ಮೂರನೆಯ ಮಹಡಿಯ ಮೇಲಿನ ಮನೆ ಬಾಗಿಲ ಕರೆಗಂಟೆಯೊತ್ತಿ ನಿಂತಾಗಲೂ ಪಾರಿಜಾತಾಳ ಎದೆಬಡಿತ ನಿಂತಿರಲಿಲ್ಲ. ಅದ್ಯಾರದ್ದೊ ಜೊತೆಗೆ ಬೇರೆ ಇರುತ್ತಾಳಂತಲ್ಲ, ಅವನೂ ಈಗ ಅಲ್ಲೇ ಇದ್ದಾನೋ ಏನೋ, ಹಾಗಿದ್ದರೆ ತುಂಬಾ ಮುಜುಗರವೇ ಸರಿ, ಪರಪುರುಷನನ್ನು ಇಷ್ಟಪಡುವಂಥ ಬುದ್ಧಿ ಈ ತುಳಸಿಗಾದರೂ ಯಾಕೆ ಬಂತಪ್ಪ ಎಂದುಕೊಳ್ಳುತ್ತಲೇ ನಿಂತಿದ್ದಳು. ಬಾಗಿಲು ತೆರೆದ ತುಳಸಿಯನ್ನು ನೋಡಿ ಆಶ್ಚರ್ಯವಾಯಿತು. ಮದುವೆಯಾಗುವಾಗ ಹೇಗಿದ್ದಳೋ ಹೆಚ್ಚು ಕಮ್ಮಿ ಹಾಗೇ ಇದ್ದಾಳೆ. ಹತ್ತುವರ್ಷದ ಕಾಲನ ಧಾಳಿಗೆ ಸ್ವಲ್ಪವೂ ನಲುಗದಿರುವ ಶರೀರ. ಆತ್ಮೀಯವಾಗಿ ಸ್ವಾಗತಿಸಿದಳು.
ಪ್ರಜ್ಞಾ ಮತ್ತಿಹಳ್ಳಿ ಬರೆದ ಕಥೆ “ಸೈಡ್ ವಿಂಗ್” ನಿಮ್ಮ ಈ ಭಾನುವಾರದ ಓದಿಗೆ

 

“ಶರಧಿಗೆ ಸೇತುವನ್ನು” ದಿವಾಕರ ಭಾಗವತ ಎತ್ತುಗಡೆ ಮಾಡುತ್ತಿದ್ದಂತೆ ಶಮಂತಾ ಹೊಸ ಹುರುಪಿನಿಂದ ಕುಣಿತ ಶುರು ಮಾಡಿದಳು. ತನ್ನ ಕಂಠ ಕಸರತ್ತನ್ನು ತೋರಿಸಲು ಇದಕ್ಕಿಂತ ಒಳ್ಳೆಯ ಅವಕಾಶ ಇನ್ನೆಲ್ಲಿ ಸಿಗಬೇಕು ಎಂದುಕೊಂಡ ದಿವಾಕರ ಭಾಗವತ ಕೂಡ ಶರಧಿಗೆ ಶರಧಿಗೆ ಶರಧಿಗೆ ಎಂದು ಒಂದೇ ಶಬ್ದವನ್ನು ಬೇರೆ ಬೇರೆ ಧ್ವನಿಯ ಏರಿಳಿತದೊಂದಿಗೆ ಹೇಳುತ್ತ ಪ್ರೇಕ್ಷಕರ ಚಪ್ಪಾಳೆ ಕಾಯತೊಡಗಿದ. ಸಮುದ್ರದ ಬೇರೆ ಬೇರೆ ರೂಪವಿನ್ಯಾಸಗಳನ್ನು ಅಭಿನಯಿಸುತ್ತ ರಂಗದ ಮುಂತುದಿಗೆ ಹೋದ ಶಮಂತಾ ಪ್ರೇಕ್ಷಕರ ಸಿಳ್ಳೆಯ ಶಬ್ದಕ್ಕೆ ಮತ್ತಷ್ಟು ಹುರುಪುಗೊಂಡಳು. ಹಾಂ ಇನ್ನು ಇವರಿಬ್ಬರೂ ಸೇರಿ ಇದೊಂದೇ ಪದ್ಯಕ್ಕೆ ಅರ್ಧ ಗಂಟೆ ಮಾಡಿಬಿಡುತ್ತಾರೆ. ತನಗೆ ಮುಂದಿನ ಪದ್ಯ ಸಿಗಲು ಸಾಕಷ್ಟು ಕಾಯುವುದು ಅನಿವಾರ್ಯ. ಕೃಷ್ಣನ ವೇಷದಲ್ಲಿದ್ದ ಪಾರಿಜಾತ ಯೋಚಿಸಿತೊಡಗಿದಳು.

ಹೀಗೆಯೇ ಪ್ರತಿ ಪದ್ಯಕ್ಕೂ ಕೆಲಸ ಮಾಡುತ್ತ ಸಾಗಿದರೆ ಇವತ್ತಿನ ಪ್ರಸಂಗ ಮುಗಿಯುವುದೂ ಕೂಡ ತಡವಾಗಬಹುದು. ಹಾಗಾದರೆ ತಾನು ರಾತ್ರಿ ತುಳಸಿಯ ಮನೆಗೆ ಹೋಗಲಾಗುತ್ತದೆಯೆ? ತೀರಾ ತಡವಾಗಿ ಹೋಗಿ ಅವಳ ಮನೆಯ ಬಾಗಿಲು ತಟ್ಟುವುದೆಂದರೆ ಖಂಡಿತವಾಗಿ ಮುಜುಗರದ ವಿಷಯ. ಏಕೆಂದರೆ ಅವಳೇನು ತಾನು ದಿನದಿನ ನೋಡುವ, ಒಡನಾಡುವ ಗೆಳತಿಯಲ್ಲ. ಅದಾಗಲೇ ಹತ್ತು ವರ್ಷವಾಗಿರಬಹುದು ಅವಳ ಭೆಟ್ಟಿಯಾಗಿ. ಅವಳ ಮದುವೆಗೆ ಹೋಗಿದ್ದೆ. ಆಮೇಲೆ ಅವರಿವರ ಬಾಯಲ್ಲಿ ಸುದ್ದಿ ಕೇಳಿದ್ದಷ್ಟೇ. ಇವತ್ತು ಮಧ್ಯಾಹ್ನ ಈ ಊರಿಗೆ ಬಂದಿಳಿದ ಕೂಡಲೇ ಅವಳ ವಿಷಯ ಬಂದಿತ್ತು. ಇವರ ತಂಡದ ಟಾಟಾ ಸುಮೊ ಬಂದಿಳಿದ ಕೂಡಲೇ ಪ್ರತ್ಯಕ್ಷನಾಗಿದ್ದ ಸುಧನ್ವ. ಅವಳಿಗೆ ಅವನ ಗುರುತೂ ಕೂಡ ಸಿಕ್ಕಿರಲಿಲ್ಲ. ದಿವಾಕರ ಭಾಗವತನಿಗೆ ಬೇರೆ ಮೇಳಗಳ ಜೊತೆ ಆಗೀಗ ಈ ಊರಿಗೆ ಬಂದು ರೂಢಿಯಿತ್ತಾದ ಕಾರಣ ಎಲ್ಲಾ ಆಟಕ್ಕೂ ತಪ್ಪದೇ ಬರುವ ಸುಧನ್ವನ ಮುಖಪರಿಚಯವಿತ್ತು. “ಹ್ವಾಯ್ ಆರಾಮನ್ರೋ,” ಎನ್ನುತ್ತ ಹತ್ತಿರ ಬಂದು ಟಾಪಿನ ಮೇಲೆ ಕಟ್ಟಿದ ವೇಷದ ಸಾಮಾನಿನ ಟ್ರಂಕುಗಳನ್ನು ಇಳಿಸಲು, ಚೌಕಿಗೆ ಸಾಗಿಸಲು ಸಂಪೂರ್ಣ ನೆರವಾದ ಸುಧನ್ವನ ಪರಿಚಯ ಹೇಳುತ್ತ ಬೆಳ್ಳೆಣ್ಣೆ ಶ್ರೀಪಾದಣ್ಣನ ಮಗ ಇದೇ ಊರಲ್ಲಿ ಬಿಸಿನೆಸ್ ಮಾಡ್ತಾ, “ಇವರ ಹೆಂಡ್ತಿನೂವಾ ಆಟ ಕುಣಿತು” ಎಂದಾಗ ಥಟ್ಟನೆ ನೆನಪಾಗಿತ್ತು, ಓಹೋ ಇವನು ತುಳಸಿಯ ಗಂಡ, ಅವನ ಕಡೆಗೆ ತಿರುಗಿ “ತುಳಸಿ ಎಂತಾ ಮಾಡ್ತು? ನಾನೂ ಅದೂ ರಾಶಿ ದೋಸ್ತರಾಗಿದ್ಯ. ನಿಮ್ಮ ಮದ್ವಿಗೂ ಬಂದಿದ್ದಿ, ಆಮೇಲೆ ಎಲ್ಲೂ ಸಿಕ್ಕಿದ್ದೇ ಇಲ್ಲೆ, ಈಗೆಂತ ಮಾಡ್ತು?” ಪಾರಿಜಾತಳ ಪ್ರಶ್ನೆಗೆ ಹತ್ತಿರ ಬಂದ ಸುಧನ್ವ “ಪಾರಿಜಾತಾ ಅಂದ್ರೆ ನೀವೇ ಅಲ್ದ? ಮದ್ವೆ ಆದಾರಿಭ್ಯ ನಿಮ್ಮ ಸುದ್ದಿ ರಾಶಿ ಹೇಳಕ್ಯತ್ತ ಇರ್ತಿತ್ತು. ತುಳಸಿಗೆ ನಿಮ್ಮ ಕಂಡ್ರೆ ಭಾರೀ ಅಭಿಮಾನ. ನಂಗೆ ನಿಮ್ಮ ಹತ್ರೆ ಹನಿ ಮಾತಾಡಕ್ಕಾಗಿತ್ತು” ಎಂದ. ಅದಾಗಲೇ ಬಂದಿದ್ದ ಸಂಘಟಕರು “ಬರ್ರೀ ಇಷ್ಟೂರು ಊಟ ಮಾಡಿ ಬರೂಣಂತ, ಆಮ್ಯಾಲ ನಿಮಗ ಮೇಕಪ್ಪಿಗೆ ಭಾಳ ವ್ಯಾಳ್ಳೆ ಬೇಕಂತೀರಲ್ಲ” ಎಂದು ಆಹ್ವಾನಿಸಿದರು. ಹತ್ತಿರದಲ್ಲೇ ಇದ್ದ ಹೋಟೆಲಿಗೆ ಹೋಗಿ ಕೂತಾಗ ಪಾರಿಜಾತಾಳ ಟೇಬಲ್ಲಿನಲ್ಲಿ ಶಮಂತಾ, ದೀಪ್ತಿ, ರಾಧಿಕಾ ಕೂತಿದ್ದರಿಂದ ಸುಧನ್ವ ಭಾಗವತ ಜೊತೆಗೆ ಕುಳಿತುಕೊಂಡ. ಪಾರಿಜಾತಾಳ ತಲೆಯಲ್ಲಿ ತುಳಸಿಯ ಗೆಳೆತನದ ದಿನಗಳ ರೀಲು ಸುತ್ತತೊಡಗಿತ್ತು.

