ಬೆಳಗೆದ್ದರೆ ಯುಗಾದಿ ಹಬ್ಬ, ಊರಲ್ಲೆಲ್ಲಾ ಎತ್ತುಗಳನ್ನ ಸಿಂಗರಿಸಿ ನೇಗಿಲು ನೊಗವನ್ನೆಲ್ಲಾ ಸ್ವಚ್ಚಗೊಳಿಸಿ ಭೂಮಿ ತಾಯಿಗೆ ಒಂದೆರಡು ಸುತ್ತು ಉಳುಮೆ ಮಾಡಿ ಪೂಜೆ ಸಲ್ಲಿಸಿ ಆ ವರ್ಷದ ವ್ಯವಸಾಯಕ್ಕೆ ಪಾದಾರ್ಪಣೆಗೆ ಅಡಿಗಲ್ಲು ಹಾಕುವುದು ಮಾಮೂಲು. ಅಪ್ಪ ಎಂದಿನಂತೆ ಕೆಬ್ಬೆ ಹೊಲದಲ್ಲಿ ಎತ್ತುಗಳನ್ನು ಸಿಂಗರಿಸಿ ಹೊನ್ನೇರು ಕಟ್ಟಲು ಅಣಿ ಮಾಡುತ್ತಿದ್ದರು. ನಾನು, ಅಕ್ಕ ಹೂ, ವಿಭೂತಿ, ನೀರುಗಳನ್ನು ಹಿಡಿದು ಅಪ್ಪನ ಪೂಜೆ, ಮೊದಲ ಏರಿನ ಸುತ್ತು ನೋಡಲು ಕಾತುರದಿಂದ ಅಪ್ಪನ ಹಿಂದೆಯೇ ನಿಂತಿದ್ದೆವು.
ಪ್ರಕಾಶ್‌ ಪೊನ್ನಾಚಿ ಬರೆದ ಈ ಭಾನುವಾರದ ಕತೆ “ಪರಿಧಿ”

 

ತ್ರಿಜ್ಯ-1

ಸಣ್ಣಗೆ ದೀಪವೊಂದು ಉರಿಯುತ್ತಲೇ ಇತ್ತು. ಕತ್ತಲು ಬೆಳಕಿನ ಮೌನ ಗುದ್ದಾಟದಲಿ ಸೋತ ಬೆಳಕಿನ ಮೇಲೆ ಕತ್ತಲಿನ ದರ್ಪ ನಿಧಾನಕ್ಕೆ ಬೆಳಕು ಸಾಯತೊಡಗಿತ್ತು. ಕಲ್ಲು ಹಾಸಿನ ದಾರಿಯಲ್ಲಿ ಒಬ್ಬರಿಂದೊಬ್ಬರಂತೆ ಜನ ಬೆಳಗ್ಗೆಯಿಂದ ಮನೆಯತ್ತ ಬರಲಾರಂಭಿಸಿದರು. ನೋಡಿದಾಕ್ಷಣ ಯಾವುದೋ ಸೂತಕದ ಛಾಯೆ ಒಮ್ಮೆಗೆ ಕಣ್ಣಿಗೆ ಕಟ್ಟುವಂತೆ ಮನೆಯ ಜಗಲಿಯ ಮೇಲೆ ಒಂದಷ್ಟು ಹಿರೀಕರು ನಿಶಬ್ಧವಾಗಿ ಕುಳಿತಿದ್ದರು. ಒಳಗೆ ಹೆಣ್ಣು ಮಕ್ಕಳ ಒಂದಷ್ಟು ರೋಧನೆ ದೂರಕ್ಕೆ ಕಿವಿ ಮುಟ್ಟುತ್ತಿತ್ತು. ಸುರೇಶ ಗಾಭರಿಬಿದ್ದಂತೆ ಓಡಿ ಬಂದ. ಸುತ್ತಲಿನ ವಾತಾವರಣ ಯಾರೋ ಹೋಗಿಬಿಟ್ಟಂತೆ ಭಾಸವಾದರೂ ಅದನ್ನು ವ್ಯಕ್ತಪಡಿಸದೆ ನನ್ನ ಬಳಿ ಬಂದ.

ಮೊದಲೇ ಪಿತ್ತ ನೆತ್ತಿಗೇರಿದಂತೆ ಉಗ್ರವಾಗಿ ಕುಳಿತಿದ್ದ ನನ್ನ ಭಾವ ಅವನಿಗೆ ಸ್ವಲ್ಪ ಗಾಬರಿಯನ್ನೆ ತಂದಿತ್ತು. ಆದರೂ ನಿವಾಳಿಸಿಕೊಂಡು ‘ಯಾಕೋ ಏನಾತು, ಮನಿ ಯಾಕ್ ಹಿಂಗೈತಿ ಯಾರೋ ಯಾಕ್ ಅಳಕತ್ತಾರು?’ ಎಂದ. ದೀರ್ಘವಾಗಿ ಉಸಿರೆಳೆದುಕೊಂಡು ‘ನಾನು ಕೆಟ್ಟವನಾಗಿದ್ದರೆ ಈವೊತ್ತು ಅವನ್ನನ ಕೊಂದುಬಿಡ್ತಿದ್ದೆ’ ಎಂದೆ. ಅಷ್ಟೊಂದು ಕೋಪ, ಉದ್ವೇಗ ಒಮ್ಮೆಗೆ ನನ್ನಲ್ಲಾವರಿಸಿಕೊಂಡಿತ್ತು. ಅಜ್ಜ ಅಪ್ಪನಿಗೆಂದು ಉಡುಗೊರೆಯಾಗಿ ಕೊಟ್ಟಿದ್ದ ಗಣೇಶನ ಗುಡಿಯಲ್ಲಿ ಅಪ್ಪ ಪೂಜಾರಿಕೆಯನ್ನೆ ಒಂದು ಕಾಯಕವೆಂದೇ ಮಾಡಿಕೊಂಡು ಬಂದಿದ್ದ.
ತಾನಾಯಿತು ತನ್ನ ಗುಡಿ ಯಾಯಿತು ಎಂದು ಮರ್ಯಾದೆಯಿಂದ ಬದುಕುತ್ತಿದ್ದ. ಊರಿನಲ್ಲಿ ನಮ್ಮ ಮನೆಯೆಂದರೆ ಒಂದು ಗೌರವದ ಸೂಚಕವಾಗಿತ್ತು. ಅಪ್ಪ ಪೂಜಾರಿಯೆಂತಲೋ ಮೇಲು ಜಾತಿಯವನು ಅಂತಲೋ ಜನ ಸಿಕ್ಕಾಗ ಕೈ ಮುಗಿದು ಹೋಗುತ್ತಿದ್ದರು. ಅಪ್ಪನೂ ಸಮಾಜದಲ್ಲಿ ಹಾಗೇ ಬದುಕಿದ್ದ.

