ನಾನು ಎಲ್ಲರ ಮುಖವನ್ನು ಒಂದೊಂದಾಗಿ ನೋಡುತ್ತ ಹೋದೆ. ಎಲ್ಲ ಹೆಂಗಸರೂ ಚೆನ್ನಾಗಿ ತಲೆ ಬಾಚಿ ಕೊಂಡಿದ್ದಾರೆ. ಮುಖಕ್ಕೆ ಪೌಡರು, ಕಣ್ಣಿಗೆ ಸುಖ ಕೊಡುವ ಸೀರೆಗಳು, ಒಂದಿಷ್ಟು ಅಮ್ಮಿ ಕಾಣುವಂಥ ಬ್ಲೌಜುಗಳು, ಕೈತುಂಬ ರಂಗುರಂಗಿನ ಬಳೆಗಳು, ಬಾಯಿತುಂಬ ಎಲೆ ಅಡಿಕೆ. ಜನ ‘ಗಳಸವರುʼ ಎಂದು ಕರೆಯುವುದು ಇವರಿಗೇನೆ ಇರಬಹುದು ಎಂಬ ಗುಮಾನಿ ಶುರುವಾಯಿತು. ಅದೇನೇ ಇದ್ದರೂ ಅವರು ಅಷ್ಟೊಂದು ಸುಖವಾಗಿ ಇದ್ದದ್ದು ನನಗೆ ಹೊಸ ಅನುಭವವನ್ನು ಕೊಡುತ್ತಲಿತ್ತು.
ಹಾಡುಗಳು ಶುರುವಾದವು. ಅವುಗಳಲ್ಲಿ “ಪ್ಯಾರ್ ಕಿಯಾ ತೋ ಡರನಾ ಕ್ಯಾ” ನನಗೆ ಇಂದಿಗೂ ನೆನಪಿದೆ.
ರಂಜಾನ್ ದರ್ಗಾ ಬರೆಯುವ “ನೆನಪಾದಾಗಲೆಲ್ಲ” ಸರಣಿಯ ಮೂವತ್ತೊಂದನೆಯ ಕಂತು

ನಾನು ಐದನೇ ಕ್ಲಾಸಿನಲ್ಲಿ ಓದುತ್ತಿದ್ದ ಸಮಯ. ನನ್ನ ಪಕ್ಕದ ಮನೆಯವರ ಹಿರಿಯ ಮಗ ಸಂಗ್ಯಾ (ಸಂಗಮೇಶ) ಆಗಾಗ ಮನೆಗೆ ಬರುತ್ತಿದ್ದ. ಅದೊಂದು ವಿಚಿತ್ರ ಪರ್ಸನಾಲಿಟಿ. ಆತ ಎಲ್ಲಿ ಹೋಗುವನು, ಎಲ್ಲಿ ಇರುವನು, ಏನು ಮಾಡುವನು, ಯಾವ ಹೆಸರಿನಿಂದ ಬದುಕುವನು ಎಂಬುದು ಯಾರಿಗೂ ತಿಳಿಯದ ವಿಷಯ. ನಾಟಕಗಳಲ್ಲಿ ಪಾತ್ರ ವಹಿಸುವುದು, ಊರೂರುಗಳನ್ನು ಸುತ್ತುತ್ತ ಬೀದಿಗಳ ಮೇಲೆ ಸೈಕಲ್ ಸರ್ಕಸ್ ಮಾಡುತ್ತ ಹಣ ಕೂಡಿಸುವುದು, ಇವಾವು ಸಾಧ್ಯವಾಗದಾಗ ಲಾರಿಗಳನ್ನು ಓಡಿಸುವುದು. ಇವು ಅವನು ಮಾಡುತ್ತಿದ್ದ ಕೆಲಸಗಳಲ್ಲಿ ನನಗೆ ಗೊತ್ತಿದ್ದ ಕೆಲವು. ಊರಿಗೆ ಬಂದಾಗಲೆಲ್ಲ ಟ್ರಿಮ್ಮಾಗಿ ಬಟ್ಟೆಗಳನ್ನು ಹಾಕಿಕೊಂಡು ಓಡಾಡುತ್ತಿದ್ದ. ಗಲ್ಲಿಯ ಹಿರಿಯರನೇಕರು ಅವನಿಗೆ ಉಡಾಳ ಎಂದು ಹೆಸರಿಟ್ಟಿದ್ದರು.

ಅವನು ಬಂದಾಗ ನಾನು ಹುರುಪಾಗಿರುತ್ತಿದ್ದೆ. ಆತ ದಿಲ್ಲಿ ಮುಂತಾದ ನಗರಗಳ ಬಗ್ಗೆ ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದ. ತನ್ನ ಸಾಹಸಗಳ ಬಗ್ಗೆ ಜಂಭ ಕೊಚ್ಚಿಕೊಳ್ಳುತ್ತಿದ್ದ. ನಾನು ಅವನೊಡನೆ ತಿರುಗುವಾಗ ಕಂಪನಿ ನಾಟಕಗಳನ್ನು ಪುಕ್ಕಟೆ ನೋಡುವ ಅವಕಾಶವೂ ಸಿಗುತ್ತಿತ್ತು.