ಪಾರಿಜಾತಾ ಸ್ವಯಂಪ್ರಭಾ ಯಕ್ಷ ಮಹಿಳಾ ಸಂಘ ಸೇರಿದಾಗ ಆಗಿನ್ನೂ ಅಲ್ಲಿ ಹೆಜ್ಜೆ ಅಭ್ಯಾಸ ಮಾಡುತ್ತಿದ್ದ ಸಣ್ಣ ಹುಡುಗಿಯರಲ್ಲಿ ತುಳಸಿ ಕೂಡಾ ಒಬ್ಬಳು. ಅವಳ ಚುರುಕುತನ, ದಿಟ್ಟತನಗಳನ್ನು ಕಂಡು ಬಾಲಗೋಪಾಲ ವೇಷಕ್ಕೆ ಆಯ್ಕೆ ಮಾಡಿದ್ದ ಗುರು ಗೋಪಾಲ ಭಾಗವತರು ಎಲ್ಲಾ ಪ್ರದರ್ಶನಕ್ಕೂ ಕರೆದೊಯ್ಯುತ್ತಿದ್ದರು. ಎಲ್ಲರಿಗಿಂತಲೂ ಸಣ್ಣವಳಾದರೂ ತುಳಸಿ ಮಾತಿನಲ್ಲಿ ತುಂಬಾ ಜೋರು. ಮಾಡುವುದು ಅತಿ ಸಣ್ಣ ಗೋಪಾಲವೇಷವಾದರೂ ಅವಳಿಗೆ ಹೊಳೆಹೊಳೆಯುವ ಆಭರಣಗಳೇ ಬೇಕಿತ್ತು. ಸಣ್ಣ ಸೈಜಿನ ಪ್ರತ್ಯೇಕ ಅಟ್ಟೆಯನ್ನೇ ತಂದು ಪಗಡೆ ಕಟ್ಟಬೇಕಿತ್ತು. ಇಲ್ಲದಿದ್ದರೆ ಬಣ್ಣದ ಪೆಟ್ಟಿಗೆಯ ಶೆಟ್ಟರೊಂದಿಗೆ ದೊಡ್ಡ ಜಗಳವೇ ನಡೆದು ಹೋಗುತ್ತಿತ್ತು. “ಏಯ್ ಶೆಟ್ಟಿ ನಿಂಗಷ್ಟೂ ತಿಳ್ಯುದಿಲ್ಲನ, ನಮ್ಮ ಮ್ಯಾಳದಲ್ಲಿ ಬಾಲಗೋಪಾಲ ವೇಷವೂ ಪ್ರಧಾನವೇಯ ಹ್ವಾಯ್, ನೀ ಹಂಗ ಅಲಕ್ಷ ಮಾಡೂಹಂಗಿಲ್ಲ ನೋಡು” ಎಂದು ಗೋಪಾಲ ಭಾಗವತರೂ ನಗೆಚಾಟಿಕೆಯಲ್ಲೇ ಬೈದಂತೆ ಮಾಡಿ ತುಳಸಿಯನ್ನು ರಮಿಸಬೇಕಾಗುತ್ತಿತ್ತು. ತನ್ನ ಕುಣಿತ ಮುಗಿದು ಮುಖ್ಯ ಕಥಾನಕ ಶುರುವಾಗುತ್ತಿದ್ದಂತೆ ಒಳಗೆ ಬಂದ ತುಳಸಿ ವೇಷ ಬಿಚ್ಚಬೇಕೆಂದು ಅವಸರ ಮಾಡುತ್ತಿದ್ದಳು. ಶೆಟ್ಟರು ಹಾಗೂ ಅವರ ಸಹಾಯಕರೆಲ್ಲ ಅದಾಗ ಹೊರಡಬೇಕಾದ ವೇಷಗಳ ಕೊನೆಯ ತಯಾರಿಯಲ್ಲಿ ಮಗ್ನರಾಗಿರುತ್ತಿದ್ದರು. ಒಳ ಬಂದ ತುಳಸಿ “ಅಯ್ಯೋ ಶೆಟ್ರೆ ನೀವು ಒಂದ್ಸಲ ಬಂದು ನಂಗೀ ಪಗಡೆ ಬಿಚ್ಚಿ ಕೊಡೂದೇಯಾ, ಇಲ್ಲಾದ್ರೆ ಇಲ್ಲೇ ಜೀಂವ ಬಿಡ್ತೆ ನೋಡಿ ಎಂದು ಹೆದರಿಸುತ್ತಿದ್ದಳು. ತುಟಿಯ ಮೇಲುಗಡೆ ಸ್ಪಿರಿಟ್ ಹಚ್ಚಿ ಮೀಸೆ ಅಂಟಿಸಿಕೊಳ್ಳುತ್ತಿದ್ದ ಪಾರಿಜಾತ “ಮೀಸೆ ಇಲ್ಲೆಗಿದ್ದೆ ಕಂಸನ ಪ್ರವೇಶ ಆದ್ರೂ ಚಿಂತಿಲ್ಲ ಮಾರ್ರೆ, ತುಳಸಿ ಪಗಡೆ ಬಿಚ್ಚಿ ಜೀಂವ ಉಳಸ್ರಿ” ಎಂದು ನಗುತ್ತಿದ್ದಳು. ತನ್ನ ಸೋಪು, ಬಾಚಣಿಕೆ, ಟವೆಲ್ಲು ಮುಂತಾದ ಸಕಲ ಸರಾಂಜಾಮುಗಳನ್ನು ನೀಟಾಗಿ ಜೋಡಿಸಿಕೊಂಡು ಪುಟ್ಟ ಕೆಂಪು ಬ್ಯಾಗನ್ನು ಹೊತ್ತು ತರುತ್ತಿದ್ದ ತುಳಸಿಯನ್ನು ಅವಳ ಅಚ್ಚುಕಟ್ಟುತನಕ್ಕಾಗಿ ಶೆಟ್ಟರಾದಿಯಾಗಿ ಎಲ್ಲರೂ ಪ್ರಶಂಸಿಸುವವರೇ.

ಒಂದು ಸಲ ಬೆಂಗಳೂರಲ್ಲಿ ಆಟ ಮುಗಿದ ಮೇಲೆ ಊಟಕ್ಕೆ ಹೋಗುವಾಗ ಪ್ರೇಕ್ಷಕರಲ್ಲಿ ರಾಶಿ ಜನ ಹುಡುಗಿಯರಿದ್ದುದನ್ನು ಕಂಡ ಮೃದಂಗದ ನಾರಾಯಣ ತಲೆ ಬಾಚಿಕೊಂಡು “ಕೂಸೆ ಒಂದ್ ಹನಿ ಪೌಡರ್ ಕೊಡೆ” ಎಂದು ತುಳಸಿಯ ಡಬ್ಬಿ ಇಸಿದುಕೊಂಡಿದ್ದ. “ನಡಿರೊ, ಹೊತ್ತಾತು, ಹೋಟ್ಲು ಬಂದಾಗ್ತಡ, ಅದೆಂತ ಕೊಪ್ಪಣಜ್ಜನ ಖಾನಾವಳಿಯಲ್ಲ, ದೊಡ್ಡೂರಿಗೆ ಬಂದಾಗ ಹ್ಯಾಂಗೆ ಚುರುಕಾಗವು ಏನ್ಕತೆ” ಎಂದು ಗೋಪಾಲ ಭಾಗವತರು ಆವಾಜು ಹಾಕಿದ್ದೇ ತಡ ಎಲ್ಲರೂ ಪಟರಾ ಬಿದ್ದು ಓಡಿದ್ದರು. ರಾತ್ರಿ ವ್ಯಾನಲ್ಲಿ ಕೂತು ಊರಿಗೆ ಹೋಗುವಾಗ ತನ್ನ ಬ್ಯಾಗಲ್ಲಿ ಕೈಯಾಡಿಸಿಕೊಂಡ ತುಳಸಿ “ನಾಣಣ್ಣ ಯನ್ನ ಬಾಚಣಿಕೆ ಎಲ್ಲಿಟ್ಯ, ಹುಡುಕ್ಕೊಡು” ಎಂದು ರಾಗ ಶುರು ಮಾಡೇ ಬಿಟ್ಟಳು. ಬೆಳಿಗ್ಗೆ ಊರಿಗೆ ಹೋಗಿ ನೋಡೋಣವೆಂದರೂ ಕೇಳಲಿಲ್ಲ. ಮುಂದಿನ ಸೀಟಿನಲ್ಲಿದ್ದ ಭಾಗವತರಿಗೆ ವಿಷಯ ತಿಳಿಯಬಾರದೆಂದು ಮೂತ್ರವಿಸರ್ಜನೆಯ ನೆಪದಲ್ಲಿ ಗಾಡಿ ನಿಲ್ಲಿಸಿ ಟಾಪಿನ ಮ್ಯಾಲಿದ್ದ ಟ್ರಂಕು ತೆಗೆದು ಹುಡುಕಿದಾಗ ಬಣ್ಣದ ಪೆಟ್ಟಿಗೆಯಲ್ಲಿ ಸೇರಿಕೊಂಡಿದ್ದ ಹಣಿಗೆ ಸಿಕ್ಕಿತು. ಅದು ಸಿಕ್ಕ ಮೇಲೆಯೇ ತುಳಸಿಯ ಕುಸುಕುಸು ಅಳು ನಿಂತಿತು. ಆವತ್ತಿನಿಂದ ಎಲ್ಲರೂ ಹೆದರುವವರೇ. “ಏಯ್ ಆ ಹುಡುಗಿದೊಂದು ಎಂತಾದೂ ತಕಳಬೇಡ್ರೋ, ಮಹಾ ರ್ವಾತೆ ಅದು,” ಎನ್ನುತ್ತಿದ್ದರು.

ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅವಳ ಅಪ್ಪ ತನ್ನ ಬಡತನಕ್ಕೆ ಹೆದರಿಯೋ ಅಥವಾ ಅವಳ ಹಿಂದೆ ಹುಟ್ಟಿದ್ದ ಮತ್ತೆ ಮೂವರು ತಂಗಿಯರ ಜವಾಬ್ದಾರಿಗೋ ಏನೋ ತುಳಸಿಯನ್ನು ಜಾಸ್ತಿ ಓದಿಸಲೇ ಇಲ್ಲ. ಪಿ.ಯು.ಸಿ.ಯಲ್ಲಿದ್ದಾಗಲೇ ಮದುವೆ ಮಾಡಿಬಿಟ್ಟ. ಅದಾಗಲೇ ಎಂ.ಎ. ಮಾಡುತ್ತಿದ್ದ ಪಾರಿಜಾತ ಮದುವೆಗೆ ಹೋಗಿದ್ದಳು. “ಇದು ಪಾರಿಜಾತಕ್ಕ, ಎಂ.ಎ. ಮಾಡ್ತಾ ಇದ್ದು, ಮುಂದೆ ದೊಡ್ಡ ಪ್ರೊಫೆಸರ್ ಆಪದು ಗೊತ್ತಿದ್ದ, ರಾಶಿ ಹುಶಾರಿದ್ದು” ಎಂದೆಲ್ಲ ತನ್ನ ಗಂಡನಿಗೆ ಪರಿಚಯಿಸಿದ್ದ ತುಳಸಿಗೆ ಕೊಂಚ ಸಂಕೋಚದಿಂದಲೇ “ಅಯ್ಯೊ ಸುಮ್ನಿರೆ ಮಾರಾಯ್ತಿ, ನೀನೀಗ ಗೃಹಿಣಿಯಾಗಿ ಖುಷಿಯಿಂದ ಜೀವನ ಮಾಡು,” ಎಂದು ಹಾರೈಸಿ ಬಂದಿದ್ದ ಪಾರಿಜಾತಾ ಆಮೇಲೆ ಭೆಟ್ಟಿಯಾಗಿರಲಿಲ್ಲ. ಅವಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ತುಳಸಿಯ ಅಪ್ಪನ ಕೈಲಿ ಕೊಟ್ಟು ಮುದ್ದಾಂ ಬರವಡ ಹೇಳು ಎಂದಿದ್ದಳು. ಆಗ ಬಾಣಂತಿಯಾಗಿದ್ದ ತುಳಸಿ ಬಂದಿರಲಿಲ್ಲ. ಪಾರಿಜಾತ, ಶಮಂತ, ರಾಧಿಕಾ ಮುಂತಾದ ಒಂದಿಬ್ಬರು ಮದುವೆಯಾದ ನಂತರವೂ ಯಕ್ಷಗಾನ ಮುಂದುವರೆಸಿದ್ದರು. ಅಂತವರನ್ನಿಟ್ಟುಕೊಂಡು ಮೇಳವನ್ನು ಮುಂದುವರೆಸಲಾಗಿತ್ತು. ತಮಗೆ ವಯಸ್ಸಾದ ನಂತರ ಗೋಪಾಲ ಭಾಗವತರು ತಮ್ಮ ಶಿಷ್ಯನಾದ ದಿವಾಕರನನ್ನು ಕಳಿಸುತ್ತಿದ್ದರು.

