ನನ್ನದೇ ಕಾಯ…

ನನ್ನದೇ ಕಾಯ…
ಆದರೇನು ಪ್ರಯೋಜನ?
ಹಂಗುತೊರೆದೊಗೆದ
ಮೂಳೆ ಮಜ್ಜೆಗಳ ಅಂಗಗಳೆಲ್ಲ –
ತಾಮ್ಮೊಳಗುಟ್ಟುಗಳ
ಬಚ್ಚಿಟ್ಟುಕೊಂಡು
ದಿನದೂಡುತಲಿವೆ

ಮನಸ್ಸಾಕ್ಷಿಯ ವಂಚಿಸುತ
ಕಾಲ ಕಳೆಯುತ್ತಲಿದೆ –
ಐದು ಮುಕ್ಕಾಲು ಅಡಿ
ಎತ್ತರದ ‘ನನ್ನದೇ ಕಾಯ’…

ಪಿಳಕಿಸುವೆರಡು ಕಣ್ಣುಗಳು
ಕಾಣಿಸಿಕೊಂಡ ವಿಕಾರಗಳ
ನಾಲಗೆಗೆ ರವಾನಿಸುತ್ತಿಲ್ಲ
ನೆನಪು ಶಕ್ತಿಯ ನಿರ್ದೇಶನವನ್ನು
ಚಾ ಚೂ ತಪ್ಪದೆ ಕೈ ಬೆರಳುಗಳು
ಬರೆವಣಿಗೆಯಲ್ಲಿ ಮೂಡಿಸುತ್ತಿಲ್ಲ
ಕಣ್ಣೆದುರೇ ಕಂಡ ಕಗ್ಗೊಲೆಗೆ
ಸಾಕ್ಷಿಯಾಗಿ ಕಟಕಟೆ ಹತ್ತಲು
ಹೇಡಿ ಮನಸ್ಸು ಒಪ್ಪುತ್ತಿಲ್ಲ!…

ಅಣ್ಣನಂತೆಯೇ
ಶಿವನಲ್ಲಿ ನಾನೂ ಬೇಡಿದೆ
ಆದರೂ, ನನ್ನದೇ —
ಕಾಯ ದಂಡಿಗೆಯಾಗಲೇಯಿಲ್ಲ
ಶಿರವು ಸೋರೆ ಯಾಗಲೇಯಿಲ್ಲ
ನರಗಳು ತಂತಿಗಳಾಗಲೇಯಿಲ್ಲ, ಇನ್ನು —
ಬತ್ತೀಸ ರಾಗಗಳೆಲ್ಲಿಂದ ಬಂದಾವು?…
ಲಿಂಗವ ಮರೆತ ಭವಿಯಲ್ಲಿ…

ನನ್ನದೇ ದೇಹದೆರಡು –
ಕಣ್ಣುಗಳು ಅಂಧಕನಂತಾಗಿವೆ
ಬಾಯಿ ಕೊಟ್ಟಮಾತು
ಮರೆತು ಪರದಾಡುತಲಿದೆ
ಕಾಯಕಕ್ಕೆಳೆಸದೆರಡು ಕೈಗಳು
ಕಸುವಿಲ್ಲದ ಕಾಲುಗಳು
ಹಾಡಿಗೆಳೆಸದ ಕೊರಳು
ಜೀವಂತ ಕಾಯ
ಜೀವವಿಲ್ಲದ ಕೊರಡಾಗಿದೆ…

ಇರುವಿಕೆಯಲ್ಲಿ ಬೆರಗು ತುಂಬಲು
ತುಡಿಯುಯುತ್ತಿದೆ ಒಳತೋಟಿ …
ಅದಕ್ಕಾಗಿ; ಮತ್ತೆದಕ್ಕೋ ಆಗಿ —
ಬರಡುನೆಲದಂತಹ ದೇಹದಲ್ಲಿ
ಚಿಲುಮೆಗಳ ಪುಟಿದೆಬ್ಬಿಸುವೆ!?

ಬಂಜರು ನೆಲಕೆ ನೀರುಣಿಸಿ
ಬೆಳೆ ಬೆಳೆದು ತೆನೆಗಳ
ತೂಗಾಡಿಸುವೆ…
ನವಿಲುಗಳ ಕುಣಿದಾಡಿಸಿ
ಹಕ್ಕಿಗಳ ಚಿಲಿ ಪಿಲಿ ಹಾಡು
ಬಾನಿನಲ್ಲಿ ತೇಲಾಡಿಸುವೆ…

ಕೋಣೆಯ ಮೂಲೆಯಲಿ —
ಚೀಲ ಹೊದ್ದು ಧೇನಿಸುತಿರುವ
ಯೋಗ ನಿದ್ರೆಯ
ವೀಣೆಗೆ ಹೊರತೆಗೆದು
ತಂತಿ ಬಿಗಿಗೊಳಿಸಿ –
ಶ್ರುತಿಹೊಮ್ಮಿಸಿ
ಬತ್ತೀಸು ರಾಗಗಳಲ್ಲಿನ
‘ಮುಂಜಾನೆ ರಾಗಗಳನ್ನು’
ಝೇಂಕರಿಸುತ್ತ –
ಮಧುರ ನಾದ ಹೊರಡಿಸುವೆ
ನನ್ನದೇ ಕಾಯದಲ್ಲಿ…

ಎಂತಾದರೂ –
ಬದುಕಲೇ ಬೇಕಲ್ಲ
ಇಂದು ಸರಿದರೂ
ರವಿ ಬೆಳಗುವ ಸೊಬಗಿನ
ನಾಳೆಗಳಿಗಾಗಿ….

ಪ್ರಭುರಾಜ ಅರಣಕಲ್ ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಅರಣಕಲ್‌ನವರು
ಮೌನ ನುಂಗುವ ಶಬ್ದಗಳು ಇವರ ಪ್ರಕಟಿತ ಕವನ ಸಂಕಲನ