ಪ್ರಜ್ಞಾ ಅವರ ಸ್ತ್ರೀ ಪಾತ್ರಗಳ ಜೀವನದಿಗೆ ಗಂಡನೊಬ್ಬನೇ ಜಗತ್ತಲ್ಲ; ಅಥವಾ ಸಂಸಾರವೇ ಸರ್ವಸ್ವವಾಗಿ ತನ್ನ ಸೃಜನಶೀಲತೆಯನ್ನು ಅದರ ತೊಡಕುಗಳ ಬಂಧನದಲ್ಲಿ ಕಳೆದುಕೊಳ್ಳುವ ಬಗೆಯೂ ಇಲ್ಲಿಲ್ಲ. ‘ತುದಿಬೆಟ್ಟದ ನೀರ ಹಾಡುʼ ಕತೆಯ ಸುಬೋಧಿನಿ ತನಗೆ ಸಹಾನುಭೂತಿ ತೋರಿಸಲು ಬಂದ ಗೆಳೆಯ ಪಾರ್ಥನಿಗೆ ಹೇಳುತ್ತಾಳೆ: ‘ನನ್ನೊಳಗಿನ ಚೈತನ್ಯದ ನದಿಗೆ ಮಗಳು, ಸೊಸೆ, ಅಮ್ಮ, ಗೆಳತಿ, ಉದ್ಯೋಗಿ, ಲೇಖಕಿ ಅಂತ ನೂರಾರು ಬಗೆಯ ಚಲನೆಗಳಿವೆ….
ಪ್ರಜ್ಞಾ ಮತ್ತಿಹಳ್ಳಿ ಹೊಸ ಕಥಾ ಸಂಕಲನ “ಬಿಟ್ಟ ಸ್ಥಳ”ಕ್ಕೆ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಬರೆದ ಮುನ್ನುಡಿ

 

ಸಹಜ ಉತ್ಸಾಹದ ಕಥಾ ಜಗತ್ತು

ಕವಿತೆ, ಪ್ರಬಂಧ, ಅಂಕಣ ಬರಹ, ಪ್ರವಾಸ ಕಥನ – ಹೀಗೆ ಅನೇಕ ಪ್ರಕಾರಗಳಲ್ಲಿ ಕೃಷಿ ಮಾಡಿದ್ದರೂ ಪ್ರಜ್ಞಾ ಮೂಲತಃ ಕತೆಗಾರ್ತಿ. ಅವರ ಅಪ್ಪನ ಅಪ್ಪ ಸುಬ್ಬಣ್ಣಜ್ಜ ಸುತ್ತಲಿನ ಜನರೆಲ್ಲ ತಲೆದೂಗುವಂತೆ ಕತೆ ಹೇಳುತ್ತಿದ್ದರಂತೆ; ಅವರ ಅಪ್ಪನಿಗೂ – ಕೇಳುವ ಜನ ಮಂತ್ರಮುಗ್ಧರಾಗುವಂತೆ ಕತೆ ಹೇಳುವ ಕಲೆ ಸಿದ್ಧಿಸಿತ್ತಂತೆ. ಈ ಪರಿಸರದಲ್ಲಿ ಬೆಳೆದ ಪ್ರಜ್ಞಾ ಚಿಕ್ಕಂದಿನಿಂದಲೇ ಕಥನ ಕಲೆಗೆ ಆಕರ್ಷಿತರಾದದ್ದು ಸಹಜವೇ!

