ಮಾಳ ಎಂಬುದು ನಕ್ಷೆಯಲ್ಲಿ ನೀವು ಗುರುತಿಸಲಾಗದ ಒಂದು ಪುಟ್ಟ ಹಳ್ಳಿ. ಲೇಖಕರು ಹೇಳುವ ಹಾಗೆ ಈ ಮಾಳ “ಪಶ್ಚಿಮ ಘಟ್ಟದ ಕೆಳಗಿನ ಹಸಿರು ತೊಟ್ಟಿಲು”. ಅಷ್ಟೇ ಅಲ್ಲ ಈ ಮಾಳವನ್ನೇ ಬಳಸಿ ಸಹ್ಯಾದ್ರಿ ತಟದ ಊರುಗಳಾದ ಕುದುರೆ ಮುಖ, ಹೊರನಾಡು, ಕಳಸ, ಶೃಂಗೇರಿಗಳ ದಾರಿ ಹಿಡಿದರಂತೂ ಇಷ್ಟು ದಿನ ಕಳೆದುಕೊಂಡ ಹೊಸ ಜಗತ್ತೊಂದು ದುತ್ತನೆ ಎದಿರು ಬಂದು ಮೂಡುತ್ತದೆ. ಹೀಗೆ ಎದುರಾಗುವ ದಿವ್ಯ ಜಗತ್ತನ್ನು ಸುಮಾರು ಎಂಬತ್ತಕ್ಕೂ ಮಿಕ್ಕ ಪುಟಗಳಲ್ಲಿ, ಸುಮಾರು ೨೧ ಪರಿಛೇದಗಳಲ್ಲಿ ನಮ್ಮ ಮುಂದೆ ಇಡುತ್ತಾರೆ ಲೇಖಕರು.
ಪ್ರಸಾದ್ ಶೆಣೈ ಆರ್.ಕೆ. ಬರೆದ “ಒಂದು ಕಾಡಿನ ಪುಷ್ಪಕ ವಿಮಾನ” ಪುಸ್ತಕಕ್ಕೆ ಡಾ.ನಾ ಡಿಸೋಜ ಬರೆದ ಮಾತುಗಳು.

 

ನಾವು ಕಳೆದುಕೊಳ್ಳುತ್ತಿರುವ ಜಗತ್ತನ್ನು ನೆನಪಿಸುವ ಬರಹಗಳು..

ನನ್ನ ಕಿರಿಯ ಗೆಳೆಯರಾದ ಕಾರ್ಕಳದ ಪ್ರಸಾದ್ ಶೆಣೈ ಬರೆದ ಈ ಪುಸ್ತಕ ಕತೆಯೂ ಅಲ್ಲ, ಕಾದಂಬರಿಯೂ ಅಲ್ಲ, ನಾಟಕವೂ ಅಲ್ಲ, ಕಾವ್ಯವಂತೂ ಖಂಡಿತ ಅಲ್ಲ. ಆದರೆ ತನ್ನ ಒಟ್ಟು ರಚನೆಯಲ್ಲಿ ಇವೆಲ್ಲವನ್ನೂ ಒಳಗೊಂಡಿರುವ ಕೃತಿ. ಈ ಕೃತಿ ಕತೆಯಂತೆ ಓದಿಸಿಕೊಂಡು ಹೋಗುತ್ತದೆ, ಕಾದಂಬರಿಯಂತೆ ತಲೆ ಮಾರುಗಳ ಪರಿಚಯ ಮಾಡಿಕೊಡುತ್ತದೆ, ನಾಟಕದಂತೆ ಹಲವು ಪಾತ್ರಗಳನ್ನ ತಂದು ನಮ್ಮ ಮುಂದೆ ನಿಲ್ಲಿಸುತ್ತದೆ, ಕಾವ್ಯದಂತೆ ನಮ್ಮ ಮನಸ್ಸನ್ನ ಅರಳಿಸುತ್ತದೆ. ಈ ಎಲ್ಲ ಕೆಲಸಗಳನ್ನ ಈ ಕೃತಿ ಮಾಡಲಿಕ್ಕೆ ಮುಖ್ಯ ಕಾರಣ ಇದು ನಮ್ಮ ಸುತ್ತಲಿನ ಪರಿಸರವನ್ನ ಕುರಿತು ಬರೆಯಲಾದದ್ದು.

