ಮಧ್ಯರಾತ್ರಿ ಒಂದೂವರೆ ಘಂಟೆ ಕಳೆಯುತ್ತಾ ಇದ್ದ ಹಾಗೆ, ಪೊನ್ನಪ್ಪನಿಗೆ ನಿದ್ದೆಮಂಕು ಆವರಿಸಲು ಶುರುವಾಯಿತು. ಗಡದ್ದಾಗಿ ತಿಂದು, ಕಾಲು ನೀಡಿ ಲೋಕದ ಪರಿವೇ ಇಲ್ಲದೆ ಗೊರಕೆ ಹೊಡೆಯುತ್ತಿದ್ದ ಸಿದ್ದಣ್ಣನಿಗೆ, ಪೊನ್ನಪ್ಪ ಕಾಲಲ್ಲಿ ಎರಡು ಬಾರಿ ತಿವಿದು ಎಚ್ಚರಿಸಿದ. ಚಕ್ಕನೆ ಎಚ್ಚರಗೊಂಡ ಸಿದ್ದಣ್ಣ, ಮರಗಳ್ಳರು ಬಂದಿದ್ದರಿಂದ ಫಾರೆಸ್ಟರ್ ನನ್ನನ್ನು ಎಬ್ಬಿಸಿರಬಹುದು ಎಂದು ಕಣ್ಣು ಬಿಟ್ಟವನೇ ಗಾಬರಿಯಿಂದ ಸುತ್ತಲೂ ನೋಡತೊಡಗಿದ. ಪೊನ್ನಪ್ಪ ಮೆಲ್ಲನೆ ಅವನ ಕೈಯನ್ನು ಅದುಮಿ, “ಏನೂ ಇಲ್ಲ, ಆತಂಕ ಪಡಬೇಡ, ನಾನು ಸ್ವಲ್ಪಹೊತ್ತು ಮಲಗುತ್ತೇನೆ. ಯಾರಾದರೂ ಬಂದ ಶಬ್ದ ಕೇಳಿಸಿದರೆ ನನ್ನನ್ನು ಎಬ್ಬಿಸು” ಎಂದು ಅವನ ಕಿವಿಯಲ್ಲಿ ಪಿಸುಗುಟ್ಟಿದ.
ನೌಶಾದ್‌ ಜನ್ನತ್ತ್‌ ಹೊಸ ಕಾದಂಬರಿ “ಫಾರೆಸ್ಟರ್‌ ಪೊನ್ನಪ್ಪ” ಇಂದ ಆಯ್ದ ಭಾಗ ನಿಮ್ಮ ಓದಿಗೆ

ಸಮಯ ಸರಿಯುತ್ತಿದ್ದಂತೆ ಕಪ್ಪಿಟ್ಟಿದ್ದ ಮೋಡಗಳೆಲ್ಲ ಸರಿದು, ಮೋಡದೆಡೆಯಲ್ಲಿ ಬಂಧಿಯಾಗಿದ್ದ ಚಂದಮಾಮ ಬೆಳಕನ್ನು ಸೂಸಲು ಶುರುಮಾಡಿದ್ದ. ತಾರೆಗಳೆಲ್ಲ ಮಿನುಗತೊಡಗಿದ್ದವು. ಬಹು ಸಮಯದಿಂದ ಒಂಟಿಸಲಗವೊಂದು ಘೀಳಿಡುತ್ತಿರುವ ಶಬ್ದ ದೂರದಿಂದ ಕೇಳಿಬರುತ್ತಿರುವುದನ್ನು ಬಿಟ್ಟರೆ ಉಳಿದಂತೆ ಕಾಡುಪ್ರಾಣಿಗಳೆಲ್ಲಾ ಅಂದ್ಯಾಕೋ ಮೌನವಾಗಿರುವಂತೆ ತೋಚುತ್ತಿತ್ತು. ‘ಸಲಗ ಯಾಕೆ ಒಂದೇ ಸಮನೆ ಘೀಳಿಡುತ್ತಿದೆ! ಒಂದು ವೇಳೆ ಅದರ ಜೊತೆಗಾರರು ಎಲ್ಲಾದರು ಕಳೆದುಹೋಗಿದ್ದು, ಅವರ ಹುಡುಕಾಟ ನಡೆಸುತ್ತಿರಬಹುದಾ? ಅಥವಾ ಕಾಡೊಳಗೆ ನರಮನುಷ್ಯರು ಲಗ್ಗೆಯಿಟ್ಟಿದ್ದಾರೆ ಎಂಬ ವಾಸನೆ ಮೂಗಿಗೆ ಬಡಿದು, ಆಕ್ರಮಣ ಮಾಡಲೆಂದೇ ನಮ್ಮ ಜಾಡು ಹಿಡಿದು ಇತ್ತಕಡೆ ಏನಾದರು ಬರುತ್ತಿದೆಯ!’ ಎಂದು ಆ ಆನೆಯ ಆಕ್ರಂದನ ಕೇಳಿ ಪೊನ್ನಪ್ಪನ ಮನಸ್ಸಿಗೆ ಅನ್ನಿಸತೊಡಗಿತು. ಆದರೆ ಇದ್ಯಾವುದರ ಪರಿವೆ ಇಲ್ಲದೇ ಸಿದ್ದಣ್ಣ ಮಾತ್ರ ಕಾಲು ನೀಡಿ ಮೆಲ್ಲನೆ ಗೊರಕೆ ಹೊಡೆಯಲು ಶುರು ಮಾಡಿದ್ದ. ಎಲ್ಲರೂ ಜೀವ ಕೈಯಲ್ಲಿ ಹಿಡಿದುಕೊಂಡು ಕಳ್ಳರಿಗಾಗಿ ಕಾದು ಕುಳಿತಿರುವ ಈ ಸಂದರ್ಭದಲ್ಲೂ, ಅದು ಒಂದು ಮರದ ಮೇಲೆ ಕುಳಿತು ಇವನಿಗೆ ಇಷ್ಟು ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿದೆಯಲ್ಲ! ಎಂದು ಪೊನ್ನಪ್ಪ ಆಶ್ಚರ್ಯಪಟ್ಟುಕೊಂಡು ಮನಸ್ಸಲ್ಲೆ ನಕ್ಕ.

ಹೊತ್ತು ಕಳೆದಂತೆ ಪೊನ್ನಪ್ಪನ ಹೊಟ್ಟೆ ಕೂಡ ತಾಳ ಹಾಕಲು ಪ್ರಾರಂಭಮಾಡಿತು. ಮೆಲ್ಲನೇ ಶಬ್ದ ಮಾಡದೇ ಕೈಚೀಲದಿಂದ ರೊಟ್ಟಿಯನ್ನು ತೆಗೆದು ಮೆಲ್ಲಲು ಶುರುಮಾಡಿದ. ಸಮಯ ಸುಮಾರು ಹನ್ನೆರಡು ಗಂಟೆಯಾಗಿರಬಹುದು, ಮರಗಳ್ಳರು ಬರುವ ಯಾವುದೇ ಲಕ್ಷಣಗಳು ಕಾಣುತ್ತಿರಲಿಲ್ಲ. ಸೊಳ್ಳೆ ಕಡಿತ ಮಾತ್ರ ವಿಪರೀತವಾಗಿತ್ತು. ಪೊನ್ನಪ್ಪ ಕುಳಿತಲ್ಲಿಂದಲೆ ಸುತ್ತಲೂ ಕಣ್ಣಾಡಿಸುತ್ತಲಿದ್ದ. ಕಾಡಿನ ಉದ್ದಗಲಕ್ಕೂ ನೀರವಮೌನ ಆವರಿಸಿತ್ತು. ‘ಉಳಿದ ಎರಡು ತಂಡಗಳ ಕಥೆಯೇನೋ, ಅವರು ಎಲ್ಲಿ ಬಚ್ಚಿಟ್ಟುಕೊಂಡಿದ್ದಾರೋ, ಅವರಿಗೆ ಸಮಸ್ಯೆ ಏನಾದರು ಆಗಿರಬಹುದಾ?’ ಎಂಬ ನೂರೆಂಟು ಪ್ರಶ್ನೆಗಳು ಪೊನ್ನಪ್ಪನ ತಲೆಯಲ್ಲಿ ಕಾಡುತ್ತಲೆ ಇದ್ದವು.

(ನೌಶಾದ್‌ ಜನ್ನತ್ತ್‌)

ಮಧ್ಯರಾತ್ರಿ ಒಂದೂವರೆ ಘಂಟೆ ಕಳೆಯುತ್ತಾ ಇದ್ದ ಹಾಗೆ, ಪೊನ್ನಪ್ಪನಿಗೆ ನಿದ್ದೆಮಂಕು ಆವರಿಸಲು ಶುರುವಾಯಿತು. ಗಡದ್ದಾಗಿ ತಿಂದು, ಕಾಲು ನೀಡಿ ಲೋಕದ ಪರಿವೇ ಇಲ್ಲದೆ ಗೊರಕೆ ಹೊಡೆಯುತ್ತಿದ್ದ ಸಿದ್ದಣ್ಣನಿಗೆ, ಪೊನ್ನಪ್ಪ ಕಾಲಲ್ಲಿ ಎರಡು ಬಾರಿ ತಿವಿದು ಎಚ್ಚರಿಸಿದ. ಚಕ್ಕನೆ ಎಚ್ಚರಗೊಂಡ ಸಿದ್ದಣ್ಣ, ಮರಗಳ್ಳರು ಬಂದಿದ್ದರಿಂದ ಫಾರೆಸ್ಟರ್ ನನ್ನನ್ನು ಎಬ್ಬಿಸಿರಬಹುದು ಎಂದು ಕಣ್ಣು ಬಿಟ್ಟವನೇ ಗಾಬರಿಯಿಂದ ಸುತ್ತಲೂ ನೋಡತೊಡಗಿದ. ಪೊನ್ನಪ್ಪ ಮೆಲ್ಲನೆ ಅವನ ಕೈಯನ್ನು ಅದುಮಿ, “ಏನೂ ಇಲ್ಲ, ಆತಂಕ ಪಡಬೇಡ, ನಾನು ಸ್ವಲ್ಪಹೊತ್ತು ಮಲಗುತ್ತೇನೆ. ಯಾರಾದರೂ ಬಂದ ಶಬ್ದ ಕೇಳಿಸಿದರೆ ನನ್ನನ್ನು ಎಬ್ಬಿಸು” ಎಂದು ಅವನ ಕಿವಿಯಲ್ಲಿ ಪಿಸುಗುಟ್ಟಿದ.

