನೆಲದಲ್ಲಿ ಆಹಾರ ಹುಡುಕಿದರೆ, ಕೊಂಬೆಯಲ್ಲಿ ನಾಲ್ಕಾರು ಹಕ್ಕಿಗಳು ಕೀಟಗಳನ್ನು ಹುಡುಕುತ್ತಿದ್ದವು, ಇನ್ನೂ ಒಂದೆರಡು ಹಕ್ಕಿಗಳು ಮರದ ತುದಿಯಲ್ಲಿರುವ ಎಲೆಗಳ ಅಡಿಯಲ್ಲಿ ತಪಾಸಣೆ ಮಾಡುತ್ತಿದ್ದವು. ವಿಶೇಷ ಎಂದರೆ, ಬೇರೆ ಬೇರೆ ಪ್ರಭೇದದ ಹಕ್ಕಿಗಳು ಈ ರೀತಿ ಪರಸ್ಪರ ಸಹಾಯ ಮಾಡುವ ತತ್ವದಲ್ಲಿ ಒಂದು ಗುಂಪನ್ನು ರೂಪಿಸಿಕೊಂಡಿದ್ದು! ಪಿಕಳಾರ, ಬುಲ್‌ಬುಲ್, ನೀಲ ಸಾಮ್ರಾಟ ಹಕ್ಕಿ (ಬ್ಲಾಕ್ ನೇಪ್ಡ್ ಫ್ಲೈಕ್ಯಾಚರ್), ಟಿಕೆಲ್ಸ್ ಫ್ಲೈಕ್ಯಾಚರ್, ಕಾಜಾಣ, ಗೋಲ್ಡನ್ ಓರಿಯಲ್, ಬ್ಲಾಕ್ ಹೆಡೆಡ್ ಓರಿಯಲ್, ಅಯೋರಾ ಮೊದಲಾದ ಹಕ್ಕಿಗಳು ಒಟ್ಟು ಗೂಡಿ ಈ ರೀತಿ ಕೀಟಗಳ ಬೇಟೆಯಾಡುವುದನ್ನು ನೋಡುವುದೇ ಒಂದು ಆಪ್ತ ಅನುಭವ. ಹಕ್ಕಲಿನ ಒಂದು ತುದಿಯಿಂದ ಹೊರಟ ಈ ಮಿಕ್ಸ್ಡ್‌ ಹಂಟಿಂಗ್ ಪಾರ್ಟಿಯು, ನಿಧಾನವಾಗಿ ನಾನು ಕುಳಿತ ಬಾಗಾಳು ಮರದ ಹತ್ತಿರ ಬಂದ ಕೂಡಲೆ, ಅಲ್ಲಿ ಕುಳಿತ ಈ ಮನುಷ್ಯ ಪ್ರಾಣಿಯನ್ನು ಕಂಡು, ಸಣ್ಣಗೆ ದಿಗಿಲಾಗಿ ಮೆತ್ತಗೆ ಸ್ವಲ್ಪ ದೂರ ಸರಿದು, ನನ್ನ ಕಡೆ ಒಂದೆರಡು ಬಾರಿ ಕತ್ತು ತಿರುಗಿಸಿ ನೋಡಿ, ತಮ್ಮ ಬೇಟೆಯನ್ನು ಮುಂದುವರಿಸುತ್ತಿದ್ದವು.

