ಮನೆಗೊಂದು ಹೆಣ್ಣಿದ್ದರೆ ಮನೆಗೆ ಮನೆಯೇ ಆ ಹೆಣ್ತನದ ವಿಶೇಷ ಮುಗ್ದತೆ ಆವರಿಸಿಕೊಳ್ಳುತ್ತದೆ. ಬೇಕಿದ್ದರೆ ನೋಡಿ ಒಂದೆರಡು ದಿನ ಮನೆಯಲ್ಲಿ ಅಮ್ಮನಿಲ್ಲದಿದ್ದರೆ ಮುಗೀತು. ಆ ಮನೆಯಲ್ಲಿ ಆವರಿಸಿಕೊಳ್ಳುವ ಮೌನ, ಸಪ್ಪೆ ಸಪ್ಪೆ ಎನ್ನಿಸುವಂತಹ ನೋಟ, ಅಂತದ್ದೇನೂ ಅಂದವಿಲ್ಲದೇ ಒಟ್ಟಾರೆ ಸಾಗುವ ದಿನಚರಿ, ಪ್ರೀತಿಯ ರುಚಿ ಇರದೇ ಹೊಟ್ಟೆಗೆ ಸುಮ್ಮನೇ ಹೋಗಿ ಕೂರುವ ನಾವೇ ಮಾಡಿದ ಅಡುಗೆ, ಇವೆಲ್ಲ ಅರ್ಥವಿಲ್ಲದ ಹಾಡಿನಂತೆ ತನ್ನ ಪಾಡಿಗೆ ಸಾಗುತ್ತದೆ. ಅದೇ ಅಮ್ಮನಿದ್ದರೆ ಅಲ್ಲಿ ಮೌನವಿರುವುದಿಲ್ಲ ಕಿಣಿ ಕಿಣಿ ಬಳೆಯ ಸದ್ದಿರುತ್ತದೆ, ಎಲ್ಲೆಲ್ಲೂ ಹೊಸ ನೋಟಗಳೇ ಕಾಣಿಸುತ್ತದೆ.
ಪ್ರಸಾದ್ ಶೆಣೈ ಬರೆಯುವ ಮಾಳ ಕಥಾನಕದ ಹತ್ತೊಂಬತ್ತನೆಯ ಕಂತು

 

ಒಳಕೋಣೆಯಲ್ಲಿ ಕೂತು ನಮ್ಮನ್ನೇ ಮಬ್ಬು ಕಣ್ಣುಗಳಲ್ಲಿ ನಿಟ್ಟಿಸುತ್ತಿದ್ದ ಆ ಹಿರಿಯ ಜೀವದ ಸುಕ್ಕುಗಟ್ಟಿ ಕಪ್ಪಗಾದ ಕೈಗಳು ಇಷ್ಟಿಷ್ಟೇ ನಡುಗುತ್ತಿದ್ದವು. ಅವರು ಗಟ್ಟಿಯಾಗಿ ಹಿಡಿದುಕೊಂಡಿದ್ದ ಆ ಮರದ ಕುರ್ಚಿಯ ಕೈಗಳು ಕೂಡ ನಡುಗುತ್ತಲೇ ಇದ್ದಾಗ ಮನೆಯ ಹಂಚಿನ ಮೇಲೆ ಜಿಟಿ ಜಿಟಿ ಎಂದು ಮಳೆ ಹನಿಗಳು ಬೀಳಲು ಶುರುವಾಗಿತ್ತು. ಆ ಸದ್ದಿಗೆ ಸಮನಾಗಿ ಈ ಅಜ್ಜ ಕೂಡ ವೃದ್ಧಾಪ್ಯದ ಏದುಸಿರು ಬಿಡುವ ಸದ್ದು, ಆ ಸದ್ದು, ಕ್ಷಣ ಬಿಟ್ಟು ಕ್ಷಣ ಬೇರೆ ಬೇರೆಯಾಗಿ ಕೇಳಿಸಿ ಮಳೆಯ ಸದ್ದಿನಲ್ಲಿ ಅಂತರ್ದಾನವಾಗುತ್ತಿತ್ತು. ನಾವು ತುಂಬಾ ಹೊತ್ತು ಮಾತಾಡಲು ಆಗದೇ ನಡುಗುತ್ತಲೇ ಕೂತಿದ್ದ ಆ ಅಜ್ಜನನ್ನು ನೋಡುತ್ತಲೇ ನಿಂತಿದ್ದಾಗ,

“ಅಪ್ಪನಿಗೆ ತೊಂಬತ್ತ ನಾಲ್ಕು ದಾಟಿತು. ಅವರು ಮಾತಾಡಿದ್ದು ನನಗೆ ಮಾತ್ರ ಅರ್ಥವಾಗುತ್ತದೆ. ಅವರ ಕಿವಿಗಳು ಮಂದವಾಗತೊಡಗಿ, ಇಡೀ ಮನೆಗೆ ಮನೆಯೇ ಕೇಳಿಸುವಂತೆ ಬೊಬ್ಬೆ ಹೊಡೆದರೆ ಅವರ ಕಿವಿ ತುಂಬಿಕೊಳ್ಳುತ್ತದೆ ಅಷ್ಟೇ, ನೀವೆಲ್ಲಾ ಅವರಿಗೆ ಮಸುಕು ಮಸುಕಾದ ತೈಲಚಿತ್ರಗಳಂತೆ ಕಾಣಬಹುದು ಹೊರತು ನೀವು ಯಾರು? ನೋಡಲು ಹೇಗಿದ್ದೀರಿ? ಅಂತೆಲ್ಲಾ ಆ ಕಣ್ಣುಗಳಿಗೆ ಅರ್ಥವಾಗುವುದಿಲ್ಲ” ಎಂದು ಅಜ್ಜನ ಮಗ ಶಾಂತರಾಮ ಚಿಪ್ಲೂಂಕರ್, ಮಾತು ಶುರುಮಾಡಿದಾಗ ಅವರ ಮಾತಿನ ಒಂದೊಂದು ಸ್ವರ ಕೂಡ ಆ ದೊಡ್ಡ ಮನೆಯ ನಾಲ್ಕೂ ಸುತ್ತಲಿನ ಜಗಲಿಯಲ್ಲಿ ಅಡ್ಡಾಡಿ ಇಡೀ ಮನೆಯೇ ಹೊಸ ಜೀವಪಡೆದಂತಾಯ್ತು.