ಮಂಗಳ ಪದ್ಯ ಹಾಡುವಾಗಲೇ ಹಿಂಡು ಹಿಂಡು ಪ್ರೇಕ್ಷಕರು ಚೌಕಿಗೆ ನುಗ್ಗಿಯಾಗಿತ್ತು. ಭಾಳ ಚೊಲೊ ಆತ್ರಿ, ಹೆಣ್ಮಕ್ಳು ಅಂತ ಗೊತ್ತೇ ಆಗಲ್ಲ ನೋಡ್ರಿ, ಧ್ವನಿ ಸುತೇಕ ಗಂಡಸರಂಗ ಐತಲ್ರಿ” ಎನ್ನುತ್ತ ಮುತ್ತಿಕೊಂಡವರೆಲ್ಲರನ್ನು ಮಾತಾಡಿಸಿ ಎಣ್ಣೆಹಚ್ಚಿಕೊಂಡು ಬಣ್ಣವೊರೆಸಿಕೊಳ್ಳುವಷ್ಟರಲ್ಲಿ ಸಂಘಟಕರು ಊಟಕ್ಕೆ ಅವಸರಿಸತೊಡಗಿದರು. ತಾನು ಈಗಲೇ ಊರಿಗೆ ಹಿಂತಿರುಗುವುದಿಲ್ಲವೆಂದೂ, ಇಲ್ಲೇ ಉಳಿಯುತ್ತೇನೆಂದೂ ಹೇಳಿದ ಪಾರಿಜಾತಾಗೆ ಬಣ್ಣದ ಮಂಜು ಧ್ವನಿ ತಗ್ಗಿಸಿ ಹೇಳಿದ. “ತಂಗೀ ನೀನು ತುಳಸಿ ಗಂಡನ ಪಂಚೇತಿ ಮಾಡೂಕೆ ಹೋಗೂದಾದ್ರೆ ಹುಶಾರಾಗಿರು ಮಾರೆಗಿತ್ತಿ, ಅಂವ ಮನಷಾ ಅಷ್ಟು ಸರಿ ಇಲ್ಲಂತೆ, ನಮ್ಮಣ್ಣನ ಮಗ ಇದೇ ಊರಲ್ಲಿ ನೌಕರಿಗವ್ನೆ. ಅಂವ ಹೇಳತಾಯಿದ್ದ. ಸಿಕ್ಕಾಪಟ್ಟೆ ಕುಡಿತನಂತೆ, ಊರೆಲ್ಲ ಸಾಲ ಮಾಡಕಂಡಾನಂತೆ, ಡಯಾಬಿಟೀಸ್ ಅಲಕ್ಷ ಮಾಡಕಂಡು ಕಣ್ಣು ಆಪರೇಶನ್ ಆಗದಂತೆ, ಅದಕ್ಕೇ ಕರೇ ಕನ್ನಡಕ ಹಾಕ್ಕಂಡು ತಿರಗತ್ನಂತೆ, ಯಾವ ನೌಕರೀನೂ ಸರೀ ಮಾಡೂದಿಲ್ಲಂತೆ, ಸಮಾ ವಿಚಾರ ಮಾಡಕ ಹಾಂ” ಎಂದ.. ಅಷ್ಟರಲ್ಲಾಗಲೇ ಆಟೊ ತಂದಿದ್ದ ಸುಧನ್ವ ಪಾರಿಜಾತನ ಬ್ಯಾಗನ್ನು ತಾನೇ ಅದರಲ್ಲಿಟ್ಟು ಆಟೊದವನಿಗೆ ವಿಳಾಸ ಹೇಳಿದ. ಮಧ್ಯಾಹ್ನ ಹೇಳಿದ ಮಾತನ್ನೇ ಮರಳಿ ಮರಳಿ ಉಚ್ಛರಿಸುತ್ತ ಪಾರಿಜಾತಾಗೆ ಕೈ ಮುಗಿದ. ಭರ್ರನೆ ಸದ್ದು ಮಾಡುತ್ತ ಓಡಿದ ಆಟೊದೊಳಗೆ ಕೂತ ಪಾರಿಜಾತಾಳನ್ನು ಕಾಣದ ಅಳುಕೊಂದು ಮುತ್ತತೊಡಗಿತು.

ಮಧ್ಯಾಹ್ನ ಬಿಸಿಬಿಸಿ ರೊಟ್ಟಿ, ಎಣಗಾಯಿ, ಶೆಂಗಾ ಚಟ್ನಿ ಊಟ ಮಾಡಿ ಹೊರ ಬಂದು ಗುಡ್ಡದ ಏರಿ ಹತ್ತುವಾಗ ಹಿಂದುಳಿದಿದ್ದ ಪಾರಿಜಾತಾಳ ಬಳಿ ಬಂದಿದ್ದ ಸುಧನ್ವ ದೈನ್ಯವೇ ಮೂರ್ತಿವೆತ್ತಂತೆ ಬೇಡಿಕೊಂಡಿದ್ದ. “ಅಕ್ಕಾ ನನ್ನ ಸಂಸಾರ ಉಳಿಸಿಕೊಡಕ್ಕ, ತುಳಸಿ ಅಂದ್ರೆ ಯಂಗೆ ಪಂಚಪ್ರಾಣ, ಮಗಳು ಪೂರ್ವಿ ಅಂದ್ರಂತೂ ರಾಶಿ ಪ್ರೀತಿ, ಸಣ್ಣ ಸಣ್ಣ ವಿಷಯಕ್ಕೆ ಸಿಟ್ಟು ಮಾಡಿಕ್ಯಂಡು ಈಗ ಬ್ಯಾರೆ ಮನೆ ಮಾಡಿಕ್ಯಂಡು ವಳದ್ದು. ಒಬ್ಬಂವ ಪರಿಚಯದಂವ ಯಂಗಳ ಜಗಳದ ಫಾಯದೆ ತಗಂಡು ಅದರನ್ನ ಬುಟ್ಟಿಗೆ ಹಾಕ್ಯಂಡಿದ್ದ, ಅದಕ್ಕೆ ಹೇಳಿ ಒಂದು ಸ್ಟೇಶನರಿ ಅಂಗಡಿ ಹಾಕೊಟ್ಟಿದ್ದ, ಈಗ ಡೈವೊರ್ಸ ನೋಟಿಸ್ ಕಳಸಿದ್ದು. ಅವಿಬ್ರನ್ನು ಕಳಕಂಡು ಆನಂತೂ ಬದುಕಿಪ್ಲೆ ಸಾಧ್ಯ ಇಲ್ಲೆ, ಹೆಂಗಾರೂ ಮಾಡಿ ಯಂಗಳ ಸಂಸಾರ ಉಳಶಿ ಕೊಡು. ನೀ ಬುದ್ಧಿ ಹೇಳಿರೆ ಕೇಳತು. ಯಂಗೊಂದು ಅವಕಾಶ ಕೊಡಸು, ಮತ್ತೆ ತಪ್ಪು ಮಾಡಿದ್ರೆ ಬೇಕಾರೆ ಬಿಟ್ಟಿಕ್ಕೆ ಹೋಗಲಿ, ಅದಿನ್ನೊಬ್ಬನ ಸಂತಿಗೆ ಇತ್ತು ಹೇಳದನ್ನೂ ಮರ್ತು ಬಾಳಲ್ಲೆ ಆನು ತಯಾರಿದ್ದಿ” ಕಣ್ಣೀರು ತುಂಬಿಕೊಂಡು ನಿಂತಿದ್ದ ಸುಧನ್ವ ಆ ಕ್ಷಣಕ್ಕೆ ಭಾರೀ ಸಂಭಾವಿತನಂತೆಯೇ ಕಂಡಿದ್ದ, ಪ್ರೀತಿಗಾಗಿ ಹಾತೊರೆಯುವ ಅಮರಪ್ರೇಮಿಯಂತೆಯೇ ಕಂಡಿದ್ದ. ಪಾಪ ಅವನಿಗೆ ಸಹಾಯ ಮಾಡೋಣ, ತುಳಸಿ ಎಷ್ಟೆಂದರೂ ಹಠಮಾರಿಯಲ್ಲವೇ, ಮಾತಾಡಿ ನೋಡೋಣ ಅಂದುಕೊಂಡಿದ್ದಳು. ಆದರೀಗ ಬಣ್ಣದ ಮಂಜನ ಮಾತು ಕೇಳಿದೊಡನೆ ಭಯ ಶುರುವಾಗಿತ್ತು. ಹೌದಲ್ಲ, ಇದಕ್ಕೆ ಇನ್ನೊಂದು ಮುಖವೂ ಇದೆ. ತೀರಾ ಡೈವೊರ್ಸ ಕೇಳುತ್ತಿದ್ದಾಳೆ ಎಂದರೆ ತುಳಸಿಗೂ ಸಾಕು ಸಾಕು ಅನ್ನಿಸಿರಬೇಕಲ್ಲವೆ? ಶಾಲೆಗೆ ಹೋಗುವ ಮಗಳ ತಾಯಿಯಾಗಿ ಅವಳು ಬೇಜವಾಬ್ದಾರಿಯ ನಿರ್ಧಾರಕ್ಕೆ ಬರಲಾರಳಲ್ಲವೆ? ಎಂದುಕೊಳ್ಳುತ್ತ ಯೋಚಿಸುವಷ್ಟರಲ್ಲಿ ರಿಕ್ಷಾ ನಿಂತಿತ್ತು. “ಇದೇ ಅಪಾರ್ಟಮೆಂಟರಿ ಮೇಡಂ, ಗೇಟೊಳಗೆ ಹೋಗ್ರಿ, ಲಿಫ್ಟ ಐತಿ ನೋಡ್ರಿ” ಎನ್ನುತ್ತ ಆಟೊದವನು ಇಳಿಸಿ ಹೋದ.

ಮಧ್ಯಾಹ್ನ ಸುಧನ್ವ ಫೊನ್ ನಂಬರ್ ಕೊಟ್ಟಾಗಲೇ ಪಾರಿಜಾತ ತುಳಸಿಗೆ ಫೋನು ಮಡಿದ್ದಳು. “ಅರೆ ಅಕ್ಕ ನಿನ್ನ ಆಟ ಇದ್ದ? ಮೊದಲೆ ಗೊತ್ತಿದ್ರೆ ಬತ್ತಿದ್ನಲೆ, ಈಗ ಅಂಗಡಿಲಿ ಕೂತ್ಗಳವು ಯಾರೂ ಇಲ್ಲೆ, ಮಗಳು ಶಾಲಿಂದ ಬಂದ ಮೇಲೆ ಟ್ಯೂಶನ್ನಿಗೆ ಬಿಡವು, ನೀನು ಪ್ರೊಗ್ರಾಂ ಮುಗ್ದ ಮೇಲೆ ಮನಿಗೆ ಬಾ” ಎಂದಿದ್ದಳು.