ಸುರೇಶನಿಗೆ ನನ್ನ ಮಾತು ಗೊಂದಲವಾದಂತಾಯಿತು ‘ಏನೋ ಬಿಡಿಸಿ ಹೇಳು ಯಾರಿಗ್ ಏನಾತು? ಗಾಭರಿಯಿಂದಲೇ ಕೇಳಿದ . ‘ಅಪ್ಪ ಮುಖಹೊದ್ದು ಮಲಗಿದ್ದಾರೆ’ ಎಂದೆ. ಅವನಿಗೆ ಇನ್ನು ಗೊಂದಲ ಹೆಚ್ಚಾದಂತೆ ಆಯಿತು. ‘ನನಗೆ ಅರ್ಥ ಆಗ್ತಾ ಇಲ್ಲ’ ಎಂದು ಅಸಹಾಯಕತೆ ತೋಡಿಕೊಂಡ. ನನಗೂ ಅವನನ್ನು ಹೀಗೆ ಗೊಂದಲಕ್ಕೀಡು ಮಾಡುವುದು ಇಷ್ಟವಾಗಲಿಲ್ಲ. ‘ಅವನು ನಂಜನಗೂಡಿನಲ್ಲಿ ಮದ್ವೆ ಆಗ್ಬಿಟ್ನಂತೋ’ ಎಂದೆ ಅವನು ನಗಾಡಲಾರಂಭಿಸಿದ. ಅವನಿಗೆ ಮದುವೆಯ ಹಿಂದಿನ ನೊವು ಅರ್ಥವಾದಂತಿರಲಿಲ್ಲ. ‘ಅವನು ಅಂತರ್ಜಾತಿ ಮದುವೆ ಆದನಂತೆ ಕಣೋ, ಯಾರೋ ಒಂದಷ್ಟು ಜನ ಸಾಕ್ಷಿಗಿತ್ತು ತಾಳಿ ಕಟ್ಟಿ ಶಾಸ್ತ್ರ ಮುಗೀತಂತೆ. ಕೊನೆಗೂ ಅವನ ಪ್ರೀತಿಯೇ ಗೆದ್ದಿತು ನೋಡು ಎಲ್ಲವನ್ನು ಮಣ್ಣಾಗಿಸಿ’ ಎಂದೆ. ಈಗ ಅವನಿಗೆ ನಮ್ಮ ಮನೆಯ ನೋವು ಅರ್ಥವಾದಂತಿತ್ತು. ಆದರೂ ಈ ಶತಮಾನದಲ್ಲು ಜಾತಿ ಎಂದು ನರಳುತ್ತಿರುವ ನಮ್ಮ ಮನೆಯ ಹೀನ ಸ್ಥಿತಿ ಅವನಿಗೆ ಮರುಕವನ್ನು ತಂದಂತೆ ‘ಏನೋ ಇದೆಲ್ಲಾ’ ಎಂದ. ‘ನಿನಗಿದು ಅರ್ಥವಾಗಲ್ಲ’ ಎಂದೆ. ಅಷ್ಟರಲ್ಲೇ ಉದ್ದಾರಿಯೊಬ್ಬ ಡೋಲು ಹೊಡೆಯುತ್ತ ಬೀದಿಯಲ್ಲಿ ಸಾರುತ್ತಿದ್ದ ಸದ್ದು ಕೇಳಿತು ‘ಇವತ್ತಿನಿಂದಲೆ ಪೂಜಾರಿಯವರ ಮನೆಯನ್ನು ಊರಿನಿಂದ ಬಹಿಷ್ಕಾರ ಹಾಕವ್ರೆ ಕಣ್ರಪ್ಪೋ… ಯಾರು ನೀರು, ನೆರಳು ಅವ್ರಗೆ ಕೊಡ್ಬಾರ್ದು ಅಂತ ಅಪ್ಣೆ ಆಗದೆ. ನಾಳೆಯಿಂದ ಗಣೇಶನ ಗುಡಿಗೆ ಬೀಗ ಹಾಕ್ತದೆ ಕಣ್ರಪ್ಪೋ…’ ಎಂದು ಕೂಗುತ್ತಿದ್ದ ಉದ್ದಾರಿ ನಮ್ಮ ಮನೆಯತ್ತಲೇ ಬರುತ್ತಿರುವಂತೆ ಕಂಡಿತು, ಎದೆಯ ನೋವನೆಲ್ಲಾ ಒಮ್ಮೆಗೆ ಅದುಮಿಕೊಂಡು ಸುರೇಶನ ಮುಖ ನೋಡಿದೆ. ನನ್ನ ಮುಖವನ್ನು ನೋಡುವಷ್ಟು ಧೈರ್ಯವಿಲ್ಲದಾಗಿ ಅವನು ಮುಖ ತಗ್ಗಿಸಿ ನಿಂತ.

ವ್ಯಾಸ-1

ಬೆಳಗೆದ್ದರೆ ಯುಗಾದಿ ಹಬ್ಬ, ಊರಲ್ಲೆಲ್ಲಾ ಎತ್ತುಗಳನ್ನ ಸಿಂಗರಿಸಿ ನೇಗಿಲು ನೊಗವನ್ನೆಲ್ಲಾ ಸ್ವಚ್ಚಗೊಳಿಸಿ ಭೂಮಿ ತಾಯಿಗೆ ಒಂದೆರಡು ಸುತ್ತು ಉಳುಮೆ ಮಾಡಿ ಪೂಜೆ ಸಲ್ಲಿಸಿ ಆ ವರ್ಷದ ವ್ಯವಸಾಯಕ್ಕೆ ಪಾದಾರ್ಪಣೆಗೆ ಅಡಿಗಲ್ಲು ಹಾಕುವುದು ಮಾಮೂಲು. ಅಪ್ಪ ಎಂದಿನಂತೆ ಕೆಬ್ಬೆ ಹೊಲದಲ್ಲಿ ಎತ್ತುಗಳನ್ನು ಸಿಂಗರಿಸಿ ಹೊನ್ನೇರು ಕಟ್ಟಲು ಅಣಿ ಮಾಡುತ್ತಿದ್ದರು. ನಾನು, ಅಕ್ಕ ಹೂ, ವಿಭೂತಿ, ನೀರುಗಳನ್ನು ಹಿಡಿದು ಅಪ್ಪನ ಪೂಜೆ, ಮೊದಲ ಏರಿನ ಸುತ್ತು ನೋಡಲು ಕಾತುರದಿಂದ ಅಪ್ಪನ ಹಿಂದೆಯೇ ನಿಂತಿದ್ದೆವು. ಅಷ್ಟರಲ್ಲೆ ಮನೆಯಿಂದ ಓಡಿಬಂದ ಅವ್ವ ‘ಏನು ಅಂದ್ರೆ, ಪೋಸ್ಟಮ್ಯಾನ್ ಸೀನ ಯಾವ್ದೋ ಕಾಗ್ದ ಕೊಟ್ಟವ್ನೆ, ಕುಮಾರುದೆ ಇರ್ಬೇಕು’ ಎಂದು ಕಾಗದ ಹಿಡಿದು ಹೊಲದತ್ತ ಓಡಿ ಬಂದಳು. ಕಾಗದ ಬಿಚ್ಚಿ ಅಕ್ಕ ಓದಲಾರಂಭಿಸಿದಳು. ಎಲ್ಲಾ ಒಕ್ಕಣೆ ಮುಗಿಸಿ ‘ಈ ಪತ್ರ ತಲುಪಿದ ಕೂಡಲೆ 500ರೂ ಮನಿಯಾರ್ಡರ್ ಮಾಡುವುದು’ ಎಂದು ಬರೆದು ಪತ್ರ ಮುಗಿಸಿದ್ದ ಅಣ್ಣ. ಅಪ್ಪನಿಗೀಗ ಆಕಾಶವೇ ಕಳಚಿ ಎದೆಮೇಲೆ ಬಿದ್ದ ಅನುಭವವಾಗಿತ್ತು. ಆದರೂ ಇದೇನು ಹೊಸದಲ್ಲ, ಪ್ರತಿ ಬಾರಿ ಹೀಗೆ ಪೋಸ್ಟ್ ಮ್ಯಾನ್ ಸೀನಣ್ಣ ಕಾಗದ ಕೈಗಿತ್ತು ಹೋದಾಗೆಲ್ಲಾ ಅಪ್ಪ ಹೀಗೆ ಕಕ್ಕಾಬಿಕ್ಕಿಯಾಗಿ ನಿಂತಿದ್ದು ಮಾಮೂಲಿಯಾಗಿತ್ತು.