ಇದು ಚಿಪ್ಲೂಂಕರರ ದೊಡ್ಡ ಮನೆ, ಮಾಳ ಕಾಡಿನ ಮೂಲೆಯೊಂದರಲ್ಲಿ ಆಗ ತಾನೇ ಹೆಣೆದಿದ್ದ ಮಲ್ಲಿಗೆ ಮಾಲೆಯಂತೆ ಕೂತಿರುವ ಈ ಮನೆ ಮಳೆಗಾಲದಲ್ಲಂತೂ ಮುದ್ದಾಗಿ ಕಾಣುತ್ತದೆ. ಪ್ರಾಯವಾದ ಅಪ್ಪ ಮತ್ತು ಮಗ ಬದುಕುತ್ತಿರುವ ಈ ಮನೆಗೆ ಬರುವ ದಾರಿಯಲ್ಲೆಲ್ಲಾ ಮಾವಿನ ಪರಿಮಳ, ಕಾಡ ಸಂಪಿಗೆಯ ಇಷ್ಟಿಷ್ಟೇ ಘಮಲು, ಆಕಾಶಕ್ಕೇನೇ ಶಾಮಿಯಾನ ಹಾಕಿ ಕೂತುಬಿಟ್ಟಿದೆಯೇನೋ ಅನ್ನುವಂತಿರುವ ಕಾಡು ನೇರಳೆ, ಅಡಿಕೆ ಮರಗಳ ದಟ್ಟ ನೆರಳು, ಅಲ್ಲೇ ಸುಮ್ಮನೇ ಇವನ್ನೆಲ್ಲಾ ಅನುಭವಿಸೋಣ ಅಂತ ನಿಂತುಬಿಟ್ಟರೆ ಕಾಡಿನ ಸಕಲ ಸ್ವರಗಳೂ, ಎಲ್ಲೋ ಉದುರಿ ಬೀಳುತ್ತಿದ್ದ ಜಲಪಾತದ ಸದ್ದೂ, ಮತ್ತೇಲ್ಲೋ ಹಾಡುತ್ತಿರುವ ಸಿಳ್ಳಾರ ಹಕ್ಕಿಯ ಗಾನವೂ, ಅಲ್ಲೇ ದೂರದ ಮನೆಯಲ್ಲಿ ಪುಟ್ಟ ಮಕ್ಕಳಿಗೆ ಮುದ್ದಿನಿಂದ ಬೈಯುತ್ತಿದ್ದ ಅಮ್ಮನ ಹಿತವಾದ ಬೈಗುಳದ ಸದ್ದು ಕೇಳುತ್ತದೆ ಈ ದಾರಿಯಲ್ಲಿ.

ಆ ಮನೆ ಆಗತಾನೇ ಬಿದ್ದ ಮಳೆಗೆ ಜಗುಲಿಯಿಂದ ಕಾಣುತ್ತಿದ್ದ ಮನೆಯ ಮಾಡು ಎಷ್ಟು ಸೊಗಸಾಗಿ ಕಾಣುತ್ತಿತ್ತೆಂದರೆ ಹಂಚಿನ ಮೇಲೆ ಪಾಚಿಗಟ್ಟಿ ಇಡೀ ಮನೆಯೇ ಹಸಿರಿನ ಸೀರೆ ಹೊದ್ದು ಮಲಗಿಬಿಟ್ಟಿದೆಯೇನೋ ಅನ್ನಿಸುತ್ತಿತ್ತು. ತೋಟದಲ್ಲಿ ಕೆಂಪು ಕೆಂಪಾಗಿ ತೂಗುತ್ತಿರುವ ಗೊಂಚಲು ಮಾವಿನ ಅಂಚಿನಲ್ಲಿ ಕಾಜಾಣ ಹಕ್ಕಿ ಕೂತಿತ್ತು. ಅದು ಚೂರು ಚೂರು ಮಾವು ತಿಂದು ಮತ್ತೆ ಚೂರೇ ಹಾಡಿದಾಗ, ಚಿಪ್ಲೂಂಕರರ ಮನೆ, ಕೊಂಚ ನೀಲಂ ಮಾವಿನ ಪರಿಮಳದಿಂದ, ಮತ್ತೆ ಕೊಂಚ ಕಾಜಾಣದ ಹಾಡಿನಿಂದ ತುಂಬಿಕೊಳ್ಳುತ್ತಿತ್ತು.

