“ಆದ್ರೆ ಅಲ್ಲಿ ಯಾರೂ ಮಾತೂ ಕೇಳಿಸಿಕೊಳ್ತಿಲ್ಲ. ಟೌನ್ ಎಂಬ ಮಾಯಾವಿಯ ಸೆಳೆತಕ್ಕೆ ಸಿಕ್ಕಾಕೊಳ್ಳೋದಕ್ಕೆ ಹುಚ್ಚಿಗೆ ಬಿದ್ದವರಂಗೆ ನುಗ್ಗುತ್ತಿದ್ದರು. ಹೆಂಗಸರು, ಮಕ್ಕಳು, ವಯಸ್ಸಾದವರನ್ನ ಕಾಳಜಿಯಿಂದ, ಗೌರವದಿಂದ ನಡೆಸಿಕೊಳ್ಳಬೇಕು ಅಂತ ಯುದ್ಧದ ಸಮಯದಲ್ಲೂ ಪಾಲಿಸುವ ಸರಳವಾದ ಸೂತ್ರವನ್ನೂ ಮೀರಿದ, ಕಾಡಿನ ಮೃಗದ ಸ್ವಭಾವ, ಗುಂಪುಗಳ ಕ್ರೌರ್ಯ, ಆ ಹಳ್ಳಿಯ ಜನರಲ್ಲಿ ಸೇರಿಕೊಂಡಿದ್ದು, ಈ ಬಸ್ಸು ಹಳ್ಳಿಗೆ ಪ್ರವೇಶ ಮಾಡಿದಂದಿನಿಂದಲೇ”
ಬಂಡಿ ನಾರಾಯಣಸ್ವಾಮಿಯವರ ತೆಲುಗು ಕಥೆಯ ಅನುವಾದ ಈ ಭಾನುವಾರದ ನಿಮ್ಮ ಓದಿಗಾಗಿ.

 

ಆ ಹಳ್ಳಿಯವರ ಪಾಲಿಗೆ, ಅದು ಎಲ್ಲಮ್ಮನ ಕಟ್ಟೆ. ಅಗಲವಾಗಿ ಹರಡಿಕೊಂಡಿದ್ದ ಕೊಂಬೆಗಳ ನೆರಳಿನಲ್ಲಿ ಅವತ್ತು ಬೆಳಿಗ್ಗೆ ಬಸ್ಸಿಗಾಗಿ ಕಾಯ್ತಾ ನಿಂತಿದ್ದ ಮಲ್ಲಯ್ಯ. ನಾಲ್ಕೈದು ಮಂದಿ ಮುದುಕರು ಆಗಲೇ ಕಟ್ಟಿಮ್ಯಾಲೆ ಸೇರಿ ಮಾತು ಶುರುಹಚ್ಚಿದ್ರು. ಊರಾಗಳ ದನ ಮೇವಿಗಾಗಿ ಗುಡ್ಡದ ಕಡಿಗೆ ಹೊಂಟಿದ್ವು.

ಅಲ್ಲಲ್ಲಿ ಮರಗಳ ಕೆಳಗೆ, ಅರ್ಧಂಬರ್ದ ಬಿದ್ದಿದ್ದ ಮೊಂಡು ಗೋಡೆಗಳ ಕೆಳಗೆ, ನೆರಳು ನಿಧಾನಕ್ಕೆ ಹರಡಿಕೊಳ್ತಿತ್ತು. ಬೆಳಿಗ್ಗೆನೇ ತಂಗಳನ್ನ ಮುದ್ದೆ ತಿಂದು ಬಚ್ಚಲಿಗೆ ಹಾಕಿದ್ದ ತಟ್ಟೆಗಳಲ್ಲಿ ಉಳಿದ ಅಗುಳು, ಮುದ್ದೆ ನೋಡಿ ಕಾಗೆ ಕಾವ್ ಕಾವ್ ಅಂತಾ ಕೂಗ್ತಿದ್ದವು. ಹಳೇ ಬೇವಿನಮರದಿಂದ ಗಾಳಿಯಲ್ಲಿ ತೇಲಿ ಬರ್ತಿರೋ ಬೇವಿನಹೂವಿನ ಪರಿಮಳ ಆ ಪರಿಸರವನ್ನು ನಿಶ್ಚಿಂತೆ, ನಿಶ್ಯಬ್ದದಲ್ಲಿ ತುಂಬಿತ್ತು.

ಆದ್ರೆ ಮಲ್ಲಯ್ಯ ಸಮಾಧಾನದಿಂದ ಇದ್ದಿಲ್ಲ. “ಟೌನಿಗೆ ಹೋಗೋದಾ, ಬ್ಯಾಡಾ?” ಅಂತ ಮನಸ್ಸಿನ್ಯಾಗೆ ಚಡಪಡಿಸ್ತಿದ್ದ. ವಯಸ್ಸಾದ ತಂದೆ ಬೊಯ್ದಿದ್ದೇ ಕಿವ್ಯಾಗ ಕೇಳಿಸ್ತಿತ್ತು. “ಮೂರು ಹೊತ್ತು ಟೌನಿಗೆ ಹೋಗಿ ಏನು ರಾಜಕಾರ್ಯ ಮಾಡ್ತಿಯೋ ಏನೋ. ಅಲ್ಲೇನು ನಮ್ಮ ತಾತನ ಗಂಟು ಬಚ್ಚಿಟ್ಟಿದ್ದೀಯಾ…?” ಆತಗೇನು ಗೊತ್ತು. ಮನಿಯಾಗ ಮೂರು ದಿನ ಊಟನಾರ ಬಿಟ್ಟೇನು. ಆದ್ರೆ ಟೌನಿಗೋಗೋದು ಬಿಡಕ್ಕಾಗ್ತದಾ?

ಆ ಹಳ್ಳಿಯ ನಿಶ್ಯಬ್ದವನ್ನು, ಶಾಂತಿಯನ್ನು ಕದಡುವಂತೆ ದಡದಡ ಸದ್ದಿನೊಂದಿಗೆ ಟೌನಿಂದ ಖಾಸಗಿ ಬಸ್ಸು ಬಂತು. ಬಸ್ಸು ಬರೋದು ತಡ, ಇಲ್ಲಿ ಮಲ್ಲಯ್ಯನ ತಲೆಯೊಳಗೆ ಹುಳು ಕೊರೆಯೋದು ಶುರುವಾಯ್ತು. “ಟೌನಿಗೆ ಹೋಗಿಬಿಡ್ಲಾ….? ಅಲ್ಲಿಗೋಗಿ ಮ್ಯಾಟ್ನಿ ಪಿಕ್ಚರ್ ಗೋದ್ರೆ? ದುರ್ಗಾ ಓಟ್ಲಾಗೆ ದೋಸೆ ತಿಂದ್ರೆ? ಮಟ್ಕಾ ನಂಬ್ರಿಗೆ ದುಡ್ಡು ಕಟ್ಟಿದ್ರೆ? ಒಂದು ಕ್ವಾಟ್ರು ಹಾಕ್ಕೊಂಡ್ರೆ? ಮಸ್ತ್ ಇರಂಗಿಲ್ಲೇನು..” ಮನಸ್ಸು ಕುದುರಿ ಇದ್ದಂಗೆ. ಲಗಾಮು ಹಿಡಿಯೋದು ಎಷ್ಟು ಜನರ ಕೈಲಾಗ್ತದೆ? ಆದ್ರೆ ಮಲ್ಲಯ್ಯನ ಜೇಬಿನಾಗ ದುಡ್ಡಿದ್ದಿಲ್ಲ. ದುಡ್ಡಿದ್ರೇನೆ ಮಜಾ. ಸುಖ ಎಲ್ಲಾ ದುಡ್ಡಿನಲ್ಲೇ ಬಚ್ಚಿಟ್ಟುಕೊಂಡಿದೆ. ಸಾಲಮಾಡಿಯಾದ್ರೂ ತುಪ್ಪ ತಿನ್ಬೇಕು.

ಒಂದು ಕಾಲಕ್ಕೆ ಆ ಹಳ್ಳಿಯಿಂದಾ ಟೌನಿಗೆ ಹತ್ತುಮೈಲು ದೂರ. ಆದ್ರೆ ಈ ಬಸ್ಸು ಬಂದ ಮ್ಯಾಲೆ ಅದೇ ಹಳ್ಳಿಯಿಂದ ಟೌನಿಗೆ ಈಗ ಅರ್ಧ ತಾಸು ದೂರ ಅಷ್ಟೇ. ದೂರ ಈಗ ಸಮಯದ ಲೆಕ್ಕಕ್ಕೆ ಬಂದು ನಿಂತಿದೆ. ಕಾಲವೇ ಈಗ ಒಂದು ಹುಚ್ಚು ವೇಗ ಪಡೆದುಕೊಂಡಿದೆ. ದುಡ್ಡು ಮನುಷ್ಯನ ಅಳೀತಿದೆ, ಆಳ್ತಿದೆ.

ಇದರಾಗ ಯಾರದೂ ತಪ್ಪಿಲ್ಲ. ಮ್ಯಾಟ್ನಿ ನೋಡ್ರೀ ಅಂತ ಟಾಕೀಸ್ ನಮ್ಮನ್ನ ಕೇಳಂಗಿಲ್ಲ. ಮಟ್ಕಾ ಆಡಬರ್ರೀ ಅಂತ ಯಾರೂ ಬೇಡಿಕೊಳ್ಳೊದಿಲ್ಲ. ಬ್ರಾಂದಿ ಕುಡಿಬರ್ರೀ ಅಂತ ಯಾರೂ ನಮ್ಮನ್ನ ಎದೀಮ್ಯಾಲೆ ಕುಂತು ಕರಿಯಂಗಿಲ್ಲ. ಪ್ರಜಾತಂತ್ರದಾಗ ಯಾರನ್ನೂ ಯಾವುದಕ್ಕೂ ಜುಲುಮೀ ಮಾಡಂಗಿಲ್ಲ. ಕೆಟ್ಟ ವಿಷ ನಿದಾನಕ್ಕೆ ಅದೇ ರೂಢಿಯಾಗ್ತದೆ ಅಷ್ಟೆ.
“ಲಕ್ಷ್ಮವ್ವಾ, ಬೆಳ್ ಬೆಳಿಗ್ಗೆ ಗಂಟ್ಲಾಗೆ ಕಾಫೀ ಬೀಳ್ಳಿಲ್ಲಾಂದ್ರೆ ತಲಿನೋವು ಶುರು ಆಗ್ತದೇ”
“ವಾರಕ್ಕೊಂದು ಸಿನಿಮಾ ನೋಡಲಿಲ್ಲಾ ಅಂದ್ರೆ ಹುಚ್ಚು ಹಿಡ್ದಂಗಿರ್ತದೆ ನೋಡು”
“ಎರಡು ಮೂರು ದಿನಕ್ಕೆ ಒಂದು ಸರ್ತಿನಾರ ಎಣ್ಣೆ ಹೊಡೆದು, ಬಿರ್ಯಾನಿ ತಿನ್ಲಿಲ್ಲ ಅಂದ್ರೆ ಇನ್ನೇನು ಬದುಕು, ಥೂ”
“ಸಪ್ಪಗಿರೋ ಜೀವನದೊಳಗ ಮಟ್ಕಾ ಆಡಿದ್ರೆ ನಸೀಬು ಬದಲಾದ್ರೂ ಆಗಬೋದು ನೋಡ್ರಪ್ಪಾ. ಮತ್ತ ಇನ್ಯಾಕ ಬ್ಯಾರೆ ಯೋಚನೆ”
ಹತ್ತು… ಹತ್ತು… ಬಸ್ಸು ಹತ್ತು… ರೈಟ್… ರೈಟ್…! ಅಲ್ಲೇ ಎಲ್ಲಾರ ಸಾಲ ಮಾಡಿದ್ರೆ ಆಯ್ತು.
“ಪುಲ್ಲಣ್ಣ ನಮ್ಮ ತೋಟಕ್ಕ ನೀರು ಕಟ್ಟಕ್ಕ ಬಂದಿಲ್ಲ ಇವತ್ತು ಎಲ್ಲಿ?”
“ಬಸ್ಸಿನಾಗೆ ಇದೇ ಈಗ ಹೋದ…”
“ತಿಮ್ಮಣ್ಣ ಹೊಲದಾಗ ಕಳೆ ತೆಗೆಯೊಕ್ಕ ಇವತ್ತು ಬರ್ತೀನಂದಿದ್ದ… ಎಲ್ಲಿ?”
“ಅಗೋ… ಆ ಬಸ್ಸಿನಾಗ ಕುಂತು ಟೌನು ಕಡೀಗೋದ…”
ಮೊದಲಿನಂಗೆ ಕೂಲಿಗೆ ಆಳು ಸಿಗವಲ್ರು. ಒಕ್ಕಲುತನ ಅಂದ್ರೆ ಮುಗೀಲಾರದ ಕಷ್ಟದ ಬದುಕೇ.

ಬಂದಿದ್ದ ಬಸ್ಸಿನ್ಯಾಗಿಂದ ಇಳಿದವರು ಭಾಳ ಮಂದಿ ರಾತ್ರಿ ಟೌನ್ ನಾಗೆ ಉಳಕೊಂಡು, ಇಗೋ ಈವಾಗ ಊರಿಗೆ ವಾಪಾಸ್ ಬರ್ತಿರೋವ್ರೆ. ಅವ್ರೇನು ಹೆಚ್ಚು ಮಂದಿ ಇಲ್ಲ. ಆದ್ರೆ ಅವರನ್ನ ತಳ್ಳಿಕೊಂಡು ಬಸ್ಸಿನೊಳಗೆ ಹತ್ತೋಮಂದಿ ಮಾತ್ರ ಎರಡು ಬಸ್ಸಿಗೆ ಆಗೋವಷ್ಟು ಇದ್ರು.

