ಹನ್ನೊಂದು ಗಂಟೆಗೆ ಸರಿಯಾಗಿ ಮೇಲೆದ್ದು “ಈರಣ್ಣ ಬಸಣ್ಣ ಸೋನಗಾರನ ಮನೆಗೆ ಹೋಗೋಣ ಬನ್ನಿ” ಎಂದಾಗ, ತಲಾಟಿಯಾದಿಯಾಗಿ ಎಲ್ಲರೂ ಮುಖ ಮುಖ ನೋಡಿಕೊಂಡರು. “ಈರಣ್ಣ ಹಣ್ಣಹಣ್ಣ ಮುತ್ಯಾ ಆಗ್ಯಾನ್ರಿ, ಕುಟು ಕುಟು ಜೀವ ಹಿಡುಕೊಂಡು ಬದುಕಿರೋನ ಬಲ್ಲಿ ಹೋಗಿ ಏನ್ಮಾಡವರಿದ್ದೀರಿ?” ಪೋಲೀಸುಪಾಟೀಲ ಶರಣಪ್ಪಗೌಡ ಆಶ್ಚರ್ಯಗೊಂಡು ಪ್ರಶ್ನಿಸಿದ. “ಅದೆಲ್ಲ ಆಮೇಲೆ ಗೊತ್ತಾಗುತ್ತೆ, ಸುಮ್ಮನೆ ಆತನ ಮನೆಗೆ ನಡೀರಿ” ಎಂದಾಗ ಶರಣಪ್ಪನನ್ನು ಮುಂದುಮಾಡಿಕೊಂಡ ಪಂಚರು ಸೊನಗಾರ ಓಣಿಯಲ್ಲಿ ಹೋಗಿ ಈರಣ್ಣನ ಮನೆಯ ಮುಂದೆ ನಿಂತರು.

“ಮನಿಯಾಗೆ ಮುತ್ಯಾ ಹಾನಾ?” ಮನೆಯ ಮುಂದೆ ಆಟವಾಡುತ್ತಿದ್ದ ಹುಡುಗನನ್ನು ತಲಾಟಿ ಕೇಳಿದ. “ಒಳಗೆ ಹಾನ್ರಿ” ಉತ್ತರ ಕೊಟ್ಟ ಬಾಲಕ ಚೆಂಡು ತೂರಿ ಕ್ಯಾಚ್ ಹಿಡಿಯುತ್ತ ಅಲ್ಲಿಂದ ಮುಂದೆ ಹೋದ. “ಈರಣ್ಣಕಾಕ ನಿನ್ನ ನೋಡಾಕೆ ಸೇಡಂದಿಂದ ಸಾಯೇಬರು ಬಂದಾರೆ ಹೊರಗೆ ಬಂದು ಅವರಿಗೆ ಭೆಟ್ಟಿಕೊಡು” ಎಂದು ಶರಣಪ್ಪಗೌಡ ಕೂಗಿ ಹೇಳಿದ. “ಬಾಗಲ್ದಾಗ ನಿಂತು ಕೂಗ್ತಿರೋರು ಯಾರೊ ಯಪ್ಪ, ಮುತ್ಯಾ ಮನ್ಯಾಗಿಲ್ಲ ಬಯಲಕಡೀಕೆ ಹೋಗ್ಯಾನೆ” ಎಂದು ಹೇಳುತ್ತ ಬೆನ್ನು ಸಂಪೂರ್ಣ ಬಾಗಿರುವ ಮುದುಕಿಯೊಂದು ಕೋಲೂರುತ್ತ ಮುಂಬಾಗಿಲಿಗೆ ಬಂದಿತು. “ಕಾಕು ನಿಮ್ಮನಿ ನೋಡಾಕೆ ಸೇಡಂದಿಂದ ಸಾಯೇಬರು ಬಂದಾರೆ. ಒಳಗಾರ ಕರೀತಿಯೊ, ಇಲ್ಲ ಅಗಸಿ ಬಾಗಲ್ದಾಗೆ ನಿಂದ್ರಸ್ತೀಯೊ” ಎಂದ ಶರಣಪ್ಪಗೌಡನಿಗೆ “ನಮ್ಮನಿಯಾಗೆ ಏನೈತೆ ಅಂತ ನೋಡಾಕ ಬಂದಾರೆ? ನಿಂದೆ ಏನರ ಭಾನ್ಗಡಿ ಇದ್ದಿರಬೇಕು ತಗಿ” ಎಂದು ಹೇಳಿದ ಮುದುಕಿ ಕತ್ತೆತ್ತಿ ಹಣೆಮೇಲೆ ಕೈ ಇಟ್ಟು ನಮ್ಮನ್ನೆಲ್ಲ ದೃಷ್ಟಿಸಿ ನೋಡಿ “ಮನ್ಯಾಗೆ ಯಾರು ಗಂಡಸರಿಲ್ಲೋ ಯಪ್ಪ, ಕೈಲಾಗದ ಮುದುಕಿ ಮನ್ಯಾಗದೀನಿ, ಮುತ್ಯಾ ಬಂದಮ್ಯಾಲೆ ಬರ್ರಿ” ಎಂದು ಯಾರೂ ಒಳ ಪ್ರವೇಶಿಸದಂತೆ ಕೋಲುಹಿಡಿದು ಹೊಸ್ತಿಲಮೇಲೆ ಕುಳಿತಳು. ಹಾಗಾದರೆ ಈ ಮುದುಕಿಗೆ ನಮ್ಮ ದಾಳಿಯ ಮುನ್ಸೂಚನೆ ದೊರೆತಿದೆಯೇ? ನಾವು ನಾಲ್ಕು ಅಧಿಕಾರಿಗಳ ಹೊರತಾಗಿ ಡ್ರೈವರ್ ಹುಸೇನಿಯೊಬ್ಬನಿಗೆ ನಮ್ಮ ಯೋಜನೆ ಅರ್ಧಂಬರ್ಧ ಗೊತ್ತಿರಬಹುದು. ಅವನು ಇಲ್ಲಿ ಯಾರೊಂದಿಗೂ ಮಾತನಾಡಿದಂತೆ ಕಾಣಲಿಲ್ಲ. ಎಲ್ಲೋ ಏನೊ ವ್ಯತ್ಯಾಸವಾಗಿದೆ ಎನ್ನಿಸಿತು. ಆಗ ನಾನು- “ಮುದಕಿ ಹಾದಿ ಬಿಡು, ನಿಮ್ಮ ಮನೇಲಿರುವ ಗಿರವಿ ಇಟ್ಟುಕೊಂಡಿರೊ ನಗ-ನಾಣ್ಯ ನಮ್ಮ ವಶಕ್ಕೆ ತಗೊಬೇಕಾಗೇತಿ. ನೀ ಹಾದಿ ಬಿಡಲಿಲ್ಲ ಎಂದರೆ ಪೋಲೀಸಪ್ಪ ನಿನ್ನ ಕೈದು ಮಾಡ್ತಾನೆ” ಎಂದು ಹೇಳಿದ ಕೂಡಲೆ ಮುದುಕಿಯ ಸಿಟ್ಟು ನೆತ್ತಿಗೇರಿ, “ಹೊಟ್ಟಿಗೆ ಕೂಳಿಲ್ದೆ ನಾವು ಮುದುಕ ಮುದುಕಿ ಶಿವನೆ ನಮ್ಮನ್ನ ನಿನ್ನ ಬಲ್ಲಿಗೆ ಯಾವಾಗ ಕರಕಂತಿಯಪ್ಪ ಅಂತ ದಿನಾ ಭಗವಂತನ್ನ ಕೇಳ್ತಿದ್ದರೆ, ನೀ ನಮ್ಮ ಮನ್ಯಾಗೆ ನಗ ನಾಣ್ಯೇವು ಹುಡಕಾಕ ಬಂದಿ? ಚಲೊ ಆತು ನಮ್ಮನ್ನರೆ ಒಯ್ದು ಜೇಲಿಗೆಹಾಕ್ರಿ. ಎಡ್ಡ ಹೊತ್ತು ಕೂಳಾದರೂ ಸಿಕ್ತಾವು” ಎಂದು ಹೇಳುತ್ತಾ ಭೋರ್ಗರೆದು ಅಳಲು ಶುರುಮಾಡಿದಳು. ನನ್ನ ಸಹೋದ್ಯೋಗಿಗಳು ಮೊದಲೆ ಎಚ್ಚರಿಕೆ ನೀಡಿದ್ದರು- ಹಳ್ಳಿಯ ಜನ ಸಾಮಾನ್ಯರಲ್ಲ, ಬಲೆ ನಾಟಕ ಆಡುತ್ತಾರೆ, ಅವಕ್ಕೆಲ್ಲ ಸೊಪ್ಪುಹಾಕದೆ ನಿನ್ನ ಕೆಲಸ ಮಾಡಬೇಕು- ಎಂದು. ನನಗೆ ನೀಡಿರುವ ಪಟ್ಟಿಯ ಪ್ರಕಾರ ಈರಣ್ಣ ಬಸಣ್ಣ ಸೋನಗಾರ ಒಬ್ಬ ಲೇವಾದೇವಿಗಾರ. ಅವನ ಮನೆಯ ಮೇಲೆ ದಾಳಿಮಾಡಿ ಗಿರವಿ ಇಟ್ಟುಕೊಂಡಿರುವ ವಸ್ತುಗಳನ್ನು ವಾರಸುದಾರರಿಗೆ ಹಂಚುವುದು ನನ್ನ ಕರ್ತವ್ಯ. ತಪ್ಪಿದಲ್ಲಿ ಮೇಲಧಿಕಾರಿಗಳು ಶಿಕ್ಷೆ ನೀಡಬಹುದು. ಮನಸ್ಸಿನಲ್ಲಿ ವಿಚಾರ ಮಾಡುತ್ತ, ದಾಳಿಯನ್ನು ಯಾವ ರೀತಿ ಆರಂಭಿಸಿದರೆ ಉತ್ತಮ ಎಂದು ಯೋಚಿಸುತ್ತಿದ್ದೆ. ಆ ವೇಳೆಗೆ ಶರಣಪ್ಪಗೌಡ-“ಈರಣ್ಣ ಕಾಕ ಬಂದ ನೋಡ್ರಿ ಸಾಹೇಬರೆ” ಎಂದ. ಹಿಂದಿರುಗಿ ನೋಡಿದರೆ ಅಂದಾಜು ಆರು ಅಡಿ ಎತ್ತರದ ನರಪೇತಲ ಹಣ್ಣು ಹಣ್ಣು ಮುದುಕ ಕೈಯಲ್ಲಿ ಎಂತವೊ ಎರಡು ಗೆಡ್ಡೆಗಳನ್ನು ಹಿಡಿದು ಕಾಲೆಳೆಯುತ್ತ ಬರುತ್ತಿದ್ದಾನೆ. ಅವನ ಮುಖದ ಮೆಲೆ ಬಡತನ ಮತ್ತು ಹಸಿವು ತಾಂಡವಾಡುತ್ತಿವೆ. ಈ ಸರಕಾರಿ ದಾಖಲೆಗಳನ್ನು ನಂಬಿ ಅನ್ನಕ್ಕೆ ಗತಿಯಿಲ್ಲದಂತಿರುವ ಹಣ್ಣುಹಣ್ಣು ಮುದುಕನ ಮನೆಯ ಮೇಲೆ ದಾಳಿ ಮಾಡಬೇಕಾಗಿ ಬಂದ ನನ್ನ ಬಗ್ಗೆ ನನಗೇ ಜಿಗುಪ್ಸೆಯಾಯಿತು.