ಪ್ರತೀ ಕಾಗದ ಬಂದಾಗಲೂ ಕೊನೆಯ ಒಕ್ಕಣೆಯಾಗಿ ಕುಮಾರ್ ಹಣದ ಬೇಡಿಕ್ಕೆಯಿಟ್ಟಿರುತ್ತಿದ್ದ. ಆದರೆ ಆ ಕಾಲದಲ್ಲಿ ಒಂದು ಮಂಡ್ಯ ಚಡ್ಡಿ ತೆಗೆದುಕೊಳ್ಳಲು ಹೆಣಗಾಡುತ್ತಿದ್ದ ಅಪ್ಪನಿಗೆ ಹೀಗೆ ಕುಮಾರ್ ಪತ್ರ ಬರೆದಾಗಲೆಲ್ಲಾ ಹಣ ಹೊಂದಿಸಿ ಕಳುಹಿಸುವುದು ಸುಲಭದ ಮಾತಾಗಿರಲಿಲ್ಲ. ಮನೆಯ ಹಿರಿಯಮಗ ಚೆನ್ನಾಗಿ ಓದಲಿ ಎಂಬ ಆಸೆಯಿಂದ ದೂರದ ಪಟ್ಟಣದಲ್ಲಿ ಅವನನ್ನು ಕಾಲೇಜಿಗೆ ಸೇರಿಸಿದ್ದರು. ಆದರೆ ಅಕ್ಕನನ್ನು ಇಲ್ಲೇ ನಮ್ಮೂರಿನ ಸರ್ಕಾರಿ ಶಾಲೆಯಲ್ಲಿ ಇರುವ ಏಳನೇ ತರಗತಿಯವರೆಗೆ ಓದಿಸಿ ಮದುವೆ ಮಾಡುವುದು, ನನ್ನನ್ನು ಹೀಗೆ ಇಲ್ಲೆ ಇರುವಷ್ಟು ಓದಿಸಿ ಅಪ್ಪನ ಜೊತೆಗೆ ವ್ಯವಸಾಯಕ್ಕೆ ಇಟ್ಟುಕೊಳ್ಳುವುದು ಎಂದು ಅಪ್ಪ ಅವ್ವ ನಿರ್ಧರಿಸಿ, ಹಿರಿ ಮಗ ಹೇಗೋ ಓದಿ ಒಂದು ಕೆಲಸ ಗಿಟ್ಟಿಸಿಬಿಟ್ಟರೆ ನಮ್ಮ ಸಂಸಾರದ ಹೊಣೆ ಹೊತ್ತುಕೊಳ್ಳುತ್ತಾನೆ. ಅವನಿಗೆ ಆಸ್ತಿಗಿಂತ ಅವನನ್ನೇ ಆಸ್ತಿಮಾಡಿಬಿಟ್ಟರೆ ಅರ್ಧಭಾರ ಇಳಿದಂತೆ ಎಂದು ಅವ್ವ ಆಗಾಗ ಹೇಳುತ್ತಿದ್ದಳು, ಆದರೆ ನಂಬಿಕೊಂಡ ಬೇಸಾಯ ಅಷ್ಟು ಸುಲಭದ್ದಾಗಿರಲಿಲ್ಲ. ಇದ್ದೆರಡು ಎಕರೆಯಲ್ಲಿ ಬೆಳೆದು ಮನೆಗೆ ತಂದಿದ್ದಕ್ಕಿಂತ ಹೆಚ್ಚು ಕೂಲಿಯವರಿಗೆ ಕೊಟ್ಟು ಬರಿಗೈಲಿ ಕೂತ ಎಷ್ಟೋ ಉದಾರಣೆಗಳು ಅನೇಕ ಬಾರಿ ನಡೆದು ಹೋಗಿದ್ದವು. ಸರ್ಕಾರದವರು ನೀಡುವ ಉಚಿತ ಅಕ್ಕಿ ಇಲ್ಲದಿದ್ದರೆ ಕೆಲವೂಮ್ಮೆ ಹಸಿದುಕೊಂಡು ಮಲಗಬೇಕಾದ ಸ್ಥಿತಿ ಅಂದಿಗಂತು ಇತ್ತು.

ಇಷ್ಟೆಲ್ಲಾ ಕಷ್ಟಗಳ ನಡುವೆ ನಮ್ಮ ಮೂವರನ್ನು ಓದಿಸುವುದು ಅಪ್ಪನಿಗೆ ನಿಜಕ್ಕೂ ಆಗದ ಸ್ಥಿತಿ ಹಾಗಾಗಿ ಅಕ್ಕನನ್ನು ಶಾಲೆ ಬಿಡಿಸಿ ಕೂಲಿಗೆ ಕಳುಹಿಸುವ ಯೋಚನೆ ಅವ್ವನಿಗೆ ಬಂದಿತ್ತು, ಪಾಪ ಎಲ್ಲಾ ಕಷ್ಟಗಳಿಗೂ ಮೊದಲು ಬಲಿಯಾಗುವುದು ಹೆಣ್ಣೆ! ಶಾಲೆಯಲ್ಲಿ ಇಡೀ ತರಗತಿಗೆ ಮೊದಲಿಗಳಾಗಿ ವಿದ್ಯೆಯಲ್ಲಿ ಉತ್ತಮವಾಗಿ ಸಾಧಿಸಿದ್ದ ಅಕ್ಕನನ್ನು ಹೀಗೆ ಮಧ್ಯ ಶಾಲೆ ಬಿಡಿಸುವುದು ನನಗೆ ಸರಿ ಅನಿಸಲಿಲ್ಲ ‘ನಾನೇ ಶಾಲೆ ಬಿಡುತ್ತೇನೆ ಕೂಲಿ ನಾಲಿ ಮಾಡಿ ಅಣ್ಣನ ಓದಿಗೆ ಸಹಾಯ ಮಾಡುತ್ತೇನೆ’ ಎಂದು ಅಪ್ಪನ ಮುಂದೆ ಹೇಳಿದೆ, ಅಪ್ಪ ಕಣ್ಣೀರಾದರು. ಹೇಗೂ ದೇವಸ್ಥಾನದ ಪೂಜಾರಿಕೆಯಿಂದ ಬರುವ ಹಣದಲ್ಲಿ ನಾನೇ ಓದಿಸುತ್ತೇನೆ, ನೀನೂ ಶಾಲೆ ಬಿಡುವುದು ಬೇಡ ಎಂದು ನನ್ನನೂ ನಮ್ಮೂರಿನ ಶಾಲೆಗೆ ಅಪ್ಪ ಕಳುಹಿಸಿದ್ದರು.