“ಇಳಿಯೋರಿಗೆ ಜಾಗ ಬಿಡ್ರೋಯಪ್ಪಾ..” ಅಂತ ಒಂದುಕಡೆ ಚಿಲ್ರೆ ಎಣಿಸಿಕೂಡ್ತಾ ಕಂಡಕ್ಟರ್ ಜೋರಾಗಿ ಕೂಗತಲೇ ಇದ್ದ. ಕೇಳೋರ್ಯಾರು? ಇನ್ನೊಂದು ಕಡಿ ಡ್ರೈವರ್ ಹೊಯ್ಕೊಂತಿದ್ರೂ ಕೆಲ ವೀರಾಧಿವೀರರು ಪಂಚೆ ಎತ್ತಿ ಕಟ್ಟಿ ಡ್ರೈವರ್ ಕಡಿ ಬಾಗಿಲಿನಿಂದ ಬಸ್ಸಿನೊಳಕ್ಕೆ ಕುರಿಗಳು ನುಗ್ಗಿದಂಗೆ ನುಗ್ಗುತಿದ್ರು. ಕೆಲವು ಬೆರಿಕೆ ಮಂದಿ ಬಸ್ಸಿನ ಬಗಲಾಗ ಜಿಗಿದುಹತ್ತಿ ಕಿಟಕಿಯಿಂದ ಬಸ್ಸಿನೊಳಗೆ ಸೀಟಿಗೆ ಟವಲು ಹಾಕಿ ಸೀಟು ಕಾಯ್ದಿರಿಸುತಿದ್ರು.
“ಲೇ ತಳ್ಳ್ಬ್ಯಾಡ್ರೋ, ಸಣ್ಣ ಹುಡುಗೀ.. ಉಸುರಾಡವಲ್ದು”
“ಏಯ್, ಯಪ್ಪೋ..! ಮುದ್ಯಾಕಿ ಅಂತ ಕೂಡಾ ನೋಡವಲ್ರು.. ತುಳಿತೀರಲ್ಲೋ”
“ಈ ಗಂಡಸ್ರಿಗೆ ಕಣ್ಣೇ ಕಾಣಂಗಿಲ್ರಪ್ಪೋ”

ಆದ್ರೆ ಅಲ್ಲಿ ಯಾರೂ ಮಾತೂ ಕೇಳಿಸಿಕೊಳ್ತಿಲ್ಲ. ಟೌನ್ ಎಂಬ ಮಾಯಾವಿಯ ಸೆಳೆತಕ್ಕೆ ಸಿಕ್ಕಾಕೊಳ್ಳೋದಕ್ಕೆ ಹುಚ್ಚಿಗೆ ಬಿದ್ದವರಂಗೆ ನುಗ್ಗುತ್ತಿದ್ರು. ಹೆಂಗಸರು, ಮಕ್ಕಳು, ವಯಸ್ಸಾದವರನ್ನ ಕಾಳಜಿಯಿಂದ, ಗೌರವದಿಂದ ನಡೆಸಿಕೊಳ್ಳಬೇಕು ಅಂತ ಯುದ್ಧದ ಸಮಯದಲ್ಲೂ ಪಾಲಿಸುವ ಸರಳವಾದ ಸೂತ್ರವನ್ನೂ ಮೀರಿದ, ಕಾಡಿನ ಮೃಗದ ಸ್ವಭಾವ, ಗುಂಪುಗಳ ಕ್ರೌರ್ಯ, ಆ ಹಳ್ಳಿಯ ಜನರಲ್ಲಿ ಸೇರಿಕೊಂಡಿದ್ದು, ಈ ಬಸ್ಸು ಹಳ್ಳಿಗೆ ಪ್ರವೇಶ ಮಾಡಿದಂದಿನಿಂದಲೇ.

ಮಲ್ಲಯ್ಯ ಹ್ಯಾಗೋ ಬಸ್ಸು ಹತ್ತಿ ನಿಲ್ಲೋಜಾಗ ಮಾಡಿಕೊಂಡ. ಶಿವಾ ಅಂತ ಬೆಳಿಗ್ಗೆ ಎದ್ದ ಕೂಡಲೇ ಹೆಂಡ್ತಿ ಕಪಾಳಕ್ಕೆ ಒಂದು ಬಾರಿಸಿ, ಬೆನ್ನು ಬಗ್ಗಿಸಿ ನಾಲ್ಕು ಏಟು ಕೊಟ್ಟಿದ್ದ. ಅದರ ಚುರುಕು ಇನ್ನೂ ಕೈಗೆ ಚುಚ್ಚಿದಂಗೆ ಅನಿಸ್ತಿತ್ತು. ಹೆಂಡ್ತಿನ ನೆನೆದ್ರೆ ಸಿಟ್ಟು ಏರ್ತಿತ್ತು. ಅಪ್ಪನ್ನ ನೆನೆದ್ರೂ ಅಷ್ಟೇ.. “ಇಷ್ಟು ವರ್ಷ ರಾಜನಂಗೆ ಬದುಕಿ ಈಗ..” ಸಿಟ್ಟು ಸರ್ರಂತ ನೆತ್ತಿಗೇರ್ತಿತ್ತು.

ಬೆಳ್ ಬೆಳಿಗ್ಗೆನೇ ಮನ್ಯಾಗ ನಡೆದದ್ದು ಆತನ ತಲ್ಯಾಗ ಇನ್ನೂ ಕೊರೀತಿತ್ತು. ದಿನಾ ನಸುಕಿಲೆ ಐದುಗಂಟೆಗೆಲ್ಲಾ ಏಳೋ ಮಲ್ಲಯ್ಯ ಇವತ್ತು ಏಳಾದ್ರೂ ಮುಸುಕುಹೊದ್ದುಕೊಂಡು ಬಿದ್ದುಕೊಂಡಿದ್ದ. ಎಚ್ಚರಾಗಿತ್ತು. ಆದರೇ, ಮುಸುಕು ತೆಗೆದು ಹೊರಗಿನ ಬದುಕಿಗೆ ಕಾಲಿಡಬೇಕನಿಸವಲ್ದಾಗಿತ್ತು. ರಾತ್ರಿ ಮಳ್ಕೊಳ್ಳೋ ಮುಂಚೆ ಅಪ್ಪ ಅಂದಿದ್ದ ಮಾತು ಮುಳ್ಳೂ ಚುಚ್ಚಿದಂಗಿತ್ತು.

“ನಾಳೆ ಚಂದ್ರಣ್ಣನ ತೋಟಕ್ಕೆ ಕೂಲಿ ಕೆಲಸಕ್ಕೆ ನೀನೂ ಬರ್ತೀಯಂತೇಳೀನಿ” ಅಂದಿದ್ದ ಅಪ್ಪ.
“ನಾನಾ? ಕೂಲಿಕೆಲಸಕ್ಕಾ? ಇಷ್ಟು ವರ್ಷ ರಾಜನಂಗೆ ಬದುಕಿ ಈಗ..?” ರೋಷ ಉಕ್ಕಿ, ಮಲ್ಲಯ್ಯ ದವಡೆ ಬಿಗಿ ಹಿಡಿದು ಕೋಪ ತಡಕೊಂಡಿದ್ದ. ಅಲ್ಲೀವರೆಗೆ ಒಬ್ಬರ ಕೈಕೆಳಗೆ ದುಡಿದು ಗೊತ್ತದ್ದಿಲ್ಲ. ತಮ್ಮ ಹತ್ತು ಎಕರೆ ಹೊಲದಾಗ ಬೇಸಾಯ ಮಾಡಿಕೊಂಡು ಆರಾಮಾಗೆ ಇದ್ದ. ಹೊರಗಿಂದ ಒಂದಿಬ್ಬರು ಹೆಚ್ಚಿಗೆ ಬಂದ್ರೂ ಕರೆದು ಊಟಕ್ಕೆ ಹಾಕೋವಷ್ಟು ಶಕ್ತಿ ಇತ್ತು. ಆದರೆ ಈಗ?

ಬರ್ತಾ ಬರ್ತಾ ಮಳೆ ಕಮ್ಮಿ ಆಯ್ತು. ಈಗಂತೂ ಮಳೆ ಇಲ್ಲ, ಬೆಳೆ ಇಲ್ಲ ಇನ್ನ ಕೂಲಿ ಮಾಡಿ ದುಡಿಲಿಲ್ಲ ಅಂದ್ರೆ ಮನೆ ನಡೆಯಲ್ಲ ಅನ್ನೋ ಪರಿಸ್ಥಿತಿ. ಮೊದ್ಲಿಗೆ ಮಲ್ಲಯ್ಯನ ವಯಸ್ಸಾದ ತಾಯಿ ಕೂಲಿಗೋಗೋಕೆ ಶುರು ಮಾಡಿದ್ಲು. ಒಂದುವಾರ ಕಳೆದು ಸೊಸೀನೂ ಜೊತೆಗೆ ಕರ್ಕೊಂಡು ಹೋಗಕತ್ತಿದ್ಲು. ಈಗಂತೂ ಕೈಲಾಗವಲ್ದು ಅಂತೇಳಿ ಮನ್ಯಾಗ ಇದ್ದುಕೊಂಡು ಆಳುಗಳನ್ನ ಸಜ್ಜುಮಾಡಿ ಕಳಿಸಿಕೊಡ್ತಾಳೆ. ಒಂದು ತಿಂಗಳಿಂದಾ ಮಲ್ಲಯ್ಯನ ವಯಸ್ಸಾದ ತಂದೆ ಸಹಾ ಕೂಲಿ ಕೆಲಸಕ್ಕೊಗೋಕೆ ಶುರು ಮಾಡಿದ್ದ. ಈಗ ಮಗನ್ನೂ ಕರೆಯಕ್ಕೆ ಶುರು ಮಾಡಿದ್ದ.

“ನಿನಗೆ ಮದುವೆಯಾಗಿ ಮೂರು ಮಕ್ಕಳು ಆಗ್ಯಾವೆ. ಮಳೆ ಇಲ್ಲ, ಬೆಳೆ ಇಲ್ಲ. ಕೂಲಿಗೋಗಿ ದುಡಿಲಿಲ್ಲಾ ಅಂದ್ರೆ ಮನೆ ನಡೆಯಂಗಿಲ್ಲ. ಇಂಗಿದ್ದಾಗ ನಾನು ಕೂಲಿಕೆಲಸ ಮಾಡಂಗಿಲ್ಲ ಅಂತ ಸೆಟಗೊಂಡು ಕುಂತ್ರೆ, ಹೊಟ್ಟಿಗೆ ಹಿಟ್ಟೆಂಗ ಹುಟ್ತದೆ? ಇನ್ನಾ ಯಾವಾಗ ನಿನಗೆ ಸಂಸಾರದ ಜವಾಬ್ದಾರಿ ತಿಳಿಯೋದು?” ಅಂತ ಹೇಳ್ತಾನೆ ಇದ್ದ, ಮುದ್ಯಾತ. ಆದ್ರೂ ಮಲ್ಲಯ್ಯ ತಪ್ಪಿಸಿಕೊಂಡು ಅಡ್ಯಾಡಿಕೊಂಡಿದ್ದ.

“ಏನಣ್ಣಾ, ಅತ್ತಿಗೆ ಕೂಲಿಗೋಗ್ತಿದ್ದಂಗಿದೆ?” ಅಂತ ಯಾರಾನ್ನಾ ಕೇಳಿದ್ರೆ ಭಾಳ ಕಸಿವಿಸಿಪಡ್ತಿದ್ದ. ಆದ್ರೂ ಅದೇನೂ ತೋರಿಸಿಕೊಳ್ದಂಗೆ “ಅದೊಂದು ಹುಚ್ಚು ಖೋಡಿ, ಹೇಳಿದ್ರೂ ಕೇಳಂಗಿಲ್ಲ. ಮನ್ಯಾಗ ಸುಮ್ನೆ ಕುಂತು ಏನು ಮಾಡ್ಲಿ. ದುಡಿಯಕ್ಕೋದ್ರೆ ಹೊತ್ತೋಗ್ತದೆ ಅಂತಾಳೆ” ಅಂತಾನೆ.

ಈ ವಯಸ್ಸಿನ್ಯಾಗೆ ಯಾಕೆ ನಿಮ್ಮಪ್ಪ ಕೂಲಿಗೋಗಕತ್ಯಾನೆ? ಅಂತ ಯಾರಾರ ಕೇಳಿದ್ರೆ, “ಆತೂಬ್ಬಾತ ನಮ್ಮಾತೇ ಕೇಳಂಗಿಲ್ಲಪ್ಪೋ. ನಿನಗ್ಯಾಕ ಮನ್ಯಾಗ ಉಂಡು ತಣ್ಣಗ ಕುಂದ್ರು ಅಂದ್ರೆ ಕೇಳಂಗಿಲ್ಲ ನೋಡು” ಅಂತ ಒಣ ಜಂಭ ತೋರಿಸಿಕೊಳ್ತಾ ತಪ್ಪಿಸಿಕೊಳ್ತಾನೆ.

“ಏನವ್ವಾ.. ಅಕ್ಕಮ್ಮ ಇವತ್ತು ನಿನಗಂಡ ಹಾಸಿಗೆಬಿಟ್ಟು ಏಳಂಗಿಲ್ಲೇನು?” ಅಂತ ಜೋರಾಗಿ ಎರಡು-ಮೂರು ಸಲ ಅಂದಿದ್ದು ಕಿವಿಗೆ ಬಿತ್ತು. ಇನ್ನ ತಪ್ಪಂಗಿಲ್ಲ ಅಂತ ಎದ್ದು ಬಯಲುಕಡೀಗೆ ಹೋಗಿ ಬಂದ. ಮುಖ ತೊಳೆದು ಮುದ್ದೆ ಉಂಡ.

ಅಷ್ಟೊತ್ತಿಗಾಗ್ಲೇ ಮುದ್ದೆ ಉಂಡು ಎಲಿಯಡಿಕೆ ಆಕ್ಯಂಡು ಹೊರಗೆ ಕಟ್ಟಿಮ್ಯಾಲೆ ಕುಂತಿದ್ದ ಮುದ್ಯಾತ. “ಇವತ್ತು ನನ್ನ ಕೂಲಿಗೆ ಕಳ್ಸೋವರೆಗೋ ಬಿಡಂಗ ಕಾಣವಲ್ದು. ಇಷ್ಟು ವರ್ಷ ರಾಜನಂಗೆ ಬದುಕಿ ಈಗ…” ಅಂತ ಕೈ ಕೈ ಹಿಸುಕಿದ. ಹೆಂಡ್ತಿ ಹತ್ರಕ್ಕೊಗಿ “ಏನಾರ ರೊಕ್ಕದಾವಾ?” ಅಂತ ಕೇಳಿದ. “ಎದಕ್ಕ” ಕೇಳಿದ್ಲು. “ಇನ್ನೂ ಎಷ್ಟುದಿನ ಹಿಂಗ ಮಾತು ಮಾತಿಗೂ ಗಂಡನಿಗೆ ದುಡ್ಡು ಹೊಂದಿಸಿಕೊಡೋದು?”