“ಆಯ್ತು ಸರ್” ಎಂದ ಸಿದ್ದಣ್ಣ, ತೇಗದ ನಾಟಾ ಜೋಡಿಸಿದ್ದ ಕಡೆಗೆ ದೃಷ್ಟಿ ಹಾಯಿಸುತ್ತಾ ಕುಳಿತ. ಮರದ ಮೇಲೆ ಕುಳಿತು ಪಹರೆ ಶುರುಮಾಡಿದ ಸುಮಾರು ಆರೇಳು ಗಂಟೆಗಳಿಂದಲೂ ಒಂದೇ ಭಂಗಿಯಲ್ಲಿ ಕುಳಿತಿದ್ದ ಪೊನ್ನಪ್ಪನಿಗೆ ಕಾಲು ಮರಗಟ್ಟಿದಂತಾಗಿತ್ತು. ಕಾಲು ನೀಡಿ, ಹಾಗೆ ಬೆನ್ನೊರಗಿಸಿ ಕಣ್ಣು ಮುಚ್ಚಿದ. ತುಂಬಾ ಆಯಾಸವಾಗಿದ್ದರಿಂದಲೋ ಏನೋ, ಕಣ್ಣು ಮುಚ್ಚಿದ ಕ್ಷಣಾರ್ಧದಲ್ಲಿ ನಿದ್ದೆಯ ಮಂಪರು ಆವರಿಸಿಬಿಟ್ಟಿತು. ಸಿದ್ದಣ್ಣನಿಗೆ ಒಂದು ಬೀಡಿ ಸೇದಬೇಕು ಎಂದು ಮನಸೆಳೆಯುತ್ತಿತ್ತು. ಆದರೆ ಹೊಗೆಯ ವಾಸನೆಯಿಂದಾಗಿ ಮರಗಳ್ಳರಿಗೆ ತಾವು ಕಾವಲು ಕಾಯುತ್ತಿರುವುದು ಗೊತ್ತಾಗಿ ಬಿಡಬಹುದು ಮತ್ತು ಪೊನ್ನಪ್ಪನವರ ಬೈಗಳ ತಿನ್ನಬೇಕಾಗುತ್ತದೆ ಎಂಬ ಭಯದಿಂದ ತನ್ನ ಬೀಡಿ ಚಟವನ್ನು ನಿಯಂತ್ರಿಸಿಕೊಂಡು ಹಾಗೇ ಕುಳಿತಿದ್ದ.

ತುಸು ಹೊತ್ತಿನ ಬಳಿಕ ‘ಚರ್ರ್ ಪರ್ರ್’ ಎಂದು ಹುಣ್ಣಿಗುತ್ತಿಗಳನ್ನು ಸರಿಸಿ, ಯಾರೋ ತಮ್ಮತ್ತ ನಡೆದು ಬರುತ್ತಿರುವ ಶಬ್ದ ಕೇಳಿಸತೊಡಗಿತು. ಸಿದ್ದಣ್ಣ ಭಯದಿಂದ ಶಬ್ದ ಕೇಳಿ ಬರುತ್ತಿದ್ದ ದಿಕ್ಕಿನ ಕಡೆಗೆ ದಿಟ್ಟಿಸಿ ನೋಡತೊಡಗಿದ. ದೂರದಿಂದ ಭಾರವಾದ ಹೆಜ್ಜೆಗಳನ್ನಿಡುತ್ತಾ ತಮ್ಮತ್ತ ಯಾರೋ ಬರುತ್ತಿದ್ದಾರೆ. ಆದರೆ ಈ ಕಗ್ಗತ್ತಲಿನಲ್ಲಿ ಯಾವುದೂ ಸ್ಪಷ್ಟವಾಗಿ ಸಿದ್ದಣ್ಣನಿಗೆ ಕಾಣುತ್ತಿಲ್ಲ. ಪೊನ್ನಪ್ಪನನ್ನು ಎಬ್ಬಿಸಬೇಕು ಅನ್ನುವಷ್ಟರಲ್ಲಿ ಮತ್ತೆ ನಿಶ್ಶಬ್ದ!

ಸಿದ್ದಣ್ಣ ಸೂಕ್ಷ್ಮವಾಗಿ ಕಿವಿಗೊಟ್ಟು ಕೇಳತೊಡಗಿದ. ಬಿದಿರು ಮೆಳೆಗಳು ‘ಕರ್ರ್ ಕರ್ರ್’ ಎಂದು ಒರೆಸಿಕೊಳ್ಳುವ ಶಬ್ದವನ್ನು ಬಿಟ್ಟರೆ ಬೇರೇನೂ ಕೇಳುತ್ತಿರಲಿಲ್ಲ. ಒಂದು ವೇಳೆ ನನಗೆ ಹಾಗೆ ಅನ್ನಿಸಿದ್ದಾ! ಎಂದು ತನ್ನನ್ನು ತಾನೆ ಪ್ರಶ್ನೆ ಮಾಡಿಕೊಂಡ. ಅಷ್ಟರಲ್ಲಿ ದಡೂತಿ ದೇಹದ ಮೂರು ನಾಲ್ಕು ಜನ ಏಕಕಾಲದಲ್ಲಿ, ಒಂದೇ ರೀತಿಯಲ್ಲಿ ಶಿಸ್ತಾಗಿ ಹೆಜ್ಜೆ ಹಾಕುತ್ತ, ತಮ್ಮತ್ತ ಬರುತ್ತಿರುವಂತೆ ಮತ್ತೆ ಶಬ್ದ ಕೇಳಿಬರತೊಡಗಿತು. ಯಾವುದಕ್ಕೂ ಒಮ್ಮೆ ಖಾತರಿಪಡಿಸಿಕೊಂಡ ನಂತರವೇ ಫಾರೆಸ್ಟರ್ ಅವರನ್ನು ಎಬ್ಬಿಸಿದರೆ ಸಾಕು ಎಂದು ಶಬ್ದ ಕೇಳಿಬರುತ್ತಿದ್ದ ದಿಕ್ಕಿನೆಡೆಗೆ ನೋಡುತ್ತಾ ಕುಳಿತ.

ಒಂದತ್ತು ನಿಮಿಷ ಕಳೆದಿರಬಹುದು. ‘ಬುಸ್ ಬುಸ್’ ಎನ್ನುತ್ತಾ, ತಾವು ಕುಳಿತಿದ್ದ ಹೊನ್ನೆ ಮರದೆಡೆಗೆ ಕಪ್ಪಗಿನ ದೈತ್ಯಾಕೃತಿಯೊಂದು ನಡೆದು ಬರುತ್ತಿತ್ತು. ಕಾಡಿನಲ್ಲೆ ಓಡಾಡಿಕೊಂಡಿದ್ದ ಸಿದ್ದಣ್ಣನಿಗೆ ಬಳಿ ಬರುತ್ತಿರುವುದು ಯಾರೆಂದು ಕ್ಷಣಮಾತ್ರದಲ್ಲಿ ಖಾತರಿಯಾಯಿತು. ಹೌದು! ‘ತಾಸುಗಳ ಮೊದಲು ಅಲ್ಲೆಲ್ಲೋ ದೂರದಲ್ಲಿ ಘೀಳಿಡುತ್ತಿದ್ದ ಒಂಟಿಸಲಗವೇ ಈಗ ನಮ್ಮತ್ತ ಬರುತ್ತಿರುವುದು’ ಆ ಕಗ್ಗತ್ತಲಿನಲ್ಲೂ ಮೇಲಿಂದ ಸೂಸುತ್ತಿದ್ದ ಚಂದಿರನ ಬೆಳಕಿನಲ್ಲಿ ಸಲಗದ ಚೂಪಾದ ಎರಡು ಉದ್ದನೆಯ ಕೊಂಬುಗಳು ನಳನಳಿಸುತ್ತಿದ್ದವು. ನಾವು ಮರದ ಮೇಲೆ ಕುಳಿತಿರುವುದನ್ನೇನಾದ್ರೂ ಆನೆ ನೋಡಿದ್ದರೆ ಅಥವಾ ಅದಕ್ಕೆ ಸಂಶಯ ಮೂಡಿದ್ದರೆ, ಸಲಗ ಮರಕ್ಕೆ ಗುದ್ದಿ, ನಮ್ಮನ್ನು ಕೆಳಕ್ಕೆ ಬೀಳಿಸಿ, ನಮ್ಮ ಮೇಲೆ ಆಕ್ರಮಣ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಭಯಗೊಂಡು, ಆನೆ ಹತ್ತಿರತ್ತಿರ ತಲುಪಿದರೂ ಪೊನ್ನಪ್ಪನನ್ನು ಕರೆಯುವುದನ್ನು ಮರೆತ ಸಿದ್ದಣ್ಣ ಭಯದಿಂದ ಅದನ್ನೆ ದಿಟ್ಟಿಸುತ್ತಾ ಕುಳಿತ.

