ಯಾವುದೇ ಕ್ಷೇತ್ರದಲ್ಲಾಗಲೀ, ಪ್ರಶಸ್ತಿಗಳೆಂದರೆ ಅದು ಸಾಧಕರನ್ನು ಪ್ರೋತ್ಸಾಹಿಸುವ, ಅವರು ನಡೆಯುವ ದಾರಿಯಲ್ಲಿ ಇನ್ನಷ್ಟು ಮುಂದುವರೆಯುವಂತೆ ಬೆನ್ನು ತಟ್ಟುವ ಒಂದು ಮಾದರಿ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ರೀತಿಯ ಪ್ರಶಸ್ತಿಗಳಿವೆ. ಕನ್ನಡ ಸಾಹಿತ್ಯ ಕ್ಷೇತ್ರವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅನೇಕ ಮಂದಿ ಹಿರಿಯರು, ಪೂರ್ವಿಕರು ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಪ್ರಶಸ್ತಿಗಳನ್ನು ನೀಡಲು ದತ್ತಿನಿಧಿಗಳನ್ನು ಸ್ಥಾಪಿಸಿದ್ದಾರೆ. ಆದರೆ ಆ ದತ್ತಿನಿಧಿಯ ಬಡ್ಡಿ ಮೊತ್ತ ಕಿರಿದಾಗುತ್ತಿರುವುದರಿಂದ, ಪ್ರಸ್ತುತ ಪ್ರಶಸ್ತಿಯ ಜೊತೆಗಿರುವ ನಗದು ಬಹುಮಾನವು ತೀರಾ ಕಿರಿದಾಗಿದೆ. ಅದನ್ನು ಹೆಚ್ಚಿಸುವ ಅಥವಾ ಪ್ರಶಸ್ತಿಯ ವಿಧಾನವನ್ನು ಪರಿಷ್ಕರಿಸುವ ಪ್ರಯತ್ನಗಳಾಗಬೇಕು ಎಂಬ ನಿಟ್ಟಿನಲ್ಲಿ ಲೇಖನವೊಂದನ್ನು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದಿದ್ದಾರೆ.

ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ ನ ದತ್ತಿ ಪ್ರಶಸ್ತಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಮಧು ವೈ.ಎನ್. ಆರಂಭಿಸಿದ ಚರ್ಚೆಯಲ್ಲಿ   ಬಹಳಷ್ಟು ಪ್ರತಿಕ್ರಿಯೆಗಳು ವ್ಯಕ್ತವಾದವು.  ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕೃತಿಗಳನ್ನು ಪ್ರಕಟಿಸಿದವರು, ಪ್ರಶಸ್ತಿಯ ರೂಪದಲ್ಲಿ ಪ್ರೋತ್ಸಾಹದ ನಿರೀಕ್ಷೆಯಲ್ಲಿರುವವರು, ಪ್ರಶಸ್ತಿಗಳನ್ನು ಪಡೆದಾಗ ಅತ್ಯಂತ ಕಡಿಮೆ ನಗದು ಬಹುಮಾನವನ್ನು ನೋಡಿ ಅವರಿಗೆ ಸಹಜವಾಗಿ ಬೇಸರ ಮೂಡುವುದಿಲ್ಲವೇ, ಪ್ರಶಸ್ತಿಗಾಗಿ ಪ್ರಕಟಿತ ಪುಸ್ತಕದ ಮೂರು ಮುದ್ರಿತ ಪ್ರತಿಗಳನ್ನು ಕಳುಹಿಸಬೇಕಾಗಿರುತ್ತದೆ. ಆದರೆ ಹಾಗೆ ಕಳುಹಿಸಿದ ಕೃತಿಗೆ ಪ್ರಶಸ್ತಿ ಬಂದರೂ, ಅದರೊಂದಿಗೆ ಸಿಗುವ ನಗದು ಬಹುಮಾನವು, ಈ ಪುಸ್ತಕದ ಮುಖಬೆಲೆಗಿಂತಲೂ ಕಡಿಮೆಯಿದ್ದಾಗ, ಪಿಚ್ಚೆನಿಸಿಬಿಡುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾದವು. ಚರ್ಚೆಯ ಸಂದರ್ಭದಲ್ಲಿ ಲೇಖಕನಾದವನಿಗೆ ಪ್ರಶಸ್ತಿಯ ಅಗತ್ಯವಿದೆಯೇ ಎಂಬ ವಿಷಯವಾಗಿ ಕುರಿತ ಪರ ವಿರೋಧ ಅಭಿಪ್ರಾಯಗಳು, ಪ್ರಶಸ್ತಿಯ ಬಗೆಗೆ ಜನರಲ್ಲಿರುವ ವ್ಯಾಮೋಹದ ಕುರಿತು ಟೀಕೆ ಮತ್ತು ಅದರ ಬಗೆಗಿರಬೇಕಾದ ನಿರ್ಮೋಹದ ಕುರಿತು ಸಲಹೆ ರೂಪದಲ್ಲಿ ಅನೇಕ ನಿಲುವುಗಳು ಅಲ್ಲಿ ವ್ಯಕ್ತವಾದವು.