“ನಿಂಗ್ಯಾಕ ಅದರ ಉಸಾಬರಿ? ಬಾಯಿ ಮುಚ್ಕೊಂಡು ಕೊಡೋದು ಕಲಿ”
ಅಕ್ಕಮ್ಮ ಸುಮ್ನೆ ಹೋಗಿ ಟ್ರಂಕಿನಾಗ ಇದ್ದಿದ್ದ ಹತ್ತು ರೂಪಾಯಿ ತಂದು ಆತನ ಕೈಗಿಟ್ಟಳು.
“ಇಷ್ಟೇನಾ? ಹೋದವಾರ ಕೂಲಿ ದುಡ್ಡೇನು ಮಾಡಿದಿ?”
“ಮಾವ ಕೈಗೆ ಕೊಟ್ಟೆ”
ಅಕ್ಕಮ್ಮನ ಕೆನ್ನೆಗೆ ಫಟಾರಂತ ಏಟು ಬಿತ್ತು.

“ಹೆಂಡ್ರು ದುಡಿದ ದುಡ್ಡು ಕಸ್ಕೊಂಡು ಹೆಂಡ್ತಿ ಮ್ಯಾಲೆ ಕೈ ಎತ್ತೋದಲ್ಲ ಗಂಡಸ್ತನ. ಬಾ, ನನ್ಜೋಡಿ ಕೂಲಿ ಕೆಲಸಕ್ಕೆ. ದುಡಿದು ಈ ಮನಿ ನಡೆಸು. ಆಗ ಕೈ ಎತ್ತು. ಒಪ್ಕೊಂತೀನಿ. ಅದು ಬಿಟ್ಟು…” ಅವಳ ಮಾತು ಮುಗಿದಿರಲಿಲ್ಲ. ಅವಳು ಕೂಲಿ ಕೆಲಸಕ್ಕೆ ಹೋಗು ಅಂದಿದ್ದಕ್ಕೇ, ರಪ್ಪಂತ ಅವಳ ಕೂದಲು ಹಿಡಿದು ಬಗ್ಗಿಸಿ “ನನಗೆ ತಿರುಗಿ ಹೇಳೋವಷ್ಟು ದೊಡ್ಡೋಳು ಆಗಿಬಿಟ್ಯಾ ಸೂಳೆ..” ಅಂದು ಬೆನ್ನಮೇಲೆ ದಬದಬಾಂತ ಗುದ್ದಿದ.

ಒಳಗಡೆ ಮಗನ ಬೈಗುಳ, ಸೊಸಿ ಅಳು ಕಿವಿಗೆ ಬಿದ್ದು, ಮುದ್ಯಾತ ನಿದಾನಕ್ಕ ಎದ್ದ. ಅಷ್ಟರಾಗ ಅಂಗಿ ಆಕ್ಯಂತಾ ಹೊರಗ ಬಂದ ಮಗನ ನೋಡಿ “ಎಲ್ಲಿಗೊಂಟಿಯಪ್ಪಾ?” ಅಂತ ಮೆಲ್ಲಗೆ ಕೇಳಿದ. ಆ ವಯಸ್ಸಾದ ತಂದೆಯ ದನಿಯಲ್ಲಿ “ನೀನೆಲ್ಲಿಗೆ ಹೊಂಟಿಯೋ ನನಗೊತ್ತು ಬಿಡೋ” ಅನ್ನುವ ವ್ಯಂಗ್ಯವಿತ್ತು. ತಂದೆಯ ಪ್ರಶ್ನೆಗೆ ಮಲ್ಲಯ್ಯ ಮುಖ ತಿರುಗಿಸಿಕೊಂಡು “ಟೌನಿಗೆ” ಅಂದ.

“ಅಲ್ಲ, ಆ ಸುಡುಗಾಡು ಟೌನಿಗೋಗಿಲ್ಲಂದ್ರೆ ಸತ್ತೋಗಿಬಿಡ್ತೀಯಾ? ಕೆಲಸಕ್ಕೋಗಿ ದುಡೀ ಅಂತೇಳಿದ್ರೆ ಒಗ್ಗಂಗಿಲ್ಲ. ಹೋಗ್ಲಿ ಮನ್ಯಾಗಾರಾ ಸುಮ್ನೆ ಕುಂದ್ರಪ್ಪಾ ಅಂದೆರ, ಅದೂ ಇಲ್ಲ. ಮನ್ಯಾಗ ಹೆಣ್ಮಕ್ಕಳು, ಮುದುಕರು ಕೂಲಿಗೋಗಿ ಸಂಸಾರ ನಡೆಸಿದ್ರೆ, ನೀನು ಟೌನಿಗೋಗೋದು, ತಿಂದು, ಕುಡುದು ಸಾಲ ಮಾಡಿಕೊಂಡು ಬರೋದು. ಆ ಸಾಲಗಾರರು ಮನಿಹತ್ರ ಬಂದು ನಮಗೆ ಕೇಳೋದು. ನಾವೇನು ಸಂಸಾರ ನಡೆಸೋಣ ಇಲ್ಲಾ ನೀನು ಮಾಡೋ ಸಾಲ ತೀರಸ್ಕೊಂತಿರೋಣಾ, ನೀನೇ ಹೇಳು”
“ಸಾಲಾನಾ? ಎಲ್ಲಿ, ನಾನ್ಯಾರತ್ರ ಸಾಲ ಮಾಡಿದ್ದೆ, ಹೇಳ್ಸು ನೋಡೋಣ” ಅಂದ ಮಲ್ಲಯ್ಯ.

“ಎಷ್ಟುಮಂದಿ ಹತ್ರ ಹೇಳಿಸ್ಲಿ? ಆ ಹೊನ್ನೂರುಸ್ವಾಮಿಗೆ ನೀನು ಮುನ್ನೂರು ರೂಪಾಯಿ ಬಾಕಿ ಇಲ್ಲೇನು? ದೊಡ್ಡಕಟ್ಟಿ ಶೀನಣ್ಣಗೆ ಐನೂರು ಕೊಡಬೇಕಿಲ್ಲೇನು? ಇನ್ನಾ ಎಷ್ಟು ಮಂದಿ ಕೈಲಿ ಹೇಳಿಸ್ಲೇಳು?
“ಸಂಸಾರ ಅಂದಮ್ಯಾಲೆ ಸಾಲಸೂಲ ಇರ್ತಾವೆ”

“ಏನು? ಮತ್ತೆ ಹೇಳು. ಮನಿ ಸಲುವಾಗಿ ಮಾಡಿಯಾ? ಎಂದಾರಾ ಮನಿಗೆ ಅಕ್ಕಿ ತಂದೀಯಾ, ಬ್ಯಾಳಿ ತಂದೀಯಾ, ಉಪ್ಪು ಉಂಚೆಣ್ಣು ತಂದಾಕಿಯಾ? ಮನೀಗಂತೇಳಿ ಒಂದತ್ತು ರೂಪಾಯಿ ಎದಕ್ಕನ್ನಾ ಕೊಟ್ಟೀಯಾ? ಎದಿಮ್ಯಾಲೆ ಕೈಯಿಟ್ಟು ಹೇಳು. ಬಸ್ಸುಹತ್ತಿ ಆ ಹಾಳು ಟೌನಿಗೋಗೋದು, ಜಲ್ಸಾ ಮಾಡೋದು, ಊರು ತುಂಬಾ ಸಾಲ ಮಾಡೋದು. ಕೂಲಿ ಕೆಲಸಕ್ಕೆ ಹೋಗಂದ್ರೆ ಮಾತ್ರ ಭಯಂಕರ ರೋಷ ಈತಗೆ” ಜೋರಾಗಿ ಅಂದ.
ಮಲ್ಲಯ್ಯನಿಗೆ ಇನ್ನೂ ಸಿಟ್ಟು ಬಂತು. “ಇಷ್ಟು ವರ್ಷ ರಾಜನಂಗಿದ್ದು…”

ಹಿಂಗನುಕೊಳ್ಳೊದರ ಹಿಂದೆ ಮಲ್ಲಯ್ಯನಿಗೆ ಒಂದು ಕಾರಣ ಇತ್ತು. ಇತ್ತಿತ್ಲಾಗೆ ಮಲ್ಲಯ್ಯ ಊರಿನ ರಾಜಕೀಯದೊಳಗೆ ಕೈಯಾಡ್ಸಕ್ಕೆ ಶುರು ಮಾಡಿದ್ದ. ಆ ಹಳ್ಳಿಯ ಪಂಚಾಯತಿ ಅಧ್ಯಕ್ಷರ ಜೊತೆ ಸೈ ಅಂದ್ರೆ ಸೈ ಅನ್ನೋಕೆ ತಯಾರಾಗ್ತಿದ್ದ. ಮಲ್ಲಯ್ಯನ ಕುಲಬಾಂಧವರ ಒಂದು ಗುಂಪು ಸಾಥ್ ಕೊಡಕ್ಕೆ ತಯಾರಾಗಿದ್ರು.

ಈಗಂತೂ ಮಳೆ ಇಲ್ಲ, ಬೆಳೆ ಇಲ್ಲ ಇನ್ನ ಕೂಲಿ ಮಾಡಿ ದುಡಿಲಿಲ್ಲ ಅಂದ್ರೆ ಮನೆ ನಡೆಯಲ್ಲ ಅನ್ನೋ ಪರಿಸ್ಥಿತಿ. ಮೊದ್ಲಿಗೆ ಮಲ್ಲಯ್ಯನ ವಯಸ್ಸಾದ ತಾಯಿ ಕೂಲಿಗೋಗೋಕೆ ಶುರು ಮಾಡಿದ್ಲು. ಒಂದುವಾರ ಕಳೆದು ಸೊಸೀನೂ ಜೊತೆಗೆ ಕರ್ಕೊಂಡು ಹೋಗಕತ್ತಿದ್ಲು. ಈಗಂತೂ ಕೈಲಾಗವಲ್ದು ಅಂತೇಳಿ ಮನ್ಯಾಗ ಇದ್ದುಕೊಂಡು ಆಳುಗಳನ್ನ ಸಜ್ಜುಮಾಡಿ ಕಳಿಸಿಕೊಡ್ತಾಳೆ.

ಆ ಹಳ್ಯಾಗೆ ಮಲ್ಲಯ್ಯನ ಕುಲದವರಿಗೂ, ಪಂಚಾಯಿತೀ ಅಧ್ಯಕ್ಷರ ಕುಲದವರಿಗೂ ಜಗಳ ಇಪ್ಪತ್ತು ವರ್ಷಕ್ಕೂ ಹಳೆಯ ಕಾಲದ್ದು. ಆಗ ಬಹುಶಃ ಮಲ್ಲಯ್ಯನಿಗೆ ಹತ್ತು ವರ್ಷ ವಯಸ್ಸಾಗಿರಬೇಕು. ಮಲ್ಲಯ್ಯನ ಕುಲದ ಹುಡುಗನೊಬ್ಬ ಅಧ್ಯಕ್ಷರ ಕುಲದವರ ಮನೆ ನಾಯಿಗೆ ಕಲ್ಲು ಹೊಡೆದ ಅಂತ ಶುರುವಾಗಿದ್ದ ಜಗಳ ಹಂತ ಹಂತವಾಗಿ ಬೆಳೆದು ಇವತ್ತಿಗೂ ಹೊಗೆಯಾಡ್ತಾನೇ ಇತ್ತು. ಊರಾಗೆ ಎಲ್ಲಾರ ಜೋಡಿ ಹೊಂದಿಕೊಂಡೇ ಇರೋ ಅಧ್ಯಕ್ಷ ವೆಂಕಟೇಶಪ್ಪ ಸಹ ಟೈಂ ಬಂದಾಗ ತಮ್ಮವರ ಕಡಿಗೇ ಸೇರಿಕೊಂಡಿದ್ದ. ಸರ್ಕಾರದ ಸವಲತ್ತು, ಸಬ್ಸಿಡಿಗಳೂ ಯಾವೂ ಮಲ್ಲಯ್ಯನ ಕುಲದವರಿಗೆ ಸಿಗದಂತೆ ಅಡ್ಡ ಹಾಕಿಸ್ತಿದ್ದ. ಇತ್ತಿತ್ಲಾಗೆ ರಸ್ತೆ ಕಂಟ್ರಾಕ್ಟು, ಪಂಚಾಯತಿ ಕಟ್ಟಡ ಕಂಟ್ರಾಕ್ಟು ಮುಂತಾದ ಕಾಮಗಾರಿಗಳಿಗೆ ಪ್ರಯತ್ನ ಮಾಡಿ ವೆಂಕಟೇಶಪ್ಪ ನ ಜೋಡಿ ಸೆಣಸಲಾರದೆ ಮಲ್ಲಯ್ಯ ಹಿಂದಕ್ಕೆ ಸರೀಬೇಕಾಯ್ತು.

“ಇವರು ನಮ್ಮನ್ನ ಬದುಕಕ್ಕೆ, ಮ್ಯಾಲೆ ಬರಕ್ಕೆ ಬಿಡೋದಿಲ್ಲ. ಸರ್ಕಾರದ ಹಣ ಎಲ್ಲಾ ಅವ್ರಕಡೆಯವ್ರಿಗೆ ಬೇಕು. ಎಲ್ಲಾ ತಾವೇ ಉಣಬೇಕು. ಬ್ಯಾರೆ ಮಂದಿ ನೋಡಿ ಸುಮ್ನಿರಬೇಕಾ” ಅಂತ ಕೈ ಕೈ ಹಿಸುಕಿಕೊಳ್ತಿದ್ದ. ಆದರೆ ಅದಕ್ಕೆ ಏನು ಮಾಡಬೇಕೋ ಮಲ್ಲಯ್ಯನಿಗೆ ಗೊತ್ತಿದ್ದಿಲ್ಲ. ತಮ್ಮಕಡೆ ಜನರನ್ನ ಚುನಾವಣೆಗೆ ಅಲ್ಲದೆ ಬ್ಯಾರೇ ಟೈಂನಾಗ ಹ್ಯಾಗೆ ಉಪಯೋಗ ಮಾಡಿಕೊಳ್ಳೋದು ಗೊತ್ತಾಗ್ತಿದ್ದಿಲ್ಲ. ಇದರಿಂದಾ ಆತನಲ್ಲಿ ಬರೀ ಕೋಪ, ಹತಾಶೆ ತುಂಬಿಕೊಳ್ತಿದ್ದವು. ಆದರೂ ಇನ್ನೊಂದು ಕಡೆ ತಮ್ಮವರು ಒಂದಷ್ಟು ಮಂದಿ ತನ್ನ ಹಿಂದಿದ್ದಾರೆ, ತಾನೂ ಒಂದು ಗುಂಪಿಗೆ ನಾಯಕ ಅನ್ನೋ ಯೋಚನೆ ಅವನಿಗೆ ಹೊಸ ಹುರುಪು ಒಂದು ತೆರನಾದ ಅಮಲು ಕೊಡ್ತಿತ್ತು.