ಅಲ್ಲಿದ್ದದ್ದು ಸಣ್ಣ ಗಾತ್ರದ ಮರಗಳು ಮಾತ್ರ. ಆ ಜಾಗವು ನಮ್ಮದೇ ಕುಮ್ಕಿ ಜಾಗವಾದ್ದರಿಂದ, ಪ್ರತಿ ಇಪ್ಪತ್ತು ಅಥವಾ ಮೂವತ್ತು ವರ್ಷಗಳಿಗೊಮ್ಮೆ ಅಲ್ಲಿನ ಮರಗಳನ್ನು ಕಡಿಸಿ, ಮಾರುತ್ತಿದ್ದರು. ಗದ್ದೆ, ಗುಡ್ಡ, ಕಾಡುಗಳ ನಡುವೆ ತಾತ್ಕಾಲಿಕ ರಸ್ತೆ ನಿರ್ಮಿಸಿ, ಲಾರಿ ತಂದು `ಹಾಡಿ ಕಡಿಯುವ ಕಂಟ್ರಾಕ್ಟರು’ಗಳು ಮರಗಳನ್ನು ಪೇಟೆಗೆ ಸಾಗಿಸುತ್ತಿದ್ದರು. ನಮ್ಮೂರಿನ ಕೃಷಿಕರಿಗೆ ಅದೊಂದು ಪ್ರಮುಖ ಆದಾಯ. ಈ ರೀತಿ ಎರಡು ಅಥವಾ ಮೂರು ದಶಕಗಳಿಗೊಮ್ಮೆ ಹಾಡಿ ಮಾರಿದಾಗ ಸಿಗುವ ದುಡ್ಡಿನಲ್ಲಿ, ಮದುವೆ ಮಾಡುವುದೋ, ಮನೆ ಕಟ್ಟುವುದೋ, ಬಾವಿ ತೋಡುವುದನ್ನೋ ಮಾಡುತ್ತಿದ್ದರು.

ಹಕ್ಕಲಿನ ತುದಿಯಲ್ಲಿದ್ದ ಆ ಬಾಗಾಳು ಮರದ ಮೇಲೆ ಹೆಚ್ಚು ಸಮಯ ನಾನು ಕಳೆದದ್ದು ಡಿಗ್ರಿ ಪರೀಕ್ಷೆಯ ಸಮಯದಲ್ಲಿ. ಒಂದು ದಪ್ಪನೆಯ ಇಂಗ್ಲಿಷ್ ಪುಸ್ತಕ ಹಿಡಿದು ಹಕ್ಕಲಿನತ್ತ ನಾನು ಹೊರಟೆನೆಂದರೆ, ಅಮ್ಮಮ್ಮನೂ ಹೆಚ್ಚು ಪ್ರಶ್ನೆ ಮಾಡುತ್ತಿರಲಿಲ್ಲ. ಹಕ್ಕಲಿನ ಮರದ ಮೇಲೆ ಕುಳಿತು, ದಪ್ಪನೆಯ ಪುಸ್ತಕ ಓದುತ್ತಿದ್ದಾನೆ ಎಂದು, ಹೆಮ್ಮೆಯಿಂದಲೋ ಏನೋ, ಸುಮ್ಮನಿರುತ್ತಿದ್ದರು. ಆ ರೀತಿ ಕುಳಿತಾಗ ಒಮ್ಮೊಮ್ಮೆ ಅಪರೂಪದ ಹಕ್ಕಿಗಳನ್ನು ನಾನು ಕಂಡದ್ದುಂಟು. ಪ್ಯಾರಡೈಸ್ ಫ್ಲೈ ಕ್ಯಾಚರ್‌ನ ಗಂಡು ಹಕ್ಕಿಯು ಹಾರಿ ಬಂದರಂತೂ, ಆ ಹಗಲಿನಲ್ಲೂ ಅಲ್ಲೆಲ್ಲಾ ಮಿಂಚಿನ ಸಂಚಾರ. ಹಕ್ಕಲಿನ ನಸು ನೆರಳಿನಲ್ಲಿ ಆ ಹಕ್ಕಿಯು ತನ್ನ ಒಂದಡಿ ಉದ್ದದ ಬಾಲವನ್ನು ಬಳುಕಿಸುತ್ತಾ ಹಾರಿ ಬಂದರಂತೂ, ಆ ನೋಟವು ಪುಟ್ಟ ಕಾವ್ಯಾನುಭವ. ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರಿ ಹೋಗಿ ಕುಳಿತ ಅದರ ಬಾಲವು, ಆ ಇಡೀ ಪರಿಸರಕ್ಕೆ ಹೊಸ ಭಾಷ್ಯವನ್ನೇ ಬರೆಯುತ್ತದೆ. ಅದರ ಜತೆ, ಜುವನೈಲ್ ಪ್ಯಾರಡೈಸ್ ಫ್ಲೈ ಕ್ಯಾಚರ್ ಕಂಡರೆ, ಅದರ ನಸುಗೆಂಪು ಬಾಲದ ನೋಟ ಮೂಡಿಸುವ ಅನುಭವವೇ ವಿಶಿಷ್ಟ, ವಿಭಿನ್ನ. ಆ ಹಕ್ಕಲಿಗೆ ಪ್ರತಿದಿನ ಭೇಟಿಕೊಡುತ್ತಿದ್ದ ಇನ್ನೊಂದು ಬಾಲದ ಹಕ್ಕಿ ಎಂದರೆ ಉದ್ದ ಬಾಲದ ಕಾಜಾಣ. ಕುವೆಂಪು ಅವರ ಕಾದಂಬರಿಯ ಮುಖಪುಟದಲ್ಲಿ ರಾರಾಜಿಸುತ್ತಿರುವುದು ಇದೇ ಕಾಜಾಣ.