ನಾವು ಅವರ ಮಾತನ್ನು ಕೇಳುತ್ತ ಅಲ್ಲೇ, ಗೋಡೆ ತುಂಬಾ ಕತೆ ಹೇಳುತ್ತಿದ್ದ ಕಲಾಕೃತಿಗಳನ್ನು, ಹಳೆಯ ಪಟಗಳನ್ನು ನೋಡುತ್ತಿದ್ದಂತೆಯೇ ಅದರಲ್ಲೊಂದು ಅಸದೃಶ್ಯ ಚೆಲುವಿದ್ದಂತೆಯೆ ಕಂಡಿತು. ನಾವು ಅದನ್ನೇ ಅಷ್ಟು ಸೂಕ್ಷ್ಮವಾಗಿ ನೋಡುತ್ತಿರುವುದನ್ನು ಗಮನಿಸಿದ ಶಾಂತರಾಮ ಚಿಪ್ಲೂಂಕರರು “ಅದು ನನ್ನ ಹೆಂಡತಿಯ ಫೋಟೋ” ಅಂತ ಮೌನವಾದರು. ಅವರ ಹೆಂಡತಿಯ ಬಗ್ಗೆ ಮೊದಲೇ ಕೇಳಿದ್ದರಿಂದ ಅವರು ಇತ್ತೀಚೆಗೆ ತೀರಿ ಹೋದದ್ದೂ ನಮಗೆ ಗೊತ್ತಿತ್ತು. ಈಗ ಶಾಂತಾರಾಮರ ಮೌನದಲ್ಲಿ ಅವರ ತೀರಿಹೋದ ಹೆಂಡತಿಯ ನೆನಪು, ನಗು, ಪ್ರೀತಿ, ಅಕ್ಕರೆ ಎಲ್ಲವೂ ಸಣ್ಣಗೇ ಹರಿಯುವ ತೊರೆಯ ಹಾಗೆ ಹರಿಯುತ್ತಿದ್ದಂತೆ ಕಂಡಿತು.

ಶಾಂತರಾಮ ಚಿಪ್ಲೂಂಕರರು ಕಾರ್ಕಳದ ತಹಶೀಲ್ದಾರರಾಗಿ ನಿವೃತ್ತರಾದವರು. ಸರಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತ ಅದರಲ್ಲೇ ಸಾಕಷ್ಟು ಬ್ಯುಸಿಯಾಗಿ ಕೊನೆಗೆ ನಿವೃತ್ತರಾಗಿ ಬಾಳಿನ ಸಾಕಷ್ಟು ಕ್ಷಣಗಳನ್ನು ಹೆಂಡತಿ ಮಕ್ಕಳ ಜೊತೆ ಕಳೆದರೂ, ಕೈ ಹಿಡಿದ ಪ್ರಾಣ ಸಖಿ ಬೇಗನೇ ಲೋಕ ಬಿಟ್ಟು ಹೋದರು. ಇದೀಗ ಕಾಡಿನ ಈ ದೊಡ್ಡ ಮನೆಯಲ್ಲಿ ಇವರು ಮತ್ತು ಅವರ ತಂದೆ ಗಣೇಶ ಚಿಪ್ಲೂಂಕರರು ಬದುಕುತ್ತಿದ್ದಾರೆ. ವಯೋಸಹಜ ಗುಣಗಳಿಂದ ಅಷ್ಟು ಮಾತಾಡಲು ಸಾಧ್ಯವಾಗದ ಅಪ್ಪನ ಜೊತೆ ಮಾತಾಡಲು ಇವರಿಗೆ ಕಷ್ಟವೇ, ಅವರ ಆರೈಕೆಯಲ್ಲಿಯೇ ದಿನ ಜಾರುತ್ತದೆ. ಉಳಿದೆಲ್ಲ ಹೊತ್ತು ಮಾಳದ ನಿಶ್ಚಲ ಮೌನದ ಜೊತೆಯೇ ಶಾಂತಾರಾಮರು ಮಾತಾಡುತ್ತಾರೆ. ಕಾಡಿನ ಮನೆಯಲ್ಲಿ ಓದು, ಹಳೆಯ ವಸ್ತುಗಳನ್ನೆಲ್ಲಾ ಮತ್ತೆ ಮತ್ತೆ ನೋಡುವ ಖುಷಿ, ಗತಿಸಿದ ಕಾಲದ ಮಧುರ ನೆನಪುಗಳಲ್ಲೇ ಕಳೆದುಹೋಗುತ್ತಾರೆ.

ನಾನು ಅವರ ಹೆಂಡತಿಯ ಚಿತ್ರವನ್ನು ಹಾಗೇ ಗಮನಿಸುವಾಗ ಆ ಹೆಣ್ಣಿನ ಮೊಗದಲ್ಲೊಂದು ನಿಶ್ಕಲ್ಮಶ ನಗು, ತುಂಬಾ ವರ್ಷ ಅಕ್ಕರೆಯಿಂದ ಜೀವನ ಮಾಡಿದ ತುಂಬು ಸಂತೃಪ್ತಿ, ಉಸಿರು ನಿಲ್ಲುವ ಮೊದಲು ಬಾಧಿಸುತ್ತಿದ್ದ ಅನಾರೋಗ್ಯದ ನೋವು ಎಲ್ಲವೂ ಆ ದೊಡ್ಡ ಮನೆಯ ಮಹಾ ಮೌನದಲ್ಲಿ ನನ್ನನ್ನು ಕಾಡುತ್ತಾ ಹೋಯ್ತು. ಕೆಲವು ಸಮಯದ ಹಿಂದಷ್ಟೇ ಈ ತಾಯಿ ಇಡೀ ದೊಡ್ಡ ಮನೆಯ ತುಂಬಾ ಆಚೀಚೆ ಹೋಗುತ್ತಿದ್ದಾಗ ಕೇಳುತ್ತಿದ್ದ ಬಳೆ ಸದ್ದು, ಇಡೀ ಮನೆ ಬೆಳಗುತ್ತಿದ್ದ ಅವರ ಹೆಜ್ಜೆ, ಇವೆಲ್ಲಾ ಈ ಮನೆಯನ್ನು ಪೊರೆದಿಟ್ಟಿತ್ತು. ಈಗ ಇಡೀ ಮನೆಗೆ ಮನೆಯೇ ಯಜಮಾನಿಯ ಪ್ರೀತಿ ಸಿಗದೇ ಅಳುಮೋರೆ ಹಾಕಿಕೊಂಡು ಆಗೀಗ ಅಷ್ಟಿಷ್ಟು ನಗಲು ಪ್ರಯತ್ನಿಸುತ್ತದೆ ಎನ್ನುವಂತಿತ್ತು ಇಡೀ ಮನೆಯ ನೋಟ.