“ನಿನ್ನ ಮನ್ಯಾಗೆ ಮಂದಿ ಸಂಪತ್ತು ರಾಸಿ ಬಿದ್ದೈತೆ ಅಂತ ಜಪ್ತಿ ಮಾಡಾಕ ಬಂದಾರೆ ಸಾಯೇಬರು, ಪೆಟಾರಿ ತೆಗದು ತೋರಸಪ್ಪಈರಣ್ಣ ಕಾಕ” ಶರಣಪ್ಪಗೌಡನ ಮಾತಿಗೆ ಕೆರಳಿ ಕೆಂಡವಾದ ಮುದುಕಿ- “ಹೌದೊ ಯಪ್ಪ, ಪೆಟಾರಿವೊಳಗೆ ಕೋಟಿ ರೂಪಾಯಿ ರಾಸಿ ಹಾಕಿ ಭೂಮ್ಯಾಗಿ ಹೂತೀವಿ. ನಾವು ಸತ್ತಮೇಕೆ ನಮ್ಮ ತಿಥಿ ಮಾಡಿ ಎಲ್ಲ ನಿನ್ನ ತಾಬೇಗೆ ತಕ್ಕಾವಂತೆ” ಎಂದು ಶರಣಪ್ಪನ ಮೇಲೆ ಹರಿಹಾಯ್ದಳು. ಈರಣ್ಣ ಮಾತ್ರ ಏನೂ ಅರ್ಥವಾಗದೆ ಕಲ್ಲು ಬಸವಣ್ಣನಂತೆ ಕಟ್ಟೆಯ ಮೇಲೆ ಕುಳಿತ. ಆತನಿಗೆ ಪೂರಾಕಿವುಡು, ಮೂಕನಾಟಕವನ್ನು ನೋಡುತ್ತಿರುವವನಂತೆ ಪಿಳಿಪಿಳಿ ಕಣ್ಣು ಬಿಡುತ್ತಿದ್ದ. ಪರಿಸ್ಥಿತಿ ಹತೋಟಿ ಮೀರುವ ಮುಂಚೆ ಕರ್ತವ್ಯ ಮುಗಿಸುವ ತರದೂದಿನಿಂದ ಪಂಚರನ್ನು ಕರೆದುಕೊಂಡು ಮನೆಯೊಳಗೆ ಪ್ರವೇಶಿಸಿದೆ. ಕತ್ತಲೆಗೆ ಕಣ್ಣು ಹೊಂದಿಸಿಕೊಂಡು ನೋಡಿದರೆ, ಎದುರು ಗೋಡೆಯೊಳಗೆ ಟ್ರಜರಿ ಹುಗಿದಿದ್ದಾರೆ. ನನಗೆ ನಿಧಿ ಸಿಕ್ಕಷ್ಟು ಸಂತೋಷವಾಯಿತು.

ಟ್ರಜರಿಯ ಕಡೆಗೆ ಬೆರಳು ತೋರಿಸಿ ‘ಇದರಲ್ಲೇನಿದೆ?’ ಎಂದು ಈರಣ್ಣನಿಗೆ ಸನ್ನೆ ಮಾಡಿದರೆ, “ಆಂ…. ಆಂ…” ಎಂದು ಹೇಳಿ ನನ್ನನ್ನೇ ಪ್ರಶ್ನಿಸುವಂತೆ ಮುಖ ನೋಡಿದ. “ಅದರಾಗೆ ಮುತ್ಯಾನ ಹಿರೀಕರ ಆಸ್ತಿ ಐತೆ, ಅವನ ಕೂಡೆ ಅದನ್ನ ಕುಣಿಯಾಗೆ ಹುಗಿಬೇಕಂತೆ” ಮುದುಕಿ ಒಗಟಾಗಿ ಉತ್ತರಿಸಿದಳು. ನಾನು ಕರ್ತವ್ಯ ಬದ್ಧನಾಗಿ ಟ್ರಜರಿಯ ಕದವನ್ನು ಸೀಲುಮಾಡಿ ಅರಗಿನ ಮುದ್ರೆ ಒತ್ತಿದೆ. ಅಷ್ಟುಹೊತ್ತಿಗೆ ಅಕ್ಕಪಕ್ಕದ ಮನೆಗಳಲ್ಲಿದ್ದ ನಾಲ್ಕಾರು ಜನ ಮುದುಕರು, ಹೆಂಗಳೆಯರು ಹಾಗೂ ಮಕ್ಕಳು ಬಾಗಿಲಮುಂದೆ ಗುಂಪುಗೂಡಿದರು. ಯಾರಿಗೂ ಪ್ರಶ್ನೆ ಕೇಳುವ ಧೈರ್ಯವಿಲ್ಲ. ತುರ್ತುಪರಿಸ್ಥಿತಿಯ ಗುರುತ್ವ ಈಗಾಗಲೇ ಹಳ್ಳಿಹಳ್ಳಿಗಳಲ್ಲಿ ಪ್ರಚಾರವಾಗಿ ಅಧಿಕಾರಿಗಳ ಎದುರು ಮಾತನಾಡಿ ಇಲ್ಲದ ತೊಂದರೆಗೊಳಗಾಗಲು ಜನರು ಸಿದ್ಧರಿಲ್ಲ. ಘಟನೆಗೆ ಮೂಕಪ್ರೇಕ್ಷಕರಾಗಿ ನಿಂತಿದ್ದಾರೆ.