ಪ್ರಕೃತಿಯ ಮೊದಲ ಪಾಠಗಳನ್ನು ನಾನು ಕಲಿತದ್ದು ಆ ಹಕ್ಕಲಿನಲ್ಲಿ ಎಂದು ಹೇಳಿದರೆ ತಪ್ಪಾಗದು. ಹಾಗೆ ನೋಡಿದರೆ, ನಮ್ಮ ಹಳ್ಳಿಯ ಮನೆಯ ಪರಿಸರವೇ ಒಂದು ಒಳ್ಳೆಯ ಪಾಠಶಾಲೆ. ಮನೆ ಎದುರು ಗದ್ದೆ, ಮನೆ ಸುತ್ತಲೂ ಮರಗಳು, ಮನೆಯ ಛಾವಣಿಯ ಮೇಲೆ ಚಾಚಿಕೊಂಡ ಭಾರೀ ಗಾತ್ರದ ಹಲಸಿನ ಮರ, ಇಪ್ಪತ್ತು ಅಡಿ ದೂರದಲ್ಲಿರುವ ಬೃಹತ್ ಗಾತ್ರದ ಎರಡು ತಾಳೆ ಮರಗಳ ಒಣಗಿದ ಎಲೆಗಳು ಮಾಡುವ ಬರಬರ ಸದ್ದು, ಅಂಗಳದ ಅಂಚಿನ ಹೂಗಿಡಗಳು, ಬಳ್ಳಿಗಳು, ದಾಸವಾಳ, ಬೆಟ್ಟ ತಾವರೆ – ಪಟ್ಟಿ ಮಾಡುತ್ತಾ ಹೋದರೆ ಬೇಗನೆ ಮುಗಿಯದು. ಜತೆಗೆ ನಾವು ಶಾಲೆಗೆ ಹೋಗುತ್ತಿದ್ದ ದಾರಿಯೂ ಇನ್ನೊಂದು ಪಾಠಶಾಲೆ. ನಾಲ್ಕನೆಯ ತರಗತಿಯ ತನಕ ಓದಿದ ಗೋರಾಜಿ ಶಾಲೆ, ೫ರಿಂದ ೭ರ ತನಕ ಓದಿದ ಹಾಲಾಡಿ ಶಾಲೆ, ನಂತರ ಓದಿದ ಶಂಕರನಾರಾಯಣ ಹೈಸ್ಕೂಲು – ಇವೆಲ್ಲಕ್ಕೂ ಹೋಗಬೇಕೆಂದರೆ, ಗದ್ದೆ ಬಯಲು ಮತ್ತು ಕಾಡಿನ ನಡುವೆ ಸಾಗುವ ದಾರಿಯಲ್ಲಿ ನಮ್ಮ ಪ್ರತಿದಿನದ ಪಯಣ.