ಮನೆಗೊಂದು ಹೆಣ್ಣಿದ್ದರೆ ಮನೆಗೆ ಮನೆಯೇ ಆ ಹೆಣ್ತನದ ವಿಶೇಷ ಮುಗ್ದತೆ ಆವರಿಸಿಕೊಳ್ಳುತ್ತದೆ. ಬೇಕಿದ್ದರೆ ನೋಡಿ ಒಂದೆರಡು ದಿನ ಮನೆಯಲ್ಲಿ ಅಮ್ಮನಿಲ್ಲದಿದ್ದರೆ ಮುಗೀತು. ಆ ಮನೆಯಲ್ಲಿ ಆವರಿಸಿಕೊಳ್ಳುವ ಮೌನ, ಸಪ್ಪೆ ಸಪ್ಪೆ ಎನ್ನಿಸುವಂತಹ ನೋಟ, ಅಂತದ್ದೇನೂ ಅಂದವಿಲ್ಲದೇ ಒಟ್ಟಾರೆ ಸಾಗುವ ದಿನಚರಿ, ಪ್ರೀತಿಯ ರುಚಿ ಇರದೇ ಹೊಟ್ಟೆಗೆ ಸುಮ್ಮನೇ ಹೋಗಿ ಕೂರುವ ನಾವೇ ಮಾಡಿದ ಅಡುಗೆ, ಇವೆಲ್ಲ ಅರ್ಥವಿಲ್ಲದ ಹಾಡಿನಂತೆ ತನ್ನ ಪಾಡಿಗೆ ಸಾಗುತ್ತದೆ. ಅದೇ ಅಮ್ಮನಿದ್ದರೆ ಅಲ್ಲಿ ಮೌನವಿರುವುದಿಲ್ಲ ಕಿಣಿ ಕಿಣಿ ಬಳೆಯ ಸದ್ದಿರುತ್ತದೆ, ಎಲ್ಲೆಲ್ಲೂ ಹೊಸ ನೋಟಗಳೇ ಕಾಣಿಸುತ್ತದೆ. ಆಕೆ ಪ್ರೀತಿಯಿಂದ ಮಾಡಿದ ಅಡುಗೆಯಲ್ಲಿ ಜಗದ ರುಚಿಯೆಲ್ಲಾ ಬೆರೆತಿರುತ್ತದೆ ಅಲ್ಲವೇ? ನಮ್ಮಂತ ಬ್ಯಾಚೆಲರ್ಸ್ ಗಳಿಗೆ ಅಮ್ಮ ಹೇಗೋ, ಮದುವೆಯಾದವರಿಗೆ ಹೆಂಡತಿಯೂ ಹಾಗೆ ಅನ್ನಿಸುತ್ತದೆ. ನಾವು ಗಾಢವಾಗಿ ಪ್ರೀತಿಸುವ ಹೆಂಡತಿ ಒಂದೆರಡು ದಿನ ತವರು ಮನೆಗೆ ಹೋದರೂ ಮನೆ, ಮನವೆಲ್ಲಾ ಚೈತನ್ಯವನ್ನೇ ಕಳೆದುಕೊಂಡಂತಾಗಬಹುದು. “ನಿನ್ನ ನೆನಪೇ ಮನೆ ತುಂಬಿದೆ, ಮನೆಯೆ ಮಾತ್ರ ನೀನಿಲ್ಲದೇ ಸರ್ಪ ಶೂನ್ಯವಾಗಿದೆ.” ಎಂದು ಹೆಂಡತಿ ತವರೂರಿಗೆ ಹೋದಾಗ ಬರೆದ ಕವಿ ಕುವೆಂಪು ಅವರಿಗೆ ಹೆಂಡತಿ ಇಲ್ಲದ ಮನೆ ಮನೆಯೇ ಅಲ್ಲ ಅನ್ನಿಸಿತಂತೆ. ಅದು ಕುವೆಂಪು ಅವರಿಗೆ ಮಾತ್ರವಲ್ಲ ಹೆಂಡತಿಯನ್ನು ತೀರಾ ಹಚ್ಚಿಕೊಂಡವರಿಗೆ ಸಹಜವಾಗಿ ಆಗುವ ಅನುಭವ.

ಇನ್ನು ಪ್ರೀತಿಸಿದ ಹೆಂಡತಿ ಲೋಕವೇ ಬಿಟ್ಟು ಹೋದಾಗ ಗಂಡನಿಗೆ ಆಗುವ ವೇದನೆಗಳು ಹೇಗಿರಬಹುದು? ಅಂತ ನೆನೆದಾಗ ದುಗುಡ ಆವರಿಸಿಕೊಂಡಿತು. ಶಾಂತರಾಮರು ಆ ವೇದನೆಯಲ್ಲಿಯೇ ಬದುಕುತ್ತಿದ್ದಾರಲ್ಲ ಅನ್ನಿಸಿ ಸಂಕಟವಾಯ್ತು.

ಆ ಮನೆ ಆಗತಾನೇ ಬಿದ್ದ ಮಳೆಗೆ ಜಗುಲಿಯಿಂದ ಕಾಣುತ್ತಿದ್ದ ಮನೆಯ ಮಾಡು ಎಷ್ಟು ಸೊಗಸಾಗಿ ಕಾಣುತ್ತಿತ್ತೆಂದರೆ ಹಂಚಿನ ಮೇಲೆ ಪಾಚಿಗಟ್ಟಿ ಇಡೀ ಮನೆಯೇ ಹಸಿರಿನ ಸೀರೆ ಹೊದ್ದು ಮಲಗಿಬಿಟ್ಟಿದೆಯೇನೋ ಅನ್ನಿಸುತ್ತಿತ್ತು. ತೋಟದಲ್ಲಿ ಕೆಂಪು ಕೆಂಪಾಗಿ ತೂಗುತ್ತಿರುವ ಗೊಂಚಲು ಮಾವಿನ ಅಂಚಿನಲ್ಲಿ ಕಾಜಾಣ ಹಕ್ಕಿ ಕೂತಿತ್ತು.

