ಅಲ್ಲಿನ ಶಾಲಾ ಕಾಲೇಜಿನ ಮಕ್ಕಳೆದುರು ಪ್ರಧಾನಮಂತ್ರಿಯೂ ರಸ್ತೆ ಕಾಯುವವನೇ. ಮಾತು ಮಾತಿಗೂ ಪರದೇಶದ ಸಂಸ್ಕೃತಿಯನ್ನು ಹಳಿದೇ ನನ್ನ ಸಂಸ್ಕೃತಿಯ ಹಿರಿಮೆಯನ್ನು ಮೆರೆಯುವ ಮನಸ್ಸಿನೊಳಗೊಂದು ಗಂಟಾನಾದ. ಅಂದಹಾಗೆ ಮಾರೀಷಿಯಸ್ಸಿನ ಅಳತೆ ನೋಡಿ ದಾರಿ ಕ್ರಮಿಸಲು ಕಡಿಮೆ ಸಮಯ ಸಾಕೆಂದು ಅಂದಾಜು ಹಾಕಿದರೆ ತಪ್ಪಾದೀತು. ಕಿರಿದಾದ ಇಲ್ಲಿನ ಬಳಸು ದಾರಿಗಳಲ್ಲಿ 45 ಕಿಲೋಮೀಟರ್ಗಳ ದೂರ ಕ್ರಮಿಸಲು ಬೇಕಾದ ಸಮಯ ಬರೋಬ್ಬರಿ 90 ನಿಮಿಷಗಳು! ಅಲ್ಲಿಗೆ ಹೋಗುವ ಪ್ರವಾಸ ಖಚಿತವಾಗುವವರೆಗೂ ಮಾರಿಷಿಯಸ್ ಆಫ಼್ರಿಕಾ ಖಂಡಕ್ಕೆ ಸೇರಿದ ದ್ವೀಪ ಎನ್ನುವ ಸಾಮಾನ್ಯಜ್ಞಾನ ನನಗೆ ಇರಲಿಲ್ಲ. ʼಕಂಡಷ್ಟೂ ಪ್ರಪಂಚʼ ಅಂಕಣದಲ್ಲಿ ಅಂಜಲಿ ರಾಮಣ್ಣ ಅವರು ಮಾರೀಷಿಯಸ್ ಕುರಿತು ಬರೆದ ಲೇಖನ.
ತನ್ನ ಸಮಸ್ತಕ್ಕೂ ಇತರರನ್ನು ಆತುಕೊಂಡಿರುವ ಪುಟ್ಟ ದ್ವೀಪ ಮಾರೀಷಿಯಸ್. ಗಿಜಿಬಿಜಿಗುಟ್ಟುವ ರಾಜಧಾನಿ ಪೋರ್ಟ್ ಲೂಯಿಸ್ ನ ಪಾಔಡ್ರಿಯೇ ರಸ್ತೆಯಲ್ಲೊಂದು ಶಾಲೆ. ಇನ್ನೇನು ರಸ್ತೆ ದಾಟುವವಳಿದ್ದೆ, ಹಳದಿ ಬಸ್ಸೊಂದು ನನ್ನ ಮುಂದೆ ನಿಂತಿತು. ಸರಸರನೆ ಮಕ್ಕಳೆಲ್ಲಾ ಬಸ್ಸಿನಿಂದ ಇಳಿಯತೊಡಗಿದರು. ರಸ್ತೆಯ ಎರಡೂ ಬದಿಗಳ ಚಲನೆಯೂ ಸ್ತಬ್ಧ, ನಿಶ್ಯಬ್ಧ. ಅದೆಷ್ಟೊ ಹೊತ್ತು ಮಕ್ಕಳು ಅತ್ತಿಂದಿತ್ತ ನಡೆದು, ಕುಣಿದು, ಕುಪ್ಪಳಿಸಿ ತಮ್ಮ ಗೂಡು ಸೇರಿದ ಮೇಲೆ ಅಲ್ಲಿದ್ದ ಸಂಚಾರಿ ಪೊಲೀಸರು ಉಳಿದವರಿಗೆ ಮುಂದೆ ಹೋಗಲು ಹಸಿರು ಹೊತ್ತಿಸಿದರು. ಕೂಡಲೇ ಹಿಂದೆಯೇ ನಿಂತಿದ್ದ ಕೆಂಪು ದೀಪದ ಕಾರು ಜ಼್ಓಯ್ಂ ಅಂತ ಮುಂದೋಡಿತು.
ಚಾಲಕನನ್ನು ಕೇಳಿದಾಗ ತಿಳಿದದ್ದು ಅದು (ನನ್ನ ಭೇಟಿಯ ಸಮಯದಲ್ಲಿ ಇದ್ದ) ಪ್ರಧಾನಮಂತ್ರಿ ಡಾ.ನವೀನ್ ರಾಮಗೂಲಂ ಅವರು ಪ್ರಯಾಣಿಸುತ್ತಿದ್ದ ವಾಹನವೆಂದು. ಅಂದರೆ, ಅಲ್ಲಿನ ಶಾಲಾ ಕಾಲೇಜಿನ ಮಕ್ಕಳೆದುರು ಪ್ರಧಾನಮಂತ್ರಿಯೂ ರಸ್ತೆ ಕಾಯುವವನೇ. ಮಾತು ಮಾತಿಗೂ ಪರದೇಶದ ಸಂಸ್ಕೃತಿಯನ್ನು ಹಳಿದೇ ನನ್ನ ಸಂಸ್ಕೃತಿಯ ಹಿರಿಮೆಯನ್ನು ಮೆರೆಯುವ ಮನಸ್ಸಿನೊಳಗೊಂದು ಗಂಟಾನಾದ.
