“ಯಾವಾಗ ಮದುವೆ?” ಅಂತ ಕೇಳಿದೆ. “ಮದುವೇನಾ? ಯಾರು ಮದುವೆ ಆಗ್ತಿದ್ದಾರೆ?” ಆ ಕಡೆಯಿಂದ ಗಂಭೀರ ಮರುಪ್ರಶ್ನೆ. ನನಗೆ ಮತ್ತೆ ಗೊಂದಲ ಶುರುವಾಯಿತು. “ಮತ್ತೆ?” ನನ್ನದು ಸಂದೇಹದ ಪ್ರಶ್ನೆ. “ಮದುವೆ ಅಂತೇನಿಲ್ಲ, ಪ್ರೀತಿ ಇರುವಷ್ಟು ದಿನ ಒಟ್ಟಿಗಿರುತ್ತೇವೆ. ಅವನ ಕಣ್ಣಿನಲ್ಲಿ ನನ್ನ ಬಿಂಬ, ನನ್ನ ಕಣ್ಣಿನಲ್ಲಿ ಅವನ ಬಿಂಬ ಮರೆಯಾದ ಕ್ಷಣ ಇಬ್ಬರೂ ಒಬ್ಬರಿಗೊಬ್ಬರ ಬದುಕಿನಿಂದ ಎದ್ದುಹೋಗುತ್ತೇವೆ.” ಅಂದರು. ನನ್ನದು ಮತ್ತೆ ಮೌನ. “ಯಾಕೋ ನಿನ್ಹತ್ರ ಹೇಳ್ಕೊಳ್ಬೇಕು ಅನ್ನಿಸಿತು, ಹೇಳಿದೆ. ”ಎಂದು ಕರೆ ಕಟ್ ಮಾಡಿದರು.
ಫಾತಿಮಾ ರಲಿಯಾ ಬರೆಯುವ ಪಾಕ್ಷಿಕ ಅಂಕಣ.

 

ಆಕೆ ನನಗಿಂತ ಹತ್ತೋ ಹನ್ನೆರಡೋ ವರ್ಷಗಳಿಗೆ ದೊಡ್ಡವರು. ಕುರ್ತಾ, ನೀಲಿ ಜೀನ್ಸ್, ಮುಖ ತುಂಬಾ ತುಂಟ ನಗು, ಎಕ್ಸ್ಪ್ರೆಸಿವ್ ಕಣ್ಣುಗಳು, ಬಗಲಲ್ಲೊಂದು ಕಪ್ಪು ಬ್ಯಾಗ್… ಅವರ ಪ್ರತಿದಿನದ ವೇಷ. ಆ ಬ್ಯಾಗೊಳಗೆ ಏನೆಲ್ಲಾ ಇರಬಹುದು ಅನ್ನುವ ಕೆಟ್ಟ ಕುತೂಹಲ ನನಗೆ. ಆ ಬಗ್ಗೆ ಕೇಳಿದಾಗೆಲ್ಲಾ ಅವರು ವೈದೇಹಿಯವರ ‘ನೋಡಬಾರದು ಚೀಲದೊಳಗನು’ ಪದ್ಯವನ್ನು ರಾಗವಾಗಿ ಹಾಡುತ್ತಾರೆ. ನಾನು ಗಪ್ ಚುಪ್. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಊರೂರು ತಿರುಗುವ ಅವರ ಸ್ವಂತ ಊರು ಯಾವುದು? ಗೊತ್ತಿಲ್ಲ, ಈ ಬಗ್ಗೆ ಇನ್ನೂ ಕೇಳೇ ಇಲ್ಲ.

‘ಹತ್ತು ಮಾರು ದೂರದಲ್ಲಿ ಹಾಜರಿ ಹಾಕಿ ಹೋಗುವ ಮೊನೋಪಾಸ್, ಒಂದೊಂದಾಗಿ ಬಿಳಿಯಾಗುತ್ತಿರುವ ಬೈತಲೆಯ ಎಡ ಭಾಗದ ಕೂದಲುಗಳು, ಆಗೊಮ್ಮೆ ಈಗೊಮ್ಮೆ ಕಾಡಿ ಹೋಗುವ ಮಂಡಿ ನೋವು, ಪರ್ಮನೆಂಟ್ ನೆಂಟ ಬಿ‌.ಪಿ…. ಯಾಕೋ ಇವೆಲ್ಲಾ ಸೇರಿ ಈ ಜೀನ್ಸ್, ಬಾಬ್ ಕಟ್, ನಿಮಗೆ ಸರಿಯಾಗಿ ಹೊಂದುತ್ತಿಲ್ಲ. ಯಾಕೆ ನೀವು ಸೀರೆ, ಸಲ್ವಾರ್ ತೊಡಬಾರದು? ಹೆಚ್ಚು ಪ್ರಯಾಣ ಮಾಡ್ಬೇಡಿ, ಎಣ್ಣೆ ತುಪ್ಪ ಸೇವನೆ ಕಡಿಮೆ ಮಾಡಿ, ಉಪ್ಪು ಸಕ್ಕರೆ ಹಿತಮಿತವಾಗಿರಲಿ’ ಅಂತ ನಾನು ಆಗಾಗ ಅವರಿಗೆ ಉಚಿತ ಸಲಹೆ ಕೊಡುತ್ತಿರುತ್ತೇನೆ. ಆಗೆಲ್ಲಾ ಅವರು ನನ್ನನ್ನು ಕೆಕ್ಕರಿಸಿ ನೋಡಿ, ತಲೆಗೆರಡು ಮೊಟಕಿ “ಈಗ್ಲೇ ನನ್ನ ಮುದುಕಿ ಮಾಡ್ಬಿಡುವ ಪ್ಲಾನ್ ಏನಾದ್ರೂ ಇದ್ಯಾ? ನಾನಿನ್ನೂ ಚಿಕ್ಕವಳು, ಇನ್ನೆಷ್ಟು ಊರು ನೋಡೋದಿದೆ, ಎಷ್ಟು ಪುಸ್ತಕ ಓದೋದಿದೆ, ಎಣ್ಣೆ ತುಪ್ಪ ಬಿಡೋದ್ಯಾಕೆ? ಪೂರ್ತಿ ಊಟಾನೇ ಬಿಟ್ಬಿಡ್ತೇನೆ, ನಂಗೆ ಬುದ್ಧಿ ಹೇಳೋಕೆ ಬಂದ್ಳು, ಮೊದ್ಲು ಮೈಯಲ್ಲಿ ಒಂದು ನೂರು ಗ್ರಾಂ ಆದ್ರೂ ಮಾಂಸ ಬೆಳೆಸ್ಕೋ” ಎಂದು ತಿವಿಯುತ್ತಾರೆ. ನಾನು ಇನ್ನೇನಾದ್ರೂ ಹೇಳ್ತೇನೆ, ಅವರು ಮತ್ತಿನ್ನೇನಾದರೂ. ಮಾತು ಜಗಳದಲ್ಲಿ ಕೊನೆಯಾಗುತ್ತದೆ.