ಎಳೆಯ ಮನಸ್ಸು ಕಥಾಲೋಕದಲ್ಲಿ ವಿಹರಿಸುತ್ತಿತ್ತು. ಕತೆಯೊಂದು ರೂಪ ತಾಳುವ ಬಗ್ಗೆ ಪ್ರಜ್ಞಾಗೆ ಸದಾ ಬೆರಗು. ಬರೆಯಲು ಶುರು ಮಾಡುವಾಗ ಸಣ್ಣ ಚುಕ್ಕಿಯಂತೆ ಕಾಣುವ ಕತೆ, ಬರೆಯುತ್ತ ಹೋದಂತೆ ಎಳೆಯಾಗಿ, ಬಳ್ಳಿಯಾಗಿ ಹಬ್ಬುತ್ತಾ ಇಡೀ ಅಂಗಳ ತುಂಬುವ ರಂಗೋಲಿಯಂತೆ ವ್ಯಾಪಿಸಿಕೊಳ್ಳುವ ಬಗೆ ಅವರಿಗೊಂದು ವಿಸ್ಮಯ. ಈ ವಿಸ್ಮಯವೇ ಅವರ ಕತೆಗಳ ರಚನಾವಿನ್ಯಾಸವನ್ನು ರೂಪಿಸಿರುವಂತೆ ತೋರುತ್ತದೆ. ಕತೆ ಅವರಿಗೆ ಹೇಳುವಂಥದಲ್ಲ; ತನ್ನೊಳಗನ್ನು, ಸುತ್ತಲಿನ ಜಗತ್ತನ್ನು ಕಂಡುಕೊಳ್ಳುವ ಮಾಧ್ಯಮ.

ಪ್ರಜ್ಞಾ ಮತ್ತಿಹಳ್ಳಿ ಯಕ್ಷಗಾನ ಕಲಾವಿದೆ. ಬಾಲ್ಯದಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಶಾಸ್ತ್ರೀಯ ತರಬೇತಿ ಪಡೆದು ‘ಸಹ್ಯಾದ್ರಿ ಮಕ್ಕಳ ಯಕ್ಷಗಾನ ಕೇಂದ್ರ’ದ ಪ್ರಮುಖ ಕಲಾವಿದೆಯಾಗಿ ಕರ್ನಾಟಕ ಮಾತ್ರವಲ್ಲ; ಆಂಧ್ರ ಪ್ರದೇಶ, ದೆಹಲಿ ಮುಂತಾದ ಕಡೆಗಳಲ್ಲೂ ನೂರಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ನಂತರ ಸಹ್ಯಾದ್ರಿ ಮಹಿಳಾ ಯಕ್ಷಗಾನ ಸಮೂಹದಲ್ಲೂ ಪ್ರಜ್ಞಾ ಪ್ರಮುಖ ಪಾತ್ರಧಾರಿ. ತಾಳಮದ್ದಲೆಯಲ್ಲೂ ಆಕೆ ಪಾಲ್ಗೊಂಡಿದ್ದಾರೆ. ಈ ಹಿನ್ನೆಲೆಯೂ ಅವರ ಕಥಾಜಗತ್ತಿಗಿದೆ. ಏನನ್ನಾದರೂ ಒಂದು ಪ್ರಸಂಗವನ್ನಾಗಿ ರೂಪಾಂತರಿಸಿ ಹೇಳಬಲ್ಲ ಕೌಶಲ ಅವರಿಗೆ ಸಹಜವೆಂಬಂತೆ ಸಿದ್ಧಿಸಿದೆ.

(ಪ್ರಜ್ಞಾ ಮತ್ತಿಹಳ್ಳಿ)

ಪ್ರಜ್ಞಾ ಮತ್ತಿಹಳ್ಳಿ ಅವರ ಕತೆಗಳ ಪ್ರಪಂಚ ಪ್ರಧಾನವಾಗಿ ಸ್ತ್ರೀ ಜಗತ್ತು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಅನುಭವಿಸುವ ಅನೇಕ ಬಗೆಯ ಸಮಸ್ಯೆಗಳು ಹಾಗೂ ಅವುಗಳಿಗೆ ಇಲ್ಲಿಯ ಸ್ತ್ರೀಯರು ತಮ್ಮದೇ ಆದ ರೀತಿಯಲ್ಲಿ ಕಂಡುಕೊಳ್ಳುವ ಪರಿಹಾರದ ಸಾಧ್ಯತೆಗಳು ಇಲ್ಲಿಯ ಕತೆಗಳ ಸ್ವರೂಪವನ್ನು ರೂಪಿಸಿವೆ. ಸಮಸ್ಯೆಗಳ ನಡುವೆಯೇ ಜೀವ ಜಾತ್ರೆಯ ಸಂಭ್ರಮವೂ ಇದೆ. ಇದೇ ಪ್ರಜ್ಞಾ ಕತೆಗಳ ವೈಶಿಷ್ಟ್ಯ. ಸಮಸ್ಯೆಯೆಂದು ತಲೆಮೇಲೆ ಕೈಹೊತ್ತು ಕುಳಿತು ಕೊರಗದೆ, ವಾಸ್ತವವನ್ನು ಮರೆಯದೆ, ಜೀವನೋತ್ಸಾಹ-ವನ್ನು ಕಳೆದುಕೊಳ್ಳದೆ ಬದುಕನ್ನು ಎದುರಿಸುವ ಬಗೆ ಗಮನಿಸಬೇಕಾದಂಥದು.