ಮೂರನೆಯ ಮಹಡಿಯ ಮೇಲಿನ ಮನೆ ಬಾಗಿಲ ಕರೆಗಂಟೆಯೊತ್ತಿ ನಿಂತಾಗಲೂ ಪಾರಿಜಾತಾಳ ಎದೆಬಡಿತ ನಿಂತಿರಲಿಲ್ಲ. ಅದ್ಯಾರದ್ದೊ ಜೊತೆಗೆ ಬೇರೆ ಇರುತ್ತಾಳಂತಲ್ಲ, ಅವನೂ ಈಗ ಅಲ್ಲೇ ಇದ್ದಾನೋ ಏನೋ, ಹಾಗಿದ್ದರೆ ತುಂಬಾ ಮುಜುಗರವೇ ಸರಿ, ಪರಪುರುಷನನ್ನು ಇಷ್ಟಪಡುವಂಥ ಬುದ್ಧಿ ಈ ತುಳಸಿಗಾದರೂ ಯಾಕೆ ಬಂತಪ್ಪ ಎಂದುಕೊಳ್ಳುತ್ತಲೇ ನಿಂತಿದ್ದಳು. ಬಾಗಿಲು ತೆರೆದ ತುಳಸಿಯನ್ನು ನೋಡಿ ಆಶ್ಚರ್ಯವಾಯಿತು. ಮದುವೆಯಾಗುವಾಗ ಹೇಗಿದ್ದಳೋ ಹೆಚ್ಚು ಕಮ್ಮಿ ಹಾಗೇ ಇದ್ದಾಳೆ. ಹತ್ತುವರ್ಷದ ಕಾಲನ ಧಾಳಿಗೆ ಸ್ವಲ್ಪವೂ ನಲುಗದಿರುವ ಶರೀರ. ಆತ್ಮೀಯವಾಗಿ ಸ್ವಾಗತಿಸಿದಳು. “ಆಟ ಕುಣಕಂಡು ಬಂದ ಕೂಡಲೇ ಬಿಸಿನೀರು ಮಿಂದರೆ ಚೊಲೊ ನಿದ್ದೆ ಬತ್ತು ಹೊದಾ? ಹೆಂಗೂ ಗ್ಯಾಸ ಗೀಸರ್, ಬಾ ನೀ ಮೀಯ್ಲಕ್ಕಡ” ಎನ್ನುತ್ತ ಬಾತ್ ರೂಮಿಗೆ ಹೋಗಿ ನೀರು ಬಿಟ್ಟಳು. “ನಿಂಗೆ ಹೆಚ್ಚಾಗಿ ಪ್ರೊಗ್ರಾಂ ಆದ ಕೂಡಲೆ ಧ್ವನಿ ಬಿದ್ಕ ಇರ್ತಿತ್ತು ಅಲ್ದನೆ ಮನಕ್ಯಳಕಾರೆ ಬಿಸಿ ಹಾಲಿಗೆ ಅರಿಶಿಣ ಹಾಕ್ಯಂಡು ಕುಡದರೆ ಆರಾಮಾಗ್ತು” ಎನ್ನುತ್ತ ಓಡಾಡಿದಳು. “ಎಂತಕ್ಕೆ ಅಕ್ಕಾ ರಾಶಿ ದಪ್ಪಾದಹಂಗೆ ಕಾಣ್ತೆ. ಮೆನೊಪಾಸ್ ಹೇಳಾದಿಕ್ಕು ಅಲ್ದ? ನಿನ್ನ ಮಕ್ಕ ಎಲ್ಲ ಎಷ್ಟು ದೊಡ್ಡವಾದ್ವೆ? ನಿನ್ನ ಕಾಲೇಜು ಮನಿಗೆ ಹತ್ರ ಆಗ್ತ?” ಎಂದೆಲ್ಲ ವಿಚಾರಿಸಿಕೊಂಡಳು. “ಮಗಾ ಇದು ನಿಂಗೆ ದೊಡ್ಡಮ್ಮ ಆಗವು, ಬಾ ಮಾತಾಡ್ಸು…” ಎಂದು ಮಗಳನ್ನು ಕರೆದು ಪರಿಚಯಿಸಿದಳು.

ಮಗಳು ಅಕ್ಷಿ ಥೇಟು ಸುಧನ್ವನದೇ ತದ್ರೂಪು. ಮನೆಯಲ್ಲಿ ಆ ಮೂರನೆಯ ಗಂಡಸು ಕಾಣದಿದ್ದರಿಂದ ನಿರಾಳವೆನಿಸಿತು. ತಾನು ಫೋನು ಮಾಡಿದ್ದರಿಂದ ಅವನನ್ನು ಬೇರೆಲ್ಲಾದರೂ ಓಡಿಸಿರಬೇಕು ಅಂದುಕೊಂಡಳು. ಆದರೆ ಬಾತ್ ರೂಮಿನಾದಿಯಾಗಿ ಇಡೀ ಮನೆಯಲ್ಲಿ ಗಂಡಸೊಬ್ಬ ಬದುಕಿದ್ದ ಕುರುಹು ಕಾಣಲಿಲ್ಲ. ಬಾತ್ ರೂಮಿನಲ್ಲಿ ಶೇವಿಂಗ್ ವಸ್ತುಗಳಾಗಲೀ, ಒಣಹಾಕಿದ ಬಸಿಯನ್ ಸಾಕ್ಸು ಇತ್ಯಾದಿ ಏನೂ ಕಾಣಲಿಲ್ಲ. ಸ್ನಾನ ಮಾಡಿ ಹಾಲು ಕುಡಿದ ಕೂಡಲೇ ಪಾರಿಜಾತಳಿಗೆ ನಿದ್ದೆ ಒತ್ತಿಕೊಂಡು ಬರತೊಡಗಿತು. ತುಳಸಿ “ಅಕ್ಕಾ ನೀನು ಮಲಗು. ಬೆಳಿಗ್ಗೆ ಮಾತಾಡನ…” ಎನ್ನುತ್ತ ಸೊಳ್ಳೆ ಪರದೆ ಹಾಕಿ ಲೈಟು ಆರಿಸಿ ನಡೆದಳು.

ಪಾರಿಜಾತಾಗೆ ಎಚ್ಚರವಾಗುವಾಗ ಕಿಡಕಿಯಾಚೆ ಚುಮುಚುಮು ಬೆಳಕಾಗುತ್ತ ಇತ್ತಷ್ಟೆ. ಗೋಡೆಯಾಚೆಗಿನ ಪಕ್ಕದ ಕೋಣೆಯಿಂದ ಮಾತು ಕೇಳಿ ಬರುತ್ತ ಇತ್ತು. “ಅಕ್ಷಿ ಎದ್ಕ ಮಗ, ಬಾಸ್ಕೆಟ್ ಬಾಲಿಗೆ ಲೇಟಾಗ್ತಾ ಇದ್ದು” ಬಹುಶಃ ಹೊದಿಕೆಯೊಳಗೇ ಇದ್ದಿದ್ದರಿಂದಲೋ ಏನೋ ಅಕ್ಷಿಯ ಸ್ವರ ಅಸ್ಪಷ್ಟವಿತ್ತು. “ಇವತ್ತೊಂದಿನ ಮನಕ್ಯತ್ನೆ ಮಮ್ಮಿ, ಪ್ಲೀಸ್” ತುಳಸಿಯ ಧ್ವನಿ ಮಗಳನ್ನು ಅನುನಯಿಸುತ್ತಿತ್ತು. “ನೊ, ಪುಟ್ಟಾ, ಅಮ್ಮ ಎಂತಾ ಹೇಳಿದ್ದಿ ನೆನಪು ಮಾಡ್ಕ್ಯ. ಬೆಳ್ಳೆಣ್ಣೆ ಜೀನ್ಸಲ್ಲಿ ಸಿಕ್ಕಾಪಟ್ಟೆ ಡಯಾಬಿಟೀಸ್ ಇದ್ದು, ಈಗಿಂದ ನೀನು ಹೆಲ್ದಿ ಜೀವನಶೈಲಿ ಮಾಡಿಕ್ಯಳ್ಳಿಕ್ಕೇ ಬೇಕು, ಚಾನ್ಸ್ ತಗಳ್ವಂಗೇ ಇಲ್ಲೆ, ಬಾ ಮಮ್ಮಿನೂ ಬತ್ತಿ ಬೇಕಾರೆ, ನಿಂಗೊಬ್ಬಂಗೇ ಹೋಪಲ್ಲೆ ಬೋರ್ ಆಗ್ತು ಹೇಳಾರೆ ನಡಿ ಜೊತಿಗೆ ಹೋಪನ ಯೋಳು” ಕುಸುಕುಸು ಪ್ರತಿಭಟನೆಯೊಂದಿಗೆ ಅಕ್ಷಿ ಎದ್ದು ಬಾತ್ ರೂಮಿಗೆ ಹೋದ ಸದ್ದು ಕೇಳಿತು. “ಮಮ್ಮಿ ಬೆಳಗಾದ ಕೂಡಲೆ ಆಟ, ಸಂಜಾದ್ಕೂಡ್ಲೆ ಟ್ಯೂಶನ್ ವೀಕೆಂಡಲ್ಲಿ ಸಂಗೀತ, ಡ್ಯಾನ್ಸು ಬರೇ ಕ್ಲಾಸಿಗೆ ಹೋಪದೆ ಆಗೋಗ್ತು” ಹಿಂದೆಯೇ ತುಳಸಿಯ ಮಾತು. “ಇರದೊಂದು ಜನ್ಮ ಕಂದಾ, ಹೆಂಗೆಂಗಾರೂ ಬದುಕಿಬಿಟ್ಟರೆ ಮತ್ತೆ ಬಾ ಅಂದ್ರೆ ಜೀವನ ವಾಪಸ್ ಬರ್ತಿಲ್ಲೆ, ಎಷ್ಟು ಸಾಧ್ಯ ಅಷ್ಟು ಚೊಲೊ ರೀತಿಯಿಂದ ಕಟ್ಟಗ್ಯಳವು. ದೇಹದ ಆರೋಗ್ಯ, ಮನಸ್ಸಿನ ಸಂತೋಷ, ಬುದ್ಧಿಗೆ ವಿದ್ಯೆ ಎಲ್ಲಾ ನಮನಿಲೂ ವ್ಯಕ್ತಿತ್ವ ಹೇಳದು ತಯಾರಾದ್ರೆ ನಾಳೆ ನೀನೇ ಎಂಜಾಯ್ ಮಾಡ್ತೆ. ಸುಮ್ನೆ ತಿನ್ನದು, ಬಿದ್ದು ಉಳ್ಳಾಡದು, ಟಿ.ವಿ. ಮುಂದೆ ಕುಕ್ಕರಿಸದು ಮಾಡ್ದ್ರೆ ಎಂತಾ ಪ್ರಯೋಜ್ನಕ್ಕೂ ಇಲ್ಲದ್ದೆನೇ ಆಯುಷ್ಯ ಮುಗದ್ ಹೋಗ್ತು”. ನಾವು ಹೋಗಬುಟ್ರೆ ದೊಡ್ಡಮ್ಮಂಗೆ ಯಾರು ಹೇಳ್ತ? ಎಂಬ ಅಕ್ಷಿಯ ಮಾತು ಕೇಳಿ ಪಾರಿಜಾತ ಹೊರಗೆ ಬಂದಳು. “ನಾನು ಬಾಗಿಲು ಹಾಕ್ಯಂಡು ಇನ್ನೊಂಚೂರು ಮಲಗ್ತಿ ನಿಂಗ ಹೋಗ್ಬನ್ನಿ.” ಎನ್ನುತ್ತ ಅವರನ್ನು ಕಳಿಸಿ ಬಾಗಿಲು ಹಾಕಿಕೊಂಡಳು. ಅಲ್ಲೇ ಚಾರ್ಜಿಗೆ ಇಟ್ಟಿದ್ದ ಅವಳ ಮೊಬೈಲು ಹಾಡತೊಡಗಿತು.

ತನ್ನ ಕುಣಿತ ಮುಗಿದು ಮುಖ್ಯ ಕಥಾನಕ ಶುರುವಾಗುತ್ತಿದ್ದಂತೆ ಒಳಗೆ ಬಂದ ತುಳಸಿ ವೇಷ ಬಿಚ್ಚಬೇಕೆಂದು ಅವಸರ ಮಾಡುತ್ತಿದ್ದಳು. ಶೆಟ್ಟರು ಹಾಗೂ ಅವರ ಸಹಾಯಕರೆಲ್ಲ ಅದಾಗ ಹೊರಡಬೇಕಾದ ವೇಷಗಳ ಕೊನೆಯ ತಯಾರಿಯಲ್ಲಿ ಮಗ್ನರಾಗಿರುತ್ತಿದ್ದರು. ಒಳ ಬಂದ ತುಳಸಿ “ಅಯ್ಯೋ ಶೆಟ್ರೆ ನೀವು ಒಂದ್ಸಲ ಬಂದು ನಂಗೀ ಪಗಡೆ ಬಿಚ್ಚಿ ಕೊಡೂದೇಯಾ, ಇಲ್ಲಾದ್ರೆ ಇಲ್ಲೇ ಜೀಂವ ಬಿಡ್ತೆ ನೋಡಿ ಎಂದು ಹೆದರಿಸುತ್ತಿದ್ದಳು.

