”ಈಗ ನಾನೂ ಮಗುವೂ ಸಂಜೆಯ ಇಳಿಬೆಳಕಲ್ಲಿ ವಾಕಿಂಗು ನಡೆದು ಹೋಗುವ ಅಭ್ಯಾಸ ಮಾಡಿಕೊಂಡಿದ್ದೆವು. ಮನೆಯ ಹಿಂದಿನ ಪೊದರುಗಳಲ್ಲಿ ಜೊಂಪೆ ಜೊಂಪೆ ಸಿಗುತ್ತಿದ್ದ ‘ಮುಟ್ಟಿದರೆ ಮುನಿ’ಯನ್ನು ನಾಚಿಸುವುದು ಅವಳ ಇಷ್ಟದ ಆಟವಾಗಿತ್ತು. ಹಾಗೇ ಬಣ್ಣಬಣ್ಣದ ಸಂಜೆಮಲ್ಲಿಗೆಯ ರಾಶಿಯನ್ನೇ ಕಿತ್ತು ತಂದು ರಂಗೋಲೆಯ ಮೇಲೆ ಸಿಂಗರಿಸುವುದು ಅವಳ ಹವ್ಯಾಸ. ಸಂಜೆಮಲ್ಲಿಗೆಯ ಬಣ್ಣಗಳಲ್ಲಿ ನನ್ನ ಬಾಲ್ಯದ ಬಹುಮುಖ್ಯ ಸಿಹಿ ನೆನಪುಗಳು ಅಡಕವಾಗಿದ್ದರಿಂದ ಮಗಳೂ ಸಂಜೆ ಮಲ್ಲಿಗೆಯನ್ನು ಪ್ರೀತಿಸುವುದು ಹಿತವೆನಿಸಿತ್ತು”
‘ಸದ್ದು ಮಾಡಿ ಹ್ಯಾಂಗ ಹೇಳಲಿ?’ ಲೇಖಕಿ ಮಧುರಾಣಿ ಬರೆಯುವ ಹೆಣ್ಣೊಬ್ಬಳ ಅಂತರಂಗದ ಪುಟಗಳ ಹದಿನೈದನೆಯ ಕಂತು.

 

ದಬದಬನೆ ಸುರಿಯುತ್ತಿದ್ದ ಮಳೆಗೆ ಹೊಸದಾಗಿ ಮೊಳೆತ ಚಿಗುರುಗಳ ಪರಿವೆಯೇ ಇರಲಿಲ್ಲ. ಅವು ಕೊಚ್ಚಿ ಹೋಗಬಹುದೆಂಬ ಮಮತೆಯೂ ಇರದೇ ಸುರಿದು ಹೈರಾಣು ಮಾಡಿದ ಮಳೆಯ ಬಗ್ಗೆ ಗೊಣಗೊಣಿಸಲು ಇನ್ನೂ ಕಾರಣಗಳಿದ್ದವು. ಹೂಗಿಡಗಳ ಮೊಳಕೆಯಂತೆಯೇ ನನ್ನಲ್ಲೂ ಹಲವು ಹೊಸ ಆಲೋಚನೆಗಳಿಗೆ ಈ ಧೋ ಮಳೆಯಂತೆಯೇ ಹಲವು ಅಡ್ಡಗಾಲುಗಳಿದ್ದವು. ಈಗ ಮೊದಲಿನಂತೆ ನಾನು ನನ್ನ ಪಾಡಿಗೆ ಮುಲಾಜಿಲ್ಲದ ಬದುಕು ಆಗುತ್ತಿರಲಿಲ್ಲ. ಬಗಲಲ್ಲಿ ಮಗು ಹೊತ್ತು ಶತೃ ಪಾಳೆಯದಲ್ಲಿ ಜೀವಿಸುವುದು ಹಾವನ್ನು ಬೇಯಿಸಿ ಉಂಡಷ್ಟೇ ಹಿತ ಎಂಬುದು ಬಹಳ ಬೇಗ ಅರಿವಾಯಿತು.