ಅಷ್ಟೊತ್ತಿಗೆ “ಆ ಹಕ್ಕಿಯ ಚಿತ್ರ ಯಾರು ಮಾಡಿದ್ದು ಅದ್ಭುತವಾಗಿದೆ” ಅಂತ ರಾಧಾಕೃಷ್ಣ ಜೋಶಿಯವರು ಗೋಡೆಯ ಮೇಲೆ ತೂಗು ಹಾಕಿದ್ದ ಹಕ್ಕಿಯೊಂದರ ವರ್ಣಚಿತ್ರ ತೋರಿಸುತ್ತಾ ಹೇಳಿದ್ದು ಕೇಳಿಸಿ ನನ್ನ ಸಂಕಟದಿಂದ ವಿಮುಖನಾಗಿ ಗೋಡೆ ಮೇಲಿನ ಹಕ್ಕಿ ಚಿತ್ರ ನೋಡಿದೆ. ಆ ಚಿತ್ರದಲ್ಲೊಂದು ಅಮೂರ್ತತೆ ಇತ್ತು. ಇನ್ನೇನು ಪುಕ್ಕ ಬಿಚ್ಚಿ ಮನೆ ತುಂಬಾ ಹಾಡಿ ಕುಣಿದಾಡಿ ಬಿಡುತ್ತದೆ ಎನ್ನುವ ನಾವೀನ್ಯತೆ ಇತ್ತು.

“ಅದು ನನ್ನ ಹೆಂಡತಿಯ ಇಷ್ಟದ ಚಿತ್ರ, ಅವಳೇ ಬಿಡಿಸಿದ್ದ ಚಿತ್ರ, ಅದಕ್ಕೆ ಜೋಪಾನವಾಗಿ ತೂಗಿಹಾಕಿದ್ದೇನೆ. ಆಗಾಗ ನೋಡುವಾಗ ಖುಷಿಯಾಗುತ್ತದೆ” ಎಂದರು ಶಾಂತರಾಮರು. ಅವರ ಕಣ್ಣ ತುಂಬಾ ಹಕ್ಕಿ ಮಾತ್ರ ಕುಣಿಯುತ್ತಿರಲಿಲ್ಲ, ಅವರ ಮಡದಿಯ ನೆನಪೂ ರೆಕ್ಕೆಬಿಚ್ಚುತ್ತಿತ್ತು ಅನ್ನಿಸುತ್ತದೆ. ಮತ್ತೆ ಮುಂದುವರಿದು, “ಅವಳು ಒಳ್ಳೆ ಚಿತ್ರ ಬಿಡಿಸುತ್ತಿದ್ದಳು. ನ್ಯಾಚುರಲ್ ಚಿತ್ರಗಳನ್ನು ಬಿಡಿಸುವ ಆಸಕ್ತಿ ಅವಳಲ್ಲಿ ತುಂಬಾ ಇತ್ತು” ಅಂದ ಅವರ ಕಣ್ಣಲ್ಲಿ ನಾವು ಕಾಣದೇ ಹೋಗಿದ್ದ ಅವರ ಮಡದಿ ಕಾಣುತ್ತಿದ್ದರು. ಬಿಡಿಸಿದ ಹಕ್ಕಿಯ ಚಿತ್ರಗಳಲ್ಲಿ, ತೂಗು ಹಾಕಿದ್ದ ಫೋಟೋಗಳಲ್ಲಿ ಮನೆಯ ಇಡೀ ಮೌನದಲ್ಲಿ ಅವರು ಜೀವಂತವಾಗಿದ್ದರು.