ಅಮೇರಿಕಾದಲ್ಲಿರುವ ತಮ್ಮನ ನಂಬರ್. ಅಲ್ಲೀಗ ಅವನಿಗೆ ರಾತ್ರಿಯಾಗಿರುತ್ತದೆ. ಆಫೀಸಿಂದ ಮನೆಗೆ ಬಂದು ಕೂತಿರುತ್ತಾನೆ. “ಅಕ್ಕಾ ಎಲ್ಲಿದ್ದೆ?” ಎಂದು ವಿಚಾರಿಸಿದವನೊಡನೆ ತನ್ನ ಕಾರ್ಯಕ್ರಮ ಹಾಗೂ ತುಳಸಿಯ ಮನೆಯ ವಸತಿ ಇತ್ಯಾದಿ ಸಂಗತಿಗಳನ್ನು ಹೇಳಿದಳು. ಅವನು ಅಮೇರಿಕೆಯಲ್ಲಿದ್ದರೂ ಬಾಲ್ಯದ ಗೆಳೆಯರ ಅನೇಕ ವಾಟ್ಸಪ್ ಗ್ರೂಪ್ ಜೊತೆಗೆ ಸೇರಿಕೊಂಡಿದ್ದರಿಂದ ಊರಿನ ಬಹುತೇಕ ಸುದ್ದಿಗಳನ್ನು ತಿಳಿದವನೇ ಇದ್ದ. ಬೆಳ್ಳೆಣ್ಣೆ ಕುಟುಂಬದವನೊಬ್ಬ ಅವನ ಹಳೆ ಸಹಪಾಠಿಯಾದ್ದರಿಂದ ಸುಧನ್ವನ ಸುದ್ದಿ ಅವನಿಗೆ ಗೊತ್ತಿತ್ತು. “ಅಕ್ಕಾ ಅಂವ ಸಿಕ್ಕಪಟ್ಟೆ ಸಾಲಗಾರ, ಚಟಚಕ್ರವರ್ತಿ, ಕಣ್ಣೂ ಹೋಗೋಜಡ, ಹಂಗಾಗಿ ತುಳಸಿ ಬಿಟ್ಟಿಗಿದಡ, ಬೆಣ್ಣೆಮನೆಯವೆಲ್ಲವ ಸ್ವಲ್ಪ ಯಜಮಾನಿಕೆ ಗತ್ತಿನ ಗಂಡಸರು, ಹೆಂಗಸರನ್ನ ಟೇಕನ್ ಫಾರ್ ಗ್ರ್ಯಾಂಟೆಡ್ ಅಂತ ತಿಳ್ಕತ್ತ, ಈಗಿನ ಕಾಲದಲ್ಲಿ ಅದೆಲ್ಲ ನಡಿತಿಲ್ಲೆ, ಗಂಡ ಎಂತವನೇ ಆದರೂ ಸಹಿಸಿಕ್ಯಂಡು ಇರ್ತಿ ಹೇಳ ಕಾಲಲ್ಲ ಇದು, ಮತ್ತೆ ಎಂತಕ್ಕೆ ಹೇಳಿ ಸಹಿಶಕ್ಯಂಡು ಇರವು ಹೇಳು, ಗಿವ್ ಮಿ ಒನ್ ಸ್ಟ್ರಾಂಗ್ ರೀಸನ್… ಸುಧನ್ವನ ಎಲ್ಲಾ ಕೊರತೆಗಳನ್ನು ಮರೆತು ಅವನ ಜೊತೆಗೆ ಇರಲೇಬೇಕು ಹೇಳುವಂತಹ ಒಂದು ಕಾರಣ ಹೇಳು” ತಮ್ಮನ ಮಾತಿಗೆ ನಿರುತ್ತರಳಾದ ಪಾರಿಜಾತಳ ಗಮನ ಕಿಡಕಿಯ ಹೊರಗೆ ಹೋಯಿತು.

ಹಿಂದಿನ ಮನೆಯ ಹಿತ್ತಿಲಲ್ಲಿ ಏನೋ ಗಲಾಟೆಯ ರೀತಿಯಲ್ಲಿ ಇಬ್ಬರು ಹೆಂಗಸರು ಮಾತಾಡುವ ಧ್ವನಿ ಕೇಳುತ್ತಿತ್ತು. ತಮ್ಮನೊಂದಿಗೆ ವಿಷಯಾಂತರ ಮಾಡಿ ಬೇರೆ ಏನೋ ಮಾತಾಡಿ ಫೋನಿಟ್ಟು ಕಿಡಕಿ ಬಳಿ ನಿಂತು ಹಣುಕಿದಳು. ಹಿಂದಿನ ಕಂಪೌಡಿನಲ್ಲಿ ಇದ್ದ ಮನೆಯ ಹಿತ್ತಿಲು ಕಾಣುತ್ತಿತ್ತು. ಅಲ್ಲೊಂದು ಬಟ್ಟೆಯೊಗೆಯುವ ಕಲ್ಲಿನ ಬಳಿ ರಾಶಿ ಹಾಕಿದ್ದ ಮುಸುರೆ ಪಾತ್ರೆಗಳ ಹತ್ತಿರ ಕುಕ್ಕರಗಾಲಲ್ಲಿ ಕೂತ ಕೆಲಸದವಳು ಕೆನ್ನೆಗೆ ಕೈಕೊಟ್ಟು ಆಶ್ಚರ್ಯ ಬೆರೆತ ಸಹಾನುಭೂತಿಯೊಂದಿಗೆ ಆಗಾಗ ಮಾತು ಜೋಡಿಸುತ್ತ ಕೇಳಿಸಿಕೊಳ್ಳುತ್ತಿದ್ದಳು. ಗೋಡೆಗೊರಗಿ ನಿಂತ ಯಜಮಾನಿ ಅಳುತ್ತಳುತ್ತಲೇ ಮಾತಾಡುತ್ತಿದ್ದಳು “ಹೆಂತಾ ಚೊಲೊ ಸಂಬಂಧ ಹುಡುಕಿದ್ವಿ ಏನ್ ತಾನು, ಮೂರು ತಿಂಗಳ ಅಡ್ಡಾಡಿ ಕಾರ್ಡ್ ಹಂಚಿ ಬಂದೇವಿ ಅಷ್ಟೂ ಸಂಬಂಧಿಕರಿಗೆ ಸೀರಿ-ಪ್ಯಾಂಟು ಶರ್ಟ ಆಯಾರ ಮಾಡಿ ಕಾರ್ಡ ಕೊಟ್ಟೇವಿ, ಇನ್ನೆರಡೇ ದಿನ ಉಳದಿತ್ತ ನೋಡವ ದೇವಕಾರ್ಯಕ್ಕ. ನಾಳೆ ಅಂದ್ರ ದೂರದ ನೆಂಟರೆಲ್ಲ ಟ್ರೇನು ಹತ್ತಿ ಹೊಂಡವ್ರಿದ್ದರ, ನಿನ್ನೆ ಮಧ್ಯಾಹ್ನದಾಗ ನಾಕ ಮಂದಿ ಗಂಡಮಕ್ಕಳು ಧುತ್ ಅಂತ ಮನಿಗೆ ಬಂದು ಬಿಟ್ಟಾರವ್ವ. ಅವರ ಅರಬಿ, ಹೊಲಸ ಗಡ್ಡ ಅದೂ ನೋಡಿ ನಾನು ಯಾರೋ ಅಲಂಕಾರದವರೋ ಅಥವಾ ಶಾಮಿಯಾನದವರೋ ಅಂತ ತಿಳಕೊಂಡು ಹೊರಗ ನಿಲ್ಲಿಸಿ ಮಾತಾಡಸಾಕ ಹತ್ತಿದ್ದೆ, ಶೃತಿನ ಕರಕೊಂಡು ಹೋಗಲಿಕ್ಕೆ ಬಂದೇವಿ ಕಳಸಿಕೊಡ್ರಿ ಅನ್ಲಿಕ್ಕೆ ಹತ್ತಿದ್ರು. ನಂಗೇನೂ ಅರ್ಥ ಆಗಲೇ ಇಲ್ಲ, ನಿಮ್ಮನಿಯವ್ರಿಗೆ ಫೋನು ಹಚ್ಚೇವಿ, ಈಗ ಆಫಿಸಿಂದ ಬರ್ತಾರ ತಡಿರಿ ಅಂದ್ರು. ಒಳಗ ಬಂದು ನೋಡಿದ್ರ ನಮ್ಮ ಶೃತಿ ಬ್ಯಾಗ್ ತುಂಬಿಕೊಳ್ಳಿಕ್ಕೆ ಹತ್ತಿದ್ಲು. ಯಾಕವ್ವ ಎಲ್ಲಿ ಹೊಂಟಿ? ಅಂತ ಗಾಬರ್ಯಾಗಿ ಕೂಗಿದೆ.

“ನಾ ಮೊದಲೆಕ್ಕ ಹೇಳಿದ್ದಿಲ್ಲೇನ ಕಿರಣಗ ಲವ್ ಮಾಡ್ತೇನಿ, ಅವನ್ನ ಲಗ್ನ ಆಗ್ತೇನಿ ಅಂತ, ಅವನ ಕಾಕಾ, ಮಾಮಾ ಅದೂ ಬಂದಾರೀಗ ನನ್ನ ಕರಕೊಂಡು ಹೋಗ್ತಾರ” ಅಂದಳು. ನನಗ ಆಕಾಶನ ತಲಿ ಮ್ಯಾಲ ಬಿದ್ದಂಗ ಆತು, “ಅಯ್ಯ ಮಾರಾಯಳ, ಅಂವ ಬ್ಯಾರೇ ಜಾತಿಯವ, ಕಲತಿಲ್ಲ, ನೌಕರಿ ಸುದ್ದೇಕ ಚೊಲೊದಿಲ್ಲ, ಬ್ಯಾಡ ಅಂದಕೂಳ್ಳೆ ಹೂಂ ಅಂದಿದ್ದೆಲ್ಲ ನಮ್ಮವ್ವ, ಈಗೆರಡು ದಿವಸದಾಗ ಲಗ್ನ ಅಂಬೂದರಾಗ ಇದೆಂತ ಹೊಸರಗಳೆ ತಕ್ಕೊಂಡೀಯ” ನನಗ ತಡಕೊಳ್ಳಿಕ್ಕೆ ಆಗಲಾರದಾಂಗಾಗಿ ಅಳಾಕ ಹತ್ತಿದೆ. “ಇಲ್ಲವ್ವ, ಕಿರಣ ಕೇಳವಲ್ಯಾಗ್ಯಾನ, ನಾ ಇನ್ನೊಬ್ರನ್ನ ಮದುವ್ಯಾದ್ರ ಸಾಯ್ತಾನಂತ, ನೀ ಸುಮ್ನ ಹಟ ಮಾಡಬ್ಯಾಡ, ನಾನೆಷ್ಟು ಬ್ಯಾಡಂದ್ರೂ ಕೇಳದನ ಲಗ್ನದ ತಯಾರಿ ನಡಶೀದಿ, ನಾನೀಗ ಹೊಂಟೇನಿ ನೋಡು” ಅಂದಳು. ಅಷ್ಟರಾಗ ನಮ್ಮನಿಯವ್ರು ಆಟೋದಾಗ ಬಂದರು. ಒಳಗ ಬಂದವ್ರ “ರೇಖಾ ಶೃತಿದು ಲಗ್ನ ಆಗೇಬಿಟ್ಟೇದಂತ, ರೆಜಿಸ್ಟರ್ ಮಾಡಿಕೊಂಡಾಳಂತ” ಅಂದರು. ಅನ್ನತಿದ್ದಂಗ ಕುಸದು ಕೂತು ಅಳ್ಳಿಕ್ಕೇ ಚಾಲು ಮಾಡಿದ್ರು. ಅಷ್ಟರಾಗ ಅವರ ಪೈಕಿ ಒಬ್ಬಾಂವ ಒಂದು ಕಾಗದ ತಂದು ಶೃತಿ ಕೈಯಾಗ ಕೊಟ್ಟು “ಇದನ್ನ ತೋರಸ ಶೃತಿ, ನೀ ಇಲ್ಲಿದ್ರ ಸುಳ್ಳೇ ಗದ್ದಲಕ್ಕ ಮೂಲ, ನಡಿಯವ್ವಾ ಮನಿಗೆ ಹೋಗೋಣು ಅಂದ. ನಾನು ಆಕಿ ಕೈಯಾಂದು ಕಸಕೊಂಡು ನೋಡಿದ್ರ ಮೂರು ತಿಂಗಳ ಹಿಂದೆ ರೆಜಿಸ್ಟರ್ ಆಗಿದ್ದ ಸರ್ಟಿಫಿಕೇಟು. “ಇದು ನಿನ್ನ ಪರೀಕ್ಷಾ ನಡದಾಗ ಅಲ್ಲೇನ” ಅಂದೆ. “ಹೌದು ಮತ್ತ, ನೀವು ಅವನ ಜೋಡಿ ಅಡ್ಡಾಡಿದ್ರ ಕಾಲು ಮುರಿತೇನಿ ಅಂತ ಗದ್ದಲ ಎಬ್ಬಿಸಿದ್ರೆಲ್ಲ, ಆವಾಗ ಕಿರಣನ ಮನಿಯವ್ರು ಹೀಂಗ ಬಿಟ್ರ ನಿಂಗ ಬ್ಯಾರೆ ಲಗ್ನ ಮಾಡಿಬಿಡ್ತಾರ, ರೆಜಿಸ್ಟ್ರೇಶನ್ ಮಾಡಿಸ್ಕೋರಿ ಅಂದ್ರು. ಕಣ್ಣಿಗೆ ಕತ್ತಲು ಬಂತು.

