ಗಾಜಿನ ಬಳೆಯ ತುಂಡು ಮಾತು
ಮೈಗೆ ಹತ್ತಿ
ರೂಪವನೇ ನೀಗಿಸಿಬಿಡುವ
ಬೆಂಕಿಯ
ಒಡನಾಟದಲ್ಲಿ ಬಣ್ಣ
ರೂಪ ತಳೆದ
ಬಳೆಗಳು
ಅರ್ತಿಯಿಂದ ಕಾಯುತ್ತವೆ
ಬೆಂಕಿಯು ಬೆಳಗುವ
ದೀಪವಾಗುವ ಘಳಿಗೆಗಳಿಗೆ
ಹೊರಳಿ ಹೊರಳಿ ಹೊರ ನೆಗೆದು
ಘನಗಟ್ಟಿಯಾಗುವ ಅಸ್ಮಿತೆ
ಒರಟುತನಕ್ಕೆ
ಒಡೆಯಬಲ್ಲದು
ಬಿರುಕಿನ ಗೆರೆ
ತುಂಡಾಗಿ
ಎಸೆದು ಬಿಟ್ಟಾಗ
ಮಿಡುಕುವ
ಪ್ರಾಣ ವಿರಮಿಸದೆ
ಕಾಯುತ್ತದೆ
ನೇವರಿಕೆಗೆ
ಹೆಬ್ಬೆರಳು ತೋರು ಬೆರಳುಗಳ
ನಡುವೆ ಹೆಣ
ಗಾಡಿ
ಸಂಧಾನ
ಅನುಸಂಧಾನ
ಈಗ ಒಡ್ಡಿಕೊಳ್ಳಬೇಕು
ನಿರ್ಭಿಡೆಯಿಂದ ಕಾವಿಗೆ
ಉರಿಯ ಗರಿಷ್ಠ ಬಿಂದುವಿನ
ಕಡೆಗೆ ಆತ್ಮವನೇ ಬಾಗಿಸಿ
ಕಿಚ್ಚಿನ ಕುಡಿಯ ಚುಂಬನ
ತಾಕಿದ ಮೈಯೇ ಕಿಚ್ಚಾಗಿ
ಬಾಗುತ್ತ ಬಿರಿಯುತ್ತ
ಸಂಕುಚಿಸಿ ವಿಕಸಿಸಿ
ರೂಪ ರೂಪಗಳಾಚೆ ಲಂಘಿಸಿ
ರೂಪು ಮಾಯೆಗೆ
ಕೊಂಡಿ ಕೊಂಡಿ ಕೂಡಿ
ಸರಪಳಿಯಾಗುತ್ತ
ಕೃತಿ ಆಕೃತಿಯಾಗಿ
ಕೈಗಳ ಕನಸಿಲ್ಲ
ಮುದ್ದಿನ ಬಯಕೆಯಿಲ್ಲ
ಆದೀತು ಏನಾದರೂ
ಮನೆ ಮಕ್ಕಳ ಆಟಿಕೆ
ದೇವರ ಮನೆ ಬಾಗಿಲಿನ
ಶೃಂಗಾರ
ಕನಸಿದ ಬಳೆಗಳದೇ
ಒಡೆದ ಸೊಲ್ಲು
ಚೆನ್ನಾಗಿದೆ ಕವಿತೆ ಪೂರ್ಣಿಮಾ