‘ಕರಣ ಗಣದ ರಿಂಗಣ’ ಕತೆಯ ಬಾರಕೂರಮ್ಮ ಎಂದೇ ಪರಿಚಿತಳಾದ ಶರಾವತಿ ಹೇಳುವ ಈ ಮಾತುಗಳನ್ನು ಗಮನಿಸಿ: ‘ಹೊಲದಾತಿಲ್ಲಿ ವೈನಿ, ಇನ್ನು ಮತ್ತೆ ಹರಿಯೂತಂಕ ಚಿಂತಿಲ್ಲ ನೋಡ್ರಿ, ನಮ್ಮ ಹೆಣ್ಮಕ್ಕಳ ಕೆಲಸಾನ ಹೀಂಗರಿ, ಹರಿದಾಗೊಮ್ಮೆ ಹೊಲಿಯೋದು. ಅದೆಷ್ಟರ ಹರಿತಿರಿ ನೋಡೋಣು ಅಂತ ಸವಾಲ ಹಾಕೂದುʼ. ಶರಾವತಿ ಅನೇಕ ಸವಾಲುಗಳ ನಡುವೆ ಬದುಕಿದರೂ ಎಂದೂ ಜೀವನೋತ್ಸಾಹ ಕಳೆದುಕೊಂಡವಳಲ್ಲ. ಅಷ್ಟೇನೂ ಕಲಿಯದ, ಆದರೆ ಸಮೃದ್ಧ ಜೀವನಾನುಭವದ ಅವಳು ಕಡಿಮೆ ಬಾಡಿಗೆಯ ಚಾಳಿನ ಮನೆಯಲ್ಲಿದ್ದುಕೊಂಡೇ, ಆಚೀಚೆ ಜನರನ್ನು ಅಕ್ಕರೆಯಿಂದ ಹಚ್ಚಿಕೊಂಡು, ಆ ಚಾಳಿನ ಅನಭಿಷಿಕ್ತ ಸಾಮ್ರಾಜ್ಞಿಯಂತೆ, ಸಣ್ಣ ಪಗಾರದಲ್ಲಿಯೇ ಚಂದ ಸಂಸಾರ ನಡೆಸುವ ಅವಳ ಕೌಶಲ, ಜೊತೆಗೆ ತನ್ನಂತೆಯೇ ಬದುಕಲು ಹರಸಾಹಸ ಪಡುತ್ತಿರುವ ಸಹಜೀವಿಗಳ ಮುಖ ಇಳಿಬೀಳದಂತೆ ಅವರೆಲ್ಲರ ಉತ್ಸಾಹವನ್ನು ಕಾಯ್ದುಕೊಳ್ಳುವ ಬಗೆ ಇಲ್ಲಿಯ ಸ್ತ್ರೀ ಸಂಕುಲದ ಒಂದು ಪ್ರಾತಿನಿಧಿಕ ಮಾದರಿ. ಹರಕಲು ಬಟ್ಟೆಗಳನ್ನೆಲ್ಲ ಸೇರಿಸಿ ಸುಪ್ಪತ್ತಿಗೆಯ ಕೌದಿ ಹೊಲೆಯುವ ಕಲೆ ಪರಿಪಾಟಲಿನ ವ್ಯಕ್ತಿಗಳನ್ನೇ ಕೂಡಿಸಿಕೊಂಡು ಸಂಭ್ರಮ ಪಡುವ ಜೀವನ ವಿಧಾನವಾಗಿ ರೂಪಾಂತರಗೊಳ್ಳುವಲ್ಲಿ ಪ್ರಜ್ಞಾ ಮತ್ತಿಹಳ್ಳಿ ಅವರ ಕತೆಗಳ ಮಹತ್ವವಿದೆ.