ಯಾವ ಪರಿಸರವನ್ನು ನಮ್ಮ ಹಿರಿಯರು ಕಾಪಾಡಿಕೊಂಡು ಬಂದರೋ, ಯಾವ ಪರಿಸರವನ್ನು ನಮ್ಮ ಬೇಜವಾಬ್ದಾರಿಯಿಂದ ನಾವೇ ಇಂದು ಕಳೆದುಕೊಳ್ಳುತ್ತಿದ್ದೇವೆಯೋ ಅದರ ಬಗ್ಗೆ ಈ ಕೃತಿ ಹೇಳುವುದರಿಂದ ನಾವು ಉಸಿರು ಬಿಗಿ ಹಿಡಿದು ಓದುವ ಪರಿಸ್ಥಿತಿ ಉದ್ಭವವಾಗುತ್ತದೆ.

ಈ ಕೃತಿ ನಮಗೆ ಕಚಗುಳಿ ಇಡುತ್ತದೆ, ಕವಿಯುತ್ತಿರುವ ಶೂನ್ಯದತ್ತ ನಾವು ತಿರುಗಿ ನೋಡುವಂತೆ ಮಾಡುತ್ತದೆ, ಮನಸ್ಸನ್ನು ಅರಳಿಸುತ್ತದೆ, ಅಚ್ಚರಿ ಪಡಿಸುತ್ತದೆ. ನಾವು ಏನೆಲ್ಲವನ್ನು ಕಳೆದುಕೊಂಡೆವಲ್ಲ ಎಂದು ನಮ್ಮನ್ನ ಗಾಬರಿಗೊಳಿಸುತ್ತದೆ.

(ಪ್ರಸಾದ್ ಶೆಣೈ ಆರ್.ಕೆ.)

ಮಾಳ ಎಂಬುದು ನಕ್ಷೆಯಲ್ಲಿ ನೀವು ಗುರುತಿಸಲಾಗದ ಒಂದು ಪುಟ್ಟ ಹಳ್ಳಿ. ಲೇಖಕರು ಹೇಳುವ ಹಾಗೆ ಈ ಮಾಳ “ಪಶ್ಚಿಮ ಘಟ್ಟದ ಕೆಳಗಿನ ಹಸಿರು ತೊಟ್ಟಿಲು”. ಅಷ್ಟೇ ಅಲ್ಲ ಈ ಮಾಳವನ್ನೇ ಬಳಸಿ ಸಹ್ಯಾದ್ರಿ ತಟದ ಊರುಗಳಾದ ಕುದುರೆ ಮುಖ, ಹೊರನಾಡು, ಕಳಸ, ಶೃಂಗೇರಿಗಳ ದಾರಿ ಹಿಡಿದರಂತೂ ಇಷ್ಟು ದಿನ ಕಳೆದುಕೊಂಡ ಹೊಸ ಜಗತ್ತೊಂದು ದುತ್ತನೆ ಎದಿರು ಬಂದು ಮೂಡುತ್ತದೆ. ಹೀಗೆ ಎದುರಾಗುವ ದಿವ್ಯ ಜಗತ್ತನ್ನು ಸುಮಾರು ಎಂಬತ್ತಕ್ಕೂ ಮಿಕ್ಕ ಪುಟಗಳಲ್ಲಿ, ಸುಮಾರು ೨೧ ಪರಿಛೇದಗಳಲ್ಲಿ ನಮ್ಮ ಮುಂದೆ ಇಡುತ್ತಾರೆ ಲೇಖಕರು. “ಇಡುತ್ತಾರೆ” ಅನ್ನುವ ಶಬ್ದ ಇಲ್ಲಿ ಹಗುರವಾಯಿತು ಎಂದು ನನಗನ್ನಿಸುತ್ತದೆ. ಈ ಬೆಟ್ಟ. ಕಾಡು, ಕಣಿವೆ, ಗುಡ್ಡ, ಝರಿ, ನದಿ, ಹಳ್ಳ, ಬಳ್ಳಿ, ಕಾಡು ಬಂಡೆ, ಹಕ್ಕಿ, ಪ್ರಾಣಿ, ಗಿಡ, ಎಲೆ, ಇವುಗಳೆಲ್ಲದರ ಪರಿಚಯವೂ ಇಲ್ಲಿ ಲಭ್ಯ. ಜೊತೆಗೆ ಕಾಡನ್ನು ಆವರಿಸಿಕೊಳ್ಳುವ ಬಿಸಿಲು, ಬೆಳದಿಂಗಳು, ಮಳೆ, ಮಂಜು, ಇಬ್ಬನಿಗಳ ಪರಿಚಯ, ಬಿಸಿಲು ಮೂಡುವ ಮುನ್ನ ಒಂದು ಬೆಟ್ಟ ಇರುವ ಪರಿ, ಬಿಸಿಲು ಸರಿದು ಹೋದ ನಂತರ ಅದೇ ಬೆಟ್ಟ ಧರಿಸುವ ಅದರ ರೂಪ. ಹೀಗೆಯೇ ಮಂಜು-ಮಳೆ ಆಡುವ ವಿವಿಧ ಬಗೆಯ ಆಟ ಇವುಗಳ ಬಗ್ಗೆಯೂ ಬರೆಯುತ್ತಾರೆ ಲೇಖಕರು. ಇಂತಹ ನಿಗೂಢ ಅರಣ್ಯದ ನಡುವೆ ಬದುಕಿದ ಜನರ ಪರಿಚಯ ಮಾಡಿಕೊಡುತ್ತಾರೆ. ಈ ಜನರ ಕಷ್ಟ, ನಷ್ಟ. ಇವರು ಇರುವ ಈ ಅರಣ್ಯಕ್ಕೆ ಬಸ್ಸು ಬಂದದ್ದು, ಅದರಿಂದ ಆದ ಅನುಕೂಲ, ಅನಾನುಕೂಲ ಇವುಗಳ ಪರಿಚಯ ಕೂಡ ಇಲ್ಲಿದೆ.