‘ಕೇಳ್ರಪ್ಪೋ ಕೇಳ್ರಿ ಈರಣ್ಣ ಬಸಣ್ಣ ಸೋನಗಾರನಲ್ಲಿ ಮಾಲುಗಳನ್ನು ಗಿರವಿ ಇಟ್ಟಿರುವ ಮಾಜನರು ಪಾವತಿ ಚೀಟಿ ಅಥವಾ ಬೇರೆ  ಯಾವುದೇ ದಾಖಲೆ ಚೀಟಿ ಹಾಜರುಪಡಿಸಿ ನಿಮ್ಮ ನಿಮ್ಮ ಮಾಲುಗಳನ್ನು ವಾಪಸ್ಸು ತಕ್ಕೊಂಡು ಹೋಗಬೇಕು ಅಂತ ಸರ್ಕಾರದವರು ಹುಕುಂ ಮಾಡ್ಯಾರಪ್ಪೋ’ ಎಂದು ಹಲಗೆಯವನು ಟಾಂ ಟಾಂ ಸಾರಿದ. ಗೌಡರ, ಕಬ್ಬಿಲಿಗರ, ಹೊಲೆಯರ ಮತ್ತು ಮುಸುಲರ ಕೇರಿಗಳಲ್ಲಿ ಹೊಲಗಳಿಗೆ ಹೋಗದೆ ಮನೆಯಲ್ಲುಳಿದಿದ್ದ ಮುದುಕರು, ಮಕ್ಕಳು ಹೆಂಗಸರು ಈರಣ್ಣನ ಮನೆಯ ಮುಂದೆ ನೆರೆದರು. ಶರಣಪ್ಪಗೌಡ- “ಸರಕಾರದ ಲೇಸನ್ಸ್ ಇರುವ ಲೇವಿದೇವಿಗಾರರ ಪಟ್ಟಿಯಲ್ಲಿ ಈರಣ್ಣಜ್ಜನ್ನ ಬಿಟ್ಟು ಇನ್ಯಾರದಾದರೂ ಹೆಸರು ಐತೋ?” ಎಂದು ಎರಡೆರಡು ಬಾರಿ ಕೇಳಿ, “ಇನ್ನ್ಯಾರದ್ದೂ ಇಲ್ಲ” ಎಂದಮೇಲೆ, “ಈಗ ಈರಪ್ಪಜ್ಜನ ಮನ್ಯಾಗಿರೊ ಪೆಟಾರಿ ಬಾಗ್ಲು ತೆಗ್ದು ಅದರಾಗಿರೊ ನಗ, ದಾಗೀನ, ಪ್ರಾಂಸರಿಪತ್ರ ಎಲ್ಲ ತೆಗದು ಸಾಯೇಬರು ನಿಮ್ಮ ಮುಂದಿಡ್ತಾರೆ. ಅದರಾಗೆ ನಿಮ್ಮದು ಅಂತ ಏನಾರೂ ಇದ್ದರೆ, ಗಿರವಿ ಚೀಟಿ ತಂದು ತೋರಿಸಿ ಮಾಲು ನಿಮ್ಮ ತಾಬೆಗೆ ಒಯ್ಯಬೌದು ಅಂತ ಸಾಯೇಬರು ಹೇಳ್ತಾರೆ. ಪೆಟಾರಿ ಬಾಗಲು ತೆಗೆಯಾಕೆ ನಿಮ್ಮದೆಲ್ಲ ಕಬೂಲಿ ಐತಾ” ಎಂದು ನೆರೆದ ಗ್ರಾಮಸ್ಥರ ಅಪ್ಪಣೆ ಕೇಳಿದ. ಹೂ ಎಂದಾಗಲಿ ಉಹೂ ಎಂದಾಗಲಿ ಹೇಳದೆ ಎಲ್ಲರೂ ಬೆಲ್ಲ ಕುಟ್ಟಿದ ಕಲ್ಲಿನಂತೆ ನಿಂತಿದ್ದರು. ಬಾಯಿ ಕಳೆದುಕೊಂಡಿರುವ ಈ ಜನರನ್ನು ಕೇಳಿ ಉಪಯೋಗವಿಲ್ಲವೆಂದರಿತು, ಟ್ರಜರಿಯ ಬಳಿ ಹೋಗಿ ನಿಂತು “ಚಾವಿ ಕೊಡು” ಎಂದು ಈರಣ್ಣನನ್ನು ಕೈ ಸನ್ನೆ ಮೂಲಕ ಕೇಳಿದೆ. ಈರಣ್ಣನ ಹೆಂಡತಿ ಒಂದು ಸಣ್ಣ ತಗಡಿನ ಸಂದೂಕವನ್ನು ತಂದು ಅದರೊಳಗಿದ್ದ ತುಕ್ಕುಹಿಡಿದ ಏಳೆಂಟು ಚಾವಿಗಳನ್ನು ನನ್ನ ಮುಂದೆ ಸುರಿದಳು. ತಲಾಟಿಗೆ ಟ್ರಜರಿ ಬೀಗ ತೆಗೆಯಲು ಹೇಳಿದೆ. ಸಂದೂಕದಲ್ಲಿದ್ದ ಎಲ್ಲಾ ಚಾವಿಗಳಿಂದಲೂ ಕೀಲಿ ತೆಗೆಯಲು ಪ್ರಯತ್ನಿಸಿ ಸಾಧ್ಯವಾಗದೆ ಕೈ ಚಲ್ಲಿದ. ಪೋಲೀಸಪ್ಪ, ಓಲೆಕಾರ ಭರಮಣ್ಣ, ಶರಣಪ್ಪಗೌಡ, ಮಾಲೀಪಾಟೀಲ ಲಿಂಗಪ್ಪಗೌಡ, ಅಲ್ಲಿ ಸೇರಿದ್ದ ಇನ್ನೂ ಮೂರ್ನಾಲ್ಕು ಜನರು ಬೀಗ ತೆಗೆಯಲು ಪ್ರಯತ್ನಿಸಿ ವಿಫಲರಾದರು. “ಈರಣ್ಣಕಾಕ ನೋಡಪಾ ನಿನ್ನ ಪೆಟಾರಿ ಬೀಗ ನಿನ್ನ ಮಾತೇನಾದ್ರೂ ಕೇಳೀತು” ಎಂದ ಶರಣಪ್ಪಗೌಡ, ಈರಣ್ಣನ ರಟ್ಟೆ ಹಿಡಿದು ಟ್ರಜರಿಯ ಹತ್ತಿರ ಕರೆತಂದ. ಈರಣ್ಣನಿಗೆ ಆಗ ತಿಳಿಯಿತು, ತನ್ನ ಪೆಟಾರಿ ಕೀಲಿ ತೆಗೆಯಲು ಹೇಳುತ್ತಿದ್ದಾರೆ ಎಂದು. ಅಲ್ಲೆ ಪಕ್ಕದ ಗೋಡೆಯಲ್ಲಿದ್ದ ಸಣ್ಣದೊಂದು ಗೂಡಿನಲ್ಲಿ ಕೈ ಹಾಕಿ ಅದರಲ್ಲಿದ್ದ ರಂಧ್ರದಲ್ಲಿ ಮೊಳಕೈವರೆಗೆ ತೂರಿಸಿ, ಎಲ್ಲಿಯೋ ಪಾತಾಳದಿಂದ ಪಡೆದನೇನೋ ಎನ್ನುವಂತೆ ಗೇಣುದ್ದದ ಎರಡು ಚಾವಿಗಳನ್ನು ಹೊರತೆಗೆದ.

ಕ್ಷಣಮಾತ್ರದಲ್ಲಿ ಟ್ರಜರಿಯ ಬಾಗಿಲು ತೆರೆದುಕೊಂಡಿತು. ಹತ್ತಿರ ಹೋಗಿ ನೋಡಿದರೆ, ಏನಿದೆ ಅದರಲ್ಲಿ? -ಅಕ್ಕಸಾಲಿಗರು ಚಕ್ರ ತಿರುಗಿಸಿ ಗಾಳಿಯೂದುವ ತಿದಿ, ವಿವಿಧ ಅಳತೆಯ ಐದು ಸಣ್ಣ ಸುತ್ತಿಗೆಗಳು, ಕಬ್ಬಿಣದ ಅಡಿಗಲ್ಲು, ಒಂದು ಚಿಮಟ. ಇಂತಹ ಪುರಾತನ ವಸ್ತುಗಳನ್ನು ಹೊರತೆಗೆದು ರಾಸಿ ಹಾಕಿಕೊಂಡು ಅದರಮುಂದೆ ಕುಳಿತ ತಲಾಟಿ ಮತ್ತು ಪಕ್ಕದಲ್ಲಿ ನಿಂತಿದ್ದ ನಾನು ನೆರೆದ ಜನರೆದುರು ಅವಮಾನಿತರಾಗಿ ತಲೆತಗ್ಗಿಸಿದೆವು.

“ಈರಣ್ಣಕಾಕಾನ ಬಲ್ಲಿ ದಾಗೀನ ಅಡವು ಇಟ್ಟೋರು ಯಾರಾರೂ ಇದ್ದರೆ ಸಾಹೇಬರ ಮಜಕೂರ್ ಹೇಳ್ರಿ, ಇಲ್ಲಂತಂದರೆ ನಿಮ್ಮ ನಿಮ್ಮ ಮನಿಕಡೆ ಹೋಗ್ರಿ” ಶರಣಪ್ಪಗೌಡ ಅಲ್ಲಿದ್ದ ಜನರಿಗೆ ತಾಕೀತು ಮಾಡಿದ. ಬಾಯಿಲ್ಲದ ಜನರು ಗೌಡನ ಆಜ್ಞೆಯನ್ನು ಶಿರಸಾವಹಿಸಿ ಮನೆಗಳತ್ತ ಹೊರಟರು.

