ಇಕ್ಬಾಲುನ್ನೀಸಾ ಹುಸೇನ್ ಅವರ Purdah and Polygomy: Life In An Indian Muslim Household ಎಂಬ ಇಂಗ್ಲಿಷ್ ಕಾದಂಬರಿಯನ್ನು ಕಥೆಗಾರ ದಾದಾಪೀರ್ ಜೈಮನ್ ಅವರು “ಪರ್ದಾ ಅಂಡ್ ಪಾಲಿಗಾಮಿ” ಎಂಬ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮುಸ್ಲಿಂ ಕುಟುಂಬವೊಂದರಲ್ಲಿ ಮಹಿಳೆಯೊಬ್ಬಳ ಜೀವನವನ್ನು ವಿವರಿಸುವ ಈ ಕಾದಂಬರಿಯ ಒಂದು ಅಧ್ಯಾಯ ಕೆಂಡಸಂಪಿಗೆ ಓದುಗರಿಗಾಗಿ ಇಲ್ಲಿದೆ:

ನಗರದಲ್ಲಿರುವ ಸಂಬಂಧಿಕರಿಗೆಲ್ಲ ಸುದ್ದಿ ಮುಟ್ಟಿಸಲಾಯಿತು ಹಾಗೂ ಪರವೂರಿನಿಂದ ಬರುವವರಿಗೆಲ್ಲ ತಂತಿ ಕಳುಹಿಸಲಾಯಿತು. ಕೊನೆಯ ಸಲ ಮುಖ ನೋಡಲು ಬೆಳಗಿನ ರೈಲಿನಲ್ಲಿಯೇ ಜನ ಹಿಂಡು ಹಿಂಡಾಗಿ ಧಾವಿಸಿದರು. ಹುಟ್ಟು ಸಾವು ಮದುವೆ ಮುಂಜಿಗಳೆಂಬ ಸಂಗತಿಗಳೇ ಹೆಣ್ಣು ಜೀವಗಳನ್ನು ಒಂದು ಕಡೆ ತರಲು ನೆಪವಾಗಿರುತ್ತಿದ್ದವು. ಅವರೆಲ್ಲರೂ ಆ ಕಾರ್ಯಗಳಲ್ಲಿ ಒಂದು ನಮೂನೆಯ ಉತ್ಸುಕತೆಯಲ್ಲೇ ಭಾಗವಹಿಸುತ್ತಿದ್ದರು. ಸಾವಿನ ಸಂದರ್ಭಗಳಲ್ಲಂತೂ ಒಮ್ಮೊಮ್ಮೆ ಪರಿಚಯವಿಲ್ಲದ ಮನೆಯವರಾಗಿದ್ದರೂ ‘ಇರೋವರೆಗೂ ಮನುಷ್ಯ, ಸತ್ತ ಮೇಲೆ ದೇವರು’ ಅಂದುಕೊಂಡು ಸ್ವಯಂ ಪ್ರೇರಿತರಾಗಿ ಆ ದೇವರ ನೋಡಲು ಹೋಗುತ್ತಿದ್ದರು. ಮಾನವನ ಹೃದಯದೊಳಗೆ ಸದಾ ಜಾಗೃತವಾಗಿರುವ ಸಹಾನುಭೂತಿಗೆ ಬಹುಶಃ ಅಂತಹ ಶಕ್ತಿಯಿರುತ್ತಿರಬೇಕು.

ತನ್ನ ಪ್ರೀತಿಯ ಗಂಡ ಸತ್ತು ಹೋದ ಎಂದು ತಿಳಿದ ತಕ್ಷಣವೇ ಜುಹ್ರಾ ಮೂರ್ಛೆ ಹೋದಳು. ಅದೇ ಊರಿನಲ್ಲಿ ವಾಸವಿದ್ದ ಅವಳ ತಾಯಿ ಮತ್ತು ತಂಗಿ ಉಮರ್ ಪ್ರಾಣ ಬಿಡುವ ಕೆಲವೇ ನಿಮಿಷಗಳ ಮುಂಚೆ ಅಲ್ಲಿಗೆ ಬಂದಿದ್ದರು. ಅವರೆಲ್ಲ ಅವಳ ಮತ್ತು ಅವಳ ವಸ್ತುಗಳನ್ನೆಲ್ಲ ನೋಡಿಕೊಳ್ಳುವ ಜವಾಬ್ದಾರಿಯನ್ನು ಖುದ್ದು ತಾವೇ ವಹಿಸಿಕೊಂಡರು. ಸಾವಿನ ಮನೆಯು ಚಿಕ್ಕಪುಟ್ಟ ವಸ್ತುಗಳನ್ನು ಬಡವರು ತಮ್ಮ ಬುರ್ಕಾದಲ್ಲಿ ಬಚ್ಚಿಟ್ಟುಕೊಂಡು ಒಯ್ದು ಬಿಡುವ ಅವಕಾಶವನ್ನು ನೀಡುತ್ತದೆ. ಆದ್ದರಿಂದ ಬೆಲೆಬಾಳುವ ಸಣ್ಣ ಮತ್ತು ದೊಡ್ಡ ವಸ್ತುಗಳನ್ನೆಲ್ಲಾ ಒಂದು ಹಳೆಯ ಕೋಣೆಯಲ್ಲಿ ಭದ್ರವಾಗಿ ಬೀಗ ಹಾಕಿಡಲಾಯಿತು.

