ಈಗ ಈ ಚಿಮಿಣಿ ಕೈದೀಪಕ್ಕೆ ಬಂದರೆ, ಇದು ಬಹೂಪಯೋಗಿಯಾಗಿದ್ದರೂ, ಇದಕ್ಕೆ ಕೆಲವು ಮಿತಿಗಳೂ ಇದ್ದುವು. ಇದು ಗಾಳಿಗೆ ನಿಲ್ಲುವುದಿಲ್ಲವಾದ ಕಾರಣ, ಮನೆಯ ಹೊರಗೆ ಉಪಯೋಗವಿಲ್ಲ; ಮನೆಯೊಳಗೂ ಗಾಳಿ ಹೆಚ್ಚು ಬಂದರೆ ಇದು ಇದೀಗ ನಂದೀತು ಎನ್ನುವ ಆತಂಕ ಉಂಟುಮಾಡುತ್ತ ಇರುತ್ತದೆ. ಹತ್ತಿರ ಇರಿಸಿ ಪುಸ್ತಕ ಓದಲು ಪರವಾಯಿಲ್ಲ. ರಾತ್ರಿ ಊಟದ ಸಮಯ ನಾವು ಚಿಮಿಣಿಯ ತೂಗುದೀಪವನ್ನು ಉಪಯೋಗಿಸುತ್ತಿದ್ದೆವು. ಇಂದಿನ ವಿದ್ಯುತ್ ಯುಗದ ದೃಷ್ಟಿಯಿಂದ ನೋಡಿದರೆ ಇದೂ ಕೂಡ ಬಹಳ ಪ್ರಿಮಿಟಿವ್. ಏನು ಮಾಡಲಿ? ಆಗಿನ ಕಾಲವೇ ಅಂಥದು. ನಮ್ಮಷ್ಟೂ ಅನುಕೂಲ ಇಲ್ಲದವರು ಎಷ್ಟೋ ಜನ ಊರಲ್ಲಿ ಇದ್ದರು.
ಕವಿ ಕೆ.ವಿ. ತಿರುಮಲೇಶ್ ಲೇಖನ

 

ಬೆಳಕಾಗಲಿ ಎಂದ ದೇವರು, ಬೆಳಕಾಯಿತು ಎನ್ನುತ್ತದೆ ಬೈಬಲು. ನಮಗೆ ಕೂಡ ಅಂಥದೊಂದು ಶಕ್ತಿಯಿದ್ದಿದ್ದರೆ ಎಷ್ಟು ಒಳ್ಳೆಯದಿತ್ತು! ಹಗಲಿನ (ಸೂರ್ಯನ) ಬೆಳಕು ಹೊರತಾಗಿ ಬೆಳಕೇ ಇಲ್ಲದ ಕಾಲವೊಂದಿತ್ತು, ಇದ್ದಿರಬೇಕು. ಪುರಾತನ ಕಾಲದ ಮನುಷ್ಯ ಜೀವನ ಎಷ್ಟೊಂದು ಕಷ್ಟಕರವಾಗಿದ್ದಿರಬೇಡ. ಬೈಬಲ್ ಹೇಳುವುದು ಬೆಳಕಿನ ಕುರಿತು, ಬೆಳಕಿನ ಇನ್ನೊಂದು ಆಯಾಮವೇ ಬೆಂಕಿ. ಕ್ರಿಸ್ತಪೂರ್ವದ ಪಾಶ್ಚಾತ್ಯ ಐತಿಹ್ಯದ ಪ್ರಕಾರ ಆದಿಯಲ್ಲಿ ಮನುಷ್ಯರಿಗೆ ಬೆಂಕಿಯಿರಲಿಲ್ಲ; ಅದು ದೇವಲೋಕದಲ್ಲಿ ಮಾತ್ರ ಇತ್ತು. ಅದನ್ನು ಮನುಷ್ಯರಿಗೆ ತಂದು ಕೊಟ್ಟವನು ಪ್ರೊಮೀಥಿಯಸ್. ಅವನೊಬ್ಬ ಟೈಟನ್ ಅರ್ಥಾತ್ ದೈತ್ಯನಾಗಿದ್ದ, ಆದರೆ ಅವನೊಬ್ಬ ಮನುಷ್ಯ ಸ್ನೇಹಿ. ಮನುಷ್ಯರಿಗೆ ಅವನು ಬೆಂಕಿಯನ್ನು ತಂದುಕೊಟ್ಟುದು ಮಾತ್ರವಲ್ಲ ಲೋಹದ ಕುಶಲಕರ್ಮವನ್ನೂ ಹೇಳಿಕೊಟ್ಟ ಎನ್ನುವುದು ಕತೆ. ಈ ಕಾರಣಗಳಿಗಾಗಿ ಝೂಸ್ ಅವನಿಗೆ ಭಯಂಕರವಾದ ಶಿಕ್ಷೆಯೊಂದನ್ನು ನೀಡಿದ: ಅದೆಂದರೆ ಅವನನ್ನು ದೊಡ್ಡದಾದೊಂದು ಬಂಡೆಗೆ ಕಟ್ಟಿಹಾಕಲಾಯಿತು; ಪ್ರತಿ ದಿನ ಅವನ ಹೃದಯವನ್ನು ಗಿಡುಗವೊಂದು ಬಂದು ತಿನ್ನುವುದು, ಹೃದಯ ಕ್ಷಿಪ್ರವಾಗಿ ಯಥಾಸ್ಥಿತಿಗೆ ಮರಳುವುದು, ಗಿಡುಗ ಮರುದಿನ ಮತ್ತೆ ಬಂದು ಅದನ್ನು ಕಿತ್ತು ತಿನ್ನುವುದು – ಹೀಗೆ ನಿರಂತರವಾಗಿ ನಡೆಯುವ ಕ್ರಿಯೆ ಇದು. ಪ್ರೊಮೀಥಿಯಸ್ ಬಂಡೆಯೊಂದನ್ನು ಪರ್ವತದ ತುದಿಗೆ ಕೊಂಡೊಯ್ಯುವುದು, ಅಲ್ಲಿಂದ ಕೆಳಗೆ ಉರುಳಿಸುವುದು, ಮತ್ತೆ ಮೇಲಕ್ಕೇರಿಸುವುದು, ಇದೂ ನಿರಂತರವಾಗಿ, ಎಂಬ ಇನ್ನೊಂದು ರೂಪವೂ ಇದೆ.

ಈ ಪ್ರೊಮೀಥಿಯಸ್ ಕಥೆ ಅಸ್ತಿತ್ವವಾದಿಗಳಿಗೆ ಪ್ರಿಯವಾದುದು; ಮನುಷ್ಯನ ಬದುಕಿನ ನಿರರ್ಥಕತೆಗೆ ಇದನ್ನೊಂದು ಸಾದೃಶ್ಯವಾಗಿ ಅವರು ಕೊಡುತ್ತಾರೆ. ಅವರ ಪ್ರಕಾರ ಮನುಷ್ಯನ ಇತಿಹಾಸದಲ್ಲಿ ಪ್ರಗತಿ ಎಂಬುದೇ ಇಲ್ಲ. ಇದೊಂದು ಜಿಜ್ಞಾಸೆಯ ವಿಷಯವಾಯಿತು. ಆದರೆ ಜನಸಾಮಾನ್ಯರ ದೃಷ್ಟಿಯಲ್ಲಿ ಎಷ್ಟೋ ಪ್ರಗತಿಗಳಾಗಿವೆ. ಬೆಂಕಿ-ಬೆಳಕುಗಳ ವಿಷಯ ಇಂಥದು. ಆಹಾರವನ್ನು ಬೇಯಿಸಿ ತಿನ್ನುವುದಕ್ಕೆ ಮನುಷ್ಯರು ಕಲಿತುಕೊಂಡರಲ್ಲ, ಇದು ನಾಗರಿಕತೆಯ ಕಡೆಗಿನ ಬಹು ದೊಡ್ಡ ನಡೆ ಎಂದು ಅನಿಸುತ್ತದೆ. ಬೆಂಕಿ ಮತ್ತು ಬೆಳಕು ಇಲ್ಲದ ಲೋಕವನ್ನು ಇಂದು ಊಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಇದನ್ನೆಲ್ಲ ನನ್ನ ಬಾಲ್ಯಕಾಲದ ಅನುಭವಗಳಿಗೆ ಸಂಬಂಧಿಸಿ ಹೇಳುತ್ತಿದ್ದೇನೆ. ನನ್ನ ಬಾಲ್ಯಕಾಲ ಎಂದರೆ 1940ರ ದಶಕ. ಪರಿಸರ ಕಾಸರಗೋಡಿನ ಒಂದು ‘ಕುಗ್ರಾಮ.’ ಈ ಕುಗ್ರಾಮ, ಹಳ್ಳಿಗಾಡು, ಕೊಂಪೆ ಮುಂತಾದ ಪದಗಳು ಈಗ ಕ್ಲೀಷೆಗಳಾಗಿಬಿಟ್ಟಿವೆ. ಆದ್ದರಿಂದ ಅವನ್ನು ಬಳಸಿದವನನ್ನು ಅನುಮಾನದಿಂದ ಕಾಣುವುದು ಸಹಜ. ಇರಲಿ.