ಕುಮಾರ್ ಎಂದರೆ ಅಪ್ಪನಿಗೆ ಪ್ರಾಣ, ಹುಟ್ಟಿನಿಂದ ಸಭ್ಯನಾಗೆ ಇದ್ದ ಕುಮಾರ್ ಎಂದರೆ ಊರಲ್ಲೂ ಎಲ್ಲಿಲ್ಲದ ಗೌರವ, ಕೆಲವರು ತಮ್ಮ ಮಕ್ಕಳನ್ನು ಬೈಯ್ಯುವಾಗಲಂತು ‘ಮಕ್ಳು ಅಂದ್ರ ಕುಮಾರನ್ ತರ ಇರ್ಬೇಕು’ ಎಂದು ಉದಾಹರಣೆ ಕೊಡುವಷ್ಟು ಮರ್ಯಾದೆಯನ್ನು ಸಂಪಾದಿಸಿಕೊಂಡಿದ್ದ. ಓದಿನಲ್ಲು ಚುರುಕಾಗಿದ್ದ ಕುಮಾರ್ ಹಣ ಖರ್ಚು ಮಾಡುವುದರಲ್ಲೂ ಮಿತವಾಗಿದ್ದ. ಮನೆಯ ಬಡತನ ಅವನ ಕೈ ಕಟ್ಟಿ ಹಾಕಿತ್ತು. ಹಾಸ್ಟಲ್ ನ ತನ್ನ ಜೊತೆಗಾರರೆಲ್ಲಾ ದಿನಕ್ಕೊಂದು ಬಟ್ಟೆ, ಚಪ್ಪಲಿ ಅಂತ ಹಾಕುತ್ತಿದ್ದರೆ, ಕುಮಾರ್ ಇರುವ ಹಳೆಯ ಎರಡು ಜೊತೆ ಬಟ್ಟೆ, ಪ್ಯಾರಗಾನ್ ಚಪ್ಪಲಿಯಲ್ಲಿ ಇಡೀ ತನ್ನ ಓದು ಮುಗಿಸಿದ್ದ. ಎಷ್ಟೋ ಬಾರಿ ಹಣ ಹೊಂದಿಸಲು ಸಾಧ್ಯವಾಗದೆ ಅಪ್ಪ ಅವನನ್ನು ಕಾಲೇಜು ಬಿಡಿಸುವ ತೀರ್ಮಾನಕ್ಕೆ ಬರುತ್ತಿದ್ದರು. ಆದರೆ ಅವ್ವ ಅಡ್ಡ ಬರುತಿದ್ದಳು, ಏನಾದರು ಸರಿಯೇ ಮಗನನ್ನು ಓದಿಸಿ ಒಂದು ಸರ್ಕಾರಿ ನೌಕರಿ ಕೊಡಿಸಲೇಬೇಕು, ಅದಕ್ಕಾಗಿ ತನ್ನ ಜೀವ ಹೋದರು ಸರಿಯೇ ಎಂದು ಅಪ್ಪನ ಮುಂದೆ ಕಡ್ಡಿ ತುಂಡರಿಸಿದಂತೆ ಹೇಳುತ್ತಿದ್ದಳು. ಅಪ್ಪ ವಿಧಿಯಿಲ್ಲದೆ ತಲೆ ಅಲ್ಲಾಡಿಸುತ್ತಿದ್ದರು.

ಈಗ 500 ಹೊಂದಿಸುವುದು ಹೇಗೆಂದು ಅಪ್ಪನಿಗೆ ಚಿಂತೆಯಾಯಿತು. ಎರಡು ಸುತ್ತು ಏರು ಸುತ್ತಿಸಿ ಎತ್ತುಗಳನ್ನು ಬಿಟ್ಟು ಹಟ್ಟಿಯ ಹಜಾರದಲ್ಲಿ ಬಂದು ಅಂಗಾತ ಕುಳಿತುಕೊಂಡು. ಸಾಲ ಕೇಳುವುದಾದರು ಯಾರನ್ನು? ಕೇಳಿದಾಕ್ಷಣ ಈ ಊರಲ್ಲಿ ಅಷ್ಟು ಸುಲಭವಾಗಿ ಕೂಡುವವರು ಯಾರು? ಅಪ್ಪ ಅದೇ ಚಿಂತೆಯಲ್ಲಿ ಬೆಳಗು ತುಂಬಿಸಿದ್ದರು. ಬೆಳಿಗ್ಗೆ ಹಣ ಹೊಂದಿಸಿ ಮನಿ ಆರ್ಡರ್ ಮಾಡಲೇಬೇಕಾದ ಒತ್ತಡದಲ್ಲಿ ಅವ್ವ ಬೆಳಗಾಗುವ ಮೊದಲೆ ಕೇರಿಯ ಬೀದಿಗಳಲ್ಲಿ ಸಾಲಕ್ಕಾಗಿ ಹೊರಟು ನಿಂತರು. ಹೋಗಿ ಅವರಿವರ ಮನೆ ಬಾಗಿಲು ಬಡಿದು ಎಚ್ಚರಿಸಿ ಸಾಲ ಬೇಡಿ ತಂದು ಕುಮಾರನಿಗೆ ಕಳುಹಿಸುತ್ತಿದ್ದದ್ದು ಮಾಮೂಲಾಗಿತ್ತು. ಆಹೊತ್ತು ಕಾಳಯ್ಯ ‘ಇದೇನ್ರವ್ವ ನೀವು ಇಷ್ಟೊತ್ಗೆ ನಮ್ಮನೆ ಮುಂದೆ ನೋಡ್ದೊರು ತಪ್ಪು ತಿಳ್ಕೊತಾರೆ ತಾಯಿ, ಇಷ್ಟೊತ್ಗೆ ಮನೆ ಮುಂದೆ ಬರಬ್ಯಾಡ್ರಿ’ ಎಂದು ಕಳುಹಿಸಿದ್ದನಂತೆ ಅವ್ವ ಅದೇ ಚಿಂತೆಯಲ್ಲಿ ಮುಖ ಹೊದ್ದು ಮಲಗಿದ್ದಳು.

ಕುಮಾರ್ ಓದು ಮುಗಿಯುತ್ತಾ ಬಂತು. ‘ಸ್ವಾಮಿ ನಮಪ್ನೆ ಮಾದೇವ ನನ್ ಮಗನ್ಗೆ ಗೌರ್ಮಂಟ್ ಕೆಲ್ಸ ಬಂದ್ಬುಟ್ರೆ ನಿನ್ ಗುಡಿ ಮುಂದೆ ಮೂರು ಸುತ್ತು ಉರುಳ್ ಸೇವೆ ಮಾಡ್ತಿನಿ. ಮಕ್ಳು ಮರಿ ಎಲ್ಲಾ ಬಂದು ಚಿನ್ನದ ರಥ ಎಳಿಸ್ತಿವಿ’ ಎಂದು ಹರಕೆ ಕಟ್ಟಿದ್ದಳು ಅವ್ವ. ಅದರ ಫಲವೋ ಏನ್ನೋ ಅನ್ನುವಂತೆ ಕುಮಾರನಿಗೆ ಗ್ರಾಮೀಣ ಕೃಪಾಂಕ ಅಡಿಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕನಾಗಿ ಕೆಲಸವು ಸಿಕ್ಕಿತು. ಹರಸಿಕೊಂಡಂತೆ ಮಾದಪ್ಪನ ಗುಡಿ ಮುಂದೆ ಅವ್ವ ಉರುಳು ಸೇವೆ, ಪೊರಕೆ ಸೇವೆಯಲ್ಲಾ ಮಾಡಿ ಮುಗಿಸಿದ್ದಳು. ಮನೆ ಮಂದಿಯಲ್ಲಾ ಹೊರಟು ಚಿನ್ನದ ರಥ ಎಳಿಸಿ ಬಂದಿದ್ದೆವು. ಕುಮಾರನಿಗೆ ಕೆಲಸ ಸಿಕ್ಕ ವಿಷಯ ಊರರೆಲ್ಲಾ ದೊಡ್ಡ ಸುದ್ದಿಯಾಗಿತ್ತು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಹಾಸ್ಟಲ್ ನ ತನ್ನ ಜೊತೆಗಾರರೆಲ್ಲಾ ದಿನಕ್ಕೊಂದು ಬಟ್ಟೆ, ಚಪ್ಪಲಿ ಅಂತ ಹಾಕುತ್ತಿದ್ದರೆ, ಕುಮಾರ್ ಇರುವ ಹಳೆಯ ಎರಡು ಜೊತೆ ಬಟ್ಟೆ, ಪ್ಯಾರಗಾನ್ ಚಪ್ಪಲಿಯಲ್ಲಿ ಇಡೀ ತನ್ನ ಓದು ಮುಗಿಸಿದ್ದ. ಎಷ್ಟೋ ಬಾರಿ ಹಣ ಹೊಂದಿಸಲು ಸಾಧ್ಯವಾಗದೆ ಅಪ್ಪ ಅವನನ್ನು ಕಾಲೇಜು ಬಿಡಿಸುವ ತೀರ್ಮಾನಕ್ಕೆ ಬರುತ್ತಿದ್ದರು.