ಒಂದು ದಿನ ಹೀಗೇ ನಾಟಕ ಕಂಪನಿ ಕಡೆ ಕರೆದುಕೊಂಡು ಹೋಗಿ ನಟಮಿತ್ರರೊಡನೆ ಮಾತನಾಡುತ್ತ ಕುಳಿತು, ಅದಾವುದೋ ನಾಟಕ ಕಂಪನಿಯಲ್ಲಿದ್ದಾಗ ತಾನು ಪ್ರೀತಿಸಿದ ಹುಡುಗಿಯ ಬಗ್ಗೆ ವಿಚಾರಿಸಿದ. ಅವಳು ಯಾವ ಕಂಪನಿಯಲ್ಲಿದ್ದಾಳೆ ಎಂಬುದು ಅಲ್ಲಿದ್ದ ಯಾರಿಗೂ ಹೊಳೆಯಲಿಲ್ಲ. ಅವಳ ಗುಣಗಾನ ಮಾಡಿದ. ತಾನು ಲಗ್ನವಾಗುವಷ್ಟು ಯೋಚನೆ ಮಾಡಿದ್ದು, ಆದರೆ ಪರಿಸ್ಥಿತಿ ಅನಾನುಕೂಲವಾದದ್ದು ವಿವರಿಸಿದ. ತಾನಿಲ್ಲದೆ ಅವಳು ಬದುಕಲು ಸಾಧ್ಯವೇ ಇಲ್ಲ ಎಂದು ಹೇಳಿದ. ಆ ನಾಟಕದ ಜನ ಸಂಗ್ಯಾನ ಮಾತುಗಳನ್ನು ಬೆಲೆಕೊಡುವ ಹಾಗೆ ಗಂಭೀರವಾಗಿ ಕೇಳುತ್ತಿದ್ದರು. ತಾನು ಊರಲ್ಲಿ ಇಲ್ಲದಾಗ ಅವಳು ತನ್ನ ಫೋಟೊಗೆ ಹಾರ ಹಾಕಿ ಕೈ ಮುಗಿಯುತ್ತಿದ್ದಳೆಂದು ಹೇಳಿದಾಗ ಮುಂದಿದ್ದವರಿಗೆ ಸಹಿಸಿಕೊಳ್ಳಲು ಕಷ್ಟವೆನಿಸಿತು.

(ನಾಟಕದ ಗ್ರೀನ್‌ ರೂಂ)

ರಾತ್ರಿ 11 ಗಂಟೆಯವರೆಗೆ ತಿರುಗಾಡಿಸಿದ. ಕೊನೆಗೆ ಕಸಬಿನಿಯರ (ವೇಶ್ಯೆಯರ) ಗಲ್ಲಿಗೆ ಕರೆದುಕೊಂಡು ಹೊರಟ. ‘ಇಲ್ಲಿ ಬರಬಾರ್ದು ಅಂತ ಹೇಳತಾರ’ ಎಂದು ಅಂದದ್ದಕ್ಕೆ ‘ಹಂಗ ಹೇಳವ್ರು ಕಳ್ಳಸೂಳೇಮಕ್ಳು’ ಎಂದವನೇ ನನ್ನ ಕೈ ಹಿಡಿದುಕೊಂಡು ಹಾಗೇ ಮುನ್ನಡೆದ.

ದೊಡ್ಡ ಬಾಗಿಲಿನ ಒಂದು ಮನೆಯ ಅಟ್ಟ ಹತ್ತಿದೆವು. ಆ ವಿಶಾಲವಾದ ಕೋಣೆಯ ದೃಶ್ಯ ನನಗೆ ತೀರ ಹೊಸದೆನಿಸಿತು. ಅಲ್ಲೆಲ್ಲ ಜೋಡಿ ಜೋಡಿಯಾಗಿ ಕುಳಿತಿದ್ದರು. ಇಷ್ಟೊಂದು ಜನ ಗಂಡ ಹೆಂಡಂದಿರು ಶಾಂತರೀತಿಯಿಂದ ಮಾತನಾಡುತ್ತ ಕುಳಿತದ್ದು ನನಗೆ ಆಶ್ಚರ್ಯ ಹುಟ್ಟಿಸಿತು. ಗಂಡ ಹೆಂಡಿರು ಜಗಳಾಡುತ್ತ, ಕಚ್ಚಾಡುತ್ತ, ಹೊಡೆದಾಡುತ್ತ ಅಳುವ ನೋವಿನ ಪರಿಸರದಲ್ಲಿ ಬೆಳೆದ ನನಗೆ ಈ ಹಾಯಾಗಿ ಇರುವ ಜನ ಒಂದು ರೀತಿಯ ಸಮಾಧಾನ ಕೊಟ್ಟರು.