ಇಂತಹ ಕಾಡಿನಲ್ಲಿ ಜನ ಇರಲಿಕ್ಕೇನೆ ಸಾಧ್ಯವಿಲ್ಲ ಅಂದುಕೊಳ್ಳುವಾಗ ಕೆಲ ವ್ಯಕ್ತಿಗಳ ಪರಿಚಯ ನಮಗಾಗುತ್ತದೆ. ಮೊದಲು ಕಾರ್ಕಳದ ಬೆಟ್ಟದ ಮೇಲೆ ನಿಂತು ಸುತ್ತಲಿನ ಜಗತ್ತನ್ನು ನೋಡುತ್ತಿರುವ ಬಾಹುಬಲಿ, ನಂತರ ೮೨ರ ಹರೆಯದ ಶಂಕರ ಜೋಶಿ, ಅವರ ಮಗ ರಾಧಾಕೃಷ್ಣ ಜೋಶಿ, ವಿಠಲ ಶೆಟ್ಟರು, ಜೇನು ಕತ್ತರಿಸುವ ರುದ್ರಯ್ಯ ಗೌಡ, ಸತೀಶ ಮರಾಠೆ, ಆಗುಂಬೆಯ ಜನ್ನಿ, ಜನ್ನಿಫರ್ ಎಂಬ ಅಜ್ಜಿ, ದಟ್ಟ ಕಾಡಿನ ಪುಟ್ಟ ಮನೆಯ ಅಯ್ಯಪ್ಪ ಭಕ್ತ, ದೇವರ ಗುಂಡಿಯ ಯಶವಂತಜ್ಜ, ಗೋಡೆ ತುಂಬ ಕಲಾಕೃತಿಗಳನ್ನು ಹೊತ್ತು ನಿಂತ ಚಿಂಪ್ಲೂಕರರ ದೊಡ್ಡ ಮನೆ, ಹೀಗೆ ಪಶ್ಚಿಮಘಟ್ಟದ ದಟ್ಟ ಕಾನನದ ನಡುವೆಯೂ ಬದುಕಿನಲ್ಲಿ ಆಸಕ್ತಿ ಇರಿಸಿಕೊಂಡು ಬದುಕಿದ ಜನ ಪುಸ್ತಕದ ಪುಟಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

“ಮದುವೆಯಾದರೆ ಸಮಾಜ ಸೇವೆ ಮಾಡಲಿಕ್ಕೆ ಆಗುವುದಿಲ್ಲ” ಎಂಬ ಕಾರಣಕ್ಕೆ ಮದುವೆಯನ್ನೇ ನಿರಾಕರಿಸಿದ ಜನ್ನಿಫರ್ ಅಜ್ಜಿಯಂತಹ ವ್ಯಕಿಗಳೂ ಇಲ್ಲಿ ಸಿಗುತ್ತಾರೆ, ಈ ವಯಸ್ಸಾದವರು ಕಾಡಿಗೆ ಅಂಟಿಕೊಂಡೇ ಬದುಕುವ ರೀತಿ ರೋಮಾಂಚಕ. ಕಾಡಿನಲ್ಲಿರುವ ಪ್ರತಿಯೊಂದನ್ನೂ ಪ್ರೀತಿಸುತ್ತ, ಗೌರವಿಸುತ್ತ, ಕಾಡ ನಡುವೆ ಯಾವುದೋ ಕಲ್ಲು ಬಂಡೆ, ಕೂತ ಕರಡಿಯ ಹಾಗೆ ಕಾಣುವುದನ್ನ ಕಂಡು ರೋಮಾಂಚನಗೊಳ್ಳುವ ಇವರ ವನ ಪ್ರೀತಿ ಇಲ್ಲಿ ಸ್ಪಷ್ಟವಾಗುತ್ತದೆ.

