ಒಂದು ದೀರ್ಘ ಮೌನದೊಳಗೆ

ಮಹಾಮಾರಿಯ ಆಕ್ರಮಣ
ಊರ ಗಡಿ ಕಾವಲು
ದೇವರ ಆಸ್ಥಾನ ಬರಿದು
ಮಹಾದ್ವಾರ ಮುಚ್ಚಲಾಗಿದೆ.

ಇತಿಹಾಸ ಹೇಳಿದೆ:
ಕಳ್ಳಗಿಂಡಿಗಳು, ಗುಪ್ತದ್ವಾರಗಳು
ದೊರೆಗಿಂತ ದಾಸರಿಗೆ ಹೆಚ್ಚು ಪರಿಚಿತ.

ಸೂರ್ಯ ಕಾಣದ ನಸುಕಿನಲ್ಲಿ
ನನ್ನ ನಿನ್ನ ಭೇಟಿ.

ಹಿಂದಿನ ಠೀವಿಯಿಲ್ಲ
ಹೂಗಳಿಗೆ ಪರಿಮಳವಿಲ್ಲ
ಉತ್ಸವ- ಮಹಾಪೂಜೆಗಳೂ ಇಲ್ಲ.
ಗವ್ವನೆ ಬರಮಾಡಿಕೊಳ್ಳುವ,
ಬೀಳ್ಗೊಡುವ
ಸೂತಕದ ಮೌನ.

ಅರೇ, ನನ್ನ ಬಗ್ಗೆ ಕಳವಳಿಸದಿರು.
ಇಂತಹ ಮೌನಗಳನ್ನು ಬಗಲಲ್ಲಿ,
ಕಣ್ಣಲ್ಲಿ, ಎದೆಯಲ್ಲಿ, ನಡೆಯಲ್ಲಿ ಧರಿಸಿ
ಓಡಾಡಿ
ಹದಗೊಂಡಿರುವೆ.

ಪೀಠದಿಂದ ಒಂದಿಷ್ಟು ಸರಿದು
ಕೆಳಗೆ ಬಾ.
ತೆವಳಿಯಾದರೂ ಸರಿ
ಬರುವೆ ನಿನ್ನ ಕಡೆಗೆ.
ಯುಗಗಳ ಅಪೂರ್ಣಗೊಂಡ ಮಾತುಗಳಿವೆ

ಪ್ರಾರ್ಥನೆಯ ಹಸೆ ಬರೆಯುವೆ
ಕಣ್ಣ ಹನಿಗಳ ಎರಕ ಹೊಯ್ಯುವೆ
ಜೀವದಂಡೆಯನು ಮುಡಿಸುವೆ
ಭಾವ ತೋರಣ ತೊಡಿಸುವೆ
ಪ್ರಾಣದೀಪ ಹಚ್ಚಿಡುವೆ
ನಾಲಗೆ ತೋರು..
ನನ್ನ ಹೆಸರು ಬರೆದುಬಿಡುವೆ
ಇದೀಗ ಪ್ರಾಣ ಪ್ರತಿಷ್ಠಾಪನೆ

ಹೊರ ಬಾಗಿಲುಗಳು ಮುಚ್ಚಿರಲಿ
ಒಳ ಬಾಗಿಲು ತೆರೆಯಲಿ
ದೇವರೇ, ದಾಸಿ ಪಾದದ ಬಳಿ
ನಿನ್ನ ಪಾದದಾಣೆಗೂ
ಅವಳು ನಿನ್ನವಳು

 

ಕವಯತ್ರಿ ಪೂರ್ಣಿಮಾ ಸುರೇಶ್ ಅವರು ಮೂಲತಃ ಉಡುಪಿಯವರು
ರಂಗ ಮತ್ತು ಧಾರಾವಾಹಿಯ ಕಲಾವಿದೆಯೂ ಆಗಿರುವ ಪೂರ್ಣಿಮಾ ಅವರಿಗೆ ಸಾಹಿತ್ಯದಲ್ಲೂ ಅಪಾರ ಆಸಕ್ತಿ