ಪ್ರಜ್ಞಾ ಅವರ ಸ್ತ್ರೀ ಪಾತ್ರಗಳ ಜೀವನದಿಗೆ ಗಂಡನೊಬ್ಬನೇ ಜಗತ್ತಲ್ಲ; ಅಥವಾ ಸಂಸಾರವೇ ಸರ್ವಸ್ವವಾಗಿ ತನ್ನ ಸೃಜನಶೀಲತೆಯನ್ನು ಅದರ ತೊಡಕುಗಳ ಬಂಧನದಲ್ಲಿ ಕಳೆದುಕೊಳ್ಳುವ ಬಗೆಯೂ ಇಲ್ಲಿಲ್ಲ. ‘ತುದಿಬೆಟ್ಟದ ನೀರ ಹಾಡುʼ ಕತೆಯ ಸುಬೋಧಿನಿ ತನಗೆ ಸಹಾನುಭೂತಿ ತೋರಿಸಲು ಬಂದ ಗೆಳೆಯ ಪಾರ್ಥನಿಗೆ ಹೇಳುತ್ತಾಳೆ: ‘ನನ್ನೊಳಗಿನ ಚೈತನ್ಯದ ನದಿಗೆ ಮಗಳು, ಸೊಸೆ, ಅಮ್ಮ, ಗೆಳತಿ, ಉದ್ಯೋಗಿ, ಲೇಖಕಿ ಅಂತ ನೂರಾರು ಬಗೆಯ ಚಲನೆಗಳಿವೆ…. ಹೊಳೆಯಲ್ಲಿ ಕೊಚ್ಚಿ ಹೋಗುವಷ್ಟು ಹುಚ್ಚಿಯಾಗಲೀ ಅಥವಾ ಮಕರಂದನನ್ನು ಬಿಟ್ಟು ಹೋಗುವಷ್ಟು ಮುಗ್ಧಳಾಗಲೀ ಅಲ್ಲ. ನನ್ನ ಮಕ್ಕಳಿಗೆ ಅವನ ಅಗತ್ಯವಿದೆ. ಆತ ಕೆಟ್ಟ ಗಂಡನಾದರೂ ಒಳ್ಳೆಯ ಅಪ್ಪನೆಂಬುದನ್ನು ನಾನು ಬಲ್ಲೆ. ಅವನನ್ನು ನಾನು ಪ್ರೀತಿಸುವುದು ಕಷ್ಟವಾಗಬಹುದು, ಆದರೆ ದ್ವೇಷಿಸಲಾರೆ’.

ಭಾವೋದ್ವೇಗಕ್ಕೊಳಗಾಗದ ಈ ಸಮಚಿತ್ತ, ಬದುಕನ್ನು ಅನೇಕ ಮಗ್ಗುಲುಗಳಿಂದ ನೋಡುವ ದೃಷ್ಟಿಕೋನವನ್ನು, ವಾಸ್ತವವನ್ನು ಒಪ್ಪಿಕೊಳ್ಳುವ ದಿಟ್ಟತನವನ್ನು ಪ್ರಜ್ಞಾ ಮತ್ತಿಹಳ್ಳಿಯ ಕಥಾಜಗತ್ತು ಅನಾವರಣಗೊಳಿಸುತ್ತಾ ಹೋಗುತ್ತದೆ. ಇಲ್ಲಿಯೇ ಗಂಡು-ಹೆಣ್ಣಿನ ಸಂಬಂಧದ ಸೂಕ್ಷ್ಮ ಸಂಗತಿಯೊಂದನ್ನು ಪ್ರಜ್ಞಾ ಸಹಜವೆಂಬಂತೆ ದಾಖಲಿಸಿಬಿಡುತ್ತಾರೆ.

ಸಮಸ್ಯೆಗಳ ನಡುವೆಯೇ ಜೀವ ಜಾತ್ರೆಯ ಸಂಭ್ರಮವೂ ಇದೆ. ಇದೇ ಪ್ರಜ್ಞಾ ಕತೆಗಳ ವೈಶಿಷ್ಟ್ಯ. ಸಮಸ್ಯೆಯೆಂದು ತಲೆಮೇಲೆ ಕೈಹೊತ್ತು ಕುಳಿತು ಕೊರಗದೆ, ವಾಸ್ತವವನ್ನು ಮರೆಯದೆ, ಜೀವನೋತ್ಸಾಹ-ವನ್ನು ಕಳೆದುಕೊಳ್ಳದೆ ಬದುಕನ್ನು ಎದುರಿಸುವ ಬಗೆ ಗಮನಿಸಬೇಕಾದಂಥದು.