* * *
ಸುಮ್ಮನೇ ಹುಣ್ಣಿಮೆ ಚಂದ್ರನೆಂದರೆ ಉತ್ಪ್ರೇಕ್ಷೆಯಲ್ಲ. ಮಗುವು ನನ್ನ ಎಣಿಕೆಯನ್ನೂ ಮೀರಿ ಚಂದ್ರನಂತೆ ಬೆಳೆಯುತ್ತಿತ್ತು. ಇಡೀ ದಿನವು ಅದರ ಲಾಲನೆ ಪಾಲನೆಯಲ್ಲಿ ಕ್ಷಣವೂ ಉಳಿಯದಂತೆ ಕಳೆದೇ ಹೋಗುತ್ತಿತ್ತು. ಪಾಪಚ್ಚಿಯನ್ನು ಹೊರಗೆ ಎತ್ತಾಡಿಸುವಾಗ ಪಕ್ಕದ ಬೀದಿಯ ದಿನವೂ ನನ್ನ ಮನೆ ಹಾದು ಹೋಗುತ್ತಿದ್ದ ವಯೋವೃದ್ಧೆಯೊಂದು ಮೆಲ್ಲಗೆ ನನ್ನೊಟ್ಟಿಗೆ ಸ್ನೇಹ ಬೆಳೆಸಿತ್ತು. ನನಗೂ ಸಾಕಾಣಿಕೆಯ ವಿಚಾರವಾಗಿ ಹಿರಿಯರ್ಯಾರ ಬೆಂಬಲ ಹಾಗೂ ನಿಕಟಸಂಬಂಧ ಇಲ್ಲದ್ದು ಈ ಬೊಚ್ಚು ಬಾಯಿಯ ಅಜ್ಜಿಗೆ ಇನ್ನೊಂದಷ್ಟು ಅಂಟಿಕೊಳ್ಳಲು ಕಾರಣವಾಗಿತ್ತು. ಅಜ್ಜಿಯ ಹಾದಿಯನ್ನು ದಿನಾಲೂ ಕಾಯುವಷ್ಟು ಅದು ನಮ್ಮ ಬದುಕಲ್ಲಿ ಪ್ರಾಮುಖ್ಯತೆ ಗಳಿಸಲು ಇನ್ನೊಂದು ಕಾರಣವಿದೆ. ಮನೆಯಲ್ಲಿ ಯಾರಿಗೂ ಬೇಡವಾದ ನಾನು ಹಾಗೂ ನನ್ನ ಮಗು ಈ ಅಜ್ಜಿಗೆ ಅದು ಏನೋ ಮಾಯೆಯೆಂಬಂತೆ ಮುತ್ತು ಮಾಣಿಕ್ಯದ ಗೊಂಬೆಗಳಾಗಿ ತೋರುತ್ತಿದ್ದೆವು. ದಿನವೂ ಸಂಜೆ ಮಾತು ಮುಗಿದು ಎದ್ದು ಹೋಗುವಾಗ ಮಗುವಿಗೆ ಅಜ್ಜಿಯು ನೆಟಿಕೆ ದೃಷ್ಟಿ ತೆಗೆಯುವುದು. ಕೆಲವೊಮ್ಮೆ ಉಪ್ಪು ಒಣಮೆಣಸಿನಕಾಯಿ ಸಿಡಿಸುವುದು. ತಿಂಗಳಿಗೊಮ್ಮೆ ಸುಣ್ಣದ ನೀರಿಗೆ ಅರಿಷಿಣ ಕದರಿ ರಂಜು ನೀರು ಮಾಡಿ ಕೆಂಡದ ಪಾತ್ರೆ ದಬ್ಬಾಕಿ ರಂಜು ತೆಗೆಯುವ ಕ್ರಮಕ್ಕೂ ಸಹಕರಿಸುವುದು. ಹಂಚಿಕಡ್ಡಿಯ ಕರಕಲನ್ನು ವಾರಕ್ಕೊಮ್ಮೆಯಾದರೂ ‘ಕರಕು ಹಚ್ಚಿದಿಯೇನೇ ಮಗುವಿಗೇ..?’ ಎಂದು ವಿಚಾರಿಸಿಕೊಳ್ಳುವುದು. ಎದೆಹಾಲಿಲ್ಲದ, ಬರಿಯ ಹಸುವಿನ ಕೆಚ್ಚಲಿಗೇ ಗಂಟುಬಿದ್ದ ಕೂಸಿನ ಹಣೆಬರಹಕ್ಕೆ ಮಿಡಿದು ಲೊಚಗುಟ್ಟುವುದು. ಅಷ್ಟು ಬೇಗದಲ್ಲಿ ಹಾಲು ಬಿಡಿಸಿದ ನಮ್ಮಮ್ಮನ ನೆನೆದು ಏನೇನೋ ಆಡಿಕೊಳ್ಳುವ ಈ ಅಜ್ಜಿಯು ದಂತದ ಬೊಂಬೆಯಂಥಾ ಹೆಂಡತಿಯನ್ನೂ, ಪುಟಾಣಿ ಮುತ್ತಿನಂಥ ಮಗುವನ್ನೂ ಕಡೆಗಾಣಿಸುವ ಆ ಗಂಡು ಆಕೃತಿಯನ್ನು ಮಜವಾಗಿ ಬೈಯ್ಯುವಳು. ‘ಮಿತ್ರನ ಶತ್ರು ಪರಮಶತ್ರು’ವೆಂಬ ಪಂಚತಂತ್ರ ಸಿದ್ಧಾಂತದಂತೆ ಅವಳಿಗೆ ನನ್ನ ಗಂಡನೆಂಬ ಗಂಡು ಜೀವಿಯು ಬಹು ಹೀನವಾಗಿ ಕಾಣುತ್ತಿದ್ದುದೂ ಅವಳು ಅವನನ್ನು ಬಹು ವರ್ಜಿತ ಪದಗಳನ್ನು ಬಳಸಿ ಉಗಿಯುತ್ತಿದ್ದುದೂ ಇನ್ನೂ ಮಜವಾಗಿತ್ತು.