ನಮ್ಮ ಮನೆಯಿದ್ದುದು ಒಂದು ಆಳವಾದ ಕಣಿವೆಯಲ್ಲಿ. ತೆಂಕು ದಿಕ್ಕು ತೊರಸು -ಇದಕ್ಕೆ ತೆಂಕು ತಿಟ್ಟು ಎನ್ನುತ್ತಾರೆ – ಉಳಿದ ದಿಕ್ಕುಗಳಲ್ಲಿ ಬೆಟ್ಟಗಳು. ಅದರಲ್ಲೂ ಮೂಡುಕಡೆ ಕಡಿದಾದ ಉನ್ನತಬೆಟ್ಟ. ಇದರಿಂದಾಗಿ ನಮ್ಮಲ್ಲಿ ಸೂರ್ಯೋದಯ ಬಹಳ ತಡವಾಗಿ, ಅಸ್ತಮಾನ ಬಹಳ ಬೇಗ. ಒಂದು ತರದ ನೆರಳು ಇಡೀ ಕಣಿವೆಯಲ್ಲಿ ದಿನದ ಬಹುಕಾಲವೂ ನೆಲೆನಿಂತು ಇರುತ್ತಿತ್ತು. ಆದರೆ ಈ ತೆಂಕು ತೊರಸು ಬೇಸಿಗೆಯಲ್ಲಿ ಉಗ್ರವಾದ ಬಿಸಿಲನ್ನು ತಂದು ನಮ್ಮ ಕಂಗುಗಳನ್ನು ಹಾಳು ಮಾಡುತ್ತಿತ್ತು. ಮಳೆಗಾಲದಲ್ಲಿ ಬೇಸರವೋ ಬೇಸರ. ಯಾವಾಗಲೂ ಕತ್ತಲು. ನನ್ನದೊಂದು ಗಾಢವಾದ ಸ್ಮೃತಿ ಮಿಂಚು ಹುಳಗಳಿಗೆ ಸಂಬಂಧಿಸಿ. ಮಿಂಚು ಹುಳ, ಮಿನುಗು ಹುಳ, ಬೆಂಕಿ ಹುಳ ಎಂದು ಬೇರೆ ಬೇರೆ ಕಡೆ ಕರೆಯಲ್ಪಡುವ ಈ ಹುಳವನ್ನು ಹವ್ಯಕರು ‘ಮಿನ್ನಾಂಪುಳು’ ಎಂದು ಕರೆಯುತ್ತಾರೆ. ಮಲೆಯಾಳದಲ್ಲೂ ಇದು ಹೀಗೆಯೇ.

ಹುಳವೆಂದರೆ ಹುಳವೂ ಅಲ್ಲ, ಇದೊಂದು ಹಾತೆ, ರೆಕ್ಕೆಗಳುಂಟು, ನೊಣದ ಥರ, ರಕ್ಕೆ ಮುರಿದರೆ ಹುಳ! ಯಾರಿಗೆ ಏನೂ ತೊಂದರೆ ಮಾಡುವುದಿಲ್ಲ. ಮಳೆಗಾಲದ ರಾತ್ರಿಗಳಲ್ಲಿ ಇವು ಎತ್ತರದ ಮರಗಳ ಮೇಲೆ ವಿಪುಲವಾಗಿ ಕಾಣಿಸಿಕೊಳ್ಳುತ್ತವೆ. ಇವುಗಳ ಹಿಂಭಾಗಕ್ಕೆ ಮಿನುಗುವ ಶಕ್ತಿಯಿದೆ. ಇವು ಒಟ್ಟಾಗಿ ಒಂದೇ ಲಯದಲ್ಲಿ ಮಿನುಗಲು ಸುರುಮಾಡಿದರೆ ನೋಡಲು ಅದ್ಭುತ. ‘ಮಿನುಗೆಲೆ ಮಿನುಗೆಲೆ ನಕ್ಷತ್ರ / ಏನಿದು ಬಾನಲಿ ಬಲು ಚಿತ್ರ’ ಎಂಬ ಪಂಜೆಯವರ ಸಾಲುಗಳನ್ನು ಇವು ನೆನಪಿಸುತ್ತವೆ; ಪಂಜೆಯವರ ಪದ್ಯ ನಕ್ಷತ್ರಗಳ ಕುರಿತಾದ್ದು.

ಈ ಮಿನ್ನಾಂಪುಳುಗಳು ಧರೆಗೆ ಬಿದ್ದ ನಕ್ಷತ್ರಗಳೇ ಸರಿ. ಆದರೆ ನಿಜಕ್ಕೂ ಇವು ಎಲ್ಲಿಂದ ಬರುತ್ತವೆ, ಎಲ್ಲಿಗೆ ಹೋಗುತ್ತವೆ, ಏನಿವುಗಳ ನಿಮಿತ್ತ ಎನ್ನುವುದು ನನಗೆ ಅಂದೂ ತಿಳಿಯದು, ಇಂದೂ ಗೊತ್ತಿಲ್ಲ. ಮುಂದೆ ನಾನು ಇಂಗ್ಲಿಷ್ ಕಾದಂಬರಿಕಾರ ಥಾಮಸ್ ಹಾರ್ಡಿಯನ್ನು ಓದುವಾಗ, ಅವನದೊಂದು ಕಾದಂಬರಿಯಲ್ಲಿ (Return of the Native, 1878) ಕೆಲವು ಜುಗಾರಿಕೋರರು ರಾತ್ರಿ ಮಿಂಚು ಹುಳಗಳ ತರದ ಗ್ಲೋವಮ್ರ್ಸ್ ಬೆಳಕಿನಲ್ಲಿ ಜುಗಾರಿ ಆಡುವ ಪ್ರಸ್ತಾಪ ಬರುವುದನ್ನು ಓದಿ ಸಂತೋಷ ಪಟ್ಟುದಿದೆ. ಆದರಿದು ಅತಿಶಯೋಕ್ತಿಯೆಂದು ತೋರುತ್ತದೆ. ಇಂಥ ಹುಳಗಳನ್ನು ಎಷ್ಟು ರಾಶಿ ಹಾಕಿದರೂ ಅವುಗಳ ಬೆಳಕು ಯಾತಕ್ಕೂ ಸಾಲುವುದಿಲ್ಲ. ಅಪ್ಪಿ ತಪ್ಪಿ ಮನೆಯೊಳಕ್ಕೆ ಬಂದು ಹರೆದಾಡುವ ಮಿನ್ನಾಂಪುಳುಗಳನ್ನು ನಾನು ಗಮನಿಸಿದ್ದೇನೆ. ಅವು ಮಿನುಗುವುದು ಹತ್ತಿರದಿಂದ ಕಾಣಿಸುವುದೇ ಇಲ್ಲ, ಕಾಣಿಸಿದರೂ ಮಂಕಾಗಿ; ಬಹುಶಃ ಅವು ಭಯಭೀತವಾದರೆ ಅವುಗಳ ಸಹಜಕ್ರಿಯೆಗೆ ತಡೆ ಬರುತ್ತದೆ. ಮರದ ಮೇಲೆ ಗುಂಪಿನಲ್ಲೇ ಅವು ಸಹಜವಾಗಿರುವುದು.

ನಮ್ಮ ಮನೆ ಪಕ್ಕದಲ್ಲೊಂದು ಪುರಾತನದ ಗೋಳಿ ಮರವಿತ್ತು. ಅದರ ಮೇಲೆ ಮಿನುಗುವ ಸಾವಿರಾರು ಮಿನ್ನಾಂಪುಳುಗಳ ಸಾಮೂಹಿಕ ದೃಶ್ಯ ನನಗಿನ್ನೂ ಆಪ್ಯಾಯಮಾನವಾಗಿ ನೆನಪಿದೆ. ಮಳೆಗಾಲ ಮುಗಿದ ನಂತರ ಅವು ಎಲ್ಲಿ ಹೋಗುತ್ತವೋ.