ಪಾರ್ಥ ಸುಬೋಧಿನಿಗೆ ಸಂಕಷ್ಟ ಒದಗಿದೆ ಎಂದು ಭಾವಿಸಿ, ಅವಳ ಅಸಹಾಯಕತೆಯ ಆ ಸಂದರ್ಭದಲ್ಲಿ ಸಹಾನುಭೂತಿ ತೋರಿಸುತ್ತಲೇ ತನ್ನ ಮನಸ್ಸಿನಲ್ಲಿ ರಮ್ಯ ಭಾವನೆಯೊಂದನ್ನು ಪೋಷಿಸುತ್ತಿರುತ್ತಾನೆ. ಸುಬೋಧಿನಿ ಪಾರ್ಥನ ಮನಸ್ಸನ್ನು ಓದಿದವಳಂತೆ ‘ಸಿಕ್ಕಿದ್ದೇ ಚಾನ್ಸು ಅಂತ ನೀನು ಬಾಸಿಂಗ ಕಟ್ಟಿಕೊಳ್ಳುವಷ್ಟು ದುಷ್ಟನಾಗಿಲ್ಲ ಅಂದುಕೊಂಡಿದ್ದೇನೆ’ ಎಂದು ಮುಗುಳ್ನಗುತ್ತಾಳೆ. ಸುಬೋಧಿನಿ, ಮಕರಂದ, ಪಾರ್ಥ ಇವರ ಸಂಬಂಧಗಳ ಸಂಕೀರ್ಣತೆ ಪ್ರಜ್ಞಾ ಕತೆಗಳಲ್ಲಿ ಕೌದಿಯ ಹೆಣಿಗೆಯೊಳಗೇ ಸೇರಿದಂತೆ ಬರುತ್ತದೆ. ‘ಬಿಟ್ಟಸ್ಥಳ’ದ ಅಮೇಯ ಹಾಗೂ ಹರ್ಷಳ ಸಂಬಂಧದ ಸ್ವರೂಪವನ್ನೂ ನಾವಿಲ್ಲಿ ಗಮನಿಸಬಹುದು.