ನಾವು ಕಾಡು, ಅದು ಇದು ಮಾತಾಡುತ್ತಲೇ ಕೂತಾಗ ಶಾಂತರಾಮರು ಮತ್ತು ಜೋಶಿಯವರ ಮಗ ನಚಿಕೇತ ಬಿರುಂಡಿ ಹಣ್ಣಿನ ಪಾನಕ ಮತ್ತು ಪ್ಲೇಟು ತುಂಬಾ ಚಕ್ಕುಲಿ ತಂದರು. ಬಿರುಂಡಿ ರಸ ಬಾಯಿಗಿಟ್ಟಾಗ ಅದರ ಶುದ್ಧ ಪರಿಮಳ, ರುಚಿಗೆ ಬಾಯಿ ತಣ್ಣಗಾಯಿತು. ಮತ್ತೆ ಶಾಂತರಾಮರ ಜೊತೆ ಅವರ ಮನೆ ಸುತ್ತಿದೆವು. ಹಾಗೇ ಸುತ್ತಿದಾಗ ಹಿಂದೆ ದನಗಳಿಂದ ತುಂಬಿ ಹೋಗಿದ್ದ ಕೊಟ್ಟಿಗೆ, ಹಳೆಯ ಮರದ ಸಾಮಾನುಗಳು, ಪೆಟ್ಟಿಗೆಗಳು ಮಂಚಗಳನ್ನು ತೋರಿಸುತ್ತಲೇ ಹೋದಾಗ, ನಂಗೆ “ತಾಯಿ ಮುತ್ತು ಕೊಟ್ಟ ಮನೆ, ತಂದೆ ಪೆಟ್ಟು ಕೊಟ್ಟ ಮನೆ..ಮನೆಗೆ ಬಂದ ನೆಂಟರೆಲ್ಲಾ ಕೂಗಿ ಕರೆದು ಕೊಬ್ಬರಿ ಬೆಲ್ಲಗಳನು ಕೊಟ್ಟು ಸವಿಯ ಸೊಲ್ಲನಾಡುತ್ತಿದ್ದ ನಮ್ಮ ಮನೆ” ಎನ್ನುವ ಕವನದ ಸಾಲು ಕಾಡದೇ ಇರುತ್ತದೆಯೇ. ಯಾವುದೇ ಹಳೆಯ ಮನೆ ಹೊಕ್ಕಿದರೂ ಸಾಕು. ಮನದೊಳಗೊಂದು ಈ ಕವನ ನೆನಪಿಸಿಕೊಂಡರೆ ಮೈ ಜುಮ್ಮೇರುತ್ತದೆ, ಯಾವುದೋ ಗತ ದಿನಗಳ ಜಲಪಾತದಲ್ಲಿ ತಣ್ಣಗೇ ಧುಮುಕಿದಂತಾಗುತ್ತದೆ. ಆ ಕ್ಷಣ ಬದುಕಿದ್ದೂ ಸಾರ್ಥಕ ಅನ್ನಿಸತೊಡಗುತ್ತದೆ. ಯಾಕೋ ಈ ಮನೆಯಲ್ಲಿ ಮೊದಲೇ ಮಹಾ ಮೌನ ತುಂಬಿದರಿಂದಲೋ ಏನೋ, ಅಥವಾ ಹೊರ ಪ್ರಪಂಚದಿಂದ ಬರುತ್ತಿದ್ದ ಸದ್ದುಗಳನ್ನು ಸವಿಯುತ್ತಾ ಸುಮ್ಮನೇ ಕೂತು ಬಿಡೋಣ ಅನ್ನಿಸಿದ್ದರಿಂದಲೋ ಏನೋ ಜಾಸ್ತಿ ಮಾತಾಡಬೇಕು ಅನ್ನಿಸಲೇ ಇಲ್ಲ. ಮೌನಕ್ಕಿಂತಲೂ ಮೌನ ದೊಡ್ಡ ಮಾತು ಜಗತ್ತಲ್ಲಿ ಯಾವುದಿದೆ ಹೇಳಿ? ಮಾತಾಡಿದರೆ ಮಾತು ಅಷ್ಟಕ್ಕೇ ನಿಲ್ಲಬಹುದು. ಆದರೆ ಮೌನವಿದೆಯಲ್ಲ, ಅದು ಅನಂತ, ಅದು ನಿಲ್ಲುವುದೂ ಇಲ್ಲ, ಮಗಿಯೋದು ಇಲ್ಲ.

(ಚಿತ್ರಗಳು: ಪ್ರಸಾದ್ ಶೆಣೈ)

ಒಂದಷ್ಟು ಹಾಗೇ ಮೌನದಲ್ಲಿ ಕುಳಿತ ಮೇಲೆ ಇನ್ನೊಂದು ಚಂದದ ಮನೆಗೆ ಹೋಗೋಕಿದ್ದಿದ್ದರಿಂದ ಹೊರಡೋಣ ಎಂದರು ಜೋಶಿಯವರು. ಹೊರಡುವ ಮೊದಲು ಒಳಕೋಣೆಯಲ್ಲಿ ಮೌನವಾಗಿ ಕೂತಿದ್ದ ಗಣೇಶ ಚಿಪ್ಲೂಂಕರರಿಗೆ ಪಾದ ನಮಸ್ಕಾರ ಮಾಡಿದೆವು. ಕಾಡಿನಲ್ಲಿ ಕೃಷಿ ಮಾಡಿ ಬದುಕನ್ನೊಂದು ಸುಧೀರ್ಘ ವೃತದಂತೆ ಕಳೆದ ಅವರ ಸ್ಪರ್ಶದಲ್ಲಿ ಗತ ಕಾಲದ ಪರಿಮಳವಿತ್ತು. ತಮ್ಮ ಕಾಯಕವನ್ನೇ ದೇವರು ಅಂತ ನಂಬಿಕೊಂಡು ಇನ್ನೇನು ಕಾಲದ ತೆಕ್ಕೆಯಲ್ಲಿ ಕಳೆದುಹೋಗಲಿರುವ ಇಂತಹ ಹಿರಿಯ ಜೀವಗಳೇ ನಮ್ಮೆದುರಿಗಿರುವ ಪ್ರತ್ಯಕ್ಷ ದೇವರುಗಳು ಅನ್ನಿಸುತ್ತದೆ. ಈ ಕಾಲದ ಹುಡುಗರ ಜೊತೆ ಮಾತಾಡಬೇಕು ಅಂತ ಅವರ ಬಾಯಿ ತವಕಿಸುತ್ತಿದ್ದರೂ ಅವರ ಮಾತು ಮುಪ್ಪಿಗೆ ತುತ್ತಾಗಿ ಅರ್ಥವಾಗುತ್ತಿರಲಿಲ್ಲ. ಮಾತಾಡುವಷ್ಟು ಅವರಿಗೆ ತ್ರಾಣವೂ ಇರಲಿಲ್ಲ. ಅವರ ಆಶೀರ್ವಾದ ಪಡೆದದ್ದಷ್ಟೇ ನಮಗೆ ಸಿಕ್ಕ ದೊಡ್ಡ ಖುಷಿ.