ಈ ನಮ್ಮ ದೈನಂದಿನದ ನಿಧಾನಸೂರ್ಯೋದಯ ಮತ್ತು ಕ್ಷಿಪ್ರ ಸೂರ್ಯಾಸ್ತ ನಮ್ಮನ್ನು ಆಲಸಿಗಳನ್ನಾಗಿ ಮಾಡಬೇಕಿತ್ತು. ಅದರೆ ವಾಸ್ತವದಲ್ಲಿ ನಾವೆಲ್ಲ (ಚಿಕ್ಕವನಾದ ನಾನೂ ಸೇರಿದಂತೆ)ಸದಾ ಏನಾದರೂ ಕೆಲಸಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಇರುತ್ತಿದ್ದೆವು. ಕೃಷಿಕರು ಹೆಚ್ಚಾಗಿ ಆಲಸಿಗಳಾಗಿ ಇರುವುದಿಲ್ಲ, ಅದರಲ್ಲೂ ಬಡ ಕೃಷಿಕರು. ಮನೆಯೊಳಗೆ ಮಾತ್ರ ಕತ್ತಲು. ಅಡುಗೆ ಕೋಣೆಯಂತೂ, ಹವ್ಯಕರು ಹೇಳುವಂತೆ, ‘ಕರ್ಗಾಣ ಕಸ್ತಲು.’ ಅಲ್ಲಿ ರಾತ್ರಿ ಹಗಲುಗಳ ವ್ಯತ್ಯಾಸವಿರಲಿಲ್ಲ. ಒಲೆಗೆ ಹಾಕಿದ ಉರುವಲು ‘ಸೌದಿ’ ಸ್ವಲ್ಪ ಬೆಳಕನ್ನು ಕೊಡುತ್ತಿತ್ತು. ಆದರೆ ಅಡುಗೆ ಮಾಡಲು ಅದು ಸಾಲದಲ್ಲ. ಆಹಾ! ಈಗ ನಾನು ಹೇಳಲಿರುವ ಅಲ್ಲಾವುದ್ದೀನನ ಅದ್ಭುತ ದೀಪಕ್ಕೆ ಬರುತ್ತೇನೆ. ಇದುವರೆಗೆ ನೋಡದಿದ್ದವನಿಗೆ ಅದೊಂದು ಅದ್ಭುತ ದೀಪ, ಆದರೆ ಇದರಲ್ಲಿ ಅಲ್ಲಾವುದ್ದೀನನಾಗಲಿ, ದೆವ್ವವಾಗಲಿ ಇಲ್ಲ. ಇದೊಂದು ಟಿನ್ನಿನ ಪುಟ್ಟ ಕೈದೀಪ. ಒಂದು ಶಾಯಿ ಬುಡ್ಡಿಯ ಗಾತ್ರದ್ದು. ಬದಿಯಲ್ಲಿ ನಾಲಿಗೆಯಂಥ ಒಂದು ಹಿಡಿ. ಇದನ್ನು ಗೋಡೆಗೆ ಬಡಿದ ಮೊಳೆಗೆ ಸಿಕ್ಕಿಸಬಹುದು ಕೂಡ.

ಇನ್ನು ಇದರ ಸಪೂರದ ಮುಚ್ಚಳಕ್ಕೆ ಎರಡು ಉಪಯೋಗ: ಚಿಮಿಣಿ ಎಣ್ಣೆ ತುಂಬುವುದು ಒಂದು, ಈ ಮುಚ್ಚಳದ ನಡುವೆ ಇರಿಸಿದ ತೂತಿನಲ್ಲಿ ನೆಣೆ (ಬತ್ತಿ) ಇಳಿಸುವುದು ಇನ್ನೊಂದು. ಇದಕ್ಕೆ ಎಣ್ಣೆ ಎರೆಯುವುದಕ್ಕೆ ನಾಳವೆಂಬ ಕೋನ್ ಸಿಗುತ್ತಿತ್ತು. ಕುತ್ತವಿರುವ ನೆಣೆ ಒಮ್ಮೆ ಎಣ್ಣೆ ಹೀರಿಕೊಂಡರೆ ಆಯಿತು, ಆಮೇಲೆ ಅದು ನಿರಂತರವಾಗಿ ಎಣ್ಣೆಯನ್ನು ಎಳೆದುಕೊಂಡು ಉರಿಯುತ್ತಲೇ ಇರುತ್ತದೆ. ಇದರ ಭೌತಿಕ ತತ್ವವೇನು ಎಂದು ನಾವು ಕೇಳಿದವರಲ್ಲ. ಅಂಥ ಅಧಿಕಪ್ರಸಂಗದ ಪ್ರಶ್ನೆಗಳು ನಮಗೆ ಹೊಳೆಯುವುದೂ ಇಲ್ಲ. ಇದೊಂದು ಕ್ಯಾಪಿಲರಿ (ಸೂಕ್ಷ್ಮ ನಾಳ) ಕ್ರಿಯೆ ಎಂದು ಶಾಲೆಯಲ್ಲಿ ಹೇಳುತ್ತಾರೆ. ಈ ಕೈದೀಪವನ್ನೊಂದು ಅದ್ಭುತವೆಂದು ಕರೆಯುವುದಕ್ಕೆ ಒಂದು ಕಾರಣವೆಂದರೆ ಇದರ ಬಹೂಪಯೋಗಿತ್ವ. ಧಾರ್ಮಿಕ ವಿಧಿಗಳನ್ನು ಉಳಿದಂತೆ ಇತರ ಎಲ್ಲೆಡೆ ಇದು ಉಪಯೋಗಿ. ಓದುವುದಾದರೆ ಓದಲು, ಬರೆಯುವುದಾದರೆ ಬರೆಯಲು. ಇದರ ಹೆಸರು ಚಿಮಿಣಿ ದೀಪ ಎಂದು. ಇದಕ್ಕೆ ಎರೆಯುವ ಇಂಧನ ಚಿಮಿಣಿ ಎಣ್ಣೆ ಎಂದು. ಕೆಲವೆಡೆ ಕಲ್ಲೆಣ್ಣೆಯೆಂದು, ಇನ್ನು ಕೆಲವೆಡೆ ಸೀಮೆ ಎಣ್ಣೆಯೆಂದು, ಹಿಂದಿಯಲ್ಲಿ ಮಿಟ್ಟೀಕಾ ತೇಲ್ ಎಂದು, ಮಲೆಯಾಳದಲ್ಲಿ ಮಣ್ಣೆಣ್ಣ ಎಂದು, ಜಾಗತಿಕವಾಗಿ ಕೆರೊಸಿನ್ ಅಥವಾ ಪರಾಫಿನ್ ಎಂದು ಕರೆಯವರು.

ಇದೊಂದು ಪೆಟ್ರೋಲಿಯಂ (ಪೆಟ್ರ = ಶಿಲೆ) ಉತ್ಪಾದನೆ, ಆದ್ದರಿಂದ ಕಲ್ಲೆಣ್ಣೆ, ಮಣ್ಣೆಣ್ಣೆ, ಮಿಟ್ಟೀಕಾ ತೇಲ್ ಇತ್ಯಾದಿಗಳು ಅನ್ವರ್ಥನಾಮಗಳು. ಆದರೆ ಚಿಮಿಣಿ ಎಣ್ಣೆ? ಇದು ಹೇಗೆ ಬಂತು? ಚಿಮಿಣಿ ದೀಪಕ್ಕೆ ಆ ಹೆಸರು ಚಿಮಿಣಿ ಎಣ್ಣೆಯಿಂದ ಬಂತು ಎನ್ನಬಹುದು. ಆದರೆ ವಾಸ್ತವದಲ್ಲಿ ಹಾಗಲ್ಲ. ಚಿಮಿಣಿ ದೀಪಗಳಿಗೆ ಮೂಲದಲ್ಲಿ ಒಂದು ಗಾಜಿನ ಕೊಳವೆ ಇದ್ದುದರಿಂದ ಅದನ್ನು ಚಿಮ್ನಿ ಲ್ಯಾಂಪ್ ಎಂದು ಕರೆಯುತ್ತಿದ್ದರು. ಕೆಳ ಭಾಗ ಬುರುಡೆ, ಮೇಲ್ಭಾಗ ಕೊಳವೆ ರೀತಿಯಲ್ಲಿ ಇರುವ ಗಾಜು ಇದು. ಕೈದೀಪಗಳ ಜತೆ ಜತೆಗೇ ಇಂಥ ಗಾಜಿನ ಕೊಳವೆ ಇರುವ ‘ಗೂಡುದೀಪ’ಗಳೂ ನಮ್ಮಲ್ಲಿ ಒಂದೆರಡು ಇದ್ದುವು. ಇವುಗಳ ಬತ್ತಿಗಳು ಪೇಟೆಯಲ್ಲಿ ಸಿಗುವಂಥವಾಗಿದ್ದುವು. ಅಲ್ಲದೆ ಬತ್ತಿಯನ್ನು ಮೇಲೆ ಕೆಳಗೆ ಮಾಡಿ ಪ್ರಕಾಶವನ್ನು ನಿಯಂತ್ರಿಸಲು ದೀಪಕ್ಕೆ ಹೊಂದಿಕೊಂಡ ಹಾಗೆಒಂದು ತಿರುಗಣೆಯೂ ಇತ್ತು. ಇದು ಒಂದು ಅನುಕೂಲವಾದರೆ ಗಾಜಿನ ಗೂಡು ಇರುವುದರಿಂದ ಗಾಳಿ ಅದನ್ನು ಆರಿಸುವಂತಿರಲಿಲ್ಲ. ಅಲ್ಲದೆ ಗಾಜಿನ ಕೊಳವೆಯಿಂದಾಗಿ ದೀಪದಿಂದ ಬರುವ ಹೊಗೆಯೂ ಮೇಲೇರುತ್ತಿತ್ತು. ಇಂಥ ಧೂಮನಿಯಂತ್ರಿಕಗಳಿಗೆ ಇಂಗ್ಲಿಷಿನಲ್ಲಿ ‘ಚಿಮ್ನಿ’ ಎನ್ನುತ್ತಾರೆ – ಹೆಚ್ಚಾಗಿ ಮನೆಯೊಳಗಣ ಅಗ್ಗಿಷ್ಟಿಕೆಗಳಿಗೆ ಜೋಡಿಸಿ ಹೊಗೆಯನ್ನು ಮಾಡಿನ ಮೂಲಕ ಹೊರಗೆ ಬಿಡುವಂಥ ರಚನೆಗಳಿಗೆ. ಈ ಮೂಲದ ಕಾರಣ ಇಂಥ ದೀಪಗಳಿಗೆ ‘ಚಿಮಿಣಿ’ ದೀಪಗಳು ಎಂಬ ಹೆಸರು ಬಂದಿರಬೇಕು. ಆಗ ಅದಕ್ಕೆ ಬಳಸುವ ತೈಲಕ್ಕೂ ಅದೇ ಹೆಸರು ಬಂತು.