ಪಂಚಾಯತಿ ಅಧ್ಯಕ್ಷರ ಮರ್ಜಿ ಹಿಡಿದುಕೊಂಡಿದ್ರಷ್ಟೇ ಆ ಊರಲ್ಲಿ ಆರಾಮಾಗಿ ಕೆಲಸ ಮಾಡಿಕೊಂಡಿರಬಹುದು ಅಂದುಕೊಳ್ಳೋ ಶಾಲೆಯ ಮೇಷ್ಟ್ರ ಬಗ್ಗೆ, ಅಂಗನವಾಡಿ ಟೀಚರ್ ಬಗ್ಗೆ ಮೇಲಿಂದ ಮೇಲೆ ದೂರಿನ ಮೂಗರ್ಜಿ ಬರೆದು ತನ್ನ ಇರುವುಕೆ, ಪ್ರಾಮುಖ್ಯತೆ, ಶಕ್ತಿ ತೋರಿಸೋ ಪ್ರಯತ್ನ ಮಾಡ್ತಿದ್ದ. ಆ ದೂರಿನ ಅರ್ಜಿಗಳ ಮೇಲೆ ಹೆಬ್ಬೆಟ್ಟು ಒತ್ತಕ್ಕೆ ಹ್ಯಾಗೂ ತನ್ನ ಹಿಂದಿನ ಗುಂಪು ತಯಾರಾಗೇ ಇತ್ತು. ಊರಿನ ರಾಜಕೀಯದಲ್ಲಿ ಹೀಗೆ ಮುಖಂಡನಾಗಿ ಬೆಳೀತಿರೋ ತಾನು ಕೂಲಿ ಕೆಲಸಕ್ಕೆ ಹೋಗಕ್ಕಾಗೊದಿಲ್ಲ ಅಂತ ಈ ಮುದುಕಪ್ಪನಿಗೆ ಹ್ಯಾಗೆ ಹೇಳೋದು. ಹೊರಗೊಂದು ಕಾಟ, ಮನ್ಯಾಗಿನ್ನೊಂದು ಕಾಟ ಛೆ! ಛೆ! ಅಂತ ಅಪ್ಪನ ಮ್ಯಾಲೆ ಬ್ಯಾಸರ ಮಾಡಿಕೊಂಡ. ಹೇಳಿದ್ರೂ ಕೂಳಿಗೆ ಗಿಟ್ಟಲಾರದ ಒಣರಾಜಕೀಯ ನಮಗ್ಯಾಕಪ್ಪಾ ಅಂತಾನೆ. ಮೈ ಮುರಿದು ದುಡಿಯೋದೊಂದೆ ಗೊತ್ತಿದ್ದ ಹಳೇ ಕಾಲದ ಮುದ್ಯಾತನಿಗೆ ಹ್ಯಾಗೆ ತಿಳೀಬೇಕು.

ಈ ಮುದ್ಯಾತ ಅಪ್ಪನಂತೂ ಓದು ಬರಹ ಇಲ್ದೋನು. ತಾನು..? ಏಳನೇ ಕ್ಲಾಸ್ ಓದಿದೋನು. ಓದು ಬರಹ ಗೊತ್ತಿರೋನು. ದೊಡ್ಡೋರ್ಹಂಗೆ ಟೌನಿಗೋಗಿ ಆಫೀಸು, ಕೋರ್ಟು, ಕಛೇರಿ ಸುತ್ತಾಡೋನು. ಅಂತಾದ್ದು ಕೂಲಿ ಕೆಲಸಕ್ಕೋಗೋದಂದ್ರೆ ತಲಿಕೆಡಂಗಿಲ್ಲೇನು? ಅಪ್ಪನಕಡೀಗೆ ದುರುಗಿಟ್ಟಿ ನೋಡಿ “ಅಪ್ಪ ಅಂತ ಇಷ್ಟು ದಿನ ಸುಮ್ನಿದ್ದೀನಿ. ಇನ್ನೊಂದು ಸಲ ಕೂಲಿಗೋಗಂದ್ರೆಗಿನಾ ಸರಿಗಿರಂಗಿಲ್ಲ ನೋಡು” ಅಂದು ಬಿರಬಿರ ಹೆಜ್ಜೆ ಇಟುಗೊಂಡು ಹೊರಕ್ಕೋದ. ಹೀಗೆ ದಡ ದಡಾಂತ ಸಿಟ್ಟಿಲೆ ಹೋಗ್ತಿದ್ದ ಮಗನ್ನ ನೋಡ್ತಾ ನಿಂತುಬಿಟ್ಟ ಮುದ್ಯಾತ.

ಗ್ರಾಮೀಣ ಸಂಪರ್ಕ ಅಂತ ಸರ್ಕಾರ ಪ್ರತೀ ಹಳ್ಳಿಗೆ ಬಸ್ಸು ಓಡಿಸಿದ್ದೇ ಬಂತು ದರಿದ್ರ. ಈ ಹಾಳು ಬಸ್ಸು ಬರೋಕಿಂತಾ ಮುಂಚೆ ಹಳ್ಳಿ ಎಷ್ಟು ಮುಗ್ದವಾಗಿ, ಶಾಂತಿಯಿಂದ ತಣ್ಣಗಿತ್ತು. ಈ ಬಸ್ಸೆಂಬೋ ದೈತ್ಯ ಕಾಲಿಟ್ಟ ಮ್ಯಾಲೆ ಒಳ್ಳೇದು, ಕೆಟ್ಟದು ಏನೇನೆಲ್ಲಾ ಬಂತೋ ನೋಡಿದ್ದಾಯಿತು. “ಥೂ..! ಈ ಜನಮಕ್ಕಿಷ್ಟು..” ಮಗ ಹೋದ ಕಡೇಗೆ ಉಗಿದ ಆ ತಂದೆ.

ಹಳ್ಳಿಗೆ ಬಸ್ಸು ಇಲ್ದಿದ್ದ ದಿನಗಳೇ ಎಷ್ಟು ಬೇಷಿದ್ದವು. ಟೌನಿನ ಯಾವಸೋಂಕು ಇಲ್ದಂಗ ಹಳ್ಳಿ ಒಂದು ಸ್ವಚ್ಚ ದ್ವೀಪವಾಗಿತ್ತು. ಊರಾಗ ದೊಡ್ಡೋರು ಹೇಳಿದ್ರೆ, ಮರುಮಾತಿಲ್ದಂಗೆ ಒಪ್ಕೊಂಡು ಮಾಡ್ತಿದ್ರು. ವೆಂಕಟನಾಯ್ಡು ಮನೆಯಲ್ಲಿ ಒಂದಿಷ್ಟು ಊಟಕೊಟ್ಟು, ಎಲೆ ಅಡಿಕೆ ಕೊಟ್ರೆ ಸಾಕು ಸಂಜೆಯಾಗೋಷ್ಟರಲ್ಲಿ ಕೋಟಿಯಂತಾ ದೊಡ್ಡ ಮನೆ ಪೂರ್ತಿ ಸುಣ್ಣ ಹೊದ್ದು ಮುಗುಸ್ತಿದ್ರು. ಆ ಕಾಲದಲ್ಲಿ ಮನುಷ್ಯರು ಹೊಟ್ಟೆ-ಬಟ್ಟೆ ಬಗ್ಗೆ ಮಾತ್ರ ಚಿಂತೆ ಮಾಡ್ತಿದ್ರು. ಹೊತ್ತು ಮುಳುಗಿ ಬುಡ್ಡಿ ದೀಪ ಹಚ್ಚೋ ಹೊತ್ತಿಗೆ ಹಾಡೋ ಕಥೆನೋ ಹೇಳ್ಕೊಂಡು ನಿದ್ದೆಗೆ ಜಾರಿಕೊಳ್ಳೋದು. ಅಬ್ಬಬ್ಬಾ ಅಂದ್ರೆ ವರ್ಷಕ್ಕೊಂದು ಸರ್ತಿ ಬಂಡಿಕಟ್ಟಿಕ್ಯಂಡು ಟೌನ್ ಗೋಗಿ ಲವಕುಶ ಇಲ್ಲಾ ಪಾಂಡವವನವಾಸ ಇಂಥಾ ಸಿನಿಮಾನೋಡಿ ಕೋಳಿಕೂಗೋಷ್ಟೊತ್ತಿಗೆ ಹಳ್ಳಿ ಸೇರಿಕೊಂತಿದ್ದರು. ಮುಂದಿನ ವರ್ಷದ ತನಕಾ ಅದೇ ಸುದ್ದಿ ಮಾತಾಡಿಕೊಂತಿದ್ರು. ಬಹುಶಃ, ಬಹಳ ಕಡಿಮೆ ಬೇಕು ಬೇಡಗಳಿಂದ ಬದುಕು ಸಾಗಿಸೋದು ಅನಾಗರೀಕತೆ ಅಂತಂದುಕೊಂಡ್ರೆ ಅವರು ಅನಾಗರೀಕರೇ. ಮತ್ತೊಂದುಕಡೆ ವೆಂಕಟೇಶಪ್ಪನ ಅಧಿಪತ್ಯವನ್ನು ಒಪ್ಪಿಕೊಂಡಿದ್ದೂ ಸಹಾ ಅಂದಿನ ಅವರ ನೆಮ್ಮದಿಗೆ ಕಾರಣವಾಗಿತ್ತಾ? ಯೋಚನೆ ಮಾಡಿದ್ರೆ ಹೌದು ಅನ್ನಿಸಬಹುದೇನೋ.

ಬಸ್ಸು ಹಳ್ಳಿಯಿಂದ ಹೊರಡಕ್ಕೆ ತಯಾರಾಯಿತು. ಮಲ್ಲಯ್ಯ ಬಸ್ಸಿನೊಳಗಡೆ ಕಣ್ಣಾಡಿಸಿದ. ಬಸ್ಸಿನ ಹಿಂಭಾಗದಲ್ಲಿ ನಿಂತಿದ್ದ ನಾಲ್ವರು ಗೆಳೆಯರು ನೋಡಿ ನಕ್ಕರು. ಬಸ್ಸಿನೊಳಗೆ ತರಹೇವಾರಿ ಜನ ತುಂಬಿದ್ದರು. ಶಾಲೆಗೋಗೊ ಮಕ್ಕಳಿದ್ದರು, ಕಾಲೇಜಿಗೋಗೋ ಹುಡುಗರು, ಹುಡುಗಿಯರಿದ್ದರು. ಹಳ್ಳಿಯಲ್ಲಿ ಬೆಳೆದ ತರಕಾರಿ ಮುಂತಾದವು ಬುಟ್ಟಿಗಳಾಗ ತುಂಬಿಸಿ ತಗೊಂಡುಹೋಗ್ತಿರೋ ಸಣ್ಣ ವ್ಯಾಪಾರಿಗಳಿದ್ದರು. ಎಮ್ಮಿಹಾಲು ಟೌನ್ ನಲ್ಲಿ ಹೋಟೇಲ್ಗಳಿಗೆ ಮಾರಕ್ಕೆ ಹೊರಟ ಮಂದಿ ಇದ್ದರು. ಹಿಂಗ ಬಸ್ಸಿನ ಅನುಕೂಲ ಇದ್ದು, ವ್ಯಾಪಾರ ವಹಿವಾಟು ನಡೀತಿರೋದರಿಂದಾ ಹಳ್ಯಾಗ ಬದುಕು ನಡೀತಿತ್ತು. ಇಲ್ಲಂದ್ರೆ ಇಷ್ಟು ವರ್ಷದ ಬರದ ಹೊಡೆತಕ್ಕೆ ಆ ಹಳ್ಳಿಯ ಜನ ಯಾವತ್ತೋ ಮನೆಮಠ ಮಾರಿ ಗುಳೇ ಹೋಗಬೇಕಾಗಿತ್ತು.

ಬಸ್ಸು ಹೊರಟಿತು. ಬಸ್ಸಿನಾಗ ಪಂಚಾಯಿತಿ ಅಧ್ಯಕ್ಷರ ಸಣ್ಣ ಭಾಮೈದನಿಗೆ ಸಹಾ ಸೀಟುಸಿಕ್ಕಿಲ್ಲ. ನಿಂತಿದ್ದ ಆತನ ಮುಂದೆ ಆಚಾರಿ, ಇನ್ನೂ ಮುಂದೆ ಕೂಲಿಗೋಗೊ ಹೆಣ್ಮಗಳು ದುರಿಗಿ ನಿಂತಿದ್ಲು. ಬಸ್ಸು ಹೋಗ್ತಿದ್ದಾಗ ದಾರ್ಯಾಗಳ ಸಣ್ಣ ಸಣ್ಣ ಹೊಂಡ ಗುಂಡಿಗೆ ಸಿಕ್ಕಿ ಒಳಗಿನ ಮಂದಿ ಆಗಾಗ್ಗೆ ಜೋಲಿಹೊಡಿತಿದ್ರು. ಹಂಗ ಜೋಲಿ ಹೊಡದಾಗ ದುರುಗಿ ಬೆನ್ನು ಆಚಾರಿ ಎದೆಗೆ ಗಟ್ಟಿಯಾಗಿ ಆನಿಕೊಂತಿತ್ತು. ಅದು ಆಚಾರಿಗೆ ಬಹಳ ಹಿತವಾಗಿತ್ತು. ಧಗ್ಗನೆ ಹೊತ್ತಿ ಉರಿದ ಕಾಮನೆಯ ಶಾಖದಲ್ಲಿ ಮಡಿಮೈಲಿಗೆಯ ಆಲೋಚನೆಯೇ ಸುಟ್ಟು ಭಸ್ಮವಾದಂತಿತ್ತು. ಹೀಗೆ ಮೇಲು-ಕೀಳು, ಜಾತಿ-ಮತಗಳ ಎಲ್ಲಾ ವರ್ಗಗಳನ್ನು ಒಂದೇ ಗುಂಪಿನಲ್ಲಿ ಕಟ್ಟಿಹಾಕಿದಂತೆ ಹೊತ್ತುಕೊಂಡು ಹೊರಟಿತ್ತು ಆ ಮೋಟಾರು ವಾಹನ. ನೂರಾರು ವರುಷಗಳ ಸಾಮಾಜಿಕ ಚರಿತ್ರೆಯಲ್ಲಿ ನೂರಾರು ಸಂಸ್ಕರಣಾವಾದಿಗಳು ಮಾಡಲಾಗದ ಕೆಲಸವನ್ನು ಆ ಒಂದೇ ಒಂದು ಯಂತ್ರ ಸುಲಭವಾಗಿ ಮಾಡಿಬಿಟ್ಟಿತ್ತು. ಯಂತ್ರಕ್ಕೆ ವ್ಯಾಪಾರವೇ ಜೀವಾಳ, ಜಾತಿ-ಮತವಲ್ಲ.