ತ್ರಿಜ್ಯ -2

ಜಾತಿ ಜಾತಿ ಜಾತಿ ಏನೈತ್ರೋ ಅದರಾಗ ಮಣ್ಣು, ಹುಟ್ಟೋದು ಮಾಂಸದ ಮುದ್ದೆಯಾಗಿ ಸಾಯೋದು ಮಾಂಸದ ಮುದ್ದೆಯಾಗಿ.. ನಡುವೆ ಏನ್ರೋ, ಥೂ ಹಾಳಾದ್ ಜನ್ಮ ಅದೇನ್ ಕರ್ಮ ಮಾಡಿತ್ತೋ ಭೂಮಿ ಮ್ಯಾಗ್ ನರಕ ಅನುಭವಿಸ್ಬೇಕಾಗದೆ.. ಲೇ ಆವತ್ತೆ ಬಡ್ಕೊಂಡೆ ಈ ಕಷ್ಟದಾಗ ಓದ್ಸೋದು ಬ್ಯಾಡ ಅಂತ ಜೀವ ಹೋದ್ರು ಸರಿ ನನ್ ಮಗ ಗೌರ್ಮೆಂಟ್ ಕೆಲ್ಸಕ್ಕೋಗ್ಲಿ ಅಂತ ಸಾಲ ಸೋಲ ಮಾಡ್ದಲ್ಲ.. ಹ್ಞೂ ಅನುಭವಿಸ್ಬೇಕು ಬಿಡು ಇಂಥ ಮಕ್ಳು ಹುಟ್ಬ್ಬುಟ್ರೆ.. ಅಪ್ಪ ದುಃಖದ ಗರ್ಭಕ್ಕೆ ಕೈಹಾಕಿ ಹೀಗೆ ಅಳುತ್ತಿರುವುದು ಇದೇ ಮೊದಲು. ನನಗೀಗ ಅಪ್ಪನ ಅಸಹಾಯಕ ನೋವುಗಳು ಅನುಭವಕ್ಕೆ ಬರತೊಡಗಿತ್ತು. ಎಷ್ಟೋಸಾರಿ ಊಟಕ್ಕೂ ಇಲ್ಲವಾಗಿ ಹಸಿದು ಮಲಗಿದಾಗಲೂ ಅಪ್ಪ ಹೀಗೆ ಧೈರ್ಯಗೆಟ್ಟಿರಲಿಲ್ಲ. ಆದರೆ ಈ ವ್ಯವಸ್ಥೆಯ ಕಟ್ಟುಪಾಡುಗಳು ಅವರನ್ನು ಘಾಸಿಗೊಳಿಸಿದ್ದವು. ಮರ್ಯಾದಸ್ಥನೆಂದು ಗೌರವಿಸುತ್ತಿದ್ದ ಸಮಾಜದಲ್ಲಿ ಕುಮಾರ್ ಏಕಾಏಕಿ ಈಗ ನಿಕೃಷ್ಠನಾಗಿ ಹೋದ. ಸಮಾಜ ಅವನನ್ನು ನೋಡುವ ದೃಷ್ಠಿ ಒಮ್ಮೆಗೆ ಬದಲಾಗಿ ಹೋಯಿತು.

ಅವ್ವ ನೀರು ತರುವ ತೊಂಬೆಯಿಂದ ಹಿಡಿದು ಮದುವೆ ಮುಂಜಿಗಳಲ್ಲೂ ಜನ ಕೊಂಕುಮಾತುಗಳನ್ನಾಡಲಾರಂಭಿಸಿದ್ದುದ್ದು ಅವರಿಬ್ಬರನ್ನು ಇನ್ನಿಲ್ಲದಂತೆ ಅವಮಾನಿಸಿತ್ತು. ಊರಿನಲ್ಲಿ ಹಾಕಿದ್ದ ಮನೆ ಬಹಿಷ್ಕಾರದಿಂದ ವಿಚಾರಿಸಲು ಬರುತ್ತಿದ್ದ ಜನ ನಿಧಾನಕ್ಕೆ ನಿಂತುಹೋದರು. ಬೆನ್ನಿಗೆ ನಿಲ್ಲಬೇಕಿದ್ದ ನೆಂಟರಿಷ್ಠರೂ ಬಾಗಿಲು ಹಾಕಿ ಕುಳಿತಿದ್ದರು. ಎಲ್ಲಾ ಜಾತಿಗಳಿಗಿಂತಲೂ ಮನುಷ್ಯ ಜಾತಿಯೇ ಶ್ರೇಷ್ಟವೆಂದು ಬದುಕಿದ ಅಪ್ಪ ಅದೇ ಜಾತಿಯ ಕಿಚ್ಚಿಗೆ ಕಿಡಿಯಾಗಿ ಉರಿಯಲಾರಂಭಿಸಿದ್ದರು. ಶೂನ್ಯದೊಳಗೊಂದು ಶೂನ್ಯ ಆವರಿಸಿ ಮನೆಯ ಅಂಗಳದಲಿ ಕುಳಿತ ನೊಣಗಳು ಯಾವುದೋ ಸೂತಕದ ಛಾಯೆಯೊಂದನು ಭಿತ್ತರಿಸುತ್ತಿದ್ದವು. ಇಡೀ ನಗುವ ಸಸ್ಯರಾಶಿಗಳ ಮಧ್ಯೆ ಮಿಥ್ಯಯೊಂದರಂತೆ ನಿಂತ ಬೋಳುಮರದ ಹಾಗೆ ಊರಿನಲ್ಲಿ ನಮ್ಮ ಮನೆ ಏಕಾಂತವಾಗಿ ಹೋಗಿತ್ತು.