ಹೊನ್ನೆ ಮರದ ಬುಡಕ್ಕೆ ಬಂದ ಒಂಟಿಸಲಗ, ಇಲ್ಲಿ ಯಾರೋ ಇದ್ದಾರೆ ಎಂಬ ಸಂಶಯ ಮೂಡಿದಂತೆ ಸುತ್ತಲೂ ಒಮ್ಮೆ ಕಣ್ಣಾಡಿಸಿತು. ನಂತರ ಮರಕ್ಕೆ ಒಂದು ಸುತ್ತು ಬಂದು ಯಾರೂ ಇಲ್ಲ ಎಂಬುದನ್ನು ಖಾತರಿಪಡಿಸಿಕೊಂಡು ಮರಕ್ಕೊರಗಿತು. ಅದಾಗಲೇ ಎಲ್ಲೊ ಕೆಸರಲ್ಲಿ ಮುಳುಗಿ ಎದ್ದು ಬಂದಿದ್ದ ಆ ಸಲಗ ಮೈಯ್ಯಲ್ಲಾಗುತ್ತಿದ್ದ ತುರಿಕೆಗಳನ್ನು ಸಹಿಸಿಕೊಳ್ಳಲಾಗದೇ ಬೃಹದ್ದಾಗಿ ಬೆಳೆದಿದ್ದ ಆ ಹೊನ್ನೆಮರಕ್ಕೆ ತನ್ನ ಮೈಯನ್ನು ಮೆಲ್ಲನೆ ಒರೆಸಿ, ತುರಿಕೆ ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಪಡುತ್ತಿತ್ತು. ಆನೆ ತನ್ನೆಲ್ಲಾ ಬಲವನ್ನು ಪ್ರಯೋಗಿಸಿ, ಮರಕ್ಕೆ ಮೈಯ ಚರ್ಮವನ್ನು ಒರೆಸಿಕೊಳ್ಳುತ್ತಿದ್ದರೆ, ಹೊನ್ನೆ ಮರ ಅತ್ತಿಂದಿತ್ತ ಅಲುಗಾಡಲು ಪ್ರಾರಂಭವಾಯಿತು.

ನಿದ್ದೆಯಲ್ಲಿದ್ದ ಪೊನ್ನಪ್ಪನಿಗೆ ಯಾಕೋ ಗಾಳಿಯಲ್ಲಿ ತೇಲುತ್ತಾ, ಅಲುಗಾಡಿದ ಅನುಭವವಾಗತೊಡಗಿತು. ಎಚ್ಚರಗೊಂಡ ಪೊನ್ನಪ್ಪ, ದೇಹವನ್ನು ಅಲುಗಾಡಿಸದೇ, ಹಾಗೆಯೇ ಕಣ್ಣುಬಿಟ್ಟು ಸುತ್ತಲೂ ಕಿವಿಗೊಡತೊಡಗಿದ. ನಾವು ಕುಳಿತ ಮರದ ಬುಡದಲ್ಲಿ ‘ಸರ್ರ್ ಸರ್ರ್’ ಎಂದು ಶಬ್ದ ಕೇಳಿಬರುವುದರ ಜೊತೆಗೆ ಮರ ಮೆಲ್ಲನೇ ಅಲುಗಾಡುತ್ತಿದೆ ಎಂಬುದು ಅವನಿಗೆ ಖಾತರಿಯಾಯಿತು. ಒಂದು ವೇಳೆ ಮರಗಳ್ಳರೇನಾದ್ರೂ ಬಂದು, ತಾವು ಕುಳಿತ ಮರಕ್ಕೆ ಗರಗಸ ಹಾಕಲು ಪ್ರಾರಂಭಮಾಡಿಬಿಟ್ಟರಾ! ಎಂದು ಸಂಶಯ ಮೂಡಿ, ಸಿದ್ದಣ್ಣನ ಕಡೆಗೆ ನೋಡಿದ.

ಒಂದು ಬದಿಯಲ್ಲಿ ಕುಳಿತಿದ್ದ ಸಿದ್ದಣ್ಣ. ಮರ ಅಲುಗಾಡಿದಂತೆ ತಾನು ಕೂಡ ಹಿಂದೆಮುಂದೆ ವಾಲುತ್ತಾ, ಕತ್ತು ಬಗ್ಗಿಸಿ ಕೆಳಭಾಗಕ್ಕೆ ತದೇಕಚಿತ್ತದಿಂದ ನೋಡುತ್ತಿದ್ದ. ತಲೆಯ ಬದಿಯಲ್ಲಿ ಇಟ್ಟಿದ್ದ ಜೋಡಿ ನಳಿಕೆಯ ಕೋವಿಯನ್ನು ಕ್ಷಣಮಾತ್ರದಲ್ಲಿ ಕೈಗೆತ್ತಿಕೊಂಡ ಪೊನ್ನಪ್ಪ, ಕೋವಿಯ ನಳಿಕೆಯಿಂದ ಸಿದ್ದಣ್ಣನ ಬೆನ್ನಿಗೆ ತಿವಿದ, ಮರದ ಕೆಳಬದಿಯಲ್ಲಿ ಸಲಗದ ಕೀಟಲೆಯನ್ನು ನೋಡುತ್ತಾ ಕುಳಿತಿದ್ದ ಸಿದ್ದಣ್ಣನಿಗೆ ಹಿಂಬದಿಯಿಂದ ಯಾರೋ ಚುಚ್ಚಿದ ಅನುಭವ ಆದ ತಕ್ಷಣ ಒಮ್ಮೆಲೆ ಬೆಚ್ಚಿ ತಿರುಗಿ ನೋಡಿದ. ಕುಳಿತಲ್ಲಿಂದಲೇ ಕೋವಿಯನ್ನು ಭುಜಕ್ಕೊರಗಿಸಲು ಸಿದ್ಧವಾಗುತ್ತಿದ್ದ ಪೊನ್ನಪ್ಪನ ಕಣ್ಣುಗಳು ಆ ಕಗ್ಗತ್ತಲಿನಲ್ಲೂ ಕೆಂಡದಂತೆ ಹೊಳೆಯುತ್ತಿದ್ದವು.

ಪೊನ್ನಪ್ಪ, ‘ಕಳ್ಳರೇನಾದರೂ ಬಂದರಾ?’ ಎಂದು ಸಿದ್ದಣ್ಣನೆಡೆಗೆ ಕಣ್ಸನ್ನೆ ಮಾಡಿದ. ಸಿದ್ದಣ್ಣ ‘ಸಾ.. ಸಾ..’ ಎಂದು ಭಯದಿಂದ ತೊದಲತೊಡಗಿದ. “ಏನೋ ಹೇಳ್ತಾ ಇದ್ದೀಯಾ ನೀನು?” ಎಂದು ಪೊನ್ನಪ್ಪ ಮೆಲ್ಲನೆ ಪಿಸುಗುಟ್ಟಿದ. ಸಿದ್ದಣ್ಣ, ಮತ್ತೆ ‘ಆ.. ಆ..’ ಎಂದು ಕೆಳಗೆ ಕೈ ತೋರಿಸುತ್ತಿದ್ದನೆ ಹೊರತು ಅವನ ಬಾಯಿಂದ ಸ್ಪಷ್ಟವಾಗಿ ಮಾತುಗಳು ಹೊರಬರುತ್ತಿರಲಿಲ್ಲ. ಅವನು ಏನು ಹೇಳುತ್ತಿದ್ದಾನೆ ಎಂದು ಅರ್ಥವಾಗದ ಪೊನ್ನಪ್ಪ, ಬಂದೂಕನ್ನು ಕೆಳಭಾಗಕ್ಕೆ ಗುರಿಮಾಡಿ ದಿಟ್ಟಿಸಿ ನೋಡಿದರೆ, ದೈತ್ಯಕಾರದ ಒಂಟಿಸಲಗವೊಂದು ಹೊನ್ನೆಮರದ ಬುಡಕ್ಕೆ ತನ್ನ ಮೈ ಒರೆಸಿಕೊಂಡು ಪ್ರಪಂಚದ ಶ್ರೇಷ್ಠ ಸುಖಗಳಲ್ಲಿ ಒಂದಾದ ತುರಿಕೆಯನ್ನು ಆಸ್ವಾದಿಸುತ್ತಿತ್ತು. ಪೊನ್ನಪ್ಪ ತನ್ನ ಗುರಿ ಬದಲಿಸದೆ ಹಾಗೆಯೇ ಬಾಗಿ ಕುಳಿತ. ಒಂದು ವೇಳೆ ನಾವು ಮರದ ಮೇಲೆ ಕುಳಿತಿರುವುದನ್ನು ಏನಾದರೂ ಆನೆ ಗಮನಿಸಿದ್ದರೆ, ಈ ವೇಳೆಗಾಗಲೇ ಮರಕ್ಕೆ ಗುದ್ದಿ, ನಮ್ಮನ್ನು ಕೆಳಕ್ಕೆ ಬೀಳಿಸಿ ಆಕ್ರಮಣ ಮಾಡಿಯಾಗಿರುತ್ತಿತ್ತು. ಅದು ನಮ್ಮನ್ನು ನೋಡದಿರುವುದರಿಂದಲೇ ಇನ್ನೂ ಕೂಡ ಮೈಮರೆತು ತನ್ನ ತುಂಟಾಟಗಳನ್ನು ಮುಂದುವರೆಸುತ್ತಾ ಅಲ್ಲಿಯೇ ನಿಂತಿದೆ ಎಂದು ಪೊನ್ನಪ್ಪನಿಗೆ ಅನಿಸಿತು.