ಇನ್ನು ಇಂಗ್ಲಿಷಿನಲ್ಲಿ ಬಳಸುವ ಕೆರೊಸಿನ್ ಎಂಬುದು ಮೂಲತಃ ಒಂದು ಬ್ರಾಂಡ್ ನೇಮ್, ಒಬ್ಬ ಕೆನೆಡಿಯನ್ ಪೇಟೆಂಟ್ ಪಡೆದುದು. ಇದರ ಮೂಲ ಗ್ರೀಕ್, ‘ಜ್ವಲಿಸು’ ಎಂಬ ಅರ್ಥ ಕೊಡುವ ಪದದಿಂದ ಬಂದುದು; ಆದರೆ ಕ್ರಮೇಣ ಸಾರ್ವತ್ರಿಕವಾಯಿತು. ಡಾಲ್ಡ ಎಂಬ ಪದದ ಹಾಗೆ, ಮೂಲದಲ್ಲಿ ಏಕಮಾತ್ರ ಬ್ರಾಂಡಿನ ಸಸ್ಯತೈಲಕ್ಕೆ ಇದ್ದ ಹೆಸರು ನಂತರ ಸಾರ್ವತ್ರಿಕವಾಯಿತು! ಈಗ ಈ ಚಿಮಿಣಿ ದೀಪ, ಚಿಮಿಣಿ ಎಣ್ಣೆ ಎಂಬ ಹೆಸರುಗಳು ದಕ್ಷಿಣ ಕನ್ನಡಕ್ಕೆ ಸೀಮಿತವೋ ಇನ್ನೆಲ್ಲಾದರೂ ಇವೆಯೋ ನನಗೆ ಗೊತ್ತಿಲ್ಲ; ಸೀಮಿತವಾಗಿದ್ದರೆ ಯಾಕೆ, ಹೇಗೆ ಎಂಬ ಪ್ರಶ್ನೆಗಳೇಳುತ್ತವೆ. ಬಿಟ್ಟುಬಿಡೋಣ.

ಈಗ ಈ ಚಿಮಿಣಿ ಕೈದೀಪಕ್ಕೆ ಬಂದರೆ, ಇದು ಬಹೂಪಯೋಗಿಯಾಗಿದ್ದರೂ, ಇದಕ್ಕೆ ಕೆಲವು ಮಿತಿಗಳೂ ಇದ್ದುವು. ಇದು ಗಾಳಿಗೆ ನಿಲ್ಲುವುದಿಲ್ಲವಾದ ಕಾರಣ, ಮನೆಯ ಹೊರಗೆ ಉಪಯೋಗವಿಲ್ಲ; ಮನೆಯೊಳಗೂ ಗಾಳಿ ಹೆಚ್ಚು ಬಂದರೆ ಇದು ಇದೀಗ ನಂದೀತು ಎನ್ನುವ ಆತಂಕ ಉಂಟುಮಾಡುತ್ತ ಇರುತ್ತದೆ. ಹತ್ತಿರ ಇರಿಸಿ ಪುಸ್ತಕ ಓದಲು ಪರವಾಯಿಲ್ಲ. ರಾತ್ರಿ ಊಟದ ಸಮಯ ನಾವು ಚಿಮಿಣಿಯ ತೂಗುದೀಪವನ್ನು ಉಪಯೋಗಿಸುತ್ತಿದ್ದೆವು. ಇಂದಿನ ವಿದ್ಯುತ್ ಯುಗದ ದೃಷ್ಟಿಯಿಂದ ನೋಡಿದರೆ ಇದೂ ಕೂಡ ಬಹಳ ಪ್ರಿಮಿಟಿವ್. ಏನು ಮಾಡಲಿ? ಆಗಿನ ಕಾಲವೇ ಅಂಥದು. ನಮ್ಮಷ್ಟೂ ಅನುಕೂಲ ಇಲ್ಲದವರು ಎಷ್ಟೋ ಜನ ಊರಲ್ಲಿ ಇದ್ದರು.

ಈ ಚಿಮಿಣಿ ಎಣ್ಣೆಯೂ ಸುಲಭದಲ್ಲಿ ಸಿಗುವಂಥದಾಗಿರಲಿಲ್ಲ. ನನ್ನದು ದ್ವಿತೀಯ ಮಹಾಯುದ್ಧದ ಕಾಲ. ನನಗೆ ಅಲ್ಪ ಸ್ವಲ್ಪ ಅರಿವು ಮೂಡುವಾಗ ‘ರೇಶನ್’ ಎಂಬ ಪ್ರಕ್ರಿಯೆಯೊಂದು ಆರಂಭವಾಗಿತ್ತು. ಚಿಮಿಣಿ ಎಣ್ಣೆ ರೇಶನ್ ಅಂಗಡಿಯಲ್ಲಿ ಮಿತವಾಗಿ ವಾರಕ್ಕೊಮ್ಮೆ ಸಿಗುತ್ತಿತ್ತು. ಅದಕ್ಕೊಂದು ಕುಪ್ಪಿ ತೆಗೆದುಕೊಂಡು ಹೋಗಬೇಕಿತ್ತು. ವಾರಕ್ಕೆ ಸಿಗುವುದು ಆ ಕುಪ್ಪಿಯಲ್ಲಿ ಹಿಡಿಯುವಷ್ಟು; ಆದ್ದರಿಂದ ಬಳಕೆಯಲ್ಲಿ ಮಿತವ್ಯಯ ಅಗತ್ಯವಾಗಿತ್ತು. ಈ ಎಣ್ಣೆ ಬೇರೆ ಯಾವುದೋ ದೇಶದಿಂದ ಬರಬೇಕಿತ್ತು – ಬಹುಶ: ರಷ್ಯಾದಿಂದ. ನನಗಾಗ ಗೊತ್ತಿಲ್ಲದೆ ಇದ್ದರೂ, ಈ ರೇಶನಿಂಗ್ ಪದ್ಧತಿಯನ್ನು 1944ರಲ್ಲಿ ದ್ವಿತೀಯ ಮಹಾಯುದ್ಧದ ಕಾಲದಲ್ಲಿ ಬ್ರಿಟಿಷ್ ಆಡಳಿತವೇ ಚಾಲ್ತಿಗೆ ತಂದಿತ್ತು.

ಹುಳವೆಂದರೆ ಹುಳವೂ ಅಲ್ಲ, ಇದೊಂದು ಹಾತೆ, ರೆಕ್ಕೆಗಳುಂಟು, ನೊಣದ ಥರ, ರಕ್ಕೆ ಮುರಿದರೆ ಹುಳ! ಯಾರಿಗೆ ಏನೂ ತೊಂದರೆ ಮಾಡುವುದಿಲ್ಲ. ಮಳೆಗಾಲದ ರಾತ್ರಿಗಳಲ್ಲಿ ಇವು ಎತ್ತರದ ಮರಗಳ ಮೇಲೆ ವಿಪುಲವಾಗಿ ಕಾಣಿಸಿಕೊಳ್ಳುತ್ತವೆ. ಇವುಗಳ ಹಿಂಭಾಗಕ್ಕೆ ಮಿನುಗುವ ಶಕ್ತಿಯಿದೆ. ಇವು ಒಟ್ಟಾಗಿ ಒಂದೇ ಲಯದಲ್ಲಿ ಮಿನುಗಲು ಸುರುಮಾಡಿದರೆ ನೋಡಲು ಅದ್ಭುತ.