‘ಸುರೇಶ್ ಕ್ಯಾಸ್ಟ್ ಡೆಸ್ಟ್ರಾಯ್ಸ್ ಎವ್ರಿಥಿಂಗ್’ ಎಂದೆ, ಸುರೇಶ ಮುಗುಳ್ನಕ್ಕ. ನಮ್ಮ ನೋವು ಅವನಿಗಿನ್ನು ತಾಕಿಲ್ಲವೆಂದು ಅವನ ಮೇಲೆ ಸಿಟ್ಟು ನೆತ್ತಿಗೇರಿತು. ‘ರಿಲ್ಯಾಕ್ಸ್ ಎವೆರಿ ವೂಂಡ್ ಹ್ಯಾವ್ ಎ ಮೆಡಿಸನ್’ ಎಂದ, ಮನಸ್ಸು ಸ್ಥಿತವಾಗಲಿಲ್ಲ. ನೂರು ದೇವರನೆಲ್ಲ ನೂಕಾಚೆ ದೂರ, ನೂರು ಜಾತಿಯನ್ನೆಲ್ಲ ತಳ್ಳಾಚೆ ದೂರ ಎಂದೇ ಬದುಕಿದ್ದ ಅಪ್ಪ, ಬದುಕಿಗೆ ಅದರ ಬವಣೆಗೆ ಅದೇ ದೇವರನ್ನ ನೆಚ್ಚಿಕೊಂಡಿದ್ದರು. ಜಾತಿಯನ್ನು ಅವ್ವನಷ್ಟು ಅಪ್ಪ ಎಂದಿಗೂ ಹಚ್ಚಿಕೊಂಡಿದ್ದಿಲ್ಲ ಆದರೀಗ ಅಪ್ಪ ಅದೇ ಜಾತಿಯಿಂದ ಸಮಾಜದಲ್ಲಿ ತಲೆ ಎತ್ತದಂತೆ ನಲುಗಿ ಹೋಗಿದ್ದರು.
ಪೋಸ್ಟ್ ಮ್ಯಾನ್ ಸೀನಣ್ಣ ಅದೇ ದಾರಿಯಲಿ ಬಂದು ಅವ್ವಳ ಕೈಯಲ್ಲಿ ಕಾಗದ ಒಂದನ್ನು ಇತ್ತ. ಅನುಮಾನವಿಲ್ಲದೇ ಅದು ಕುಮಾರನದ್ದೇ ಪತ್ರವೆಂದು ಅವ್ವ ನನ್ನ ಕೈಲಿತ್ತು ಓದೆಂದಳು. ‘ಪ್ರಿಯ ಅಪ್ಪ, ಕ್ಷಮಿಸಿ ಹಿಂದಿರುಗಲಾರದಷ್ಟು ದೂರ ಓಡಿದ್ದೇನೆ, ಇಟ್ಟ ಹೆಜ್ಜೆಯಲಿ ತಪ್ಪು ಸಹಜ ಆದರೆ ಈ ಸಮಾಜವಾಗಲಿ ನಿಮ್ಮ ಊರಾಗಲಿ ನನ್ನನ್ನು ಸ್ವೀಕರಿಸುವ ಭರವಸೆ ಇಲ್ಲ. ಕೇವಲ ಬಾಹ್ಯಕ್ಕಷ್ಟೇ ಬಂಧವೊಂದು ಉಳಿದಿದೆ ಇನ್ನು ಮತ್ತೆ ಉಳಿದುಬಿಡಲು ಯಾವ ಪರಿಧಿಯೂ ಜೀವಂತವಾಗಿಲ್ಲ. ನನ್ನ ಓದಿಗೆ ನಿಮ್ಮ ತ್ಯಾಗಕ್ಕೆ ಋಣಿ, ಮತ್ತೆ ಆ ಊರಿಗೊ ಅಥವಾ ಮನೆಯ ಹೊಸ್ತಿಲೋ ತುಳಿಯುವ ಭರವಸೆ ನನ್ನಲ್ಲಿಲ್ಲ. ಮಾಡಿರುವ ಸಾಲಕ್ಕೆ ನನ್ನ ಭಾಗಕ್ಕೆ ಬರಬೇಕಾದ ಆಸ್ತಿಯನ್ನು ಮಾರಿ ಋಣಮುಕ್ತರಾಗಿ… ನಮಸ್ಕಾರಗಳು.

ಅಪ್ಪನ ಕಣ್ಣುಗಳು ಒಣಗಲಾರದಷ್ಟು ಒದ್ದೆಯಾದವು. ಸಮುದ್ರವೊಂದು ತೀರಾ ಬಿಕ್ಕಳಿಸಿ ನದಿಯಾಗಿ ಹೊರ ಹೋಗುವಂತೆ ಅಪ್ಪನ ಕಣ್ಣಿನಿಂದ ನೀರು ಸುರಿಯಲಾರಂಭಿಸಿತು. ಯಾವುದೋ ಬಿರುಗಾಳಿಗೆ ಸಿಕ್ಕ ಗಾಳಿಪಟದಂತೆ ಅವ್ವ ಸೆರಗುಹಿಡಿದು ಮುಖಮುಚ್ಚಿಕೊಂಡಳು. ಊರಿಗೆ ರಾಯಬಾರಿಯಂತೆ ಬಂದ ಸೋಮಣ್ಣ, ಗುಡಿಯ ಕೀಲಿ ಒಪ್ಪಿಸಬೇಕಂತೆ ನಾಳೆಯಿಂದ ಗುಡಿಯ ಕಡೆ ತಾವು ಯಾರೂ ತಲೆಹಾಕಬಾರದಂತೆ ಎಂದು ಹೇಳಿ ಕೀಲಿ ಪಡೆದು ಹೊರಟ ದೃಶ್ಯ ನನ್ನ ಮನಸ್ಸಿನಲ್ಲಿ ಬೆಂಕಿಯನ್ನೇ ಉಗುಳುತ್ತಿತ್ತು. ಎಲ್ಲವನು ನೋಡುತ್ತಿದ್ದ ಸುರೇಶನ ಕಣ್ಣುಗಳು ಈಗ ಒಮ್ಮೆಗೆ ಭಾವುಕವಾದವು. ಇದರ ನೋವು ಇವನಿಗೆ ಈಗ ತಟ್ಟಿರಬೇಕೆನಿಸಿ ಸುರೇಶ್… ಎಂದೆ. ‘ಕಾಲ ಎಲ್ಲವನು ಗೆಲ್ಲುತ್ತದೆ’ ಎಂದು ಹೊರನಡೆದ.

ವ್ಯಾಸ-2

ನೋಡಲು ರೂಪವಂತೆಯಂತಿದ್ದ, ಕುಸುಮ ಊರಿನಲ್ಲಿ ಹಳೆಯ ಅಧಿಕಾರಿಯೊಬ್ಬರ ಮಗಳು. ಅವರು ಒಬ್ಬಳೇ ಮಗಳೆಂದು ಪ್ರೀತಿಯಿಂದಲೇ ಬೆಳೆಸಿದ್ದರು. ಕುಸುಮಳ ಓದು ಮುಗಿಯುತ್ತಿದ್ದಂತೆ ಅವಳ ಸೋದರ ಮಾವನಿಗೆ ಕೊಟ್ಟು ಮದುವೆ ಮಾಡಿದ್ದರು. ಆದರೆ ಸಂಬಂಧ ಹಳಸಿ ಕುಸುಮ ತವರುಮನೆ ಸೇರಿದ್ದಳು. ಅವರ ಮನೆ ನಮ್ಮೂರಿನ ಮುಖ್ಯದ್ವಾರಿಕೆಯಲ್ಲಿದ್ದ ಕ್ವಾಟ್ರಸ್, ಆ ಕಾಲಕ್ಕೆ ಟಿ.ವಿ ಅಂತ ಇದ್ದುದ್ದು ಇವರ ಮನೆಯಲ್ಲಷ್ಟೇ ಆದ್ದರಿಂದ ಊರಿನ ಬಹುತೇಕ ಹೈಕಳು ಟಿ.ವಿ ನೋಡಲು ಇವರ ಮನೆಯ ಪಡಸಾಲೆಯನ್ನೇ ಅವಲಂಬಿಸಿಕೊಂಡಿದ್ದರು. ಆ ಪೈಕಿ ನಾನೂ ಒಬ್ಬನಾಗಿದ್ದೆ.