‘ಹೂಬುಟ್ಟಿ’ ಯಂತಹ ಕತೆ ನಮ್ಮ ಕಾಲದ ಎರಡು ಜಗತ್ತುಗಳನ್ನು ಮುಖಾಮುಖಿ- ಯಾಗಿಸುತ್ತದೆ. ಸಾಗರದ ಬಳಿಯ ಜೇನುಮನೆಯಲ್ಲಿ ಬಾಲ್ಯ ಕಳೆದ ವಿದ್ಯುನ್ಮತಿ ಕುಮಟಾದಲ್ಲಿ ತನ್ನ ಸಾಂಸಾರಿಕ ಬದುಕಿಗೆ ತೊಡಗುತ್ತಾಳೆ. ಅನೇಕ ಸವಾಲುಗಳ ನಡುವೆ ಬದುಕು ಕಟ್ಟಿಕೊಳ್ಳುವ ವಿದ್ಯುನ್ಮತಿಗೆ ಈಗ ಮಗ-ಸೊಸೆ ಉತ್ತಮ ಸ್ಥಿತಿಯಲ್ಲಿರುವುದು ನೆಮ್ಮದಿಯ ಸಂಗತಿ. ಹಳ್ಳಿಯ ತನ್ನ ಕಾಲದ ಅಂಗಡಿಮುಂಗಟ್ಟು-ಗಳಿಗೂ, ಈಗಿನ ಆಧುನಿಕ ಮಾಲ್‍ ಗೂ ಇರುವ ಅಂತರ ಅವಳಿಗೆ ದಿಗ್ಭ್ರಮೆ ಉಂಟುಮಾಡುತ್ತದೆ. ಮಾಲ್ ಒಂದು ಮಾಯಾಲೋಕ; ಬಯಸಿದ್ದೆಲ್ಲವೂ ಒಂದೆಡೆ ಸಿಗುವ ಅದ್ಭುತ ಉಗ್ರಾಣ; ಸಾಗರದ ಬಸಳೆ ಸೊಪ್ಪಿನಿಂದ ಹಿಡಿದು ಲ್ಯೂಟಸ್ ಎಲೆಯವರೆಗೆ ವಿವಿಧ ದೇಶದ ವಸ್ತುಗಳು ಅಲ್ಲಿ ಶಿಸ್ತಾಗಿ ಪ್ರದರ್ಶನಗೊಳ್ಳುತ್ತಿದ್ದವು. ತಮಗೆ ಬೇಕಾದ ವಸ್ತುಗಳನ್ನು ಪಟ್ಟಿಮಾಡಿಕೊಂಡು ಅಂಗಡಿಗೆ ಹೋಗಿ ತರುತ್ತಿದ್ದ ರೀತಿಗೂ, ಇಲ್ಲಿ ಅಗತ್ಯವಿರಲಿ, ಇಲ್ಲದಿರಲಿ, ತೆಗೆದು, ತೆಗೆದು ಚಲಿಸುವ ಬುಟ್ಟಿಗೆ ತುಂಬುವ ಈ ಬಗೆಗೂ ಇರುವ ವ್ಯತ್ಯಾಸ ಕೇವಲ ಹಣಕ್ಕೆ ಮಾತ್ರ ಸಂಬಂಧಿಸಿದ್ದಲ್ಲ; ಮನೋಭಾವಕ್ಕೂ ಸಂಬಂಧಿಸಿದ್ದು. ಕೊಳ್ಳುಬಾಕ ಸಂಸ್ಕೃತಿ ಆಧುನಿಕ ಬದುಕಿನ ಕೊಡುಗೆ. ತನಗೆ ಅಗತ್ಯವಿಲ್ಲದ್ದನ್ನೂ ಕೊಳ್ಳುವಂತೆ ಪ್ರೇರೇಪಿಸುವ, ಆತನ ಮನಃಸ್ಥಿತಿಯನ್ನು ತನ್ನ ವಶೀಕರಣಕ್ಕೆ ಒಳಗು ಮಾಡಿಕೊಳ್ಳುವ ತಂತ್ರವಿಧಾನಗಳು ವಿದ್ಯುನ್ಮತಿಗೆ ವಿಸ್ಮಯ ಉಂಟುಮಾಡಿದವು.

(ನರಹಳ್ಳಿ ಬಾಲಸುಬ್ರಹ್ಮಣ್ಯ)