ನಾನು ಎಲ್ಲರ ಮುಖವನ್ನು ಒಂದೊಂದಾಗಿ ನೋಡುತ್ತ ಹೋದೆ. ಎಲ್ಲ ಹೆಂಗಸರೂ ಚೆನ್ನಾಗಿ ತಲೆ ಬಾಚಿ ಕೊಂಡಿದ್ದಾರೆ. ಮುಖಕ್ಕೆ ಪೌಡರು, ಕಣ್ಣಿಗೆ ಸುಖ ಕೊಡುವ ಸೀರೆಗಳು, ಒಂದಿಷ್ಟು ಅಮ್ಮಿ ಕಾಣುವಂಥ ಬ್ಲೌಜುಗಳು, ಕೈತುಂಬ ರಂಗುರಂಗಿನ ಬಳೆಗಳು, ಬಾಯಿತುಂಬ ಎಲೆ ಅಡಿಕೆ. ಜನ ‘ಗಳಸವರುʼ ಎಂದು ಕರೆಯುವುದು ಇವರಿಗೇನೆ ಇರಬಹುದು ಎಂಬ ಗುಮಾನಿ ಶುರುವಾಯಿತು. ಅದೇನೇ ಇದ್ದರೂ ಅವರು ಅಷ್ಟೊಂದು ಸುಖವಾಗಿ ಇದ್ದದ್ದು ನನಗೆ ಹೊಸ ಅನುಭವವನ್ನು ಕೊಡುತ್ತಲಿತ್ತು.

ಹಾಡುಗಳು ಶುರುವಾದವು. ಸಿನಿಮಾ ಹಾಡುಗಳು. ಅವುಗಳಲ್ಲಿ “ಪ್ಯಾರ್ ಕಿಯಾ ತೋ ಡರನಾ ಕ್ಯಾ” ನನಗೆ ಇಂದಿಗೂ ನೆನಪಿದೆ. ಅಲ್ಲಿಯ ಕೆಲ ಹುಡುಗಿಯರು ಹಾಡಿಯಾದ ಮೇಲೆ ಪಕ್ಕಕ್ಕೆ ಸರಿದರು. ಮತ್ತೊಬ್ಬ ಹುಡುಗಿ ಮುಂದೆ ಬಂದಳು. ಅವಳು ಶಾಂತವಾಗಿದ್ದು ಮುಖದಲ್ಲಿ ಮತ್ತು ಉಡುಪಿನಲ್ಲಿ ಚಾಲಾಕಿತನವಿರಲಿಲ್ಲ. ಅವಳೂ ನನ್ನಂತೆ ಪರಕೀಯಳಾಗಿ ಕಾಣುತ್ತಿದ್ದಳು. ಸಂಗ್ಯಾ, ಪಕ್ಕದಲ್ಲಿ ಕುಳಿತಾಕೆಗೆ ‘ಇವಳಾರು’ ಎಂದು ಸನ್ನೆ ಮಾಡಿದ. ಅವಳು “ಪೋಲೀಸ್ ಕಿ ಬೇಟಿ” ಎಂದು ಪಿಸುಗುಟ್ಟಿದಳು.

ಆ ಹುಡುಗಿ ಕುಣಿಯತೊಡಗಿದಳು. ಕುಣಿತದಲ್ಲಿ ಸೆಳೆತವಿರಲಿಲ್ಲ. ಎಲ್ಲರೂ ನಿರಾಶೆಗೊಂಡಂತೆ ಅನಿಸಿತು. “ಇನ್ನೊಂದ್ ಸಲಾ ಬರೂದ್ರಾಗ್ ಛಲೋ ಡಾನ್ಸ್ ಕಲ್ತಿರ್ತಾಳ್ರಿ” ಎಂದು ನಿವೃತ್ತ ಪೋಲೀಸ್ ದೈನ್ಯದಿಂದ ಹೇಳಿದ. ‘ರಿಯಾಯಿತಿ ಕೊಟ್ಟಿದ್ದೇವೆ’ ಅನ್ನುವ ಹಾಗೆ ಕುಳಿತ ಜನ ತಮ್ಮೊಳಗೆ ಮಾತನಾಡುತ್ತಿತ್ತು. ವಿನಮ್ರವಾಗಿ ಇದ್ದ ಆ ಪೊಲೀಸ್, ಮಗಳ ಕಿವಿಯಲ್ಲಿ ಏನನ್ನೋ ಉಸುರಿದ. ಅವಳು ತಲೆ ಅಲ್ಲಾಡಿಸಿದಳು.

ಸಂಗ್ಯಾ ಯಾವುದನ್ನೂ ಹಚ್ಚಿಕೊಳ್ಳದೆ ಪಕ್ಕದವಳೊಡನೆ ಮಾತನಾಡುತ್ತಿದ್ದ. ಆಮೇಲೆ ಅವಳು ಕೂಡಿ ಬಂದವನೊಡನೆ ಹೊರಟು ಹೋದಳು. ಸಂಗ್ಯಾ ಮತ್ತೆ ಬೇರೆಯವರೊಡನೆ ಮಾತು ಪ್ರಾರಂಭಿಸಿದ….

ಆ ನಾಟಕದ ಜನ ಸಂಗ್ಯಾನ ಮಾತುಗಳನ್ನು ಬೆಲೆಕೊಡುವ ಹಾಗೆ ಗಂಭೀರವಾಗಿ ಕೇಳುತ್ತಿದ್ದರು. ತಾನು ಊರಲ್ಲಿ ಇಲ್ಲದಾಗ ಅವಳು ತನ್ನ ಫೋಟೊಗೆ ಹಾರ ಹಾಕಿ ಕೈ ಮುಗಿಯುತ್ತಿದ್ದಳೆಂದು ಹೇಳಿದಾಗ ಮುಂದಿದ್ದವರಿಗೆ ಸಹಿಸಿಕೊಳ್ಳಲು ಕಷ್ಟವೆನಿಸಿತು.