(ಇಕ್ಬಾಲುನ್ನೀಸಾ ಹುಸೇನ್)

ಉಮರ್ ನ ಮೃತ ಶರೀರವನ್ನು ತೊಳೆದು ಕಫನ್ ಹೊದೆಸಿ, ಬಂದ ಜನರಿಗೆ ಕೊನೆಯ ಬಾರಿ ಮುಖ ನೋಡಲು ಅನುವಾಗುವಂತೆ ನಡುಮನೆಯ ಅಂಗಳದಲ್ಲಿಟ್ಟರು. ನೆರೆದಿದ್ದವರಿಗೆಲ್ಲರಿಗೂ ಏಳನೇ, ಹತ್ತನೇ, ಇಪ್ಪತ್ತನೇ ಹಾಗೂ ನಲವತ್ತನೇ ದಿನಗಳ ಜಾರ್ತಾ (ತಿಥಿ ಭೋಜನ) ಕ್ಕೆ ಆಹ್ವಾನಿಸಲಾಯಿತು. ಎಲ್ಲಾ ಗಂಡಸರ ಭೇಟಿ ಮುಗಿದ ಮೇಲೆ ಅವರನ್ನು ಕೆಲಕಾಲ ಹೊರಗೆ ಕಳುಹಿಸಿ ಕೋಣೆಯಲ್ಲಿದ್ದ ಹತ್ತಿರದ ಹಾಗೂ ಆತ್ಮೀಯ ಮಹಿಳಾ ಸಂಬಂಧಿಕರಿಗೆ ಉಮರ್‍ನ ಕಳೇಬರವನ್ನು ನೋಡುವ ಅವಕಾಶ ಕಲ್ಪಿಸಲಾಯಿತು. ಮಹಿಳೆಯರು ಪರ್ದಾ ಪದ್ಧತಿ ಪಾಲಿಸಬೇಕಾಗಿದ್ದು, ಬೇರೆ ಗಂಡಸರನ್ನು ನೋಡುವ ಹಾಗಿರಲಿಲ್ಲವಾದ್ದರಿಂದ ಮನೆಯ ಮುಖ್ಯ ದರ್ವಾಝ ಬಂದ್ ಮಾಡಲಾಯಿತು. ಬಂದಿರುವವರೆಲ್ಲರೂ ಆಪ್ತೇಷ್ಟರೇ ಆಗಿದ್ದರು. ಪಕ್ಕದ ಮನೆಯವರು ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಬೇಕಿತ್ತು. ಸಮಯ ಸಂದರ್ಭಾನುಸಾರವಾಗಿ ಈ ನಿಯಮ ಬದಲಾಗುತ್ತದಾದರೂ, ಕನಿಷ್ಠ ಮೂರು ದಿನಗಳಾದರೂ ನೊಂದ ಮನೆಯವರನ್ನು ಅಡುಗೆ ಮಾಡುವ ಸಂಕಷ್ಟದಿಂದ ದೂರವಿರಿಸುವುದು ಕಡ್ಡಾಯವಾಗಿತ್ತು. ಅದೃಷ್ಟವಶಾತ್ ಬಾಡಿಗೆಗಿದ್ದ ಮೂರು ಮನೆಯವರೂ ಒಂದೊಂದು ದಿನ ಅಡುಗೆಯ ಜವಾಬ್ದಾರಿಯನ್ನು ವಹಿಸಿಕೊಂಡರು.

ಮನುಷ್ಯ ಸತ್ತುಹೋಗಿದ್ದರೂ ತೀರಿಕೊಂಡಿರುವುದು ಗಂಡಸಾಗಿರುವುದರಿಂದ ಅವನ ಮುಂದೆ ಪರ್ದಾವನ್ನು ಪಾಲಿಸುವುದು ಮುಖ್ಯವಾಗುತ್ತದೆ. ಎಷ್ಟಾದರೂ ಗಂಡಸು ಗಂಡಸೇ ಅಲ್ಲವೇ? ಸತ್ತ ದೇಹವನ್ನು ದಫನ್ ಮಾಡಲು ಒಯ್ಯುವುದಕ್ಕಿಂತ ಮುಂಚೆ ಜುಹ್ರಾ ಅವಳ ಜೀವನದಲ್ಲೇ ಅತಿ ದುಃಖಕರ ಘಟನೆಗೆ ತನ್ನನ್ನು ತಾನು ಒಡ್ಡಿಕೊಳ್ಳಲೇಬೇಕಾಗಿತ್ತು. ಜುಹ್ರಾಳ ತಾಯಿಗೇ ಆಗಲಿ ಅಥವಾ ಮದುವೆಯಾಗಿದ್ದ ತಂಗಿಗೇ ಆಗಲಿ ತವರಿನ ಹೆಣ್ಣು ಮಗಳ ಭಾಗ್ಯವನ್ನು ಕೈಯಾರೆ ಹೇಗೆ ಕಿತ್ತುಕೊಳ್ಳುವುದೆನಿಸಿ ಆ ಕೆಲಸದಿಂದ ದೂರವುಳಿದರು. ಉಳಿದ ಯಾವ ಮುತ್ತೈದೆಯರಿಗೂ ತಮ್ಮ ತಮ್ಮ ಗಂಡಂದಿರು ಜೀವಂತವಾಗಿರುವಾಗ ಆ ಅಮಂಗಳ ಕೆಲಸಕ್ಕೆ ಕೈಹಾಕಿ ತಮ್ಮ ಜೀವನದೊಳಗೆ ದುರಂತವನ್ನು ಆಹ್ವಾನಿಸುವ ಧೈರ್ಯವಾಗಲಿಲ್ಲ. ಆ ಕೆಲಸ ಮಾಡಲು ಒಬ್ಬ ಗಟ್ಟಿಗಿತ್ತಿಯೇ ಬೇಕಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ವಿಧವೆಯಾಗಿದ್ದ ಉಮರ್‍ನ ಅಕ್ಕ ಗಟ್ಟಿ ಮನಸು ಮಾಡಿ ಮುಂದೆಬಂದಳು.