ಅಲ್ಲಿಂದ ಮುಂದೆ ಚಾಲಕ ಒಂದು ಜಾಗದಲ್ಲಿ ಗಾಡಿ ನಿಲ್ಲಿಸಿ ಇಳಿಯಲು ಹೇಳಿದ. “ನೀವು ನಿಂತಿರೋದು ಸುಪ್ತ ಜ್ವಾಲಾಮುಖಿಯ ಮೇಲೆ” ಅಂತ ಮಾರ್ಗದರ್ಶಕ ರಾಕೇಶ್ ಹೇಳಿದ ಕ್ಷಣದಲ್ಲಿ ನಾನೇ ಸಿಡಿಯುವವಳಿದ್ದೆ!. ಎಲ್ಲೆಡೆಯಿಂದಲೂ ಸಮುದ್ರದಿಂದ ಸುತ್ತುವರೆದ ಹಸಿರು ದ್ವೀಪವದು. 300 ಕಿಲೋಮೀಟರ್ಗಳಷ್ಟು ಕರಾವಳಿ ಪ್ರದೇಶವಿರುವ ಈ ದೇಶದ ಒಟ್ಟು ಅಳತೆ ಕೇವಲ 2000 ಸ್ಕ್ವೇರ್ ಕಿಲೋಮೀಟರ್ಗಳು. ಸುತ್ತಲಿನ ಸಮುದ್ರದಲ್ಲಿ ಭರ್ತಿ ಹವಳದ ದಿಣ್ಣೆಗಳು. ದ್ವೀಪದೊಳಗೆ ಎಲ್ಲೆಲ್ಲೂ ಹಸಿರು. ಆದರೂ ಇಲ್ಲಿನ ವಿಶೇಷತೆಯೆಂದರೆ ಎಲ್ಲೂ ಅಳತೆ ಮೀರದ ಪ್ರಕೃತಿ ತನಗೂ ಒಂದು ಶಿಸ್ತಿದೆ ಅಂತ ತೋರಿಸಿಕೊಟ್ಟಿರುವುದು. ಅಲ್ಲಲ್ಲಿ ಝರಿಗಳು, ತೊರೆಗಳು, ಜಲಪಾತಗಳು. ಪುಟ್ಟ ಮಕ್ಕಳ ಗುಂಪೊಂದು ಸಮವಸ್ತ್ರ ಧರಿಸಿ ಶಾಲೆಗೆ ಹೊರಟು ನಿಂತಾಗ ನಮ್ಮಲ್ಲಿ ಮೂಡುವ ನಿರುಮ್ಮಳ ಭಾವ ಮೂಡಿಸುತ್ತಾಳೆ ಮಾರಿಷಿಯಸ್ಸಿನಲ್ಲಿ ಪ್ರಕೃತಿ.
ಹಸಿರು ಅಂದ ಮೇಲೆ ಅಲ್ಲಿ ತಂಪು. ಹೌದು, ವರ್ಷವಿಡೀ ಅಲ್ಲಿ ಹಿತವಾದ ಹವಾಮಾನ ಆದರೆ ಬೇಸಿಗೆಯಲ್ಲಿ ಆರ್ದ್ರತೆ ಹೆಚ್ಚು ನಮ್ಮ ಮಂಗಳೂರಿನ ಹಾಗೆ. ಪೈನ್ ಮತ್ತು ಓಕ್ ಮರಗಳು ಇಲ್ಲಿ ಹೇರಳವಾಗಿವೆ. ಯಾವುದೇ ದಾರಿಯಲ್ಲಿ ಹೋದರೂ ಇಕ್ಕೆಲಗಳಲ್ಲಿ ಸ್ಪರ್ಶ ಸನಿಹದಲ್ಲೇ ಸಿಕ್ಕುತ್ತೆ ನಳನಳಿಸುವ ಕಬ್ಬಿನ ಗದ್ದೆ. ಕಬ್ಬಿನ ವ್ಯವಸಾಯ ಅಲ್ಲಿನ ಮುಖ್ಯ ಆದಾಯಕ್ಕಿರುವ ಉದ್ಯೋಗ. ಸಕ್ಕರೆ ರಫ್ತು ಪ್ರಮುಖ. ಆದರೆ ಅಲ್ಲಿ ಬೆಳೆದ ಕಬ್ಬಿನಿಂದ ತಾನೆ ತಯಾರಿಸಿದ ಸಕ್ಕರೆಯನ್ನು ಅಲ್ಲಿನ ಪ್ರಜೆ ಬಳಕೆ ಮಾಡುವುದು ಕಾನೂನು ರೀತ್ಯ ಅಪರಾಧ ! ಕಾರಣ, ಅಲ್ಲಿನ ಸಕ್ಕರೆಗೆ ಐರೋಪ್ಯ ರಾಷ್ಟ್ರಗಳಲ್ಲಿ ಭಾರಿ ಬೇಡಿಕೆಯಿದೆ.
ಇಲ್ಲಿನ ವಿಶೇಷತೆಯೆಂದರೆ ಎಲ್ಲೂ ಅಳತೆ ಮೀರದ ಪ್ರಕೃತಿ ತನಗೂ ಒಂದು ಶಿಸ್ತಿದೆ ಅಂತ ತೋರಿಸಿಕೊಟ್ಟಿರುವುದು. ಅಲ್ಲಲ್ಲಿ ಝರಿಗಳು, ತೊರೆಗಳು, ಜಲಪಾತಗಳು. ಪುಟ್ಟ ಮಕ್ಕಳ ಗುಂಪೊಂದು ಸಮವಸ್ತ್ರ ಧರಿಸಿ ಶಾಲೆಗೆ ಹೊರಟು ನಿಂತಾಗ ನಮ್ಮಲ್ಲಿ ಮೂಡುವ ನಿರುಮ್ಮಳ ಭಾವ ಮೂಡಿಸುತ್ತಾಳೆ ಮಾರಿಷಿಯಸ್ಸಿನಲ್ಲಿ ಪ್ರಕೃತಿ.