ನಾನು ಅವಳು ಈ ಗಂಡೆಂಬ ಕಿರಾತಕ ಕುಲೀನನನ್ನು ಅವಳು ಬೈಯಲೆಂದೇ ಮನೆಯೊಳಗಿನ ಕಲಹಗಳನ್ನು ಅವಳಿಗೆ ಬಣ್ಣಬಣ್ಣವಾಗಿ ಹೇಳುತ್ತಿದ್ದೆ. ಅವಳು ಅದರ ಜಾಡನ್ನೇ ಹಿಡಿದು ಸಿಡಿಲಿನಂತೆ ಎರಗುವಳು. ಸಿಕ್ಕಾಪಟ್ಟೆ ಪೌರುಷದಲ್ಲಿ ಕಿಡಿಕಾರುವಳು. ಇದನ್ನೆಲ್ಲಾ ಕೇಳುತ್ತಾ ನೋಡುತ್ತಾ ನಾನು ಒಳಗೊಳಗೇ ನಗುತ್ತಾ ನನ್ನ ಬದುಕಿನ ನರಕದ ಗೋಡೆಗಳನ್ನು ಇಂತಹ ಸಂತಸದ ಕ್ಷಣಗಳಿಂದ ಒಡೆಯುತ್ತಾ ಖುಷಿಯಾಗಿರುತ್ತಿದ್ದೆ. ಶ್ರೀಧರನು ಫೋನು ಮಾಡಿದಾಗ ನಾನು ಹಲವು ಕೌಟುಂಬಿಕ ವಿಚಾರಗಳ ನಡುವೆ ಈ ಮುದುಕಿಯ ಬಗ್ಗೆಯೂ ಅವನ ಬಳಿ ಮಾತಾಡುವೆನು. ಅವನು ಅಜ್ಜಿಯ ಪರಾಕ್ರಮ ಕೇಳಿ ಸಖತ್ ನಗುವನು. ಹೀಗೆ, ಈ ಅಜ್ಞಾತ ಮುದುಕಿಯೊಬ್ಬಳು ಅದು ಹೇಗೋ ನನ್ನ ಬದುಕಲ್ಲಿ ನುಸುಳಿ ಈಗ ಅದರ ಭಾಗವಾಗಿದ್ದಳು. ಮಗು ಅವಳನ್ನು ಹಚ್ಚಿಕೊಂಡಿತ್ತು. ಅವಳ ಕೈಲಿ ಹಾಲು ಕುಡಿದರೆ ಮಾತ್ರ ವಾಂತಿಯಾಗದೇ ಹಾಲು ಮೈಯುಂಡು ನಗುತ್ತಿತ್ತು.
* * *
ಒಮ್ಮೆ ನನ್ನಂತೇ ಯಾರಿಗೂ ಬೇಡವಾದ ಹಾಗಲಕಾಯಿಯೆಂಬ ತರಕಾರಿಯನ್ನು ಹೆಚ್ಚಿ ಗೊಜ್ಜು ಮಾಡುತ್ತಿದ್ದೆ. ಮಗು ಈಗ ಮಿದು ಅನ್ನ ಹಾಗೂ ತಿಳಿ ಟೊಮ್ಯಾಟೋ ರಸ ತಿನ್ನುವ ಹಾಗಾಗಿತ್ತು. ಜಾಲಿನ ಮೇಲಿನ ಒಲವು ತಗ್ಗಿ ಹೊರಧ್ಯಾನ ಆವರಿಸಿ ಮನೆ ಮುಂದೆ ಓಡಾಡುವವರೊಟ್ಟಿಗಿನ ಸ್ನೇಹಕ್ಕೆ ಹಾತೊರೆಯುವಷ್ಟು ಬೆಳೆದಿತ್ತು. ಹೆಚ್ಚೂ ಕಡಿಮೆ ವರುಷ ತಿರುಗುವ ಹೊತ್ತು. ಆದರೆ ಮಾತು ಇನ್ನೂ ಅಸ್ಪಷ್ಟವಾಗಿತ್ತು. ಕೆಲವೇ ಅಕ್ಷರಗಳ ಹೊರತು ಮತ್ತೆ ಉಚ್ಛಾರಣೆಯಿರಲಿಲ್ಲ. ಆಚೆ ಮನೆಯ ಆಂಟಿಯೊಬ್ಬರು ತಮ್ಮ ಮೊಮ್ಮಗುವಿಗೆ ಎರಡು ವರ್ಷ ಕಳೆದರೂ ಮಾತು ಬರದೇ ಹೋಗಿದ್ದ, ಆಮೇಲೆ ಅದಾವುದೋ ಬಾಯಿ ತಿರುಗದ ಹೆಸರಿನ ದೇವರಿಗೆ ಹರಕೆ ತೀರಿಸಿದ ಮೇಲೆ ಮಾತು ಬಂದ ಪ್ರಸಂಗವನ್ನು ವಿಪರೀತ ರಸವತ್ತಾಗಿ ಬಣ್ಣಿಸಿಬಿಟ್ಟರು. ಹಾಗೆ ಹರಕೆ ತೀರಿಸದಿದ್ದಲ್ಲಿ ಅವರ ಮೊಮ್ಮಗುವು ಮೂಕವಾಗೇ ಉಳಿದುಬಿಡಬಹುದಾಗಿದ್ದ ಸಾಧ್ಯತೆಗಳ ಬಗ್ಗೆ ಭಯದಲ್ಲಿ ನೆನೆದು ಕೆನ್ನೆ ಕೆನ್ನೆ ಬಾರಿಸಿಕೊಂಡು ಆ ದೇವರ ಮಹಿಮೆ ಕೊಂಡಾಡಿದ್ದರು.
 
ತಿಳಿಯದ ಭಯವೊಂದು ನನ್ನ ಎದೆಗೆ ಹೊಕ್ಕು ಹೊಗೆಯಾಯಿತು. ಬಾಯಿ ತಿರುಗದ ಹೆಸರಿನ ದೇವರಿಗೆ ಮನಸಿನಲ್ಲೇ ಹರಕೆ ಹೊತ್ತುಬಿಟ್ಟೆ. ಮತ್ತು ಹರಕೆ ಕಾಣಿಕೆಗೆ ಏನು ಮಾಡಲಿ ಎಂದು ಯೋಚಿಸಹತ್ತಿದೆ. ನನಗೆ ರಾತ್ರಿಯ ಕನಸುಗಳೂ ಮಾತು ಬಾರದ ಮೂಗ ಮಗು ‘ಬ್ಯಾ..ಬ್ಯಾ..’ ಎನ್ನುವ ದೃಶ್ಯಗಳು ಬರತೊಡಗಿದವು. ಛೇ… ಇಂಥಾ ಮುದ್ದಾದ ಕೂಸೊಂದು ಮೂಕಿಯಾಗಿ ಉಳಿಯುವ ಕಠೋರ ಭವಿಷ್ಯ ನನ್ನನ್ನು ನೆಮ್ಮದಿಯಾಗಿರಲು ಬಿಡದಾಯಿತು. ಅಲ್ಲಿಂದ ಮೂರು ತಿಂಗಳಾಚೆಗೆ ಮಗು ಆರಾಮ ಸರಾಗವಾಗಿ ಮಾತಾಡಲು ತೊಡಗಿದರೂ ನನಗೆ ನನ್ನ ಹರಕೆಯ ನೆನಪು ಒಳಗೊಳಗೇ ನೆಗ್ಗಲು ಮುಳ್ಳಿನಂತೆ ಚುಚ್ಚಲು ತೊಡಗಿತು. ಒಂದೊಮ್ಮೆ ನಾನು ಹರಕೆ ತೀರಿಸದಿದ್ದರೆ ಈ ಮಗು ಮತ್ತೆ ಮೂಗನಾದರೆ? ಎಂಬ ಹುಚ್ಚು ಭಯವೊಂದು ಆಗಾಗ ಬಂದು ಆತ್ಮಕ್ಕೆ ತಾಗಿ ಮರೆಯಾಗುತ್ತಿತ್ತು. ಆಗೆಲ್ಲಾ ನಾನು ಈ ಬೊಚ್ಚು ಮುದುಕಿಯನ್ನು ಹರಕೆಯ ಬಗೆಗೆ ಕೇಳುವೆನು. ಈ ಘಟಾಣಿ ಮುದುಕಿಯೋ ನನ್ನನ್ನೇ ಬಾಯಿ ತುಂಬಾ ಬೈಯುವಳು. ಇವಳು ಅದ್ಯಾವ ನಕ್ಷತ್ರದ ಹುಟ್ಟೋ ಕಾಣೆ. ‘ಏ…ಕಪಿ ಹುಡುಗೀ.. ಬಂಗಾರದ ಹಾಗೆ ಮಾತಾಡೋ ಮಗು ಇದು. ನಿನ್ನ ಯಾರು ಹರಕೆ ಮಾಡಿಕೋ ಅಂದದ್ದು..? ಏನೋ ನಾಲ್ಕಾರು ವರ್ಷಕ್ಕೂ ಮಾತು ಬರದೇ ಮೂಗಿಯಾಗಿದ್ದರೆ ಸರಿ. ನೆಟ್ಟಗೆ ಇನ್ನೂ ವರುಷ ತಿರುಗಿಲ್ಲ… ಆಗಲೇ ಚಿಂತೆಯಾಯ್ತಾ ನಿನಗೆ..!’ ಎಂದು ನನ್ನನ್ನೇ ಮೂದಲಿಸಿ ಅವಿವೇಕಿಯನ್ನಾಗಿ ಮಾಡಿಬಿಟ್ಟಿತು! ಏನು ಮಾಡಲೂ ತೋಚದೇ ಬೆಪ್ಪಾಗಿ ಸುಮ್ಮಗಾದೆ. ಇನ್ನು ಮಗುವಿಗೆ ಈ ತನಕ ಬಾರದ ಹಲ್ಲಿನ ಬಗಗೆ ಏನಾದರೂ ಮಾತನಾಡಿದರಂತೂ ಇನ್ನು ಇವಳು ನನ್ನ ನಡುಬೀದಿಯಲ್ಲಿ ಹರಾಜು ಮಾಡುವಳೆಂದು ಹೆದರಿ ತೆಪ್ಪಗಾದೆ. ಇನ್ನೂ ಆರು ತಿಂಗಳು ಕಳೆದವು. ಪಾಪಚ್ಚಿಯ ದವಡೆಯಲ್ಲಿ ಸಣ್ಣಕ್ಕಿಯ ಚೂರಿನಂತೆ ಚೂಪಾದ ದಂತದ್ವಯಗಳೆರಡು ಹೊಳೆಯುತ್ತಾ ಮೂಡಿದವು. ಮೊದಲ ಹಲ್ಲುಗಳು ನನ್ನ ಕೈಬೆರಳ ಮೃದುತ್ವವನ್ನೇ ಆಹುತಿ ಮಾಡಿಕೊಂಡು ಕಚಕ್ಕನೆ ಕಚ್ಚಿ ಗಾಯ ಮಾಡಿದವು. ಬದುಕಲ್ಲಿ ಮೊದಲ ಬಾರಿ ನೋವೂ ಕೂಡಾ ಹಿತವಾಗಿತ್ತು. ಗಾಯವಾದಾಗ ನೆಮ್ಮದಿಯ ನಗು ಬಂದಿತ್ತು.
* * *
ಈಗ ನಾನೂ ಮಗುವೂ ಸಂಜೆಯ ಇಳಿಬೆಳಕಲ್ಲಿ ವಾಕಿಂಗು ನಡೆದು ಹೋಗುವ ಅಭ್ಯಾಸ ಮಾಡಿಕೊಂಡಿದ್ದೆವು. ಮನೆಯ ಹಿಂದಿನ ಪೊದರುಗಳಲ್ಲಿ ಜೊಂಪೆ ಜೊಂಪೆ ಸಿಗುತ್ತಿದ್ದ ‘ಮುಟ್ಟಿದರೆ ಮುನಿ’ಯನ್ನು ನಾಚಿಸುವುದು ಅವಳ ಇಷ್ಟದ ಆಟವಾಗಿತ್ತು. ಹಾಗೇ ಬಣ್ಣಬಣ್ಣದ ಸಂಜೆಮಲ್ಲಿಗೆಯ ರಾಶಿಯನ್ನೇ ಕಿತ್ತು ತಂದು ರಂಗೋಲೆಯ ಮೇಲೆ ಸಿಂಗರಿಸುವುದು ಅವಳ ಹವ್ಯಾಸ. ಸಂಜೆಮಲ್ಲಿಗೆಯ ಬಣ್ಣಗಳಲ್ಲಿ ನನ್ನ ಬಾಲ್ಯದ ಬಹುಮುಖ್ಯ ಸಿಹಿ ನೆನಪುಗಳು ಅಡಕವಾಗಿದ್ದರಿಂದ ಮಗಳೂ ಸಂಜೆ ಮಲ್ಲಿಗೆಯನ್ನು ಪ್ರೀತಿಸುವುದು ಹಿತವೆನಿಸಿತ್ತು. ಒಂದು ಫರ್ಲಾಂಗು ದೂರದ ಸೋಮೇಶ್ವರನ ಗುಡಿ ನಮ್ಮ ಗುರಿ. ಅಲ್ಲಯವರೆಗೂ ನಡೆದುಹೋಗಿ ವಾಪಸ್ ಬರುತ್ತಿದ್ದೆವು.