ಹಳ್ಳಿ ದಾಟಿ ವೆಂಕಟೇಶಪ್ಪನ ತೋಟದ ಹತ್ತಿರ ಬಂದ ಕೂಡಲೇ ಠಪ್ಪಂತ ಬಸ್ಸು ನಿಂತುಬಿಡ್ತು. ಅಧ್ಯಕ್ಷರ ಮನೆಯವರು ನಿಧಾನವಾಗಿ ಮೆರವಣಿಗೆಯಲ್ಲಿ ನಡೆದಹಾಗೆ ನಡಕೊಂಡು ಬಂದರು. ಕಂಡಕ್ಟರ್ “ಆ ಮುಂದಿನ ಸೀಟಿನವರು ಎದ್ದೇಳ್ರಿ. ಅಧ್ಯಕ್ಷರ ಮನಿಯವರು ಬಂದಾರೆ, ಸೀಟು ಬಿಟ್ಟುಕೊಡ್ರಿ” ಅಂತ ಕೂಗಿದ. ಅವರು ಸೀಟಿನಲ್ಲಿ ಆಸೀನರಾದರು. ಬಸ್ಸು ಮುಂದಕ್ಕೋಡಿತು. ಅವರ ದರ್ಬಾರು ನೋಡಿದ ಮಲ್ಲಯ್ಯನಿಗೆ ಹೊಟ್ಟೆಯಲ್ಲಿ ಬೆಂಕಿ ಬಿದ್ದಂಗಾಯ್ತು. ಈ ಬಸ್ಸು ವೆಂಕಟೇಶಪ್ಪ ಅವರಪ್ಪನದೇನಲ್ಲ, ಖಾಸಗಿ ಬಸ್ಸು. ಬ್ಯಾರೇ ಜಾತಿ ಜನಗಳ ಹತ್ರ ಕಡಿಮೆ ದುಡ್ಡು ಇಸ್ಕೊಂತಾರೇನು? ಎಲ್ಲಾರ್ಗೂ ಒಂದೇ ಟಿಕೆಟ್ ದುಡ್ಡಲ್ಲೇನು. ಅಂಥಾದ್ರಾಗ ಇವರು ಬಂದಕೂಡ್ಲೇ ಎಲ್ಲರೂ ಯಾಕೆ ಸೀಟು ಬಿಟ್ಟುಕೊಡಬೇಕು? ಹೇಳಿಕೇಳಿ ಇವತ್ತು ಅಲ್ಲಿ ಸೀಟುಬಿಟ್ಟುಕೊಟ್ಟವರು ಮಲ್ಲಯ್ಯನ ಕಡಿಯವರು. “ಥೂ.. ಇವನವ್ವನ.. ಇದೂ ಒಂದು ಬದುಕೇನು..?” ಮಲ್ಲಯ್ಯ ಸಿಟ್ಟಿನಲ್ಲಿ ಹಲ್ಲು ಮಸೆದದ್ದಷ್ಟೇ ಆಯಿತು.

ಮೊದಲಿಗೆ ಆ ಹಳ್ಳಿಗೆ ಸರ್ಕಾರದ ಬಸ್ಸು ಬರ್ತಿತ್ತು. ವೆಂಕಟೇಶಪ್ಪನೂ ಅದಕ್ಕೆ ಬೆಂಬಲವಾಗೇ ಇದ್ದ. ಆದ್ರೆ ಬರುಬರುತ್ತಾ ಇದರಿಂದಾ ತನ್ನ ಅಧಿಪತ್ಯಕ್ಕೆ ಸಂಚು ಬರೋ ಲಕ್ಷಣಗಳು ಕಾಣಿಸಿದವು. ಭೂಮಿ ಇಲ್ಲದ ಕೂಲಿಕಾರರು ಅಲ್ಲಿವರೆಗೆ ಹಳ್ಳಿಯ ಭೂಮಾಲೀಕರ ಮರ್ಜಿಯಲ್ಲಿರುತ್ತಿದ್ರು. ಈಗ ಹೆಚ್ಚು ಕೂಲಿ ಸಿಗೋ ಕಡೇ ಹತ್ತಿಪ್ಪತ್ತು ಕಿಲೋಮೀಟರು ದೂರಕ್ಕೆ ಹೋಗ್ತಾರೆ. ಹಳ್ಯಾಗೂ ಕೂಲಿ ಆಳಿಗೆ ಬೇಡಿಕೆ ಜಾಸ್ತಿಯಾಯಿತು. ಬಡವರ ಮಕ್ಕಳು ಊರಾಗ ಏಳನೇ ತರಗತಿವರೆಗೆ ಮಾತ್ರ ಓದಿ ಆನಂತರ ಕೂಲಿಕೆಲಸಕ್ಕೆ ನಿಂತುಬಿಡ್ತಿದ್ರು. ಈಗ ಬಸ್ಸಿನಾಗೆ ಟೌನಿಗೋಗಿ ಮುಂದಕ್ಕೆ ಓದಕ್ಕೋಗ್ತಾರೆ. ಒಂದಾನೊಂದು ಕಾಲದಾಗ ಇಡೀ ಹಳ್ಳೀಗೆ ವೆಂಕಟೇಶಪ್ಪ ಒಬ್ಬನೇ ಎಸ್.ಎಸ್.ಎಲ್.ಸಿ ವರೆಗೆ ಪಾಸಾಗಿದ್ದೋನು. ಆದರೆ ಈಗ ಹಿಂದುಳಿದ ಕುಲದವರಲ್ಲೇ ಇಬ್ಬರು, ಮೂವರು, ಪದವಿ ಮುಗಿಸಿ ಮುಂದಕ್ಕೂ ಓದಿದ್ದರು. ಯಾರ್ಯಾರೋ ಹುಡುಗರು ತನ್ನ ಕಣ್ಣಮುಂದೆ ಟಕ್ ಮಾಡ್ಕೊಂಡು, ಹೊಸ ಹೊಸ ಫ್ಯಾಷನ್ಗಳು ಮಾಡಕತ್ತಿದ್ರು. ಮೊದಲು ತಮ್ಮ ಮನ್ಯಾಗಷ್ಟೇ ಜನವರಿ ಒಂದಕ್ಕೆ ಹೊಸ ವರ್ಷದ ಸಂಭ್ರಮ ಆಗ್ತಿತ್ತು. ಈಗ ಊರಾಗ ಎಲ್ಲಾರೂ ಆವತ್ತು ಮನೆಮುಂದೆ ಸಾರಿಸಿ, ಹೊಸ ರಂಗೋಲಿ ಹಾಕಿ, ಹ್ಯಾಪಿ ನ್ಯೂ ಇಯರ್ ಅಂತನ್ನೊದು ನೋಡಿ ಅಧ್ಯಕ್ಷರು “ಛೆ.. ಛೆ.. ಊರಾಗ ನಮ್ಮ ಪದ್ಧತಿ ಸಂಪ್ರದಾಯ ಎಲ್ಲಾ ಹಾಳಾಗಿ ಹೋಗ್ತಾ ಇದೆ” ಅನ್ತಿದ್ರು.

ಒಟ್ಟಿನಲ್ಲಿ ಊರ ಜನ ತನ್ನ ಕೈಯಿಂದಾ ಮೆಲ್ಲಕ್ಕೆ ಜಾರಿಹೋಗ್ತಿದ್ದಾರೆನ್ಸಿತ್ತು. ಇದನ್ನ ಗಮನಿಸಿ ಅಧ್ಯಕ್ಷರು ಮೆಲ್ಲಗೆ ತನ್ನ ಬಾಲ ಬಿಚ್ಚಿದರು. ಸರ್ಕಾರಿ ಬಸ್ಸಿನ ಮೇಲೆ ಮೆಲ್ಲಗೆ ತಕರಾರು ಶುರು ಮಾಡಿದ. ಯಾರು, ಎಲ್ಲಿ ಕೈ ಎತ್ತಿದರೂ ಬಸ್ಸು ನಿಲ್ಲಿಸಬೇಕೆಂದ. ಎಷ್ಟು ಸಾಮಾನು ತಂದರೂ ಹಾಕ್ಕೊಂಡು ಸುಮ್ನೆ ಹೊರಡಬೇಕೆಂದ. ಮೂರು ಟ್ರಿಪ್ ಸಾಲೋದಿಲ್ಲ. ಆರು ಟ್ರಿಪ್ ಓಡಿಸಲೇಬೇಕೆಂದ. ಇಲ್ಲಂದ್ರೆ ಹಳ್ಳಿಗೆ ಬಸ್ಸು ಓಡ್ಸಕ್ಕೆ ಬಿಡೋದಿಲ್ಲ ಅಂತ ಪಟ್ಟು ಹಿಡಿದು ಕುಂತುಬಿಟ್ಟ. ಅಧ್ಯಕ್ಷರು ತಮ್ಮ ಸಲುವಾಗಿ ಹೋರಾಡುತ್ತಿದ್ದಾರೆ ಅಂದುಕೊಂಡು ಹಳ್ಳಿಮಂದಿ ಎಲ್ಲಾರೂ ಬೆಂಬಲಕೊಟ್ಟರು. ಈ ಗದ್ಲ ಎಲ್ಲಾ ನೋಡಿ ಸಾರಿಗೆ ಇಲಾಖೆಯವರು ಹಳ್ಳಿಗೆ ಬಸ್ಸು ಕ್ಯಾನ್ಸಲ್ ಮಾಡಿ ಕೈತೊಳಕೊಂಡು ಬಿಟ್ರು. ಇದರಿಂದಾ ಹೊಡೆತಬಿದ್ದಿದ್ದು ಸಾಮಾನ್ಯ ಜನರಿಗೆ. ಕೂಲಿ ಕೆಲಸಕ್ಕೆ, ತರಕಾರಿ ಹಾಲು ಮಾರೋಂಥಾ ಸಣ್ಣ ವ್ಯಾಪಾರಕ್ಕೆ. ಮಕ್ಕಳು ಶಾಲೆ-ಕಾಲೇಜಿಗೆ ಹೋಗೋಂಗಿಲ್ಲ. ಕೆಲವರಿಗಂತು ಟೌನಿಗೋಗಿ ಕುಡುದು, ಇಸ್ಪೇಟ್ ಆಡೋದಕ್ಕೂ ಕೈಕಾಲು ಕಟ್ಟಿದಂಗಾಯ್ತು.

ಸರಿ ಬಡವರು, ಕೂಲಿಗೋಗೋರು ಎಲ್ಲಾ ಸೇರಿ, ಅರ್ಜಿಕೊಟ್ಟು ಅಧ್ಯಕ್ಷರ ವಿರೋಧದ ನಡುವೆಯೂ ಹಳ್ಳಿಗೆ ಮತ್ತೆ ಬಸ್ಸು ಹಾಕಿಸಿಬಿಟ್ಟರು. ವೆಂಕಟೇಶಪ್ಪನಿಗೆ ಪರಿಸ್ಥಿತಿ ಅರ್ಥವಾಯ್ತು. ಊರಿಗೆ ಬಸ್ಸು ಬರಲೇಬಾರದಿತ್ತು. ಒಂದ್ಸಲ ಬಂದ ಮೇಲೆ ಅದನ್ನ ನಿಲ್ಸೋದು ಆಗೋದಿಲ್ಲ. ಈಗೇನ್ಮಾಡ್ಬೇಕು? ಅದನ್ನೂ ತನಗೇ ಅನುಕೂಲ ಆಗೋಹಾಗೇ ಬಳಸಿಕೊಳ್ಳಬೇಕು. ವೆಂಕಟೆಶಪ್ಪ ತನಗೆ ಚೆನ್ನಾಗಿ ಪರಿಚಯ ಇರೋ ಖಾಸಗಿ ಬಸ್ ಯಜಮಾನರೊಬ್ಬರನ್ನ ಪುಸಲಾಯಿಸಿ ಹಳ್ಳಿಗೊಂದು ಬಸ್ ರೂಟ್ ಪರವಾನಗಿ ತೆಗೆಸಿ, ಖಾಸಗಿ ಬಸ್ಸು ಶುರು ಮಾಡಿಸಿದ. ಅದು ಸರ್ಕಾರಿ ಬಸ್ಸಿಗಿಂತಾ ಎಂಟಾಣೆ ಕಮ್ಮಿ ಚಾರ್ಜಿಗೆ ಓಡ್ತಿತ್ತು. ಅಲ್ಲದೇ ಮಂದೀನ ಚೂಬಿಟ್ಟು ಸುಳ್ಳೇ ಜಗಳ ಎಬ್ಬಿಸಿ, ಸರ್ಕಾರಿ ಬಸ್ಸ್ ನ ಗಾಜು ಒಡೆಸಿದ, ಟೈರ್ ಕೊಯ್ಸಿದ. ಇಂಥಾ ಗದ್ಲ ಮೇಲಿಂದ ಮೇಲೆ ಆಗೋದು ನೋಡಿ ಸರ್ಕಾರಿ ಬಸ್ಸು ರದ್ದಾಯಿತು. ಖಸಗಿ ಬಸ್ಸೊಂದೇ ಉಳೀತು. ಜನ ಯಾವುದೋ ಒಂದು ಬಸ್ಸು ಓಡ್ತಿದೆ, ಸಾಕು ಅಂದುಕೊಂಡ್ರು. ಖಾಸಗಿ ಬಸ್ಸು ಬರ್ಜರಿ ಕಲೆಕ್ಷನ್ನಿನಲ್ಲಿ ಓಡ್ತಿತ್ತು. ವೆಂಕಟೇಶಪ್ಪನಿಗೂ ಒಳ್ಳೆ ಕಮಿಷನ್ ಬರ್ತಿತ್ತು.