ಮಾರೀಷಿಯಸ್ಸಿನ ಮತ್ತೊಂದು ಪ್ರಮುಖ ಉದ್ಯಮ ದೋಣಿ ಮತ್ತು ಹಡಗು ತಯಾರಿಕೆ. ಅದಕ್ಕೆ ಬೇಕಾಗುವ ಗುಣವಿಶೇಷಣಗಳಿರುವ ಮರಗಳು ಇಲ್ಲಿ ಹೇರಳವಾಗಿವೆ. ಅಲ್ಲಿನ ಜನರೇ ಹೇಳುವಂತೆ ಹರಿದ ಫ್ರೆಂಚ್ ಮತ್ತು ಮುರಿದ ಇಂಗ್ಲಿಷ್ ಭಾಷೆಯ ಮಿಶ್ರಣವಾದ ಭಾಷೆ ‘ಕ್ರಯಾಲ್’ ಇಲ್ಲಿನ ಅಧೀಕೃತ ಭಾಷೆ. ಮೇಕೆ ಚರ್ಮದಿಂದ ತಯಾರಿಸಿದ ತಾಳ ವಾದ್ಯವೊಂದನ್ನು ಬಡಿಯುತ್ತಾ ಹೆಚ್ಚು ಕಡಿಮೆ ನಮ್ಮ ಬೆಸ್ತರ ರಾಗದಲ್ಲಿ ಹಾಡನ್ನು ಹಾಡುತ್ತಾ ಅವರು ಕುಣಿಯುತ್ತಿದ್ದಾಗ ನಾನೂ ಮೈಮರೆತು ಒಂದಷ್ಟು ಘಳಿಗೆ ಕುಣಿದದ್ದು ಸುಳ್ಳಲ್ಲ. ಸದ್ಯ ಅಲ್ಲಿ ನನ್ನನ್ನು ಅಳೆಯುವವರು ಯಾರೂ ಇರಲಿಲ್ಲ. ಅಂದಹಾಗೆ ಮಾರೀಷಿಯಸ್ಸಿನ ಅಳತೆ ನೋಡಿ ದಾರಿ ಕ್ರಮಿಸಲು ಕಡಿಮೆ ಸಮಯ ಸಾಕೆಂದು ಅಂದಾಜು ಹಾಕಿದರೆ ತಪ್ಪಾದೀತು. ಕಿರಿದಾದ ಇಲ್ಲಿನ ಬಳಸು ದಾರಿಗಳಲ್ಲಿ 45 ಕಿಲೋಮೀಟರ್ಗಳ ದೂರ ಕ್ರಮಿಸಲು ಬೇಕಾದ ಸಮಯ ಬರೋಬ್ಬರಿ 90 ನಿಮಿಷಗಳು!
ಅಲ್ಲಿಗೆ ಹೋಗುವ ಪ್ರವಾಸ ಖಚಿತವಾಗುವವರೆಗೂ ಮಾರಿಷಿಯಸ್ ಆಫ಼್ರಿಕಾ ಖಂಡಕ್ಕೆ ಸೇರಿದ ದ್ವೀಪ ಎನ್ನುವ ಸಾಮಾನ್ಯಜ್ಞಾನ ನನಗೆ ಇರಲಿಲ್ಲ.
ನಮ್ಮಲ್ಲಿಂದ ಸರಾಗವಾಗಿ ತಲುಪಲು ವಾಯುಯಾನವೇ ಹಿತ. 6 ಗಂಟೆಗಳ ಕಾಲದ ಪ್ರಯಾಣಕ್ಕೆ ದೇಶದ ಪ್ರತೀ ವಿಮಾನ ನಿಲ್ದಾಣದಿಂದ ಏರ್ ಇಂಡಿಯ ಮತ್ತು ಮಾರಿಷಿಯಸ್ ಏರ್ಲೈನ್ಗಳು ಲಭ್ಯ. ಹೊಗುವ ಪ್ಲಾನ್ ಅನ್ನು ಸಾಕಷ್ಟು ಮೊದಲೇ ಸಿದ್ಧಪಡಿಸಿ ಟಿಕೇಟ್ ಕಾಯ್ದಿರಿಸಿದರೆ ದರ ಲಾಭವೂ ಆಗುತ್ತೆ. ಎಮಿರೇಟ್ಸ್ ಏರ್ಲೈನ್ ಅನ್ನು ಆಯ್ಕೆ ಮಾಡಿಕೊಂಡರೆ ದುಬೈ ಮೂಲಕವೂ ಮಾರಿಷಿಯಸ್ ಸೇರಬಹುದು. ಆದರೆ 12 ಗಂಟೆಗಳ ಕಾಲದ ಗಾಳಿತೇಲಿಗೆ ತಯಾರಿದ್ದರೆ ಮಾತ್ರ.