ಅವಳು ಎದ್ದ ಕೂಡಲೇ ಹೆಂಗಸರೆಲ್ಲರೂ ಜೋರಾಗಿ ಅಳತೊಡಗಿದರು. ಉಮರ್‍ನ ಅಕ್ಕ ಇವ್ಯಾವುದನ್ನೂ ಲೆಕ್ಕಿಸುವಂತಿರಲಿಲ್ಲ. ಅವಳ ಬಾಳುವೆಯಲ್ಲೂ ಈ ದುರ್ಭರ ಘಳಿಗೆಯನ್ನು ಹಾದು ಬಂದಿದ್ದರಿಂದ ಅವಳು ಉಳಿದವರ ಕಣ್ಣೀರಿಗೆ ಕಲ್ಲಾಗಿಹೋಗಿದ್ದಳು. ಅವಳು ಎದ್ದು ಬಂದು ಜುಹ್ರಾಳ ಮುಂದೆ ನಿಂತು ಅವಳೆರಡೂ ಕೈಗಳನ್ನು ಹಿಡಿದು ಎಬ್ಬಿಸಲು ನೋಡಿದಳು. ಖಾಯಿಲೆ ಬಿದ್ದಾಗಿನಿಂದ ಶುರುವಾದ ಅಷ್ಟೂ ದಿನಗಳ ಗಂಡನ ಆರೈಕೆ, ಗಂಡ ಸತ್ತ ಸುದ್ದಿ ಕೇಳಿ ಆಗಿದ್ದ ಆಘಾತ ಜುಹ್ರಾಳನ್ನು ಕುಗ್ಗಿಸಿಬಿಟ್ಟಿತ್ತು. ಜೀವವಿಲ್ಲದ ಕೊರಡಿನಂತಾದ ಜುಹ್ರಾಳನ್ನು ಒಬ್ಬಳೇ ಎತ್ತಲಾಗಲಿಲ್ಲ. ಇದನ್ನು ಗಮನಿಸಿದ ಇನ್ನೊಬ್ಬ ಗಂಡ ಸತ್ತ ವಿಧವೆ ಸಹಾಯಕ್ಕೆ ದೌಡಾಯಿಸಿದಳು. ಜುಹ್ರಾಳನ್ನು ಇಬ್ಬರೂ ಸೇರಿ ಎತ್ತಿದರು. ಜುಹ್ರಾ ತಾನಿದ್ದ ಕೋಣೆಯಿಂದ ಗಂಡನ ಕಳೇಬರವಿದ್ದ ಜಾಗದವರೆಗೂ ನಡುಗುತ್ತಾ ಹೆಜ್ಜೆ ಹಾಕತೊಡಗಿದಳು. ಅವಳ ಹಿಂದೆ ಹೆಂಗಸರ ದಂಡೇ ಅಳುತ್ತಾ ಹೆಜ್ಜೆಹಾಕಿತು. ಜುಹ್ರಾ ಗಂಡನ ಬಳಿ ಬರುತ್ತಿದ್ದಂತೆ ಅವಳ ದುಃಖದ ಕಟ್ಟೆಯೊಡೆದು ಹೋಯಿತು. ಜುಹ್ರಾ ಜೋರಾಗಿ ಕೂಗಲಾರಂಭಿಸಿದಳು.

“ನನ್ನನ್ನ ಯಾರಿಗೂ ಬೇಡವಾಗಿರೋ ಹಾಗೆ ಮಾಡಿ ಒಬ್ಬಳನ್ನೇ ಬಿಟ್ಟು ಜಾ ನಕ್ಕೋ ಜೀ! ನನ್ನ ಇಲ್ಲೇ ಕೊಂದು ನನ್ನ ಶೋಹರ್ ಜೊತೆಗೇ ದಫನ್ ಮಾಡಿಬಿಡಿ…” ಅವಳ ಅಳು ಮುಗಿಲು ಮುಟ್ಟುತ್ತಿತ್ತು.

ಆ ಮಾತುಗಳನ್ನು ಕೇಳಿಸಿಕೊಂಡ ಹೆಂಗಸರ ಗುಂಪೊಂದು ಸಿಡಿಮಿಡಿಗೊಂಡು “ನಿನ್ನ ಹಣೇಲಿ ಏನು ಬರೆದಿದೆಯೋ ಅದೇ ಆಗತ್ತೆ. ನೀನೊಬ್ಬಳೇ ಆ ಖುದಾ ಮರ್ಜಿ ವಿರುದ್ಧ ಮಾತಾಡಿ ಯಾಕೆ ಪಾಪ ಕಟ್ಟಿಕೊಳ್ಳುತ್ತಿ?” ಎಂದು ಬುದ್ಧಿ ಹೇಳಲು ನೋಡಿದರು.
“ಗಂಡ ಸತ್ತ ಮೇಲೆ ಹೆಣ್ಣುಮಗಳ ಜೀವನ ಶಾಪ. ವಿಧವೆ ಆದೋಳನ್ನ ಯಾರೂ ಗೌರವದಿಂದ ಕಾಣುವುದಿಲ್ಲ, ಪಾಪ” ಎಂದು ಮತ್ತೊಂದಿಷ್ಟು ಜನ ಅಂದರು. “ನಿನಗೆ ಅದೃಷ್ಟ ಇದ್ದಿದ್ರೆ ನಿನ್ನ ಜೀವಾನೇ ಮೊದಲು ಹೋಗ್ತಾ ಇತ್ತು. ಆಗ ನಿನ್ನ ಶೋಹರ್ ನಿನ್ನ ರಾಣಿ ತರ ಕಳಿಸಿಕೊಟ್ಟಿರೋನು…” ಕರುಣೆ ತುಂಬಿದ ಹೆಣ್ಣುಮಗಳು ನುಡಿದಳು.

ಜುಹ್ರಾಳ ಸಂಬಂಧಿಕರಿಗೆ ಆ ವ್ಯಂಗ್ಯಭರಿತ ಚುಚ್ಚು ಮಾತುಗಳು ತಾಕಿದವು. ಅವರು ಅದಕ್ಕೆ ಸರಿಯಾದ ಉತ್ತರವನ್ನೇ ಕೊಡುವವರಂತೆ ಜುಹ್ರಾಳಿಗೆ ಹೇಳಿದರು.