ಅವರ ತಂದೆ ಲಿಂಗಣ್ಣ ಮಾಸ್ತರರು (ಇಂಚಗೇರಿ ಗುರುಗಳು) ದೈವೀ ಆರಾಧಕರಾಗಿದ್ದರು. ತುಳಜಾಭವಾನಿ ಅವರ ಆರಾಧ್ಯ ದೇವತೆ. ಅವರು ಶಾಲಾ ಮಾಸ್ತರರಾಗಿ ನಿವೃತ್ತರಾಗಿದ್ದರು. ಸೇವೆಯಲ್ಲಿ ಇರುವಾಗಲೇ ಸಂಗ್ಯಾನ ಮದುವೆ ಮಾಡಿದ್ದರು. ಆದರೆ ಇವನ ಗುರಿಯಿಲ್ಲದ ಬದುಕಿನಿಂದಾಗಿ ಮದುವೆ ಮುರಿದಿತ್ತು. ಹಾಗೆ ಹೀಗೆ ಬದುಕುತ್ತ ಕೊನೆಗೆ ಒಬ್ಬ ಹಳ್ಳಿಯ ಹುಡುಗಿಗೆ ಪಟಾಯಿಸಿದ್ದ. ಅವಳೋ ಕೃಷಿಕಾರ್ಮಿಕರ ಮಗಳು. ಆ ಹುಡುಗಿಯ ತಂದೆ ತಾಯಿ ಒಪ್ಪಿದ್ದರು. ಆದರೆ ಸಂಗ್ಯಾನ ತಂದೆಯ ಅನುಮತಿ ಬಯಸಿದರು. ಕೊನೆಗೆ ಸಂಗ್ಯಾ ತನ್ನ ತಂದೆಯನ್ನು ಕರೆದುಕೊಂಡು ಹೋಗಬೇಕಾಯಿತು. ಅವರು ವಿಜಾಪುರದ ಹಳ್ಳಿಯೊಂದರಲ್ಲಿನ ಸಾವುಕಾರರೊಬ್ಬರ ಹೊಲದಲ್ಲಿ ಗುಡಿಸಲು ಹಾಕಿಕೊಂಡು ಕೃಷಿಕೂಲಿ ಮಾಡುತ್ತಿದ್ದರು. ಲಿಂಗಣ್ಣ ಮಾಸ್ತರ ಅವರಿಗೆ ತಮ್ಮ ಮಗನ ಗುರಿಯಿಲ್ಲದ ಬದುಕಿನ ಬಗ್ಗೆ ಸ್ಪಷ್ಟವಾಗಿ ಹೇಳಿದರು. ಸಂಗ್ಯಾ ಸಿಡಿಮಿಡಿಗೊಳ್ಳತೊಡಗಿದ. ಕಪ್ಪಗೆ ಲಕ್ಷಣವಾಗಿದ್ದ ಆ ಯುವತಿ ಇವನನ್ನೇ ಮದುವೆ ಆಗೋದು ಎಂದಳು. ಸಂಭಾಳಿಸುವುದು ನನಗೆ ಗೊತ್ತು ಎಂದು ಹಟ ಹಿಡಿದಳು. ಹೀಗಾಗಿ ಎರಡೂ ಕಡೆಯವರು ಒಪ್ಪಿದರು. ಅತ್ಯಂತ ಸರಳ ರೀತಿಯಲ್ಲಿ ಮದುವೆ ಮಾಡಿ ಕರೆದುಕೊಂಡು ಬಂದರು. ಲಿಂಗಣ್ಣ ಮಾಸ್ತರರಿಗೆ ಎರಡು ಗಂಡು ಎರಡು ಹೆಣ್ಣು ಮಕ್ಕಳಿದ್ದರು. ದೊಡ್ಡ ಮಗಳು ಶ್ರೀದೇವಿಯ ಮದುವೆ ಸಣ್ಣ ವಯಸ್ಸಿನಲ್ಲೇ ಆಗಿತ್ತು. ಆದರೆ ಶ್ರೀದೇವಿ ಆ ಗಂಡನ ಜೊತೆ ಬಾಳುವೆ ಮಾಡಲು ಸುತಾರಾಂ ಒಪ್ಪಲಿಲ್ಲ. ಕೊನೆಗೆ ಡೈವರ್ಸ್ ಆದ ನಂತರ ಲಿಂಗಣ್ಣ ಮಾಸ್ತರ್ ನಮ್ಮ ಮನೆಯ ಪಕ್ಕದ ಮೂರಂಕಣ ಮನೆ ಬಾಡಿಗೆ ಹಿಡಿದು ಶ್ರೀದೇವಿಯನ್ನು ತಂದು ಇಟ್ಟಿದ್ದರು. ಈ ಮನೆ ಜೋಡಿ ಮನೆಯಾಗಿ ಇದ್ದುದರಿಂದ ಅವರಿಗೆ ಮಗಳನ್ನು ಇಲ್ಲಿಗೆ ತಂದು ಬಿಡಲು ಸಾಧ್ಯವಾಗಿತ್ತು. ಹರಿಜನ ಬೋರ್ಡಿಂಗ್‌ನಲ್ಲಿ ಕಲಿಯುತ್ತಿದ್ದ ತುಕಾರಾಮ ಮೂಲಕ ಈ ಇಂಚಗೇರಿ ಗುರುಗಳ ಪರಿಚಯವಾಗಿತ್ತು.