ಪ್ರಸ್ತುತ ಪ್ರಶಸ್ತಿಯಾಗಲೀ, ಭಡ್ತಿಯಾಗಲೀ, ಮನ್ನಣೆಯಾಗಲೀ ನಮ್ಮ ಸಾಧನೆಯನ್ನು ನಾವೇ ಹೇಳಿಕೊಳ್ಳುವುದು ನಮ್ಮದೇ ‘ಹೊಣೆಗಾರಿಕೆ’ ಎಂಬ ಭಾವನೆಯೇ ಹೆಚ್ಚಾಗಿರುವ ಸಂದರ್ಭವಿದು. ಆದ್ದರಿಂದ ಪ್ರಶಸ್ತಿಗಳಿಗೆ ಅರ್ಜಿ ಹಾಕಿ ತಮ್ಮ ಹಿನ್ನೆಲೆ ಮತ್ತು ಸಾಧನೆಗಳನ್ನು, ಹೇಳಿಕೊಳ್ಳುವುದು ಅಗತ್ಯವಾಗಿದೆ. ಅದು ಸರಿಯೋ ತಪ್ಪೋ ಎಂಬ ಜಿಜ್ಞಾಸೆ ಒತ್ತಟ್ಟಿಗಿರಲಿ. ಎಲ್ಲೋ ದೂರದಲ್ಲಿಲೇಖಕರೊಬ್ಬರು ತಮ್ಮ ಪಾಡಿಗೆ ತಾವು ಬರೆಯುತ್ತ ಇದ್ದಾರೆಂದರೆ, ಅವರ ಸಾಹಿತ್ಯದ ಹೂರಣವನ್ನು ಗಮನಿಸಿ ಪ್ರಶಸ್ತಿ ಕೊಡುವ ಸಂಸ್ಥೆಗಳು ಇಂದು ಬಹಳವೇ ಕಡಿಮೆ.

ಪ್ರಶಸ್ತಿಗಳಿಗೆ ಅರ್ಹವಾದ ಕೃತಿಗಳನ್ನು ಸಂಸ್ಥೆಗಳೇ ಗುರುತಿಸಿ ಕೊಡುವುದು ಚಂದ. ಆದರೆ ಇಂದಿನ ಕಾಲಮಾನದಲ್ಲಿ ನಿರ್ದಿಷ್ಟ ಪ್ರಶಸ್ತಿಗೆ ಅರ್ಹವೆನಿಸುವ ಕೃತಿಗಳನ್ನು ಗುರುತಿಸುವುದಕ್ಕೆ ಸಮಯ ಮೀಸಲಿಡುವ, ಹಾಗೆ ಗುರುತಿಸುವ ಸಂದರ್ಭದಲ್ಲಿ ಬಹಳ ನಿರ್ಲಿಪ್ತ ಧೋರಣೆಯನ್ನು ಅನುಸರಿಸುವ ಪರಿಸ್ಥಿತಿಗಳನ್ನು ಕಲ್ಪಿಸಿಕೊಳ್ಳುವುದು ಕಷ್ಟವೇ. ಅಲ್ಲದೆ, ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಿದರೆ ಪ್ರಶಸ್ತಿ ನೀಡುವವರ ಹೆಗಲ ಮೇಲಿನ ಜವಾಬ್ದಾರಿಯೂ ತುಸು ಹಗುರಾದಂತೆ ಭಾಸವಾಗುವುದು ನಿಜ.

ಎಷ್ಟೋ ಕಡೆ ಸಂದರ್ಶನಗಳಲ್ಲಿ ನಿಮ್ಮ ಸಾಮರ್ಥ್ಯವೇನು ಎಂಬುದೇ ಮೊದಲ ಪ್ರಶ್ನೆಯಾಗಿರುತ್ತದೆ. ಅಂತಹ ಕಡೆಗಳಲ್ಲಿ ‘ತನ್ನ ಬಣ್ಣಿಸಬೇಡ’ ಎಂಬ ಪರಿಕಲ್ಪನೆಗೆ ಜಾಗವಿಲ್ಲ. ಕಚೇರಿಗಳಲ್ಲಿ ಭಡ್ತಿ ಸಿಗಬೇಕಿದ್ದರೆ, ಕೆಲಸದ ಕ್ರಮವನ್ನು ಪ್ರತೀ ವರ್ಷ ಪರಿಶೀಲಿಸಬೇಕಿದ್ದರೆ, ತಮ್ಮ ಸಾಧನೆಗಳನ್ನು ಎಳೆಎಳೆಯಾಗಿ ಬಿಡಿಸಿಡುವುದನ್ನು ಕಲಿಯುವುದು ಅನಿವಾರ್ಯ. ಇದು ಪ್ರಶಸ್ತಿಗಳ ವಿಷಯಕ್ಕೂ ಅನ್ವಯಿಸುವ ಮಾತು.

ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಹಲವು ದಶಕಗಳ ಹಿಂದೆಯೇ ಸ್ಥಾಪಿಸಿರುವ ಅನೇಕ ದತ್ತಿನಿಧಿ ಪ್ರಶಸ್ತಿಗಳಿವೆ. ಕನ್ನಡ ಸಾಹಿತ್ಯದ ಕುರಿತು ಒಲವಿರುವವರು, ಸಾಹಿತ್ಯದ ಮೇಲಿನ ಅಭಿಮಾನದಿಂದ, ಸಾಹಿತ್ಯ ಲೋಕದಲ್ಲಿ ಅರಳುತ್ತಿರುವ ಪ್ರತಿಭಾವಂತರಿಗೆ ಪ್ರೋತ್ಸಾಹ ಸಿಗಲಿ ಎಂಬ ದೃಷ್ಟಿಯಿಂದ ದತ್ತಿ ನಿಧಿಯನ್ನು ಸ್ಥಾಪಿಸಿ, ಪ್ರಶಸ್ತಿಗಳನ್ನು ನೀಡಲು ವ್ಯವಸ್ಥೆ ಕಲ್ಪಿಸಿರುತ್ತಾರೆ. ಸಾಹಿತ್ಯವನ್ನು ಪ್ರೀತಿಸುತ್ತಿದ್ದ ಬಂಧುಗಳ ಹೆಸರಿನಲ್ಲಿ, ತಮ್ಮದೇ ಹೆಸರಿನಲ್ಲಿ ಅಥವಾ ತಮಗೆ ದೊರೆತ ಯಾವುದೋ ಮನ್ನಣೆಯ ನೆನಪಿಗಾಗಿ ಪ್ರಶಸ್ತಿಗಳು ಸ್ಥಾಪನೆಯಾಗಿವೆ.