ಭಯದಿಂದ ಸಿದ್ದಣ್ಣನ ಕೈಕಾಲುಗಳು ಅದುರುತ್ತಿರುವುದನ್ನು ಕಂಡ ಪೊನ್ನಪ್ಪ, ‘ಭಯಪಡಬೇಡ ಏನು ಆಗಲ್ಲ’ ಎಂದು ಸಿದ್ದಣ್ಣನ ಕೈಯನ್ನು ಅದುಮಿದ. ಅವನ ಕೈ ನಡುಗುತ್ತಲೇ ಇತ್ತು. ಒಂದರ್ಧ ಗಂಟೆ ಕಳೆದ ನಂತರದಲ್ಲಿ ಆನೆ, ಹೊನ್ನೆ ಮರವನ್ನು ಬಿಟ್ಟು ಮುಂದಕ್ಕೆ ಹೆಜ್ಜೆಹಾಕತೊಡಗಿತು. ಆನೆ ಒಂದು ವೇಳೆ ಉಳಿದ ತಂಡಗಳು ಕುಳಿತಿರುವ ಜಾಗಕ್ಕೆ ಹೋಗಿ ಏನಾದ್ರು ದಾಂಧಲೆ ಮಾಡಿಬಿಡಬಹುದೇನೋ ಎಂದು ಪೊನ್ನಪ್ಪನಿಗೆ ಮತ್ತೆ ಆತಂಕ ಶುರುವಾಯಿತು. ಬಹುಶಃ ಅವರು ಮರದ ಮೇಲೆ ಅಟ್ಟಣೆ ಕಟ್ಟದೆ, ನೆಲದ ಮೇಲೆ ಕುಳಿತಿದ್ದರೆ ಈ ಒಂಟಿಸಲಗದ ಕಣ್ಣಿಗೆ ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ. ಆನೆ ಹೋಗುವ ದಾರಿಯಲ್ಲಿ ಅಡ್ಡಲಾಗಿ ನಮ್ಮ ತಂಡದವರು ಸಶ್ತ್ರಸಜ್ಜಿತರಾಗಿ ಕುಳಿತಿರುವುದನ್ನು ಅದು ಗಮನಿಸಿದರೆ, ಅವರ ಮೇಲೆರಗುವುದಂತು ನಿಚ್ಚಳ! ಎಂದು ಪೊನ್ನಪ್ಪ ಯೋಚಿಸುತ್ತಿರುವಾಗಲೇ ಆನೆ, ತೇಗದ ನಾಟಾಗಳನ್ನು ಜೋಡಿಸಿ, ಮುಳ್ಳುಬಳ್ಳಿಗಳಿಂದ ಮುಚ್ಚಿದ್ದ ಪ್ರದೇಶಕ್ಕೆ ತಲುಪಿತು.

ತಾನು ಸಾಧಾರಣವಾಗಿ ಓಡಾಡುವ ಈ ಜಾಗದಲ್ಲಿ, ಹಿಂದೆಂದೂ ಈ ರೀತಿಯ ಒಂದು ಅನಧಿಕೃತ ಪೊದೆಯನ್ನು ನಾನು ನೋಡಿರಲಿಲ್ಲವಲ್ಲ! ಎಂದು ಅನುಮಾನಗೊಂಡ ಒಂಟಿಸಲಗ ಕೋಪದಿಂದ ‘ಬುಸ್ ಬುಸ್’ ಎನ್ನುತ್ತಾ ಅದರ ಸುತ್ತಲು ಓಡಾಡತೊಡಗಿತು. ಒಂದ್ಹತ್ತು ನಿಮಿಷಗಳ ನಂತರ, ಆ ಜಾಗದಲ್ಲಿ ಕೃತಕವಾದ ಪೊದೆಯೊಂದನ್ನು ನಿರ್ಮಿಸಿ, ತನ್ನ ಮೇಲೆರಗಲು ಯಾರೋ ಸಂಚು ಮಾಡುತ್ತಿದ್ದಾರೆ ಎಂಬ ಸಂಶಯ ಅದಕ್ಕೆ ಕಾಡಿತೊ ಏನೋ! ಕೆಲಹೊತ್ತು ಅಲುಗಾಡದೇ ಆ ಪೊದೆಯನ್ನೆ ದಿಟ್ಟಿಸುತ್ತಾ ನಿಂತಲ್ಲಿಯೇ ನಿಂತಿತು.

ಮರದ ಮೇಲೆ ಕುಳಿತಿದ್ದ ಪೊನ್ನಪ್ಪ ಮತ್ತು ಸಿದ್ದಣ್ಣನಿಗೆ, ಮರಗಳ್ಳರು ಜೋಡಿಸಿದ್ದ ತೇಗದ ದಿಮ್ಮಿಗಳ ಬಳಿ ಮಿಸುಕಾಡದೇ ನಿಂತು, ಕಿವಿನಿಮಿರಿಸಿ ಸುತ್ತಲೂ ಯಾರಾದರೂ ಇದ್ದಾರಾ ಎಂದು ಆಲಿಸುತ್ತಿರುವ, ಒಂಟಿಸಲಗದ ಕರ್ರಗಿನ ನೆರಳಿನ ಆಕೃತಿ ತಿಂಗಳ ಬೆಳಕಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಈ ಆನೆ ಸಾಮಾನ್ಯದ್ದಲ್ಲ! ಬದಲಿಗೆ, ಅದು ಬಲು ಬುದ್ಧಿವಂತ ಪುಂಡ ಆನೆ ಎಂಬುದು ಪೊನ್ನಪ್ಪನಿಗೆ ಅರಿವಾಯಿತು, ಕಾರಣ, ಅದೆಷ್ಟು ನಿಶ್ಶಬ್ದವಾಗಿ ನಿಂತು, ಸುತ್ತಲೂ ಕಿವಿಗೊಡುತ್ತಿತ್ತು ಅಂದರೆ, ಅಲ್ಲೊಂದು ಪ್ರಾಣಿ ನಿಂತಿದೆ ಎನ್ನುವುದು ಕೂಡ ಯಾರಿಗೂ ಅನುಮಾನ ಬರದಿರುವಷ್ಟರ ಮಟ್ಟಿಗೆ ಶಬ್ದ ಮಾಡದೆ ನಿಂತಿತ್ತು. ಇದರ ಜೊತೆಗೆ ಸುಮಾರು ಒಂದು ತಾಸಿನಿಂದ ಆನೆಯ ಉಪಟಳವನ್ನು ಗಮನಿಸುತ್ತಿದ್ದ ಸಿದ್ದಣ್ಣನಂತೂ ಭಯದಿಂದ ಅವನು ಬಿಡುತ್ತಿರುವ ಉಸಿರಿನ ಶಬ್ದ ಅವನಿಗೆ ಕೇಳಿಸದಿರುವಷ್ಟರ ಮಟ್ಟಿಗೆ ಶಾಂತವಾಗಿ ಬಿಟ್ಟಿದ್ದ.

ಕೆಲಹೊತ್ತು ಮೌನವಾಗಿ ತೇಗದ ದಿಮ್ಮಿಗಳ ಬಳಿ ನಿಂತಿದ್ದ ಸಲಗಕ್ಕೆ ತನ್ನ ಸೂಕ್ಷ್ಮ ಗ್ರಹಿಕೆಯ ಶಕ್ತಿಯ ಮೂಲಕ ತನ್ನನ್ನು ಮುಖಾಮುಖಿ ಎದುರಿಸಲಾಗದೇ, ಅಲ್ಲೆಲ್ಲೋ ದೂರದಲ್ಲಿ ಹೊಂಚುಹಾಕಿ ಕುಳಿತಿರುವ ನರಮನುಷ್ಯರು ನನ್ನನ್ನೆ ದಿಟ್ಟಿಸುತ್ತಿರುವ ರೀತಿಯಲ್ಲಿ ಭಾಸವಾಗತೊಡಗುತ್ತಿದ್ದಂತೆ ಕೋಪದಿಂದ ಮುಂಬದಿಯ ತನ್ನೆರಡು ಪಾದಗಳನ್ನು ಸ್ವಲ್ಪ ಮೇಲೆಕೆತ್ತಿ, ಕಾಡೆ ನಡುಗಿ ಹೋಗುವಂತೆ ಭಯಂಕರ ಶಬ್ದದೊಂದಿಗೆ ಘೀಳಿಡಲು ಪ್ರಾರಂಭ ಮಾಡಿತು. ಅಷ್ಟುಹೊತ್ತು, ಕಾಡೊಳಗಡೆ ನರಮನುಷ್ಯರು ಬೇಟೆಗಾಗಿ ಕಾದುಕುಳಿತಿದ್ದ ವಾಸನೆ ಮೂಗಿಗೆ ಬಡಿದು, ಆತಂಕದಿಂದ ತೆಪ್ಪಗೆ ಕುಳಿತಿದ್ದ ಪ್ರಾಣಿಗಳೆಲ್ಲ ಆನೆಯ ಆಕ್ರಂದನವನ್ನು ಕೇಳಿದ್ದೆ ತಡ ಒಮ್ಮೆಲೆ ವಿಚಿತ್ರವಾಗಿ ಕಿರುಚಲು ಪ್ರಾರಂಭಮಾಡಿದವು.

ಅಲ್ಲೆ ಪಕ್ಕದ ಪೊದೆಯೊಳಗೆ ಅವಿತು ಕುಳಿತಿದ್ದ ಗುಳ್ಳೆನರಿಯೊಂದು ಕೂಗುತ್ತಾ ಕಾಡಿನ ಉಳಿದ ಪ್ರಾಣಿಗಳಿಗೆ ಅಪಾಯದ ಮುನ್ಸೂಚನೆ ನೀಡುತ್ತಾ, ಹೊನ್ನೆಮರದ ಪಕ್ಕದಿಂದ ಓಡಿ ಕತ್ತಲಲ್ಲಿ ಕಣ್ಮರೆಯಾಯಿತು. ಒಂದಷ್ಟು ನಿಮಿಷಗಳಿಗೆ ಮೊದಲು ಮೌನವಾಗಿದ್ದ ಕಾಡು, ಪ್ರಾಣಿಗಳ ವಿಚಿತ್ರ ಕೂಗಿನೊಂದಿಗೆ ಎಚ್ಚೆತ್ತುಕೊಂಡು ಕ್ಷಣಮಾತ್ರದಲ್ಲಿ ಒಂದು ರೀತಿಯ ಭಯದ ವಾತಾವರಣವನ್ನು ಸೃಷ್ಟಿಮಾಡಿತು. ಒಂಟಿಸಲಗ ಮಾತ್ರ ಗುಟುರು ಹಾಕುತ್ತಾ ಮದವೇರಿದಂತೆ ದಿಮ್ಮಿಯ ಸುತ್ತಲು ಓಡಾಡುತ್ತಲೇ ಇತ್ತು.