ಊಳಿಗಕ್ಕೆ ಬಂದ ಆಫ್ರಿಕನ್ನರು ತಲೆತಲಾಂತರದಿಂದ ಇಲ್ಲಿಯೇ ನೆಲೆಸಿ ಕಳೆದ ನಾಲ್ಕು ತಲೆಮಾರಿನಿಂದ ಮೂಲ ಮಾರೀಷಿಯನ್ಸ್ ಆಗಿದ್ದಾರೆ. 60 ಶೇಕಡಾ ಹಿಂದುಗಳಿರುವ ಈ ಪುಟ್ಟ ದ್ವೀಪ ರಾಷ್ಟ್ರದಲ್ಲಿ ಶಿವರಾತ್ರಿ ಹಬ್ಬದ ಆಚರಣೆ ಬಲು ಜೋರು. ಶಿವಾರತ್ರಿಯಂದು ಸುಮಾರು 45-50 ಸಾವಿರ ಹಿಂದುಗಳು ಬಿಳಿ ವಸ್ತ್ರಧಾರಿಗಳಾಗಿ ಗಂಗಾತಲ ಎನ್ನುವ ಕಲ್ಯಾಣಿಯ ಬಳಿ ಸೇರಿ ಶಿವನ ಆರಾಧನೆ ಮಾಡ್ತಾರೆ ಎನ್ನುವುದು ಒಂದು ರೋಚಕವಾದ ವಿಷಯ. ಆ ದೇವಸ್ಥಾನದ ಆವರಣ, ಗೋಡೆ, ಗೋಪುರ ಎಲ್ಲವೂ ಬಿಳಿ ಕಲ್ಲಿನಿಂದ ಮಾಡಿದ್ದು ಅದಕ್ಕೆ ಸುಣ್ಣದಂತಹ ಬಿಳಿ ಬಣ್ಣವನ್ನು ಬಳಿಯಲಾಗಿದೆ. ಮೂರು ದಿಕ್ಕುಗಳಿಂದಲೂ ನೀರಿನಿಂದ ಆವೃತವಾದ ಈ ದೇವಸ್ಥಾನದಲ್ಲಿ ಶಿವಲಿಂಗದ ಬಣ್ಣವೂ ಬಿಳಿಯೇ, ಆದರೆ ಅದು ಅಮೃತಶಿಲೆಯದ್ದಲ್ಲ.
ಗಡಿರಕ್ಷಣಾ ಸೇವೆಗಾಗಿ ಆಯವ್ಯಯದಲ್ಲಿ ಹಣಕಾಸು ನಿಗದಿ ಮಾಡದ ಏಕೈಕ ದ್ವೀಪರಾಷ್ಟ್ರ ಮಾರೀಷಿಯಸ್. ಅದಕ್ಕೆ ಕಾರಣ ಅದರ ರಕ್ಷಣೆಗೆ ಭಾರತ ಸದಾ ಸಿದ್ಧವಿರುವುದು. ಒಂದೊಮ್ಮೆ ಡಚ್ ಮತ್ತು ಫ್ರೆಂಚರ ವಸಾಹತು ಎನಿಸಿದ್ದ ಮಾರೀಷಿಯಸ್ಸಿನ ಕಾಡುಗಳಲ್ಲಿ ಇದ್ದ ಪಕ್ಷಿ ‘ಡೊಡೊ’. ದಷ್ಟಪುಷ್ಟವಾದ, ಕಂದು ಬಣ್ಣದ ಹಂಸದಂತೆ ಕಾಣಿಸುತ್ತಿದ್ದ ಈ ಪಕ್ಷಿಗಳ ಮಾಂಸಕ್ಕೆ ಪೋರ್ಚುಗಲ್ ಮತ್ತು ಇತರ ರಾಷ್ಟ್ರಗಳಲ್ಲಿ ಇದ್ದ ಬೇಡಿಕೆಯಿಂದಾಗಿ ಇಂದು ಅವುಗಳ ಸಂತಾನ ವಿಶ್ವದಲ್ಲೇ ಇಲ್ಲವಾಗಿದೆ. ಪೋರ್ಚುಗೀಸ್ ಭಾಷೆಯಲ್ಲಿ ‘ಡೊಡೊ’ಎಂದರೆ ‘ಶತಮೂರ್ಖ’ ಎನ್ನುವ ಅರ್ಥ. ಅದನ್ನು ರಾಷ್ಟ್ರ ಪಕ್ಷಿಯೆಂದು ಘೋಷಿಸಿಕೊಂಡು, ಮಾದರಿಗಳನ್ನು ಮರ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸಿನಲ್ಲಿ ತಯಾರು ಮಾಡಿ ವ್ಯಾಪಾರ ಮಾಡುವುದಷ್ಟೇ ಮಾರಿಷಿಯಸ್ಸಿನ ಪ್ರಜೆಗಳಿಗೆ ಈಗ ಉಳಿದಿರುವುದು. ಮಣ್ಣಿನಿಂದ ಮಾಡಿದ್ದ ತುಂಬಾ ಸುಂದರವಾಗಿದ್ದ ಡೋಡೋ ಮೂರ್ತಿಯೊಂದನ್ನು ಕೊಂಡಿದ್ದೆ. ಆದರೆ ಮನೆಗೆ ಬಂದು ಅದನ್ನು ತ್ಬ್ಯಾಗಿನಿಂದ ತೆಗೆಯುವಾಗ ಅದರ ಕೊಕ್ಕು ಮುರಿದುಹೋಯಿತು. ಈಗ ನನ್ನ ಸಂಗಾತಿ ಕೊಕ್ಕಿಲ್ಲದ ಡೋಡೋ.