ಪಕ್ಕದ ಮನೆಯವರು ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಬೇಕಿತ್ತು. ಸಮಯ ಸಂದರ್ಭಾನುಸಾರವಾಗಿ ಈ ನಿಯಮ ಬದಲಾಗುತ್ತದಾದರೂ, ಕನಿಷ್ಠ ಮೂರು ದಿನಗಳಾದರೂ ನೊಂದ ಮನೆಯವರನ್ನು ಅಡುಗೆ ಮಾಡುವ ಸಂಕಷ್ಟದಿಂದ ದೂರವಿರಿಸುವುದು ಕಡ್ಡಾಯವಾಗಿತ್ತು.

“ಈ ಹಿಂದೆ ಅದೆಷ್ಟು ಜನ ಹೀಗೆ ಗಂಡನನ್ನ ಕಳೆದುಕೊಂಡಿದ್ದಾರೆ ಜುಹ್ರಾ. ಈ ಮುಳುಗುವ ದೋಣಿಯಲ್ಲಿ ನೀನೊಬ್ಬಳೇ ಒಂಟಿ ಅಲ್ಲ”
“ನಿನಗಾದ್ರೂ ಇಷ್ಟೆಲ್ಲಾ ಇದೆ. ಏನೂ ಇಲ್ಲದವರ ಪಾಡೇನು? ಧೈರ್ಯ ತಂದುಕೊ ಜುಹ್ರಾ. ಅಲ್ಲಾಹನ ಸೇವೆಯನ್ನ ಎಷ್ಟು ಪ್ರೀತಿಯಿಂದ ಮಾಡ್ತೀವೋ ಅವನ ಕೋಪವನ್ನೂ ಖುಷಿ ಖುಷಿಯಿಂದ ಎದುರಿಸಬೇಕು” ಜುಹ್ರಾಳ ಹಿತೈಷಿಗಳು ಅವಳ ಜೊತೆ ಮೆಲ್ಲನೆ ಹೆಜ್ಜೆ ಹಾಕುತ್ತ ಧೈರ್ಯ ತುಂಬಿದರು. ಆದರೆ ತಮ್ಮ ಕರ್ತವ್ಯವನ್ನು ಅನುಕಂಪ ಸುಳಿಯಗೊಡದೆ ನೆರವೇರಿಸಲೇಬೇಕಿದ್ದ ವಿಧವೆಯರು, ಹಿಡಿದುಕೊಂಡಿದ್ದ ಜುಹ್ರಾಳ ರಟ್ಟೆ ಬಿಗಿ ಹೆಚ್ಚುಗೊಳಿಸಿ ಗಂಡನ ಶವದೆಡೆಗೆ ಜೋರಾಗಿ ಎಳೆದೊಯ್ಯತೊಡಗಿದರು.

“ನಿಮ್ಮ ಕೈಮುಗಿತೀನಿ. ನನ್ನ ರಟ್ಟೆ ಎಳಿಬೇಡಿ…ನೋವಾಗತ್ತೆ. ನಾನು ಈ ಭೂಮಿ ಮೇಲೆ ಇರಲೇಬಾರದು. ನಾನು ಸತ್ತೋಗ್ಬೇಕು. ನಾನು ಯಾರಿಗೋಸ್ಕರ ಜೀವನ ಮಾಡ್ಬೇಕು?” ಉದ್ರಿಕ್ತತೆಯಿಂದ ಕೊಸರಿಕೊಳ್ಳುತ್ತಾ ಜುಹ್ರಾ ಹೇಳಿದಳು. ಅವರಿಡುವ ಪ್ರತಿ ಹೆಜ್ಜೆಗಳೂ ಗಂಡನ ಕಳೇಬರದ ಹತ್ತಿರ ಕರೆದೊಯ್ಯುತ್ತಿದ್ದವು. ಇವಳು ಒದ್ದಾಡುತ್ತಿದ್ದರೂ ಅವಳ ತೋಳುಗಳ ಮೇಲಿನ ಅವರ ಹಿಡಿತ ಇನ್ನೂ ಬಿಗಿಯಾಯಿತು.

(ದಾದಾಪೀರ್ ಜೈಮನ್)

“ಯಾ ಅಲ್ಲಾಹ್… ಇಡೀ ಜಗತ್ತೇ ನನಗೆ ಕತ್ತಲಾಗಿ ಕಾಣ್ತಿದೆ. ನನ್ನನ್ನು ಕರೆದುಕೊಂಡುಬಿಡು. ನಾನು ಯಾಕಾಗಿ ಬದುಕಬೇಕು? ಯಾರಿಗೋಸ್ಕರ ಬದುಕಬೇಕು? ಯಾವ ಆಸೆ ಇಟ್ಟುಕೊಂಡು ಬದುಕಬೇಕು? ನನಗೆ ಈ ಬದುಕು ಬೇಡ” ಎನ್ನುತ್ತಾ ಹಣೆ ಹಣೆ ಕುಟ್ಟಿಕೊಂಡಳು. ಜುಹ್ರಾಳ ತೋಳುಗಳನ್ನು ಹಿಡಿದುಕೊಂಡು ಸಂಭಾಳಿಸಲು ಪ್ರಯತ್ನಿಸುತ್ತಿದ್ದ ಉಮರ್‍ನ ಅಕ್ಕ ಕಿರಿಕಿರಿಗೊಂಡು ಕೋಪದಿಂದ “ನೀ ಮಾಡಿದ ಪಾಪದ ಫಲ ನೀನೇ ಉಣ್ಣಬೇಕು. ಬದುಕಿದ್ದಾಗ ನನ್ನ ತಮ್ಮನ್ನ ಅದೆಷ್ಟು ಉಸ್ ಅನಿಸಿದಿಯೇನೋ? ಅದೆಷ್ಟು ಗೋಳು ಹೊಯ್ದು ಕೊಂಡೆಯೋ ಏನೋ? ಅವನ ಜೀವನ ನರಕ ಮಾಡಿಟ್ಟಿರಬೇಕು. ಮಾಡೋದೆಲ್ಲ ಮಾಡಿ ಈಗ ಯಾಕಾಗಿ ಖಬರಿಲ್ಲದವರ ಹಂಗೆ ಗೋಳಾಡ್ತಿ?” ಎಂದು ತಿವಿದಳು.