ಹಾಗೆ ಹೇಳುವುದಾದರೆ, ನಾವಿಬ್ಬರು ಸಂಧಿಸಿದ್ದೇ ಒಂದು ವಿಚಿತ್ರ ಸನ್ನಿವೇಶದಲ್ಲಿ. ಈಗ್ಗೆ ಎರಡು-ಮೂರು ವರ್ಷಗಳ ಹಿಂದೆ ಒಂದು ದಿನ, ಎಕ್ಸಾಂ ಬರೆದು ಬಸ್ ಹತ್ತಿದ್ದೆ. ಪರೀಕ್ಷೆ ಮುಗಿದ ನಿರಾಳತೆ, ಹಿಂದಿನ ರಾತ್ರಿ ಕಳೆದ ನಿದ್ರೆ, ನಿಧಾನವಾಗಿ ಓಡುತ್ತಿದ್ದ ಗವರ್ನಮೆಂಟ್ ಬಸ್, ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಜೋಗುಳದಂತಹಾ ಹಾಡು… ಎಲ್ಲಾ ಕಲಸುಮೇಲೋಗರವಾಗಿ ಯಾವಾಗ ಜೊಂಪು ಹತ್ತಿತ್ತೋ ತಿಳಿಯದು. ಕಣ್ಣು ಬಿಟ್ಟು ನೋಡುವಾಗ ಬಸ್ ಯಾವುದೋ ಊರಲ್ಲಿ ನಿಂತಿತ್ತು. ಆಚೀಚೆ ದೃಷ್ಟಿ ಹಾಯಿಸಿದೆ. ಟಿಕೆಟ್ ಚೆಕ್ ಮಾಡುವವರು ಗಂಭೀರವಾಗಿ ಎಲ್ಲರ ಟಿಕೆಟ್ ಪರಿಶೀಲಿಸುತ್ತಿದ್ದರು. ನಾನು ಸ್ಟೂಡೆಂಟ್ ಪಾಸ್ ಹೊಂದಿದ್ದವಳು. ದಂಡ ಕಟ್ಟುವಷ್ಟು ದುಡ್ಡು ಪರ್ಸಲ್ಲಿ ಇರಲಿಲ್ಲ. ಬ್ಯಾಗಿನ ಮೂಲೆ ಮೂಲೆ ತಡಕಾಡಿದರೂ ಒಂದು ರೂಪಾಯಿಯೂ ಸಿಗದು ಅನ್ನುವುದು ಗೊತ್ತಿದ್ದರೂ ಸಿಗುತ್ತೇನೋ ಅನ್ನುವ ಆಶಾಭಾವನೆಯಲ್ಲಿ ಹುಡುಕತೊಡಗಿದೆ. ಯಾವೂರು ತಲುಪಿದ್ದೇನೆ ಎಂದು ತಿಳಿದುಕೊಳ್ಳೋಣವೆಂದರೆ ಅಲ್ಲಿ ಯಾವ ಬೋರ್ಡೂ ಇರಲಿಲ್ಲ. ಅಸಹಾಯಕತೆಯಿಂದ ಆಚೀಚೆ ನೋಡುವುದು ಬಿಟ್ಟರೆ ನನಗಾಗ ಇನ್ಯಾವ ದಾರಿಯೂ ಉಳಿದಿರಲಿಲ್ಲ.