ಗಡಿರಕ್ಷಣಾ ಸೇವೆಗಾಗಿ ಆಯವ್ಯಯದಲ್ಲಿ ಹಣಕಾಸು ನಿಗಧಿ ಮಾಡದ ಏಕೈಕ ದ್ವೀಪರಾಷ್ಟ್ರ ಮಾರೀಷಿಯಸ್. ಅದಕ್ಕೆ ಕಾರಣ ಅದರ ರಕ್ಷಣೆಗೆ ಭಾರತ ಸದಾ ಸಿದ್ಧವಿರುವುದು. ಒಂದೊಮ್ಮೆ ಡಚ್ ಮತ್ತು ಫ್ರೆಂಚರ ವಸಾಹತು ಎನಿಸಿದ್ದ ಮಾರೀಷಿಯಸ್ಸಿನ ಕಾಡುಗಳಲ್ಲಿ ಇದ್ದ ಪಕ್ಷಿ ‘ಡೊಡೊ’.
ಪ್ರವಾಸಿಗರನ್ನು ಆಕರ್ಷಿಸಲು ಬೇಕಾದ ಕ್ಯಾಸಿನೋಗಳು, ರಾತ್ರಿಕ್ಲಬ್ಬುಗಳು ಮತ್ತು ಒಂದು ಮಾಲ್ ಹಾಗೂ ಅದರಲ್ಲಿ ಒಂದು ಥಿಯೇಟರ್ ಕೂಡ ಇದೆ. ಅಲ್ಲಿ ಶಾಹಿದ್ ಕಪೂರನ ಸಿನೆಮಾ ನಡೆಯುತ್ತಿತ್ತು. ದೊಡ್ಡ ಪೋಸ್ಟರ‍್ನಲ್ಲಿ ಸುಂದರಾಂಗ ರಾರಾಜಿಸುತ್ತಿದ್ದ. ಇಲ್ಲಿಂದ ಹೊತ್ತು ತರಲೇ ಬೇಕಾದ ಅನುಭವವೆಂದರೆ ” ಸಮುದ್ರದೊಳಗಿನ ನಡೆ ” (Under Sea Walk) . ಈಜು ಬರದಿದ್ದರೂ ಭಯ ಬೇಡ. ಈಜುಡುಗೆ ತೊಟ್ಟರೆ ಆಯ್ತು. ಆಮ್ಲಜನಕವಿರೋ ಸಾಧನವೊಂದನ್ನು ನಮ್ಮ ಭುಜದ ಮೇಲಿರಿಸಿ ಸಹಾಯಕನ ಕೈ ಹಿಡಿದು ಮಧ್ಯ ಸಮುದ್ರದಲ್ಲಿ ೩೦ ಅಡಿ ಆಳಕ್ಕೆ ಇಳಿದು ಬಿಟ್ಟರೆ. ವಾಹ್, ಎಂಥ ಅದ್ಭುತ ಜಗತ್ತು. ಹವಳದ ಗೆಡ್ಡೆಗಳು ನಮ್ಮ ಅನಿಸಿಕೆಯ ಆಕಾರ ಪಡೆದು ಕಣ್ಣ್ಮುಂದೆ ಹಾಯುತ್ತಿರುವಾಗಲೇ ಲೆಕ್ಕವಿಡಲಸಾದ್ಯವಾದಷ್ಟು ಬಣ್ಣಗಳ ಮೀನುಗಳು ವಿವಿಧಾಕಾರದಲ್ಲಿ ಮೈಮನಗಳಿಗೆ ಮುತ್ತು ನೀಡೋ ಸುಖ ಪದಗಳಿಗೆ ನಿಲುಕದ್ದು. ಕಣ್ಣ್ಮುಚ್ಚಿ ಬದುಕಿಬಿಡಬೇಕಷ್ಟೇ.
ಹೀಗೆ ಸಮುದ್ರ ತಳದ ನಡಿಗೆಗೆ ತೆರಳುವ ಮುನ್ನ ಅಲ್ಲೇ ಮಟ್ಠಾಳೆ( ತೆಂಗಿನ ಗರಿಗಳಿಂದ ಮಾಡಿದ ಹಾಸು)ಗಳನ್ನು ನಿಲ್ಲಿಸಿ ತೆರೆ-ಮರೆ ಮಾಡಿದ್ದ ಜಾಗದಲ್ಲಿ ಬಟ್ಟೆ ಬದಲಿಸಿ ಸ್ವಿಮಿಂಗ್ ಕಾಸ್ಟ್ಯೂಮ್ ಹಾಕಿಕೊಳ್ಳಲು ಹೇಳಿದಳು ಮಾರಿಷಿಯಸ್ಸಿನ ಸುಂದರಿ.