ಮನಸ್ಸಿನ ಹತಾಶ ಸ್ಥಿತಿ ನೆನಪು ಮತ್ತು ಕಲ್ಪನೆಯನ್ನು ಒಮ್ಮೆಗೆ ಉದ್ದೀಪಿಸಿಬಿಡುತ್ತವೆ. ವಿಧವೆ ನಾದಿನಿಯ ಚುಚ್ಚುಮಾತಿಗೆ ತಕ್ಕ ಜವಾಬು ಕೊಡುವವಳಂತೆ “ಹೌದು. ಇಷ್ಟು ದಿವಸ ನಿದ್ದೆ ನೀರಡಿಕೆ ಹಸಿವು ಸುಖ ಶಾಂತಿ ನೆಮ್ಮದಿ ಯಾವೊಂದನ್ನೂ ಲೆಕ್ಕಿಸದೆ ಹಗಲು ರಾತ್ರಿ ಅಂತನೂ ನೋಡದೆ ಸೇವೆ ಮಾಡಿದ್ದಕ್ಕೆ ಸಿಕ್ಕಿರೋ ಪ್ರತಿಫಲಾನಾ ಇದು? ಇದ್ಯಾವ ಸೀಮೆ ಇನ್ಸಾಫ್ ಯಾ ಅಲ್ಲಾsss” ಅಳುತ್ತಾ ಹೇಳಿದಳು. ಹದ್ದು ಮೀರುತ್ತಿರುವ ಪರಿಸ್ಥಿತಿಯನ್ನು ಗ್ರಹಿಸಿದವಳಂತೆ ತಾಯಿ ಜುಹ್ರಾಳನ್ನು ಸಮಾಧಾನ ಮಾಡಲು ಜಮೀಲಾ ಹಿಂದಿನಿಂದ ಓಡಿ ಬಂದಳು. ಅಳುತ್ತಾ ಹಿಡಿದ ರಟ್ಟೆಗಳನ್ನು ಕೊಸರಿಕೊಳ್ಳುತ್ತಿರುವ ತಾಯಿಗೆ “ಧೈರ್ಯ ತಂದುಕೊ ಅಮ್ಮಿ. ನೀನು ಹೀಗೆ ಅತ್ತರೆ ಜನ ತಲೆಗೊಂದರಂತೆ ಮಾತಾಡ್ತಾರೆ. ನೋಡು… ನಿನ್ನ ಮಗಾ ನಿನ್ನ ಸಾಕ್ತಾನೆ. ಚೆನ್ನಾಗಿ ನೋಡಿಕೊಳ್ಳುತ್ತಾನೆ. ನೀನೀಗ ಮಗನ ಮುಖ ನೋಡಿಯಾದ್ರೂ ಬದುಕಬೇಕು ಅಮ್ಮಿ. ನೀನು ಇಷ್ಟು ದಿನ ಮಾಡಿದ್ದಕ್ಕಿಂತ ಎರಡರಷ್ಟು ಕೆಲಸ, ಜವಾಬ್ದಾರಿ ನಿನ್ನ ತಲೆಮೇಲಿದೆ. ಸಮಾಧಾನ ಮಾಡಿಕೋಮಿ…” ಎಂದು ಅವಳ ಎದೆ ಮತ್ತು ಬೆನ್ನನ್ನು ಸವರುತ್ತ ಧೈರ್ಯ ಹೇಳಿದಳು. ಅನಾಥಭಾವವನ್ನೇ ಕಣ್ಣಲ್ಲಿ ತುಂಬಿಕೊಂಡಿದ್ದರೂ ಮಗಳು ಜಮೀಲಾಳ ಧ್ವನಿಯಲ್ಲಿನ ಸಾಂತ್ವನ ಅವಳ ಎದೆಯಲ್ಲೊಂದಿಷ್ಟು ಧೈರ್ಯ ಹುಟ್ಟುಹಾಕಿತು.

ಇತ್ತ ತಾಯಿಯನ್ನು ಸಮಾಧಾನ ಪಡಿಸುವುದರಲ್ಲಿ ಕೊಂಚ ಮಟ್ಟಿಗೆ ಯಶಸ್ವಿಯಾಗಿದ್ದರೂ ಅವಳ ಶೋಕಕ್ಕೆ ಮಿತಿಯಿಲ್ಲವೆಂಬುದು ಮಗಳು ಜಮೀಲಾಳಿಗೆ ಗೊತ್ತಿತ್ತು. ತಾಯಿ ತನ್ನನ್ನು ವಿಧವೆಯಾಗಿ ಮಾಡಬೇಡ ಜಮೀಲಾ ಎಂದು ಪರಿಪರಿಯಾಗಿ ಬೇಡಿಕೊಳ್ಳುವಾಗ ಜಮೀಲಾಳ ಕರುಳು ಕಿತ್ತುಬರುವ ಹಾಗಾಗುತ್ತಿದ್ದರೂ ಆಗಬೇಕಾಗಿರುವ ಅಮಂಗಳ ಕಾರ್ಯವನ್ನು ತಡೆಯುವ ಹಾಗಿರಲಿಲ್ಲ. ತನಗೆ ಏನೂ ಮಾಡಲಿಕ್ಕಾಗದ ಅಸಹಾಯಕತೆ ಜಮೀಲಾಳನ್ನು ಮುತ್ತಿಕೊಂಡಿತು. ಭಾರವಾದ ಹೃದಯದಿಂದ ಜುಹ್ರಾಳನ್ನು ಅವಳ ಗಂಡನ ಕಳೇಬರದ ಹತ್ತಿರ ಎಳೆದುಕೊಂಡು ಹೋದರು. ತನ್ನ ಗಂಡನ ಮುಖ ನೋಡುತ್ತಲೇ ಜುಹ್ರಾ ಇನ್ನೂ ಜೋರಾಗಿ ಚೀರಿಕೊಂಡಳು… “ಅಯ್ಯೋsss… ಕ್ಯಾ ಹುವಾ ಜೀ ತುಮೆ? ನಿಮ್ಮನ್ನ ಈ ಸ್ಥಿತೀಲಿ ನೋಡಕ್ಕೆ ನನ್ನ ಕೈಲಾಗಲ್ಲ. ನನ್ನ ದಯವಿಟ್ಟು ಬಿಟ್ಟುಬಿಡಿ. ನಾನು ಸತ್ತು ಹೋಗಿ ಇವರ ಜೊತೆಗೇನೆ ದಫನ್ ಆಗಿಬಿಡ್ತೀನಿ. ನನ್ನನ್ನ ಬಿಟ್ಟುಬಿಡಿ…” ಅವಳ ರೋದನ ಮುಗಿಲು ಮುಟ್ಟುತ್ತಿತ್ತು.