ಬೊಚ್ಚಜ್ಜಿ ನಾಲ್ಕು ದಿನದಿಂದ ಕಾಣಲಿಲ್ಲ. ಅದರ ಮನೆಯ ತನಕ ಹೋಗೋಣವೆಂದರೆ ಅಜ್ಜಿಯ ಸೊಸೆಗೆ ಅವಳತ್ತೆಯ ಸ್ನೇಹಿತರೆಂದರೆ ಮಹಾನ್ ಕೋಪ. ನಾವೇನೋ ಅವಳು ಉಟ್ಟ ಸೀರೆಯನ್ನೇ ಕೇಳಿದವರಂತೆ ‘ಅಜ್ಜಿ ಇದ್ದಾರಾ..’ ಎಂದರೆ ಸಾಕು, ದುರುಗುಟ್ಟಿ ಒಳಹೋಗುತ್ತಿದ್ದಳು. ಅಂತಹ ಅಂಜಿಕೆಯಲ್ಲೇ ಅಂದು ಸಂಜೆ ವಾಕಿಂಗ್ ಹೋದಾಗ ನಾನು ಮಗುವನ್ನೂ ಎಳೆದುಕೊಂಡು ಧೈರ್ಯ ಮಾಡಿ ಬೊಚ್ಚಜ್ಜಿಯ ಮನೆಯ ಬಾಗಿಲಿಗೆ ಹೋಗಿ ನಿಂತೆ. ಎಲ್ಲ ಕಸುವು ಒಗ್ಗೂಡಿಸಿ ಬಾಗಿಲು ಬಡಿದೆ. ನಿಷ್ಠುರ ಮೊಗದ ಸೊಸೆಮುದ್ದು ರೋಸಿದ ಮೊಗ ಹೊತ್ತು ಬಂದು ಬಾಗಿಲು ತೆರೆಯಿತು. ಕಷ್ಟದಲ್ಲಿ ಬೊಚ್ಚಜ್ಜಿಯ ಹೆಸರು ನೆನಪಿಸಿಕೊಳ್ಳುತ್ತಾ ಚಡಪಡಿಸಿ ಕಡೆಗೂ ಬಗೆಹರಿಯದೇ ‘ಅಮ್ಮ ಇದಾರಾ..?’ ಕೇಳಿದೆ. ‘ಯಾರು? ನಮ್ಮತ್ತೇನಾ..? ಅವರು ತೀರಿ ಹೋಗಿ ಎರಡು ದಿನ ಆಯ್ತೂರೀ. ಗೊತ್ತಿಲ್ವಾ.. ಬಚ್ಚಲಲ್ಲಿ ಬಿದ್ದೋರು ಏಳಲೇ ಇಲ್ಲ. ಒಂದಿನ ಆಸ್ಪತ್ರೇಲಿ ಇದ್ದಿದ್ದು ಅಷ್ಟೇ.. ಆಮೇಲೆ ಯಾವ ಔಷಧಿಯೂ…..” ರೋಸು ಮೊಗದ ಸೊಸೆ ಅಷ್ಟೇ ರೋಸು ಧ್ವನಿಯಲ್ಲಿ ಎಲ್ಲವನ್ನೂ ವಿವರಿಸುತ್ತಿದ್ದಳು. ನನಗೆ ಕ್ಷಣಕಾಲ ಇವಳು ಇದನ್ನೆಲ್ಲಾ ಸಂಕಟದಿಂದ ಹೇಳುತ್ತಿದ್ದಾಳೋ ಅಥವಾ ಅಕ್ಜೊಯ ಕಾಟ ತಪ್ಪಿದ ಸಂತಸದಲ್ಲಿ ಹೇಳುತ್ತಿದ್ದಾಳೋ ತೀರ್ಮಾನಿಸಲಾಗದೇ ಕಿವಿ ತಮಟೆಗಳು ಗುಯ್ ಗುಟ್ಟತೊಡಗಿದವು.