ಬಸ್ಸು ಮುಂದಕ್ಕೆ ಹೊರಟು, ಗುಡ್ಡದ ತಿರುವಿನಲ್ಲಿ ಹಳ್ಳಿ ರಸ್ತೆಯಿಂದಾ ಮೇನ್ ರೋಡಿಗೆ ಬಂದಾಗ ಟೌನ್ ನಿಂದಾ ಇಂಡ್ ಸುಜುಕಿ ಗಾಡಿಯಲ್ಲಿ ವೆಂಕಟೇಶಪ್ಪ ಎದುರಿಗೆ ಬಂದ. ಬಸ್ಸು ನಿಲ್ಲಿಸಿ ಬಸ್ಸಿನಲ್ಲಿದ್ದ ತಮ್ಮ ಹೆಣ್ಮಕ್ಕಳ ಜತೆ ಮಾತಾಡಿ ಹಳ್ಳಿಕಡಿಗೆ ಹೋದ. ಇದನ್ನ ನೋಡ್ತಿದ್ದ ಮಲ್ಲಯ್ಯ ಮನಸ್ಸಿನಾಗ ಕತ್ತಿ ಮಸಿತಿದ್ದ. ನಲವತ್ತು ವರ್ಷದ ಕೆಳಗೆ ರೇಡಿಯೋ, ಗ್ರಾಮಫೋನ್ ರಿಕಾರ್ಡು, ನೀರೆತ್ತೋ ಆಯಿಲ್ ಮಿಷನು ಮುಂತಾದವು ಹಳ್ಳಿಗೆ ತಂದು ಎಲ್ಲಾರನ್ನು ಆಶ್ಚರ್ಯಗೊಳಿಸಿದ್ದ. ಹಳ್ಳಿಗೆ ಬಸ್ಸು ಬರೋ ಮುಂಚಿನಿಂದಾ ಬುಲೆಟ್ ಗಾಡಿ ಓಡಿಸ್ಕೊಂಡು ಟೌನಿಗೋಗ್ತಿದ್ದ. ಅದರಿಂದಾ ಆತನಿಗೊಬ್ಬನಿಗೇ ಟೌನಿನಲ್ಲಿ ಅಧಿಕಾರಿಗಳು, ಫೋಲಿಸರು ಮುಂತಾದವರ ಜತಿ ಪರಿಚಯ, ವ್ಯವಹಾರ ಬೆಳೀತು. ಅದರಿಂದಾಗಿ ಊರುಗಳ ಜನ ಈತನ ಮಾತಿಗೆ ಬೆಲೆಕೊಟ್ಟು ರಾಜಕೀಯದೊಳಗೆ ಬೆಳೆಸಿದರು. ಆದ್ರೆಈಗ, ಆತನ ಇಂಡ್ಸುಜುಕಿ ಗಾಡಿ ನೋಡಿ ಜನ ಆಶ್ಚರ್ಯಪಡ್ತಾ ಇಲ್ಲ. ಬಸ್ಸು ಬಂದಾಗಿಂದಾ ಆ ಹಳ್ಳಿ ಟೌನಿಗೆ ಹತ್ತಿರವಾಗ್ತಾ ಬಂತು. ಈಗೀಗ ಹಳ್ಳಿ ಮಂದಿ ಬೆರಿಕೆ ಆಗ್ತಿದ್ದಾರೆ ಅಂತ ವೆಂಕಟೇಶಪ್ಪನಿಗೆ ಚಿಂತೆಯಾಗ್ತಿತ್ತು.

ಟೌನು ಹೊರಗೆ ಆ ರಸ್ತೆಯಲ್ಲಿ ಪಾಳುಬಿದ್ದ ಮನೆಗಳು ಕೆಲವಿದ್ದವು. ಅಲ್ಲಿ ಪೋಕಿರಿಗಳು ಸೇರಿ ಕುಡಿತ, ಜೂಜು ಮುಂತಾದವು ಮಾಡ್ತಿದ್ದರು. ಆ ರಸ್ತೆಯಲ್ಲಿ ಬರೋ ಪರವೂರಿನ ಗಾಡಿಗಳ ಸಲುವಾಗಿ ಮೈಮಾರೋ ಹೆಂಗಸರು ಕಾಣಿಸಿಕೊಳ್ತಿದ್ದರು. ಮಲ್ಲಯ್ಯ ಟೌನ್ ನಲ್ಲಿ ಬಸ್ಸಿಳಿದ. ಸೀದಾ ಹತ್ತಿರದ ಸಂದಿಯಲ್ಲಿದ್ದ ಗುಡಿಸಲು ಹೋಟೇಲ್ಗೋಗಿ ಕುಳಿತ. ಬಸ್ಸಿನಲ್ಲಿ ಹಿಂದೆ ನಿಂತಿದ್ದು, ಇವನ ಕಡೆ ನೋಡಿ ನಕ್ಕಿದ್ದ ನಾಲ್ವರು ಮಲ್ಲಯ್ಯನ ಕಡೆಯವರು, ಸ್ವಲ್ಪ ಹೊತ್ತಿನ ನಂತರ ಅಲ್ಲಿಗೆ ಬಂದು ಕೂತರು. ಚಾ ಕುಡಿದು ಬೀಡಿ ಹಚ್ಚಿದರು. ಹಳ್ಳಿಯ ನ್ಯಾಯಬೆಲೆ ಅಂಗಡಿಯವನ ಮೇಲೆ ಗಹನವಾದ ಚರ್ಚೆ ಶುರುವಾಯಿತು. ಅವನ ಬಗ್ಗೆ ಮೂಗರ್ಜಿ ತಯಾರಾಗಿತ್ತು. ಅವನು ವೆಂಕಟೇಶಪ್ಪನ ಕಡೆಯವನು. ಮಲ್ಲಯ್ಯನ ಕಡೆಯ ಒಂದಷ್ಟು ಜನ ಈ ಅರ್ಜಿಗೆ ಸಹಿ ಮಾಡಿದರು. ಇವರೆಲ್ಲಾ ಸೇರಿ ಆ ಅರ್ಜಿಯನ್ನು ತಹಶೀಲ್ದಾರ್ ಕಛೇರಿಯಲ್ಲಿ ಕೊಟ್ಟುಬಂದ್ರು. ಅಲ್ಲಿಂದ ಟಾಕೀಸ್ನಾಗೆ ಮ್ಯಾಟ್ನಿ ಷೋ ನೋಡಕ್ಕೋದ್ರು. ಹಸಿವಾಗಿದ್ದಕ್ಕೆ ಇಂಟರ್ವೆಲ್ ನಲ್ಲಿ ಮಿರ್ಚಿಬಜ್ಜಿ ತಿಂದು, ಚಾ ಕುಡಿದರು. ಮ್ಯಾಟ್ನಿ ಮುಗಿಸಿ ಹೊರಗೆ ಬಂದು ಮತ್ತೆ ಸ್ವಲ್ಪೊತ್ತು ರಸ್ತೆ ಸುತ್ತಿದ್ರು. ಎಲ್ಲರೂ ಮತ್ತೆ ಹಳ್ಳಿಗೋಗೋ ಬಸ್ಸಿಗಾಗಿ ನಿಂತರು. ಆದರೆ ಮಲ್ಲಯ್ಯನಿಗೆ ಎಣ್ಣೆ ಹೊಡೀದಂಗೆ (ಮದ್ಯಪಾನ) ಊರಿಗೋಗೋ ಮನಸಾಗವಲ್ದು. ಆಗ ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇದ ಜಾರಿಯಲ್ಲಿತ್ತು. ಆದ್ರೇನು, ಮೂವತ್ತು ರೂಪಾಯಿ ಕೊಡೋ ಕಡಿಗೆ ಅರವತ್ತು ಬಿಸಾಕಿದ್ರೆ ಎಲ್ಲಾ ಸಿಗ್ತದೆ, ಅಷ್ಟೇ.

ಬಸ್ಸಿನೊಳಗೆ ತರಹೇವಾರಿ ಜನ ತುಂಬಿದ್ದರು. ಶಾಲೆಗೋಗೊ ಮಕ್ಕಳಿದ್ದರು, ಕಾಲೇಜಿಗೋಗೋ ಹುಡುಗರು, ಹುಡುಗಿಯರಿದ್ದರು.  ಎಮ್ಮಿಹಾಲು ಟೌನ್ ನಲ್ಲಿ ಹೋಟೇಲ್ಗಳಿಗೆ ಮಾರಕ್ಕೆ ಹೊರಟ ಮಂದಿ ಇದ್ದರು. ಹಿಂಗ ಬಸ್ಸಿನ ಅನುಕೂಲ ಇದ್ದು, ವ್ಯಾಪಾರ ವಹಿವಾಟು ನಡೀತಿರೋದರಿಂದಾ ಹಳ್ಯಾಗ ಬದುಕು ನಡೀತಿತ್ತು.

ಮಲ್ಲಯ್ಯನ ಕಿಸೆದಾಗ ಒಂದು ನಯಾಪೈಸೆ ಇದ್ದಿಲ್ಲ ಪಕ್ಕದಲ್ಲಿ ಇದ್ದವರ ಮುಖ ನೋಡಿದ. ಅವರತ್ರನೂ ಇದ್ದಂಗ ಕಾಣ್ಲಿಲ್ಲ. ಅವರು ವಾಪಾಸ್ ಮನಿಸೇರಿಕೊಳ್ಳೋ ಆತ್ರದಾಗಿದ್ದರು. ಮಲ್ಲಯ್ಯನಿಗೂ ಹಸಿವೇ. ಆದ್ರೆ ಅದನ್ನ ಮೀರಿ ಹೆಂಡದಕಡಿಗೆ ನಾಲಿಗೆ ಚರಚರಾಂತ ಎಳೀತಿತ್ತು. ಹಳ್ಳಿಗೋಗೋ ಬಸ್ಸು ಎದಿರೀಗೆ ಬಂತು. ಕಡೇ ಟ್ರಿಪ್ಪು. ಆ ಬಸ್ಸೋದ್ರೆ ಇನ್ನ ರಾತ್ರಿ ಊರಿಗೆ ಬಸ್ಸಿಲ್ಲ. ಆದ್ರೆ ಎಣ್ಣೆ ಹಾಕಲಾರದಂಗೆ ಊರಿಗೋಗೋದಾ? ಜತಿಗೆ ಬಂದವ್ರು “ಏನಣ್ಣಾ ಬರಂಗಿಲ್ಲೇನು” ಅಂತ ಕೇಳಿ ಹೋಗಿ ಬಸ್ಸು ಹತ್ತಿದ್ರು. ಮಲ್ಲಯ್ಯನಿಗೋ ಮನಸ್ಸಿನ್ಯಾಗೆ ಒಂದೇ ಸಮ ಕಸಿವಿಸಿ “ಹತ್ತಲಾ? ಬ್ಯಾಡಾ?” ಕಂಡಕ್ಟರ್ ರೈಟ್, ರೈಟ್ ಅಂದ. ಬಸ್ಸು ಇನ್ನೇನು ಹೊರಡಬೇಕು. ಅಷ್ಟರಾಗ ಯಾರೋ ಬಸ್ಸಿನ ಬಾಡಿಗೆ ದಬದಬಾಂತ ಬಡಿದ್ರು. “ಓಲ್ಡನ್.. ಓಲ್ಡಾನ್” ಅಂತ ಕೂಗಿ “ಯದಕ್ಕಂಗೆ ಬಡಿತೀರೋ?” ಅಂದ ಕಂಡಕ್ಟರ್.

“ಏ.. ಹೆಣ್ಮಗಳು ಬರಕತ್ಯಾಳಣಾ.., ಅಗೋ ಅಲ್ಲಿ ನೋಡು ಕೈ ಮಾಡಕತ್ಯಾಳೆ” ಅಲ್ಲಿ ನೋಡಿದರೆ, ಕಾಶೀಂಪೀರಾ ಬೀಡೀಅಂಗಡ್ಯಾಗೆ ಆ ಹೆಣ್ಣುಮಗಳು ಮಟ್ಕಾ ನಂಬರಿಗೆ ದುಡ್ಡು ಕಟ್ತಿದ್ದಳು. ಇನ್ನೊಂದು ಕೈಯಲ್ಲಿ ಬಸ್ಸಿನ ಕಡಿಗೆ ಕೈತೋರಿಸಿ ನಿಲ್ಸಕ್ಕೆ ಕೂಗುತಿದ್ಲು. “ಜಲ್ದಿ ಹೇಳಮ್ಮಾ.. ಯಾ ನಂಬರಿಗೆ..? ಕಾಶೀಂಪೀರಾ ಅವಸರ ಮಾಡಿದ.

“ಅಣಾ, ನೀವ್ಯಾನಂಬರಿಗೆ ಕಟ್ಟೀರಣಾ?”
“ಜೀರೋ, ಒಂಬತ್ತು”
“ಸರಿಯಣ್ಣಾ, ಇಗೋ ಓಪನ್ ಗೆ ಜೀರೋಗೆ ನಾಕುರೂಪಾಯಿ, ಕ್ಲೋಸಿಂಗ್ ಒಂಬತ್ತಕ್ಕೆ ಐದುರೂಪಾಯಿ, ಆ ಮ್ಯಾಲೆ ಎಲ್ಡುಸೇರಿ ಮಟ್ಕಾ ನಂಬರಿಗೆ ಒಂದ್ರೂಪಾಯಿ. ಒಟ್ಟು ಹತ್ತು ರೂಪಾಯಿ” ಕೊಟ್ಟಳು.

ಅವನು ಬಿರಬಿರ ಗೀಚಿಕೊಟ್ಟ ಮಟ್ಕಾ ಚೀಟಿ ಇಸ್ಕೊಂಡು, ಭುಜದಮ್ಯಾಲೆ ಹರಿದಿದ್ದ ರವಿಕೆಯನ್ನು ಎಳೆದು ಸರಿಮಾಡ್ಕೊಂಡು, ಕಂಕುಳದಾಗಿನ ಮಗುವನ್ನ ಹಿಡಕೊಂಡು ಓಡೋಡಿ ಬಂದು, ಬುಕಬುಕ ಅಂತ ಸದ್ದುಮಾಡ್ತಾ, ಹಾರ್ನ್ ಬಾರಿಸ್ತಿರೋ ಬಸ್ಸು ಹತ್ತಿಬಿಟ್ಲು. ಬಸ್ಸು ಹೊರಟೋಯ್ತು.