ದಿನವೂ ಒಂದೇ ದಾರಿಯಾ ದರೂ, ತಿಂಗಳುಗಟ್ಟಲೆ ಪ್ರತಿದಿನ ಅಂತಹ ದಾರಿಯಲ್ಲಿ ಸಾಗುವಾಗ, ನಮ್ಮ ಸುತ್ತಲಿನ ಪ್ರಕೃತಿಯಲ್ಲಿ ಕಾಲದಿಂದ ಕಾಲಕ್ಕೆ ಆಗುತ್ತಿರುವ ಬದಲಾವಣೆಯನ್ನು ಗುರುತಿಸುವ ಅಪೂರ್ವ ಅವಕಾಶ. ಮಳೆಗಾಲದಲ್ಲಿ ಗಿಡಗಳು ಹೇಗಿವೆ, ಬೇಸಗೆಯಲ್ಲಿ ಹೇಗೆ ಒಣಗುತ್ತವೆ, ಚಳಿಗಾಲದಲ್ಲಿ ಹಾಡಿ, ಹಕ್ಕಲಿನ ತುಂಬಾ ಉದುರುವ ಎಲೆಗಳಿಂದ ಸಿಗುವ ದರಲೆ, ಅದನ್ನು ರೈತರು ಗುಡ್ಡೆ ಮಾಡಿ ಮನೆಗೆ ಸಾಗಿಸಿ, ಹಟ್ಟಿಯಲ್ಲಿ ಹರಡಿ ಗೊಬ್ಬರ ಮಾಡುವ ಪರಿ, ಇವೆಲ್ಲವನ್ನೂ ಆ ದಾರಿಯಲ್ಲಿ ದಿನಾ ನಡೆಯುವ ನಮಗೆ ನೋಡುವ ಅವಕಾಶ! ಇದೂ ಸಹ ಎಷ್ಟು ಉತ್ತಮ ಪರಿಸರ ಪಾಠ ಅಲ್ಲವೆ!

ಕಾಡು, ಹಾಡಿ, ಹಕ್ಕಲು, ಗುಡ್ಡ ಇಲ್ಲೆಲ್ಲಾ ಒಬ್ಬನೇ ಸುತ್ತುವುದೆಂದರೆ ನನಗೆ ಅದೆಲ್ಲಿಯದೋ ಉತ್ಸಾಹ, ಉಲ್ಲಾಸ. ಆದರೆ, ನಮ್ಮೂರಿನ ರೈತರಿಗೆ ನನ್ನ ಈ ಹವ್ಯಾಸದ ಮೇಲೆ ಸಣ್ಣ ಅಪನಂಬಿಕೆ! ಒಂದು ದಿನ ಹೀಗಾಯ್ತು. ಡಿಗ್ರಿಗೆ ಮಣ್ಣು ಹೊತ್ತಿದ್ದು ಮುಗಿದಿತ್ತು. ಆ ನಂತರ ಒಂದು ವರ್ಷ ನಿರುದ್ಯೋಗಿಯಾಗಿ ಮನೆಯಲ್ಲೇ ಇದ್ದೆನಲ್ಲ – ಅಂತಹ ದಿನಗಳ ಒಂದು ಸಂಜೆ, ಐದು ಗಂಟೆಯ ಸಮಯಕ್ಕೆ ನಮ್ಮ ಮನೆ ಪಶ್ಚಿಮ ದಿಕ್ಕಿನಲ್ಲಿ ಒಂದು ಕಿ.ಮೀ. ದೂರದಲ್ಲಿದ್ದ ಸೊಪ್ಪಿನ ಅಣೆಯ ಕಡೆ ಹೊರಟೆ. ಸೊಪ್ಪಿನ ಅಣೆಯ ತುಂಬಾ ಎತ್ತರವಾದ ಮರಗಳು ದಟ್ಟವಾಗಿ ಬೆಳೆದಿದ್ದವು. ಹಿಂದೆ ಅಲ್ಲಿ ಹುಲಿಗಳಿದ್ದವಂತೆ. ಆ ಬೆಟ್ಟದ ತುದಿಗೆ ಹೋದರೆ, ದೂರದಲ್ಲಿ ಪಶ್ಚಿಮಘಟ್ಟಗಳ ಸಾಲು ಕಾಣಿಸುತ್ತಿತ್ತು. ಹಾಗೇ ನೋಡಿಕೊಂಡು, ಅದಕ್ಕೆ ತಾಗಿಕೊಂಡು ಒಂದು ಕಿ.