ವಾರಕ್ಕೊಮ್ಮೆ ಭಾನುವಾರಕ್ಕೆಂದು ಕುಮಾರ್ ಊರಿಗೆ ಬರುತ್ತಿದ್ದ. ಪ್ರೇಮವೇ ಕುರುಡೋ ಅಥವಾ ಕುರುಡಾಗಿದ್ದರೆ ಪ್ರೇಮ ಬೆಳೆಯುತ್ತೋ ಒಟ್ಟಿನಲ್ಲಿ ಎಂದೋ ಬಸ್ಸಿನಲ್ಲಿ ಇಬ್ಬರು ಪರಿಚಯವಾದದ್ದು ಅದು ಪ್ರೇಮವಾಗಿ ಬದಲಾಗಿತ್ತು. ಗಂಡನನ್ನು ತೊರೆದು ಒಂಟಿಯಿದ್ದ ಕುಸುಮಳಿಗೂ ಕುಮಾರ್ ಒಂದು ಸಾಧನವಾಗಿ ಕಂಡುಬಿಟ್ಟ. ದಿನಕಳೆದಂತೆ ಅಗಾಧವಾಗಿ ಬೆಳದ ಪ್ರೀತಿಗೆ ವಾರಕ್ಕೊಮ್ಮೆ ಬರುತ್ತಿದ್ದ ಕುಮಾರ್ ಊರಿನಿಂದಲೇ ಒಡಾಡಲಾರಂಭಿಸಿದ್ದ. ಊರಿನ ತುಂಬೆಲ್ಲಾ ಇವರ ಪ್ರೇಮದ ವಿಷಯ ಬಳ್ಳಿಯಂತೆ ಹಬ್ಬಿತ್ತು. ಜನರ ಬಾಯಿಗೆ ಆಹಾರವಾಗಿದ್ದ ಕುಮಾರನನ್ನು ಕಂಡರೆ ಅವ್ವ ಈಗ ಉರಿದು ಬೀಳಲಾರಂಭಿಸಿದ್ದಳು. ಯಾವ ಮಗ ಸರ್ಕಾರಿ ಕೆಲಸ ಪಡೆದು ಕುಟುಂಬಕ್ಕೆ ನೆರವಾಗಲೆಂದು ಬೆವರು ಹರಿಸಿದ್ದಳೋ ಅದೇ ಮಗ ಅವ್ವಳ ದೃಷ್ಠಿಯಲ್ಲೀಗ ಕಣ್ಣಿಗೆ ಮಂಜಾದವನಂತಾಗಿ ಹೋಗಿದ್ದ. ಅಪ್ಪ ಜಾತಿಯನ್ನೆಲ್ಲಾ ದೂರವಿಟ್ಟರೂ ಕುಮಾರನ ವರ್ತನೆಯಿಂದ ಬೇಸತ್ತು ಹೋಗಿದ್ದರು. ದುಡಿದ ಹಣವನ್ನೆಲ್ಲಾ ಬಡ್ಡಿಗೆ ಕಟ್ಟಿ ಸಾಲಗಾರರ ಮುಂದೆ ಸೋತು ನಿಲ್ಲುತ್ತಿದ್ದ ಅಪ್ಪನ ಸ್ಥಿತಿ ಕರುಳು ಹಿಂಡುವಂತಾಗುತ್ತಿತ್ತು. ತನಗೆ ಸಂಬಂಧವೇ ಇಲ್ಲವೇನೋ ಎನ್ನುವ ಹಾಗೆ ಕುಮಾರ್ ಯಾವುದನ್ನು ಗಮನಿಸದೆ ನಿಸ್ತೇಜನಂತೆ ಹೊರಡುತ್ತಿದ್ದ.

‘ಗೌಡ್ರೆ ಈ ಕಾಲ್ದಾಗು ಜಾತಿ ಜಾತಿ ಅಂತ ಯಾಕ್ ಬಡ್ದಾಡ್ದರಿ, ಮಗ ಪ್ರೀತಿ ಪ್ರೇಮ ಅಂತ ಭಾರಿ ಮುಂದ್ವರ್ದವ್ನೆ, ಆ ಹೆಣ್ಣು ಗಂಡನ್ ಬುಟ್ಟದೆ, ಅವ್ಳಗು ಒಂದು ಬಾಳು ಕೊಟ್ಟಂಗಾಯ್ತದೆ, ವಸಿ ಯೋಚ್ಸಿ ಇಬ್ರುಗು ಮೂರ್ ಗಂಟಾಕ್ಸಿ ಮನೆತುಂಬ್ಸಿ’ ಎಂದು ಕುಮಾರನ ಸ್ನೇಹಿತರಾದ ಮಾಸ್ಟರೊಬ್ಬರು ಅಪ್ಪನಿಗೆ ಉದ್ದುದ್ದ ಭಾಷಣ ಬಿಗಿದಿದ್ದರು. ಅಪ್ಪ ಆ ದಿನ ರಾತ್ರಿ ಚಿಂತೆಗಚ್ಚಿಕೊಂಡರು. ‘ಮಗನ್ಗೆ ವಸಿ ಬುದ್ದಿ ಹೇಳಿ ಅದ್ಬಸ್ತಲ್ಲಿಡಿ’ ಎಂದು ಚುಚ್ಚಿ ಹೋಗುತ್ತಿದ್ದ ನೆಂಟರಿಷ್ಠರು ಒಂದೆಡೆಯಾದರೆ ಊರಿನ ತುಂಬಾ ಅವನ ಮದುವೆಗೆ ಬೆನ್ನೆಲುಬಾಗಿ ನಿಂತುಕೊಂಡ ಒಂದಷ್ಠು ಜನ, ಇವರ ನಡುವೆ ಅಪ್ಪ ಬಿಕಾರಿಯಾಗಿ ಹೋಗಿದ್ದರು.

ಕುಮಾರ್ ಮನೆಯಲ್ಲಿ ಒಪ್ಪಿಗೆಗಾಗಿ ಬೇಡಿಕೆಯಿಟ್ಟ, ಯಾವ ಸಬೂಬು ಸಿಗದಾಗ ವಿಚಿತ್ರವಾಗಿ ವರ್ತಿಸಲಾರಂಭಿಸಿದ್ದ. ಮನೆಯ ವಾತಾವರಣ ತೀರಾ ಹದಗೆಟ್ಟಿತು. ಸಾಲದ ಶೂಲದವರು ಬೆನ್ನುಬಿಡದಂತೆ ಹಿಂಬಾಲಿಸಲಾರಂಭಿಸಿದ್ದರು. ಸಾಲದೆಂಬಂತೆ ಕುಮಾರನನ್ನ ಟಿ.ಸಿ.ಹೆಚ್ ಸೇರಿಸುವಾಗ ಮನೆ ಅಡವಿಟ್ಟು ಮಾಡಿದ್ದ ಎರಡು ಲಕ್ಷ ಸಾಲಕ್ಕೆ ಮನೆ ಹರಾಜಿಗೆ ಬಂದ ನೋಟಿಸೊಂದನು ಸೀನಣ್ಣ ಆಗಲೆ ಕೈಗಿತ್ತು ಹೋಗಿದ್ದ. ಮೊದಲೆ ದುಡಿದು ಅಸ್ಥಿಪಂಜರವಾಗಿದ್ದ ಅಪ್ಪ ಈಗ ಇನ್ನಷ್ಠು ಟೊಳ್ಳಾಗಿ ಹೋಗಿದ್ದರು.