ಬಸ್ಸು ಹೊರಟೋದಕೂಡಲೇ ಮಲ್ಲಯ್ಯನ ಮನಸ್ಸಿನ ತೊಳಲಾಟ ನಿಂತೋಯ್ತು. “ಎಂಗನ್ನಾ ಮಾಡಿ ಇವತ್ತು ಎಣ್ಣೆ ಹಾಕ್ಕೋಬೇಕು. ಅದಕ್ಕೆ ಎಪ್ಪತ್ತು ರೂಪಾಯಿ ಬೇಕು. ಏನ್ಮಾಡ್ಲೀ” ಎಲ್ಲಾ ಕಡೆ ನೋಡ್ತಿದ್ದ. ಎದುರಿಗೆ ಬಟ್ಟಿ ಅಂಗಡಿ ಮಾಲಿಕ ‘ಗಲ್ಲಾಪೆಟ್ಟಿಗೆ’ ಹತ್ತಿರ ಕೂತಿದ್ದ. ಸಂಜೆಗೆ ಅಂಗಡಿಯಲ್ಲಿ ದೀಪ ಹಾಕಿ ಗಲ್ಲಕ್ಕೆ ಕೈ ತಾಗಿಸಿ ನಮಸ್ಕಾರ ಮಾಡ್ಕೊಳ್ತಿದ್ದ. ತಿಂದು, ಕುಡಿದು ಸುಖಪಡದಂಗೆ ಬರೀ ದುಡಿದು ಹಣ ಗುಡ್ಡೆಹಾಕ್ಕೊಂಡಿರೋ ಇಂಥವರ್ನ ಕಂಡ್ರೆ ಮಲ್ಲಯ್ಯನಿಗೆ ಅಯ್ಯೋ ಪಾಪ ಅನಿಸ್ತಿತ್ತು. ಜೊತಿಗೆ, ಏಸುಮಂದೀನ ಮೋಸಮಾಡ್ಯಾನೋ ಗುಂಡುಸೂ..ಮಗ. ಜಿಗಿದು ಗುದ್ದಿದರೇನೇ ಮುದಿರಿಕ್ಯಂಡು ಬಿಳ್ತಾನ. ಆವಾಗ ಆ ದುಡ್ಡಿನ ಪೆಟ್ಟಿಗ್ಯಾಗಿಂದ ಒಂದೆಪ್ಪತ್ತು ರೂಪಾಯಿ ತೆಗಂಡರೇ ಎಷ್ಟು ಬೇಷಿರತ್ತಲ್ಲಾ ಅನಿಸ್ತಿತ್ತು. ಆದರೆ ಅಷ್ಟಕ್ಕೆ ಪೋಲೀಸರು, ಕೋರ್ಟು, ಜೈಲು ನೆನಪಾದವು.

ಮಲ್ಲಯ್ಯನ ಪೂರ್ವಿಕರು ಒಂದಾನೊಂದು ಕಾಲದಾಗ ಬೇಟೆಗಾರರೇ. ಕಾಡಹಂದಿನ ಹೊಡೀಬೇಕಂದ್ರೆ ಧೈರ್ಯಬೇಕು. ಮೊಲ ಹಿಡೀಬೇಕಂದ್ರೆ ಕಳ್ಳರ ಕೈಚಳಕನೂ ಇರಬೇಕು. ಇವೆರಡೂ ಮೈಗೂಡಿಸಿಕೊಂಡಿದ್ದ ಜನಾಂಗ ಕಾಲಸರಿದಂತೆಲ್ಲಾ ಊರುಸೇರಿ ಅಲ್ಪ-ಸ್ವಲ್ಪ ಭೂಮಿ ಉಳುಮೆ ಶುರುಮಾಡಿದ್ರು. ಹಾಗೇನೆ ಬೇಟೆ, ಸಣ್ಣ-ಸಣ್ಣ ಕಳ್ಳತನ, ಭಟ್ಟಿಸರಾಯಿ ಕಾಯಿಸೋದು ಸಹಾ ಮಾಡ್ತಿದ್ರು. ಬಹುಶಾ, ಅವರ ಜೀವನ ವಿಧಾನ ಪಾಶ್ಚಿಮಾತ್ಯ ಬ್ರಿಟೀಷರ ಆಳ್ವಿಕೆಯ ಜೀವನ ವಿಧಾನಕ್ಕೆ ಒಂದು ರೀತಿಯ ಸವಾಲಿನಂತಿತ್ತು. ಬ್ರಿಟೀಷರು ಇವರಮೇಲೆ ನಿರಂತರ ದಾಳಿಮಾಡ್ತಿದ್ರು. ಇಂಥಾದ್ದರಲ್ಲಿ, ಅವರಂಥಾ ಕೆಳವರ್ಗದ ಜನಾಂಗಗಳು ತಮ್ಮ ಉಳಿವಿಗಾಗಿ ಮೇಲ್ವರ್ಗದವರ ಹಿಡಿತಕ್ಕೆ ಸಿಗಬೇಕಾಯಿತು.

ಮಲ್ಲಯ್ಯ ಆಶೆಯಿಂದಾ ಅಂಗಡಿಯ ಕಡೆ ನೋಡ್ತಿರಬೇಕಾದ್ರೆ “ಅಣ್ಣಾ” ಅಂತ ಹತ್ರ ಬಂದು ನಿಂತನೊಬ್ಬ. ಅವನು ಅಲ್ಲಿಗೆ ಮೂವತ್ತು ಕಿ.ಮೀ ದೂರದ ನೇತ್ರಪಲ್ಲಿಯವನು. ದಾಡಿಬೆಳೆಸಿದ್ದ, ಮೀಸೆ ಕೊನೆ ತಿರುವಿದ್ದ, ಮಾಸಿದ್ದ ಅಂಗಿಯ ತೋಳು ಮಡಚಿದ್ದ. ಅಡ್ಡ ಪಂಚೆ ಎತ್ತಿಕಟ್ಟಿದ್ದ. ಬಾಯಿಂದ ಬ್ರಾಂದಿ ವಾಸನೆ ಗಪ್ಪಂತ ಬಡೀತಿತ್ತು. ನೇತ್ರಪಲ್ಲಿಯಲ್ಲಿ ಎತ್ತು ಖರೀದಿಗೆ ಹೋದಾಗ ಪರಿಚಯವಾಗಿದ್ದ. ಆ ಮೇಲೆ ಒಮ್ಮೆ ಬ್ರಾಂದಿ ಶಾಪಿನ ಜಗಳದಾಗ ಅವನು ಹೊಡೆಸಿಕೊಂತಿದ್ರೆ, ಮಲ್ಲಯ್ಯನೇ ಅಡ್ಡ ಹೋಗಿ ಅವರನ್ನೆಲ್ಲಾ ಹೊಡೆದು ಇವನ್ನ ಬಿಡಿಸಿದ್ದ. “ಎಣ್ಣೆ ಬೇಕೋ ತಮ್ಮಾ..” ಅಂದ ಈ ಕ್ಷಣಕ್ಕೆ ಹತಾಶನಾಗಿದ್ದ ಮಲ್ಲಯ್ಯ.

“ನೀನು ಕೇಳಬೇಕೇನಣ್ಣಾ..” ಅಂದು ಕಿಸೆದಾಗಿಂದಾ ಹಾಫ್ ಬಾಟಲ್ ತೆಗೆದು ನಕ್ಕ. ಅದರಾಗೆ ಇನ್ನೂ ಅರ್ಧಕ್ಕೆ “ಎಣ್ಣೆ” ಇತ್ತು. ಮಲ್ಲಯ್ಯ ಸ್ವಲ್ಪ ಗಾಬರಿಯಿಂದ “ಪೋಲಿಸರು ನೋಡ್ತಾರೋ” ಅಂದ.

“ಅವ್ರು ನಮ್ಮೋರೇ, ಬಾಣ್ಣ..” ಅಂದು ಹತ್ತರದ ಸೋಡಾ ಬಂಡಿಗೆ ಹೋದ. ಅಲ್ಲಿ ಒಂದು ಗ್ಲಾಸಿಗೆ ಸ್ವಲ್ಪ ಬ್ರಾಂದಿ ಹಾಕಿ, ಅದಕ್ಕೆ ಸೋಡಾ ಬೆರೆಸಿ “ನನ್ನದಾಯ್ತು, ಇಕ, ಇವಾಗ ನೀನು ತಗೋ” ಅಂದು ಕೊಟ್ಟ. ಮಲ್ಲಯ್ಯ ಗ್ಲಾಸೆತ್ತಿ ಗಟಗಟನೆ ಕುಡಿದು ಬಾಯಿ ಒರೆಸಿಕೊಂಡ. ಅವನಿಂದ ಸಿಗರೇಟ್ ಇಸ್ಕೊಂಡು ಹಚ್ಚಿ ದಮ್ಮು ಎಳೆದ. ಸ್ವಲ್ಪ ಹಾಯಾಗಿತ್ತು. “ಅಣ್ಣಾ.. ಇಕ ಮಿರ್ಚಿಬಜ್ಜಿ ತಿನ್ನು” ಅಂದ. ಇಬ್ಬರೂ ಹೋಗಿ, ಬಾಗಿಲೆಳೆದು ಮುಚ್ಚಿದ್ದ ಅಂಗಡಿಯ ಕಟ್ಟಿಗೆ ಕೂತು ಕಾಲು ಕೆಳಗೆ ಬಿಟ್ಟುಕೊಂಡು ಮಿರ್ಚಿ ಬಜ್ಜಿ ತಿನ್ನಲು ಶುರುಮಾಡಿದ್ರು. ಮಲ್ಲಯ್ಯ “ಲೇ, ನನಿಗೆ ತಮ್ಮ ಅಂದ್ರೆ ನೀನೇನೋಡು. ನಿನ್ನ ಯಾರನ್ನ ಏನಾರಾ ಅಂದ್ರೆ, ನಿನ್ನ ತಂಟೆಗೆ ಯಾರನ್ನಾ ಬಂದ್ರೆಗಿನಾ ಹೇಳು ಅವರ್ನ ಇಲ್ಲ ಅನಿಸಿಬಿಡ್ತೀನಿ” ಅಂದ.

ಆ ನೇತ್ರಪಲ್ಲಿಯವನು ಜೋರಾಗಿ ನಕ್ಕುಬಿಟ್ಟ. “ಏನಣ್ಣಾ, ನಾನಿನ್ನಾ ಅವತ್ತು ನೀನು ಬ್ರಾಂದಿ ಶಾಪಿನ ಜಗಳದಾಗ ಒದಿಸಿಕೊಂಡಿದ್ದ ಹಳೇ ಮನುಷ್ಯ ಅಂದುಕೊಂಡ್ಯಾ? ನಾನೀವಾಗ ನಮ್ಮ ಈಶಪ್ಪನ ಮನುಷ್ಯಾ ಅಣ್ಣಾ, ಇವಾಗ ಯಾರನ್ನಾ ನನ್ನ ತಡವಿಕೋ ಅಂತೇಳು. ಸಿಗಿದು ಗೂಟಕ್ಕೆ ಕಟ್ತೀನಿ. ಅಷ್ಟ್ಯಾಕೆ, ಈ ಬಜಾರದಾಗ ಏನು ಮಾಡಬೇಕೇಳು. ಆ ಬೀಡಿ ಅಂಗಡಿ ಅವನತ್ರ ಐವತ್ತು ರೂಪಾಯಿ ಕಸ್ಕೊಂಬರ್ಲೇನು. ಈ ಊರಾಗ ಯಾರನ್ನಾ ಆಗಲೀ ನಮ್ಮ ಧಣಿ ಹೆಸರೇಳಿದ್ರೆ ಹಡಲ್. ಅಷ್ಟೆ” ಅಂದ. ಹಿಂದೆ ಇದೇ ಮನುಷ್ಯ ಪೋಲಿಸರು, ತಾಲೂಕಾಫೀಸಿನವರು, ಕರೆಂಟಾಫೀಸ್ ಲೈನ್ಮ್ಯಾನ್, ಯಾರು ಕಂಡ್ರೋ, ತಲಿಗೆ ಸುತ್ತಿದ್ದ ವಲ್ಲಿ ಬಿಚ್ಚಿ, ಹಲ್ಲು ಕಿಸಿದು ‘ನಮಸ್ಕಾರ ಸಾರ್’ ಅಂತಿದ್ದ. ಆದ್ರೆ ಈಗ, ಯಾರೋ ಒಬ್ಬ ಬಲವಾದ ರಾಜಕೀಯದವರ ಹಿಂಬಾಲಕನಾದರೆ ಸಾಕು. ಆ ನಾಯಕ ರೌಡಿ ಹಿನ್ನಲೆಯವನಾದರೆ ಇನ್ನೂ ಒಳ್ಳೇದು ಅವರು ಹೇಳಿದ್ದ ಕೆಲಸ ಮಾಡ್ತಾ, ಸಮಾಜದೊಳಗೆ, ಊರಿನ ಅಧಿಕಾರಿಗಳ ಮೇಲೆ ಸವಾರಿ ಮಾಡಿದ್ರೂ ಯಾರೋ ಕೇಳಂಗಿಲ್ಲ.

“ಅಣಾ, ಒಂದು ಮಾತು ಕೇಳ್ಲಾ, ನೀನೇರಾ ಆ ವೆಂಕಟೇಶಪ್ಪನ ಗುಂಪಿನವನೇನು?” ಅಂತ ಕೇಳಿದ.
“ಛೆ. ಛೆ, ಆತನಿಗೂ ನಮಗೂ ಯಾವಾಗ್ಲೂ ಆಗಂಗಿಲ್ಲ” ಅಂದ ಮಲ್ಲಯ್ಯ.
“ಒಳ್ಳೆದಾಯ್ತು ಬಿಡಣ್ಣಾ. ಇಲ್ಲಂದ್ರೆ ನಾವಿಬ್ರೂ ಎದುರು ಪಾರ್ಟಿಯವರಾಗಿ ಬಿಡ್ತಿದ್ವಿ” ಅಂದ ನೇತ್ರಪಲ್ಲಿಯವ.
“ಅದು ಹ್ಯಾಗೆ? ನಾವಿಬ್ಬರೂ ಒಂದೇ ಕುಲದವರಲ್ಲೇನು?”
“ಬ್ಯಾರೆ ಪಾರ್ಟಿ ಆದ್ರೆ ಕುಲ-ಗಿಲ ನಡಿಯಂಗಿಲ್ಲ ಅಣ್ಣಾ. ಅದ್ಸರಿ, ನಿನಗೆ ಆ ವೆಂಕಟೇಶಪ್ಪನಿಗೆ ಯಾಕೆ ಸರಿಬರಂಗಿಲ್ಲಣ್ಣಾ” ಅಂತ ಕೇಳಿದ.