ಶ್ರೀದೇವಿಗೆ ಸರ್ಕಾರಿ ಹೊಲಿಗೆ ತರಬೇತಿ ಕೇಂದ್ರಕ್ಕೆ ಹೆಸರು ಹಚ್ಚಿದ್ದ ಇಂಚಗೇರಿ ಗುರುಗಳು ಅವಳಿಗೆ ವಿಜಾಪುರದಲ್ಲಿ ಮನೆ ಮಾಡುವುದು ಅವಶ್ಯವಾಗಿತ್ತು. ಆಗ ಅವರು ಇಂಡಿಯಲ್ಲಿ ಇರುತ್ತಿದ್ದರು. ನಂತರ ಆಲಮಟ್ಟಿ ಬಳಿಯ ಸೀತಿಮನಿ ರೈಲು ನಿಲ್ದಾಣದ ಸಮೀಪ ಆಶ್ರಮ ಮಾಡಿಕೊಂಡಿದ್ದರು. ಹೀಗೆ ಶ್ರೀದೇವಿಯಿಂದ ಅವಳ ಅಣ್ಣ ಸಂಗ್ಯಾನ ಪರಿಚಯವಾಯಿತು. ಆತ ತೆಳ್ಳಗೆ ಎತ್ತರವಾಗಿದ್ದ. ಉದ್ದ ಕೂದಲು ಬಿಟ್ಟುಕೊಂಡು ಆಕರ್ಷಕವಾಗಿ ಕಾಣುತ್ತಿದ್ದ. ಆ ಕಾಲದಲ್ಲಿ ಬರವಣಿಗೆಯಲ್ಲಿ ದೌತಿ ಟಾಕುಗಳದ್ದೇ ದರ್ಬಾರು. ನಾಲ್ಕಾಣೆಯಷ್ಟು ಅಗಲವಾಗಿದ್ದು ಸ್ವಲ್ಪ ದಪ್ಪವಿದ್ದ ಕೆಂಪು ಮತ್ತು ನೀಲಿ ಬಣ್ಣದ ಮಸಿ ಗುಳಿಗೆಗಳು ಸಿಗುತ್ತಿದ್ದವು. ಅವುಗಳನ್ನು ದೌತಿ ಬಾಟಲಿನ ನೀರಲ್ಲಿ ಕರಗಿಸಿ ಮಸಿ ಮಾಡುತ್ತಿದ್ದರು. ಹೀಗೆ ಸೋವಿ ದರದಲ್ಲಿ ಮಸಿ ತಯಾರಾಗುತ್ತಿದ್ದುದರಿಂದ ಬಡವರು ಈ ಮಸಿಗುಳಿಗೆಗಳನ್ನು ಹೆಚ್ಚಾಗಿ ಬಳಸುತ್ತಿದ್ದರು. ಆದರೆ ಸಂಗ್ಯಾ ಮಾತ್ರ ಕೆಂಪು ಮಸಿಗುಳಿಗೆಯನ್ನು ಲಿಪ್‌ಸ್ಟಿಕ್ ಹಾಗೆ ಬಳಸುತ್ತಿದ್ದ. ತುಟಿಗೆ ನೀರು ಹಚ್ಚಿಕೊಂಡು ಕೆಂಪು ಮಸಿಯಿಂದ ತುಟಿ ತಿಕ್ಕಿಕೊಂಡು ಕೆಂಪಾಗಿಸುತ್ತಿದ್ದ. ಇಂಥ ಶೋಕಿಲಾಲ ನಾವಿಗಲ್ಲಿಯಲ್ಲಿನ ತಂಗಿ ಮನೆಗೆ ಮೊದಲ ಸಲ ಬಂದ ಮರುದಿನವೇ ರಸ್ತೆಯ ಮೇಲೆ ಸೈಕಲ್ ಸರ್ಕಸ್ ಮಾಡಿ ಓಣಿಯ ಜನರನ್ನು ಆಕರ್ಷಿಸಿದ. ಇಂಥ ಚಾಲಾಕಿ ಮನುಷ್ಯ ಆ ಹಳ್ಳಿಯ ಹುಡುಗಿಯನ್ನು ಪಟಾಯಿಸಿದ್ದು ಸಹಜವೇ ಆಗಿತ್ತು. ಆದರೆ ಸಂಗ್ಯಾನನ್ನು ಕಟ್ಟಿಕೊಂಡ ಅವಳ ಮುಂದಿನ ಕಥೆ ಏನಾಯಿತೊ ಗೊತ್ತಿಲ್ಲ.