ಈ ಮುಖಾಮುಖಿಯಲ್ಲಿ ಮಾನವ ಸಂಬಂಧಗಳ ಸ್ವರೂಪವೇನು ಎಂಬ ಪ್ರಶ್ನೆಗೆ ಎದುರಾಗುವುದರಲ್ಲಿ ಕತೆ ಮುಖ್ಯವಾಗುತ್ತದೆ. ವಿದ್ಯುನ್ಮತಿಗೆ ಒಂದು ಆಸೆ: ಅತ್ತೆ ಜಾಹ್ನವಿಗೆ ಪ್ರಿಯವಾಗಿದ್ದು, ನಂತರ ಅವಳಿಂದ ದೂರವಾದ ಬೆಳ್ಳಿಯ ಹೂ ಬುಟ್ಟಿಯನ್ನು ಅತ್ತೆಯ ನೆನಪಿಗಾಗಿ ಮನೆಗೆ ತರಬೇಕೆಂಬುದು. ಮಗ ಸೊಸೆ ಅವಳ ಆಸೆಗೆ ಸ್ಪಂದಿಸಿ ಹೂಬುಟ್ಟಿಗೆ ಆರ್ಡರ್ ಮಾಡುತ್ತಾರೆ. ಆ ನಡುವೆ ಒಂದು ಘಟನೆ ನಡೆಯುತ್ತದೆ. ರಾಧ ಎಂಬ ಮನೆಕೆಲಸದಾಕೆ ತನ್ನ ಮಗಳನ್ನು ವಿದ್ಯುನ್ಮತಿಯ ಮಗ-ಸೊಸೆ ನಡೆಸುತ್ತಿದ್ದ ಟ್ಯಟೋರಿಯಲ್‍ ಗೆ ಸೇರಿಸಿರುತ್ತಾಳೆ. ಅದಕ್ಕೆ ಸಂಬಂಧಿಸಿದ ಫೀಸ್ ಕೊಡಲು ಮನೆಗೆ ಬರುತ್ತಾಳೆ. ಆಕೆಯ ವಿವರಗಳನ್ನು ಕೇಳಿ ವಿದ್ಯುನ್ಮತಿಯ ಮನಸ್ಸು ಮರುಗುತ್ತದೆ; ಫೀ ಕಾರ್ಡಿನಲ್ಲಿದ್ದ ಹುಡುಗಿಯ ಫೋಟೋ ತನ್ನ ಅತ್ತೆ ಜಾಹ್ನವಿಯ ನೆನಪು ತರುತ್ತದೆ. ಹೂ ಬುಟ್ಟಿಯ ಆರ್ಡರನ್ನು ಕ್ಯಾನ್ಸಲ್ ಮಾಡಿ, ಅದೇ ಹಣವನ್ನು ವಿದ್ಯುನ್ಮತಿ ಆ ಹುಡುಗಿಯ ವಿದ್ಯಾಭ್ಯಾಸಕ್ಕೆ ನೀಡುತ್ತಾಳೆ. ಮಾತ್ರವಲ್ಲ; ‘ನಾಡಿದ್ದು ನಮ್ಮ ಅತ್ತೆ ಶ್ರಾದ್ಧವಿದೆ, ಮಗಳನ್ನು ಕರೆದುಕೊಂಡು ಬಂದು ಊಟ ಮಾಡಿಕೊಂಡು ಹೋಗಿಮ್ಮಾʼ ಎಂದು ಹೇಳುತ್ತಾಳೆ. ಆ ಕ್ಷಣ ರಾಧೆಯ ಮುಖ ಹೂವಿನಂತೆ ಅರಳುತ್ತದೆ ಎಂಬುದು ಕತೆಯ ಕಡೆಯ ಸಾಲು. ‘ಹೂಬುಟ್ಟಿ’ ಈಗ ಹೊಸ ಅರ್ಥವನ್ನೇ ಪಡೆದುಕೊಂಡುಬಿಡುತ್ತದೆ.

ಸಂಪ್ರದಾಯದ ಆಚರಣೆಗೆ ಹೊಸ ಆಯಾಮ ಸಹಜವೆಂಬಂತೆ ಪ್ರಾಪ್ತವಾಗಿಬಿಡುತ್ತದೆ. ಇದೊಂದು ರೀತಿಯಲ್ಲಿ ಪರಿಚಿತ ವಸ್ತುವೇ ಅನ್ನಿಸಿದರೂ ಅದನ್ನು ಪ್ರಜ್ಞಾ ನಿರ್ವಹಿಸಿರುವ ಕ್ರಮದಲ್ಲಿ ಅವರ ಕಥನ ಕೌಶಲ ಎದ್ದು ಕಾಣುತ್ತದೆ. ಸಮಕಾಲೀನ ವಾಣಿಜ್ಯಸಂಸ್ಕೃತಿಯ ಎದುರು ಮಾನವೀಯತೆಯ ಸೆಲೆಯನ್ನು ಸೃಷ್ಟಿಸುವುದರಲ್ಲಿ ಪ್ರಜ್ಞಾರ ಸೃಜನಶೀಲ ಪ್ರತಿಭೆ ಯಶಸ್ವಿಯಾಗಿದೆ.