ಸಿದ್ದಣ್ಣ ಭಯದಿಂದ ಶಬ್ದ ಕೇಳಿ ಬರುತ್ತಿದ್ದ ದಿಕ್ಕಿನ ಕಡೆಗೆ ದಿಟ್ಟಿಸಿ ನೋಡತೊಡಗಿದ. ದೂರದಿಂದ ಭಾರವಾದ ಹೆಜ್ಜೆಗಳನ್ನಿಡುತ್ತಾ ತಮ್ಮತ್ತ ಯಾರೋ ಬರುತ್ತಿದ್ದಾರೆ. ಆದರೆ ಈ ಕಗ್ಗತ್ತಲಿನಲ್ಲಿ ಯಾವುದೂ ಸ್ಪಷ್ಟವಾಗಿ ಸಿದ್ದಣ್ಣನಿಗೆ ಕಾಣುತ್ತಿಲ್ಲ. ಪೊನ್ನಪ್ಪನನ್ನು ಎಬ್ಬಿಸಬೇಕು ಅನ್ನುವಷ್ಟರಲ್ಲಿ ಮತ್ತೆ ನಿಶ್ಶಬ್ದ!

ಇತ್ತ ಪೊನ್ನಪ್ಪನನ್ನು ಹೊರತುಪಡಿಸಿ, ಮರವೇರಿದ್ದ ಮತ್ತೊಂದು ತಂಡ ಎಚ್ಚರದಿಂದ ಮಧ್ಯರಾತ್ರಿಯವರೆಗೂ ಪಹರೆಗೆ ಕುಳಿತಿದ್ದು, ಒಂದು ಗಂಟೆಯ ನಂತರ ಇನ್ನು ಕಳ್ಳರು ಬರುವುದು ಸಂಶಯ ಎಂದು ಮನಗಂಡು ಒಬ್ಬ ನಿದ್ರೆಗೆ ಜಾರಿದರೆ, ಮತ್ತೊಬ್ಬ ತನ್ನ ಕಾವಲಿನ ಭಾಗವಾಗಿ ಕಣ್ಣರಳಿಸಿ, ಕಾಡಿನ ಧ್ವನಿಗಳಿಗೆ ಕಿವಿಗೊಟ್ಟು ಕುಳಿತಿದ್ದ. ನೆಲದ ಮೇಲೆ ಕುಳಿತಿದ್ದ ಮತ್ತೊಂದು ತಂಡ ಕೂಡ ಎಚ್ಚರವಾಗಿಯೇ ಇತ್ತು. ಹೀಗಿರುವಾಗ ಒಂಟಿಸಲಗ ಬಂದು ಪೊನ್ನಪ್ಪನವರು ಕುಳಿತಿದ್ದ ಹೊನ್ನೆಮರಕ್ಕೆ ‘ಸರ್ರ್ ಸರ್ರ್’ ಎಂದು ಮೈಯೊರೆಸಿಕೊಳ್ಳಲು ಶುರುಮಾಡಿದಾಗ ಎಲ್ಲರೂ ಎಚ್ಚರಗೊಂಡು, ಪೊನ್ನಪ್ಪ ಊಹಿಸಿದಂತೆಯೇ, ಕಳ್ಳರು ಅಕ್ಕಪಕ್ಕದಲ್ಲೆಲ್ಲೋ ಗರಗಸದಿಂದ ಮರ ಕುಯ್ಯಲು ಯತ್ನಿಸುತ್ತಿದ್ದಾರೆ ಎಂದು ತಿಳಿದು, ಕಳ್ಳರನ್ನು ಕಣ್ಣಾರೆ ಕಂಡ ಉಳಿದ ತಂಡದವರ್ಯಾರಾದರೂ ಮಂಗಗಳಂತೆ ಧ್ವನಿ ಹೊರಡಿಸಿ ಸಂದೇಶ ನೀಡಿದರೆ, ಮುನ್ನುಗ್ಗಿ ಕಳ್ಳರನ್ನು ಕೈಯಾರೆ ಹಿಡಿಯಬೇಕು ಎಂದು ಕಿವಿನಿಮಿರಿಸಿ ಕಾಯುತ್ತಾ ಕುಳಿತರು.

ಆದರೆ ತೇಗದ ತುಂಡುಗಳನ್ನು ಜೋಡಿಸಿದ್ದಲ್ಲಿಗೆ ಬಂದ ಒಂಟಿಸಲಗ, ಘೀಳಿಟ್ಟು ಯಾವಾಗ ಕಾಡಿನ ಶಾಂತತೆಯನ್ನು ಕದಡಿತೋ, ಬಂದಿರುವುದು ಕಳ್ಳರಲ್ಲ, ಅದು “ಗಜರಾಜ” ಎಂಬುದು ಎಲ್ಲರಿಗು ಮನವರಿಕೆಯಾಗಿತ್ತು. ಸ್ವಲ್ಪ ಏರುಪೇರಾದರು ಆನೆ ನಮ್ಮ ಮೇಲೆರಗುವುದರಲ್ಲಿ ಯಾವುದೇ ಸಂಶಯವಿಲ್ಲ! ಜೊತೆಗೆ ಅವಿತು ಕುಳಿತಿದ್ದ ಮೂರು ತಂಡಗಳಿಗೂ ಒಂಟಿಸಲಗ ತೇಗದ ದಿಮ್ಮಿಗಳನ್ನು ಮುಚ್ಚಿಟ್ಟಿದ್ದ ಕೃತಕ ಪೊದೆಯ ಸುತ್ತಲೂ ನಡೆಸುತ್ತಿದ್ದ ದಾಂಧಲೆಗಳನ್ನು ಕುಳಿತಲ್ಲಿಂದಲೇ ಕಾಣಬಹುದಾಗಿತ್ತು. ಹೀಗೆ ಪ್ರತಿ ತಂಡದವರು, ಉಳಿದವರ ಕಥೆ ಏನಾಗಿರಬಹುದು? ಎಂಬ ಆತಂಕದಿಂದ ಚಿಂತಾಕ್ರಾಂತರಾಗಿ ಕುಳಿತಿದ್ದರು.

ಎರಡನೆ ತಂಡದವರ ಅವಸ್ಥೆಯಂತು ಹೇಳತೀರದ್ದಾಗಿತ್ತು. ಕಾರಣ, ಅವರು ಆನೆ ನಿಂತಿರುವ ಕೇವಲ ಐವತ್ತು ಅಡಿ ಅಂತರದಲ್ಲಿ ನೆಲದ ಮೇಲೆ ಕುಳಿತಿದ್ದರು. ಸಲಗ ಏನಾದರು ನಾವು ಕುಳಿತಿರುವ ಬಂಡೆಗಳ ಕಡೆ ಬಂದು, ನಾವೇನಾದರೂ ಅದರ ಕೈಯಲ್ಲಿ ಸಿಕ್ಕಿಹಾಕಿಕೊಂಡರೆ ಅದು ನಮ್ಮನ್ನು ತನ್ನ ಬಲವಾದ ಕೋರೆಗಳಿಂದ ತಿವಿದು, ಅಗಲವಾದ ಅದರ ಪಾದಗಳಿಂದ ತುಳಿದು ಅಪ್ಪಚ್ಚಿ ಮಾಡಿಬಿಡಬಹುದೇನೋ ಎಂಬ ಭಯ ಅವರಿಗೆ ಶುರುವಾಗಿಬಿಟ್ಟಿತ್ತು. ಒಂದು ವೇಳೆ ಒಂಟಿಸಲಗ ನಮ್ಮ ಮೇಲೆ ದಾಳಿ ಮಾಡಲು ಮುಂದೆ ಬಂದರೆ ಆತ್ಮರಕ್ಷಣೆಗಾಗಿ ಒಂದು ಸುತ್ತು ಗುಂಡು ಹಾರಿಸಿ, ಎರಡನೆ ಸುತ್ತಿಗೆ ಮದ್ದು ತುಂಬಿಸುವ ವೇಳೆಗಾಗಲೇ ಅದು ನಮ್ಮನ್ನು ಚೆಂಡಾಡಿರುತ್ತೆ! ಓಡಿ ತಪ್ಪಿಸಿಕೊಳ್ಳುವ ಎಂದರೆ, ಅದು ಈ ಕಗ್ಗತ್ತಲಿನಲ್ಲಿ ಸಾಧ್ಯವಾಗದ ಮಾತು. ಇನ್ನುಳಿದಿರುವ ಏಕೈಕ ದಾರಿಯೆಂದರೆ ಅದು ‘ಆ ಸಲಗದ ಕಣ್ಣಿಗೆ ನಮ್ಮನ್ನು ಕಾಣದೆ ಇರುವ ರೀತಿ ಕಾಪಾಡಪ್ಪ ಎಂದು ತಮಗೆ ಗೊತ್ತಿರುವ ಅಷ್ಟೂ ದೇವರುಗಳ ಹೆಸರನ್ನು ಕರೆಯುವುದು’ ಎಂದು ದೇವನಾಮಗಳನ್ನು ಜಪಮಾಡಲು ಪ್ರಾರಂಭ ಮಾಡಿದರು.