ಹೇಳದಿರಲೂ ಆಗದ, ಹೇಳಿಕೊಳ್ಳಲೂ ಆಗದ ಮುಜುಗರದ ಸ್ಥಿತಿಯಲ್ಲಿಯೇ ಇರಬೇಕಾದರೆ ‘ಟಿಕೆಟ್’ ಅನ್ನುವ ಗಡಸು ಧ್ವನಿ ಹಿಂದಿನಿಂದ ಕೇಳಿ ಬಂದಿತ್ತು. ನಾನು ಬೆಬ್ಬೆಬ್ಬೆ ಎಂದು ತೊದಲುವ ಮುನ್ನವೇ ಪಕ್ಕದ ಸೀಟಲ್ಲಿದ್ದ ಮಹಿಳೆ ‘ಒಂದ್ನಿಮಿಷ ಮುಂಚೆಯಷ್ಟೇ ಈ ಹುಡುಗಿ ಬಸ್ ಹತ್ತಿದ್ಳು. ಇಲ್ಲಿರೋ ರಷ್ ಗೆ ಕಂಡಕ್ಟರ್ ಗೆ ಈ ಕಡೆ ಬರುವುದಕ್ಕೆ ಸಾಧ್ಯವಾಗಿಯೇ ಇಲ್ಲ. ಹೇಗೋ ಕಷ್ಟಪಟ್ಟು ಬರುವಷ್ಟರಲ್ಲಿ ನೀವು ಬಸ್ ಹತ್ತಿಬಿಟ್ರಿ. ಟಿಕೆಟ್ ಮಾಡುವುದಾದ್ರೂ ಹೇಗೆ?” ಅಂದರು. “ಇಂಥವೆಲ್ಲಾ ನಾನು ನನ್ನ ಸರ್ವಿಸಲ್ಲಿ ಎಷ್ಟು ನೋಡಿದ್ದೇನೆ. ಒಂದೋ ಟಿಕೆಟ್ ತೋರಿಸಿ, ಇಲ್ಲಾ ದಂಡ ಕಟ್ಟಿ” ಅಂತ ದಬಾಯಿಸಿದರು. “ನೀವು ಏನೇನೋ ನೋಡಿರ್ಬಹುದು. We respect it. ಬಟ್ ಇವಳು ಈಗಷ್ಟೇ ಬಸ್ ಹತ್ತಿರುವುದನ್ನು ನಾವೆಲ್ಲಾ ನೋಡಿದ್ದೇವೆ. ಹೇಗೆ ಫೈನ್ ಕಟ್ಟಿಸ್ತೀರಿ ಅಂತ ನಾವೂ ನೋಡ್ತೇವೆ” ಅಂತ ಪಕ್ಕದಲ್ಲಿದ್ದವರನ್ನೂ ಸೇರಿಸಿಕೊಂಡರು. ಬುರ್ಖಾದಾರಿ ನಾನು ಮತ್ತು ಹಣೆಯ ಮಧ್ಯೆ ಪುಟ್ಟ ಕಪ್ಪು ಬೊಟ್ಟು ಇಟ್ಟುಕೊಂಡಿದ್ದ ಅವರು… ಇಬ್ಬರ ಮಧ್ಯೆ ಯಾವ ಬಾದರಾಯಣ ಸಂಬಂಧವೂ ಇರಲಾರದು, ಸುಳ್ಳು ಹೇಳಿ ನನ್ನ ರಕ್ಷಿಸಲು ಯಾವ ಕಾರಣವೂ ಇರಲಾರದು ಎಂದು ಅನಿಸಿತೋ ಏನೋ, ನಮ್ಮನ್ನು ಬಿಟ್ಟು ಮುಂದೆ ಹೋದರು.