ಯಾವುಂದೋ ಜೋಡಿ ಲಗ್ನ ಮಾಡಿಕೊಂಡು ಹೇಳಲಾರದ ನಮ್ಮನಿವೊಳಗ ಉಳದು, ನಾವು ಹುಡುಕಿದ ವರಗ ಹೂಂ ಅಂತ ಹೇಳಿ, ಎಲ್ಲಾ ಲಗ್ನದ ತಯಾರಿ ಆಗೂ ತಂಕಾ ನಮ್ಮಂಗ ಇದ್ಲಲ್ಲ, ಇಕಿನ್ನ ಮಗಳು ಅನ್ನೋಣೊ ವೈರಿ ಅನ್ನೋಣೊ… ಹೊರಗಿನವ್ರ ಮೋಸ ಮಾಡಿದ್ರೆ ತಡ್ಕೊಬೌದವ್ವ, ಹೊಟ್ಯಾಗ ಹುಟ್ಟಿದ ಮಕ್ಕಳ ಮೋಸ ಮಾಡಿದ್ರೆ ತಡ್ಕೋಳುದಾಗೂದಿಲ್ಲವ್ವ” ಬಿಕ್ಕಿ ಬಿಕ್ಕಿ ಅಳುತ್ತಿದ್ದ ಯಜಮಾನಿಯನ್ನು ನೋಡಿ ಕೆಲಸದಾಕೆ “ಹೆಂಥಾ ಹುಚ್ಚ ಹುಡುಗಿ ಅದರಿ, ಮನಿಗೆಲ್ಲ ಸುಣ್ಣ ಬಣ್ಣ ಮಾಡಸಿ, ವಡವಿ ವಸ್ತ್ರಾ ಅಂತ ಅಡ್ಡಾಡಿ ಬಾಂಡಿ-ದಾಗಿನ್ನಿ ತಗೊಳು ಮುಂದ ತಾನೂ ಕುಣದು ಕುಣದು ಅಡ್ಡಾಡಿತಲ್ರೇವಾ, ತಾನ್ಹಿಂಗಂಗ ಲಗ್ನ ಆಗೇನಿ ಅಂದಿದ್ರ ಖರ್ಚು ಮಾಡೂದರೆ ಉಳೀತಿತ್ತು, ಬೀಗರಿಗೆ ಬಿಜ್ಜರಿಗೆ ಕೊಡೂದು, ಕೊಳ್ಳೂದರ ಉಳೀತಿತ್ತು.”

ಕಾಲಿಂಗ್ ಬೆಲ್ಲು ಸದ್ದಾಯಿತು. ಇಷ್ಟು ಬೇಗ ಬಂದರಾ? ಒಂದು ತಾಸು ಆಗುತ್ತದೆ ಎಂದಿದ್ದರಲ್ಲ ಎಂದುಕೊಳ್ಳುತ್ತ ಬಾಗಿಲು ತೆರೆದಳು. ಜಾಗಿಂಗ್ ಪ್ಯಾಂಟು-ಟಿಶರ್ಟಲ್ಲಿ ನಿಂತಿದ್ದ ಸ್ಫುರದ್ರೂಪಿ ತರುಣ ಇವಳು ಬಾಗಿಲು ತೆರೆದೊಡನೆ ಕೊಂಚ ಗಲಿಬಿಲಿಗೊಂಡ. “ತುಳಸಿ?” ಎಂದ. “ಅವಳು ಹೊರಗೆ ಹೋಗಿದಾಳೆ” ಎಂದಳು. “ಅಕ್ಷಿ ಜೊತೆಗೆ ಹೋದಳಾ, ಅವಳು ಒಲ್ಲೆ ಅಂತ ಹಠ ಮಾಡಿರ್ಬೇಕು, ನೀವು ಪಾರಿಜಾತ ಅಕ್ಕ ಅಲ್ವಾ” ಅಂದ. ಇವನ್ಯಾರಪ್ಪ ಎಂಬ ಗೊಂದಲದಲ್ಲಿದ್ದವಳು ತನ್ನ ಪರಿಚಯವನ್ನೂ ಹೇಳಿದನಲ್ಲ, ಬಹುಶಃ ಸುಧನ್ವ ಹೇಳುತ್ತಿದ್ದ ತುಳಸಿಯ ಗೆಳೆಯ ಇವನೇ ಇರಬಹುದೇನೋ ಅಂದುಕೊಂಡಳು. “ಬನ್ನಿ” ಎನ್ನುತ್ತ ಒಳ ಬಂದಳು. ಇವಳು ಸರಿಯುವುದನ್ನೇ ಕಾಯುತ್ತಿದ್ದಂತೆ ಒಳ ಬಂದ ತರುಣ ಕೈಲಿ ಹಿಡಿದ ಚೀಲದಿಂದ ಪೇಪರ್ ತೆಗೆದು ಟಿಪಾಯ್ ಮೇಲಿಟ್ಟ, ಹಾಲಿನ ಪ್ಯಾಕೆಟ್ ತೆಗೆದು ತಾನೇ ಕಿಚನ್ ಡ್ರಾದಿಂದ ಕತ್ತರಿ ತೆಗೆದು ಕಟ್ ಮಾಡಿ ಪಾತ್ರೆಗೆ ಸುರುವಿ ಗ್ಯಾಸ್ ಹಚ್ಚಿ ಕಾಯಲಿಟ್ಟ. ‘ಪೇಪರ್ ಓದ್ರಿ ಅಕ್ಕಾ, ನಿಮಗೆ ಚಾನೊ, ಕಾಫಿನೊ, ಬೆಳಿಗ್ಗೆ ಯಾವುದು ರೂಢಿ?’ ಎಂದು ವಿಚಾರಿಸಿದ. “ನಂದಿನ್ನೂ ಮುಖ ತೊಳೆದಾಗಿಲ್ಲ, ಈಗ ಖಾಲಿ ಹೊಟ್ಟೆಲಿ ಏನೂ ಬೇಡ, ತಿಂಡಿ ಜೊತೆಗೆ ಟೀ ಕುಡಿತೇನಿ” ಎನ್ನುತ್ತ ಬ್ರಶ್ ಮಾಡತೊಡಗಿದಳು.

ಆ ತರುಣ ತನ್ನದೇ ಮನೆ ಎನ್ನುವಂತೆ ಫ್ರಿಜ್ಜಿನಿಂದ ದೋಸೆ ಹಿಟ್ಟು ಹೊರತೆಗೆದು ಅದಕ್ಕೆ ಉಪ್ಪು, ನೀರು ಬೆರೆಸಿ ಕರಡಿಟ್ಟ, ಎರಡು ಮೆಣಸಿನಕಾಯಿಗಳ ತೊಟ್ಟು ತೆಗೆದು ಸಣ್ಣ ಬಾಣಲೆಯಲ್ಲಿ ಹುರಿಯಲಿಟ್ಟ. ಮುಖ ತೊಳೆದ ಪಾರಿಜಾತ “ನಾ ಮಾಡ್ತೇನಿ” ಎಂದು ಸಂಕೋಚದಿಂದ ಹೇಳಿದಳು. “ನೀವೇನು ಸಂಕೋಚ ಮಾಡ್ಕೊಬ್ಯಾಡ್ರಿ ಅಕ್ಕಾ, ಇವೆಲ್ಲ ನಾ ದಿನಾ ಮಾಡೂ ಕೆಲಸಾನರಿ, ತುಳಸಿ ನಂಗೆಲ್ಲ ಕಲಶ್ಯಾಳ, ನಿಮ್ಮೂರಿನ ರುಚಿ ಬರೊ ಕಾಯಿಚಟ್ನಿ ಮಾಡ್ತೇನಿ, ತೆಳ್ಳಗೆ ತೆಳ್ಳೇವು ಎರಿತೇನಿ, ನೀವೇನು ಕಾಳಜಿ ಮಾಡಬ್ಯಾಡ್ರಿ, ಅಕ್ಷಿಗೆ ಡಬ್ಬಿಗೆ ನಾಕು ದ್ವಾಸಿ ಹಾಕ್ತೇನ್ರಿ, ಆಕಿಗೆ ಅನ್ನ ಸೇರುದಿಲ್ರಿ, ಚಪಾತಿ ತಿಂದ್ರ ನೀರಡಿಕೆ ಭಾಳಾಗ್ತದ ಅಂತಾಳ್ರಿ, ತುಳಸಿ ಮಧ್ಯಾಹ್ನ ಚಿತ್ರಾನ ಅಥವಾ ಪುಳಿಯೋಗರೆ ಏನರೆ ಅನ್ನದ ಐಟಮ್ಮು ಒಯ್ತಾಳ್ರಿ” ಮಾತಾಡುತ್ತಲೇ ಪುಟಾಣಿ ಕುಕ್ಕರಿನಲ್ಲಿ ಅನ್ನಕ್ಕಿಟ್ಟು, ಮತ್ತೊಂದು ಒಲೆಯ ಮೇಲೆ ಕಾವಲಿಯಿಟ್ಟು ದೋಸೆ ಹುಯ್ಯುತ್ತ, ಹುರಿದ ಮೆಣಸಿನಕಾಯಿಯನ್ನು ಮಿಕ್ಸಿಗೆ ಹಾಕಿ ತುರಿದಿಟ್ಟ ಕಾಯಿಸುಳಿಯನ್ನು ಫ್ರಿಜ್ಜಿನ ಡಬ್ಬಿಯಿಂದ ತೆಗೆದು ಸೇರಿಸಿಕೊಂಡು ಚಟ್ನಿ ತಿರುವಿದ. ಪಾರಿಜಾತಳಿಗೆ ಆಶ್ಚರ್ಯವಾಗುತ್ತ ಇತ್ತು. ತಾನು ಲಕ್ಷಗಟ್ಟಲೆ ಸಂಬಳ ಪಡೆಯುತ್ತಿದ್ದರೂ ತನ್ನ ಗಂಡನಾಗಲೀ ಅಥವಾ ಅಮೇರಿಕೆಯಲ್ಲಿ ಹೆಂಡತಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದರೂ ತನ್ನ ತಮ್ಮನಾಗಲೀ ಹೀಗೆ ಅಡಿಗೆ ಮನೆಗೆ ಬಂದು ಕೆಲಸಕ್ಕೆ ಕೈ ಹಚ್ಚುವುದಿಲ್ಲ. ಚಾ ಮಾಡುವುದನ್ನೇ ದೊಡ್ಡ ಮಹಾತ್ಕಾರ್ಯವೆಂಬಂತೆ ಪೊಸು ಕೊಡುತ್ತಾರೆ. ಈ ಪುಣ್ಯಾತ್ಮ ಅದೆಲ್ಲಿಂದ ತುಳಸಿಗೆ ಪರಿಚಯವಾದನೊ ಏನೋ, ಅಂತೂ ಉಪಯುಕ್ತ ಪ್ರಾಣಿಯಂತೆ ಕಾಣುತ್ತಾನೆ.