ತಮ್ಮನ ಸಾವಿಗೆ ಜುಹ್ರಾಳೆ ಕಾರಣ ಎಂದು ತಲೆಯಲ್ಲಿ ಕೂತುಬಿಟ್ಟಿದ್ದರಿಂದ ಉಮರ್‍ನ ಅಕ್ಕ ಮತ್ತಷ್ಟು ಕ್ರುದ್ಧಗೊಂಡು “ನನ್ನ ತಮ್ಮನ್ನ ನುಂಗಿಕೊಂಡು ಸುಮ್ಮ ಸುಮ್ಮನೆ ಯಾಕೆ ಸಾಯ್ತಿನಿ ಸಾಯ್ತಿನಿ ಅಂತ ನಾಟಕ ಆಡ್ತೀಯ? ಸಾಕು ಬಾಯಿ ಮುಚ್ಚು ಕಂಡಿದೀನಿ” ಎಂದು ರಟ್ಟೆಯ ಬಿಗಿಯನ್ನು ಹೆಚ್ಚಿಸಿ ಹಿಂದೆ ಎಳೆದುಕೊಂಡು ಜೋರಾಗಿ ಕುಳ್ಳಿರಿಸಿದಳು.

“ಏ… ಅಲ್ಲಿ ಯಾರಾದರೂ ಕಲ್ಲು ತಗೊಂಬನ್ನಿ” ಎಂದು ಜೋರಾಗಿ ಕೂಗಿದಳು. ಯಾರೋ ಕಲ್ಲು ಹುಡುಕಿತಂದರು. ಜುಹ್ರಾಳ ನಾದಿನಿ ನಿರ್ಭಾವುಕವಾಗಿ ಕಲ್ಲಿನಿಂದ ಬಳೆ ಒಡೆದು ಹಾಕಿದಳು, ಗಂಡನ ಕಳೇಬರದ ಮುಂದೆ ಹೆಣ್ಣುಮಕ್ಕಳ ಸೌಭಾಗ್ಯದ ದ್ಯೋತಕವಾದ ಕೊರಳಲ್ಲಿನ ಲಾಚಾ (ಕರಿಮಣಿ ತಾಳಿ) ವನ್ನು ಹರಿದು ಹಾಕಿದಳು, ಅವಳ ಮೈಯಲ್ಲಿನ ಒಡವೆಯನ್ನೆಲ್ಲ ತೆಗೆದು ಮತ್ತೊಬ್ಬ ನಂಬಿಕಸ್ಥ ವಿಧವೆಗೆ ಕೊಡಲಾಯಿತು. “ಯಾರಾದರೂ ಮರೆ ಮಾಡುವುದಿಕ್ಕೆ ಒಂದು ಪರದೆ ತಗೊಂಬನ್ನಿ” ಎಂದು ಕೂಗಿದಳು. ಜುಹ್ರಾಳ ತಂಗಿ ಬೇರೊಬ್ಬರ ಕೈಯಿಂದ ಈ ಕಾರ್ಯಕ್ಕೆ ಅಂತಲೇ ತಂದಿದ್ದ ಬಿಳಿ ಸೀರೆ ಮತ್ತು ಕುಪ್ಪಸವನ್ನು ಕೊಟ್ಟುಕಳಿಸಿದಳು. ಜುಹ್ರಾಳಿಗೆ ಬಿಳಿ ಸೀರೆ ಉಡಿಸಿಕೊಂಡು ಬಂದು ಅವಳು ಉಡುತ್ತಿದ್ದ ಬಣ್ಣದ ಸೀರೆಯನ್ನು ಉಮರ್‍ನ ಕಳೇಬರದ ಹತ್ತಿರ ಎಸೆಯಲಾಯಿತು.

“ಆಕೆಯ ಮುಖಕ್ಕೆ ಸೆರಗು ಹೊದೆಸಿ ಒಳಗೆ ಕರೆದುಕೊಂಡು ಬರಬೇಕು. ಬೇವಾ(ವಿಧವೆ) ಮುಖವನ್ನು ಯಾವ ಸುಹಾಗನ್(ಮದುವೆಯಾದ ಹೆಣ್ಣುಮಕ್ಕಳು) ಕೂಡ ನೋಡಬಾರದು” ಅನುಭವಸ್ಥ ಮಹಿಳೆಯೊಬ್ಬಳು ದೂರದಿಂದಲೇ ನುಡಿದಳು.

“ಆಕೆಯನ್ನ ಒಳಗಡೆ ಕರೆದುಕೊಂಡು ಬರುವ ಮುಂಚೆನೇ ಮುಖ ತೊಳೆಸಿಕೊಂಡು ಕರೆದುಕೊಂಡುಬನ್ನಿ” ಮತ್ತೊಬ್ಬ ಹೆಂಗಸು ಕೂಗಿದಳು.