ಮೀ. ಉತ್ತರ ದಿಕ್ಕಿನಲ್ಲಿದ್ದ ಕಲ್ಲಕಟ್ರ ಅಣೆಯತ್ತ ನಡೆದೆ. ಅವತ್ತಿನ ಮುಖ್ಯ ಉದ್ದೇಶವೆಂದರೆ, ಸಂಜೆಯ ಹೊತ್ತಿನಲ್ಲಿ ಅಲ್ಲಿ ಕಾಣಿಸುವ ಎರಡು, ಮೂರು ಪ್ರಭೇದದ ಗೂಬೆಗಳನ್ನು ನೋಡಿ, ಗುರುತಿಸುವುದು. ಸಂಜೆ ಆರರ ಸಮಯಕ್ಕೆ ಒಂದು ಗೂಬೆ ಸಿಳ್ಳೆ ಹಾಕಿದಂತೆ ಕೂಗತೊಡಗಿತು. ನಮ್ಮೂರಿನಲ್ಲಿ ಸಾಮಾನ್ಯ ಎನಿಸಿದ್ದ ಮೀನು ಗೂಬೆ ಅದು. ಇದು ಎರಡು ಶೈಲಿಯಲ್ಲಿ ಕೂಗುತ್ತದೆ. ಇನ್ನೊಂದು ಶೈಲಿ ಎಂದರೆ ಊಂ ಹೂಂ ಊಂ. ನಸುಗತ್ತಲಿನಲ್ಲಿ, ಎತ್ತರದ ಬೋಗಿಮರದ ಮೇಲಿನಿಂದ ಬಂದ ಶಿಳ್ಳೆಯಂತಹ ದನಿಯನ್ನು ಅನುಸರಿಸುತ್ತಾ, ಆ ದಿಕ್ಕಿಗೆ ನೋಡುತ್ತಾ, ಹಾಡಿಯ ನಡುವೆ ನಿಧಾನವಾಗಿ ನಡೆಯುತ್ತಿದ್ದೆ.

`ಹ್ವಾಯ್, ಇಲ್ಲಿ ಎಂತ ಮಾಡ್ತಿದ್ದೀರಿ?’ ಎಂದು ಕೇಳುತ್ತಾ ಗಿಡ್ಡ ನಾಯಕ ಒಮ್ಮೆಲೇ ಪ್ರತ್ಯಕ್ಷನಾದ. ಅವನು ಸೌದೆ ತರಲು ಬಂದಿರಬೇಕು. ಅವನ ಮನೆ ಅಲ್ಲೇ ಕೆಳಗಿನ ಕಂಬಳಗದ್ದೆಯ ಬಳಿ. `ಹೀಗೆ ಸುಮ್ಮನೆ ಮಾರಾಯ.. ಈ ಹಾಡಿ, ಗುಡ್ಡ ನೋಡುವಾ ಅಂತ’ ಎಂದೆ.

`ನೀವು ಹೀಂಗೆಲ್ಲಾ ಸುಮ್ಮನೆ ಓಡಾಡುತ್ತೀರಿ ಎಂದರೆ ನಾನು ನಂಬುವುದಿಲ್ಲ. ನಿಮ್ಮನೆಯ ದನವೋ, ಗುಡ್ಡವೋ ತಪ್ಪಿಸಿಕೊಂಡಿರಬೇಕು, ಅದಕ್ಕೇ ಹುಡುಕಿಕೊಂಡಿ ಬಂದಿದ್ದೀರಿ, ಅಲ್ದಾ?’ ಎಂದು ಆತ ನಗುತ್ತಾ ಕೇಳಿದ. ಪಾಪ, ಅವನ ಕುತೂಹಲಕ್ಕೇಕೆ ನಿರಾಸೆ ಮಾಡುವುದು ಎಂದು `ಹೌದು..’ ಎಂದು ಕಲ್ಲಕಟ್ರ ಅಣೆಯತ್ತ ಸಾಗಿದೆ. ಅದರ ತುದಿಯನ್ನೇರಿದರೆ, ನಮ್ಮೂರಿನ ಒಟ್ಟು ನೋಟ ಮತ್ತು ದೂರ ದಿಗಂತದಲ್ಲಿ ಪಶ್ಚಿಮ ಘಟ್ಟಗಳ ಆಗುಂಬೆ ಘಾಟಿ ಸುತ್ತಲಿನ ಶ್ರೇಣಿ, ಅಲ್ಲೆಲ್ಲೋ ಪರ್ವತ ಕಮರಿಯ ಸಂದಿಯಲ್ಲಿ ನೆಗೆಯುವ ಒಂದು ಜಲಪಾತ ಎಲ್ಲವೂ ಕಾಣಿಸುತ್ತಿತ್ತು. ಅದನ್ನು ಒಂದಷ್ಟು ಹೊತ್ತು ನೋಡಿ, ಆ ದಿನ ನಿಧಾನವಾಗಿ ಮನೆಗೆ ವಾಪಸಾಗುವಾಗ ಪೂರ್ತಿ ಕತ್ತಲಾಗಿತ್ತು.