ಎರಡು ಪೀಸಿನ ಸ್ವಿಂಗ್ ಬಟ್ಟೆ (ಮೊದಲ ಬಾರಿಗೆ ಹಾಕಿಕೊಳ್ಳುತ್ತಿರಲಿಲ್ಲ. ನಮ್ಮೂರಿನಲ್ಲೇ ಬೇಕಾದಷ್ಟು ಬಾರಿ ಈಜಿದ್ದೇನೆ ಆದರೆ ಎಲ್ಲವೂ ಹೆಂಗಸರ ನಡುವೆ ಅಥವಾ ಪರಿಚಿತ ಗಂಡಸರ ನಡುವೆ) ಹಾಕಿಕೊಂಡು ಹೊರಬಂದರೆ ಒಂದು ರಾಶಿ ಗಂಡಸರು ಜಲಕ್ರೀಡೆಗೆ ತೆರಳಲು ತಯಾರಿದ್ದರು, ಮತ್ತೆ ಕೆಲವರು ತಯಾರಾಗುತ್ತಿದ್ದರು. ಜೀವನದಲ್ಲಿ ಮೊದಲ ಬಾರಿಗೆ ನನಗೆ ಮುಜುಗರ ಆಯ್ತು. ತಕ್ಶಣ ಅವಳನ್ನು ಸಂಕೋಚದ ಧ್ವನಿಯಲ್ಲಿ “am I looking fine?” ಎಂದು ಕೇಳಿದೆ. ಅವಳಿಗೆ ನನ್ನ ಉಡುಪು ಅತೀ ಸಾಮಾನ್ಯವಾದದ್ದು. ನಾನು ಯಾಕೆ ಹಾಗೆ ಕೇಳಿದೆ ಎನ್ನುವ ಭಾವವೇ ಅವಳ ನಿಘಂಟಿನಲ್ಲಿ ಇಲ್ಲ. “O Enjala, you are looking absolutely stunning” ಎಂದು ನನ್ನನ್ನು ಸಮುದ್ರದ ನೀರಿನ ಬಳಿ ಆಮ್ಲಜನಕದ ಸಿಲಿಂಡರ್ ಹಾಕಲು ಕರೆದುಕೊಂಡು ಹೋದಳು. ದೀರ್ಘವಾಗಿ ಉಸಿರೆಳೆದುಕೊಂಡೆ. ಅಲ್ಲಿದ್ದವರು ಯಾರು ನನ್ನನ್ನು ನೋಡುತ್ತಿರಲಿಲ್ಲ. ಮೊದಲ ಬಾರಿಗೆ ದೇಹದ ಬಗೆಗಿನ ಪ್ರಜ್ಞೆ ಮರೆಯಾಗಿತ್ತು. ನಿರಾಳ ಭಾವದಲ್ಲಿ ಎರಡೂ ಕೈಗಳನ್ನು ಅಗಲ ಮಾಡಿ, ಥೇಟ್ ಶಾರುಖ್ ಖಾನ್‍ನ ಸ್ಟೈಲ್‍ನಲ್ಲಿ ಗಾಳಿಯನ್ನು ತಬ್ಬಿಕೊಂಡೆ. ಒಳಗೆಲ್ಲಾ ಅದರದ್ದೇ ಸಂಚಾರ. ಮುಖವೆಲ್ಲಾ ಮೆತ್ತಿಕೊಂಡಿದ್ದ ನಗು, ಬೆರಳಿಗೆ ಬೆರಳು ಬೆಸೆದುಕೊಂಡಿದ್ದ ಒಬ್ಬ ಜೀವರಕ್ಷಕ. ಇಬ್ಬರೂ ಸಾಗರದ ಆಳಕ್ಕೆ ಹೊಕ್ಕಿದ್ದಷ್ಟೇ. ಅಬ್ಬಾ, ಆ ಅನುಭವ ನೆನಪಿಗೆ ಬಂದಾಗಲೆಲ್ಲಾ ಭಾಷೆಯ ಬಡತನದ ಬಗ್ಗೆ ಕನಿಕರ ಉಕ್ಕುತ್ತದೆ.
ಮಾರಿಷಿಯಸ್ ಅನ್ನು ನೆನಪಿನಂಗಳದಲ್ಲಿ ಎಂದು ಬಂಧಿಸಿಡಬೇಕೆಂದರೆ ಹೆಗಲಿಗೆ ಕ್ಯಾಮೆರಾ ಏರಿಸಿಕೊಂಡಿರುವುದನ್ನು ಮರೆಯುವ ಹಾಗೇಯಿಲ್ಲ. ಭಾಗಶಃ ಯಾವ ಜಾಗದಲ್ಲೂ ಫೋಟೊಗ್ರಫಿ ನಿಷೇಧವಿಲ್ಲ. ಆದರೆ ಪ್ರಧಾನಿ ಮನೆಯ ಮುಂದೆ ಸುತ್ತ ಮುತ್ತ ಮಾತ್ರ ಉಹುಂ, ಕ್ಯಾಮೆರ ಹೆಸರೆತ್ತೀರಿ ಜೋಕೆ. ಕಾಲಿಗೆ ಅನುಕೂಲಕರ ಶೂಜ಼್, ಜೀನ್ಸ್ ಟೀ ಶರ್ಟ್, ಬೆನ್ನ-ಬ್ಯಾಗ್ನಲ್ಲಿ ನೀರು, ಛತ್ರಿ, ಪೇಪರ್, ಪೆನ್ನು, ಕ್ಯಾಮೆರ, ಕಣ್ಣಿಗೇರಿದ ಕಪ್ಪು ಕನ್ನಡಕ, ತಲೆ ತಗುಲಿಸಿದ ಹ್ಯಾಟ್. ಇಷ್ಟಿದ್ದರೆ ಆಹಾ, ಮಾರಿಷಿಯಸ್ ಸೊಬಗು ಇಮ್ಮಡಿಸುತ್ತೆ.
ಇಷ್ಟೆಲ್ಲಾ ಸೌಂದರ್ಯದ, ಶಾಂತಿಯ ನೆಲವಾದ ನಾಡಲ್ಲಿ ಜ್ವಾಲಾಮುಖಿಯೇ? ನಂಬಿಕೆ ಬಾರದು ಆದರೆ ಸತ್ಯ !