ಇಷ್ಟವಿಲ್ಲದ ಹೂಂಗುಟ್ಟುತ್ತಾ ವಿಷಯ ಸ್ವಲ್ಪ ಅರಗುವವರೆಗೂ ಅಲ್ಲಿ ನಿಂತಿದ್ದು ಚೇತರಿಸಿಕೊಂಡು ಹೊರಟೆ. ಮಗು ‘ಅಜ್ಜೀ.. ಅಜ್ಜೀ..’ ಕೂಗುತ್ತಿತ್ತು. ‘ಬರ್ತೀನ್ರೀ..’ ಅಂದವಳೇ ಮಗೂನ ಎತ್ತಿ ಸೊಂಟಕ್ಕಿಟ್ಟುಕೊಂಡು ಮನೆಯ ಕಡೆ ನಡೆದೆ. ತೇವದ ಕಣ್ಣುಗಳು ನೆಲವನ್ನೇ ದಿಟ್ಟಿಸುತ್ತಿದ್ದವು. ಸುಮಾರು ಎಂಟೊಂಭತ್ತು ತಿಂಗಳ ಪರಿಚಯ ನಮ್ಮದು. ಆದರೂ ಆಪ್ತತೆಗೆ ಸಂಬಂಧಿಕಳೇ ಆಗಿದ್ದಳು ಬೊಚ್ಚಜ್ಜಿ. ಅವಳ ಹಳೇ ಮಲ್ಲಿನ ಸೀರೆಯೊಂದನ್ನು ಮಗುವಿಗೆ ಹೊದಿಸಲು ಕೊಟ್ಟಿದ್ದಳು. ‘ಮೆತ್ತಗಿರುತ್ತೆ ಕಣೇ.. ಆ ವುಲ್ಲನ್ ಹೊದಿಸಬೇಡ. ರಕ್ತ ಹಿಂಗಿಸುತ್ತೆ ಅದು. ಹತ್ತೀ ಬಟ್ಟೆಗಳೇ ಉಪಯೋಗ್ಸು ಮಗೂಗೆ.’ ಅನ್ನುತ್ತಿದ್ದ ಅವಳ ಊರಗಲದ ಬೊಚ್ಚು ಬಾಯಿ ನೆನಪಾಯಿತು.
ನನ್ನ ನಗುವಿಗೆ ನಕ್ಕು ದುಃಖಕ್ಕೆ ಅತ್ತು ಜೊತೆಯಾಗಿದ್ದವಳು ಹೀಗೆ ಒಂದು ಮಾತೂ ತಿಳಿಸದೇ ನನ್ನ ನೋಡಿಯೂ ನೋಡದೇ ಹೊರಟು ಹೋಗಿದ್ದು ಬರೆ ಎಳೆದ ನೋವಿನಂತೆ ಮುಲುಮುಲುಗುಟ್ಟುತ್ತಲೇ ಇತ್ತು. ಆ ವಾರ ಪೂರ್ತಿ ಯಾರ ಬಳಿಯೂ ಹೆಚ್ಚು ಮಾತಾಡಲಿಲ್ಲ. ಮಗು ಮಾತ್ರ ‘ಬೊತ್ತದ್ದಿ..ಬೊತ್ತದ್ದಿ..’ ಅನ್ನುತ್ತಲೇ ಇತ್ತು.‌
ಬೊಚ್ಚಿಯ ನೆನಪಲ್ಲಿ ಅದೆಷ್ಟೋ ದಿನಗಳವರೆಗೂ ಅವಳು ಹೇಳಿಕೊಟ್ಟು ಹೋದ ರೀತಿಯವೇ ಅಡುಗೆಗಳನ್ನು ಮಾಡುತ್ತಿದ್ದೆ. ಅವಳ ರುಚಿಯವೇ ಗೊಜ್ಜುಗಳು, ಕಲಸನ್ನದ ಪುಡಿಗಳು, ತಿಳಿಯಾದ ಹುಳಿಗಳು, ತಂಬುಳಿಗಳು… ಹೀಗೆ ಎಲ್ಲರಿಂದ ವರ್ಜ್ಯಗಳಾದ ಕಠೋರಾತಿಕಠೋರ ತರಕಾರಿಗಳನ್ನು ಬಳಸಿ ಮೃದುಮಧುರ ರಸಪಾಕಕ್ಕೆ ಇಳಿಸುವುದು ಅವಳ ಅಡುಗೆ ಮಾದರಿಯ ವಿಶೇಷ. ಬದುಕೂ ಇದಕ್ಕೆ ಹೊರತಾಗಿರಲಿಲ್ಲ. ಅಂತಹ ಕಠೋರ ಪ್ರಸಂಗವೊಂದನ್ನು ಈ ಬೊಚ್ಚಿಯ ಅಡುಗೆ ವಿಧಾನದಿಂದಲೇ ಎದುರಿಸಬೇಕಾಗಿ ಬಂದಿತ್ತು.