“ಯಾ ಅಲ್ಲಾಹ್… ವಿಧವೆಗೆ ಬಟ್ಟೆ ಉಡಿಸೋಕೆ ಮುಂಚೆನೇ ಮುಖ ತೊಳೆಯಬೇಕಿತ್ತು” ಮತ್ತೊಬ್ಬಳು ಹೇಳಿದಳು.
“ಈಕೆ ಹೇಗಾಡ್ತಾ ಇದ್ದಳು ಅಂತ ನೀವೇ ನೋಡಿದಿರಲ್ಲ! ನನ್ನ ತಮ್ಮನ ಜೀವನ ಸರ್ವನಾಶ ಮಾಡಿದಳು. ಎಲ್ಲಾ ಮಾಡಿ ಈಗ ನನ್ನ ಮುಂದಿನ ಜೀವನ ಹೇಗೋ ಏನೋ ಅಂತ ಕೊಸರಾಡಿ ಕೊಸರಾಡಿ ಅಳ್ತಾ ಇದ್ದಳು. ಈಕೆಯನ್ನ ಸಂಭಾಳಿಸೋದರಲ್ಲೇನೆ ಎಲ್ಲಾ ಮರೆತುಹೋಯ್ತು. ಈಗ ಹೊಸದಾಗಿ, ಬಟ್ಟೆ ಬಿಚ್ಚಿಸಿ, ಮುಖ ತೊಳೆಸಿ ಆಮೇಲೆ ಸೀರೆ ಉಡಿಸೋದಾ?” ಎಂದು ಉಳಿದ ಹೆಂಗಸರನ್ನು ಉಮರ್‍ನ ಅಕ್ಕ ಕೇಳಿದಳು.

“ಬೇಡ ಬೇಡ ಹಾಗೆ ಮಾತ್ರ ಮಾಡಬೇಡಿ. ವಿಧವೆ ಸೀರೆ ಎರಡೆರಡು ಬಾರಿ ಉಡಿಸೋದಂದರೆ ಎರಡು ಸಲ ವಿಧವೆ ಮಾಡಿದಹಾಗೆ ಲೆಕ್ಕ” ಎಂದು ಅಲ್ಲಿಯೇ ಕುಳಿತಿದ್ದ ಹೆಣ್ಣುಮಗಳೊಬ್ಬಳು ಕೂಗಿದಳು.

“ಎರಡೆರಡು ಸಲ ವಿಧವಾ ಮಾಡಿದರೂ ಅದರ ಶಾಪ ಬೇರೊಬ್ಬರ ಮೇಲೆ ತಟ್ಟತ್ತೆ” ಮತ್ತೊಬ್ಬಳು ಎಚ್ಚರಿಸಿದಳು. ಕೊನೆಗೆ ಜುಹ್ರಾಳನ್ನು ಎರಡನೇ ಸಲ ವಿಧವೆ ಮಾಡದೆ ಆ ಶಾಪವನ್ನು ಬೇರೆಯವರಿಗೆ ತಾಕಿಸುವುದಕ್ಕೂ ಅವಕಾಶ ಕೊಡದೆ ಹಾಗೆಯೇ ಉಳಿಸಲಾಯಿತು. ಎಲ್ಲಿ ಮೈಲಿಗೆಯಾಗಿಬಿಡುವುದೋ ಎಂಬ ಭಯದಿಂದ ಜುಹ್ರಾಳನ್ನು ಗಂಡನ ಶವ ಮುಟ್ಟಲು ಬಿಡಲಿಲ್ಲ. ಅಳುತ್ತಿದ್ದ ಜುಹ್ರಾಳನ್ನು ಬಲವಂತವಾಗಿ ಹಿಂದೆಳೆದುಕೊಂಡು ಬಂದು ಅವಳ ಕೋಣೆಯಲ್ಲಿ ಕೂರಿಸಲಾಯಿತು. ಹೆಣ್ಣುಮಕ್ಕಳಿಗೆ ಮುಖ ನೋಡಲೆಂದು ದಾರಿ ಮಾಡಿಕೊಟ್ಟು ಹೊರಗಡೆ ಕಾಯುತ್ತಿದ್ದ ಸಾವಿರಾರು ಗಂಡಸರು ಆಕ್ರೋಶಗೊಂಡಿದ್ದರು. ಅಂದು ಶುಕ್ರವಾರವಾದ್ದರಿಂದ ಕಳೇಬರವನ್ನು ಮಧ್ಯಾಹ್ನದ ಒಂದು ಗಂಟೆಯ ನಮಾಝಿನ ಮುಂಚೆಯೇ ಖಬರಸ್ಥಾನದ ಬಳಿಯಿರುವ ಮಸೀದಿಯ ಬಳಿಗೆ ಒಯ್ಯಬೇಕಾಗಿತ್ತು. ಉಮರ್ ಸಾವಿನ ವಿಷಯದಲ್ಲೂ ಅದೃಷ್ಟವಂತನಾಗಿದ್ದ. ಶುಕ್ರವಾರವೇ ಅವನ ಪ್ರಾಣ ಹೋಗಿದ್ದರಿಂದ ಅವನಿಗೆ ಸುಲಭವಾಗಿ ಮುಕ್ತಿ ದೊರಕಿಬಿಡುತ್ತದೆ ಎಂದು ಗಂಡಸರು ಮಾತಾಡಿಕೊಂಡರು. ಕೆಲವರಿಗೆ ಆ ವಿಷಯಕ್ಕೆ ಹೊಟ್ಟೆಕಿಚ್ಚು ಕೂಡ ಆಯಿತು.