ನಾವು ಶಾಂತರಾಮರಿಗೂ ಅವರ ಮನೆಗೂ ಬೀಳ್ಕೊಟ್ಟು ಜೋಶಿಯವರ ಜೊತೆ ನಾರಾಯಣ ಚಿಪ್ಲೂಂಕರರ ಮನೆ ದಾರಿ ಹಿಡಿದೆವು. ಅಷ್ಟೊತ್ತಿಗೆ ಮಳೆ ಬಿಟ್ಟು ಆಕಾಶದಲ್ಲಿ ಚಂದ್ರ ಬಂದಿದ್ದ, ಅವನ ಹೊಳಪು ಬಿದ್ದ ದಾರಿಯಲ್ಲಿ ನಡೆಯುತ್ತ ಮುಂದೆ ನೋಡಿದರೆ ಅಬ್ಬಾ ಒಂದು ಚೆಂದದ ಮನೆ ಇಂದ್ರಲೋಕದಂತೆ ಕಾಣುತ್ತಿತ್ತು. ಅಂಗಳದ ತುಂಬಾ ಹುಲ್ಲು ಹಾಸು, ಹೂವಿನ ಗಿಡಗಳು ಚಂದ್ರನ ಬೆಳಕಿಗೆ ಫಳಫಳ ಹೊಳೆಯುತ್ತಿದ್ದವು. ತುಳಸಿ ಮೇಲಿಟ್ಟಿದ್ದ ನೀಲಾಂಜನದ ಬೆಳಕಿಗೆ ಆ ಮನೆ ಜಿಗ್ ಅಂತ ರಾತ್ರಿಯಲ್ಲೂ ಮಿಂಚುವ ಹುಡುಗಿಯೊಬ್ಬಳ ಮೂಗುತಿಯಂತೆ ಕಂಡು ಹಾಯನ್ನಿಸಿತು. ಜಗುಲಿಯ ಮೇಲೆ ಬೆಟ್ಟದ ಗಾಳಿಯೇ ಜೋಕಾಲಿಯನು ತೂಗುತ್ತಿತ್ತು. ಸುಮಾರು 70 ವರ್ಷ ವಯಸ್ಸಿನ ನಾರಾಯಣರು, ಆ ತುಳಸಿಯ ನೀಲಾಂಜನದಂತೆಯೇ ಹೊಳೆಯುತ್ತಿದ್ದ ಅವರ ಮಡದಿ ನಮ್ಮನ್ನೆಲ್ಲ ಸ್ವಾಗತಿಸಿದರು.

ನೂರಾರು ಹಳೆ ಚಿತ್ರಗಳ ನಡುವೆ, ನೆಲದ ಕೆಂಪು ಬಣ್ಣದ ನಡುವೆ, ಕಂಬದ ನುಳುಪಿನ ನಡುವೆ ಆ ಮನೆಯಲ್ಲಿ ಅದ್ಧೂರಿ ಕಲಾತ್ಮಕತೆಯಿತ್ತು. ಅದು ಇದೂ ಮಾತಾಗುತ್ತಲೇ ನಾರಾಯಣರ ಹೆಂಡತಿ ಗರಿ ಗರಿ ಹಪ್ಪಳ ಹಿಡಕೊಂಡು ಬಂದರು. ತಿಂದರೆ ತಿನ್ನಬೇಕು ಇಂತಹ ಹಪ್ಪಳ ಅನ್ನುವಂತಿತ್ತು ಅದರ ರುಚಿ. ಎಷ್ಟಂದರೂ ಮನೆಯಲ್ಲಿಯೇ ಮಾಡಿದ್ದ ಹಪ್ಪಳ ತಾನೇ, ರುಚಿಯಾಗದೇ ಇರಲು ಹೇಗೆ ಸಾಧ್ಯ? ಅದೂ ಹಳೆ ತಲೆಮಾರಿನ ಹೆಂಗಸರು ಮಾಡಿದ್ದ ಹಪ್ಪಳದ ರುಚಿಯನ್ನು ವರ್ಣಿಸಲು ಸಾಧ್ಯವೇ ಇಲ್ಲ. ಇದೇ ಮನೆಯಲ್ಲಿ 104 ವರ್ಷದ ನಾರಾಯಣರ ತಂದೆ ಕೂಡ ಬದುಕಿದ್ದಾರೆ ಎಂದು ಜೋಶಿಯವರು ಮೊದಲೇ ಹೇಳಿದ್ದರಿಂದ ಅವರನ್ನು ನೋಡುವ ಮನಸ್ಸಾಯ್ತು. ಅವರಾಗಲೇ ಮಲಗಿಬಿಟ್ಟಿದ್ದಾರೆ, ಒಂದು ವೇಳೆ ಎಚ್ಚರಾಗಿದ್ದರೂ ಅವರನ್ನು ಮಾತಾಡಿಸಲು ಸಾಧ್ಯವಿಲ್ಲವೆಂದೂ ನಾರಾಯಣರ ಹೆಂಡತಿ ಅಲ್ಲೇ ಕೊನೆಯಲ್ಲಿದ್ದ ಕತ್ತಲೆಯೇ ತುಂಬಿದ್ದ ಕೋಣೆಯ ಬಳಿ ಕರೆದೊಯ್ದರು. ಅಲ್ಲೊಂದು ಹಿರಿಯ ಜೀವ ಕೊಂಚ ಕೊಂಚ ಕೆಮ್ಮುತ್ತಾ ಪವಡಿಸಿತ್ತು. ಅವರನ್ನು ಎಚ್ಚರ ಮಾಡುವುದು ಬೇಡವೆಂದು ನಾವು ಸುಮ್ಮನಾಗಿ ದೂರದಿಂದಲೇ ಅವರನ್ನು ನೋಡಿದೆವು ಅಷ್ಟೆ.

“ನಾವು ನಾಳೆ ಕಾರ್ಕಳದಲ್ಲಿರುವ ಮಗನ ಮನೆಗೆ ಹೋಗುತ್ತೇವೆ ಮತ್ತೆ ಮಳೆಗಾಲ ಕಳೆದ ಮೇಲೆ ಎಲ್ಲರೂ ಇಲ್ಲಿಗೆ ಬರುತ್ತೇವೆ. ನಾವು ಒಂದು ಥರ ವಲಸೆ ಹಕ್ಕಿಗಳ ಹಾಗೇ, ಮಳೆಗಾಲಕ್ಕೆ ಕಾರ್ಕಳ, ಬೇಸಗೆಯಲ್ಲಿ ಇಲ್ಲಿ, ಏನ್ ಮಾಡೋದು ಪ್ರಾಯ ಆಯ್ತಲ್ವಾ” ಎಂದರು ನಾರಾಯಣರ ಹೆಂಡತಿ. ಆದರೂ ನಮಗೆ ಈ ಮಾಳವೇ ಒಂಥರಾ ಚೆಂದ, ಯಾವ ರಗಳೆಯೂ ಇಲ್ಲದೇ ನಿರಾಳರಾಗಿರುತ್ತೇವೆ. ಶಾಂತ ಜೀವನ ಇಲ್ಲಿನದ್ದು ಅಂತ ತಣ್ಣಗೇ ನಕ್ಕರು.