ಚೆಕ್ಕಿಂಗ್ ಮುಗಿದು ಅವರು ಇಳಿದಂತೆ ನಾನು ಮುಂದಿನ ನಿಲ್ದಾಣಕ್ಕೆ ಟಿಕೆಟ್ ಮಾಡಿಸಿ ಕೃತಜ್ಞತಾ ಭಾವದಿಂದ ಒಮ್ಮೆ ಅವರತ್ತ ನೋಡಿದೆ. ತಾನೇನೂ ಮಾಡಿಯೇ ಇಲ್ಲವೇನೋ ಎಂಬಂತೆ ಕಿಟಕಿ ಹೊರಗೆ ದಿಟ್ಟಿಸುತ್ತಾ ಕೂತಿದ್ದರು. ಶೂನ್ಯದೊಳಗೆ ಯಾವ ಕಾಣ್ಕೆಯಿತ್ತೋ ಗೊತ್ತಿಲ್ಲ, ಮೆತ್ತಗೆ ‘ತ್ಯಾಂಕ್ಸ್’ ಎಂದೆ. ಹೊರಗಿನಿಂದ ದೃಷ್ಟಿ ತಪ್ಪಿಸಿದ ಅವರು “ಇರ್ಲಿ ಬಿಡು, ಇನ್ಮುಂದೆ ಹೀಗೆಲ್ಲಾ ಬಸ್ಸಲ್ಲಿ ನಿದ್ರೆ ಹೋಗ್ಬೇಡ. ಬಸ್ ಪಾಸ್ ಇದ್ರೂ ಕೈಯಲ್ಲಿ ಸ್ವಲ್ಪ ಎಕ್ಸ್‌ಟ್ರಾ ದುಡ್ಡು ಇಟ್ಕೊಂಡಿರಬೇಕು. ಇಂತಹ ಪರಿಸ್ಥಿತಿಗಳಲ್ಲಿ ಉಪಯೋಗಕ್ಕೆ ಬರುತ್ತವೆ” ಅಂದ್ರು. ನನ್ನ ಬೇಜವಾಬ್ದಾರಿತನಕ್ಕೆ ನನಗೇ ನಾಚಿಕೆಯೆನಿಸಿತು. ಅವರು ಮೂಗಿನ ಮೇಲಿನಿಂದ ಒಮ್ಮೆ ಕನ್ನಡಕ ತೆಗೆದು ಸ್ವಚ್ಛ ಬಟ್ಟೆಯಿಂದ ಒರೆಸಿ ಸ್ವಸ್ಥಾನದಲ್ಲಿಟ್ಟರು. ಅಷ್ಟರಲ್ಲಿ ಮುಂದಿನ ಸ್ಟಾಪ್ ಬಂತು. ನಾನು “ಬರ್ತೇನೆ, ಮತ್ತೊಮ್ಮೆ ತ್ಯಾಂಕ್ಸ್” ಎಂದು ಇಳಿಯಲು ಎದ್ದು ನಿಂತೆ. ಅವರು “ನಾನೂ ಇಲ್ಲೇ ಇಳಿಯುವವಳು, ಸ್ವಲ್ಪ ಈ ಬ್ಯಾಗ್ ಎತ್ತಿಕೋ” ಸ್ವಲ್ಪವೂ ಸಂಕೋಚವಿಲ್ಲ ಎಂಬಂತೆ ಹೇಳಿ ನನ್ನ ಹಿಂದೆಯೇ ಬಸ್ಸಿಳಿದರು. ಅವರ ಬ್ಯಾಗ್ ಅವರಿಗೇ ಒಪ್ಪಿಸಿ ಹೊರಡಬೇಕೆನ್ನುವಷ್ಟರಲ್ಲಿ ಒಂದು ಚೀಟಿಯಲ್ಲಿ ಫೋನ್ ನಂಬರ್ ಬರೆದು ನನ್ನ ಕೈಗೆ ತುರುಕಿ “ಫೋನ್ ಮಾಡ್ತಿರು” ಎಂದು ತಿರುಗಿ ನೋಡದೆ ಹೊರಟು ಹೋದರು. ನಾನು ಮತ್ತೆ ತಲೆಯಾಡಿಸಿದೆ. ರಸ್ತೆಯ ಪಕ್ಕದಲ್ಲಿದ್ದ ಸಂಪಿಗೆ ಮರದಿಂದ ಹೂವೊಂದು ತೊಟ್ಟು ಕಳಚಿ ಬಿತ್ತು. ಹೆಕ್ಕಲೋ ಬೇಡವೋ ಎಂಬ ಗೊಂದಲದಲ್ಲಿ ಇರಬೇಕಾದರೆ ನಮ್ಮೂರಿಗೆ ಹೋಗುವ ಬಸ್ ಬಂತು. ಹತ್ತಿ ಮತ್ತದೇ ಕಿಟಕಿ ಪಕ್ಕದ ಸೀಟಲ್ಲಿ ಕೂತು ಅವರ ಬಗ್ಗೆ ಯೋಚಿಸುತ್ತಲೇ ಮನೆ ತಲುಪಿದೆ.

ಅನಂತರ ಕೆಲವು ದಿನಗಳ ಕಾಲ ಅವರ ಹ್ಯಾಂಗೋವರ್ ನಲ್ಲೇ ಇದ್ದೆ. ಆಮೇಲೆ ಯಾವ ದಿನ, ಯಾವ ಕ್ಷಣ ಅವರು ಮರೆತುಹೋದರೋ ಗೊತ್ತಿಲ್ಲ. ಉಪಕಾರ ಪಡೆದುಕೊಳ್ಳುವುದು, ಒಂದೆರಡು ದಿನ ಆ ನೆನಪಲ್ಲೇ ಕಳೆಯುವುದು ಆಮೇಲೆ ಏನೂ ನಡೆದೇ ಇಲ್ಲವೇನೋ ಎಂಬಂತೆ ಎಲ್ಲವನ್ನೂ ವಿಸ್ಮೃತಿಯ ಮರೆಯೊಳಕ್ಕೆ ತಳ್ಳಿಬಿಡುವುದು ನನ್ನಂತಹ ಮನುಷ್ಯರ ಹುಟ್ಟುಗುಣವೇನೋ. ಆದರೆ ಬದುಕಿನ ನಿರ್ಣಯ ಬೇರೆಯದೇ ಇತ್ತು.

ಮತ್ತೊಂದು ಗಡಿಬಿಡಿಯ ಬೆಳಗ್ಗೆ ಅರ್ಧ ದೋಸೆ ತಿಂದು ಅಮ್ಮನಿಂದ ಬೈಸಿಕೊಳ್ಳುತ್ತಲೇ ಹೊರಟು ನಿಲ್ದಾಣ ತಲುಪಿ ಇನ್ನೂ ಉಸಿರು ಬಿಡುವ ಮುನ್ನವೇ ಬಂದ ಬಸ್ ಹತ್ತಿ ಕುಳಿತವಳಿಗೆ ಹಿಂದಿನ ಸೀಟಿನಲ್ಲಿ ಅದೇ ಮಹಿಳೆಯನ್ನು ಕಂಡಂತಾಗಿ ಒಮ್ಮೆ ದಿಕ್ಕೇ ತೋಚದಂತಾಯಿತು. ಕರೆ ಮಾಡದ ಗಿಲ್ಟ್, ಹೇಗೆ ಮಾತಾಡಿಸಲಿ ಅನ್ನುವ ಗೊಂದಲ, ಯಾವ ಕಾರಣ ಕೊಡಲಿ ಅನ್ನುವ ಪೇಚಾಟ, ಮುಖ ಮುಚ್ಚಿಕೊಳ್ಳಲೇ ಅನ್ನುವ ಅನುಮಾನ ಇವೆಲ್ಲದರ ಮಧ್ಯೆ ಮೆಲ್ಲನೆ ಅವರತ್ತ ನೋಡಿದ್ದೆ. ನನ್ನ ಕಂಡ ಕೂಡಲೇ ಹತ್ತಿರ ಕರೆದು ಪಕ್ಕದ ಸೀಟಲ್ಲೇ ಕೂರಿಸಿಕೊಂಡರು.