ವಿಜಾಪುರದಲ್ಲಿ ಸಂಗ್ಯಾ ನನ್ನನ್ನು ಕರೆದುಕೊಂಡು ಹೋಗಿದ್ದ ಕಸಬಿನಿಯರ ಗಲ್ಲಿ ಗಾಂಧೀಚೌಕಿಗೆ ಸಮೀಪದಲ್ಲೇ ಇತ್ತು. ಗಾಂಧೀಚೌಕದಿಂದ ರೋಡಾಸಿಂಗ್ ಹೋಟೆಲ್ ಮುಂದೆ ಸ್ವಲ್ಪದೂರ ಸಾಗಿದರೆ ಎಡಗಡೆ ಇರುವುದೇ ಕಸಬಿನಿಯರ ಗಲ್ಲಿ. ಅದರ ಹಿಂದುಗಡೆಯ ಗಲ್ಲಿಯಲ್ಲಿರುವವರು ಈ ಗಲ್ಲಿಯಿಂದಲೇ ಹೋಗಬೇಕು. ಕಸಬಿನಿಯರು ಸಂಜೆಯಾದೊಡನೆ ಬಾಗಿಲ ಬಳಿ ನೀಟಾಗಿ ಕುಳಿತು ಗಿರಾಕಿಗಳಿಗಾಗಿ ಕಾಯುತ್ತಿದ್ದರು.

ನಾವು ಬಟ್ಟೆ ಹೊಲಿಸುತ್ತಿದ್ದ ಟೇಲರ್ ಅಂಗಡಿಯ ಮಾಲೀಕರು ಸಾತ್ವಿಕ ವ್ಯಕ್ತಿಯಾಗಿದ್ದರು. ಅವರು ಬಟ್ಟೆಯನ್ನು ಕತ್ತರಿಸಿ ಕೊಡುತ್ತಿದ್ದರು. ಅವರ ಸೋದರನ ಮಗ ಮತ್ತು ಇನ್ನೊಬ್ಬ ಆಳು ಬಟ್ಟೆ ಹೊಲಿಯುತ್ತಿದ್ದರು. (ಒಬ್ಬ ಹುಡುಗ ಬಟ್ಟೆಗಳಿಗೆ ಗುಂಡಿ ಹಚ್ಚುವ ಕೆಲಸ ಮಾಡುತ್ತಿದ್ದ. ಹೊಲಿದ ಬಟ್ಟೆಗಳಿಗೆ ಗುಂಡಿ ಹಾಕಲು ಮಾಡುವ ತೂತಿಗೆ ಸೂಜಿಯಿಂದ ದಾರದ ಬಾರ್ಡರ್ ಮಾಡಿ ಗುಂಡಿ ಹಚ್ಚಬೇಕು. ನಂತರ ಹಚ್ಚಿದ ಗುಂಡಿ ಅದರೊಳಗೆ ಬಿಗಿಯಾಗಿ ಕೂಡಬೇಕು. ಇದಕ್ಕೆ ‘ಕಾಜಾ ಹಾಕುವುದು’ ಎಂದು ಹೇಳುತ್ತಾರೆ. ಇದೂ ಒಂದು ಕಲೆಯೆ ಆಗಿದೆ. ಟೇಲರಿಂಗ್ ಕಲಿಯಲು ಬಂದ ಹುಡುಗರಿಗೆ ಮೊದಲಿಗೆ ಈ ಕಾಜಾ ಹಾಕುವ ಕೆಲಸ ಕೊಡುತ್ತಾರೆ.)