“ನಮ್ಮ ಕೆಲಸ ಇಲ್ಲಿ ಮುಗೀತು ಹೌದಲ್ಲರಿ, ನಾವು ಹೊಲದ ಕಡೀಕೆ ಹೋಗಾಕ ಬಿಡ್ರಿ. ಕೂಲಿಕಾರ ಮಂದೀನ ಕೆಲಸಕ್ಕೆ ಹಚ್ಚಿ ಬಂದೀನಿ” ಶರಣಪ್ಪಗೌಡ ಅಪ್ಪಣೆ ಕೇಳಿದ. ನಾನು ಅವನ ಮುಖ ನೋಡಿ ಸುಮ್ಮನಾದೆ. “ನಡಿ ಲಿಂಗಪ್ಪಣ್ಣ ನಾವು ಹೋಗಾನ” ಎಂದು ಮಾಲಿಪಾಟೀಲನನ್ನು ಕರೆದುಕೊಂಡು ವಿದಾಯ ಹೇಳಿದ. ನಾಯಬ್ ತಹಶೀಲ್ದಾರ್ ಬಂದು ಜೀಪಿನಲ್ಲಿ ನಮ್ಮನ್ನು ಕೊಂಡೊಯ್ಯುವವರೆಗೆ ಬೇರೆ ಕೆಲಸವಿಲ್ಲದ್ದರಿಂದ ಈರಪ್ಪಣ್ಣನ ಕಟ್ಟೆಯ ಆಶ್ರಯ ಪಡೆಯಬೇಕಾಯಿತು. ತಲಾಟಿ ಮತ್ತು ಓಲೇಕಾರ ಊಟ ಮಾಡಿ ಬರಲು ಮನೆಗೆ ಹೋದರು. ಪೋಲೀಸಪ್ಪ ತಂದುಕೊಂಡ ರೊಟ್ಟಿ ಮತ್ತು ನಾನು ತಂದಿದ್ದ ಬ್ರೆಡ್ಡು ತಿಂದು ತಲಾಟಿ ತಂದುಕೊಟ್ಟ ನೀರು ಕುಡಿದು ಕುಳಿತೆವು. ಸಣ್ಣಗೆ ಬೀಳಲಾರಂಭಿಸಿದ ಮಳೆ ಜೋರಾಗುತ್ತ ಬಂದು ಕಟ್ಟೆಯ ಮೇಲೆ ಕುಳಿತವರು ಈರಣ್ಣನ ಮನೆಯೊಳಗೆ ಹೋಗಿ ಕುಳಿತೆವು. ಈರಣ್ಣ ಟ್ರಜರಿಯಿಂದ ಹೊರತೆಗೆದ ಸಾಮಾನುಗಳ ಪಕ್ಕ ಗೋಣೀಚಿಲ ಹಾಸಿಕೊಂಡು ಮುದುರಿ ಮಲಗಿದ್ದ. ಮುದುಕಿ ಕಂಬಕ್ಕೊರಗಿ ಕಾಲು ಚಾಚಿ ಕುಳಿತಿದ್ದಳು. “ಊಟಾಯ್ತೇನಬೆ” ಎಂದು ಪೋಲೀಸಪ್ಪ ಕೇಳಿದ ಕೂಡಲೆ ಬಿಕ್ಕಿಬಿಕ್ಕಿ ಅಳಲಾರಂಭಿಸಿ, “ರೊಟ್ಟಿ ಬಡದು ಮೂರು ದಿನಾತು, ಮನ್ಯಾಗೆ ಹಿಡಿ ಜ್ವಾಳಿಲ್ಲ, ನಮ್ಮ ಕಥಿ ಏನ್ಕೇಳ್ತಿಯೋ ಯಪ್ಪ. ಅದರಾಗ ನೀವ್ಬ್ಯಾರೆ ನಕ್ಷತ್ರಿಕರಂಗೆ ಮನೆ ಮುಂದೆ ಕುಂತಿದಿರಿ. ಬಡವರ ಬಾಳೇವು ನೋಡಿ ನಕ್ಕರೆ ಶಿವ ಮೆಚ್ಚಾತಾನೇನು ತಮ್ಮ” ಮುದುಕಿಯ ಮಾತು ಕೇಳಿ ಮನಸ್ಸು ಭಾರವಾಯಿತು. ನನ್ನ ಬ್ಯಾಗಿನಲ್ಲಿದ್ದ ಬ್ರೆಡ್ಡಿನ ತುಂಡುಗಳನ್ನು ಅಜ್ಜಿಯ ಮುಂದಿಟ್ಟು ಅಲ್ಲಿರಲಾಗದೆ ಹೊರಬಂದು ಕಟ್ಟೆಯ ಮೇಲೆ ನಿಂತೆ. “ಎದ್ದೇಳೊ ಮುತ್ಯಾ, ನೀ ತಂದ ಗಡ್ಡಿ ಬೇಸಿಕೋಡಾಕೆ ಸವಡಿಲ್ದಾಂಗಾತು, ಮನಿಮೇಲೆ ರೇಡು ಮಾಡಾಕ ಬಂದ ಸಾಯೇಬ ಬಿರೆಡ್ಡು ಕೊಟ್ಟಾನೆ, ತಿನ್ನೀವಂತೆ ಏಳು” ಎಂದು ಮುದುಕಿ ಅಲವತ್ತುಕೊಳ್ಳುವುದನ್ನು ಕೇಳಿಸಿಕೊಳ್ಳಲಾಗದೆ ದೇವಸ್ಥಾನಕ್ಕೆ ಹೋಗಿ ಕಟ್ಟೆಯ ಮೇಲೆ ಕುಳಿತೆ. 

ಮನಸ್ಸನ್ನು ತುಂಬಿದ್ದ ವ್ಯಾಕುಲತೆಯಿಂದ ಹೊರಬರಲು, “ಅಲ್ರಿ ನೀವು ಮೊದಲೆ ಈರಣ್ಣನ ಪರಿಸ್ಥಿತಿ ಬಗ್ಗೆ ರಿಪೋರ್ಟ್ ಮಾಡಿದ್ದರೆ ಇಷ್ಟೆಲ್ಲ ಫಜೀತಿಯಾಗ್ತಿರಲಿಲ್ಲ. ಉಪಾಸವಿದ್ದವರ ಮನೆಮೇಲೆ ದಾಳಿಮಾಡಿದ್ದು ದೇವರು ಮೆಚ್ಚೋ ಕೆಲಸವಲ್ಲ” ಎಂದು ತಲಾಟಿಯನ್ನುದ್ದೇಶಿಸಿ ಹೇಳಿದೆ. ಆತ- “ನಿಮ್ಮೂರಾಗೆ ಲೇವಾದೇವಿ ಮಾಡೋರು ಯಾಯಾರಿದ್ದಾರೆ ಅಂತ ನನ್ನನ್ನು ಕೇಳಿದ್ದರೆ ಆಗ ಎಲ್ಲಾ ತಪಶೀಲು ವರದಿ ಮಾಡ್ತಿದ್ದೆ. ಹತ್ತಂಬತ್ತ್ನೂರಾ ನಲವ್ವತ್ತೇಳರಾಗೆ ರಜಾಕಾರು ಈರಣ್ಣ ಸೋನಗಾರನ ಮನೆ ಲೂಟಿ ಮಾಡಿದರಂತ್ರಿ, ಆಗ ಇದ್ದೊಬ್ಬ ಮಗನ್ನ ಗುಂಡಿಟ್ಟು ಕೊಂದಾರಂತೆ. ಗಿರವಿ ಇಟ್ಟುಕೊಂಡ ನಗ, ಸಾಲಕೊಟ್ಟು ಬರೆಸಿಕೊಂಡ ಪತ್ರ, ಮನಿಯಾಗಿದ್ದ ದುಡ್ಡು, ದವಸ-ಧಾನ್ಯ ಎಲ್ಲಾ ಹೊತ್ತೊಯ್ದಾರಂತ್ರಿ. ಇದ್ದ ಆಸ್ತಿ ಮಾರಿ ಅಡವು ಇಟ್ಟುಕೊಂಡಿದ್ದ ಮಾಲಿನ ರೊಕ್ಕ ತೀರಿಸ್ದ ಅಂತ ಜನ ಹೇಳ್ತಾರೆ. ಮೈಯಾಗೆ ಶಕ್ತಿ ಇರಾತಂಕ ಮುದುಕ ಮುದುಕಿ ಕೂಲಿನಾಲಿ ಮಾಡ್ತಿದ್ದರು, ಈಗಂತು ಉಪವಾಸ ವನವಾಸ ಇದ್ದು ಕಾಲಹಾಕ್ತಾರೆ. ಮೊದಲೆ ತಹಶೀಲ್ ಆಫೀಸಿನವರು ವರದಿ ಕೇಳಿದ್ದಿದ್ದರೆ ಈರಣ್ಣನ ಮನೆ ಮೇಲೆ ರೇಡು ಆಗಾಕೆ ಬಿಡತಿದ್ದಿಲ್ರಿ” ಎಂದು ಹೇಳಿ ನನ್ನ ಮನಸ್ಸನ್ನು ಮತ್ತಷ್ಟು ಕಲಕಿದ. “ಹಂಗಾದರೆ ಈ ಊರಿನಲ್ಲಿ ಗಿರವಿ ಲೇವಿದಾರರು ಯಾರೂ ಇಲ್ಲವೆ?” ನನ್ನ ಪ್ರಶ್ನೆಗೆ ಒಂದುಕ್ಷಣ ತಡೆದು,”ಯಾರು ಇದ್ದಾಂಗಿಲ್ರಿ” ಎಂದವನೆ, “ಚಾ ತರ್ತೀನ್ರಿ” ಎಂದು ಎದ್ದು ಹೋದ.