ನಮ್ಮ ‘ಲಕ್ಸ್ ಫಿಯಟ್’ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ಇನ್ನು ಕೆಲವು ತೈಲ ಮೂಲಗಳ ಬಗ್ಗೆಯೂ ಇಲ್ಲಿ ಉಲ್ಲೇಖಿಸಬೇಕು. ಎಳ್ಳೆಣ್ಣೆ, ಸಾಸಿವೆ ಎಣ್ಣೆ, ತೆಂಗಿನೆಣ್ಣೆ, ಹರಳೆಣ್ಣೆ, ಹೊನ್ನೆಣ್ಣೆ ಮುಂತಾಗಿ. ಇವುಗಳಲ್ಲಿ ಎಳ್ಳೆಣ್ಣೆ, ಸಾಸಿವೆ ಎಣ್ಣೆ, ಹರಳೆಣ್ಣೆ, ಹೊನ್ನೆಣ್ಣೆಗಳು ‘ಕಾಳೆಣ್ಣೆ’ಗಳು, ಎಂದರೆ ಕಾಳುಗಳಿಂದ ತೆಗೆದಂಥವು. ಇವುಗಳಲ್ಲಿ ಎಳ್ಳೆಣ್ಣೆಯೇ ಹೆಚ್ಚು ಉಪಯೋಗಿ, ದೀಪದೆಣ್ಣೆಯಾಗಿಯೂ ಅಡುಗೆ ಮಾಧ್ಯಮವಾಗಿಯೂ. ಆದರೆ ಇದು ಮಂದವಾಗಿ ಉರಿಯುವಂಥದು; ಆದ್ದರಿಂದ ಬೆಳಕಿನ ಮಟ್ಟಿಗೆ ಅಷ್ಟೇನೂ ಉಪಯೋಗವಿಲ್ಲ. ಇತರ ಕಾಳೆಣ್ಣೆಗಳೂ ಹೀಗೆಯೇ. ಇನ್ನು ಶೇಂಗಾ ಎಣ್ಣೆಯೂ ಕರ್ನಾಟಕದ ಉತ್ತರ ಕಡೆಯಲ್ಲಿ ಜನಪ್ರಿಯವೇ – ಆದರೆ ಅಡುಗೆ ಮಾಧ್ಯಮವಾಗಿ. ಕರಾವಳಿ ಕರ್ನಾಟಕದಲ್ಲಿ ಮತ್ತು ಕೇರಳದಲ್ಲಿ ಈ ಸ್ಥಾನ ತೆಂಗಿನೆಣ್ಣೆಗೆ (ಕೊಬ್ಬರಿ ಎಣ್ಣೆ) ಸಲ್ಲುತ್ತದೆ.

ಈ ‘ಎಣ್ಣೆ’ ಎಂಬ ಪದದ ಕುರಿತು ಒಂದು ಮಾತು: ಇದು ಎಳ್+ನೆಯ್ ಎಂಬ ಮೂಲದಿಂದ ಬಂದುದು. ಶುದ್ಧ ದ್ರಾವಿಡ ಸಮಾಸ ಪದ. ಶುದ್ಧ ಸಂಸ್ಕೃತ ಪದ ‘ತೈಲ’ದ ಹಿಂದೆ ಇರುವುದು ‘ತಿಲ’, ಅರ್ಥಾತ್ ಎಳ್ಳು. ಎಂದರೆ, ಭಾರತದಲ್ಲಿ ಈ ಎಳ್ಳೆಣ್ಣೆ ಎಂಬುದು ಅತ್ಯಂತ ಪ್ರಾಚೀನ ಸಾಧನವಾಗಿದ್ದಿರಬಹುದು. ಹಿಂದೂ ಅಪರಕ್ರಿಯೆಗಳಲ್ಲೂ ಎಳ್ಳಿನ ಪಾತ್ರ ಬಹಳ. ‘ಎಳ್ಳುನೀರು ಬಿಡುವುದು’ (ತಿಲಾಂಜಲಿ) ಎಂಬ ಮಾತೇ ಇದೆಯಲ್ಲ! ನಮ್ಮ ಕಡೆ ತೆಂಗಿನೆಣ್ಣೆ ದೀಪಕ್ಕೂ ಅಡುಗೆಗೂ (ಮಾಧ್ಯಮವಾಗಿ ಮತ್ತು ವ್ಯಂಜಕವಾಗಿ) ಸಾಧಾರಣ ಬಳಕೆಯಾಗುತ್ತಿತ್ತು. ಈಗ ಮಂದದ ಕಾಳೆಣ್ಣೆಗಳನ್ನು ಸಂಸ್ಕರಿಸಿ ಬಳಸುವ ವಿಧಾನ ಬಂದಿದೆ, ಹಾಗೂ ಸನ್ ಫ್ಲವರ್, ಸೋಯಾ ಬೀನ್ಸ್, ಅಕ್ಕಿ ತೌಡು, ಜೋಳ ಮುಂತಾಗಿ ತೈಲ ಮೂಲಗಳೂ ಹೆಚ್ಚಿವೆ. ಆದರೆ ಇವೆಲ್ಲ ಅಡುಗೆಗೋಸ್ಕರವಲ್ಲದೆ ಬೆಳಕಿಗೋಸ್ಕರ ಅಲ್ಲ. ಹಾಗೂ ನಾನಿಲ್ಲಿ ಹೇಳುತ್ತಿರುವುದು ವಿದ್ಯುತ್ ಪೂರ್ವದ ಹಳ್ಳಿಗಳಲ್ಲಿ ಬೆಳಕಿಗಾಗಿ ಜನ ಪಡುತ್ತಿದ್ದ ಪರಿಶ್ರಮದ ಬಗ್ಗೆ.

ತೆಂಗಿನೆಣ್ಣೆ ದೀಪವಾಗಿ ಎಲ್ಲಾ ಮಂಗಲ ಕಾರ್ಯಗಳಿಗೂ ಉಪಯೋಗವಾಗುತ್ತಿತ್ತು. ಉದಾಹರಣೆಗೆ, ದೇವರ ದೀಪಕ್ಕೆ, ಆರತಿಗೆ; ಎಣ್ಣೆ ಹಚ್ಚಿ ಸ್ನಾನ ಮಾಡುವುದು ಒಂದು ವಿಶೇಷವಾದ ಕಾರ್ಯಕ್ರಮ. ಕೂದಲಿಗೆ ತೆಂಗಿನೆಣ್ಣೆ ಹಚ್ಚಿದರೆ ಕೂದಲು ಚೆನ್ನಾಗಿ ಬೆಳೆಯುತ್ತದೆ ಎನ್ನುವ ನಂಬಿಕೆ. ತುಪ್ಪದ ಅಥವಾ ತೆಂಗಿನೆಣ್ಣೆಯ ನಂದಾದೀಪ ಇರಿಸುವುದಿತ್ತು. ಆದರೂ ತೆಂಗಿನೆಣ್ಣೆಯ ಕೈದೀಪ ಇರಲಿಲ್ಲ; ಅದನ್ನು ಓದಲು ಬರೆಯಲು ಬಳಸುತ್ತಿರಲೂ ಇಲ್ಲ. ನಾನು ಸೋದರ ಮಾವನ ಮನೆಯಲ್ಲಿದ್ದು ಶಾಲೆಗೆ ಹೋಗುತ್ತಿದ್ದಾಗ ರಾತ್ರಿ ಓದುತ್ತಿದ್ದುದು ಚಿಮಿಣಿ ದೀಪದ ಬೆಳಕಿನಲ್ಲಿಯೇ. ಅವರು ನನಗೆ ದೀಪ ಆರಿಸಲು ಆಗಾಗ ಹೇಳುತ್ತಲೇ ಇದ್ದರು.