ನಾನು ಏನು ಮಾತಾಡಬೇಕೆಂದು ಗೊತ್ತಾಗದೆ ತಬ್ಬಿಬ್ಬಾಗಿ ಅವರ ಮುಖ ನೋಡುತ್ತಿದ್ದರೆ ಅವರು ಮಾತ್ರ ಯಾವುದರ ಪರಿವೆಯೂ ಇಲ್ಲದಂತೆ ಮಾತಿಗೆ ಶುರು ಹಚ್ಚಿಕೊಂಡಿದ್ದರು. ಅವರು, ಅವರ ಹೆಸರು, ಹವ್ಯಾಸ, ತಿರುಗಾಟದ ಹುಚ್ಚು ಇವೆಲ್ಲಾ ಮಾತಾಡುತ್ತಿದ್ದರೆ ನನಗೇಕೋ ನನ್ನ ಬಗ್ಗೆಯೇ ನಾಚಿಕೆಯೆನಿಸಿತು. ಇಷ್ಟು ಶುದ್ಧ ಹೃದಯದ ಮಹಿಳೆಯೊಂದಿಗೆ ಸಂಬಂಧ ಉಳಿಸಿಕೊಳ್ಳಲಾಗದ ನಾನು ಎಂತಹ ಮೂರ್ಖಳಾಗಿರಬೇಕು ಅನಿಸುತ್ತಿತ್ತು. ಹೇಳಬೇಕು ಅಂದುಕೊಂಡಿದ್ದ ಸುಳ್ಳು ಗಂಟಲನ್ನು ಮೀರಿ ಆಚೆ ಬರುತ್ತಲೇ ಇರಲಿಲ್ಲ. ಕೊನೆಗೆ ಇನ್ನೇನು ಇಳಿದೇ ಬಿಡುತ್ತೇನೆ ಎಂದಾಗುವಾಗ ಇದ್ದ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ “ಅಕ್ಕಾ, ಫೋನ್ ಮಾಡೋಕೆ ಆಗಿಲ್ಲ. ಹಾಗಂತ ತುಂಬಾ ಬ್ಯುಸಿಯಾಗಿದ್ದೆ, ತುಂಬಾ ಕೆಲಸ ಇತ್ತು ಅಂತೇನಲ್ಲ, ಬಹುಶಃ ನಿಮ್ಮಷ್ಟು ಶುದ್ಧ ಮನಸ್ಸಿನವಳು ನಾನಲ್ಲ.” ಎಂದು ತೊದಲಿದೆ. ಅಮ್ಮನ ಸೆರಗಿನ ಮರೆಯಿಂದ ಮೆಲ್ಲನೆ ಇಣುಕಿ ತುಂಟತನದಿಂದ ಮಗುವೊಂದು ನಗುವಂತೆ ಹಗುರವಾಗಿ ನಕ್ಕರು. ನಾನು ಅವರ ನಗು ತುಂಬಿಕೊಂಡು ಬಸ್ ಇಳಿದೆ.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಅಲ್ಲಿಂದ ಮುಂದೆ ನಮ್ಮದು ಸಮೃದ್ಧ ಸಂಬಂಧ. ಮಾತುಕತೆ, ಹರಟೆ, ನಗು, ಸಂಭ್ರಮ, ಖುಶಿ ಹಂಚಿಕೊಂಡಷ್ಟೇ ಸಹಜವಾಗಿ ನೋವು, ದುಃಖ, ಸಂಕಟ, ನಿರಾಸೆಗಳನ್ನೂ ಹಂಚಿಕೊಳ್ಳುತ್ತೇವೆ. ಒಣ ಪ್ರತಿಷ್ಠೆ, ತೋರಿಕೆಯ ಸುಖ, ಹುಸಿ ಫಾರ್ಮಾಲಿಟೀಸ್ ನಮ್ಮ ಮಧ್ಯೆ ಬಂದೇ ಇಲ್ಲ. ಅಕ್ಷರಶಃ ಒಡಹುಟ್ಟಿದ ಸಹೋದರಿಯರಂತೆ ಕಿತ್ತಾಡುತ್ತೇವೆ, ಮರುಕ್ಷಣ ಒಂದಾಗುತ್ತೇವೆ. ನನ್ನ ಮುಟ್ಟಿನ ನೋವಿಗೆ ಆಕೆ ಅಕ್ಕರೆಯ ಮುಲಾಮು, ಅವರ ಒಂಟಿ ಜೀವನಕ್ಕೆ ನಾನು ಸಂಜೆಯ ಹಾಡು. ನನ್ನ ಕಥೆಗಳ, ಕವಿತೆಗಳ ಕಟು ವಿಮರ್ಶಕಿ ಆಕೆ, ಆಕೆಯ ಬದುಕಿನ ಒಂದು ಪುಟ್ಟ ಕವಿತೆ ನಾನು.