ಪಶುವೈದ್ಯ ಬರೆದ ಮನುಷ್ಯ ಚಿತ್ರ ೩:ಶರಣಪ್ಪ ಗೌಡನ ಗಿರವಿ ಮಾಲುಗಳು

ಸಂಜೆಯಾದಂತೆ ಮಳೆ ಬಿರುಸಾಯಿತು. ಮೇಯಲು ಹೋಗಿದ್ದ ದನಕರುಗಳು ಮಳೆಯ ಹೊಡೆತಕ್ಕೆ ಮುಖವನ್ನು ಓರೆಮಾಡಿಕೊಂಡು ವಾಪಾಸು ಬರಲಾರಂಭಿಸಿದುವು. ತಲೆಯ ಮೇಲೆ ಹುಲ್ಲಿನ ಹೊರೆ ಹೊತ್ತು, ಎರಡು ಎಮ್ಮೆಗಳನ್ನು ಹೊಡೆದುಕೊಂಡು ಬರುತ್ತಿದ್ದ ಮಧ್ಯವಯಸ್ಸಿನ ಮಹಿಳೆ ನನ್ನ ಮುಂದೆ ಹುಲ್ಲುಹೊರೆಯನ್ನು ದೊಪ್ ಎಂದು ಎತ್ತಿಹಾಕಿ, ಮುಖದಮೇಲೆ ಹರಿಯುತ್ತಿದ್ದ ನೀರನ್ನು ಸೀಟಿ ಒರೆಸಿಕೊಂಡಳು. ನನ್ನತ್ತ ಪಿಳಿಪಿಳಿ ನೋಡಿ- “ಅಡ ಇಟ್ಟ ದಾಗೀನ ಬಿಡಿಸಿಕೊಡಾಕೆ ಬಂದಾರೆ ಅಂತ ಹೊಲದಾಗೆ ಜನ ಮಾತಾಡಿಕೊಂತಿದ್ದರು, ಅವ್ರು ನಿವಾ ಏನ್ರಿ?” ಎಂದುಕೇಳಿದಳು. “ಹೌದಬೇ ನಾವಾ ಅವ್ರು, ಆದ್ರೆ ರೇಡು ಮಾಡಿದಾಗ ಒಂದು ವಡವೀನೂ ಸಿಗಲಿಲ್ಲಬೆ” ಎಂದು ಪೋಲೀಸಪ್ಪ ಉತ್ತರಿಸಿದ. “ನಾ ಅಡ ಇಟ್ಟ ದಾಗೀನ, ದೀಡು ಮಾಡಿದ ಹೊಲ ಎಡ್ಡೂ ಕೊಡಿಸಿ ಹೋಗೋ ಯಪ್ಪಾ ನಿಂಗೆ ಕೈ ಮುಗಿತೀನಿ” ಎಂದವಳೆ ನನ್ನ ಕಾಲನ್ನು ಭದ್ರವಾಗಿ ಹಿಡಿದುಕೊಂಡಳು. ನನಗೆ ಕಸಿವಿಸಿಯಾಯಿತು. “ಏಳು ತಾಯಿ,ಕಾಲು ಹಿಡಿಬೇಡ. ನಿನ್ನ ನಗ ಯಾರ ಬಳಿ ಅಡ ಇಟ್ಟೀದಿ ಹೇಳಿದರೆ ಬಿಡಿಸಿಕೊಡ್ತೀನಿ” ಎಂದು ಆಶ್ವಾಸನೆ ನೀಡಿ, ಆಕೆಯ ತಲೆಮುಟ್ಟಿ ಕಣ್ಣಿಗೊತ್ತಿಕೊಳ್ಳಲು ಬಗ್ಗಿದೆ, “ಶರಣಪ್ಪಗೌಡನ ಬಲ್ಲಿ ನನ್ನಂಗೆ ರಗಡ ಮಂದಿ ನಗ, ಜಮೀನು ದೀಡುಮಾಡಿ ಸಾಲಮಾಡ್ಯಾರ್ರಿ” ಎಂದು ನನ್ನ ಕಿವಿಯಲ್ಲಿ ಪಿಸುಗುಟ್ಟಿದಳು. ಮೇಲೆದ್ದು ತಾನು ಹೇಳಿದ್ದು ಪೋಲೀಸಪ್ಪನಿಗೆ ಕೇಳಿಸಿತೇನೋ ಎಂದು ಅನುಮಾನದಿಂದ ಅವನ ಮುಖ ನೋಡಿ, ನನ್ನತ್ತ ತಿರುಗಿ “ಬಡವರ ಮಾನ ನಿಮ್ಮ ಕೈಯಾಗೆ ಐತ್ರಿ, ಅದೇನು ಮಾಡ್ತೀರೊ ಮಾಡ್ರಿ ಸಾಯೇಬ್ರೇ” ಎಂದು ಹೇಳಿ ಹುಲ್ಲಿನಹೊರೆ ಹೊತ್ತು ಮನೆಯಕಡೆ ನಡೆದಳು.

ಈಗ ನಾನು ಸಂದಿಗ್ಧಕ್ಕೊಳಗಾದೆ. ತಾಲೂಕು ಕಛೇರಿಯಲ್ಲಿ ನೀಡಿದ ಪಟ್ಟಿಯಲ್ಲಿರದ ವ್ಯಕ್ತಿಯ ಮನೆ ಮೇಲೆ ದಾಳಿಮಾಡುವ ಅಧಿಕಾರ ನನಗಿದೆಯೇ? ಅಧಿಕಾರವಿದ್ದರೂ ಯಾರೋ ಒಬ್ಬಳು, ನನಗೆ ಹೆಸರು ಕೂಡ ಗೊತ್ತಿಲ್ಲದ ಹೆಂಗಸಿನ ಮಾತು ನಂಬಿ, ಶರಣಪ್ಪಗೌಡನ ಮನೆಮೇಲೆ ದಾಳಿಮಾಡಿ ಅಲ್ಲಿಯು ಈರಣ್ಣನ ಮನೆಯಲ್ಲಿಯಂತೆ ಆದರೆ? ಕಾಲಿಗೆ ಬಿದ್ದ ಹೆಂಗಸಿನ ಮುಖ ನೋಡಿದರೆ, ಅವಳು ತೊಂದರೆಗೊಳಗಾಗಿರುವ ಅಮಾಯಕಳು ಎನ್ನಿಸುವುದಿಲ್ಲವೆ? ಪಟ್ಟಭದ್ರರಿಂದ ಶೋಷಣೆಗೊಂಡವರ ಪರ ಕೆಲಸಮಾಡಲು ಸಿಕ್ಕಿರುವ ಅವಕಾಶವನ್ನು ಕಳೆದುಕೊಳ್ಳುವುದು ಸರಿಯೇ? ಹೀಗೆ ನಾನಾ ತರಹದ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಿದುವು. ಆ ವೇಳೆಗೆ ಚಹಾ ತಂದ ಓಲೇಕಾರನಿಗೆ ತಲಾಟಿಯನ್ನು ಕರೆತರಲು ಹೇಳಿದೆ. ಅವನು ಚಹಾ ಕೆಟಲಿಯನ್ನು ಕಟ್ಟೆಯ ಮೇಲಿಟ್ಟು ತಲಾಟಿಯ ತಲಾಷೆಗೆ ಹೊರಟ. ಕಪ್ಪಿಗೆ ಚಹಾ ಸುರಿಯುತ್ತಿರುವಾಗ ನಮ್ಮ ಜೀಪು ದೇವಸ್ಥಾನದ ಮುಂದೆ ಬಂದು ನಿಂತು, ನಾಯಬ ಸಾಹೇಬರು ಗಿರ್ದಾವರರೊಂದಿಗೆ ಕೆಳಗಿಳಿದರು. “ಒಳ್ಳೆ ಆಪದ್ಭಾಂದವರಂತೆ ಬಂದಿರಿ, ಬನ್ನಿ ಚಹಾ ಕುಡಿಯೋಣ” ಎಂದು ಆಹ್ವಾನಿಸಿದೆ.