ಸಾವಿರಾರು ವರ್ಷಗಳ ಹಿಂದೆ ಸಿಡಿದು ಮಾರಿಷೀಯಸ್ಅನ್ನು ರೂಪಿಸಿರುವ ಅಗ್ನಿಪರ್ವತ ಈಗಲೂ ಅದೇ ನೆಲದೊಳಗೆ ಸುಪ್ತವಾಗಿ ಮಲಗಿದೆ. ಅದರ ಬಾಯಿ ಮಾತ್ರ ಹೊರಚಾಚಿದೆ. ಸುಪ್ತವಾದದ್ದು ಅಂದಮೇಲೆ ಮತ್ತೆ ಯಾವಾಗ ಬೇಕಾದರೂ ಮೇಲೆದ್ದು ಜ್ವಾಲೆ ಉಗುಳಬಹುದು. ಆದರೆ ಕೊಳದಂತೆ ನೀರು ನಿಂತಿರುವ ಅಗ್ನಿಪರ್ವತದ ಬಾಯಿಯ ಸುತ್ತಾ ಮುತ್ತ ಇರುವ ಹಸಿರನ್ನು ನೋಡಿದರೆ ಅದು ಜ್ವಾಲಮುಖಿ ಅಂತ ತಿಳಿಯಲು ಸಾಧ್ಯವೇಯಿಲ್ಲ. ನೀರು ಬಗ್ಗಡವಾಗಿದ್ದು ಕಪ್ಪು ಕೆಸರಿನಿಂದ ಕೂಡಿದೆ. ಪಕ್ಕದಲ್ಲೇ ಜ್ವಾಲಮುಖಿಯ ಸ್ಫೋಟದಿಂದಾಗಿರುವ ಭೂಕುಳಿಯಲ್ಲಿ ಏಳು ಬಣ್ಣಗಳ ಮಣ್ಣು ಐದಾರು ಕಿಲೋಮೀಟರ್ಗಳಷ್ಟು ಹರಡಿಕೊಂಡಿದೆ. ದಕ್ಷಿಣ ಮಾರೀಷಿಯಸ್ನಲ್ಲಿರುವ ಈ ಜಾಗದ ಹೆಸರು “Trou aux Cerf” ಇಲ್ಲಿ ಹುಸಿ ನಿದ್ರೆಯ ಅಪ್ಪುಗೆಯಲ್ಲಿರುವ ಜ್ವಾಲಮುಖಿಯ ಆಳ 85 ಮೀಟರ್, ಅಗಲ 200 ಮೀಟರ್. ಮೇಲ್ನೋಟಕ್ಕೆ ಎಲ್ಲವೂ ವ್ಯಕ್ತ, ಪ್ರಶಾಂತ. ಆದರೆ ಭೂದೇವಿಯ ಒಡಲು ಇಲ್ಲಿ ಸುಪ್ತಜ್ವಾಲೆ. ಇದೂ ಪ್ರಕೃತಿಯ ಒಂದು ಮುಖ! ಅದಕ್ಕೇ ಇರಬೇಕು ತಂಪು ಭೂಗರ್ಭವಾಸಿ ಹಾವುಗಳು ಈ ದೇಶದಲ್ಲಿ ಇಲ್ಲದಿರುವುದು.
ಆ ಸಂಜೆ ಸಮುದ್ರದಂಚಿನಲ್ಲಿ ಹೆಜ್ಜೆ ಹಾಕುವಾಗ, ಅಲ್ಲೊಬ್ಬ ಹಳೇ ಕಾಲದ ಲೂನ ಗಾಡಿಯಂತಹ ಎರಡು ಚಕ್ರದ ವಾಹನಕ್ಕೆ ಒಂದು ನೀಲಿ ಬಣ್ಣದ ಡಬ್ಬ ಕಟ್ಟಿಕೊಂಡು ಆತ ಅನಾನಸು ಹಣ್ಣನ್ನು ಮಾಟವಾಗಿ ಕತ್ತರಿಸಿ ಮಾರುತ್ತಿದ್ದ. ಇನ್ನೇನು ಹೊರಗೆ ತೊಟ್ಟಿಕ್ಕಬೇಕು ಎನ್ನುವ ಬಾಯಿ ಜೊಲ್ಲನ್ನು ಒಳಗೆ ಸರಿಸಿಕೊಳ್ಳುತ್ತಾ ಅವನಲ್ಲಿಗೆ ಹೋಗಿ ಒಂದು ಪೈನಾಪಲ್ ಕೊಡಿ ಎಂದೆ. ಅದಕ್ಕಾತ “ನೀನು ಇಂಡಿಯನ್ನ್ ಏನು?” ಎಂದು ಕೇಳಿದ. ಓಹೋ, 54 ಇಂಚಿನಷ್ಟು ಎದೆಯುಬ್ಬಿದ ಭಾವದಲ್ಲಿ ಹೌದು ಹೌದು ಎಂದೆ. ಅದಕ್ಕಾತ ಹಾಗಾದರೆ ನಿನಗೆ ನಾನು ಹಣ್ಣು ಮಾರಲ್ಲ ಎಂದ. ಕಾರಣ ಕೇಳಿದೆ ಆತ ಸಿಟ್ಟಿನಿಂದ ಸೋಟೆ ತಿರುವಿದ. ಪಕ್ಕದಲ್ಲಿಯೇ ಇದ್ದ ಜಲಕ್ರೀಡೆ ಟಿಕೆಟ್ ಮಾರುತ್ತಿದ್ದ ಹೆಂಗಸು ಹೇಳಿದಳು “ಇಂಡಿಯನ್ಸ್ ಸಿಕ್ಕಾಪಟ್ಟೆ ಬಾರ್ಗೇನ್ ಮಾಡುತ್ತಾರೆ ಅದಕ್ಕೆ ಅವನು ಇಂಡಿಯನ್ಸ್‍ಗೆ ಮಾರಲ್ಲ ಎನ್ನುತ್ತಾನೆ” ಎಂದು ಹೇಳಿದಳು. ಚೌಕಾಸಿ ಮಾಡದೆ ಹಣ್ಣು ಕೊಂಡು ತಿಂದು ತಣಿದೆ.