ಇತ್ತ ಒಂಟಿ ಸಲಗಕ್ಕೆ ‘ಆ ಪೊದೆಯೊಳಗೆ ಯಾರೋ ದುಷ್ಕರ್ಮಿಗಳು ಕುಳಿತಿರಬಹುದು’ ಎಂಬ ಸಂಶಯ ಬಲವಾಗಿ ಕಾಡತೊಡಗಿತು. ಒಂದು ವೇಳೆ ಆ ಪೊದೆಯೊಳಗಡೆ ಕುಳಿತಿರುವ ವೈರಿಗಳು ಎಲ್ಲಾದರು ನನ್ನ ಮೇಲೆ ದಾಳಿ ಮಾಡಿಬಿಡಬಹುದಾ? ಎಂಬ ಭಯದಿಂದಾಗಿ, ಸಲಗ ನಿಂತಲ್ಲಿ ನಿಲ್ಲಲಾಗದೇ ನಾಲ್ಕು ಹೆಜ್ಜೆ ಹಿಂದೆ ಸರಿಯುತ್ತಿತ್ತು, ಮತ್ತೆ ಪುನಃ ಮುಂದೆ ಬಂದು ಸೊಂಡಿಲಿನಿಂದ ಮುಳ್ಳುಗಿಡಗಳನ್ನು ಸರಿಸಿ ಮೂಸುತ್ತಿತ್ತು. ಆನೆಯ ಈ ವಿಚಿತ್ರ ವರ್ತನೆಯನ್ನು ಮರದ ಮೇಲೆ ಮತ್ತು ಬಂಡೆಯ ಹಿಂದೆ ಕುಳಿತಿದ್ದವರು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಾ ಕುಳಿತಿದ್ದರು.

ಸಮಯ ಸರಿಯಾಗಿ ತಡರಾತ್ರಿ ಮೂರುವರೆ ಗಂಟೆ ಆಗಿರಬಹುದು. ಕೆಲ ತಾಸುಗಳಿಂದ ಒಂದೇ ಸಮನೆ ರಾದ್ಧಾಂತ ಮಾಡಿ ಬಳಲಿದ್ದ ಸಲಗ ಮೆಲ್ಲನೆ ಬಂದ ದಾರಿಯಲ್ಲೆ ಮರಳಿ ಹೆಜ್ಜೆ ಹಾಕತೊಡಗಿತು. ಆನೆ ಮರಳುವುದನ್ನು ಎಲ್ಲರೂ ನೋಡಿದರಾದರೂ, ಮತ್ತೆ ಮರಳಿ ಬರಬಹುದೇನೋ ಎಂಬ ಆತಂಕದಿಂದ ಮಿಸುಕಾಡದೆ ಹಾಗೆಯೇ ಕುಳಿತುಕೊಂಡಿದ್ದರು. ಹೊತ್ತು ಸರಿದು ತಂಗಾಳಿ ಬೀಸತೊಡಗಿದರು, ಅವಿತು ಕುಳಿತವರ ನೆತ್ತಿಯ ಮೇಲೆ ಬೆವರಿನ ಹನಿಗಳು ಜಿನುಗುತ್ತಲೆ ಇದ್ದವು. ಇನ್ನೇನು ಬೆಳಕ್ಹರಿಯಲಿದೆ ಎಂಬುದಕ್ಕೆ ಪೂರಕವಾಗಿ ಕಾಡುಕೋಳಿಗಳು ಕೂಗುತ್ತಾ, ಓಡಾಡುವ ಶಬ್ದ ಕಾಡಿನ ನಾಲ್ಕು ದಿಕ್ಕುಗಳಿಂದ ಕೇಳಿಬರತೊಡಗಿತು. ಮರದ ಎಲೆಗಳ ಮೇಲೆ ಕುಳಿತ ಇಬ್ಬನಿಗಳು ತಲೆಯ ಮೇಲೆ ತೊಟ್ಟಿಕ್ಕತೊಡಗಿದವು. ಮೂಡಣದಲ್ಲಿ ನೇಸರ ಕೆಂಪಗೆ ಹೊಳೆಯತೊಡಗಿದಂತೆ ಸೂರ್ಯರಶ್ಮಿಯ ಕಿರಣಗಳು ನೆಲಕ್ಕೆ ಚುಂಬಿಸುವ ಸಲುವಾಗಿ ಕಾಡುಮರಗಳ ನಡುವಿನಿಂದ ಇಣುಕತೊಡಗಿದವು.

ಪೊನ್ನಪ್ಪ ಮರದಿಂದ ಕೆಳಗಿಳಿದು, ಕೈಕಾಲುಗಳನ್ನೆಲ್ಲಾ ಒಮ್ಮೆ ಉದ್ದನೆ ಚಾಚಿ, ಮೈಮುರಿಯತೊಡಗಿದ. ಒಂದೇ ಭಂಗಿಯಲ್ಲಿ ಕುಳಿತು ಬೆಳಕರಿಸಿದ್ದರಿಂದ ಅವನಿಗೆ ಮೈಯೆಲ್ಲ ಹೆಪ್ಪುಗಟ್ಟಿದಂತಾಗಿತ್ತು. ಸಿದ್ದಣ್ಣ ಕೂಡ ಅವನ ಹಿಂದಿನಿಂದಲೆ ಮರದಿಂದ ಇಳಿದು ಪಕ್ಕದ ಪೊದೆಯ ಬಳಿಗೆ ಹೋಗಿ ಮೂತ್ರ ಮಾಡಿದ. ಪೊನ್ನಪ್ಪ ನಾಟಾದ ಬಳಿಗೆ ಹೋಗಿ ನೋಡುವಾಗ, ರಾತ್ರಿ ಒಂಟಿ ಸಲಗ ದಾಂಧಲೆ ನಡೆಸಿದ್ದರಿಂದಾಗಿ ನಾಟಾದ ಸುತ್ತಲೂ ಆನೆಯ ದೊಡ್ಡ ದೊಡ್ಡ ಹೆಜ್ಜೆಗಳು ಮೂಡಿರುವುದು ಎದ್ದು ಕಾಣುತ್ತಿದ್ದವು. ಪೊದೆಯೊಳಗೆ ಯಾರೋ ಕುಳಿತಿದ್ದಾರೆ ಎಂಬ ಸಂಶಯದಿಂದ ಆನೆ ತನ್ನ ಸೊಂಡಿಲಿನಿಂದ ಮುಚ್ಚಿದ್ದ ಸೊಪ್ಪುಸದೆಗಳನ್ನು ಎಳೆದಾಡಿದ್ದರಿಂದ ಒಂದು ಬದಿಯಲ್ಲಿ ನಾಟಾದ ತುಂಡುಗಳು ಕೂಡ ಜರುಗಿದ್ದವು. ಪೊನ್ನಪ್ಪ ಅಡಗುತಾಣದಿಂದ ಹೊರಬಂದು, ಮರದ ದಿಮ್ಮಿಗಳನ್ನು ಜೋಡಿಸಿದ್ದ ಸ್ಥಳವನ್ನು ಪರಿಶೀಲನೆ ಮಾಡುತ್ತಿರುವುದನ್ನು ನೋಡಿದ ಉಳಿದ ಎರಡು ತಂಡಗಳು, ಮೆಲ್ಲನೆ ಕುಳಿತಲ್ಲಿಂದ ಎದ್ದು ಅವರ ಬಳಿಗೆ ಬಂದರು. ಅವರನ್ನು ಕಂಡಿದ್ದೆ ತಡ ಹತ್ತಿರಕ್ಕೆ ಬರಬೇಡಿ ಎಂದು ಸನ್ನೆ ಮಾಡಿದ ಪೊನ್ನಪ್ಪ, ಅವರ ಬಳಿ ತೆರಳಿ, “ದಿಮ್ಮಿಗಳ ಬಳಿ ಹೋಗಬೇಡಿ. ಅಲ್ಲಿ ಆನೆಯ ಹೆಜ್ಜೆಗುರುತು ಮತ್ತು ಲದ್ದಿ ಬಿದ್ದಿದೆ. ಅದರ ಮೇಲೆ ನಾವು ಓಡಾಡಿದರೆ ನಮ್ಮ ಕಾಲ್ಗುರುತುಗಳು ಅಲ್ಲಿ ಅಚ್ಚೊತ್ತುವ ಸಾಧ್ಯತೆ ಇದೆ” ಎಂದು ಹೇಳಿದ.

ಎಲ್ಲರೂ ‘ಸರಿ, ಸರಿ’ ಎಂದು ರಾತ್ರಿಪೂರ ನಿದ್ದೆಗೆಟ್ಟು ಕೆಂಪಗೆ ಕಾಂತಿಹೀನವಾಗಿದ್ದ ಕಣ್ಣುಗಳಿಂದ ಸನ್ನೆ ಮಾಡಿ ಸರಿದು ನಿಂತರು. ರಾತ್ರಿ ಒಂಟಿಸಲಗ ಅಚಾನಕ್ಕಾಗಿ ಬಂದು ಕಾಟ ಕೊಟ್ಟಿದ್ದರಿಂದ ಎಲ್ಲರೂ ಬಸವಳಿದು ಹೋಗಿದ್ದರು.