ದತ್ತಿನಿಧಿಯನ್ನು ಪರಿಷತ್ ನಲ್ಲಿ ಇರಿಸುವ ವೇಳೆಯಲ್ಲಿ ಆ ಮೊತ್ತವು ಬಹಳ ಉತ್ತಮ ಮೊತ್ತವಾಗಿಯೇ ಇದ್ದಿದ್ದು ಸುಳ್ಳಲ್ಲ. ಸುಮಾರು ಐದು ದಶಕಗಳ ಹಿಂದೆ, ಐದು ಸಾವಿರ ರೂಪಾಯಿ ಮೊತ್ತವೆಂದರೆ, ಅದು ನಗರ ಭಾಗದಲ್ಲೊಂದು ನಿವೇಶನ ಖರೀದಿಸುವಷ್ಟು ದೊಡ್ಡ ಮೊತ್ತವಾಗಿತ್ತು. ಹಣದ ಹರಿವು ಅತ್ಯಂತ ಕಡಿಮೆಯಿದ್ದ ಕಾಲದಲ್ಲಿ ಅಷ್ಟೊಂದು ದೊಡ್ಡ ಮೊತ್ತವನ್ನು ಸಾಹಿತ್ಯಕ್ಕಾಗಿ ಮುಡಿಪಾಗಿಟ್ಟವರ ಸಾಹಿತ್ಯ ಪ್ರೀತಿಯನ್ನು, ಸಹೃದಯತೆಯನ್ನು ಗೌರವಿಸಲೇಬೇಕು. ಆದರೆ ವರ್ಷಗಳು ಸಲ್ಲುತ್ತಿದ್ದಂತೆಯೇ ಹಣದ ಮೌಲ್ಯವು ಏಕಪ್ರಕಾರವಾಗಿ ಬೆಳೆಯದೇ ಜನರ ಆದ್ಯತೆಗನುಸಾರವಾಗಿ ಬೆಳೆಯಲಾರಂಭಿಸಿದೆ. ಅಂದರೆ ಯಾವ ವಸ್ತುಗಳಿಗೆ ಜನರ ಬದುಕಿನಲ್ಲಿ ಹೆಚ್ಚು ಆದ್ಯತೆ ಇರುವುದೋ ಅದರ ಬೆಲೆಯು ಗಗನಕ್ಕೇರಲಾರಂಭಿಸಿದೆ. ಆರ್ಥಿಕ ಕ್ಷೇತ್ರದಲ್ಲಿ ಅನೇಕ ರೀತಿಯ ಬೆಳವಣಿಗೆಗಳಾಗಿವೆ. ಮುಖ್ಯವಾಗಿ ಬ್ಯಾಂಕ್ಗಳಲ್ಲಿ ಇರಿಸುವ ಠೇವಣಿಯ ಮೇಲಿನ ಬಡ್ಡಿದರವು ಕಿರಿದಾಗುತ್ತಾ ಬಂದಿದ್ದು, ವಾರ್ಷಿಕವಾಗಿ ನೀಡುವ ಪ್ರಶಸ್ತಿಗಳ ಜೊತೆಗೆ ದೊರೆಯುವ ನಗದು ಕೂಡ ಕಡಿಮೆಯಾಗಿದೆ.

ಪ್ರಶಸ್ತಿಗಳಿಗೆ ಅರ್ಜಿ ಹಾಕಿ ತಮ್ಮ ಹಿನ್ನೆಲೆ ಮತ್ತು ಸಾಧನೆಗಳನ್ನು, ಹೇಳಿಕೊಳ್ಳುವುದು ಅಗತ್ಯವಾಗಿದೆ. ಅದು ಸರಿಯೋ ತಪ್ಪೋ ಎಂಬ ಜಿಜ್ಞಾಸೆ ಒತ್ತಟ್ಟಿಗಿರಲಿ. ಎಲ್ಲೋ ದೂರದಲ್ಲಿಲೇಖಕರೊಬ್ಬರು ತಮ್ಮ ಪಾಡಿಗೆ ತಾವು ಬರೆಯುತ್ತ ಇದ್ದಾರೆಂದರೆ, ಅವರ ಸಾಹಿತ್ಯದ ಹೂರಣವನ್ನು ಗಮನಿಸಿ ಪ್ರಶಸ್ತಿ ಕೊಡುವ ಸಂಸ್ಥೆಗಳು ಇಂದು ಬಹಳವೇ ಕಡಿಮೆ.