ದಾರಿಯಲ್ಲಿ ಎದುರಾಗುವ ಅಷ್ಟೂ ಜಲಪಾತಗಳ ಬಗ್ಗೆ ಬರೆಯುತ್ತಾರೆ ಲೇಖಕ ಪ್ರಸಾದ್. ಈ ಜಲಪಾತಗಳು ಇವರ ಮನಸ್ಸಿನಲ್ಲಿ ಹುಟ್ಟಿಸುವ ವಿಚಾರಗಳು ಅತ್ಯಪೂರ್ವ. ಜಲಪಾತಗಳನ್ನು ನೋಡಿ ಮೈಮರೆತ ಲೇಖಕರು ಹೇಳುವ ಈ ಮಾತುಗಳನ್ನು ಕೇಳಿ-

“ಸುಮಾರು ೧೬೦=೧೮೦ ಅಡಿ ಎತ್ತರದಿಂದ ಧುಮುಕುವ ಜಲಪಾತವನ್ನೇ ಒಮ್ಮೆ ಧ್ಯಾನಸ್ಥನಾಗಿ ನಿಂತು ನೋಡಬೇಕು, ನೋಡುತ್ತಾ, ನೋಡುತ್ತಾ ಅದು ಜಲಪಾತ ಅನ್ನುವುದೇ ಮರೆತು ಹೋಗುತ್ತದೆ, ನಮ್ಮ ಮನಸ್ಸೇ ಅದು ಅನ್ನಿಸಲು ಶುರುವಾಗುತ್ತದೆ. ಮಳೆಗಾಲ ಕಳೆದದ್ದೇ ಶಾಂತವಾಗುವ, ಎಲ್ಲಾ ಕಾಲದಲ್ಲೂ ತನ್ನ ಚೆಲುವನ್ನು ಕಳೆದುಕೊಳ್ಳದ ಜಲಪಾತಕ್ಕೆ ಎಷ್ಟೊಂದು ಗುಣಗಳಿವೆ, ಅದರ ಜೊತೆ ನಾವೂ ಎಚ್ಚರವಾಗಿದ್ದರೆ ಅದರ ಚೆಲುವನ್ನೂ ತಂಪನ್ನು ಆಸ್ವಾದಿಸಬಹುದು, ಎಚ್ಚರ ಮರೆತರೆ ಅದರ ಧಾರೆಯ ಜೊತೆಗೆ ನಾವೂ ಕೊಚ್ಚಿ ಹೋಗಲೂಬಹುದು. ನಾವು ಕಂಡ ಕನಸು, ಬಾಳಿನ ಮೂಲೋದ್ದೇಶ, ಸಂಸಾರ, ಯೌವನದ ಕನಸು, ಗುರಿ, ಇವನ್ನೆಲ್ಲಾ ಒಂದೇ ಒಂದು ಕ್ಷಣದಲ್ಲಿ ಶೂನ್ಯವಾಗಿಸಿ ಬಿಡಲು ಪ್ರಕೃತಿಗೆ ಎಷ್ಟು ಹೊತ್ತು ಬೇಕು”

ಕೇವಲ ಜಲಪಾತದ ಬಗ್ಗೆ ಮಾತ್ರವಲ್ಲ, ಕಾಡಿನ ಹಕ್ಕಿ, ಎಲೆ, ಬಳ್ಳಿ ಅವುಗಳ ಗುಣ ಸ್ವಭಾವಗಳ ಬಗ್ಗೆ ಕೂಡ ಲೇಖಕರು ಬರೆಯುತ್ತಾರೆ, ಹಾಗೆಯೇ ನಸುಕಂದು, ಪೂರ್ತಿಕಂದು, ತಿಳಿಬಿಳಿ, ಕಪ್ಪುಬಿಳಿ, ಚುಕ್ಕೆ ಚುಕ್ಕೆ ಬಣ್ಣದ ಗೋವುಗಳ ಮುಂದೆ ತನ್ನ ಶಕ್ತಿ ಪ್ರದರ್ಶನ ಬೇಡವೆಂದು ತನ್ನ ಬಾಲ ಅಲ್ಲಾಡಿಸುವ ಬೇಟೆ ನಾಯಿ ಬಾಡುವಿನ ಬಗ್ಗೆಯೂ ಇಲ್ಲಿ ಬರಹವಿದೆ.