“ಕಳ್ಳರಂತು ಬೆಳಿಗ್ಗೆ ಬರುವ ಯಾವುದೇ ಸಾಧ್ಯತೆ ಇಲ್ಲವಾದ್ದರಿಂದ ನೀವೆಲ್ಲ ಕ್ವಾಟ್ರಸ್‍ಗೆ ಹೋಗಿ ವಿಶ್ರಾಂತಿ ತೆಗೆದುಕೊಂಡು ಸಂಜೆಯ ವೇಳೆಗೆ ಮರಳಿ ಬಂದರೆ ಸಾಕು” ಎಂದು ಐದೂ ಜನರನ್ನು ಕಳುಹಿಸಿದ ಪೊನ್ನಪ್ಪ, ಕಾಡಿನ ನಡುಭಾಗದಲ್ಲಿದ್ದ ಕೆರೆಯ ಬಳಿಗೆ ಹೆಜ್ಜೆ ಹಾಕಿದ.

ಬೆಳಗಿನ ನಿತ್ಯಕರ್ಮಗಳನ್ನು ಮುಗಿಸಲು ಕೆರೆಯ ಬಳಿಗೆ ಹೋದ ಪೊನ್ನಪ್ಪನಿಗೆ, ರಾತ್ರಿ ನೀರು ಕುಡಿಯಲು ಬಂದ ಒಂಟಿಸಲಗ ಕೆರೆಯ ಬದಿಯ ಕೆಸರಲ್ಲಿ ಸಿಲುಕಿಕೊಂಡು ಪರದಾಡಿದ ಕುರುಹನ್ನು ಕಾಣಲು ಸಾಧ್ಯವಾಯಿತು. ‘ಹೊ, ಹೋ ಇಲ್ಲಿಂದ ಹೇಗೊ ತಪ್ಪಿಸಿಕೊಂಡು ಆ ಆನೆ ನಾವು ಕುಳಿತಿದ್ದ ಮರದತ್ತ ಬಂದಿರಬೇಕು’. ಪುಣ್ಯಕ್ಕೆ ನಮ್ಮವರು ಯಾರೂ ಆ ಒಂಟಿಸಲಗದ ಕಣ್ಣಿಗೆ ಬಿದ್ದಿಲ್ಲ. ಒಂದುವೇಳೆ ನಾವೇನಾದರು ಅದರ ಕಣ್ಣಿಗೆ ಬಿದ್ದಿದ್ದರೆ ಕೆಸರಲ್ಲಿ ಸಿಕ್ಕಿಕೊಂಡು ಕೊಸರಾಡಿದ ಕೋಪವನ್ನೆಲ್ಲ ನಮ್ಮ ಮೇಲೆ ತೀರಿಸಿಕೊಂಡು ಬಿಡುತ್ತಿತ್ತು ಎಂದು ಮನದಲ್ಲಿ ಅಂದುಕೊಂಡ.

ಮರಳಿ ಹೋದ ಅರಣ್ಯ ಸಿಬ್ಬಂದಿಗಳು, ‘ಮರಗಳ್ಳರು ರಾತ್ರಿ ಬರದೇ ಇದ್ದದ್ದು ಮತ್ತು ತಡರಾತ್ರಿಯಲ್ಲಿ ಆನೆ ಬಂದು ಕೊಟ್ಟ ಪರಿಪಾಟಲಗಳನ್ನು’ ಚಾಚುತಪ್ಪದೆ ರೇಂಜರ್ ಅಚ್ಚಯ್ಯನವರಿಗೆ ವಿವರಿಸಿದರು. ‘ಛೇ’ ಈ ಮರಗಳ್ಳರಿಂದಾಗಿ ನಮ್ಮ ಸಿಬ್ಬಂದಿ ಎಷ್ಟೊಂದು ಸಮಸ್ಯೆಗಳನ್ನು ಅನುಭವಿಸುವಂತಾಯ್ತಲ್ಲ. “ಕಳ್ಳ ಬಡ್ಡಿಮಕ್ಕಳು, ಸಿಕ್ಕಿ ಹಾಕಿಕೊಳ್ಳಲಿ ಅವರನ್ನು ಜೀವನಪೂರ್ತಿ ಜೈಲಿನಲ್ಲಿ ಕೊಳೆಯುವ ಹಾಗೆ ಮಾಡುತ್ತೇನೆ” ಎಂದು ಹೇಳುತ್ತಾ, ವಾಕಿಟಾಕಿಯನ್ನು ಆನ್ ಮಾಡಿ, “ಹಲೋ ಹಲೋ, ಅಚ್ಚಯ್ಯ ಹಿಯರ್” ಎಂದರು.

ಅತ್ತ ‘ಕರ್ರ್ ಕರ್ರ್’ ಎಂದು ಶಬ್ದವಾಗುತ್ತಿದ್ದಂತೆ ವೈರ್‍ಲೆಸನ್ನು ಪೊನ್ನಪ್ಪ ಆನ್ ಮಾಡಿದ. “ನೀವು ಬೇರೆ ಒಬ್ಬರೇ ಇದ್ದೀರ, ಸ್ವಲ್ಪ ಹುಷಾರಾಗಿರಿ” ಎಂಬ ಅಚ್ಚಯ್ಯನವರ ಧ್ವನಿ ಕೇಳಿಸಿತು.

“ನನ್ನ ವಿಚಾರವಾಗಿ ನೀವು ಚಿಂತೆ ಮಾಡಬೇಡಿ ಸರ್, ಇನ್ನೆರಡು ದಿನ ತಡವಾದರೂ ಪರ್ವಾಗಿಲ್ಲ, ಈ ಕಳ್ಳರನ್ನು ಹಿಡಿದು ಅವರಿಗೆ ಒಂದು ಗತಿ ಕಾಣಿಸಲೇಬೇಕು” ಎಂದೆನ್ನುತ್ತಾ ‘ಸಿಬ್ಬಂದಿಯನ್ನು ಸಂಜೆಯ ವೇಳೆಗೆ ಅಗತ್ಯ ಸಾಮಗ್ರಿಗಳೊಂದಿಗೆ ಮರಳಿ ಕಳುಹಿಸಿಕೊಡಿ. ಅದರ ನಡುವಲ್ಲಿ ಏನಾದರು ಮರಗಳ್ಳರು ಬರುವ ಲಕ್ಷಣ ಕಂಡರೆ, ನಾನು ನಿಮಗೆ ಮಾಹಿತಿ ನೀಡುತ್ತೇನೆ’ ಎಂದು ಅಚ್ಚಯ್ಯನವರ ಬಳಿಹೇಳಿ ವೈರ್‍ಲೆಸನ್ನು ಪೊನ್ನಪ್ಪ ಆಫ್ ಮಾಡಿದ. ನಂತರ ಮರಗಳ್ಳತನಕ್ಕೆ ಸಂಬಂಧಪಟ್ಟ ಬೇರೇನಾದರು ಕುರುಹುಗಳು ಸಿಗಬಹುದಾ? ಎಂದು ಕಾಡಿನ ಸುತ್ತಲೂ ಎಚ್ಚರಿಕೆಯಿಂದ ಒಂದಷ್ಟು ಸುತ್ತಾಡಿ, ಹನ್ನೆರಡು ಗಂಟೆಯ ವೇಳೆಗೆ ಮರಳಿ ಮಚ್ಚಾನಿನತ್ತ ಬಂದು, ಮರದ ಮೇಲೆ ಹತ್ತಿ, ನಿನ್ನೆ ಬರುವಾಗ ಕಟ್ಟಿಕೊಂಡು ಬಂದಿದ್ದ ಒಣರೊಟ್ಟಿಯನ್ನು ಬಾಯಿಗೆ ಹಾಕಿಕೊಂಡು ಜಗಿಯತೊಡಗಿದ. ಕೆಲಸಮಯಗಳ ತರುವಾಯ, ರಾತ್ರಿ ಪೂರ ಆನೆ ಅವಾಂತರದಿಂದ ನಿದ್ರೆಗೆಟ್ಟು ಬಳಲಿದ್ದರಿಂದ ಹಾಗೆಯೇ ಕಾಲು ನೀಡಿ ನಿದ್ರೆಗೆ ಜಾರಿದ.

ಸಮಯ ಸರಿಸುಮಾರು ನಾಲ್ಕು ಗಂಟೆಯಾಗಿರಬಹುದು. ‘ಚರ್ರ್ ಪರ್ರ್’ ಎಂದು ತರಗೆಲೆಗಳ ಮೇಲೆ ಹೆಜ್ಜೆ ಹಾಕುತ್ತಾ, ತನ್ನತ್ತ ಯಾರೋ ನಡೆದು ಬರುತ್ತಿರುವಂತೆ ಪೊನ್ನಪ್ಪನಿಗೆ ನಿದ್ದೆಮಂಪರಿನಲ್ಲಿ ಭಾಸವಾಗತೊಡಗಿತು. ತಕ್ಷಣ ಎಚ್ಚರಗೊಂಡ ಪೊನ್ನಪ್ಪ, ಯಾರಿರಬಹುದು? ಎಂದು ಮಲಗಿದ್ದಲ್ಲಿಂದಲೆ ಯೋಚಿಸಿ, ಪಕ್ಕದಲ್ಲಿದ್ದ ಕೋವಿಯನ್ನು ಶಬ್ದ ಕೇಳಿಬರುತ್ತಿರುವೆಡೆಗೆ ಗುರಿಯಿಟ್ಟು ನೋಡಿದ. ಬೆಳಿಗ್ಗೆ ವಿಶ್ರಾಂತಿಗೆ ತೆರಳಿದ್ದ ತಮ್ಮದೆ ತಂಡ ಬೆನ್ನಿಗೆ ಬಂದೂಕು ನೇತು ಹಾಕಿಕೊಂಡು, ಒಂದು ಕೈಯಲ್ಲಿ ರಾತ್ರಿ ಪಾಳಿಗೆ ಬೇಕಾದ ಸಾಮಗ್ರಿ ಮತ್ತು ನೀರಿನ ಕ್ಯಾನ್‍ಗಳನ್ನು ಹಿಡಿದು ಮೆಲ್ಲಮೆಲ್ಲನೆ ಹೆಜ್ಜೆಗಳನ್ನು ಹಾಕುತ್ತಾ ಪೊನ್ನಪ್ಪ ಕುಳಿತಿದ್ದ ಹೊನ್ನೆ ಮರದೆಡೆಗೆ ನಡೆದುಕೊಂಡು ಬರುತ್ತಿತ್ತು. ಅವರೆಷ್ಟೇ ಶಬ್ದಬಾರದಂತೆ ಎಚ್ಚರಿಕೆಯಿಂದ ಹೆಜ್ಜೆಹಾಕುತ್ತಿದ್ದರೂ ಕಾಲೆಜ್ಜೆ ಸದ್ದು ಮಾತ್ರ ಕೇಳಿ ಬರುತ್ತಲೆ ಇತ್ತು.