ಅಲ್ಲಿದ್ದವರನ್ನೆಲ್ಲ ದೂರ ಕಳುಹಿಸಿ ನಾನು, ನಾಯಬ್ ಸಾಹೇಬರು ಮತ್ತು ಗಿರ್ದಾವರ್ ಗುಪ್ತ ಸಮಾಲೊಚನೆ ಮಾಡಿದೆವು. ಗುಂಡೇರಾವ್-“ಪಾಪಿ ಪರದೇಸಿಗಳ ಆಸ್ತಿ ನುಂಗೊ ಚಂಡಾಲನ್ನ ಬಿಟ್ಟು ಆ ದ್ರಾಬೆಯ ಹೆಸರು ಕೊಟ್ಟಾರಲ್ರಿ ನಮ್ಮ ಆಫೀಸಿನಾಗಿರೋ ಮುಠ್ಠಾಳರು. ಹೋಗಲಿ ಬಿಡಿ ಆ ವಿಷಯ ಆಮೇಲೆ ವಿಚಾರಿಸ್ತೀನಿ. ಈಗ ಶರಣಪ್ಪನ ಮನೆಗೆ ರೇಡು ಹಾಕೋಣ ನಡೀರಿ” ಎಂದು ನಮ್ಮನ್ನು ಕರೆದುಕೊಂಡು ಗೌಡರ ಕೇರಿಯತ್ತ ಹೊರಟರು. ಗೌಡರ ಕೇರಿಯ ತಿರುವಿನಲ್ಲಿ ಮನೆಯ ಕಡೆ ವೇಗವಾಗಿ ಹೋಗುತ್ತಿದ್ದ ಶರಣಪ್ಪ ಮತ್ತು ತಲಾಟಿ ಭೇಟಿಯಾದರು. ತಲಾಟಿಯನ್ನು ನೋಡಿದ ನಾಯಬ್ ಸಾಹೇಬರು ನಖಶಿಖಾಂತ ಉರಿದುಹೋದರು. “ಬೇವಕೂಫ್, ಬದ್ಮಾಶ್, ನಿನಗೆ ಶರಣಪ್ಪ ಪಗಾರ ಕೊಡ್ತಾನೋ ಇಲ್ಲ ಸರಕಾರ ಕೊಡ್ತದೋ? ಡಾಕ್ಟರ್ ಸಾಹೇಬರನ್ನು ಗುಡಿಕಟ್ಟೆಮ್ಯಾಗೆ ಕೂಡ್ಸಿ ಅವನ ಬಲ್ಲಿ ಯಾಕೆ ಹೋಗಿದ್ದೆ? ಅವನ ಕಿವಿ ಕಚ್ಚೋ ಹರಕತ್ತಾಗಿತ್ತಾ ನಿನಗೆ? ಹೋಗು ನಿನ್ನ ದಫ್ತರ್ ತಂದೊಪ್ಪಿಸು, ನಿನ್ನ ಅಮಾನತ್ ಮಾಡೇನಿ” ಎಂದು ಅವನನ್ನು ಹಿಗ್ಗಾಮುಗ್ಗಾ ಬೈದರು. ಡಾಕ್ಟರಸಾಬರಿಗೆ ಚಾ ತರಾಕೇಂತ ಹೋಗಿದ್ದಿನ್ರಿ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದ ತಲಾಟಿಯನ್ನು ತರಾಟೆಗೆ ತೆಗೆದುಕೊಂಡ ಗುಂಡೇರಾವ್- “ಏ ಪೋಲೀಸ್ ವಾಲ ಇಸ್ಕೊ ಗಿರಫ್ತಾರ್ ಕರೊ, ಇಸ್ ತಲಾಟೀಕೊ ಮಾಲುಮ್ ಕರನ ಪಡನ, ಏ ಜಮಾನ ಎಮರ್ಜೆನ್ಸಿ ರೂಲ್ ಕ ಹೈ” ಎಂದೊಡನೆ ತಲಾಟಿ ಮಧ್ಯರಸ್ತೆಯಲ್ಲಿಯೇ ಅವರ ಕಾಲಿಗೆ ಬಿದ್ದ. ಇದನ್ನು ನೋಡಿದ ಶರಣಪ್ಪ ಭಯಗೊಂಡು “ಮಾಫ್ ಕರೊ ಸಾಬ್, ನಾನೆ ಅವರನ್ನ ಮನೀಗೆ ಕರಕೊಂಡುಹೊಂಟೀನಿ. ಗಳೆ ಎತ್ತಿನ ಕಾಲಿಗೆ ಕುಳ ತಗಲಿ ಭರಪೂರ ರಕ್ತ ಸುರಿತಾ ಐತೆ ಅಂತ ನಮ್ಮ ಆಳಮನಿಷಾ ಹೇಳಿದನ್ರಿ, ತಲಾಟಿಸಾಹೇಬರು ಸಣ್ಣ ಪುಟ್ಟ ಗಾಂವಟಿ ಔಸದಿ ಮಾಡ್ತಾರ್ರಿ, ಅದಕ್ಕೆ ಕರಕೊಂಡು ಹೊಂಟೀನ್ರಿ” ಎಂದು ನಾಯಬ್ ಸಾಹೇಬರನ್ನು ಬೇಡಿಕೊಂಡ. “ನಮ್ಮ ಬಲ್ಲಿ ಡಾಕ್ಟರಿದ್ದಾರೆ. ಖರೇವಂದ್ರು ಎತ್ತಿನ ಕಾಲಿಗೆ ಗಾಯವಾಗಿದ್ದರೆ ಇಲಾಜು ಮಾಡ್ತಾರೆ. ಹೌಂದಲ್ಲ ಡಾಕ್ಟರ್ ಸಾಬ್” ಎಂದು ಗುಂಡೇರಾವ್ ಹೇಳಿದಾಗ, “ಇಲಿ ಸಾಬ್ ಹೊಲದಾಗೆ ಇಲಾಜು ಮಾಡಿಮುಗಿಸೀವಿ. ಗಾಯದಮೇಲೆ ನೊಣ ಕುಂದ್ರದಂಗೆ ಕರ್ಪೂರ ಹಚ್ಚಾಕೆ ಮನಿಯಿಂದ ಒಯ್ಯಲಾಕೆ ಬಂದಿವ್ರಿ” ಡಾಕ್ಟರ ಅವಶ್ಯಕತೆ ಇಲ್ಲವೆಂದು ಶರಣಪ್ಪ ತಿಳಿಸಿದ.

ಶರಣಪ್ಪಗೌಡನ ಮನೆಯಲ್ಲಿದ್ದ ಮೂರು ಟ್ರಜರಿಗಳು ಮತ್ತು ನಾಲ್ಕು ಕಬ್ಬಿಣದ ಅಲ್ಮಾರಿಗಳಿಗೆ ಅರಗಿನ ಮೊಹರಿಂದ ಸೀಲುಮಾಡಿದ ಗುಂಡೇರಾವ್- “ಏ ಓಲೇಕಾರ್, ಮಕ್ಕಳನ್ನು ಬಿಟ್ಟು ಊರಾಗಿನ ಎಲ್ಲ ಮಂದಿ ಶರಣಪ್ಪನ ಮನಿಮುಂದೆ ಬರಬೇಕು ಅಂತ ಡಂಗೂರ ಸಾರಿಸು” ಎಂದು ಆಜ್ಞಾಪಿಸಿದರು. ಕೇಳ್ರಪೋ ಕೇಳ್ರಿ ಎಂದು ಹಲಗೆಯವನು ಊರಿನ ಹಲವು ಹನ್ನೊಂದು ಜನಾಂಗದ ಕೇರಿಗಳಲ್ಲೂ ಟಾಂ ಟಾಂ ಸಾರಿದ. ಹೊಲಗಳಿಂದ ಆಗತಾನೆ ಬಂದವರು ಕೈಕಾಲು ತೊಳೆಯದೆ, ಊಟಕ್ಕೆ ಕುಳಿತವರು ಅರ್ಧದಲ್ಲೆ ನಿಲ್ಲಿಸಿ, ರೊಟ್ಟಿ ಬಡಿಯುತ್ತಿದ್ದ ಹೆಂಗಸರು ಹಿಟ್ಟಿನ ಕೈಯಲ್ಲೆ ಬಂದು ಶರಣಪ್ಪನ ವಾಡೆ ಮುಂದೆ ಜಮಾಯಿಸಿದರು. ಈರಣ್ಣನ ಮನೆಯಲ್ಲಿ ಪೋಲೀಸುಪಾಟೀಲನಾಗಿ ನಿಂತಿದ್ದ ಶರಣಪ್ಪಗೌಡ ಇಲ್ಲಿ ಅಪರಾಧಿ ಸ್ಥಾನದಲ್ಲಿ ಅವನತ್ತ ಮುಖನಾಗಿ ನಿಂತಿದ್ದ. ಖಜಾನೆಗಳ ಚಾವಿ ತೆರೆಯಲು ನಿಮ್ಮ ಒಪ್ಪಿಗೆ ಇದೆಯೇ ಎಂದು ಕೇಳಿದಾಗ ಸಭಿಕರೆಲ್ಲರೂ ಒಕ್ಕೊರಲಿನಿಂದ ‘ಕಬೂಲ್ ಕಬೂಲ್’ ಎಂದು ಕೂಗಿದರು. ಎಲ್ಲರ ಪಾಲಿನ ರಾಕ್ಷಸನಿಗೆ ಶಿಕ್ಷೆಯಾಗುವುದನ್ನು ಕಣ್ಣಿಂದ ನೋಡಿ ಸಂತಸಪಡಲು ಮನೆಗಳಲ್ಲಿ ಒಂದು ನರಪಿಳ್ಳೆಯೂ ಉಳಿಯದೆ ವಾಡೆಯಮುಂದೆ ಸೇರಿದ್ದರೆಂದಮೇಲೆ ಶರಣಪ್ಪನ ಕ್ರೌರ್ಯವೆಷ್ಟಿರಬಹುದು.