ಬೆಂಕಿಯೇ ಬೆಳಕಿನ ಮೂಲ ಎನ್ನುವುದು ನಮ್ಮ ಅನುಭವ. ಎದುರು ಬೆಟ್ಟದ ಮೇಲೆ ಕೊಳ್ಳಿ ದೆವ್ವಗಳು ಕೊಳ್ಳಿ ಉರಿಸಿಕೊಂಡು ಕೆಲವು ಇರುಳುಗಳಲ್ಲಿ ಅಡ್ಡಾಡುವುದು ನಮಗೆ ಗೋಚರಿಸುತ್ತಿತ್ತು. ಅಥವಾ ನಾವು ಹಾಗೆ ಕಲ್ಪಿಸಿಕೊಳ್ಳುತ್ತಿದ್ದೆವು. ದೆವ್ವಗಳಿಗೂ ಕತ್ತಲಲ್ಲಿ ಸಂಚರಿಸುವುದಕ್ಕೆ ಬೆಳಕು ಬೇಕು! ರಾತ್ರಿ ಬೆಳಕು ಕೇಳಿಕೊಂಡು ನಮ್ಮದೇ ಊರಿನವರು ನಮ್ಮಲ್ಲಿಗೆ ಬರುತ್ತಿದ್ದರು. ಅವರಲ್ಲಿ ಸಾರಾಯಿ ಕುಡಿದವರೂ ಇರುತ್ತಿದ್ದರು. ಅಲ್ಲೀವರೆಗೆ ಕುರಡು ಪರಡಿಕೊಂಡು ಬಂದವರಿಗೆ ನಮ್ಮ ಮನೆ ಕಂಡೊಡನೆ ಬೆಳಕಿನ ನೆನಪಾಗುತ್ತಿತ್ತು! ನಾವು ಒಣ ತೆಂಗಿನ ಮಡಲಿನ ‘ಸೂಟೆ’ಗಳನ್ನು ಇಟ್ಟುಕೊಂಡಿರುತ್ತಿದ್ದೆವು. ಒಂದು ಹಿಡಿ ಒಣ ಮಡಲಿಗೆ ಅಲ್ಲಲ್ಲಿ ಬಳ್ಳಿಯಲ್ಲಿ ಕಟ್ಟು ಹಾಕಿದರೆ ಅದುವೇ ಸೂಟೆ. ಅದರ ಚೂಪಿನ ತುದಿಗೆ ಬೆಂಕಿ ಹಚ್ಚಿ ಬೀಸಿಕೊಂಡು ನಡೆದರೆ ದಾರಿ ಕಾಣಿಸುವುದು. ಆಗ ಸೂಟೆ ಹಿಡಿದವನೇ ಕೊಳ್ಳಿ ದೆವ್ವ! ಬೆಳಕು ಕೇಳಿ ಬಂದವನಿಗೆ ನಮ್ಮದೊಂದು ಪುಟ್ಟ ಇನಾಮು. ಪ್ರೊಮೀಥಿಯಸ್ ನ ಕುಲದವರು ನಾವು. ನಮ್ಮಿಂದ ಬೆಳಕು ಪಡೆದ ಇದೇ ವ್ಯಕ್ತಿ ಮರುದಿನ ಕುಡಿದು ಬಂದು ನಮ್ಮನ್ನು ಬಯ್ದರೂ ಬಯ್ದನೇ!

ನಾವು ಅಪರೂಪಕ್ಕೆ ಮೇಣದ ಬತ್ತಿಯನ್ನೂ (ಕ್ಯಾಂಡಲ್) ಇಟ್ಟುಕೊಂಡಿರುತ್ತಿದ್ದೆವು. ಇದನ್ನು ಉರಿಸಿ, ಗೆರಟೆಯೊಳಗಿರಿಸಿ ದಾರಿ ತೋರುವ ದೀಪವನ್ನಾಗಿಯೂ ಬಳಸುವುದಿತ್ತು. ವಿಚಿತ್ರವೆಂದರೆ, ಗೆರಟೆಯ ರಕ್ಷಣೆ ಇರುವುದರಿಂದ ಬತ್ತಿ ನಂದುತ್ತಿರಲಿಲ್ಲ. ಇನ್ನವೇಟಿವ್, ಅಲ್ಲವೇ?

ಬದಲಾವಣೆಗಳು ಆಗುತ್ತಲೇ ಇದ್ದುವು. ಯಾವಾಗಲೂ ಆಗುತ್ತ ಇರುತ್ತವೆ. ಗ್ರಾಮಾಂತರಗಳಿಗೆ ಅವು ಸ್ವಲ್ಪ ನಿಧಾನವಾಗಿ ತಲಪುತ್ತವೆ. ಆದರೆ ಅವುಗಳನ್ನು ವಿಮರ್ಶಾ ದೃಷ್ಟಿಯಿಂದ ಆಗ ನಾನು ನೋಡಿದುದಿಲ್ಲ. ಉದಾಹರಣೆಗೆ ಬೆಂಕಿ ಪೆಟ್ಟಿಗೆ ಬಂತು. ಎಷ್ಟೊಂದು ಅದ್ಭುತ ಸಾಧನ ಅದು. ಪಾಕೆಟಿನಲ್ಲಿ ಬೆಂಕಿ! ಯಾವುದೇ ಅಪಾಯವಿಲ್ಲದೆ! ಬೀಡಿ ಸಿಗರೇಟು ಸೇದುವವರಿಗಂತೂ ವರದಾನ. ಈ ತಂಬಾಕು ಇಂಡಸ್ಟ್ರಿಗಳಿಗೆ ಇದರಿಂದ ಒಂದು ಬೃಹತ್ ಬೂಸ್ಟ್ ಸಿಕ್ಕಿದಂತಾಯಿತು. (ನಾನಿದನ್ನು ಪ್ರೋತ್ಸಾಹಿಸುತ್ತೇನೆ ಎಂದು ತಿಳಿಯಬೇಡಿ!) ಒಬ್ಬ ಸೇದುಗ ಇನ್ನೊಬ್ಬ ಸೇದುಗನ ಬೀಡಿಗೆ/ ಸಿಗರೇಟಿಗೆ ಬೆಂಕಿ ಹಚ್ಚುವ ದೃಶ್ಯವನ್ನು ಮನಸ್ಸಿಗೆ ತಂದುಕೊಳ್ಳಿ. ಎಂತಹ ಕಾಮರಾಡರಿ (ಆತ್ಮೀಯತೆ) ಅದು!ಕೆಲವು ಜಿಪುಣರು ಬೆಂಕಿ ಕಡ್ಡಿ ಯಾಕೆ ಖರ್ಚು ಮಾಡಬೇಕು ಎಂದುಕೊಂಡು ತಾವು ಸೇದುತ್ತಿರುವ ಹೊಗೆಬತ್ತಿಯನ್ನೇ ನೀಡುವುದೂ ಇತ್ತು.

ಇನ್ನು ಊರಿಗೆ ಬಂದ ಇನ್ನೊಂದು ಅದ್ಭುತ ಟೆಕ್ನಾಲಜಿ ಎಂದರೆ ಟಾರ್ಚ್ ಲೈಟು. ಇದು ಕೊಳ್ಳಿ ದೆವ್ವದ ಆಧುನಿಕ ಅವತಾರವೇ ಸರಿ. ಬ್ಯಾಟರಿ ಸೆಲ್ಲುಗಳ ಶಕ್ತಿಯಿಂದ ಬೆಳಕು ನೀಡುವ ಈ ಸಾಧನವನ್ನು ಪರಿಷ್ಕಾರದ ಕೆಲವರು ಬರೀ ‘ಬ್ಯಾಟರಿ’ ಎಂದೂ ಕರೆಯುತ್ತಿದ್ದರು. ನನ್ನ ಅಣ್ಣ ಮೊದಲು ಎರಡು ಸೆಲ್ಲುಗಳ ಎವರೆಡಿ ಟಾರ್ಚನ್ನು ಕೊಂಡುಕೊಂಡರು. ನಂತರ ತೋಟ ಕಾಯುವುದಕ್ಕೆಂದು ಐದು ಸೆಲ್ಲುಗಳ ದೊಡ್ಡದೊಂದು ಮಾದರಿಯನ್ನು ಖರೀದಿಸಿದರು. ಇದಕ್ಕೆ ದೊಡ್ಡ ತಲೆಯಿತ್ತು. ಕಳ್ಳರು ಸಿಕ್ಕರೆ ಇದರಿಂದ ಅವರ ತಲೆಗೇ ಹೊಡೆಯಬಹುದಾಗಿತ್ತು. ಆದರೆ ಸಿಗಬೇಕಲ್ಲ!