ಬಟ್ಟೆ ಹೊಲಿಯುವ ಆಳು ಬಹಳ ಶಿಸ್ತಿನ ಕೆಲಸಗಾರನಾಗಿದ್ದ. ಬಹಳ ನೀಟಾಗಿ ಹೊಲಿಯುತ್ತಿದ್ದ. ಒಂದು ಸಲ ರಂಜಾನ್ ಹಬ್ಬದ ಬಟ್ಟೆ ತರಲು ಹೋದಾಗ ಆತ ಕಸಬಿನಿಯರ ಗಲ್ಲಿಗೆ ಹೋಗುವ ಬಗ್ಗೆ ಓಪನ್ ಆಗೇ ಹೇಳುತ್ತಿದ್ದ. ‘ಮೊನ್ನೆ ಹೊಸಾ ಮಾಲ್ ನೋಡ್ದೆ. ಹೋಗ್ಲಾಕ್ ಟೈಮೇ ಸಿಗ್ತಾ ಇಲ್ಲ’ ಎಂದ. ಮಾಲೀಕ ಏನೂ ಕೇಳದವನ ಹಾಗೆ ಬಟ್ಟೆ ಕತ್ತರಿಸುತ್ತಿದ್ದ. ಆತ ಪರೋಕ್ಷವಾಗಿ ಕೆಲಸ ಬಹಳ ಮಾಡಿಸಿಕೊಳ್ತಾ ಇದೀರಿ ಎಂದು ಹೇಳಿದ ಹಾಗೆ ಇತ್ತು. ಕೆಲಸ ಮಾಡಿದಷ್ಟು ಕೂಲಿ ಸಿಗುತ್ತಿತ್ತು. ಆದರೆ ಹಬ್ಬ ಹರಿದಿನಗಳಲ್ಲಿ ಹೆಚ್ಚಿಗೆ ಕೂಲಿ ಬಂದರೂ ಬಹಳ ಜನ ಅದು ಇದು ನೆಪ ಮಾಡಿಕೊಂಡು ಹೆಚ್ಚಿನ ಕೆಲಸ ಮಾಡದೇ ಹೋಗುವವರೇ ಹೆಚ್ಚು. ಹೆಚ್ಚಿನ ಕೆಲಸವೂ ಬೇಡ, ಕೂಲಿಯೂ ಬೇಡ ಎಂದು ಹೇಳುವವರೇ ಹೆಚ್ಚು. ಈ ಟೇಲರ್ ಮಾತ್ರ ತನ್ನ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದ. ಆದರೆ ಕಸಬಿನಿಗಲ್ಲಿಯಲ್ಲಿ ಹೊಸ ಹೆಣ್ಣಿನ ಸೇರ್ಪಡೆಯಾಗಿದ್ದನ್ನು ಗಮನಿಸಿದ್ದ ಕಾರಣ ಚಡಪಡಿಸುತ್ತಿದ್ದ. ಕೊನೆಗೂ ತನ್ನ ಬೇಸರವನ್ನು ವ್ಯಕ್ತಪಡಿಸಿಬಿಟ್ಟ. ಅವನ ಮಾತು ಕೇಳಿದ ನನಗೆ ಒಂಥರಾ ಅನಿಸಿ ಹೊಲಿದಿಟ್ಟ ಬಟ್ಟೆಯನ್ನು ತೆಗೆದುಕೊಂಡವನೇ ಅಂಗಡಿಯಿಂದ ಹೊರಬಂದೆ. ಮರುದಿನವೇ ರಂಜಾನ್ ಹಬ್ಬ ಇದ್ದುದರಿಂದ ಅವರು ಅಂದು ಬಟ್ಟೆಯನ್ನು ಕೊಡಲೇ ಬೇಕಾಗಿತ್ತು. ಹತ್ತಾರು ಸಲ ಸುತ್ತಿ ಸುತ್ತಿ ನಿರಾಶೆಗೊಳಿಸಿದ್ದರೂ ಆ ದಿನ ಅವರು ಹಾಗೆ ಮಾಡುವ ಹಾಗಿರಲಿಲ್ಲ.

(ಬಿಜಾಪುರದ ಈದಗಾ)

ಮರುದಿನ ಹೊಸ ಬಟ್ಟೆ ಹಾಕಿಕೊಂಡು ಈದಗಾಗೆ ಹೋಗಿ ನಮಾಜ ಮುಗಿದ ನಂತರ ಮನೆಗೆ ಹೋದೆ. ನಂತರ ಗೆಳೆಯರಿಗೆ ಹಬ್ಬದ ಶುಭಾಶಯ ಹೇಳಲು ಮನೆಯಿಂದ ಹೊರಬಿದ್ದೆ. ಕಸಬಿನಿಯರ ಗಲ್ಲಿಯನ್ನು ದಾಟಿ ಸ್ವಲ್ಪ ಮುಂದೆ ಬರುವುದರೊಳಗಾಗಿ ಗಾಬರಿಗೊಂಡ ಯುವತಿಯೊಬ್ಬಳು ಕಸಬಿನಿ ಗಲ್ಲಿಯಿಂದ ಓಡುತ್ತ ಬಂದಳು. ಹಿಂದಿನಿಂದ ಜೋರಾಗಿ ಕೂಗುವ ಧ್ವನಿ ಕೇಳಿ ಹಿಂದಿರುಗಿದೆ. ನಿರಕ್ಷರಿ ಮತ್ತು ಹುಂಬನ ಹಾಗೆ ಕಾಣುತ್ತಿದ್ದ ಯುವಕನೊಬ್ಬ ‘ಏ ಬಾರೆ’ ಎಂದು ಕೂಗುತ್ತಿದ್ದ. ಆತನೇನು ಮಾಡಿದ? ಈ ವೇಶ್ಯೆ ಏಕೆ ಗಾಬರಿಯಾಗಿದ್ದಾಳೆ? ಎಂಬುದು ಹೊಳೆಯಲೇ ಇಲ್ಲ. ನನ್ನ ಮನದಲ್ಲಿ ಆತಂಕ ಮೂಡಿತ್ತು. ಆಜು ಬಾಜು ಇದ್ದವರೆಲ್ಲ ಮುಗುಳ್ನಗುತ್ತಿದ್ದರು. ಇವಳು ವೇಶ್ಯೆ, ಆತ ಆಕೆಯ ಮನೆಗೆ ಹೋದವ ಎಂಬುದು ಸ್ಪಷ್ಟವಾಗಿತ್ತು. ಪುರುಷರು ವೇಶ್ಯೆಯ ಮನೆಗೆ ಕೂಡಲು, ಹಾಡ ಕೇಳಲು ಮತ್ತು ಸಂತೋಷದಿಂದ ದಿನಗಳೆಯಲು ಹೋಗುತ್ತಾರೆ ಎಂಬುದು ನನ್ನ ಕಲ್ಪನೆಯಾಗಿತ್ತು. ಇದೆಲ್ಲ ನನಗೆ ಗೊತ್ತಾಗುವಂಥದ್ದಲ್ಲ ಎಂದು ಅನಿಸಿದರೂ ಪವಿತ್ರ ರಂಜಾನ್ ಹಬ್ಬದಂದು ಕೂಡ ಆ ಯುವಕ ಮಟಮಟ ಮಧ್ಯಾಹ್ನದಲ್ಲಿ ವೇಶ್ಯೆಯ ಮನೆಗೆ ಹೋಗಿದ್ದಾನಲ್ಲಾ ಎಂಬುದನ್ನು ನೋಡಿ ಚಕಿತಗೊಂಡೆ. ಆತ ಯಾವುದೋ ಕೆಲಸ ಮಾಡುವ ಮುಸ್ಲಿಂ ಯುವಕ ಎಂಬುದು ಆತನ ಹೊಸ ಬಟ್ಟೆ ಮತ್ತು ಚಹರೆಯಿಂದಲೇ ಗೊತ್ತಾಗುತ್ತಿತು. ಇಂಥವರೂ ಇರುತ್ತಾರೆಯೆ ಎಂದು ನನಗೆ ನಾನೇ ಅಂದುಕೊಂಡೆ. ಈ ದೃಶ್ಯ ನನ್ನ ಮನದಲ್ಲಿ ಸಖೇದಾಶ್ಚರ್ಯವನ್ನುಂಟು ಮಾಡಿತು. ಆ ‘ಪೋಲೀಸ್ ಕಿ ಬೇಟಿ’ ನೆನಪಾದಳು. ಪಾಪ ಅವಳ ಪರಿಸ್ಥಿತಿ ಏನಾಗಿದೆಯೋ ಎಂದು ಮರುಗಿದೆ.