ನಾವು ಆ ಚಂದದ ಮನೆಯಲ್ಲಿ ಮುಸ್ಸಂಜೆ ಸ್ವಲ್ಪ ಹೊತ್ತಷ್ಟೇ ಇದ್ದರೂ, ಮನೆಯವರ ಜೊತೆ ಆತ್ಮೀಯತೆ ಬೆಳೆದುಬಿಟ್ಟಿತ್ತು. ಕೆಲವೊಮ್ಮೆ ಹಾಗೇ ಮೂರು ಗಂಟೆಯಲ್ಲಿ ಸಿಗದ ಖುಷಿ ಎರಡೇ ಕ್ಷಣದಲ್ಲಿ ಸಿಕ್ಕಿಬಿಡುತ್ತದೆ. ಆ ಖುಷಿ ಈ ಮನೆಯಲ್ಲಿಯೂ ಸಿಕ್ಕಿಬಿಟ್ಟಿತು. ಮನೆಗೆ ಅತಿಥಿಗಳು ಬಂದರೂ ಬರಮಾಡಿಕೊಳ್ಳುತ್ತ, ಅವರ ಜೊತೆ ಮನೆಯವರಂತೆಯೇ ಬಾಯ್ತುಂಬಾ ಮಾತಾಡುತ್ತ ಸಂಬಂಧದ ಸಿಹಿ ಹಂಚುವ ಹಳೆ ತಲೆಮಾರಿನ ಜನರ ಗುಣ ಅಮೂಲ್ಯವಾದದ್ದು. ಯಾಕೋ ಈ ಕಾಡಿನ ಚೆಂದದ ಮನೆಯನ್ನು ಬಿಟ್ಟು ಹೋಗಲು ಆ ಇರುಳು ಮನಸ್ಸೇ ಆಗಲಿಲ್ಲವಾದರೂ ಹೊತ್ತೇರುತ್ತಿತ್ತು.

ಹಿರಿಯ ದಂಪತಿಗಳಿಗೆ ಬೀಳ್ಕೊಟ್ಟು ಮನೆಯ ಅಂಗಳ ದಾಟಿದೆವು. ನಾವು ಊರಿನ ದಾರಿ ಹಿಡಿದರೂ ನಾರಾಯಣರು ಮಾತ್ರ “ಹಗುರಾಗಿ ಹೋಗಿ, ಜಾಗ್ರತೆ” ಅಂತ ಕಿವಿಮಾತು ಹೇಳುತ್ತ , ನಾವು ಬಹುದೂರ ಹೋಗುವವರೆಗೂ ನಮ್ಮನ್ನೇ ನೋಡುತ್ತ ನಿಂತಿದ್ದರು. ಅವರ ನೋಟದಲ್ಲೊಂದು ಪ್ರೀತಿಯಿತ್ತು. ಆ ಪ್ರೀತಿ ಈ ಕಾಲದಲ್ಲಿ ಸಿಗುವುದೇ ಕಷ್ಟ. ಮನೆಗೆ ಬಂದವರು ಒಮ್ಮೆ ಮನೆಯಿಂದ ತೊಲಗಲಿ ಅಂತ ಬಂದವರು ಮನೆಯಿಂದ ಕಾಲು ಹೊರಗಿಟ್ಟ ಕೂಡಲೇ ಮುಖಕ್ಕೆ ಹೊಡೆದಂತೆ ಬಾಗಿಲು ಜಡಿದುಕೊಳ್ಳುವವರೇ ಜಾಸ್ತಿಯಿರುವ ಈ ಕಾಲದಲ್ಲಿ ನಾವು ಹೋಗುವವರೆಗೂ ನಮ್ಮನ್ನೇ ಕಣ್ಣಲ್ಲಿ ಕಣ್ಣಿಟ್ಟು ನೋಡುವ, ಮತ್ತೆ ಬನ್ನಿರೆಂದು ಹೇಳುವ ನಾರಾಯಣರಂತಹ ದಿವ್ಯ ಹೃದಯಿಗಳು ಬಾಳಿನ ಕೊನೆಯವರೆಗೂ ಕಾಡುತ್ತಾರೆ. ನಾನು ಕೊನೆಗೊಮ್ಮೆ ಹಿಂತಿರುಗಿ ನೋಡಿದಾಗ ನಾರಾಯಣರು ಅಲ್ಲೇ ನಿಂತಿದ್ದರು. ಕೊನೆಗೆ ನಮಗೆ ಅವರು, ಅವರಿಗೆ ನಾವು ಮರೆಯಾದ ಮೇಲೆ, ಆಕಾಶ ನೋಡುತ್ತೇನೆ… ಅಲ್ಲಿ ಮೋಡಗಳು ಹಿಂಡಾಗಿ ಆವರಿಸಿತ್ತು. ಆಗಲೇ ಚಿಟ ಪಿಟ ಹನಿ ಕಾಡಿನ ತರಗೆಲೆಗಳ ಮೇಲೆ ಬಿದ್ದು ಇಡೀ ಕಾಡಿಗೆ ಕಾಡೇ ಕೂಗುತ್ತಿದ್ದುದು ಬಹುದೂರದವರೆಗೂ ಕೇಳುತ್ತಿತ್ತು.