ಇದೆಲ್ಲ ಅಲ್ಪ ಪ್ರಮಾಣದ ಬೆಳಕಿಗಾಯಿತು. ಬೆಳಕು ಹೆಚ್ಚು ಬೇಕೆಂದಾಗ ನಾವು ಏನು ಮಾಡಬೇಕು? ಪಂಜು, ದೊಂದಿ, ಹಿಲಾಲು? ಊಹೂಂ, ಅಪಾಯಕಾರಿ. ಪುಣ್ಯಕ್ಕೆ ನನ್ನ ಬಾಲ್ಯ ಕಾಲದಲ್ಲಿ ಗ್ಯಾಸ್ ಲೈಟ್ ಯಾನೆ ಪೆಟ್ರೋಮ್ಯಾಕ್ಸ್ ಎಂಬ ಹೆವಿ ವೈಟ್ ಚಿಮಿಣಿ ದೀಪವೊಂದು ಚಾಲ್ತಿಗೆ ಬಂದಿತ್ತು. ಅದೊಂದು ವಯಸ್ಕರು ಮಾತ್ರ ಕೈಕಾರ್ಯ ಮಾಡುವಂಥ ಒಂದೆರಡು ಕಿಲೋ ತೂಕದ ದೀಪ, ಚಿಮಿಣಿ ಎಣ್ಣೆಯನ್ನೇ ಕುಡಿಯುತ್ತದೆ. ಆದರೆ ನೇರವಾಗಿ ಅಲ್ಲ. ಅದನ್ನು ತುಂತುರು ಹನಿಗಳಾಗಿ ಮಾರ್ಪಡಿಸಿ ಮಕ್ಕಳ ಉರುಟು ಕಾಲುಚೀಲದ ತರದ ಮ್ಯಾಂಟಲ್ ಎಂಬ ಬಟ್ಟೆಗೆ ಕಳಿಸಿಕೊಡಲಾಗುತ್ತದೆ. ಇದಕ್ಕಾಗಿಯೇ ಅಳವಡಿಸಿದ ಒಂದು ಪಿಸ್ಟನ್ ಇರುತ್ತದೆ. ಇದರ ಮೂಲಕ ಎಣ್ಣೆಯ ಮೇಲೆ ಒತ್ತಡ ಹಾಕಿ ಎಣ್ಣೆಯನ್ನು ಮೇಲಕ್ಕೆ ಸಾಗಿಸುವುದು ತಂತ್ರ. ದೀಪ ಉರಿಯುವುದು ಮ್ಯಾಂಟಲಿನಲ್ಲಿ; ಇದರ ಸುತ್ತ, ಇದಕ್ಕೆ ತಾಗದಂತೆ ಜೋಡಿಸಿದ ಗಾಜಿನ ತುಂಡುಗಳ ವರ್ತುಲಾಕಾರದ ರಕ್ಷಣಾ ಕವಚವಿರುತ್ತದೆ. ಪ್ರಖರವಾದ ಬೆಳಕನ್ನೂ ಸಾಕಷ್ಟು ಉಷ್ಣವನ್ನೂ ಹೊರ ಚೆಲ್ಲುವ ಈ ಗ್ಯಾಸ್ ಲೈಟ್ ಮದುವೆ ಸಮಾರಂಭಗಳಲ್ಲಿ, ಜಾತ್ರೆಗಳಲ್ಲಿ, ಉತ್ಸವಗಳಲ್ಲಿ, ಯಕ್ಷಗಾನ ಬಯಲಾಟಗಳಲ್ಲಿ, ಸರ್ಕಸ್ ಗಳಲ್ಲಿ ಚಪ್ಪರಕ್ಕೆ ತೂಗುಹಾಕಿ ಜನಪ್ರಿಯವಾಗಿದ್ದ ದೀಪ.

ಆದರೆ ಇದನ್ನು ಮನೆಯಲ್ಲಿ ದಿನನಿತ್ಯಕ್ಕೆ ಉಪಯೋಗಿಸಲು ಬರುವುದಿಲ್ಲ. ಇದರ ಪ್ರಖರತೆ ಒಂದು ಕಾರಣವಾದರೆ, ಇದು ಸಾಕಷ್ಟು ಇಂಧನವನ್ನು ಬಯಸುವುದು ಇನ್ನೊಂದು ಕಾರಣ. ಅಲ್ಲದೆ ಕೀಟಗಳನ್ನೂ ಇದು ಆಕರ್ಷಿಸುತ್ತದೆ. ಇದರ ಉಷ್ಣ ಓದು ಬರಹಕ್ಕೆ ಪ್ರತಿಕೂಲವಾದುದು. ಬಹಳ ಜಾಗ್ರತೆಯಿಂದ ಕೈಕಾರ್ಯ ಮಾಡಬೇಕಾದ ಉಪಕರಣ ಇದು, ಸಿಡಿದರೆ ಅಪಾಯ ತಪ್ಪಿದ್ದಲ್ಲ. ಇದಕ್ಕೆ ನೀರು ಸ್ವಲ್ಪವೂ ತಾಕಬಾರದು. ಮ್ಯಾಂಟಲ್ ಉದುರಬಾರದು, ಹರಿಯಲೂಬಾರದು.

ಇನ್ನು ಇವೆಲ್ಲದರ ನಡುವೆ ನನ್ನ ಪ್ರೀತಿಪಾತ್ರವಾದ ಲಾಟೀನನ್ನು ಮರೆಯುವುದು ಹೇಗೆ? ಇದೂ ಒಂದು ಚಿಮಿಣಿ ದೀಪವೇ– ಆದರೆ ಹೆಚ್ಚು ಸುಭದ್ರವಾದುದು, ಮತ್ತು ಉಪಯೋಗಕರವಾದುದು. ಇಂಗ್ಲಿಷ್ ನ ‘ಲ್ಯಾಂಟರ್ನ್’ ಕನ್ನಡದಲ್ಲಿ ಲಾಟೀನು, ಲಾಂದ್ರ, ಕಂದೀಲು ಮುಂತಾದ ರೂಪಗಳನ್ನು ಪಡೆದಿದೆ. ಇದು ಎಲ್ಲರ ಮಿತ್ರ. ಮನೆಯಲ್ಲೊಂದು ಲಾಟೀನು ಇರಲೇಬೇಕು. ಇದರ ಗಾಜಿನ ಬುರುಡೆಯನ್ನು ವಾರಕ್ಕೆ ಒಂದೆರಡು ಸಲವಾದರೂ ಚಿಂದಿ ಬಟ್ಟೆಯಿಂದ ಒರೆಸಬೇಕು, ಇಲ್ಲದಿದ್ದರೆ ಗಾಜಿಗೆ ಹೊಗೆ ಹಿಡಿದು ಬೆಳಕು ಮಂಕಾಗುತ್ತದೆ. ಮನೆಯಲ್ಲಿ ಇದು ನನ್ನದೊಂದು ಫೇವರೇಟ್ ಕೆಲಸವಾಗಿತ್ತು. ‘ಹೋಗು ಪುಟ್ಟ, ಲಾಟ್ಣು ಒರಸು!’ ಎಂದ ತಕ್ಷಣ ಪುಟ್ಟ ರೆಡಿ! ಲಾಟೀನು ಒರೆಸುವುದು, ಅದಕ್ಕೆ ಎಣ್ಣೆ ತುಂಬುವುದು, ಅದರ ನೆಣೆಯಲ್ಲಿರುವ ಕರಿಯನ್ನು ಕಿತ್ತು ತೆಗೆಯುವುದು, ದೀಪ ಉರಿಸುವುದು ಎಲ್ಲವನ್ನೂ ನಾನು ಮಾಡುತ್ತಿದ್ದೆ. ಆಗಿನ ಮಕ್ಕಳು ಎಷ್ಟೊಂದು ಮನೆಗೆಲಸ ತೋಟದ ಕೆಲಸಗಳನ್ನು ಮಾಡುತ್ತಿದ್ದರು ಎಂದು ನೆನೆದರೆ ಆಶ್ಚರ್ಯವಾಗುತ್ತದೆ.

ಈ ಲಾಟೀನು ಎನ್ನುವ ಸಾಧನ ಗಾಡಿಕಾರರ ಮಿತ್ರ. ಜೋಡೆತ್ತಿನ ಗಾಡಿಯ ಕೆಳಗೆ (ನಮ್ಮ ಕಡೆ ಪ್ರಚಲಿತ ಇದ್ದುದು ಜೋಡೆತ್ತಿನ ಗಾಡಿಯೇ) ಒಂದು ಲಾಟೀನು ಸದಾ ನೇತಾಡುತ್ತಿತ್ತು. ರಾತ್ರಿಯಲ್ಲಿ ಅದನ್ನು ಗಾಡಿಕಾರ ಉರಿಸಿಡುತ್ತಿದ್ದ. ಮೂಕಿಯಲ್ಲಿ ಕುಳಿತುಕೊಂಡು ಆತ ಆಗಾಗ ಚಕ್ ಚಕ್ ಎಂದು ಗಾಳಿಯಲ್ಲಿ ಚಾಟಿ ಬೀಸುತ್ತ ಬಾಯಲ್ಲೂ ಸದ್ದು ಮಾಡುತ್ತ ಗಾಡಿ ಹೊಡೆಯುವನು. ಅದೇನು ಯೋಚಿಸುತ್ತಿದ್ದನೋ ಏನೋ. ಅಂತೂ ಗಾಡಿ ನಿಧಾನ ಸಾಗುತ್ತಿತ್ತು. ಇದು ಕೇವಲ ನನ್ನ ರೊಮ್ಯಾಂಟಿಕ್ ಕಲ್ಪನೆಯೆಂದು ಅಂದುಕೊಳ್ಳಬೇಡಿ. ಈಗ ಅಂಥ ಗಾಡಿಗಳಿಲ್ಲದ ಕಾರಣ ಹಾಗೆ ಅನಿಸುತ್ತದೆ ಅಷ್ಟೆ. ಕಳೆದುಹೋದುದೆಲ್ಲವೂ ಒಂದು ರೀತಿಯಲ್ಲಿ ರಮ್ಯವೇ.