(ಡಾ. ನಾ. ಡಿಸೋಜ)

ಮಾಳದಿಂದ ಹೊರಟು ಚಾರ್ಮಾಡಿ, ಆಗುಂಬೆಗಳನ್ನು ಸುತ್ತಿ ಈ ತಂಡ ಕೊನೆಯಲ್ಲಿ ಕೊಡೆಕಲ್ಲು, ಬಾಳೇ ಕಲ್ಲು ದಾಟಿ, ಕೊನೆಯದಾಗಿ ಎಂಬಂತೆ ಜೇನು ಕಲ್ಲಿಗೆ ಬಂದು ತಲುಪುತ್ತದೆ, ಆಗ ಭರತವಾಕ್ಯ ಅನ್ನುವ ಹಾಗೆ ಹಿರಿಯರಾದ ದಿನೇಶ ಹೊಳ್ಳರು ಒಂದು ಮಾತನ್ನ ಹೇಳುತ್ತಾರೆ-

“ಮನುಷ್ಯ ಕಾಡನ್ನ ಎಷ್ಟೊಂದು ನಾಶ ಮಾಡಿದ್ದಾನೆ. ದೂರದಲ್ಲಿ ಕಾಣುತ್ತಿರುವ ರೆಸಾರ್ಟ್ ಗಳು, ಹಸಿರಿನ ಹೆಸರು ಹೇಳಿಕೊಂಡು ಶಿಕಾರಿಗೆ ಅವಕಾಶ ನೀಡುತ್ತಿವೆ, ನದಿ ಮೂಲಗಳನ್ನು ನಾಶಮಾಡುತ್ತಿವೆ. ರಬ್ಬರ್ ತೋಟಗಳ ಬಿಸಿಗೆ ಕಾಡ ಜೀವಿಗಳು ಕಂಗಾಲಾಗಿವೆ” ಎನ್ನುವಾಗ ಇದರ ಹಿಂದೆಯೇ ಇನ್ನೊಂದು ಮಾತು ಕೇಳಿ ಬರುತ್ತದೆ. ಲೇಖಕ ಪ್ರಸಾದ್ ಶೆಣೈ ಹೇಳುತ್ತಾರೆ “ನಮ್ಮ ಬದುಕಿಗೆ ಉಸಿರನ್ನೇ ಕೊಡುವ ಪಶ್ಚಿಮಘಟ್ಟವನ್ನು ಉಳಿಸಲು ಯುವಕರ ಹಸಿರು ಪಡೆಯೊಂದು ಸಿದ್ಧವಾಗಬೇಕು” ಎಂದು ಲೇಖಕರಿಗೆ ಅನಿಸಿದಾಗ ದೂರದ ಮಿಂಚು ಕಲ್ಲು ಹೊಳೆಯುತ್ತದೆ.

ಪರಿಸರದ ಬಗ್ಗೆ ಆಸಕ್ತಿ ಇಲ್ಲದ ಸರಕಾರಿ ವ್ಯವಸ್ಥೆ, ನಮ್ಮ ರಾಜಕಾರಣಿಗಳ ಬೇಜವಾಬ್ದಾರಿತನ, ನಮ್ಮ ಜನ ಸಾಮಾನ್ಯರ ಹೊಣೆಗೇಡಿತನ ಪಶ್ಚಿಮ ಘಟ್ಟಗಳ ನಾಶಕ್ಕೆ ಕಾರಣವಾಗುತ್ತಿರುವಾಗ ಈ ಪುಸ್ತಕ ಅದನ್ನು ಉಳಿಸಲು ಸ್ಫೂರ್ತಿ ನೀಡಲಿ ಎಂದು ಹಾರೈಸುತ್ತೇನೆ, ಪ್ರಸಾದ್ ಶೆಣೈ ಅವರ ಪ್ರಯತ್ನ ಯಶಸ್ವಿಯಾಗಲಿ.

 

(ಪುಸ್ತಕ: ಒಂದು ಕಾಡಿನ ಪುಷ್ಪಕ ವಿಮಾನ, ಲೇಖಕರು: ಪ್ರಸಾದ್ ಶೆಣೈ ಆರ್.ಕೆ, ಪ್ರಕಾಶಕರು: ಬೆನಕ ಬುಕ್ಸ್ ಬ್ಯಾಂಕ್, ಬೆಲೆ: 150/-)