ಇದು ಕೇವಲ ಕನ್ನಡ ಸಾಹಿತ್ಯ ಪರಿಷತ್ ಗೆ ಸೀಮಿತವಾದ ಸಮಸ್ಯೆಯಲ್ಲ. ವಿಶ್ವವಿದ್ಯಾಲಯಗಳಲ್ಲಿ, ಬಹಳ ವರ್ಷಗಳ ಹಿಂದೆ, ಹಿರಿಯರ ಸ್ಮರಣಾರ್ಥ ಸ್ಥಾಪನೆಯಾದ ಚಿನ್ನದ ಪದಕಗಳಿಗೂ ಅನ್ವಯಿಸುತ್ತದೆ. ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಬೇಕು ಎಂಬ ಆಶಯದಿಂದ ಬೃಹತ್ ಮೊತ್ತವೊಂದನ್ನು ಹಿರಿಯರು ಸ್ಥಾಪಿಸಿದ್ದರೂ, ಈಗ ಆ ಮೊತ್ತದ ಬಡ್ಡಿ ಹಣಕ್ಕೆ ದೊರೆಯುವ ಚಿನ್ನದ ಪ್ರಮಾಣ ಬಹಳ ಕಡಿಮೆ. ಅದರಿಂದ ಪದಕವೊಂದನ್ನು ತಯಾರಿಸುವುದಂತೂ ಸಾಧ್ಯವಿಲ್ಲದ ಮಾತು. ಹಾಗಾಗಿ ಚಿನ್ನದ ಪದಕದ ಬಾಬ್ತು ನಗದು ನೀಡುವ ನಿರ್ಧಾರವನ್ನು ವಿಶ್ವವಿದ್ಯಾಲಯಗಳಲ್ಲಿ ತೆಗೆದುಕೊಳ್ಳುವುದುಂಟು.

ಕನ್ನಡ ಸಾಹಿತ್ಯ ಕೃತಿಗಳಿಗೆ ದೊರೆಯುವ ದತ್ತಿನಿಧಿ ಪ್ರಶಸ್ತಿಯ ಗೌರವವು ಅದರೊಡನೆ ಬರುವ ಮೊತ್ತದಿಂದ ನಿರ್ಧಾರವಾಗುವುದಿಲ್ಲ ಎಂದು ಹೇಳುವ ಗುಬ್ಬಿ ರೇವಣಾರಾಧ್ಯ ಅವರು,’ನನಗೆಒಮ್ಮೆ ಪ್ರಶಸ್ತಿ ಬಂದಾಗ 150 ರೂಪಾಯಿ ನಗದು ಬಹುಮಾನ ಬಂದಿತ್ತು. ಮತ್ತೊಂದು ವರ್ಷ 100 ರೂಪಾಯಿ ನಗದು ಬಹುಮಾನ ಬಂದಿದ್ದೂ ಇದೆ. ಈ ಮೊತ್ತ ಪರಿಷತ್ತಿಗೇ ಇರಲಿ ಎಂದು ಹೇಳಿದ್ದೆ. ಆದರೆ ಹಾಗೆ ಮಾಡಿದರೆ ಪರಿಷತ್ ಗೂ, ದತ್ತಿ ನಿಧಿ ಇಟ್ಟವರಿಗೂ ಅವಮಾನವಾಗುವುದು ಎಂದು ಪರಿಷತ್ ನಲ್ಲಿದ್ದ ಹಿರಿಯರು ಹೇಳಿದ್ದರು. ಹಾಗಾಗಿ ಹಣವನ್ನು ಸ್ವೀಕರಿಸಿದೆ. ಆದರೆ ಇಂತಹುದೊಂದು ಇಕ್ಕಟ್ಟಿನ ಸ್ಥಿತಿಯನ್ನು ಪರಿಹರಿಸುವುದು ಹೇಗೆಂದು ಪರಿಷತ್ ಯೋಚಿಸಬೇಕು ಎಂದು ಅನೇಕ ಬಾರಿ ನಾನು ಆಗ್ರಹಿಸಿದ್ದೇನೆ. ಪರಿಷತ್ ನ ಅಧ್ಯಕ್ಷರಾಗಿದ್ದವರ ಜೊತೆಗೆ ಚರ್ಚೆ ನಡೆಸಿದ್ದೇನೆ. ಬೆಲೆಏರಿಕೆಯ ಈ ದುಷ್ಕಾಲದಲ್ಲಿ ಪ್ರಶಸ್ತಿಯ ಜೊತೆಗೆ ತಕ್ಕಮಟ್ಟಿಗಿನ ನಗದು ಬಹುಮಾನ ಇದ್ದರೇ ಚೆನ್ನ. ಆದರೆ ದತ್ತಿನಿಧಿಗಳನ್ನು ಹೆಚ್ಚಿಸುವ ಅಥವಾ ದತ್ತಿ ಪ್ರಶಸ್ತಿಯ ಜೊತೆಗೆ ಹೆಚ್ಚುವರಿ ಮೊತ್ತವನ್ನು ಸೇರಿಸುವ ಅಧಿಕಾರ ಸಾಹಿತ್ಯ ಪರಿಷತ್ ಗೆ ಇಲ್ಲ. ಬೈಲಾದಲ್ಲಿ ಹಾಗೊಂದು ಬದಲಾವಣೆ ಮಾಡುವ ಅವಕಾಶವೂ ಇದ್ದಂತಿಲ್ಲ. ಈ ಇಕ್ಕಟ್ಟಿನ ಸ್ಥಿತಿಯ ಕುರಿತು ತಜ್ಞರು ಕುಳಿತು ನಿರ್ಧರಿಸಬೇಕಾಗಿದೆ’ ಎಂದು ಅವರು ಹೇಳುತ್ತಾರೆ.