ನಮ್ಮ ದೀಪದ ಕಥನ ಇಲ್ಲಿಗೆ ಮುಗಿಯುವುದಿಲ್ಲ. ಸದ್ಯದಲ್ಲೇ ಡೈನಮೋ ಎಂಬ ಸಾಧನವೊಂದು ಕಾಣಿಸಿಕೊಂಡಿತು; ನಾವಿದನ್ನು ಇಂದು ಜನರೇಟರ್ ಎಂದು ಕರೆಯುತ್ತೇವೆ. ಇದು ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಒಂದು ಸಾಧನ, ಕೆಲವು ಸೈಕಲುಗಳಿಗೆ ಚಿಕ್ಕದಾಗಿ ಅಳವಡಿಸಿಕೊಂಡಿರುತ್ತದೆ. ಸೈಕಲಿನಲ್ಲಿ ಬಳಕೆಯಾಗುವ ಶಕ್ತಿ ಕಾಲಿನ ತುಳಿತ. ದೊಡ್ಡ ಪ್ರಮಾಣದ ಯಂತ್ರಗಳಲ್ಲಿ ಬಳಕೆಯಾಗುವುದು ಡೀಸೆಲ್ ತೈಲ. ಬಹು ಬೇಗನೆ ಇಂಥ ಡೀಸೆಲ್ ಯಂತ್ರಗಳು ಎಲ್ಲೆಡೆ ಕಾಣಿಸಿಕೊಳ್ಳಲು ಸುರುವಾದುವು. ಯಕ್ಷಗಾನ ಬಯಲಾಟದವರಿಗೆ ಇದೊಂದು ವರವಾಯಿತು. ಇಲ್ಲದಿದ್ದರೆ ರಾತ್ರಿಯಿಡೀ ಗ್ಯಾಸ್ ಲೈಟನ್ನು ಉರಿಸಿಕೊಂಡು ಇರಬೇಕಾಗುತ್ತಿತ್ತು. ಈ ಡೈನಮೋದ ಒಂದೇ ಸಮಸ್ಯೆಯೆಂದರೆ ಅದು ಉಂಟುಮಾಡುವ ಧಡ್ ಧಡ್ ಶಬ್ದ.

ನನಗೆ ಕೆಲವು ಕುತೂಹಲಗಳಿವೆ. ಬೆಳಕಿಗೆ ಸಂಬಂಧಿಸಿ ಹೇಳುವುದಾದರೆ, ನಮ್ಮ ಪೂರ್ವಜರು ಹೇಗೆ ಜೀವಿಸುತ್ತಿದ್ದರು ಎನ್ನುವುದು. ಉದಾಹರಣೆಗೆ, ಪೆಟ್ರೋಮ್ಯಾಕ್ಸ್ (ಗ್ಯಾಸ್ ಲೈಟ್) ಬರುವ ಮೊದಲು ಬಯಲಾಟಗಳಲ್ಲಿ ಯಾವ ಬೆಳಕನ್ನು ಉಪಯೋಗಿಸುತ್ತಿದ್ದರು? ಬಹುಶಃ ತೆಂಗಿನೆಣ್ಣೆಯ ಗೂಟದ ದೀಪ? ಒಂದು ರಂಗಸ್ಥಳಕ್ಕೆ ಅಂಥ ಎಷ್ಟು ದೀಪಗಳು ಬೇಕು? ಅಥವಾ ಆಟಗಳನ್ನು ಹಗಲು ಆಡುತ್ತಿದ್ದರೇ? ಶೇಕ್ಸ್ಪಿಯರನ ಕಾಲದಲ್ಲಿ (16-17ನೇ ಶತಮಾನ) ನಾಟಕಗಳನ್ನು ಮಧ್ಯಾಹ್ನ ನಂತರ, ಸಂಜೆಗೆ ಮೊದಲು ಪ್ರದರ್ಶನ ಮಾಡುತ್ತಿದ್ದರಂತೆ. ಆದ್ದರಿಂದ ದೀಪಗಳ ಅಗತ್ಯವಿಲ್ಲ. ಭಾರತದಲ್ಲಿ? ಭರತ ಮುನಿ ಈ ಬಗ್ಗೆ ಏನಾದರೂ ಹೇಳಿದ್ದಾನೆಯೇ? ವಿಸ್ತೃತವಾದ ನಾಟ್ಯಭಂಗಿಗಳು, ಆಂಗಿಕಗಳು ಪ್ರೇಕ್ಷಕರಿಗೆ ಗೋಚರಿಸಬೇಕಾದರೆ ನಾಟಕ ಗೃಹ ಕಿರಿದಾಗಿರಬೇಕಲ್ಲವೇ? ಬಹುಶಃ ಭಾರತದಲ್ಲೂ ಅಭಿಜಾತ ನಾಟಕ ಮತ್ತು ನೃತ್ಯಗಳು ಹಗಲಲ್ಲೇ ನಡೆಯುತ್ತಿದ್ದಿರಬೇಕು. ವಿದ್ಯುತ್ತು ಬಂದ ಮೇಲೆ ಇದೆಲ್ಲ ಬದಲಾಗಿದೆ. ಈಗ ಬೆಳಕಿನ ವಿನ್ಯಾಸ ನಾಟಕ ಪ್ರದರ್ಶನದ ಒಂದು ಭಾಗವೇ ಆಗಿದೆ. ವಿದ್ಯುತ್ತು ಕೇವಲ ಒಂದು ಶಕ್ತಿಮೂಲವಾಗಿಯೂ ಉಳಿದಿಲ್ಲ, ಅದರಿಂದ ಛಾಯಾಚಿತ್ರ, ಚಲನಚಿತ್ರ ಮುಂತಾದ ದೃಶ್ಯ ಕಲೆಗಳೂ ಹುಟ್ಟಿಕೊಂಡಿವೆ.

Fiat lux ಎಂಬ ದೇವ ವಾಕ್ಯ ಸತ್ಯವಾಗಬೇಕಾದರೆ ಲೋಕ ವಿದ್ಯುತ್ತಿನ ಆವಿಷ್ಕಾರದವರೆಗೆ ಕಾಯಬೇಕಾಯಿತು. ಈಗ ಬೆಳಕು ನಮ್ಮ ಕೈಬೆರಳ ತುದಿಯಲ್ಲಿದೆ. ಸ್ವಿಚ್ ಒತ್ತಿದರಾಯಿತು, ಬೆಳಕು ಸಿದ್ಧ! ಇನ್ ಥಿಯರಿ ಎಟ್ ಲೀಸ್ಟ್. ಅದು ಸರ್ವರ ಕೈಗೆ ಎಟಕುವ ದಿನಗಳು ಬರಲಿವೆ. ವಿದ್ಯುದ್ದೀಪಗಳಲ್ಲೂ ಕಳೆದೊಂದು ಸೆಂಚುರಿಯಿಂದ ಹಲವು ಬೆಳವಣಿಗೆಗಳಾಗಿವೆ. ವಿದ್ಯುತ್ತನ್ನು ಶೇಖರಿಸುವ ಇನ್ವರ್ಟರ್ ಬಂದಿದೆ, ಎಮರ್ಜೆನ್ಸಿ ಲ್ಯಾಂಪುಗಳಿವೆ. ಸದ್ಯ ಪ್ರಕಾಶಮಾನವಾದ ಎಲ್ ಇ ಡಿ ಲೈಟು ನಡೆಯುತ್ತಿದೆ.

ವಿದ್ಯುತ್ತು ವಿದ್ಯುನ್ಮಾನ ಯುಗಕ್ಕೆ ಕಾಲಿರಿಸಿದೆ. ಇದು ನ್ಯಾನೋ ಯುಗ. ಮುಂದೇನಾಗುತ್ತದೋ ಯಾರಿಗೂ ಗೊತ್ತಿಲ್ಲ. ಪ್ರತಿ ಸಲವೂ ಅಂದುಕೊಳ್ಳುತ್ತೇವೆ ಇದು ಇಲ್ಲಿಗೆ ಮುಗಿಯಿತು, ಇನ್ನಿಲ್ಲ ಎಂದು. ಆದರೆ ಹಾಗಾಗುವುದಿಲ್ಲ. ಹೊಸ ತಂತ್ರಜ್ಞಾನ ಬರುತ್ತದೆ –ಹೊಸತನ್ನು ತರುತ್ತದೆ. ಇದೇ ಎಲ್ಲೆಯಿಲ್ಲದ ‘ಹನುಮದ್ವಿಕಾಸ.’

ತಮಸೋ ಮಾ ಜ್ಯೋತಿರ್ಗಮಯ!