ಮದುವೆಗೆಂದು ನಾನು ತಯಾರಾಗಿ ನಿಂತಾಗ ಒಲವಿನ ದೀವಿಗೆ ಹಿಡಿದು ನನ್ನ ಗಲ್ಲ ಹಿಡಿದೆತ್ತಿ “ಈ ಸಂಬಂಧ ನಿನಗೆ ಪೂರ್ತಿ ಒಪ್ಪಿಗೆಯೇನೇ?” ಎಂದು ಕೇಳಿದ್ದರು. ಆಗಷ್ಟೇ ನಿಖಾಹ್ ಗಾಗಿ ನನ್ನ ಒಪ್ಪಿಗೆ ಕೇಳಲು ಬಂದಿದ್ದ ಅಪ್ಪ ನಾನು “ಹೂಂ” ಅಂದಮೇಲೆ ಬಾಗಿಲ ಕಡೆ ನಡೆದಿದ್ದರು. ನಮ್ಮ ಮಾತು ಕೇಳಿ ಒಮ್ಮೆ ತಿರುಗಿ ನೋಡಿ ಮುಂದಡಿಯಿಟ್ಟರು. ಅಪ್ಪನ ಕಣ್ಣಲ್ಲೂ ನೀರು ಗಿರಿಗಿಟ್ಲೆಯಾಡುತ್ತಿತ್ತಾ? ಗೊತ್ತಿಲ್ಲ, ಈ ಅಕ್ಕ ಮಾತ್ರ ಕಣ್ಣ ಪೂರ್ತಿ ನೀರು ತುಂಬಿಕೊಂಡು ಬಾತ್ ರೂಂ ಹೊಕ್ಕರು. ನನ್ನ ಮದುವೆ ದಿನದ ಮತ್ತೊಂದು ವಿಶೇಷತೆಯೆಂದರೆ ಅವರು ಸೀರೆ ಉಟ್ಟದ್ದು.

ಸದಾ ಜೀನ್ಸ್ ಧರಿಸುವ ಅವರನ್ನು ಅವತ್ತು ಸೀರೆಯಲ್ಲಿ ನೋಡಿದ್ದೇ ಒಂದು ಹಬ್ಬ. ಮಣಭಾರದ ಲೆಹಂಗಾ ಧರಿಸಿ ನಾನು ಪಡಬಾರದ ಕಷ್ಟ ಪಡುತ್ತಿದ್ದರೆ ಆಕೆ ತುಂಬಾ ಸಲೀಸಾಗಿ ಮದುವೆ ಛತ್ರದ ತುಂಬಾ ಸೀರೆಯಲ್ಲೇ ಓಡಾಡುತ್ತಿದ್ದರು. ಅವರನ್ನು ನೋಡುವಾಗೆಲ್ಲಾ ನನಗೆ ‘ಇವರು ಎಲ್ಲಾ ಕಾಲಕ್ಕೂ ಎಲ್ಲಾ ಧಿರಿಸಿಗೂ ಸಲ್ಲುವವರೇನೋ’ ಅಂತ ಅನ್ನಿಸುತ್ತಿತ್ತು. ಆದರೆ ಅವರ ಬದುಕಿನೊಳಕ್ಕೆ ಒಂದು ಆಕಸ್ಮಿಕ ತಿರುವಿನಲ್ಲಿ ಪ್ರವೇಶ ಪಡೆದ ನಾನು ಎಲ್ಲಿ ಮದುವೆಯ ನಂತರ ಕಳೆದುಹೋಗಿಬಿಡುತ್ತೇನೇನೋ ಅನ್ನುವ ದುಗುಡ, ಮದುವೆಯ ನಂತರದ ನನ್ನ ಬದುಕು ಹೇಗಿರತ್ತದೋ ಅನ್ನುವ ಆತಂಕ, ಸದಾ ಓದು ಬರಹಗಳಲ್ಲೇ ಕಾಲ ಕಳೆದ ನಾನು ಹೊಸ ಬದುಕನ್ನು ನಿಭಾಯಿಸಿಯೇನಾ ಅನ್ನುವ ಅನುಮಾನ, ಗಂಡನ ಮನೆಯವರು ಹೇಗಿರುತ್ತಾರೋ ಅನ್ನುವ ಗುಮಾನಿ ಎಲ್ಲಾ ಅವರ ಕಣ್ಣಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಯಾರಿಗೆ ಗೊತ್ತು, ಕಳೆದು ಹೋದ ಅವರ ಬದುಕಿನ ಚಿತ್ರಣ ಒಮ್ಮೆ ಅವರ ಕಣ್ಣೆದುರು ಬಂದಿರಲೂಬಹುದು, ಬೇರಿನವರೆಗೆ ಅಲ್ಲಾಡಿಸಿರಲೂಬಹುದು. ಆದರೆ ನಿಖಾಹ್, ಅದರಾಚೆಗಿನ ಸಂಪ್ರದಾಯಗಳೆಲ್ಲಾ ಮುಗಿದು ನಾನು ಗಂಡನ ಮನೆಗೆ ಹೊರಟು ನಿಂತಾಗ ಮಾತ್ರ ತೀರಾ ನಿರ್ಲಿಪ್ತೆಯಂತೆ ಬಂದು ಶೇಕ್ ಹ್ಯಾಂಡ್ ಮಾಡಿ ಹೊರಟುಹೋದರು. ಬದುಕಿನ ಯಾವ ಕ್ಷಣ ಅವರಿಗೆ ನಿರ್ಲಿಪ್ತತೆಯನ್ನು ಕಲಿಸಿತ್ತೋ ಗೊತ್ತಿಲ್ಲ, ಬೇಕಾದಾಗೆಲ್ಲಾ ಅದನ್ನು ಧರಿಸಿ ಮುಗುಮ್ಮಾಗಿ ಇದ್ದುಬಿಡುತ್ತಿದ್ದರು.