ಮನೆಯ ಯಜಮಾನನಿಗೆ ನನ್ನ ಅಡುಗೆಯ ರುಚಿಯಲ್ಲಿ ಆದ ವ್ಯತ್ಯಾಸವು ಕಂಡುಬಂದು ಅವನು ನನಗೆ ಏನೂ ಹೇಳದೇ ತನ್ನಷ್ಟಕ್ಕೇ ಮನೆಯಲ್ಲಿ ಉಣ್ಣುವುದನ್ನೇ ನಿಲ್ಲಿಸಿಬಿಟ್ಟಿದ್ದನು. ಒಂದೊಮ್ಮೆ ಅಡುಗೆಯ ವಿಚಾರಕ್ಕೆ ಆದ ಕಲಹದಲ್ಲಿ ಅವನು ಅನ್ನ ತುಂಬಿದ ತಟ್ಟೆಯನ್ನು ಕಾಲಿಂದ ಎಷ್ಟು ಬಲವಾಗಿ ಝಾಡಿಸಿ ಒದ್ದಿದ್ದನೆಂದರೆ ತಟ್ಟೆಯು ತಾರಸಿ ತಗುಲಿ ವಾಪಸ್ಸು ಬಂದು ನನ್ನ ಹಣೆಗೆ ಗಾಯ ಮಾಡಿತ್ತು. ಗಂಡಸಾದವನು ಅನ್ನಬ್ರಹ್ಮನ ವಿಚಾರದಲ್ಲಿ ಇಷ್ಟು ಹೀನಾಯವಾಗಿ ನಡೆದುಕೊಂಡದ್ದು ಬದುಕಲ್ಲೇ ಮೊದಲು ಕಂಡದ್ದು ನನಗೆ. ಅದಾದ ಮೇಲೊಮ್ಮೆ ತುಂಬಾ ಗಟ್ಟಿ ಧ್ವನಿಯಲ್ಲಿ –
       ‘ನೋಡೀ.. ಸಿಟ್ಟು ಬಂದರೆ ನನ್ನ ಮೇಲೆ ಕೈ ಮಾಡಿದರೂ ಪರವಾಗಿಲ್ಲ. ಅದನ್ನೇ ಅನ್ನದ ಮೇಲೆ ತೋರಿಸೋದು ಗಂಡಸುತನವಲ್ಲ. ಇದೇ ತುತ್ತು ಅನ್ನಕ್ಕಾಗಿ ಜೀವಗಳು ಕೊನೆಗಾಣ್ತಿವೆ. ಅಂಥದ್ದರಲ್ಲಿ ತುಂಬಿದ ತಟ್ಟೆ ಮಣ್ಣಿಗೆ ಹಾಕೋದು ದೊಡ್ಡತನವಲ್ಲ. ಕೋಪ ಕಡಿಮೆಯಾದರೆ ಒಳ್ಳೇದು. ಇಲ್ಲವಾದರೆ ನನಗೂ ಕೋಪ ಬರುತ್ತೆ ಅಂತ ತೋರಿಸಬೇಕಾಗುತ್ತೆ..’
       -ಅಂದುಬಿಟ್ಟಿದ್ದೆ.
 ಅಂದಿನಿಂದ ಅದೇನೋ…ಅನ್ನದ ಮೇಲೆ ಪೌರುಷ ತೋರಿಸೋ ಕ್ಷುಲ್ಲಕತನ ನಿಂತುಹೋಯಿತು. ಆದರೆ ಸಿಟ್ಟು ಬಂದಾಗಲೆಲ್ಲಾ ಮನೆಯಲ್ಲಿ ಊಟ ಬಿಡೋದು ಸರ್ವೇ ಸಾಮಾನ್ಯವಾಗಿ ಹೋಯಿತು. ಇನ್ನು ಬೊಚ್ಚಿಯ ಅಡುಗೆಗಳಂತೂ ಅವನನ್ನು ಮನೆಯ ಊಟದಿಂದ ಸಂಪೂರ್ಣ ವಿಮುಖ ಮಾಡಿಬಿಟ್ಟಿತು. ಆದರೂ ನಾನು ಅವಳ ನೆನಪಿಂದ ಚೇತರಿಸಿಕೊಳ್ಳಲಾಗದೇ, ಅವಳ ಘಮದ ಅಡುಗೆಯನ್ನೂ ತೊರೆಯಲಾಗದೇ ಸ್ವಗತಕ್ಕೆ ‘ಹೇಳದೇ ಕೇಳದೇ ಹೇಗೆ ಹೋದೆ ನೀನು ಮುದುಕೀ..’ ಎಂದು ಗೊಣಗುತ್ತಲೇ ಮಗುವಿಗೆ ಎಣ್ಣೆಸ್ನಾನ ಮಾಡಿಸುತ್ತಿದ್ದೆ. ನಾನೂ ಭೂತಭವಿಷ್ಯಗಳ ಕಲಸುಮೇಲೋಗರದ ಬಣ್ಣಗಳಲ್ಲಿ ಮೀಯುತ್ತಾ ಯಾರೂ ಇಲ್ಲದೇ ಒಬ್ಬೊಬ್ಬರೇ ನಡೆಯುತ್ತಾ ಹೋಗುವ ಬದುಕಿನ ವಿಚಿತ್ರ ಹಾದಿಯ ಬಗ್ಗೆ ಯೋಚಿಸುತ್ತಾ ಬೊಚ್ಚಿಯ ಹಾಗೆ ಸ್ವತಂತ್ರ ಆಲೋಚನೆಗಳ ಹೆಣ್ಣಾಗುವ ಕನಸು ಕಾಣುತ್ತಿದ್ದೆ.