ಎಂದೂ ಮೇಲೇಳಬಹುದಾದ ಜ್ವಾಲಮುಖಿಯಿದ್ದರೂ, ಅದಕ್ಕೆ ಇಡೀ ಮಾರಿಷಿಯಸ್ಅನ್ನೇ ಆಪೋಶನ ತೆಗೆದುಕೊಳ್ಳುವ ಸಾಮರ್ಥ್ಯವಿದ್ದರೂ ಪ್ರಕೃತಿಯ ಆದಿಯಂತ್ಯವಿಲ್ಲದ ಸೌಂದರ್ಯ ಸವಿಯಬೇಕಾದಲ್ಲಿ ನೋಡಲೇ ಬೇಕಾದ ಒಂದು ಜಗತ್ತು ಮಾರೀಷಿಯಸ್. ಅಂದಹಾಗೆ, ಮಾರ್ಗದರ್ಶಕ ರಾಕೇಶ್ ಬಗ್ಗೆ ಒಂದು ವಿಷಯ ಹೇಳದೆ ಹೋದರೆ ಮಾರಿಷಿಯಸ್ ನೆನಪು ಅಪೂರ್ಣ. ಆತ ನಮ್ಮ ಮಧ್ಯಪ್ರದೇಶದವನು. ಇಪ್ಪತ್ತು-ಇಪ್ಪತೆರಡು ವರ್ಷ್ಗಳಿಂದ ಮಾರಿಷಿಯಸ್‍ನಲ್ಲಿ ಟೂರಿಸ್ಟ್ ಗೈಡ್ ಆಗಿದ್ದಾನೆ. ಟೆಂಪೋ ತರದ ವಾಹನ ಚಾಲಕನೂ ಹೌದು. ಅವನು ನಮ್ಮ ರಾಕೇಶ್ ರೋಷನ್‍ನಂತೆ ಕಾಣುತ್ತಾನಂತೆ ಅದಕ್ಕೇ ಹೆಸರನ್ನು ರಾಕೇಶ್ ಎಂದು ಬದಲಾಯಿಸಿಕೊಂಡಿದ್ದ. ಮುಖೇಶ್‍ನ ಧ್ವನಿಯಲ್ಲಿ ರಫಿ ಹಾಡುಗಳನ್ನು ಹಾಡುತ್ತಿದ್ದ.
ಜಗದ್ಗುರು ಶ್ರೀ ಶಿವರಾತ್ರೀಶ್ವರ ಸಂಸ್ಥಾನದ ಮಹಾಸ್ವಾಮಿಗಳು ಮಾರಿಷಿಯಸ್‍ನಲ್ಲಿನ ತಮ್ಮ ಸಂಸ್ಥೆಗಳನ್ನು ಇಲ್ಲಿನವರಿಗೆ ತೋರಿಸಬೇಕು ಎನ್ನುವ ಮಹದಾಶಯದಲ್ಲಿ ಏರ್ಪಡಿಸಿದ್ದ ಈ ಪ್ರವಾಸಕ್ಕೆ ಪಪ್ಪನ ಜೊತೆ ಹೋಗಿದ್ದೆ. ರಾಕೇಶ್‍ನ ಪಕ್ಕದ ಸೀಟು ನನ್ನದು. ಅವನು ಹಿಂದಿಯಲ್ಲಿ ಹೇಳಿದ್ದನ್ನು ನಾನು ಕನ್ನಡಾನುವಾದ ಮಾಡಿ ಎಲ್ಲರಿಗೂ ಹೇಳುತ್ತಿದ್ದೆ. ನಡುನಡುವೆ ನಾವಿಬ್ಬರೂ ಹಿಂದಿ ಸಿನೆಮಾ ಹಾಡುಗಳನ್ನು ಹಾಡುತ್ತಿದ್ದೆವು. ಎಲ್ಲರಿಗೂ ಒಂದು ಅಂಗಡಿ, ಒಂದು ಹೋಟೆಲ್ ಆದರೆ ನನ್ನನ್ನು ಅಕ್ಕರೆಯಿಂದ ಬೇರೆ ಜಾಗಕ್ಕೆ ಕರೆದುಕೊಂಡು ಹೋಗುತ್ತಿದ್ದ. ಮುತುವರ್ಜಿಯಿಂದ ನೋಡಿಕೊಂಡ, ಇಷ್ಟಾದರೂ ಆತನ ನಿಜದ ಹೆಸರು ಹೇಳಲಿಲ್ಲ ಅವ. ನಾವಿಬ್ಬರು ಕೊನೆಯ ದಿನ ಏಪೋರ್ಟ್ ತಲುಪುವ ದಾರಿಯಲ್ಲಿ ಹಾಡಿದ್ದು “ದೋ ಲಬ್ಜ಼ಓಂ ಕೀ ಹೇ ದಿಲ್ ಕಿ ಕಹಾನಿ ಯಾ ಹೆ ಮೊಹಬ್ಬತ್ ಯಾ ಹೇ ಜವಾನಿ. . .”
*

ಅಂಜಲಿ ರಾಮಣ್ಣ ಲೇಖಕಿ, ಕವಯಿತ್ರಿ, ಅಂಕಣಗಾರ್ತಿ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ. ‘ರಶೀತಿಗಳು – ಮನಸ್ಸು ಕೇಳಿ ಪಡೆದದ್ದು’, ‘ಜೀನ್ಸ್ ಟಾಕ್’ ಇವರ ಲಲಿತ ಪ್ರಬಂಧಗಳ ಸಂಕಲನ.