ಗಂಡಸರು ಒಳಗಡೆ ಬರುತ್ತಿದ್ದಂತೆ ಹೆಂಗಸರೆಲ್ಲ ಬುದು ಬುದು ಒಳಗೆ ಓಡಿ ಕೋಣೆ ಸೇರಿಕೊಂಡರಾದರೂ ಕೆಲವು ಹೆಣ್ಣುಮಕ್ಕಳು ಕಿಟಕಿಯ ಸರಳುಗಳಿಂದ ಇಣುಕಿಣುಕಿ ಶವವನ್ನು ಹೇಗೆ ಎತ್ತುತ್ತಾರೆಂದು ಅಂಗಳದತ್ತ ಕುತೂಹಲದ ಕಣ್ಣುಗಳಿಂದ ನೋಡತೊಡಗಿದರು. ಹಾಗೆ ಇಣುಕುವಾಗ ತಾವು ಗಂಡಸರ ಕಣ್ಣಿಗೆ ಬೀಳಬಾರದೆಂದು ಮುಂಜಾಗ್ರತೆ ವಹಿಸಿದ್ದರು. ಒಂದೊಮ್ಮೆ ಅಚಾನಕ್ಕಾಗಿ ಈ ರೀತಿ ಗಂಡಸರ ಕಣ್ಣಿಗೆ ಬಿದ್ದರೂ ಬುರ್ಖಾ ಹಾಕಿದ್ದರಿಂದ ಮತ್ತು ಇಕ್ಕಟ್ಟಾದ ಜಾಗದಲ್ಲಿ ಗುಂಪು ಗುಂಪಾಗಿ ನಿಂತಿದ್ದರಿಂದ ಯಾರು ಯಾರೆಂದು ಗುರುತಿಸುವುದು ಕಷ್ಟವಾಗಿತ್ತು. ಕೋಣೆಗಳಲ್ಲಿರಲು ಎಲ್ಲಾ ಹೆಂಗಸರಿಗೂ ಜಾಗ ಸಾಕಾಗುತ್ತಿರಲಿಲ್ಲವಾದ್ದರಿಂದ ಕೆಲವು ಧೈರ್ಯವಂತ ಹೆಂಗಸರು ಪ್ರಾಂಗಣದಲ್ಲಿಯೇ ಕೂತು ‘ಪರ್ದಾ ಲಾವೋ ಜೀ ಝರಾ’ ಎಂದು ಕೂಗಲಾಗಿ ಅವರಿಗೆ ಪರದೆ ವ್ಯವಸ್ಥೆ ಮಾಡಲಾಯಿತು. ಇಬ್ಬರು ಭಿಕ್ಷುಕ ಮುದುಕಿಯರು ಉದ್ದನೆಯ ಪರದೆಯ ತುದಿಯನ್ನು ಹಿಡಿದು ನಿಂತರು. ಇದು ತೆರೆದ ಅಂಗಳದಲ್ಲಿ ಅವರನ್ನು ಗಂಡಸರಿಂದ ಮರೆಮಾಚಿತು. ನೋಡನೋಡುತ್ತಿದ್ದಂತೆಯೇ ಡೋಲಿಯನ್ನು ಎತ್ತಿಕೊಂಡು ಹೊರನಡೆವಾಗ ಒಳಗಿನಿಂದ ಮತ್ತೊಂದು ದೊಡ್ಡ ರೋದನ ಕೇಳಿಬಂತು. ಉಮರ್ ನಾಲ್ಕು ಹೆಗಲುಗಳ ಮೇಲೆ ಮಲಗಿ ತನ್ನ ಮನೆಯಿಂದ ಶಾಶ್ವತವಾಗಿ ಹೊರಟು ಹೋಗುತ್ತಿದ್ದ… ದಿಲ್ಖುಶ್‍ನ ಒಳಗಿನಿಂದ ಹೆಂಗಸರ ಗೋಳಾಟ ಮಾರ್ದನಿಸುತ್ತಿತ್ತು.

ಹೊಸ ವಿಧವೆಯಾದ ಜುಹ್ರಾಳೊಬ್ಬಳನ್ನು ಬಿಟ್ಟು ಉಳಿದೆಲ್ಲಾ ಹೆಂಗಸರು ಕೋಣೆಗಳಿಂದ ಹೊರಬಂದು ಕೈ ಕಾಲು ಮುಖ ತೊಳೆದುಕೊಂಡರು. ಉಮರ್‍ನ ದೋಸ್ತರ ಮನೆಯ ಹೆಂಗಸರೆಲ್ಲಾ, ಗಂಡಸರು ಖಬ್ರಸ್ಥಾನದಿಂದ ಮರಳಿ ಬರುವವರೆಗೂ ಕಾದು, ಅನಂತರ ತಮ್ಮ ಗೂಡು ಸೇರಿಕೊಂಡರು. ಸಂಬಂಧಿಕರು ಅಷ್ಟು ಬೇಗ ಹೊರಡುವ ಹಾಗಿರಲಿಲ್ಲ. ದೂರದೂರಿನಿಂದ ಬಂದ ಆತ್ಮೀಯರು, ಹತ್ತಿರದ ಬಂಧುಗಳೆಲ್ಲರೂ ದಿವಸದ ಕಾರ್ಯಗಳಲ್ಲಿ ಭಾಗವಹಿಸಬೇಕಾಗಿದ್ದರಿಂದ ಮತ್ತು ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಬೇಕಾದ್ದರಿಂದ ನಲವತ್ತು ದಿನಗಳವರೆಗೂ ಇದ್ದೇ ಹೋಗುವುದೆಂದು ತೀರ್ಮಾನ ಮಾಡಿಕೊಂಡರು.

(ಕೃತಿ: ಪರ್ದಾ ಅಂಡ್ ಪಾಲಿಗಾಮಿ (ಅನುವಾದಿತ ಕಾದಂಬರಿ”Purdah and Polygomy: Life In An Indian Muslim Household), ಇಂಗ್ಲಿಷ್ ಮೂಲ: ಇಕ್ಬಾಲುನ್ನೀಸಾ ಹುಸೇನ್, ಅನುವಾದ: ದಾದಾಪೀರ್‌ ಜೈಮನ್‌, ಪ್ರಕಾಶಕರು: ಛಂದ ಪುಸ್ತಕ, ಬೆಲೆ: 380/-)