ಪ್ಲೇಟಿನಲ್ಲಿ ತೆಳ್ಳೇವು ಚಟ್ನಿ ಹಾಕಿ ಕೊಡುತ್ತ “ತಗೊರಿ ಅಕ್ಕಾ ಚಾಕ್ಕಿಟ್ಟೇನಿ, ನಿಮಗೂ ತುಳಸಿ ಹಂಗ ತಿಂಡಿ ತಿನ್ಕೋತನ ಚಾ ಕುಡಿಯೂ ರೂಢಾ ಹೌದಿಲ್ರಿ” ಅಂದ. ಹಿಂದಿನ ಮನೆ ಹೆಂಗಸರ ಕತೆ ಏನಾಯ್ತಪ್ಪ ಎಂಬ ಒಳಗಿನ ಒತ್ತಡ ತಡೆದುಕೊಳ್ಳಲಾರದೆ ಪಾರಿಜಾತ ಕಿಡಕಿಯಾಚೆ ದೃಷ್ಟಿ ಹಾಯಿಸಿದಳು. ಅವಳ ದೃಷ್ಟಿಯನ್ನನುಸರಿಸಿದವನು ಅವಳ ಇಂಗಿತವನ್ನರಿತವನಂತೆ ಹಿಂದಿನ ಆಂಟಿಯವರು ಅಳಾಕ ಹತ್ತಿರಬೇಕಲ್ರಿ, ಪಾಪ ಅವರ ಮಗಳು ಇನ್ನ ಡಿಗ್ರಿನೂ ಮುಗದಿಲ್ರಿ, ಅಷ್ಟರಾಗ ಲವ್ ಮಾಡಾಕ ಶುರು ಮಾಡಿದಳ್ರಿ, ಅವರು ಗಡಿಬಿಡಿಗೆ ಬಿದ್ದು ಬ್ಯಾರೆ ಕಡೆ ಹುಡುಗನ್ನ ಹುಡುಕಿ ಮದ್ವಿ ಫಿಕ್ಸ ಮಾಡಿದರು, ಇಕಿ ರೆಜಿಸ್ಟರ್ ಆಗಿದ್ದು ಹೇಳೇ ಇಲ್ರಿ, ಒಮ್ಮಿಂದೊಮ್ಮಿಕಲೆ ನಿನ್ನೆ ಆಕಿ ಗಂಡನ ಪೈಕಿಯವ್ರು ನಿನ್ನೆ ಬಂದು ಕರಕೊಂಡು ಹೋದ್ರು. ಅದಕ್ಕ ಆಂಟಿ ಶಾಕ್ ಆಗ್ಯಾರ. ಮಜಾ ಅಂತಂದ್ರ ನಮಗಿಲ್ಲಿಂದ ಆ ಮನಿ ಹಿತ್ತಲಷ್ಟೇ ಕಾಣ್ತದರಿ. ಆಂಟಿ ಕೆಲಸದಾಕಿ ಮುಂದ, ಬಾಜೂದವರ ಜೋಡಿ ಮಾತಾಡೂವಾಗ ಕಿವಿಗೆ ಬಿದ್ದಷ್ಟು ವಿಷಯದಿಂದಲೇ ಅವರ ಪ್ರಪಂಚಾನ ತಿಳಕೊಳ್ಳುದು. ಅವರ ಮಗಳು ಒಗಿಯೂ ಕಲ್ಲ ಮ್ಯಾಲ ಕೂತು ಮೊಬೈಲದಾಗ ಮಾತಾಡೂದು ನೋಡಿ ಆಕಿ ಲವ್ ವಿಷಯ ತಿಳದಿತ್ರಿ. ಆದರ ಅವರ ಮನಿಗೆ ಹೋಗಬೇಕಂದ್ರ ರೋಡಿನ್ಯಾಗ ಸುತ್ತು ಹಾಕಿ ಹೋದ್ರ ಎರಡು ಕಿಲೊಮೀಟರ್ ಆಕ್ಕೇತ್ರಿ. ಹಂಗಂತ ಕಿಡಕಿ ತೆಗೆದ ನಿಂತ್ರ ಅವರ ಖಾಸಾ ವಿಷಯಗಳೂ ಗೊತ್ತಾಗ್ತಾವ, ನಮಗವ್ರ ಹೆಸರ ಗೊತ್ತಿಲ್ಲ, ಅಂಕಲ್ ಮಾರಿ ನೋಡಿಲ್ಲ ಆದ್ರ ನಿನ್ನೆ ಆ ಹುಡುಗಿ ಹೋದ್ಲು ಅಂತ ಕಂಪೌಂಡಿಗೆ ನಿಂತು ಬಾಜೂದವರ ಮುಂದ ಆಂಟಿ ಅಳಕೋತ ಹೇಳದಾಗ ಓಡಿ ಹೋಗಿ ಅಂಕಲ್ ಅವರಿಗೆ ಸಮಾಧಾನ ಮಾಡೋಣ ಅಂತ ಅನಸಾಕ ಹತ್ತಿತ್ತು ನೋಡ್ರಿ, ಆದರೆ ನಮ್ಮ ಅಸ್ತಿತ್ವ ಅವರಿಗೆ ಗೊತ್ತಿಲ್ಲ, ನಾವಿಲ್ಲಿ ನಿಂತ್ರ ಅವರ ಕಣ್ಣಿಗೆ ಕಾಣೂದೂ ಇಲ್ಲ. ಏಳಂತಸ್ತಿನ ಅಖಂಡ ಫ್ಲ್ಯಾಟೊಳಗಿನ ಅಸಂಖ್ಯ ಕಿಡಕಿಗಳೊಳಗ ನಮ್ಮದೂ ಒಂದು ಪುಟ್ಟ ಕಿಡಕಿ ಅಷ್ಟೆ.

ಅದಾಗಲೇ ಮೂರು ದೋಸೆ ತಿಂದಿದ್ದ ಪಾರಿಜಾತ ಸಾಕೆನ್ನುತ್ತ ಪ್ಲೇಟನ್ನು ಸಿಂಕಿಗೆ ಹಾಕಿ ಕೈ ತೊಳೆದಳು. ಕರೆಗಂಟೆಯ ಸದ್ದಿಗೆ ಬಾಗಿಲು ತೆರೆದ ತರುಣ ಗುಡ್ ಮಾರ್ನಿಂಗ್ ಮೈ ಡಿಯರ್ ಪ್ರಿನ್ಸೆಸ್ ಬಿಸಿ ದೋಸೆ ತಿನ್ನಾಕೆಂತ ಬಾ ಎಂದು ಅಕ್ಷಿಯನ್ನು ಆಲಂಗಿಸಿಕೊಂಡ. “ನೀವ್ಯಾವಾಗ ಬಂದ್ರಿ? ಅಕ್ಕಾನ ಪರಿಚಯ ಮಾಡ್ಕೊಂಡ್ರಿ? ಇಂವ ಯಾವ ಕಳ್ಳ ಬಂದ ಅಂತ ಅವರು ಹೆದರಿದ್ರೇನು ಮತ್ತೆ?” ಎಂದ ತುಳಸಿಗೆ, “ಅವರ್ಯಾಕ ಹೆದ್ರತಾರ, ಕಾಲೇಜು ಮೇಡಂ ಇದ್ದರವ್ರು ಶಾಣೆ ಇರ್ತಾರ ಮತ್ತ, ಬಾ ನೀನೂ ದೋಸೆ ತಿನ್ನೋಣು” ಎನ್ನುತ್ತ ಕಿಚನ್ನಿಗೆ ನಡೆದ. ತಾನಿಲ್ಲದಾಗ ತಾನು ಪರಿಚಯಿಸದಿರುವ ತನ್ನ ಅಂತರಂಗವೊಂದು ಅನಾವರಣಗೊಂಡಿರುವ ಸಂಕೋಚದಿಂದ ಕಿಚನ್ನಿಗೆ ಬಂದ ತುಳಸಿಯ ಕೈಗೆ ದೋಸೆಯ ಪ್ಲೇಟು ಕೊಡುತ್ತ “ಅನ್ನ ಆಗೇತಿ ಪುಳಿಯೋಗರೆ ಕಲಸಲೊ ಹೆಂಗ?” ಅಂದ. “ನಾ ಮಾಡ್ತೇನಿ ನೀವು ತಿನ್ರಿ” ಎನ್ನುತ್ತ ತುಳಸಿ ಪ್ಲೇಟನ್ನು ಕೆಳಗಿಡಲು ಹೋದಳು. “ಅಪರೂಪಕ್ಕ ಅಕ್ಕಾ ಬಂದಾರ, ಮತ್ತೊಮ್ಮೆ ಬೇಕಂದಾಗ ಸಿಗ್ತಾರೇನ, ದ್ವಾಸಿ ಮಾಡೂದ ಇದ್ದೇ ಐತಿ, ಅವರ ಜೋಡಿ ಮಾತಾಡ್ಕೋತ ತಿನ್ನು ನಡಿ..” ಎಂದು ಅವಳನ್ನು ಹೊರ ದೂಡಿ “ಬಾರವ್ವ ರಾಜಕುಮಾರಿ ನಿನಗ ನಾನ ತಿನ್ನಸ್ತೇನಿ ತುಪ್ಪ ಬೆಲ್ಲ ಹಚ್ಚಲಿ” ಎನ್ನುತ್ತ ಅಕ್ಷಿಯನ್ನು ತಬ್ಬಿಕೊಂಡ. “ಅಕ್ಕಾ ನೀನು ಸಮಾ ಮಾಡಿ ತಿಂದ್ಯ ಇಲ್ಯ, ಇನ್ನೊಂದು ಬಿಸಿದು ತಿನ್ನೆ” ಎಂದು ಮಾತಾಡಿಸುತ್ತ ತುಳಸಿ ತಿನ್ನತೊಡಗಿದಳು. “ಮಾತಾಡ್ತಾ ಲಕ್ಷಿ ಇಲ್ದೆ ಒಂದು ಹೆಚ್ಚಿಗೇನೇ ತಿಂದಿ ಮಾರಾಯ್ತಿ, ಎಷ್ಟು ಚೊಲೊ ತೆಳ್ಳೇವು ಎರಿತ್ನೆ ಇಂವ, ಯಂಗೂ ಇಷ್ಟು ಚೊಲೊ ಯರೆಯಲ್ಲೆ ಬತ್ತಿಲ್ಲೆ” ಅಂದಳು. ಅಷ್ಟರಲ್ಲಿ ಮೊಬೈಲು ಹಾಡತೊಡಗಿತು.