ಪ್ರಜ್ಞಾರ ಕಥಾಜಗತ್ತಿನಲ್ಲಿ ಬರುವ ಸ್ತ್ರೀ ಪಾತ್ರಗಳು ಬದುಕಿನ ಸಹಜ ಲಯದಲ್ಲಿಯೇ ಸಾಮಾಜಿಕ ಬದುಕಿನ ರೀತಿನೀತಿಗಳನ್ನು ‘ಉಲ್ಲಂಘನೆ’ ಮಾಡುವ ಬಗೆ ಕುತೂಹಲಕಾರಿ-ಯಾದುದು. ಯಾವ ಬಗೆಯ ಸಿದ್ಧಾಂತಗಳ ಹಂಗೂ ಇಲ್ಲದೆ ಜೀವನಾನುಭವಗಳ ಹಿನ್ನೆಲೆಯಲ್ಲಿಯೇ ಬದುಕಿನ ಸವಾಲುಗಳನ್ನು ಇಲ್ಲಿಯ ಹರ್ಷ, ಆಯಿ, ಗೋಪಿಕಾ, ಸುಬೋಧಿನಿ, ವಿದ್ಯುನ್ಮತಿ ಮೊದಲಾದವರು ಎದುರಿಸುವ ಬಗೆ ಗೌರಮ್ಮ, ಸರಸ್ವತಿ ರಾಜವಾಡೆಯವರ ಸ್ತ್ರೀ ಪಾತ್ರಗಳನ್ನು ನೆನಪಿಗೆ ತರುತ್ತದೆ. ಹಾಗೆ ನೋಡಿದರೆ ಇಲ್ಲಿನ ಪುರುಷ ಪಾತ್ರಗಳಿಗಿಂತ ಸ್ತ್ರೀ ಪಾತ್ರಗಳಿಗೇ ಹೆಚ್ಚಿನ ಧಾರಣ ಶಕ್ತಿಯಿರುವಂತೆ ಕಾಣಿಸುತ್ತದೆ. ಚಂದಗೋಪನಂತಹ ಪಾತ್ರಗಳನ್ನು ನೋಡಿದಾಗ ಇದು ಹೆಚ್ಚು ಸ್ಪಷ್ಟವಾಗುತ್ತದೆ. ನೋವಿನಲ್ಲಿಯೇ ಮಾಗುತ್ತಾ, ಯಾವ ನೆಲೆಯಲ್ಲಿಯೂ ನಿರಾಸೆಗೆ ಒಳಗಾಗದೆ, ಬದುಕನ್ನು ಚಂದ ಮಾಡಿಕೊಳ್ಳಲು ಹೆಣಗುವ ಇಲ್ಲಿನ ಸ್ತ್ರೀ ಜಗತ್ತು ಪುರುಷಪ್ರಧಾನ ಸಮಾಜಕ್ಕೆ ಸದ್ದಿಲ್ಲದೇ ಸವಾಲೆಸೆಯುತ್ತದೆ. ಇದು ಘೋಷಣೆಯಾಗದೆ ಕಥಾವಿನ್ಯಾಸದಲ್ಲಿಯೇ ಸಾಧ್ಯವಾಗಿರುವುದು ಪ್ರಜ್ಞಾರ ಕಥನ ಶಕ್ತಿಗೆ ಸಂಬಂಧಿಸಿದ ಸಂಗತಿ.

ಪ್ರಜ್ಞಾ ಮತ್ತಿಹಳ್ಳಿಗೆ ಕತೆ ಹೇಳುವುದರಲ್ಲಿ ಸಹಜ ಉತ್ಸಾಹವಿದೆ. ಆದರೆ ಇಲ್ಲಿನ ಕತೆಗಳ ಲಯ ಅದಕ್ಕಿಂತ ಭಿನ್ನವಾಗಿದೆ. ಸಾವಧಾನದ ಗತಿ ಇಲ್ಲಿನ ಕತೆಗಳ ವಿನ್ಯಾಸವನ್ನು ರೂಪಿಸಿದೆ. ವಿವರಗಳ ಮೂಲಕವೇ ಕಥಾ ಒಡಲು ರೂಪುಗೊಳ್ಳುತ್ತದೆ. ಬದುಕಿನಲ್ಲಿ ಅದ್ದಿ ತೆಗೆದಂತಿರುವ ಇಲ್ಲಿನ ಕಥಾಜಗತ್ತಿಗೆ ಜೀವಂತ ಭಾಷೆಯ ಬಲವೂ ಸೇರಿಕೊಂಡು ಈ ಕತೆಗಳ ಓದು ವಿಶಿಷ್ಟ ಅನುಭವವನ್ನು ನೀಡುತ್ತದೆ.


(ಕೃತಿ: ಬಿಟ್ಟ ಸ್ಥಳ (ಕಥಾ ಸಂಕಲನ), ಲೇಖಕರು: ಪ್ರಜ್ಞಾ ಮತ್ತಿಹಳ್ಳಿ, ಬೆಲೆ: 200/-, ಪ್ರಕಾಶನ: ಅಭಿನವ)