ಆಗ ವೆಂಕಟೇಶಪ್ಪನ ಕಾಂಟ್ರಾಕ್ಟುಗಳು, ಅವನು ದುಡ್ಡು ಮಾಡೋ ಪರಿ, ಅವನ ಅಧಿಕಾರ, ತಮ್ಮ ಕುಲದವರು ಅನಾದಿ ಕಾಲದ ಶೌರ್ಯ, ಬೇಟೆ ಮುಂತಾದೆಲ್ಲಾ ಕಥೆ ಕಟ್ಟಿ ಹೇಳಿದ.
“ಮತ್ತೆ ಈಗೇನು ಮಾಡ್ತೀಯಾ?” ಅದಕ್ಕೆ ಮಲ್ಲಯ್ಯ ಮುಖ ಕೆಳಗೆ ಮಾಡಿ “ಅದೇ ಗೊತ್ತಾಗವಲ್ದೋ ತಮ್ಮ ಆತನ ಅಧಿಕಾರದ ಮುಂದೆ ನಮ್ದು ನಡಿವಲ್ದು ಅಂತ ಸುಮ್ಮನಾಗಬೇಕು ಅಷ್ಟೆ”
“ಅಂಗಂತ ಸುಮ್ನಿದ್ರೆ ಎಂಗಣ್ಣಾ? ನನ್ನ ಮಾತು ಕೇಳು, ನನ್ನಜತಿ ಬಾ. ನಮ್ಮ ಈಶಪ್ಪನತ್ರ ಕರಕೊಂಡು ಹೋಗ್ತಿನಿ”
“ಓದ್ರೇ ಏನಾಗುತ್ತೆ”
“ನಿನಿಗೆ ರಾಜಕೀಯ ಗುಟ್ಟು ಗೊತ್ತಿಲ್ಲ ನೋಡು. ಈಗ ನಮ್ಮ ಈಶಪ್ಪ, ನಿಮ್ಮೂರು ವೆಂಕಟೇಶಪ್ಪ ರಾಜಕೀಯದಾಗ ಒಳ್ಳೆ ಹಾವು ಮುಂಗುಸಿ ಇದ್ದಂಗಿರ್ತಾರ. ಇಬ್ಬರ ನಡುವೆ ಹಸಿ ಹುಲ್ಲು ಹಾಕಿದ್ರೂ ಧಗ್ಗಂತ ಹೊತ್ತಿಕೊಂತದ” ಒಂದು ಕ್ಷಣ ಸುಮ್ಮನಿದ್ದು, “ ಹಳ್ಯಾಗೆ ಬರೀ ನಿಮ್ಮ ಕುಲದವರು ನಿನ್ನ ಹಿಂದಿದ್ರೆ ಸಾಲ್ದು. ರಾಜಕೀಯದ ಬೆಂಬಲ ಇರಬೇಕು. ಅವಾಗ ನೀನೇರಾ ಮಾಡಬಹುದು” ಅಂದ.
“ಆದ್ರೆ ನಾವು, ಈಶಪ್ಪನ ಕಡಿಗೆ ಸೇರಿದ್ರೆ ವೆಂಕಟೇಶಪ್ಪನಿಗೇನಾಗ್ತದೆ?” ಅಂದ ಮಲ್ಲಯ್ಯ.

“ಅಲ್ಲೇ ಇರೋದು ನೋಡು ಮಜಾ. ನಿಮ್ಮೂರಾಗ ಕೆರೆಯಲ್ಲಿ ಮೀನಿ ಹಿಡಿಯೋ ಟೆಂಡರ್, ಎಷ್ಟೋ ವರ್ಷಗಳಿಂದ ನಿಮ್ಮ ವೆಂಕಟೇಶಪ್ಪನಿಗೇ ಕಟ್ಟಿಟ್ಟ ಬುತ್ತಿ ಇದ್ದಂಗಿತ್ತಲ್ಲೇನು? ಈ ವರ್ಷ ನಮ್ಮ ಧಣಿ ಆ ಟೆಂಡರ್ಗೆ ಸವಾಲಾಕ್ತಾನೆ. ಆ ಟೆಂಡರ್ ನಮ್ಮ ಕಡಿಗೆ ಬರ್ತದೆ. ಆ ವೆಂಕಟೇಶಪ್ಪ ಊರಾಗ ನಿನಗೆ ಒಂದೂಕೆಲಸ ಮಾಡಕ್ಕ ಬಿಟ್ಟಿಲ್ಲ. ಈಗ ನೀನು ಆತನಿಗೆ ಯಾವುದೇ ಟೆಂಡರೂ, ಕೆಲಸ ಮಾಡಕ್ಕೆ ಬಿಡೋದಿಲ್ಲ. ಏಟಿಗೆ ಎದಿರೇಟು. ಆವಾಗ ಗೊತ್ತಾಗ್ತದೆ. ನಾವೇನು ಅಂತ”
“ಅದೆಲ್ಲಾ ಇರ್ಲಿ. ಮನ್ಯಾಗ ಒಟ್ಟ ಪರಿಸ್ಥಿತಿ ಸರಿ ಇಲ್ಲ. ನಾನು ಅದನ್ನು ನೋಡಬೇಕು ತಮ್ಮಾ” ಅಂದ ಮಲ್ಲಯ್ಯ ಮೆಲ್ಲಗೆ.

“ಅಣ್ಣಾ, ನೀನು ಭಾಳ ಅಮಾಯಕ ಇದ್ದೀ ಬಿಡು. ನಾವು ಆರಾಮಾಗಿ ಬದುಕಲಿಲ್ಲಾ ಅಂದ್ರೆ ಈ ರಾಜಕೀಯ ಎಲ್ಲಾ ಎದಕೇಳು? ಇಲ್ಲಿ ಕೇಳು. ಮೀನು ಹಿಡಿಯೋ ಟೆಂಡರ್ ನಮ್ಮ ಈಶಪ್ಪಗೆ ಸಿಕ್ಕರೆ, ನೊಡಿಕ್ಯಂಬೋದು ನೀನೆ ಅಲ್ಲೇನು. ಮತ್ತೆ ನಿನಿಗೆ ಆ ಟೆಂಡರ್ ನಾಗೆ ಪಾಲು ಸಿಗಂಗಿಲ್ಲ ಅನುಕೊಂಡಿಯೇನು” ಅಂದ.

“ತಮ್ಮಾ, ನೀ ಏನಾರ ಹೇಳು ನಿಮ್ಮಷ್ಟು ತಿಳಿವಳಿಕೆ ನಮಗೆ ಬರಂಗಿಲ್ಲ ಬಿಡು” ಮಲ್ಲಯ್ಯ ಅಭಿಮಾನದಿಂದ ಹೇಳಿದ. ಇಷ್ಟೆಲ್ಲಾ ಹೇಳಿದ್ರೂ ಈಶ್ವರಪ್ಪನ ಕಡಿಗೆ ಹೋಗ್ಲಾ ಬ್ಯಾಡ ಅಂತ ಇನ್ನೂ ಸ್ವಲ್ಪ ಯೋಚನೆ ಮಾಡ್ತಿದ್ದ. ಆದರೂ ಮೀನಿನ ಕೆಲಸದಾಗ ಪಾಲು ಸಿಗೋ ಆಶೆ ಎಳಿತಿತ್ತು.

“ನಮಗೆ ಈ ರಾಜಕೀಯ ಉಸಾಬರಿ ಎಲ್ಲಾ ಯಾಕೆ ಅನುಕೋಬಾರ್ದಣ್ಣ. ಮೆತ್ತಗಿರೋನ ನೋಡಿದ್ರೆ ಎಲ್ಲರೂ ಬಗ್ಗಿಸಿ ಜಿಗಿಯೋರೆ. ಅದಕ್ಕೆ ನಮ್ಮ ಜತೀಗೂ ಒಬ್ಬರು ನಾಯಕರು, ಒಂದು ಪಾರ್ಟಿ ಸಪೋಟ್ ಇದ್ರೆ ನಮಗೂ ಮರ್ಯಾದೆ”
“ಆದ್ರೂ, ಜಗಳ, ಪೋಲಿಸರು, ಕೋರ್ಟು, ಕಛೇರಿ ನನ್ನ ಕೈಲಾಗ್ತದಾ?”

ಅಷ್ಟರಲ್ಲಿ ಆ ಕಡೆ ಬಂದ ಪೋಲೀಸ್ ನೇತ್ರಪಲ್ಲಿಯವನನ್ನ ನೋಡಿದ್ದೇ “ನಮಸ್ಕಾರಣ್ಣಾ” ಅಂದು ನಮಸ್ಕಾರ ಮಾಡಿದ. ಪಕ್ಕಕ್ಕೆ ಕರೆದು ಏನೋ ಗುಸು-ಗುಸು ಮಾತಾಡಿದ. ಕಡೀಗೆ “ನಮ್ಮನ್ನ ಮರಿಬ್ಯಾಡಣ್ಣಾ” ಅಂದು ನಕ್ಕೊಂತಾ ಹೋದ.

ನಮ್ಮಂಥವರ ಕೈಯಾಗ ಸಣ್ಣ ಬ್ಲೇಡಿದ್ರೂ “ಕೈಯಾಗ ಬ್ಲೇಡು ಬೇಕೇನಲೇ ಭೋಸುಡಿಕೆ” ಅಂದು ಬೂಟುಕಾಲಲ್ಲಿ ಒದಿಯೋ ಪೋಲಿಸರು, ಕುಡುಗೋಲು ಹಿಡಿದು ಓಡಾಡ್ತಿರೋ ಇವನಿಗೆ ಡೊಗ್ಗಿ ಸಲಾಮ ಮಾಡ್ಲಿಕ್ಕತ್ಯಾರೆ.
ಅಷ್ಟೇ, ಮಲ್ಲಯ್ಯ ಮರು ಮಾತಾಡದಂಗೆ ಅವನ ಜತಿಗೆ ಹೊರಟುಬಿಟ್ಟ.

ಆ ಮಾರನೆಯ ಮುಂಜಾನೆ..
ಹಳ್ಳಿಗೆ ಹೊಗೋರು ಸೋಪು, ಪೌಡರು, ಚಹಾಪುಡಿ ಪ್ಯಾಕೆಟುಗಳು, ಸಿನಿಮಾ ಹಾಡಿನ ಕ್ಯಾಸೆಟುಗಳು ಮುಂತಾದ್ದು ತೆಗೆದುಕೊಂಡು ಹೊರಟಿದ್ದರು. ಹಳ್ಳಿಯಿಂದ ಟೌನಿಗೆ, ಟೌನಿಂದ ಹಳ್ಳಿಗೆ ಒಂಥರಾ ಕಲಬೆರೆಕೆ ರಾಜಕೀಯ ಸಂಸ್ಕೃತಿ ಬೆಳೆಸುವಂತೆ ತಯಾರಾಗಿ ನಿಂತಿತ್ತು, ಮಲ್ಲಯ್ಯನ ಹಳ್ಳಿಯ ಕಡೆ ಹೊರಟಿದ್ದ ಆ ಬಸ್ಸು.

ಮಲ್ಲಯ್ಯನ ಯುದ್ಧರಂಗ ಈಗ ಬಹಳ ವಿಶಾಲವಾಯ್ತು. ಅವನ ಯೋಚನೆ ಬರೀ ಹಳ್ಳಿಮಟ್ಟದಲ್ಲಿ ಇರೋತಂಕ ವೆಂಕಟೇಶಪ್ಪನ ಶಕ್ತಿ ಬಹಳ ಜಾಸ್ತಿ ಅನಿಸ್ತಿತ್ತು. ಅದನ್ನ ಮೀರಬೇಕಂದ್ರೆ ತಾನೂ ಹಳ್ಳಿಬಿಟ್ಟು ಹೊರಗಿನ ರಾಜಕೀಯಕ್ಕೆ ಕಾಲಿಡಬೇಕಿತ್ತು. ಇದೆಲ್ಲದರ ನಡುವೆ, ವಿಚಿತ್ರ ತಳಮಳ, ಉದ್ವೇಗದಲ್ಲಿ ಮಲ್ಲಯ್ಯ ಬಸ್ಸಿನಲ್ಲಿ ಕೂತಿದ್ದ.

ಆದ್ರೆ ಈಗ ಅವನೊಬ್ಬನೇ ಅಲ್ಲ, ಟೌನ್ ಬಸ್ಸಿನ ಜೊತೆಯಲ್ಲೇ ಆ ಹಳ್ಳಿಯೊಳಕ್ಕೆ ಭಯಾನಕ ಹೆಜ್ಜೆ ಇಡಲು, ಮೂರು ಕೈ ಬಾಂಬುಗಳು ಮಲ್ಲಯ್ಯನ ಕೈಚೀಲಗೊಳಗೆ ನಿಶ್ಯಬ್ದವಾಗಿ ಕಾಯ್ತಾ ಕೂತಿದ್ದವು.

ಬಂಡಿ ನಾರಾಯಣಸ್ವಾಮಿ 

ಬಂಡಿ ನಾರಾಯಣಸ್ವಾಮಿಯವರು ಕಳೆದ ನಾಲ್ಕು ದಶಕಗಳಿಂದ ತೆಲುಗಿನ ಕಥಾ ಲೋಕದಲ್ಲಿ ಮುಖ್ಯವಾದ ಲೇಖಕರು. ಆಂಧ್ರದ ಅನಂತಪುರದಲ್ಲಿ ಶಿಕ್ಷಕರಾಗಿ ನಿವೃತ್ತಿ ಹೊಂದಿ, ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಹಿಂದುಳಿದ ರಾಯಲಸೀಮಾ ಪ್ರಾಂತದ ಬಡತನ, ಕಾಡುವ ಮಳೆಯ ಅಭಾವ, ಬರ ಮತ್ತು ಕ್ರೌರ್ಯದ ಚಿತ್ರಣವನ್ನು ಇವರ ಕಥೆ, ಕಾದಂಬರಿಗಳಲ್ಲಿ ಕಾಣಬಹುದು.

ಇತ್ತೀಚಿನ ಇವರ “ಶಪ್ತಭೂಮಿ”, ರಾಯಲಸೀಮೆಯ ಚಾರಿತ್ರಿಕ ಕಾದಂಬರಿಗೆ ಅಮೇರಿಕಾದ “ತಾನ್” ತೆಲುಗು ಸಂಘಟನೆಯ ಪ್ರಶಸ್ತಿ ಬಂದಿದೆ. ಇದನ್ನು ಕನ್ನಡದಲ್ಲಿ ಕುಂ.ವೀ ಅವರು ಅನುವಾದಿಸಿದ್ದಾರೆ. ಇವರ ಬಹಳಷ್ಟು ಕಥೆ ಕಾದಂಬರಿಗಳಲ್ಲಿ “ವೀರಗಲ್ಲು” ಕಥಾಸಂಕಲನ, “ಶಪ್ತಭೂಮಿ”, “ಗದ್ದಲಾಡು ತುನ್ನಾಯಿ”, “ಮೀ ರಾಜ್ಯಂ ಮೀರೇಲು ಕೊಂಡಿ ಸ್ವಾಮಿ” ಮುಂತಾದವು ನೆನಪಿಸಿಕೊಳ್ಳುವಂಥವು.