ಹಲೊ ಎಂದೊಡನೆ ಆಕಡೆಯ ಧ್ವನಿ “ಅಕ್ಕಾ ನಾನು ಸುಧನ್ವ, ನಿದ್ದೆ ಆತಾ, ಏನಾದ್ರೂ ಮಾತಾಡದ್ಯಾ ಅಕ್ಕಾ, ಪಾಪ ನಿಂಗೆ ತೊಂದ್ರೆ ಕೊಡ್ತಾ ಇದ್ದಿ, ಆದ್ರೆ ಯನ್ನ ಟೆನ್ಷನ್ ಯಂಗೆ ಸುಮ್ನೆ ಕೂರಲ್ಲೆ ಕೊಡ್ತಾ ಇಲ್ಲೆ. ರಾತ್ರಿ ನಿದ್ರೆ ಬರದೆ ಎಷ್ಟೋ ತಿಂಗಳಾಗೋತು, ಮಗಳ ಮುಖನೇ ಕಣ್ಣೆದುರಿಗೆ ಬಂದಾಂಗಾಗ್ತು, ತುಳಸಿಯನ್ನ ಕೈ ಬಿಟ್ರೆ ವಿಷ ಕುಡಿಯದೇ ಸೈ ಅಕ್ಕಾ, ಮಧ್ಯಾಹ್ನ ಮಾಡ್ತಿ, ನೀ ಸಾವಕಾಶ ಟೈಮು ನೋಡಿ ಮಾತಾಡು..” ಎನ್ನುತ್ತ ಫೋನಿಟ್ಟ. ಥಟ್ಟನೆ ರಸಾಭಾಸವಾದಂತಾಗಿತ್ತು. ಪ್ರೀತಿ, ಲವಲವಿಕೆ ತುಂಬಿದ ವಾತಾವರಣದಲ್ಲಿ ಥಟ್ಟನೆ ಏನೋ ಅಪಸ್ವರ ಕೇಳಿದಂತೆ ಆಗಿತ್ತು. ಅಲ್ಲಾ ತನಗೇ ಹೀಗೆ ಅನ್ನಿಸಬೇಕಾದರೆ ತುಳಸಿಗೆ ಹೇಗೆ ಅನ್ನಿಸಬಹುದು. ಅಧಿಕೃತವಾಗಿ ಸಪ್ತಪದಿ ತುಳಿದು ಈ ಸಂಸಾರದ ಯಜಮಾನ ಅನ್ನಿಸಿಕೊಂಡ ಸುಧನ್ವ ಇಲ್ಲೀಗ ಅಪ್ರಸ್ತುತ ಅನ್ನಿಸುತ್ತಿದ್ದಾನೆ, ಅಪಶೃತಿ ಅನ್ನಿಸುತ್ತಿದ್ದಾನೆ… ಇದೆಂತಹ ವಿಪರ್ಯಾಸವಪ್ಪ ಅಂದುಕೊಳ್ಳುತ್ತ ಸ್ನಾನಕ್ಕೆ ನಡೆದಳು.

ಸ್ನಾನ ಮುಗಿಸಿ ಮೈಯೊರೆಸಿಕೊಳ್ಳುತ್ತಿರುವಾಗ ಹೊರಗೆ ತುಳಸಿಯೊಂದಿಗೆ ಆ ತರುಣ ಮಾತಾಡುತ್ತಿರುವುದು ಕೇಳಿಸುತ್ತಿತ್ತು. “ನೀ ಒಂದ್ಸಲ ಊರಿಗೆ ಹೋಗಿ ನಿಮ್ಮ ತಂದಿ ತಾಯಿ ಜೋಡಿ ಛಂದಾಗಿ ಕೂತು ಮಾತಾಡು. ಅವರೊಪ್ಪಿದರೆ ಸ್ವಲ್ಪ ದಿವಸ ಇಲ್ಲಿಗೆ ಕರಕೊಂಡು ಬಾ. ಅವರು ನನ್ನ ನೋಡಲಿ, ವಿಚಾರ ಮಾಡಲಿ, ಆಮ್ಯಾಲೆ ಅವರಿಗೂ ಒಪ್ಪಿಗೆ ಅನ್ಸಿದ್ರ ಮುಂದೆ ನೋಡೋಣು, ಇಲ್ಲಂದ್ರ ಹಿಂದಿನ ಮನಿ ಆಂಟಿ, ಅಂಕಲ್ ಹಂಗೆ ಅವರೂ ಮನಸ್ಸಿಗೆ ಬ್ಯಾಸರ ಮಾಡಿಕೊಂಡರ ನಮಗ ಒಳ್ಳೇದಾಗೂದಿಲ್ಲ, ತಿಳಿತಿಲ್ಲೊ” ಚೇಷ್ಟೆಯ ಧ್ವನಿಯೊಳಗ ತುಳಸಿ ಉತ್ತರಿಸಿದ್ದು ಕೇಳಿಸಿತು. “ಹೂಂನ್ರಿ, ಜಹಾಂಪನಾ, ಮಂಜೂರ್ ಅದರಿ, ನಿಮ್ಮ ಜೋಡಿ ಒಂದು ತಾಸು ಇದ್ರ ಸಾಕು ಅವರು ಹೂಂ ಅಂತಾರ, ಹೆತ್ತ ಕರುಳಿಗೆ ತಮ್ಮ ಮಗಳ ಸುಖಕ್ಕೆ ಯಾರು ಚೊಲೊ ಅಂತ ತಿಳಿದೇ ತಿಳಿತದ, ಅಕ್ಷಿ ಸ್ಕೂಲ್ ತಪ್ಪಿಸಿ ಹೋಗಲಿಕ್ಕೆ ಆಗಂಗಿಲ್ಲ, ನಾನವ್ರಿಗೆ ಫೋನು ಮಾಡಿ ಕರಿತೇನಂತ” “ಅಕ್ಕಾನ್ನ ಜಳಕ ಆಗಿದ್ರ ಅಕ್ಷಿಗೆ ನೀರು ಬಿಡಲಿಕ್ಕೆ ಹೇಳು, ಆಕೆದು ಸ್ಕೂಲು ಟೈಮ್ ಆತು, ನಿನಗಿವತ್ತು ಅಂಗಡಿಗೆ ಹೋಗಲಿಕ್ಕೆ ಲೇಟಾಗಬಹುದು, ಅಪರೂಪಕ್ಕೆ ಅಕ್ಕಾ ಬಂದಾರ, ನಾನ ಹೋಗಿ ಅಂಗಡಿ ತೆಗದಿರ್ತೇನಿ, ಪ್ಯಾಟಾಗಿನವು ಹೆಂಗೂ ನಮ್ಮ ಹುಡುಗರು ತಗದು ನೋಡ್ಕೋತಿರ್ತಾರ” ಬಾತ್ ರೂಮಿನಿಂದ ಹೊರ ಬಂದ ಪಾರಿಜಾತಳ ಕಡೆ ತಿರುಗಿ “ಅಕ್ಕಾ ನೀವಿವತ್ತು ಆರಾಮಾಗಿ ಉಳಿರಿ, ತುಳಸಿ ಸೂಟಿ ಮಾಡ್ತಾಳ ನಾನು ಅಂಗಡಿ ನೋಡ್ಕೋತಿನಿ” ಥಟ್ಟನೆ ಪಾರಿಜಾತ ಉತ್ತರಿಸಿದಳು. “ಅಯ್ಯೊ ಇಲ್ಲರಿ, ನಂಗೆ ರಜ ಇಲ್ಲ, ಈಗ ಹೊರಟರೆ ಮಧ್ಯಾಹ್ನದ ತನಕ ಮುಟ್ತೇನಿ, ಸಹಿ ಹಾಕಬಹುದು, ನನ್ನ ಕ್ಲಾಸು ಬ್ಯಾರೆದವರು ಅಡ್ಜಸ್ಟ ಮಾಡಿ ತಗೊತಾರೆ, ನೀವು ಬರ್ರಿ ನಮ್ಮೂರಿಗೆ, ಎಲ್ಲಾರೂ ಸೇರಿ ಪಿಕ್ ನಿಕ್ ಹೋಗೋಣು, ಭಾಳ ಛಂದ ಛಂದ ಪ್ಲೇಸ್ ಇದ್ದಾವೆ”.

ಪಾರಿಜಾತ ರೆಡಿ ಆಗುವಷ್ಟರಲ್ಲಿ ಅಕ್ಷಿಯನ್ನೂ ರೆಡಿ ಮಾಡಿದ. ಒಂದು ಮಿನಿಟು ಕೂಡ್ರಿ ಅಕ್ಕಾ ನಮಸ್ಕಾರ ಮಾಡ್ತೇನಿ ಅನ್ನುತ್ತ ಪಾರಿಜಾತಳನ್ನು ಕೂಡಿಸಿ ಕಾಲಿಗೆ ನಮಸ್ಕರಿಸಿದ, “ಅಕ್ಷಿ ದೊಡ್ಡಮ್ಮಗ ನಮಸ್ಕಾರ ಮಾಡು ಪುಟ್ಟಾ” ಅಂದ ಅವನ ಸಂಸ್ಕಾರಕ್ಕೆ ಬೆರಗಾದಳು. “ಆದಷ್ಟು ಲಗೂನ ನಿಮ್ಮ ಮನೋಭಿಲಾಷೆಗಳೆಲ್ಲ ಈಡೇರಲಿ, ನೂರ್ಕಾಲ ಸುಖವಾಗಿ ಬದುಕರಿ” ಅಂತ ಮನಸ್ಸು ತುಂಬಿ ಹಾರೈಸಿದಳು.

ಬಸ್ಸು ಹತ್ತಿ ಕಿಡಕಿ ಪಕ್ಕದ ಸೀಟಲ್ಲಿ ಕುಳಿತಾಗ ಸುಧನ್ವನ ಫೋನು. ಮಾತಾಡುವ ಮನಸ್ಸಾಗಲಿಲ್ಲ. ಕಟ್ ಮಾಡಿದಳು. ಪಟಪಟ ಮೆಸೇಜು ಟೈಪು ಮಾಡತೊಡಗಿದಳು. ಬದುಕಿನಲ್ಲಿ ಎಲ್ಲವೂ ಪುಕ್ಕಟೆಯಾಗಿ ಸಿಗುವುದಿಲ್ಲ. ಬಿತ್ತಿ ಬೆಳೆದಿದ್ದನ್ನೇ ಉಣ್ಣು ಎನ್ನುವುದು ಭಗವಂತನ ಆಜ್ಞೆ. ಸಂಸಾರ ಎನ್ನುವ ಮಂದಿರವನ್ನು ಕಟ್ಟುವಾಗ ಕೌಶಲ್ಯಕ್ಕಿಂತಲೂ ಮುಖ್ಯವಾಗಿ ಬೇಕಾಗಿರುವುದು ಶೃದ್ಧೆ ಮತ್ತು ತಾಳ್ಮೆ. ಪರಸ್ಪರರನ್ನು ಗೌರವಿಸಿ, ಪ್ರೀತಿಸಿ ನಂಬಿಕೆಯನ್ನು ಇರಿಸಿಕೊಂಡಿದ್ದರೆ ಅದು ಗರ್ಭಗುಡಿಯಲ್ಲಿ ಪ್ರಾಣಪ್ರತಿಷ್ಠೆ ಮಾಡಿದಂತೆ. ಅದಿಲ್ಲದೇ ಎಷ್ಟು ದೊಡ್ಡ ಕಟ್ಟಡ ಕಟ್ಟಿದರೂ ಪ್ರಯೋಜನವಿಲ್ಲ. ಇರುವುದೊಂದೇ ಜನ್ಮ. ಅವರವರ ಜೀವನವನ್ನು ಖುಷಿಯಿಂದ ಬದುಕುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಕಿಡಕಿಯಿಂದ ನೋಡುವವರು ಸಹೃದಯೀ ಪ್ರೇಕ್ಷಕರಾಗಬಹುದೇ ಹೊರತು ರಂಗಸ್ಥಳದ ವೇಷವಾಗಲು ಸಾಧ್ಯವಿಲ್ಲ. ನಿನಗೆ ಒಳ್ಳೆಯದಾಗಲೆಂದು ಹಾರೈಸುತ್ತೇನೆ. ಮೆಸೇಜನ್ನು ಸೆಂಡ್ ಮಾಡಿ ಮೊಬೈಲನ್ನು ಬ್ಯಾಗಿನಲ್ಲಿರಿಸಿ ಕಿಡಕಿಯಿಂದ ಹೊರಗೆ ನೋಡಿದಳು.

ಕೆರೆಯೊಳಗೆ ಬಾತುಗಳು ಶಾಲೆ ಹುಡುಗರಂತೆ ಸಾಲಾಗಿ ಓಡುತ್ತಿದ್ದವು. ಗಾಲಿಯ ಲಯಕ್ಕೆ ತಕ್ಕಂತೆ ತಾವರೆಗಳು ತಲೆಯಲ್ಲಾಡಿಸುತ್ತಿದ್ದವು. ಭಾಗವತರು ಯಾವಾಗಲೂ ಹಾಡುತ್ತಿದ್ದ ಪ್ರಸಿದ್ಧ ಪದ್ಯ ನೆನಪಾಯಿತು. “ನೀನೇ ಕುಣಿಸುವೆ ಜೀವರನು, ಶಂಕರ ನಾರಾಯಣ, ನೀನೇ ಕುಣಿಸಿ, ತಣಿಸಿ, ನಲಿಸುವೆ ಜೀವರನು”