ಮುಂದೆ ಹತ್ತಾರು ತಿಂಗಳಗಳ ನಂತರ ಆ ಪ್ರದೇಶದ ಸುತ್ತಮುತ್ತ ಇರುವ ಜನರು ಗುಂಪುಗೂಡಿ ಕಸಬಿನಿ ಗಲ್ಲಿಯ ಲೈಂಗಿಕ ಕಾರ್ಯಕರ್ತೆಯರನ್ನು ಅವರಿದ್ದ ಬಾಡಿಗೆ ಮನೆಗಳಿಂದ ಹೊರದಬ್ಬಿದರು. ಅವರ ಹಾಸಿಗೆ ಪಾತ್ರೆ ಪರಡಿಗಳನ್ನು ಅಂಗಳಕ್ಕೆ ಎಸೆದರು. ಅವರೆಲ್ಲ ಭಯಭೀತರಾಗಿ ಗಂಟು ಮೂಟೆ ಕಟ್ಟಿಕೊಂಡು ಅಲ್ಲಿಂದ ದಿಕ್ಕಾಪಾಲಾಗಿ ಹೋಗುವಂತೆ ಮಾಡಿದರು. ಆ ಪಾಪದ ಜೀವಗಳು ಎಲ್ಲಿ ಹೋಗಿ ತಮ್ಮ ಬದುಕನ್ನು ರೂಪಿಸಿಕೊಂಡವೊ ಗೊತ್ತಿಲ್ಲ. ಅವರ ಮೇಲೆ ಕರುಣೆ ತೋರುವವರು ಯಾರೂ ಇರಲಿಲ್ಲ. ಅವರಿಗೆ ಪುನರ್ವಸತಿ ಕಲ್ಪಿಸುವ ಯಾವೊಂದು ಸಂಘಟನೆಯೂ ಹುಟ್ಟಿರಲಿಲ್ಲ.

ಆ ಕಾಲದಲ್ಲಿ ಲೈಂಗಿಕ ಕಾರ್ಯಕರ್ತೆಯರಿಗೆ ಯಾವುದೇ ರೀತಿಯ ಕಾನೂನಿನ ರಕ್ಷಣೆ ಇರಲಿಲ್ಲ. ಘರ್ವಾಲಿಗಳು, ರೌಡಿಗಳು ಮತ್ತು ಪೊಲೀಸರು ಲೈಂಗಿಕ ಕಾರ್ಯಕರ್ತೆಯರನ್ನು ಶೋಷಿಸುತ್ತಿದ್ದರು. ಸಮಾಜ ಅವರ ಬಗ್ಗೆ ಕಾಳಜಿ ವಹಿಸುವ ವಾತಾವರಣವೇ ಇರಲಿಲ್ಲ. ಇದೆಲ್ಲ ನನ್ನ ಅನುಭವಕ್ಕೆ ಬಂದು 60 ವರ್ಷಗಳಾದರೂ ಪರಿಸ್ಥಿತಿಯಲ್ಲಿ ಭಾರೀ ಬದಲಾವಣೆ ಆಗಿದೆ ಎಂದೇನೂ ಅಲ್ಲ.

(ಚಿತ್ರಗಳು: ಸುನೀಲಕುಮಾರ ಸುಧಾಕರ)