ಕನ್ನಡ ಸಾಹಿತ್ಯ ಪರಿಷತ್ ನ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಮನುಬಳಿಗಾರ್ ಅವರೂ ಈ ಇಕ್ಕಟ್ಟಿನ ಸ್ಥಿತಿಯ ಬಗ್ಗೆ ಗಮನ ಹರಿಸಿದವರು. ‘ ಕನ್ನಡ ಸಾಹಿತ್ಯ ಕ್ಷೇತ್ರವು ಅತ್ಯಂತ ಶ್ರೀಮಂತವಾದುದು.ಸಾಹಿತ್ಯ ಲೋಕವನ್ನು ಪೋಷಿಸುವ ದೃಷ್ಟಿಯಿಂದ ಬಹಳ ಪೂರ್ವಕಾಲದಲ್ಲಿ ಅನೇಕ ಧನಿಕರು ದತ್ತಿನಿಧಿಯನ್ನು ಸ್ಥಾಪಿಸಿದ್ದಾರೆ ಎಂಬುದನ್ನು ಗುರುತಿಸಿ ನಾವು ಹೆಮ್ಮೆ ಪಡಬೇಕು. ಕಾಲಬದಲಾದಂತೆ ಎಲ್ಲ ವಿಚಾರಗಳೂ ಬದಲಾಗುತ್ತಲೇ ಇರುವುದು ಸಹಜವೇ ಆಗಿದೆ. ಹಾಗಾಗಿ ಠೇವಣಿಯ ಬಡ್ಡಿಯೂ ಕಡಿಮೆಯಾಗುತ್ತಿದೆ ಎಂಬುದು ನಿಜ’ ಎನ್ನುತ್ತಾರೆ.

ಹಲವು ದತ್ತಿನಿಧಿಯ ಮೊತ್ತಗಳನ್ನು ಹೆಚ್ಚಿಸಲು ಮನುಬಳಿಗಾರ್ ಅವರು ಪ್ರಯತ್ನಿಸಿದ್ದುಂಟು. ‘ಶ್ರೀ ಕೆ. ಮೋಹನ್‍ದೇವ್ ಆಳ್ವ, ಡಾ. ಎಂ.ಕೆ. ಶೈಲಜಾ ಆಳ್ವ ದತ್ತಿ ಪ್ರಶಸ್ತಿ’ ಯನ್ನು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ. ಈ ದತ್ತಿನಿಧಿಯನ್ನು ಹೆಚ್ಚಿಸಲು ಮನವಿ ಮಾಡಿಕೊಂಡಾಗ, ಅವರ ಕುಟುಂಬಿಕರು ಅದಕ್ಕೊಪ್ಪಿ ಮೊತ್ತವನ್ನು ಹೆಚ್ಚಿಸಿದ್ದರು. ಹೀಗೆ ಅನೇಕರು ದತ್ತಿನಿಧಿಯನ್ನು ಹೆಚ್ಚಿಸಿದ್ದರು. ಆದರೆ ಎಲ್ಲ ಕುಟುಂಬಿಕರನ್ನೂ ಸಂಪರ್ಕಿಸುವುದು ಸಾಧ್ಯವಾಗುವುದಿಲ್ಲ. ಪೂರ್ವಿಕರು ಸಾಹಿತ್ಯಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದರೂ, ಹೊಸತಲೆಮಾರಿನ ಆಸಕ್ತಿಗಳು ಸಹಜವಾಗಿ ವಿಭಿನ್ನವಾಗಿರಲೂ ಬಹುದು. ಇನ್ನು ಕೆಲವು ಸಂದರ್ಭಗಳಲ್ಲಿ ಆ ಕಾಲದ ಜಮೀನುದಾರರು ದತ್ತಿನಿಧಿಯನ್ನು ಸ್ಥಾಪಿಸಿದ್ದರೂ, ಕ್ರಮೇಣ ಕೃಷಿಯು ಕೈ ತಪ್ಪಿ ಹೋದ ಉದಾಹರಣೆಗಳಿವೆ. ಭೂ ಸುಧಾರಣೆ ಕಾನೂನು ಬಂದಾಗ, ಕೌಟುಂಬಿಕ ಸ್ಥಿತಿಗತಿಯಲ್ಲಿ ಎಷ್ಟೋ ಪರಿವರ್ತನೆಗಳಾಗಿವೆ. ಹಾಗಾಗಿ ದತ್ತಿನಿಧಿಯನ್ನು ಹೆಚ್ಚಿಸುವ ಪ್ರಯತ್ನಗಳು ನಡೆದಿವೆ’ ಎಂದು ಹೇಳುತ್ತಾರೆ.