ಅರಣ್ಯ ಸಿಬ್ಬಂದಿಯ ತಲೆ ಕಂಡ ತಕ್ಷಣ, ಮರದ ಕೊಂಬೆಗೆ ಕಟ್ಟಿದ್ದ ಹಗ್ಗವನ್ನು ಇಳಿಬಿಟ್ಟು ಪೊನ್ನಪ್ಪ ಕೆಳಗಿಳಿದು ಬಂದು, ನಾವು ಕಾವಲು ಕುಳಿತಿರುವ ವಿಚಾರವಾಗಿ ಹೊರಗಡೆ ಯಾರಿಗಾದರು ಸಂಶಯ ಮೂಡಿದೆಯ? ಎಂದು ಸಿಬ್ಬಂದಿಗಳ ಬಳಿ ಕೇಳಿದ. “ಇಲ್ಲ ಸರ್, ಯಾರಿಗೂ ಸಂಶಯ ಬಂದಿಲ್ಲ. ಆದರೆ ನಿನ್ನೆ ರಾತ್ರಿ ನಡೆದ ಆನೆಯ ಕಥೆ ಕೇಳಿದ ಸಾಹೇಬ್ರು, ಇವತ್ತು ಒಂದು ದಿನ ನೋಡಿ, ಮರಗಳ್ಳರು ಬರದೇ ಹೋದರೆ, ನಾಳೆಯಿಂದ ಬೇರೆಯೇನಾದ್ರು ಉಪಾಯ ಹೂಡುವ, ನೀವು ಸುಮ್ಮನೇ ಕಾಡಿನಲ್ಲಿ ಕುಳಿತು ರಿಸ್ಕ್ ತಗೋಬೇಡಿ” ಎಂದು ಹೇಳಿದ್ದಾರೆ ಎಂದರು. ಅಚ್ಚಯ್ಯನವರು ಆ ರೀತಿಯಾಗಿ ಹೇಳುವುದಕ್ಕಿಂತ ಮಿಗಿಲಾಗಿ ‘ಪಹರೆಗೆಂದು ಬಂದಿದ್ದ ಅಷ್ಟು ಜನ ಅರಣ್ಯ ಸಿಬ್ಬಂದಿಗೆ, ಈ ರೀತಿ ಜೀವವನ್ನು ಪಣಕ್ಕಿಟ್ಟು, ಕಾದುಕುಳಿತು ಕಳ್ಳರನ್ನು ಹಿಡಿಯಲು ಸುತಾರಂ ಇಷ್ಟವಿರಲಿಲ್ಲ’ ಎಂಬುದು ಅವರ ಮುಖಲಕ್ಷಣ ನೋಡಿದಾಗಲೆ ಪೊನ್ನಪ್ಪನಿಗೆ ಅರ್ಥವಾಗಿತ್ತು. ಹೆಚ್ಚೆಂದರೆ ಇವತ್ತು ಒಂದು ದಿನ ಮರಗಳ್ಳರಿಗಾಗಿ ನಾವು ಇಲ್ಲಿ ಕಾವಲು ಕಾಯಬಹುದು, ನಾಳೆಯಿಂದ ನಾವು ಕೂರುತ್ತೇವೆ ಎಂದರೂ ಅಚ್ಚಯ್ಯನವರು ಒಪ್ಪುವುದಿಲ್ಲ. ‘ಒಂದು ವೇಳೆ ಈ ರೀತಿ ಕಾವಲುಕುಳಿತು ಏನಾದರು ಸಮಸ್ಯೆ ಎದುರಾದರೆ, ಅದು ಅಚ್ಚಯ್ಯನವರ ತಲೆಗೆ ಬಂದುಬಿಡಬಹುದು ಎಂಬ ಕಳವಳ ಕೂಡ ಅವರಲ್ಲಿರುತ್ತೆ’ ಎಂದು ಪೊನ್ನಪ್ಪನಿಗೆ ಅನ್ನಿಸತೊಡಗಿತು. ‘ಕೊನೆಯದಾಗಿ ಇವತ್ತು ಒಂದು ದಿನ ಪ್ರಯತ್ನ ಮಾಡಿ ನೋಡುವ!’ ಎಂದು ದೀರ್ಘವಾದ ನಿಟ್ಟುಸಿರೊಂದನ್ನು ಬಿಟ್ಟ ಪೊನ್ನಪ್ಪ, ‘ಹೆಚ್ಚು ಹೊತ್ತು ಇಲ್ಲೆ ಮಾತನಾಡಿಕೊಂಡು ನಿಲ್ಲುವುದು ಬೇಡ ಎಲ್ಲರೂ ಅವರವರ ಸ್ಥಳಕ್ಕೆ ಹೋಗಿ ಕಾವಲು ಕೂರಲು ಬೇಕಾದ ಸಿದ್ಧತೆಗಳನ್ನು ಮಾಡಿ’ ಎಂದು ತಿಳಿಸಿ, ತನ್ನೊಂದಿಗೆ ರಾತ್ರಿ ತಂಗಿದ್ದ ಸಿದ್ದಣ್ಣನೊಂದಿಗೆ ಊಟದ ಸಾಮಗ್ರಿಗಳು ಮತ್ತು ನೀರಿನ ಕ್ಯಾನ್‍ಗಳನ್ನು ಹಗ್ಗದ ಮೂಲಕ ಮರದ ಮೇಲಕ್ಕೆ ಸಾಗಿಸತೊಡಗಿದ. ನಿನ್ನೆ ರಾತ್ರಿ ಒಂಟಿಸಲಗದ ಕಾಟಕ್ಕೆ ಬೆಚ್ಚಿದ್ದ ಎರಡನೆಯ ತಂಡದವರು ಇಂದು ಬಂದ ಕೂಡಲೇ ತಡಮಾಡದೆ ಒಂದು ಬೀಟೆ ಮರವನ್ನು ಆಯ್ಕೆ ಮಾಡಿಕೊಂಡು, ಅದರಲ್ಲಿ ಮಚ್ಚಾನು ಕಟ್ಟಲು ಶುರುಮಾಡಿದರು. ಉಳಿದಂತೆ ಮೂರನೆ ತಂಡ ಕೂಡ ಮರವೇರಿ ಕುಳಿತುಕೊಂಡಿತು.

ಮಧ್ಯಾಹ್ನ ಬಿಸಿಲಿನ ಧಗೆ ಕೊಂಚ ಹೆಚ್ಚಿದ್ದರಿಂದ, ಸಾಯಂಕಾಲವಾಗುತ್ತಿದ್ದಂತೆ ಮೋಡಗಳು ಕಪ್ಪಿಡಲು ಶುರುವಾಗಿ, ತಣ್ಣನೆಯ ಗಾಳಿ ಬೀಸತೊಡಗಿತು. ಪೊನ್ನಪ್ಪನಿಗೆ ಕಳೆದೆರಡು ದಿನಗಳಿಂದ, ಮರಗಳ್ಳರ ಹಿಂದೆ ಬಿದ್ದಿದ್ದರಿಂದಾಗಿ ಮರೆತು ಹೋಗಿದ್ದ, ಮನೆ ಮತ್ತು ಹೆಂಡತಿ ಮಕ್ಕಳ ನೆನಪು ಮೆಲ್ಲನೆ ಕಣ್ಣ ಮುಂದೆ ಬರತೊಡಗಿತು. ತಾನು ವಾಸ ಮಾಡುತ್ತಿರುವ ಕಾನೂರಿನ ಪರಿಸರ, ಕಾಲೇಜು ದಿನಗಳಲ್ಲಿ ಪ್ರೀತಿಸಿ ಮದುವೆಯಾದ ಬೊಳ್ಳವ್ವ. ಕೆಲವರ್ಷಗಳಲ್ಲಿ ಪ್ರೀತಿಯ ಸಂಕೇತವಾಗಿ ಹುಟ್ಟಿದ ಇಬ್ಬರು ಗಂಡು ಮಕ್ಕಳು, ಅರಣ್ಯ ಇಲಾಖೆಯ ಕೆಲಸದಿಂದಾಗಿ ಕುಟುಂಬದೊಂದಿಗೆ ಅನ್ಯೋನ್ಯವಾಗಿ ಕಳೆಯಬೇಕಾದಂತಹ ಸಮಯದಲ್ಲಿ ಅವರನ್ನು ಅಗಲಿ ಇರಬೇಕಾಗಿ ಬಂದದ್ದು, ಎಲ್ಲವೂ ನೆನಪಿನ ಬುತ್ತಿಯಿಂದ ತೆರೆದುಕೊಳ್ಳಲು ಪ್ರಾರಂಭವಾಯಿತು.

(ಕೃತಿ: ಫಾರೆಸ್ಟರ್ ಪೊನ್ನಪ್ಪ (ಕಾದಂಬರಿ), ಲೇಖಕರು: ನೌಶಾದ್‌ ಜನ್ನತ್ತ್‌, ಪ್ರಕಾಶಕರು: ವೀರಲೋಕ ಬುಕ್ಸ್, ಬೆಲೆ: 300/-)