ಪೇಷ್ಕಾರರನ್ನು ಕರೆತರಲು ಜೀಪು ಕಳುಹಿಸಿಲಾಯಿತು. ಮೂರು ಟ್ರಜರಿಗಳಲ್ಲಿದ್ದ ಬಂಗಾರದ ನಗಗಳು ಮತ್ತು ಎರಡು ಅಲ್ಮಾರಿಗಳಲ್ಲಿದ್ದ ಬೆಳ್ಳಿಯ ವಸ್ತುಗಳು, ಉಳಿದ ಇನ್ನೆರಡು ಅಲ್ಮಾರಿಗಳಲ್ಲಿದ್ದ ಪ್ರಾಂಸರಿ ನೋಟುಗಳು ಮತ್ತು ಲೆಕ್ಕದ ಪುಸ್ತಕಗಳನ್ನು ಝಡತಿ ಮಾಡಿ ಪಟ್ಟಿಮಾಡುವ ಹೊತ್ತಿಗೆ ರಾತ್ರಿ ಹನ್ನೊಂದುಗಂಟೆಯಾಯಿತು. “ಮನಿಯೊಳಗೆ ಬೇರೆಕಡೆ ಇನ್ನೆಲ್ಲಿ ಗಿರವಿ ಸಾಮಾನಿಟ್ಟೀರಿ?” ಪೇಷ್ಕಾರ್ ಕೇಳಿದಾಗ, ಗೌಡತಿ- “ಮಲಗೊ ಕೋಣ್ಯಾಗೆ ನನ್ನ ಸ್ವಂತ ಸೀರಿ, ದಾಗೀನ ಅದಾವ್ರಿ, ಅಣ್ಣಾರೆ ಅವನ್ನ ಗಿರವಿ ಸಾಮಾಣಿನ ಲೆಕ್ಕದಾಗೆ ತಗೋಬೇಡ್ರಿ” ಎಂದು ವಿನಂತಿಸಿದಳು. ವಯಸ್ಸಿನಲ್ಲಿ ಹಿರಿಯರಾದ ಚನ್ನಬಸಯ್ಯ ಹಿರೇಮಠ- “ಸಾಹೇಬ ಮಂದಿಗೆ ನಂದೊಂದು ವಿನಂತಿ ಐತೆ. ನಿಮ್ಮನ್ನ ಇಲ್ಲಿ ಉಪಾಸ ಕುಂದ್ರಿಸಿ ನಾವು ರೊಟ್ಟಿ ತಿನ್ನಾದು ಮನುಸತ್ವ ಅಲ್ಲ. ನಾನು ಜಂಗಮ ಅದೀನಿ, ಭಿಕ್ಷೆ ಬೇಡಿ ತಂದ ಜ್ವಾಳದಾಗೆ ಮಾಡಿದ ರೊಟ್ಟಿ ತರ್ತೀನಿ ಬ್ಯಾಡ ಅನ್ನಬಾರದು. ನಿಮ್ಮ ಬಲ್ಲಿ ನಂದೇನು ಸರಕಾರಿ ಕೆಲ್ಸ ಇಲ್ಲ, ಊಟಹಾಕಿ ನಿಮ್ಮಿಂದ ಸಹಾಯ ಪಡೆಯೋ ಉದ್ದೇಸ ನನಗಿಲ್ಲ. ಶರಣಪ್ಪಗೌಡನ ತಾಬೆ ಅಡ ಇಡಾಂತ ನಗ ನೌಬತ್ತು ಈ ಬಡಜಂಗಮನ ಹತ್ತಿರ ಎಲ್ಲಿಬರಬೇಕು? ಗೌಡನ ಮನೆ ರೇಡು ಆಗಿದ್ದಕೆ ಸಂಭ್ರಮ ಪಡೊ ಅವಸ್ಯಕತೆ ಜಂಗಮಯ್ಯನಿಗೆ ಇಲ್ಲ” ಎಂದು ಹೇಳಿ ರೊಟ್ಟಿತಿನ್ನಲು ನಮ್ಮನ್ನು ಒಪ್ಪಿಸಿ, ಮನೆಗೆ ಹೋದವರು ಒಂದು ಬುಟ್ಟಿಯಲ್ಲಿ ನಮ್ಮ ಟೀಮಿನ ಎಲ್ಲರಿಗೂ ಆಗುವಷ್ಟು ರೊಟ್ಟಿಗಳು, ಪಾತ್ರೆಗಳಲ್ಲಿ ಖಾರಬೇಳೆ ಮತ್ತು ಸಪ್ಪಬೇಳೆಗಳನ್ನು ತಂದರು. ಶರಣಪ್ಪನ ಪತ್ನಿ- “ನಮ್ಮನ್ಯಾಗೆ ರೊಟ್ಟಿ ತಿನ್ನಬಾರದು ಅಂತಿದ್ದರೆ ನಮ್ಮ ಬಾವಿ ನೀರಾದರೂ ಕುಡೀರಿ, ಮನೆಗೆ ಬಂದೋರಿಗೆ ರೊಟ್ಟಿ ತಿನ್ನಸದೆ ಕಳಿಸಿ ಗೊತ್ತಿಲ್ಲ. ಆದರೆ ದೇವರಾಟ ಏನೈತೊ ಏನೊ ಈದಿವ್ಸ ಮನಿಗೆ ಬಂದ ಅಥಿತಿಗಳು ಪರರ ಮನೆ ರೊಟ್ಟಿ ತರಿಸಿಕೊಂಡು ತಿನ್ನೋ ಹಂಗಾತು” ಎಂದು ಅಡುಗೆಕೋಣೆಯ ಬಾಗಿಲಮರೆಯಲ್ಲಿ ನಿಂತು ಹೇಳಿದಳು. ಊರಮಂದಿ ಊಟಮಾಡಿ ಬಂದಮೇಲೆ ಒಡವೆ ವಸ್ತುಗಳನ್ನು ತೆಗೆದು ಪ್ರದರ್ಶನಕ್ಕಿಡಲಾಯಿತು. ತಾವು ಗಿರವಿ ಇಟ್ಟ ಒಡವೆಗಳು ಇರುವುದರ ಬಗ್ಗೆ ಖಾತ್ರಿಪಡಿಸಿಕೊಂಡು, ಮನೆಯಲ್ಲಿದ್ದ ಪಾವತಿ ಚೀಟಿಗಳನ್ನು ಹಿಡಿದುಕೊಂಡು ಒಬ್ಬೊಬ್ಬರೆ ಬರಲಾರಂಭಿಸಿದರು.