ಇಂತಿಪ್ಪ ಅಕ್ಕ, ಮೊನ್ನೆ ಒಂದು ವಾರ ಕಾಣೆಯಾಗಿದ್ದರು. ಫೋನ್, ವಾಟ್ಸಾಪ್, ಇನ್ಸ್ಟಾಗ್ರಾಂ ಎಲ್ಲೂ ಪತ್ತೆಯೇ ಇರಲಿಲ್ಲ. ಅಸ್ಸಾಂನ ಅದ್ಯಾವುದೋ ಹಳ್ಳಿಯೊಂದಕ್ಕೆ ಹೋಗಿಬರುತ್ತೇನೆ ಅಂತ ಹೇಳಿಹೋದವರ ಮತ್ತೆ ಕಾಲ್ ಗೆ ಸಿಕ್ಕಿರಲಿಲ್ಲ. ಆ ಅನ್ಯಮನಸ್ಕತೆಯಲ್ಲೇ ಪುಸ್ತಕದ ರಾಶಿಯಿಂದ ಕೈಗೆ ಸಿಕ್ಕಿದ ಪುಸ್ತಕವೊಂದನ್ನು ತೆರೆದು ಓದುತ್ತಾ ಕೂತಿದ್ದೆ, ಮಗ್ರಿಬಿನ ಸೂರ್ಯ ತನ್ನ ಅರ್ಧ ಬಣ್ಣ ಕಳೆದುಕೊಂಡಿದ್ದ. ಅಷ್ಟರಲ್ಲಿ ಫೋನ್ ರಿಂಗಾಯಿತು, ಯಾರದೋ ನಂಬರ್, ರಿಸೀವ್ ಮಾಡಿದ್ರೆ ಆ ಕಡೆಯಿಂದ ಅಕ್ಕನ ಧ್ವನಿ‌. ನನಗೆ ಹೋದ ಜೀವ ಬಂದಂತಾಯಿತು‌. ಅವರ ಧ್ವನಿ ಕೇಳಿದ ಕೂಡಲೇ ಅಷ್ಟರವರೆಗೆ ಅವರ ಮೇಲಿದ್ದ ಕೋಪ, ಸಿಟ್ಟು, ಆಕ್ರೋಶ ಕರಗಿಹೋಯಿತು.

“ಇದ್ಯಾರ ನಂಬರ್? ಎಲ್ಲಿದ್ದೀರಾ? ಇಷ್ಟು ದಿನ ಎಲ್ಲಿದ್ರಿ?” ನನ್ನದು ಕ್ಷೇಮ ಸಮಾಚಾರದ ಪ್ರಶ್ನೆ. ಆಕಡೆಯಿಂದ ಆಕೆ ಖಿಲ್ಲನೆ ನಕ್ಕಳು. ನನಗೆ ಮತ್ತೆ ಸಿಟ್ಟು ಬಂತು. “ಸಮಾಧಾನ, ನಾನು ಅಸ್ಸಾಂನಲ್ಲೇ ಇದ್ದೇನೆ. ಇದು ಗೆಳೆಯನೊಬ್ಬನ ನಂಬರ್, ನನ್ನ ಫೋನ್ ಕಳೆದುಹೋಗಿದೆ” ಅಂದರು. ನಾನು “ಯಾವಾಗ ರಿಟರ್ನ್?” ನನ್ನದು ಅಮಾಯಕ ಪ್ರಶ್ನೆ. “ಸದ್ಯಕ್ಕಿಲ್ಲ, ಬರ್ಬೇಕು ಅನ್ನಿಸಿದಾಗ ಬರ್ತೇನೆ” ಮತ್ತೆ ಅವರಿಂದ ಕೀಟಲೆಯ ನಗು‌. ಈಗ ನಾನೂ ಕೀಟಲೆ ಮಾಡುವ ಮೂಡ್ ಗೆ ಬಂದಿದ್ದೆ. “ಏನು, ಅಲ್ಲೇ ಸಟ್ಲ್ ಆಗುವ ಪ್ಲಾನ್ ಇದ್ಯಾ?” ಕೇಳಿದೆ. “ಹೂಂ ಆಗ್ತೇನೇನೋ, ಗೊತ್ತಿಲ್ಲ” ಎಂದರು. ನಾನು ಮತ್ತೆ ಕಿಚಾಯಿಸುವಂತೆ “ಬಾಯ್ ಫ್ರೆಂಡ್ ಏನಾದ್ರೂ ಮಾಡ್ಕೊಂಡ್ರಾ ಹೇಗೆ? ಯಾರು ಆ ಬಕ್ರಾ?” ಎಂದು ಕೇಳಿದೆ. ಮೆತ್ತಗೆ “ಹೂಂ ಕಣೇ” ಅಂದು ಮೌನವಾದ್ರು. ಈಗ ಮಾತ್ರ ನನಗೆಲ್ಲಾ ಅಯೋಮಯ.