ಕಾನೂನಾತ್ಮಕ, ತಾಂತ್ರಿಕವಾದ ತೊಡಕುಗಳೇನೇ ಇದ್ದರೂ, ಈ ಪರಿಸ್ಥಿತಿಯನ್ನು ಸರಿಪಡಿಸಬೇಕು ಎಂಬುದು ಸಾಹಿತ್ಯ ಕ್ಷೇತ್ರದ ಒಕ್ಕೊರಲಿನ ಕೂಗು. ಅತ್ಯಂತ ಕಡಿಮೆ ಮೊತ್ತ ಇರುವ ದತ್ತಿ ಪ್ರಶಸ್ತಿಗಳಿಗೆ ಅನ್ವಯವಾಗುವಂತೆ ಇನ್ನೊಂದು ದತ್ತಿಯನ್ನು ಸ್ಥಾಪಿಸುವ ಪ್ರಯತ್ನ ಮಾಡಬಹುದು. ಅಂದರೆ, ಹೊಸ ದತ್ತಿನಿಧಿಯನ್ನು ಸ್ಥಾಪಿಸಿ ಅದರ ಮೊತ್ತವನ್ನು ಹಳೇ ದತ್ತಿಪ್ರಶಸ್ತಿ ವಿಜೇತರಿಗೆ ನೀಡಲು ಪ್ರಯತ್ನಿಸಬಹುದೇ ಎಂಬುದೊಂದು ಸಲಹೆಯಾಗಿದೆ. ರಿಯಾಲಿಟಿ ಶೋಗಳಲ್ಲಿ ಗೆದ್ದವರನ್ನು ಇತರ ಕಂಪೆನಿಗಳು ಗೌರವಿಸಿದ ಮಾದರಿಯಲ್ಲಿ ಈ ಪ್ರಶಸ್ತಿಯನ್ನು ವಿನ್ಯಾಸಗೊಳಿಸಹುದೇನೋ. ದತ್ತಿನಿಧಿಗಳನ್ನು ಕಾಲಮಿತಿಗೆ ಸೀಮಿತಗೊಳಿಸುವುದು, ಇಂತಹ ಇಕ್ಕಟ್ಟಿನ ಸಂದರ್ಭಗಳು ಮುಂದಕ್ಕೆ ಎದುರಾದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬಹುದು ಎಂಬುದನ್ನು ಹೊಸ ದತ್ತಿ ಸ್ಥಾಪಿಸುವ ಸಂದರ್ಭದಲ್ಲಿಯೇ ಚರ್ಚಿಸಿ ನಿರ್ಣಯ ಮಾಡುವುದು – ಮುಂತಾದ ಸಾಧ್ಯತೆಗಳ ಕುರಿತು ಚರ್ಚಿಸಿ ಬದಲಾವಣೆಗಳನ್ನು ಮಾಡಬಹುದು.

ಆದರೆ ಬದಲಾವಣೆಯೊಂದು ತುರ್ತಾಗಿ ಆಗಬೇಕಾಗಿದೆ ಎಂಬುದು ಸಾಹಿತ್ಯ ಪ್ರಿಯರ ಆಗ್ರಹ.