`ನಿನ್ನ ಪರೀಕ್ಷೆ ಎಲ್ಲಾ ಮುಗಿತಲ್ಲಾ, ಇನ್ನೂ ಓದುವುದಕ್ಕೆ ಹೋಗಿದ್ದೆಯಾ?’ ಎಂದು ಒಂದೊಂದು ದಿನ ನನ್ನ ಬರವನ್ನೇ ಕಾಯುತ್ತಿದ್ದ ಅಮ್ಮಮ್ಮ ಕೇಳುತ್ತಿದ್ದರು. `ಪರೀಕ್ಷೆ ಎಲ್ಲಾ ಮುಗಿಯಿತು ಅಮ್ಮಮ್ಮ, ಮುಂದಿನ ವಾರ ರಿಸಲ್ಟ್’ ಎಂದು, ಅವರನ್ನು ತಬ್ಬಿಬ್ಬುಗೊಳಿಸಲು ಯತ್ನಿಸಿದೆ. ಆದರೆ, ಮುಂದಿನ ವಾರ ಬೇಸ್ತು ಬೀಳುವ ಸರದಿ ನನ್ನದಾಗಿತ್ತು. ಡಿಗ್ರಿ ಪರೀಕ್ಷೆಗಳಲ್ಲಿ ಕಬ್ಬಿಣದ ಕಡಲೆ ಎನಿಸಿದ್ದ ಮ್ಯಾಥಮ್ಯಾಟಿಕ್ಸ್ನಲ್ಲಿ ನನಗೆ ಸಿಕ್ಕಿದ್ದ ಅಂಕ ಕೇವಲ ೩೫! ನಮ್ಮೂರಿನ ಹಕ್ಕಲಿನಲ್ಲಿ ಹಕ್ಕಿಯ ಹಾಡನ್ನು ಕೇಳುತ್ತಾ, ಬಾಗಾಳು ಮರದ ಮೇಲೆ ಕುಳಿತು ಅದನ್ನೇ ರೀಡಿಂಗ್ ಡೆಸ್ಕ್ ಮಾಡಿಕೊಂಡು, ಮರದ ಕೆಳಗೆ ಹರಿದಾಡುತ್ತಿದ್ದ ನಕ್ಷತ್ರ ಆಮೆಯನ್ನು ಗಮನಿಸುತ್ತಾ, ತನ್ನ ಬಾಲದಿಂದಲೇ ಕಾವ್ಯ ಬರೆಯುತ್ತಿದ್ದ ಪ್ಯಾರಡೈಸ್ ಫ್ಲೈ ಕ್ಯಾಚರ್ ಹಾರುವುದನ್ನು ನೋಡುತ್ತಾ, ಆಗೊಮ್ಮೆ ಈಗೊಮ್ಮೆ ಮರದ ತರಗಲೆಯ ಅಡಿ ಸರಿಯುತ್ತಿದ್ದ ನಾಗರಹಾವನ್ನು ಕಂಡು ಬೆರಗಾಗಿದ್ದಕ್ಕೆ, ಮೌಲ್ಯ ಮಾಪಕರು ಆ ವರ್ಷದ ಪರೀಕ್ಷೆಯಲ್ಲಿ ನನಗೆ ನೀಡಿದ್ದ ಅಂಕಗಳು ಅಷ್ಟೇ!

(ಗುಡ್ಡ = ಗಂಡು ಕರು. ಹಕ್ಕಲು = ಮರಗಿಡಗಳು ವಿರಳವಾಗಿ ಬೆಳೆದ ಕಾಡು. ಬಾಗಾಳು ಮರ = ರಂಜದ ಹೂವಿನ ಮರ.)

(ಕೃತಿ: ನಾ ಸೆರೆಹಿಡಿದ ಕನ್ಯಾಸ್ತ್ರೀ (ಪ್ರಬಂಧಗಳು), ಲೇಖಕರು: ಶಶಿಧರ ಹಾಲಾಡಿ, ಪ್ರಕಾಶಕರು: ವೀರಲೋಕ ಬುಕ್ಸ್, ಬೆಲೆ: 200/-)