ಅವರ ಧ್ವನಿಯಲ್ಲಿದ್ದ ಖಚಿತತೆ ನಿಜವನ್ನೇ ಹೇಳುತ್ತಿದ್ದಾರೆ ಅಂತ ಅನ್ನುತ್ತಿತ್ತು ಆದರೆ ಕೀಟಲೆ ಮಾಡುತ್ತಿದ್ದಾರೇನೋ ಅನ್ನುವ ಸಣ್ಣ ಅನುಮಾನ ನನಗೆ. ಒಂದೆರಡು ಕ್ಷಣ ತಡೆದು “ನಿಜಾನಾ?” ಅಂತ ಕೇಳಿದೆ. ಆ ಹೊತ್ತಿಗಾಗುವಾಗ ಅವರು ಸಹಜ ಸ್ಥಿತಿಗೆ ಬಂದಿದ್ದರು. “ಮತ್ತೆ ಸುಳ್ಳಾ? ನಾನು ಪ್ರೀತಿಸ್ಬಾರ್ದಾ? ಅಥವಾ ಈ ವಯಸ್ಸಿನಲ್ಲಿ ಪ್ರೀತಿಸ್ಬಾರ್ದು ಅಂತಾನಾ? ಬಿಡಮ್ಮಾ ನನಗೆ ಅಂತಹ ವಯಸ್ಸೇನೂ ಆಗಿಲ್ಲ. ನಿನ್ನ ಪಕ್ಕ ನಿಂತ್ರೆ ನಾನು ನಿನ್ನ ತಂಗಿ ತರ ಕಾಣಿಸ್ತೇನೆ. ಬೇಕಿದ್ರೆ ನಿನ್ನ ಗಂಡನನ್ನು ಕೇಳು” ಅಂದ್ರು. ಈಗ ನನಗೆ ಈಕೆ ನಿಜವನ್ನೇ ಹೇಳ್ತಿದ್ದಾರೆ ಅನ್ನುವುದು ಖಚಿತವಾಯಿತು.

“ಯಾವೂರು?” ಕೇಳಿದೆ. “ಕನ್ನಡಿಗನೇ ಕಣೇ ಗುಲ್ಡೂ” ಮತ್ತೆ ರೇಗಿದರು. “ಯಾವಾಗ ಮದುವೆ?” ಅಂತ ಕೇಳಿದೆ. “ಮದುವೇನಾ? ಯಾರು ಮದುವೆ ಆಗ್ತಿದ್ದಾರೆ?” ಆ ಕಡೆಯಿಂದ ಗಂಭೀರ ಮರುಪ್ರಶ್ನೆ. ನನಗೆ ಮತ್ತೆ ಗೊಂದಲ ಶುರುವಾಯಿತು. “ಮತ್ತೆ?” ನನ್ನದು ಸಂದೇಹದ ಪ್ರಶ್ನೆ. “ಮದುವೆ ಅಂತೇನಿಲ್ಲ, ಪ್ರೀತಿ ಇರುವಷ್ಟು ದಿನ ಒಟ್ಟಿಗಿರುತ್ತೇವೆ. ಅವನ ಕಣ್ಣಿನಲ್ಲಿ ನನ್ನ ಬಿಂಬ, ನನ್ನ ಕಣ್ಣಿನಲ್ಲಿ ಅವನ ಬಿಂಬ ಮರೆಯಾದ ಕ್ಷಣ ಇಬ್ಬರೂ ಒಬ್ಬರಿಗೊಬ್ಬರ ಬದುಕಿನಿಂದ ಎದ್ದುಹೋಗುತ್ತೇವೆ.” ಅಂದರು. ನನ್ನದು ಮತ್ತೆ ಮೌನ. “ಯಾಕೋ ನಿನ್ಹತ್ರ ಹೇಳ್ಕೊಳ್ಬೇಕು ಅನ್ನಿಸಿತು, ಹೇಳಿದೆ. ಸ್ವೀಕರಿಸುವುದು ಬಿಡುವುದು ನಿನ್ನಿಷ್ಟ. ನಾನು ನಾಳೆ ಫೋನ್ ಮತ್ತೆ ಮಾಡುತ್ತೇನೆ” ಎಂದು ಕರೆ ಕಟ್ ಮಾಡಿದರು.

ನಾನು ಆ ನಂಬರನ್ನು ‘ಅಕ್ಕನ ಪ್ರೀತಿ’ ಎಂದು ಸೇವ್ ಮಾಡ್ಕೊಂಡೆ. ಮಗ್ರಿಬಿನ ಮಬ್ಬುಬೆಳಕಲ್ಲಿ ಪಕ್ಕದ ಗದ್ದೆಯಲ್ಲಿ ಪೈರೊಂದು ಬಾಗಿ ಹಿತವಾಗಿ ಭೂಮಿಯೆದೆಯನ್ನು ಸ್ಪರ್ಶಿಸಿದಂತಾಯಿತು. ಅದ್ಯಾವ ಹೊತ್ತಲ್ಲಿ ಗಂಡ ಬಂದು ಪಕ್ಕ ನಿಂತಿದ್ದರೋ ಗೊತ್ತಿಲ್ಲ, ನಾನೂ ಹಗುರವಾಗಿ ಅವರೆದೆಗೆ ಒರಗಿಕೊಂಡೆ. ಅಲ್ಲೇ ಪಕ್ಕದಲ್ಲಿದ್ದ ಪಾರಿಜಾತ ನಾಚಿಕೊಂಡಿತಾ? ಗೊತ್ತಿಲ್ಲ.