ಪಶುವೈದ್ಯ ಬರೆದ ಮನುಷ್ಯ ಚಿತ್ರ-4: ಮಕ್ಕಂದಾರನ ಪಿಸ್ತೂಲು

ಹಾಲಿ ಊರಿನಲ್ಲಿ ವಾಸವಾಗಿದ್ದು, ಶರಣಪ್ಪನ ಬಳಿ ಗಿರವಿ ಇಟ್ಟ ಎಲ್ಲರೂ ತಮ್ಮ ತಮ್ಮ ಸಮಾನುಗಳನ್ನು ವಾಪಸ್ಸು ಪಡೆದರು. ಹದಿಮೂರು ವಸ್ತುಗಳು ಮತ್ತು ಒಂದು ನಾಡಪಿಸ್ತೂಲಿಗೆ ವಾರಸುದಾರರು ಬರಲಿಲ್ಲ. ವಸ್ತುಗಳ ಮೇಲೆ ಬರೆದಿದ್ದ ಸಂಖ್ಯೆ ನೋಡಿ ಖಾತೆಪುಸ್ತಕಗಳನ್ನು ತೆರೆದು ಪರಿಶೀಲಿಸಿದಾಗ, ಆ ಹೆಸರಿನ ವ್ಯಕ್ತಿಗಳು ಈ ಊರಿನವರಲ್ಲವೆಂದು ತಿಳಿಯಿತು. ಆದರೆ ಪಿಸ್ತೂಲಿನ ಮೇಲೆ ‘ರಸೂಲ್ ಸಾಬ್ ಮಕ್ಕಂದಾರ್’ ಎನ್ನುವ ಹೆಸರು ಬರೆದ ಚೀಟಿ ಅಂಟಿಸಲಾಗಿತ್ತು.

“ರಸೂಲ್ ಸಾಬ್ ಮಕ್ಕಂದಾರ್ ಕೊ ಬುಲಾವ್” -ನಾಯಬ ತಹಶೀಲ್ದಾರರು ಆಜ್ಞಾಪಿಸಿದರು.

“ರಸೂಲ್ ಸಾಬ್ ಅಂತ ನಮ್ಮೂರಾಗೆ ಯಾರೂ ಇಲ್ರಿ, ಆದರೆ ಮಕ್ಕಂದಾರ್ ಅಡ್ಡಹೆಸರಿನ ಮೂರು ಮನೆಯವರದಾರ್ರಿ. ಮೂರೂಮನೆ ಮಂದೀನು ಕರೆತರಲ್ರೀ?” ಓಲೇಕಾರ ಕೇಳಿದ.

“ಆತು ಮನೆಗೊಬ್ಬ ಮನಸಾನ ಕರ್ಕೊಂಡು ಬಾ” ಗಿರ್ದಾವರಸಾಹೇಬರು ಅಪ್ಪಣೆ ಕೊಡಿಸಿದರು. ಮಕ್ಕಂದಾರ ವಂಶದ ಮೊದಲನೆ ಮನೆಯಿಂದ ಒಬ್ಬ ಮುದುಕ, ಎರಡನೆ ಮನೆಯಿಂದ ಒಬ್ಬ ಕುರುಡು ಮುದುಕಿ, ಮೂರನೆ ಮನೆಯಿಂದ ಒಬ್ಬ ಯುವಕ ಹಾಜರಾದರು.

“ಮನ್ಯಾಗೆ ಜವಾನ್ ಮಂದಿ ಇದ್ದಿಲ್ವಾ?” ನಾಯಬ್ ಸಾಹೇಬರು ಕೇಳಿದ್ದಕ್ಕೆ  ಮಾಲಿಪಾಟೀಲ- “ಮನ್ಯಾಗಿನ ಮಂದಿಯೆಲ್ಲ ಕೂಲಿನಾಲಿ ಮಾಡಾಕ ಹೈದ್ರಾಬಾದಿಗೆ ಹೋಗ್ಯಾರ್ರಿ, ಮನಿ ಕಾಯಾಕ ಒಬ್ಬೊಬ್ಬರನ್ನು ಬಿಟ್ಟು ಹೋಗ್ಯಾರೆ.” ಎಂದು ಉತ್ತರಿಸಿದ.

“ರಸೂಲ್ ಸಾಬ್ ನಾಮ್ ಕ ಆದ್ಮಿ ಕೋನ್ಸ ಘರ್ ಮೆ ಥಾ?” ಎಂದು ಕೇಳಿದಾಗ ಸ್ವಲ್ಪ ಹೊತ್ತು ಯಾರಿಂದಲೂ ಉತ್ತರ ಬರಲಿಲ್ಲ. ಮಕ್ಕಂದಾರ್ ಮನೆತನದ ಯುವಕ ಅನುಮಾನದಿಂದ ಶರಣಪ್ಪನ ಕಡೆ ನೋಡುತ್ತ- “ರಸೂಲ್ ಸಾಬ ಅಂತ ನಮ್ಮ ಕಾಕ ಒಬ್ಬಾಂವ ಇದ್ದನ್ರಿ, ಅವ ಭಾಳ ವರ್ಸದ ಹಿಂದೇನೆ ಖತಲ್ ಆಗಿ ಹೋಗ್ಯಾನ್ರಿ. ನಾವು ಹುಡ್ರಿದ್ದಾಗ ಕುಂದ್ರಿಸಿಕೊಂಡು ಕಥಿ ಹೇಳ್ತಿದ್ದನ್ರಿ, ಅವಾ ಶರಣಪ್ಪಸಾವ್ಕಾರ ಕೂಡ್ಕೊಂಡು ಏಳು ಖತಲ್ ಮಾಡೀವಿ ಅಂತ ಹೇಳ್ತಿದ್ದನ್ರಿ” ಎಂದು ರಹಸ್ಯ ಬಯಲುಮಾಡಿದ. ಬೆಳಗಿನ ಜಾವ ಮೂರುಗಂಟೆ ಸಮಯದಲ್ಲಿ  ಗೌಡನ ವಾಡೆಯ ಮುಂದೆ ಕುಳಿತು ಏಳು ಖತಲಿನ ವಿಷಯ ಕೇಳಿದ ಜನ ನಿಬ್ಬೆರಗಾದರು.

“ಹಂಗಾದರೆ ರಸೂಲನ ಖತಲು ಎಂಟನೆಯದಾಗಿರಬೇಕು, ಹೌಂದಲ್ಲೊ ಶರಣಪ್ಪ” ಎಂದು ಗುಂಡೇರಾವ್ ಹೇಳಿದೊಡನೆ “ಯಾರೋ ಅಬ್ಬೇಪಾರಿ ಮಾತು ಕೇಳ್ಕೋಂಡು ನನ್ನ್ಮೇಲೆ ಗುನ್ಹೆ ಹೊರಸಬ್ಯಾಡ್ರಿ ನಾಯಬ ಸಾಬ್, ಅವೆಲ್ಲ ಕೋರ್ಟಿನಾಗೆ ನಿಖಾಲೆ ಆಗ್ಯಾವೆ” ಎಂದು ಪ್ರತಿಭಟಿಸಿದ. ಹದಿಮೂರು ವಸ್ತುಗಳು ಮತ್ತು ಪಿಸ್ತೂಲನ್ನು ಸರಕಾರದ ಕಬ್ಜಾ ತೆಗೆದುಕೊಂಡು, ಮಹಜರು ಮಾಡಿ ನಮ್ಮ ಕರ್ತವ್ಯ ಮುಗಿಸಿದಾಗ ಬೆಳಗಿನಜಾವ ಆರುಗಂಟೆ.

ಚನ್ನಬಸಯ್ಯ ಹಿರೇಮಠರ ಮನೆಗೆ ಹೋಗಿ, ಶರಣು ಹೇಳಿ ಜೀಪು ಹತ್ತಿದೆವು. ಊರ ಅಗಸೆ ಬಾಗಿಲಿನಲ್ಲಿ ತುಂಬಿದ ಕೊಡ ಹೊತ್ತು ಬರುತ್ತಿದ್ದ ಹೆಣ್ಣು ಮಗಳು ಕೈ ಅಡ್ಡ ಹಾಕಿ ಜೀಪು ನಿಲ್ಲಿಸಿದಳು, ಶಿವ ಒಳ್ಳೇದ ಮಾಡಲಿ ಹೋಗಿಬರ್ರಿ ಸಾಹೇಬರೆ ಎಂದು ನಮಸ್ಕರಿಸಿ ಬೀಳ್ಕೊಟ್ಟಳು. “ಈಕಿ ಯಾರ್ರಿ, ನಮಗೆ ಫೇರ್ವೆಲ್ ಕೊಡಾಕಿ?” ನಾಯಬ ತಹಶೀಲ್ದಾರರ ಪ್ರಶ್ನೆಗೆ, “ಆಕಿ ನನ್ನ ಕಾಲು ಹಿಡ್ಕೊಂಡಾಕಿ” ಎಂದು ಉತ್ತರಿಸಿದೆ. ಜೀಪಿನಲ್ಲಿದ್ದವರು ಆಕೆಯನ್ನು ತಿರುಗಿ ತಿರುಗಿ ನೋಡುತ್ತಿದ್ದಂತೆಯೇ, ಓಣಿಯಲ್ಲಿ ಮರೆಯಾದಳು.

ಅನೇಕ ದಿನಗಳ ನಂತರ ಪೋಲೀಸರು ಶರಣಪ್ಪನನ್ನು ದಸ್ತಗಿರಿ ಮಾಡಿ ಕೊಲೆಗಳ ವಿಚಾರಣೆ