ಆ ಹೊತ್ತು ಭಾನುವಾರ ರಜೆಯಿದ್ದರೂ ಕುಮಾರ್ ಮುಂಜಾನೆಯೇ ಎದ್ದು ಸಿದ್ಧನಾಗಿ ಹೊರಡಲು ಅಣಿಯಾಗುತ್ತಿದ್ದ. ಯಾರಿಗೂ ಗೊತ್ತಾಗದ ಹಾಗೆ ಹೆಜ್ಜೆ ಸಪ್ಪಳ ಮರೆಸಿ ಹೊತ್ತು ಹುಟ್ಟುವ ಮುನ್ನವೇ ಹೊಸ್ತಿಲು ತೊರೆದಿದ್ದ. ಎದ್ದಾಗ ಸುಳಿವಿಲ್ಲದ ಅವನನ್ನು ಅವ್ವ ಹುಡುಕಲಾರಂಭಿಸಿದ್ದಳು. ಬೇಸರಕ್ಕೆ ಏನಾದರು ಆದನೋ ಏನೋ ಎಂದು ಊರಿನ ಕೆರೆ, ಕಟ್ಟೆ, ಬಾವಿಹಳ್ಳ ಒಂದು ಸುತ್ತು ಅಲೆದು ಹೈರಾಣಾಗಿ ಬಂದು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಳು. ಅಷ್ಠರಲ್ಲೇ ಏದುಸಿರೆಳೆದು ಓಡಿ ಬಂದ ಚಿಕ್ಕಪ್ಪ ‘ಬಾವ ಶಿವ ಅನ್ನು ಶಿವ ಅನ್ನು, ಕುಮಾರ ಆ ಸಾಹೇಬ್ರು ಮಗ್ಳು ಕುಸುಮನ್ ಜೊತೆ ಲಗ್ನ ಆಗ್ಬುಟ್ನಂತೆ ರಿಜಿಸ್ಟ್ರು ಆಯ್ತಂತೆ, ಈಗ ವಿಷ್ಯ ಮುಟ್ತು’ ಎಂದು ಅಪ್ಪನ ಕೈ ಹಿಡಿದುಕೊಂಡರು. ಕತ್ತಲಿನೊಳಗೊಂದು ಕತ್ತಲು ಚೂರಿ ಹಾಕಿ ಕತ್ತಲನೇ ಕೊಲ್ಲುವಂತೆ ಒಂದು ದೀರ್ಘ ಕತ್ತಲಿನಲಿ ಅವ್ವ ಗೋಡೆಗೆ ಒರಗಿ ನಿಂತುಬಿಟ್ಟಳು. ಕನಸುಗಳು ಒಂದೇ ಏಟಿಗೆ ಸೀಳಿಹೋದಂತೆ ಅಪ್ಪ ಮುಖ ಮುಚ್ಚಿ ಗಡ್ಡಕೆ ಕೈ ಕೊಟ್ಟು ಕುಳಿತುಬಿಟ್ಟರು.

ಪರಿಧಿ

‘ಅಯ್ಯೋ ಮನೆಗೆ ಹಿರಿಮಗ ಅನ್ನೋನು ಹೆಣಕ್ ಕೊಳ್ಳಿ ಇಡ್ಬೇಕು ನೀನ್ ತಂದ್ ಹಣೆಬರ ನೋಡಮ್ಮಿ ಕೊಳ್ಳಿ ಹಿಡ್ಯಾಕು ನಿನ್ ಮಗ ಬರ್ಲಿಲ್ಲ’ ಎಂದು ಶಿವನಜ್ಜಿ ನೆಲ ಬಗೆದು ಎದೆಬಡಿದುಕೊಳ್ಳತ್ತಾ ಅಳಲಾರಂಭಿಸಿದಳು. ಹುಚ್ಚನಂತೆ ಓಡಿಬಂದ ಅಪ್ಪ ಅಗ್ಗಿಷ್ಠಿಕೆಯಲ್ಲಿ ಬೆಂಕಿ ಹಿಡಿದು ನಿಂತಿದ್ದ ನನ್ನನ್ನು ದರದರನೆ ಎಳೆದು ತಂದು ‘ಹಚ್ಚು ಬೆಂಕಿ’ ಎಂದರು, ಬೆಂಕಿ ಕೆಂಡಗಳು ಹಚ್ಚುವುದೇ ತಡ, ಭೂಮಿಯನ್ನೇ ನುಂಗುತ್ತವೆಯೋ ಎನ್ನುವಂತೆ ಜ್ವಲಿಸತೊಡಗಿದವು.

ಬದುಕಿದ್ದರು ಮಮತೆಯಲಿ ಮಣ್ಣಾಗಿ ಹೋಗಿದ್ದ ಕುಮಾರ್ ಅವ್ವ ನೇಣು ಬಿಗಿದುಕೊಂಡ ಹಗ್ಗದಲಿ ಕನ್ನಡಿಯಂತೆ ಹೊಳೆಯಲಾರಂಭಿಸಿದ್ದ. ಯಾರೋ ಮುಖಪುಸ್ತಕದಲ್ಲಿ ಹಾಕಿದ್ದ ‘ಆಲ್ ಅದರ್ ಲವ್ ಆರ್ ಡಸ್ಟ್ ಅಂಡರ್ ದ ಫೀಟ್ ಆಫ್ ಮದರ್ ಲವ್’ ಎಂಬ ಮಾತು ಯಾಕೋ ಒಮ್ಮೆಗೇ ನೆನಪಿಗೆ ಬಂತು.

ಬಹಿಷ್ಕಾರ ಹಾಕಿದ್ದ ಊರಿನಲ್ಲಿ ಜಾತಿ ಗೋಡೆಯ ಮೇಲೆ ಹಚ್ಚಿಟ್ಟ ಒಂಟಿ ದೀಪವೀಗ ನಿಧಾನವಾಗಿ ಆರಲಾರಂಭಿಸಿತು. ಬೆಳಕನ್ನು ನೋಡುವುದೆ ಶಾಪವೆಂಬಂತೆ ಅಪ್ಪ ಕತ್ತಲಿನೊಟ್ಟಿಗೆ ವಿರಾಗಿಯಾಗಿ ಹೋದರು. ಫ್ರೇಮಿನಲ್ಲಿ ಇಟ್ಟ ಅವ್ವಳ ಫೋಟೋಗೆ ಹಾಕಿದ್ದ ಹೂ ಬಾಡಿ ನರಳಿತ್ತು. ಅಜ್ಜನ ಬಳುವಳಿಯಂತೆ ಬಂದಿದ್ದ ಗುಡಿಯ ಪೂಜಾರಿಕೆಯ ಮಂತ್ರ ಪಠಣ ಇನ್ನಾರದೊ ಧನಿಯಲ್ಲಿ ಕಿವಿ ಮುಟ್ಟುತ್ತಿತ್ತು. ಅಪ್ಪ ಗಂಟೆ ಹಿಡಿವ ಕೈಯಲ್ಲಿ ಬೀಡಿಯೊಂದನ್ನು ಹಚ್ಚಿ ಹೊಗೆ ಉಗುಳಲು ತಲೆ ಎತ್ತಿದರು. ಕುಮಾರನ ಕೈಬರಹದಲ್ಲೇ ಗೀಚಿಕೊಂಡ ‘ಮನುಷ್ಯನ ಜಾತಿ ತಾನೊಂದೇ ವಲಂ’ ಎನ್ನುವ ಪಟ್ಟಿಯೊಂದು ಸೂರಿನಲ್ಲಿ ನೇತಾಡುತ್ತಿತ್ತು..

ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ
ಜಾತಿ-ವಿಜಾತಿ ಎನಬೇಡ
ದೇವನೊಲಿದಾತನೆ ಜಾತ ಸರ್ವಜ್ಞಾ.